Monday, November 2, 2015

ಅಭಿಮಾನದ ಕೂಸು - ಟಿ ಎನ್ ಬಾಲಕೃಷ್ಣ - ಆರಂಭ


ಕನ್ನಡ ಚಿತ್ರಗಳನ್ನು ಮೊದಲಿಂದ ಆಸಕ್ತಿಯಿಂದ ನೋಡುತ್ತಾ ಬಂದ ನನಗೆ, ಅದನ್ನು ಇನ್ನಷ್ಟು ಆಸಕ್ತಿಯಿಂದ ನೋಡಲು ಪ್ರೇರೇಪಣೆ ನೀಡಿದವರಲ್ಲಿ ಮೊದಲಿಗರು ಅಂದರೆ ಟಿ ಎನ್ ಬಾಲಕೃಷ್ಣ. 

ಒಬ್ಬ ಕಲಾವಿದನ ಅದರಲ್ಲೂ ಪೋಷಕ ಪಾತ್ರದಲ್ಲಿ ಬರುವ ಕಲಾವಿದರು ನೆನಪಲ್ಲಿ ಉಳಿಯುವುದು ಬಲು ಅಪರೂಪದ ಸಂಗತಿ. ಆದರೆ ಅಂದಿನ ಆ ಕನ್ನಡ ಚಿತ್ರರಂಗದಲ್ಲಿ ಇದ್ದವರೆಲ್ಲಾ ದಿಗ್ಗಜರೆ. ಕುಮಾರ ತ್ರಯರು, ನರಸಿಂಹರಾಜು, ಜಿ ವಿ ಅಯ್ಯರ್, ಲೀಲಾವತಿ, ರಾಮಚಂದ್ರ ಶಾಸ್ತ್ರಿ, ಡಿಕ್ಕಿ ಮಾಧವರಾವ್, ಜಯಶ್ರೀ, ಪಂತುಲು, ಎಂ ವಿ ರಾಜಮ್ಮ, ಪಂಡರಿಬಾಯಿ, ಅಶ್ವತ್, ದ್ವಾರಕೀಶ್ ಹೇಳುತ್ತಾ ಹೋದ ಹಾಗೆ ಹನುಮನ ಬಾಲ ಬೆಳದಂತೆ ಬೆಳೆಯುತ್ತಲೇ ಇರುತ್ತದೆ. 

ಅಂದಿನ ಕಾಲದಲ್ಲಿ ಎಲ್ಲಾ ಕಲಾವಿದರ ಗುರಿ ಒಂದೇ.. ಈ ಚಿತ್ರದಲಿ ಚೆನ್ನಾಗಿ ಅಭಿನಯಿಸಿದರೆ, ಇನ್ನೊಂದು ಚಿತ್ರ ಸಿಗುತ್ತದೆ, ಕೆಲಸ ಸಿಗುತ್ತದೆ, ಹೊಟ್ಟೆಗೆ ಆಧಾರವಾಗುತ್ತದೆ. ಅಷ್ಟೇ ಅವರ ತಲೆಯಲ್ಲಿ ಇದ್ದುದ್ದು, ಅವರಿಗೆಲ್ಲಾ ಚೆನ್ನಾಗಿ ಗೊತ್ತಿತ್ತು ಕಲಾದೇವಿ ನಮ್ಮನ್ನು ಆರಿಸಿದ್ದಾಳೆ ಎಂದರೇ, ನಮ್ಮ ಬದುಕನ್ನು ಜೋಪಾನ ಮಾಡುತ್ತಾಳೆ ಎಂದು, 

ಅವರ ನಂಬಿಕೆ ಎಂದೂ ಸುಳ್ಳಾಗಿರಲಿಲ್ಲ. ಅದಕ್ಕೆ ಅತ್ಯುತ್ತಮ ಉದಾಹರಣೆ, ನಮ್ಮ ಕರುನಾಡಿನ ಅಭಿಮಾನದ ಕೂಸು ಬಾಲಕೃಷ್ಣ. ಆ ದಿಗ್ಗಜರಲ್ಲಿ ಎಲ್ಲರೂ ಒಂದೊಂದು ಮ್ಯಾನರಿಸಂ ಅಥವಾ ಅವರದೇ ಆದ ಒಂದು ವಿಶಿಷ್ಟ ಛಾಪು ಇದ್ದಿತ್ತು. ನಮ್ಮ ಬಾಲಕೃಷ್ಣ ತಮ್ಮ ಅಭಿನಯ ಚಾತುರ್ಯವನ್ನು ಕೊಂಡೊಯ್ದ ರೀತಿ ಶಭಾಶ್ ಎನ್ನಲೇ ಬೇಕು ಅನ್ನಿಸುವಷ್ಟು ತಾಜಾ ಆಗಿತ್ತು ಮತ್ತು ನಿಜವಾಗಿತ್ತು. 

ಅವರು ಮಾಡದ ಪಾತ್ರವೇ ಇರಲಿಲ್ಲ. ಆದರೆ ನೀರಿನ ತರಹ ಯಾವುದೇ ಆಕಾರಕ್ಕೆ ಹೋದರೂ ನೀರು ಅದೇ ಪಾತ್ರಕ್ಕೆ ಒಗ್ಗಿಕೊಳ್ಳುವ ಹಾಗೆ, ಬಾಲಕೃಷ್ಣ ಕೂಡ ಅವರು ಮಾಡಿದ ಪಾತ್ರದೊಳಗೆ ಹೊಕ್ಕುಬಿಡುತ್ತಿದ್ದರು. ನೋಡಿದವರಿಗೆ, ಈ ಪಾತ್ರವನ್ನು ಬೇರೆ ಯಾರೇ ಮಾಡಿದರೂ ಅದು ಬಾಲಕೃಷ್ಣ ಮಾಡಿದ ಹಾಗಿಲ್ಲ ಅನ್ನಿಸುವುವಷ್ಟು ಶಕ್ತಿಶಾಲಿಯಾಗಿರುತ್ತಿತ್ತು. 

ನನ್ನ ಜೀವನದಲ್ಲಿ ಮೂರು "ಅಣ್ಣ" ಬಂದೆ ಬರುತ್ತಾರೆ, ಮತ್ತು ನಾನು ಜೀವನವನ್ನು ನೋಡುವ ರೀತಿ ಮತ್ತು ಬದುಕುವ ರೀತಿಗೆ ಸ್ಫೂರ್ತಿ ತುಂಬಿದವರು ಇವರು 

ಮೊದಲು ನನ್ನ ಅಣ್ಣ, ಅಂದರೆ ನನ್ನ ಅಪ್ಪ - ಮಂಜುನಾಥ್. 

ಎರಡನೆಯವರು ಬಾಲಣ್ಣ ಅರ್ಥಾತ್ ಬಾಲಕೃಷ್ಣ 

ಮೂರನೆಯವರು ಅಣ್ಣ - ಕರುನಾಡಿನ ಅಣ್ಣಾವ್ರು. 

ಬಾಲಕೃಷ್ಣ ನನಗೆ ಬಲು ಇಷ್ಟ ಪಡಲು ಕಾರಣ ಅವರ ಸಂಭಾಷಣೆ ಹೇಳುವ ಶೈಲಿ. ಒಂದು ಸಾಮಾನ್ಯ ಪದಗಳು ಇವರ ಬಾಯಲ್ಲಿ ನುಸುಳಿ ಬಂದರೆ ಮಹಾನ್ ಶಕ್ತಿ ಪಡೆಯುತ್ತಿತ್ತು ಮತ್ತು ಅದಕ್ಕೆ ಒಂದು ತೂಕ ಬರುತ್ತಿತ್ತು. ಖಳನಾಯಕನ ಪಾತ್ರ ಕೂಡ ನಗೆ ಉಕ್ಕಿಸಬಲ್ಲುದು ಮತ್ತು ಅಷ್ಟೇ ರೋಷ ಉಕ್ಕಿಸಬಲ್ಲುದು ಎಂದು ತೋರಿಸಿಕೊಟ್ಟವರು. (ಉದಾಹರಣೆ ಕಣ್ತೆರೆದು ನೋಡು, ಸಂಪತ್ತಿಗೆ ಸವಾಲ್, ಗಂಧದ ಗುಡಿ, ಗಾಂಧಿನಗರ, ದೂರದ ಬೆಟ್ಟ ಹೀಗೆ ಹತ್ತಾರು ಚಿತ್ರಗಳ ಪಾತ್ರಗಳು)

ಇಂಥಹ ಒಂದು ಅದ್ಭುತ ಶಕ್ತಿಯ ಬಾಲಕೃಷ್ಣ ಅವರ ಹಲವಾರು ಚಿತ್ರಗಳಲ್ಲಿ ನನಗೆ ಇಷ್ಟವಾದ, ಮತ್ತು ಪರಿಣಾಮಕಾರಿ ಸಂಭಾಷಣೆ, ಅಭಿನಯ ಕೂಡಿರುವ ಒಂದಷ್ಟು ಚಿತ್ರಗಳ ಬಗ್ಗೆ ಬರೆಯುತ್ತ ಹೋಗುವೆ. ಎಲ್ಲಿ ಆರಂಭಿಸಲಿ, ಎಲ್ಲಿ ನಿಲ್ಲಿಸಲಿ ಗೊತ್ತಿಲ್ಲ ಕಾರಣ, ಬಾಲಕೃಷ್ಣ ಒಂದು ಕಡಲು. 

ಕಡಲಿನ ನೀರು ಆವಿಯಾಗುತ್ತದೆ, ಮೊಡವಾಗುತ್ತದೆ, ಮೋಡದಲ್ಲಿ ಸಾಂಧ್ರತೆ ಹೆಚ್ಚಾದಾಗ ಮಳೆ ಸುರಿಸುತ್ತದೆ. ಝರಿಗಳು ಹುಟ್ಟುತ್ತವೆ, ತೊರೆಯಾಗುತ್ತದೆ, ನದಿಯಾಗುತ್ತದೆ, ಕಡಲು ಸೇರುತ್ತದೆ.... ಮತ್ತೆ ಆವಿಯಾಗುತ್ತದೆ. 

ಹೀಗೆ ಬಾಲಕೃಷ್ಣ ಅವರ ಯಾವುದೇ ಚಿತ್ರವನ್ನು ನೋಡಿದರೂ ಮತ್ತೆ ಆರಂಭಕ್ಕೆ ಹೋಗಿ ನಿಲ್ಲಬಹುದು. ಎಲ್ಲಿಂದ ಬೇಕಾದರೂ ಆರಂಭಿಸಬಹುದು ಮತ್ತು ಎಲ್ಲಿ ಬೇಕಾದರೂ ಅಲ್ಪವಿರಾಮ ತೆಗೆದುಕೊಳ್ಳಬಹುದು. 

ಅಂಥಹ ಮಹಾನ್ ಶಕ್ತಿಯ ಚೇತನ ಭುವಿಗೆ ಬಂದು ೧೦೪ ವಸಂತಗಳು ಕಳೆದು ಹೋದವು. ಹೇಳಿದಷ್ಟು, ಬರೆದಷ್ಟು, ಗೀಚಿದಷ್ಟು ಹೊಸ ಹೊಸ ಅರ್ಥಗಳು ಹುಟ್ಟಿಕೊಳ್ಳುವ ಕನ್ನಡಾಂಬೆಯ ಅಭಿಮಾನದ ಕೂಸಿಗೆ ಇಂದು ಜನುಮ ದಿನದ ಸಂಭ್ರಮ. 

ಇದೆ ಸಂತಸದಲ್ಲಿ ಬಾಲಕೃಷ್ಣ ಅವರ ಚಿತ್ರಗಳ ಯಾತ್ರೆಯನ್ನು ನೋಡಲು, ಮತ್ತು ಅದರಿಂದ ಕೆಲವು ಪ್ರಭಾವಿ ಸನ್ನಿವೇಶಗಳನ್ನು, ನನಗೆ ಬಲು ಇಷ್ಟವಾದ ಕೆಲವು ಸ್ಪೂರ್ತಿದಾಯಕ ಅಥವಾ ಜೀವನಕ್ಕೆ ದಾರಿದೀಪವಾಗಬಲ್ಲಂಥಹ ಕೆಲವು  ಸಂಭಾಷಣೆಗಳನ್ನು ಬರೆಯಲು ಇಷ್ಟಪಡುತ್ತೇನೆ. 

ನನ್ನ ನಲ್ಮೆಯ ಓದುಗರ ಕಣ್ಣು ಮತ್ತು ಹೃದಯದ ಸಹಕಾರವಿರಲಿ... !

ಬಾಲಕೃಷ್ಣ ಅವರಿಗೆ ಜನುಮದಿನದ ಶುಭಾಶಯಗಳು. 

1 comment:

  1. ನಮ್ಮೆಲ್ಲರ ಮೆಚ್ಚಿನ ಬಾಲಣ್ಣ@ ಬಾಲಕೃಷ್ಣ ೧೯೨೯ ರಲ್ಲೇ ತಮ್ಮ ಮೊದಲ ಚಿತ್ರದಲ್ಲಿ ನಟಿಸಿದವರು, ಹೆತ್ತತಾಯಿ ತನ್ನ ಪತ್ನಿಯ ಅನಾರೋಗ್ಯದ ನಿವಾರಣೆಗೆ ಹಣವಿಲ್ಲದಾಗ ಎಂಟು ರುಪಾಯಿಗೆ ತನ್ನ ಮಗನನ್ನೇ ಮಾರಾಟ ಮಾಡುತ್ತಾರೆ ಆ ಮಗುವೆ ಬಾಲಕೃಷ್ಣ . ನಂತರ ಖರೀದಿಸಿದ ಮನೆಯವರ ಕಿರುಕುಳ ತಾಳಲಾರದೆ ಈ ಹುಉಗ ಆ ಮನೆಯನ್ನು ತೊರೆಯುತ್ತಾನೆ , ಇದು ಬಾಲಕೃಷ್ಣ ಅವರ ಜೀವನದ ಆರಂಭದ ನೋವಿನ ಕಥೆಗಳು . ಮೊದಲು ನಟನಾಗಿ ಗಮನ ಸೆಳೆದದ್ದು ೧೯೪೩ ರಲ್ಲಿ ಬಿಡುಗಡೆಯಾದ ಚಿತ್ರ "ರಾಧಾ ರಾಮಣ"ದಲ್ಲಿ . ಮೊದಮೊದಲು ಕನ್ನಡ ಚಿತ್ರರಂಗದಲ್ಲಿ ಖಳನಾಯಕನಾಗಿ ನಾಯಕನಟನಿಗೆ ಸವಾಲಾಗಿ ನಟಿಸಿದ ಕೀರ್ತಿ ಬಾಲಕೃಷ್ಣ ಅವರದು, ತನಗೆ ಕಿವಿಕೇಳದಿದ್ದರೂ ಬೇರೆಯವರ ತುಟಿ ಚಲನೆಯನ್ನು ಗ್ರಹಿಸಿ ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ಸಂಭಾಷಣೆ ಮಾಡುವ ತಾಕತ್ತು ಇವರಿಗೆ ದೇವರು ಕರುಣಿಸಿದ ವರವೇ ಸರಿ. ಕನ್ನಡ ಚಿತ್ರರಂಗ ಮದ್ರಾಸಿನಲ್ಲಿ ನೆಲೆಗೊಂಡ ಆ ಕಾಲದಲ್ಲಿ ಕನ್ನಡ ನೆಲದಲ್ಲಿ ಕನ್ನಡ ಚಿತ್ರಗಳ ತಯಾರಿಕೆ ಆಗಬೇಕೆಂಬ ತುಡಿತ ಅವರದು ಅದಕ್ಕಾಗಿ ತನ್ನ ಹಣವನ್ನೆಲ್ಲಾ ಸುರಿದು ಅಭಿಮಾನ್ ಸ್ಟುಡಿಯೋ ಕಟ್ಟಿಸಿದ ಮಹಾನುಭಾವ , ಆದರೆ ನಮ್ಮ ಕನ್ನಡ ಚಿತ್ರರಂಗದ ಮಂದಿ ಅದನ್ನು ಸರಿಯಾಗಿ ಬಳಸಿಕೊಳ್ಳದೆ ಪ್ರೋತ್ಸಾಹ ನೀಡದೆ ಬಾಲಣ್ಣನ ಆರ್ಥಿಕ ದುಸ್ಥಿತಿಗೆ ಕಾರಣವಾಗಿದ್ದು ದುರಂತವೇ ಸರಿ . ಕೊನೆಯವರೆಗೂ ಬಾಲಣ್ಣ ಕನ್ನಡಿಗರ ಸೇವೆ ಮಾಡಿದ ತಪ್ಪಿಗೆ ನೋವನ್ನೇ ಉಂಡರು . ಈ ನಟನ ಹಾಸ್ಯವನ್ನು ಅನುಭವಿಸಿದ ಕನ್ನಡದ ಜನ ನಾವು ಅವರನ್ನು ಬೆಳೆಸುವ ಔದಾರ್ಯ ತೋರಲಿಲ್ಲ. ಇಂತಹ ಮೇರು ನಟನ ಚಿತ್ರಗಳ ಬಗ್ಗೆ ಬರೆಯಲು ಅಡಿಪಾಯ ಹಾಕಿಕೊಂಡಿರುವ ಶ್ರೀಕಾಂತ್ ನಿಮ್ಮ ಪ್ರಯತ್ನಕ್ಕೆ ನನ್ನ ಶುಭ ಹಾರೈಕೆಗಳು. ನಿಮ್ಮ ಪಯಣ ಯಶಸ್ವಿಯಾಗಲಿ , ಮತ್ತ್ತೊಂದು ಮೈಲಿಗಲ್ಲು ನಿಮ್ಮ ಸಾಧನೆಯಾಗಲಿ

    ReplyDelete