ಗೆದ್ದಲು ಹುತ್ತ ಕಟ್ಟುತ್ತವೆ ಆದರೆ ಆದರೆ ಅಲ್ಲಿ ಹಾವುಗಳು ವಾಸ ಮಾಡುತ್ತವೆ ,, ನಿರ್ಮಾಪಕರು, ನಿರ್ದೇಶಕರು, ನಟ ನಟಿಯರು, ತಂತ್ರಜ್ಞರು, ಕಲಾವಿದರು, ಸಹಾಯಕರು ಹೀಗೆ ಹತ್ತಾರು ನೂರಾರು ಕೈಗಳ ಪರಿಶ್ರಮ ಒಂದು ಸಿನಿಮಾ ಸಿದ್ಧವಾಗುತ್ತದೆ.. ಆ
ಆದರೆ ನೆಗೆಟಿವ್ ಸುಟ್ಟು ಹೋಗಿಯೋ, ಡಿಜಿಟಲೀಕರಣ ಮಾಡುವ ಮುಂಚೆಯೇ ನೆಗೆಟಿವ್ ಪ್ರತಿಗೆ ಬೂಸ್ಟು ಹಿಡಿದುಮ್ ಅಥವ ನೆಗೇಟಿವ್ಸ್ ಮತ್ತೆ ಸರಿ ಮಾಡಲಿಕ್ಕೆ ಆಗದಷ್ಟು ಹಾಳಾಗಿರುವುದು ಹೀಗೆ ಹತ್ತಾರು ಕಾರಣಗಳಿಂದ ಮತ್ತೆ ಆ ಸಿನೆಮಾವನ್ನು ವರ್ಷಗಳ ನಂತರ ನೋಡಲಿಕ್ಕೆ ಸಾಧ್ಯವಾಗದ ಪರಿಸ್ಥಿತಿ ಇರಬಹುದು.. ಅಂತಹ ಹತ್ತಾರು ಚಿತ್ರಗಳು ನಮ್ಮ ಕಣ್ಣಿಗೆ, ಮನಸ್ಸಿಗೆ ಇಳಿಯಲಿಕ್ಕೆ ನಕಾರ ಧೋರಣೆ ತೋರುತ್ತವೆ ಅಂತಹ ಒಂದು ಚಿತ್ರ ನಾಗಪೂಜಾ..
೧೯೬೫ರಲ್ಲಿ ತೆರೆಗೆ ಬಂದ ಚಿತ್ರ
ಎ ಎಸ್ ಭಕ್ತವತ್ಸಲಂ ಮತ್ತು ಎನ್ ಗೀತಾದೇವಿ ನಿರ್ಮಾಪಕರಾಗಿ, ಡಿ ಎಸ್ ರಾಜಗೋಪಾಲ್ ಅವರು ಗೀತಪ್ರಿಯ ಅವರ ಚಿತ್ರಕಥೆಯನ್ನು ಆಧಾರವಾಗಿಟ್ಟುಕೊಂಡು ಜಾನಕಿರಾಮ್ ಅವರ ಛಾಯಾಗ್ರಹಣದಲ್ಲಿ ಟಿ ಜಿ ಲಿಂಗಪ್ಪನವರ ಸಂಗೀತ ನಿರ್ದೇಶನದಲ್ಲಿ ತೆರೆಗೆ ತಂದ ಚಿತ್ರವೇ ಈ ನಾಗ ಪೂಜ.
ಈ ಚಿತ್ರದ ವಿಶೇಷತೆ ಎಂದರೆ ರಾಜಕುಮಾರ್ ಅವರ ಹೆಸರು ತೋರಿಸುವಾಗ "ವರನಟ" ಎಂಬ ಅಭಿದಾನವನ್ನು ಉಪಯೋಗಿಸಿರುವುದು.. ನನಗೆ ಅರಿವಿದ್ದಂತೆ ಹಿಂದಿನ ಚಿತ್ರಗಳಲ್ಲಿ ಬರಿ ರಾಜಕುಮಾರ್ ಅಂತ ತೋರಿಸಿದ್ದು ಇದೆ ಮೊದಲಬಾರಿಗೆ ವರನಟ ರಾಜಕುಮಾರ್ ಅಂತ ತೋರಿಸಿರುವುದು ಮುಂದೆ ಅದೇ ಖಾಯಂ ಆಯಿತು!
ರಾಜಕುಮಾರ್, ರಾಘವೇಂದ್ರ ರಾವ್, ಹನುಮಂತ ರಾವ್ ಲೀಲಾವತಿ, ಪಾಪಮ್ಮ, ರಾಜಶ್ರೀ ಮುಂತಾದವರು ಅಭಿನಯಿಸಿದ ಚಿತ್ರ..
ಎಲ್ಲೆಡೆ ಹುಡುಕಿದರೂ ಕಾಣದ ಚಿತ್ರವನ್ನು ಬಿಟ್ಟು ಮುಂದುವರೆಯಲು ಇಷ್ಟ ಪಡದೆ, ಸುಮಾರು ಒಂದು ತಿಂಗಳಿನ ಹುಡುಕಾಟದಲ್ಲಿ ಕೂಡ ಕಾಣದ ಚಿತ್ರವಾಯ್ತು ಈ ಸಿನಿಮಾ.. ಇರಲಿ ಹುಡುಕಾಟ ಮುಂದುವರೆಯುತ್ತದೆ. ಯು ಟ್ಯೂಬಿನಲ್ಲಿ ಬರಿ ಹಾಡುಗಳ ಲಿಂಕ್ ಇದೆ. ಹಾಗಾಗಿ ಅದನ್ನು ಮತ್ತೆ ಇಲ್ಲಿಗೆ ಹಾಕಲು ಇಷ್ಟ ಪಡದೆ.. ಬರಿ ಚಿತ್ರದ ಪೋಸ್ಟರ್ ಹಾಕಿದ್ದೀನಿ..
ಕೆಲವೊಮ್ಮೆ ಹುಡುಕಿದರೆ ಭಗವಂತನೂ ಸಿಗೋಲ್ಲ.. ಅನ್ನೊದು ಎಷ್ಟು ನಿಜವೋ.. ಗಟ್ಟಿ ಮನಸಿನಿಂದ ಹುಡುಕಿದರೆ ಭಗವಂತ ನಮ್ಮೆದೆರು ಬರುತ್ತಾನೆ ಅನ್ನೋದು ಅದಕ್ಕಿಂತ ನಿಜ.. ಹೌದು ಈ ಸಿನಿಮಾ ಸಿಗಲಾರದೆ ಒದ್ದಾಡುತ್ತಿದ್ದಾಗ ಹಠಾತ್ ಯೌಟ್ಯೂಬ್ ನಲ್ಲಿ ಸಿಕ್ಕಿಯೇ ಬಿಡ್ತು.. ಆದ್ದರಿಂದ ಆ ಚಿತ್ರ ನೋಡಿದ ಮೇಲೆ ಒಂದಷ್ಟು ಆ ಚಿತ್ರದ ಬಗ್ಗೆ ಮೊದಲ ಬರೆದ ಲೇಖನಕ್ಕೆ ಇನ್ನೊಂದಷ್ಟು ಪದಗಳ ಮಾಲಿಕೆ ಪೋಣಿಸುತ್ತಿದ್ದೀನಿ..
ಇದೊಂದು ಮತ್ತೊಂದು ಪುರಾಣದ ಹಿನ್ನೆಲೆ ಇರುವ.. ಆದರೆ ಸ್ವಲ್ಪ ಕಾಲ್ಪನಿಕ ಇರಬಹುದಾದ ಕಥಾವಸ್ತು ಕೂಡಿರುವ ಚಿತ್ರ.. ಮಕ್ಕಳಿಲ್ಲದ ರಾಜವಂಶ.. ಅವರ ಕುಲದೇವರು ನಾಗರಾಜ.. ಭಕ್ತಿಗೆ ಒಲಿದ ನಾಗರಾಜ.. ತನ್ನ ಕುಮಾರನನ್ನೇ ರಾಜರಾಣಿಯರ ವಂಶೋದ್ಧಾರಕನಾಗಲಿ ಎಂದು ಆಶೀರ್ವದಿಸುತ್ತಾನೆ.. ಆದರೆ ಅಲ್ಲೊಂದು ನಿಯಮವಿರುತ್ತದೆ.. ಯಾವುದೇ ಕಾರಣಕ್ಕೂ ಆ ಕುಮಾರನ ಜನನದ ಬಗ್ಗೆ ತಾಯಿ ಹೇಳಕೂಡದು.. ಹೇಳಿದರೆ ಆಕೆ ಸತ್ತು ಹೋಗುತ್ತಾಳೆ ಮತ್ತೆ ಕುಮಾರ ಮೊದಲಿನ ಹಾವಿನ ಸ್ವರೂಪದಲ್ಲಿ ನಾಗಲೋಕಕ್ಕೆ ಹೋಗುತ್ತಾನೆ.. ಮತ್ತೆ ಆತ ತಿಂದು / ಕುಡಿದ ವಸ್ತುಗಳು ವಿಷಪೂರಿತವಾಗಿರುತ್ತದೆ.. ಆದ್ದರಿಂದ ಅದನ್ನು ಬೇರೆಯವರು ತಿನ್ನಬಾರದು.. ಮತ್ತೆ ಪುಂಗಿಯ ನಾದಕ್ಕೆ ಹಾವಿನ ಹಾಗೆ ವರ್ತಿಸುವ ಸ್ವಭಾವ ಇರುತ್ತದೆ.. ಆದ್ದರಿಂದ ಆ ಪುಂಗಿಯ ನಾದ ಕೇಳದಂತೆ ಬೆಳೆಸಬೇಕು ಎಂದು ಹೇಳುತ್ತಾನೆ..
ಹಾಗೆಯೇ ಆ ಮಗು ತನ್ನ ಜನನದ ರಹಸ್ಯ ಹೇಳಿದರೆ.. ಆತ ಸಾಮಾನ್ಯ ಸರ್ಪವಾಗುತ್ತಾನೆ ಎಂದೂ ಮತ್ತೆ ಆತ ನಾಗಲೋಕಕ್ಕೆ ಹೋಗಲಾಗದೆ.. ಈ ಭುವಿಯಲ್ಲಿಯೇ ಆಯಸ್ಸು ಕಳೆಯಬೇಕಾಗುತ್ತದೆ ಎಂದು ನಿರ್ಬಂಧವಿಡುತ್ತಾನೆ.. ಮತ್ತೆ ಜೇವನದುದ್ದಕ್ಕೂ ಕಷ್ಟಕಾರ್ಪಣ್ಯಗಳ ಸರಮಾಲೆಯೇ ಇರುತ್ತದೆ ಎಂದು ಹೇಳುತ್ತಾನೆ..
ಮಗು ಬೆಳೆಯುತ್ತದೆ.. ಆದರೆ ನಾಗಲೋಕದಲ್ಲಿ ಈ ರಾಜಕುಮಾರನನ್ನು ಮೋಹಿಸಿದ್ದ ನಾಗಮತಿಯು ಈ ರಾಜಕುಮಾರನನ್ನು ಎಡಬಿಡದೆ ಕಾಡುತ್ತಾಳೆ.. ಬೆಳೆದ ರಾಜಕುಮಾರನನ್ನು ಬಲವಂತವಾಗಿ ಪಕ್ಕದ ದೇಶದ ರಾಜಕುಮಾರಿಯೊಡನೆ ವಿವಾಹ ಏರ್ಪಾಡಾಗುತ್ತದೆ.. ಅದನ್ನು ತಿಳಿದ ನಾಗಮತಿ ಹಾವಾಗಿ ಬಂದು ರಾಜಕುಮಾರಿಯನ್ನು ಕಚ್ಚುತ್ತದೆ.. ಆ ವಿಷವನ್ನು ತೆಗೆಯಲು ಆ ರಾಜಕುಮಾರ ಹಾವಾಡಿಗನ ವೇಷದಲ್ಲಿ ಬಂದು ರಕ್ಷಿಸುತ್ತಾನೆ... ಎಷ್ಟೇ ಹೇಳಿದರೂ ಕೇಳದ ಅಪ್ಪ ಅಮ್ಮ ಮದುವೆಯನ್ನು ಮಾಡಿಸಿಯೇ ಬಿಡುತ್ತಾರೆ.. ನಿಜ ಹೇಳಲಾಗದ ರಾಜಕುಮಾರ ಒದ್ದಾಡುತ್ತಾನೆ.. ನಾಗಮತಿ ತನ್ನ ದ್ವೇಷವನ್ನು ಮುಂದುವರೆಸುತ್ತಾ ಕೊಡಬಾರದ ಕಾಟ ಕೊಡುತ್ತಾಳೆ.. ಆದರೆ ಪತಿವ್ರತಾ ಧರ್ಮದಿಂದ ಅದನ್ನು ಜಯಿಸಿ, ನಾಗಲೋಕದ ಅರಸನ ಆಶೀರ್ವಾದದಿಂದ ಭುವಿಯಲ್ಲಿ ಬಹುಕಾಲ ಸುಖವಾಗಿ ಬಾಳುತ್ತಾರೆ..
ಇದು ಕಥಾವಸ್ತು.. ಇದರಲ್ಲಿ ರಾಜಕುಮಾರ್ ಅವರ ಪಾತ್ರಕ್ಕೆ ಅಷ್ಟೇನೂ ವಿಶೇಷತೇಯಾಗಲಿ ಅಥವ ಅವಕಾಶವಾಗಲಿ ಇಲ್ಲದೆ ಇದ್ದರೂ ಅವರ ಪಾತ್ರದಲ್ಲಿನ ತಲ್ಲೀನತೆ ಇಷ್ಟವಾಗುತ್ತದೆ.. ಪುಂಗಿಯ ನಾದಕ್ಕೆ ಅವರು ಹಿಂಸೆ ಪಡುವ ಅಭಿನಯ ಇಷ್ಟವಾಗುತ್ತದೆ.. ಸಂಯಮ ಕಳೆದುಕೊಳ್ಳದೆ ತಾಯಿಯ ಹತ್ತಿರ ಮಾತಾಡುವ.. ಸಂಯಮ ಮೀರದೆ ತಂದೆಯ ಬಳಿ ತನ್ನ ಜನನ ರಹಸ್ಯ ಹೇಳುವ ಪಾತ್ರದಲ್ಲಿ ಮಿಂಚುತ್ತಾರೆ..
ನಾಯಕಿಯಾಗಿ ಲೀಲಾವತಿ ಪಾತ್ರೋಚಿತ ಅಭಿನಯ.. ತಂದೆ ತಾಯಿಯಾಗಿ ರಾಘವೇಂದ್ರ ರಾವ್ ಮತ್ತು ಪಾಪಮ್ಮ ಮನತಣಿಸುವ ಅಭಿನಯ.. ಖಳನಾಯಕಿಯಾಗಿ ರಾಜಶ್ರೀ ಸೊಗಸಾಗಿ ಕಾಣುತ್ತಾರೆ.. ಇವಿಷ್ಟೇ ಮುಖ್ಯ ಪಾತ್ರಗಳು ಮಿಕ್ಕ ಪಾತ್ರಗಳು ಕಥೆಗೆ ತಕ್ಕ ಹಾಗೆ ಅಭಿನಯಿಸಿದ್ದಾರೆ..
ಪ್ರೇಮದ ಪೂಜಾರಿ ಎಲ್ ಆರ್ ಈಶ್ವರಿಯವರ ಕಂಠದಲ್ಲಿ ಅದ್ಭುತವಾಗಿ ಮೂಡಿಬಂದಿದೆ..
ಮಿಕ್ಕ ಹಾಡುಗಳು ಕಥೆಯ ಓಟಕ್ಕೆ ಸಾತ್ ಕೊಡುತ್ತದೆ.. ಟಿ ಜಿ ಲಿಂಗಪ್ಪ ಅವರ ಸಂಗೀತ ಮತ್ತು ಕೆ ಜಾನಕಿರಾಮ್ ಅವರ ಛಾಯಾಗ್ರಹಣ ಸೊಗಸಾಗಿದೆ..
ಭಕ್ತಿಬಲದ ಮುಂದೆ ದೈವ ಬಲವೂ ಸೇರಿಕೊಂಡಾಗ ಸೋಲು ಇಲ್ಲವೇ ಇಲ್ಲ ಎನ್ನುತ್ತದೆ ಈ ಚಿತ್ರಕಥೆ!
ಪುಟ್ಟ ಮಗು ಹಾವಿನ ಜೊತೆಯಲ್ಲಿ ಆಟವಾಡುತ್ತಿರುವುದು |
ಮತ್ತೊಂದು ಚಿತ್ರದ ಮೂಲಕ ಮತ್ತೆ ಸಿಗೋಣ!