ಬಂಗಾರ ತೊಡದೆ ಇರೋರು ಇದ್ದರೂ ಇರಬಹುದು
ಬಂಗಾರ ಬಿಸ್ಕತ್ ನೋಡದೆ ಇರೋರು ಇರಬಹುದು
ಅಣ್ಣಾವ್ರ ಬಂಗಾರದ ಮನುಷ್ಯ ನೋಡದೆ ಇರೋರು ಬಲು ಅಪರೂಪ!
ಒಂದು ಸಾಮಾಜಿಕ ಕ್ರಾಂತಿ ಮಾಡಿತ್ತು ಎಂದು ಹೇಳಲಾದ ಈ ಚಿತ್ರ ಎಲ್ಲ ಸಿನಿ ಆರಾಧಕರ ಅಚ್ಚುಮೆಚ್ಚಿನ ಚಿತ್ರ ಅನ್ನೋದರಲ್ಲಿ ಸಂದೇಹವೇ ಇಲ್ಲ.. ಶ್ರೀ ಟಿ ಕೆ ರಾಮರಾಮ್ ಅವರ ಬಂಗಾರದ ಮನುಷ್ಯ ಕಾದಂಬರಿಯನ್ನು ಶ್ರೀ ಸಿದ್ದಲಿಂಗಯ್ಯನವರು ಚಿತ್ರ ಮಾಡಿದ್ದು.. ನಂತರ ಅದು ಇತಿಹಾಸ ಮಾಡಿದ್ದು ಎಲ್ಲಾ ನಿಮಗೆ ಗೊತ್ತು..
ಅದರಲ್ಲಿ ಮುಖ್ಯ ಪಾತ್ರದ ರಾಜೀವ.. ಆ ಪಾತ್ರಕ್ಕೆ ಪ್ರೋತ್ಸಾಹ ಕೊಡುತ್ತಾ.. ರಾಜೀವ ತನ್ನ ಮುರಿದು ಬಿದ್ದ ಸಂಸಾರವನ್ನು ಎತ್ತಿ ನಿಲ್ಲಿಸಲು ಜೊತೆಯಾಗಿ ನಿಲ್ಲೋದು ರಾಚೂಟಪ್ಪನ ಪಾತ್ರ.. ಬಾಲಣ್ಣ ಅವರು ಆ ಪಾತ್ರವನ್ನು ಎಷ್ಟು ಅಚ್ಚುಕಟ್ಟಾಗಿ ಜೀವ ತುಂಬಿ ನಟಿಸಿದ್ದಾರೆ ಎಂದರೆ.. ಅವರಿಗೆ ಶ್ರೇಷ್ಠ ಪೋಷಕ ನಟ ರಾಜ್ಯ ಪ್ರಶಸ್ತಿ ಸಿಕ್ಕಿತು.
ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಾ.. ಅವರ ತಪ್ಪುಗಳನ್ನು ಸರಿ ಮಾಡುತ್ತಾ ಸಾಗುವ ಈ ಪಾತ್ರ ಹಲುಬುವುದು ಕಡೆಯ ದೃಶ್ಯದಲ್ಲಿ.. ರಾಜೀವ ತನ್ನ ಅಕ್ಕನ ಮಗನಿಂದ ಅವಮಾನಿತನಾಗಿ.. ಮನೆಯನ್ನೇಕೆ.. ಊರನ್ನೇ ಬಿಟ್ಟು ಹೋದರೆಂದು ತಿಳಿದ ರಾಚೂಟಪ್ಪ "ನಾ ಊರಾಗಿದ್ದಿದ್ರೆ ಇಷ್ಟೊಂದು ನೆಡೆಯೋಕೆ ಅವಕಾಶನೇ ಕೊಡ್ತಾ ಇರ್ಲಿಲ್ಲ.. .ಎಲ್ಲಾ ಶಿವನಿಚ್ಛೆ .. ರಾಜೀವಪ್ಪ ಅವತ್ತು ಏನು ಹೇಳಿದ್ರಿ.. ಸಾಹುಕಾರ್ರೆ ನಾನು ಏನು ಬೇಕಾದರೂ ಕಳ್ಕೋತೀನಿ .. ನಿಮ್ಮನ್ನು ಮಾತ್ರ ಕಳ್ಕೊಳೋಕೆ ತಯಾರಿಗಿಲ್ಲ ಅಂದ್ರಿ.. .. ಇವತ್ತು ನೀವು ನನ್ನ ಕಳಕೊಂಡ್ರೋ.. ನಾನು ನಿಮ್ನ ಕಳೆಕೊಂಡನೋ .. ಆ ಶಿವನೇ ಬಲ್ಲ.. ... ರಾಜೀವಪ್ಪ ಎಲ್ಲಾದರೂ ಇರಿ.. ಹೆಂಗಾದರೂ ಇರಿ.. ಈ ಮಕ್ಕಳನ್ನು, ಊರನ್ನು ಹರಸ್ತಾ ಇರಿ.. ನಿಮ್ಮಂಥ ಸತ್ಯವಂತರ ಆಶೀರ್ವಾದ ಎಂದೂ ಹುಸಿಯಾಗೋಲ್ಲ.. ನಿಮ್ಮಂತವರ ಆಶೀರ್ವಾದದ ಬಲದಲ್ಲಿ ಸುಖಿಯಾಗಿ ಬಾಳ್ತಾರೆ .. ಊರು ಸುಭಿಕ್ಷವಾಗಿರುತ್ತೆ.. "
ಅದ್ಭುತ ಮಾತುಗಳು.. ಇಲ್ಲಿ ಈ ಸಂಭಾಷಣೆಯನ್ನು ಒಬ್ಬ ನಟ ಹೇಳಿದ್ದಾರೆ ಅನಿಸೋದಿಲ್ಲ.. ಮನೆಯ ಯಜಮಾನ.. ಮನೆಯ ಹಿತವನ್ನು ನೋಡಿಕೊಳ್ಳುವ ಒಬ್ಬ ಹಿರಿಯ ಹೇಳುತ್ತಿದ್ದಾರೆ ಎನಿಸುವಷ್ಟು ಪರಿಣಾಮಕಾರಿಯಾಗಿದೆ.. ಪಾತ್ರದೊಳಗೆ ಬಾಲಣ್ಣ ಹೋಗಿಲ್ಲ.. ಈ ಚಿತ್ರದಲ್ಲಿ ರಾಚೂಟಪ್ಪನೆ ಆಗಿದ್ದಾರೆ..
ಅದಕ್ಕೆ ಅಲ್ವೇ "ಹನಿ ಹನಿ ಗೂಡಿದರೆ ಹಳ್ಳ" ಹಾಡಿನಲ್ಲಿ "ರಾಶಿ ರೊಕ್ಕ ಇರೋರೆಲ್ಲ ರಾಚೂಟಪ್ಪನಂಗೆ ಇರಬೇಕು" ಎಂದು ಹೇಳಿರುವುದು..
ಇಡೀ ಚಿತ್ರದಲ್ಲಿ ಬಾಲಣ್ಣ ಇರುವ ಪ್ರತಿದೃಶ್ಯವೂ ಒಂದು ಪಾಠ ಕಲಿಸುತ್ತದೆ..
ಆರಂಭದ ದೃಶ್ಯದಲ್ಲಿ.. ಸಾಲ ಪಡೆದುಕೊಂಡ ರೈತ.. ಅದನ್ನು ಹುಡಿ ಮಾಡಿ .. ದುಂಡು ವೆಚ್ಚ ಮಾಡಿ.. ಜಮೀನು ಹರಾಜಿಗೆ ಬಂದಿರುತ್ತೆ.. ಮತ್ತೆ ಸಾಲಕ್ಕೆ ಬಂದಾಗ ಚೆನ್ನಾಗಿ ಬೈದು ಬುದ್ದಿ ಹೇಳುತ್ತಾ "ರೈತರು ಹೋಟೆಲಿನಲ್ಲಿ ತಿನ್ನೊದು, ಜೂಜಾಡೋದು ಕಲಿತಿರಿ ನಾಶವಾಗೋದ್ರಿ" ಎಷ್ಟು ಸುಂದರ ಮಾತು.. ಅದೇ ಮಾತನ್ನು ಮುಂದುವರೆಸುತ್ತಾ "ತಿನ್ನೊದು ತಂಗಲು.. ಮುಕ್ಕಳಿಸೋಕೆ ಪನ್ನೀರು" ಈ ಮಾತುಗಳನ್ನು ಅವರ ಬಾಯಲ್ಲಿಯೇ ಕೇಳಬೇಕು .. ಅದ್ಭುತ
ಊರಿಗೆಲ್ಲಾ ಉಪಕಾರ ಮಾಡುವ ರಾಚೂಟಪ್ಪನಿಗೆ ತನ್ನ ಮಗ ಓದದೇ ಪೆದ್ದನಾಗಿರೋದು ಕಂಡಾಗ.. ಬೇಸರವಾದರೂ ಆ ದೃಶ್ಯದಲ್ಲಿಯೂ ನೀತಿ ಹೇಳುತ್ತಾ.. ಹಾಸ್ಯ ಉಕ್ಕಿಸುತ್ತಾರೆ "ದುಡ್ಡಿರೋರ ಮಕ್ಕಳಿಗೆ ಬುದ್ದಿ ಇಲ್ಲ.. ಬುದ್ದಿ ಇರೋರ ಮಕ್ಕಳಿಗೆ ದುಡ್ಡಿಲ್ಲ ಅನ್ನೋ ತರ ಆಯಿತು" ಎಂದು ಹೇಳುತ್ತಾ ಸಹಾಯ ಬೇಡಿ ಬಂದ ರಾಜೀವನಿಗೆ ಹಣಕಾಸು ಕೊಡುತ್ತಾರೆ. .
ಹಳ್ಳಿಯ ಹೊನ್ನನ ಬಳಿ ತಮ್ಮ ಪುಟ್ಟ ಜಮೀನನ್ನು ಆಧಾರ ಮಾಡಿ ಸಾಲ ಮಾಡಿದ್ದ ರಾಜೀವನಿಗೆ ದುಡ್ಡು ಕೊಟ್ಟು ಜಮೀನು ಬಿಡಿಸಿಕೊಳ್ಳಲು ಸಹಾಯ ಮಾಡುತ್ತಾರೆ..
ನಂತರ ಆರಂಭ ಮಾಡುವ ದೃಶ್ಯದಲ್ಲಿ ರಾಜೀವ ರಾಚೂಟಪ್ಪನವರಿಗೆ ನಮಸ್ಕಾರ ಮಾಡಿದಾಗ "ನೋಡು ರಾಜೀವಪ್ಪ.. ನಂಬಿಕೆಯಿಂದ ದುಡಿದವರಿಗೆ ಭೂಮಿತಾಯಿ ಎಂದೂ ಕೈ ಬಿಡಾಕಿಲ್ಲ" ಎಂದು ಹೇಳುತ್ತಾರೆ..
ರಾಜೀವ ಎತ್ತುಗಳ ಮೈಸವರಿ ಹೊಲ ಊಳೋಕೆ ಶುರುಮಾಡುವಾಗ ಅದನ್ನು ನೋಡುತ್ತಾ "ಆರಂಭಗಾರ ಯಾವಾಗಲೂ ಇಂಥ ಮಮತೆ ತುಂಬ್ಕೊಂಡಿರಬೇಕು" ಎನ್ನುತ್ತಾರೆ..
ಹೀಗೆ ಪ್ರತಿಯೊಂದು ಹಂತದಲ್ಲೂ ರಾಜೀವನಿಗೆ ಬೆನ್ನೆಲುಬಾಗಿ ನಿಲ್ಲುವ ರಾಚೂಟಪ್ಪ.. ರಾಜೀವನಿಗೆ ಮಾರ್ಗದರ್ಶಕ. ಗುರುಗಳ ಸ್ಥಾನದಲ್ಲಿ ನಿಲ್ಲುತ್ತಾರೆ.. ಕಷ್ಟ ಎನಿಸಿದಾಗ ರಾಜೀವ ಓಡಿ ಬರೋದು ರಾಚೂಟಪ್ಪನವರ ಬಳಿಗೆ ಎನ್ನುವಷ್ಟು ಪರಿಣಾಮಕಾರಿಯಾಗಿದೆ ಚಿತ್ರಕಥೆ..
ಹೀಗೆ ಸಾಗುವ ಕಥೆಯಲ್ಲಿ... ರಾಜೀವ ತನ್ನ ಸಂಸಾರವನ್ನು ಎತ್ತಿಕಟ್ಟಿ ನಿಲ್ಲಿಸುವ ಶ್ರಮದಲ್ಲಿ ಕೊಂಚ ಯಶಸ್ಸು ಕಾಣುವಾಗ.. ಇನ್ನೊಂದು ಸಾಹಸಕ್ಕೆ ಕೈ ಹಾಕುತ್ತಾರೆ.. ನೇರಳೆ ಗುಡ್ಡದ ಕಲ್ಲು ಜಮೀನನ್ನು ಕೊಂಡು ಕೊಳ್ಳುವ ಆಶಯ ವ್ಯಕ್ತಪಡಿಸಿದಾಗ ಹೇಳುವ ಮಾತು "ಅಲ್ರಿ ಆ ಜಮೀನಲ್ಲಿ ಸ್ವಲ್ಪ ಸತ್ವ ಇದೆ ಅಂತ ಅನ್ನಿಸಿದ್ದರೆ ನಾವು ಬಿಡ್ತಾ ಇದ್ವಾ.. " ಎನ್ನುತ್ತಾರೇ.. ಆಗ ಸಹಾಯ ಸಿಗುವ ಬಗ್ಗೆ ಕೊಂಚ ಅನುಮಾನ ವ್ಯಕ್ತಪಡಿಸುವ ರಾಜೀವಪ್ಪ ಬೇರೆ ಕಡೆ ಹಣ ಹೊಂದಿಸೋಕೆ ಪ್ರಯತ್ನ ಪಡಲೇ ಎಂದಾಗ "ಅಲ್ರಿ ನಾ ಕೊಡೋಲ್ಲ ಅಂದ್ನಾ.. ಒಸಿ ಯೋಚನೆ ಮಾಡಿ ಅಂದೇ" ಎನ್ನುತ್ತಾ ಎಚ್ಚರಿಕೆಯ ಕರೆಘಂಟೆ ಕೊಡುತ್ತಾರೆ..
ನಂತರ ಆ ಜಮೀನಿನನ್ನು ತೋರಿಸಿದಾಗ "ರಾಜೀವಪ್ಪ ಇದೇನು ಬೆಲೆ ಬೆಳೆಯೋಕೆ ಜಮೀನು ಕೊಂಡ್ರಾ .. ಇಲ್ಲ ರೈಲ್ ರಸ್ತೆಗೆ ಜಲ್ಲಿ ಮಾಡೋಕೆ ತಗೊಂಡ್ರ.. ಆಗದು ಆಗದು" ಎಂದಾಗ ಕಿರಿಯರಾಗಿದ್ದ ರಾಜೀವ "ಆಗದು ಎಂದು ಕೈಕಟ್ಟಿ ಕುಳಿತರೆ" ಹಾಡು ಹೇಳುತ್ತಾ ನೀತಿ ಪಾಠ ಹೇಳಿದಾಗ ದೊಡ್ಡವರಾಗಿದ್ದರೂ ಅದನ್ನು ಸಾವಧಾನವಾಗಿ ಕೇಳಿ.. ಆ ಜಮೀನಿನಲ್ಲಿ ಬಂಗಾರದ ಬೆಲೆ ಬೆಳೆದು.. ಮಾಡಿದ ಸಾಲ ತೀರಿಸಿ.. ಮನೆಯನ್ನು ಕಟ್ಟಿ.. ಕಾರನ್ನು ಕೊಂಡಾಗ ರಾಜೀವನನ್ನು ಬೆನ್ನು ತಟ್ಟಿ ಪ್ರಶಂಸೆ ಮಾಡುವ ಗುಣ ಹೊಂದಿರುತ್ತಾರೆ
ರಾಜೀವನ ಜೀವನದ ಪ್ರತಿಹಂತದಲ್ಲಿಯೂ.. ಅವರ ಮದುವೆಯ ವಿಚಾರದಲ್ಲಿಯೂ ಮುಂದುವರೆದು ಕಣ್ಣಲ್ಲಿ ಕಾಯುವ ರಾಚೂಟಪ್ಪ, ರಾಜೀವನ ಹೆಂಡತಿ ಲಕ್ಷ್ಮಿಅನೀರೀಕ್ಷಿತ ಆಘಾತದಲ್ಲಿ ಸಾವನ್ನಪ್ಪಿದಾಗ "ಸತಾಯಿಸಿ ಸತಾಯಿಸಿ ಮದುವೆ ಆದ್ರಿ ಆದರೆ .. ಎಲ್ಲಾ ಶಿವನ ಸಂಕಲ್ಪ.." ಎನ್ನುತ್ತಾ ಭರವಸೆ ತುಂಬುತ್ತಾರೆ..
ಇಡೀ ಚಿತ್ರದಲ್ಲಿ ಆವರಿಸಿರುವ ರಾಚೂಟಪ್ಪನವರ ಒಳ್ಳೆಯತನ, ಅವರ ಸಂಭಾಷಣೆಯ ಶೈಲಿ, ನಗು ಉಕ್ಕುವಂಥಹ ಮಾತುಗಳು, ಮಗನನ್ನು ದಾರಿಗೆ ತರಲು ರಾಜೀವನನ್ನು ಉಪಯೋಗಿಸಿಕೊಳ್ಳುವ ದಾರಿ, ಎಲ್ಲವೂ ಹೊಂದಾಣಿಕೆಯಾಗಿ ರಾಚೂಟಪ್ಪ ಎನ್ನುವ ಒಂದು ಜೀವಿ ಈ ಪ್ರಪಂಚದಲ್ಲಿ ಇದೆ ಎನ್ನುವಷ್ಟು ಸಹಜವಾಗಿ ಅಭಿನಯಿಸಿದ್ದಾರೆ...
ಬಂಗಾರದ ಮನುಷ್ಯ ಚಿತ್ರದಲ್ಲಿ ರಾಜೀವನ ತ್ಯಾಗ, ಪರಿಶ್ರಮ, ಬುದ್ದಿವಂತಿಕೆ ಎಲ್ಲವೂ ಎಷ್ಟು ಮುಖ್ಯವಾಗಿ ನಿಲ್ಲುತ್ತದೆಯೋ, ಆ ಪಾತ್ರಕ್ಕೆ ಸರಿಸಮನಾಗಿ ಸಾಗುವ ರಾಚೂಟಪ್ಪನ ಪಾತ್ರ.. ಸಹಾಯ ಮನೋಭಾವ, ಇತರರ ಕಷ್ಟದಲ್ಲಿ ತನ್ನನ್ನು ತೊಡಗಿಸಿಕೊಂಡು ಮಾರ್ಗದರ್ಶನ ನೀಡುವ ರೀತಿ, ಊರು ನನ್ನದು, ಎಲ್ಲರೂ ನನ್ನವರು ಎನ್ನುತ್ತಾ ಎಲ್ಲರೊಡನೆ ಬಾಳುವ ಈ ಪಾತ್ರ ನಿಜಕ್ಕೂ ಅದ್ಭುತವಾಗಿ ಮೂಡಿಬಂದಿದೆ..
ಅದಕ್ಕೆ ಬಾಲಣ್ಣ ಅವರು ಆ ಪಾತ್ರವೇ ಆಗಿ ಹೋಗಿದ್ದಾರೆ.. ಶ್ರೀ ಟಿ ಕೆ ರಾಮರಾವ್ ಅವರ ಕಾದಂಬರಿಯನ್ನು ಓದಿಲ್ಲ.. ಆದರೆ ಅವರ ಕಣ್ಣಿನಲ್ಲಿ ಮೂಡಿಬಂದ ಪಾತ್ರವನ್ನು ಸ್ವಲ್ಪವೂ ಹೆಚ್ಚುಕಮ್ಮಿಯಾಗದಂತೆ ನೋಡಿಕೊಂಡಿದ್ದಾರೆ ಬಾಲಣ್ಣ ಅವರು ಅನ್ನೊದು ನನ್ನ ಅಭಿಪ್ರಾಯ..
ರಾಜ್ಯ ಸರಕಾರ ಕೊಡುವ ಪೋಷಕ ನಟ ಪ್ರಶಸ್ತಿ ಈ ಪಾತ್ರಕ್ಕೆ ಕೊಟ್ಟಿದ್ದು ಆ ಪ್ರಶಸ್ತಿಗೆ ಒಂದು ಗೌರವ ಎನ್ನುವ ಮಾತು ನನ್ನದು..
ಬಾಲಣ್ಣ ರಾಚೂಟಪ್ಪ ಒಂದೇ ನಾಣ್ಯದ ಎರಡು ಮುಖವಾಗಿ ಬಿಟ್ಟಿದೆ.. !
ಇಂದು ಬಾಲಕೃಷ್ಣ ಅವರ ಜನುಮದಿನ.. ಹುಟ್ಟಿದ್ದು ಆದ ಮೇಲೆ ಭುವಿಯಲ್ಲಿ ಗುರುತಾಗುವಂತೆ ಬದುಕಿದ ಬಾಲಣ್ಣ ಅವರ ಸುಂದರ ಬದುಕಿಗೆ ಒಂದು ನಮನ ಈ ಲೇಖನದ ಮೂಲಕ ಸಲ್ಲಿಸುತ್ತೇನೆ.. !!!
ಮೊದಲಿಗೆ ಬಾಲಣ್ಣರವರ ಹುಟ್ಟು ಹಬ್ಬದ ಶುಭಾಶಯಗಳು ಇಂದು ಅವರು ನಮ್ಮ ಜೊತೆ ಇಲ್ಲ ಆದರೆ ಅವರು ಮಾಡಿರುವ ಪ್ರತಿಯೊಂದು ಪಾತ್ರವು ನಮ್ಮ ಕನ್ನಡಿಗರ ಮನದಲ್ಲಿ ನೆಲೆಸಿದ್ದಾರೆ
ReplyDeleteಶ್ರೀ ಬಾಲಣ್ಣ ಅವರ ಹುಟ್ಟು ಹಬ್ಬದ ಪ್ರಯುಕ್ತ ಬರೆದಿರುವ ಬರಹ ನಿಜಕ್ಕೂ ಶ್ಲಾಘನೀಯ ಸುಂದರ ಹಾಗು ಸರಳವಾದ ಬರವಣಿಗೆ ಶ್ರೀ.... ಹೀಗೆ ಸಾಗಲಿ ನಿನ್ನ ಬರಹಗಳು
Dhanyavadagalu PBS..for nice comment and wishes
Deleteಬಾಲಣ್ಣ ನವರ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
ReplyDelete.. ಅವಿಸ್ಮರಣೀಯ ನಟನೆ.... ಶ್ರೀ ನೀನು ಅವರನ್ನು ನೆನಪಿಸಿದ್ದಕ್ಕೆ...ನಿನಗೆ ಅಭಿನಂದನೆಗಳು
Thank you friend!
Delete