Sunday, December 12, 2021

ದೃಶ್ಯ II.. ಒಂದು ಅಪರೂಪದ ದೃಶ್ಯ (2021)

 ನಾನೂ ನೀನೂ ನೆಂಟರಯ್ಯ

ನಮಗೆ ಭೇದ ಇಲ್ಲವಯ್ಯಾ 

ಶ್ರೀ ಶ್ರೀ.. ಏನಾಯ್ತೋ ನಿನಗೆ.. ?

ಗಟ್ಟಿ ಗಟ್ಟಿಯಾದ ದನಿ.. ಅರೆ ಇದು ಚಿರಪರಿಚಿತವಾದ ದನಿ.. ರಾಮಾಚಾರಿಯಿಂದ ಇಲ್ಲಿಯವರೆಗೂ ಕೇಳಿದ ದನಿ.. 

ತಿರುಗಿ ನೋಡಿದೆ.. ಗುಂಗುರು ಗುಂಗುರು ಕೂದಲು.. ಮೊದಲಿದ್ದಷ್ಟು ಮುದ್ದಾದ ಗುಂಗುರು ಕೂದಲಿಲ್ಲದೆ ಹೋದರೂ.. ಆದರೆ ಅದೇ ವಿಧವಾದ ಕೇಶ ವಿನ್ಯಾಸ.. ಅವರ ಕೆನ್ನೆ ತುಂಬಾ ಬೆಳೆಯುವ ಗಡ್ಡದ ಲೈನ್ ನನಗೆ ಬಲು ಇಷ್ಟ.. ಅದರಲ್ಲೂ ಕುರುಚಲು ಗಡ್ಡ ಬಿಟ್ಟು.. ಕಣ್ಣಿಗೆ ಕಪ್ಪು ಕನ್ನಡಕ.. ಅವರಿಗಿಷ್ಟವಾದ ಕಪ್ಪು ಬಣ್ಣದಲ್ಲಿ ಅವರನ್ನು ಕಂಡರೆ.. ಹೋಗಿ ಮುದ್ದಾಡಬೇಕು ಅನ್ನುವಷ್ಟು ಸುಂದರವಾಗಿ ಅಂದೂ, ಇಂದೂ ಕಾಣುತ್ತಾರೆ. ... ಹೌದು ಅದೇ ರವಿಚಂದ್ರನ್.. ಅದೇ ಕನಸುಗಾರ.. ಅದೇ ರವಿ ಮಾಮ.. ಮತ್ತೆ ನಮ್ಮನ್ನು ಸಿನಿಮಾ ಎನ್ನುವ ಅದ್ಭುತ ಲೋಕಕ್ಕೆ ಕರೆದೊಯ್ಯಲು ದೃಶ್ಯ ಎರಡನೇ ಭಾಗ ಚಿತ್ರದಲ್ಲಿ ಮತ್ತೆ ತೆರೆಯ ಮೇಲೆ ಬಂದಿದ್ದಾರೆ.. 

ಅಪ್ಪ  ದೃಶ್ಯಂ ಎರಡನೇ ಭಾಗ ಮಲಯಾಳಂ ಬಂದಿದೆ ಅಪ್ಪ.. ಕೊಡ್ಲಾ ಲಿಂಕ್ ನೋಡ್ತೀರಾ.. OTT ಯಲ್ಲಿ ಬಂದಿದೆ ನೋಡಪ್ಪ.. ಸಕತ್ ಆಗಿದೆ.. 

ಶ್ರೀ ನೋಡಿ ಸಕತ್ ಇದೆ.. ನಿಜವಾಗಿಯೂ ಇಷ್ಟ ಪಡ್ತೀರಾ.. ಸೀಮು ಹೇಳಿದಾಗಲೂ ಮನಸ್ಸು ರವಿ ಮಾಮನನ್ನೇ ಧ್ಯಾನಿಸುತ್ತಾ ಕುಳಿತಿತ್ತು ಇದೆ ಫೆಬ್ರುವರಿಯಲ್ಲಿ.. ನೋಡಿದರೆ ರವಿಮಾಮನ ದೃಶ್ಯ ೨ ನೋಡೋದು.. ಇಲ್ಲವಾದರೆ ನೋಡೋದೇ ಇಲ್ಲ.. ಇದು ನನ್ನ ವೀರ ಪ್ರತಿಜ್ಞೆಯಾಗಿತ್ತು.. 











ಯಾವುದೋ ಒಂದು ಸಂದರ್ಶನ ನೋಡುತ್ತಾ ರವಿಚಂದ್ರನ್ ಅವರ ಸಂದರ್ಶನ ನೋಡಿದೆ.. ಅಲ್ಲಿ ಅತಿ ಉತ್ತಮ ಪ್ರಶ್ನೆಗಳಿಗೆ ಅಷ್ಟೇ ನಿಖರವಾದ ಉತ್ತರ ಕೊಡುತ್ತಿದ್ದರು.. ನನ್ನ ಕಿವಿಗಳು ನೆಟ್ಟಗಾದವು.. ದೃಶ್ಯ ಎರಡನೇ ಭಾಗ ಬರುತ್ತಿದೆ.. ನವೆಂಬರ್ ಒಳಗೆ ಎಂದಾಗ ಮನಸ್ಸಲ್ಲಿ ಕುಣಿದಾಡಿದ್ದೆ.. ಖುಷಿಯಾಗಿತ್ತು.. ನೋಡಲೇ ಬೇಕು ಎನ್ನುವ ಕಾತುರ.. ತವಕ ಇಂದು ಸಾಕ್ಷಾತ್ಕಾರವಾದ ಹಾಗೆ ಕಂಡಿತು.. ಮತ್ತೆ ಅದನ್ನು ಸಾಕ್ಷಾತ್ಕರಿಸಿಕೊಂಡುಬಿಟ್ಟೆ.. 

ಶ್ರೀ ಊಟಕ್ಕಿಂತ ಉಪ್ಪಿನಕಾಯಿ ಜಾಸ್ತಿ ಆಯಿತು ಅದೇನು ಹೇಳಬೇಕು ಅಂದಿದೆಯೋ ಅದನ್ನು ಹೇಳಿ ಮುಗಿಸು ಮಾರಾಯ.. ಪಿಟೀಲು ಕುಯ್ಯಬೇಡ.. ಟಿಪಿಕಲ್ ರವಿಮಾಮನ ಸಂಭಾಷಣೆ ಬಂದಾಗ ಎಚ್ಚರಗೊಂಡೆ.. 

ರವಿ ಮಾಮಾ ಇಂದು ದೃಶ್ಯ ಎರಡನೇ ಭಾಗ ನೋಡಿಬಂದೆ.. ಬಹಳ ಖುಷಿಯಾಯಿತು... ನಿಮ್ಮನ್ನು ಪರದೆಯ ಮೇಲೆ ನೋಡೋದೇ ಒಂದು ಖುಷಿ.. ಎಷ್ಟು ಅದ್ಭುತವಾದ ಪಾತ್ರಾಭಿನಯ.. ನನಗೆ ಅಲ್ಲಿ ರವಿಮಾಮ ಕಾಣದೆ ಒಂದು ಜವಾಬ್ಧಾರಿಯುತ ಅಪ್ಪ, ಮನೆಯ ಯಜಮಾನ. ರಾಜೇಂದ್ರ ಪೊನ್ನಪ್ಪ ಕಂಡಿದ್ದೆ ಹೆಚ್ಚು ..ಇಡೀ ಚಿತ್ರವನ್ನು ಹೆಗಲ ಮೇಲೆ ಹೊತ್ತು ನೆಡೆದಿದ್ದೀರಾ.. ಬಹಳ ಕುಶಿಯಾಯ್ತು.. 

ಹೌದು ಶ್ರೀ ನನಗೂ ಇಷ್ಟವಾದ ಚಿತ್ರವಿದು.. ನಾನು ಮನೆಯಲ್ಲಿ ಹೇಗೆ ಇದ್ದೀನೊ ಚಿತ್ರದಲ್ಲೂ ಹಾಗೆ ಇದ್ದೀನಿ ಹಾಗಾಗಿ ನಾನು ಆ ಪಾತ್ರದೊಳಗೆ ಹೋಗೋದಕ್ಕೆ ಅನುಕೂಲವಾಯಿತು.. ಸಿಂಧು, ಶ್ರೇಯ ಇವರೆಲ್ಲ ಬರಿ ತೆರೆಯ ಮೇಲೆ ಮಕ್ಕಳಲ್ಲ.. ನನ್ನ ಬದುಕಿನಲ್ಲಿ ಬಂದ ನನ್ನ ಮಕ್ಕಳ ಹಾಗೆ ಇದ್ದಾರೆ.. ನನ್ನ ಮಕ್ಕಳ ಬಾಲ್ಯವನ್ನು ನಾನು ನನ್ನ ಚಿತ್ರರಂಗದ ಬಿಡುವಿಲ್ಲದ ಚಟುವಟಿಕೆಯಲ್ಲಿ ನೋಡಲಾಗಲಿಲ್ಲ... ಅದನ್ನು ಈ ಸಿಂಧು, ಶ್ರೇಯ ಮೂಲಕ ಅನುಭವಿಸಿದ್ದೀನಿ.. ಬಹಳ ತೃಪ್ತಿ ಕೊಟ್ಟ ಪಾತ್ರ.. 

ರವಿಮಾಮಾ ನನಗೆ ಬಲು ಇಷ್ಟವಾದ ದೃಶ್ಯ ಎಂದರೆ.. ನೀವು ನಿಮ್ಮ ಮಕ್ಕಳು ಉಪವಾಸ ಇರೋದು ನೋಡಲಾಗದೆ..ಇಬ್ಬರು ಮಕ್ಕಳಿಗೂ ತುತ್ತು ತಿನ್ನಿಸುತ್ತೀರಾ.. ಆಗ ಪಕ್ಕದಿಂದ ಇನ್ನೊಂದು ಕೈ ಬರುತ್ತದೆ.. ಅದು ನಿಮ್ಮ ಮಡದಿಯ ಪಾತ್ರದ ಸೀತಾ.. ಅವರದ್ದು.. ಅವರು ನಿಮಗೆ ತುತ್ತು ತಿನ್ನಿಸುವ ದೃಶ್ಯ.. ನಿಜಕ್ಕೊ ಅದ್ಭುತ.. ನಾನು ನನ್ನ ಮನದನ್ನೆ ಸೀಮುಗೆ ಹೇಳಿದೆ.. ಸೂಪರ್ ದೃಶ್ಯ ಇದು ಅಂತ.. ಅವಳು ಹೌದು ಎಂದಳು.. 

ಒಬ್ಬರಿಗೊಬ್ಬರು ಹೆಗಲು ಕೊಟ್ಟು ನಿಂತಾಗ ಎಂಥಹ ಕಠಿಣ ಸವಾಲುಗಳು ದಾರಿ ಬಿಡುತ್ತವೆ.. 

ರವಿಮಾಮ ದೃಶ್ಯ ೧ ಮತ್ತು ೨ ನಿಜಕ್ಕೂ ನಿಮ್ಮ ಜೀವನದ ಅತಿ ಉತ್ತಮ ಚಿತ್ರಗಳಲ್ಲಿ ನಿಲ್ಲುತ್ತವೆ... 

ಏಕಾಂಗಿ 

ಅಭಿಮನ್ಯು 

ದಶಮುಖ 

ದೃಶ್ಯ ೧ 

ದೃಶ್ಯ ೨

ಸಂಗ್ರಾಮ 

ಪ್ರಳಯಾಂತಕ 

ನನ್ನ ಮೆಚ್ಚಿನ ಚಿತ್ರಗಳು.. ತಾಂತ್ರಿಕವಾಗಿ ನಿಮ್ಮ ಅನೇಕ ಚಿತ್ರಗಳನ್ನು ಮೆಚ್ಚಿದ್ದೇನೆ.. ಶಾಂತಿ ಕ್ರಾಂತಿ ಹತ್ತು ಬಾರಿ ಟಾಕೀಸಿನಲ್ಲಿ ನೋಡಿದ್ದೀನಿ ತಾಂತ್ರಿಕ ಅಂಶಗಳಿಗಾಗಿ.. ನಿಮ್ಮ ಚಿತ್ರಗಳ್ಲಲಿ ಹೆಸರು ತೋರಿಸುವ ವಿಧಾನ ಬಲು ಇಷ್ಟವಾಗಿತ್ತು

ಹೌದು ಶ್ರೀ ಅದೊಂದು ಜಮಾನ.. ತಲೆಯೊಳಗಿನ ವಿಚಿತ್ರ ಆಲೋಚನೆಗಳೆಲ್ಲ ತೆರೆಯ ಮೇಲೆ ತರಲು ಪ್ರಯತ್ನ ಪಡುತಿದ್ದ ಕಾಲವದು.. 

ರವಿಮಾಮ ದೃಶ್ಯ ೨ ರಲ್ಲಿ ನಿಮ್ಮ ಅಭಿನಯ ಸೊಗಸು.. ಬ್ಯಾಗನ್ನು ತೆಗೆದುಕೊಳ್ಳುವಾಗ ನಿಮ್ಮ ನಡುಗುವ ಕೈಗಳು, ಕಡೆಯಲ್ಲಿ ತಲೆ ತಗ್ಗಿಸಿಕೊಂಡು ಹೋಗುವ ದೃಶ್ಯ.. ಸುತ್ತಲೂ ಒಮ್ಮೆ ಕಣ್ಣು ಹಾಯಿಸಿ ತಣ್ಣಗಿನ   ಲುಕ್ ಕೊಡುವ ಆ ಕಣ್ಣುಗಳು ಅಬ್ಬಬ್ಬಾ ಸೂಪರ್.. 

ನನ್ನ ಇಷ್ಟವಾದ ನಟಿ ನವ್ಯ ನಾಯರ್ ಮೊದಲ ಭಾಗದಲ್ಲಿ ಮುದ್ದಾಗಿ ಕಾಣುತ್ತಿದ್ದರು.. ಈ ಭಾಗದಲ್ಲಿ ಸ್ವಲ್ಪ ಬಳಲಿದಂತೆ ಕಾಣುತ್ತಿದ್ದರು.. ಯಾಕೆ ಯಾಕೆ ಅಂತ ಯೋಚಿಸುತ್ತಿದ್ದೆ.. ಆಮೇಲೆ ಹೊಳೆಯಿತು.. ಅರೆ ಹೌದು ಆ ಘಟನೆಯನ್ನು ನೆನೆದು ನೆನೆದು.. ಬಸವಳಿದ ಆ ಮೊಗವನ್ನು ಹಾಗೆ ತೋರಿಸುವುದೇ ಸರಿ ಅನಿಸಿತು.. ಆದರೂ ಮುದ್ದಾಗಿ ಕಾಣುತ್ತಾರೆ.. ಪುಟ್ಟ ಬೊಟ್ಟಿನ ಕೆಳಗೆ ಒಂದು ಕುಂಕುಮದ ಬೊಟ್ಟು ಇದ್ದಿದ್ದರೆ ಅನಿಸುತ್ತಿತ್ತು.. ಅದು ಕೊನೆಯ ಕೆಲವು ದೃಶ್ಯಗಳಲ್ಲಿ ಹಾಗೆ ಬಂದು ಬಿಡುತ್ತಾರೆ.. ವಾಹ್ ಪೈಸೆ ವಸೂಲ್ ಎನಿಸಿತು.. ಆ ಹೊಳೆಯುವ ಕಣ್ಣುಗಳು.. ಆ ಮುದ್ದಾದ ಮೊಗ ನವ್ಯ ನಾಯರ್ ಸೊಗಸು.. 

ಉಳಿದ ಪಾತ್ರಗಳಲ್ಲಿ ತಂದೆ ತಾಯಿಯ ಪಾತ್ರದ ಆಶಾ ಶರತ್, ಪ್ರಭು, ಪೊಲೀಸ್ ಪಾತ್ರದ ಪ್ರಮೋದ್ ಶೆಟ್ಟಿ.... ತಿರುವಿನ ಪಾತ್ರದಲ್ಲಿ ಅನಂತ್ ನಾಗ್.. ಎರಡು ಮೂರು ದೃಶ್ಯಗಳೇ ಆದರೂ ಮುದ್ದಾಗಿ ಕಾಣುವ ಲಾಯರ್ ಪಾತ್ರದಲ್ಲಿ ಸೋನು... ಮಕ್ಕಳ ಪಾತ್ರದಲ್ಲಿ ಆರೋಹಿ, ಉನ್ನತಿ ಸೊಗಸಾದ ಅಭಿನಯ.. 

ಒಂದು ಚಿತ್ರ ನೋಡುಗರನ್ನು ಹಿಡಿದಿಡಲು ಬೇಕಾದ ಚಿತ್ರಕತೆಯನ್ನು ಸೊಗಸಾಗಿ ಮಾಡಿದ್ದಾರೆ ನಿರ್ದೇಶಕ ಪಿ ವಾಸು.. ಕತೆ ಜೀತು ಜೋಸೆಫ್ ಅವರದ್ದು.. ಅದನ್ನು ಯಥಾವತ್ತಾಗಿ ತೆರೆಯ ಮೇಲೆ ಮೂಡಿಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡಿದ್ದಾರೆ ಪಿ ವಾಸು... ಅವರಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿರುವ ಆಧಾರ ಕಂಬ ರವಿಚಂದ್ರನ್... 

ಸುಂದರ ಚಿತ್ರ ನೋಡಿದ ಅನುಭವ ನನ್ನದು ರವಿ ಮಾಮ.. 

ಓಯ್ ಶ್ರೀ ಅದೇನೋ ಆರಂಭದಲ್ಲಿ ಅಣ್ಣಾವ್ರ ಭಕ್ತ ಕುಂಬಾರ ಚಿತ್ರದ ಹಾಡು ಹೇಳಿದೆಯಲ್ಲ ಏನದು. 

ರವಿ ಮಾಮ.. ನಿಮಗೆ ಚಿತ್ರರಂಗ ಉಸಿರು, ನಿದ್ದೆಯಲ್ಲೂ ಚಿತ್ರದ ಬಗ್ಗೆ ಯೋಚಿಸುವ ಮನಸ್ಸು ನಿಮ್ಮದು.. ಸದಾ ಹೊಸತನ ನೋಡುವ ನಿಮ್ಮ ಕನಸಿನ ಕಣ್ಣುಗಳು.. ನೀವು ಚಿತ್ರರಂಗಕ್ಕಾಗಿಯೇ ಹುಟ್ಟಿದ್ದೀರಾ ಅನ್ನುವಷ್ಟು ಒಳಗೆ ಧುಮುಕಿದ್ದೀರಾ.. 

ನನಗೆ ಚಲನ ಚಿತ್ರಗಳು ಎಂದರೆ  ಬದುಕನ್ನು ತಿದ್ದುವ, ಬದುಕಿಗೆ ದಾರಿ ಹೇಳಿಕೊಡುವ ಗುರುವಿನ ಸ್ಥಾನ.. ಹಾಗಾಗಿ ನಿಮಗೆ ಚಿತ್ರರಂಗ ಎಂದರೆ ಪ್ರಾಣ. ನನಗೆ ಚಿತ್ರಗಳು ಎಂದರೆ ಪ್ರಾಣ.. 

ಅದಕ್ಕೆ ಹೇಳಿದ್ದು ನಾನೂ ನೀನು ನೆಂಟರಯ್ಯ ನಮಗೆ ಭೇದ ಇಲ್ಲವಯ್ಯಾ.. !!!

ಸೂಪರ್ ಶ್ರೀ ಇಷ್ಟವಾಯಿತು.. ರವಿ ಮಾಮನ ಮೇಲೆ ಇರುವ ಪ್ರೀತಿ ಸದಾ ಹೀಗೆ ಇರಲಿ.. !

ಧನ್ಯವಾದಗಳು ರವಿ ಮಾಮ.. ಇವತ್ತು ದೃಶ್ಯ ಎರಡನೇ ಭಾಗ ನೋಡುತ್ತಿದ್ದಾಗ ನಿಮಗೆ ಹೇಗೆ ಮುಂದಿನ ನೆಡೆ ನಿಮ್ಮ ಮನದಲ್ಲಿ ಮೂಡುತ್ತದೆಯೋ.. ಹಾಗೆ ಈ ಲೇಖನ ಹಾಗೆ ಮನದಲ್ಲಿ ಮೂಡಿಸುತ್ತಿತ್ತು..ಈಗ ಅದಕ್ಕೆ ಅಕ್ಷರ ರೂಪ ಕೊಟ್ಟೆ ಅಷ್ಟೇ.. 

ಸುಂದರ ಚಿತ್ರ ಕೊಟ್ಟದ್ದಕ್ಕೆ ದೃಶ್ಯ ತಂಡಕ್ಕೆ ಧನ್ಯವಾದಗಳು.. !

Saturday, September 11, 2021

ಅಂತರ್ಜಾಲದಲ್ಲಿ ತೆರೆಯಲ್ಲಿ ಹುಡುಕಬೇಕಾದ ಸಿನಿಮಾ ಕಲಿತರೂ ಹೆಣ್ಣೇ (1963) (ಅಣ್ಣಾವ್ರ ಚಿತ್ರ ೪೨ / ೨೦೭)

ಕೆಲವು ಸಿನಿಮಾಗಳೇ ಹಾಗೆ. ಚೆನ್ನಾಗಿರುತ್ತವೆ ಆದರೆ ನೋಡಲು ಸಿಗೋಲ್ಲ.. ನೆಗೆಟಿವ್ ಸುಟ್ಟು ಹೋಗಿರಬಹುದು.. ಸಿಡಿ ಮಾಡದೆ ಇರಬಹುದು.. ಕ್ಯಾಸೆಟ್ಟ್ ಹಾಳಾಗಿರಬಹುದು.. ಹೀಗೆ ಅನೇಕ ಕಾರಣಗಳು ಕೆಲವು ಸಿನಿಮಾಗಳನ್ನು ನೋಡೋಕೆ ಸಾಧ್ಯವೇ ಆಗೋಲ್ಲ .. 

ಆದರೆ ಹೊಸ ತಂತ್ರಜ್ಞಾನ ಬಳಸಿಕೊಂಡು ಹಳೆಯ ಚಿತ್ರಗಳನ್ನು ಹೊಸದಾಗಿ ಮೂಡಿಸುವ ಪ್ರಯತ್ನ ನೆಡೆಯುತ್ತಲೇ ಇರುತ್ತದೆ.. ಎಂದೋ  ಒಂದು ದಿನ ಈ ಚಿತ್ರವೂ ಸಿಗಬಹುದೇನೋ ಎನ್ನುವ ಒಂದು ಪುಟ್ಟ ಆಸೆಯಿಂದ ಈ ಚಿತ್ರದ ಪ್ರತಿ ಲಭ್ಯವಿರದ ಕಾರಣ ಈ ಚಿತ್ರದ   ಹೆಚ್ಚಿನ ಮಾಹಿತಿ ಸಿಗದ ಕಾರಣ.. ಸಿಕ್ಕಷ್ಟು ಮಾಹಿತಿ ಬರೆದು ಮುಂದಿನ ಚಿತ್ರಕ್ಕೆ ಹೋಗುತ್ತಿದ್ದೇನೆ. 

ಕಲಿತರೂ ಹೆಣ್ಣೇ ಇದು ೧೯೬೩ ಇಸವಿಯಲ್ಲಿ ತೆರೆಗೆ ಬಂದ ಚಿತ್ರ.. ಎನ್ ಸಿ ರಾಜಣ್ಣ ನಿರ್ದೇಶಿಸಿದ ಚಿತ್ರವಿದು. ಜಿ ಕೆ ವೆಂಕಟೇಶ್ ಸಂಗೀತ, ಕೆ ಜಾನಕಿರಾಮ್ ಅವರ ಛಾಯಾಗ್ರಹಣ. 

ರಾಜಕುಮಾರ್, ಲೀಲಾವತಿ, ಅದ್ವಾನಿ ಲಕ್ಷ್ಮೀದೇವಿ, ಆರ್ ನಾಗೇಂದ್ರ ರಾವ್ ಅದ್ಭುತ ಕಲಾವಿದರ ಸಮಾಗಮ ಈ ಚಿತ್ರದಲ್ಲಿದೆ. 



Sunday, July 18, 2021

ವಧಿಸದೆ ಕುಲವನ್ನು ಬೆಳಗಿದ ಕುಲವಧು (1963) (ಅಣ್ಣಾವ್ರ ಚಿತ್ರ ೪೧ / ೨೦೭)

 ಲೋ ಶ್ರೀ .. ಅದ್ಯಾಕೆ ಹಳೆ ಚಿತ್ರಗಳು ಅಂದರೆ ಬಾಯಿ ಬಿಡ್ತೀಯ?

ನನ್ನ ಆಪ್ತ ಗೆಳೆಯ ಈ ಪ್ರಶ್ನೆ ಕೇಳಿದಾಗ ಉತ್ತರಿಸಿರಲಿಲ್ಲ.. ಕಾರಣ ನನಗೂ ಗೊತ್ತಿರಲಿಲ್ಲ.. ಆದರೆ ಪುಟ್ಟಣ್ಣ ಕಣಗಾಲ್ ಅವರ ಇಪ್ಪತ್ತನಾಲ್ಕು ಚಿತ್ರಗಳ ಬಗೆ ಬರೆಯುತ್ತಾ ಸಾಗಿದಾಗ.. ಹಾಗೆ ರಾಜ್ ಕುಮಾರ್ ಅವರ ನಲವತ್ತು ಚಿತ್ರಗಳ ಬಗೆ ಬರೆಯುತ್ತಾ ಹೋದಂತೆ ಹಿಂದಿನ ಚಿತ್ರಗಳಲ್ಲಿನ ವಿರಾಟ್ ರೂಪದ ದರ್ಶನವಾಯಿತು. 

ಸಾಮಾಜಿಕ ಪಿಡುಗಿನ ಕಥಾವಸ್ತು ಹೊಂದಿದ್ದ ಶ್ರೀ ಕೃಷ್ಣಮೂರ್ತಿ ಪುರಾಣಿಕ್ ಅವರ ಕುಲವಧು ಕಾದಂಬರಿಯನ್ನು ಚಿತ್ರವನ್ನ ಹೊಂದಿದ್ದ ಈ ಚಿತ್ರವನ್ನು ಶೈಲಶ್ರೀ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸಿದ್ದು ಎ ನರಸಿಂಹಮೂರ್ತಿ ಮತ್ತು ಮಿತ್ರರು. 

ಶೈಲಶ್ರೀ ಸಾಹಿತ್ಯ ವೃಂದ ಚಿತ್ರಕತೆಯನ್ನು ಹೆಣೆದರೆ.. ಕಾದಂಬರಿಯಲ್ಲಿದ್ದ ಸಂಭಾಷಣೆಯನ್ನು ಉಪಯೋಗಿಸಿಕೊಂಡು ಕೃಷ್ಣಮೂರ್ತಿ ಪುರಾಣಿಕ್ ಅವರಿಗೆ ಶ್ರೇಯಸ್ಸು ಕೊಟ್ಟು.. ಚಿತ್ರಕ್ಕೆ ಬೇಕಾದಂತೆ ಸಂಭಾಷಣೆಯನ್ನು ಜೊತೆಗೆ ಬರೆದದ್ದು ಸಹ ನಿರ್ದೇಶಕ ಎಸ್ ಕೆ ಭಗವಾನ್. 

ಸಂಗೀತ ಜೆ ಕೆ ವೆಂಕಟೇಶ್ ಅವರದ್ದು.. ಈ ಚಿತ್ರದ ಇನ್ನೊಂದು ವಿಶೇಷತೆ ಎಂದರೆ ಸಾಹಿತಿಗಳ ಕವಿತೆಗಳನ್ನು ಚಲನಚಿತ್ರಕ್ಕೆ ಗೀತೆಯಾಗಿ ಅಳವಡಿಸಿಕೊಂಡಿದ್ದು. 

ಮದುಮಗಳನ್ನು ಗಂಡನ ಮನೆಗೆ ಒಪ್ಪಿಸುವಾಗ ಖಾಯಂ ಗೀತೆಯಾಗಿರುವ "ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು"  ವೀ ಸೀತಾರಾಮಯ್ಯ ಅವರ ಕವಿತೆಯನ್ನು ಅಳವಡಿಸಿಕೊಂಡಿದ್ದಾರೆ

ಯುಗ ಯುಗ ಕಳೆದರೂ ಮಾಸದ ಯುಗಾದಿ ಹಬ್ಬದ ಹಾಡು "ಯುಗ ಯುಗಾದಿ ಕಳೆದರೂ" ವರಕವಿ      ದ ರಾ ಬೇಂದ್ರೆಯವರ ಸುಂದರ ಕೃತಿ ಹಾಡಾಗಿದೆ

ಕರುನಾಡಿನ ಹೆಮ್ಮೆಯನ್ನು ಹೆಚ್ಚಿಸುವ "ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ" ರಾಷ್ಟ್ರ ಕವಿ ಗೋವಿಂದ ಪೈ ಅವರ ಅದ್ಭುತ ಗೀತೆಯನ್ನು ಅಳವಡಿಸಿಕೊಂಡಿದ್ದಾರೆ. 

ಇದರ ಜೊತೆಯಲ್ಲಿ ಪಿ ಬಿ ಶ್ರೀನಿವಾಸ್ ಒಂದು ಸಂದರ್ಶನದಲ್ಲಿ ಹೇಳಿದ್ದು ನೆನೆಪು.. ಅವರ ಅತ್ಯಂತ ಪ್ರೀತಿಯ ಗೀತೆ "ಒಲವಿನ ಪ್ರಿಯಲತೆ ಅವಳದೇ ಚಿಂತೆ"  ಹಾಡೂ ಇದೆ.  ಇದನ್ನು ರಚಿಸಿದ್ದು ಕಣಗಾಲ್ ಪ್ರಭಾಕರ್ ಶಾಸ್ತ್ರೀ. 

ಈ ಚಿತ್ರ ಬಹುಷಃ ಎಲ್ಲಾ ಗೀತೆಗಳೂ  ಯಶಸ್ವಿಯಾದ ಕೆಲವು ಮೊದಲ ಚಿತ್ರಗಳಲ್ಲಿ ಇದು ಒಂದು.  

ಗೀತೆಗಳು ಚಿತ್ರಕತೆಯನ್ನು ಮುಂದಕ್ಕೆ ಒಯ್ಯುದಕ್ಕೆ ಸಹಾಯ ಮಾಡಿದೆ. 

ಛಾಯಾಗ್ರಹಣ ಬಿ ದೊರೈರಾಜ್ ಅವರದ್ದು. 

ನಿರ್ದೇಶನ ಟಿ ವಿ ಸಿಂಗ್ ಠಾಕೂರ್ ಅವರದ್ದು.  

ಈ ಚಿತ್ರ ವರದಕ್ಷಿಣೆ ಪಿಡುಗಿನ ಹಿನ್ನೆಲೆ ಹೊಂದಿರುವ ಚಿತ್ರ.  ಬಾಲಕೃಷ್ಣ ಜಿಪುಣಾಗ್ರೇಸರ. ತನ್ನ ಎರಡನೇ ಸಂಸಾರದ ಮಗ ರಾಜಕುಮಾರ್ ಅವರಿಗೆ ಅಶ್ವಥ್ ಅವರ ಮಗಳು ಲೀಲಾವತಿಯನ್ನು ತರುತ್ತಾರೆ . ಇದರ ಹಿನ್ನೆಲೆ.. ಅಶ್ವಥ್ ತನ್ನ ಅಣ್ಣ ಮಾಡಿದ ಸಾಲವನ್ನು ತೀರಿಸುವ ವಾಗ್ಧಾನ ಬಾಲಣ್ಣ ಅವರಿಗೆ ನೀಡಿರುತ್ತಾರೆ. ಇತ್ತ ಬಾಲಣ್ಣನ ಮನೆಯಲ್ಲಿ ಅವರ ಮೊದಲ ಸಂಸಾರದ ಮಗಳು ಪಾಪಮ್ಮ ತನ್ನ ಗಂಡನನ್ನು ಕಳೆದುಕೊಂಡು ತವರು ಮನೆಯಲ್ಲಿಯೇ ಉಳಿದು ಕಾರುಬಾರು ಮಾಡುತ್ತಿರುತ್ತಾರೆ. 

ಎಲ್ಲಾ ಕೆಲಸ ತನ್ನ ಮೇಲೆ ಇದೆ ಅಂತ ಗೊಣಗಿಕೊಳ್ಳುತ್ತಾ ಇರುವಾಗ..  ಆಕೆಯ ಸಂಬಂಧಿ ನರಸಿಂಹರಾಜು ಅವರ ಸಲಹೆಯ ಮೇರೆಗೆ ಲೀಲಾವತಿಯನ್ನು ಮನೆಗೆ ತಂದುಕೊಳ್ಳುವ ಸಲಹೆ ನೀಡುತ್ತಾರೆ.. 

ಅಲ್ಲಿಂದ ಚಿತ್ರಕತೆ ಮುಂದುವರೆಯುತ್ತದೆ.. ಸಾಲದ ಬಾಕಿ ಮೂರು ಸಾವಿರ ಉಳಿದಿರುತ್ತದೆ.. ಅದನ್ನು ಕೊಡದೆ ಮಗ ಮತ್ತು ಸೊಸೆಯನ್ನು ಸೇರಿಸದೆ ಕಿರುಕುಳ ಕೊಡುತ್ತಿರುತ್ತಾರೆ.. ಬೇಸತ್ತ ಲೀಲಾವತಿ ತನ್ನ ತಂದೆ ಕೊಡಬೇಕಾದ ಮೂರು ಸಾವಿರ ರೂಪಾಯಿಗಳನ್ನು ಜೊತೆ  ಮಾಡಿಕೊಂಡ ಮೇಲೆ ಗಂಡನ ಮನೆಗೆ  ಬರುತ್ತೇನೆ ಎಂದು ಮಾಂಗಲ್ಯದ ಮೇಲೆ ಪ್ರಮಾಣ ಮಾಡಿ ಗಂಡನ ಮನೆಯಿಂದ ಹೊರಬೀಳುತ್ತಾಳೆ. 

ಅಪ್ಪನ ಮನೆಗೆ ಬಂದರೂ... ಯೋಚನೆ ಕಾಡುತ್ತಿರುವಾಗ.. ಶಾಲೆಯಲ್ಲಿ ಅಧ್ಯಾಪಕಿ ಕೆಲಸ ಸಿಕ್ಕಿ ಮೈಸೂರಿಗೆ ಹೋಗಿ ನೆಲೆಸುತ್ತಾಳೆ. . 

ಅವಳನ್ನು ಹುಡುಕಿ ಬರುವ ರಾಜಕುಮಾರ್ ಕಾರಿನ ಅಪಘಾತಕ್ಕೆ ತುತ್ತಾಗಿ ಮತಿ ಭ್ರಮಣೆಯಾಗುತ್ತದೆ.  ಅದನ್ನು ಕಂಡು ಆತನ ಅಮ್ಮನ ಆರೋಗ್ಯ ಹದಗೆಡುತ್ತದೆ.  ಬುದ್ದಿ ಕಲಿತ ಬಾಲಣ್ಣ ತನ್ನ ಸೊಸೆ ಲೀಲಾವತಿ ಬಳಿ ಬಂದು ಕ್ಷಮೆ ಕೇಳಿ ಮನೆಗೆ ಬರಲು ಹೇಳುತ್ತಾನೆ.. ಆದರೆ ತನ್ನ ಆಣೆ ಪ್ರಮಾಣವನ್ನು ನೆನಪಿಸಿ ಹಣ ಹೊಂದುತ್ತಲೇ  ಬರುತ್ತೇನೆ ಎಂದು ಕ್ಷಮೆ ಕೇಳಿ ಕಳಿಸುತ್ತಾರೆ. 

ಇತ್ತ ತನ್ನ ಸೊಸೆ ಬರದೇ ಇದ್ದದ್ದನ್ನು ಕಂಡು.. ಕೊರಗುತ್ತಾ ಬಾಲಣ್ಣ ಅವರ ಮಡದಿ ಅಸು ನೀಗುತ್ತಾಳೆ. ದುಡ್ಡಿನ ದುರಾಸೆಯಿಂದ ತನ್ನ ಮಗಳನ್ನು ವೃದ್ಧನಿಗೆ ಮದುವೆ ಮಾಡಿಕೊಡುವ ಪ್ರಯತ್ನ ಮಾಡಿದ್ದನ್ನು ಕಂಡು ರಾಜಕುಮಾರ್ ಮತ್ತು ನರಸಿಂಹರಾಜು ಇಬ್ಬರೂ ಉಪಾಯ ಮಾಡಿ ತಪ್ಪಿಸುತ್ತಾರೆ.. 

ಲೀಲಾವತಿ ತನ್ನ ಪತಿ ದೇವನಿಗೆ ಮತಿ ಭ್ರಮಣೆಯಾಗಿರುವುದನ್ನು ತಿಳಿದು.. ಅಧ್ಯಾಪಕಿ ವೃತ್ತಿಗೆ ರಾಜೀನಾಮೆ ಕೊಟ್ಟು.. ಪಿಂಚಣಿ ಹಣ ಮತ್ತು ಉಳಿಸಿದ ಹಣದ ಮೊತ್ತ ಮೂರು ಸಾವಿರ ಜೊತೆ ಮಾಡಿಕೊಂಡು ಮನೆಗೆ ಗಂಡನ ಮನೆಗೆ ಬರುತ್ತಾಳೆ.. 

ಎಲ್ಲಾ ಸುಖಾಂತ್ಯವಾಗುತ್ತದೆ. 

ಈ ಸುಂದರ ಕತೆಯನ್ನು ಚಿತ್ರವನ್ನಾಗಿ ಮಾಡಿದ್ದಾರೆ.  ಈ ಚಿತ್ರದಲ್ಲಿ ಆರಂಭದಲ್ಲಿ ರಾಜಕುಮಾರ್ ಪಾತ್ರಕ್ಕೆ ಅಷ್ಟೊಂದು ಪ್ರಾಮುಖ್ಯತೆ ಇಲ್ಲ ಅನಿಸಿದರೂ.. ಚಿತ್ರ ಏರುತ್ತಾ ಏರುತ್ತಾ ಹೋದ ಹಾಗೆ ಅವರ ಪಾತ್ರ ಪೋಷಣೆ ಚೆನ್ನಾಗಿದೆ.. ಮತಿ ಭ್ರಮಣೆಯಾದಾಗ ಅವರ ಅಭಿನಯ ಸೊಗಸಾಗಿದೆ. "ಒಲವಿನ ಪ್ರಿಯಲತೆ" ಗೀತೆಯಲ್ಲಿ ಅವರ ಅಭಿನಯ ಸೊಗಸಾಗಿದೆ.  ಸಲೀಸಾಗಿ ಅಭಿನಯ ನೀಡುವ ಅವರ ಪ್ರತಿಭೆಗೆ ಸಲಾಂ ಹೇಳುವ ಚಿತ್ರವಿದು. 

ಈ ಚಿತ್ರದ ಹೀರೊ ಬಾಲಣ್ಣ.. ಜಿಪುಣಾಗ್ರೇಸರನ ಪಾತ್ರದಲ್ಲಿ ಮಿಂಚುತ್ತಾರೆ.. ಆ ಹಾವಭಾವ, ಸಂಭಾಷಣೆ ವೈಖರಿ.. ಸೊಗಸು.. 

ಅಶ್ವಥ್ ಹೆಣ್ಣಿನ ತಂದೆಯಾಗಿ ತಗ್ಗಿ ಬಗ್ಗಿ ನೆಡೆಯುವ ಪಾತ್ರ ಸೊಗಸು.  ಶಾಂತಮ್ಮ ಅಶ್ವಥ್ ಅವರ ಮಡದಿಯ ಪಾತ್ರದಲ್ಲಿ ಹಿತಮಿತವಾಗಿ ಅಭಿನಯಿಸಿದ್ದಾರೆ.  ಬಾಲಣ್ಣ ಅವರ ಮಡದಿ ಪಾತ್ರದಲ್ಲಿ ಜಯಶ್ರೀ ಅವರ ಪಾತ್ರಕ್ಕೆ ಹೆಚ್ಚಿನ ಮಹತ್ವ ಇರದೇ ಹೋದರು ಅವರ ಅಭಿನಯ ಕುಂದಿಲ್ಲ..  ಹಾಸ್ಯ ಪಾತ್ರದಲ್ಲಿ ಹಾಗೂ ಚಿತ್ರಕ್ಕೆ ತಿರುವು ಕೊಡುವ ಪಾತ್ರದಲ್ಲಿ ನರಸಿಂಹರಾಜು ಮಿಂಚಿದ್ದಾರೆ. ಚಾಣಾಕ್ಷ ಪಾತ್ರಧಾರಿಯಾಗಿ ಅವರ ಅಭಿನಯ ನೋಡೋದು ಖುಷಿ ಕೊಡುತ್ತದೆ. 

ರಾಜ್ ಕುಮಾರ್ ಅವರ ಪಾತ್ರ ದ ಸೊಬಗು ಚಂದ.. ಕಲಾವಿದ ತನ್ನ ಬಳಿ ಬಂದ ಪಾತ್ರದಲ್ಲಿ ತಲ್ಲೀನನಾಗಿ ಅಭಿನಯಿಸುತ್ತಾ ಹೋದ ಹಾಗೆ ಪಾತ್ರದ ವಿಸ್ತಾರ.. ಅಭಿನಯದ ಆಳದ ಅರಿವಾಗುತ್ತದೆ.. ಇದೆ ಹಸಿವು ಅವರ ಚಿತ್ರಗಳಲ್ಲಿ ನೋಡುತ್ತಾ ಬಂದಿದ್ದೇನೆ.. ಈ ಚಿತ್ರ ಅದಕ್ಕೆ ಉತ್ತಮ ಉದಾಹರಣೆ. 

ಮತ್ತೆ ಮುಂದಿನ ಮುಂದಿನ ಚಿತ್ರದಲ್ಲಿ ಸಿಗೋಣ.. !











Sunday, May 16, 2021

ಮೆಲ್ಲನೆ ಮದುವೆಯಲ್ಲಿ ತನ್ನ ಗುರಿ ಸಾಧಿಸುವ ಮಲ್ಲಿ ಮದುವೆ (1963) (ಅಣ್ಣಾವ್ರ ಚಿತ್ರ ೪೦ / ೨೦೭)

"ಛಲಗಾರ ಎಂದರೆ ನೀನೆ ಸರಿ.. ಎಲ್ಲೆಲ್ಲೂ ಗಲಬರಿಸಿದರೂ ಕಾಣದ.. " 

"ಅಣ್ಣಾವ್ರೇ ಅಣ್ಣಾವ್ರೇ ನೀವು ಏಕದಂ ಮೂವತ್ತು ವರ್ಷ ದಾಟಿ ಬಿಟ್ಟಿದ್ದೀರಾ.. ದಯಮಾಡಿ ಹಿಂದೆ ಬನ್ನಿ"

"ಓಹ್ ಓಹ್ ಓಹ್.. ನಿನ್ನ ಶ್ರಮವನ್ನು ಕಂಡು.. ನಾ ಹಾಗೆ ಮುಂದೆ ಹೋಗಿಬಿಟ್ಟಿದ್ದೆ ಶ್ರೀ.. ಓಕೆ ಓಕೆ.. ಶುರು ಮಾಡು"

****

ಹೌದು.. 

ಯು ಟ್ಯೂಬ್ ಇಲ್ಲ

ಕನ್ನಡ ಮೂವೀಸ್ ಇಲ್ಲ 

ಟೋಟಲ್ ಕನ್ನಡ ಇಲ್ಲ 

ಸಪ್ನ ಬುಕ್ ಸ್ಟಾಲ್ ಇಲ್ಲ 

ರಾಗ.ಕಾಮ್ ಇಲ್ಲ 

ಹೀಗೆ ಹುಡುಕದ ಜಾಗವಿಲ್ಲ.. ಹುಡುಕದ ಹಾಡಿಗಳಿಲ್ಲ.. ಹಾಗೂ ಹೀಗೂ.. ಟೋಟಲ್ ಕನ್ನಡದಲ್ಲಿ ಒಮ್ಮೆ ಸಿಕ್ಕಿ.. ಹಣವನ್ನು ಸಂದಾಯ ಮಾಡಿ ಹದಿನೈದು ದಿನಗಳು ಕಳೆದ ಮೇಲೆ ಕರೆ ಬಂತು " ಸರ್.. ಆ ಚಿತ್ರವಿಲ್ಲ.. ಆದರೆ ನೀವು ಸಂದಾಯ ಮಾಡಿದ ಹಣಕ್ಕೆ ಬದಲಾಗಿ ಬೇರೆ ಚಿತ್ರದ ಸಿಡಿ ಕಳಿಸುತ್ತೇವೆ.. " ಎಂದು ಹೇಳಿ ರಾಜ್ ಕುಮಾರ್ ಅವರ ಇನ್ನೊಂದೆರಡು ಚಿತ್ರವಿರುವ ಡಿವಿಡಿ ಬಂತು.. 

ಮಧ್ಯೆ ಜೀವನದ ಪದರಗಳಲ್ಲಿ ಏರು ಪೇರಾಯಿತು  ಆದರೂ ಬಿಡದೆ ಹುಡುಕುತ್ತಲೇ ಇದ್ದೆ.. ಅಂತೂ ಮತ್ತೆ ಸಿಕ್ಕಿತು.. ಆದರೆ ಈ ಬಾರಿ ಸಿಡಿ ಪ್ಲೇಯರ್ ಆಟವಾಡತೊಡಗಿತು.. ಒಂದಷ್ಟು ದಿನ.. ಆ ಸಿಡಿಯನ್ನು ಸೋಪಿನಲ್ಲಿ ತೊಳೆದು... ತೊಳೆದು.. ಕಡೆಗೂ ಪೂರ್ತಿ ಸಿನಿಮಾ ನೋಡಿಯೇ ಬಿಟ್ಟೆ.. ಅದಕ್ಕೆ ಅಣ್ಣಾವ್ರು ಮೂವತ್ತು ವರ್ಷ ದಾಟಿ.. ಭಕ್ತ ಪ್ರಹ್ಲಾದ ಚಿತ್ರದ ಸಂಭಾಷಣೆ ಹೇಳೋಕೆ ಹೊರಟಿದ್ದು :-)

***

ಈ ಚಿತ್ರ ಒಂದು ರೀತಿಯ ಸಮಾಜದಲ್ಲಿ ಶೋಷಿತ ವರ್ಗವನ್ನು ದಹಿಸುವ ಸಿರಿವಂತರ ಬಗ್ಗೆ ಆಧಾರಿತವಾಗಿದೆ. 

ಈ ಚಿತ್ರದ  ವಿಶೇಷತೆಗಳು.. 

೧) ತಮಿಳುನಾಡಿನ ಮೊದಲ ಮುಖ್ಯಮಂತ್ರಿ ಶ್ರೀ ಸಿ  ಎನ್ ಅಣ್ಣಾದುರೈ  ಅವರು ಬರೆದ ಕಥೆಯಾಧಾರಿತ ಚಿತ್ರವಿದು 

೨) ಒಂದೆರಡು ಕ್ಷಣದ ದೃಶ್ಯದಲ್ಲಿ ರಾಜ್ ಕುಮಾರ್ ದ್ವಿಪಾತ್ರದಲ್ಲಿ ನಟಿಸಿದ ಚಿತ್ರವಿದು 

೩) ಸಂಗೀತ ನಿರ್ದೇಶಕ ಜಿ ಕೆ ವೆಂಕಟೇಶ್ ಗಾಯಕರಾಗಿಯೂ ಮಿಂಚಿದ ಚಿತ್ರವಿದು 

ಆ ಪುಟ್ಟ ಹಳ್ಳಿಯಲ್ಲಿ ಸಾಹುಕಾರ ಊರಿನವರಿಗೆ ಕೊಟ್ಟ ಸಾಲವನ್ನು ವಸೂಲಿ ಮಾಡಲು ಎಲ್ಲಾ ರೀತಿಯ ದುಷ್ಟ ಮಾರ್ಗವನ್ನಲ್ಲದೆ, ಅಂತಃಕರಣವಿಲ್ಲದ, ಶುದ್ಧ ಜಿಪುಣನಾಗಿರುತ್ತಾನೆ.  ಆದರೆ ಈ ಸಾಹುಕಾರ ಕೂಡಿಟ್ಟ ಹಣವನ್ನೆಲ್ಲ ಅವನ ಮಗಳು ದುಂದು ವೆಚ್ಚಮಾಡೋದನ್ನ ಸಹಿಸಲಾರದೆ ಯಾವಾಗಲೂ ಖರ್ಚುವೆಚ್ಚ ಕಡಿಮೆ ಮಾಡಬೇಕು ಅಂತ ತಾಕೀತು ಮಾಡುತ್ತಲೇ ಇರುತ್ತಾನೆ. 

ಹಳ್ಳಿಯವನೊಬ್ಬ ಸಾಲವನ್ನು ಹಿಂದಿರುಗಿಸಲಾಗದೆ ಹೋದಾಗ, ಕೋರ್ಟಿನ ನೋಟಿಸಿಗೆ ಬೆದರಿ, ತನ್ನನ್ನು ಕಾಪಾಡಬೇಕು ಎಂದು ಅಂಗಲಾಚಿದಾಗಿಯೂ, ಹಣದ ದಾಹದ ಸಾಹುಕಾರ ಮುಂದಿನ ಕ್ರಮ ಜರುಗಿಸಿಯೇ ಬಿಡುತ್ತಾನೆ. ಆ ಅವಮಾನ ತಾಳಲಾರದೆ, ಆ ಹಳ್ಳಿಯವ ನೇಣು ಹಾಕಿಕೊಳ್ಳುತ್ತಾನೆ.. 

ಈ ಚಿತ್ರದ ತಳಹದಿ ಈ ದೃಶ್ಯ.. ಊರಿನಿಂದ ಬರುವ ಆತನ ಮಗನಿಗೆ ನಿಜ ವಿಷಯ ತಿಳಿದಾಗ ತನ್ನ ತಂದೆಯ ಸಾವಿಗೆ ಕಾರಣನಾದ ಧನದಾಹಿ ಸಾಹುಕಾರನ ಮೇಲೆ ಸೇಡು ತೀರಿಸಿಕೊಳ್ಳುವ ಪಣ ತೊಡುತ್ತಾನೆ.. 


ಈ ದೃಶ್ಯ ಚಿತ್ರದ ಹೈ ಲೈಟ್ ಕಾರಣ.. ಬೆಳಕಿನ ಸಂಯೋಜನೆ ಉಗ್ರವಾಗಿ ಕಾಣುವ ರಾಜ್ ಕುಮಾರ್ ಅಬ್ಬಬ್ಬಾ ಎನಿಸುತ್ತದೆ.. 





ದೃಶ್ಯದಲ್ಲಿ ಚಾಣಕ್ಯ ಚಂದ್ರಗುಪ್ತನಿಗೆ ದಾರಿ ತೋರಿಸಿದ ಹಾಗೆ, ರಾಜ್ ಕುಮಾರ್ ಗೆಳೆಯರಾಗಿ ಉದಯಕುಮಾರ್ ಬರುತ್ತಾರೆ.. 


ಸಾಹುಕಾರನ ಮಗಳನ್ನು ಮದುವೆಯಾಗಿ, ಅವಳಿಗೆ ಕಷ್ಟ ಕೊಟ್ಟು, ಬೇಕು ಬೇಕಾದಾಗ ಸಾಹುಕಾರನ ದುಡ್ಡು ಕರಗಿಸುವತ್ತ ಗಮನ ರಾಜ್ ಕುಮಾರ್ ಪಾತ್ರ, ನಂತರ ತನ್ನ ಮಡದಿಯ ಅಣ್ಣನ ಒಲವು ಆತನ ಮನೆಕೆಲಸದಾಕೆ ಲೀಲಾವತಿಯ ಮೇಲೆ ಇರುವುದನ್ನು ಕಂಡು, ಅದಕ್ಕೆ ಇಂಬು ಕೊಡುತ್ತಲೇ ಸಾಹುಕಾರನ ಗೌರವಕ್ಕೆ ಪೆಟ್ಟು ಕೊಡಲು ಅನುವಾಗುತ್ತಾರೆ.  ಆದರೆ ಸಾಹುಕಾರನ ಹಣದ ದರ್ಪಕ್ಕೆ ಲೀಲಾವತಿಯ ಮನೆ ಸುತ್ತು ಹೋಗುತ್ತದೆ, ಆದರೆ ಉಪಾಯವಾಗಿ ರಾಜ್ ಕುಮಾರ್ ಮಲ್ಲಿ ಅಂದರೆ ಲೀಲಾವತಿಯ ಕುಟುಂಬವನ್ನು ಉಳಿಸಿ, ಪಟ್ಟಣಕ್ಕೆ ಕಳಿಸುತ್ತಾರೆ.  ನಿರಾಶೆಯಲ್ಲಿದ್ದ ಮಲ್ಲಿಯ ಪ್ರಿಯಕರ ಜಿಗುಪ್ಸೆಗೊಂಡು, ಆಶ್ರಮಕ್ಕೆ ಸೇರಿದಾಗ. ಅಲ್ಲಿಯ ಸ್ವಾಮಿಯ ದುರ್ನಡತೆಯನ್ನು ಕಂಡು ವಿರೋಧಿಸುವ ಸನ್ನಿವೇಶದಲ್ಲಿ ಆ ಸ್ವಾಮಿಯ ಸಾವಿಗೆ ಕಾರಣನಾಗುತ್ತಾನೆ.  ಕೇಸಿನ ವಿಚಾರಣೆಯನ್ನು ರಾಜ್ ಕುಮಾರ್ ಪಾತ್ರಧಾರಿ ನಿರ್ವಹಿಸಿ, ಕೇಸು ಗೆಲ್ಲಲು ಸಹಾಯ ಮಾಡುತ್ತಾರೆ.. ಅದಕ್ಕೆ ಸಹಾಯ ಮಾಡಿದ ಕಾರಣ ಮುಲಾಜಿಗೆ ಒಪ್ಪಿ ಮಲ್ಲಿಯನ್ನು ಬಿಟ್ಟು ಇನ್ನೊಬ್ಬ ಸಾಹುಕಾರನ ಮಗಳ ಮದುವೆಗೆ ಅಣಿಯಾಗುತ್ತಾರೆ.. ಇದೆಲ್ಲಾ ರಾಜ್ ಕುಮಾರ್ ಮತ್ತು ಉದಯಕುಮಾರ್ ಉಪಾಯವಾಗಿರುತ್ತದೆ.. ಅಂತ್ಯದ್ಲಲಿ ಸಾಹುಕಾರನ ಮುಂದೆ ಎಲ್ಲವೂ ತೆರೆ ಬೀಳುತ್ತದೆ.. ಹಾಗೂ ಸಾಹುಕಾರನ ದರ್ಪವೂ ಅಡಗುತ್ತದೆ.. ರಾಜ್ ಪಾತ್ರ ಗೆಲ್ಲುತ್ತದೆ ..ಸುಖಾಂತ್ಯವಾಗುತ್ತದೆ  









ಪ್ರತಿಯೊಂದು ದೃಶ್ಯದಲ್ಲಿಯೂ ಉದಯಕುಮಾರ್ ರಾಜ್ ಕುಮಾರ್ ಅವರಿಗೆ ಹಾದಿ ತೋರಿಸುತ್ತಾ ಹೋಗುವ ದೃಶ್ಯ ಸೊಗಸಾಗಿ ಮೂಡಿ ಬಂದಿದೆ.  ರಾಜ್ ಕುಮಾರ್ ಅವರ ಪಾತ್ರದ ಸಿಟ್ಟು, ರೋಷವನ್ನು, ಉದಯಕುಮಾರ್ ಪಾತ್ರಧಾರಿ ಅಚ್ಚುಕಟ್ಟಾಗಿ ಉಪಯೋಗಿಸುವ ರೀತಿ ಚಿತ್ರಕಥೆಯಲ್ಲಿ ಮೂಡಿಸಿರುವ ರೀತಿ ಸೂಪರ್.. 

ರಾಜ್ ಕುಮಾರ್ ಅವರ ಪಾತ್ರ ಪೋಷಣೆ ಇಷ್ಟವಾಗುತ್ತದೆ..  ರೋಷ ಸಿಟ್ಟು ಎಲ್ಲವನ್ನು ಮೇಳೈಸಿಕೊಂಡು ಅಭಿನಯಿಸಿರುವ ರೀತಿ ಸೊಗಸು.. ಇದುವರೆಗೂ ಮಾಡಿಕೊಂಡು ಬಂದು ಚಿತ್ರಗಳಿಗಿಂತ ಕೊಂಚ ಭಿನ್ನವಾದ ಪಾತ್ರವಿದು.. ಸಿಗರೇಟ್ ಸೇದುವ ದೃಶ್ಯವಿದ್ದರೂ ರಾಜ್ ಕುಮಾರ್ ಸಿಗರೇಟ್ ಸೇದುವ ದೃಶ್ಯದಲ್ಲಿ ಕಾಣುವುದಿಲ್ಲ. ಕುಡಿತ ದೃಶ್ಯವಿದ್ದರೂ ಅವರು ಇದರಲ್ಲಿ ಕಾಣುವುದಿಲ್ಲ.. ತಮ್ಮ್ ಪಾತ್ರದ ಬಗ್ಗೆ ಅವರು ತೋರುವ ಕಾಳಜಿ, ಹಾಗೆಯೇ ಸಾಮಾಜಿಕ ಜವಾಬ್ಧಾರಿಯ ಬಗ್ಗೆ ಹೆಮ್ಮೆಯೆನಿಸುತ್ತದೆ. 

ಅವರ ವೇಷಭೂಷಣ, ಮಾತುಗಾರಿಕೆ, ಮಚ್ಚು ಮಸೆಯುವಾಗ ತೋರುವ ರೌದ್ರಾವತಾರ, ಲಾಯರ್ ಆಗಿ ಅಚ್ಚುಕಟ್ಟಾಗಿ ನಿರ್ವಹಿಸಿರುವ ರೀತಿಗೆ ಮೆಚ್ಚುಗೆ ಸೂಚಿಸಬೇಕಾಗುತ್ತದೆ. 

ಆರಂಭದ ದೃಶ್ಯದಿಂದ ಅಂತಿಮ ದೃಶ್ಯದವರೆಗೂ ಚಿತ್ರದಲ್ಲಿ ಆವರಿಸಿರುವ ಪಾತ್ರಪೋಷಣೆ ಇಷ್ಟವಾಗುತ್ತದೆ. 

ಚಾಣಕ್ಯನ ಹಾಗೆ ಉಪಾಯ ಮಾಡುವ ಪಾತ್ರದಲ್ಲಿ ಉದಯಕುಮಾರ್ ಪ್ರತಿಹಂತದಲ್ಲೂ ಇಷ್ಟವಾಗುತ್ತಾರೆ. ಸನ್ನಿವೇಶಕ್ಕೆ ತಕ್ಕಂತೆ ಮಾತುಗಳನ್ನು ಆಡುವ ಅವರ ಪಾತ್ರ ಸೂಪರ್.  

ಗರ್ವ ತುಂಬಿದ ಹೆಣ್ಣಾಗಿ ಸಾಹುಕಾರ್ ಜಾನಕಿ, ಕೆಲಸದ ಆಳು ಮಗಳಾಗಿ ಲೀಲಾವತಿ, ಸಾಹುಕಾರನ ಮಗನಾಗಿದ್ದರೂ ಅಂತಃಕರಣವುಳ್ಳ ಪಾತ್ರದಲ್ಲಿ ರಾಜಾಶಂಕರ್ ಇವರೆಲ್ಲರ ಜೊತೆಯಲ್ಲಿ ಸಾಹುಕಾರನ ದರ್ಪದ ಪಾತ್ರದಲ್ಲಿ ಸೌಮ್ಯ ಪಾತ್ರದಲ್ಲಿಯೇ ಪಾತ್ರ ಮಾಡುತ್ತಿದ್ದ ಅಶ್ವಥ್ ಇಲ್ಲಿ ಖಳಛಾಯೆ ಪಾತ್ರದಲ್ಲಿ ಮೆರೆದಿದ್ದಾರೆ. ನರಸಿಂಹರಾಜು ಪಾತ್ರ ಪುಟ್ಟದಾಗಿದ್ದರೂ, ಆರಂಭಿಕ ದೃಶ್ಯಗಳಲ್ಲಿ ಸದಾ ಕಾಣಸಿಗುತ್ತಾರೆ.  

ಪ್ರತಿಯೊಬ್ಬರ ಪಾತ್ರ ಪೋಷಣೆ ಚೆನ್ನಾಗಿದೆ.. ಹಾಡುಗಳು ಖುಷಿ ಕೊಡುತ್ತದೆ. ಜಿ ಕೆ ವೆಂಕಟೇಶ್ ಅವರ ಸಂಗೀತ, ಹಿನ್ನೆಲೆ ಸಂಗೀತ ಇಷ್ಟವಾಗುತ್ತದೆ. ಆರು ಹಾಡುಗಳು ಇಂಪಾಗಿವೆ. 

ನಗುವೇ ನಾಕ ಅಳುವೇ ನರಕ ಹಾಡಲ್ಲಿ ಜೆ ಕೆ ವೆಂಕಟೇಶ್ ಮತ್ತು ಪಿ ಬಿ ಶ್ರೀನಿವಾಸ್ ಹಾಡುಗಾರಿಕೆ ಲಯಬದ್ಧವಾಗಿದೆ ... ಜನಪ್ರಿಯ ಗೀತೆ  ಆಡೋಣ ಬಾ ಬಾ ಗೋಪಾಲ.. ಇವತ್ತಿಗೂ ಜನಪ್ರಿಯವಾಗಿದೆ. ಸಂಗೀತ ಸಾಹಿತ್ಯದಿಂದ ಹಾಗೂ ಚಿತ್ರೀಕರಣ ಇಷ್ಟವಾಗುತ್ತದೆ.. 

ರಾಜ್ ಕುಮಾರ್ ಅವರ ಪ್ರತಿ ದೃಶ್ಯವೂ ಅವರಲ್ಲಿ ಬೆಳೆಯುತ್ತಿರುವ ಕಲಾವಿದನನ್ನ ತೆರೆಯ ಮೇಲೆ ಎದ್ದು ಕಾಣುತ್ತಿರುತ್ತದೆ.. ರೋಷಾವೇಷದ ಮಾತುಗಳಲ್ಲಿ, ಸಾಹುಕಾರನ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಕಟುವಾಗಿ ಮಾತನಾಡುವಾಗ ಅವರ ಸಂಭಾಷಣೆ ಸೂಪರ್ 

ಸಿಕ್ಕ ಪಾತ್ರ, ಕೊಟ್ಟ ಸಂಭಾಷಣೆ, ಸನ್ನಿವೇಶಕ್ಕೆ ಬೇಕಾಗುವ ಅಭಿನಯ ಎಲ್ಲದರಲ್ಲಿಯೂ ಎದ್ದು ಕಾಣುವ ಅವರ ಅಭಿನಯ ಕಲಾವಿದ ಹೊರಹೊಮ್ಮುವ ಪರಿ ಸುಂದರ.. !

ಜ್ಯೂಪಿಟರ್ ಪಿಕ್ಚರ್ಸ್ ಲಾಂಛನದಲ್ಲಿ ೧೯೬೩ರಲ್ಲಿ ತಯಾರಾದ ಈ ಚಿತ್ರವನ್ನು ಸಿ ಎನ್ ಅಣ್ಣಾದುರೈ ಕಥೆಯನ್ನು ಆಧರಿಸಿ, ಹುಣಸೂರು ಕೃಷ್ಣಮೂರ್ತಿ, ಹಾಗೂ ಕನಾಲ್ ಪ್ರಭಾಕರ್ ಶಾಸ್ತ್ರೀ ಅವರ ಸಾಹಿತ್ಯವನ್ನು ಹೊಂದಿತ್ತು, ಮತ್ತು ಜಿ ಕೆ ವೆಂಕಟೇಶ್ ಅವರ ಸಂಗೀತ ಹಾಗೂ ಜಿ ಆರ್ ನಾಥನ್ ಅವರ ಛಾಯಾಗ್ರಹಣ ಮತ್ತು ನಿರ್ದೇಶನವಿತ್ತು, 

ರಾಜ್ ಕುಮಾರ್ ಅವರ ಚಿತ್ರಜೀವನದ ನಲವತ್ತನೆಯ ಚಿತ್ತದಿಂದ ನಲವತ್ತೊಂದನೇ ಚಿತ್ರದ ಕಡೆಗೆ ಪಯಣ ಮಾಡೋಣ.. !

                                                                                   ***

Saturday, April 24, 2021

ತಮ್ಮ ಇಷ್ಟವಾದ ನಟರ ಬಗ್ಗೆ ಅಣ್ಣಾವ್ರ ಮಾತುಗಳು ... ಅಣ್ಣಾವ್ರ ಜನುಮದಿನ (2021)

ನನ್ನ ಬಿಡಪ್ಪ ಶ್ರೀಕಾಂತಪ್ಪ.. ಪ್ರತಿ ದಿನ ಪ್ರತಿ ಕ್ಷಣ ನನ್ನ ನೆನಪಿಸಿಕೊಳ್ಳದೆ ಇರೋದಕ್ಕೆ ಆಗೋದೇ ಇಲ್ವಾ.. ನಿನ್ನ ಮಡದಿಯ ಜೊತೆ ಮಾತಾಡುವಾಗಲೂ ನಾನ್ ಆಲ್ಲಿರ್ತೀನಿ, ನಿನ್ನ ಬರಹಗಳಲ್ಲೂ ಅಲ್ಲಲ್ಲಿ ನಾ ಬರುತ್ತಲೇ ಇರುತ್ತೀನಿ.. ಅದ್ಯಾಕಪ್ಪ ನನ್ನ ಬಿಡೋಲ್ಲ..ನನ್ನ ಅದ್ಭುತ ಗೆಳೆಯ ಬಾಲಣ್ಣನ ಬಗ್ಗೆ ಬರೆಯೋದಿದೆ... ನನ್ನ ತಂದೆಯಂತಹ ಅಶ್ವಥ್ ಅವರ ಚಿತ್ರಗಳ ಬಗ್ಗೆ ಬರೆಯೋದಿದೆ. ನನ್ನ ಕೆಲವು ಚಿತ್ರಗಳಲ್ಲಿ ಅದ್ಭುತ ಅಭಿನಯ ನೀಡಿದ (ಮಯೂರ, ರಾಜ ನನ್ನ ರಾಜ, ಧ್ರುವತಾರೆ, ಎರಡು ಕನಸು.... ) ರಾಜಾನಂದ್ ಅವರ ಬಗ್ಗೆ ಬರೆಯೋದಿದೆ, ಕನ್ನಡದ ಅದ್ಭುತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಚಿತ್ರ ಯಾತ್ರೆ ಮುಗಿಸಿದೆ, ಆದರೂ ಅವರ ಬಗ್ಗೆ ಬರೆಯೋದು ತುಂಬಾ ಇದೆ ನಿನಗೆ... ಇಷ್ಟೆಲ್ಲಾ ಬಿಟ್ಟು ನನ್ನ ಹಿಂದೆ ಮುಂದೆ ಓಡಾಡ್ತಾನೆ ಇದ್ದೀಯಲ್ಲ ಶ್ರೀ.. 

ಅಣ್ಣಾವ್ರೇ .. ಮಗುವನ್ನು ತಾಯಿ ಒಂದು ಕ್ಷಣ ಮುದ್ದಿಸಿದಾಕ್ಷಣ, ತಾಯಿ ಮಗುವನ್ನು ಬಿಟ್ಟು ಬಿಡುತ್ತಾಳೆಯೇ.. ಮತ್ತೆ ಮತ್ತೆ ಮುದ್ದಿಸೋದಿಲ್ವೇ.. ಹಾಗೆ ಮಗುವನ್ನು ಮುದ್ದಿಸುತ್ತಾ ಕೂತಳು ಅಂದು ಬಿಟ್ರೆ, ಬೇರೆ ಕೆಲಸ ಮಾಡೋದೇ ಇಲ್ವೇ.. ಅದರ ಪಾಡಿಗೆ ಅದು.. ಇದರ ಪಾಡಿಗೆ ಇದು.. ಹಾಗೆ ಬಾಲಣ್ಣ, ಅಶ್ವಥ್, ರಾಜಾನಂದ್, ಪುಟ್ಟಣ್ಣ ಇವರ ಬಗ್ಗೆ ಬರೆಯೋಕೆ ಮತ್ತೆ ಶುರು ಮಾಡುವೆ.. ಆದರೆ ಇಂದು ನಿಮ್ಮ ವಿಶೇಷ ದಿನ... ನಿಮ್ಮನ್ನು ನೆನಸಿಕೊಳ್ಳದೆ (ಮರೆತಿದ್ದರೇ ತಾನೇ) ಶುರು ಮಾಡೋಕೆ ಆಗುತ್ತಾ... 

ಶ್ರೀ.. ಸರಿ ಕಣಪ್ಪ ಚಿ ಉದಯಶಂಕರ್ ಬರೆದಿದ್ದ ಸಂಭಾಷಣೆಗಳು ನಿನ್ನನ್ನು ಪ್ರಭಾವಿತ ಮಾಡಿದೆ.. ಅದನ್ನೇ ನನ್ನ ಮೇಲೂ ಪ್ರಯೋಗ ಮಾಡುತ್ತೀಯಾ. ಸರಿ ಇವತ್ತೇನು ಬರೀತೀಯ.. !!!

ಅಣ್ಣಾವ್ರೇ ತಿಳಿದೋ ತಿಳಿಯದೆಯೋ ಭಗವಂತನೇ ನಿಮ್ಮ ಮೂಲಕ ನನಗೆ ಸೂಚನೆ ಕೊಟ್ಟಿದ್ದಾನೆ.. ಈಗ ನೀವೇ ಈ ನಾಲ್ವರ ಬಗ್ಗೆ ಹೇಳಿ.. ಅದೇ ಇವತ್ತಿನ ನುಡಿಮುತ್ತಿನ ನಮನಗಳು ನಿಮಗೆ.. 

ಸರಿಯಾಗಿ ನನಗೆ ಬತ್ತಿ ಇಟ್ಟು ಬಿಟ್ಟೆಯ.. ಜಾಣ ನೀನು.. !

ಅದು ಬಿಡಿ ಅಣ್ಣಾವ್ರೇ ಈಗ ಶುರು ಹಚ್ಕೊಳ್ಳಿ.. !!

ಸರಿ ಕಣಪ್ಪ.. ಮೊದಲು ನನ್ನ ಗುರು ಸಮಾನರಾದ ಬಾಲಣ್ಣ ಅವರ ಬಗ್ಗೆ 

ಬಾಲಕೃಷ್ಣ: ಇವರ ಬಗ್ಗೆ ಬರೆಯೋದು ಅಂದರೆ ಕಡಲನ್ನು, ಸೂರ್ಯನನ್ನು ಹೊಗಳಿದ ಹಾಗೆ. ಆರಂಭದ ದಿನಗಳಿಂದಲೂ ನಾ ಇವರ ಜೊತೆ ಬೆರೆತಿದ್ದೆ.. ಅದೇನು ಹಾಸ್ಯ, ಅದೇನು ಸಮಯಪ್ರಜ್ಞೆ.. ಅಬ್ಬಬ್ಬಾ.. ಪ್ರಾತ್ರಧಾರಿಗಳ ಅಭಿನಯ ನೋಡುತ್ತಾ, ತಮ್ಮ ಅಭಿನಯವನ್ನು, ಸಂಭಾಷಣೆ ಹೇಳುವ ಧಾಟಿಯನ್ನು ಬದಲಿಸಿಕೊಂಡು, ಆ ಸನ್ನಿವೇಶಗಳಿಗೆ ಅದ್ಭುತ ಪರಿಣಾಮವನ್ನು ತಂದು ಕೊಡುತ್ತಿದ್ದರು.. ನನ್ನ ಅವರ ಚಿತ್ರಗಳು, ಸಂಭಾಷಣೆಗಳ ಜುಗಲ್ ಬಂಧಿ ನನಗೆ ಬಲು ಇಷ್ಟ.. ಕಣ್ತೆರೆದು ನೋಡು ಚಿತ್ರವನ್ನು ಎಷ್ಟು ಬರಿ ನೆನೆದರೂ ನನಗೆ ಸಮಾಧಾನವಿಲ್ಲ...ಪ್ರತಿ ಚಿತ್ರವೂ ವಿಶೇಷ... ಬಾಲಣ್ಣ ಬರಿ ನನ್ನ ಸಹನಟ ಮಾತ್ರವೇ ಅಲ್ಲ.. ಅವರು ನನ್ನ ಗುರುಗಳು.. ಸಂಭಾಷಣೆ ಹೇಳುವ ಶೈಲಿ ಅವರಿಂದ ನಾನು ಕಲಿತಿದ್ದೀನಿ.. ನನಗೆ ಆರಂಭದ ದಿನಗಳಲ್ಲಿ ಇಂಗ್ಲಿಷ್ ಭಾಷೆ ಹೇಳಿ ಕೊಟ್ಟ ಗುರುಗಳು ಅವರು.. ಬಾಲಣ್ಣ ನನ್ನ ಅದ್ಭುತ ಗೆಳೆಯ.. ಅವರ ಜೊತೆಯಲ್ಲಿ ಇನ್ನಷ್ಟು ಚಿತ್ರಗಳನ್ನು ಮಾಡುವ ಆಸೆಯಿತ್ತು.. ಆದರೆ ಭಗವಂತ.. ಬಿಡಪ್ಪ.. ಸಿಕ್ಕಷ್ಟೇ ತೃಪ್ತಿ ನನಗೆ.. 


ಅಶ್ವಥ್: ನನ್ನ ಚಿತ್ರಗಳಲ್ಲಿ ತಾಯಿಯ ಪಾತ್ರಗಳು ಬೆಳಗಿದ್ದೆ ಹೆಚ್ಚು.. ಆದರೂ ಅಶ್ವಥ್ ಅವರು ನನ್ನ ಚಿತ್ರಗಳಲ್ಲಿ ಆವರಿಸಿಕೊಳ್ಳೋದು ಇಷ್ಟವಾಗುತ್ತಿತ್ತು... ಅವರ ಪಾತ್ರವಿಲ್ಲದಿದ್ದರೆ ನನ್ನ ಪಾತ್ರ ಏನೂ ಇರುತ್ತಿರಲಿಲ್ಲ ಅನ್ನಿಸುತಿತ್ತು..  ಅವರು ಒಮ್ಮೆ ಪಾತ್ರದೊಳಗೆ ಇಳಿದುಬಿಟ್ಟರೆ ಆ ಪಾತ್ರವೇ ತಾವಾಗಿ ಬಿಡುತ್ತಿದ್ದರು, ಆ ಪಾತ್ರದ ಗುಣಗಳು ಅವರಲ್ಲಿಯೂ ಇರುತ್ತಿದ್ದವು.. ಅವರು ಖಳ ಛಾಯೆ ಇರುವ ಪಾತ್ರಗಳು ಮಾಡಿದ್ದು ಕಡಿಮೆ.. ಪ್ರತಿಯೊಂದರಲ್ಲ್ಲೂ ಅವರದ್ದೇ ಛಾಪು ಮೂಡಿಸುತ್ತಿದ್ದರು.. ನನಗೆ ಅನಿಸೋದು.. ಈ ನಿನ್ನ ರಾಜಕುಮಾರನ  ಹಾಗೆ ಅಭಿನಯ ಮಾಡೋರು ಸಿಗಬಹುದು ಆದರೆ  ಅಶ್ವಥ್ ಅವರ ಹಾಗೆ ಅಪ್ಪನ ಪಾತ್ರದಲ್ಲಿ ಆವರಿಸಿಕೊಳ್ಳುವ ತಾಕತ್ತು ಬಹುಶಃ ಇಲ್ಲವೇ ಇಲ್ಲ.. ಕಸ್ತೂರಿ ನಿವಾಸದ ರಾಮಯ್ಯನ ಪಾತ್ರದಲ್ಲಿ ಕಡೆ ದೃಶ್ಯದ ಅಭಿನಯ ಕಣ್ಣೀರು ತರಿಸುತ್ತೆ.. ಎರಡು ಕನಸು ಚಿತ್ರದಲ್ಲಿ ನನ್ನ ಪಾತ್ರಕ್ಕೆ ಹೇಳುವ ಮಾತು "ನೋಡಪ್ಪ ನಿನ್ನ ತಾಯಿಯನ್ನು ಉಳಿಸಿಕೊಡಪ್ಪ ಇದು ನಿನ್ನ ಕೈಯಲ್ಲ ಕಾಲ್ ..... " ಎನ್ನುವ ಮಾತು ಅಬ್ಬಬ್ಬಾ ಅನಿಸುತ್ತೆ.. ನನ್ನ ಅನೇಕ ಚಿತ್ರಗಳಲ್ಲಿ ಅವರ ಅಭಿನಯ ನನ್ನ ಪಾತ್ರಕ್ಕೆ ಸಮ ಸಮವಾಗಿದೆ.. ಅಶ್ವಥ್ ಕನ್ನಡ ಚಿತ್ರರಂಗದ ಅಶ್ವಥ್ ವೃಕ್ಷ.. 


ರಾಜಾನಂದ್:  ಇವರೊಬ್ಬ ಅದ್ಭುತ ನಟ.. ನನ್ನ ಕೆಲವೇ ಚಿತ್ರಗಳಲ್ಲಿ ಅಭಿನಯಿಸಿದ್ದರು.. ಇವರು ನನ್ನ  ಗೆಳೆಯ ವಿಷ್ಣುವಿನ ಚಿತ್ರಗಳಲ್ಲಿ ಮಿಂಚಿದ್ದು ಹೆಚ್ಚು. .. ರಾಜಾನಂದ್ ಅವರ ಮಯೂರ, ರಾಜ ನನ್ನ ರಾಜ, ಎರಡು ಕನಸು, ಧೃವತಾರೆ, ಎರಡು ನಕ್ಷತ್ರ, ಬಹದ್ದೂರ್ ಗಂಡು.. ಹೀಗೆ ಹತ್ತಾರು ಚಿತ್ರಗಳಲ್ಲಿ ನನ್ನ ಅವರ ಅಭಿನಯ ಸೊಗಸಾಗಿದೆ... ಅವರ ಸ್ಪಷ್ಟ ಉಚ್ಚಾರಣೆ.. ಗಡುಸಾಗಿ ಮಾತಾಡುವ ಅವರ ಪಾತ್ರಗಳ ಶೈಲಿ. ಅದ್ಭುತ.. ಧೃವತಾರೆ ಚಿತ್ರದಲ್ಲಿ "ನನ್ನ ಹಳ್ಳಿಯನ್ನು, ನನ್ನ ಜನರನ್ನು ಕಾಪಾಡಪ್ಪ" ಎಂದು ಕೊರಗುವ ದೃಶ್ಯ ಮನದಾಳದಲ್ಲಿ ಇಳಿಯುತ್ತದೆ.. ಅಶ್ವಥ್ ಅವರ ಹಾಗೆ ಅಪ್ಪನ ಪಾತ್ರಕ್ಕೆ ಜೀವ ತುಂಬುವ ನಟ ಇವರು.. !



ಪುಟ್ಟಣ್ಣ ಕಣಗಾಲ್: ಇವರು ಪುಟ್ಟಣ್ಣ ಅಲ್ಲವೇ ಅಲ್ಲ.. ನಿರ್ದೇಶಕರ ದೊಡ್ಡಣ್ಣ ಅಂತ ನೀನೆ ಹೇಳಿದ್ದೀಯ.. ಹೇಳ್ತಾ ಇರ್ತೀಯ.. ಅದು ನಿಜ..  ಮೂರು ಚಿತ್ರಗಳಲ್ಲಿ ಇವರ ನಿರ್ದೇಶನದಲ್ಲಿ ಅಭಿನಯಿಸುವ ಭಾಗ್ಯ ಸಿಕ್ಕಿತ್ತು. ಮಲ್ಲಮ್ಮನ ಪವಾಡದಲ್ಲಿ ಪ್ರತಿದೃಶ್ಯವನ್ನು ಅವರು ಸೃಷ್ಟಿಸುತ್ತಿದ್ದ ಪರಿ ಸೂಪರ್.. ಪ್ರಪಂಚದ ಅರಿವಿಲ್ಲದ ಮುಗ್ಧನಿಂದ ಎಲ್ಲವನ್ನು ಅರಿತುಕೊಳ್ಳುವ ನನ್ನ ಪಾತ್ರವನ್ನು ಅವರು ಬೆಳೆಸಿದ್ದು ಸೊಗಸಾಗಿತ್ತು... ಅವರಿಗೆ ಏನು ಬೇಕು ಅದನ್ನು ಎಲ್ಲರಿಗೂ ಅರ್ಥವಾಗುವ ಹಾಗೆ ಬಿಡಿಸಿ ಬಿಡಿಸಿ ಹೇಳುತ್ತಿದ್ದರು.. ಒಮ್ಮೆ ನಮ್ಮ ಮನಸ್ಸಿಗೆ ಬಂದ ತಕ್ಷಣ ಅದನ್ನು ತೆರೆಯ ಮೇಲೆ ತೆರೆದಿಡುತ್ತಿದ್ದ ರೀತಿಗೆ ಅದ್ಭುತ ಎನ್ನಬೇಕು... ಕರುಳಿನ ಕರೆಯಲ್ಲಿ ನನ್ನ ಪಾತ್ರವನ್ನು ಭಿನ್ನವಾಗಿ ಮೂಡಿಸಿದರು. ಹಾಡು, ಹೊಡೆದಾಟ, ಅಭಿನಯ ಎಲ್ಲವನ್ನು ಸರಿಸಮನಾಗಿ ತುಂಬಿದ್ದ ಚಿತ್ರದ ಪಾತ್ರವದು.. ಸಾಕ್ಷಾತ್ಕಾರ ಅಬ್ಬಬ್ಬಾ ಈ ಚಿತ್ರದ ಬಗ್ಗೆ ಹೇಳಿದಷ್ಟು ಕಡಿಮೆಯೇ... ಅಂತಿಮ ದೃಶ್ಯದಲ್ಲಿ ಬರುವ ಒಲವೇ ಜೀವನ ಸಾಕ್ಷತ್ಕಾರ ಹಾಡಿಗೆ ಅವರು ಕ್ಯಾಮರಾವನ್ನು ಉಪಯೋಗಿಸಿದ ರೀತಿ ಅದ್ಭುತ. ಒಲವು ಇನ್ನೇನು ಕೈಗೆ ಸಿಕ್ಕಿತು ಅನ್ನುವಷ್ಟರಲ್ಲಿ ಮತ್ತೆ ಕ್ಯಾಮರಾ ಹಿಂದಕ್ಕೆ ಹೋಗುತ್ತದೆ.. ಸಿಗೋಲ್ಲ ಅನ್ನುವ ಹೊತ್ತಿಗೆ ಮತ್ತೆ ಕ್ಯಾಮರಾ ಮುಂದಕ್ಕೆ ಬರುತ್ತದೆ.. ಅದ್ಭುತ ಸೃಷ್ಟಿಯದು.. ಮತ್ತೆ ಭಾರತ 
ಚಿತ್ರರಂಗದ ಅದ್ಭುತ ನಟ ಶ್ರೀ ಪೃಥ್ವಿರಾಜ್ ಕಪೂರ್ ಅವರ ಜೊತೆಯಲ್ಲಿ ಅಭಿನಯ, ಅವರ ಜೊತೆಯಲ್ಲಿ ಕಳೆದ ಕ್ಷಣ.. ಹೇಳಲಿಕ್ಕೆ ಪದಗಳಿಲ್ಲ... 


ಅಣ್ಣಾವ್ರೇ ನಿಮ್ಮ ಹುಟ್ಟು ಹಬ್ಬಕ್ಕೆ ನಾವು ನಿಮಗೆ ಉಡುಗೊರೆ ಕೊಡಬೇಕಿತ್ತು.. ಆದರೆ ನಿಮ್ಮ ನೆಚ್ಚಿನ ನಟರ  ಬಗ್ಗೆ ನೀವು ನಿಮ್ಮ ಮನದಾಳದ ಮಾತುಗಳನ್ನು ಹೇಳಿ, ನಮಗೆ ಉಡುಗೊರೆ ಕೊಟ್ಟು ಬಿಟ್ಟಿರಿ.. 

ಶ್ರೀಕಾಂತಪ್ಪ.. ಹಾಗೇನು ಇಲ್ಲ. ಈ ಅಭಿಮಾನಿ ದೇವರುಗಳು ನನ್ನ ಮೇಲೆ , ನನ್ನ ಚಿತ್ರಗಳ ಮೇಲೆ ಇಟ್ಟಿರುವ ಅಭಿಮಾನವೇ ನನಗೆ ದೊಡ್ಡ ಉಡುಗೊರೆ. ಹಾಗೆ ಎಷ್ಟೇ ವರ್ಷಗಳಾದರೂ ನೀವೆಲ್ಲ ನನ್ನನ್ನು ನಿಮ್ಮ ಹೃದಯದಲ್ಲಿ ರಾಜನಾಗೆ ಇಟ್ಟುಕೊಂಡಿರುವ ನಿಮ್ಮ ಅಭಿಮಾನಕ್ಕೆ ನಾ ಬೆಲೆ ಕಟ್ಟಲು ಸಾಧ್ಯವೇ... ನಿಮ್ಮ ಅಭಿಮಾನವೇ ನನ್ನ ಬೆಳೆಸಿದ್ದು,.. ಹರಸಿದ್ದು.. ಅರಳಿಸಿದ್ದು.. !

ಧನ್ಯೋಸ್ಮಿ ಅಣ್ಣಾವ್ರೇ.. 

ಬರ್ತೀನಿ ಶ್ರೀಕಾಂತಪ್ಪ ಮುಂದಿನ ಚಿತ್ರ ಶುರು ಹಚ್ಕೋ... !

Monday, April 12, 2021

ಅಣ್ಣಾವ್ರು ಅಣ್ಣಾವ್ರು ಸರಳ ವಿರಳ ಮಾತುಗಳು .. ಪುಣ್ಯ ದಿನ - 2021

ಅಣ್ಣಾವ್ರೇ ನಿಮ್ಮಲ್ಲಿ ಒಂದು ಮಾತು ಕೇಳಬೇಕಿತ್ತು.. 

ಯಾಕಪ್ಪ ಶ್ರೀಕಾಂತ ಇವತ್ತು ಬಹಳ ತಡವಾಗಿದೆ.. ನಿನ್ನ ಬರಹವನ್ನು ಓದೋಕೆ ಅಂತ ನಾನು ಪಾರ್ವತಿ ಕಾದು ಕುಳಿತಿದ್ದೀವಿ.. !

ಅಣ್ಣಾವ್ರೇ ಇದು ದೊಡ್ಡ ಮಾತು.. ನನ್ನ ಬರಹ ನೀವು ಓದೋಕೆ ಕಾಯೋದು.. ಯಪ್ಪೋ.. ತಲೆ ಮೇಲೆ ಕೊಂಬು ಬೆಳೆಯುತ್ತೆ ಅಣ್ಣಾವ್ರೇ.. ನಿಮ್ಮ ಮೇಲಿನ ಅಭಿಮಾನ.. ನಿಮ್ಮ ಚಿತ್ರಗಳಿಂದ ನಾ ಕಲಿತ, ನಾ ಕಲಿಯುತ್ತಿರುವ ಪಾಠಗಳು ನನಗೆ ದಾರಿ ದೀವಿಗೆ ಆಗಿವೆ. ಅಂತಹ ಹಾದಿಯಲ್ಲಿ ನಾ ನೆಡೆಯಲು ಪ್ರಯತ್ನ ಪಡುತ್ತಿರುವಾಗ ನೀವು ನನ್ನ ಬರಹಕ್ಕೆ ಕಾಯುತ್ತಿರುವುದು ಎಂದಾಗ ಮೈ ಜುಮ್ ಎನ್ನಿಸುತ್ತದೆ.. 

ಮನದಲ್ಲಿ ನವಿರಾದ ಭಾವ ಇರುವಾಗ.. ಅಹಂ ಬರೋದಿಲ್ಲ ಕಣಪ್ಪ.. ಇರಲಿ ಅದೇನೋ ಮಾತು ಅಂದೆಯಲ್ಲ ಏನದು.. ?

ಅಣ್ಣಾವ್ರೇ ಇನ್ನೂರಕ್ಕೂ ಹೆಚ್ಚಿನ ಚಿತ್ರಗಳು, ಸಾವಿರಾರು ಹಾಡುಗಳು.. ಕೋಟಿ ಕೋಟಿ ಅಭಿಮಾನಿಗಳು.. ಅಲ್ಲಲ್ಲ ನಿಮ್ಮ ಭಾಷೆಯಲ್ಲಿ ಹೇಳೋದಾದರೆ ಅಭಿಮಾನಿ ದೇವರುಗಳು.. ನಿಮ್ಮ ಚಿತ್ರಗಳನ್ನು ನೋಡಿ ಬದುಕನ್ನು ಹಸನು ಮಾಡಿಕೊಂಡವರು.. ಇಂದಿಗೂ ನಿಮ್ಮನ್ನು ಆರಾಧ್ಯ ದೈವವಾಗಿ ಕಾಣುವವರು.. ದೇವರಂತೆ ನಿಮ್ಮನ್ನು ಪೂಜಿಸುವವರು.. ಹೀಗೆ ಸುಮಾರು ಐವತ್ತಕ್ಕೂ ಹೆಚ್ಚಿನ ವರ್ಷಗಳ ಆ ಅಭಿಮಾನದ ಸಾಗರದ ಅಲೆಗಳನ್ನು ಹೇಗೆ ನಿಭಾಯಿಸಿದಿರಿ.. ಎಲ್ಲೂ ನಿಮ್ಮ ಪಾತ್ರಗಳಲ್ಲಿಯೇ ಆಗಲಿ.. ನಿಮ್ಮ ಸಾಮಾಜಿಕ ನಡೆವಳಿಕೆಯಲ್ಲಾಗಲಿ, ಸಂಗೀತ ಕಾರ್ಯಕ್ರಮಗಳಲ್ಲಿ, ಸಂದರ್ಶನಗಳಲ್ಲಿ, ನಿಮ್ಮ ಸಹಕಲಾವಿದರ ಬಗ್ಗೆ ಮಾತಾಡುವಾಗ.. ಹೀಗೆ ಅನೇಕಾನೇಕ ಪ್ರಸಂಗಗಳಲ್ಲಿ ನಿಮ್ಮ ಮುಗ್ಧಮಾತುಗಳು , ನಿಮ್ಮ ಮುಗ್ಧ ಪ್ರೀತಿ ಎಂದಿಗೂ ಮರೆಯಾಗಿರಲಿಲ್ಲ.. ನಿಮ್ಮನ್ನು ಅಷ್ಟೆತ್ತರಕ್ಕೆ ಕೂರಿಸಿದ್ದರೂ, ಪ್ರತಿಯೊಬ್ಬ ಸಿನಿ ರಸಿಕರ ಮನದಲ್ಲಿ ಅನಭಿಷಿಕ್ತ ರಾಜನಾಗಿದ್ದರೂ ನಿಮ್ಮ ಸರಳತೆ ಮಾಯವಾಗಲಿಲ್ಲ.. ಇದರ ಬಗ್ಗೆ ಒಂದಷ್ಟು ಮಾತುಗಳನ್ನು ಹೇಳಿ ..ಇವತ್ತ್ಯಾಕೋ ನಿಮ್ಮ ಚಿತ್ರಗಳ ಬಗ್ಗೆ, ಅಭಿನಯದ ಬಗ್ಗೆ ಬಿಟ್ಟು ಬೇರೆ ಮಾತಾಡೋಣ ಅನ್ನಿಸುತ್ತಿದೆ.. !    

ಶ್ರೀ.. ನಿನ್ನ ಹೀಗೆ ಕರೆಯಬಹುದಾ.. ಸುಮಾರು ವರ್ಷಗಳಿಂದ ನನ್ನ ಪುಣ್ಯದಿನದಂದು, ಹಾಗೂ ಜನುಮದಿನಕ್ಕೆ ಏನಾದರೂ ಹೊಸ ಹೊಸದಾಗಿ ಬರೆಯುತ್ತಲೇ ಇದ್ದೀಯ.. ನನ್ನ ಅಭಿನಯದ ಅಷ್ಟೂ ಚಿತ್ರಗಳ ಬಗ್ಗೆ ಬರೆಯೋಕೆ ಶುರು ಮಾಡಿದೀಯ.. ಹಾಗಾಗಿ ಆ ಸಲುಗೆಯಿಂದ ನಿನ್ನ ಶ್ರೀ ಅಂತ ಕರೆಯುತ್ತೇನೆ.. ಬೇಸರವಿಲ್ಲವೇ.. !

ಅಣ್ಣಾವ್ರೇ.. ನನ್ನ ಪ್ರೀತಿ ಮಾಡೋರು.. ನನ್ನ ಇಷ್ಟ ಪಡೋರು.. ನನ್ನ ಕರೆಯೋದೆ ಹಾಗೆ.. ಆ ಪಟ್ಟಿಯಲ್ಲಿ ನೀವು ಇದ್ದೀರಾ ಅನ್ನೋದನ್ನ ನೆನೆಸಿಕೊಂಡರೆ.. ಮೈ ಜುಮ್ ಅನ್ನಿಸುತ್ತದೆ.. ಹೇಳಿ ಅಣ್ಣಾವ್ರೇ.. !

ಶ್ರೀ.. ಬದುಕು ಒಂದು ಹೂವಿನ ಹಾಗೆ.. ನಗುವೇ ಆ ಸುಮದ ಪರಿಮಳವು.. ಅದೇ ಕಣ್ಣು ಚಿತ್ರದಲ್ಲಿ ಪಿ ಬಿ ಶ್ರೀನಿವಾಸ್ ಹಾಡಿದ ಸಾಲಿದು.. ಬಹುಶಃ ನಾ ಇದನ್ನೇ ಪಾಲಿಸಿಕೊಂಡುಬರುವಂತೆ ಆ ಭಗವಂತ ನನಗೆ ಆಜ್ಞೆ ಮಾಡಿದ ಅನ್ನಿಸುತ್ತೆ.. ಹಾಗೆ ಬದುಕಿದೆ.. ಹೂವಿನ ಆಯಸ್ಸು ಕಡಿಮೆ ಇರುತ್ತೆ.. ಆದರೆ ಅದರ ಜೀವನದ ಭಾಗದಲ್ಲಿ ಪರಿಮಳವನ್ನು ಸೂಸುತ್ತಿರುತ್ತದೆ.. ಅವರು ಇವರು ಅಂತಿಲ್ಲ.. ಆ ದೇವರು ಈ ದೇವರು ಅಂತಿಲ್ಲ .. ಎಲ್ಲರಿಗೂ ಸಲ್ಲುತ್ತದೆ.. ಮತ್ತೆ ಭಗವಂತ ಕೊಟ್ಟಿರುವ ಪರಿಮಳವನ್ನು, ಸೌಂದರ್ಯವನ್ನು ಧಾರೆಯೆರೆದು ತನ್ನ ಸುತ್ತ ಮುತ್ತಲ ತಾಣವನ್ನು, ಅದನ್ನು ತಾನು ಉಪಯೋಗಕ್ಕೆ ಬರುವ ತಾಣದ ಪಾವಿತ್ರತೆಯನ್ನು ಹೆಚ್ಚಿಸುವದಷ್ಟೇ ಅದರ ಕಾಯಕ.. ಅದನ್ನೇ ನಾನು ಪಾಲಿಸಬೇಕು ಎಂದು ನನ್ನ ಅಪ್ಪಾಜಿ ಹೇಳಿಕೊಟ್ಟಿದ್ದರು.. ಅವರೂ ಕೂಡ ಹಾಗೆ ಬದುಕಿದ್ದರು, ಅದನ್ನೇ ಪಾಲಿಸಬೇಕೆಂದು ಹೇಳಿದ್ದರು ಅಷ್ಟೇ.. ಅದೇ ಹಾದಿಯಲ್ಲಿ ನೆಡೆಯೋಕೆ ಪ್ರಯತ್ನ ಮಾಡಿದೆ ಅಷ್ಟೇ.. 

ಅಣ್ಣಾವ್ರೇ ಸರಳವಾದ ಮಾತು ನಿಮ್ಮದು.. ಹಾಗೆ ಸರಳವಾದ ಜೀವನ ಸೂತ್ರ.. ಆದರೆ ಇದನ್ನು ಅನುಸರಿಸುವುದು ಕಷ್ಟ ಅನಿಸೋದಿಲ್ವೇ.. 

ಇಲ್ಲಾ ಶ್ರೀ.. ಕಷ್ಟ ಹಾದಿಯನ್ನು ತುಳಿಯೋದರಲ್ಲಿಯೇ ಸಾಧನೆ ಇರೋದು.. ಇದನ್ನು ಮಾಸ್ಟರ್ ಪ್ಲಾನ್ ಅಂತಾರೆ.. ನನ್ನ ಚಿತ್ರ ನೀ ನನ್ನ ಗೆಲ್ಲಲಾರೆ .. ನೋಡಿದೆಯಾ ಚಿತ್ರದ ಹೆಸರು ನೀ ನನ್ನ ಗೆಲ್ಲಲಾರೆ ಅಂತಿದೆ.. ಅಂದರೆ ಭಗವಂತ ಹೇಳುತ್ತಿರುತ್ತಾನೆ.. ನೀ ನನ್ನ ಗೆಲ್ಲಲಾರೆ.. ನೀ ನಿನ್ನ ಮನವನ್ನು ಗೆದ್ದರೆ.. ನೀನು ನಿನ್ನನ್ನು ಗೆಲ್ಲಬಹುದು.. ಅಂತ.. ಅಷ್ಟೇ ಕಣಪ್ಪ.. ಹಾ.. ನೀ ನನ್ನ ಗೆಲ್ಲಲಾರೆ ಚಿತ್ರದಲ್ಲಿ ಅಂತಿಮ ದೃಶ್ಯಗಳಲ್ಲಿ ನನ್ನ ನೆಚ್ಚಿನ ಸಹನಟ.. ತೂಗುದೀಪ ಹೇಳುತ್ತಾರೆ.. "ನೋಡಿದೆಯಾ ನನ್ನ ಮಾಸ್ಟರ್ ಪ್ಲಾನ್ ಹೇಗಿದೆ" ಅಂತ.. ಆಗ ನಮ್ಮ ಚಿ ಉದಯಶಂಕರ್ ಬರೆದಿರುವ ಸಂಭಾಷಣೆ ತುಣುಕು ನೋಡು.. 

ತಿಪ್ಪೆ ಮೇಲಿರೋ ಹುಳಾನ ತಿನ್ನೋಕೆ ಕಪ್ಪೆ ಬಾಯಿ ಬಿಟ್ಟುಕೊಂಡು ಕೂತಿರುತ್ತಂತೆ 
ಕಪ್ಪೆನ ನುಂಗೋಕೆ ಹಾವು ಕಾಯ್ತಾ ಇರುತ್ತಂತೆ 
ಹಾವನ್ನು ತಿನ್ನೋಕೆ ಗರುಡ ಹಾರಾಡ್ತಾ ಇರುತ್ತಂತೆ 
ಆ ಗರುಡನ ಮೇಲೆ ಒಬ್ಬ ಕೂತು ನೋಡ್ತಾ ಇರ್ತಾನಂತೆ... ಅವನದು ಮಾಸ್ಟರ್ ಕಣೋ.. ನಂದು ನಿಂದು ಅಲ್ಲ.. 

ಇಷ್ಟೇ ಶ್ರೀ ಜೀವನ.. ನಂದು ನಿಂದು ಅಂತ ಏನೂ ಪ್ಲಾನ್ ಇರಲ್ಲ.. ಮೊದಲೇ ಸಿದ್ಧವಾಗಿರೋ ಅವನ ಪ್ಲಾನ್ ಗೆ ತಕ್ಕಂತೆ ನಾವು ಬದುಕೋದು ಅಷ್ಟೇ.. ಈ ವಿಷಯ ನನಗೆ ಅಪ್ಪಾಜಿಯಿಂದ ಕಲಿತು.. ಅದನ್ನ ಅಳವಡಿಸಿಕೊಂಡೆ.. ಹಾಗಾಗಿ ಆ ರೀತಿ ನಿರ್ಲಿಪ್ತನಾಗಿ ಇರೋಕೆ ಸಾಧ್ಯವಾಗುವಂತಹ ಪ್ರಯತ್ನ ಸಾಧ್ಯ ಆಯ್ತು ಅಂತ ಅನಿಸುತ್ತಿದೆ ಅಷ್ಟೇ ಶ್ರೀ.. 

ಅಣ್ಣಾವ್ರೇ ಸರಳವಾದ ಸೂತ್ರ.. ಮತ್ತು ಅಷ್ಟೇ ಸರಳವಾಗಿ ತಿಳಿಸಿಕೊಟ್ಟಿದ್ದೀರಾ.. ಧನ್ಯವಾದಗಳು ಅಣ್ಣಾವ್ರೇ.. ನೀವು ಭುವಿಯಿಂದ ಎಲ್ಲೂ ಹೋಗಿಲ್ಲ.. ಪ್ರತಿ ದೃಶ್ಯದಲ್ಲಿಯೂ, ಪ್ರತಿ ಚಿತ್ರದ ಹಾಡುಗಳಲ್ಲಿ, ಸಂಭಾಷಣೆಗಳಲ್ಲಿ ಹಾಗೂ ನಮ್ಮೆಲ್ಲರ ಹೃದಯದಲ್ಲಿ ಸದಾ ಅಜರಾಮರ ನೀವು.. 

ಶ್ರೀ.. ಬಂಗಾರದ ಮನುಷ್ಯದಲ್ಲಿ ರಾಚೂಟಪ್ಪನ ಪಾತ್ರದಲ್ಲಿ ಬಾಲಣ್ಣ ಹೇಳ್ತಾರೆ ನೋಡು.. 

"ಎಲ್ಲಾ ಸಿವನ ದಯೆ ಅನ್ನಿ... ನನ್ನದು ನಿಮ್ಮದು ಏನಿದೆ.. ಎಲ್ಲಾ ಸಿವನ ದಯೆ" ಅದೇ ಮಾತು ನಾ ಹೇಳೋದು.. ಶ್ರೀ. !

ಸುಂದರ ಮಾತು.. !

******************************

ಅಣ್ಣಾವ್ರನ್ನು ನೆನೆಯದ ದಿನವಿಲ್ಲ.. ಕ್ಷಣವಿಲ್ಲ.. ಸದಾ ಹಸಿರಾಗಿದ್ದಾರೆ ನಮ್ಮ ಮನದಲ್ಲಿ, ಮನೆಯಲ್ಲಿ!!!

ಅವರ ಭಂಗಿಯನ್ನು .. ಸರಳ ಜೀವನವನ್ನು
ಅನುಸರಿಸುವ ಒಂದು ಪ್ರಯತ್ನ 

ಅಣ್ಣಾವ್ರ ಗಾಜನೂರು ಮನೆಗೆ ಭೇಟಿ ಕೊಟ್ಟಾಗ.. !