ಇಪ್ಪತ್ತನಾಲ್ಕನೆ ತಾರೀಕು ನನ್ನ ಇನ್ನೊಬ್ಬ ನೆಚ್ಚಿನ ಕಲಾವಿದನ ಬಗ್ಗೆ ನೀ ಬರೆಯಬೇಕು.. ನಿನಗೆ ಹನ್ನೆರಡು ದಿನಗಳ ಸಮಯ ಕೊಟ್ಟಿದ್ದೀನಿ.. ಇದರ ಜವಾಬ್ಧಾರಿ ನಿನದು..
ಆಗಲಿ ಅಣ್ಣಾವ್ರೇ.. ನೀವು ನನಗೆ ಕೆಲಸ ಕೊಡುವುದು.. ಅದನ್ನು ನಾ ಮಾಡುವುದು ಅದಕ್ಕಿಂತ ಈ ಬದುಕಿಗೆ ಇನ್ನೇನು ಬೇಕಾಗಿದೆ!
ಶುಭವಾಗಲಿ ಶ್ರೀ.. ನಿಮ್ಮಿಂದಲೇ ಮಣ್ಣಾಗಿ ಹತ್ತೊಂಬತ್ತು ವರ್ಷಗಳಾಯಿತು ಶ್ರೀ.. ನಂಬೋಕೆ ಆಗ್ತಿಲ್ಲ.. ಮಣ್ಣಾದೆ ಅಷ್ಟೇ ಆದರೆ ನಿಮ್ಮಗಳ ಹೃದಯದಲ್ಲಿ ಸದಾ ಈ ನಿಮ್ಮ ರಾಜಕುಮಾರ ಅಜರಾಮರ!
ಇದು ಅಣ್ಣಾವ್ರ ಪುಣ್ಯದಿನದಂದು ಅಣ್ಣಾವ್ರು ಹೇಳಿದ ಮಾತುಗಳು.. ಅದೇ ಈ ಲೇಖನದ ಆರಂಭಕ್ಕೆ ಮುನ್ನುಡಿಯಾಯಿತು..
ಬೆಳಿಗ್ಗೆ ಕಣ್ಣುಜ್ಜಿಕೊಂಡು ಕರಾಗ್ರೇ ಹೇಳಿದೆ.. ಇಷ್ಟ ದೇವರಾದ ಗಣಪನಿಗೆ ಕೈಮುಗಿದು ಬಂದಾಗ ಎದುರಿಗೆ ಕಂಡದ್ದು ಮನೆಯಲ್ಲಿರುವ ಅಣ್ಣಾವ್ರ ಭಾವಚಿತ್ರ..ಅಣ್ಣಾ ಎಂದೇ.. ಶ್ರೀ ಎಂದು ನನ್ನ ತಲೆ ಸವರಿದರು.. ತಿರುಗಿ ನೋಡಿದೆ.. ಅದೇ ಬಿಳಿ ವಸ್ತ್ರ.. ನಗು ಮೊಗ.. ಹೊಳೆಯುವ ತ್ವಚ್ಛೆ.. ಕೈ ಬೆರಳಲ್ಲಿ ನೀಲಿಯ ಹರಳುಳ್ಳ ಉಂಗುರ.. ಅವರ ಅನೇಕ ಚಿತ್ರಗಳಲ್ಲಿ ಅವರ ಪೋಷಾಕಿನ ಒಂದು ಭಾಗವಾಗಿತ್ತು
ಅಣ್ಣ ನಿಮ್ಮ ಸಹಕಲಾವಿದರೊಬ್ಬರ ಬಗ್ಗೆ ಬರೆಯಿರಿ ಎಂದಿದ್ದೀರಿ.. ನಿಮ್ಮ ಚಿತ್ರಜೀವನದ ಕಡಲಿನಲ್ಲಿ ನಿಮ್ಮ ಜೊತೆ ನಟಿಸಿದ ಕಲಾವಿದರೆಲ್ಲರೂ ಮುತ್ತಿನ ಮಣಿಗಳೇ ಹೌದು.. ಯಾರ ಬಗ್ಗೆ ಬರೆಯಬೇಕು ಹೇಳಿ ಅಣ್ಣಾವ್ರೇ..
ಎಲ್ಲಾ ಬಡವ.. ನಾ ನಿನಗೆ ಕೆಲಸ ಕೊಟ್ಟರೆ.. ನನಗೆ ಕೆಲಸ ಕೊಡುತ್ತೀಯಾ.. ನನ್ನ ಚಿತ್ರಗಳ ಜೈತ್ರ ಯಾತ್ರೆ ಶುರು ಮಾಡಿದ್ದೀಯಾ/.. ಆಗಲೇ ೭೨ ಚಿತ್ರಗಳು ಮುಗಿದಿವೆ.. ನೀನೆ ಹೇಳು ನೋಡೋಣ.. ಎನ್ನುತ್ತಾ ತಮ್ಮ ಕೈಲಿದ್ದ ಡಮರುಗವನ್ನು ತೆಗೆದುಕೊಂಡು ಡಮಡಮ ಅಂತ ಸದ್ದು ಮಾಡಿದರು..
ನನಗೆ ಅರಿವಿದ್ದದ್ದು ಮರೆತುಹೋಯಿತು.. ಹಾಗೆ ಮೆಲ್ಲನೆ ಅಣ್ಣಾವ್ರ ೨೦೭ ಚಿತ್ರಗಳ ದೃಶ್ಯಗಳು ರಪ್ಪನೆ ಕಣ್ಣು ಮುಂದೆ ಬರತೊಡಗಿತು..
ಅಣ್ಣಾವ್ರೇ.. ಆ ಚಿತ್ರದಲ್ಲಿ ಎರಡು ಅದ್ಭುತ ದೃಶ್ಯಗಳಿವೆ ಒಂದು ನೀವು ಕುರುಬರ ಪಿಳ್ಳೆ ಪಾತ್ರದಿಂದ ಕಾಳಿದಾಸನಾಗುವುದು.. ಆ ಪರಿವರ್ತನೆ ಅಳೆಯಲು ಯಾವುದೇ ಮಾನದಂಡವಿಲ್ಲ..
ಶ್ರೀ ಇದರ ಬಗ್ಗೆ ಆಗಲೇ ಬರೆದಿದ್ದೀಯ.. ಸುಮ್ಮನೆ ಸತಾಯಿಸಬೇಡ.. ಮುಂದಕ್ಕೆ ಹೇಳು..
ಅಣ್ಣ ಇನ್ನೊಂದು ಡಿಂಡಿಮ ಕವಿ.. "ಕಮಲೇ ಕಮಲೋತ್ಪತ್ತಿ: ಶ್ರೂಯತೇ ನ ಚ ದೃಶ್ಯತೇ | ಬಾಲೇ ತವ ಮುಖಾಂಭೋಜೇ ದೃಷ್ಟಮಿನ್ದೀವರದ್ವಯಂ"
ಸೂಪರ್ bulls eye ಶ್ರೀ ... ಅಬ್ಬಬ್ಬಾ ಅದೇನು ಅದ್ಭುತ ಅಭಿನಯ ಆತನದು.. ಈ ದೃಶ್ಯದಲ್ಲಿ ನಾನಿಲ್ಲವಲ್ಲ ಎಂದು ಇಂದಿಗೂ ನನಗೆ ಕೊರಗಿದೆ.. ಈ ದೃಶ್ಯದ ಚಿತ್ರೀಕರಣವಾದ ಮೇಲೆ.. ರಷಸ್ ನೋಡಿದಾಗ ನಾನೇ ಬೆಕ್ಕಸ ಬೆರಗಾದೆ..
ರಾಜನ್ ಕೊಟ್ಟಿದ್ದ ಘಳಿಗೆ ಮುಗಿದು ಇಟ್ಟಿದ್ದ ಘಳಿಗೆ ಬಂದಾಯ್ತು..
ಕಟ್ಟಕಡೆಗಾದರೂ ಬಾಯ್ಬಿಟ್ಟರೆ ನಿನ್ನ ಈ ಭಂಟ್ಟಂಗಿ ಕವಿಗಳು..
ಕವಿಗಳೇ ನಮ್ಮ ರಾಜ್ಯದ ಓರ್ವ ವೇಶ್ಯೆ ಪೂರೈಸಿದ್ದಾಳೆ ನಿಮ್ಮ ಈ ಸಮಸ್ಯೆಯನ್ನು ಅಂತ ಮಂತ್ರಿಗಳು ಹೇಳಿದಾಗ..
"ಶರೀರವನ್ನು ವಿಕ್ರಯಿಸುವ ಓರ್ವ ವೇಶ್ಯೆ ನನ್ನ ಸಮಸ್ಯೆಯನ್ನು ಪೂರೈಸಿದ್ದಾಳೆ ಎಂದರೆ ನನ್ನ ಸರಸ್ವತಿಯನ್ನು" ಅಂತ ಡಮರುಗವನ್ನು ನೋಡುತ್ತಾ ..ಹೇಳಿದಾಗ ಆ ವೇಶ್ಯೆ ಪ್ರತಿಯಾಗಿ ನನಗೆ ಅರ್ಧ ರಾಜ್ಯ ಸಿಗುವುದು ಎಂದು ಇಷ್ಟು ಮತ್ಸರವೇ ಎನ್ನುತ್ತಾಳೆ.. ಆಗ ಅಲ್ಲಿಂದ ಇವರ ಪ್ರತಾಪ ಶುರು
"ರಾಜನ್ ಗಂಗೆ ಹರಿಯ ಚರಣದಿಂದ ಉದ್ಭವಿಸುವದೇ ಹೊರತು ನರನ ಪಾದದಿಂದಲ್ಲ
ರತ್ನ ಸರ್ಪದ ಶಿರಸ್ಸಿನಲ್ಲಿ ಇರುತ್ತದೆಯೇ ಹೊರತು ಆಮೆಯ ತಲೆಯ ಮೇಲಲ್ಲ
ಕವಿತಾ ಪ್ರೌಢಿಮೆ ವಾಗ್ದೇವಿಯ ಭಂಡಾರದ ಬೀಗ ಮುದ್ರೆಯನ್ನು ತಲೆಯಿಂದ ಕುಟ್ಟಿ ಕೆಡವಿದವರಿಗೆ ಲಭ್ಯವಾಗುವುದೇ ಹೊರತು ಪರ್ಯಂಕದಲ್ಲಿ ಪವಡಿಸಿ ಸುಖಿಸುವವರಿಗಲ್ಲ."
https://www.youtube.com/watch?v=ierfiryJLug
ಈ ದೃಶ್ಯವನ್ನು ಅಚ್ಚುಕಟ್ಟಾಗಿ ಚಿತ್ರಿಸಿದ್ದಾರೆ ಹಾಗೆಯೇ ಈ ದೃಶ್ಯದ ಪೂರ್ಣ ಅಂಕ ಈ ಕಲಾವಿದನಿಗೆ ಅರ್ಪಣೆ.. ಈ ದೃಶ್ಯ ಚಿತ್ರೀಕರಣವಾದ ಮೇಲೆ.. ರಷಸ್ ನೋಡಿ ಶಭಾಷ್ ಹೇಳಿದಾಗ ಆತ.. "ಅಣ್ಣಾವ್ರೇ ಈ ದೃಶ್ಯದಲ್ಲಿ ನೀವಿಲ್ಲ ಅದೇ ನನಗೆ ಬೇಸರ.. ನಿಮ್ಮ ಜೊತೆಯಲ್ಲಿ ಈ ದೃಶ್ಯ ಇರಬೇಕಿತ್ತು ಅನಿಸುತ್ತದೆ.. ಆದರೆ ಈ ದೃಶ್ಯದಿಂದಾಗಿಯೇ ನೀವು ಮತ್ತೆ ಸಿಕ್ಕಿದ್ದು ಈ ಚಿತ್ರದಲ್ಲಿ.. ಅಲ್ಲವೇ.. ಆದರೆ ಕಡೆ ದೃಶ್ಯದಲ್ಲಿ ನೀವು ಭೋಜರಾಜನಿಗೆ ಹೇಳುತ್ತಾ "ನಮ್ಮಿಬ್ಬರ ಮಿಲನಕ್ಕೆ ಇವರೇ ಕಾರಣ" ಅಂತ ನನ್ನನ್ನು ಆಲಂಗಿಸಿದಾಗ.. ಜಗತ್ತನ್ನೇ ಗೆದ್ದಷ್ಟು ಸಂಭ್ರಮ..
ಗೊತ್ತಾಯಿತೇ ಆ ಕಲಾವಿದ ಯಾರು ಅಂತ ಶ್ರೀ
ಅಣ್ಣಾವ್ರೇ ನಿಮ್ಮ ಬದುಕಿನುದ್ದಕ್ಕೂ ಸುಮಾರು ನಲವತ್ತು ದಶಕಗಳು ನಿಮ್ಮ ಜೊತೆಯಲ್ಲಿ ಬದುಕಿದ ಕಲಾವಿದ.. ಶನಿಮಹಾದೇವಪ್ಪ.. ನಿಮ್ಮ ಅನೇಕಾನೇಕ ಚಿತ್ರಗಳಲ್ಲಿ ನಿಮ್ಮ ಜೊತೆ ಅಭಿನಯಿಸಿರುವ ಇವರನ್ನು ಮರೆಯೋದುಂಟೆ..
ಬಂಗಾರದ ಮನುಷ್ಯದ ಚಿತ್ರದ ಚಾಮಯ್ಯ
ಬಡವರ ಬಂಧು ಚಿತ್ರದ "ಪರಚಿಂತೆ ನಮಗೇಕಯ್ಯ" ಅಂತ ಮೋಸ ಮಾಡುವ ಕಪಟ ಸನ್ಯಾಸಿ
ದಾರಿ ತಪ್ಪಿದ ಮಗ ಚಿತ್ರದ ಪೊಲೀಸ್ ಕಮಿಷನರ್
ಶಂಕರ್ ಗುರು ಚಿತ್ರದ ಸತೀಶ್ ಪಾತ್ರದ ಬಿಸಿನೆಸ್ ಪಾರ್ಟ್ನರ್
ಕಾಮನಬಿಲ್ಲು ಚಿತ್ರದ ಹಿರಿಗೌಡರ ಮನೆಯಾಳು
ಕೆರಳಿದ ಸಿಂಹ ಚಿತ್ರದ ಮುಖ್ಯ ಖಳನಾಯಕನ ಬಲಗೈ ಭಂಟ
ಭಕ್ತ ಕುಂಬಾರ ಚಿತ್ರದ ಜ್ಞಾನದೇವ
ಅನುರಾಗ ಅರಳಿತು ಚಿತ್ರದ ರಾಮಲಿಂಗಂ ಜಂಬುಲಿಂಗಂ ಜೋಡಿ
ಅದೇ ಕಣ್ಣು ಚಿತ್ರದಲ್ಲಿ ಮನೆಯಾಳು
ಯಾರಿವನು ಚಿತ್ರದ ಮನೆಯಾಳು
ಸಮಯದ ಗೊಂಬೆಯ ಲಾರಿ ಡ್ರೈವರ್
ಭಕ್ತ ಪ್ರಹ್ಲಾದದಲ್ಲಿ ಬ್ರಹ್ಮ
ಚಲಿಸುವ ಮೋಡಗಳು ಚಿತ್ರದ ಪ್ರವಾಸಿ ಬಂಗಲೆಯ ಮೇಲ್ವಿಚಾರಕ
ಹೊಸ ಬೆಳಕು ಸಿನೆಮಾದ ಮಾರ್ವಾಡಿ ಪಾತ್ರ
ತ್ರಿಮೂರ್ತಿ ಚಿತ್ರದಲ್ಲಿ ಸಂಪತ್ ಅವರ ಮನೆಯಾಳು
ಮಯೂರ ಚಿತ್ರದಲ್ಲಿ ಸಹಪಾಠಿ
ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ವಜ್ರಮುನಿಯ ಸೇವಕ
ಎರಡು ಕನಸು ಚಿತ್ರದಲ್ಲಿ ರಾಜ್ ಊರಿನವ
ಬಂಗಾರದ ಪಂಜರದ ಅಡಿಗೆಯವ
ಒಂದೇ ಎರಡೇ ನಿಮ್ಮ ಅನೇಕ ಚಿತ್ರಗಳಲ್ಲಿ ನೆರಳಾಗಿ ಹಿಂಬಾಲಿಸಿದ ಶನಿಮಹಾದೇವಪ್ಪ ಅವರ ಮೂಲ ಹೆಸರು ಶಿವಪ್ರಕಾಶ್ ಅಂತ.. ಅವರು ಒಂದು ನಾಟಕದಲ್ಲಿ ಶನಿ ಪಾತ್ರ ಮಾಡಿ ಬಹಳ ಹೆಸರು ಮಾಡಿದರು.. ಆಗಿನಿಂದ ಅವರ ಹೆಸರು ಶನಿಮಹಾದೇವಪ್ಪ ಅಂತಾನೆ ಹೆಸರು..
ಹೌದು ಶ್ರೀ ಸರಿಯಾಗಿ ಹೇಳಿದೆ ... ಪಾರ್ವತೀ ಯಾವಾಗಲೂ ಹೇಳುತ್ತಿದ್ದಳು ನೋಡಿ ನಮ್ಮ ಸಂಸ್ಥೆಯ ಯಾವುದೇ ಚಿತ್ರವಾದರೂ ಸರಿ.. ಅದರಲ್ಲಿ ಇವರಿಗೆ ಒಂದು ಪಾತ್ರ ಕೊಡಲೇ ಬೇಕು.. " ಅಂತ.. ಅದೇ ಪದ್ಧತಿ ನೆಡೆದು ಬಂತು.. ನನ್ನ ಚಿತ್ರದಲ್ಲಿ ಮಾತ್ರವಲ್ಲ.. ನನ್ನ ಮಕ್ಕಳ ಅನೇಕ ಚಿತ್ರಗಳಲ್ಲಿ ಇವರಿಗೆ ಹೊಂದುವಂತಹ ಪಾತ್ರವನ್ನು ಕೊಡುತ್ತಲೇ ಬಂದಿದ್ದರು..
ಅಣ್ಣಾವ್ರೇ ನಲವತ್ತಕ್ಕೂ ಹೆಚ್ಚು ವರ್ಷ ನಿಮ್ಮ ಜೊತೆಯಲ್ಲಿ ಅಭಿನಯ ಮಾಡುತ್ತಿದ್ದರು.. ಈಗ ಐದು ವರ್ಷಗಳಿಂದ ನಿಮ್ಮ ಜೊತೆಯಲ್ಲಿಯೇ ಇದ್ದಾರೆ.. ..
ಹೌದು ಶ್ರೀ ನನಗೆ ಅವರನ್ನು ಒಂದು ಪ್ರಶ್ನೆ ಕೇಳಬೇಕಿತ್ತು..
ಅದಕ್ಕೇನಂತೆ ಕೇಳಿ ಅಣ್ಣ.. ಹೇಗೂ ನಿಮ್ಮ ಜೊತೆಯಲ್ಲಿ ಸ್ವರ್ಗದಲ್ಲಿದ್ದಾರೆ.. ತಾನೇ ಒಂದು ಕರೆ ನಿಮ್ಮ ಮುಂದೆ ಓಡಿ ಬರುತ್ತಾರೆ.. ಭುವಿಯಲ್ಲಿದ್ದಾಗ ನಿಮ್ಮ ಚಿತ್ರದ ಮುಹೂರ್ತ ಎಂದರೆ ಸಿದ್ಧವಾಗಿ ಬರುತ್ತಿದ್ದರು.. ನೀವು ಕೂಡ ನಿಮ್ಮ ಚಿತ್ರಗಳಲ್ಲಿ ಒಂದು ಸಣ್ಣದೋ ದೊಡ್ಡದೋ ಪಾತ್ರಗಳನ್ನು ಕೊಡುತ್ತಲೇ ಬಂದಿದ್ರಿ.. ಒಂದು ಕರೆ ಮಾಡಿ ಅಣ್ಣ"
ಅಣ್ಣಾವ್ರು ತಮ್ಮ ಮಡದಿ ಹತ್ತಿರ ಮೊಬೈಲ್ ತೆಗೆದುಕೊಂಡು ಕರೆ ಮಾಡಿ.. ಇನ್ನೂ ಮುಗಿಸಿರಲಿಲ್ಲ ಅಷ್ಟರಲ್ಲಿಯೇ ಶನಿಮಹಾದೇವಪ್ಪ ಡಿಂಡಿಮ ಕವಿಯ ವೇಷದಲ್ಲಿ ಬಂದೆ ಬಿಟ್ಟರು..
"ಅರೆ ಹೀಗೆ ಬಂದು ಬಿಟ್ಟಿರಾ.. ನಿಮ್ಮಲ್ಲಿ ಒಂದು ಪ್ರಶ್ನೆ"
"ಅಯ್ಯೋ ಅಣ್ಣಾವ್ರೇ ನೀವು ನನ್ನ ಕೇಳೋದಾ.. ಆರ್ಡರ್ ಮಾಡಿ ಅಣ್ಣ"
"ಇಲ್ಲ ಹಾಗಲ್ಲ.. ಆ ಪ್ರಶ್ನೆ ಎಂದರೆ.. ಡಿಂಡಿಮ ಕವಿಯ ಪಾತ್ರವನ್ನು ಅದೆಷ್ಟು ಅದ್ಭುತವಾಗಿ ನಟಿಸಿದಿರಿ.. ಡಿಂಡಿಮ ಕವಿಯೇ ಭುವಿಗೆ ಬಂದರೂ ಒಮ್ಮೆ ಆತ ನಿಮ್ಮನ್ನು ನೋಡಿ ಅಭಿನಯ ಕಲಿಯಬೇಕು ಅನ್ನಿಸುವಷ್ಟರ ಮಟ್ಟಿಗೆ ಅದ್ಭುತವಾಗಿ ನಟಿಸಿದ್ದೀರಾ ಆ ದೃಶ್ಯದಲ್ಲಿ ನಾನಿಲ್ಲವಲ್ಲ ಎಂಬುದೇ ಕೊರಗು. ಅದಿರಲಿ.. ಅದೇಗೆ ಅಷ್ಟು ಅದ್ಭುತವಾಗಿ ನಟಿಸಲು ಸಾಧ್ಯವಾಯಿತು .. ?"
"ಅಣ್ಣ ಅವರೇ ನಿಮ್ಮ ಕುರುಬರ ಪಿಳ್ಳೆಯಿಂದ ಕಾಳಿದಾಸನಾಗಿ ಬದಲಾಗುವ ದೃಶ್ಯವನ್ನು ತುಂಬಾ ಆಸಕ್ತಿಯಿಂದ ಗಮನಿಸಿದೆ.. ಡಿಂಡಿಮ ಕವಿಯ ದೃಶ್ಯದ ಚಿತ್ರೀಕರಣವಾಗುವ ದಿನ.. ಒಂದಷ್ಟು ಹೊತ್ತು ನಿಮ್ಮ ಆ ಪರಕಾಯ ಪ್ರವೇಶದ ದೃಶ್ಯವನ್ನು ನೆನೆಸಿಕೊಂಡು ಕುಳಿತಿದ್ದೆ.. ಅದೆಂಗೋ ಗೊತ್ತಿಲ್ಲ ಆ ನಿಮ್ಮ ಅಭಿನಯದ ಸ್ಫೂರ್ತಿಯೇ ನನಗೆ ಆ ಪಾತ್ರ ಮಾಡಲು ಶಕ್ತಿ ಕೊಟ್ಟಿದ್ದು.. ಒಂದು ವೇಳೆ ನೀವು ಆ ದೃಶ್ಯದಲ್ಲಿದ್ದರೆ ನನಗೆ ಬಲು ಕಷ್ಟವಾಗುತಿತ್ತು.. "
"ಹಾಗೇನು ಇಲ್ಲ ಶನಿಮಹಾದೇವಪ್ಪನವರೇ.. ನಾನೇ ಒಂದು ಕ್ಷಣ ದಂಗಾಗಿ ಬಿಟ್ಟಿದ್ದೆ.. ಅಷ್ಟು ಅದ್ಭುತವಾಗಿ ಮೂಡಿಬಂದಿದೆ.. ಸಾಮಾನ್ಯ ನನ್ನ ಅಭಿನಯದ ಚಿತ್ರಗಳಲ್ಲಿ ನನ್ನ ಪಾತ್ರದ ಸುತ್ತಲೇ ಸುತ್ತುತ್ತದೆ.. ಮತ್ತೆ ಉಳಿದ ಕಲಾವಿದರೂ .. ಉಳಿದ ಕಲಾವಿದರು ವಿಜೃಂಭಿಸಿದ್ದು ಉಂಟು.. ಆದ್ರೆ ಅಕ್ಷರಶಃ ನನ್ನಷ್ಟೇ ತಿಂದು ಬಿಟ್ಟಿದ್ದೀರಾ ಈ ದೃಶ್ಯದಲ್ಲಿ ಹಾಗಾಗಿ ಟಿವಿಯಲ್ಲಿ ಈ ಸಿನಿಮಾದ ಬಂದಾಗೆಲ್ಲ ಈ ದೃಶ್ಯವನ್ನು ಅದೆಷ್ಟು ಆಸಕ್ತಿಯಿಂದ ನೋಡುತ್ತೇನೋ ನನಗೆ ಗೊತ್ತಿಲ್ಲ.. ಒಂದು ವೇಳೆ ನಾನೇನಾದರೂ ಆ ದೃಶ್ಯ ನೋಡುವ ಹೊತ್ತಿಗೆ ಬೇರೆ ಏನಾದರೂ ಕೆಲಸವೋ.. ಸಂದರ್ಶನವೋ ಇದ್ದರೂ ಕೂಡ.. ಮನೆಯವರು ಈ ದೃಶ್ಯವನ್ನು ನೋಡಲು ನನಗೆ ಅನುಕೂಲ ಮಾಡಿಕೊಡುತ್ತಾರೆ.. ಅದು ನಿಮ್ಮ ಶಕ್ತಿ.. "
ಅಣ್ಣಾವ್ರೇ ನಿಮ್ಮಿಂದ ಈ ಮಾತುಗಳು ಧನ್ಯೋಸ್ಮಿ..ನಿಮ್ಮ ಜನುಮದಿನಕ್ಕೆ ನಿಮಗೆ ಶುಭಾಶಯ ಹೇಳಬೇಕು.. ಉಡುಗೊರೆ ಕೊಡಬೇಕು.. ಆದರೆ ನೀವೇ ನನಗೆ ಹೊರಲಾರದಷ್ಟು ದೊಡ್ಡ ಅಭಿಮಾನದ ಶ್ರೀ ರಕ್ಷೆ ಕೊಟ್ಟು ಹರಸಿದ್ದೀರಾ.. ಇದಕ್ಕಿಂತ ಇನ್ನೇನು ಬೇಕು.. ಧನ್ಯೋಸ್ಮಿ ಅಣ್ಣ.. ಎನ್ನುತ್ತಾ ಅಣ್ಣಾವ್ರಿಗೆ ನಮಸ್ಕರಿಸಿ ಹೊರತು ಬಿಟ್ಟರು..
ನಾನು ಅಣ್ಣಾವ್ರ ಕಡೆಗೆ ನೋಡಿದೆ..
ಶಭಾಷ್ ಜಮಾಯಿಸಿ ಬಿಟ್ರಿ.. ಸೂಪರ್ ಎನ್ನುತ್ತಾ ಹೆಬ್ಬೆರಳನ್ನು ಮೇಲಕ್ಕೆ ಎತ್ತಿ ತೋರಿದರು..
ಅಣ್ಣಾವ್ರೇ ಜನುಮದಿನದ ಶುಭಾಶಯಗಳು!