Saturday, October 25, 2014

ಒಂದೇ ಒಂದು ಅವಕಾಶ ಕೊಡಬೇಕಿತ್ತು - ಶರಪಂಜರ (1971)

ಒಂದು ಭಾನುವಾರದ ರಾತ್ರಿ.. ಉದಯ ವಾಹಿನಿಯಲ್ಲಿ ಶರಪಂಜರ ಚಿತ್ರ ಶುರುವಾಗಿತ್ತು.. ಎಲ್ಲರೂ ನೋಡುತ್ತಾ ಕೂತಿದ್ದೆವು..
ನೋಡುತ್ತಾ ನೋಡುತ್ತಾ ಒಬ್ಬೊಬ್ಬರೇ ನಿದ್ರಾದೇವಿಯ ಮಡಿಲಿಗೆ ಜಾರಿಕೊಂಡಿದ್ದೆವು..

ನನ್ನ ಸೋದರ ಮಾವ ರಾಜ (ಶ್ರೀಕಾಂತ) ಒಬ್ಬನೇ ಇಡಿ ಚಿತ್ರವನ್ನು ಜಾಹಿರಾತುಗಳ ಮಧ್ಯೆ ನೋಡಿ. ಮಲಗಿದಾಗ ಸರಿ ರಾತ್ರಿ ಯಾಗಿತ್ತು..

ಸೋಮವಾರ ಬೆಳಿಗ್ಗೆ ಯತಾವತ್ತು ನಮ್ಮ ನಿತ್ಯ ಕರ್ಮಗಳತ್ತ ಗಮನ ಹರಿಸುತ್ತಾ ಇದ್ದಾಗ.. ನಿಧಾನವಾಗಿ ಎದ್ದ ರಾಜ.. ರೂಮಿನ ಬಾಗಿಲಿನ ಹತ್ತಿರ ನಿಂತು ತನ್ನ ದೇಶಾವರಿ ನಗೆ ಕೊಡುತ್ತಾ.. "ಒಂದೇ ಒಂದು ಅವಕಾಶ ಕೊಡಬೇಕಿತ್ತು" ಎಂದು ಬೆರಳು ತೋರಿಸುತ್ತಾ ಹೇಳಿದ.. ನಮಗೆ ಆ ಬೆಳಗಿನ ಪುರುಸೊತ್ತಿಲ್ಲದ ಹೊತ್ತಿನ ನಡುವೆಯೂ ಹೊಟ್ಟೆ ಹಿಡಿದುಕೊಂಡು ನಗಲಾರಂಬಿಸಿದೆವು..

ಅಲ್ಲಿನ ಮುಂದೆ ಅವನನ್ನು ಮಾತಾಡಿಸುವಾಗಲೆಲ್ಲಾ .. "ರಾಜ ನನಗೆ ಒಂದೇ ಒಂದು ಅವಕಾಶ ಕೊಡಬೇಕಿತ್ತು" ಎಂದು ಶುರು ಮಾಡುತ್ತಿದ್ದೆ..

ಪುಟ್ಟಣ್ಣ ಚಿತ್ರಗಳನ್ನು ನೋಡುವ ಬಗೆ ಹೇಳಿಕೊಟ್ಟ ರಾಜ.. ನಿನಗೆ ಈ ಲೇಖನ ಅರ್ಪಿತ..

* * * * * * * * * * * * * * * 

ಎಲ್ಲೋ ಪುಸ್ತಕದಲ್ಲಿ ಓದಿದ ನೆನಪು.. ಕಲಾವಿದನಿಗೆ ಸವಾಲು ಅಂದರೆ ಹುಚ್ಚನ ಪಾತ್ರ ಅಥವಾ ಮಾನಸಿಕ ಸ್ಥಿಮಿತವಿರದ ಪಾತ್ರ.. ಪ್ರೇಕ್ಷಕರಿಗೆ ಹುಚ್ಚು ಹಿಡಿಸದೆ.. ನಟನೆ ಎನ್ನುವ ಒಂದು ದಾರದ ನಡಿಗೆಯ ಮೇಲೆ ಜಾರದೆ ಬೀಳದೆ ಅಭಿನಯಿಸುವ ಒಂದು ಪಾತ್ರ. ಅಂಥಹ ಪಾತ್ರವನ್ನು ಸೃಷ್ಟಿಸಿ ಗೆದ್ದ ಶ್ರೀಮತಿ ತ್ರಿವೇಣಿಯವರ ಕಾದಂಬರಿಯನ್ನು ಬೆಳ್ಳಿ ಪರದೆಯ ಮೇಲೆ ಸ್ವಲ್ಪವೂ ಮಾಸದೆ ತಂದವರು ಪುಟ್ಟಣ್ಣ ಕಣಗಾಲ್.. ಗೆರೆದಾಟದೆ ಒಂದು ವೃತ್ತದ ಪರಿಧಿಯಲ್ಲೇ ಅಭಿನಯವನ್ನು ಹೊರಹೊಮ್ಮಿಸಲು ತಮ್ಮ ಸಾಮರ್ಥ್ಯವನ್ನೆಲ್ಲ ಧಾರೆ ಎರೆದು ಎರಕ ಮಾಡಿಕೊಂಡ ಪಾಕವನ್ನು ಕೊಟ್ಟವರು ಮಿನುಗುತಾರೆ ಕಲ್ಪನಾ. ಇಂದಿಗೂ ಮಾನಸಿಕ ತೊಳಲಾಟ ಅಂದ ಕೂಡಲೇ  "ಯಾಕೋ ಶರಪಂಜರ ಕಾವೇರಿ ತರಹ ಆಡ್ತೀಯ" ಎನ್ನುವ ಮಾತು ಈ ಚಿತ್ರ ರತ್ನ ತಂದಿಟ್ಟ ಪರಿಣಾಮ ಎಂದರೆ ಖಂಡಿತ ಇದು ಈ ಚಿತ್ರಕ್ಕೆ ಮತ್ತು ಪುಟ್ಟಣ್ಣ ಅವರಿಗೆ ಕೊಡುವ ದೊಡ್ಡ ಗೌರವ ಎನ್ನುವುದು ನನ್ನ ಅಭಿಮತ. 

ವರ್ಧಿನಿ ಆರ್ಟ್ಸ್ ಪಿಕ್ಕ್ಚರ್ಸ್ ಲಾಂಛನದಲ್ಲಿ ಸಿ ಎಸ್ ರಾಜ ಅವರ ನಿರ್ಮಾಣದಲ್ಲಿ ತೆರೆಗೆ ಬಂದ ಚಿತ್ರ ರತ್ನ ಇದು. ಶ್ರೀಮತಿ ತ್ರಿವೇಣಿಯವರ ಶರಪಂಜರ ಎನ್ನುವ ಕಾದಂಬರಿಯನ್ನು ತೆರೆಗೆ ಅಳವಡಿಸಿದ್ದು ನಿರ್ದೇಶಕ ರತ್ನ ಪುಟ್ಟಣ್ಣ. 

ಮೈಸೂರು, ಶ್ರೀರಂಗಪಟ್ಟಣ, ಮಡಿಕೇರಿ, ಚುಂಚನಕಟ್ಟೆಯ  ಸುಂದರ ಮಡಿಲಿನಲ್ಲಿ ಮೂಡಿ ಬಂದ ಚಿತ್ರಕ್ಕೆ ಛಾಯಾಗ್ರಹಣ ಡಿ ವಿ ರಾಜಾರಾಂ ಅವರದ್ದು, ಸಂಗೀತ ವಿಜಯಭಾಸ್ಕರ್ ಮತ್ತು ಸಾಹಿತ್ಯ ವಿಜಯನಾರಸಿಂಹ ಮತ್ತು ಪುಟ್ಟಣ್ಣ ಅವರ ಅಗ್ರಜ ಕಣಗಾಲ್ ಪ್ರಭಾಕರಶಾಸ್ತ್ರಿ ಅವರದ್ದಾಗಿತ್ತು,  ಉತ್ತಮ ಸಾಹಿತ್ಯಕ್ಕೆ ಅಷ್ಟೇ ಉತ್ತಮ ಕಂಠ ನೀಡಿದವರು ಪಿ ಬಿ ಶ್ರೀನಿವಾಸ್ ಮತ್ತು ಪಿ ಸುಶೀಲ.  ಬಂಧನ ಶರಪಂಜರದಲಿ ಬಂಧನ ಎನ್ನುವ ಪುಟ್ಟ ಪುಟ್ಟ ಗೀತೆಯ ಸಾಲುಗಳು ಚಿತ್ರದ ಉತ್ತರಾರ್ಧದಲ್ಲಿ ಪರಿಣಾಮಕಾರಿಯಾಗಿ ಮೂಡಿ ಬಂದಿದೆ ಅದನ್ನು ಹಾಡಿದವರು ಮೈಸೂರು ದೇವದಾಸ್. 

ಈ ಚಿತ್ರಮಾಡಿದಾಗ ಶ್ರೀಮತಿ ತ್ರಿವೇಣಿಯವರು ಇಹಲೋಕದಲ್ಲಿ ಇರಲಿಲ್ಲ.. ಆದರೂ ಸಂಭಾಷಣೆಯ ಫಲಕದಲ್ಲಿ  ತ್ರಿವೇಣಿ ಜೊತೆಯಲ್ಲಿ ಹಂಚಿಕೊಂಡದ್ದು ಸಾಹಿತಿಗಳಿಗೆ ಪುಟ್ಟಣ್ಣ ಅವರು ಕೊಡುತ್ತಿದ್ದ ಗೌರವ ಸೂಚಿಸುತ್ತದೆ. 

ಮುಂದಿನ ಸೀಟ್ ನಲ್ಲಿ ಕಿತ್ತಳೆ ಹಣ್ಣನ್ನು ಬಿಡಿಸಿ ತಿಂದರು.. ಸಿಪ್ಪೆಯ ರಸ ಹಿಂದಿನ ಸೀಟ್ ತನಕ ಹಾರಿತು ಎಂದು ಕೂಗುವ  ನಾಯಕನ ದೃಶ್ಯದಲ್ಲಿಯೇ ಚಿತ್ರದ ತಿರುಳನ್ನು ಬಿಡಿಸಿ ಇಟ್ಟಿದ್ದಾರೆ.  ಸಿಪ್ಪೆ ಸುಲಿದ ಮೇಲೆ ಹಣ್ಣನ್ನು ತಾನೇ ತಿನ್ನುವುದು ಸಿಪ್ಪೆಯ ಹಂಗೇಕೆ, ಸಿಹಿಯಾದ ವಸ್ತುವಿಗೆ ಯಾವಾಗಲೂ ಕಹಿಯಾದ ಒಂದು ಬೇಲಿ ಇರುತ್ತದೆ ಎನ್ನುವ ತರ್ಕದ ಅರಿವಿಲ್ಲದೆ, ನಾಯಕ ನಾಯಕಿಯನ್ನು ಚಿತ್ರದ ದ್ವೀತಿಯ ಭಾಗದಲ್ಲಿ ತಿರಸ್ಕಾರ ನೋಟದಿಂದ ನೋಡುವುದಕ್ಕೆ ಬುನಾದಿ ಹಾಕಿಕೊಡುತ್ತದೆ.. ಹಾಗೆಯೇ ಮದುವೆಗೆ ಆಹ್ವಾನ ನೀಡುವ ಮುಂಚೆ ನಾಯಕನ ಸ್ನೇಹಿತ ಹುಡುಗಿಯ ಬಗ್ಗೆ ಅಷ್ಟೇನೂ ಒಳ್ಳೆ ಅಭಿಪ್ರಾಯ ಕೇಳಿಲ್ಲ ಅಂದಾಗ ನಾಯಕನೇ "ಸೌಂದರ್ಯ ಇದ್ದ ಕಡೆ ಅಪವಾದ ಇದ್ದೆ ಇರುತ್ತದೆ" ಎನ್ನುತ್ತಾನೆ. 

ಆದರೆ ಕಡೆಗೆ ತರ್ಕವನ್ನೆಲ್ಲ ಬದಿಗಿಟ್ಟು ನಾಯಕಿಯ ಜೀವನದಲ್ಲಿ ಬಲವಂತವಾಗಿ ನಡೆದ ಒಂದು ಅಚಾತುರ್ಯವನ್ನೇ ಮನದಲ್ಲಿಟ್ಟುಕೊಂಡು ಸಿಹಿಯಾದ ಹಣ್ಣನ್ನು ತಿನ್ನದೇ ರಸ ಸಿಡಿಸಿ ಕಣ್ಣಿಗೆ ಉರಿ ಕೊಡುವ ಪರ ಸ್ತ್ರೀ ಬಗ್ಗೆ ಮಾತ್ರ ಗಮನ ಕೊಡುವ ಇಡಿ ಚಿತ್ರಣ ಮೊದಲ ದೃಶ್ಯದಲ್ಲಿ ಮೂಡಿ ಬಂದಿದೆ.  

ಇದೆ ತರಹದ ಮಾತನ್ನು ಪುಷ್ಟಿಕರಿಸುವ ನಾಯಕನ ಸ್ನೇಹಿತ ನೋಡೋ "ಬ್ಯೂಟಿ ಜಾಗದಲ್ಲಿ ಬೀಸ್ಟ್ ಇರುತ್ತೆ" ಎನ್ನುವ ಎಚ್ಚರಿಕೆ ಮಾತಿನಲ್ಲಿ ಚಿತ್ರದ ಇನ್ನೊಂದು ಮುಖವನ್ನು ತೆರೆದಿಡುತ್ತಾರೆ. 

ಈ ತರಹದ ಸಾಂಕೇತಿಕ ದೃಶ್ಯಗಳಿಗೆ ಪುಟ್ಟಣ್ಣ ಚಿತ್ರಗಳು ಅತ್ಯುತ್ತಮ ವೇದಿಕೆ. 

ಸಂಪ್ರದಾಯಗಳು ಎಂಬ ಮಾತು ಬಂದಾಗ ಪುಟ್ಟಣ್ಣ ಅದನ್ನು ಬೆಳ್ಳಿ ತೆರೆಗೆ ತರುವ ರೀತಿ ಖುಷಿ ಕೊಡುತ್ತದೆ. ಈ ಚಿತ್ರದಲ್ಲೂ ಮಡಿಕೇರಿಯ ಕೊಡವ ಸಂಸ್ಕೃತಿಯ ಮದುವೆಯ ಶಾಸ್ತ್ರ, ಹಾಗೆಯೇ ನಾಯಕ ನಾಯಕಿಯ ಮದುವೆಯ ಶಾಸ್ತ್ರ ಸಿಕ್ಕ ಪುಟ್ಟ ಪುಟ್ಟ ಘಳಿಗೆಯಲ್ಲಿ ಅನಾವರಣ ಮಾಡಿಬಿಡುತ್ತಾರೆ. 

ಹಾಗೆಯೇ ಸ್ಥಳ ವೈಶಿಷ್ಟ್ಯವನ್ನು ಸಾರುವ "ಇಡಿ ಎಪ್ಪತೆರಡು ಎಕರೆ ತೋಟದಲ್ಲಿ ಇನ್ನೂರ ಎಪ್ಪತೆರಡು ಬಗೆಯ ಕಿತ್ತಳೆ ಇದೆ" ಎನ್ನುತ್ತಾ ಮಡಿಕೇರಿಯ ಕಿತ್ತಳೆ ತೋಟದ ಬಗ್ಗೆ ಅರ್ಧ ನಿಮಿಷದಲ್ಲಿ ವಿವರ ಕೊಡುತ್ತಾರೆ. 

ನಾಯಕಿ ಕಾವೇರಿ ಅಪ್ಪನ ಪಾತ್ರದಲ್ಲಿ ಅಶ್ವತ್ ಮತ್ತು ಅಮ್ಮ ಆದವಾನಿ ಲಕ್ಷಿ ದೇವಿ ಇಬ್ಬರೂ ಅಪ್ಪ ಅಮ್ಮ ಅಂದರೆ ಹೀಗೆ ಇರಬೇಕು ಎನ್ನುವ ಮೇಲ್ಪಂಕ್ತಿಯನ್ನು ಹಲವಾರು ಚಿತ್ರಗಳಲ್ಲಿ ಅಭಿನಯಸಿದ್ದಾರೆ. 
"ಅರೆ ಸುಂದರಮ್ಮ ಎಲ್ಲಾ ವಿಷಯವನ್ನು ಬರೆದಿದ್ದಾರೆ ಈ ಹಣ್ಣಿನ ವಿಚಾರವನ್ನೇ ಬಿಟ್ಟಿದ್ದಾರೆ"
"ಗುಡುಗು ಬಂದ ಮೇಲೆ ಮಳೆ ಬರುವುದು.. ನಾ ಕೂಗಿದಾಗಲೇ ನೀ ತಣ್ಣಗಾಗುವುದು"
"ನಾ ಅಜ್ಜ ಆದರೂ ಪರವಾಗಿಲ್ಲ.. ನೀ ಅಜ್ಜಿ ಆಗಬೇಡ ಕಣೆ" ಅಂದಾಗ ಆಕೆ "ಅರೆ ಇದೊಳ್ಳೆ ಚೆನ್ನಾಯಿತು.. ನೀವು ಅಜ್ಜ ಆದ ಮೇಲೆ ನಾ ಅಜ್ಜಿ ಆಗೋಲ್ವೇ"
"ಅಯ್ಯೋ ನೀ ನಮ್ಮ ಮೊಮ್ಮಗುವಿಗೆ ಅಜ್ಜಿ ಕಣೆ ನನಗಲ್ಲ"
"ನೋಡು ಹಿರಿಯರು ಒಂದು ಕಾಗದ ನೋಡಿದ ಕೂಡಲೇ ಈ ಅರಿಶಿನ ಬಣ್ಣ ನೋಡಿ ಶುಭ ಸಮಾಚಾರವೆ ಹೊರತು ಬೇರೆ ಏನೂ ಎಲ್ಲ ಎನ್ನುವುದನ್ನು ಎಷ್ಟು ಸುಂದರ ಸಂಪ್ರದಾಯ ಮಾಡಿದ್ದಾರೆ"

ಹೀಗೆ ಒಂದು ಸಂಭಾಷಣೆ ಸರಪಳಿಯ ಮೂಲಕ ಗಂಡ ಹೆಂಡತಿಯ ನಡುವೆ ಸೌಹಾರ್ಧ ಸಂಬಂಧ ಇರಬೇಕು ಎನ್ನುವುದನ್ನು ಪ್ರತಿಪಾದಿಸುತ್ತಾರೆ ನಿರ್ದೇಶಕರು. 

ಇನ್ನೂ ಸಂಭಾಷಣೆಯಲ್ಲಿ ಚುರುಕುತನ.. ಚಿಕ್ಕ ಚೊಕ್ಕ ಸಂದೇಶಗಳು ಕಾಣಸಿಗುತ್ತವೆ. 

"ಟೈಪ್ ರೈಟರ್ ನಲ್ಲಿ A ಒತ್ತಿದರೆ A ಬೀಳುತ್ತದೆ
ಆದರೆ ಹಣೆಬರಹದಲ್ಲಿ A ಒತ್ತಿದರೆ B ಬೀಳುವ ಸಂಭವವೇ ಹೆಚ್ಚು ಎನ್ನುವ ಮಾತಲ್ಲಿ ತಾನೊಂದು ನೆನದರೆ ದೈವ ಒಂದು ಬಗೆಯುತ್ತದೆ ಎನ್ನುವ ಮಾತು 

"ಕಾಫಿ ಬೇಡ,  ಕಾಫಿಯಲ್ಲಿ ಕಾ ಜೊತೆಗೆ "ವೇರಿ" ಬಂದರೆ ಫೀ ನಾ ಕೊಡುತ್ತೇನೆ" ಮದುವೆಯ ಹೊಸತರಲ್ಲಿ ಪತಿ ಪತ್ನಿಯರ ಸರಸ ಸಂಭಾಷಣೆಗೆ ಒಂದು ಝಲಕ್. 

"ತುಲಾ ಮಾಸೇತು ಕಾವೇರಿ ಎನ್ನುವ ಶ್ಲೋಕದಿಂದ ಶುರುವಾಗುವ ಕೊಡಗಿನ ಕಾವೇರಿ ಹಾಡು ಮನಸ್ಸಿಗೆ ಮುದ ನೀಡುತ್ತದೆ, ಕೊಡಗಿನ ವೇಷಭೂಷಣಗಳಲ್ಲಿ ಮಿಂಚುವ ನಾಯಕ ನಾಯಕಿ ಇಷ್ಟವಾಗುತ್ತಾರೆ. ಈ ಹಾಡಿನ ಬಗ್ಗೆ ಮಣಿಕಾಂತ್ ಸರ್ ಅವರ ಹಾಡು ಹುಟ್ಟಿದ ಸಮಯ ಅಂಕಣದಲ್ಲಿ ಹೇಳಿದ್ದರು.. ನಾಯಕ ಕಾವೇರಿಯನ್ನು ಹೊಗಳಿದರೆ.. ನಾಯಕಿ ಕರುನಾಡಿನ ಜೀವನದಿ ಕಾವೇರಿ ಬಗ್ಗೆ ಹಾಡುತ್ತಾರೆ ,  ಎರಡರ್ಥ ಇರುವ ಹಾಡು ಇದು. ಪುಟ್ಟಣ್ಣ ಹೇಳಿ ಬರೆಸಿದರು ಈ ಹಾಡನ್ನು ತಮ್ಮ ಅಣ್ಣ ಕಣಗಾಲ್ ಪ್ರಭಾಕರ ಶಾಸ್ತ್ರಿ ಹತ್ತಿರ ಎಂದು ಓದಿದ್ದೇನೆ.

ಈ ಚಿತ್ರ ಕೆಲವೊಮ್ಮೆ ಹಾಸ್ಯ ರಸ ಉಕ್ಕಿಸುತ್ತದೆ.. ಕೆಲವೊಮ್ಮೆ ದುಃಖದ ಛಾಯೆಯನ್ನು ಹೊದ್ದಿಸಿಬಿಡುತ್ತದೆ . 

ಅಶ್ವತ್ ಅವರ ಮಜ್ಜಿಗೆ ಹುಳಿ ಪುರಾಣ, "ಏನು ಅಳಿಯಂದಿರೆ ನೀವು ಹೊದ್ದಿರುವ ವಸ್ತ್ರ ಮಗುಟ ಮಾರುಕಟ್ಟೆಗೆ ಬಂದಿಲ್ವಾ", 
ನಾಯಕ ನಾಯಕಿಯನ್ನು ಹೆರಿಗೆಗೆ ತವರಿಗೆ ಬಿಡಲು ಬಂದಾಗ ಅಶ್ವತ್ ನಾಯಕನ ಮುಖವನ್ನು ನೋಡಿ ಒಮ್ಮೆ ನಗುತ್ತಾರೆ, ನಾಯಕ ಹಾಗೆ ನಕ್ಕಾಗ ಇನ್ನೊಮ್ಮೆ ನಗುತ್ತಾರೆ.. ಹೀಗೆ ಮುಂದುವರೆಯುತ್ತದೆ, ಕಡೆಗೆ ಮನೆಯಲ್ಲಿ ಇರುವ ಎಲ್ಲರೂ ನಗುತ್ತಾರೆ.. "ಅಂತೂ ಕಾವೇರಿಯನ್ನು ತವರಿಗೆ ಕರೆದುಕೊಂಡು ಬಂದ್ರಿ ಅಳಿಯಂದಿರೆ" ಎಂದಾಗ ಕಕ್ಕಾಬಿಕ್ಕಿಯಾಗುವ ನಾಯಕ.

ಗೆಜ್ಜೆ ಪೂಜೆ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಶಿವರಾಂ ಈ ಚಿತ್ರದಲ್ಲಿ ಚಿಕ್ಕ ಚೊಕ್ಕ  ಭಟ್ಟರ ಪಾತ್ರವನ್ನು ಮಾಡಿರುವುದು ಆ ಕಾಲದ ಕಲಾವಿದ, ನಿರ್ಮಾಪಕ, ನಿರ್ದೇಶಕರ ನಡುವೆ ಇರುತ್ತಿದ್ದ ಸಾಮರಸ್ಯವನ್ನು ತೋರಿಸುತ್ತದೆ. 

ಅಡಿಗೆ ಭಟ್ಟರ ಪಾತ್ರದಲ್ಲಿ ಶಿವರಾಂ ನಗೆ ಉಕ್ಕಿಸುತ್ತಾರೆ.. ಕಿಟಕಿ ಕಾಮಾಕ್ಷಮ್ಮ, ಇವರು ಏಕೆ ನನ್ನನ್ನು ಹೀಗೆ ಹೀಗೆ ಪಡೆ ನೋಡುವುದು, ಸದಾ ಅಡಿಕೆ, ಎಲೆ, ಹೊಗೆಸೊಪ್ಪು ತಿನ್ನುತ್ತಾ ಅರ್ಧ ಅರ್ಧ ಮಾತಾಡುವುದು.. ಜೊತೆಯಲ್ಲಿ ನಾಯಕಿ ಮಾನಸಿಕ ಸ್ಥಿಮಿತವನ್ನು ಮತ್ತೆ ಕಳೆದುಕೊಳ್ಳಲು ಈ ಪಾತ್ರವು ಕಾರಣ ಆಗುವುದು ಇವೆಲ್ಲಾ ನೋಡುವಾಗ ಒಂದು ಪಾತ್ರದಲ್ಲಿ ಎಲ್ಲಾ ರಸಗಳನ್ನು ತುಂಬಬಲ್ಲರು ಎನ್ನುವುದಕ್ಕೆ ಉತ್ತಮ ನಿದರ್ಶನ., 

ಸಂಧರ್ಭಕ್ಕೆ ತಕ್ಕ ಹಾಡುಗಳು ಮನಸ್ಸೆಳೆಯುತ್ತದೆ 

"ಉತ್ತರ ಧ್ರುವಧಿಂ " ವರಕವಿ ದ ರಾ ಬೇಂದ್ರೆ ಯವರ ಸುಂದರ ಕವನವನ್ನು ದಂಪತಿಗಳ ಮಧುಚಂದ್ರದ, ಮಧುರ ಮೈತ್ರಿಗೆ ಧ್ಯೋತಕವಾಗಿ ಪಿ ಬಿ ಶ್ರೀನಿವಾಸ್ ಮತ್ತು ಪಿ ಸುಶೀಲ ಬಂದರೆ 

ಉಪಮೆಗಳ ಮಹಾಪೂರ "ಬಿಳಿಗಿರಿ ರಂಗಯ್ಯ ನೀನೆ ಹೇಳಯ್ಯ" ಬಿಳಿಗಿರಿ ರಂಗನ ಬೆಟ್ಟದ ಸುಂದರ ತಾಣವನ್ನು ತೋರಿಸುತ್ತಲೇ, ಮನುಜನ ಭಾವನೆಗಳು ಆಸೆಗಳು ಎಲ್ಲವನ್ನು ಪದಗಳಲ್ಲಿ ತುಂಬಿ ಕೊಟ್ಟಿರುವ ಕಣಗಾಲ್ ಪ್ರಭಾಕರ್ ಶಾಸ್ತ್ರಿಯವರ ಸಾಹಿತ್ಯ ಗಮನ ನೀಡುತ್ತದೆ. ಜೊತೆಯಲ್ಲಿಯೇ ಪಿ ಸುಶೀಲ ಅವರ ಸುಶ್ರಾವ್ಯ ಗಾಯನ.. ಆಹಾ 

ಹಾಡು ಮುಗಿದ ಮೇಲೆ.. ತನ್ನ ಕಚೇರಿಯ ಮಾದಕ ಬೆಡಗಿ ವಿಮಲಾ ಬಗ್ಗೆ ನಾಯಕ ಹೇಳುವ ಮಾತು ಮೇಲೆ ಬಿದ್ದ ಸೂಳೆ ಮೂರು ಕಾಸಿಗೂ ಬೇಡ" ಎನ್ನುವ ನಾಯಕ ಕಡೆಗೆ ಆ ಮೂರು ಕಾಸಿಗೆ ಜೋತು ಬೀಳುವುದು ಮನುಜನ ಅವಕಾಶ ಅವಲಂಬಿತ ಮನಸ್ಸಿನ ಬಗ್ಗೆ ಹೇಳುತ್ತದೆ. 

ಇಡಿ ಚಿತ್ರವನ್ನು ಒಂದು ಬಂಗಾರದ ಚೌಕಟ್ಟಿನಲ್ಲಿ ಪುಟ್ಟಣ್ಣ ಕಟ್ಟಿಕೊಟ್ಟರೆ.. ಆ ಚೌಕಟ್ಟಿನೊಳಗೆ ಮುತ್ತು ರತ್ನಗಳ ಹಾಗೆ ಕೂತು ತಮ್ಮ ಅಭಿನಯ ಸಾಮರ್ಥ್ಯವನ್ನು ಒರೆಗೆ ಹಚ್ಚಿಸಿಕೊಂಡವರು ಈ ಚಿತ್ರದ ಎಲ್ಲಾ ಪಾತ್ರಧಾರಿಗಳು. ಪ್ರತಿ ಪಾತ್ರಕ್ಕೂ ಅದರದೇ ಆದ ಚೌಕಟ್ಟು, ಪ್ರಾಮುಖ್ಯತೆ ಇದೆ. 

ಗಂಗಾಧರ್ ಚೆಲುವಾಂತ ಚಿನ್ನಿಗನ ಹಾಗೆ ಕಂಗೊಳಿಸುತ್ತಾ, ಪ್ರೇಮಯಾಚನೆ ಮಾಡುವುದು, ಮಾವನ ಮನೆಯಲ್ಲಿ ಪಜೀತಿಗೆ ಒಳಗಾಗುವುದು, ನಾಯಕಿ ತನ್ನ ಮಿತಿಯನ್ನು ಕಳೆದುಕೊಂಡಾಗ ತೊಳಲಾಡುತ್ತಾ ಅದರಿಂದ ಹೊರಗೆ ಬರಲಾರದೆ ಅನ್ಯ ಮಾರ್ಗ ಹುಡುಕುವುದು ಈ ದೃಶ್ಯಗಳಲ್ಲಿ ಅಭಿನಯ ನಿಜವಾಗಿದೆ. 

ಅಶ್ವತ್ ಮತ್ತು ಆದವಾನಿ ಲಕ್ಷ್ಮೀದೇವಿ ತಮ್ಮ ಮಕ್ಕಳ ಬಗ್ಗೆ ಕಾಳಜಿ ತೋರಿಸುತ್ತಾ ಅವರಿಬ್ಬರ ನಡೆಯುವ ಸರಸ ಸಂಭಾಷಣೆ 
ಮುದ ನೀಡುತ್ತದೆ. 

ಶರಪಂಜರ ಅಯ್ಯಂಗಾರ್ ಎಂದೇ ಹೆಸರಾದ ಪಾತ್ರಧಾರಿ ಹೇಳುವ ಮಾತು "ಪುರುಷ-ಪ್ರಕೃತಿ ಎರಡು ಒಂದೇ ಕಡೆ ಇದ್ದ ಮೇಲೆ ಸಮಸ್ಯೆ ಉದ್ಭವ" ಎಷ್ಟು ನಿಜ ಈ ಮಾತು 

ಮೋಹ ಪಾಶಕ್ಕೆ ತುತ್ತಾಗಿ ಒಮ್ಮೆಯಾದರೂ ನಾಯಕ ನನ್ನವನಾದರೆ ಸಾಕು ಎನ್ನುವ ವ್ಯಾಮೋಹಿ ಪಾತ್ರದಲ್ಲಿ ರಂಗಭೂಮಿಯ ಕಲಾವಿದೆ ಚಿಂದೋಡಿ ಲೀಲಾ ಗಮನ ಸೆಳೆಯುತ್ತಾರೆ. ಇನ್ನೂ ಇಡಿ ಚಿತ್ರವನ್ನು ಅಭಿನಯದಲ್ಲಿಯೇ ನುಂಗಿದ ಕಲ್ಪನಾ ಅವರ ಬಗ್ಗೆ ಹೇಳಲೇ ಬೇಕು
 • ಹಿತವಾದ ಮಧುರವಾದ ಸಂಭಾಷಣೆ ಆರಂಭಿಕ ದೃಶ್ಯಗಳಲ್ಲಿ 
 • ಹಣ್ಣು ಕೊಟ್ಟೆಯೋ ಹೃದಯ ಕೊಟ್ಟೆಯೋ ಅನ್ನುವಾಗ ನಡುಗುವ ಪ್ರೀತಿ ತುಂಬಿದ ಮಾತುಗಳು 
 • ತನ್ನ ಅಪ್ಪ ನಾಯಕ ನಾಯಕಿಯ ಪ್ರೇಮದ ಬಗ್ಗೆ ವಿಚಾರಿಸಿದಾಗ ಗಾಬರಿಗೊಳ್ಳುವ ಅಭಿನಯ 
 • ಮದುವೆಯಾಗಿ ಪತಿರಾಯನ ಮನೆಗೆ ಬಂದ ಮೇಲೆ ತನ್ನ ಅತ್ತೆಗೆ ಪ್ರೀತಿಯಿಂದ ತಂದು ಕೊಟ್ಟ ರೇಡಿಯೋ ಬಗ್ಗೆ ಹೇಳುವಾಗ ಪುಟ್ಟ ಮಗುವಿನ ಹಾಗೆ ಕುಣಿಯುವ ದೃಶ್ಯ
 •  ಶ್ರೀರಂಗಪಟ್ಟಣದ ನದಿ ತೀರದಲ್ಲಿನ ಅಭಿನಯ ಕಣ್ಣೀರು ತರೆಸುತ್ತದೆ. ಸ್ತ್ರೀಯರಿಗೆ ಪ್ರತಿ ತಿಂಗಳೂ ಒಂದು ಮರು ಹುಟ್ಟು ಜೊತೆಯಲ್ಲಿ ಗರ್ಭಿಣಿ ಸ್ಥಿತಿಯಿಂದ ಪಾರಾಗಿ ಹೊರಬರುವುದು ನಿಜಕ್ಕೂ ಇನ್ನೊಂದು ಮರು ಜನ್ಮವೇ ಎಂಬ ಮಾತು ಈ ದೃಶ್ಯದಲ್ಲಿದೆ. ಬರಿ ಭೋಗದ ವಸ್ತುವಾಗಿ ಬಿಂಬಿತವಾಗುವ ಹೆಣ್ಣಿನ ಪಾತ್ರವನ್ನು ಎಷ್ಟು ನಾಜೂಕಾಗಿ ಅವರ ಮನಸ್ಸು ಎಷ್ಟು ನವಿರು.. ಅದಕ್ಕೆ ಸ್ವಲ್ಪ ಘಾಸಿಯಾದರೂ ಮುಂದಿನ ಜೀವನ ನರಕ ಎನ್ನುವ ಭಾವನ್ನು ಈ ಚಿತ್ರ ಹೊರಹಾಕುತ್ತದೆ. 
 • ಅಡಿಗೆ ಭಟ್ಟನ ಜೊತೆಯಲ್ಲಿ ಸಂಭಾಷಣೆ, ಕಿಟಕಿ ಕಾಮಾಕ್ಷಮ್ಮ ತಮ್ಮನ್ನು ತಿರಸ್ಕಾರ ಮಾಡುವಾಗ, ಮಹಿಳ ಸಮಾಜ ಇವರನ್ನು ಹುಚ್ಚಿ ಎಂದಾಗ, ಶೆಟ್ಟರ ಅಂಗಡಿ, ಶಾಲೆಯಲ್ಲಿ ಕಡೆಗೆ ತನ್ನ ಅಪ್ಪ ಮಾತಿಗೆ "ಅದಕ್ಕೆಲ್ಲ ತಲೆಕೆಡಿಸಿಕೊಳ್ಳುತ್ತಾರಾ ಹುಚ್ಚಿ ಹುಚ್ಚಿ" ಎಂದಾಗ ಅವರ ಅಭಿನಯ ವಾಹ್ ಎನ್ನಿಸುತ್ತದೆ 
 • ಇನ್ನೂ "ಹದಿನಾಲ್ಕು ವರುಷ ವನವಾಸದಿಂದ" ವಿಜನಾರಸಿಂಹ ಅವರ ಸಾಹಿತ್ಯಕ್ಕೆ ಅಮೋಘ ಅಭಿನಯ, ತನ್ನ ಕಥೆಯನ್ನು ಸೀತೆಗೆ ಹೋಲಿಸಿಕೊಂಡು ಅಳುತ್ತಾ ಹಾಡುವಾಗ ಕಲ್ಲು ಕರಗುತ್ತದೆ 
 • "ಸಂದೇಶ ಮೇಘ ಸಂದೇಶ" ಹಾಡಿನಲ್ಲಿ ಮಕ್ಕಳ ಜೊತೆಯಲ್ಲಿ ಹಾಡುತ್ತಾ ಕುಣಿಯುತ್ತಾ ತಾನು ಮತ್ತೊಮ್ಮೆ ಹೊಸಬಾಳಿನತ್ತ ಹೆಜ್ಜೆ ಇಡುತ್ತಿದ್ದೇನೆ ಎನ್ನುವ ವಿಜಯನಾರಸಿಂಹ ಅವರ ಸಾಹಿತ್ಯಕ್ಕೆ ತೋರುವ ಭಾವ ಪೂರ್ಣ ನಟನೆ 
 • ತನಗೆ ಹುಚ್ಚು ಹಿಡಿದಿದೆ ಎಂದು ನಿಂತು ಹೋಗುವ ತನ್ನ ತಂಗಿಯ ಮದುವೆಗೆ ಪ್ರಯತ್ನಿಸುವ ದೃಶ್ಯ 
 • ಬಹುಕಾಲ ನೆನಪಲ್ಲಿ ಉಳಿಯುವ ಚಿತ್ರದ ಅಂತಿಮ ದೃಶ್ಯ.. ಅಬ್ಬಾ ನೋಡುಗರ ಎದೆಯನ್ನು ಕಣ್ಣೀರಿನಿಂದ ತೋಯಿಸುತ್ತದೆ. ಎಲ್ಲೋ ಕೇಳಿದ ನೆನಪು.. ಆ ದೃಶ್ಯ ಮುಗಿದ ಮೇಲೂ ಸ್ವಲ್ಪ ಹೊತ್ತು ಅದೇ ಭಾವದಲ್ಲಿ, ಅದೇ ಗುಂಗಿನಲ್ಲಿ  ಕಲ್ಪನಾ ಇದ್ದರೆಂದು.. ಕೆಲವೊಮ್ಮೆ ನೋಡುಗರನ್ನೇ ತಲ್ಲಣ ಗೊಳಿಸುವ ಆಭಿನಯ ಮಾಡಿದ ಅವರನ್ನು ಕೆಲವು ಘಂಟೆಗಳು ಕಾಡಿದ್ದು ಸುಳ್ಳಲ್ಲ ಅನಿಸುತ್ತದೆ. 
ಈ ಚಿತ್ರದ ಸಂಗೀತಬಗ್ಗೆ ಎರಡು ಮಾತೆ ಇಲ್ಲ.. ಪುಟ್ಟಣ್ಣ ಅವರ ನೆಚ್ಚಿನ ಗೆಳೆಯ ವಿಜಯಭಾಸ್ಕರ್ ತಮ್ಮೆಲ್ಲ ಪ್ರತಿಭೆಯನ್ನು ಅವರ ಚಿತ್ರಗಳಿಗೆ ಮೀಸಲಿಟ್ಟಿದ್ದರು. ಪ್ರತಿ ಹಾಡು, ಹಿನ್ನೆಲೆ ಸಂಗೀತ ವಿಭಿನ್ನವಾಗಿರುತ್ತಿತ್ತು. ಈ ಚಿತ್ರದ ಎಲ್ಲಾ ಹಾಡುಗಳು ಇಷ್ಟವಾಗುತ್ತವೆ. 

ಪುಟ್ಟಣ್ಣ ಈ ಚಿತ್ರವನ್ನು ತಮ್ಮ ಎಲ್ಲಾ ಚಿತ್ರಗಳಂತೆ ತಮ್ಮ ಮನಕ್ಕೆ ಹತ್ತಿರವಾಗಿ ಚಿತ್ರೀಕರಿಸಿದ್ದಾರೆ. ಪ್ರತಿಯೊಂದು ದೃಶ್ಯಕ್ಕೆ ಅವರು ಪಟ್ಟ ಪರಿಶ್ರಮ ಎದ್ದು ಕಾಣುತ್ತದೆ. ಯಾವುದನ್ನು ಅವರು ಗೌಣ ಮಾಡಿಲ್ಲ. ಸುಂದರ ಹೊರಾಂಗಣ, ಒಳಾಂಗಣ, ಮನೆಯಲ್ಲಿನ ಎಲ್ಲಾ ಪದಾರ್ಥಗಳು ಅವರ ಶ್ರಮಕ್ಕೆ ಜೊತೆಯಾಗಿ ನಿಂತಿವೆ. 

"ಸಂದೇಶ ಮೇಘ ಸಂದೇಶ" ಎನ್ನುವ ಹಾಡಿಗೆ ನಾಯಕ ನಾಯಕಿಯ ಪ್ರೇಮಾಂಕುರ ಮೂಡಲು ಸಹಾಯ ಮಾಡುವ ಕಿತ್ತಳೆ ಹಣ್ಣನ್ನೇ ರಾಶಿ ರಾಶಿಯಾಗಿ ಸುರಿಸಿ ಚಿತ್ರೀಕರಿಸುವ ಜಾಣ್ಮೆ ಪುಟ್ಟಣ್ಣ ಅವರದು. 

ಮೊದಲ ರಾತ್ರಿ ದೃಶ್ಯದಲ್ಲಿ ಹೂವು, ದೀಪ, ಅಗರಬತ್ತಿಯ ಧೂಪ ತೋರಿಸುವ ಜಾಣ್ಮೆ.. ಹೂವಿನಂತ ನಾಯಕಿಯ ಮನಸ್ಸು, ಒಂದು ಸಂಶಯ ಎನ್ನುವ ಧೂಪದ ಹೊಗೆಗೆ ಸಿಕ್ಕಿ, ದೀಪ ಜ್ವಾಲೆಯಾಗಿ ನಾಯಕಿಯ ಬಾಳನ್ನೇ ಸುಡುವ ಸಾಂಕೇತಿಕ ದೃಶ್ಯ. 


ಮಾನಸಿಕ ಚಿಕಿತ್ಸಾಲಯವನ್ನು ಪರಿಚಯಿಸುತ್ತಾ ಅವರು ಆಡುವ ಕೆಲ ಮಾತುಗಳು ಗಮನ ಸೆಳೆಯುತ್ತದೆ. 

"ನಿಮಗೆ ಕಾರಣ ಮುಖ್ಯವೋ ಅವಳು ಗುಣವಾಗುವುದು ಮುಖ್ಯವೋ" ಎನ್ನುವ ಮಾತುಗಳನ್ನು ವೈದ್ಯರ ಮೂಲಕ ಹೇಳಿಸಿ ಪ್ರತಿ ಘಟನೆಗೂ/ಸಮಸ್ಯೆಗೂ ಒಂದು ಕಾರಣ ಇರುತ್ತದೆ ಆದರೆ ಕಾರಣ ಹುಡುಕಿಕೊಂಡು ಹೋದಾಗ ಮೂಡುವ ಭಾವನೆ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸುತ್ತದೆ. ಅದರ ಬದಲು ಅದಕ್ಕೆ ಉತ್ತರ ಹುಡುಕಿಕೊಂಡು ನಿವಾರಣೆ ಮಾಡಿಕೊಂಡು ಹೊಸ ಹೆಜ್ಜೆ ಇಡಿ ಎನ್ನುವ ಸಂದೇಶ ಸಾರುವ ಈ ಚಿತ್ರ.. ಚಿತ್ರಜಗತ್ತಿನಲ್ಲಿಯೇ ಒಂದು ಮಹೋನ್ನತ ಕೃತಿ, 

ಇದಕ್ಕೆ ಕಾದಂಬರಿಗಾರ್ತಿ ಶ್ರೀಮತಿ ತ್ರಿವೇಣಿ ಅವರಿಗೂ ಮತ್ತು ಪುಟ್ಟಣ್ಣ ಕಣಗಾಲ್ ಅವರಿಗೂ ಸಹಸ್ರ ಧನ್ಯವಾದಗಳು. 

10 comments:

 1. ಪ್ರೀತಿಯ ಶ್ರೀಕಾಂತೂ...

  ಶರಪಂಜರ ನೋಡಿ ನಾನು ಎರಡು ಮೂರು ದಿನ ಅದರ ಗುಂಗಿನಲ್ಲೇ ಇದ್ದೆ...

  ಕಲ್ಪನಾ ಅವರ ಅದ್ಭುತ ಅಭಿನಯ..
  ಪುಟ್ಟಣ್ನ ಅವರ ನಿರ್ದೇಶನ.. ಎರಡೂ ಅತ್ಯದ್ಭುತ !

  ಕಲ್ಪನಾ ಆ ಸಿನೇಮಾದಲ್ಲಿ..
  ತಮ್ಮ ಅಭಿನಯದಿಂದ ನಮ್ಮನ್ನು ಭಾವಲೋಕದ ಉತ್ತುಂಗಕ್ಕೆ ಕರೆದೊಯ್ಯುತ್ತಾರೆ..

  ಇಂಥಹ ಸಿನೇಮಾ ಬೆರಳಣಿಕೆಯಲಿ ಸಿಗುತ್ತವೆ...

  "ಇಂದು ಎನಗೆ ಗೋವಿಂದಾ..." ಹಾಡಿನಲ್ಲಿ
  ಅವರು ಯೋಚಿಸುತ್ತ ಯೋಚಿಸುತ್ತ ಒಮ್ಮೆ ಮುನವಾಗಿಬಿಡುತ್ತಾರೆ..
  ಮತ್ತೆ ಕಣ್ಣೊರೆಸಿಕೊಂಡು ಮತ್ತೆ ಹಾಡುತ್ತಾರೆ...

  ದುಃಖ ನುಂಗಿಕೊಂಡು ಹಾಡುವ ಆ ಅಭಿನಯ ಇದೆಯಲ್ಲ
  ಅದು ಅದ್ಭುತ

  ಈ ಸಿನೇಮಾದ ಪ್ರತಿಯೊಂದೂ ಫ್ರೇಮು ಕೂಡ ಅಚ್ಚುಕಟ್ಟು... ಮತ್ತು ಮನದಲ್ಲಿ ಉಳಿಯುತ್ತವೆ..

  ಮತ್ತೆ ನೆನಪಿಸಿದ್ದಕ್ಕೆ ನಿಮಗೆ ಹೃದಯ ಪೂರ್ವಕ ವಂದನೆಗಳು...

  ReplyDelete
  Replies
  1. ಪುಟ್ಟಣ್ಣ ಅವರ ಚಿತ್ರಗಳೇ ಹಾಗೆ ಹಾಡುಗಳು, ಸಂಗೀತ, ದೃಶ್ಯಗಳು ಮನದಲ್ಲೇ ನೆಲೆಮಾಡುತ್ತವೆ.
   ನೀವು ಹೇಳಿದ ಎರಡು ಕನಸು ಚಿತ್ರದ "ಇಂದು ಎನಗೆ ಗೋವಿಂದ" ಹಾಡಿನಲ್ಲಿ ಅವರ ಅಭಿನಯ ಮನಸ್ಸೆಳೆಯುತ್ತದೆ
   ಎಂಥಹ ಕಲಾವಿದರಲ್ಲೂ ಅಭಿನಯ ತೆಗೆಸುವ ಕಲೆ ಪುಟ್ಟಣ್ಣ ಅವರಿಗೆ ಸಿದ್ಧಿಸಿತ್ತು.

   ಶರಪಂಜರ ನಿಜಕ್ಕೂ ಮನಸ್ಸುಗಳ ನಡುವಿನ ತಾಕಲಾಟಗಳ ದೃಶ್ಯ ಕಾವ್ಯ

   ಸುಂದರ ಅನಿಸಿಕೆ ಧನ್ಯವಾದಗಳು ಪ್ರಕಾಶಣ್ಣ

   Delete
 2. ನಟ ಶಿವರಾಂ ಅವರ ನಿರ್ಮಾಣ - ನಟನೆ ಇದ್ದ ಶರಪಂಜರ ನನ್ನ ನೆಚ್ಚಿನ ಚಿತ್ರ.

  ಕಲ್ಪನ ಸರ್ವಕಾಲೀನ ನಟಿ.

  ReplyDelete
  Replies
  1. ನಟ ಶಿವರಾಂ ಬಹುಮುಖ ಪ್ರತಿಭೆ.. ಪುಟ್ಟಣ್ಣ ಅವರ ಸರಿ ಸುಮಾರು ಎಲ್ಲಾ ಚಿತ್ರಗಳಲ್ಲಿಯೂ ಪ್ರತ್ಯಕ್ಷ, ಪರೋಕ್ಷವಾಗಿ ಕೆಲಸ ಮಾಡಿದ್ದಾರೆ.

   ಗೆಜ್ಜೆ ಪೂಜೆ ಅವರ ನಿರ್ಮಾಣದಲ್ಲಿ ಮೂಡಿ ಬಂದ ಸುಂದರ ಚಿತ್ರ ಹಾಗೆಯೇ ನಾನೊಬ್ಬ ಕಳ್ಳ ಕೂಡ.

   ನಿಮ್ಮ ಓದಿಗೆ ಪ್ರತಿಕ್ರಿಯೆಗೆ ಧನ್ಯವಾದಗಳು

   Delete
  2. ಕ್ಷಮೆ ಇರಲಿ ಸಾರ್,

   ನನ್ನ ಗುರುಗಳಾದ ಛಾಯಾಗ್ರಾಹಕ ಡಿ.ವಿ. ರಾಜಾರಾಂ ಅವರ ಛಾಯಾಗ್ರಹಣವಿದ್ದ ಚಿತ್ರವಿದು.

   ಕಲ್ಪನ ಸರ್ವಕಾಲೀನ ನಟಿ.

   Delete
  3. ಡಿ ವಿ ರಾಜಾರಾಮ್ ಛಾಯಚಿತ್ರದಲ್ಲಿನ ಒಂದು ಸಿದ್ಧ ಪ್ರತಿಭೆ.. ತಮ್ಮಷ್ಟಕ್ಕೆ ತಾವು ಕೆಲಸದಲ್ಲಿ ತೊಡಗಿಕೊಂಡು ತಮ್ಮ ಕಾಯಕವನ್ನಷ್ಟೇ ಹೊರ ಹಾಕಿದ ಅದ್ಭುತ ಪ್ರತಿಭೆ. ನೀವೇ ಭಾಗ್ಯವಂತರು ಅವರನ್ನು ಗುರುಗಳ ಸ್ಥಾನದಲ್ಲಿ ಕಂಡಿರುವುದು.

   ಧನ್ಯೋಸ್ಮಿ ಬದರಿ ಸರ್

   Delete
 3. ಬಹುಷಃ ಪುಟ್ಟಣ್ಣ ಅವರ ಚಿತ್ರಗಳನ್ನು ಇಷ್ಟು ಅಚ್ಚುಕಟ್ಟಾಗಿ ಎಲ್ಲಾ ಕೋನಗಳಿಂದ ವಿಮರ್ಶೆ ಮಾಡಿದ್ದು ನೀವೇ ಶ್ರೀಕಾಂತ್, ಮೊದಲು ಈ ಚಿತ್ರ ನೋಡಿದ್ದು ನನ್ನ ಬಾಲ್ಯದಲ್ಲಿ, ಸರಿಯಾಗಿ ಅರ್ಥ ಆಗಿರಲಿಲ್ಲ, ನಂತರ ರೇಡಿಯೋ ದಲ್ಲಿ ಆಕಾಶವಾಣಿ ಬೆಂಗಳೂರು ವತಿಯಿಂದ ಭಾನುವಾರ ಬರುತಿದ್ದ ಚಿತ್ರ ರೂಪಕ ಕೇಳಿದಾಗ ಹೆದರಿಕೊಂಡು ಮನೆ ಯಿಂದ ಓಡಿಹೊದರೂ ಹೊರಗಡೆ ಮತ್ತೊಂದು ಮನೆಯಿಂದ ಈ ಚಿತ್ರದ ಸಂಭಾಷಣೆ ಬರುತ್ತಿತ್ತು, ಈ ಚಿತ್ರದ ಶೀರ್ಷಿಕೆ ಬಗ್ಗೆಯೇ ಒಂದು ಬಹಳ ಅರ್ಥ ಕೊಡುವ ವಿಮರ್ಶೆ ಮಾಡಬಹುದು , ಶರ = ಚೂಪಾದ ಅಥವಾ ಹರಿತವಾದ ಬಾಣ , ಪಂಚರ = ಬಂದಿಕಾನೆ ಒಂದು ಜೀವನ ನರುಳುತ್ತಾ ಇರುವಾಗ ಸಮಾಜ ತನ್ನ ಚೂಪಾದ ನಡೆಯಿಂದ ಆ ಜೀವವನ್ನು ಒಂದು ಪಂಜರದಲ್ಲಿ ಬಂಧಿಸಿ ಆ ಜೀವವನ್ನು ತುಳಿಯುವುದರ ಸಂಕೇತ ಈ ಶರಪಂಜರ ಶೀರ್ಷಿಕೆ . ೧೯೭೨ ರಲ್ಲಿ ಈ ಚಿತ್ರಕ್ಕೆ ಅತುತ್ತಮ ಚಿತ್ರವೆಂದು ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು , ೧೯೭೦-೭೧ ರಲ್ಲಿ ರಾಜ್ಯ ಪ್ರಶಸ್ತಿ ಬಂದಿತು ತೆಲುಗಿನಲ್ಲಿ ಕೃಷ್ಣವೇಣಿ ಎಂಬ ಹೆಸರಿನಲ್ಲಿ ಈ ಚಿತ್ರ ಬಂದಿತ್ತು

  ಇನ್ನು ಪಾತ್ರಗಳ ಬಗ್ಗೆ ಕಥೆಗಾರ್ತಿ ತ್ರಿವೇಣಿಯವರು ಕಥೆ ಬರೆಯುವಾಗ ಅಕ್ಷರ ರೂಪದಲ್ಲಿ ಕಾಣುವ ನಾಯಕಿ ಇಲ್ಲಿ ಜೀವಂತವಾಗಿ ತೆರೆಯಮೇಲೆ ಮೂಡಿಬಂದಿದ್ದಾಳೆ , ಇಂತಹ ಪಾತ್ರಗಳ ನಿರ್ವಹಣೆ ನಾವೆಂದು ಕೊಂದಷ್ಟು ಸುಲಭ ಅಲ್ಲಾ, ಕಲ್ಪನಾ ಅವರು ಈ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಿದ್ದಾರೆ , ನಾ .... ನೋಡ್ ದೇ ........ ನಾ ಕಂಡೆ ....... ಹ ಹ ಹ ಎನ್ನುವ ಆ ಪದಗಳು ಅವುಗಳನ್ನು ಕಲ್ಪನಾ ಹೇಳುವ ರೀತಿ ಇಂತಹವರ ಎದೆಯನ್ನು ಕಲಕಿ ಬಿಡುತ್ತದೆ , ನಾಯಕನ ಮೇಲೆ ಕೋಪ ಬರುವಂತೆ ಮಾಡುತ್ತದೆ , ಇದ್ದೇ ಚಿತ್ರದಲ್ಲಿ ಕಲ್ಪನಾ ಅವರು ಆವರಿಸಿಕೊಂಡು ಬಿಟ್ಟಿದ್ದಾರೆ . ಇನ್ನು ಬೇರೆ ಪಾತ್ರಗಳು ಇವರ ಅಭಿನಯಕ್ಕೆ ಪೂರಕವಾಗಿ ಸಾಥ್ ನೀಡಿ ಕಲ್ಪನಾ ಮಿನುಗು ತಾರೆ ಆಗಲು ಸಹಕಾರ ನೀಡಿವೆ , ಇನ್ನು ಹಾಡುಗಳು

  ಉತ್ತರ ದುವಧಿಂ ದಕ್ಷಿಣ ದ್ರುವಕೂ, ಕೊಡಗಿನ ಕಾವೇರಿ , ಹದಿನಾಲ್ಕು ವರ್ಷ ವನವಾಸ ದಿಂದ, ಬಿಳಿಗಿರಿ ರಂಗಯ್ಯ , ಸಂದೇಶ ಮೇಘ ಸಂದೇಶ .... ಬಂಧನಾ ಶರ ಪಂಜರದಲ್ಲಿ ಬಂಧನಾ .... ಇವುಗಳು ಅಮರ ದೃಶ್ಯ ಕಾವ್ಯಗಳೆ ಸರಿ ವಿಜ ಭಾಸ್ಕರ್ ಸಂಗೀತ ದತ್ತಾತ್ರೇಯ ರಾಮಚಂದ್ರ ಬೇಂದ್ರೆ , ಕಣಗಾಲ್ ಪ್ರಭಾಕರ ಶಾಸ್ತ್ರಿ ವಿಜಯ ನಾರಸಿಂಹ ಅವರ ಕವಿತೆಗಳಿಗೆ ಸಪ್ತ ಸ್ವರದ ಅಲಂಕಾರ ಮಾಡಿದೆ , ನಿರ್ದೇಶಕ ಪುಟ್ಟಣ್ಣ ತನ್ನ ಛಾಪನ್ನು ಒತ್ತಿ ಶರಪಂಜರ ಚಿತ್ರವನ್ನು ತೆರೆಗೆ ತಂದು ಭಾರತೀಯ ಚಿತ್ರರಂಗಕ್ಕೆ ಅಂದು ಸವಾಲು ಹಾಕಿದ್ದರು . ಭಾರತೀಯ ಚಿತ್ರರಂಗ ಇವರತ್ತ ಬೆರಗು ಕಣ್ಣಿನಿಂದ ನೋಡುವಂತೆ ಆಗಿತ್ತು. ಈ ಚಿತ್ರದಲ್ಲಿ ಮತ್ತೊಂದು ವಿಶೇಷ ಛಾಯಾಗ್ರಾಹಣ ಡಿ .ವಿ . ರಾಜಾರಾಂ ಅವರು ಕರ್ನಾಟಕದ ಹಲವು ಸ್ಥಳಗಳನ್ನು ಅದ್ಭುತವಾಗಿ ಸೆರೆ ಹಿಡಿದಿದ್ದಾರೆ . ಚಿತ್ರದ ಕಥೆಗೆ ಪೂರಕವಾಗಿ ಚಿತ್ರೀಕರಿಸಿ ಚಿತ್ರದ ಯಶಸ್ಸಿನಲ್ಲಿ ತಮ್ಮ ಕಾಣಿಕೆ ನೀಡಿದ್ದಾರೆ .

  ನನ್ನ ಅನಿಸಿಕೆ ಬಹಳ ಉದ್ದಾ ಆಯ್ತು ಶ್ರೀಕಾಂತ್ ಜಿ ಆದ್ರೆ ನಿಮ್ಮ ಈ ಸಂಶೋದನಾತ್ಮಕ ಬರಹ ನೋಡಿ ಈ ಚಿತ್ರದ ಹಳೆಯ ನೆನಪುಗಳು ಮೂಡಿ ಬಂದವು, ಅಕ್ಕಾ ನನ್ನನ್ನು ಕಲ್ಪನಾ ತರಹ ಡೈಲಾಗ್ ಹೊಡೆದು ಹೆದರಿಸುತ್ತಿದ್ದ ದಿನಗಳು ನೆನಪಿಗೆ ಬಂದಿತು , ನಿಮ್ಮ ಬರಹಕ್ಕೆ ಹಾಗು ಪದಗಳನ್ನು ಕುಟ್ಟಿದ ಕೈಗಳಿಗೆ ಪ್ರೀತಿಯ ಥ್ಯಾಂಕ್ಸ್ . ನಿಮ್ಮ ಸಿನಿಮಾ ಜ್ಞಾನ ಕೋಶ ಒಂತರಾ ಬತ್ತದ ಅಕ್ಷಯ ಪಾತ್ರೆಯಿದ್ದಂತೆ . ಮುಂದೆ ನಮಗೆ ಹೀಗೆ ಬರುತ್ತಿರಲಿ ರಸದೌತಣ . ಜೈ ಹೊ ಜೈ ಹೊ ನಿಮಗೆ ಶ್ರೀ

  ReplyDelete
  Replies
  1. ಅಬ್ಬಬ್ಬಾ... ಸುಸ್ತಾದೆ ನಿಮ್ಮ ಪ್ರತಿಕ್ರಿಯೆ ನೋಡಿ.. ನಿಮ್ಮ ಪ್ರೀತಿಗೆ, ನಿಮ್ಮ ಅಭಿಮಾನಕ್ಕೆ ನಾ ಚಿರಋಣಿ ಅಂತ ಹೇಳಬೇಕು ಅಂತ ಮನಸ್ಸು ಬಯಸಿದರು.. ಈ ಲೇಖನ ಬರೆಯುವಾಗ ಪುಟ್ಟಣ್ಣ ಅವರೇ ನನ್ನ ಮನದಲ್ಲಿ ಕೂತು ಬರೆಸಿದರು. ಹಾಗಾಗಿ ಇದರ ಎಲ್ಲಾ ಶ್ರೇಯಸ್ಸು ಆ ಮಹಾನ್ ಪ್ರತಿಭೆಯ ಚರಣಕಮಲಗಳಿಗೆ ಅರ್ಪಿತ.

   ಧನ್ಯನಾದೆ ಬಾಲೂ ಸರ್, ನಿಮ್ಮ ಬಾಲ್ಯದ ಕಿರು ನೆನಪನ್ನು ಕೊಂಚ ಅಲುಗಾಡಿಸಿ ಬರೆಸಲು ಈ ಲೇಖನ ಅನುಕೂಲ ಮಾಡಿಕೊಟ್ಟಿದೆ. ಹಾಗಯೇ ಶೀರ್ಷಿಕೆಯ ಬಗ್ಗೆ ನೀವು ಕೊಟ್ಟಿರುವ ವಿವರಣೆ ಕೂಡ ಸುಂದರವಾಗಿದೆ.

   ಇಲ್ಲಿನ ಪ್ರತಿಯೊಂದು ಪಾತ್ರ, ನಟನೆ, ಚಿತ್ರೀಕರಣ ಎಲ್ಲವೂ ಸೂಪರ್ ಸೂಪರ್ ಪುಟ್ಟಣ್ಣ ಮರೆಯಲಾರದ ನಕ್ಷತ್ರ

   ಧನ್ಯೋಸ್ಮಿ ಬಾಲೂ ಸರ್

   Delete
 4. Sri,
  Nimma lekhana haagu ellara pratikriyegaloo saha odide.
  So well written.........
  Sharapanjara, ee chitra naa chikkavalaagiddaaga nodiddu. Indigoo scene to scene nenapide, dialogues nenapide. Andre ashtondu effectiveaagi present maadiddu puttannanavaru.
  Kalpanara ee chitradallina abhinaya nodidamele, nanginnyaava kannadada natiyaru ivarannu holuvanthe, ivara natanege satiyembanthe iduvaregu nanna, again, nanna kannige kaanalilla.
  Would love to watch this once again, after your review.

  ReplyDelete
  Replies
  1. ಧನ್ಯವಾದಗಳು DFR. ಸುಂದರವಾದ ಪ್ರತಿಕ್ರಿಯೆ.

   ಪುಟ್ಟಣ್ಣ ಪ್ರತಿ ಚಿತ್ರಕ್ಕೆ, ಪ್ರತಿ ದೃಶ್ಯಕ್ಕೆ ಸಜ್ಜಾಗುತ್ತಿದ್ದ ರೀತಿ, ತಲೆಯೊಳಗೆ ಒಂದು ಪರದೆ ಸಿದ್ಧವಾಗಿಬಿಡುತ್ತಿತ್ತು. ನಾ ಅವರ ಬಗ್ಗೆ ಒಂದು ಸಂದರ್ಶನದಲ್ಲಿ ಅವರ ಶಿಷ್ಯ ಪಿ ಎಚ್ ವಿಶ್ವನಾಥ್ ಹೇಳಿದಂತೆ ಚಿತ್ರೀಕರಣದ ಸಮಯದಲ್ಲಿ ಯಾವುದೇ ದೃಶ್ಯ ಕಂಡರೆ ಸುಮ್ಮನೆ ಸೆರೆ ಹಿಡಿದು ಇಟ್ಟುಕೊಳ್ಳುತ್ತಿದ್ದರು. ಸಂಕಲನ ಮಾಡುವಾಗ ಈ ರೀತಿಯ ದೃಶ್ಯಗಳನ್ನು ಸೇರಿಸಿ ಅದಕ್ಕೆ ಒಂದು ವಿಭಿನ್ನ ಆಯಾಮ ಕೊಡುತ್ತಿದ್ದರು. ಅದಕ್ಕೆ ಉದಾಹರಣೆ "ಬಿಳಿಗಿರಿ ರಂಗಯ್ಯ"ನ ಹಾಡಿನಲ್ಲಿ ಕಾಡಿನಲ್ಲಿ ಹತ್ತಿಕೊಂಡ ಹೊಗೆಯನ್ನು ಚಿತ್ರೀಕರಿಸಿದ್ದು ಬೆಟ್ಟದ ಕಾಲ್ಗಿಚ್ಚ್ಹು ದೀಪವೆ ದೃಶ್ಯಕ್ಕೆ ಜೋಡಿಸಿದ್ದು, ಕಿತ್ತಳೆ ಹಣ್ಣನ್ನು ತರಿಸಿ ಮೇಘ ಸಂದೇಶ ಹಾಡನ್ನು ಚಿತ್ರೀಕರಿಸಿದ್ದು ಇವೆಲ್ಲಾ ಅವರ ಕ್ರಿಯಾಶೀಲತೆಗೆ ಕನ್ನಡಿ.

   ಧನ್ಯವಾದಗಳು ನಿಮ್ಮ ಉತ್ತಮ ಮಾತುಗಳಿಗೆ

   Delete