Saturday, April 12, 2014

ಅಣ್ಣಾವ್ರ ಚಿತ್ರಗಳಲ್ಲಿ ಅಪ್ಪಾವ್ರು !!!!!


ತ್ರಿಮೂರ್ತಿ ಚಿತ್ರ ಬಿತ್ತರವಾಗುತ್ತಿತ್ತು

"ಏನು ಮಾಡಲಿ ನಾನು ಏನು ಹೇಳಲಿ"

ಮನದಲ್ಲಿ ಹಾಡು ಮೂಡುತ್ತಿತ್ತು.. "ಏನು ಬರೆಯಲಿ ನಾನು ಏನು ಬರೆಯಲಿ" ಬರೆದಷ್ಟು..  ಮುಗಿಯದಷ್ಟು.. ಸಾಗರದಲ್ಲಿನ ಅಲೆಗಳು, . ನಕ್ಷತ್ರ ಎಣಿಸುವುದು.. ಅಣ್ಣಾವ್ರ ಬಗೆಗಿನ ವಿಷಯಗಳು ಇವೆಲ್ಲಾ ಅಕ್ಷಯ ಬತ್ತಳಿಕೆ... 

ನಾ ಗಮನಿಸಿದಂತೆ.. ಅಣ್ಣಾವ್ರಿಗೆ ತಂದೆಯ ಮೇಲೆ ಅಪಾರ ಭಕ್ತಿ ಪ್ರೀತಿ.. ಅಮ್ಮನನ್ನು ಕಂಡರೂ ಹಾಗೆಯೇ.. ಆದರೆ ಅವರು ಅಪ್ಪನ ಬಗ್ಗೆ ತುಂಬಾ ತುಂಬಾ ಹೇಳಿದ್ದರು.  

ವಿಚಿತ್ರ ಆದರೂ ಸತ್ಯ ಅವರ ಚಿತ್ರಗಳಲ್ಲಿ ಅಮ್ಮ ಎನ್ನುವ ಪಾತ್ರ ಆವರಿಕೊಳ್ಳುತ್ತಿತ್ತು.  ಅಣ್ಣಾವ್ರ ಚಿತ್ರ ಅಂದ್ರೆ ಅಲ್ಲಿ ಅಮ್ಮ ಎನ್ನುವ ಪಾತ್ರ ಮುಂಚೂಣಿಯಲ್ಲಿ ಇದ್ದು ಬಿಡುತ್ತಿತ್ತು. ಪಂಡರಿಬಾಯಿ, ಆದವಾನಿ ಲಕ್ಷಿದೇವಿ, ಎಂ ರಾಜಮ್ಮ, ಜಯಶ್ರೀ, ಪಾಪಮ್ಮ, ಶಾಂತಮ್ಮ, ಕಾಂಚನ, ಇವರೆಲ್ಲ ಅಣ್ಣಾವ್ರಿಗೆ ತಾಯಿ ಪ್ರೀತಿಯನ್ನು ಬೆಳ್ಳಿ ತೆರೆಯ ಮೇಲೆ ಬಂಗಾರದ ಬಟ್ಟಲಿನಲ್ಲಿ ಉಣಬಡಿಸಿದವರು. 

ಮನಸ್ಸು ಯೋಚಿಸುತ್ತಿತ್ತು.. ಅಣ್ಣಾವ್ರ ೨೦೦ ಚಿಲ್ಲರೆ ಚಿತ್ರಗಳಲ್ಲಿ ತಾಯಿ ಪಾತ್ರ ಪ್ರಾಮುಖ್ಯತೆ ಪಡೆದುಕೊಂಡಿದ್ದರು.. ಕೆಲವು ಚಿತ್ರಗಳಲ್ಲಿ ಅಪ್ಪನ ಪಾತ್ರಕೂಡ ವಿಜೃಂಭಿಸಿದ್ದು ಸುಳ್ಳಲ್ಲ.  ಅಂಥಹ ಕೆಲವು ಪಾತ್ರಗಳ ಬಗ್ಗೆ ನನ್ನ ಒಂದು ವಿಹಾರ ಪದಗಳಲ್ಲಿ. 

೧. ಬಡವರ ಬಂಧು: 
ಅಂಗವೈಕಲ್ಯ ಹೊಂದಿದ್ದ ಅಪ್ಪನ ಪಾತ್ರದಲ್ಲಿ ಸಂಪತ್ ಅಮೋಘ ಅಭಿನಯ. ಅವರಿಗೆ ಸದಾ ಸೇವೆ ಮಾಡುತ್ತಾ.. ಎಣ್ಣೆ ಹಚ್ಚಿ ಮೈಯೆಲ್ಲಾ ತಿಕ್ಕಿ... ದೈಹಿಕ ನೋವನ್ನು ಕಡಿಮೆ ಮಾಡುವ ದೃಶ್ಯಗಳು ಸುಂದರವಾಗಿ ಮೂಡಿಬಂದಿವೆ. 
ಅಪ್ಪ ಮಗನ ಪ್ರತಿ ದೃಶ್ಯದಲ್ಲೂ ಅಣ್ಣಾವ್ರ ಕಣ್ಣುಗಳು ಸದಾ ತುಂಬಿರುತ್ತಿದ್ದವು. ಬಡತನದ ಬೇಗೆಯಲ್ಲಿ ಬಳಲಿ ಅಣ್ಣಾವ್ರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಬರುವಷ್ಟರಲ್ಲಿ ಅವರ ಅಪ್ಪ ಇಲ್ಲವಾಗಿದ್ದರು..   ಆ ನೋವಿನ ನಿರ್ವಾತ ತುಂಬಲೋ ಎನ್ನುವಂತೆ ಈ ಚಿತ್ರದಲ್ಲಿನ ದೃಶ್ಯಗಳು ಅಪರೂಪವಾಗಿ ಮೂಡಿಬಂದಿವೆ. 


೨. ಧೃವತಾರೆ 
ಈ ಚಿತ್ರದಲ್ಲಿ..  ಹುಟ್ಟಿದಾಗಿನಿಂದ ಅಪ್ಪನ ಪ್ರೀತಿ ಪಡೆಯದ ಅಣ್ಣಾವ್ರು.. ಅದಕ್ಕೆ ತಕ್ಕಂತೆ ಎರಡನೇ ಹೆಂಡತಿಯ ಕೈಗೊಂಬೆಯಾಗಿ ಮಗನನ್ನು ಹೊರಗೆ ಕಳಿಸಿ.. ಅಪ್ಪ ಎನ್ನುವ ಪಾತ್ರ ಕಂಡರೆ ಬೇಸರಗೊಳ್ಳುವ ಕೆಲವು ದೃಶ್ಯಗಳು. 
ಅಪ್ಪನೇ ತನ್ನ ಕಲೆಗೆ ಬೆಳಕು ತುಂಬುವುದರ ಬದಲು ಬೆಂಕಿ ಹಚ್ಚಿದ್ದು ಎಂದು ಗೊತ್ತಾದಾಗ.. ನಂತರ ನಿಜ ಸಂಗತಿ ತಿಳಿದು  ಅಪ್ಪನನ್ನು ಮಾತಾಡಿಸಲು ಬಂದಾಗ.. ಅಪ್ಪನ ಪಾತ್ರಧಾರಿ ರಾಜಾನಂದ್ ಮತ್ತು ಅಣ್ಣಾವ್ರ ನಡುವಿನ ಮಾತುಗಳು... ಬಾಂಧ್ಯವ.. ಆಹಾ ನೋಡಿ ಸವಿಯಬೇಕು ೩. ಎರಡು ಕನಸು 
ಈ ಚಿತ್ರದಲ್ಲಿ ಹಾಡುಗಳೇ ಜೀವಾಳ.. ಅಭಿನಯ ಸೂಪರ್.. ಮೊದಲ ಪ್ರೀತಿಯ ಗುಂಗು ಇಡಿ ಚಿತ್ರದಲ್ಲಿ ಆವರಿಸಿರುತ್ತೆ  ಆರಂಭಿಕ ದೃಶ್ಯಗಳಲ್ಲಿ ತಂದೆಯ ಪಾತ್ರಧಾರಿ ಅಶ್ವಥ್ ಮತ್ತು ಅಣ್ಣಾವ್ರ ನಡುವೆ ಒಂದು ಚಿಕ್ಕ ಸಂಭಾಷಣೆ ಮನಸ್ಸೆಳೆಯುತ್ತದೆ. 

ಮನೆತನದ ಹಗೆಯಿಂದಾಗಿ ನಡೆಯಬೇಕಾಗಿದ್ದ ಮದುವೇ ನಿಂತು ಹೋಗುತ್ತದೆ.  ಆಘಾತಕ್ಕೆ ಒಳಗಾಗಿ ಆಸ್ಪತ್ರೆ ಸೇರುತ್ತಾಳೆ. ವೈದ್ಯರು ಮಾತ್ರೆ., ಚಿಕಿತ್ಸೆ ಇಂದ ಗುಣವಾಗೋಲ್ಲ.. ನಿಮ್ಮ ತಾಯಿಯನ್ನು ಉಳಿಸಿಕೊಳ್ಳುವ ಶಕ್ತಿ ನಿಮ್ಮ ಮಾತಲ್ಲಿ ಇದೆ.. ನೀವು ಅವರ ಇಚ್ಛೆಗೆ ವಿರುದ್ಧವಾದ ಕೆಲಸ ಮಾಡೋಲ್ಲ ಎನ್ನುವ ಭರವಸೆ ಕೊಟ್ಟರೆ ಸುಧಾರಿಸುತ್ತಾರೆ.. ಎಂದು ಹೇಳಿದಾಗ.. ಅಣ್ಣಾವ್ರು ತಮ್ಮ ಪ್ರೀತಿಯನ್ನು ಬಿಡಲಾರದೆ  ತಾಯಿಯನ್ನು ಕಳೆದುಕೊಳ್ಳಲಾರದೆ  ತೊಳಲಾಡುತ್ತಾರೆ.. ಆಗ ಅವರ ತಂದೆಯ ಪಾತ್ರಧಾರಿ ಕನ್ನಡ ಸಿನಿಮಾ ಜಗತ್ತಿನ ಅಪ್ಪಾ "ಅಶ್ವತ್" ಹೇಳುವುದು ಎರಡೇ ಮಾತು.. 

"ರಾಮು ಇದು ನಿನ್ನ ಕೈಯಲ್ಲ.. ಕಾಲು"  ಇದೊಂದು ಅಪ್ಪ ಮಗನ ಮಧ್ಯೆ ನಡೆಯುವ ಸುಮಾರು ಹತ್ತು ಸೆಕೆಂಡುಗಳ ಪರಿಣಾಮಕಾರಿ ದೃಶ್ಯ.  ಅಪ್ಪ ತನ್ನ ಹೆಂಡತಿಯನ್ನು ಬದುಕಿಸಿಕೊಳ್ಳಲು ಮಗನ ಮುಂದೆ ಬೇಡುವ ದೃಶ್ಯ.. ಅಣ್ಣಾವ್ರು ಹಾಗು ಅಶ್ವತ್ ಇಬ್ಬರೂ ಸೂಪರ್ ಈ ದೃಶ್ಯದಲ್ಲಿ.. 

೪. ಬಿಡುಗಡೆ
 ಮಾಡದ ತಪ್ಪಿಗೆ ಗಲ್ಲು ಶಿಕ್ಷೆಗೆ ಗುರಿಯಾಗುವ ಅಪ್ಪನ ಪಾತ್ರದಲ್ಲಿ ಅಶ್ವತ್.. ಅವರನ್ನು ಉಳಿಸಿಕೊಳ್ಳುವ ಪಾತ್ರದಲ್ಲಿ ಅಣ್ಣಾವ್ರು.  ಇಡಿ ಚಿತ್ರದಲ್ಲಿ ಅಪ್ಪ ಮಗನ ಸಂಭಾಷಣೆ, ಭಾವಾಭಿನಯ ಸೂಪರ್. ಪ್ರಾಯಶಃ ಅಣ್ಣಾವ್ರ ಚಿತ್ರದಲ್ಲಿ ಅಪ್ಪನ ಪಾತ್ರಕ್ಕೆ ಅತೀವ ಪ್ರಾಮುಖ್ಯತೆ ಕೊಟ್ಟು ಚಿತ್ರದುದ್ದಕ್ಕೂ ಚಿತ್ರಗಳಲ್ಲಿ ಮೊದಲನೆಯದು ಅನ್ನಿಸುತ್ತದೆ. ಇಡಿ ಚಿತ್ರವನ್ನು ನೋಡಬೇಕು ಸುಂದರ ಅನುಭವ.

ಆ ಕಾಲದಲ್ಲಿಯೇ ಬಿಡುಗಡೆಗೊಂದು ಯಶ್ವಸಿಯಾದ ಮೇಲೂ.. ಚಿತ್ರದ ಸಂದೇಶದ ಸ್ಪೂರ್ತಿಯ ಮೇಲೆ ಚಿತ್ರದ ಅಂತ್ಯ ಬದಲಾಯಿಸಿ ಮತ್ತೆ ಬಿಡುಗಡೆಗೊಂಡ ಚಿತ್ರ ಇದು. ಹೀಗೆ ಅಣ್ಣಾವ್ರ ಚಿತ್ರಗಳು ಒಂದು ರೀತಿಯಲ್ಲಿ ವಿಶ್ವವಿದ್ಯಾಲಯ ವಿದ್ದಂತೆ ಪ್ರತಿಚಿತ್ರಗಳಲ್ಲೂ ಸಂದೇಶ, ಸಾಮಾಜಿಕ ಕಳಕಳಿ, ಸುಂದರ ಅಭಿನಯ.. ಕಲಾವಿದರೆಲ್ಲರೂ ಮನೆಯೊಳಗಿನ ನೆಂಟರಂತೆ ಅಭಿನಯ ನೀಡುತ್ತಿದ್ದದು.. ಹಾಡುಗಳು, ಸಂಭಾಷಣೆ.. 
೨೦೭ ಚಿತ್ರಗಳು ೨೦೭ ಯುಗಗಳಂತೆ.. 

ಅಣ್ಣಾವ್ರ ಪುಣ್ಯ ತಿಥಿಯ ಸಂದರ್ಭದಲ್ಲಿ ನನಗೆ ಅನ್ನಿಸಿದ ಕೆಲವು ಮಾತುಗಳು ಲೇಖನವಾಗಿ ಮೂಡಿ ಬಂದಿದೆ.. 

ಅವರ ಚಿತ್ರಗಳೇ ಸಾಕು.. ಸುವರ್ಣ ಬದುಕನ್ನು ಬಂಗಾರವಾಗಿಸಲು....!!!!

6 comments:

 1. ಡಾ|| ರಾಜ್ ಸಿನಿಮಾಗಳೆಂದರೆ ಅದು ಪುಟ್ಟ ವಿಶ್ವವಿದ್ಯಾನಿಲಯವಿದ್ದಂತೆ. ಸರಿಯಾಗಿ ಗಮನಿಸಿದರೆ, ಪ್ರೇಕ್ಷಕನಿಗೆ ಹಲವು ನೀತಿ ಪಾಠಗಳು ದೊರೆಯುತ್ತವೆ.
  ಇಲ್ಲಿ ತಾವು ಎತ್ತಿಕೊಂಡು ವಿಶ್ಲೇಷಿಸಿದ ತಂದೆಯ ಕೋನದಲ್ಲಿ ರಾಜ್ ಪ್ರಪಂಚ ವಿಶಿಷ್ಟವಾಗಿದೆ.
  ಬಡವರಬಂಧು ಚಿತ್ರದ ಈ ಗೀತೆಯಲ್ಲಿ ಅಣ್ಣಾವ್ರ ಅಭಿನಯ ಮತ್ತು ಮನಮಿಡಿಯುವ ಗಾಯನವೂ ಚಿರಕಾಲ ಉಳಿಯುವ ಭಾವತೀವ್ರತೆ.

  ReplyDelete
  Replies
  1. ಬದರಿ ಸರ್ ಅಣ್ಣಾವ್ರ ಚಿತ್ರಗಳಲ್ಲಿ ತಾಯಿ ಪಾತ್ರವೇ ಪ್ರಾಮುಖ್ಯತೆ ಹೆಚ್ಚು.. ಮನಸ್ಸಿಗೆ ಹೀಗೆ ಯಾಕೆ ಬರೆಯಬಾರದು ಎನ್ನಿಸಿತು. ಹಾಗಾಗಿ ತಂದೆ ಮತ್ತು ಅಣ್ಣ ಇಬ್ಬರೂ ಜೊತೆಯಲ್ಲಿ ಬಂದರು ಈ ಮಾಲಿಕೆಯಲ್ಲಿ..

   ಇಷ್ಟವಾಗಿದ್ದಕ್ಕೆ ಧನ್ಯವಾದಗಳು

   Delete
 2. ಚಂದದ ವಿವರಣೆ..
  ನೀವು ಹೇಳಿದ ನಾಲ್ಕಕ್ಕೆ ನಾಲ್ಕೂ ಚಿತ್ರಗಳನ್ನೂ ನೋಡುವ ಸಂಕಲ್ಪ ಮಾಡಿದ್ದೇನೆ.. ಥಾಂಕ್ಯು ಅಣ್ಣಯ್ಯಾ..

  ಬದರಿ ಸರ್ ಹೇಳಿದ ಮಾತುಗಳೇ ನನ್ನವು ಕೂಡ.. ಡಾ।। ರಾಜ್ ಚಿತ್ರಗಳೇ ಜೀವನ ಪಾಠಶಾಲೆ..

  ReplyDelete
  Replies
  1. ಅಣ್ಣಾವ್ರು ನಮಗೆ ಬರಿ ಇನ್ನೂರು ಚಿಲ್ಲರೆ ಪಾತ್ರಗಳನ್ನೂ ಮಾತ್ರ ಕೊಟ್ಟಿದ್ದಾರೆ.. ಆದರೆ ಆ ಪಾತ್ರಗಳು ನೀಡಿರುವ ಸಂದೇಶ ಇನ್ನೂರು ಜನ್ಮಕ್ಕೆ ಆಗುವಷ್ಟು.. ನೋಡಿ ನಲಿ..

   ಧನ್ಯವಾದಗಳು ಪಿ ಎಸ್

   Delete
 3. ಬಹಳ ಒಳ್ಳೆ ವಿಷಯ ಆಯ್ಕೆ. ಸಾಮಾನ್ಯವಾಗಿ ರಾಜ್ ಚಿತ್ರಗಳ 'ಅಮ್ಮನ' ಪಾತ್ರಧಾರಿ ಮನ ಸೆಳೆಯುತ್ತಾರೆ. ಆದರೆ ನೀವು ಹೇಳಿದ ಹಾಗೆ ಕೆಲವು ಚಿತ್ರಗಳಲ್ಲಿ ತಂದೆಗೆ ಒಂದು ಮುಖ್ಯ ಪಾತ್ರವನ್ನು ನೀಡಿದ್ದರು.ರಾಜ್ ಒಬ್ಬ ಅತ್ಯುತ್ತಮ ನಟ .. ಅವರ ನಟನೆಗೆ ಸರಿಸಮನಾಗಿ ಅವರ ಹಲವು ಚಿತ್ರಗಳಲ್ಲಿ ತಂದೆಯ ಪಾತ್ರವಹಿಸಿದ ನಟರು ಅಷ್ಟೇ ತೂಕದ ನಟನೆ ನೀಡಿದ್ದರು .... ನೆನಪಿಸಿದ್ದಕ್ಕಾಗಿ ಥ್ಯಾಂಕ್ಸ್ :)

  ReplyDelete
  Replies
  1. ಸಾಮಾನ್ಯ ಸಹನಟರ ಅಭಿನಯ ಶಕ್ತಿ ಶಾಲಿಯಾಗಿದ್ದಾಗ.. ಇವರ ಅಭಿನಯ ಇನ್ನೂ ಮೊನಚು.. ಅಣ್ಣಾವ್ರ ಅಭಿನಯ ಮಸ್ತ್ ಇದ್ದಾಗ ಸಹನಟರ ಅಭಿನಯ ಕೂಡ ಶಕ್ತಿಶಾಲಿ.. ಹೀಗೆ ಒಬ್ಬರಿಗೊಬ್ಬರು ಸ್ಪರ್ಧೆಗೆ ನಿಂತವರಂತೆ ಅಭಿನಯಿಸುತ್ತಿದ್ದ ಕಾರಣ ಆ ಚಿತ್ರಗಳು ಪಾತ್ರಗಳು ಮನದಲ್ಲಿ ನಿಲ್ಲುತ್ತಿದ್ದವು.

   ಧನ್ಯವಾದಗಳು ನಿವಿ ಇಷ್ಟವಾಯಿತು

   Delete