Sunday, June 5, 2016

ಮನಸ್ಸಿನ ಬಣ್ಣ ಮತ್ತು ಅದರ ಅನಾವರಣ - ಗೋಧಿ ಬಣ್ಣ ಸಾಧಾರಣ ಮೈಕಟ್ಟು (2016)

ನಮ್ಮ ಕ್ರೇಜಿ ಸ್ಟಾರ್ ರವಿಚಂದ್ರನ್ ಒಂದು ಸಂದರ್ಶನದಲ್ಲಿ ಹೇಳಿದ್ದರು.. "ಒಂದು ಚಿತ್ರ ಹಾಗೆಯೇ ಜನರ ಮನಸ್ಸನ್ನು ಸೆಳೆಯಬೇಕು.. ನಾನು ಒಂದು ಚಿತ್ರವನ್ನು ಮಾಡಿ ಥಿಯೇಟರ್ ಬಾಗಿಲ ಬಳಿ ನಿಲ್ಲುತ್ತೇನೆ.. ಎದೆಉಬ್ಬಿಸಿಕೊಂಡು.. ಇದು ನಾ ಮಾಡಿದ ಚಿತ್ರ.." ಇದು ಒಬ್ಬ ಚಿತ್ರ ತಯಾರಕರಿಗೆ  ಇರಬೇಕಾದ ಆತ್ಮವಿಶ್ವಾಸದ ಮಾತುಗಳು...

ನಾ ಚಿತ್ರ ನೋಡಬೇಕೆಂದರೆ ಅದು ಸಹಜವಾಗಿ ಕುತೂಹಲ ಬೆಳೆಸಬೇಕು.. ನಾ ನೋಡಲೇ ಬೇಕು ಎಂದು ಅನ್ನಿಸುವ ಚಿತ್ರಗಳನ್ನು ಮಾತ್ರ ನಾ ನೋಡುತ್ತೇನೆ.

"ಗೋಧಿ ಬಣ್ಣ ಸಾಧಾರಣ ಮೈಕಟ್ಟು" ಎಂಭತ್ತರ ದೂರದರ್ಶನ ಜಮಾನ ಹಾಗೂ ವಿವಿಧ ಭಾರತಿ ಆಕಾಶವಾಣಿ ಕೇಂದ್ರದ ವಾಣಿಜ್ಯ  ವಿಭಾಗ..  ಈ ಎರಡು ಅದ್ಭುತ ಮಾಧ್ಯಮಗಳಲ್ಲಿ ಪ್ರತಿ ದಿನವೂ ಕೇಳುತ್ತಿದ್ದ ಮಾತುಗಳು... ಸಹಜವಾಗಿಯೇ ಚಿತ್ರದ ಹೆಸರು, ಮತ್ತು ಚಿತ್ರದ ಮುಖ್ಯ ಪಾತ್ರಧಾರಿ ಇಬ್ಬರೂ ಮನಸ್ಸನ್ನು ಸೆಳೆದರು ಈ ಚಿತ್ರವನ್ನು ನೋಡಲಿಕ್ಕೆ.
ಚಿತ್ರ ಕೃಪೆ - ಗೂಗಲ್ 

ನನ್ನ ಅನಿಸಿಕೆ ಪ್ರಪಂಚದಲ್ಲಿ ಈ ನಟನನ್ನು ಅನುಕರಿಸಲು ಸಾಧ್ಯವೇ ಇಲ್ಲ ಅಥವಾ ಅನುಕರಿಸಿದವರನ್ನು ನೋಡಿಯೇ ಇಲ್ಲ. ಅನಂತ್ ನಾಗ್ ಅಂಥಹ ವರ ಪಡೆದ ನಟ.

ಚಿತ್ರ ಶುರುವಾಯಿತು.. ಬಿಂದುವಾಗಿ ಶುರುವಾದ ಅವರ ಪಾತ್ರ, ನೀರಿನಲ್ಲಿ ಒಂದು ಸಣ್ಣ ಕಲ್ಲು ಉಂಗುರಗಳನ್ನು ಸೃಷ್ಟಿಸಿ, ಅದು ಹಿಗ್ಗುತ್ತಾ ಹಿಗ್ಗುತ್ತಾ ಹೋಗುವಂತೆ, ಇಡಿ ಚಿತ್ರದ ತುಂಬಾ ಆವರಿಸಿಕೊಳ್ಳುತ್ತಾರೆ.  ಅವರ ಅಭಿನಯ ನೀರಿನಂತೆ, ಯಾವುದೇ ಪಾತ್ರೆಗೆ ಹೋದರು ಅದಕ್ಕೆ ಒಗ್ಗಿಕೊಳ್ಳುವಂತೆ, ಈ ಪಾತ್ರ ಅವರಿಗಾಗಿಯೇ ಮಾಡಿದ್ದು ಅನ್ನಿಸಿಬಿಡುತ್ತದೆ ಮೊದಲ ದೃಶ್ಯದಲ್ಲಿಯೇ.

ಮುಖದಲ್ಲಿ ಅಭಿನಯ, ಆಂಗೀಕ ಅಭಿನಯ, ಆ ಮುಗ್ಧತೆ, ಕಣ್ಣುಗಳಲ್ಲೇ ಕಾಡುವ ಸಂಭಾಷಣೆ, ಮಾತುಗಳು ಕೆಲವೇ ಇದ್ದರೂ ಅದನ್ನು ಹೇಳುವಾಗ, ಆ ರೋಗದ ಲಕ್ಷಣ ಇರುವ ವ್ಯಕ್ತಿ ಯಾವ ರೀತಿಯಲ್ಲಿ ಮಾತಾಡಬಹುದೋ ಅದೇ ರೀತಿಯಲ್ಲಿನ ಸಂಭಾಷಣಾ ವೈಖರಿ ಇಷ್ಟವಾಗುತ್ತದೆ, ತೊದಲು ತೊದಲು ಮಾತಾಡುವಾಗ ಬಾಯಿಯನ್ನು ದಪ್ಪಗೆ ಮಾತಾಡಿಕೊಂಡು ಮಾತಾಡುವ ಪ್ರಯತ್ನ. ಅದ್ಭುತ

ಇಡಿ ಚಿತ್ರ ಶಿವ ಪಾತ್ರಧಾರಿ ಹೇಳುವ ಒಂದು ಸಂಭಾಷಣೆಯ ಮೇಲೆ ನಿಂತಿದೆ ಅನ್ನಿಸಿತು
"ಅಣ್ಣನಿಗೆ ಮರೆವಿನ ರೋಗ ಬಂದಿದೆ.. ಆದರೆ ಮರೆತು ಹೋಗಿದ್ದು ನಾನು"

ಕರುನಾಡಿನ ಕೆಲವು ಪ್ರದೇಶಗಳಲ್ಲಿ ಅಪ್ಪನನ್ನು "ಅಣ್ಣ" ಎಂದು ಕರೆಯುವುದು. ಈ ಚಿತ್ರ ಮೊದಲು ನನಗೆ ತಾಕಿದ್ದು ಅಲ್ಲಿಂದ.. ಯಾಕೆಂದರೆ ನಾನು ಕೂಡ ಅಪ್ಪನನ್ನು ಅಣ್ಣಾ ಎಂದೇ ಕರೆಯುವುದು.

ಅನಂತ್ ನಾಗ್ ಅವರು ವೆಂಕೋಬ ರಾವ್ ಆಗಿಬಿಟ್ಟಿದ್ದಾರೆ.

"ಎಲ್ಲರ ಮನಸ್ಸಲ್ಲಿಯೂ ಎರಡು ಜಾತಿಯ ನಾಯಿಗಳು ಇರುತ್ತವೆ, ಸುಳ್ಳು, ದ್ವೇಷ, ಮೋಸ ಎನ್ನುವ ಕರಿ ನಾಯಿ ಮತ್ತು ಸತ್ಯ, ಶಾಂತಿ, ನೆಮ್ಮದಿ  ಎನ್ನುವ ಬಿಳಿ ನಾಯಿ. ಎರಡಕ್ಕೂ ಯಾವಾಗಲೂ ಜಗಳ ನಡೆಯುತ್ತಲೇ ಇರುತ್ತದೆ.. ಯಾವುದಕ್ಕೆ ಹೆಚ್ಚು ಬಿಸ್ಕತ್ತು ಹಾಕುತ್ತೇವೆಯೋ ಅದು ಗೆಲ್ಲುತ್ತದೆ"

ಈ ಸಂಭಾಷಣೆ ಹೇಳುವಾಗ ಅವರ ಮನಸ್ಸಿನ ಶಾಂತತೆ, ಮುಗ್ಧತೆ ಮತ್ತು ಮುಖಾಭಿನಯ ವಾಹ್ ಎನ್ನಿಸಿತು.

ಮನುಜ ಪ್ರಾಣಿಗಳಿಗಿಂತ ಭಿನ್ನ ಏಕೆಂದರೆ .. ಅವನು ಕಿವಿಯ ಮೂಲಕ ಮೆದುಳಿಗೆ ಹೋಗಿ ಅಲ್ಲಿಂದ ಹೃದಯದಲ್ಲಿ
ತೂರಿಬರುವ ಪದಗಳೆಂಬ ಶಬ್ಧಗಳನ್ನು ಅಲ್ಲಿಯೇ ಮಂಥನ ನಡೆಸಿ ನಂತರ ಒಂದು ನಿರ್ಧಾರಕ್ಕೆ ಬರುತ್ತಾನೆ.

ಈ ಸಂಭಾಷಣೆಗೆ ನನಗೆ ಅರಿವಿಲ್ಲದೆ ಜೋರಾಗಿ ಚಪ್ಪಾಳೆ ತಟ್ಟಿ ಬಿಟ್ಟೆ.. ಪ್ರಾಯಶಃ ಚಲನಚಿತ್ರ ಒಂದು ರೀಲ್ ಮಾಧ್ಯಮ, ಅಲ್ಲಿ ತೋರಿಸಿವುದು ಹುಸಿ ಎಂದು ಅರಿವಿದ್ದರೂ, ಆ ಪಾತ್ರದೊಳಗೆ ನಮ್ಮನ್ನು ಕರೆದೊಯ್ಯುವ ಮಾತುಗಳು, ಅಭಿನಯಗಳು ಈಚಿನ ಚಿತ್ರಗಳಲ್ಲಿ ಬಲು ದುರ್ಲಭ... ಅಂಥಹ ಅವಕಾಶ ಸಿಕ್ಕಿತು.

ಇಡಿ ಚಿತ್ರದೊಳಗೆ ಅನಂತನಾಗ್ ಸರ್ ಜೊತೆಯಲ್ಲಿ ನಾನೂ ನಿಂತಿದ್ದೆನೇನೋ ಅನ್ನುವಷ್ಟು ಮನಸ್ಸಿನ ಆಳಕ್ಕೆ ಇಳಿಯಿತು ಈ ಚಿತ್ರ.

ತನ್ನ ಮತ್ತು ತನ್ನ ಹೆಂಡತಿಯ ಪ್ರೀತಿಯ ಘಟನೆಯನ್ನು ಹೇಳುವಾಗ ಅವರ ಮುಖದ ಭಾವಗಳು ಮುಗ್ಧತೆ, ಪ್ರೀತಿ, ಸಂತೋಷ, ಕೋಪ, ಮತ್ತು ಗೆದ್ದೇ ಎಂಬ ಹೆಮ್ಮೆ ಎಲ್ಲವನ್ನು ಆ ಎರಡು ಮೂರು ನಿಮಿಷಗಳ ಸಂಭಾಷಣೆಯಲ್ಲಿ ವಿವರಿಸುವಾಗ ಥೀಯೇಟರ್ ನಲ್ಲಿ ಶಿಳ್ಳೆಗಳ ಮೊರೆತ. ಸೂಪರ್ ಸೂಪರ್.

ಅನಂತ್ ನಾಗ್ ಸರ್ ಅವರ ಜಾದೂವಿನನಂಥಹ ಅಭಿನಯದ ಜೊತೆಯಲ್ಲಿ ಇನ್ನೊಬ್ಬ ಪಾತ್ರಧಾರಿ ಗಮನ ಸೆಳೆಯುತ್ತಾರೆ.
ಶ್ರುತಿ ಹರಿಹರನ್ "ಸಹನಾ" ಪಾತ್ರದಲ್ಲಿ. ಮುದ್ದು ಮುಖ, ನೀಳ ನಾಸಿಕ, ಪುಟಾಣಿ ಬಿಂದಿ, ಹೊಳೆಯುವ ಕಣ್ಣುಗಳು.. ಮಾತಿನಲ್ಲಿನ ನಿಖರತೆ.. ಇದರ ಜೊತೆಯಲ್ಲಿ "ವೆಂಕೋಬ ರಾವ್" ಪಾತ್ರದ ಬಗ್ಗೆ ಅವರು ತೋರುವ ಕಾಳಜಿ.. ಕೋಪಗೊಂಡರೂ, ಶಾಂತತೆಯಿಂದ ಉತ್ತರ ಕೊಡುವ ಶೈಲಿ, ಅರೆ ನೆರೆ ಮನೆ ಹುಡುಗಿ ಎನ್ನುವ ಮಾತು ಇಂಥಹ ಪಾತ್ರಗಳಿಂದಲೇ ಹುಟ್ಟಿತೋ ಏನೋ ಅನಿಸುತ್ತದೆ. ಸರಳ ಅಭಿನಯ ಈ ಹುಡುಗಿಯದು.

ಚಿತ್ರ ಕೃಪೆ - ಗೂಗಲ್ 

ಹಾಲಿನ ಕೆನೆ ಪದರ ತುಸು ಗಟ್ಟಿ, ಮತ್ತು ತುಸು ಒರಟು ಎನಿಸಿದರೂ, ಆ ಕೆನೆಯನ್ನು ಕೊಂಚ ತಳ್ಳಿದರೆ ಸ್ವಾಧಿಷ್ಟ ಹಾಲು ಸಿಗುತ್ತದೆ. ಅಚ್ಯುತ್ ಕುಮಾರ್ ಅವರ ಪಾತ್ರವೂ ಹಾಗೆ. ತೆರೆಯ ಬಂದ ಕೂಡಲೇ ಮ್ಯಾಜಿಕ್ ಶುರುವಾಗುತ್ತದೆ. ಭರ ಭರ ಮಾತು, ತಡಬಡಾಯಿಸುತ್ತಾ, ನಗುವ, ಕೋಪ ತೋರಿಸುವ, ಪ್ರೀತಿ ತೋರಿಸುವ ಪಾತ್ರದಲ್ಲಿ ಎರಕ ಹುಯ್ದಂತೆ ನಿಲ್ಲುತ್ತಾರೆ.
"ಸಿಗರೆಟ್ ಎರಡು.. ಬೇಡ ಅಂದ್ರೆ ಬಿಡಿ ಸರ್" ಎಂದು ತಣ್ಣಗೆ ಹೇಳುವ ಮಾತು ಅವರ ಅಭಿನಯದ ಶಕ್ತಿಯನ್ನು ಸಾರಿ ಸಾರಿ ಹೇಳುತ್ತದೆ.
ಚಿತ್ರ ಕೃಪೆ - ಗೂಗಲ್ 

ಅರುಣ ಮೇಡಂ.. ಮಧ್ಯಮ ವರ್ಗದ ಗೃಹಿಣಿಯ ತಳಮಳವನ್ನು ಅನಾಮತ್ತಾಗಿ ತಂದಿಡುತ್ತಾರೆ. "ಮೊದಲು ಅಲ್ಲಿ ಹೋಗಿ ಹೇಳಿ, ಅಯ್ಯೋ ರಾಮ ರಾಮ" ಎನ್ನುವಾಗ ಅಯ್ಯೋ ಅನಿಸುತ್ತದೆ. ಸಹಜವಾಗಿ ಮಾತಾಡುತ್ತಲೇ ಹೃದಯದ ಭಾವವನ್ನು ಸೂಸುವ ಅಭಿನಯ ಇಷ್ಟವಾಗುತ್ತದೆ.

ಗುಪ್ತಗಾಮಿನಿಯಂತೆ ಹರಿದಿರುವ ಪಾತ್ರ ರಕ್ಷಿತ್ ಶೆಟ್ಟಿ ಅವರದು. ಸುಲಭವಾಗಿ ಅಭಿನಯ ನೀಡುತ್ತಾ, ತನ್ನ ಅಣ್ಣ (ತಂದೆಯ) ಬಗ್ಗೆ ಹೇಳುವಾಗ ಮೊಗದಲ್ಲಿ ತೋರುವ ಭಾವನೆ ಆಪ್ತವೆನಿಸುತ್ತದೆ. "ರೋಗಬಂದಿದ್ದು ಅಣ್ಣನಿಗೆ ಆದರೆ ನಾನೇ ಮರೆತು ಬಿಟ್ಟೆ" ಈ ಮಾತುಗಳು ಅವರು ಬರಿ ಬಾಯಿಂದ ಹೇಳುವುದಿಲ್ಲ ಹೃದಯದ ಬಡಿತ ಆ  ಮಾತುಗಳನ್ನು ಹೊರ ಹಾಕುತ್ತದೆ. ಕೋಪಗೊಳ್ಳುವುದು, ಶಾಂತತೆ, ಮತ್ತೆ ಸಿಡಿಮಿಡಿಗೊಳ್ಳುವುದು, ನಿಧಾನಕ್ಕೆ ಮರಳಿ ಬರುವುದು.. ಮತ್ತು " ಅಣ್ಣ" ಎನ್ನುವಾಗ ಅವರ ಧ್ವನಿ ಇಷ್ಟವಾಗುತ್ತದೆ (ಈಚಿನ ಚಿತ್ರಗಳಲ್ಲಿ ಅಪ್ಪನಿಗೆ "ಅಣ್ಣ" ಎನ್ನುವ ಮಾತೆ ಬಂದಿಲ್ಲ.. .) ಬಾಲ್ಯದ ನೆನಪನ್ನು ಹಂಚಿಕೊಳ್ಳುವಾಗ ಅವರ ಮುಗ್ಧತೆ ಪೂರ್ಣ ಅಂಕಗಳು ಸಿಗುತ್ತವೆ.
ಚಿತ್ರ ಕೃಪೆ - ಗೂಗಲ್ 
ಇನ್ನೂ ಪುಟ್ಟ ಪುಟ್ಟ ಪಾತ್ರಗಳಲ್ಲಿ ಬರುವ ತ್ರಿವೇಣಿ, ದತ್ತಾತ್ರೇಯ, ಮತ್ತು ಇಬ್ಬರು ಅಭ್ಯಾಗತರು ಒಬ್ಬರು ರಂಗಣ್ಣನ ಪಾತ್ರಧಾರಿ ವಸಿಷ್ಠ - ಎಂಥಹ ಅದ್ಭುತ ಧ್ವನಿ,  ಕಂಡರೂ ಕಾಣದ ಪುಟ್ಟ ನಗೆ, ಕಣ್ಣಲ್ಲಿ ಕ್ರೌರ್ಯ ಸೂಸುತ್ತಲೇ, ತುಸು ತುಸುವೇ ಮಾತಾಡುವ ಪಾತ್ರ..  ಸೂಪರ್ ಸೂಪರ್.. , ಇನ್ನೊಬ್ಬ ತುಂಟತನದಿಂದಲೇ ಇಷ್ಟವಾಗುವ ಮಂಜಣ್ಣ ಪಾತ್ರ ಎಲ್ಲರೂ ಇಷ್ಟವಾಗುತ್ತಾರೆ.

"ಸಚಿನ್ ಆಟ ನಿಲ್ಲಿಸಿದ ಮೇಲೆ ನೀವಿಬ್ಬರೂ ಹೇಗೆ ಇರುತ್ತೀರೋ, ಏನು ಮಾತಾಡುತ್ತೀರೋ" ಒಂದು ಮನೆಯ ವಾತಾವರಣ ಹೇಗೆ ಇರುತ್ತದೆ.. ಮನಸ್ಸುಗಳ ನಡುವೆ ಹೇಗೆ ಸೇತುವೆ ಬದಲು ಗೋಡೆ ಏಳುತ್ತದೆ ಎನ್ನುವುದನ್ನು ತೀಕ್ಷ್ಣವಾಗಿ ಹೇಳುತ್ತದೆ ದೃಶ್ಯ ಮತ್ತು ಮಾತು.

ಇದು ನಿಜವಾಗಿಯೂ ಒಬ್ಬ ಹಿರಿಯ ನಾಗರೀಕನ ಬಗೆಗಿನ ಚಿತ್ರ ಎಂದು ಮೇಲ್ನೋಟಕ್ಕೆ ಅನಿಸಿದರೂ, ಪ್ರತಿಯೊಬ್ಬರ ಅಂತರಂಗವನ್ನು ಬಡಿದು, ಬಡಿದು ಹಳೆಯ ನೆನಪುಗಳನ್ನು,   ಹಣ್ಣೆಲೆಗಳನ್ನು ತಾವಾಗಿಯೇ ಉದುರಿ ಹೋಗುವ ತನಕ ಜತನ ಕಾಪಾಡಿಕೊಳ್ಳಬೇಕು ಎನ್ನುತ್ತಲೇ.. ಆಧುನಿಕ ಯುಗದಲ್ಲಿಯೂ, ಈ ಯಂತ್ರ ಯುಗದಲ್ಲಿಯೂ ಕೂಡ ಮಾನವನ ಭಾವ ಸೆಲೆ ಇಂಗುವುದಿಲ್ಲ, ಮತ್ತು ಇಂಗುವುದಕ್ಕೆ ಸಾಧ್ಯವೇ ಇಲ್ಲ.. ಅದಕ್ಕೆ ಬೇಕಾಗಿರುವುದು ಕಣ್ಣಿನ ಮತ್ತು ಮನಸ್ಸಿನ ಮೇಲೆ ಬಿದ್ದಿರುವ ತುಸು ಧೂಳನ್ನು ಕೊಡವಿಕೊಳ್ಳುವ ಮಾರ್ಗ. ಅಷ್ಟೇ ಎಂದು ನವಿರಾಗಿ ತೋರಿಸುವ ಉತ್ತಮ ಪ್ರಯತ್ನ ಈ ಚಿತ್ರದಲ್ಲಿ ಎದ್ದು ಕಾಣುತ್ತದೆ.

ಈ ಚಿತ್ರ ಕಾಡುತ್ತದೆ.. ಆವರಿಸಿಕೊಳ್ಳುತ್ತದೆ.. ಮತ್ತು ನಮ್ಮೊಳಗೇ ಮಂಥನ ನಡೆಸುತ್ತದೆ.

ಇಡಿ ಚಿತ್ರ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ತಾಂತ್ರಿಕತೆ, ಛಾಯಚಿತ್ರಣ, ಹಿನ್ನೆಲೆ ಸಂಗೀತ, ಸಂಭಾಷಣೆ ಎಲ್ಲವೂ ಹಾಲಿನಲ್ಲಿ ಜೇನು ಮತ್ತು ಸಕ್ಕರೆ ಬರೆಸಿದಷ್ಟೇ ಹಿತವಾಗಿ ಸೇರಿಕೊಂಡಿದೆ.  ನಿರ್ದೇಶಕ ಎಲ್ಲೂ ಕೂಡ ತಮ್ಮ ಎಳೆಯಿಂದ ಹೊರಗೆ ಹೋಗದೆ, ಒಂದು ನೀಟಾದ ಚಿತ್ರವನ್ನು ನಮ್ಮ ಮುಂದೆ ತಂದು ನಿಲ್ಲಿಸಿದ್ದಾರೆ.
ಚಿತ್ರ ಕೃಪೆ - ಗೂಗಲ್ 

ಒಂದು ಒಳ್ಳೆಯ ಚಿತ್ರ ನೋಡಿದ ಅನುಭವ.. ನನಗೆ ಆದದ್ದು ಖುಷಿಯಾಯಿತು, ಮನಸ್ಸಿಗೆ ನಿರಾಳತೆ ಕೊಟ್ಟಿತು.
*************

ಈ ಚಿತ್ರವನ್ನು ನೋಡಲು ಮೂರು ಮುಖ್ಯ ಕಾರಣಗಳು ಇದ್ದವು.

೧) ಧೈರ್ಯ ಲಕ್ಷ್ಮಿ ಎನ್ನುವ ಚಿತ್ರ ನೋಡಿದಾಗಿಂದಲೂ ಅನಂತ್ ನಾಗ್ ಅವರು ನನಗೆ ಬಲು ಇಷ್ಟ, ಅವರ ಬೆಳದಿಂಗಳ ಬಾಲೆ ಚಿತ್ರ ಮನಸ್ಸಿಗೆ ತಂಪೆರೆಯುವ ಚಿತ್ರ. ಇಂಥಹ ಮೇರು ನಟ,ಈ ಚಿತ್ರದ ಚಿತ್ರೀಕರಣದ ಸಮಯದಲ್ಲಿ  ನನ್ನ ಹುಟ್ಟು ಹಬ್ಬಕ್ಕೆ ತಮ್ಮ ಹಸ್ತಾಕ್ಷರ ಸಹಿತ ಶುಭಾಶಯಗಳನ್ನು ಕೊಟ್ಟಿದ್ದು ಸಂತಸಕ್ಕೆ ಪಾರವೇ ಇಲ್ಲವಾಗಿತ್ತು.  ಇವರ ಈ ಚಿತ್ರವನ್ನು ನೋಡಲೇಬೇಕು, ಹೀಗೆ ಅವರ ಶುಭಾಶಯಗಳಿಗೆ ಗೌರವ ಸೂಚಿಸಿದ ಹಾಗೂ ಆಯಿತು ಜೊತೆಯಲ್ಲಿ ಒಂದು ಒಳ್ಳೆಯ ಕನ್ನಡ ಚಿತ್ರವನ್ನು ನೋಡಿದ ಹಾಗೆ ಆಯಿತು ಎನ್ನುವುದು ಮೊದಲ ಕಾರಣ.
ಕೃಪೆ - ಶುಭಾಶಯಗಳನ್ನೂ ಬರೆದು ಕೊಟ್ಟ
 ಅನಂತ್ ನಾಗ್ ಸರ್ ಮತ್ತು
ಅದನ್ನು ನನಗೆ ತಲುಪಿಸಿದ ನಿವೇದಿತ ಚಿರಂತನ್ 

೨) ನನ್ನ ಆಪ್ತ ಗೆಳೆಯ ಚಿರಂತನ್ ವಸಿಷ್ಠ ಮತ್ತು ನಿವೇದಿತ ಚಿರಂತನ್ ಅವರ ಪುತ್ರ ಅದ್ವೈತ್ ಈ ಚಿತ್ರದಲ್ಲಿ ಒಂದು ಪುಟ್ಟ ಪಾತ್ರ ಮಾಡಿದ್ದ. ಚಿತ್ರದಲ್ಲಿ ಅಚ್ಯುತ್ ಮತ್ತು ಅರುಣ ಅವರ ಮಗನ ಪಾತ್ರ. ಚಿತ್ರದ ಅಗತ್ಯತೆಗೆ ಪಾತ್ರದ ಉದ್ದ ಕಡಿಮೆ ಮಾಡಿದ್ದಾರೆ, ಆದರೂ ಈ ಮುದ್ದು ಪ್ರತಿಭೆ ಈ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಬಂದದ್ದು, ಮತ್ತು ಅವನನ್ನು ನೋಡಬೇಕೆಂಬುದು ಎರಡನೇ ಕಾರಣ.

೩) ಶ್ರೀ ನಿಮ್ಮ ಹುಟ್ಟು ಹಬ್ಬಕ್ಕೆ ಒಂದು ಸರ್ಪ್ರೈಸ್ ಎಂದು ಹೇಳಿ ಅನಂತ್ ನಾಗ್ ಅವರಿಂದ ಶುಭಾಷಯ ಪತ್ರವನ್ನು ನನಗಾಗಿ ಕೊಟ್ಟಿದ್ದು ನಿವೇದಿತ ಚಿರಂತನ್. ಇದು ನನ್ನ ಸೌಭಾಗ್ಯ ಎನ್ನಲೇ ಬೇಕು. ಕಾರಣಾ ಅದ್ಭುತ ಬರಹಗಾರ್ತಿ, ಛಾಯಗ್ರಾಹಕಿ ಮತ್ತು ಅತ್ಯುತ್ತಮ ವಿಶ್ಲೇಷಕಿ ಇವರು. ಇವರು ಪ್ರೀತಿಯಿಂದ ಕೊಟ್ಟ ಕಾಣಿಕೆಗೆ ಬೆಲೆ ಕಟ್ಟಲು ಸಾದ್ಯವೇ ಇಲ್ಲ. ಅನಂತ್ ನಾಗ್, ಮುದ್ದು ಆದಿ, ಗೆಳೆಯ ಚಿರಂತನ್ ಮತ್ತು ನಿವೇದಿತ ಅವರು ನನ್ನ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿಗಾಗಿ ಈ ಚಿತ್ರ ನೋಡಲೇಬೇಕು ಎನ್ನುವ ಕಾರಣ ಮೂರನೆಯದು.

ಒಟ್ಟಿನಲ್ಲಿ ಕಾರಣಗಳು  ಏನೇ ಇದ್ದರೂ, ಕರುನಾಡಿನ ಚಿತ್ರ ಪ್ರೇಮಿಗಳು ನೋಡಲೇಬೇಕಾದ ಒಂದು  ಚಿತ್ರ.. ಚಿತ್ರಮಂದಿರದಲ್ಲಿ ನೋಡಿ, ಪ್ರೋತ್ಸಾಹಿಸಿ, ಮತ್ತು ಇಂಥಹ ಉತ್ತಮ ಪ್ರಯತ್ನಗಳಿಗೆ ಬೆನ್ನು ತಟ್ಟಿದಾಗ ಮಾತ್ರ ಕರುನಾಡು ಮತ್ತೆ ಸುವರ್ಣ ಯುಗಕ್ಕೆ ಹಿಂತಿರುಗಲು ಸಾಧ್ಯ ಅಲ್ಲವೇ!!!

2 comments:

  1. Chirantan VasistaJune 5, 2016 at 3:35 PM

    Super blog sir. cinemana tumba chennagi vishleshane madidira. ee cinema dalli yarigoo vivarisoke barada adre yellaroo tammanna kandukuvantaha ondu factor ide. adanna tumba chennagi bardidira

    ReplyDelete
  2. ಚಿತ್ರದ ವಿಶ್ಲೇಷಣೆ ಬಹಳ ಚೆನ್ನಾಗಿದೆ, ಚಿತ್ರದಲ್ಲಿನ ಒಳ್ಳೆಯ ಅಂಶಗಳನ್ನು, ಚಿತ್ರದ ಪಾತ್ರಗಳನ್ನೂ ವಿಮರ್ಶಿಸಿರುವ ರೀತಿ ಓದುಗರಿಗೆ ಈ ಚಿತ್ರವನ್ನು ನೋಡಲೇ ಬೇಕೆಂಬ ತುಡಿತ ಉಂಟ ಮಾಡುತ್ತದೆ . ಇನ್ನು ನಿವೇದಿತ ಹಾಗು ಚಿರಂತನ್ ಅವರ ಮಗ ಅದ್ವೈತ್ ಈ ಚಿತ್ರದಲ್ಲಿ ನಟಿಸಿರುವುದು ಖುಷಿಯ ವಿಚಾರ , ಈ ಪುಟಾಣಿಗೆ ಅನಂತ್ ನಾಗ್ ಅಂತಹ ಮೆರು ನಟನ ಜೊತೆ ನಟಿಸುವ ಅವಕಾಶ ಸಿಕ್ಕಿದ್ದು ಒಳ್ಳೆಯದಾಯ್ತು. ಇನ್ನು ಅನಂತ್ ನಾಗ್ ಯಾರಿಗೆ ಇಷ್ಟಾ ಆಗೋಲ್ಲಾ ಹೇಳಿ, ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುವ ಕೆಲವೇ ನಟರಲ್ಲಿ ಅವ್ರು ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಚಿತ್ರ ನೋಡಿಲ್ಲದ ಕಾರಣ ಹೆಚ್ಚಿಗೆ ಬರೆಯಲಾರೆ. ಆದ್ರೆ ಚಿತ್ರವನ್ನು ಮಾತ್ರ ನೋಡುತ್ತೇನೆ ಖಂಡಿತಾ . ನಿಮ್ಮ ಅಕ್ಷರ ರೂಪದ ಮಾತುಗಳು ಹೆಚ್ಚುಕಾಲ ಮನದಲ್ಲಿ ಉಳಿದು ಬಿಡುತ್ತವೆ ಅದೇ ನಿಮ್ಮ ಬರವಣಿಗೆಯ ಹೆಗ್ಗಳಿಕೆ. ಜೈ ಹೋ ಶ್ರೀ

    ReplyDelete