"ಶ್ರೀ ಇವತ್ತು ನನ್ನ ಸಿನಿಮಾಗಳು.. ಹಾಡುಗಳು.. ಸಂಭಾಷಣೆ.. ಯಾವುದರ ಬಗ್ಗೆಯೂ ಬೇಡ.. ಏನಾದರೂ ಬೇರೆ ಬರಿ.. "
ಅಲಾರಾಂ ಹೊಡೆಯುತ್ತಿತ್ತು... ತಕ್ಷಣ ಎಚ್ಚರವಾಯ್ತು.. :ಕಣ್ಣು ಬಿಟ್ಟೆ.. ಹಣೆಗೆ ಕುಂಕುಮವಿಟ್ಟು ಹಾರ ಹಾಕಿಕೊಂಡು ನಗುತ್ತಿದ್ದ ಅಣ್ಣಾವ್ರ ಚಿತ್ರ.. ಅದೇ ಮಾಸದ ನಗುಮೊಗ..
"ಅಣ್ಣಾವ್ರೇ ನೀವು ಹೇಗೆ ಹೇಳುತ್ತೀರೋ ಹಾಗೆ.. ಇದು ನಿಮ್ಮ ದಿನ... ನೀವು ಹೇಗೆ ಹೇಳ್ತೀರೋ ಹಾಗೆ.. "
"ಹಾ ಶ್ರೀ .. ಅದು ಮಾತು ಅಂದ್ರೆ.. ಅದು ೨೦೦೬ ರ ಸಮಯ.... ಸಾಕು ಅನ್ನಿಸಿ ಹೊರಟಿದ್ದೆ.. ಅಭಿಮಾನಿ ದೇವರುಗಳು.. ನನ್ನನ್ನು ಭುವಿಗೆ ಸೇರಿಸಿದ್ದರು.. ಕರುನಾಡಿನಲ್ಲಿ ಅಷ್ಟೇ ಅಲ್ಲಾ ಇಡೀ ಸಿನಿ ಜಗತ್ತಿನಲ್ಲಿಯೇ ಒಂದು ರೀತಿಯ ವಿಷಾದದ ಛಾಯೆ.. ಎಲ್ಲರ ಮನಸ್ಸು ಭಾರವಾಗಿತ್ತು..
ನನ್ನ ಆತ್ಮ.. ಮೇಲಕ್ಕೆ ಹೊರಟಿತ್ತು.... ಸ್ವರ್ಗದ ಬಾಗಿಲಲ್ಲಿ ನಿಂತಿದ್ದ ದೇವತೆಗಳು.. "ಅರೆ ಇವ ಯಾಕೆ ಕೆಳಗಿಂದ ಮೇಲೆ ಬಂದ" ನಾ ಸುಮ್ಮನೆ ನಕ್ಕೆ.. ಅಲ್ಲಿಯೇ ಓಡಾಡುತ್ತಿದ್ದ ನನ್ನವ್ವ, ಅಪ್ಪಾಜಿ, ವರದಪ್ಪ, ಶಾರದಾ, ಎಲ್ಲರೂ ನನ್ನ ಬರಮಾಡಿಕೊಂಡರು.. ಆಗ ಅಲ್ಲಿ ನಿಂತಿದ್ದ ದೇವತೆಗಳು ನನ್ನನ್ನು ಆತ್ಮೀಯವಾಗಿ ಬರಮಾಡಿಕೊಂಡರು...
ಇಂದ್ರ ಬಂದು.. ಅಣ್ಣಾವ್ರೇ ನೀವು ಭಕ್ತಪ್ರಹ್ಲಾದದಲ್ಲಿ ಸ್ವರ್ಗ ಲೋಕಕ್ಕೆ ದಾಳಿ ಮಾಡಿ.. ನನ್ನ ಪದವಿಯನ್ನು ಕಿತ್ತು ಕೊಂಡಿದ್ದು.. ಆ ನಟನೆಯೇ ನನಗೆ ಕಂಪನ ತರಿಸಿತ್ತು.. ಈಗ ನೀವು ಇಲ್ಲಿಗೆ ಬಂದಿದ್ದೀರಿ.. ಸ್ವಲ್ಪ ಭಯವಾಯಿತು.. ಹಾಗಾಗಿ ನನ್ನ ಪರಿವಾರದವರು ಸ್ವಲ್ಪ ಭಯಭೀತರಾಗಿದ್ದಾರೆ ಅಷ್ಟೇ..
ಅರೆ ಮಹೇಂದ್ರ.. ಅದು ಪೌರಾಣಿಕ ಕತೆ.. ಪಾತ್ರ.. ಅಭಿನಯ.. ಅಷ್ಟೇ.. ಈಗ ನಿಮ್ಮ ಪದವಿ ಕಸಿದುಕೊಳ್ಳೋಕೆ ಆಗುತ್ತದೆಯೇ.. ಮತ್ತೆ ನಿಮ್ಮ ಸಿಂಹಾಸನದಲ್ಲಿ ಕೂರುವ ಆಸೆಯೂ ಇಲ್ಲ.. ಹಾಗೆ ಯೋಗ್ಯತೆಯೂ ಇಲ್ಲ....
ಅಣ್ಣಾವ್ರೇ.. ನೀವು ಕರುನಾಡ ಚಿತ್ರರಸಿಕರ ಹೃದಯ ಸಿಂಹಾಸನದಲ್ಲಿ ವಿರಾಜಮಾನರಾಗಿದ್ದೀರಾ.... ಅದಕ್ಕಿಂತ ದೊಡ್ಡ ಪದವಿ ಎಲ್ಲಿದೆ ಹೇಳಿ..
ಅದು ಸರಿ ಸ್ವರ್ಗಾಧಿಪತಿ.. ಅವರ ಅಭಿಮಾನದ ಹೊರೆ ನಾ ಎಷ್ಟು ಜನ್ಮ ಎತ್ತಿದರೂ ತೀರಿಸೋಕೆ ಸಾಧ್ಯವೇ.. ಖಂಡಿತ ಇಲ್ಲ.. ಅವರ ಪ್ರೀತಿ ಅಭಿಮಾನ ನನ್ನನ್ನು ಅಷ್ಟು ವರ್ಷ ಅಭಿನಯಿಸುವಂತೆ ಮಾಡಿತು.. ಅವರಿಗಾಗಿ ಅವರಿಗೋಸ್ಕರ ಅನೇಕಾನೇಕ ಪಾತ್ರ ಮಾಡಿಸಿದರು.. ಮಗುವನ್ನು ವಿವಿಧ ವೇಷಭೂಷಣಗಳಲ್ಲಿ ನೋಡಿ ನಲಿವಂತೆ.. ನನ್ನನ್ನು ಬೆಳೆಸಿದರು...ಅಷ್ಟೇ.. .!
ಅದು ನಿಜ ಅಣ್ಣಾವ್ರೇ ನೀವು ಬರಿ ವರನಟ ಮಾತ್ರವಲ್ಲ.. .ನಮ್ಮ ಬ್ರಹ್ಮರ್ಷಿ ವಸಿಷ್ಠರು ಹೇಳುತ್ತಿದ್ದರು.. ಕರುನಾಡಿನ ರಾಜಕುಮಾರ ಅವರು ಶಾಪಗ್ರಸ್ತ ಗಂಧರ್ವರು.. ಈ ಸ್ವರ್ಗದಿಂದ ಶಾಪಗ್ರಸ್ತರಾಗಿ ಭುವಿಗೆ ಜಾರಿ ತಮ್ಮ ಶಾಪವಿಮೋಚನೆಗಾಗಿ ಅಭಿನಯಿಸಿ... ಎಲ್ಲರ ಹೃದಯ ಗೆದ್ದು ಮತ್ತೆ ಗಂಧರ್ವರಾಗಿ ಇಲ್ಲಿಗೆ ಬಂದಿದ್ದಾರೆ ಅಂತ.. ಎಷ್ಟು ನಿಜ ಅನ್ನಿಸುತ್ತೆ ಅಣ್ಣಾವ್ರೇ..
ಸುರಾಧಿಪತಿ.. ಅದೇನೋ ನನಗೆ ಗೊತ್ತಿಲ್ಲ.. ಎಲ್ಲಾ ನಿಮ್ಮ ಅಭಿಮಾನವಷ್ಟೇ.. ಒಂದು ತಮಾಷೆ ಅಂದರೆ.. ನಾ ಬೇಡರ ಕಣ್ಣಪ್ಪ ಸಿನೆಮಾಗೆ ಮೇಕಪ್ ಮಾಡಿಕೊಳ್ಳುತ್ತಿದ್ದಾಗ.. ಆ ಪ್ರಸಾಧನ ಕೋಣೆಯ ಹೊರಗೆ ನಿಂತಿದ್ದ ಒಬ್ಬ.. ಇವರೆಲ್ಲಾ ಯಾಕೆ ಮೇಲಿಂದ ಕೆಳಗೆ ಬಂದರು.. ಇಂತಹ ಅದ್ಭುತ ಅಭಿನಯ ನೀಡುವ ಇವರು ಹತ್ತಾರು ಚಿತ್ರಗಳಲ್ಲಿ ಯಶಸ್ವಿಯಾಗುತ್ತಾರೆ.. ಚಿತ್ರರಂಗದ ಧ್ರುವತಾರೆಯಾಗುತ್ತಾರೆ.. ಈ ಮಾತನ್ನು ಹೇಳಿದ್ದು.. ಅತಿಶಯ ಎನಿಸಿದರೂ.. ಬೇಡರ ಕಣ್ಣಪ್ಪ ಚಿತ್ರದಲ್ಲಿ ಮೊದಲ ದೃಶ್ಯ ಗಂಧರ್ವರ ವೇಷಧಾರಿಯಾಗಿ ಮೆಟ್ಟಿಲು ಹತ್ತಿ ಬರುವುದಾಗಿತ್ತು.. ಅದೇನು ಅವರು ಹೇಳಿದ್ದು ನಿಜವಾಯ್ತೋ.. ಅಥವ ನನ್ನ ಹಣೆಯಲ್ಲಿ ಬರೆದಿತ್ತೋ ಗೊತ್ತಿಲ್ಲ.. ಅಂತೂ ಇಂತೂ ಒಂದಷ್ಟು ಅಭಿನಯ ಎನ್ನಿಸುವಂತಹ ಕೆಲಸ ಮಾಡಿದೆ.. ನನಗೆ ತೃಪ್ತಿ ಸಿಗಲೇ ಇಲ್ಲ.. ಅಲ್ಲೊಂದು ಇಲ್ಲೊಂದು ಪಾತ್ರಗಳು ಖುಷಿ ಕೊಟ್ಟಿತ್ತು.. ಮಂತ್ರಾಲಯದ ಗುರುಗಳ ಪಾತ್ರ.. ಸಂಗೀತ ಆಸಕ್ತಿಯ ಅಪ್ಪಣ್ಣ, ಕಾಳಿದಾಸ.. ಹೀಗೆ ಒಂದು ನಾಲ್ಕೈದು ಪಾತ್ರಗಳು.. ಆದರೂ ಏನೂ ಅಲ್ಲದ ನನ್ನನ್ನು ಎಲ್ಲಾ ನಾನೇ ಅನಿಸುತ್ವಂತೆ ಬೆಳೆಸಿದ್ದು. .. ನನ್ನ ಅಭಿಮಾನಿ ದೇವರುಗಳು.... ಏನಂತೀಯಾ ಶ್ರೀ..
ಅಲ್ಲಿಯ ತನಕ ದೇವೇಂದ್ರ.. ಅಣ್ಣಾವ್ರ ಮಾತುಗಳನ್ನು ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದ ನನಗೆ ಅಚ್ಚರಿ.. ಅರೆ ಅಣ್ಣಾವ್ರು ನನ್ನನ್ನು ಮಾತಾಡಿಸುತ್ತಿದ್ದಾರೆ..
ಹೌದು ಅಣ್ಣಾವ್ರೇ.. ಅಂದ್ರೆ..
ಅಣ್ಣ ಅಲ್ಲ ಅದು ಹನ್ನಾ.. ಆಫೀಸಿಗೆ ಹೋಗೋಲ್ವ ಹನ್ಯಾ ಎದ್ದೇಳಿ.. ಹೊರಡಿ.....
ಆಗ ಅರಿವಾಯಿತು.. ಅಣ್ಣಾವ್ರ ಜನುಮದಿನದಂದು ನಾ ಕಂಡ ಸುಂದರ ಕನಸ್ಸು ಎಂದು..
ಕನಸೇ ಇರಲಿ... ನನಸೇ ಇರಲಿ.. ಇವರು ಯಾಕೆ ಮೇಲಿಂದ ಬಂದರು ಎನ್ನುವ ಪ್ರಶ್ನೆಗೆ ಉತ್ತರ ಅಣ್ಣಾವ್ರು ಗಂಧರ್ವರು.. ನಮ್ಮನ್ನು ಅಭಿನಯ ಸಾಗರದಲ್ಲಿ ಮುಳುಗಿ ತೇಲಿಸಲು ಬಂದಿದ್ದರು ಎನ್ನುವುದಂತೂ ಸತ್ಯವಾದ ಮಾತು.. !!
ಅಣ್ಣಾವ್ರೇ ಜನುಮದಿನದ ಶುಭಾಶಯಗಳು.. !!!