Saturday, October 3, 2015

ಮನದ ಸರೋವರವನ್ನು ಕೆದಕುವ ಮಾನಸ ಸರೋವರ (1982)

ಈ ಸಿನಿಮಾ ತುಂಬಾ ಕಾಡಿತ್ತು ಆ ಕಾಲದಲ್ಲಿಯೇ. ಮೊದಲ ಬಾರಿಗೆ ಈ ಚಿತ್ರವನ್ನು ದೂರದರ್ಶನದಲ್ಲಿ ನೋಡಿದಾಗ ನನಗೆ ಸುಮಾರು ಹದಿನೈದು ವರ್ಷಗಳು ಇರಬಹುದು. 

ಆ ವಯಸ್ಸು ಒಂದು ರೀತಿಯ ಬದಲಾವಣೆಯ ಪರ್ವವಾಗಿರುತ್ತದೆ. ಮೊದಲಿಂದಲೂ ಸಿನಿಮಾ ನೋಡುವ ಮತ್ತು ಅದರ ಒಳಗೆ ಕೂತು ನೋಡುವ ಒಂದು ವಿಚಿತ್ರ ರೋಗವಿದ್ದದರಿಂದ ಬಹುಶಃ ಈ ಚಿತ್ರ ಇನ್ನಷ್ಟು ಕಾಡಿತ್ತು ಎನ್ನಿಸುತ್ತದೆ.  

ಅದಾದ ಮೇಲೆ ಹಲವಾರು ಬಾರಿ ಈ ಚಿತ್ರವನ್ನು ನೋಡಿದ್ದೇನೆ. ಪ್ರತಿಬಾರಿಯೂ ನನಗೆ ಮೊಟ್ಟಮೊದಲು ನೋಡಿದ ಅನುಭವ ಹೇಗೆ ಇರುತ್ತದೆಯೋ ಅದೇ ಅನುಭವ. ಒಂದೂ ಚೂರು ಬದಲಾವಣೆ ಇಲ್ಲ. 
ಹಲವಾರು ಚಿತ್ರಗಳು ಪ್ರತಿ ಬಾರಿ ನೋಡಿದಾಗಲೂ ಹಲವಾರು ರೀತಿಯಲ್ಲಿ ಕೈಗೆ ಎಟುಕುತ್ತದೆ, ಆದರೆ ಈ ಚಿತ್ರ ಪ್ರತಿ ಸಾರಿ ನೋಡಿದ ಮೇಲೆ ಇನ್ನಷ್ಟು ಆಳಕ್ಕೆ ಇಳಿಯುತ್ತದೆ ಮತ್ತು ಅದೇ ಮೊದಲ ಅನುಭವವನ್ನು ಕಣ್ಣ ಮುಂದೆ ತಂದಿಡುತ್ತದೆ. 

ಚಿತ್ರದ ಆರಂಭ ನನಗೆ ಇನ್ನೂ ಕಾಡುತ್ತದೆ.  ಮನಸ್ಸಿನ ಬಗ್ಗೆ ಒಂದೆರಡು ವಾಕ್ಯಗಳು ಮನಸ್ಸಿಗೆ ತಾಕಿದರೆ, ಹೂವಿನ ಜೊತೆಯಲ್ಲಿ ಹೆಸರನ್ನು ತೋರಿಸುತ್ತಾ, ಪ್ರತಿ ಬಾರಿಯೂ ಅಲೆಗಳು ಬಂದು ಆ ಅಕ್ಷರಗಳನ್ನು ಅಳಿಸಿಹಾಕುವಂತಹದು, ನಮ್ಮ ಜೀವನದಲ್ಲಿ ಎಷ್ಟೋ ಮಂದಿ ಬರುತ್ತಾರೆ, ನೆನಪು ಉಳಿಸುತ್ತಾರೆ, ಅಳಿಸುತ್ತಾರೆ, ಆದರೆ ಕಾಲ ಮುಂದೆ ಸಾಗುತ್ತಲೇ ಇರುತ್ತವೆ, ಅಲೆಗಳು ಬರುತ್ತಲೇ ಇರುತ್ತವೆ ಎಂಬ ಸೂಕ್ಷ್ಮ ಸಂದೇಶ ಹೊತ್ತು ತರುತ್ತದೆ. 

ಹುಣ್ಣಿಮೆಯ ಚಂದ್ರ, ಆವ ಚೆಲ್ಲುವ ಬೆಳದಿಂಗಳು, ಪ್ರೀತಿ ಪ್ರೇಮ ಪ್ರಣಯ ಇವುಗಳ ಉಗಮಸ್ಥಾನ, ಚಂದ್ರನ ಕಿರಣಗಳು ಮನಸ್ಸಿನ ಮೇಲೆ ಬಲು ಪ್ರಭಾವ ಬೀರುತ್ತದೆ. ಕಾವ್ಯಮಯವಾದ ಮನಸ್ಸಿನ  ನಾಯಕ ಆ ಬೆಳದಿಂಗಳ ಚಂದ್ರನ ಬೆಳಕಲ್ಲಿ ಕೂತು, ತೂಗಾಡುವ ಮನಸ್ಸನ್ನು ಪ್ರತಿಬಿಂಬಿಸುವ, ಉಯ್ಯಾಲೆಯಲ್ಲಿ ಜೀಕುತ್ತಾ ಕೂತಿದ್ದಾಗ ಏನೋ ಒಂದು ಅದ್ಭುತ ವಿಷಯ ಹೊಳೆಯುತ್ತದೆ. 

ಅದನ್ನು ಅಷ್ಟೇ ಪ್ರೀತಿಯಿಂದ ತನ್ನ ಮಡದಿಗೆ ಹೇಳಬಂದಾಗ ಆಕೆ ಭಾವನಾತ್ಮಕವಾಗಿ ಸ್ಪಂದಿಸದೇ, ವ್ಯಾವಹಾರಿಕ ಜಗತ್ತಿನ ಸೂತ್ರದಲ್ಲಿ ಬಂಧಿಯಾಗಿ, ತನಗೆ ಲಾಭ ತರದ ಈ ಕಾವ್ಯಮಯ ಭಾಷೆ ಅನಗತ್ಯ ಎನ್ನುವ ಮಾತುಗಳನ್ನು ಹೇಳುತ್ತಾಳೆ. 

ಅಲ್ಲಿಂದ ಶುರು ನಾಯಕನ ಮನಸ್ಸು ಅವನ ಜೊತೆ ಮಾತಾಡಲು ಅನುವಾಗುತ್ತದೆ. ಅದ್ಭುತ ದೃಶ್ಯ ಕಲ್ಪನೆ. ನಮ್ಮ ಮನಸ್ಸು ನಮಗೆ ಮಾರ್ಗದರ್ಶಿ ಎನ್ನುವ ಮಾತು ಎಷ್ಟು ನಿಜ. 

ಮನಸ್ಸು ಒಂದು ಕಡೆಯಲ್ಲಿ ಸಹಾನುಭೂತಿ ತೋರಿದರೆ, ತನ್ನ ಮನದಲ್ಲಿ ಕೂತ ಮಡದಿಯಿಂದ ತಿರಸ್ಕಾರ ಸಾಕು ಎನ್ನಿಸಿ ಮನೆ ಬಿಟ್ಟು ಹೊರಡುತ್ತಾನೆ. ಆಗ ಇನ್ನೊಂದು ಅದ್ಭುತ ಜಗತ್ತು ನಾಯಕನ ಮನಸ್ಸಿಗೆ ಸಿಗುತ್ತದೆ. 

ಜಿ ಎಸ್ ಶಿವರುದ್ರಪ್ಪ ಅವರ ಅದ್ಭುತ ಕವಿತೆ "ವೇದಾಂತಿ ಹೇಳಿದನು" ಪಿ ಬಿ ಶ್ರೀನಿವಾಸ್ ಅವರ ಸಿರಿಕಂಠದಲ್ಲಿ ಅಷ್ಟೇ ಅದ್ಭುತವಾಗಿ ಮೂಡಿ ಬಂದಿದೆ. ಕಾಡಿನಲ್ಲಿ ಕಾರಿನಲ್ಲಿ ಹೋಗುತ್ತಾ ಜೋರಾಗಿ ಈ ಹಾಡನ್ನು ಕೇಳಿದರೆ ಸಿಗುವ ಆನಂದ ಹೇಳಲಿಕ್ಕೆ ಆಗೋಲ್ಲ (ನಾ ಹಲವಾರು ಬಾರಿ ಒಬ್ಬನೇ ಪಯಣ ಮಾಡುವಾಗ.. ಈ ರೀತಿಯ ಹುಚ್ಚು ಸಾಹಸಕ್ಕೆ ಕೈ ಹಾಕುವುದು ಉಂಟು) 
ಈ ಹಾಡಿನಲ್ಲಿರುವ ಸತ್ವವನ್ನು ವಿಜಯಭಾಸ್ಕರ್ ಸಂಗೀತದಲ್ಲಿ ಅದ್ದಿ ಅದ್ದಿ ತೆಗೆದಿದ್ದಾರೆ. ಎಷ್ಟು ಬಾರಿ ಕೇಳಿದರೂ ಬೋರ್ ಅನ್ನಿಸಿದ ಅನೇಕ ಹಾಡುಗಳಲ್ಲಿ ಇದು ಒಂದು. ಈ ಹಾಡನ್ನು ಚಿತ್ರೀಕರಿಸಿದ ರೀತಿಯೂ ಸುಂದರ. 

ಒಂದು ರಕ್ಷಾ ಬೇಲಿ ಇರುವ ಮನೆಯಿಂದ ಹೊರಡುವ ನಾಯಕನ ಮನೆಯ ಎದುರು ದಾರಿಗಳು ಕವಲಾಗಿ ಎರಡಾಗುತ್ತವೆ. ನಾಯಕನ ಬಾಳಿನ ಪಥದಲ್ಲೂ ಇಬ್ಬಗೆಯ ಹಾದಿ ಎದುರಿಗೆ ಇದೆ ಎನ್ನುವ ಸೂಚ್ಯ ಅದು. 
ಅಲ್ಲಿಂದ ಹೊರಡುವ ಅವನ ಕಾರು, ತಂಪಾದ ಹಸಿರು ಕಾಡಿನ ಮಧ್ಯೆ ಸಾಗುವುದು, ಹಿನ್ನೆಲೆಯಲ್ಲಿ ಹಾಡು ಬರುವುದು ವಾಹ್ ಎನ್ನಿಸುತ್ತದೆ. ಎಂಥಹ ಸಮಸ್ಯೆಗೂ ಪ್ರಕೃತಿಯೇ ಅದ್ಭುತ ವೈದ್ಯ ಎನ್ನುವುದರ ಸುಂದರ ನಿರೂಪಣೆಯ ಭಾವ ಈ ಹಾಡಿನಲ್ಲಿ ಇದೆ. ಬೇಲಿಯಿರುವ ಮನೆಯಿಂದ, ವಿಹಂಗಮ ಪ್ರಕೃತಿಯ ಮಧ್ಯೆ ಯಾವುದೇ ಬಂಧನವಿರದ ಮುಕ್ತವಾಗಿರುವ ಮನೆಗೆ ಬರುತ್ತಾನೆ. ಈ ಹಾಡು ನೋಡಬೇಕು ಕೇಳಬೇಕು ಆಗಲೇ ಅದರ ಸತ್ವ ಅರಿವಾಗುವುದು. 

ಮಿತ್ರವೃಂದ ಲಾಂಛನದಲ್ಲಿ ತಯಾರಾದ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ನಿರ್ವಹಣೆ ಮತ್ತು ನಿರೂಪಣೆ ಪುಟ್ಟಣ್ಣ ಕಣಗಾಲ್ ಅವರದ್ದು. ತನ್ನ ಸಾಧನೆ ಏನೂ ಅಲ್ಲ, ಅದಕ್ಕೆಲ್ಲ ಕಾರಣ ಜಗನ್ಮಾತೆ ಎನ್ನುವ ತತ್ವವನ್ನು ದಿಗ್ದರ್ಶನ - ಜಗನ್ಮಾತೆ ಎಂದು ತೋರುವ ಮೂಲಕ, ತಾನು ಯಶಸ್ಸಿನ ಶಿಖರದಲ್ಲಿದ್ದರೂ ಅದಕ್ಕೆ ಕಾರಣ ಕಾಣದ ಆ ಮಹಾನ್ ಶಕ್ತಿ ಎಂಬ ಅರಿವು ಮೂಡಿಸುತ್ತಾರೆ. 

ಮೂರು ಮಂದಿ ಮಿತ್ರರ ಜೊತೆಗೂಡಿ (ವರ್ಗಿಸ್, ಕಮಲಾಕರ್, ಗೀತ ಶ್ರೀನಾಥ್) ನಿರ್ಮಿಸಿದ ಚಿತ್ರವಿದು. ಚುರುಕಾದ ಸಂಭಾಷಣೆ ಪುಟ್ಟಣ್ಣ ಅವರ ಎಲ್ಲಾ ಚಿತ್ರಗಳ ಆಸ್ತಿ, ಈ ಚಿತ್ರದಲ್ಲಿ ಆ ಹೊಣೆ ಹೊತ್ತವರು ಟಿ ಎನ್ ಸೀತಾರಾಮ್. ಪುಟ್ಟಣ್ಣ ಅವರ ಅನೇಕ ಚಿತ್ರಗಳಿಗೆ ಛಾಯಾಗ್ರಾಹಕರಾಗಿದ್ದ ಬಿ ಎಸ್ ಬಸವರಾಜ್ ಮತ್ತೊಮ್ಮೆ ಪುಟ್ಟಣ್ಣ ಅವರ ಭಾವಗಳಿಗೆ ತಕ್ಕಂತೆ ದೃಶ್ಯಗಳನ್ನು ಚಿತ್ರೀಕರಿಸಲು ಜೊತೆಯಾಗಿದ್ದರು.  

ಒಂದು ಅಡಿಗೆ ಸಿದ್ಧಮಾಡುವಾಗ, ಅಥವಾ ಯಾವುದೇ ಕೆಲಸ ಮಾಡುವಾಗ, ಅದರ ಬಗ್ಗೆ ಪುಟ್ಟ ಪುಟ್ಟ ವಿವರಗಳು, ವಿಧಾನಗಳು ಇವೆಲ್ಲಾ ಸರಿಯಾಗಿ ಸಿಕ್ಕಿ, ಅದನ್ನು ಹೇಳಿಕೊಡುವ ಒಬ್ಬರು ಜೊತೆಗಿದ್ದರೆ ಪವಾಡ ಸೃಷ್ಟಿಸಬಹುದು ಎನ್ನುತ್ತದೆ ಮಾತು. ಅದನ್ನು ಈ ಚಿತ್ರದಲ್ಲಿ ನೋಡಬಹುದು. ಪ್ರತಿಯೊಬ್ಬ ಕಲಾವಿದರು ಪಾತ್ರಗಳಿಗೆ ಎಷ್ಟು ಬೇಕು ಅಷ್ಟೇ ಅಭಿನಯ ನೀಡಿದ್ದಾರೆ ಅಥವಾ ಪಾತ್ರ ಬೇಡುವಷ್ಟು ಅಭಿನಯ ನೀಡಿದ್ದಾರೆ. 

ಅಡಿಗೆ ಕೆಲಸಮಾಡಿಕೊಂಡು ಮನೆ ನೋಡಿಕೊಳ್ಳುವ ಪಾಂಡು ಅಂಕಲ್ ಪಾತ್ರ, ನಾಯಕನ ತೋಟವನ್ನು ತಮ್ಮ ತಂಗಿಯನ್ನು ಮುಂದೆ ಇಟ್ಟುಕೊಂಡು ಕಬಳಿಸಲು ಹೊಂಚು ಹೂಡುವ ಲಂಬಾಣಿ ಹುಡುಗರ ಪಾತ್ರ, ಲಂಬಾಣಿ ಹುಡುಗಿಯಾಗಿ ಅಭಿನಯಿಸಿರುವ ವೈಶಾಲಿ ಕಾಸರವಳ್ಳಿ, ನಾಯಕಿಯ ತಂದೆಯಾಗಿ ಬರುವ ಜಿ ವಿ ಶಿವಾನಂದ್.. ಹೀಗೆ ಎಲ್ಲರಲ್ಲಿಯೂ ತಮಗೆ ಬೇಕಾದಷ್ಟೇ ಅಭಿನಯ ಪಡೆಯುವಲ್ಲಿ ಯಶಸ್ವೀ ಆಗಿದ್ದಾರೆ ಪುಟ್ಟಣ್ಣ ಕಣಗಾಲ್. 

"ಹಾಡು ಹಳೆಯದಾದರೇನು" ಮತ್ತೊಮ್ಮೆ ಜಿ ಎಸ್ ಶಿವರುದ್ರಪ್ಪ ಅವರ ಕವಿತೆಯನ್ನು ಸಂಗೀತದಲ್ಲಿ ಅಳವಡಿಸಿರುವುದು ಇಷ್ಟವಾಗುತ್ತದೆ. ವಾಣಿ ಜಯರಾಂ ಭಾವ ತುಂಬಿ ಹಾಡಿದ್ದಾರೆ, ಈ ಹಾಡನ್ನು ಚಿತ್ರಿಸಿರುವ ರೀತಿ ಇಷ್ಟವಾಗುತ್ತದೆ. ಹಸಿರಿನ ಮಧ್ಯೆ ಕಂಗೊಳಿಸುವ ಹಿತ ಮಿತ ಬೆಳಕಿನಲ್ಲಿ ಸೂಪರ್ ಎನ್ನಿಸುತ್ತದೆ. 

ನಾಯಕಿಗೆ ಚಿಕಿತ್ಸೆ ನೀಡುವಲ್ಲಿ ಬೇಕಾದ ತಾಳ್ಮೆ, ಸಂಯಮ, ಹಿತ ಮಿತ ನುಡಿಗಳು, ಮಗುವನ್ನು ಪಾಲಿಸುವ ಅಮ್ಮನಂತಹ ಪಾತ್ರದಲ್ಲಿ, ಕೆಲವೊಮ್ಮೆ ಮುಗ್ಧ ಮಗುವೆ ಆಗುವ ಪಾತ್ರದಲ್ಲಿ ಶ್ರೀನಾಥ್ ಸ್ಮರಣೀಯ ಅಭಿನಯ ನೀಡಿದ್ದಾರೆ. ಮಾನಸಿಕ ರೋಗತಜ್ಞನ ಪಾತ್ರದಲ್ಲಿ ಅವರ ಅಭಿನಯ ಅದ್ಭುತ. ಆ ಪಾತ್ರಕ್ಕೆ ಬೇಕಾದ ಆಂಗೀಕ ಅಭಿನಯ, ವೇಷ ಭೂಷಣ, ತಾನು ಸರಿ ಎನ್ನುತ್ತಾ ಮಾತಾಡುವ ಶೈಲಿ ಬಹುಕಾಲ ನೆನಪಲ್ಲಿ ಉಳಿಯುತ್ತದೆ. ನಿರ್ದೇಶಕರ ಅಣತಿಯಂತೆ ನಟಿಸಿರುವ ಈ ಪಾತ್ರ ಅದ್ಭುತವಾಗಿ ಮೂಡಿ ಬಂದಿದೆ. 

ಕುಂಬಾರ ಒಂದು ಮಣ್ಣಿನ ಮುದ್ದೆಯನ್ನು ತಿರುಗುವ ಚಕ್ರದಮೇಲೆ ಹಾಕಿ, ಆ ಮಣ್ಣಿಗೆ ಸುಂದರ ರೂಪವನ್ನು ಕೊಡುವ ಹಾಗೆ ಪದ್ಮಾವಾಸಂತಿ ಅವರಿಂದ ಅಭಿನಯ ಕಲೆಯನ್ನು ಅನಾವರಣಗೊಳಿಸಿರುವುದು ಪುಟ್ಟಣ್ಣ ಅವರ ತಾಕತ್. ಬಹುಶಃ ಪದ್ಮಾವಾಸಂತಿ ಈ ಚಿತ್ರದಲ್ಲಿ ಅಭಿನಯಿಸಿರುವಂತೆ ಇನ್ಯಾವ ಚಿತ್ರಗಳಲ್ಲೂ ಅಭಿನಯಿಸಲಿಕ್ಕೆ ಅವಕಾಶ ಸಿಗಲಿಲ್ಲ ಅಂದರೆ ತಪ್ಪಿಲ್ಲ ಎನುವ ಅಭಿಪ್ರಾಯ ನನ್ನದು. 

"ಮಾನಸ ಸರೋವರ" ಹಾಡು ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ವಾಣಿ ಜಯರಾಂ ಅವರ ಧ್ವನಿಯಲ್ಲಿ ಅತ್ಯುತ್ತಮವಾಗಿ ಮೂಡಿ ಬಂದಿದೆ. ಸುಂದರ ಪರಿಸರ, ಈ ಹಾಡು ಶುರುವಾಗುವ ಮುಂಚೆ ಬರುವ ವೇದ ಮಂತ್ರಗಳು ಈ ಹಾಡನ್ನು ನೋಡುವಾಗ ಒಂದು ಭಕ್ತಿ ಭಾವದ ಜೊತೆಯಲ್ಲಿ ಒಂದು ಮಧುರ ಭಾವ ನೀಡುತ್ತದೆ. 

"ಚಂದ ಚಂದ"  ಹಾಡು, ಅದರ ಆರಂಭಿಕ ಸಂಗೀತ ಹುಚ್ಚು ಹಿಡಿಸುತ್ತದೆ. ಜಯಚಂದ್ರನ್ "ಚಂದ ಚಂದಾ" ಎಂದು ಶುರು ಮಾಡುವ ರೀತಿ ವಾಹ್. ಸಾಹಿತ್ಯ ಎಂ ಎನ್ ವ್ಯಾಸರಾವ್ ಅವರದ್ದು, ಈ ಹಾಡು ಇಷ್ಟವಾಗಲು ಕಾರಣ, ಸರಳ ಸಂಗೀತ, ರಾಮಕೃಷ್ಣ ಅವರ ಹುಡುಗು ಹುಡುಗು ನೃತ್ಯ, ಸುಂದರ ಹೊರಾಂಗಣ. 

ಈ ಚಿತ್ರದ ಆರಂಭದಿಂದ ಈ ಹಾಡಿನ ತನಕ ಬಿರು ಬಿಸಿಲ ನಾಡು ಎಂದೇ ಖ್ಯಾತವಾದ ಬಳ್ಳಾರಿಯಲ್ಲಿ ಚಿತ್ರಿಕರಿಸಿದ್ದರೂ, ಆ ಬಿಸಿಲಿನ ತಾಪ ಎಲ್ಲೂ ಕಾಣದ ರೀತಿಯಲ್ಲಿ ಸುಂದರ ಹಸಿರಿನಲ್ಲಿ ಆಹ್ಲಾದಕರ ರೀತಿಯಲ್ಲಿ ಈ ದೃಶ್ಯದ ತನಕ ಚಿತ್ರೀಕರಿಸಿದ್ದಾರೆ. ಈ ಹಾಡು ಬರುವ ಹೊತ್ತಿಗೆ ನಾಯಕನ ಹೃದಯಕ್ಕೆ ಘಾಸಿಯಾಗಿರುತ್ತದೆ. ಮನಸ್ಸಿನ ಹಸಿರಿನ ಕಾಡು ಬೆಂಗಾಡಾಗಳು ಸಿದ್ಧವಾಗಿರುತ್ತದೆ. ಹೃದಯ ಒಡೆದು ಚೂರಾಗಿರುತ್ತದೆ. ಅಂಥಹ ಸಂದರ್ಭದಲ್ಲಿ ಬರುವ ಹಾಡು "ನೀನೆ ಸಾಕಿದ ಗಿಣಿ". 

ವಿಜಯನಾರಸಿಂಹ ಅವರ ಹೃದಯ ಹಿಂಡುವ ಸಾಹಿತ್ಯಕ್ಕೆ ಜೊತೆಯಾಗಿ ನಿಲ್ಲುತ್ತದೆ ಸಂಗೀತ ಮತ್ತು ಛಾಯಾಗ್ರಹಣ. ಕ್ಯಾಮೆರ ಚಾಲನೆ, ಕ್ಯಾಮೆರಾದ ಓಡಾಟ ಈ ಹಾಡಿನಲ್ಲಿ ನನಗೆ ಬಲು ಇಷ್ಟವಾಗುತ್ತದೆ. ಒಂದು ಹೃದಯ ಇನ್ನೊಂದು ಹೃದಯಕ್ಕೆ ಹತ್ತಿರವಾಗಬೇಕು ಎನ್ನುವಷ್ಟರಲ್ಲಿ ಮತ್ತೆ ದೂರ ಹೋಗುತ್ತದೆ. ಅದ್ಭುತವಾದ ರೀತಿಯಲ್ಲಿ ಚಿತ್ರಿಕರಣವಾಗಿದೆ. 

ನಾಯಕನ ಮನಸ್ಸು ಹೇಳುವ ಮಾತು "ಇವಳಿಗೆ ಬೇಕಾಗಿರುವುದು ಆನಂದ ಕಣೋ ಸಂತೋಷ ಅಲ್ಲ" ಅದ್ಭುತ ಮಾತುಗಳು. ಆನಂದ ನಿರಂತರದ ಭಾವ, ಸಂತೋಷ ಕೇವಲ ಕ್ಷಣ ಮಾತ್ರ ಸಿಗುವ ಸುಂದರ ಅನುಭವ. ಇಡಿ ಚಿತ್ರ ಈ ಮೇಲಿನ ಸಾಲಿನ ಮೇಲೆ ನಿಂತಿದೆ. 

ಈ ಚಿತ್ರದಲ್ಲಿ ಅಭಿನಯಿಸಿರುವ ಮೂವರು ಮೂರು ಆಧಾರ ಸ್ಥಂಭಗಳು. 

ಶ್ರೀನಾಥ್ : ಚಿತ್ರಜೀವನದಲ್ಲಿಯೇ ಒಂದು ಮೈಲಿಗಲ್ಲು, ಆನಂದನ ಪಾತ್ರದಲ್ಲಿ ಕೈಕಟ್ಟಿಕೊಂಡು ಓಡಾಡುವ, ಕನ್ನಡಕವನ್ನು ಆಗಾಗ ಸರಿಪಡಿಕೊಳ್ಳುವ ರೀತಿ, ಸಿಲ್ಲಿ ಫೆಲೋ ಸಿಲ್ಲಿ ಫೆಲ್ಲೋ ಎನ್ನುವ ಮಾತುಗಳು, ಅಪಾರ ಚಿಂತನೆ ನಡೆಸಿ ಮನಸ್ಸು ಹಣ್ಣಾಗಿದೆ ಎನ್ನುವಂಥಹ ಮನೋಜ್ಞ ಅಭಿನಯ ಈ ಪಾತ್ರದಲ್ಲಿ ಕಾಣಸಿಗುತ್ತದೆ 

ಪದ್ಮಾವಾಸಂತಿ: ವಾಸಂತಿ ಎನ್ನುವ ಮಾನಸಿಕ ಸ್ಥಿಮಿತ ಕಳೆದುಕೊಂಡ ಪಾತ್ರದಲ್ಲಿ ಅತಿರೇಕಕ್ಕೆ ಹೋಗದೆ, ನಿಭಾಯಿಸಿರುವ ರೀತಿ, ತನ್ನ ಕಾಯಿಲೆ ಗುಣವಾದಮೇಲೆ ಹಿಂದಿನ ಪಾತ್ರದ ಪರಿಣಾಮ ಕೊಂಚವೂ ಇರದ ಹಾಗೆ ಅಭಿನಯ ಇಷ್ಟವಾಗುತ್ತದೆ. 

ರಾಮಕೃಷ್ಣ : ಚಿತ್ರ ಒಂದು ನಿಟ್ಟಿನಲ್ಲಿ ಓಡುತ್ತಿದೆ ಎಂದು ಅಂದುಕೊಂಡಾಗ ಪ್ರತ್ಯಕ್ಷವಾಗುವ ಪಾತ್ರ ಚಿತ್ರದ ದಿಕ್ಕನ್ನೇ ಬದಲಿಸಿಬಿಡುತ್ತದೆ. ತನಗೆ ಅರಿವಿಲ್ಲದೆ ವಾಸಂತಿ ಪಾತ್ರವನ್ನು ಪ್ರೀತಿಸುತ್ತಾ, ಅರಿವಿಲ್ಲದೆ ನಾಯಕನ ಭಾವಗಳಿಗೆ ಬರೆ ಎಳೆಯುವ ಪಾತ್ರದಲ್ಲಿ ಲೀಲಾಜಾಲವಾಗಿ ನಟಿಸಿದ್ದಾರೆ. 

ಈ ಮೂವರು ಈ ಮೇಲಿನ ಪಾತ್ರ ಮಾಡಲಿಕ್ಕೆ ನಟಿಸಿದ್ದಾರೆಯೋ ಅನ್ನುವಷ್ಟು ಸಹಜವಾಗಿ ಮೂಡಿ ಬಂದಿದೆ. 

ಈ ಪಾತ್ರಗಳ ಮತ್ತು ಮನೋಜ್ಞ ಕಥೆಯ ಕತೃ ಪುಟ್ಟಣ್ಣ ಕಣಗಾಲ್ ಅವರಿಗೆ ಒಂದು ದೊಡ್ಡ ಸಲಾಂ ಈ ಲೇಖನದ ಮೂಲಕ!!!

1 comment:

  1. ಮಾನಸ ಸರೋವರದಲ್ಲಿ ಶ್ರೀಕಾಂತನ ವಿಚಾರ ಮಂಥನ ಅದ್ಭುತವಾಗಿ ಮೂಡಿಬಂದಿದೆ. ನಿಮ್ಮ ಸೂಕ್ಷ್ಮ ಮನಸು ಹಾಗು ಕಣ್ಣುಗಳು ಚಿತ್ರದಲ್ಲಿನ ಯಾವುದೇ ವಿಚಾರಗಳನ್ನು ಬಿಡದಂತೆ ಕಾಪಿತ್ತು ಇಲ್ಲಿ ಉಣಬಡಿಸಿ ಓದುಗರಿಗೆ ಪುಟ್ಟಣ್ಣ ಎಂಬ ಮೇರು ಪರ್ವತವನ್ನು ದರ್ಶನ ಮಾಡಿಸುತ್ತವೆ . ನಿಮ್ಮ ಅಕ್ಷರಗಳ ಮೋಡಿಗೆ ತಲೆದೂಗದೆ ಇರಲು ಸಾಧ್ಯವೇ ಇಲ್ಲ, ನನ್ನ ಪದ ಕೋಶದಲ್ಲಿ ಹೊಗಳಲು ಇರುವ ಒಅದ ಭಂಡಾರ ಖಾಲಿಯಾದ ಪ್ರಯುಕ್ತ , ನಿಮ್ಮ ಬರವಣಿಗೆಯ ಬಗ್ಗೆ ಹೊಟ್ಟೆಕಿಚ್ಚು ಪಡುತ್ತಾ ಜೊತೆಗೆ ಒಬ್ಬ ಗೆಳೆಯ ಇಷ್ಟು ಚೆನ್ನಾಗಿ ಬರೆಯುವರು ನನ್ನಜೊತೆ ಇದ್ದಾರೆ ಎಂಬ ಹೆಮ್ಮೆಯೊಂದಿಗೆ ಶುಭ ಹಾರೈಸುವೆ . ನನ್ನ ಹೊಟ್ಟೆ ಕಿಚ್ಚು ತಣ್ಣಗಾಗಲು ಪುಟ್ಟಣ್ಣನವರ ಚಿತ್ರಗಳ ಬಗ್ಗೆ ನಿಮ್ಮ ಬರಹಗಳ ಒಂದು ಪುಸ್ತಕ ಬಂದಾಗ ಮಾತ್ರ ತಣ್ಣಗಾಗುತ್ತದೆ

    ReplyDelete