Friday, December 19, 2014

ಕಥೆಗಳ ಸಂಗಮ ಹಾಗೆಯೇ ಭಾವ ಸಂಗಮ ಕೂಡ - ಕಥಾಸಂಗಮ (1976)

ಉತ್ಸಾಹದ ಚಿಲುಮೆಯಾಗಿದ್ದಾಗ ಕಣ್ಣಿಗೆ ಕಾಣುವ ಚಿಕ್ಕ ಚಿಕ್ಕ ರತ್ನಗಳು ಮುತ್ತುಗಳಾಗುತ್ತವೆ. ಈ ವಾಕ್ಯದ ಸತ್ಯದರ್ಶನ ನಮಗೆ ಮಾಡಿಸಿದ್ದು ಪುಟ್ಟಣ್ಣ ಅವರ ಕಥಾಸಂಗಮ ಚಿತ್ರ.  ಲೇಖಕರೆ ಹೇಳುವಂತೆ ನನ್ನ ಸಣ್ಣ ಕಥೆಯನ್ನು ಆರಿಸಿ ಚಿತ್ರ ಮಾಡಿದ್ದಾರೆ. ಅದನ್ನು ಬೆಳ್ಳಿತೆರೆಯ ಮೇಲೆ ಹೇಗೆ ತರುತ್ತಾರೆ ಎನ್ನುವ ಕುತೂಹಲ ನನಗೂ ಇದೆ ಎಂದು,

ಪುಟ್ಟಣ್ಣ ಅವರ ತಾಖತ್ ಇದ್ದದ್ದು ಮನಸ್ಸಿಗೆ ಹಿಡಿಸುವ ಕಥೆಗಳನ್ನು ಲೇಖನಗಳನ್ನು ಹುಡುಕುವುದು ಮತ್ತು ಅದು ಕಾಡಿದರೆ ಅದನ್ನು ಚಿತ್ರಕ್ಕೆ ಅಳವಡಿಸುವುದು.

ಇಂಥಹ ಒಂದು ಅಭೂತಪೂರ್ವ ಘಟನೆ ನಡೆದದ್ದು ೧೯೭೬ ಇಸವಿಯಲ್ಲಿ.  ಹೊರಜಗತ್ತಿಗೆ ಸಾಮಾನ್ಯ ಅನ್ನಿಸುವ ಚಿಕ್ಕ ಚಿಕ್ಕ ಕತೆಗಳನ್ನು ಹುಡುಕಿ ಆರಿಸಿ ಅದನ್ನು ಬೆಳ್ಳಿತೆರೆಯ ಮೇಲೆ ಉತ್ತು ಬಿತ್ತು ಬೆಳಗಿಸಿದ್ದು ಕಥಾಸಂಗಮ ಎನ್ನುವ ಒಂದು ಪುಷ್ಪಮಾಲಿಕೆಯಲ್ಲಿ.


ಸಾಮಾನ್ಯ ಪುಟ್ಟಣ್ಣ ಅವರ ಚಿತ್ರಗಳಲ್ಲಿ ಪಾತ್ರಗಳು, ಕಲಾವಿದರು ಕಾಡುತ್ತಾರೆ. ಆದರೆ ಇಲ್ಲಿ ಕಾಡುವುದು ಕಲಾವಿದರಾದರೂ.. ಅದರ ಗಾಢತೆಯಿಂದ ಕಾಡುವುದು ಆ ಕಲಾವಿದರು ನಿರ್ವಹಿಸಿದ ಪಾತ್ರಗಳು ಮತ್ತು ಅದರ ಪೋಷಣೆ.

ವರ್ಧಿನಿ ಆರ್ಟ್ಸ್ ಪಿಕ್ಕ್ಚರ್ಸ್ ಲಾಂಛನದಲ್ಲಿ ಸಿ ಎಸ್ ರಾಜ ಅವರ ನಿರ್ಮಾಣದಲ್ಲಿ ತಯಾರಾದ ಈ ಚಿತ್ರಕ್ಕೆ ಹಾಡುಗಳನ್ನು ಬರೆದದ್ದು ಪುಟ್ಟಣ್ಣ ಅವರ ಜೀವದ ಗೆಳೆಯ ವಿಜಯನಾರಸಿಂಹ.. ಸಂಗೀತ ಪ್ರಾಣ ಸ್ನೇಹಿತ ವಿಜಯಭಾಸ್ಕರ್. ಮೂರು ಹಾಡುಗಳಲ್ಲಿ  ಒಂದನ್ನು ಪಿ ಬಿ ಶ್ರೀನಿವಾಸ್ ಮತ್ತು ಉಳಿದ ಎರಡನ್ನು ಕಸ್ತೂರಿ ಶಂಕರ್ ತಮ್ಮ ಕೋಮಲ ಕಂಠದಲ್ಲಿ ಸೊಗಸಾಗಿ ಹಾಡಿದ್ದಾರೆ. ಕಪ್ಪು ಬಿಳುಪು ವರ್ಣದಲ್ಲಿ ಇಡಿ ಚಿತ್ರವನ್ನು ಸೆರೆಹಿಡಿದದ್ದು ಹರಿದಾಸ್.

ಮಾನವನ ವಿಭಿನ್ನ ಮುಖಗಳ, ಭಾವಗಳ, ಅಂತಃಕರಣ ಎಲ್ಲವನ್ನು ನವಿರಾದ ಬಟ್ಟೆಯ ಹಾಗೆ ತಮ್ಮ ಕಥೆಗಳಲ್ಲಿ ತುಂಬಿದ್ದನ್ನು ಅಷ್ಟೇ ಜೋಪಾನ ವಾಗಿ ಕಥೆಯ ಮತ್ತು ಲೇಖಕರ ಆಶಯಕ್ಕೆ ಭಂಗ ಬರದಂತೆ ಅಷ್ಟೇ ಸುಂದರಾದ ರಂಗವಲ್ಲಿ ಹಾಕಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿದವರು ಪುಟ್ಟಣ್ಣ ಕಣಗಾಲ್.

ಆರಂಭದಲ್ಲಿ ಲೇಖಕರನ್ನು ತೆರೆಯ ಮೇಲೆ ಬರುವಂತೆ ಮಾಡಿ, ಅವರ ಕಿರುಪರಿಚಯ ಮಾಡಿಕೊಟ್ಟು, ಅವರನ್ನು ಮಾತಾಡಲು ತೆರೆಯನ್ನು ಬಿಟ್ಟುಕೊಟ್ಟು ತಾವು ಲೇಖಕರನ್ನು ಎಷ್ಟು ಆದರಿಸುತ್ತಿದ್ದರು ಎನ್ನುವುದನ್ನು ಸೂಕ್ಷವಾಗಿ ತೋರಿದ್ದಾರೆ. ಅದಕ್ಕಿಂತ ಕೊಂಚ ಮೊದಲು ಕನ್ನಡ ಸಾಹಿತ್ಯ ಭಂಡಾರವನ್ನು ಪರಿಚಯಿಸುತ್ತಾ ಅನೇಕಾನೇಕ ಲೇಖಕ/ಕಿಯರನ್ನು ಅವರ ಭಾವಚಿತ್ರಗಳ ಮೂಲಕ ತೋರುವುದು ಒಂದು ವಿಭಿನ್ನ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

ಶ್ರೀ ಗಿರೆಡ್ಡಿ ಗೋವಿಂದರಾಜು ಅವರ "ಹಂಗು" ಎನ್ನುವ ಪುಟ್ಟ ಕಥೆಯನ್ನು ಪರಿಣಾಮಕಾರಿಯಾಗಿ ಮೂಡಿಸಲು ಪುಟ್ಟಣ್ಣ ಅವರಿಗೆ ಕೈ ಜೋಡಿಸಿರುವುದು ಜಿ ಕೆ ಗೋವಿಂದರಾವ್, ಲೋಕನಾಥ್.

ತನ್ನ ಸ್ವಾರ್ಥಕ್ಕೆ, ತನಗೆ ಬೇಕಾದ ಕೆಲಸ ಮಾಡಿಸಿಕೊಳ್ಳಲು ಪ್ರೊಫೆಸರ್ ಅವರನ್ನು ಬಳಸಿಕೊಳ್ಳಲು ಹೋರಾಡುವ/ಕಾಡಿಸುವ ಪಾತ್ರದಲ್ಲಿ ಲೋಕನಾಥ್ ಗಮನ ಸೆಳೆಯುತ್ತಾರೆ. ರಾಗವಾಗಿ ಮಾತಾಡುತ್ತ, ಧ್ವನಿಯನ್ನು ಕೇಳಿದರೆ ಸಿಟ್ಟು ಬರುವಂತೆ ಮೈ ಕೈ ಪರಚಿಕೊಳ್ಳುವಂತೆ ಮಾಡಬಲ್ಲ ಪಾತ್ರವನ್ನು ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಇಲ್ಲಿ ಗೆಲ್ಲುವುದು ಅವರ ಪಾತ್ರವೇ ಆದರೂ ಆ ಪಾತ್ರದ ಸುತ್ತಲೂ ನಿಲ್ಲುವ ಇತರ ಪಾತ್ರಗಳು ಗಮನಾರ್ಹ ಕೊಡುಗೆ ನೀಡಿದ್ದಾವೆ.

ಒಣಗಿ ಹೋದ ಮರದ ಹಿನ್ನೆಲೆಯಲ್ಲಿ ನಿಂತ ಅಪ್ಪ, ಲೋಹದ ಬಲೆಯ ಹಿಂದೆ ನಿಂತ ತನ್ನ ತಂಗಿ, ಖಾಯಿಲೆ ಇಂದ ನರಳುತ್ತಿರುವ ಮಗು, ಔಷದಿ ತರಲು ಬೇಕಾಗುವ ಹಣಕ್ಕೆ ಪಕ್ಕದ ಮನೆಯಿಂದ ಸಾಲ ತರುವೆ ಎನ್ನುವ ಮಡದಿ, ಇಡಿ ಸನ್ನಿವೇಶಕ್ಕೆ ಯಜಮಾನರಾಗುವ ಗೋವಿಂದರಾವ್ ಗಮನ ಸೆಳೆಯುತ್ತಾರೆ. ತನ್ನ ಧ್ಯೇಯ ಒಂದು ಕಡೆ, ಸಂಸಾರದ ಚಿಕ್ಕ ಪುಟ್ಟ ಸಮಸ್ಯೆಗಳನ್ನು ಬಗೆಹರಿಸಬೇಕಾದರೆ ತಾನು ನಂಬಿರುವ ಸಿದ್ಧಾಂತಗಳನ್ನು ಗಾಳಿಗೆ ತೂರಿಬಿಡಬೇಕಾದ ಧ್ವಂಧ್ವ ಇವುಗಳನ್ನು ಗುರುತರವಾಗಿ ಪ್ರದರ್ಶನ ಮಾಡಿದ್ದಾರೆ ತಮ್ಮ ಅಭಿನಯದ ಮೂಲಕ.

ಇಷ್ಟವಾಗುವ ದೃಶ್ಯ.. ಸಾಹುಕಾರ ತನ್ನ ಕೆಲಸ ಮಾಡಿಸಿಕೊಳ್ಳಲು ಪ್ರೊಫೆಸರ್ ಮನೆಗೆ ನುಗ್ಗಿ ಅವರಿಗೆ ಬೇಕಾದ ಅನುಕೂಲತೆ ಮಾಡಿಕೊಟ್ಟು ಹೋದ ಮೇಲೆ.. ಸುಮ್ಮನೆ ಯೋಚನೆ ಮಾಡುತ್ತಾ ಕೂರುವ ಪ್ರೊಫೆಸರ್ ತಲೆಯ ಮೇಲೆ ನೆರಳಿನಲ್ಲಿ ಎರಡು ಕೈಗಳು ಇವರನ್ನು ಆವರಿಸಿಕೊಳ್ಳುತ್ತಾ ಬರುವಂತೆ ತೋರುವ ದೃಶ್ಯ.

ಕಡೆಯ ದೃಶ್ಯದಲ್ಲಿ ಉತ್ತರ ಪತ್ರಿಕೆ ಅವರನ್ನು ಓಡಿಸಿಕೊಂಡು ಬರುವುದು, ಮತ್ತು ಸಾಹುಕಾರ ಹಿಂದೆ ಓಡಿ ಬರುತ್ತಾ, ಗಹಗಹಿಸಿ ನಗುತ್ತಾ ನನ್ನ ಹಂಗೇಕೆ ನಿಮಗೆ ಒಂದು ನಾಲ್ಕು ಮಾರ್ಕ್ಸ್ ಹಾಕಿಬಿಡಿ ಎನ್ನುವುದು.. ಭ್ರಷ್ಟಾಚಾರದ ವಿರೋಧಿಯಾದರೂ ಪರಿಸ್ಥಿತಿ ಆ ನಂಬಿಕೆಯನ್ನು ಹೇಗೆ ಬದಲಾಯಿಸಲು ಕಾಡುತ್ತಾ ಬರುತ್ತದೆ ಎನ್ನುವುದೇ ಇದರ ಕಥಾವಸ್ತು.
*******************
ಹಂಗು ಮಾನವನನ್ನು ಮುಲಾಜಿಗೆ ಸಿಕ್ಕಿಸಿ.. ಪರಿಸ್ಥಿತಿಯನ್ನು ಬಲೆಯಂತೆ ಹೆಣೆದು ಸಿಕ್ಕಿಸುವ ಪ್ರಯತ್ನವಾದರೆ.. ಶ್ರೀಮತಿ ವೀಣಾ ಅವರ "ಅತಿಥಿ" ಪರಿಸ್ಥಿತಿ ಅನುಕೂಲವಾಗಿದ್ದರೂ ತಾ ಅಂದುಕೊಂಡ ವಿಚಿತ್ರ ಆದರ್ಶಗಳು ಹೇಗೆ ಬದುಕಿನ ಸುಖವನ್ನು ಹಿಂಡಿ ಹಿಪ್ಪೆ ಮಾಡಿ ಮನಸ್ಸನ್ನು ಮುದುಡಿ ಹಾಕುತ್ತದೆ ಎಂಬುದನ್ನು ಸಾಂಕೇತಿಕವಾಗಿ ಕಥೆಯ ಮೂಲಕ ಹೇಳುತ್ತದೆ.

ರೂಪ, ಯೌವನ ಮನಷ್ಯನ್ನು ಗರ್ವಿ ಅಥವಾ ತಾ ಅಂದುಕೊಂಡಿದ್ದು ಸರಿ ಎನ್ನುವ ಒಂದು ಪೊಳ್ಳು ಪೊರೆಯನ್ನು ಸೃಷ್ಟಿಸಿರುತ್ತದೆ. ಅದರಲ್ಲಿಯೂ ಆ ಪೊರೆ ಹೆಣ್ಣಲ್ಲಿ ಇದ್ದರೆ, ಅದು ಇನ್ನು ಕಾಡುತ್ತದೆ. ಯೌವನ ಕಾಲದಲ್ಲಿ ಗಂಡಸರು ಎಂದರೆ ಹಾಗೆ ಹೀಗೆ ಎನ್ನುವ ಒಂದು  ಮಿಥ್ಯ ವಲಯವನ್ನು ಸೃಷ್ಟಿಸಿಕೊಂಡು ಜೇಡ ತಾ ಕಟ್ಟಿದ ಬಲೆಯೊಳಗೆ ಕೆಲವೊಮ್ಮೆ ತಾನೇ ಸಿಕ್ಕಿಕೊಂಡು ಹೊರಬರಲಾರದೆ ತವಕಿಸುವ ಹುಳುವಂತೆ ಆಗಿ ಬಿಡುತ್ತದೆ.

ನೋಡುವ ನೋಟ ಸರಿಯಾಗಿ ಇರಬೇಕು ಎನ್ನುವುದು ನಿಜವಾದರೂ, ಎಲ್ಲಿ ನೋಡುತ್ತಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ, ಈ ಮಾತನ್ನು ಪುಷ್ಠಿಕರಿಸುವ ಸಂಭಾಷಣೆ ಇಲ್ಲಿ ಕಾಣುತ್ತದೆ.
"ಪಶ್ಚಿಮ ದಿಕ್ಕಿನತ್ತ ಬಾಗಿಲು ತೆರೆದಿಟ್ಟುಕೊಂಡು ನೋಡಿದರೆ ಬರಿ ಸೂರ್ಯ ಮುಳುಗೋದು ಮಾತ್ರ ಕಾಣುತ್ತದೆ. ಪೂರ್ವ ದಿಕ್ಕಿನತ್ತ ನೋಡ್ರಿ ಗಂಡಸು ಏನು ಎಂದು ಅರ್ಥವಾಗುತ್ತದೆ"

ನಿರ್ಧಾರ ತೆಗೆದುಕೊಳ್ಳುವಾಗ.. ಕೂತಲ್ಲಿಯೇ ಕೂರೋಲ್ಲ, ನಿಂತಲ್ಲಿಯೇ ನಿಲ್ಲೋಲ್ಲ.. ಆದರೆ ಜಾಗಬದಲಾಯಿಸಿದಾಕ್ಷಣ ನಿರ್ಧಾರವೂ ಬದಲಾಗಲೇ ಬೇಕಿಲ್ಲ ಎನ್ನುವುದು ಈ ಸಂಭಾಷಣೆಯಲ್ಲಿ ಇಣುಕುತ್ತದೆ.

"ಜಾಗ ಬದಲಾಯಿಸಿದಾಗ ನಿರ್ಧಾರವೂ ಬದಲಾಯಿಸುತ್ತೀರಿ ಎಂದುಕೊಂಡೆ.. ಆದರೆ ಮತ್ತೆ ಅದೇ ಜಾಗದಲ್ಲಿ ಹೋಗಿ ಕೂತ್ರಿ"
ಒಂದು ಮಾತಲ್ಲಿಯೇ ಮುಗಿಸಬಹುದಾದ ದೃಶ್ಯವನ್ನು ಕಥಾನಾಯಕಿ ನಾಲ್ಕು ಕಲ್ಲಿನ ಬೆಂಚುಗಳಲ್ಲಿ ಕೆಲ ಕ್ಷಣ ಕೂತು ಎದ್ದು ಬರುವುದು ಮತ್ತು ಕಡೆಯಲ್ಲಿ ತನ್ನ ಹಳೆ ನಿರ್ಧಾರವೇ ಸರಿ ಎಂಬ ತೀರ್ಮಾನಕ್ಕೆ ಬರುವುದು ಈ ದೃಶ್ಯದ ಸಾರಾಂಶ. ದೃಶ್ಯ ಸಂಯೋಜನೆ ಇಷ್ಟವಾಗುತ್ತದೆ.

ಪ್ರೀತಿ ಪ್ರೇಮ ಅನುರಾಗ ಇವೆಲ್ಲ ಬದುಕಿಗೆ ಉತ್ಸಾಹ ತುಂಬುವ ಚೇತನಗಳು ಎನ್ನುವುದನ್ನು "ಕಾಳಿದಾಸನ ಕಾವ್ಯಲಹರಿಗೆ" ಹಾಡಿನಲ್ಲಿ ಪಿ ಬಿ ಶ್ರೀನಿವಾಸ್ ಪರಿಣಾಮಕಾರಿಯಾಗಿ ಹೇಳಿದ್ದಾರೆ.
ಗಂಡಿನ ಹಂಗಿಲ್ಲದೆ ನಾ ಬದುಕಿ ತೋರಿಸುತ್ತೇನೆ ಎನ್ನುವ ನಾಯಕಿಯ ಮಾತಿಗೆ ನಾಯಕ ಹೇಳುವ ಮಾತುಗಳು ಇಷ್ಟವಾಗುತ್ತವೆ.

"ನೀವು.. ಇದನ್ನು ಸಾಧಿಸಬಹುದು.. ಗೆಲ್ಲಲೂ ಬಹುದು, ಆದರೆ ಗಂಡು ಹೆಣ್ಣಿನ ಮಧುರ ಪ್ರೇಮದಲ್ಲಿ ಸುಪ್ತವಾದ ಒಂದು ಅವ್ಯಕ್ತ ಆನಂದವನ್ನು ಕಳೆದುಕೊಳ್ಳುತ್ತೀರಿ" ಸೂಪರ್ ಸಂಭಾಷಣೆ.

ಕಡೆಯಲ್ಲಿ.. "ಈ ಜೀವನಕ್ಕೆ ನಾ ಅತಿಥಿಯಾಗಿ ಬಂದವಳೇ" ಎನ್ನುವ ಮಾತು ನಿರ್ಧಾರಗಳನ್ನು ಕಾಲಕಾಲಕ್ಕೆ ಸರಿಯಾಗಿ ತೆಗೆದುಕೊಳ್ಳಬೇಕು ಇಲ್ಲವೇ ತುಕ್ಕು ಹಿಡಿದ ಕಬ್ಬಿಣದಂತಾಗುತ್ತದೆ ಎನ್ನುವ ಸಂದೇಶ ಹೇಳುತ್ತದೆ.

ಈ ಭಾಗದ ಚಿತ್ರದಲ್ಲಿ ಸರೋಜಾದೇವಿ ಮತ್ತು ಕಲ್ಯಾಣ್ ಕುಮಾರ್ ಅವರ ಜುಗಳಬಂಧಿ ಇಷ್ಟವಾಗುತ್ತದೆ, ಸೇರಿಗೆ ಸವ್ವಾ ಸೇರು ಎನ್ನುವಂತೆ ಇರುವ ಸಂಭಾಷಣೆಗಳು ಮನಕ್ಕೆ ತಾಕುತ್ತದೆ.

                                                         *******************

ಕಣ್ಣಿದ್ದು ಪರಿಸ್ಥಿತಿಗೆ ಬಲಿಪಶುವಾಗಿ ಹಂಗಿಗೆ ಬೀಳುವ ಕತೆಯಾದರೆ.. ಹೃದಯವಿದ್ದೂ ಪರಿಸ್ಥಿಯನ್ನು ಸರಿಯಾಗಿ ನೋಡದೆ ಅತಿಥಿಯಾದೇ ಎನ್ನುವ ನೋವಲ್ಲಿ ನಿಲ್ಲುವ ನಾಯಕಿ ಇನ್ನೊಂದು ಕತೆಯಾಗುತ್ತಾರೆ. 

ಶ್ರೀ ಈಶ್ವರ ಚಂದ್ರ ಅವರ "ಮುನಿತಾಯಿ" ಕತೆಯಲ್ಲಿ ಜೀವನದ ಆನಂದವನ್ನು ಅನುಭವಿಸಲು ಕೆಲವರಿಗೆ ಕಣ್ಣು ಬೇಕು ಕೆಲವರಿಗೆ ಕಣ್ಣು ಬೇಡ.. ಆದರೆ  ಹೃದಯ ವೈಶಾಲ್ಯತೆ ಬೇಕು ಎಂಬ ಮಾತನ್ನು ಹೇಳುತ್ತದೆ..

ಹುಟ್ಟು ಕುರುಡಿಯಾಗಿದ್ದರೂ ಮನದ ಕಣ್ಣುಗಳಿಂದ ಲೋಕವನ್ನು ನೋಡುವ ಕಥಾನಾಯಕಿ.. ತನ್ನೆಲ್ಲ ಕೆಲಸವನ್ನು ತಾನೇ ಮಾಡಿಕೊಳ್ಳುವಷ್ಟು ಶಕ್ತಳಾಗಿರುತ್ತಾಳೆ. ಹೃದಯವೈಶಾಲ್ಯವುಳ್ಳ ನಾಯಕ ಅವಳಿಗೆ ಬಾಳು ಕೊಡುತ್ತಾನೆ.

ಕಣ್ಣಿದ್ದು ಕುರುಡರು ಅನ್ನುವ ಮಾತಿನಂತೆ.. ಲೋಕವನ್ನು ಕಣ್ಣಿಗೆ ಕಾಣುವಂತೆ ನೋಡುವ ಕಾಮಾಲೆ ಕಣ್ಣಿನ ಕೆಲ ಮಂದಿ ಹೇಗೆ ಮನದ ಕೊಳವನ್ನು ರಾಡಿ ಮಾಡುತ್ತಾರೆ ಎನ್ನುವುದೇ ಕಥಾ ವಸ್ತು.

"ಓ ದ್ಯಾವ್ರೆ ನಿನ್ನ ಅಂದ ಚಂದವೇನೋ" ಈ ಹಾಡು ಎರಡು ಕಾರಣಕ್ಕೆ ಗಮನ ಸೆಳೆಯುತ್ತದೆ.
೧. ಕಣ್ಣು ಕಾಣದ ಹೆಣ್ಣು ತಾ ಕಂಡಿದ್ದೇನೆ ಎನ್ನುವಂತೆ ವರ್ಣಿಸುವ ಹಾಡು ಒಮ್ಮೆ ಬಂದರೆ.. ಇನ್ನೊಮ್ಮೆ ಕಾಣದ ದೇವರನ್ನು ಕಂಡಿದ್ದೇನೆ ಎನ್ನುವಂತೆ ಅವನಿಗೆ ಕೃತಜ್ಞತೆ ಸಲ್ಲಿಸುವ ರೀತಿಯಲ್ಲಿ ಇನ್ನೊಮ್ಮೆ ಬರುತ್ತದೆ
೨. ಕಸ್ತೂರಿ ಶಂಕರ್ ಅವರ ಮಧುರ ಧ್ವನಿ ಈ ಹಾಡನ್ನು ಇನ್ನಷ್ಟು ಮೇಲಕ್ಕೆ ಏರಿಸಿದೆ.

ನೋಡಬಾರದ ದೃಶ್ಯವನ್ನು ನೋಡುವಂತೆ ಮನಸ್ಸು ಪ್ರಚೋಧಿಸಿದಾಗ.. ಬೇಡ ಬೇಡ ಅನ್ನುತ್ತಲೇ ಕಣ್ಣಲ್ಲೇ ಭಾವನೆ ವ್ಯಕ್ತ ಪಡಿಸುವ ಉಮೇಶ್ ಈ ಚಿತ್ರದ ಮುಖ್ಯ ಪಾತ್ರ. ಬಹುಶಃ ನನಗೆ ಅನ್ನಿಸಿದಂತೆ ಒಂದು ಮಸಾಲೆ ದೃಶ್ಯವನ್ನು ಅಶ್ಲೀಲವಾಗಿ ಚಿತ್ರಿಸದೆ ಅದ್ಭುತವಾಗಿ ಕಣ್ಣಿನ ಭಾವದಲ್ಲಿಯೇ ಚಿತ್ರಿಸಿರುವುದು ಇದೆ ಮೊದಲು.. ಈ ದೃಶ್ಯ ಸಂಯೋಜನೆಗೆ ಪುಟ್ಟಣ್ಣ ಅವರಿಗೆ ಸಲಾಂ ಹೇಳಲೇ ಬೇಕು.
ಇದೆ ರೀತಿಯಲ್ಲಿ ರಜನಿಕಾಂತ್ ಕೂಡ ಹಾಗೆಯೇ ಅಭಿನಯಿಸಿದ್ದಾರೆ. ಮನಸ್ಸು ಒಮ್ಮೆ ಹಾಗೆ ಝಲ್ ಎನ್ನಿಸುತ್ತದೆ. ಅರೆ ಚಲನಚಿತ್ರಗಲ್ಲಿ ಅಶ್ಲೀಲ ಎನ್ನಿಸಬಹುದಾದ ದೃಶ್ಯಗಳನ್ನು ತನ್ನ ಕಸುಬುದಾರಿಕೆಯಿಂದ ಈ ಮಟ್ಟಕ್ಕೆ ಅದ್ಭುತವಾಗಿ ಚಿತ್ರಿಕರಿಸಬಹುದಾದರೆ ಅಶ್ಲೀಲತೆ ಎನ್ನುವುದೇ ಈ ಪ್ರಪಂಚದಲ್ಲಿ ದೃಶ್ಯ ಮಾಧ್ಯಮದಲ್ಲಿ ಇರಲಾರದು ಎನ್ನಿಸುತ್ತದೆ.

ಕಡೆಯಲ್ಲಿ ಕಥಾನಾಯಕ ಹೇಳುವ ಮಾತು "ಅಹಲ್ಯೆಯನ್ನು ತಪ್ಪು ದಾರಿಗೆ ಎಳೆದದ್ದು ದೇವೇಂದ್ರ ಅವನಿಗೆ ಶಾಪ ಕೊಟ್ಟರು ಗೌತಮರು ಅದು ಸರಿ... ಜೊತೆಯಲ್ಲಿ ತಪ್ಪೇ ಮಾಡಿರದ ಅಹಲ್ಯೆಗೂ ಶಾಪ ಕೊಟ್ಟರು.. ಆದರೆ ನಾ ಆ ತಪ್ಪು ಮಾಡೋಲ್ಲ. ನಿನಗೆ ಶಾಪ ಕೊಡೋಲ್ಲ.. ಬದಲಿಗೆ ತಪ್ಪು ಮಾಡಿದವನಿಗೆ ಶಿಕ್ಷೆ ಕೊಡುತ್ತೇನೆ" ಅದ್ಭುತ ಮಾತುಗಳು.

ಈ ಭಾಗದ ಚಿತ್ರ ಇಷ್ಟವಾಗೋದು..

  • ಕುರುಡಿ ಅಂದರೆ ಹೀಗೆ ಇರುತ್ತಾರೆ.. ಮತ್ತೆ ನಟಿ ಆರತಿ ಕುರುಡಿಯೇ ಎನ್ನುವಷ್ಟು ನೈಜತೆಯಿಂದ ಮುನಿತಾಯಿ ಪಾತ್ರದಲ್ಲಿ ಅಭಿನಯಿಸಿರುವ ಆರತಿ. 
  • ಕುರುಡಿಯನ್ನು ಗೋಳು ಹುಯ್ದು ಕೊಂಡು ಅವಳ ಪರಿಸ್ಥಿತಿಯನ್ನು ಬಂಡವಾಳ ಮಾಡಿಕೊಳ್ಳುವ ತಿಮ್ಮರಾಯಿ ಪಾತ್ರದಲ್ಲಿ ಎಂ ಎಸ್ ಉಮೇಶ್. ಬಹುಶಃ ತಿಮ್ಮರಾಯಿ ಪಾತ್ರ ಅವರ ಚಿತ್ರ ಜೀವನದ ಅತ್ಯುತ್ತಮ ಪಾತ್ರದಲ್ಲಿ ಮೊದಲಿಗೆ ನಿಲ್ಲುತ್ತದೆ 
  • ರಜನಿಕಾಂತ್ ಮೊದಲಬಾರಿಗೆ ತೆರೆಗೆ ಬಂದ ಈ ಚಿತ್ರದಲ್ಲಿ ಅವರ ಚಿಕ್ಕ ಸ್ಟೈಲ್ ಇಷ್ಟವಾಗುತ್ತದೆ.  
  • ಗಂಗಾಧರ್, ಸಂಪತ್ ಅವರ ಪಾತ್ರಗಳಿಗೆ ಅಚ್ಚುಕಟ್ಟಾಗಿ ಜೀವ ತುಂಬಿದ್ದಾರೆ. 
ಕಣ್ಣಿದ್ದು ಹಂಗಿಗೆ ಸಿಕ್ಕಿ ಹಾಕಿಕೊಳ್ಳುವರು ಹಂಗು ಕಥಾವಸ್ತುವಲ್ಲಿ ಸಿಕ್ಕರೆ,  ಕಣ್ಣಿದ್ದು ಹೃದಯವಿಲ್ಲದೆ ಜೀವನದಲ್ಲಿ ನೋವು ಅನುಭವಿಸುವರು "ಅತಿಥಿ" ಭಾಗದಲ್ಲಿ ಕಾಡುತ್ತಾರೆ, ಕಣ್ಣಿಲ್ಲದೆ ಇದ್ದರೂ ಮಾಡದ ತಪ್ಪಿಗೆ ಹೃದಯ ಕಣ್ಣಿರುವವವರ ಕ್ಷಮೆ ಸಿಗುವ ಸುಂದರ ನೋಟವನ್ನು "ಮುನಿತಾಯಿ" ಪ್ರಸಂಗದಲ್ಲಿ ಕಾಣುತ್ತೇವೆ. 


ಇಡಿ ಚಿತ್ರ ನಿಂತಿರುವುದು ಸಂಭಾಷಣೆಯ ಮೇಲೆ.. ಅದರ ಕೀರ್ತಿ ಸಂಭಾಷಣಕಾರ ಯೋಗಾನರಸಿಂಹ ಮೂರ್ತಿ ಅವರಿಗೆ ಸಲ್ಲುತ್ತದೆ.

ಒಂದು ಕಥೆಯನ್ನು ಹಲವು ಬಗೆಯಲ್ಲಿ ಹೇಳುವುದು ನೋಡಿದ್ದೇವೆ.. ಆದರೆ ಇಲ್ಲಿ ವಿವಿಧ ಕಥೆಯನ್ನು ಸರಿಯಾಗಿ ಹೊಂದಿಸಿ, ಮತ್ತು ಅದನ್ನು ಅನುಕ್ರಮವಾಗಿ ಜೋಡಿಸಿ ಮುತ್ತಿನ ಸರ ಪೋಣಿಸಿರುವ ರೂವಾರಿ "ಪುಟ್ಟಣ್ಣ" ಅವರಿಗೆ ಮನದಲ್ಲಿ ವಂದಿಸುತ್ತದೆ ತ್ರಿವೇಣಿ ಕತೆಯ ಸಮಾಗಮ ಅದುವೇ ಕಥಾಸಂಗಮ!

Friday, December 12, 2014

ವಾಣಿಯ ಝೇಂಕಾರ.. "ತಣ್ಣನೆ"ಯ ಧ್ವನಿ ಅದೇ ಅದೇ ಉಪಾಸನೆ (1974)

ನನಗೆ ಮೊದಲಿಂದಲೂ ಕೆಲವು (ಅಲ್ಲ ಅಲ್ಲ ಅಲ್ಲ ಹಲವು ಎಂದರೆ ಸರಿ) ವಿಷಯಗಳ ಬಗ್ಗೆ ಹುಚ್ಚು.. ಕೆಲವು ಧ್ವನಿಗಳು, ಸ್ಥಳಗಳು, ಚಿತ್ರಗಳು, ಹಾಡುಗಳು ಹೀಗೆ.. ಯಾಕೆ ಇಷ್ಟ ಎಂದರೆ ಹೇಳೋಕೆ ಆಗೋಲ್ಲ.. ಆದರೆ ಅದರ ಬಗ್ಗೆ ಒಂದು ರೀತಿಯ ಹುಚ್ಚು ಮನಸಲ್ಲೇ ಆಲದ ಮರವಾಗಿ ಬೇರೂರಿಬಿಡುತ್ತವೆ..

ನನ್ನ ಬಾಲ್ಯದ ದಿನಗಳಲ್ಲಿ ಎಂಭತ್ತರ ದಶಕದ ಆರಂಭದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿದ್ದ "ಉಪಾಸನೆ" ಚಿತ್ರ ನೋಡಿ ಬೆಕ್ಕಸ ಬೆರಗಾಗಿದ್ದೆ. ಯಾಕೋ ಅರಿಯದೆ ನಾ ಪುಟ್ಟಣ್ಣ ಅವರ ಚಿತ್ರಗಳ ಹುಚ್ಚನ್ನು ಆಗಲೇ ಹತ್ತಿಸಿಕೊಂಡಿದ್ದೆ. 

ಹಾಗೆಯೇ.. ಈ ಚಿತ್ರದಲ್ಲಿ ಬರುವ ಕನ್ಯಾಕುಮಾರಿ ಸ್ಥಳದ  ಬಗ್ಗೆಯೂ ಕೂಡ.. ಆ ಜಾಗ ನೋಡಲೇ ಬೇಕು.. ಮತ್ತೆ ಹೋದಾಗ ಅಲ್ಲಿ ನನ್ನ ಮಡದಿ ಮತ್ತು ಮಗು ಇರಲೇ ಬೇಕು ಎನ್ನುವ ಹಠ ನನಗೆ ಸುಮಾರು ಹತ್ತು ವರ್ಷದ ಹುಡುಗನಾಗಿದ್ದಾಗಲೇ ಬಂದಿತ್ತು. (ಉತ್ಪ್ರೇಕ್ಷೆ ಖಂಡಿತ ಅಲ್ಲಾ.. ನನ್ನ ಆಸೆಗಳು....  ಹುಚ್ಚುಗಳು ಹೀಗೆಯೇ ಇರುತ್ತವೆ). 

ಈ ಚಿತ್ರ ಹಲವಾರು ಕಾರಣಗಳಿಗೆ ಮನಸ್ಸಿಗೆ ನುಗ್ಗುತ್ತದೆ. 


ಉಪಾಸನೆ ಸೀತಾರಾಮ್ ಎಂದೇ ಹೆಸರಾದ ಸೀತಾರಾಮ್ ಅವರ ಮೃದು ಮಾತು ಚಿತ್ರದ್ದುದ್ದಕ್ಕು ಕಾಡುತ್ತದೆ. ತಾಯಿ, ಮಗು, ಶಾರದೆ ಎನ್ನುವಾಗ ಅವರ ಧ್ವನಿಯಲ್ಲಿ ಬರುವ ಕಂಪನ, ಮಧುರ ಮಿಡಿತ, ತುಡಿತ ಬಹಳ ಕಾಡುತ್ತದೆ. ಅತ್ಯಮೋಘ ಅಭಿನಯ ನೀಡಿರುವ ಅವರು ಚಿತ್ರದ ಯಶಸ್ಸಿನ ಬಹು ಪಾಲನ್ನು ಆಕ್ರಮಿಸಿಕೊಳ್ಳುತ್ತಾರೆ. ಶರೀರ ಶಾರೀರ ಎರಡರ ಅಭಿನಯ ಸೊಗಸಾಗಿದೆ. ಅವರ ಮತ್ತು ಆರತಿಯ ಜುಗಲಬಂದಿ ಬಹುವಾಗಿ ಇಷ್ಟಪಡುವ ಹಾಗೆ ಅಭಿನಯಿಸಿದ್ದಾರೆ.
"ವಾಣಿ"ಜಯರಾಂ ಅವರ ತುಂಟ ಧ್ವನಿ ಇನ್ನೊಂದು ರೀತಿಯಲ್ಲಿ ಕಾಡುತ್ತದೆ. "ಭಾವವೆಂಬ ಹೂವು ಅರಳಿ" ಈ ಹಾಡಿನಲ್ಲಿ ಅವರು "ಅರಳಿ" ಎನ್ನುವಾಗ ಅವರ ಧ್ವನಿ ಕೇಳಲೇ ಒಂದು ಹಿತ. ಚಿ ಉದಯಶಂಕರ್ ಅವರ ಸರಳ ಸಾಹಿತ್ಯಕ್ಕೆ ಚಂದದ ಮೆರುಗು ವಾಣಿಯಮ್ಮ ಅವರ ಗಾಯನ.   "ಭಾವಯ್ಯ ಭಾವಯ್ಯ"   ಎನ್ನುವ ಎರಡು ಬಗೆಯ ಭಿನ್ನ ಹಾಡುಗಳಲ್ಲಿ ಬರುವ ತುಂಟತನದ ಧ್ವನಿ, ಆ ತಮಾಷೆ ಬೀರುವ ಪದಗಳ ಜೋಡಣೆ, ಅದಕ್ಕೆ ಜೀವ ತುಂಬಿರುವ ಇವರ ಗಾಯನ ಸೊಗಸಾಗಿದೆ. ಎರಡು ಹಾಡನ್ನು ರಚಿಸಿರುವ ಆರ್ ಏನ್ ಜಯಗೋಪಾಲ್ ಅವರ ಸಾಹಿತ್ಯ ಮನಸ್ಸೆಳೆಯುವುದು ಹಾಸ್ಯ ಮಿಶ್ರಿತ ಪದಗಳ ಪುಂಜಗಳಿಂದ. 

ನೀವು ಹಾಡುತ್ತಾ ಇರಿ ನಾ ಬರುತ್ತೇನೆ ಎಂದು ಕಾದು ಹೇಳಿ..  ನಂತರ ಬಂದು..  ಮೂರು ಹಾಡುಗಳಲ್ಲಿ ಇಡಿ ಚಿತ್ರವನ್ನೇ ನುಂಗಿ ಬಿಡುವ ಅತ್ಯುತ್ತಮ ಗಾಯಕಿ ಜಾನಕಿಯಮ್ಮ ಮನಸ್ಸನ್ನೇ ಕದ್ದು ಬಿಡುತ್ತಾರೆ. "ಆಚಾರವಿಲ್ಲದ ನಾಲಿಗೆ" ಪುರಂದರದಾಸರ ಸಾಹಿತ್ಯವನ್ನು ಅಚ್ಚುಕಟ್ಟಾಗಿ ಹಾಡುವ ಇವರು.. ಭಾರತದ ತುತ್ತ ತುದಿ ಕನ್ಯಾಕುಮಾರಿಯ ಬಗ್ಗೆ ವಿಜಯನಾರಸಿಂಹ ಅವರ "ಭಾರತ ಭೂಶಿರ ಮಂದಿರ ಸುಂದರಿ" ಸುಮಧುರ ಸಾಹಿತ್ಯವನ್ನು ಹಾಡುವಾಗ ಸಾಕ್ಷಾತ್ ಶಾರದೆಯೇ ಆಗಿ ಬಿಟ್ಟಿದ್ದಾರೆ. ಎರಡು ಹಾಡನ್ನು ಉಚ್ಹ ಸ್ಥಾಯಿಯಲ್ಲಿ ಹಾಡಿರುವ ಜಾನಕಿಯಮ್ಮ ಅಬ್ಬಬ್ಬ ಎನ್ನಿಸಿಬಿಡುತ್ತಾರೆ.  ಅಮೋಘ ಗಾಯನದ ಪ್ರತಿಭೆ ಜಾನಕಿಯಮ್ಮ ಅವರ ಧ್ವನಿಯಲ್ಲಿ ಜೋಗದ ಜಲಪಾತದ ರಭಸ, ಲಾಲಿತ್ಯ, ಮಧುರತೆ ಎಲ್ಲವೂ ಬಂದಿಯಾಗಿಬಿಟ್ಟಿವೆ. 

ಸುಗಮ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಬಿ ಕೆ ಸುಮಿತ್ರ ಅವರ "ಸಂಪಿಗೆ ಮರದ ಹಸಿರೆಲೆ ನಡುವೆ" ಗೀತೆ ಸರಳ ಸಾಹಿತ್ಯದಿಂದ ಗಮನ ಸೆಳೆಯುತ್ತದೆ. ಜೊತೆಯಲ್ಲಿ ಆರ್ ಏನ್ ಜಯಗೋಪಾಲ್ ಅವರು ಚಿಕ್ಕ ಚಿಕ್ಕ ಮಕ್ಕಳು ಉಲಿಯುವ ಪದಗಳನ್ನು ತಂದು ಜೋಡಿಸಿ ಹೆಣೆದಿರುವ ಈ ಹಾಡು ಇಷ್ಟವಾಗುತ್ತದೆ. 

ಆರತಿ ಗಂಧದ ಕೊರಡಿನ ಹಾಗೆ ಅಭಿನಯವನ್ನು ತೇಯ್ದು .. ಈ ಚಿತ್ರ ಗೆದ್ದರೆ ನಾ ಗೆಲ್ಲುವೆ ಎನ್ನುವಂತೆ ತಮ್ಮ ಅಭಿನಯದ  ಶಕ್ತಿಯನ್ನು ತೇಯ್ದು .. ಈ ಪಾತ್ರಕ್ಕೆ ಅಭಿನಯಿಸಲೆಂದೇ ನಾ ಹುಟ್ಟಿದ್ದೇನೆ ಎನ್ನುವಂತೆ ಛಲ ತುಂಬಿಕೊಂಡು ನಟಿಸಿದ್ದಾರೆ ,  ಅಲ್ಲ ಅಲ್ಲ ಆ ಪಾತ್ರವೇ ಆಗಿ ಹೋಗಿದ್ದಾರೆ. ಹಾಡುಗಳಲ್ಲಿ ಅವರು ತೋರುವ ಶ್ರದ್ಧೆ, ಸಂಭಾಷಣೆ ಹೇಳುವಾಗ ಅವರು ತೋರುವ ಚೈತನ್ಯ, ಕೆಲವೊಮ್ಮೆ ಮಾತೆ ಬೇಡ ಎನ್ನಿಸುವ ದೃಶ್ಯಗಳಲ್ಲಿ ಕಣ್ಣಲ್ಲೇ ತೋರುವ ಭಾವ (ತಂಗಿ ಮತ್ತು ಗಂಡನನ್ನು ಕೋಣೆಯ ಒಳಗೆ ಸೇರಿಸಿ.. ಬಾಗಿಲನ್ನು ಹಾಕಿ ಹೊರ ಬರುವ ದೃಶ್ಯದಲ್ಲಿ) ಆಹಾ ಆಹಾ ಹೇಳಿದಷ್ಟು ಸೊಗಸು. ಸಮುದ್ರದ ಅಲೆಗಳನ್ನು ನೋಡುವಾಗ ಒಂದು ಅಲೆ ಹೋದರೆ ಇನ್ನೊಂದು ಬರುವಂತೆ, ಒಂದು ದೃಶ್ಯದಲ್ಲಿ ಅಬ್ಬಾ ಎನ್ನಿಸುತ್ತ ಮುಂದಿನ ದೃಶ್ಯ ನೋಡಿದಾಗ ಅರೆ ಅರೆ ಇದು ಇನ್ನು ಸೊಗಸು ಅನ್ನಿಸುತ್ತದೆ. ಇಡಿ ಚಿತ್ರದಲ್ಲಿ ಸರಿ ಸುಮಾರು ಪ್ರತಿಯೊಂದು ದೃಶ್ಯದಲ್ಲಿ ಕಾಣಿಸಿಕೊಳ್ಳುವ ಆರತಿ ಅಭಿನಯ ಅವರ ಚಿತ್ರ ಜೀವನದಲ್ಲಿನ ಅತ್ಯುತ್ತಮ ಅಭಿನಯ ಎನ್ನುತ್ತೇನೆ.  (ರಂಗನಾಯಕಿ ಚಿತ್ರವಿದೆ!!!!)

ಚಿತ್ರಜ್ಯೋತಿ ಲಾಂಛನದಲ್ಲಿ ರಾಶಿ ಸಹೋದರ ನಿರ್ಮಾಣದಲ್ಲಿ ತಯಾರಾದ ಈ ಚಿತ್ರ ದೇವಕಿ ಮೂರ್ತಿ ಎನ್ನುವವರ ಅದೇ ಹೆಸರಿನ ಕಥೆಯನ್ನು ಆಧರಿಸಿತ್ತು.  ಈ ಕಥೆಗೆ ಸಂಭಾಷಣೆಯ ಪೋಷಾಕು ತೊಡಿಸಿದವರು ನವರತ್ನರಾಂ ಅವರು. ಎಸ್ ವಿ ಶ್ರೀಕಾಂತ್ ಸುಂದರ ಭಾವುಕ ದೃಶ್ಯಗಳನ್ನು ಜೊತೆಯಲ್ಲಿ ಅದ್ಭುತ ಸ್ಥಳ ಕನ್ಯಾಕುಮಾರಿಯನ್ನು ಅಚ್ಚುಕಟ್ಟಾಗಿ ಚಿತ್ರೀಕರಿಸಿದ್ದಾರೆ. ಭಾರತ ಭೂಶಿರ ಹಾಡನ್ನು ಒಳಾಂಗಣದಲ್ಲಿ ಚಿತ್ರೀಕರಿಸಿ ಆರತಿಯವರ ಮುಖವನ್ನು ಹೊಳೆಯುವ ಪಾದರಸದಂತೆ, ಜೊತೆಯಲ್ಲಿ ಕ್ಯಾಮೆರ ಒಂದು ಚೂರು ಕದಲದೆ ಬರಿ ಮುಖವನ್ನು ತೋರಿಸುವ ಅದ್ಭುತ ಛಾಯಾಗ್ರಹಣ ಇವರದು. ಮತ್ತೆ ಭಾವುಕ ಸನ್ನಿವೇಶಗಳಿಗೆ ತಕ್ಕಂತೆ ಕ್ಯಾಮೆರ ಓಡಾಡುವ, ಇಲ್ಲವೇ ಸುತ್ತವ, ಇಲ್ಲವೇ ಜೋಕಾಲಿಯಂತೆ  ತೂಗುವ ವಿಭಿನ್ನ ತಂತ್ರ ಈ ಚಿತ್ರದಲ್ಲಿ ಮಾಡಿದ್ದಾರೆ. ಪುಟ್ಟಣ್ಣ ಕಣಗಾಲ್ ಅವರ ಕ್ರಿಯಾಶೀಲತೆಗೆ ಸಾಕ್ಷಿ. 

ಪುಟ್ಟಣ್ಣ ಅವರ ಜೀವದ ಗೆಳೆಯ ವಿಜಯಭಾಸ್ಕರ್ ಈ ಚಿತ್ರದ ಆತ್ಮ ಎನ್ನಲೇ ಬೇಕು. ಪ್ರತಿ ಹಾಡಿಗೂ ವಿಭಿನ್ನ ಸಂಗೀತ, ಜೊತೆಯಲ್ಲಿ ಚಿತ್ರದುದ್ದಕ್ಕೂ ಬರುವ ಹಿನ್ನೆಲೆ ವೀಣೆಯ ನಾದ ಶ್ಯಾಮಲಾ ಸ್ವಾಮೀ ಅವರದು. ವಿಜಯಭಾಸ್ಕರ ಅವರ ರಾಗ ಸಂಯೋಜನೆ ಅಮೋಘ ಅದ್ಭುತ ಎನ್ನಲೇ ಬೇಕು. ಭಾರತ ಭೂಶಿರ ಎಷ್ಟು ಬಾರಿ ಕೇಳಿದರೂ ಹೊಸದು ಎನ್ನಿಸಲು ಅವರ ಸಂಗೀತವೆ ಕಾರಣ. 

ಹೊಟ್ಟೆಕಿಚ್ಚಿನ ಗುರುವಾಗಿ ಮುಸುರಿ ನಗೆ ಮೀಟುತ್ತಾರೆ. ಅವರು ಬಂದು ಹೋಗುವ  ಐದಾರು ದೃಶ್ಯಗಳಲ್ಲಿ ತಮ್ಮ ಪ್ರತಿಭೆಯನ್ನು ಹೊರತಂದಿದ್ದಾರೆ.
 "ಗೊತ್ರಿ ನನಗೆ ಗೊತ್ರಿ ನೀವು ಹೀಗೆ ಹೇಳ್ತೀರಾ ಅಂತ ನನಗೆ ಗೊತ್ರಿ" 
"ಭಾರತದ ತಮಟೆ ವಾದ್ಯದಿಂದ ಹಿಡಿದು ಪರದೇಶದ ಪಿಯಾನೋ ತನಕ ಬರುತ್ತೆ ಕಣಯ್ಯಾ"
"ತಂಬೂರಿಗೆ ಕಮಾನ್ ಹಾಕೋದು ಇದ್ದೆ ಇದೆ ಕಣಯ್ಯಾ.. ಮೊದಲು ಪಿಟೀಲಿಗೆ ಕಮಾನು ಹಾಕು.. ಆಮೇಲೆ ತಂಬೂರಿಗೆ  ಕಮಾನು ಹಾಕಿ ಕಮಾಲ್ ನೋಡೋಣ"
ಹೀಗೆ ಚಿಕ್ಕ ಚಿಕ್ಕ ಮಾತುಗಳು ಅಂಗೀಕ ಅಭಿನಯದಿಂದ ಮನಸ್ಸು ಗೆಲ್ಲುತ್ತಾರೆ ಮುಸುರಿ ಕೃಷ್ಣಮೂರ್ತಿ. 

ಸದಾ ಒಲಾಡುತ್ತಲೇ, ಹಿಪ್ಪಿ ಕೂದಲು ಬಿಟ್ಟು ವಿಚಿತ್ರ ಅಭಿನಯ ಕೊಡುವ ಶಿವಾರಂ, ನಗೆ ಮೀಟುತ್ತಾರೆ.  ಪುಟ್ಟಣ್ಣ ಅವರ ಹಲವಾರು ಚಿತ್ರದಲ್ಲಿ  ಪಾತ್ರ ಮಾಡಿರುವ ಶಿವರಾಂ, ಪ್ರತಿ ಚಿತ್ರದಲ್ಲೂ ಏನಾದರೂ ಹೊಸ ತರಹ ಅಂಗೀಕ ಅಭಿನಯ, ಒಂದು ಪಂಚಿಂಗ್ ಸಂಭಾಷಣೆ ತರುತ್ತಾರೆ. ಅವರ ಹಾಸ್ಯಭರಿತ ಸಂಭಾಷಣೆ ಕೇಳುವುದೇ ಒಂದು ಮಜಾ.  ಇದರ ಒಂದು ಒಂದು ಝಲಕ್ "ಸಂಗೀತದಲ್ಲಿರುವ ಉತ್ತರಾದಿ, ದಕ್ಷಿಣಾದಿ, ಪೂರ್ವಾದಿ, ಪಶ್ಚಿಮಾದಿ, ಪಾಶ್ಚಾತ್ಯಾದಿ ಸಂಗೀತ ಪ್ರಕಾರಗಳನ್ನು ಕಲಸಿ, ಬೆರೆಸಿ, ಪ್ರೇಕ್ಷಕರನ್ನು ನಲಿಸಿ, ಕುಣಿಸಿ, ತಣಿಸಿ,ಬೆದರಿಸಿ ಸ್ಟನ್ ಮಾಡಬೇಕೆಂಬುದೇ ಈ ಶಂಕರಾಭರಣನ ಲೈಫ್ ಆಂಬಿಶನ್ "

ಸಂಗೀತದ ಎಲ್ಲಾ ಸಿದ್ಧ ಸೂತ್ರಗಳು ಗೊತ್ತು ಎಂದು ಜಂಬ ಕೊಚ್ಚುತ್ತಾ ಪೇಚಿಗೆ ಸಿಕ್ಕಿ ಹಾಕಿಕೊಳ್ಳುವ ಅಶ್ವಥ್ ಅವರ ಅಭಿನಯ ಚಿತ್ರದ ಹೈ ಲೈಟ್.  ತುಂಬಾ ಗಂಭೀರ ಪಾತ್ರ ಮಾಡುವ ಅಶ್ವಥ್ ಹಾಸ್ಯ ಪಾತ್ರಗಳಲ್ಲೂ ನಾ ಗೆಲ್ಲಬಲ್ಲೆ ಎಂದು ತೋರುತ್ತಾರೆ. ನಾಗರಹಾವಿನ ಚಾಮಯ್ಯ ಮೇಷ್ಟ್ರು, ಶುಭಮಂಗಳದ ಉಬ್ಬಸದ ವೈದ್ಯರು, ಇಲ್ಲಿ ತಮಾಷೆ ಬೀರುವ ಸಂಗೀತದ ಆರಾಧಕ.... ಆಶಾ ಎಷ್ಟು ವಿಭಿನ್ನ ಅಭಿನಯದ ನಟರು ಇವರು.  ಪ್ರತಿಯೊಂದು ಸಂಭಾಷಣೆಯಲ್ಲೂ "ಬೇಕಾದ್ರೆ ನನ್ನ ಹೆಂಡತೀನ ಕೇಳಿ" ಮಾತು ಇಷ್ಟವಾಗುತ್ತದೆ. ಅಂತಿಮ ದೃಶ್ಯಗಳಲ್ಲಿ ತೊಳಲಾಡುವ ಅವರ ಅಭಿನಯ ನಿಜಕ್ಕೂ ಇಷ್ಟವಾಗುತ್ತದೆ. 

ಆದವಾನಿ ಲಕ್ಷ್ಮೀದೇವಿ, ಲೀಲಾವತಿ ತಮ್ಮ ಪಾತ್ರಗಳಲ್ಲಿ ಲೀನವಾಗಿದ್ದಾರೆ.. ಆದವಾನಿ ಲಕ್ಷ್ಮೀದೇವಿ ತಾಯಿ ಮಮತೆ ತೋರುವ ಕರುಣಾಮಯಿ ಆದರೆ, ಲೀಲಾವತಿ ಕೆಲವೊಮ್ಮೆ ಅಮ್ಮನ ಕರುಣಾಳು ಪಾತ್ರ, ಹಲವೆಡೆ ಅತ್ತೆ ಎನ್ನುವ ಗತ್ತು ಎರಡನ್ನು ಮಿಶ್ರಣಗೊಳಿಸಿರುವ ಅಭಿನಯ ತಾಕುತ್ತದೆ. 

ವೆಂಕಟರಾವ್ ತಲಗೇರಿ ಅಪ್ಪನ ಪಾತ್ರದಲ್ಲಿ ಛಾಪು ಒತ್ತುತ್ತಾರೆ, ಉದ್ವೇಗವಿಲ್ಲದ ನಿಧಾನ ರೀತಿಯ ಸಂಭಾಷಣೆ,ಆ ಧ್ವನಿ, ಅಪ್ಪ ಎನ್ನುವ ಜವಾಬ್ಧಾರಿಯ ಗುಣ ಮೈ ಎತ್ತಿದಂತೆ ಅಭಿನಯ ನೀಡಿದ್ದಾರೆ. ಅದರಲ್ಲೂ ಕಡೆಯಲ್ಲಿ ಸಂಗೀತದ ಗುರುಗಳಿಗೆ ಅವರ ಶಿಷ್ಯೆ ಕಚೇರಿ ಮಾಡಬಾರದೆಂದು ಹೇಳಿ ಎಂದು ಕೇಳಿಕೊಳ್ಳುವ ದೃಶ್ಯ ಸೂಪರ್. 

ಚಿಕ್ಕ ಚೊಕ್ಕ ಪಾತ್ರದಲ್ಲಿ ಎಂ ಏನ್ ಲಕ್ಷ್ಮೀದೇವಿ ಮತ್ತು ವಜ್ರಮುನಿ ಗಮನಸೆಳೆಯುತ್ತಾರೆ. 

ಇಡಿ ಚಿತ್ರ ಸಂಗೀತದ ರಥದ ಮೇಲೆ ಸಾಗುತ್ತದೆ. ವಿಜಯಭಾಸ್ಕರ್ ಅವರು ತಮ್ಮ ಛಾಯೆಯನ್ನು ಈ ಚಿತ್ರದಲ್ಲಿ ಒತ್ತಿಬಿಟ್ಟಿದ್ದಾರೆ. ಅವರ  ಸಂಗೀತವನ್ನು ಹೊರಗೆ ತೆಗೆದು ಈ ಚಿತ್ರವನ್ನು ನೋಡಿದರೆ ಬಹಳ ಸಪ್ಪೆ ಎನ್ನಿಸುತ್ತದೆ. ಆದರೆ ಸಂಗೀತ ಕಲಾವಿದರ ಅಭಿನಯವನ್ನು ನುಂಗದೆ, ಅವರ ಅಭಿನಯಕ್ಕೆ ಹೊಳಪು ಕೊಡುವ ರತ್ನವಾಗಿರುವುದು ವಿಶೇಷ. 

ಈ ಚಿತ್ರದಲ್ಲಿ ಸಂಗೀತವನ್ನು ಪ್ರಧಾನವಾಗಿ ಇಟ್ಟುಕೊಂಡು ರೂಪಿಸಿರುವ ಚಿತ್ರ. ಆರತಿಯೇ ಈ ಚಿತ್ರದ ಕೇಂದ್ರ ಬಿಂದು. ಅವರ ಸುತ್ತಲೇ ಇಡಿ ಚಿತ್ರ ಸುತ್ತುತ್ತದೆ.  ಬರುವ ಪಾತ್ರಗಳು ಅವರ ಸಂಗೀತದ ಆಸಕ್ತಿಯ ಬಗ್ಗೆ ಪುರಸ್ಕಾರ ಇಲ್ಲಾ ತಿರಸ್ಕಾರ  ತೋರುವಂತೆ ಅಭಿನಯಿಸಿವೆ. ರೇಡಿಯೋ ರಂಗಮ್ಮ, ಮುಸುರಿ, ವಜ್ರಮುನಿ, ಲಕ್ಷ್ಮೀದೇವಿ, ಕೊಂಚ ಹೊತ್ತು ಶಿವರಾಂ ಎಲ್ಲರೂ ಅವರ ಸಂಗೀತದ ಆಸಕ್ತಿಗೆ  ಬರೆ ಎಳೆಯುವಂತೆ ಮಾಡಿದರೆ, ಸೀತಾರಾಮ್, ವೆಂಕಟರಾವ್, ಲಕ್ಷ್ಮೀದೇವಿ, ಲೀಲಾವತಿ, ಅಶ್ವತ್, ಮತ್ತು ನಾಯಕನಾಗಿ ಅಭಿನಯಿಸಿರುವ ಗೋವಿಂದರಾವ್ ಮಣ್ಣೂರ್ ಮುದ್ದಾಗಿ ಕಾಣುವುದಷ್ಟೇ ಅಲ್ಲದೆ ಸಂಗೀತಕ್ಕೆ ಪ್ರೋತ್ಸಾಹ ಕೊಡುವಲ್ಲಿ ಗಮನ ಸೆಳೆಯುವ ಕೊಡುಗೆ ಕೊಟ್ಟಿದ್ದಾರೆ. 

ಸಂಗೀತವನ್ನು ವೃತ್ತ ಎಂದು ಭಾವಿಸಿ ಅದನ್ನು  ಚಿತ್ರಿಸಲು ಹೊರಟರೆ ಅಲ್ಲಿ ಕೇಂದ್ರ ಬಿಂದು ಆರತಿ, ಪರಿಧಿಯಲ್ಲಿ ಕಾಣುವ, ಬರುವ ಪಾತ್ರಗಳೇ ಮಿಕ್ಕವು. ಗುರು ಪಾತ್ರ ಮಾತ್ರ ಪರಿಧಿಯೊಳಗೆ ಬರುತ್ತಾರೆ ಹೊರತು ಮಿಕ್ಕವರೆಲ್ಲಾ ಪರಿಧಿಯ ಹೊರಗೆ ನಿಲ್ಲುತ್ತಾರೆ,. ಇಂಥಹ ಒಂದು ಅನುಭವ ಕೊಡುವ ಈ ಚಿತ್ರ ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳಲ್ಲಿ ಒಂದು ರತ್ನವಾಗಿ ನಿಲ್ಲಲು ಸಹಾಯ ಮಾಡಿವೆ. 

ಪುಟ್ಟಣ್ಣ ಕಣಗಾಲ್, ದೇವಕಿ ಮೂರ್ತಿಅವರ ಕಥೆಯನ್ನು ಅಚ್ಚುಕಟ್ಟಾಗಿ ಚಿತ್ರಕಥೆಗೆ ಅಳವಡಿಸಿಕೊಂಡು ಎಲ್ಲೂ ಬೇಸರಬಾರದಂತೆ, ಸಂಗೀತ ಬಲ್ಲವರೂ, ಬಾರದಿರುವವರು ಕೂಡ ನೋಡಿ ಮೆಚ್ಚಿ ತಲೆದೂಗುವಂತೆ ಚಿತ್ರಿಕರಿಸಿರುವುದು ಅವರ ಅದ್ಭುತ ಪ್ರತಿಬೆಗೆ ಸಾಕ್ಷಿ. 

೧. ಚಿತ್ರದ ಆರಂಭ ಪುಟ್ಟಣ್ಣ ಅವರ ಚಿತ್ರಗಳಲ್ಲಿ ಯಾವಾಗಲು ವಿಶೇಷ, ಅಲ್ಲಿಯ ಚಿತ್ರದ ಸಂದೇಶದ ಒಂದು ಝಲಕ್ ಕೊಟ್ಟಿರುತ್ತಾರೆ.  ಸಂಗೀತ ಸಾಧಕರ ಚಿತ್ರಗಳ ಹಿನ್ನೆಲೆಯಲ್ಲಿ, ವಾದ್ಯಗಳ ಚಿತ್ರಗಳ ಜೊತೆಯಲ್ಲಿ ಆರಂಭವಾಗುವ ಟೈಟಲ್ ಕಾರ್ಡ್ ಗಮನ ಸೆಳೆಯುತ್ತದೆ. ಸಂಗೀತಕ್ಕೆ ತಮ್ಮನ್ನೇ ಅರ್ಪಿಸಿಕೊಂಡ ಮಹಾನ್ ಚೇತನಗಳ ದರ್ಶನ ಆರಂಭದಲ್ಲೇ ಮಾಡಿಸುತ್ತಾರೆ. 

೨. ಹಲವಾರು ದೃಶ್ಯಗಳಲ್ಲಿ, ಕಲಾವಿದರ ಅಭಿನಯದಲ್ಲಿ ತಳಮಳ, ಆತಂಕ, ಅನುಮಾನ, ಹುಯ್ದಾಟ ಇವನ್ನು ಚಿತ್ರಿಕರಿಸುವಾಗ ಕ್ಯಾಮೆರವನ್ನು ತೂಗಡಿಸಿ, ಅಲುಗಾಡಿಸಿ, ಇಲ್ಲವೇ ಅತ್ತಾ ಇತ್ತಾ ತೂರಾಡುವ ಶೈಲಿಯಲ್ಲಿ ಉಪಯೋಗಿಸಿದ್ದಾರೆ. ಕಲಾವಿದರ ಅಭಿನಯಕ್ಕೆ ಇನ್ನಷ್ಟು ಸಾಂಧ್ರತೆ ಹೆಚ್ಚಾಗಲು ಸಹಕಾರಿಯಾಗಿದೆ.  

೩. ಶಾರದೆಯ ಮದುವೆ ವಿಷಯ ಬಂದಾಗ.. ನೆರಳಿನಲ್ಲಿ ಅವಳ ವೀಣೆಯನ್ನು ಕಿತ್ತುಕೊಂಡು, ಅದನ್ನು ಬಿಸಾಡುವ ದೃಶ್ಯ, ಅವಳ ಮನಸ್ಸಲ್ಲೇ ನಡೆಯುತ್ತಿರುವ ತಳಮಳವನ್ನು ಸೂಕ್ಷ್ಮವಾಗಿ ವಿವರಿಸಿದ್ದಾರೆ. ಇದು ಅವರ ಜಾಣ್ಮೆಗೆ ಹಿಡಿದ ಕನ್ನಡಿ. ನೂರಾರು ಮಾತುಗಳಲ್ಲಿ ಹೇಳಬೇಕಾದ ದೃಶ್ಯವನ್ನು ಕೇವಲ ಕೆಲವೇ ಕ್ಷಣಗಳಲ್ಲಿ ತಲುಪಿಸುವ ಅವರ ಕ್ರಿಯಾಶೀಲತೆಗೆ ನಮನ. 

೪. ಸ್ವಾಮೀ ವಿವೇಕಾನಂದರ ಅಮರವಾಣಿಯ ಧ್ಯೋತಕವಾಗಿ ರೂಪಿಗೊಂಡಿರುವ ಕನ್ಯಾಕುಮಾರಿಯಲ್ಲಿನ ಅವರ ಸುಂದರ ದೇವಾಲಯದ ಸುಂದರ ಪರಿಸರದಲ್ಲಿ ಚಿತ್ರೀಕರಣ ಮಾಡಿರುವುದು ಬಹಳ ಇಷ್ಟವಾಗುತ್ತದೆ. ಬಹುಶಃ ಈ ಚಿತ್ರವೇ ಮೊದಲು ಅಲ್ಲಿ ಚಿತ್ರೀಕರಣ ಮಾಡಿದ್ದು ಅನ್ನಿಸುತ್ತದೆ.

5. ಇಡಿ ಚಿತ್ರದಲ್ಲಿ ಒಂದು ಅಂಶ ಎದ್ದು ಕಾಣುತ್ತದೆ, ಆರಂಭದಿಂದಲೂ ತುಂಟಿ, ತರಲೆ ಮಾಡುವ ಪಾತ್ರದಲ್ಲಿ ಮೂಡಿಬರುವ ಶಾರದೆಯ ತಂಗಿ ಪಾತ್ರ (ಜಿ ವಿ ಶಾರದ) ಮದುವೆಯ ನಂತರ ಗಂಭೀರ ಪಾತ್ರಕ್ಕೆ ನುಗ್ಗುವುದು, ಹಾಗೆಯೇ ಅಶ್ವತ್ ಚಿತ್ರದುದ್ದಕ್ಕೂ ಶಾರದೆಯ ಪರವಾಗಿ ನಿಲ್ಲುವ ಅವರು ಕಡೆಯ ದೃಶ್ಯಗಳಲ್ಲಿ ಶಾರದೆಗೆ ವಿರುದ್ಧವಾಗಿ ನಿಲ್ಲುವುದು. ಇಂಥಹ ವೈರುಧ್ಯ ಪಾತ್ರಗಳಲ್ಲಿನ ಅಭಿನಯವನ್ನು ಹೊರತೆಗೆಯುವಲ್ಲಿ ಪುಟ್ಟಣ್ಣ ಅವರ ಯಾವಾಗಲು ಸಿದ್ಧ ಹಸ್ತರಾಗಿದ್ದರು.

೬." ಭಾರತ ಭೂಶಿರ ಮಂದಿರ ಸುಂದರಿ" ಹಾಡನ್ನು ಗುರುಗಳ ಮನೆಯಲ್ಲಿ ಚಿತ್ರೀಕರಿಸಿರುವ ಶೈಲಿ, ಆರತಿ ಮುಖವನ್ನು ಮಾತ್ರ ಸ್ಟಡಿ ಕ್ಯಾಮೆರಾದಲ್ಲಿ ತೋರಿಸಿ, ಅದನ್ನು ಕೇಳಲೆಂದು ಬಂದ ಮಂದಿಯನ್ನು ತೋರಿಸುವಾಗ ಆ ದೃಶ್ಯಗಳು ತೂಗಾಡುತ್ತ ಇರುವಂತೆ ಚಿತ್ರೀಕರಿಸಿದ್ದಾರೆ. ಸಂಗೀತದ ಶಕ್ತಿಯನ್ನು ತೋರಿಸುವ ಒಂದು ವಿಭಿನ್ನ ರೀತಿ. ರಾಮಚಂದ್ರ ಶಾಸ್ತ್ರೀ ಅವರು ಆ ಹಾಡಿನಲ್ಲಿ ಬಂದು ಹೋದರೂ ಅವರು ಹೇಳುವ ಮಾತು "ಅನಂತ ಶಾಸ್ತ್ರಿಗಳೇ ಹೃದಯ ಹಿಂಡುವ ನಿಮ್ಮ ಶಿಷ್ಯಳ ಸಂಗೀತ ಎಲ್ಲರ ಮನವನ್ನು ತಣಿಸಲಿ.. " ಇಷ್ಟವಾಗುತ್ತದೆ.

೭. ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡ ಈ ಚಿತ್ರ ಇಂದಿಗೂ ಸಂಗೀತಮಯ ಚಿತ್ರ ಎಂದಾಗ ಮೊದಲಿಗೆ ಬಂದು ನಿಲ್ಲುತ್ತದೆ.

ಉಪಾಸನೆ ಒಂದು ಚಿತ್ರರತ್ನವಾಗಿ ನಿಲ್ಲಲು ಎಲ್ಲರ ಪರಿಶ್ರಮದ ಅಗತ್ಯ ಇದೆ. ಇಡಿ ಚಿತ್ರವನ್ನು ಹೆಗಲಿಗೆ ಜೋತು ಹಾಕಿಕೊಂಡು ಚಿತ್ರಿಸಿರುವ ಪುಟ್ಟಣ್ಣ ಕಣಗಾಲ್ ಧ್ವನಿ ಎಂಬ ಒಂದು ಚಿಕ್ಕ ಸಂಗತಿಯನ್ನು ಇಟ್ಟುಕೊಂಡು ತಣ್ಣನೆ ಮಧುರ ಅನುಭವ ಕೊಡುವ ಚಿತ್ರವನ್ನಾಗಿ ಕೊಟ್ಟಿದ್ದಾರೆ. ಅದಕ್ಕೆ ನಮ್ಮ ಅದ್ಭುತ ನಿರ್ದೇಶಕರಿಗೆ ಒಂದು ಸಲಾಂ ಹೇಳೋಣ.. !!!

Tuesday, December 2, 2014

ಮಂಗಳಕರವಾದ ಶುಭಮಂಗಳ (1975)

ನೂಲಿನ ಉಂಡೆಯನ್ನು ನಿಧಾನವಾಗಿ ಬಿಡಿಸುತ್ತಾ ಹೋದಹಾಗೆ. ನೂಲಿನ ಉದ್ದವೂ ವಿಸ್ತರಿಸುತ್ತಾ ಹೋಗುತ್ತದೆ. ಹಾಗೆಯೇ ಒಂದು ಸಣ್ಣ ಎಳೆಯನ್ನು ನಿಧಾನವಾಗಿ ಹರಡುತ್ತಾ ಹೋದ ಹಾಗೆ ಅದರ ಹರಿವು ಅರಿವಾಗುತ್ತಾ ಹೋಗುತ್ತದೆ,

ಪುಟ್ಟಣ್ಣ ಕಣಗಾಲ್ ಕೂಡ ಹಾಗೆ.. ಒಂದು ಸಣ್ಣ ಛಲವನ್ನು ಹೊತ್ತು ಚಿತ್ರರಂಗಕ್ಕೆ ಬಂದರು. ಚಲನ ಚಿತ್ರದ ಎಲ್ಲಾ ಪ್ರಾಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇದರ ಫಲಿತಾಂಶ ಪ್ರತಿ ಚಿತ್ರದಲ್ಲಿಯೂ ಹೊಸ ವಿಷಯ, ಹೊಸ ಸಂದೇಶ, ಹೊಸ ಬಗೆಯ ತಾಣ, ಹೊಸ ಲಯ ಎಲ್ಲವೂ ಹೊಸದು

ಅವರ ಎಲ್ಲಾ ಚಿತ್ರಗಳನ್ನು ಸಾಲು ಸಾಲು ನಿಲ್ಲಿಸಿದರೆ ಒಂದಕ್ಕಿಂತ ಒಂದು ವಿಭಿನ್ನ., ಅದು ಅವರು ಕನ್ನಡಾಂಬೆಯ ಪೂಜೆಗೆ ಸಲ್ಲಿಸುವ ವಿವಿಧ ಪುಷ್ಪ ನಾಮಾವಳಿ,

ಇಂದು ಅವರ ಜನುಮದಿನ.. ಶುಭಾಪ್ರದವಾಗಿಯೇ ಇರುತ್ತದೆ ಎನ್ನುವುದಕ್ಕೆ ಅವರ ಶುಭಮಂಗಳ ಚಿತ್ರದ ಮೂಲಕ ಅವರ ಚರಣಕ್ಕೆ ಅರ್ಪಿಸುತ್ತಿರುವ ಈ ಮಾಲಿಕೆ ಸಾಕ್ಷಿ,

ಹುಟ್ಟು ಹಬ್ಬದ ಶುಭ ಕೋರುವ ಮೂಲಕ ಈ ಲೇಖನ ಮಾಲಿಕೆಯನ್ನು ಮುಂದುವರೆಸುತ್ತಿದ್ದೇನೆ... ಬನ್ನಿ ಕಡಲ ಕಿನಾರೆಯಲ್ಲಿ ಸ್ನೇಹದ ಕಡಲಲ್ಲಿ ಮೀಯೋಣ....


 ಶ್ರೀನಿಧಿ ಪ್ರೊಡಕ್ಷನ್ಸ್  ಲಾಂಛನದಲ್ಲಿ ತಯಾರಾದ ಈ ಚಿತ್ರ ತಯಾರಾದದ್ದು ಕರಾವಳಿಯ ಮಡಿಲಲ್ಲಿ. ಕರಾವಳಿಯ ಸುಂದರ ದೃಶ್ಯಗಳನ್ನು ಇಡಿ ಚಿತ್ರದಲ್ಲಿ ಕಾಡುವಂತೆ ಸೆರೆ ಹಿಡಿದಿರುವುದು ಛಾಯಾಗ್ರಾಹಕ ಎನ್ ಜಿ ರಾವ್.

ಸ್ನೇಹದ ಮಹತ್ವವನ್ನು ಸಾರುವ ಈ ಚಿತ್ರದ ಆರಂಭ ಸೊಗಸಾಗಿದೆ.  ಸ್ನೇಹದ ಉಗಮ ಯಾರಿಗೂ ಅರಿವಾಗುವುದಿಲ್ಲ. ಒಂದು ಸಣ್ಣ ನೋಟ, ಒಂದು ಸಣ್ಣ ನಗು, ಒಂದು ಸಣ್ಣ ಮುನಿಸು ಸ್ನೇಹಕ್ಕೆ ನಾಂದಿ ಹಾಡುತ್ತದೆ. ಹಾಗೆಯೇ ಚಿತ್ರದ ಆರಂಭ ಒಂದು ಸಣ್ಣ ಝರಿಯಿಂದ ಶುರುವಾಗಿ ಚಿತ್ರದ ಹೆಸರು ತಾರಾಗಣ ಎಲ್ಲವನ್ನು ತೋರಿಸುತ್ತಾ ಹೋಗುತ್ತಾರೆ. ಹಾಗೆ ಮುಂದುವರಿದಂತೆಯೇ ಝರಿ, ಸಣ್ಣ ತೊರೆಯಾಗುತ್ತದೆ, ನದಿಯಾಗುತ್ತದೆ, ಬೆಟ್ಟದಿಂದ ಧುಮುಕಿ ಜಲಪಾತವಾಗುತ್ತದೆ, ಕಣಿವೆಯಲ್ಲಿ ಹರಿಯುತ್ತದೆ, ಸಮುದ್ರ ಸೇರುತ್ತದೆ. ಸ್ನೇಹದ ಮಹತ್ವ ತೋರಿಸುವುದಕ್ಕಾಗಿ ಎಷ್ಟು ಸೊಗಸಾದ ವಿಧಾನ ಅನುಸರಿಸಿದ್ದಾರೆ ನಮ್ಮ ಪುಟ್ಟಣ್ಣ,

ಶ್ರೀಮತಿ ವಾಣಿಯವರ ಕಾದಂಬರಿಯ ಒಂದು ಎಳೆಯನ್ನು ಹಿಡಿದು ಈ ಚಿತ್ರವನ್ನು ಮಾಡಿದ್ದರೂ ಅದರ ಸಂಪೂರ್ಣ ಕಾಣಿಕೆ ಕಾದಂಬರಿಕಾರ್ತಿಗೆ ಅರ್ಪಿಸುವುದು ಅವರ ದೊಡ್ಡತನ ತೋರುತ್ತದೆ.

ಸಂಬಂಧಿಕರಾಗಿದ್ದರು ಸ್ನೇಹದ ಅಡಿಪಾಯದ ಮೇಲೆ ಅರಳುವ ನಾಯಕ ನಾಯಕಿಯ ಜೀವನ ಎಲ್ಲೋ ಹುಟ್ಟಿ, ಎಲ್ಲೋ ಹರಿದು, ಸ್ನೇಹದ ಸುಂದರ ಹಂತ ಮಿಲನದಲ್ಲಿ ನಿಲ್ಲುತ್ತದೆ. ಎಷ್ಟು ವಿವಿಧಬಗೆಯ ಯೋಚನೆ ಈ ಕಥಾ ಹಂದರದ್ದು.

ಒಂದು ಹೆಣ್ಣು ಮನಸ್ಸು ಹೇಗೆ ಭಾವನೆಗಳಿಗೆ ಅರಳುತ್ತದೆ, ರೋಷದ ಮಾತುಗಳಿಗೆ ಕೆರಳುತ್ತದೆ ಎನ್ನುವುದು ಚಿತ್ರದುದ್ದಕ್ಕೂ ನಾಯಕಿಯ ಎರಡು ಜಡೆಯಲ್ಲಿ ಬಿಂಭಿತವಾಗಿದೆ.

ಇಲ್ಲಿ ಪ್ರತಿಪಾತ್ರಗಳು ಅಭಿನಯಿಸಿಲ್ಲ ಬದಲಾಗಿ ನಟರೆ ಪಾತ್ರಗಳಾಗಿದ್ದಾರೆ,  ಪುಟ್ಟಣ್ಣ ಅವರು ಮತ್ತೆ ಕೆಲವೇ ನಟ ನಟಿಯರ ತಾರಾಗಣದಲ್ಲಿ ಈ ಚಿತ್ರವನ್ನು  ಚಿತ್ರಿಸಿದ್ದಾರೆ.

ಸಂಗೀತ ವಿಜಯಭಾಸ್ಕರ್ ಅವರ ಭದ್ರ ಕೋಟೆಯಲ್ಲಿ ನಿಂತರೆ, ಛಾಯಾಗ್ರಹಣ  ಎನ್ ಜಿ ರಾವ್ ಅವರ ಸಾರಥ್ಯಕ್ಕೆ ಸಿದ್ಧವಾಗಿರುತ್ತದೆ, ಸೊಗಸಾದ ಸಂಭಾಷಣೆಯ ಕತೃಗಳು ಹಾಸ್ಯ ಪಿತಾಮಹ ಬಿChi, ಜೊತೆಯಲ್ಲಿ ಯೋಗಾನರಸಿಂಹ ಮೂರ್ತಿ.

ತಂದೆಯ ಕೆಲವು  ರೋಷ ಸೇಡು ಹಠದ ಗುಣಗಳನ್ನು ಬಳುವಳಿಯಾಗಿ ಪಡೆದ ನಾಯಕಿ ತನ್ನ ಸ್ವಾಭಿಮಾನ, ಹಠ, ಛಲಕ್ಕೆ ಜೋತು ಬಿದ್ದು ಪಾತ್ರ ನಿರ್ವಹಿಸುತ್ತಾಳೆ. ಜೀವನದ ಕಡಲಿನಲ್ಲಿ ಸ್ನೇಹದ ತರಂಗಗಳು ಬಡಿದು ಬಡಿದು ಅವಳ ಸಿಟ್ಟು ರೋಷ ಹಠ ಇವನ್ನು ಕಮ್ಮಿ ಮಾಡುತ್ತಾ ಸ್ನೇಹದ ಸಂಕೋಲೆಗೆ ಶರಣಾಗುತ್ತಾಳೆ.

ಆರತಿ " ಹೇಮಾ"ಳನ್ನು ಆಲಂಗಿಸಿ ಮುದ್ದಾಡಿ ಅಪ್ಪಿಕೊಂಡು ಅವಳೊಳಗೆ ತೂರಿಕೊಂಡು ಬಿಟ್ಟಿದ್ದಾರೆ. ಇಡಿ ಚಿತ್ರದುದ್ದಕ್ಕೂ ಹೇಳುವ "ಪ್ರಭಾಕರ" ಶಬ್ದ ಅವರ ದನಿಯಲ್ಲೇ ಕೇಳಬೇಕು. ಪ್ರತಿ ದೃಶ್ಯದಲ್ಲೂ ಆವರಿಸಿಕೊಳ್ಳುತ್ತಾ ಹೋಗುವ ಅವರು.. ಅವರಿರಿರದೆ ಚಿತ್ರವಿಲ್ಲ ಎನ್ನುವಷ್ಟು ಕಾಡುತ್ತಾರೆ.

  • ಕಾರನ್ನು ಓದಿಸಿ ಪ್ರಭಾಕರನನ್ನು ಗೋಳು ಹುಯ್ದು ಕೊಳ್ಳುವ ದೃಶ್ಯ 
  • ಲೆಖ್ಖ ಲೆಖ್ಖ ಎನ್ನುತ್ತಾ ಪ್ರತಿ ಬಾರಿಯೂ ಗಲಾಟೆ ಮಾಡುವ ದೃಶ್ಯ 
  • ಇಷ್ಟು ದೊಡ್ಡ ಜಗತ್ತಲ್ಲಿ ನನಗೊಬ್ಬಳಿಗೆ ಜಾಗ ಇರೋಲ್ವೆ.. ಎನ್ನುವಾಗ ಹತಾಶೆ ಕಂಡರೂ ಸ್ವಲ್ಪ ಬಿಗುಮಾನ ಇರುವ ಮಾತುಗಳು 
  • ತಿಮ್ಮ, ಮೂಗ ನಮ್ಮ ಮನೆ ಆಳಲ್ಲ ನನ್ನ ಒಡಹುಟ್ಟಿದವರು ಎನ್ನುವ ಅವರ ಮಾತಿನ ಧಾಟಿ ಸೂಪರ್ 
  • ಕೆಲಸ ಸಿಕ್ಕಿ ಸಂಬಳ ತಂದು ಪ್ರಭಾಕರನನ್ನು ಛೇಡಿಸುವ ದೃಶ್ಯ "ಈ ಶತಮಾನದ ಮಾದರಿ ಹೆಣ್ಣು" ಹಾಡುತ್ತಾ ಪ್ರಭಾಕರನ ಬರುವಿಕೆಗೆ ಕಾಯುವ ಅಭಿನಯ 
  • ಪ್ರಭಾಕರನ ಸ್ನೇಹಕ್ಕೆ ಸೋತು ತನ್ನ ಕೊನೆಗೆ ಬಂದಾಗ ಅಪ್ಪನ ಭಾವ ಚಿತ್ರವನ್ನು ಮಡಚಿಟ್ಟು ಇಂಥಹ ಸ್ನೇಹಕ್ಕೆ ನಾ ಹೇಗಪ್ಪ ಸೋಲದಿರಲಿ ಎನ್ನುವಾಗ ಕಣ್ಣೀರಾಗುತ್ತೇವೆ
  • ಒಂದು ಸನ್ನಿವೇಶದಲ್ಲಿ ಪ್ರಭಾಕರ ಹೇಮಾಳ ಮೇಲೆ ಅನುಮಾನ ಪಟ್ಟು ಅವಮಾನಿಸಿದಾಗ. ಅಳುತ್ತಾ ಕೂತಾಗ .. ತಪ್ಪನ್ನು ಅರಿತ ಪ್ರಭಾಕರ ಕ್ಷಮೆ ಕೇಳುತ್ತಾ ಕಣ್ಣಲ್ಲಿ ನೀರು ತುಂಬಿ ಕೊಂಡಾಗ.. ಅಳುತ್ತ ಇದ್ದ ಹೇಮಾ, ತುಸು ಮುನಿಸಿನಲ್ಲಿ... ಸ್ವಲ್ಪವೇ ನಗುತ್ತಾ.. "ಅದ್ಯಾಕೋ ಪ್ರಭಾಕರ ಅಳ್ತೀಯ ಹೆಣ್ಣಿಗರಾಮ.. " ಈ ದೃಶ್ಯ ಸೂಪರ್. ಒಂದು ಕಡೆ ಅಳು, ಕೋಪ, ಸ್ನೇಹಿತನಿಗೆ ಬೇಸರವಾಯ್ತು ಎನ್ನುವ ಭಾವ ಎಲ್ಲವೂ ಮೇಳೈಸಿ ತೋರಿಸಿರುವ ಅವರ ಭಾವ ಸೂಪರ್ 
  •  ಪ್ರಭಾಕರನ ಮನೆ ತನ್ನ ಹೆಸರಿಗೆ ಇದೆ ಎಂದು ಗೊತ್ತಾದ ಮೇಲೆ.. ಪ್ರಭಾಕರ ಆ ಮನೆಯನ್ನು ಬಿಟ್ಟು ಹೋಗುತ್ತೇನೆ ಎಂದಾಗ.. ಇಲ್ಲೇ ಇರು ಎಂದು ಒತ್ತಾಯ ಮಾಡುತ್ತಾಳೆ... ಆಗ ಹೆಣ್ಣಾದ ನಿನಗೆ ಸ್ವಾಭಿಮಾನ ಇದೆ.. ಗಂಡಾದ ನನಗೆ ಸ್ವಾಭಿಮಾನ ಸತ್ತು ಹೋಗಿದೆಯ ಎಂದಾಗ ಕಪಾಳಕ್ಕೆ ಹೊಡೆಯುವ ಶಬ್ದ ಜೊತೆಯಲ್ಲಿ ಹೇಮಾಳ ಅಭಿನಯ. 
ಒಟ್ಟಿನಲ್ಲಿ ಇಡಿ ಚಿತ್ರವನ್ನು ತನ್ನ ಭುಜದ ಮೇಲೆ ಹೊತ್ತು ಸಾಗಿರುವ ಪರಿ ಆರತಿ ಹೇಮಾಳ ಪಾತ್ರವನ್ನು ಅಭಿನಯಿಸೋಕೆ ಜನ್ಮ ತಾಳಿದ್ದಾರೆ ಅನ್ನುವಷ್ಟು ಇಷ್ಟವಾಗುತ್ತಾರೆ. 

ಶ್ರೀನಾಥ್ ಪ್ರಭಾಕರನ ಪಾತ್ರದಲ್ಲಿ ಇಳಿದು ಬಿಟ್ಟಿದ್ದಾರೆ.. ನಾಯಕನಾಗಿ ಮೊದಲ ದೊಡ್ಡ ಚಿತ್ರ ಇದು. ನಂತರ ಪುಟ್ಟಣ್ಣ ಅವರ ಸುಮಾರು ಚಿತ್ರಗಳಲ್ಲಿ ಮಿನುಗಿದ್ದಾರೆ. ಹೇಮಾಳ ಜೊತೆಯಲ್ಲಿನ ಜಗಳ, ತಮಾಷೆ, ಸ್ನೇಹ ಎಲ್ಲವು ಸೂಪರ್. ಅವರ ಜೀವನದ ಒಂದು ಭಾಗವೇ ಆಗಿ ಹೋದ "ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ" ಹಾಡು ಸುಂದರವಾಗಿದೆ. ಹೇಮಾಳ ಪ್ರತಿ ಸಂಭಾಷಣೆಗೂ ತಕ್ಕ ಪ್ರತಿಯುತ್ತರ ಕೊಡುತ್ತ ಹೋಗುವ ಅವರ ಪಾತ್ರದ ಹರಿವು ಇಷ್ಟವಾಗುತ್ತದೆ. ಸ್ನೇಹಕ್ಕೆ ಸ್ನೇಹದ ಮನಸ್ಸಿಗೆ ಮನಸೋಲುವ ಅಭಿನಯ ಸುಂದರವಾಗಿದೆ 


ತಿಮ್ಮನ ಪಾತ್ರದಲ್ಲಿ ನಟ ಶಿವರಾಂ ಕೆಲವೊಮ್ಮೆ ನಗಿಸುತ್ತಾರೆ, ಕೆಲವೊಮ್ಮೆ ಮನಸ್ಸಿಗೆ ತಾಕುತ್ತಾರೆ.. "ಹೇಮವ್ವ ಪ್ರಭಾಕರಪ್ಪ ನಿಮ್ಮನ್ನು ಬಚಾಯಿಸಿದರು.. ಎನ್ನುವಾಗ ಕಣ್ಣೀರು ತುಂಬಿಕೊಳ್ಳುತ್ತಾರೆ.. ಸೂರ್ಯಂಗೂ ಚಂದ್ರಂಗೂ ಹಾಡಿನಲ್ಲಿ ಹೇಮಾ ಮತ್ತು ಪ್ರಭಾಕರನನ್ನು ಸೇರಿಸಲು ಪಡುವ ಪಾಡು ಇಷ್ಟವಾಗುತ್ತದೆ. "ಸಮುದ್ರದಲ್ಲಿ ಈ ಪಾಟಿ ನೀರೈತೆ.. ಕುಡಿಯೋಕೆ ಒಂದು ನೀರು ಸಿಗುತ್ತಾ ಹೇಳಿ" ಎನ್ನುವಾಗ ತಿಮ್ಮ ಅನುಭವಿ ರೀತಿಯಲ್ಲಿ ಮಾತಾಡುತ್ತ ಹೋಗುವ ಪಾತ್ರ ಇಷ್ಟವಾದರೆ, ಮನೆಯ ಫೌಂಟನ್ ನಲ್ಲಿ ಸ್ನಾನ ಮಾಡುವಾಗ, ಊಟ ಮಾಡಿದಮೇಲೆ ಹಣ್ಣಿನ ತಟ್ಟೆಯನ್ನು ಎತ್ತಿಕೊಂಡು ಹೋಗುವಾಗ ನಗೆ ಉಕ್ಕಿಸುತ್ತಾರೆ.

ಮೂಗನ ಪಾತ್ರದಲ್ಲಿ ಅಂಬರೀಶ್.. ಅಬ್ಬಾ ಎನ್ನಿಸುತ್ತಾರೆ ಇಡಿ ಚಿತ್ರದಲ್ಲಿ ತಿಮ್ಮನ ನೆರಳಾಗೆ ಇರುವ ಈ ಪಾತ್ರ.. ಹೇಮಾ ಕೆಲಸ ಮಾಡುವ ಅಂಗಡಿಯಲ್ಲಿ ಆ ಅಂಗಡಿಯ ಯಜಮಾನರ ಮಕ್ಕಳು ಅವಳನ್ನು ಪೀಡಿಸಿದರು ಎಂದು ತಿಳಿದಾಗ ರೋಷ ವೇಷದಲ್ಲಿ ಬಂದು ತಿಮ್ಮನ ಕಣ್ಣೀರನ್ನು ಒರೆಸಿ ಅಂಗಡಿಗೆ ನುಗ್ಗಿ ಬಡಿಯುವ ದೃಶ್ಯ ಇಷ್ಟವಾಗುತ್ತದೆ. ಈ ದೃಶ್ಯದಲ್ಲಿ ಹೇಮಾ ತನ್ನ ಕಷ್ಟವನ್ನು ಹೇಳಿಕೊಳ್ಳಲು ಮೂಗನನ್ನು ಆರಿಸಿಕೊಳ್ಳುವುದು.. ಭಾವ ವ್ಯಕ್ತ ಪಡಿಸಿಕೊಳ್ಳೋಕೆ ಮಾತಲ್ಲ ಮುಖ್ಯ ಭಾವ ಮತ್ತು ಭಾವನೆ ಮುಖ್ಯ ಎಂದು ತೋರಿಸುತ್ತದೆ.  ಯಾಕೆ ಅಂದ್ರೆ ಈ ದೃಶ್ಯದಲ್ಲಿ ಮಾತು ಬರುವ ಎಲ್ಲರೂ ಹೇಮಾ ತಪ್ಪು ಮಾಡಿದ್ದಾಳೆ ಎಂದೇ ನಂಬಿರುತ್ತಾರೆ.. ಮೂಗ ಒಬ್ಬನೇ ಅರ್ಥ ಮಾಡಿಕೊಳ್ಳಲು ಪ್ರಯತ್ನ ಪಡುವುದು. ಪುಟ್ಟಣ್ಣ ಇಂಥಹ ಸಂಕೀರ್ಣ ಪಾತ್ರ ಸೃಷ್ಟಿಸುವುದರಲ್ಲಿ ಎತ್ತಿದ ಕೈ. ಅಂಬರೀಶ್ ಇಡಿ ಚಿತ್ರದಲ್ಲಿ ಇಷ್ಟವಾಗುತ್ತಾರೆ.

ಪುಟ್ಟಣ್ಣ ನವರ ನಾಗರಹಾವು ಚಿತ್ರದಲ್ಲಿ ಅಬ್ಬರಿಸಿದ್ದ ಚಾಮಯ್ಯ ಮೇಷ್ಟ್ರು ಈ ಚಿತ್ರದಲ್ಲಿ ಅಶ್ವತ್ ವೈದ್ಯರ ಚಿಕ್ಕ ಚೊಕ್ಕ ಪಾತ್ರದಲ್ಲಿ ಬಂದು ನಗಿಸುತ್ತಾರೆ. ಪುಟ್ಟಣ್ಣ ಅವರ ಚಿತ್ರಗಳನ್ನು ನಿರಾಕರಿಸಲು ಸಾಧ್ಯವೇ ಇಲ್ಲ ಎನ್ನುವ ಹಂತ ಅಶ್ವಥ್ ಅವರ ಚಿಕ್ಕ ಪಾತ್ರವನ್ನು ಒಪ್ಪಿಕೊಳ್ಳುವುದರ ಮೂಲಕ ತೋರಿಸುತ್ತಾರೆ .

ಆದ್ರೆ ರೀತಿಯಲ್ಲಿ ಸೀತಾರಾಂ ಚಿಕ್ಕ ಪಾತ್ರವಾದರೂ ಮುಂದೆ ಉಪಾಸನೆ ಚಿತ್ರದಲ್ಲಿ ಗಮನ ಸೆಳೆಯುವಂಥಹ ಅಭಿನಯ ನೀಡಿ ಮನಗೆಲ್ಲುತ್ತಾರೆ. ಹೀಗೆ ಕಲಾವಿದರಿಗೆ ಅವರ ಆಳವನ್ನು ತೋರಿಸುತ್ತಾ ಅವರ ಪ್ರತಿಭೆಯನ್ನು ಹೊರ ತೆಗೆಯುವ ಶಕ್ತಿ ಪುಟ್ಟಣ್ಣ ಅವರಿಗೆ ಕರಗತವಾಗಿತ್ತು.

ಈ ಚಿತ್ರದ ಹಾಡುಗಳು ಅಜರಾಮರ..

"ಈ ಶತಮಾನದ ಮಾದರಿ ಹೆಣ್ಣು" ವಾಣಿ ಜಯರಾಂ "ಹೆಣ್ಣು" ಎನ್ನುವ ಪದವನ್ನು ಉಲಿಯುವ ರೀತಿ ಸೂಪರ್. ವಿಜಯನಾರಸಿಂಹ ಅವರ ಸಾಹಿತ್ಯವನ್ನು ಎತ್ತರದ ಸ್ಥಾಯಿಯಲ್ಲಿ ಹಾದಿ ಮನ ಗೆದ್ದಿದ್ದಾರೆ ವಾಣಿ ಜಯರಾಂ.

"ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ" ಸ್ನೇಹದ ಮಹತ್ವ, ಬಾಲ್ಯದ ಹುಡುಗಾಟ ಎಲ್ಲವನ್ನು ಕಲಸಿ ಬರೆದಿರುವ ಚಿ ಉದಯಶಂಕರ್ ಸ್ನೇಹಕ್ಕೆ ಒಂದು ಹಾಡು ಎಂದಾಗ ಈ ಹಾಡೇ ನೆನಪಿಗೆ ಬರುವುದು. ಎಸ್ ಪಿ ಬಾಲಸುಬ್ರಮಣ್ಯಂ ಅವರು ಜೀವ ತುಂಬಿ ಹಾಡಿದ್ದಾರೆ. ಶ್ರೀನಾಥ್ ಅವರ ಅನೇಕ ಗೀತೆಗಳನ್ನು ಹಾಡಿರುವ ಇವರಿಬ್ಬರ ಸ್ನೇಹಕ್ಕೆ ಮುನ್ನುಡಿ ಈ ಹಾಡಾಯಿತು.

ಕನಸ್ಸಲ್ಲಿ ಕಂಡು ಬರುವ "ಶುಭ ಮಂಗಳ ಸುಮೂಹೂರ್ತವೆ" ವಾಣಿ ಜಯರಾಂ ಮತ್ತು ಪಿ ಬಿ ಶ್ರೀನಿವಾಸ್ ಗಮನಸೆಳೆಯುತ್ತಾರೆ. ಕಣಗಾಲ್ ಪ್ರಭಾಕರ್ ಶಾಸ್ತ್ರಿಯವರ ಸಾಹಿತ್ಯವನ್ನು ಅಷ್ಟೇ ಮುದ್ದಾಗಿ ಚಿತ್ರಿಸಿರುವ ಶೈಲಿ ಪಟಾಕಿ ಸಿಡಿಮದ್ದು ಇಲ್ಲದೆ ಬರಿ ಹೂಬಾಣಗಳ ಮಧ್ಯೆ ಸುಂದರವಾಗಿ ಮೂಡಿ ಬಂದಿದೆ.

ಮಲ್ಪೆಯ ಕಡಲ ತೀರದ "ಸೈಂಟ್ ಮೇರಿಸ್" ಸುಂದರ ದ್ವೀಪದಲ್ಲಿ ಚಿತ್ರಿಸಿರುವ ಹಾಡು "ನಾಕೊಂದ್ಲ ನಾಕು" ಎಂ ಎನ್ ವ್ಯಾಸರಾವ್ ಅವರ ತುಂಟ ಸಾಹಿತ್ಯ, ಜೊತೆಯಲ್ಲಿ ಪ್ರಕೃತಿಯ ವಿಹಂಗಮ ಬಣ್ಣನೆ ಇಷ್ಟವಾಗುತ್ತದೆ. ಎಸ್ ಪಿ ಬಾಲಸುಬ್ರಮಣ್ಯಂ ಮತ್ತೆ ತುಂಟ ತನದ ಈ ಹಾಡಿಗೆ ದನಿಯಾಗುತ್ತಾರೆ.

ಪುಟ್ಟಣ್ಣ ಅವರು ಪ್ರತಿಭೆಗಳನ್ನು ಹೇಗೆ ಹುಡುಕುತ್ತಿದ್ದರು ಎನ್ನುವುದಕ್ಕೆ ಉತ್ತಮ ಸಾಕ್ಷಿ "ಸೂರ್ಯಂಗೂ ಚಂದ್ರಂಗೂ" ಹಾಡು. ನಿರ್ದೇಶಕ ರವಿ ಅವರ ದಪ್ಪ ದನಿಯಲ್ಲಿ ಹಾಡಿಸಿರುವ ಈ ಹಾಡು ಇಷ್ಟವಾಗುವುದು ಅದರ ಸಾಹಿತ್ಯ, ಹಳ್ಳಿಯ ಶೈಲಿಯಲ್ಲಿಯೇ ಹಾಡಿರುವ ಬಗೆ, ಜೊತೆಯಲ್ಲಿ ಶಿವರಾಂ ಅವರ ಅಭಿನಯ. ಎಂ ಎನ್ ವ್ಯಾಸರಾವ್ ಅವರ ಅರ್ಥ ಗರ್ಭಿತ ಸಾಹಿತ್ಯ ಮನಗೆಲ್ಲುತ್ತದೆ.

ಇನ್ನೊಬ್ಬ ಸುಂದರ ನಟ ಆರ್ ನಾಗೇಂದ್ರ ರಾಯರ ಮಗ ಸುದರ್ಶನ್ ಅವರ ಸಿರಿ ಕಂಠ ದಲ್ಲಿ ಮೂಡಿರುವ ಗೀತೆ "ಹೂವೊಂದು ಬಳಿ ಬಂದು" ಹಾಡಿಗೆ ಒಂದು ಭಾವುಕ ಚೌಕಟ್ಟು ಒದಗಿಸುವಲ್ಲಿ ಈ ಹಾಡು ಗಾಯನ ತನ್ನ ಕಾಣಿಕೆ ಸಲ್ಲಿಸುತ್ತದೆ. ವಿಜಯನಾರಸಿಂಹ ಅವರ ಸುಂದರ ಪದಗಳ ಜಾದೂ ಶ್ರೀನಾಥ್ ಅವರ ಅಭಿನಯ ಈ ಹಾಡಿಗೆ ಮೆರುಗು ತಂದಿದೆ.

ಇಡಿ ಚಿತ್ರದಲ್ಲಿ ಸ್ನೇಹದ ಕಡಲಿನ ಮೇಲೆ ತೇಲಿಸುವಂತೆ ಅನುಭವ ಕೊಡುವ ಸಂಗೀತ ವಿಜಯಭಾಸ್ಕರ್ ಅವರದ್ದು. ಪ್ರತಿ ಹಾಡಿಗೂ ಪ್ರತಿ ಸನ್ನಿವೇಶಕ್ಕೂ ವಿಭಿನ್ನ ರೀತಿಯಲ್ಲಿ ಸಂಗೀತ ತುಂಬುತ್ತಾ ಜೀವ ತುಂಬುವ ಅವರ ಸಂಗೀತ ಈ ಚಿತ್ರದ ಉತ್ತಮ ಯಶಸ್ಸಿಗೆ ಕಾರಣವಾಗಿತ್ತು. ಅದ್ಭುತ ಗೆಳೆತನ ವಿಜಯಭಾಸ್ಕರ್, ಪುಟ್ಟಣ್ಣ ಮತ್ತು ವಿಜಯನಾರಸಿಂಹ ಅವರದ್ದು. ಈ ಗೆಳೆತನದ ಅಪಾರ ಶಕ್ತಿ ಈ ಚಿತ್ರದ ಯಶಸ್ಸಿಗೆ ದುಡಿದಿದೆ.

ಗುರುಗಳೇ ಇಂಥಹ ಸ್ನೇಹದ ಕಡಲಲ್ಲಿ ನಮ್ಮನ್ನು ತೇಲಿಸಿ ಸಾಗಿಸಿರುವ ಈ ಚಿತ್ರದ ನುಡಿ ನಮನದ ಜೊತೆಯಲ್ಲಿ ನಿಮಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ನಿಮ್ಮ ಅಭಿಮಾನಿ ಬಳಗದ ಮೂಲಕ ಕೋರುತ್ತಿದ್ದೇವೆ.  ಶುಭಮಂಗಳಕರ ನೆನಪುಗಳೊಂದಿಗೆ ಮತ್ತೊಂದು ಚಿತ್ರದ ಜೊತೆಯಲ್ಲಿ ಬರುವೆ.