Sunday, April 12, 2015

ಯುಗಯುಗಕ್ಕೂ ಸಲ್ಲುವ ಏಕೈಕ ಆರಾಧ್ಯ ದೈವ....!

ದಿನಗಳು ಉರುಳುತ್ತವೆ... ಅವು ವಾರಗಳಾಗುತ್ತವೆ, ಮಾಸಗಳಾಗುತ್ತವೆ.. ವಸಂತಗಳಾಗುತ್ತವೆ.. ದಶಕಗಳಾಗುತ್ತವೆ.. ಶತಮಾನಗಳು, ಯುಗಗಳು ಆಗುತ್ತವೆ.. ಈ ಕಾಲಚಕ್ರವನ್ನು ಮೆಟ್ಟಿ ನಿಲ್ಲಬಲ್ಲವರು, ಯುಗಯುಗಗಳಿಗೂ ಸಲ್ಲುವವರ ಸಂಖ್ಯೆ ಬೆರಳೆಣಿಕೆ.. ಅಂಥವರಲ್ಲಿ ಅಭಿಮಾನಿ ದೇವರುಗಳ ಹೃದಯದಲ್ಲಿ ಸದಾ ನೆಲೆಸಿರುವ ದೇವರು ನಮ್ಮ ಅಣ್ಣಾವ್ರು.

ದೇವಲೋಕದಲ್ಲಿ ಎಲ್ಲರಲ್ಲೂ ತಳಮಳ, ಸಂದೇಹ.. ದೊಡ್ಡ ದೊಡ್ಡ ಚರ್ಚೆಗಳೇ ಆಗೊಗಿದ್ದವು.. ಯಾರಿಗೂ ಒಮ್ಮತ ನಿರ್ಣಯ ಕೊಡಲು ಸಾಧ್ಯವಿರಲಿಲ್ಲ. ತ್ರಿಮೂರ್ತಿಗಳೇ ಬಂದರೂ, ಋಷಿ ಮುನಿಗಳು, ಬ್ರಹ್ಮರ್ಷಿಗಳು, ಮಹರ್ಷಿಗಳು ಊಒಹೂ ನಿರ್ಣಯಕ್ಕೆ ಬರಲು ಹೋರಾಡಿದರು, ಮಾತಿನಲ್ಲಿ ಕುರುಕ್ಷೆತ್ರವನ್ನೇ ಕಟ್ಟಿದರು.. ಉಪಯೋಗವಾಗಲೇ ಇಲ್ಲ..

ಯಾಕೋ ಸಭೆಯಲ್ಲಿ ಅಚಾನಕ್ ನಿಶ್ಯಬ್ಧ..ಎಲ್ಲರೂ ತುಟಿಗಳಿಗೆ ಬೀಗ ಮುದ್ರೆ ಹಾಕಿಕೊಂಡು ಬಿಟ್ಟಿದ್ದಾರೋ ಎನ್ನುವಂಥ ಸನ್ನಿವೇಶ ಸೃಷ್ಟಿಯಾಗಿತ್ತು.. ಅಲ್ಲಿದ್ದ ನಾರದರಿಗೆ ಆಶ್ಚರ್ಯ ಇದೇನಿದು. ಈಗ ಕೆಲ ಹೊತ್ತಿನಲ್ಲಿ ನಭೋಮಂಡಲವೇ ತೂತು ಬಿದ್ದು ನಾವೆಲ್ಲಾ ಭುವಿಗೆ ಜಾರಿ ಬಿದ್ದು ಬಿಡುತ್ತೇವೆ ಅನ್ನುವಷ್ಟು ಸದ್ದು ಮಾಡುತ್ತಿದ್ದ ಈ ದೇವಲೋಕದಲ್ಲಿ ಈ ನಿರ್ವಾತ ವಾತಾವರಣವೇಕೆ ಎನ್ನುವ ಅನುಮಾನ ಬಂದು.... ಹಾಗೆ ತಂಬೂರಿ ಮೀಟುತ್ತಾ, ನಾರಾಯಣ ನಾರಾಯಣ ಎಂದು ತಿರುಗಿ ನೋಡುತ್ತಾರೆ...

"ಓಹ್ ಬನ್ನಿ ಬನ್ನಿ.. ನಿಮಗೆ ಕಾಯುತ್ತಿದ್ದೆವು.. ನಿಮ್ಮ ಪರಿಚಯವಾಗಲಿ ನಮಗೆಲ್ಲ.. ನಮಗೆ ನಿಮ್ಮ ಪರಿಚಯವಿದೆ... ಆದರೆ ನಿಮ್ಮನ್ನು ನೋಡುವ ತವಕ ನಮಗೆಲ್ಲರಿಗೂ ಇತ್ತು.. .. "

"ನಮಸ್ಕಾರ ನಮಸ್ಕಾರ.. ನಾರದ ಮುನಿಗಳೇ ನನ್ನ ಆಗಮನವನ್ನು ನೀವೆಲ್ಲ ನಿರೀಕ್ಷಿಸುತ್ತಿದ್ದೀರ.. ? ದೊಡ್ಡ ಮಾತು ದೊಡ್ಡ ಮಾತು.. ನೀವೆಲ್ಲ ದೇವಾನುದೇವತೆಗಳು.. ನಾ ಒಬ್ಬ ಹುಲು ಮಾನವ.. ನಾನೆಲ್ಲಿ ನೀವೆಲ್ಲಿ.. ಏನಿದು ಈ ತುಂಟತನ... "

"ಇಲ್ಲ ಇಲ್ಲ.. ನಾವೆಲ್ಲಾ ಯುಗಯುಗಗಳ ಕಾಲ ತಪಸ್ಸು ಮಾಡಿ ಸಿದ್ಧಿಸಿ ಈ ದೇವತ್ವವನ್ನು ಪಡೆದ ನಮಗೆ ಸಾಧಿಸಲು ಆಗದ ಕೆಲಸವನ್ನು ನೀವು ಕೇವಲ ಏಳೆಂಟು ದಶಕಗಳಲ್ಲಿ ಸಾಧಿಸಿದ್ದೀರಿ.. ಅದು ನಿಮಗೆ ಹೇಗೆ ಸಾಧ್ಯವಾಯಿತು.. ಇನ್ನೊಂದು ತಮಾಷೆ ಗೊತ್ತೇ.. ಇದನ್ನು ಕೇಳಿದರೆ ನೀವೇ ನಗುತ್ತೀರಿ"

"ನಿಮಗೆ ಅಭ್ಯಂತರ ಇಲ್ಲದೆ ಹೋದರೆ  ಹೇಳಿ ನಾರದ ಮುನಿಗಳೇ.. ನೀವು ಹೇಳಿ ನಂತರ ನಿಮ್ಮ ಪ್ರಶ್ನೆಗೆ ಉತ್ತರಿಸುವೆ.. "

"ದೇವಲೋಕದ ನಮ್ಮ ಮಾರುಕಟ್ಟೆಯಲ್ಲಿ ತಿಂಡಿ ತಿನಿಸು ಪೇಯ ಎಲ್ಲವೂ ಸರಾಗವಾಗಿ ಮಾರಾಟವಾಗುತ್ತದೆ.. ಬಳೆ, ಲೋಲಾಕು, ಉಡುಗೆ ತೊಡುಗೆ, ಪಾದರಕ್ಷೆಗಳು ಯಾವುದಕ್ಕೂ ಮೋಸವಿಲ್ಲ.. ಆದರೆ ಆದರೆ... "

"ಹೇಳಿ ಮುನಿಗಳೇ ಏನು ಆದರೆ?"

"ಇಲ್ಲಿನ ದೇವರ ಚಿತ್ರಗಳಾದ ಗಣಪ, ಸುಬ್ರಮಣ್ಯ, ತ್ರಿಮೂರ್ತಿಗಳು, ರಾಮ, ಕೃಷ್ಣ, ಹೀಗೆ ವಿಷ್ಣುವಿನ ದಶಾವತಾರ, ಋಷಿ ಮುನಿಗಳು, ಇವೆಲ್ಲ ಹೋಗಲಿ ಅಸುರರಾದ ರಾವಣ, ಜರಾಸಂಧ, ದುರ್ಯೋಧನ, ಹೀಗೆ ಮಿಕ್ಕಿತರ ಪುರಾಣ ಪಾತ್ರಗಳ ಯಾವುದೇ ಚಿತ್ರಪಟಗಳು ನಮ್ಮ ಮಾರುಕಟ್ಟೆಯಲ್ಲಿ ಕೊಳೆಯುತ್ತಾ ಬಿದ್ದಿವೆ.. ಯಾರೂ ಅದನ್ನು ತೆಗೆದುಕೊಳ್ಳುವುದಿಲ್ಲ.. ಇದನ್ನು ತೋರಿಸಿದರೂ ಬೇಡ ಬೇಡವೇ ಎಂದು ಹೇಳುತ್ತಾರೆ..."

"ಅರೆ ಅರೆ ಇದೇನಿದು ಆಶ್ಚರ್ಯವಾಗಿದೆಯೆ.. ಯಾಕಂತೆ.. ದೇವಲೋಕದಲ್ಲಿ ದೇವರ ಬಗ್ಗೆ ಭಕ್ತಿ, ಶ್ರದ್ಧೆ ಕಡಿಮೆಯಾಯಿತೆ.. ಅಥವಾ ದೇವರ ಮಹಿಮೆ ಕಡಿಮೆ ಆಗಿದೆಯೇ.. ಕೇಳಿದ ವರವನ್ನು ಕರುಣಿಸಲು ಆಗುತ್ತಿಲ್ಲವೇ.. ಯಾಕೆ ಯಾಕೆ.. ನನಗೆ ಕುತೂಹಲ ತಡೆಯಲು ಆಗುತ್ತಿಲ್ಲ.. ಹೇಳಿ ಮುನಿಗಳೇ ಹೇಳಿ ಮುನಿಗಳೇ"

"ನೋಡಿ ನೋಡಿ ನೀವೇ ನೋಡಿ.. ಬರಿ ಈ ಕೆಳಗಿನ ಪಟಗಳನ್ನು ಮಾತ್ರ ಕೊಳ್ಳುತ್ತಿದ್ದಾರೆ.. ನಮ್ಮ ಇಲ್ಲಿನ ಯಾರ ಚಿತ್ರಪಟಗಳನ್ನು ಮೂಸಿ ಕೂಡ ನೋಡುತ್ತಿಲ್ಲ.. "

ಹಾಗೆಯೇ ಕಣ್ಣು ಹಾಯಿಸಿದರು.. ಆಶ್ಚರ್ಯ.. ನಗು ಎಲ್ಲವೂ ಒಟ್ಟಿಗೆ

"ಓಹ್ ಆಹಾ ಆಹಾ ಅಹಹ" ನಗು ಬಂತು.. "ಅರೆ ಇದೆಲ್ಲ ನನ್ನದೇ ಚಿತ್ರಗಳ ಚಿತ್ರ ಪಟ.. ಇದೆಲ್ಲ ಇಲ್ಲಿಗೆ ಹೇಗೆ ಬಂದವು.. "

"ಅಯ್ಯೋ ನಮ್ಮ ಗಣಪ ಇದ್ದಾನಲ್ಲ ಅವನು ಪ್ರತಿ ವರ್ಷ ಭುವಿಗೆ ಭಾದ್ರಪದ ಶುಕ್ಲ ಚೌತಿಯ ದಿನ ಹೋದಾಗ.. ಒಮ್ಮೆ ನಿಮ್ಮ ಚಲನಚಿತ್ರಗಳನ್ನು ನೋಡಿ.. ಇಲ್ಲಿಗೆ ತಂದು ಬಿಟ್ಟಿದ್ದಾನೆ.. ಅವನ ಕೆಲಸ ನಿಮ್ಮ ಚಿತ್ರಗಳು ಖಾಲಿ ಆಗದೆ ಇರುವ ಹಾಗೆ ಸದಾ ಅಚ್ಚು ಹಾಕುತ್ತಲೇ ಇರುವುದು.. ನೋಡಿ ಅವನ ಅಂಗಡಿ ಸದಾ ಗಿಜಿ ಗಿಜಿ ಎನ್ನುತ್ತಲೇ ಇರುತ್ತದೆ.. "

"ನಾರದ ಮುನಿಗಳೇ ಈ ದೇಹವನ್ನು ರಾಜಕುಮಾರ, ಮುತ್ತು ರಾಜ, ರಾಜಣ್ಣ, ಅಣ್ಣಾವ್ರು ಎಂದು ಗುರುತಿಸುತ್ತಾರೆ.. ಆದ್ರೆ ಈ ಲೋಕದಲ್ಲಿ ನೀವೆಲ್ಲ ನನಗೆ ತೋರುತ್ತಿರುವ ಗೌರವ ನೋಡಿ ನಾ ಮೂಕನಾಗಿದ್ದೇನೆ.. ಭುವಿಯಲ್ಲಿ ನನಗೆ ಅಭಿಮಾನಿಗಳು ಅಣ್ಣಾ ಎಂದು ಕರೆದರೆ.. ನೀವೆಲ್ಲ ನನ್ನನ್ನು ಇನ್ನಷ್ಟು ಎತ್ತರಕ್ಕೆ ಏರಿಸಿದ್ದೀರ.. ನಿಮಗೆಲ್ಲಾ ನನ್ನ ಹೃದಯ ಪೂರ್ವಕ ನಮನಗಳು"

"ಹೌದು ಅಣ್ಣಾವ್ರೆ .. ನಿಮ್ಮ ಮಾತು ನಿಜ.. ನೀವು ನಟಸಾರ್ವಭೌಮ ಮಾತ್ರವೇ ಅಲ್ಲ ನೀವು ಚಲನಚಿತ್ರದ ಅನಭಿಷಿಕ್ತ ಸಾಮ್ರಾಟರು.. ನಿಮ್ಮಲ್ಲೇ ಮುನ್ನೂರು ಕೋಟಿ ದೇವಾನುದೇವತೆಗಳನ್ನು ನೋಡಬಹುದು ನೋಡುತ್ತಿದ್ದೇವೆ.. "
ಇಡಿ ದೇವಲೋಕ ಎದ್ದು ನಿಂತು .. ಅಣ್ಣಾವ್ರೆ ನೀವು ನಮ್ಮ ಕರೆಗೆ ಓಗೊಟ್ಟು ನಿಮ್ಮ ಅಭಿಮಾನಿ ದೇವರುಗಳನ್ನು ಬಿಟ್ಟು ಇಲ್ಲಿಗೆ ಬಂದದ್ದು ನಮಗೆ ಕುಶಿ ಆಯ್ತು ಅಂತ ಹೇಳಿದರೂ.. ನಿಮ್ಮ ಅಭಿಮಾನಿ ದೇವರುಗಳು ನಿಮ್ಮನ್ನು ದೇವರೇ ಎಂದು ಸಂಭ್ರಮಿಸುವುದನ್ನು ನೋಡಿ ಕೇಳುವುದೇ ನಮ್ಮ ಭಾಗ್ಯ"

************

"ಹೀಗೆ ಯುಗಯುಗಕ್ಕೂ ಸಲ್ಲುವ ಏಕೈಕ ಆರಾಧ್ಯ ದೈವ ನಮ್ಮ ಅಭಿಮಾನಿದೇವರುಗಳ ದೇವರು.. "

4 comments:


 1. "ರಾಜಣ್ಣನನ್ನು ನಾವು ಕನ್ನಡಿಗರು ತುಂಬಾ ಮಿಸ್ ಮಾಡ್ಕೊಂಡಿದ್ದೇವೆ..."
  ನೂರಕ್ಕೆ ನೂರರಷ್ಟು ನಿಜ..
  ಅವರ ಸಿನೇಮಾಗಳಲ್ಲಿರುವ ಒಂದು ನೀತಿ.. ಸಹಜ ಸಂಭಾಷಣೆಗಳು...ಕೌಟುಂಬಿಕ ಬಂಧನಗಳ ಪ್ರೀತಿ...
  ಸೊಗಸಾದ ಹಾಡುಗಳು..

  ಅವರು ಎಂದೆಂದಿಗೂ ನಮ್ಮ ನಾಡಿನ ಬಂಗಾರದ ಮನುಷ್ಯ....

  ReplyDelete
 2. ರಾಜ್ ಅವರ ಮಾತು ಓದುವಾಗಿ ಅವರ ಶೈಲಿಯನ್ನು ನೆನೆಸಿಕೊಂಡು ಓದಿದೆ. ಅದು ರಾಜ್ ಪ್ರಭಾವ ಅಂದ್ರೆ. :) ಸೂಪರ್ ಬರಹ

  ReplyDelete
 3. ಅವನು ದೂರದಲಿಲ್ಲ ಕಾಣದೇ ಅಡಗಿಲ್ಲ... ಅವರೇ ಹಾಡಿದ ಶಿ.ಮೆ.ಕ ಚಿತ್ರದ ಈ ಸುಮಧುರ ಭಕ್ತಿಗೀತೆ, ಕನ್ನಡ ಜನಮಾನಸದಲ್ಲಿ ಅವರ ನಿರಂತರ ಇರುವಿಕೆಯ ಅನ್ವರ್ಥ ಗೀತೆ.

  ಈ ಮೂಲಕ ನನ್ನದೂ ಕಿರು ನುಡಿ ನಮನ:
  http://badari-poems.blogspot.in/2012/08/blog-post_4.html

  ReplyDelete
 4. ಅರೆ ಶ್ರೀಕಾಂತ್ ಜಿ ಇದು ನನ್ನ ಕಣ್ಣಿನಿಂದ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾಗಲಿಲ್ಲ. ಆದರೆ ನಮ್ಮ ಪ್ರೀತಿಯ ಕಲಾವಿದ ರಾಜಣ್ಣ ಅವರಬಗ್ಗೆ ನಿಮ್ಮ ಈ ಲೇಖನಕ್ಕೆ ಜೈ ಎನ್ನಲೇ ಬೇಕು, ನಿಮ್ಮ ಅಕ್ಷರ ಲೋಕದಲ್ಲಿ ನಕ್ಷತ್ರವನ್ನು ಅದ್ಭುತವಾಗಿ ಚಿತ್ರಿಸಿದ್ದೀರಿ , ಈ ಅಮರಕಲಾವಿದನಿಗೆ ನಿಮ್ಮ ಅಮರ ಭಾವನೆಗಳ ಅಲಂಕಾರ ಪೂರ್ವಕ ನಮನ ಬಹಳ ಚೆನ್ನಾಗಿದೆ, ಬಹಳ ಚೆನ್ನಾಗಿದೆ

  ReplyDelete