Sunday, October 11, 2015

ಮನುಜನ ಭಾವಗಳನ್ನು ಮಧ್ಯೆ ಕೂರಿಸಿ ತೋರಿಸುವ ಧರಣಿ ಮಂಡಲ ಮಧ್ಯದೊಳಗೆ (1983)

ಕೆಲವೊಮ್ಮೆ ನಮ್ಮ ಮನಸ್ಸು ಗಲಿಬಿಲಿಯಾಗಿದ್ದಾಗ ಅಥವಾ ಕೆಲವೊಮ್ಮೆ ನಿರ್ಮಲವಾಗಿದ್ದಾಗ ಒಳಗಿನ ಬಿಳಿಯ ಮನ ಪಟಲದಲ್ಲಿ ವರ್ಣಮಯ ದೃಶ್ಯಗಳು ಕಾಣಸಿಗುತ್ತದೆ. ಆದರೆ ಅದು ಕ್ಷಣಿಕ ಮಾತ್ರ, ಆ ಪಟಲದಲ್ಲಿ ಮೂಡುತ್ತಿದ್ದ ದೃಶ್ಯಗಳನ್ನು ಮತ್ತೆ ಮತ್ತೆ ರೂಪಿಸಿಕೊಳ್ಳಲು ಬಲು ಕಷ್ಟ.

ಅಳತೆಗೂ ಮೀರಿದ ಕೆಲವು ಭಾವನಾತ್ಮಕ ದೃಶ್ಯಗಳು ಹಾಗೆ ಬಂದು ಹೋಗುವುದು ಉಂಟು. ಅಂಥಹ ಸಹಜವಾದ, ಆದರೆ ಈ ವ್ಯಾವಹಾರಿಕ ಪ್ರಪಂಚದಲ್ಲಿ ನಾನು, ನನ್ನದು, ನನ್ನದೇ ಎನ್ನುವ ಸ್ವಾರ್ಥ ಭಾವಗಳೇ ನಮ್ಮನ್ನು ಕಪಿ ಮುಷ್ಠಿಯಲ್ಲಿ ಇರಿಸಿಕೊಂಡು, ತನ್ನದೇ ರಕ್ತ ಹಂಚಿಕೊಂಡು ಹುಟ್ಟಿದ ಮಾಂಸದ ಮುದ್ದೆಯನ್ನು ಮೂಲೆ ಗುಂಪು ಮಾಡುವ ಶಕ್ತಿ ಹೊಂದಿಬಿಡುತ್ತದೆ.

ಈ ರೀತಿಯ ಒಂದು ಕಥೆಯನ್ನು ಸಿನಿಮಾ ತೆರೆಗೆ ಒಪ್ಪುವ ರೀತಿಯಲ್ಲಿ ಅಳವಡಿಸಿಕೊಳ್ಳುವುದು ಕಷ್ಟ ಸಾಧ್ಯದ ಕೆಲಸ. ಕಥೆ, ಚಿತ್ರಕಥೆ ಬರೆದು, ನಿರೂಪನೆಯನ್ನು ತಾಯಿ ಜಗನ್ಮಾತೆಯ ಅಭಯ ಹಸ್ತದ ವಾರದಲ್ಲಿ ಮೂಡಿಸಿರುವ ಚಿತ್ರವೇ "ಧರಣಿ ಮಂಡಲ ಮಧ್ಯದೊಳಗೆ" 

ಇದೊಂದು ಪುಟ್ಟಣ್ಣ ಅವರ ಎಲ್ಲಾ ಚಿತ್ರಗಳಿಗಿಂತ ಭಿನ್ನ. ಇದುವರೆಗೂ ಅವರು ತುಳಿದಿದ್ದ ದಾರಿಯಲ್ಲಿ ತುಸು ಹೊರಳಿ ಈ ಚಿತ್ರವನ್ನು ಮೂಡಿಸಿದ್ದಾರೆ. 

ಮೊದಲ ಮೊದಲಿಗೆ ಅರೆ ಏನಿದು ಹೀಗಿದೆ ಚಿತ್ರ ಎಂದು ನನಗನ್ನಿಸಿದ್ದು ಪ್ರಾಮಾಣಿಕವಾಗಿ ನಿಜ. ಆದರೆ ನೋಡುವಾಗ ಮತ್ತು ನೋಡಿದ ಕೆಲಹೊತ್ತಿನ ಮೇಲೆ, ಕೆಸರಲ್ಲಿ ಮುಳುಗುವ ಮನುಜನಂತೆ ನಿಧಾನವಾಗಿ ಈ ಚಿತ್ರದ ಒಳ ಹೂರಣ ಅರ್ಥವಾಗುತ್ತಾ ಹೋಗುತ್ತದೆ. 
ನಾಲ್ಕು ಮುಖ್ಯ ಪಾತ್ರಗಳು, ನಾಯಕ್, ದಳವಾಯಿ, ಪಾಳೆಗಾರ, ಮತ್ತು ಪುರುಷೋತ್ತಮ.   ಸಮಾಜಕ್ಕೆ ಬೇಕಾದ ನಾಲ್ಕು ಮುಖ್ಯ ಆಧಾರ ಸ್ಥಂಭಗಳು. 

ಪುರುಷೋತ್ತಮ ಎನ್ನುವ ಪಾತ್ರ ಎಂದಿಗೂ ಸೇಡು, ದ್ವೇಷಗಳ ಬತ್ತಳಿಕೆಯೊಳಗೆ ಇಳಿಯಬಾರದು, ಆದರೆ ಈ ಸಮಾಜದಲ್ಲಿ ಸೇಡಿನ ಮನೋಭಾವ ಹೊತ್ತು, ಅಲ್ಪ ಸ್ವಲ್ಪ ಹದ್ದುಬಸ್ತಿಗೆ ಬರುತ್ತಿದ್ದ ಇತರ ಮೂರು ಆಧಾರಗಳನ್ನು ತನ್ನ ಕೈಯಾರೆ ತಾನೇ ಹಾಳು ಮಾಡಿ, ತನ್ನನ್ನು ತಾನೇ ಹಳಿದುಕೊಳ್ಳುವಂಥಹ ಸ್ಥಿತಿಗೆ ಇಳಿಯಬೇಕಾಗುತ್ತದೆ. 

ಇಡಿ ಸಮಾಜವನ್ನು ಮುನ್ನಡೆಸಬೇಕಾದ ನಾಯಕ್ ಪಾತ್ರ, ಪರಿಸ್ಥಿಯ ಆಳ ತಿಳಿಯದೆ ತೆಗೆದುಕೊಳ್ಳುವ ಆತುರದ ನಿರ್ಧಾರ, ಮತ್ತು ವ್ಯಾವಹಾರಿಕ ಜ್ಞಾನವಿಲ್ಲದೇ, ವಿವೇಚನೆ ಇಲ್ಲದೆ ತೆಗೆದುಕೊಳ್ಳುವ ಕೆಲವು ತೀರ್ಮಾನಗಳು ತನ್ನನ್ನೇ ನಂಬಿಕೊಂಡು ನಿಲ್ಲುವ ತನ್ನ ಜನರಿಗೆ ಬರಿ ಬೇಡದ, ನಡೆಯದ ಆಶ್ವಾಸನೆ ಕೊಡುವಂತಹ ಪಾತ್ರವಾಗಿ ಬಿಡುತ್ತದೆ. 

ನಾಯಕ್ ತೆಗೆದುಕೊಳ್ಳುವ ನಿರ್ಧಾರವನ್ನು, ತೀರ್ಮಾನಗಳನ್ನು, ಸಲಹೆಗಳನ್ನು ಆಚರಣೆಗೆ ತರಬೇಕಾದ ಪಾಳೇಗಾರ್, ತನ್ನ ಆಸೆ ಆಮಿಷಗಳಿಗೆ, ತನ್ನ ಸ್ವಂತ ವಿಚಾರಗಳಿಗೆ, ಸೋತು, ಸಮಾಜಕ್ಕೆ ಆಘಾತ ಮಾಡುವ ಈ ಪಾತ್ರ ಕಡೆಗೆ ಕಾನೂನನ್ನು ಕೈಗೆ ತೆಗೆದುಕೊಂಡು ತಾನೂ ಬಾಳದೆ, ತನ್ನ ನಂಬಿದವರನ್ನು ಬಾಳಿಸದೆ, ಸಮಾಜಕ್ಕೆ ದೊಡ್ಡ ಆಘಾತ ನೀಡುವ ಪಾತ್ರವಾಗಿಬಿಡುತ್ತದೆ. 

ನಾಯಕ್ ಮತ್ತು ಪಾಳೇಗಾರ್ ಇಬ್ಬರಿಗೂ ಹೆಗಲು ಕೊಟ್ಟು ಸಮಾಜಕ್ಕೆ ರಕ್ಷಣೆ ನೀಡಬೇಕಾದ ದಳವಾಯಿ, ತಪ್ಪು ನಿರ್ಧಾರಗಳಿಂದ, ತನ್ನ ತೃಷೆಯನ್ನು ತಣಿಸಿಕೊಳ್ಳಲು ಅಮಾಯಕ ಪ್ರಜೆಯ ಮೇಲೆ ದಾಳಿ ಮಾಡಿ, ಕಡೆಗೆ ರಕ್ಷಣೆ ನೀಡುತ್ತೇನೆ ಎನ್ನುವ ಭರವಸೆ ನೀಡುತ್ತಾ, ತನ್ನ  ತಪ್ಪಿನ ಬಗ್ಗೆ ಪಶ್ಚಾತಾಪ ಪಟ್ಟು, ಅದನ್ನು ಸರಿಪಡಿಸಿಕೊಂಡು,  ಕೈ ಕೈ ಹಿಡಿದು ಸಾಗುವಾಗಲೇ, ನಾಯಕ್ ಮತ್ತು ಪಾಳೇಗಾರ್ ಅವರ ತಪ್ಪು ನಡೆಗಳಿಂದ ತನ್ನ ಪ್ರಾಣವನ್ನು ನೀಗಿ, ಕಡೆಗೆ ತಾನು ನೋಡಲಾಗದ ಉತ್ತಮ ಸಮಾಜವನ್ನು ತನ್ನ ಪ್ರಜೆ ನೋಡಲಿ ಎನ್ನುವ ಆಶಾವಾದದೊಡನೆ ಪ್ರಾಣ ನೀಗುತ್ತದೆ ಆ ಪಾತ್ರ. 

ಹೀಗೆ ಸಮಾಜದ ಹುಳುಕುಗಳನ್ನು ಎತ್ತಿ ತೋರಿಸಿ, ಅದನ್ನು ಸರಿಪಡಿಸಬೇಕಾದ ಕಂಬಗಳೇ ತಮ್ಮದೇ ಆದ ತಪ್ಪು ನಡೆಗಳಿಂದ ಎಡವಿ, ಮತ್ತೆ ಅದನ್ನು ಸರಿಪಡಿಸಿಕೊಳ್ಳುವ ಹಾದಿಯಲ್ಲಿದ್ದಾಗ ಮತ್ತೆ ಅದೇ ವಿಚಿತ್ರ ನಿರ್ಧಾರಗಳನ್ನು ತೆಗೆದುಕೊಂಡು ಸಮಾಜದ ಆರೋಗ್ಯವನ್ನು ಸುಧಾರಿಸದೆ ಹಪಹಪಿಗೊಳ್ಳುವ ಹಂತಕ್ಕೆ ಚಿತ್ರ ನಿಲ್ಲುತ್ತದೆ ಮತ್ತು ಇಂದಿನ ಸಮಾಜದ ಗುಣಮಟ್ಟವನ್ನು ತೋರಿಸುತ್ತದೆ. 

ಅಚಾರವೇ ಬೇರೆ ವಿಚಾರವೇ ಬೇರೆ... ಆಚಾರ ವಿಚಾರವಾಗಿ ಬದಲಾಗಬೇಕಾದರೆ ಅಥವಾ ವಿಚಾರ ಆಚಾರವಾಗಿ ಬದಲಾಗಬೇಕಾದರೆ ಬರಿ ಅಕ್ಷರಗಳ (ಅ ಮತ್ತು ವಿ) ಬದಲಾವಣೆ ಆದರೆ ಮಾತ್ರ ಸಾಲದು ಬದಲಿಗೆ ಎಲ್ಲರೂ ಯೋಚಿಸುವ ರೀತಿಯು ಬದಲಾಗಬೇಕು. ಅದೇ ಈ ಚಿತ್ರದ ಉದ್ದೇಶ ಮತ್ತು ಅಡಗಿರುವ ಸಂದೇಶ. 

ಶ್ರೀನಾಥ್, ಜೈಜಗದೀಶ್, ಚಂದ್ರಶೇಖರ್  ತಮಗೆ ವಹಿಸಿದ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಪುಂಡು ಹುಡುಗರಾಗಿ, ನಂತರ ಬದಲಾಗುವ ಹುಡುಗರಾಗಿ, ನಂತರ ಗೊಂದಲಕ್ಕೆ ಒಳಗಾಗುವ ಯುವ ಪೀಳಿಗೆಯನ್ನು ಪ್ರತಿನಿಧಿಸುವ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅದಕ್ಕೆ ಬೇಕಾದ ಅಭಿನಯ, ಸಂಭಾಷಣೆ ಹೇಳುವ ಧಾಟಿ ಎಲ್ಲವೂ ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ಸೊಗಸಾಗಿ ಅರಳಿದೆ.

ಟಿ ಎನ್ ಸೀತಾರಾಂ ಕೋಪತಾಪದ, ಮೈ ಪರಚಿಕೊಳ್ಳುವಂಥಹ ಸಂಧಿಗ್ಧ ಪಾತ್ರದಲ್ಲಿ ಮೊದಲು ನಂತರ ಸೇಡು ತೀರಿಸಿಕೊಳ್ಳುವ ಪಾತ್ರದಲ್ಲಿ ನೈಜತೆಯಿಂದ ಅಭಿನಯಿಸಿದ್ದಾರೆ. ಇವರ ಪಾತ್ರ ಚಿತ್ರಕ್ಕೆ ಇನ್ನೊಂದು ತಿರುವನ್ನು ಕೊಡುತ್ತದೆ. 

ಪೋಷಕ ಪಾತ್ರದಲ್ಲಿ ಬರುವ ಪದ್ಮಾವಾಸಂತಿ, ರೇಖಾ ರಾವ್ ಗಮನ ಸೆಳೆಯುತ್ತಾರೆ. ಚಿತ್ರಕ್ಕೆ ಒಂದು ದಿಕ್ಕು ಕೊಡುವ ಪಾತ್ರದಲ್ಲಿ ವಿಜಯಲಕ್ಷ್ಮಿ ಸಿಂಗ್ ತಮ್ಮ ಚೆಲುವಿಂದ, ಚಿನಕುರುಳಿ ಅಭಿನಯದಿಂದ ಚುಟುಕಾದ ಪಾತ್ರದಲ್ಲಿ ಮಿಂಚುತ್ತಾರೆ.  

ಈ ಚಿತ್ರದಲ್ಲಿ ಹಾಡುಗಳು ಮತ್ತೊಮ್ಮೆ ಮಿಂಚುತ್ತದೆ. 

ಸಿದ್ದಲಿಂಗಯ್ಯ ಅವರ ಸಾಹಿತ್ಯದ ಮೂರು ಹಾಡುಗಳು 
ಅ) "ಕಾಸನು ಬೀಸಿ ಒಲವಿನ ಬೆಲೆಯನು" ವಾಣಿಜಯರಾಂ ಅವರ ಸುಮಧುರ ಕಂಠದಲ್ಲಿ ಉತ್ತಮವಾಗಿ ಚಿತ್ರೀಕರಿಸಿದ್ದಾರೆ. 
ಆ) "ಗೆಳತಿ ಓ ಗೆಳತಿ" ಪ್ರಣಯಗೀತೆಯಾಗಿ ಎಸ್ ಪಿ ಬಾಲಸುಬ್ರಮಣ್ಯಂ ಗಾಯನದಲ್ಲಿ ಸೊಗಸಾಗಿದೆ 
ಇ) "ಕಲಿಗಾಲವಯ್ಯ ಕಲಿಗಾಲ" ಎಂದಿನ ಇಂದಿನ ಮುಂದಿನ ಪರಿಸ್ಥಿತಿಯನ್ನು ಹೇಳುವ ಗೀತೆಯಾಗಿ ಎಸ್ ಪಿ ಬಾಲಸುಬ್ರಮಣ್ಯಂ ಚಿತ್ರಿಕೃತವಾಗಿದೆ. 

ತನ್ನ ನೆಚ್ಚಿನ ಗೆಳೆಯ ವಿಜಯನಾರಸಿಂಹ ಅವರಿಂದ ಮೂಡಿಬಂದ "ಉಯ್ಯಾಲೆ ಆಡೋಣ ಬನ್ನಿರೋ" ಜಯಚಂದ್ರನ್ ಮತ್ತು ವಾಣಿ ಜಯರಾಂ ಅವರ ಉತ್ತಮ ಯುಗಳ ಗೀತೆಯಾಗಿದೆ. ಇಡಿ ಹಾಡನ್ನು ಉಯ್ಯಾಲೆಗಳ ಮಧ್ಯೆದಲ್ಲಿ ಚಿತ್ರಿಕರಿಸಿರುವುದು ವಿಶೇಷ. 

ಇಡಿ ಚಿತ್ರಕ್ಕೆ ಸಂಗೀತ ಮೆರುಗು ನೀಡಿರುವ ವಿಜಯಭಾಸ್ಕರ್, ಹಿನ್ನೆಲೆ ಸಂಗೀತದಲ್ಲಿ ಗಮನ ಸೆಳೆಯುತ್ತಾರೆ. ಆಣೆಕಟ್ಟು ಕಟ್ಟುವ ಪ್ರದೇಶವನ್ನು ತೋರಿಸುವಾಗೆಲ್ಲ ಬರುವ ಸಂಗೀತ ಅತ್ಯುತ್ತಮ. ಒಂದು ರೀತಿಯ ಆಶಾಭಾವವನ್ನು ಹೊತ್ತು ತರುತ್ತದೆ. 

ಬಿ ಎಸ್ ಬಸವರಾಜ್ ಭಾವುಕ ಸನ್ನಿವೇಶಗಳ ಛಾಯಾಗ್ರಹಣ ಮಾಡುತ್ತಲೇ ನಿಧಾನವಾಗಿ ನಮ್ಮ ಮನದೊಳಗೆ ಹೊಕ್ಕು ಸಾಗುವ ಸೂರ್ಯಾಸ್ತ ಮತ್ತು ಸೂರ್ಯೋದಯದ ದೃಶ್ಯಗಳು, ಅಣೆಕಟ್ಟಿನ ಆಯಾತ ಪ್ರದೇಶವನ್ನು ತೋರಿಸುವ ರೀತಿ ಸೂಪರ್ ಸೂಪರ್. 

ಚಿತ್ರದ ಆರಂಭ ಪುಟ್ಟಣ್ಣ ಅವರ ಎಲ್ಲಾ ಚಿತ್ರಗಳ ವಿಶೇಷ. ಭೂಮಿ ತಿರುಗುತ್ತದೆ ಅದರ ಜೊತೆಯಲ್ಲಿಯೇ ಮನುಜ ಯೋಚಿಸುವ ಲಹರಿಯೂ ಸಹ ಎನ್ನುವ ಭಾವ ಹೊತ್ತು ತರುವ ರೀತಿಯಲ್ಲಿ ಚಿತ್ರದ ಹೆಸರು, ತಾರಾಗಣ, ತಾಂತ್ರಿಕವರ್ಗ ಎಲ್ಲವೂ ಒಂದೇ ಚೌಕಟ್ಟಿನೊಳಗೆ ಸಾಗುತ್ತಾ ಹೋಗುತ್ತದೆ. 

ಇಡಿ ಚಿತ್ರ ಒಂದು ಗುಟುಕಿಗೆ ಒಳಗೆ ಹೋದರೂ, ಅದರ ಪರಿಣಾಮ ನಿಧಾನವಾಗಿ ಮನದೊಳಗೆ ಇಳಿಯುತ್ತಾ ಹೋಗುತ್ತದೆ. 

ಒಂದು ಪೂರ್ತಿ ವಿಭಿನ್ನ ಎನ್ನಿಸುವ ಚಿತ್ರ ನೀಡಿರುವ ಪುಟ್ಟಣ್ಣ ಕಣಗಾಲ್ ಅವರು ಒಂದು ದೃಶ್ಯದಲ್ಲಿ ಬಂದು ಹೋಗುವುದು ವಿಶೇಷ. 

ಒಂದು ಮನದಾಳಕ್ಕೆ ಇಳಿಯುವ ಚಿತ್ರವನ್ನು ನೋಡಿದ,  ಅನುಭವಿಸಿದ, ಮತ್ತು ಯೋಚನಾಲಹರಿಗೆ ಕೆಲಸ ತಂದು ಕೊಟ್ಟ ತೃಪ್ತಿ ಈ ಚಿತ್ರ ನೋಡಿದ ಮೇಲೆ ನನಗೆ ದಕ್ಕಿತು. 


1 comment:

  1. ನಾನು ಈ ಚಿತ್ರವನ್ನು ಎಂದು ನೋಡಿಲ್ಲ. ಆದರೆ ಈಗ ನೋಡಬೇಕು ಅಂತ ಬಹಳ ಅನಿಸುತ್ತಿದೆ. ತುಂಬಾ ಚೆನ್ನಾಗಿ ಮೂಡಿಬಂದಿದೆ. ಪುಟ್ಟಣ್ಣ ಚಿತ್ರಗಳ ಸಾಲು ಮುಗಿತಾ ಬಂದ ಹಾಗೆ ಅವರ ಕಲೆ ಈಗಿನ ಚಿತ್ರರಂಗಕ್ಕೆ ಎಷ್ಟು ಅವಶ್ಯಕತೆ ಇದೆ ಅನ್ನೋದು ಗೋಚರವಾಗ್ತಾ ಇದೆ. :)

    ReplyDelete