Thursday, November 20, 2014

ಕಸ್ತೂರಿ ಕಪ್ಪು ಆದರೆ ನಿವಾಸದ ಯಜಮಾನನ ಮನಸ್ಸು ವರ್ಣಮಯ!! (1971)

ತೇನ್ ಸಿಂಗ್ ಗೌರಿಶಂಕರ ತುತ್ತ ತುದಿಯಲ್ಲಿ ನಿಂತಾಗ ಸಂಭ್ರಮದ ವಿಷಯವಾಗಿತ್ತು.. ನೀಲ್ ಆರ್ಮ್ ಸ್ಟ್ರಾಂಗ್ ಚಂದ್ರಲೋಕಕ್ಕೆ ಪಾದ ಇಟ್ಟಾಗ ಸಂತಸವಿತ್ತು.. ಕಾರಣ ತಂತ್ರಜ್ಞಾನ, ಮನುಷ್ಯನ ಅಂಕೆ ಶಂಕೆಗಳು ಒಂದು ಹಂತದಲ್ಲಿ ತನ್ನ ಹತೋಟಿಯಲ್ಲಿದ್ದಾಗ.. ಹೌದು ಇವೆಲ್ಲ ನೆಡೆದು ಒಂದು ನಲವತ್ತು ವರ್ಷಗಳ ಮೇಲೆ ಆಯಿತು.

ಅಕ್ಕಿ ಒಂದು ಕೆ. ಜಿ. ಗೆ ಒಂದು ರೂಪಾಯಿಗಿಂತ ಕಮ್ಮಿ ಇದ್ದ ಕಾಲ.. ಇಂದು ಒಂದು ನೂರು ರೂಪಾಯಿಗೆ ಕೊಂಚ ಕಮ್ಮಿ ಇದೆ.. ಹಾಗೆ ಮಾನವನ ಆಸೆ, ದುರಾಸೆ, ಅಸೂಯೆ, ಸ್ವಾರ್ಥ ಮುಂಚೆಗಿಂತಲೂ ದುಪ್ಪಟ್ಟು ಆಗುತ್ತಲೇ ಇದೆ... ಕಮ್ಮಿಯಾಗುತ್ತಾ ಸಾಗಿದೆ ಜೀವನ ಮೌಲ್ಯಗಳು . 

ಇವೆಲ್ಲ ಮಾತು ಯಾಕೆ ಅಂದಿರಾ.. ಕಸ್ತೂರಿ ನಿವಾಸ ಚಿತ್ರದ ವರ್ಣಮಯ ರೂಪವನ್ನು ನೋಡಿ ಬಂದ ಮೇಲೆ ಅನ್ನಿಸಿದ ಮಾತುಗಳು. 

ಈ ಚಿತ್ರದ ಜೀವಾಳ ಉತ್ತರಾರ್ಧದಲ್ಲಿದೆ. ಅಣ್ಣಾವ್ರಿಗೆ ಗಡ್ಡ ಮೂಡಿ ಬಂದ ಮೇಲೆ ಅವರ ಅಭಿನಯ ವಾಹ್ ವಾಹ್ ಅನ್ನಿಸುತ್ತದೆ. 
ಸಂಭಾಷಣೆ ವೈಖರಿ, ಜೀವನದಲ್ಲಿ ಹಣಕಾಸಿನ ವಿಷಯದಲ್ಲಿ ಜಾರು ಹಾದಿಯಲ್ಲಿದ್ದರೂ ತಾ ನಂಬಿಕೊಂಡಿದ್ದ ಆದರ್ಶ, ಹಿರಿಯ ತಲೆಮಾರಿನವರು ಹಾಕಿಕೊಟ್ಟ ಸಂಸ್ಕಾರ ಇವುಗಳನ್ನು ಕಾಪಾಡಲು ಹೋರಾಡುವ ಪಾತ್ರದಲ್ಲಿ ಅಣ್ಣಾವ್ರು ತಲ್ಲೀನರಾಗಿ ಬಿಡುತ್ತಾರೆ. 

ಮೈಯನೆ ಹಿಂಡಿ ನೊಂದರು ಕಬ್ಬು ಸಿಹಿಯ ಕೊಡುವುದು..
ತೇಯುತಲಿದ್ದರು ಗಂಧದ ಪರಿಮಳ ತುಂಬಿ ಬರುವುದು 
ತಾನೇ ಉರಿದರು ದೀಪವು ಮನೆಗೆ ಬೆಳಕ ಕೊಡುವುದು 
ದೀಪ ಬೆಳಕ ಕೊಡುವುದು.. 

ಇಡಿ ಚಿತ್ರದ ಜೀವಾಳ ಈ ನಾಲ್ಕು ಸಾಲಿನಲ್ಲಿ ಬರೆದಿದ್ದಾರೆ ಸಾಹಿತ್ಯ ರತ್ನ ಚಿ ಉದಯಶಂಕರ್.. ಹಾಗೂ ಇಡಿ ಚಿತ್ರಕ್ಕೆ ತಳಹದಿ ಈ ಮೇಲಿನ ಸಾಲುಗಳು. 

ಈ ಸಾಲುಗಳಿಗೆ ಅಣ್ಣಾವ್ರ ಅಭಿನಯ ನೋಡಿಯೇ ಆನಂದ ಪಡಬೇಕು.. ಆ ಕುರುಚಲು ಗಡ್ಡ.. ಕಪ್ಪು ಕೋಟು ಪ್ಯಾಂಟು.. ಮೆಲ್ಲಗೆ ಹಾರುವ ಕೂದಲು.. ಮುಖದಲ್ಲಿ ಮಾಸದ ನಗೆ.. ಜೀವನದ ಕಷ್ಟಗಳು ಹಿಂಡಿ ಹಿಪ್ಪೆ ಮಾಡುತ್ತಿದ್ದರು ಕಣ್ಣಲ್ಲಿ ಹೊಳಪು .. ಮೊಗದಲ್ಲೂ ನಗು .. ಒಮ್ಮೆಲೇ ಹಾಗೆ ಜೀವನದ ಕಷ್ಟಗಳಿಗೆ ಸೆಟೆದು ನಿಂತಾಗ.. ಕಷ್ಟಗಳು ಸೆಟೆದು ನಮ್ಮಿಂದ ದೂರ ನಿಲ್ಲುತ್ತವೆ ಅನ್ನಿಸಿಬಿಟ್ಟಿತು. 



ಅಣ್ಣಾವ್ರ ಅಭಿನಯ ಕೆಲವು ಸೂಪರ್ ಸೂಪರ್ ಅನ್ನಿಸುವ ತುಣುಕುಗಳು 
  • ಮೇಲೆ ಹೇಳಿದ ಸನ್ನಿವೇಶ 
  • ಲೀಲಾ.. ತನ್ನ ಮದುವೆಯ ಬಗ್ಗೆ ವಿಷಯ ಹೇಳಿದಾಗ, ತನ್ನ ಆಸೆಗೆ ತಣ್ಣೀರು ಬಿತ್ತು ಎಂದು ಗೊತ್ತಾದ ಮೇಲೆ, ಮೆಟ್ಟಿಲು ಹತ್ತುತ್ತಾ ಮನೆ ಕೆಲಸದ ರಾಮಯ್ಯನಿಗೆ "ಪೂರ್ ಫೆಲೋ.. ಪೂರ್ ಫೆಲ್ಲೋ.. " ಅನ್ನುತ್ತಾ ಅರ್ಧ ನಗುತ್ತಾ ಕಣ್ಣಲ್ಲಿ ನೀರು ತುಂಬಿಕೊಂಡು ಹೋಗುವ ದೃಶ್ಯ 
  • ಪ್ರಭು ಲೀಲಾ ನನ್ನಲ್ಲಿ ಏನೋ ಬೇಡಲು ಬಂದಿದ್ದಾಳೆ.. ನನ್ನ ಹತ್ತಿರ ಇರುವ ವಸ್ತುವನ್ನು ಮಾತ್ರ ಕೇಳಲಿ
  • ಕಸ್ತೂರಿ ನಿವಾಸದ ವಂಶದಲ್ಲಿ ಇದುವರೆಗೂ ಇಲ್ಲ ಎಂದು ಹೇಳಿಲ್ಲ.. ನನ್ನ ಬಾಯಲ್ಲಿ ಇಲ್ಲ ಎಂದು ಹೇಳಿಸಲು ನನ್ನನ್ನು ಬದುಕಿಸಿದ್ದೀಯ ಪ್ರಭು 
  • "ಆಡಿಸಿ ನೋಡು ಬೀಳಿಸಿ ನೋಡು" ಸಂತಸ ಮತ್ತು ದುಃಖದ ಎರಡು ಹಾಡಿಗೆ ಅಭಿನಯ.. ಅದರಲ್ಲೂ ದುಃಖದ ಛಾಯೆಯ ಗೀತೆಗೆ. ಕಣ್ಣೀರನ್ನು ಒರೆಸಿಕೊಳ್ಳುತ್ತಾ ನಡೆಯುತ್ತಾ ಸಾಗುವ ದೃಶ್ಯ ಮನಕಲಕುತ್ತದೆ. 
  • ಉಂಗುರ ತೆಗೆದು ಕೊಟ್ಟ ಮೇಲೆ ಅಶ್ವಥ್ ಹತ್ತಿರ ಬಂದು.. ಅದೃಶ್ಯ ಉಂಗುರದ ಹರಳಲ್ಲಿ ಇರೋಲ್ಲ.. ಅಂತ ಹೇಳಿ ಹಣೆಯ ಮೇಲೆ ಗೆರೆ ಎಳೆದು ತೋರಿಸುತ್ತಾರೆ. ಸೂಪರ್ ಸೂಪರ್ 

ಇನ್ನು ಕೆ ಎಸ್ ಅಶ್ವಥ್ ಈ ಚಿತ್ರಕ್ಕೆ ಬಂಗಾರದ ಕಳಸ.. ಅಷ್ಟೊತ್ತಿಗೆ ಅಪಾರ ಹೆಸರು ಗಳಿಸಿದ್ದ ಈ ನಟ ರತ್ನ.. ಮನೆ ಆಳಿನ ಪಾತ್ರದಲ್ಲಿ ವೈಭವಯುತ ನಟನೆ ನೀಡಿದ್ದಾರೆ.. 
  • ಅಣ್ಣಾವ್ರು ಲೀಲಾಳ ಹತ್ತಿರ ಫೋನಿನಲ್ಲಿ ಪ್ರೀತಿಯಿಂದ ಮಾತಾಡುವಾಗ ಅಶ್ವಥ್ ಕೊಡುವ ನೋಟ
  • ಬುದ್ಧಿ.. ಉಂಗುರ ತೆಗೆಯಬಾರದಿತ್ತು.. ಎಂದು ಕಳಕಳಿಯಾಗಿ ಹೇಳುವ ಮಾತು 
  • ಊಟ ಚೆನ್ನಾಗಿತ್ತು ಅಂತ ಹೇಳಿ ತಿಂದ್ರಲ್ಲವ್ವ.. ಅದೇ ಪಾರಿವಾಳ ಮಾರಿ ಬಂದ ಹಣದಲ್ಲಿ ಸಾಮಾನು ತಂದು ಮಾಡಿದ ಅಡಿಗೆ 
  • ಮನೆ ಕಸ್ಕಂಡ್ರಿ, ಆಸ್ತಿ ಕಸ್ಕಂಡ್ರಿ, ಅಂತಸ್ತು ಕಸ್ಕಂಡ್ರಿ, ಪದವಿ ಕಸ್ಕಂಡ್ರಿ.. ಕಡೆಗೆ ಪಾರಿವಾಳ ಕಸ್ಕಳಕ್ಕೂ ಬಂದ್ಬಿಟ್ರಿ.. ಹೊಗ್ರವ್ವ ಇನ್ನೇನು ಕಸಕಳಕ್ಕೆ ಬಂದ್ರಿ.. 
  • ಜೋರಾಗಿ ಕೈ ಮುಗಿದು .. "ಇಬ್ಬರೂ ಅನಾಥರನ್ನು ತಂದು ಸಾಕಿದ್ರು.. ನೀವು ಮತ್ತು ಚಂದ್ರಪ್ಪ.. ಇಬ್ಬರೂ ಸರಿಯಾಗಿ ಮಾಡಿದ್ರಿ"
  • ಅಣ್ಣಾವ್ರು ಪಾರಿವಾಳವನ್ನು ಹದ್ದಿನ ಮೇಲೆ ಛೂ ಬಿಡಲು ಹೋದಾಗ.. ಅವರನ್ನು ತಡೆದು ಹದ್ದಿಗೆ ಕಲ್ಲು ಹೊಡೆಯುತ್ತಾ ಹೇಳುವ ಸಂಭಾಷಣೆ 
  • ಚಿತ್ರದುದ್ದಕ್ಕೂ ಬೆನ್ನು ಬಾಗಿಸಿ ನಡೆಯುತ್ತಾ ಮನೋಜ್ಞ ಅಭಿನಯ ನೀಡಿದ್ದಾರೆ. ತನ್ನ ಧಣಿಯನ್ನು ನೆರಳಂತೆ ಕಡೆಯ ತನಕ ಕಾಯುವ ಪಾತ್ರ ನಿಜಕ್ಕೂ ಅದ್ಭುತ. 
ಬಾಲಣ್ಣ ತನ್ನ ವಿಚಿತ್ರ ಸಂಭಾಷಣೆ ಮೂಲಕ ತನ್ನ ಇರುವನ್ನು ತೋರುತ್ತಾರೆ.  ಪ್ರಾಸಬದ್ಧ ಮಾತುಗಳು, ಅಂಗೀಕ ಅಭಿನಯ, ಮುಖದ ಭಾವ .  ಚಿತ್ರದ ಮೊದಲರ್ಧದಲ್ಲಿ ಮಿಂಚುತ್ತಾರೆ. ಉತ್ತಾರಾರ್ಧದಲ್ಲಿ ಮೆಲ್ಲಗೆ ಚಂದ್ರುವನ್ನು ಎತ್ತಿ ಕಟ್ಟಲು ಉಪಾಯ ಮಾಡುವ ಪಾತ್ರದಲ್ಲಿ ಮಿನುಗುತ್ತಾರೆ. 

ಕಪ್ಪು ಬಿಳುಪಿನಲ್ಲಿ ಜಯಂತಿ ಹೊಳೆಯುತ್ತಾರೆ.. ಇನ್ನು ವರ್ಣ ಜಾಲದಲ್ಲಿ ಅಬ್ಬಾ ಎಷ್ಟು ಸುಂದರ.. ಅದ್ಭುತ ಕಂಗಳು, ಭಾವ ಉಕ್ಕಿಸುವ ನಟನೆ ಇಷ್ಟವಾಗುತ್ತಾರೆ, 
ಚಿಕ್ಕ ಚೊಕ್ಕ ಪಾತ್ರದಲ್ಲಿ.. ಒಂದು ಹಾಡಿಗೆ, ಒಂದು ದೃಶ್ಯಕ್ಕೆ ಬರುವ ಆರತಿ, "ನೀ ಬಂದು ನಿಂತಾಗ" ಹಾಡಿನಲ್ಲಿ ಎಲ್ಲರ ಮನದಲ್ಲಿ ಛಾಪು ಒತ್ತಿ ಬಿಟ್ಟಿದ್ದಾರೆ. 
ರಾಜಾಶಂಕರ್ ಆ ಕಾಲದ ಉತ್ತಮ ಪೋಷಕ ನಟ, ಸ್ಪುರದ್ರೂಪಿ, ದಟ್ಟ ಹುಬ್ಬುಗಳಿಂದ ಹೆಸರಾಗಿದ್ದ ಈತ, ಅಣ್ಣಾವ್ರ ಅನೇಕ ಚಿತ್ರಗಳಲ್ಲಿ ಕಾಯಂ ನಟ. ಉತ್ತಮ ಅಭಿನಯ ನೀಡಿದ್ದಾರೆ.. ಅದರಲ್ಲೂ ತನ್ನ ತಪ್ಪಿನ ಅರಿವಾಗಿ ಅಣ್ಣಾವ್ರ ಮುಂದೆ ಕ್ಷಮೆ ಕೇಳುವ ದೃಶ್ಯದಲ್ಲಿ ಮನಗೆಲ್ಲುತ್ತಾರೆ. 

ಕಪ್ಪು ಬಿಳುಪಿನ ಆ ಕಾಲದಲ್ಲಿ ಜನರ ಮನಸ್ಸು ನಿರ್ಮಲವಾಗಿತ್ತು, ಈ ರೀತಿಯ ಚಿತ್ರ, ನಾಯಕ ಉದಾರಿ, ಧರ್ಮ ನಿಷ್ಠ, ಇಂಥಹ ಉದಾತ್ತ ಪಾತ್ರಗಳಿಂದ ಕೂಡಿದ ನಾಯಕ, ಅಥವಾ ಕಥಾವಸ್ತು ಕಡಿಮೆ ಬರುತ್ತಿದ್ದ ಕಾಲದಲ್ಲಿ ಅಚಾನಕ್ ಈ ಚಿತ್ರ ಬಂದಾಗ ಪ್ರೇಕ್ಷಕರು ಹುಚ್ಚೆದ್ದು ನೋಡಿ ಸಂತಸ ಪಟ್ಟಿದ್ದರು. ಚಿತ್ರಕಥೆಯನ್ನು ತರ್ಕದ ಕತ್ತರಿಗೆ ಸಿಳುಕಿಸಿದಾಗ ಪೇಲವ ಅನ್ನಿಸಬಹುದು. ಹಾಗೆ ನೋಡಿದರೆ ಚಲನ ಚಿತ್ರಗಳೇ ಒಂದು ಭ್ರಮೆ, ಚಿತ್ರ ವಿಚಿತ್ರ ತರ್ಕಗಳಿಗೆ ಉತ್ತರಗಳೇ ಇಲ್ಲ. 

ಈ ತರ್ಕದ ತಲೆಯನ್ನು ತೆಗೆದಿಟ್ಟು ಉತ್ತಮ ಸಂಭಾಷಣೆ, ಸಾಹಿತ್ಯ, ಹಾಡುಗಳು, ಅಭಿನಯ, ಕಣ್ಣು ಕೋರೈಸುವ ಬಣ್ಣ ಬಣ್ಣದ ಪಾತ್ರಗಳು ತೆರೆಯ ಮೇಲೆ ಬಂದು ಮನ ಬೆಳಗುವುದನ್ನು ನೋಡಲು ಖಂಡಿತ ಚಿತ್ರ ಮಂದಿರಕ್ಕೆ ಹೋಗಲೇ ಬೇಕು. 



ಕೆ ಸಿ ಎನ್ ಕುಟುಂಬ ಕನ್ನಡ ಚಿತ್ರರಂಗದಲ್ಲಿ ಸಾಧನೆಯ ಶಿಖರವನ್ನೇ ಮೂಡಿಸಿದೆ. ಅಂಥಹ ಇನ್ನೊಂದು ಪ್ರಯತ್ನ ಕಸ್ತೂರಿ ನಿವಾಸದ ಕೃತಿಯನ್ನು ಬಣ್ಣದಲ್ಲಿ ಅದ್ದಿ ತೆಗೆದದ್ದು. ಒಂದು ಅದ್ಭುತ ಶ್ರಮ ಇಡಿ ಚಿತ್ರದ ಪ್ರತಿಯೊಂದು ಅಂಚಿನಲ್ಲೂ  ನೋಡಬಹುದು. ಆ ಕಾಲದ ವರ್ಣವನ್ನು ಗಮನದಲ್ಲಿಟ್ಟುಕೊಂಡು ತಯಾರಾದ ಈ ವರ್ಣಮಯ ಶ್ರಮ ಕೊಟ್ಟ ಹಣಕ್ಕೆ ಖಂಡಿತ ಮೋಸ ಮಾಡುವುದಿಲ್ಲ. 

ಹೋಗಿ ಬನ್ನಿ ಕನ್ನಡ ಚಿತ್ರಗಳ ಅಭಿಮಾನಿಗಳೇ.. ಕಸ್ತೂರಿ ಕಪ್ಪು ನಿಜ.. ಆದರೆ ಈ ಕಸ್ತೂರಿ ವರ್ಣಮಯ... !!!

5 comments:

  1. Big screen mele noodale bekada movie... Annavara abhinaya wah.... Anna nimma chitrada bagegina ee lekhana colourfull .... I loved it..

    ReplyDelete
  2. ನಾನು ಮತ್ತು ನನ್ನ ಹೆಂಡತಿ ನಿನ್ನೆ ಈ ಚಿತ್ರ ನೋಡಲು ಹೋಗಿದ್ದೆವು. ಮನಕಲಕುವಂತಹ ಅಭಿನಯ. ಚಿತ್ರ ಮುಗಿಯುತ್ತಿದ್ದಂತೆಯೇ ಪ್ರೇಕ್ಷಕರು "ಡಾ. ರಾಜಕುಮಾರ್ ಗೆ... ಜೈ" ಎಂದು ಘೋಷಣೆಗಳನ್ನು ಮಾಡಿ ಕಣ್ಣಲ್ಲಿ ನೀರು ತುಂಬಿಕೊಂಡು ಹೊರನಡೆದರು.

    >>ಕಸ್ತೂರಿ ಕಪ್ಪು ನಿಜ.. ಆದರೆ ಈ ಕಸ್ತೂರಿ ವರ್ಣಮಯ... !!!
    ಈ ಮಾತು ಅಕ್ಷರಶ: ನಿಜ...

    ReplyDelete
  3. ಡಾ. ರಾಜಕುಮಾರ ಅವರ ಅಭಿನಯದ ಚಿತ್ರ ಬೆಳ್ಳಿತೆರೆಯ ಮೇಲೆ ಮೊದಲ ಬಾರಿಗೆ ನಾ ನೋಡಿದ್ದು. ಹೊರಗೆ ಬರುವಷ್ಟರಲ್ಲಿ ಕಣ್ಣುಗಳು ಮಂಜಾಗಿದ್ದವು.

    ReplyDelete
  4. ಮೇರು ನಟನ ಮೇರು ಕೃತಿ.
    ಪಕ್ಕಾ ಅಣ್ಣಾವ್ರ ನಡುವಳಿಕೆಗೆ ಸಾಮಿಪ್ಯವಿರುವ ಚಿತ್ರ ರತ್ನವಿದು.
    ಹಂತ ಹಂತವಾಗಿ ಕಸ್ತೂರಿಯನ್ನು ತೆರೆದಿಟ್ಟ ತಮಗೆ ಶರಣು.

    shared at:
    https://www.facebook.com/photo.php?fbid=602047969839656&set=gm.483794418371780&type=1&theater

    ReplyDelete
  5. ಬದುಕಿದರೆ ಹಾಗೆ ಕಬ್ಬು, ಗಂಧ, ದೀಪಗಳ ರೀತಿ ಬದುಕಬೇಕು. ಆ ಬದುಕನ್ನು ಮುಂದಿನ ಪೀಳಿಗೆಗೆ ತಿಳಿಸುವಂಥಹ ನಿಮ್ಮ ಬರವಣಿಗೆಯ ಮೆರವಣಿಗೆ ಇರಬೇಕು.

    ReplyDelete