Monday, April 24, 2017

ಅಣ್ಣಾವ್ರ ನಾಯಕತ್ವದಲ್ಲಿ ನಾಯಕಿಯರು - ಜನುಮದಿನ (೨೦೧೭)

ಬೆಂಗಳೂರಿನಲ್ಲಿ ದೂರದರ್ಶನದ ಆರಂಭದ ದಿನಗಳು.. ಆಗ ಮನೆಗೊಂಡು ದೂರದರ್ಶನ ಇರಲಿಲ್ಲ.. ಗಲ್ಲಿಗೊಂದು ಅಥವಾ ಬಡಾವಣೆಗೊಂದು ಇರುತ್ತಿತ್ತು... ನಮ್ಮ ಆಟಪಾಠಗಳ ಮದ್ಯೆ ಒಂದಷ್ಟು ದೂರದರ್ಶನ ವೀಕ್ಷಣೆ.. ಅಕ್ಕ ಪಕ್ಕ ಮನೆಯಲ್ಲಿ.. ಆಗೆಲ್ಲಾ  ಹಳೆಯ ಕನ್ನಡ ಚಿತ್ರಗಳನ್ನು ಬಿತ್ತರಿಸುತ್ತಿದ್ದರು.. ನಮಗೆ ಹೊಡೆದಾಟದ ಚಿತ್ರಗಳು ಇಷ್ಟವಾಗುತ್ತಿದ್ದವು, ಬಾಕ್ಸಿಂಗ್, ಫೈಟಿಂಗ್ ಇರಬೇಕು.. ಅಂಥಹ ಚಿತ್ರಗಳನ್ನು ನೋಡುತ್ತಿದ್ದೆವು..

ಗಣೇಶನ ಹಬ್ಬ, ಅಣ್ಣಮ್ಮ, ರಾಜ್ಯೋತ್ಸವ.. ಈ ಸಂದರ್ಭಗಳಲ್ಲಿ ರಸ್ತೆಯಲ್ಲಿ ಬಿಳಿ ಪರದೆ ಕಟ್ಟಿ ಕಪ್ಪು ಬಿಳುಪು ಚಿತ್ರಗಳನ್ನು ತೋರಿಸುತ್ತಿದ್ದರು.. ರತ್ನಗಿರಿ ರಹಸ್ಯ, ಶಿವರಾತ್ರಿ ಮಹಾತ್ಮೆ, ಧೂಮಕೇತು, ಕಾಸಿದ್ರೆ ಕೈಲಾಸ, ಸಿ ಐ ಡಿ ರಾಜಣ್ಣ ಹೀಗೆ ಅನೇಕ ಚಿತ್ರಗಳನ್ನು ರಸ್ತೆಯಲ್ಲಿ ಕೂತು ಇಲ್ಲವೇ ಮಲಗಿಕೊಂಡು ನೋಡುತ್ತಿದ್ದೆವು..

ಆಗೊಮ್ಮೆ ಈಗೊಮ್ಮೆ ನಮ್ಮ ಮನೆಯಿಂದ ಚಲನ ಚಿತ್ರಗಳಿಗೆ ಕರೆದೊಯ್ಯುತ್ತಿದ್ದರು, ಆಗ ನಾವು ತ್ಯಾಗರಾಜ ನಗರದಲ್ಲಿದ್ದೆವು.. ವಿದ್ಯಾಪೀಠ ಬಳಿಯ ಮಂಜುನಾಥ ಟೆಂಟ್, ಹನುಮಂತನಗರದ ರಾಜೇಶ್ವರಿ, ಗಿರಿನಗರದ ವೆಂಕಟೇಶ್ವರ, ತ್ಯಾಗರಾಜನಗರದ ನಂಜುಡೇಶ್ವರ ನಮ್ಮ ಮನೆಗೆ ಹತ್ತಿರವಿದ್ದ ಟೆಂಟ್ಗಳು.. ೧.೨೫ ಕೊಟ್ಟರೆ ನೆಲ, ೨.೫೦ ಕೊಟ್ಟರೆ ಖುರ್ಚಿಗೆ ಟಿಕೆಟ್ ಸಿಗುತ್ತಿತ್ತು.

ಈ ರೀತಿ ನಮಗೆ ಸಿನೆಮಾಗಳ ಹುಚ್ಚು ಹತ್ತಿತ್ತು.. ಬೀದಿ ಸಿನೆಮಾಗಳಲ್ಲಿ ಕಪ್ಪು ಬಿಳುಪಿನ ಚಿತ್ರಗಳಲ್ಲಿ ರಾಜ್ ಒಂದು ರೀತಿಯಲ್ಲಿ ಕಾಣುತ್ತಿದ್ದರು, ಟೆಂಟ್ ಸಿನೆಮಾಗಳಲ್ಲಿ ಬಣ್ಣ ಬಣ್ಣದ ಪೋಷಾಕುಗಳಲ್ಲಿ ಅಣ್ಣಾವ್ರು ಇನ್ನೊಂದು ಬಗೆ ಭಿನ್ನವಾಗಿ ಕಾಣುತ್ತಿದ್ದರು. ಚಲಿಸುವ ಮೋಡಗಳು, ಸಮಯದ ಗೊಂಬೆ, ಭಕ್ತ ಪ್ರಹ್ಲಾದ, ಹೊಸಬೆಳಕು, ಭಾಗ್ಯದ ಲಕ್ಷ್ಮಿ ಬಾರಮ್ಮ, ಹಾವಿನ ಹೆಡೆ, ನಾನೊಬ್ಬ ಕಳ್ಳ ಇವೆಲ್ಲಾ ನಾವೆಲ್ಲಾ ಕಣ್ಣು ಬಿಟ್ಟು ಪ್ರಪಂಚವನ್ನು ನಮ್ಮ ಕಣ್ಣಲ್ಲೇ ಕಾಣುವಾಗ ತೆರೆಕಂಡ ಚಿತ್ರಗಳು.. ಎಂಭತ್ತರ ದಶಕದ ಚಿತ್ರಗಳಲ್ಲಿ ಅಣ್ಣಾವ್ರು ವಿಭಿನ್ನವಾಗಿ ಕಾಣುತ್ತಿದ್ದರು. ಸಂಗೀತ, ಗಾಯನ, ಅಭಿನಯ, ಛಾಯಾಚಿತ್ರಣ, ನೃತ್ಯ, ಹೊಡೆದಾಟ ಎಲ್ಲವೂ ಬಣ್ಣ ಬಣ್ಣವಾಗಿ ಕಾಣುತ್ತಿದ್ದವು.

ಆಗ ಮನಸ್ಸು ತುಲನೆ ಮಾಡುತ್ತಿತ್ತು.. ಯಾವ ಕಾಲಘಟ್ಟದ ಅಣ್ಣಾವ್ರ ಚಿತ್ರಗಳು ಅದರಲ್ಲೂ ನಾಯಕಿಯರು ಇಷ್ಟವಾಗುತ್ತಾರೆ ಅಂತ.. ನಾವು ನೋಡಿದ ಬಹುಪಾಲು ಕಪ್ಪು ಬಿಳುಪು ಚಿತ್ರಗಳು ಬಿಳಿ ಪರದೆಯ ಮೇಲೆ ಕಪ್ಪು ಕಪ್ಪು ಗೆರೆಗಳು ಕಾಣಿಸುತ್ತಿದ್ದವು (ರೀಲ್ ನಲ್ಲಿ ಸಿನಿಮಾಗಳು ಇರುತ್ತಿದ್ದರಿಂದ ಹಾಗಾಗುತ್ತಿತ್ತು ಅಂತ ಪ್ರೊಜೆಕ್ಷರ್ ಆಪರೇಟರ್ ಗಳು ಹೇಳುತ್ತಿದ್ದರು).. ಆದರೆ ಬಣ್ಣ ಬಣ್ಣದ ಟೆಂಟ್ ಸಿನೆಮಾಗಳಲ್ಲಿ ಅಣ್ಣಾವ್ರು ಅಂದವಾಗಿ ಕಾಣುತ್ತಿದ್ದರು, ಅದರಲ್ಲೂ ನಾಯಕಿಯರು ಫಳ ಫಳ ಹೊಳೆಯುತ್ತಿದ್ದರು.. ನಾಯಕಿರನ್ನು ನೋಡಿದರೆ ಏನೋ ಒಂದು ರೀತಿಯಲ್ಲಿ ಸಂತೋಷ.. ಅಣ್ಣಾವ್ರ ವಯಸ್ಸು ೫೦ ವಸಂತಗಳನ್ನು ತಲುಪಿದ್ದರು, ಅದ್ಭುತ ದೇಹದಾರ್ಢ್ಯ.. ಮೇಕಪ್, ಅವರಿಗೆ ಹೊಂದುವಂಥ ಕೇಶ ವಿನ್ಯಾಸ, ಅಣ್ಣಾವ್ರು ಮುದ್ದಾಗಿ ಕಾಣುತ್ತಿದ್ದರು.

ಆ ಕಾಲ ಘಟ್ಟದ ನಾಯಕಿಯರನ್ನು ಪಟ್ಟಿ ಮಾಡುತ್ತಾ ಹೋಗಬೇಕು ಅನ್ನಿಸಿತು.. ಆಗ ಮೂಡಿ ಬಂದದ್ದು ಈ ಲೇಖನ.. ಇಂದು ಅಣ್ಣಾವ್ರ ಜನುಮ ದಿನ.. ಈ ಲೇಖನದ ಮೂಲಕ ಅವರಿಗೊಂದು ಶುಭಾಷಯ ನನ್ನ ಕಡೆಯಿಂದ ಮತ್ತು ನನ್ನ ಪ್ರೀತಿಯ ಓದುಗರ ಕಡೆಯಿಂದ.. !!!

ಅಂಬಿಕಾ
ಈಕೆಗೆ ಸುಮಾರು ೨೫ ವರ್ಷದ ಆಸು ಪಾಸು.. ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಅಪೂರ್ವ ಸಂಗಮ.. ವಾಹ್ ತೆರೆಯ ಮೇಲೆ ಈಕೆಯನ್ನು ಅಣ್ಣಾವ್ರ ಜೊತೆಯಲ್ಲಿ ನೋಡೋದೇ ಒಂದು ಆನಂದ.. ರೇಶೆಮೆಯಂತಹ ತಲೆಗೂದಲು, ಸದಾ ನೀಳವಾಗಿ ಇಳಿಬಿಟ್ಟ ಕೇಶರಾಶಿ, ನೃತ್ಯದಲ್ಲಿ ಎತ್ತಿದ ಕೈ.. ಅಣ್ಣಾವ್ರ ಕೆಲವು ನೃತ್ಯ ಹೆಜ್ಜೆಗಳಿಗೆ ತಕ್ಕ ಹಾಗೆ ಕುಣಿಯುತ್ತಿದ್ದ ಈಕೆ.. ಅದ್ಭುತವಾಗಿ ಕಾಣುತ್ತಿದ್ದರು.. ಬೇರೆ ನಾಯಕರ ಚಿತ್ರಗಳಲ್ಲಿ ಪಾಶ್ಚಾತ್ಯ ಉಡುಪು (ಸ್ಕರ್ಟ್, ಪ್ಯಾಂಟ್, ಚೂಡಿದಾರ್) ಇವೆಲ್ಲ ತೊಟ್ಟುಕೊಳ್ಳುತ್ತಿದ್ದ ಈಕೆ ಅಣ್ಣಾವ್ರ ಚಿತ್ರಗಳಲ್ಲಿ ಮಾತ್ರ ಸೀರೆಗಳಲ್ಲಿ ನಲಿಯುತ್ತಿದ್ದರು.

ಅಣ್ಣಾವ್ರ ದೇಹದಾರ್ಢ್ಯವನ್ನು ಕಂಡು ನಮಗೆ ಆಶ್ಚರ್ಯವಾಗುತ್ತಿತ್ತು, ತೆರೆಯ ಮೇಲಿನ ಪಾತ್ರಗಳಿಗೆ ವಯಸ್ಸು ಎಷ್ಟಿರಬಹುದು ಎನ್ನುವ ನನ್ನ ಊಹೆಗೆ ಅಥವಾ ಅನುಮಾನಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ..

ಚಲಿಸುವ ಮೋಡಗಳು ಆರಂಭದ ದೃಶ್ಯಗಳಲ್ಲಿ ಈ ಜೋಡಿಯನ್ನು ನೋಡುವುದೇ ಒಂದು ಹಬ್ಬ.. ಕರುನಾಡಿನ ಚಲನಚಿತ್ರದ ನಾಡಗೀತೆಯಾಗಿದ್ದ "ಜೇನಿನ ಹೊಳೆಯೋ, ಹಾಲಿನ ಮಳೆಯೋ " ಈ ಹಾಡಿನಲ್ಲಿ ಕಣ್ಣು ತಣಿಯುವಷ್ಟು ಸುಂದರವಾಗಿ ಕಾಣುತ್ತಿದ್ದರು. "ಕಾಣದಂತೆ ಮಾಯವಾದನು" ಈ ಹಾಡಿನಲ್ಲಿ ನೃತ್ಯ, ಓರೇ ಗಣ್ಣಿನಲ್ಲಿ ಇಬ್ಬರೂ ನೋಡುವುದು ಖುಷಿಕೊಡುತ್ತದೆ. ನನ್ನಿಷ್ಟವಾದ ಇನ್ನೊಂದು ಹಾಡು "ಮೈ ಲಾರ್ಡ್ ನನ್ನ ಮನವಿ" ಪ್ರಾಯಶಃ ಅಣ್ಣಾವ್ರ ಚಿತ್ರಗಳಲ್ಲಿ ನಾಯಕಿಯ ನೃತ್ಯ ಕಣ್ಣಿಗೆ ಕಟ್ಟುವುದು ಖುಷಿ ಕೊಟ್ಟಿತ್ತು. ಕಣ್ಣಿನ ನೋಟ, ನೃತ್ಯ, ಮುಖಾರವಿಂದ.. ಆಹ್ ಏನು ಹೇಳುವುದು..

ಹಾಗೆಯೇ ಅಪೂರ್ವ ಸಂಗಮ ಚಿತ್ರದಲ್ಲಿ.. ಪ್ರೇಮಯಾಚನೆ ದೃಶ್ಯದಲ್ಲಿ ಅಣ್ಣಾವ್ರು ಮತ್ತು ಅಂಬಿಕಾ..ಸೂಪರ್.. "ಅರಳಿದೆ ತಾನು ಮನ" ಅದ್ಭುತವಾದ ಹಾಡಿನಲ್ಲಿ ಅಷ್ಟೇ ನಯನ ಮನೋಹರವಾಗಿ ಕಾಣುತ್ತಿತ್ತು ಈ ಜೋಡಿ. "ವೈಯ್ಯಾರಿ ನನ್ನ ಬಂಗಾರಿ", ಎರಡು ನಕ್ಷತ್ರ ಚಿತ್ರದಲ್ಲಿ ಹಳ್ಳಿಯ ಧಿರಿಸಿನಲ್ಲಿ ಅಷ್ಟೇ ಆಕರ್ಶವಾಗಿತ್ತು ಈ ಜೋಡಿ "ಏಕೆ ಮಳ್ಳಿಯಂಗೆ ನನ್ನ ನೀನು ಕದ್ದು ಕದ್ದು ನೋಡುತ್ತೀಯೆ" .. ಭಕ್ತ ಪ್ರಹ್ಲಾದ ಚಿತ್ರದಲ್ಲಿ "ನಾ ಹೇಗೆ ಬಣ್ಣಿಸಲಿ" ಹಾಡಿಗೆ ಮಾತ್ರ ಬಂದು ಹೋಗಿದ್ದ ಈ ನಟಿಯ ಮುದ್ದಾದ ಮೊಗ ಆಕರ್ಷಕ..

ಸೂಪರ್ ಜೋಡಿ.. ಈ ಜೋಡಿಗೊಂದು ಸಲಾಂ

ಸರಿತಾ
ಅಣ್ಣಾವ್ರ ಚಿತ್ರಗಳಲ್ಲಿ ಕಥೆಯೇ ನಾಯಕ ನಾಯಕಿ.. ಭಾವ ಪೂರ್ಣ ಚಿತ್ರಗಳು ಬಂದಾಗ ಮೊದಲು ಹೆಸರು ಬರುತ್ತಿದ್ದದೇ ಸರಿತಾ ಹೆಸರು.. ಹೊಸಬೆಳಕು, ಕೆರಳಿದ ಸಿಂಹ, ಭಕ್ತ ಪ್ರಹ್ಲಾದ, ಕಾಮನಬಿಲ್ಲು, ಚಲಿಸುವ ಮೋಡಗಳು ಈ ಐದು ಚಿತ್ರಗಳಲ್ಲಿ ಅದ್ಭುತ ಅಭಿನಯಕ್ಕೆ ಹೆಸರಾಗಿದ್ದ ಈ ನಟಿ, ಅಣ್ಣಾವ್ರ ಅಭಿನಯಕ್ಕೆ ಸರಿಸಾಟಿಯಾಗಿ ನಿಂತಿದ್ದರು. ಕೆರಳಿದ ಸಿಂಹ ಚಿತ್ರದಲ್ಲಿ ಮುದ್ದಾಗಿ ಕಾಣುವ ಸರಿತಾ, ಮುಂದಿನ ಕೆಲ ಚಿತ್ರಗಳಲ್ಲಿ ದಪ್ಪಗಾಗಿದ್ದರೂ ಕೂಡ, ಅವರ ಅಭಿನಯ, ಕಣ್ಣಲ್ಲಿಯೇ ಅಳಿಸುವ ನಗಿಸುವ ಆ ಕಲೆಗಾರಿಕೆ ಸೂಪರ್ ಆಗಿತ್ತು.

ಕೆರಳಿದ ಸಿಂಹ ಚಿತ್ರದ ಇಂಗ್ಲಿಷ್ ಶೈಲಿಯ ಹಾಡು "ಏನೋ ಮೋಹ ಏಕೋ ದಾಹ" ಈ ಹಾಡಿನಲ್ಲಿ ತನ್ನ ನೀಳಗೂದಲನ್ನು ಹಿಂದಕ್ಕೆ ಬೀಸಿಕೊಂಡು ಮಹಡಿ ಹತ್ತಿ ಬರುವ ದೃಶ್ಯ.. ಅದೆಷ್ಟು ಬಾರಿ ನೋಡಿದ್ದೆನೋ ಅರಿವಿಲ್ಲ. (ಈ ಹಾಡಿನ ಬಗ್ಗೆ ಒಂದು ಲೇಖನವನ್ನೇ ಬರೆಯುತ್ತೇನೆ ಮುಂದೆ ಒಂದು ದಿನ).. ಭಾವಪೂರ್ಣ ಕಥೆಯುಳ್ಳ ಹೊಸಬೆಳಕು ಚಿತ್ರದಲ್ಲಿ ಈಕೆ ಮಾತಾಡಿದ್ದಕಿಂತ ಕಣ್ಣಲ್ಲೇ ಅಭಿನಯಿಸಿದ್ದು ಹೆಚ್ಚು..

ಹೊಸಬೆಳಕು ಚಿತ್ರದಲ್ಲಿ ಜ್ವರ ಬಂದು ಆಸ್ಪತ್ರೆಯಲ್ಲಿದ್ದ ದೃಶ್ಯದಲ್ಲಿ ಅಣ್ಣಾವ್ರು ಬಂದಾಗ ಗೆಲುವಾಗುತ್ತಾರೆ, ಮತ್ತೆ ನಾ ಊರಿಗೆ ಹೋಗುತ್ತೇನೆ ಅಂತ ಅಣ್ಣಾವ್ರು ಹೇಳಿದಾಗ, ಒಮ್ಮೆಲೇ ಕಣ್ಣೇ ಕಡಲಾಗುವ ಅಭಿನಯ ಸೂಪರ್..

ಭಕ್ತ ಪ್ರಹ್ಲಾದ ಇಡೀ ಚಿತ್ರದಲ್ಲಿ ಅಣ್ಣಾವ್ರು ಅಬ್ಬರಿಸಿದ್ದರೂ, ಸಂಯಮ ಪಾತ್ರದಲ್ಲಿ ಸರಿತಾ ಅಭಿನಯ ಬೊಂಬಾಟ್, ಒಂದು ಕಡೆ ಬೆಂಕಿ ಕಾರುವ ಅಭಿನಯದಲ್ಲಿ ಅಣ್ಣಾವ್ರು, ಈ ಕಡೆ ಅಣ್ಣಾವ್ರಿಗೆ ಕೋಪ ಬಾರಿಸುವ ಪಾತ್ರದಲ್ಲಿ ಪ್ರಹ್ಲಾದನಾಗಿ ಲೋಹಿತ್ (ಈಗಿನ ಪುನೀತ್), ಇವರಿಬ್ಬರ ಮದ್ಯೆ ಹದವರಿತ ಅಭಿನಯ..

ಚಲಿಸುವ ಮೋಡಗಳು ಚಿತ್ರದ ಪೂರ್ವಾರ್ಧದಲ್ಲಿ ತರಲೆ, ತುಂಟಿಯಾಗಿ ಅಭಿನಯಿಸಿರುವ, ಅಣ್ಣಾವ್ರನ್ನು ಹೋಗೋ ಬಾರೋ ಎನ್ನುತ್ತಾ ಲೀಲಾಜಾಲವಾಗಿ ಅಭಿನಯಿಸಿ, ಉತ್ತರಾರ್ಧದಲ್ಲಿ ಭಾರತೀಯ ಸಂಸ್ಕೃತಿ ಬಿಂಬಿಸುವಂತೆ ಹೋಗಿ ಬನ್ನಿ ಎನ್ನುತ್ತಾ ತನ್ನ ಗಂಡನೇ ತನ್ನ ಮಾಜಿ ಪ್ರೇಯಸಿಗೆ ಸಂಬಂಧ ಪಟ್ಟ ಕೊಲೆ ಮೊಕ್ಕದ್ದಮ್ಮೆಯನ್ನು ಕೈಗೆ ತೆಗೆದುಕೊಳ್ಳುವಾಗ ಪ್ರತಿಭಟನೆ ಮಾಡುವುದು, ನಂತರ ನಿಜ ತಿಳಿದು ಒಂದಾಗುವುದು.. ಕಣ್ಣು ಮತ್ತು ಧ್ವನಿಯಲ್ಲಿ ಇಷ್ಟವಾಗುತ್ತಾರೆ.

ಕಾಮನಬಿಲ್ಲು, ಈ ಚಿತ್ರದ ಬಗ್ಗೆ ಎಷ್ಟು ಬರೆಯಾದರೂ ಕಡಿಮೆಯೇ, ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ಚಿತ್ರ.. ತಪ್ಪು ತಿಳುವಳಿಕೆಯಿಂದ ಸರಿಯಾದ ತೀರ್ಮಾನಕ್ಕೆ ಬರುವ ದೃಶ್ಯಗಳಲ್ಲಿ ಸರಿತಾ ಮನಮುಟ್ಟುತ್ತಾರೆ, ಕಡೆಯ ದೃಶ್ಯದಲ್ಲಿ ಅಣ್ಣಾವ್ರು ನೀನು ನನ್ನ ಸ್ನೇಹಿತನನ್ನು ಮದುವೆಯಾಗು ಎಂದು ಒಪ್ಪಿಸುವಾಗ, ಅದನ್ನು ತಿರಸ್ಕರಿಸುವ ದೃಶ್ಯದಲ್ಲಿ ಸರಿತಾ ಅಕ್ಷರಶಃ ಕಣ್ಣೀರು ತರಿಸುತ್ತಾರೆ. ಅತಿರೇಕದ ಅಭಿನಯವಿಲ್ಲದೆ, ಕಣ್ಣಲ್ಲೇ, ಧ್ವನಿಯ ಏರಿಳಿತದಲ್ಲಿ ಕಾಡುವ ಸರಿತಾ.. ನಿಜಕ್ಕೂ ಅಭಿನಯದಲ್ಲಿ "ಸರಿ"ನೇ

ಅಣ್ಣಾವ್ರ ಮತ್ತು ಸರಿತಾ ಅಭಿನಯ.. ಭಾವ ಪೂರ್ಣತೆಯಿಂದ ಕೂಡಿರುತ್ತೆ..

ಮಾಧವಿ
ಬೊಗಸೆಕಂಗಳ ಚೆಲುವೆ.. ಅಣ್ಣಾವ್ರ ಜೊತೆಯಲ್ಲಿ ಸುಮಾರು ಎರಡು ದಶಕಗಳ ಅಂತರದಲ್ಲಿ  ಹಾಲು ಜೇನು, ಭಾಗ್ಯದ ಲಕ್ಷ್ಮಿ ಬಾರಮ್ಮ, ಅನುರಾಗ ಅರಳಿತು, ಶೃತಿ ಸೇರಿದಾಗ, ಜೀವನ ಚೈತ್ರ, ಆಕಸ್ಮಿಕ, ಮತ್ತು ಒಡಹುಟ್ಟಿದವರು ಒಟ್ಟು ಎಂಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈಕೆಯ ಅಸ್ತಿ ಸುಲಲಿತವಾದ ನೃತ್ಯ, ಕಣ್ಣುಗಳು.
ಸಾಂಸಾರಿಕ ಕಥೆಯ ಶೃತಿಸೇರಿದಾಗ ಚಿತ್ರದಲ್ಲಿ "ಬೊಂಬೆಯಾಟವಯ್ಯ" ಹಾಡಿನಲ್ಲಿ ಅಣ್ಣಾವ್ರನ್ನು ಸಿಕ್ಕಿಹಾಕಿಸುವ ಹಾಡಿನಲ್ಲಿ, "ರಾಗ ಜೀವನ ರಾಜ"   ಹಾಡು.. ಈ ಹಾಡಿನಲ್ಲಿ, ಮುದ್ದಾಗಿ  ಕಾಣುತ್ತಾರೆ..

ಹಾಲು ಜೇನು ಬಹುಶಃ ಈ ಚಿತ್ರದಲ್ಲಿ ಅಣ್ಣಾವ್ರ ಅಭಿನಯ ನೋಡಿ ಕಣ್ಣೀರಾಕದೆ ಇರುವವರು ಕಡಿಮೆ. ಆ ಅಭಿನಯಕ್ಕೆ ಹೊಂದುವಂತೆ ಮಾಧವಿ ಮಾಗಿದ್ದಾರೆ ಈ ಚಿತ್ರದಲ್ಲಿ. "ಆನೆಯ ಮೇಲೆ ಅಂಬಾರಿ ಕಂಡೆ" ಈ ಹಾಡಿನಲ್ಲಿ ಇವರಿಬ್ಬರ ನೃತ್ಯ ನನಗೆ ಇಷ್ಟ.. ರೋಸ್ ಬಣ್ಣದ ಸೀರೆಯಲ್ಲಿ ಆಅಹ್ ನೋಡುತ್ತಲೇ ಇರಬೇಕು ಅನ್ನಿಸುತ್ತದೆ.. ಪ್ರತಿ ಭಾವ ಪೂರ್ಣ ದೃಶ್ಯದಲ್ಲಿಯೂ ಕಣ್ಣಲ್ಲೇ ಕಾಡುವ ಈಕೆ ಅಣ್ಣಾವ್ರಿಗೆ ಸುಂದರ ಜೋಡಿ.

"ಅನುರಾಗ ಅರಳಿತು" ತನ್ನ ಸ್ನಿಗ್ಧ ಸೌಂದರ್ಯದಿಂದ ಕಾಡುತ್ತಾರೆ, ಅಣ್ಣಾವ್ರಿಗೆ ಪ್ರತಿಯಾಗಿ ನಿಲ್ಲುವ ಪಾತ್ರ, ಅಣ್ಣಾವ್ರ ಕೆನ್ನೆಗೆ ಬಾರಿಸುವ ದೃಶ್ಯದಲ್ಲಿ ಲೀಲಾಜಾಲವಾಗಿ ನಟಿಸಿದ್ದಾರೆ.. "ನೀ ನೆಡೆದರೆ ಸೊಗಸು" ಈ ಹಾಡಿನಲ್ಲಿ ಮಾತಿಲ್ಲದೆ ಬರಿ ಕಣ್ಣಲ್ಲೇ ಪ್ರೀತಿ ವ್ಯಕ್ತಪಡಿಸುವ ಮಾಧವಿ ಇಷ್ಟವಾಗುತ್ತಾರೆ.

ಮಾಗಿದ ಅಭಿನಯ ಕಂಡ ಜೀವನ ಚೈತ್ರ, ಆಕಸ್ಮಿಕ ಮತ್ತು ಒಡಹುಟ್ಟಿದವರು ಚಿತ್ರದಲ್ಲಿ ಮತ್ತೆ ಕೆಲವು ವರ್ಷಗಳ ಅಂತರದ ನಂತರ ಮತ್ತೆ ಅಣ್ಣಾವ್ರಿಗೆ ಜೋಡಿಯಾಗುತ್ತಾರೆ.

ಗೀತಾ 
ನನ್ನ  ನೆಚ್ಚಿನ ಹೆಸರು, ನನ್ನ ನೆಚ್ಚಿನ ನಾಯಕಿ, ಅಣ್ಣಾವ್ರ ಎತ್ತರಕ್ಕೆ ಸರಿಯಾದ ಜೋಡಿಯಾಗಿರುವ ಗೀತಾ ಧೃವತಾರೆ, ಅನುರಾಗ ಅರಳಿತು, ದೇವತಾ ಮನುಷ್ಯ, ಶೃತಿ ಸೇರಿದಾಗ, ಕಿರುಪಾತ್ರದಲ್ಲಿ ಶಿವ ಮೆಚ್ಚಿದ ಕಣ್ಣಪ್ಪ, ಮತ್ತೆ ಆಕಸ್ಮಿಕ ಚಿತ್ರಗಳಲ್ಲಿ ಅಣ್ಣಾವ್ರಿಗೆ ಸರಿಸಾಟಿಯಾದ ಅಭಿನಯ.. ಎಲ್ಲಾ ಚಿತ್ರಗಳಲ್ಲೂ ಸೀರೆಯಲ್ಲಿ (ಆಕಸ್ಮಿಕ ಚಿತ್ರದ ಕೆಲವು ದೃಶ್ಯಗಳನ್ನು ಬಿಟ್ಟು) ಕಾ
ಣಿಸಿಕೊಂಡ ಈ ಮುದ್ದಾದ ನಟಿಯನ್ನು ತೆರೆಯ ಮೇಲೆ ನೋಡುವುದೇ ಒಂದು ಖುಷಿ..

ಮುದ್ದಾದ ಮೊಗ, ಕಣ್ಣಿನ ಕೆಳಗೆ ಪುಟ್ಟ ಮಚ್ಚೆ, ಸುಂದರ ನಗು ಈಕೆಯನ್ನು ಅಣ್ಣಾವ್ರಿಗೆ ವಿಶಿಷ್ಟ ಜೋಡಿಯಾಗಿಸಿದೆ. ಹೋರಾಟದ ಪಾತ್ರದ  ಧೃವತಾರೆ..ಮನದಲ್ಲಿಯೇ ಇಷ್ಟಪಡುವ ಪಾತ್ರದಲ್ಲಿ ಅನುರಾಗ ಅರಳಿತು ಚಿತ್ರದಲ್ಲಿ ಅಣ್ಣಾವ್ರಿಗೆ ನೆರಳಾಗಿ ನಿಲ್ಲುವ ಗೀತಾ, ಇಷ್ಟ ಪಟ್ಟರೂ ಮನೆಯ ಸಮಸ್ಯೆಯಿಂದಾಗಿ ದೂರವೇ ನಿಲ್ಲುವ ಪಾತ್ರದಲ್ಲಿ ದೇವತಾ ಮನುಷ್ಯದಲ್ಲಿ, ಭಕ್ತಿ ಭಾವದ ಶಿವ ಮೆಚ್ಚಿದ ಕಣ್ಣಪ್ಪ, ಜೀವನದಲ್ಲಿ ನೊಂದಿದ್ದ ಪಾತ್ರದಲ್ಲಿ ನಾಯಕನಿಗೆ ಜೊತೆಯಾಗುವ ಆಕಸ್ಮಿಕ ಪಾತ್ರ, ಅನಾಥಳಾಗಿ ಬಂದು ಅಣ್ಣಾವ್ರ ಮನವನ್ನು, ಮನೆಯನ್ನು ಗೆಲ್ಲುವ ಪಾತ್ರದಲ್ಲಿ ಶೃತಿ ಸೇರಿದಾಗ ಚಿತ್ರ.. ಈಕೆಯನ್ನು ಅಣ್ಣಾವ್ರ ಚಿತ್ರಗಳ ನೆಚ್ಚಿನ   ನಾಯಕಿಯನ್ನಾಗಿಸಿದೆ..

ಅರೆ ಇದೇನಿದು.. ಅಣ್ಣಾವ್ರ ಬಗ್ಗೆ ಲೇಖನ  ಅಂತ ಹೇಳಿ, ಬರಿ ನಾಯಕಿಯ ಬಗ್ಗೆ ಮಾತ್ರ ಬರೆದಿದ್ದೇನೆ ಅಂತ ಹೇಳ್ತಾ ಇದ್ದೀರಾ, ಹೌದು ಅಣ್ಣಾವ್ರ ಚಿತ್ರಗಳಲ್ಲಿ ನಾಯಕಿ ಪಾತ್ರ ಸುಮ್ಮನೆ ಹಾಗೆ ಬಂದು ಹೀಗೆ ಹೋಗುವುದಲ್ಲ.. ಕೆಲವೊಮ್ಮೆ ಚಿತ್ರದ ಪೂರ್ತಿಭಾಗ ಇರದೇ ಇದ್ದರೂ, ಇರುವ ಭಾಗದಲ್ಲಿ ಅಣ್ಣಾವ್ರಿಗೆ ಸರಿಸಾಟಿಯಾಗಿ ಅಭಿನಯ ನೀಡಿದ್ದರು. ಕೆಲವೊಮ್ಮೆ ಅಣ್ಣಾವ್ರ ಪಾತ್ರದ ಮೇಲೆ ಕೂಗಾಡುವ, ಕಿರುಚಾಡುವ, ಅಥವಾ ಕೆಲವೊಮ್ಮೆ ಕೈ ಮಾಡುವ ದೃಶ್ಯಗಳಿದ್ದರೂ, ಧೈರ್ಯದಿಂದ ಅಭಿನಯಿಸಿದ್ದರು, ಹಾಡುಗಳಲ್ಲಿ ಗೌರವಪೂರ್ಣವಾಗಿ ಅಭಿನಯಿಸಿದ್ದು ಎಲ್ಲಾ ನಾಯಕಿಯರ ಹೆಗ್ಗಳಿಕೆ. ಇವರ ಅಭಿನಯದ ಇತರ ನಾಯಕರ ಚಿತ್ರಗಳು ಮತ್ತು ನಾ ಮೇಲೆ ಹೇಳಿದ ಚಿತ್ರಗಳನ್ನು ಒಮ್ಮೆ ಗಮನಿಸಿದರೆ ಅಣ್ಣಾವ್ರ ಪ್ರಭಾವದಲ್ಲಿದ್ದರೂ, ತಮ್ಮದೇ ಛಾಪನ್ನು ಒತ್ತಿ ಬಿಟ್ಟಿದ್ದಾರೆ ಈ ನಾಯಕಿಯರು..

ಹಾಗಾಗಿ ಒಂದು ವಿಶೇಷ ಲೇಖನ.. ಅಣ್ಣಾವ್ರ ನಾಯಕತ್ವದಲ್ಲಿ ನಾಯಕಿಯರು ಎಂದು ಬರೆಯಬೇಕು ಅನ್ನಿಸಿತು. ಇನ್ನೊಂದು ಅಂಶ ಗಮನಿಸಬೇಕು ಅಂದರೆ.. ಈ ಎಲ್ಲಾ ನಾಯಕಿಯರು ಅಣ್ಣಾವ್ರ ಜೊತೆಯಲ್ಲಿ ಅಭಿನಯಿಸಿದ್ದಾಗ ಅಣ್ಣಾವ್ರ ಅಭಿನಯ  ನಾಯಕಿಯರ ವಯಸ್ಸಿಗಿಂತ ಎರಡು ಪಟ್ಟು ಹೆಚ್ಚಿತ್ತು, ಅಂದರೆ ನಾಯಕಿಯರ ವಯಸ್ಸು ೨೫ ರ ಆಸುಪಾಸಿನಲ್ಲಿದ್ದರೆ, ಅಣ್ಣಾವ್ರ ವಯಸ್ಸು ೫೦ರ ಆಸುಪಾಸಿನಲ್ಲಿತ್ತು, ಆದರೂ ಎಲ್ಲೂ ಇದು ಗೊತ್ತಾಗುವುದೇ ಇಲ್ಲ.. ಅದು ಅಣ್ಣಾವ್ರ ಸ್ಪೆಷಾಲಿಟಿ..

ಯೋಗಾಸನ, ಆಹಾರ ಅಭ್ಯಾಸ, ಆರೋಗ್ಯಕ್ಕೆ ಹಾನಿಕಾರಕವಾದ ಅಭ್ಯಾಸಗಳು ಇಲ್ಲದೆ ಇದ್ದದ್ದು, ಮತ್ತೆ ಮಗುವಿನಂತಹ ಮನಸ್ಸು ಅಣ್ಣಾವ್ರನ್ನು ಸದಾ ಯೌವನಾವಸ್ಥೆಯಲ್ಲಿಯೇ ಇಟ್ಟಿತ್ತು... ಅವರ ಯಾವುದೇ ಚಿತ್ರ ನೋಡಿ, ಆ ಪಾತ್ರದ ವಯಸ್ಸನ್ನು ತೆರೆಯ ಮೇಲೆ ಅಂದಾಜಿಸುವುದು ಕಷ್ಟ..

ಅದು ಅಣ್ಣಾವ್ರು..

ಜನುಮದಿನಕ್ಕೆ ಒಂದು ಲೇಖನ ನಿಮ್ಮ ಚರಣ ಕಮಲಗಳಿಗೆ!!!

Wednesday, April 12, 2017

ಅಣ್ಣಾವ್ರ ಡೆಡ್ಲಿ ಎಂಟ್ರೀಸ್.. ಪುಣ್ಯ ದಿನ

ಭಾರತೀಯ ಚಿತ್ರಗಳಲ್ಲಿ ನಾಯಕನ ಅಥವಾ ಖಳನಾಯಕನ ಆರಂಭಿಕ ದೃಶ್ಯಗಳು ಚಿತ್ರದ ಯಾವುದೇ ಹಂತದಲ್ಲಿ ಮಜಾ
ಕೊಡುತ್ತದೆ.  ಮತ್ತೆ ಚಿತ್ರ ನಟ ನಟಿಯರನ್ನು ಆರಾಧಿಸುವ ನಮ್ಮ ದೇಶದಲ್ಲಿ ಕೆಲವೊಮ್ಮೆ ಇದು ತುಸು ಹೆಚ್ಚೇ ಮನಸ್ಸಿಗೆ ಹಿತಕೊಡುತ್ತದೆ. ಹಾಡಿನ ಮೂಲಕ, ಹಾಸ್ಯದ ದೃಶ್ಯದ ಮೂಲಕ, ಹೊಡೆದಾಟದ ಮೂಲಕ.. ಇಲ್ಲವೇ ತುಸು ಭಾಷಣ ಅಥವಾ ಹಿತವಚನ ನೀಡುವ ದೃಶ್ಯಗಳ ಮೂಲಕ ಅವರ ಆರಂಭದ ದೃಶ್ಯಗಳು ಮೂಡಿಬರುವುದು ಸಹಜವಾಗಿದೆ.

ಕರುನಾಡಿನ ಹೆಮ್ಮೆಯ ನಟ ಜೊತೆಗೆ ಚಿತ್ರಜಗತ್ತಿನಲ್ಲಿ ತನ್ನದೇ ಅಭಿನಯ, ಗಾಯನದಿಂದ ತಮ್ಮದೇ ಸ್ಥಾನಗಳಿಸಿ ತಾವೇ ಹೇಳುವ  ಅಭಿಮಾನಿ ದೇವರುಗಳ ಹೃದಯ ಸಿಂಹಾಸನದಲ್ಲಿ ಅನಭಿಷಿಕ್ತ ಚಕ್ರವರ್ತಿಯಾಗಿ ರಾರಾಜಿಸುತ್ತಿರುವ ಅಣ್ಣಾವ್ರ ಕೆಲವು ಚಿತ್ರಗಳ ಆರಂಭಿಕ ದೃಶ್ಯಗಳು ಪುಟ್ಟ ವಿವರ ನನ್ನ ಮನಸ್ಸಿಗೆ ಕಂಡಂತೆ ನಿಮ್ಮ ಮುಂದೆ:-

೧)  ಸಾಹಸಮಯ "ಶಂಕರ್ ಗುರು"
 ಚಿತ್ರಪ್ರೇಮಿಗಳ ಹೃದಯದಲ್ಲಿ ಹಸಿರಾಗಿ ಉಳಿದಿರುವ ಚಿತ್ರ.. ಇದರಲ್ಲಿ ಅಣ್ಣಾವ್ರು ಮೂರು ಪಾತ್ರಗಳು..
ಚಿತ್ರ ಕೃಪೆ : ಗೂಗಲೇಶ್ವರ 

ಮೊದಲನೇ ಪಾತ್ರ.. ಹೆಂಡತಿಯನ್ನು   ಬಹುವಾಗಿ ಪ್ರೀತಿಸುವ ರಾಜಶೇಖರ್.. ಹೆಂಡತಿ ರಚಿಸಿದ ಬಣ್ಣ ತುಂಬಿದ ಚಿತ್ರವನ್ನು ಕಂಡು ಖುಷಿ ಪಟ್ಟು.. ಈಗ ನನ್ನ ಚಾನ್ಸ್ ಎನ್ನುತ್ತಾ.. ಕುಂಕುಮದ ಭರಣಿ ತೆಗೆದು ಹಣೆಗೆ ಕುಂಕುಮ ಇಡುವ ದೃಶ್ಯ.. ಅದ್ಭುತವಾಗಿ ಮೂಡಿಬಂದಿದೆ.. ನಂತರ "ಚೆಲುವೆಯ ನೋಟ ಚೆನ್ನಾ" ಹಾಡು

ಎರಡನೇ ಪಾತ್ರ. ಸಂಯಮ ಸ್ವಭಾವದ ಶಂಕರ್.. ನಾಯಕಿ ಜಯಮಾಲಾ ಅವರನ್ನು ಪೋಕ್ರಿಗಳು ಛೇಡಿಸುತ್ತಿದ್ದಾಗ.. "ಅಡ್ರೆಸ್ಸ್ ಬೇಕಾ ನಾ ಕೊಡುತ್ತೇನೆ" ಎಂದು ಹೊಡೆದಾಡಿ ನಾಯಕಿಯನ್ನು ರಕ್ಷಿಸುತ್ತಾರೆ.. ಸೌಮ್ಯ ಸ್ವಭಾವದಲ್ಲಿ ಮಾತಾಡುತ್ತಲೇ, ಲೀಲಾಜಾಲವಾಗಿ ಹೊಡೆದಾಟದ ದೃಶ್ಯಕ್ಕೆ ನುಗ್ಗುವ ಅಣ್ಣಾವ್ರು ಇಷ್ಟವಾಗುತ್ತಾರೆ

ಅಣ್ಣಾವ್ರ ಈ ಹಾಸ್ಯ ತುಂಬಿದ ಪಾತ್ರ "ಗುರು" ಬಹುಶಃ ಯಾರೂ ಮಾಡಲಿಕ್ಕೆ ಆಗೋದಿಲ್ಲ ಅನ್ಸುತ್ತೆ.. ನಾಟಕದ ಪಾತ್ರದ ಅಭ್ಯಾಸ ಎಂದು ವಕೀಲ ಅಪ್ಪನ ಮುಂದೆ ಕೊಲೆಗಡುಕನಾಗಿ ಬರುವ ಪಾತ್ರ.. ಅದ್ಭುತವಾಗಿ ಮೂಡಿ ಬಂದಿದೆ.

೨) ಮನಸ್ಸನ್ನು ಸುಧಾರಿಸುವ ಗಿರಿ ಕನ್ಯೆ
ಗುಪ್ತಗಾಮಿನಿಯಾಗಿ ಮನುಜನ ದುರಾಸೆ, ಆಕ್ರಮಣ, ವಂಚನೆ ಇದನ್ನೆಲ್ಲಾ ಕೂಡಿಸಿಕೊಂಡು ಬರುವ ಹಾಡು "ಏನೆಂದು ನಾ ಹೇಳಲಿ.. ಮಾನವನಾಸೆಗೆ ಕೊನೆಯೆಲ್ಲಿ" ಚಿತ್ರೀಕರಣ, ಸಾಹಿತ್ಯ, ಸಂಗೀತ, ಹಾಡುಗಾರಿಕೆ ಮತ್ತೆ ಅಣ್ಣಾವ್ರ ಅಭಿನಯ ಸೊಗಸಾಗಿದೆ.
ಚಿತ್ರ ಕೃಪೆ : ಗೂಗಲೇಶ್ವರ 


೩) ಆಡುವ ಸಮಯದ ಗೊಂಬೆ
ನಮ್ಮ ಉಪಾಯಗಳು ಸಿದ್ಧತೆಗಳು ಏನೇ ಇದ್ದರೂ, ಮೇಲೆ ಕೂತಿರುವ ಆ ಮಾಯಗಾರನ ತಲೆಯಲ್ಲಿ ಏನು ಇರುತ್ತದೆಯೋ ಅದೇ ನೆಡೆಯುವುದು.. ಇದರ ಬುನಾದಿಯ ಮೇಲೆ ಬರುವ "ಚಿನ್ನದ ಗೊಂಬೆಯಲ್ಲ" ಹಾಡು ನಂತರ ಲಾರಿಯಲ್ಲಿ ಕುಳಿತು ತನ್ನ ಬಾಲ್ಯದ ನೆನಪನ್ನು ಮಾಡಿಕೊಳ್ಳುತ್ತಾ, ದಾರಿಯಲ್ಲಿ ಒಬ್ಬ ಹುಡುಗನನ್ನು ಕಳ್ಳರಿಂದ ರಕ್ಷಿಸಿ ಮನೆಗೆ ಬಂದಾಗ.. ತಾಯಿ ಕೇಳುತ್ತಾಳೆ ಯಾಕೆ ಗುರು ತಡವಾಯಿತು "ಏನು ಮಾಡೋದಮ್ಮ ದಾರಿಯಲ್ಲಿ ಸಿಗುವ ನಾಯಿಗಳು, ಎಮ್ಮೆಗಳು, ದನಗಳು ನನ್ನಂತೆ ಮನೆ ಬಿಟ್ಟು ಓಡಿ ಬಂದ ಅನಾಥ ಮಕ್ಕಳು ಇವರನ್ನೆಲ್ಲಾ ಮನೆಗೆ ಸೇರಿಸಿ ಮನೆಗೆ ಬರುವುದು ತಡವಾಯಿತು" ಸರಳ  ಮಾತುಗಳಲ್ಲಿ ಜೀವನದ ಸೂತ್ರವನ್ನು ಹೇಳುವ ಅಣ್ಣಾವ್ರು ಇಷ್ಟವಾಗುತ್ತಾರೆ.
ಚಿತ್ರ ಕೃಪೆ : ಗೂಗಲೇಶ್ವರ 

೪) ತಾಯಿಯ ಅನುರಾಗ.. ಅನುರಾಗ ಅರಳಿತು
ತಾಯಿ ಈ ಪಾತ್ರ ಅಣ್ಣಾವ್ರ ಚಿತ್ರದಲ್ಲಿ ಯಾವಾಗಲೂ ವಿಶೇಷ... ತನ್ನ ತಾಯಿಗೆ ಆರೋಗ್ಯದ ಸಮಸ್ಯೆಯನ್ನು ಶ್ರೀಕಂಠನ ಮುಂದೆ ಹೇಳಿಕೊಳ್ಳದೆ  ಬದಲಿಗೆ ಆ ಮಹಾದೇವನನ್ನು ಹೋಗುಳುತ್ತಾ "ಶ್ರೀಕಂಠ ವಿಷಕಂಠ" ಹಾಡಲ್ಲಿ ಅಣ್ಣಾವ್ರ ಅಭಿನಯ ಸೊಗಸು. ಅದರಲ್ಲೂ ಉರುಳು ಸೇವೆ ಮಾಡುತ್ತಾ ದೇವಸ್ಥಾನದ ಮುಂದೆ ಕುಳಿತಾಗ ಕಾಣುವ ಅವರ ಮುಖಭಾವ ಮತ್ತು ದೇಹ ಭಾಷೆ ನನಗೆ ಯಾವಾಗಲೂ ಇಷ್ಟ.. ಮಹಾದೇವನಿಗೆ ಅಭಿಷೇಕವಾಗುತ್ತಿರುವಾಗ ಅವರು ಹಾಡುವ ಆಲಾಪ ಭಕ್ತಿರಸ ಹೊಮ್ಮಿಸುತ್ತದೆ.
ಚಿತ್ರ ಕೃಪೆ : ಗೂಗಲೇಶ್ವರ 

೫) ಘರ್ಜಿಸುವ ಹಿರಣ್ಯ - ಭಕ್ತ ಪ್ರಹ್ಲಾದ 
ಏನೂ ಹೇಳಲಿ.. ಮನಸ್ಸು ತುಂಬಿ ಬರುತ್ತದೆ.. ತನ್ನ ಅಪ್ಪ ಮಾಡುತ್ತಿದ್ದ ಪೌರಾಣಿಕ ಪಾತ್ರಗಳನ್ನು ಕಂಡು ಅದನ್ನು ತಮ್ಮೊಳಗೆ ತುಂಬಿಕೊಂಡು ಅದಕ್ಕೆ ಒಂದು ಗೌರವ ತಂದು ಕೊಟ್ಟ ಅಭಿನಯ.. "ಪ್ರಿಯದಿಂ ಬಂದು ಚತುರ್ಮುಖನ್"   ಈ ಪುಟ್ಟ ಮಟ್ಟಿನ ಜೊತೆಯಲ್ಲಿ ಶುರುವಾಗುವ ದೃಶ್ಯ.. ಆ ದೈತ್ಯನ ಭವ್ಯತೆಯನ್ನು ಎತ್ತಿ ನಿಲ್ಲಿಸುತ್ತದೆ ಅಣ್ಣಾವ್ರ ಅಭಿನಯ.. ನಾವು                       ಹಿರಣ್ಯಕಶಿಪುವನ್ನು ನೋಡಿಲ್ಲ.. ಆದರೆ ಅಣ್ಣಾವ್ರನ್ನು ನೋಡಿದ ಮೇಲೆ.. ಸ್ವತಃ ಹಿರಣ್ಯಕಶಿಪು ಬಂದರೂ ಮಂಕಾಗುತ್ತಾರೇನೋ.. 
ಚಿತ್ರ ಕೃಪೆ : ಗೂಗಲೇಶ್ವರ 
ಹೀಗೆ ಅಣ್ಣಾವ್ರ ಹಲವಾರು ಚಿತ್ರಗಳ ಆರಂಭಿಕ ದೃಶ್ಯಗಳು, ಹಾಡುಗಳು ಜೀವನಕ್ಕೆ ಬೇಕಾಗುವ ಯಾವುದೋ ಒಂದು ಸೂತ್ರವನ್ನು ನೆನಪಿಸಿ ಕಳಿಸಿ ಕೊಡುವ ಪಠ್ಯ ಪುಸ್ತಕದಂತಿದೆ..

ಅಣ್ಣಾವ್ರ ಚಿತ್ರ ಪಾತ್ರಗಳನ್ನ ನೋಡುತ್ತಾ ಬೆಳೆದ ನನಗೆ.. ಜೀವನದ ಪರಿಸ್ಥಿತಿಯನ್ನು ಎದುರಿಸಲು ಗೊಂದಲವಾದಾಗ.. ಅವರ ಯಾವುದೋ ಒಂದು ಚಿತ್ರ ನೋಡಿದರೆ ಸಾಕು.. ಸಮಸ್ಯೆಗಳು ವಾಸುದೇವ ಶಿಶು ಕೃಷನನ್ನು ಬುಟ್ಟಿಯಲ್ಲಿ ತಲೆಯ ಮೇಲೆ ಇಟ್ಟುಕೊಂಡು ಬರುವಾಗ ಯಮುನಾ ನದಿ ದಾರಿ ಬಿಡುವಂತೆ.. ಸದ್ದಿಲ್ಲದೇ ಪಕ್ಕಕ್ಕೆ ಹೋಗಿ.. ಆ ಸಮಸ್ಯೆಗಳನ್ನು ನಿವಾರಿಸುವ ಉಪಾಯಗಳು ಹೊರ ಹೊಮ್ಮುತ್ತವೆ 

ಅಣ್ಣಾವ್ರ ಪುಣ್ಯ ದಿನವಿಂದು.. ಅವರ ನೆನಪಲ್ಲಿ ಒಂದು ಲೇಖನ ಅವರ ಕೋಟಿಗಟ್ಟಲೆ ಅಭಿಮಾನಿ ದೇವರುಗಳ ಮಡಿಲಿಗೆ:-)