Thursday, October 29, 2015

ಸ್ನೇಹದ ಅಮೃತ ಸಿಂಚನ ಮಾಡುವ ಅಮೃತ ಘಳಿಗೆ (1984)

ಸಮುದ್ರದಲ್ಲಿ ತೇಲುವ ಅನುಭವ ಎಷ್ಟು ಸೊಗಸೋ ಅಷ್ಟೇ ಭಯನಕವಾಗಿರುತ್ತೆ ದೈತ್ಯ ಅಲೆಗಳು ಸುತ್ತ ಮುತ್ತಲ ಸೃಷ್ಠಿಯನ್ನು ಆಪೋಶನ ಮಾಡುವಾಗ. ಆದರೆ ಆ ದೈತ್ಯ ಅಲೆಗಳಿಗೆ ಶಕ್ತಿ ಕೊಡುವುದು ಯಾವುದು ಗೊತ್ತೇ, ಕಡಲಲ್ಲಿ ಇರುವ ನೀರು ಮತ್ತು ಅದರ ಮೇಲೆ ಬೀಸುವ ಗಾಳಿ.

ನಿಜ ಅದರ ಒಡಲೊಳಗೆ ಇರುವ ನೀರು ದೈತ್ಯಾಕಾರ ತಾಳುತ್ತದೆ ಎಂದರೆ, ಅದರೊಳಗಿನ ಶಕ್ತಿ ನಮ್ಮ ಊಹೆಗೆ ನಿಲುಕದ್ದು. 

ಪುಟ್ಟಣ್ಣ ಕಣಗಾಲ್ ಅವರು ಮಾಮೂಲಿ ಎನ್ನುವ ಕಥೆಯನ್ನು ಕೂಡ ಅಸಾಧಾರಣ ರೀತಿಯಲ್ಲಿ ತೆರೆಯ ಮೇಲೆ ಬಡಿಸುತ್ತಿದ್ದುದು ಅವರ ಅಗಾಧ ಪ್ರತಿಭೆಯ ಶಕ್ತಿಯಿಂದ. ನಮ್ಮ ಕಣ್ಣಿಗೆ ಸಾಧಾರಣ ಎನ್ನಿಸುವುದನ್ನು ಅಷ್ಟೇ ವಿವರವಾಗಿ, ವಿಶಿಷ್ಟ ರೀತಿಯಿಂದ ಹೀಗೂ ನೋಡಬಹುದು ಎನ್ನುವುದನ್ನು ಕಳಿಸಿಕೊಟ್ಟ ಗುರುಗಳು ಅವರು. 

ಅಮೃತ ಘಳಿಗೆ ಈ ಚಿತ್ರದ ಕಥೆಯನ್ನು ಅವರ ಜೀವದ ಗೆಳೆಯ ಮೋಹನ್ ಕಂಪ್ಲಾಪುರ್ ಕೊಟ್ಟಾಗ ಅ ಪುಸ್ತಕದ ಮೇಲೆ ಇದ್ದ ಶಿರೋನಾಮೆ "ದೊಡ್ಡೇರಿ ವೆಂಕಟಗಿರಿ ರಾವ್ - "ಅವಧಾನ" ". ಅದನ್ನೇ ಸುಂದರ ಚಿತ್ರಕಥೆ ಮಾಡಿ, ಅದಕ್ಕೊಂದು ಸುಂದರ ತಾಣವನ್ನು ಹುಡುಕಿ, ಅಮೃತ ಘಳಿಗೆ ಎನ್ನುವ ಒಂದು ನಿತ್ಯ ನೂತನ ಚಿತ್ರವನ್ನು ನೀಡಿದರು. ಈ ಕಥೆ ಆ ಕಾಲದಲ್ಲಿ ಸುಧಾ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಮೂಡಿ ಬಂದಿತ್ತು. ಪುಟ್ಟಣ್ಣ ಅವರ ಹುಡುಕಾಟದಲ್ಲಿ ಸಿಕ್ಕ ಇಂಥಹ ಕಥಾ ಮುತ್ತುಗಳು ಹೇರಳ. 

ಎಸ್ ಆರ್ ರಾಜನ್, ಭೀಮ ರಾವ್, ಕೆ ನಾಗರತ್ನ, ಪುಟ್ಟಣ್ಣ ಕಣಗಾಲ್ ತಂಡ ನಿರ್ಮಾಪಕರಾಗಿ ಈ ಚಿತ್ರವನ್ನು ಜಯಭೇರಿ ಫಿಲಂಸ್ ಲಾಂಛನದಲ್ಲಿ ತೆರೆಗೆ ತಂದರು. 

ಆರಂಭದಲ್ಲಿ ಪುಟ್ಟಣ್ಣ ಅವರ ಮಾತೃಶ್ರಿ ಅವರಿಗೆ ನಮನ ಸಲ್ಲಿಸುತ್ತಾ, ಶುರುವಾಗುವ ಈ ಚಿತ್ರದ ವಿಶೇಷ ಛಾಯಾಗ್ರಹಣ ಬಿ ಎಸ್ ಬಸವರಾಜ್ ಅವರದ್ದು. ಅದ್ಭುತ ಹಾಡುಗಳನ್ನು ಬರೆದದ್ದು ಜೀವದ ಗೆಳೆಯ ವಿಜಯನಾರಸಿಂಹ ಅದಕ್ಕೆ ಸಂಗೀತ ಕಿರೀಟ ತೊಡಿಸಿದವರು ಇನ್ನೊಬ್ಬ ಜೀವದ ಗೆಳೆಯ ವಿಜಯಭಾಸ್ಕರ್. 

ಪುಟ್ಟಣ್ಣ ಅವರಿಗೆ ಕರುನಾಡಿನ ಪ್ರತಿಭೆಗಳನ್ನು, ಕರುನಾಡಿನ ಸುಂದರ ತಾಣಗಳನ್ನು ಪರಿಚಯಿಸುವ ಉತ್ಸಾಹ ಯಾವಾಗಲೂ ಇತ್ತು. ಅವರ ಚಿತ್ರಗಳ ಮೂಲಕ ಬೆಳಕಿಗೆ ಬಂದ ನಕ್ಷತ್ರಗಳು ಅನೇಕ ಅನೇಕ. ಈ ಚಿತ್ರದ ಮೂಲಕ ಕರುನಾಡಿಗೆ ಕೊಟ್ಟ ಉಡುಗೊರೆ ಬಿ ಆರ್ ಛಾಯ ಎನ್ನುವ ಕರುನಾಡಿನ ಮನೆಮಗಳಾದ ಗಾಯಕಿ. 

ಚುರುಕು ಸಂಭಾಷಣೆ, ಹಿತಮಿತವಾದ ಪದಗಳು ಪುಟ್ಟಣ್ಣ ಚಿತ್ರಗಳ ಆಸ್ತಿ, ಈ ಚಿತ್ರಕ್ಕೆ ಪದಗಳನ್ನು ಜೋಡಿಸಿದವರು ಬಿ ಎಲ್ ವೇಣು. ಜಗನ್ಮಾತೆಯ ದಿಗ್ದರ್ಶನದಲ್ಲಿ ಚಿತ್ರಕಥೆ, ನಿರೂಪಣೆ ಮತ್ತು ನಿರ್ವಹಣೆ ಪೂಜ್ಯ ಗುರುಗಳಾದ ಪುಟ್ಟಣ್ಣ ಕಣಗಾಲ್ ಅವರದ್ದು. 

ಪುಟಿಯುವ ಯೌವನದ ಉತ್ಸಾಹ ಕೆಲವೊಮ್ಮೆ ಎಂಥಹ ಹಾದಿಯನ್ನು ಹಿಡಿಯುತ್ತದೆ ಎನ್ನುವುದರ ಆರಂಭ ಈ ಚಿತ್ರದ ಆರಂಭಿಕ ದೃಶ್ಯದಲ್ಲಿ ಕಾಣುತ್ತದೆ. ಬುಗ್ಗೆ ಬುಗ್ಗೆಯಾಗಿ ದೋಣಿಯ ಮೋಟಾರಿನ ಕೆಳಗೆ ಉಕ್ಕುವ ನೀರು ಈ ಮಾತಿಗೆ ಸಾಕ್ಷಿ. 
ಆಧುನಿಕ ಪ್ರಪಂಚ ದಾಪುಗಾಲು ಇಡುತ್ತಾ ಸಾಗಿದಾಗ ಪ್ರಕೃತಿಯನ್ನು ಮನುಷ್ಯ ಹೇಗೆ ಕಬಳಿಸುತ್ತಾ ಹೋಗುತ್ತಾನೆ ಎನ್ನುವುದಕ್ಕೆ ಶರಾವತಿ ಹಿನ್ನೀರಿನ ಬಗ್ಗೆ ನಾಯಕಿ ಮಾತಲ್ಲಿ ಬರುವ ಆರಂಭಿಕ ಸಂಭಾಷಣೆ ಸಾಕ್ಷಿಯಾಗಿ ನಿಲ್ಲುತ್ತದೆ. 

ಶಾಲೆಯ ಕಡಿವಾಣದ ದಿನಗಳಿಂದ ಕಾಲೇಜು ಎನ್ನುವ ಸ್ವತಂತ್ರ ಎನ್ನುವ ಇನ್ನೊಂದು ಪರಿಧಿಯೊಳಗೆ ಹೋಗುವ ಹರೆಯದ ತುಡಿತವನ್ನು ಕೆಲವೇ ದೃಶ್ಯಗಳಲ್ಲಿ ಅಚ್ಚುಕಟ್ಟಾಗಿ ತಂದಿದ್ದಾರೆ. ನೋಡಿದ ತಕ್ಷಣ ರೂಪು, ವಯ್ಯಾರ ಅಥವಾ ಲಕ್ಷಣಗಳನ್ನು ಗಮನಿಸದೆ ಪ್ರೀತಿ ಎನ್ನುವ ಒಂದು ವಿಚಿತ್ರ ಭಾವಕ್ಕೆ ಬೀಳುವ ನಾಯಕ ಪಾತ್ರಧಾರಿ ರಾಮಕೃಷ್ಣ ಉತ್ತಮವಾಗಿ ಅಭಿನಯಿಸಿದ್ದಾರೆ. ನಾಯಕಿ ಪದ್ಮಾವಾಸಂತಿ ಮತ್ತೆ ಅಭಿನಯವನ್ನು ಸಾಣೆ ಹಿಡಿದಂತೆ ನಟಿಸಿದ್ದಾರೆ. ಇನ್ನೂ ಮೊದಲ ಪರಿಚಯ ಶ್ರೀಧರ್ ಗಂಭೀರ ಪಾತ್ರದಲ್ಲಿ ಮಿಂಚಿದ್ದಾರೆ. ಎಲ್ಲೂ ಅತಿರೇಕದ ಅಭಿನಯ ಅಥವಾ ದೃಶ್ಯಗಳನ್ನು ಕಟ್ಟಿ ಕೊಡದಿರುವುದು ಪುಟ್ಟಣ್ಣ ಅವರ ಎಲ್ಲಾ ಚಿತ್ರಗಳ ಪ್ರಮುಖ ಆಕರ್ಷಣೆ. ಹದವಾಗಿ, ನವಿರಾದ ಸಂಭಾಷಣೆಗಳು ಮತ್ತು ಅದಕ್ಕೆ ಬದ್ಧವಾಗಿ ನಿಲ್ಲುವ ದೃಶ್ಯ ಜೋಡಣೆ, ಪರಿಸರ ಇದು ಈ ಚಿತ್ರದ ಮತ್ತೊಂದು ಆಕರ್ಷಣೆ. ರಾಮಕೃಷ್ಣ ಒಬ್ಬರನ್ನು ಬಿಟ್ಟರೆ ಮಿಕ್ಕೆಲ್ಲಾ ಕಲಾವಿದರು ಅಷ್ಟೇನೂ ಬೆಳಕಿಗೆ ಬಂದು ಮಿಂಚಿದ ಪ್ರತಿಭೆಗಳಲ್ಲ. ಆದರೆ ಪ್ರತಿಯೊಬ್ಬರಲ್ಲೂ ಕಥೆಗೆ ಬೇಕಷ್ಟು ಅಭಿನಯ ಹೊಮ್ಮಿಸಿರುವ ರೀತಿ ಇಷ್ಟವಾಗುತ್ತದೆ.

ಸೂರ್ಯಾಸ್ತದ ಅನೇಕ ದೃಶ್ಯಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿರುವ ಪುಟ್ಟಣ್ಣ, ಅದನ್ನು ಸರಿಯಾದ ದೃಶ್ಯಕ್ಕೆ ಒಪ್ಪವಾಗಿ ಜೋಡಿಸಿದ್ದಾರೆ.

ಮೊದಲ ಪ್ರೇಮವನ್ನು ನಿವೇದಿಸುತ್ತಾ ಮನಸ್ಸಲ್ಲೇ ರಮ್ಯ ಕಲ್ಪನೆ ಮಾಡಿಕೊಳ್ಳುವ ಹಾಡಾಗಿ "ಮಯೂರಿ ನಾಟ್ಯ ಮಯೂರಿ" ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ಛಾಯ ಅವರ ಕಂಠ ಸಿರಿಯಲ್ಲಿ ಬರುತ್ತದೆ. ರಾಮಕೃಷ್ಣ ಅವರ ನೃತ್ಯ, ಪದ್ಮಾವಾಸಂತಿ ಅಭಿನಯ ಈ ಹಾಡಿನ ಮೆಚ್ಚತಕ್ಕ ಅಂಶ. ಶರಾವತಿ ಹಿನ್ನೀರಿನ ರಮ್ಯ ತಾಣವನ್ನು ಪರಿಚಯಿಸಿಕೊಡುತ್ತಾರೆ

ಪ್ರಣಯದ ಉತ್ತುಂಗ, ಮತ್ತು ಮನಸ್ಸಿನ ಮೇಲೆ ಹಿಡಿತ ಜಾರುವ ದೃಶ್ಯವನ್ನು ಹಾಡಾಗಿ "ಪಾರವತಿ ಪರಶಿವನ ಪ್ರಣಯ ಪ್ರಸಂಗ" ಹಾಡಿನಲ್ಲಿ ಮನಸ್ಸಿನ ಮೇಲೆ ಬೀರುವ ವಿಧ ವಿಧ ಭಾವಕ್ಕೆ ಒಪ್ಪುವಂತೆ ಬಣ್ಣ ಬಣ್ಣಗಳ ಬೆಳಕಲ್ಲಿ ಈ ಹಾಡನ್ನು ಚಿತ್ರೀಕರಿಸಿದ್ದಾರೆ ಇಕ್ಕೇರಿಯ ದೇಗುಲದಲ್ಲಿ. ಪುಟ್ಟಣ್ಣ ಅವರ ತಾಂತ್ರಿಕ ಜ್ಞಾನದ ಭವ್ಯ ಅನಾವರಣ.

ಮುಂದಿನ ವಿದ್ಯಾಭ್ಯಾಸಕ್ಕೆ ಹೊರಡುವ ನಾಯಕ, ಮೊದಲ ಕಾಗದವನ್ನು ತಲುಪಿಸಿದಾಗ ಅದನ್ನು ಓದುವ ನಾಯಕಿ, ಮತ್ತು ಆ ದೃಶ್ಯವನ್ನು ಉಯ್ಯಾಲೆಯಲ್ಲಿ ತೂಗಿದಂತೆ ಚಿತ್ರೀಕರಿಸಿದ್ದಾರೆ. ಅದನ್ನು ನಾಯಕಿಯ ದೇಹದಲ್ಲಿ ಆಗುವ ಬದಲಾವಣೆ ಮತ್ತು ನಾಯಕ ಹೊರಳಿದ ಪಥದಲ್ಲಿ ನಿಲ್ಲುವನು ಎನ್ನುವ ಉಪಮೆ ನೀಡಿದ್ದಾರೆ. ಬಿಸಿಗೆ ಕರಗಿದ ಮಂಜಿನಂತೆ ನಾಯಕನ ಪ್ರೇಮವೂ ಪ್ರೀತಿಯೂ ಅನುಮಾನಕ್ಕೆ ತಿರುಗುತ್ತೆ ಇದರ ಮುನ್ಸೂಚನೆ ಈ ದೃಶ್ಯದಲ್ಲಿ ಕಾಣುತ್ತದೆ.

ನಾಯಕಿ ತನ್ನ ಬವಣೆಯನ್ನು ತನ್ನ ಆತ್ಮೀಯ ಸ್ನೇಹಿತ ಶ್ರೀಧರ್ ಗೆ ಹೇಳಲು ಹೊರ ಕರೆಯುತ್ತಾಳೆ, ಆದರೆ ಸ್ನೇಹಿತನ ಮುಂದೆ ತಾನು ಕಾಲು ಜಾರಿದ್ದೇನೆ ಎಂದು ಹೇಳಲು ತೊಳಲಾಡುವ ದೃಶ್ಯವನ್ನು ಅಷ್ಟೇ ಅದ್ಭುತವಾಗಿ ಕ್ಯಾಮೆರ ಓಡಾಡುತ್ತಲೇ ಇರುವಂತೆ ತೋರಿಸಿದ್ದಾರೆ. ಶ್ರೀಧರ್ ಹತ್ತಿರ ಬಂದು ಏನು ಸಮಾಚಾರ ಎಂದಾಗ, ಕ್ಯಾಮೆರ ನಿಲ್ಲುತ್ತದೆ, ಅಂದರೆ, ಜೀವದ ಗೆಳೆಯ ಆತ್ಮ ವಿಶ್ವಾಸ ತುಂಬುತ್ತಾನೆ ಮತ್ತು ತನ್ನ ಎಲ್ಲಾ ಕಷ್ಟಗಳಿಗೆ ಸ್ಪಂಧಿಸುತ್ತಾನೆ ಎನ್ನುವ ಭರವಸೆ ಮೂಡಿದಾಗ ತೂಗಾಡುವ ಮನಸ್ಸು ಒಂದು ತಹಬದಿಗೆ ನಿಲ್ಲುತ್ತದೆ ಎನ್ನುವ ಮಾತನ್ನು ಈ ದೃಶ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ.

ನಾಯಕಿಯ ಪರಿಸ್ಥಿತಿಗೆ ಪರಿಹಾರ ಎನ್ನುವಂತೆ ತಾನೇ ಮದುವೆ ,ಮಾಡಿಕೊಳ್ಳುವ ಶ್ರೀಧರ್, ತನ್ನ ತಾಯಿಗೆ ಹೇಳುವ ಮಾತು "ಯಾವತ್ತೂ ಯಾವ ಕಾರಣಕ್ಕೂ ಇವಳ ಮನಸ್ಸನ್ನು ನೋಯುವ ಮಾತನ್ನು ಆಡಬೇಡ" ಎಂದಾಗ ತಾಯಿ ಹೇಳುವ ಅದ್ಭುತ ಮಾತು "ಮಗ ಇಷ್ಟ ಪಟ್ಟು ಮದುವೆ ಮಾಡಿಕೊಂಡ ಹೆಣ್ಣನ್ನು ನಿಕೃಷ್ಟವಾಗಿ ಕಾಣುವಷ್ಟು ಕೆಟ್ಟ ತಾಯಿಯಲ್ಲ" ಎನ್ನುತ್ತಾಳೆ.

ಇದಕ್ಕೆ ವಿವರಣೆಯೇ ಬೇಡವೇ ಬೇಡ.

ಕರುನಾಡಿನ ರಮ್ಯತಾಣ ಶ್ರೀಧರ ತೀರ್ಥ ಇರುವ ವರದಹಳ್ಳಿ. ಇಲ್ಲಿ ಚಿತ್ರೀಕರಣ ಮಾಡಿದ್ದಾರೆ ಒಂದು ಅದ್ಭುತ ಹಾಡನ್ನು "ಹಿಂದೂಸ್ಥಾನವು ಎಂದೂ ಮರೆಯದ" ಜಯಚಂದ್ರನ್ ಹಾಡಿರುವ ರೀತಿ, ಆ ಸಾಹಿತ್ಯ ಅದ್ಭುತ. ಶ್ರೀಧರ್ ಈ ಹಾಡಿಗೆ ಉತ್ತಮ ಅಭಿನಯ ನೀಡಿದ್ದಾರೆ. ಮುಂದೆ ಇದೆ ಹಾಡನ್ನು ಬಿ ಆರ್ ಛಾಯ ಹಾಡಿರುವ ರೀತಿಯೂ ಸೊಗಸಾಗಿದೆ.

ಶ್ರೀಧರ್ ಪಾತ್ರ ಮರಣಹೊಂದಿದಾಗ, ಮುಗ್ಧ ಮಗು ಸ್ಮಶಾನದಲ್ಲಿ ಏನೂ ಮಾತಾಡದೆ ಅಥವಾ ಅಳಲು  ಗೊತ್ತಾಗದೆ ನಿಂತಿರುತ್ತದೆ. ಇಲ್ಲಿ ಯಾವುದೇ ಭಾವನಾತ್ಮಕ ಸಂಭಾಷಣೆ ಇರುವುದಿಲ್ಲ, ನಿಶ್ಯಬ್ಧ... ಅತ್ಯುತ್ತಮ ದೃಶ್ಯ ಇಡಿ ಚಿತ್ರದಲ್ಲಿ.

ಕಡೆಯ ಕೆಲ ದೃಶ್ಯದಲ್ಲಿ ರಾಮಕೃಷ್ಣ ತನ್ನ ತಪ್ಪಿನ ಅರಿವಾಗಿ ನಾಯಕಿಯನ್ನು ನೋಡಲು ಬಂದಾಗ, ನಾಯಕಿಯ ಮೊಗದಲ್ಲಿ ತನ್ನ ಬಾಳನ್ನು ನಾಶ ಮಾಡಿದ ಅವನನ್ನು ನೋಡಿದ ತಕ್ಷಣ ಕೋಪ ಆದರೆ ಕೆಲವು ಕ್ಷಣಗಳಲ್ಲಿ ಶಾಂತ ಸ್ವಭಾವದ ಅಭಿನಯ ಸೂಪರ್ ಸೂಪರ್ ಎನ್ನಿಸುತ್ತದೆ.

ಶ್ರೀಧರ್ ಬರೆದಿಟ್ಟ ಪತ್ರ ಮತ್ತು ಉಯಿಲನ್ನು ಓದುವ ರಾಮಕೃಷ್ಣ ಕೂತಿರುವ ಶರಾವತಿ ಹಿನ್ನೀರಿನ ದಡದಲ್ಲಿ ದೃಶ್ಯವನ್ನು ಪದೇ ಪದೇ ಹಿಂದಕ್ಕೆ ಮುಂದಕ್ಕೆ ಜೂಮ್ ಮಾಡುತ್ತಲೇ ಇರುತ್ತದೆ ದೃಶ್ಯ ಸಂಯೋಜನೆ, ನಾಯಕ ತನ್ನ ಗತ ಜೀವನದಲ್ಲಿ ಮಾಡಿದ ತಪ್ಪನ್ನು ತಿದ್ದಿಕೊಳ್ಳಬೇಕು ಮತ್ತು ಅದಕ್ಕೆ ಒಂದು ಅವಕಾಶವಿದೆ, ಮತ್ತೆ ತನ್ನ ತಪ್ಪನ್ನು ಸರಿ ಪಡಿಸಿಕೊಳ್ಳಲಿಕ್ಕೆ ಸಾಧ್ಯವಿದೆ ಎನ್ನುವ ಅಭಿಪ್ರಾಯ ಮೂಡಿಬರಲು ಸಹಾಯ ಮಾಡುತ್ತದೆ.


ಪುಟ್ಟಣ್ಣ ಕಣಗಾಲ್ ಮತ್ತೆ ತಮ್ಮ ಜಾದೂವನ್ನು ತೋರಿಸಿದ ಚಿತ್ರ ಇದು. ಸುಂದರ ಕಥೆಯನ್ನು ಅಷ್ಟೇ ಅಚ್ಚುಕಟ್ಟಾಗಿ ನಿರೂಪಣೆ ಮಾಡಿರುವ ರೀತಿಗೆ ಮನಸ್ಸಲ್ಲೇ ನಮನ ಸಲ್ಲಿಸುತ್ತೇನೆ. 

2 comments:

  1. ಎಂಥ ವಿಮರ್ಶೆ, ಪ್ರತಿ ಅಂಶವನ್ನು ಗಮನದಲ್ಲಿಟ್ಟುಕೊಂಡು ಬಹಳ ಅಚ್ಚುಕಟ್ಟಾಗಿ ಬರೆದಿದ್ದೀರಿ. ಒಂದು ಅದ್ಭುತ ಕಥೆ, ಸಂಗೀತ, ಅಭಿನಯ ಮತ್ತೆ ಅತ್ಯದ್ಭುತವಾದ ನಿರ್ದೇಶನಕ್ಕೆ ಸರಿಸಾಟಿಯಾದ ವಿಮರ್ಶೆ. ಭೇಷ್ ಅನ್ನುವ ಆಸೆ ಆಗುತ್ತೆ :)

    ReplyDelete
  2. ನಿಜವಾಗಲು ಹೇಳ್ತೀನಿ ಶ್ರೀಕಾಂತ್ ಪುಟ್ಟಣ್ಣ ಕಣಗಾಲ್ ಅವರ ಚಿತ್ರ ವಿಮರ್ಶೆಯನ್ನು ಇಷ್ಟು ಆಳವಾಗಿ ವಿಮರ್ಶೆ ಮಾಡಿರಲಿಲ್ಲ . ಚಿತ್ರದಲ್ಲಿನ ಪ್ರತೀ ಚಿಕ್ಕ ಅಂಶಗಳನ್ನು ಗಮನಿಸಿ ಅದಕ್ಕೆ ಲೋಪವಾಗದಂತೆ ವಿಮರ್ಷೆ ಮಾಡುವುದು ಸಾಮಾನ್ಯ ವಿಚಾರವಲ್ಲ. ಈ ಚಿತ್ರದ ಕಥೆಯೇ ಬಹಳ ಸೂಕ್ಷ್ಮವಾಗಿದೆ ಪುಟ್ಟಣ್ಣ ಕಣಗಾಲ್ ಅವರಂತಹ ನಿರ್ದೇಶಕರಿಗೆ ಮಾತ್ರಾ ಇಂತಹ ಸೂಕ್ಷ್ಮ ಚಿತ್ರಕಥೆಗಳನ್ನು ಸಮರ್ಥವಾಗಿ ನಿಭಾಯಿಸಲು ಗೊತ್ತಿತ್ತು, ಪ್ರಿತಿಯ ಬಲೆಯಲ್ಲಿ ಬಿದ್ದು ಪ್ರಿಯತಮ ಕೈ ಕೊಟ್ಟರೂ ಅವನ ಹಂಬಲಿಕೆಯಲ್ಲಿ ಬಳಲುವ ಹೆಣ್ಣಾಗಿ ಪದ್ಮವಾಸಂತಿ, ಪ್ರಿಯತಮನಾಗಿ ಪಾತ್ರನಿರ್ವಹಣೆ ಮಾಡಿದ ರಾಮಕೃಷ್ಣ , ಇವರಿಬ್ಬರ ನಡುವೆ ಪ್ರೇಮ ವಂಚಿತ ಒಬ್ಬ ಹೆಣ್ಣಿಗೆ ಸಮಾಜದಲ್ಲಿ ಕೆಟ್ಟ ಹೆಸರು ಬರದಂತೆ ಅವಳನ್ನು ಮದುವೆಯಾಗಿ ಅವಳ ಪ್ರೀತಿಯ ದೇಗುಲದ ಪಾವಿತ್ರತೆ ಹಾಳಾಗದಂತೆ ಕಾಪಾಡುವ ಪಾತ್ರವಾಗಿ ಅದ್ಭುತ ನಟನೆ ನೀಡಿದ ಶ್ರೀಧರ್ , ೧೯೮೪ ರಲ್ಲಿ ಬಿಡುಗಡೆಯಾದ ಈ ಚಿತ್ರ ಪ್ರೇಕ್ಷಕರನ್ನು ಹೊಸ ನಿಟ್ಟಿನಲ್ಲಿ ಹೀಗೂ ಯೋಚಿಸಬಹುದು ಎಮಬಂತೆ ಮಾಡಿತ್ತು. ಚಿತ್ರದಲ್ಲಿ ಎಲ್ಲಿಯೂ ಕುಟುಂಬದೊಡನೆ ಬಂದ ಪ್ರೇಕ್ಷಕರಿಗೆ ಮುಜುಗರ ಆಗದಂತೆ ಒಂದು ದೃಶ್ಯ ಕಾವ್ಯದ ಉಡುಗೊರೆ ನೀಡಲಾಗಿದೆ . ಈ ಚಿತ್ರಕ್ಕೆ ಮೂರು ಕರ್ನಾಟಕ ರಾಜ್ಯದ ಚಲನಚಿತ್ರ ಪ್ರಶಸ್ತಿಗಳು ಅರಸಿ ಬಂದವು , ಉತ್ತಮ ಚಿತ್ರಕಥೆ, ಉತ್ತಮ ಛಾಯಾಗ್ರಹಣ ಹಾಗೂ ಉತ್ತಮ ಸಂಕಲನ ವಿಚಾಗದಲ್ಲಿ ಈ ಚಿತ್ರ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಚಿತ್ರ ಬಿಡುಗಡೆಗೆ ಮುನ್ನ ಈ ಚಿತ್ರದ ಹಾಡುಗಳನ್ನು ಕೇಳಿದರೆ ಅಷ್ಟು ಇಷ್ಟಾ ಆಗದಿದ್ದರೂ ಚಿತ್ರದಲ್ಲಿ ದೃಶ್ಯಗಳೊಡನೆ ನೋಡುತ್ತಾ ಈ ಹಾಡುಗಳನ್ನು ಕೇಳಿದರೆ ಹಾಡುಗಳಿಗೆ ಇಂತಹ ಅದ್ಭುತವಾದ ಶಕ್ತಿ ಇದೆಯಾ ಅನ್ನಿಸುತ್ತದೆ . ಮೊದಲು ಈ ಚಿತ್ರ ನೋಡಿದಾಗ ಇಷ್ಟಾ ಆಗಿರಲಿಲ್ಲ ಏಕೆಂದರೆ ನಾನಾಗ ಅಷ್ಟು ಸಮಾಜವನ್ನು ಅರ್ಥ ಮಾಡಿಕೊಂಡವನಾಗಿರಲಿಲ್ಲ , ಮತ್ತೊಮ್ಮೆ ನೋಡಿದಾಗ ಸಾಕಷ್ಟು ತಿಳುವಳಿಕೆ ಬಂದಿತ್ತು, ಚಿತ್ರದ ನಿಜವಾದ ಹೂರಣ ಸಿಕ್ಕಿತ್ತು . ನಿಮ್ಮ ನಿರೂಪಣಾ ಶೈಲಿ ನನಗೆ ಒಳ್ಳೆ ಅನುಭವ ನೀಡುತ್ತದೆ ಶ್ರೀಕಾಂತ್, ಜೊತೆಗೆ ನಿಮ್ಮ ವಿಮರ್ಶೆಯನ್ನು ಓದಿ ಚಿತ್ರಗಳನ್ನು ಮತ್ತೊಮ್ಮೆ ನೋಡುವ ತುಡಿತ ಮನದಲ್ಲಿ ಮೂಡುತ್ತದೆ . ನಿಮಗೆ ಈಗಾಗಲೇ ಬಹಳಷ್ಟು ಸಾರಿ ಹೇಳಿದ್ದೇನೆ ಮತ್ತೊಮ್ಮೆ ಹೇಳುತ್ತೇನೆ ಬಹುಷಃ ಪುಟ್ಟಣ್ಣ ಕಣಗಾಲ್ ಬದುಕಿದ್ದರೆ ನಿಮ್ಮನ್ನು ಕರೆಸಿಕೊಂಡು ಖಂಡಿತಾ ನಿಮ್ಮನ್ನು ಕೊಂಡಾಡುತ್ತಿದ್ದರು . ಈಗಲೂ ಕಾಲ ಮಿಂಚಿಲ್ಲ ನಿಮ್ಮ ಎಲ್ಲಾ ಚಿತ್ರವಿಮರ್ಶೆಯ ಬರಹಗಳನ್ನು ಪುಸ್ತಕ ಮಾಡಿ ಅದು ಖಂಡಿತಾ ಕನ್ನಡಿಗರಿಗೆ ಒಳ್ಳೆಯ ಉಡುಗೊರೆ ಆಗುತ್ತದೆ . ಜೈ ಹೋ ಶ್ರೀಕಾಂತ್

    ReplyDelete