Wednesday, April 24, 2019

ಆರಂಭಿಕ ಹಾಡುಗಳಲ್ಲಿ ನೀತಿ ಪಾಠ - ಅಣ್ಣಾವ್ರ ಜನುಮದಿನ!

ದಿನಗಳು ಉರುಳುತ್ತಲೇ ಹೋಗುತ್ತವೆ.. ನೆನಪುಗಳು ಸದಾ ಅಮರ.. ಚಿತ್ರಗಳು ಅಂತ ನೆನೆದಾಗ ಆ ದೃಶ್ಯಗಳು, ಸಂಭಾಷಣೆಗಳು, ಹೊಡೆದಾಟ, ಭಾವುಕ ದೃಶ್ಯಗಳು, ನಾಯಕಿಯ ಸೌಂದರ್ಯ, ನಾಯಕನ ಅಭಿನಯ, ಸಹನಟರ ನಟನೆ, ಹೀಗೆ ನೂರಾರು ರೀತಿಯಲ್ಲಿ ಚಿತ್ರಗಳು ಮನಸ್ಸಿಗೆ ನಾಟುತ್ತವೆ... ಅದರಲ್ಲೂ ಹಾಡುಗಳು ಚಿರಕಾಲ ಮನದೊಳಗೆ ಉಳಿದುಬಿಡುತ್ತವೆ..

ಅಣ್ಣಾವ್ರ ಚಿತ್ರಗಳು ಎಂದ ಮೇಲೆ ಹಾಡಿಗೆ ವಿಶೇಷ ಸ್ಥಾನಮಾನ ಇದ್ದೆ ಇರುತ್ತಿದ್ದವು.. ಪ್ರತಿಯೊಂದು ಚಿತ್ರಗಳ ಹಾಡುಗಳು ಭಿನ್ನವಾಗಿರುತ್ತಿದ್ದವು.. ಹಾಡುಗಳು ಕಥೆಯನ್ನು ಮುಂದುವರೆಸಿಕೊಂಡು ಹೋಗಲು ಸಹಾಯ ಮಾಡುತ್ತಿದ್ದವು.. ಹಿಂದೊಮ್ಮೆ ಕೆಲವು ಹಾಡುಗಳಲ್ಲಿ ಅಣ್ಣಾವ್ರು ಎನ್ನುವ ಲೇಖನದಲ್ಲಿ ಒಂದೆರಡು ಹಾಡುಗಳ ಬಗ್ಗೆ ಬರೆದಿದ್ದೆ... ಇಂದು ಆರಂಭಿಕ ಸನ್ನಿವೇಶಗಳಲ್ಲಿ ಅಣ್ಣಾವ್ರು ಹಾಡಿಕೊಂಡು ತೆರೆ ಮೇಲೆ ಬರುವ ಕೆಲವಷ್ಟು ಹಾಡುಗಳ ಬಗ್ಗೆ ಬರಿ ಅಂತ ಅಣ್ಣಾವ್ರ ಅಪ್ಪಣೆ ಆಯ್ತು.. ಅದಕ್ಕಾಗಿ ಈ ಲೇಖನ.. ಇಂದು ಅವರ ಜನುಮದಿನ.. ಅವರೇ ಅಪ್ಪಣೆ ನೀಡಿದಂತೆ ಅವರದ್ದೇ ಕೆಲವು ಹಾಡುಗಳ ಗುಚ್ಛ.. ಅವರಿಗೆ ಶುಭ ಹಾರೈಕೆಗಳ ಹೂಮಾಲೆ ಅವರಿಗೆ ಹಾಕಿ ಬಿಡೋಣ ಅಲ್ಲವೇ.. ಸರಿ ಇನ್ನೇನು ಕಾಯೋದು.. ಹೊರಡೋಣ ನೆಡೆಯಿರಿ.. ರೈಲು ಬಂದೆ ಬಿಟ್ಟಿದೆ..

ನಗುತಾ ನಲಿ ನಲಿ ಏನೇ ಆಗಲಿ:

ಬಂಗಾರದ ಮನುಷ್ಯ ಚಿತ್ರದ ಸಾರ್ವಕಾಲಿಕ ಹಾಡಿದು.. ಜಿ ಕೆ ವೆಂಕಟೇಶ್ ಅವರ ಅದ್ಭುತ ಸಂಗೀತ.. ಅದರಲ್ಲೂ ಸುಮಾರು ಒಂದು ನಿಮಿಷ ಆರಂಭದ ಸಂಗೀತದ ತುಣುಕು ಬಹುಶಃ ಕರುನಾಡಿನ ಚಿತ್ರಗಳಲ್ಲಿ ಮೊದಲನೇ ಪ್ರಯೋಗ ಇರಬೇಕು.. ಓದು ಮುಗಿಸಿ ತನ್ನ ಅಕ್ಕ ಬಾವನ ಮನೆಗೆ ಬರುವ ಆರಂಭಿಕ ದೃಶ್ಯ.. ಈ ಹಾಡು ಶುರುವಾಗುತ್ತದೆ.. ಕೆಂಪು ಅಂಗಿಯಲ್ಲಿ ಕಂಗೊಳಿಸುವ ಅಣ್ಣಾವ್ರು.. ತಮ್ಮ ಬ್ಯಾಗ್ ಹಿಡಿದು ಊರೆಲ್ಲಾ ಸುತ್ತಿ ಬರುತ್ತಾರೆ.. ನನ್ನ ಮಡದಿ ಸವಿತಾಳ ತವರೂರು ಕಳಸಾಪುರದಲ್ಲಿ ಚಿತ್ರೀಕರಣವಾಗಿದ್ದು ಇನ್ನಷ್ಟು ಖುಷಿ ನೀಡಿತ್ತು.. ಸಮಯವಾದಾಗೆಲ್ಲ ಆ ಊರಿಗೆ ಭೇಟಿ ನೀಡಿದಾಗ.. ಅಣ್ಣಾವ್ರು ಇಲ್ಲೇ ಓಡಾಡಿದ್ದು.. ಅಲ್ಲಿಯೇ ನಿಂತದ್ದು.. ಶಾಲೆಯ ಬೆಲ್ ಇಲ್ಲೇ ಹೊಡೆದದ್ದು.. ತಾತನ ಜೊತೆ "ಏರು ಪೇರಿನ ಜೊತೆಯಲ್ಲಿ ಜೀವನ" ಅಂತ ಹಾಡುತ್ತಾ ಅಜ್ಜನಿಗೆ ಹಣ್ಣು ಕೊಟ್ಟಿದ್ದು ಇಲ್ಲೇ ಅಂತ ಮಗಳಿಗೆ ಜಾಗ ತೋರಿಸುವಾಗ ಏನೋ ಆನಂದ.. ಅಣ್ಣಾವ್ರು ಹೆಜ್ಜೆ ಇತ್ತ ಜಾಗದಲ್ಲಿ ನಾನು ನಿಂತಿದ್ದೇನೆ ಎನ್ನುವುದೇ ಖುಷಿಯ ಸಂಗತಿ..

ಜೀವನದ ಎಲ್ಲಾ ಮಗ್ಗುಲುಗಳನ್ನು ಪದಗಳಲ್ಲಿ ಹಿಡಿದಿಟ್ಟ ಶ್ರೀ ಹುಣುಸೂರು ಕೃಷ್ಣಮೂರ್ತಿಯವರ ಸಾಹಿತ್ಯ. ಅದಕ್ಕೆ ಒಪ್ಪುವ ಭವ್ಯ ಸಂಗೀತ.. ಶ್ರೀ ಸಿದ್ಧಲಿಂಗಯ್ಯವರ ಚಿತ್ರೀಕರಣ... ಇದಕ್ಕೆ ಕಳಶವಿಟ್ಟಂತೆ ಶ್ರೀ ಪಿಬಿಎಸ್ ಅವರ ಗಾಯನ.. ಅದ್ಭುತಗಳಲ್ಲಿ ಅದ್ಭುತ ಎನ್ನಬೇಕು..

ನಗು ನಗುತಾ ನಲಿ ನಲಿ 


ಏನೆಂದು ನಾ ಹೇಳಲಿ
ಜೀವನದ ತತ್ವ ಆದರ್ಶಗಳನ್ನು ಅಣ್ಣಾವ್ರ ಚಿತ್ರಗಳಲ್ಲಿ ಮತ್ತು ಹಾಡುಗಳಲ್ಲಿ ಯಥೇಚ್ಛವಾಗಿ ಕಾಣಸಿಗುತ್ತದೆ. ಮಾನವನ ಆಸೆ, ದುರಾಸೆ, ಚಟುವಟಿಕೆ, ದ್ವೇಷ, ಅಸೂಯೆ ಹೀಗೆ ಹಲವಾರು ರಾಗ ಭಾವಗಳನ್ನು ಗಿರಿಕನ್ಯೆ ಚಿತ್ರದಲ್ಲಿ ಶ್ರೀ ಚಿ ಉದಯಶಂಕರ್ ಸರಳ ಸಾಹಿತ್ಯದಲ್ಲಿ ಸೇರಿಸಿಟ್ಟಿದ್ದಾರೆ.. ಶ್ರೀ ರಾಜನ್ ನಾಗೇಂದ್ರ ಅವರ ಅದ್ಭುತ ಸಂಗೀತದ ಜೊತೆಗೆ ಅಣ್ಣಾವ್ರೇ ಹಾಡಿರೋದು ಸೊಗಸಾಗಿದೆ.. ಅರಣ್ಯ, ಜೇನು, ಪ್ರಾಣಿಗಳು, ಪಕ್ಷಿಗಳು, ಜ್ಯೋತಿಷ್ಯ ಹೀಗೆ ಎಲ್ಲದರ ಬಗ್ಗೆ ಹಾಡುತ್ತಾ ಬರುವ ಅಣ್ಣಾವ್ರು.. ಹಳ್ಳಿಯ ಸೊಗಡಿನ ವೇಷಭೂಷಣದಲ್ಲಿ ಸೊಗಸಾಗಿ ಕಾಣುತ್ತಾರೆ. ದೊರೈ ಭಗವಾನ್ ಅವರ ಹಾಡಿನ ಚಿತ್ರೀಕರಣ ಸೊಗಸಾಗಿದೆ.

ಏನೆಂದು ನಾ ಹೇಳಲಿ 


ಎಂದೂ ನಿನ್ನ ನೋಡುವೆ 
ಜೀವನದಲ್ಲಿ ಒಲವು, ಪ್ರೀತಿ, ಮಮಕಾರ ಬಹು ಮುಖ್ಯ. ಪ್ರೀತಿಗೆ ಮನಸ್ಸು ಬಾಗಿದಾಗ, ಆ ನೆನಪುಗಳಲ್ಲಿ ಲೋಕವು ಸುಂದರ, ಸುಮಧುರ, ಮಧುರ, ಮಧುರ, ಅಮರ ಅನಿಸುತ್ತದೆ.. ತನ್ನ ಪ್ರೇಯಸಿಯನ್ನು ನೆನೆಸಿಕೊಂಡು ಹಾಡುತ್ತಾ ಬರುವ ಅಣ್ಣಾವ್ರು ಈ ಚಿತ್ರದಲ್ಲಿ .. ಸ್ಕೂಟರ್ ಚಕ್ರವನ್ನು ತೋರಿಸುವಾಗಲೇ ಟಾಕೀಸಿನಲ್ಲಿ ಶಿಳ್ಳೆಗಳ ಸುರಿಮಳೆ.. ಅದನ್ನು ಕೇಳುವುದೇ ಒಂದು ಆನಂದ.. ತನ್ನ ಪ್ರೇಯಸಿಯನ್ನು ಎಲ್ಲೆಡೆ ಕಾಣುತ್ತ ಬರುವ ಈ ಹಾಡು ಇಷ್ಟವಾಗೋದು.. ಅಣ್ಣಾವ್ರ ಸರಳ ವೇಷಭೂಷಣ, ಈ ಹಾಡಿಗಾಗಿಯೇ ಸ್ಕೂಟರ್ ಕಲಿತದ್ದು, ಶ್ರೀ ಚಿ ಉದಯಶಂಕರ್ ಅವರ ಅರ್ಥಗರ್ಭಿತ ಸಾಹಿತ್ಯ, ಮತ್ತೊಮ್ಮೆ ಶ್ರೀ ರಾಜನ್ ನಾಗೇಂದ್ರ ಅವರ ಸರಳ ಸಂಗೀತ.. ಶ್ರೀ ದೊರೈ ಭಗವಾನ್ ಅವರ ಸುಂದರ ಚಿತ್ರೀಕರಣ ಈ ಹಾಡಿಗೆ ಮೆರುಗು ನೀಡಿತ್ತು.. ಇಂದಿಗೂ ಅದ್ಭುತ ಗೀತೆಗಳಲ್ಲಿ  ಈ ಹಾಡಿಗೂ ಸ್ಥಾನವಾಗಿದೆ..

ಎಂದೂ ನಿನ್ನ ನೋಡುವೆ 

ಚಿನ್ನದ ಗೊಂಬೆಯಲ್ಲ 

ನಾವೆಲ್ಲಾ ಸಮಯದ ಗೊಂಬೆಗಳು.. ಆ ವಿಧಾತನ ಚಿತ್ರಕತೆಯಲ್ಲಿ ನಮ್ಮ ಪಾತ್ರಗಳು ಹೇಗೆ ಬರೆದಿದೆಯೋ ಹಾಗೆ ನಮ್ಮ ಬದುಕು. ಈ ಹಂದರವನ್ನು ಇಟ್ಟುಕೊಂಡು ರಚಿತವಾದ ಕಾದಂಬರಿಯಾದಾರಿತ ಚಿತ್ರದ ಹಾಡು ಚಿನ್ನದ ಗೊಂಬೆಯಲ್ಲ ದಂತದ ಗೊಂಬೆಯಲ್ಲ ಹಾಡು.. ಲಾರಿ ಡ್ರೈವರ್ ಆಗಿ ತನ್ನ ಬಾಲ್ಯದ ದಿನಗಳನ್ನು ಮೆಲುಕು ಹಾಕುತ್ತ ಹಿನ್ನೆಲೆಯಲ್ಲಿ ಹಾಡಿಕೊಂಡು ಬರುವ ಈ ಹಾಡು.. ಮತ್ತೊಮ್ಮೆ ಶ್ರೀ ಚಿ ಉದಯಶಂಕರ್, ಶ್ರೀ ರಾಜನ್ ನಾಗೇಂದ್ರ ಮತ್ತು ಶ್ರೀ ದೊರೈ ಭಗವಾನ್ ಸಂಗಮದ ಚಿತ್ರವಿದು.

ಚಿನ್ನದ ಗೊಂಬೆಯಲ್ಲ 

ಶ್ರೀಕಂಠ ವಿಷಕಂಠ 

ಜಗತ್ತಿನಲ್ಲಿ ತಾಯಿ ದೇವರಿಗಿಂತ ಇನ್ನೊಬ್ಬ ದೇವರಿಲ್ಲ ಎನ್ನುವ ನೀತಿ ಪಾಠ ಅಣ್ಣಾವ್ರ ಹಲವಾರು ಚಿತ್ರಗಳಲ್ಲಿ ಕಾಣ ಸಿಗುತ್ತದೆ.. ಪೋಲಿಯೊ ಪೀಡಿತ ತಾಯಿಯ ಆರೋಗ್ಯಕ್ಕಾಗಿ ನಂಜನಗೂಡಿನ ಶ್ರೀಕಂಠೇಶ್ವರನನ್ನು ಹೊಗಳುತ್ತಾ ಆರಂಭವಾಗುವ ಹಾಡು.. ಭಕ್ತಿಭಾವದಲ್ಲಿ ಮನಸೆಳೆಯುವ ಅಭಿನಯ, ಶ್ರೀ ಚಿ ಉದಯಶಂಕರ್ ಅವರ ಸಾಹಿತ್ಯ, ಶ್ರೀ ಉಪೇಂದ್ರ ಕುಮಾರ್ ಅವರ ಸರಳ ಸಂಗೀತ.. ದೇವಸ್ಥಾನದಲ್ಲಿ ಚಿತ್ರೀಕರಣಗೊಂಡ ಬಗೆ, ಶ್ರೀ ರಾಜಶೇಖರ್ ಅವರ ನಿರ್ದೇಶನ ಈ ಹಾಡಿಗೆ ಹೊನ್ನ ಕಳಶವಿಟ್ಟಂತೆ ಇದೆ.. ಹಾಡಿನ ಮಧ್ಯಭಾಗದಲ್ಲಿ ಶಿವನಿಗೆ ಅಭಿಷೇಕ ಮಾಡುವಾಗ ಮೂಡಿಬರುವ ಮಂತ್ರ ಚಿತ್ರದಲ್ಲಿ ನೋಡುವಾಗ, ಕೇಳುವಾಗ ಸಂತಸ ಮೂಡುತ್ತದೆ

ಶ್ರೀಕಂಠ ವಿಷಕಂಠ 


ಹೀಗೆ ಹತ್ತು ಹಲವು ಹಾಡುಗಳು ಅಣ್ಣಾವ್ರ ಆರಂಭಿಕ ದೃಶ್ಯಗಳನ್ನು ಬೆಳೆಗಿಸಿದ್ದವೋ, ಅಥವಾ ಅಣ್ಣಾವ್ರು ಆ ಹಾಡುಗಳಿಗೆ ವಿಶೇಷ ಸ್ಥಾನಮಾನ ನೀಡಲು ಸಹಾಯ ಮಾಡಿದರೋ.. ಒಟ್ಟಿನಲ್ಲಿ ಅವರಿಂದ ಹಾಡುಗಳು.. ಹಾಡುಗಳಿಂದ ಅವರು ಎನ್ನುವ ಹಾಗೆ ಅದ್ಭುತ ಹಾಡುಗಳ ಮೂಲಕ ಉತ್ತಮ ಸಂದೇಶಗಳನ್ನು ದೃಶ್ಯಗಳ ಮೂಲಕ ರವಾನಿಸುವ ಕೆಲಸ ಮಾಡುತ್ತಿದ್ದ ಈ ಹಾಡಿನ ತುಣುಕುಗಳ ಮೂಲಕ ಅಣ್ಣಾವ್ರಿಗೆ ಜನುಮದಿನದ ಶುಭ ಹಾರೈಕೆಗಳನ್ನು ಸಲ್ಲಿಸೋಣ ಅಲ್ಲವೇ..

ಇನ್ನೂ ಬೇಕಾದಷ್ಟು ಹಾಡುಗಳಿಗೆ, ದೃಶ್ಯಗಳಿವೆ ಬರೆಯೋಕೆ.. ಅಣ್ಣಾವ್ರ ಬಗ್ಗೆ ಬರೆಯೋದು ಅಂದರೆ ಸಾಗದ ನೀರನ್ನು ಹಿಡಿದಂತೆ.. ಅಸಾಧ್ಯವೂ ಹೌದು, ಅಗಾಧವೂ ಹೌದು..

ಅಣ್ಣಾವ್ರೇ ಜನುಮದಿನದ ಶುಭಾಶಯಗಳು ನಿಮಗೆ... ನೀವು ನಮ್ಮ ಮನದಲ್ಲಿ ಸದಾ ಸದಾ.. !!!

Sunday, April 21, 2019

ಅಬ್ಬಾ ಆ ತಾರಾಗಣ ಎನಿಸುವ ಅಬ್ಬಾ ಆ ಹುಡುಗಿ (1959) (ಅಣ್ಣಾವ್ರ ಚಿತ್ರ ೧೪ / ೨೦೭)


ರಾಜ್ ಅವರ ಹಿಂದಿನ ಹದಿಮೂರು ಚಿತ್ರಗಳನ್ನು ನೋಡುತ್ತಾ ಬಂದ ನನಗೆ ಈ ಚಿತ್ರ  ವಿಭಿನ್ನ ಅನುಭವ ಕೊಟ್ಟಿತು... ಕಾರಣ ಕೊನೆಯಲ್ಲಿ  ಹೇಳುತ್ತೇನೆ.. 

ಈ ಚಿತ್ರ ೨೦.೦೪.೨೦೧೯ ರಂದು ನೋಡಿದ್ದು.. ಅದರ ಹಿಂದಿನ ದಿನ ಎಫ್ ಎಂ ೧೦೨.೯ ವಾಹಿನಿಯಲ್ಲಿ ಸಂಜೆ ೮ಕ್ಕೆ ಬಯೋಸ್ಕೊಪ್ ಬದುಕು ಕಾರ್ಯಕ್ರಮದಲ್ಲಿ ತಾರೆ ಮೈನಾವತಿ ಅವರ ಬಗ್ಗೆ ಮೂವತ್ತು ನಿಮಿಷಗಳಲ್ಲಿ ಈ ಚಿತ್ರದ ಬಗ್ಗೆ ಒಂದಷ್ಟು  ಮಾಹಿತಿಗಳನ್ನು ಹೇಳಿದರು.. ಅದರಲ್ಲಿ ಒಂದು ಆ ಕಾಲಕ್ಕೆ ಈ ಚಿತ್ರ ಸ್ವಲ್ಪ ಆಧುನಿಕತೆಯ ಛಾಪು ಇತ್ತು ಎನ್ನುವುದು.. 

ಮೈನಾವತಿ ಈ ಚಿತ್ರದ  ತುಂಬಾ ವಿಜೃಂಭಿಸಿದ್ದಾರೆ.. ಕ್ಷಣ ಕ್ಷಣಕ್ಕೂ ಬದಲಾಗುವ ಮುಖಭಾವ, ಸಂಭಾಷಣೆಯ ಏರಿಳಿತ, ಆಂಗೀಕ ಅಭಿನಯ, ಕಣ್ಣುಗಳಲ್ಲಿಯೇ ಅಭಿನಯ, ಉಡುಗೆ ತೊಡುಗೆ ಎಲ್ಲದರಲ್ಲಿಯೂ ಬೊಂಬಾಟ್ ಅನ್ನಬೇಕು ಹಾಗಿದೆ ಅವರ ಅಭಿನಯದ ಖದರ್.. !!!

ವಿಲಿಯಂ ಶೇಕ್ಸ್ಪಿಯರ್ ಅವರ ಟೇಮಿಂಗ್ ಆಫ್ ದಿ ಶೃ  ನಾಟಕದ ಆಧಾರಿತ ಈ ಚಿತ್ರಕತೆ.. ಅಬ್ಬಾ ಅನಿಸೋದು ಈ ಚಿತ್ರದ ತಾರಾಗಣ.. ಕನ್ನಡ ಚಿತ್ರರಂಗದಲ್ಲಿ ಅರವತ್ತು ಎಪ್ಪತ್ತರ ದಶಕಗಳಲ್ಲಿ ಹೆಚ್ಚಿನ ಸೇವೆ ಸಲ್ಲಿಸಿದ  ದೊಡ್ಡ ನಟ ನಟಿಯರೇ ಗುಂಪೇ ಇಲ್ಲಿ ನಟಿಸಿದೆ.. 

ಮೈನಾವತಿ, ಪಂಡರಿಬಾಯಿ, ಲೀಲಾವತಿ, ನರಸಿಂಹರಾಜು, ರಮಾದೇವಿ, ಕಮೆಡಿಯನ್ ಗುಗ್ಗು, ಆದವಾನಿ ಲಕ್ಷ್ಮೀದೇವಿ, ಎಂ ಏನ್ ಲಕ್ಷ್ಮೀದೇವಿ, ಬಿ ಆರ್ ಪಂತಲು, ಎಂ ವಿ ರಾಜಮ್ಮ, ಡಿಕ್ಕಿ ಮಾಧವರಾವ್, ರಾಜಾಶಂಕರ್ ಇವರುಗಳ ಜೊತೆಯಲ್ಲಿ ಸ್ನೇಹಪೂರ್ವಕವಾಗಿ ಈ ಚಿತ್ರದ ನಿರ್ದೇಶಕ ಹೆಚ್ ಎಲ್ ಏನ್ ಸಿಂಹ.. ಇವರುಗಳ ಜೊತೆಯಲ್ಲಿ ಈ ಲೇಖನದ ಮೂಲಭೂತ ಹೀರೋ ರಾಜಕುಮಾರ್.. !!!

ಗಂಡಿನ ದಬ್ಬಾಳಿಕೆ, ಗಂಡಿನ ಹಿರಿಮೆ.. ಗಂಡಿನ ಮುಂದೆ  ಹೆಣ್ಣುಗಳು ಕೀಳು ಎಂಬ ಭಾವ ಇವುಗಳನ್ನು ತನ್ನ ತಲೆಯಲ್ಲಿ ತುಂಬಿಕೊಂಡು ಕನ್ಯಾ ವಿವಾಹ ನಿಷೇದ ಕೇಂದ್ರದ ಪ್ರೆಸಿಡೆಂಟ್ ಪಾತ್ರದಲ್ಲಿ ಮೈನಾವತಿ ಅಬ್ಬಬ್ಬಾ ಎನಿಸುವಂತೆ ನರ್ತಿಸಿದ್ದಾರೆ.. ಒಂದೆರಡು ದೃಶ್ಯಗಳಲ್ಲಿ ಪ್ಯಾಂಟ್ ಶರ್ಟ್ ಗಳಲ್ಲಿ ಕಾಣುವ ಈ ನಟಿ.. ನಿಜಕ್ಕೂ ಆ ಪಾತ್ರವಾಗಿ ಜೀವಿಸಿದ್ದಾರೆ.. 

ಒಂದು ರೀತಿಯಲ್ಲಿ ಚಂಡಿ ಕತೆ ಆಧರಿಸಿ ಈ ಪಾತ್ರವನ್ನು ಸೃಷ್ಟಿಸಿದ್ದಾರೆ  ಎಂದರೆ ತಪ್ಪಿಲ್ಲ.. ಮಾಡಬೇಡ ಅಂದಿದ್ದನ್ನ ಮಾಡುವುದು, ಹೇಳಬೇಡ ಅನ್ನೋದನ್ನ ಹೇಳುವುದು ಹೀಗೆ ಎಲ್ಲದಕ್ಕೂ ವ್ಯತಿರಿಕ್ತವಾಗಿ ಮಾಡೋದು.. ಕಡೆಯಲ್ಲಿ ತನ್ನ ಆಲೋಚನೆಗಳ ಲಹರಿ ತಪ್ಪು ಎನಿಸಿ ಎಲ್ಲರಂತೆ ಬದುಕೋಕೆ ಕಲಿಯೋದು ಎನ್ನುವುದರಲ್ಲಿ ಸುಖಾಂತ್ಯವಾಗುತ್ತದೆ.. !

ಪಂಡರಿಬಾಯಿಯವರ ಸಂಯಮದ ಪಾತ್ರಾಭಿನಯ.. ನರಸಿಂಹರಾಜು ಅವರ ಹಾಸ್ಯ ಭರಿತ ಮಾತುಗಳು, ರಾಜಾಶಂಕರ್ ಅವರ ಕಿಲಾಡಿತನದ ಅಭಿನಯ..  ಮುದ್ದಾಗಿ ಕಾಣುವ ಆದವಾನಿ ಲಕ್ಷ್ಮೀದೇವಿ, ಎಂ ಏನ್ ಲಕ್ಷ್ಮೀದೇವಿ.. ಇವರುಗಳ ಜೊತೆಯಲ್ಲಿ ಒಂದೆರಡು ದೃಶ್ಯಗಳಲ್ಲಿ  ಬಂದು ಹೋಗುವ ಗುಗ್ಗು, ರಮಾದೇವಿ.. ಸಂಸಾರ ನೌಕೆ ನಾಟಕದ ಪಾತ್ರಧಾರಿಗಳಾಗಿ ಪಂತುಲು, ರಾಜಮ್ಮ, ಸಿಂಹ  ಸೊಗಸಾಗಿ ಅಭಿನಯಿಸಿದ್ದಾರೆ..  

ಎಲ್ಲಾ ಕಲಾವಿದರ ಅಭಿನಯ ಚಿತ್ರಕಥೆಗೆ ಪೂರಕವಾಗಿದೆ.. ನಿರ್ಮಾಣ ನಿರ್ದೇಶನ ಸಿಂಹ ಅವರದ್ದು.. ಸಂಗೀತ ಭಾವಗೀತೆಯ ಗಾರುಡಿಗ ಪಿ. ಕಾಳಿಂಗರಾಯರದ್ದು.. ದೊರೈರಾಜ್ ಅವರ ಛಾಯಾಗ್ರಹವಿದ್ದ ಈ ಚಿತ್ರವನ್ನು ಚಿತ್ರಕತೆಯಲ್ಲಿ ಮೂಡಿಸಿದ್ದು  ಅವರು.. ಜೊತೆಯಲ್ಲಿ ಚಿತ್ರಕ್ಕೆ ಬೇಕಾದ ಒಂದು ಮುಖ್ಯ ಪಾತ್ರವನ್ನು ಅಭಿನಯಿಸಿರುವುದು ಈ ಚಿತ್ರದ  ವಿಶೇಷ.. !!!

ಅಲ್ಲ ಲೇ .. ರಾಜ್ ಚಿತ್ರದ ಬಗ್ಗೆ ಬರೆಯುತ್ತೇನೆ ಎಂದು ಹೇಳಿ.. ಬರಿ ಇತರರ ಬಗ್ಗೆ ಹೇಳುತ್ತಿದ್ದೆಯಲ್ಲೋ ಅನ್ನಬೇಡಿ...  ಪಾತ್ರ ಚಿಕ್ಕದೋ ದೊಡ್ಡದೋ.. ಮುಖ್ಯವೋ ಅಮುಖ್ಯವೋ ಯೋಚಿಸದೆ ತಮಗೆ ಬಂದ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿರೋದು ರಾಜ್ ಅವರ ಹೆಗ್ಗಳಿಕೆ.. ದೊಗಳೆ ಪ್ಯಾಂಟ್ ಶರ್ಟ್ ಅದಕ್ಕೆ ಟೈ .. ಬೂಟು ಇವುಗಳಲ್ಲಿ  ಕಂಗೊಳಿಸುವ ರಾಜ್ ಮುದ್ದಾಗಿ ಕಾಣುತ್ತಾರೆ.. ಆಂಗ್ಲ ಪದಗಳನ್ನು ಬಳಸುವಲ್ಲಿ  ಅವರ ಸಂಭಾಷಣೆ ಶೈಲಿ ಇಷ್ಟವಾಗುತ್ತದೆ.. ಮನಸ್ಸಿಟ್ಟು ಅಭಿನಯಿಸಿದಾಗ ಚಿಕ್ಕ ಪುಟ್ಟ ಪಾತ್ರಗಳಲ್ಲಿಯೂ ತಮ್ಮ ಛಾಪು ಮೂಡಿಸಬಹುದು ಎನ್ನುವುದಕ್ಕೆ ರಾಜ್ ಅವರ ಈ ಚಿತ್ರ ಉತ್ತಮ ಉದಾಹರಣೆ.. 

ಕಡೆಯ ಒಂದು ಮಾತು ಎಂದರೆ.. ಯು ಟ್ಯೂಬ್ನಲ್ಲಿ ಅಥವಾ ಡಿವಿಡಿಯಲ್ಲಿ ಈ ಚಿತ್ರದ ದೃಶ್ಯಗಳು  ಸಿಗುವುದಿಲ್ಲ, ಸಂಭಾಷಣೆಗಳು, ಕೆಲವು ಕಡೆ ದೃಶ್ಯಗಳು ನೆಗೆಯುತ್ತವೆ.. ಚಿತ್ರದ ಓಘ ಗೊತ್ತಿರೋದರಿಂದ ಅಥವಾ ದೃಶ್ಯಗಳ ಮೂಲಕ ಅರ್ಥ ಮಾಡಿಕೊಳ್ಳೋಕೆ ಆಗುವುದರಿಂದ ಅಷ್ಟೊಂದು ಅಭಾಸ ಆಗೋಲ್ಲ.. ಆದರೂ ಪೂರ್ಣ ಚಿತ್ರವಿದ್ದರೆ ಇನ್ನೂ ಈ ಚಿತ್ರ ಮನಕ್ಕಿಳಿದು ಅಬ್ಬಾ ಅನಿಸುತ್ತದೆ.. !

ಮುಂದಿನ ಚಿತ್ರದೊಂದಿಗೆ ಮತ್ತೆ ಭೆಟ್ಟಿಯಾಗೋಣ.. ಅರೆ ಅರೆ ಸ್ವಲ್ಪ ಇರಿ.. ಈ ಚಿತ್ರದ ಕೆಲವು ಹಾಗೆ ನೋಡಿಬಿಡಿ.. !!

ರಾಜ್ ಅವರ ಆರಂಭಿಕ ದೃಶ್ಯ ತನ್ನ ನಾಯಕಿಯೊಂದಿಗೆ

ಅಬ್ಬಾ ಮೈನಾವತಿ 

ತ್ರಿದೇವಿಯರು .. ಪಂಡರಿಬಾಯಿ, ಮೈನಾವತಿ, ಲೀಲಾವತಿ 

ಮೈನಾವತಿ, ಲೀಲಾವತಿ 

ಪಂಡರಿಬಾಯಿ, ಮೈನಾವತಿ 

ಎಂ ವಿ ರಾಜಮ್ಮ 

ರಾಜ್ ನಾಯಕಿ 

ಮುದ್ದು ರಾಜ್ 

ರಾಜಾಶಂಕರ್, ಪಂಡರಿ ಬಾಯಿ, ನರಸಿಂಹರಾಜು 

ಮುದ್ದಾಗಿ ಕಾಣುವ ರಾಜಾಶಂಕರ್ 

ಲೀಲಾವತಿ, ರಮಾದೇವಿ 

ನರಸಿಂಹರಾಜು, ಸಿಂಹ, ರಾಜಾಶಂಕರ್, ಪಂತುಲು, ರಾಜಮ್ಮ 

ಗುಗ್ಗು, ಮೈನಾವತಿ 

ಡಿಕ್ಕಿ, ಮೈನಾವತಿ  ಮತ್ತು ಪೋಷಕ ನಟ 

ಪಂತುಲು 

ಆದವಾನಿ ಲಕ್ಷ್ಮೀದೇವಿ, ನರಸಿಂಹರಾಜು 

ಆದವಾನಿ ಲಕ್ಷ್ಮೀದೇವಿ ಮುದ್ದಾಗಿ ಕಾಣಿಸುತ್ತಾರೆ 

ಎಚ್ ಎಲ್ ಏನ್ ಸಿಂಹ ಅವರ ಜೊತೆಯಲ್ಲಿ ಪಂತುಲು 

 ಮತ್ತೊಂದು ರಾಜ್ ಅವರ  ಮಹೋನ್ನತ ಚಿತ್ರದ ಜೊತೆಯಲ್ಲಿ ಸಿಗುವ!!!

Friday, April 12, 2019

ಅಣ್ಣಾವ್ರ ಪುಣ್ಯ ದಿನ - 2019


.. ಎಲ್ಲರ ಗಮನ ಅಣ್ಣಾವ್ರ ಮನೆಯತ್ತ ನೆಟ್ಟಿತ್ತು.. ಅವರು ಬಾರದ ಲೋಕಕ್ಕೆ ಹೋಗಿ ಹಲವಾರು ವರ್ಷಗಳಾಗಿದ್ದರೂ.. ಅಭಿಮಾನ ಒಂದು ತುಸು ಗ್ರಾಮ್ ಕೂಡ ಕಡಿಮೆಯಾಗಿರಲಿಲ್ಲ.. 

ಅಣ್ಣಾವ್ರು ಸ್ವರ್ಗಲೋಕದಿಂದಲೇ.. ತಮ್ಮ ನೆಚ್ಚಿನ ಕರುನಾಡನ್ನು ನೋಡುತ್ತಿದ್ದರು.. ಬೆಳಗಿನ ಯೋಗಾಸನ ಮುಗಿದಿತ್ತು.. ವೃತ್ತ ಪತ್ರಿಕೆಯನ್ನು ಗಮನವಿಟ್ಟು ಓದುತ್ತಿದ್ದರು.. 

"ನಮಸ್ಕಾರ ಅಣ್ಣಾವ್ರೇ.. "

ಗಂಧರ್ವನೊಬ್ಬನ ಮಾತಿನಿಂದ ಆ ಕಡೆ ಗಮನ ನೀಡಿದರು.. 

"ಓ ಬನ್ನಿ ಬನ್ನಿ ಹೇಗಿದ್ದೀರಾ... ?"

"ಅಣ್ಣಾವ್ರೇ  ನೀವು ಇಲ್ಲಿ ಇರುವಾಗ ನಾವು ಸದಾ ಸೌಖ್ಯವೇ ಅಲ್ಲವೇ .. ಒಂದು ಮಾತು ಕೇಳಬೇಕಿತ್ತು.. !"

"ಕೇಳಿಪ್ಪಾ"

"ನಿಮ್ಮ ಬಹುತೇಕ ಚಿತ್ರಗಳಿಗೆ ಶ್ರೀ ಚಿ. ಉದಯಶಂಕರ್ ಅವರ ಸಾಹಿತ್ಯ, ಸಂಭಾಷಣೆ ಇರುತ್ತಿತ್ತು..ಹಾಗಾಗಿ ಸಂಭಾಷಣೆಗಳು ಹಾಡುಗಳು ಮನದಲ್ಲಿಯೇ ನಿಂತು ಬಿಡುತ್ತಿತ್ತು.. ನನ್ನ ಪ್ರಶ್ನೆ.. ಅಭಿನಯಕ್ಕೆ ನಿಮಗೆ ನೀವೇ ಸರಿ ಸಾಟಿ.. ಅದರ ಬಗ್ಗೆ ಮಾತಿಲ್ಲ.. ಭಾವಕ್ಕೆ ತಕ್ಕ ಹಾಗೆ ಬದಲಾಗುವ ನಿಮ್ಮ ಭಾವ ಭಂಗಿ, ಸಂಭಾಷಣೆಯ ಉಚ್ಚಾರ ಅದರ ಬಗ್ಗೆ ಏನೂ ಹೇಳುವ ಅಗತ್ಯವೇ ಇಲ್ಲ.. ನನ್ನ ಎರಡು ಪ್ರಶ್ನೆಗಳು

೧) "ನೀವು ಸಂಭಾಷಣೆ ಹೇಳುವ ಶೈಲಿ ಯಾರಿಗೆ ಆದರೂ ಇಷ್ಟವಾಗುತ್ತದೆ .. ಅಲ್ಪ ಪ್ರಾಣ, ಮಹಾಪ್ರಾಣ ಎಲ್ಲಿ ನಿಲ್ಲಿಸುವುದು.. ಎಲ್ಲಿಂದ ಆರಂಭಿಸೋದು..   ಇದೆಲ್ಲ ಸರಿ.. ಆದರೆ ಆ ಸಂಭಾಷಣೆಯಲ್ಲಿನ ಏರಿಳಿತ.. ಅದು ಹೇಗೆ ಕರಗತವಾಯಿತು?"

೨) "ಸಂಭಾಷಣೆಗೆ ಅಭಿನಯಿಸುವಾಗ.. ನಿಮ್ಮ ಮುಖಭಾವ.. ಆಂಗೀಕ ಅಭಿನಯ.. ಉದಾಹರಣೆಗೆ ಮಯೂರ ಚಿತ್ರದಲ್ಲಿ ನಿಮ್ಮ ಬಗ್ಗೆ ಹೇಳಿದಾಗ, ಆಸ್ಥಾನದಲ್ಲಿ ನೆಡೆವ ವಾಕ್ ಯುದ್ಧ, ಭಕ್ತ ಪ್ರಹ್ಲಾದ ಚಿತ್ರದ ಸುಮಾರು ಎರಡೂವರೆ ನಿಮಿಷದ ಸಂಭಾಷಣೆ.. ಹೀಗೆ ಹಲವಾರು ಚಿತ್ರಗಳಲ್ಲಿ ಮನದಲ್ಲಿ ಉಳಿಯುವ ದೃಶ್ಯಗಳು ಇದರ ಬಗ್ಗೆ ಹೇಳಿ.. !"

"ಏನೂ ಗಂಧರ್ವ ಮಹಾರಾಜರೇ... ಒಂದೇ ಮಾತು ಅಂತ ಇಡೀ ಭೂಮಂಡಲವನ್ನೇ ಹೊರವಂತಹ ಪ್ರಶ್ನೆ ಕೇಳಿದ್ದೀರಾ.. ಇರಲಿ ಈ ನಿಮ್ಮ ರಾಜಕುಮಾರನಿಗೆ ತಿಳಿದಷ್ಟು ಹೇಳುತ್ತೇನೆ.. "

ಮೊದಲ ಪ್ರಶ್ನೆ: ನಮ್ಮ ಸಹಾಯಕ ನಿರ್ದೇಶಕರು, ನಿರ್ದೇಶಕರು, ನಮ್ಮ ಸಾಹಿತಿಗಳು, ನನ್ನ ತಮ್ಮಾ ವರದಪ್ಪ ಇವರೆಲ್ಲ ಕತೆ, ಸಂಭಾಷಣೆಗೆ ಒತ್ತುಕೊಟ್ಟು... ಅದರ ಬಗ್ಗೆ ಚರ್ಚಿಸಿ ಚಿತ್ರೀಕರಣಕ್ಕೆ ಬರುವ ಹೊತ್ತಿಗೆ ದೃಶ್ಯಗಳು ನನ್ನ ತಲೆಯಲ್ಲಿ ಕೂರುವಷ್ಟು ಪ್ರಭಾವ ಬೀರುತ್ತಿದ್ದರು.. ಸೆಟ್ಟಿನಲ್ಲಿ ಆಕ್ಷನ್ ಅಂದಾಗ ನನಗೆ ಅದನ್ನು ಒಪ್ಪಿಸುವಷ್ಟೇ ತಲೆಯಲ್ಲಿ ಇರುತ್ತಿದ್ದದು.. ನಾಟಕದಲ್ಲಿ ಅಭಿನಯಿಸುತ್ತಿದ್ದರಿಂದ, ಮತ್ತು ನನ್ನ ಅಪ್ಪಾಜಿಯ ಕಲೆ ನನಗೂ ಒಂದು ಚೂರು ಬಂದದ್ದರಿಂದ.. ಸಂಭಾಷಣೆಯ ಏರಿಳಿತಗಳು.. ಮೇಲೆ ಹೇಳಿದ ನಮ್ಮ ಚಿತ್ರತಂಡದಲ್ಲಿದ್ದವರ ಸಹಾಯ ಸೂಚನೆಗಳಂತೆ ಅಭಿನಯಿಸುತ್ತಿದ್ದೆ.. ಅದರ ಶ್ರೇಯಸ್ಸು ಅವರಿಗೆ.. ಸಲ್ಲಬೇಕು 

ಇನ್ನೂ ಎರಡನೇ ಪ್ರಶ್ನೆ.. ಈ ಮಾತಿಗೆ, ಈ ಅಭಿನಯಕ್ಕೆ. ನೀವು ಹೀಗೆ ಮಾಡಿದರೆ ಚೆನ್ನಾ ಎಂದು ನಿರ್ದೇಶಕರು ಮನ ಮುಟ್ಟುವ ಹಾಗೆ ಹೇಳುತ್ತಿದ್ದರು.. ಅಪ್ಪಾಜಿಯವರ ಅನೇಕ ನಾಟಕದಲ್ಲಿನ ಅಭಿನಯದ ದೃಶ್ಯಗಳು ನನ್ನ ಕಣ್ಣ ಮುಂದೆ ಹಾಗೆ ಬಂದು ಬಿಡುತ್ತಿತ್ತು.. ಅಥವಾ ಅಪ್ಪಾಜಿಯವರೇ ನನ್ನೊಳಗೆ ನುಗ್ಗಿ ಬಿಡುತ್ತಿದ್ದರು .. ಹಾಗಾಗಿ ಒಳಗಿಂದ ಅವರು ಅಭಿನಯಿಸಿ ತೋರಿಸುತ್ತಿದ್ದದ್ದನ್ನು ನಾ ಹೊರಗೆ ಹಾಕುತ್ತಿದ್ದೆ.. ನನ್ನ ಅಭಿನಯ ನಿಮಗೆಲ್ಲ ಇಷ್ಟವಾಗಿದೆ ಅಂದರೆ ನನ್ನ ಅಪ್ಪಾಜಿ, ನನ್ನ ನಿರ್ದೇಶಕರು, ಚಿತ್ರ ತಂಡ ಕಾರಣ"


"ಅಣ್ಣಾವ್ರೇ ಕರುನಾಡಿನಲ್ಲಿಯೇ ಅಲ್ಲ, ಚಿತ್ರಜಗತ್ತಿನಲ್ಲಿಯೇ ನಿಮ್ಮ ಅಭಿನಯ, ನಿಮ್ಮ ವ್ಯಕ್ತಿತ್ವವನ್ನು ಮೀರಿಸುವ ಇನ್ನೊಬ್ಬ ಕಲಾವಿದ ಇಲ್ಲ ಅಂತ ಎಲ್ಲರೂ ಹೇಳುತ್ತಿದ್ದರು.. ನಿಮ್ಮಲ್ಲಿ ಅಹಂ ಕಾಣಲಿಲ್ಲ, ನಾನೇ ದೊಡ್ಡವ ಅನ್ನುವ ಭಾವ ಕಾಡಲಿಲ್ಲ.. ಸಂತರ ತರಹ ಇರಲು ನಿಮಗೆ ಹೇಗೆ ಸಹಾಯವಾಯಿತು. "

ಅವರ ಶೈಲಿಯಲ್ಲಿ ನಗುತ್ತ "ಅಲ್ಲಾ ರೀ ಒಂದೇ ಮಾತು ಅಂತ ಎರಡು ಪ್ರಶ್ನೆ ಆಯ್ತು.. ಈಗ ಮೂರನೇ ಪ್ರಶ್ನೆಯೇ.. ಇರಲಿ... ನೋಡಿ ನನಗೆ ಅಪ್ಪಾಜಿ ಹೇಳಿಕೊಟ್ಟ ಪಾಠದಲ್ಲಿ ಮೊದಲನೆಯದು.. ನಿನ್ನ ಭುಜದ ಮೇಲೆ ತಲೆ ಇರಬೇಕೆ ಹೊರತು.. ನಿನ್ನ ತಲೆ ಇಡೀ ಭುಜವನ್ನು ಹೊತ್ತಿದೆ ಎನ್ನುವ ಭಾವ ಯಾವತ್ತೂ ತಲೆಗೆ ಹೋಗಬಾರದು.. ಅದನ್ನು ನೋಡಿಕೊಂಡರೆ ಸಾಕು ಜಗತ್ತನ್ನು ಗೆದ್ದನಂತೆಯೇ"

ಗಂಧರ್ವನ ಬಾಯಿ ಕಟ್ಟಿ ಹಾಕಿದಾಗೆ ಆಯ್ತು.. ಮಾತಿಲ್ಲ.. ಬೇಕಾದ ಉತ್ತರಗಳ ರಾಶಿಯೇ ಅವರ ಮಡಿಲಲ್ಲಿ ಇತ್ತು.. ಅದಕೆ ಬೇಕಾದ ಪ್ರಶ್ನೆಗಳನ್ನು ಹೊಂದಿಸಬೇಕಿತ್ತು ಅಷ್ಟೇ.. 

ಇಬ್ಬರೂ ನಗುತ್ತ ತಮ್ಮ ತಮ್ಮ ದಾರಿ ಹಿಡಿದು ಸ್ವರ್ಗದಲ್ಲಿ ಹೆಜ್ಜೆ ಹಾಕುತ್ತಾ ಹೋದರು.. !!!

ಹೌದು ಅಣ್ಣಾವ್ರು ದೈಹಿಕವಾಗಿ ನಮ್ಮನ್ನು ಆಗಲಿ ಹಲವಾರು ವರ್ಷಗಳೇ ಕಳೆದರು.. ಅವರು ಇಂದಿಗೂ, ಎಂದಿಗೂ ಚಿತ್ರರಸಿಕರ ಮನದಲ್ಲಿ ಜೀವಂತ... !!

ಅಣ್ಣಾವ್ರ ಪುಣ್ಯ ದಿನದಂದು ಅವರಿಗೆ ಮತ್ತು ಅವರು ನಂಬಿಕೊಂಡು ಆಚರಿಸುತ್ತಿದ್ದ ಭಾವಗಳಿಗೆ ಒಂದು ನಮನ.. !!!