Sunday, November 1, 2015

ಬೋರ್ಡ್ ನಲ್ಲಿ ಕಾಣದೆ ಇರುವ - ಫಲಿತಾಂಶ (1976)

ಪಾಠ ಪ್ರವಚನಗಳು ಹಲವಾರು ಬಾರಿ ಹಳೆಯದಾಗಿಬಿಡುತ್ತದೆ, ಆದರೆ ಅವು ನಮಗೆ ದಾರಿ ತೋರಿಸಿದ ಬಗೆ ಯಾವತ್ತಿಗೂ ನೆನಪಿರುತ್ತದೆ. ಪುಟ್ಟಣ್ಣ ಕಣಗಾಲ್ ಚಿತ್ರಜಗತ್ತಿನಲ್ಲಿ ಸೃಷ್ಠಿ ಮಾಡಿದ ರತ್ನಗಳು ಹಲವಾರು.

ಒಂದೊಂದು ರತ್ನವೂ ಭಿನ್ನ ವಿಭಿನ್ನ. ಪ್ರತಿ ರತ್ನ ಮಣಿಯನ್ನು ಅರಸುತ್ತಾ ಅದನ್ನು ನೋಡಿ ಸಂಭ್ರಮಿಸುತ್ತಾ ಹೋಗುತ್ತಿದ್ದ ನನಗೆ, ಆ ಸಾಲಿನಲ್ಲಿ ಒಂದು ಅನರ್ಘ್ಯ ರತ್ನದ ಹೆಸರಿತ್ತು, ಆದರೆ ಆ ಜಾಗದಲ್ಲಿ ಖಾಲಿ ಖಾಲಿ. ಅದರ ಫಲಕ ನೋಡಿದೆ, ಅದರಲ್ಲಿ "ಫಲಿತಾಂಶ" ಎಂದಿತ್ತು.

ಯಾಕೋ ಕುತೂಹಲ ಕಾಡಿತು, ಆ ಜಾಗವನ್ನು ಮತ್ತೆ ಮತ್ತೆ ನೋಡಿದೆ ಕೆಳಕಂಡ ವಿವರಗಳು ಸಿಕ್ಕವು.

ಆ ಮಾಣಿಕ್ಯ ೧೯೭೬ ನೆ ಇಸವಿಯಲ್ಲಿ ಅನಾವರಣಗೊಂಡಿತ್ತು.

ಅರೆಗಲ್ ಬ್ರದರ್ಸ್ ತಮ್ಮ ಕಿಸೆಯಿಂದ ಹಾಕಿದ ಕಾಂಚಣ ಈ ರತ್ನವನ್ನು ಬೆಳ್ಳಿ ತೆರೆಯಲ್ಲಿ ಬೆಳಗಿಸಿತ್ತು.

ಜೈ ಜಗದೀಶ್, ಆರತಿ, ಶುಭ ಜೊತೆಯಲ್ಲಿ ಹಿಂದಿ ಚಿತ್ರ ಜಗತ್ತಿನ ಕಂಚಿನ ಕಂಠ ಅಮರೀಶ್ ಪುರಿ ಕನ್ನಡಕ್ಕೆ ಕಾಲಿಟ್ಟ ಹೆಮ್ಮೆಯ ಕ್ಷಣ ಅದು.

ಆರ್ ಏನ್ ಜಯಗೋಪಾಲ್ ರಚಿಸಿದ ಸುಂದರ ಹಾಡುಗಳನ್ನು ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ವಾಣಿ ಜಯರಾಂ ಅಷ್ಟೇ ಸುಂದರವಾಗಿ ಜೀವ ತುಂಬಿ ಹಾಡಿದ್ದರು. ಇಂದಿಗೂ ನೆನಪಲ್ಲಿ ಉಳಿದಿರುವ ಅನೇಕ ಗೀತೆಗಳಲ್ಲಿ ಇವು ಕೂಡ ಒಂದು.

ಪುಟ್ಟಣ್ಣ ಚಿತ್ರಗಳು ಎಂದ ಮೇಲೆ ಸಂಗೀತದ ಮಾತು ಬಂದಾಗ ಮೊದಲ ಹೆಸರು ಬರುವುದು ಅವರ ನೆಚ್ಚಿನ ಗೆಳೆಯ ವಿಜಯಭಾಸ್ಕರ್. ಹೌದು ಈ ಚಿತ್ರವನ್ನು ವಿಜಯಭಾಸ್ಕರ್ ಸಂಗೀತ ಶರಧಿಯಲ್ಲಿ ಅದ್ದಿ ತೆಗೆದಿದ್ದಾರೆ.

"ಈ ಚೆಂಡಿನ ಆಟ" ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ಪಿ ಸುಶೀಲ ಹಾಡಿದ್ದಾರೆ."ಲವ್ ಎಂದರೆ ಯಾರೂ ಬಿಡಿಸಿದ ಬಂಧನ" ಈ ಹಾಡು ಇಷ್ಟವಾಗುವುದು ವಾಣಿಜಯರಾಂ ಅವರ ಧ್ವನಿ ಮತ್ತು ಪಾಶ್ಚಾತ್ಯ ಸಂಗೀತದ ಅಚ್ಚಿನಲ್ಲಿ ಮೂಡಿರುವ ಹಿನ್ನೆಲೆ ಸಹ ಗಾಯಕರ ಧ್ವನಿ.


ಫಲಿತಾಂಶವನ್ನು ಕಪ್ಪು ಬಿಳುಪಿನಲ್ಲಿ ಸೆರೆ ಹಿಡಿದದ್ದು ಬಿ ಎನ್ ಹರಿದಾಸ್ ಅವರ ಕ್ಯಾಮೆರ. 

ಶ್ರೀನಿವಾಸ್ ಕುಲಕರ್ಣಿಯವರ ಕತೆಯನ್ನು ತೆರೆಗೆ ಅಳವಡಿಸಿ ಈ ರತ್ನವನ್ನು ಬೆಳ್ಳಿ ತೆರೆಯಲ್ಲಿ ನೋಡಲು ಅನುಕೂಲ ಮಾಡಿಕೊಟ್ಟವರು ಪುಟ್ಟಣ್ಣ ಕಣಗಾಲ್.

ಹುಡುಕಿ ಹುಡುಕಿ ಸುಸ್ತಾಗಿ ಅಲ್ಲೇ ಒಂದು ಮೂಲೆಯಲ್ಲಿ ಕುಳಿತಾಗ ಈ ಚಿತ್ರದ ಪುಟ್ಟ ಮಾಹಿತಿ ಫಲಕ ಅಲ್ಲಿ ನೇತು ಹಾಕಿದ್ದು ಬಿದ್ದು ಹೋಗಿತ್ತು .. :-)


ಫಲಿತಾಂಶ
ನಿರ್ದೇಶನಪುಟ್ಟಣ್ಣ ಕಣಗಾಲ್
ನಿರ್ಮಾಪಕಅರಗಲ್ ಸಹೋದರರು
ಕಥೆಶ್ರೀನಿವಾಸ ಕುಲಕರ್ಣಿ
ಪಾತ್ರವರ್ಗಜೈಜಗದೀಶ್ ಆರತಿ ವೈಶಾಲಿ,ಪದ್ಮಾಕುಮುಟಅರುಣ ಇರಾನಿ,ಶುಭಲೋಕನಾಥ್ಲೀಲಾವತಿ,ಅಮರೀಶ್ ಪುರಿ
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಬಿ.ಎನ್.ಹರಿದಾಸ್
ಬಿಡುಗಡೆಯಾಗಿದ್ದು೧೯೭೬
ಚಿತ್ರ ನಿರ್ಮಾಣ ಸಂಸ್ಥೆಎ.1 ಮೂವೀಟೋನ್
ಹಿನ್ನೆಲೆ ಗಾಯನವಾಣಿ ಜಯರಾಂ,ಎಸ್.ಪಿ.ಬಾಲಸುಬ್ರಹ್ಮಣ್ಯಂ


ಈ ಚಿತ್ರ ಎಲ್ಲೇ ಹುಡುಕಿದರೂ ಸಿಗದ ಕಾರಣ, ಪುಟ್ಟಣ್ಣ ಕಣಗಾಲ್ ಚಿತ್ರಸರಣಿಯಲ್ಲಿ ಕೊನೆಯಲ್ಲಿ ಬರೆಯೋಣ ಎಂದು ಇಟ್ಟುಕೊಂಡಿದ್ದೆ. ಚಿತ್ರವನ್ನು ಕೈ ಬಿಡಲು ಮನಸ್ಸು ಒಪ್ಪಲ್ಲಿಲ್ಲ. ಆದ್ದರಿಂದ ಈ ಚಿತ್ರದ ಬಗ್ಗೆ ಅಂತರ್ಜಾಲದಲ್ಲಿ ಕೈ ಎಟುಕಿದ ಮಾಹಿತಿಯನ್ನು ಓದಿ ನನಗೆ ಅನ್ನಿಸಿದ ಒಂದಷ್ಟು ಪದಗಳಲ್ಲಿ ಒಂದು ಲೇಖನ ಮಾಡಿದ್ದೇನೆ. ಈ ಚಿತ್ರವನ್ನು ಯಾವಾಗಲಾದರೂ ನೋಡಿಯೇ ನೋಡುತ್ತೇನೆ ಎನ್ನುವ ಆತ್ಮವಿಶ್ವಾಸ ನನ್ನಲ್ಲಿದೆ. ನೋಡಿದ ದಿನ ಆ ಚಿತ್ರವನ್ನು ನನ್ನ ಮೂಸೆಯಲ್ಲಿ ಅರಳಿಸಿ, ನನಗೆ ತಾಕಿದ ಅನುಭವದ ಬಗ್ಗೆ ಒಂದಷ್ಟು ಪದಗಳನ್ನು ಹರಿಯ ಬಿಡುತ್ತೇನೆ...

****

ಪುಟ್ಟಣ್ಣ ಕಣಗಾಲ್ ಗುರುಗಳೇ, ಕರುನಾಡಿನ ಭಾಷೆಯಲ್ಲಿ ನಿಮ್ಮ ದಿಗ್ದರ್ಶನದಲ್ಲಿ ಅರಳಿದ ೨೪ ಚಿತ್ರಗಳಲ್ಲಿ ೨೩ ಚಿತ್ರಗಳನ್ನು ನೋಡಿ ನನ್ನ ಅನುಭವಕ್ಕೆ ನಿಲುಕಿದ ಒಂದೆರಡು ಮಾತುಗಳನ್ನು ಹಂಚಿಕೊಂಡಿದ್ದೇನೆ. ಒಂದು ಚಿತ್ರದ ಬಗ್ಗೆ ಕೇವಲ ಲಭ್ಯವಾದ ಮಾಹಿತಿಯನ್ನು ಮಾತ್ರ ಕೊಟ್ಟಿದ್ದೇನೆ. ನಿಮ್ಮ ಚಿತ್ರಗಳನ್ನು ಬಾಲ್ಯದಿಂದಲೂ ಆನಂದಿಸಿಕೊಂಡು ಬಂದಿದ್ದ ನನಗೆ, ಆ ಚಿತ್ರಗಳ ಬಗ್ಗೆ ಬರೆಯಬೇಕೆಂಬ ಹಂಬಲ ಹುಟ್ಟಿತ್ತು. ನಾ ಏನೇ ಬರೆದಿದ್ದರೂ ಅದು ನಿಮ್ಮ ಆಶೀರ್ವಾದದ ಬಲ ನನ್ನೊಳಗೆ ಕೂತು ಬರೆಸಿದೆ. ಈ ಲೇಖನಮಾಲಿಕೆಗಳನ್ನೂ ಬರೆಯುವ ಸಾಹಸಕ್ಕೆ ಸ್ಫೂರ್ತಿ ನೀಡಿದವರು ನನ್ನ ಅಪ್ಪ (ಮಂಜುನಾಥ್), ಮತ್ತು ನನ್ನ ಸೋದರ ಮಾವ (ಶ್ರೀಕಾಂತ್ ಅಲಿಯಾಸ್ ರಾಜ),  ಇವರಿಬ್ಬರೂ ಹಲವಾರು ರೀತಿಯಲ್ಲಿ ನನಗೆ ಮಾರ್ಗದರ್ಶಿಗಳು ಮತ್ತು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಶ್ರೀ  ನೀವು ಬರೆಯಿರಿ ಖಂಡಿತ ನೀವು ಈ ಸುಂದರ ಮಾಲೆಯನ್ನು ಪೂರ್ಣ ಮಾಡುತ್ತೀರಿ ಎಂದು ಧೈರ್ಯ ತುಂಬಿದವರು ಶ್ರೀ ಬಾಲಸುಬ್ರಮಣ್ಯ ಅರ್ಥಾತ್ ಬಾಲೂ ಸರ್, ಶ್ರೀ ಪ್ರಕಾಶ್ ಹೆಗ್ಡೆ, ಶ್ರೀಮತಿ ರೂಪ ಸತೀಶ್, ಶ್ರೀಮತಿ ನಿವೇದಿತ ಚಿರಂತನ್, ಶ್ರೀಮತಿ ಸ್ವರ್ಣ ಪಿ, ಶ್ರೀಮತಿ ಹರಿಣಿ GNT, ಶ್ರೀಮತಿ ಸುಗುಣ ಮಹೇಶ್, ಬದರಿನಾಥ್ ಪಲವಳ್ಲಿ  ಮತ್ತು ನಿಮ್ಮ ದಿಗ್ದರ್ಶನದ ಬಗ್ಗೆ ಅಭೂತಪೂರ್ವ ಮಾಹಿತಿ ಕೊಟ್ಟ ನಿಮ್ಮಯ ಆತ್ಮೀಯ ಸ್ನೇಹಿತರಾದ ಶ್ರೀ ಮೋಹನ್ ಕಂಪ್ಲಾಪುರ್ ಅಥವಾ ಕಂಪ್ಲಾಪುರದ ಮೋಹನ್  ಮತ್ತು ಅನೇಕ ಪುಟ್ಟಣ್ಣ ಕಣಗಾಲ್ ಅಭಿಮಾನಿಗಳು.

ಇಂದಿಗೂ ನನಗೆ ನೆನಪಿದೆ ನಿಮ್ಮ ಸಹೋದರ ಶ್ರೀ ನರಸಿಂಹ ಶಾಸ್ತ್ರಿಗಳು ನಿರರ್ಗಳವಾಗಿ ಒಂದೂವರೆ ತಾಸು ನಿಮ್ಮ ಬೆಳ್ಳಿಮೋಡದ ಚಿತ್ರದ ತಯಾರಿಯಿಂದ ಹಿಡಿದು ಸಿನಿಮಾ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿದ್ದನ್ನು ಅದ್ಭುತವಾಗಿ ಕಣ್ಣಿಗೆ ಕಟ್ಟಿದಂತೆ ವಿವರಿಸಿದ ರೀತಿ. ನಿಮ್ಮ ಮತ್ತು ನಿಮ್ಮ ಸಹೋದರರ ಚರಣ ಕಮಲಗಳಿಗೆ ಈ ಲೇಖನ ಅರ್ಪಿತ.

ಇದು ಖಂಡಿತ ನಾ ಬರೆದಿದ್ದಲ್ಲ, ನನ್ನೊಳಗೆ ಕೂತು, ನನಗೆ ಪ್ರೇರಣೆ ನೀಡಿ ನನ್ನ ಕೈಯಿಂದ ಬರೆಸಿದವರು.  ನೀವೇ ಹೇಳುವಂತೆ ಈ ಲೇಖನ ಮಾಲಿಕೆಯ ದಿಗ್ದರ್ಶನ ಜಗನ್ಮಾತೆ.

ಧನ್ಯವಾದಗಳು ಗುರುಗಳೇ ಮತ್ತು ಆರಂಭದಿಂದಲೂ ಪ್ರೋತ್ಸಾಹಿಸಿದ ಎಲ್ಲಾ ಓದುಗರಿಗೆ ನನ್ನ ಶಿರಸಾ ಪ್ರಣಾಮಿ.. !

5 comments:

 1. ಯಾವುದೇ ಒಂದು ಕೆಲಸ ತೆಗೆದುಕೊಂಡರು ಅದನ್ನು ಮುಗಿಸುವ ಶ್ರದ್ಧೆ, ಹುಮ್ಮಸ್ಸು, ಮನಸ್ಸು ಕೊನೆಯ ತನಕ ಇದ್ದರೆ ಮಾತ್ರ ಸಿಗುವ ಆ ಫಲಿತಾಂಶಕ್ಕೆ ಒಂದು ಅರ್ಥವಿರುತ್ತೆ. ಇಷ್ಟು ದೊಡ್ಡ ಕಾರ್ಯವನ್ನು ಕೈಗೆತ್ತುಕೊಳ್ಳೋದಕ್ಕೆ ಸ್ವಲ್ಪ ಅಂಜಿಕೆ ಆಗುತ್ತೆ, ಅದನ್ನು ಇಷ್ಟು ಅದ್ಭುತವಾಗಿ, ಅಚ್ಚುಕಟ್ಟಾಗಿ ಮುಗಿಸಿದ ರೀತಿ ನಿಮ್ಮ ಪ್ರಯತ್ನದ ಪ್ರಾಮಾಣಿಕತೆ ತೋರಿಸುತ್ತೆ. ಈಗ ನಿಜವಾಗಿ ಭೇಷ್ ಹೇಳ್ತೀನಿ :)

  ReplyDelete
 2. Hats off Sri :) nimma barahagalinda, Puttannaravara ellaa chitragalannu nodalebekennuvashtu protsahisiddeeri. Feeling proud of you :) nimma blog "andina chitragala indina vimarshe"antha innashtu janarige talupali annode nanna aashaya.

  Innu nanna bali iruva CDgalanna Decemberninda vaarakkondaranthe noduva schedule haakkondidini. Aashirvaadavirali :)

  ReplyDelete
 3. ಶ್ರೀಕಾಂತ್ ಈ ಚಿತ್ರ ನಾನು ಬಹುಷಃ ೧೦ ನೆ ವಯಸ್ಸಿನಲ್ಲಿ ಮನೆಯವರೆಲ್ಲರ ಜೊತೆ ನೋಡಿದ್ದು, ಆಗ ಚಿತ್ರ ಅರ್ಥಾ ಆಗಿರಲಿಲ್ಲ, ಆದರೆ ಈ ಚಿತ್ರದ ಹಾಡುಗಳು ರೇಡಿಯೋ ದಲ್ಲಿ ಬಹಳಷ್ಟು ಕೇಳುತ್ತಿದ್ದೆ , ಈ ಚಿತ್ರದ ವಿಶೇಷ ಅಂದ್ರೆ ಜೈಜಗಧೀಶ್ ಎಂಬ ಸುಂದರ ನಟ ನಾಯಕನಾಗಿ ಪರಿಚಯ ಆಗಿದ್ದು, ಮತ್ತೊಂದು ವಿಶೇಷ ಅಂದ್ರೆ ಒಂದು ಹಾಡಿನಲ್ಲಿ ಪ್ರೀತಿಯ ಬಗ್ಗೆ ಪ್ರಶ್ನೆ [ ಲವ್ ಎಂದರೇನು ಅದು ಹೇಗಿದೆ ಗೊತ್ತೇನು ಹಾಡಿನಲ್ಲಿ ] ಹಾಕಿ ನಂತರ ಮತ್ತೊಂದು ಸನ್ನಿವೇಶದಲ್ಲಿ ಪ್ರೀತಿಯ ಪ್ರಶ್ನೆಗಳಿಗೆ ಉತ್ತರ [ ಲವ್ ಎಂದರೆ ಯಾರೂ ತಿಳಿಯದ ಬಂಧನ ಎಂಬ ಹಾಡಿನಲ್ಲಿ ] ಒಂದು ಹಾಡನ್ನು ಎಸ. ಪಿ. ಬಾಳು ಅವರು ಹಾಡಿದ್ದಾರೆ ಮತ್ತೊಂದು ಹಾಡನ್ನು ವಾಣಿಜಯರಾಂ ಅಷ್ಟೇ ಅರ್ಥವತ್ತಾಗಿ ಹಾಡಿದ್ದಾರೆ. ಈ ನಿಟ್ಟಿನಲ್ಲಿ ಒಬ್ಬ ನಿರ್ದೇಶಕನ ಕಲ್ಪನೆ, ಹಾಗು ಕಾರ್ಯ ಶೀಳತೆಯು ಅನಾವರಣೆ ಆಗುತ್ತದೆ. ಹಾಗಾಗಿ ಪುಟ್ಟಣ್ಣ ಕಣಗಾಲ್ ನಮ್ಮೆಲ್ಲರ ಮನದಲ್ಲಿ ಉಳಿಯಲು ಸಾಧ್ಯವಾಗಿದೆ. ಶ್ರೀ ಕಾಂತ್ ನಿರ್ದೇಶಕನೋಬ್ಬನಿಗೆ ಸಹೃದಯ ಪ್ರೇಕ್ಷಕ ನೀಡಿದ ಅದ್ಭುತ ಕೊಡುಗೆ ಇದು, ಒಂದು ಪುಇಸ್ತಕ ಮಾಡಿ ಈ ಎಲ್ಲಾ ಲೇಖನಗಳನ್ನು ಪುಟ್ಟಣ್ಣನವರ ಊರು ಕಣಗಾಲಿನಲ್ಲಿರುವ ಅವರ ಮುಂದೆ ಇಟ್ಟು, ನಂತರ ಅವರ ಕುಟುಂಬದವರಿಗೆ ನೀಡಿದಲ್ಲಿ ಹೇಗಿರುತ್ತೆ ಎಂಬ ಕಲ್ಪನೆ ಬಂತು ನನಗೆ ಆ ಕಲ್ಪನೆ ನಿಜವಾಗುವ ದಿನಕ್ಕೆ ಕಾಯುತ್ತೇನೆ . ಶುಭವಾಗಲಿ ಪುಟ್ಟಣ್ಣ ಬದುಕಿದ್ದಲ್ಲಿ ಖಂಡಿತಾ ನಿಮ್ಮನ್ನು ಭೇಟಿಯಾಗಿ ಖುಷಿಪಡುತ್ತಿದ್ದರು . ಬಹಳ ಒಳ್ಳೆಯ ಕಾರ್ಯ ಮಾಡಿದ ಪ್ರೀತಿಯ ಗೆಳೆಯನಿಗೆ ಜೈ ಹೋ

  ReplyDelete
 4. ಅರುಣ ಇರಾನಿ ಅಭಿನಯಿಸಿದ ಹಾಡು ನೆನಪಿದೆಯೇ

  ReplyDelete
 5. ಈ ಚಿತ್ರದ ಬಗ್ಗೆ ನನ್ನ ಗೆಳೆಯರೊಬ್ಬರು ಜೈಜಗದೀಶ್ ಅವರನ್ನು ವಿಚಾರಿಸಿದಾಗ ಈ ಚಿತ್ರ ಎಂದೆಂದಿಗೂ ನೋಡಲು ಸಾದ್ಯವಿಲ್ಲ ,ಇದರ ನೆಗೆಟಿವ್ ಬೆಂಕಿ ಆಕಸ್ಮಿಕದಲ್ಲಿ ಸುಟ್ಟುಹೋಗಿದೆ ಎಂದು ಜೈಜಗದೀಶ್ ಹೇಳಿದರಂತೆ

  ReplyDelete