Friday, September 5, 2014

ಕರೆಯುತ್ತಲೇ ಇರುವ ಕರುಳಿನ ಕರೆ...! (1970)

ಈ ರೀತಿಯೆಂದೂ ನನಗೆ ಆಗಿರಲಿಲ್ಲ.. ಒಂದು ಚಿತ್ರ ನೋಡಬೇಕೆಂದು ಅನ್ನಿಸಿದರೆ ಶತಾಯಗತಾಯ ನೋಡಿ ಬಿಡುತ್ತಿದ್ದೆ.. ಚಿತ್ರರಂಗದಲ್ಲಿ ನಿರ್ದೇಶಕರ ಗುರು ಎಂದೇ ಹೆಸರಾಗಿದ್ದ ನನ್ನ ನೆಚ್ಚಿನ ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳಿಂದ 
ಪ್ರಭಾವಿತನಾಗಿದ್ದು ಎಲ್ಲರಿಗೂ ತಿಳಿದ ವಿಷಯವೇ ಸರಿ... ಬೆಳ್ಳಿ ಮೋಡ, ಮಲ್ಲಮ್ಮನ ಪವಾಡ ಚಿತ್ರಗಳಿಂದ ನಾ ಕಲಿತ ವಿಷಯಗಳ ಬಗ್ಗೆ ಬರೆದ ಮೇಲೆ ಅವರ ಮುಂದಿನ ಚಿತ್ರರತ್ನ ಕರುಳಿನ ಕರೆ ನೋಡಬೇಕಿತ್ತು.. 

ಬರೋಬ್ಬರಿ ಒಂದು ವರ್ಷ ತೆಗೆದುಕೊಂಡೆ ಈ ಚಿತ್ರವನ್ನು ನೋಡಲು ಎಂದರೆ ನನಗೆ ನನ್ನ ಮೇಲೆ ಅಸಮಾಧಾನ ಮತ್ತು ನಾಚಿಕೆಯಾಗುತ್ತಿತ್ತು.. ಹಲವಾರು ಬಾರಿ ನೋಡಿದ್ದರು ಪುಟ್ಟಣ್ಣ ಚಿತ್ರಸರಣಿ ಬರೆಯುವ ಮುನ್ನ ಆ ಚಿತ್ರವನ್ನು ನೋಡುವುದು ನನ್ನ ಅಭ್ಯಾಸ.. 

ಶತಾಯಗತಾಯ ನೋಡಿಬಿಡಲೇ ಬೇಕು ನಿದ್ದೆ ಗೆಟ್ಟು ಕಚೇರಿ ಕೆಲಸ ಮುಗಿಲೆತ್ತರಕ್ಕೆ ಇದ್ದರೂ ಲೆಕ್ಕಿಸದೆ ನೋಡಿಯೇ ಬಿಟ್ಟೆ.. ಆಮೇಲೆ ಹೊಳೆಯಿತು.. ಅರೆ ಇಂದು ಶಿಕ್ಷಕರ ದಿನಾಚರಣೆ.. ಪ್ರಾಯಶಃ ನನ್ನ ಮಾನಸಿಕ ಗುರುಗಳಾದ ಪುಟ್ಟಣ್ಣ ಇವತ್ತಿಗೆ ಅವರ ಮೂರನೇ ಚಿತ್ರದ ಬಗ್ಗೆ ಬರೆಯಲು ಆಶಿರ್ವದಿಸಿದ್ದರು ಅನ್ನಿಸುತ್ತಿದೆ.. ತಗೊಳ್ಳಿ ಪುಟ್ಟಣ್ಣ ಕಣಗಾಲ್ ಅವರ ಚಿತ್ರಸರಣಿಯ ಪಾಠ ಮತ್ತೆ ಕರುಳಿನ ಕರೆ ಚಿತ್ರದ ಮೂಲಕ ಮುಂದೆ ಸಾಗುತ್ತಿದೆ.. 

ಕ್ಷಮೆ ಇರಲಿ ಬಹಳ ದಿನ ಕಾಯಿಸಿದ್ದಕ್ಕಾಗಿ!!!!

ಪುಟ್ಟಣ್ಣ ಚಿತ್ರಗಳಲ್ಲಿ ಒಂದು ವಿಧದ ಮಾಯೆ.. ಮೋಡಿ.. ಇರುತ್ತದೆ.. ಒಂದು ಸಾಧಾರಣ ಕಥೆಯನ್ನು ಅಸಾಧಾರಣ ರೀತಿಯಲ್ಲಿ ಪ್ರಸ್ತುತ ಪಡಿಸುವುದು.. ಅದಕ್ಕೆ ಬೇಕಾದ ಹಿತ ಮಿತವಾದ ಅಳವಡಿಕೆಗಳನ್ನು ತೊಡಿಸುವುದು ಅವರ ಶಕ್ತಿ. 

ಅವರೇ ಬರೆದ ಕಥೆಯನ್ನು ಅಚ್ಚುಕಟ್ಟಾದ ಚಿತ್ರ ಕಥೆಯ ಮೂಲಕ ನಿರ್ದೇಶನ ಮಾಡಿ ಚಿತ್ರ ಮೂಡಿಬಂದದ್ದು ಶ್ರೀಕಾಂತ್ & ಶ್ರೀಕಾಂತ್ ಲಾಂಛನದಲ್ಲಿ ಮೂರನೇ ಮಾರ್ಚ್ ೧೯೭೦ ಇಸವಿಯಲ್ಲಿ.  ಅವರ ನೆಚ್ಚಿನ ಆರ್ ಎನ್ ಜಯಗೋಪಾಲ್ ಸಂಭಾಷಣೆ ಹಾಡುಗಳನ್ನು ಬರೆದರೆ ವೀಣೆ ಮಾಂತ್ರಿಕ ಎಂ ರಂಗರಾವ್ ಇಂಪಾದ ಸಾಹಿತ್ಯಕ್ಕೆ ಸುಶ್ರಾವ್ಯ ಸಂಗೀತ ನೀಡಿದ್ದರು. ಕಪ್ಪು ಬಿಳುಪು ವರ್ಣದಲ್ಲಿ ನೋಡುವ ಕಾಣುವ ನೋಟವೇ ಬೇರೆ.. ಪ್ರತಿಯೊಂದು ಸುಂದರವಾದ ಕಲಾಕೃತಿಯ ಹಾಗೆ ಕಾಣಲು ಮಾಡಿದ್ದ ನೆರಳು ಬೆಳಕಿನ ಸಂಯೋಜನೆ ಮತ್ತು ಛಾಯಾಗ್ರಹಣದ ರೂವಾರಿ ಶ್ರೀಕಾಂತ್.  
ಚಿತ್ರಕೃಪೆ - ಅಂತರ್ಜಾಲ 
ಇಂತಹ ಮಧುರ ಗೀತೆಗಳನ್ನು ಸಂಗೀತವನ್ನು ಒಳಗೊಂಡಿದ್ದ ಹಾಡುಗಳನ್ನು ಉಲಿದದ್ದು ಮಾಂತ್ರಿಕ ಗಾಯಕ ಪಿ ಬಿ ಶ್ರೀನಿವಾಸ್ ಅವರ ಜೊತೆಗೆ ಎಸ್ ಜಾನಕಿ, ಎಲ್ ಆರ್ ಈಶ್ವರಿ ಮತ್ತು ಬಿ ಕೆ ಸುಮಿತ್ರ. 

ಚಿತ್ರರಂಗದ ಭೀಷ್ಮ ಅರ್ ನಾಗೇಂದ್ರರಾಯರ ಅಮೋಘ ಅಭಿನಯದಿಂದ ಕೂಡಿದ್ದ ಈ ಚಿತ್ರದಲ್ಲಿ ಅನೇಕ ನುಡಿಮುತ್ತುಗಳನ್ನು ಉಣಬಡಿಸಿದ್ದಾರೆ. ಶ್ರೀಮಂತನ ವಂಚನೆಗೆ ಒಳಗಾದ ಮಹಿಳೆ ಜನ್ಮ ಕೊಡುವ ಮಗುವೆ ರಾಜ್. ಆ ಮಗುವನ್ನು ಧರೆಗೆ ಇಳಿಸಿದ ಆ ತಾಯಿ ಲೋಕದ ಹಂಗು ಬೇಡ ಎಂದು ಹೊರಟೆ ಬಿಡುತ್ತಾಳೆ. 

ಪರದೇಶಿಯಾಗಿ ಸಿಗುವ ಈ ಮಗುವನ್ನು ಪರಮೇಶಿ ಎನ್ನುತ್ತೇನೆ ಎನ್ನುವ ನಾಗೇಂದ್ರರಾಯರ ಮಾತು ಇಷ್ಟವಾಗುತ್ತದೆ.. ಪ್ರಪಂಚ ಎನ್ನುವ ಗಡಿಯಾರಕ್ಕೆ ದಾನ ಧರ್ಮ ಅನ್ನುವ ಕೀಲಿ ಕೊಡುತ್ತಲೇ ಇರಬೇಕು ಎನ್ನುವ ಸಂಭಾಷಣೆಗೆ ಹೃದಯದಲ್ಲಿ ಶಿಳ್ಳೆ ಗಿಟ್ಟಿಸಿಕೊಳ್ಳುತ್ತದೆ. ಪ್ರತಿ ಹಂತದಲ್ಲೂ ಶಾಂತ ಸ್ವಭಾವ, ಮೃದು ಮಾತು, ತನ್ನ ತಮ್ಮನ ಮಕ್ಕಳೇ ತನ್ನ ಮನೆಯಿಂದ ಹೊರಗೆ ಹಾಕಿದಾಗಲೂ, ಮತ್ತು ತನ್ನ ಇಡಿ ಆಸ್ತಿ ಪಾಸ್ತಿ ದೂರಾದಾರೂ ನಗುತ್ತಲೇ ಹೊರಗೆ ಬರುವ ಅವರ ಅಭಿನಯ ಮನ ತಾಕುತ್ತದೆ. 

ಅದರಲ್ಲೂ ಕಡೆ ದೃಶ್ಯದಲ್ಲಿ ಅವರ ಹಿಂದೆ ಸಾವಿರಾರು ರೂಪಾಯಿಗಳು ಬಿದ್ದಿದ್ದರು ಅವರ ಸಾತ್ವಿಕ ನೋಟ.. ಪ್ರಪಂಚದಲ್ಲಿ ಸತ್ಯ ಧರ್ಮ ಯಾವತ್ತೂ ಮುಂದೆ ಮಿಕ್ಕಿದೆಲ್ಲವೂ ಹಿಂದೆ ಎನ್ನುವ ದೃಶ್ಯ ಸಂಯೋಜನೆ ನಿಜಕ್ಕೂ ಈ ಚಿತ್ರದ ಮಿಂಚಿನ ಅಂಶ. 

ಲಾರಿ ಡ್ರೈವ್ ಮಾಡುವುದನ್ನೇ ಇಷ್ಟಪಡುವ ರಾಜ್ ಅಭಿನಯ ಕಣ್ಣಿಗೆ ಕಟ್ಟುತ್ತದೆ. ಹಳ್ಳಿ ಮತ್ತು ದಿಳ್ಳಿಯ ನಡುವಿನ ಸಂಭಾಷಣೆ ಖುಷಿ ಕೊಡುತ್ತದೆ. ಭಾವಾಭಿನಯದಲ್ಲಿ ರಾಜ್ ನಿಜವಾಗಿಯೂ ರಾಜರೆ. ತಾ ಕೆಲಸ ಮಾಡುವ ಸಾಹುಕಾರರ ಮಡದಿ ಪರಮೇಶಿ ಇಷ್ಟು ದಿನ ನನ್ನ ನೋವನ್ನು ಹೇಳಿಕೊಳ್ಳಲು ಯಾರೂ ಇರಲಿಲ್ಲ ಈಗ ನೀ ಇದ್ದೀಯ ಎಂದಾಗ ರಾಜ್ ಕಣ್ಣಲ್ಲಿ ಜಿನುಗಲೇ ಬೇಡವೇ ಎಂದು ಇಣುಕುವ ಭಾಷ್ಪ, ಜೊತೆಯಲ್ಲಿ "ಅಷ್ಟು ಪುಣ್ಯವಂತನಾ ತಾಯಿ ನಾನು" ಎಂದು ಹೇಳುವಾಗ ಅವರ ಧ್ವನಿ.. ವಾವ್ ಸೂಪರ್ ಸೂಪರ್ 

ರಾಜ್ ಚಿತ್ರ ಪೂರ್ತಿ ಆವರಿಸಿಕೊಳ್ಳುತ್ತಾರೆ.. ಹಾಡಿರಲಿ, ಸಂಭಾಷಣೆ ಇರಲಿ, ನೃತ್ಯ, ಹೊಡೆದಾಟ ಎಲ್ಲದರಲ್ಲಿಯೂ ಮಿಂಚುತ್ತಾರೆ.. ಅವರ ಇಡಿ ಚಿತ್ರದ ಅಭಿನಯಕ್ಕೆ ಕಲ್ಪನಾ ಚಿತ್ರದಲ್ಲಿ ಹೇಳುವ ಒಂದು ಮಾತು "ಬಡ್ಡಿ ಮಗ ರಾಜ ರಾಜ ಏನು ಗತ್ತು ಆಹಾ ರಾಜ " ಎನ್ನುವಾಗ ಕಲ್ಪನಾ ನಿಲ್ಲುವ ಭಂಗಿ, ಮತ್ತು ಹೇಳುವ ಬರಿ ರಾಜ್ ಅಭಿನಯಕ್ಕೆ ಒಂದು ಪಾರಿತೋಷಕ ತೊಡಿಸುತ್ತದೆ.. ಅದರ ಪಾಡಿಗೆ ನಮ್ಮ ಒಳ್ಳೆ ಕೆಲಸ ಮಾತಾಡುವಾಗ ಗುರುತಿಸುವಿಕೆ ಸಿಕ್ಕೆ ಸಿಗುತ್ತದೆ ಎನ್ನುವ ನೀತಿ ಇಲ್ಲಿ ಸಿಗುತ್ತದೆ. 

ಕಳ್ಳೆಕಾಯಿ ಮಾರುವ ಕಲ್ಪನಾ ಪಾತ್ರಧಾರಿ ಇನ್ನೊಂದು ರೀತಿಯಲ್ಲಿ ಮನ ಗೆಲ್ಲುತ್ತಾರೆ. ಹಳ್ಳಿ ಸೊಗಡು, ನಾಚಿಕೆ, ಹೆದರಿಕೆ, ಗಯ್ಯಾಳಿ ಸಂಭಾಷಣೆ ಸೂಪರ್ ಸೂಪರ್. ರಾಜ್ ಪ್ರೇಮ ನಿವೇದನೆ ಮಾಡುವಾಗ ಗಾಬರಿ, ನಾಚಿಕೆ, ಹೆದರಿಕೆ, ಪ್ರೀತಿ ಎಲ್ಲವೂ ತುಂಬಿಕೊಂಡು ನೋಡುವ ನೋಟ ಅಭಿನಯ ಕಣ್ಣಿಗೆ ಕಟ್ಟುತ್ತದೆ. 

ಆದವಾನಿ ಲಕ್ಷ್ಮೀದೇವಿ ಪಾತ್ರ ಕರುನಾಡಿನ ಇನ್ನೊಬ್ಬ ಅಮ್ಮನನ್ನಾಗಿಸಿ ಬಿಡುತ್ತದೆ. ಪಂಡರಿ ಬಾಯಿ ಆದ ನಂತರ ಅಮ್ಮನ ಸ್ಥಾನಕ್ಕೆ ನಿಲ್ಲುವ ಲಕ್ಷ್ಮೀದೇವಿ ಯವರ ಎಲ್ಲಾ ಅಮ್ಮನ ಪಾತ್ರಗಳು ಇಷ್ಟವಾಗುತ್ತದೆ. ಮಲ್ಲಮ್ಮನ ಪವಾಡದಲ್ಲಿ ರಾಜ್ ರನ್ನು ಶೋಷಿಸುವ ಮಲತಾಯಿ ಪಾತ್ರದಲ್ಲಿದ್ದಾರೆ ಇಲ್ಲಿ ಮಗುವನ್ನು ಲಾಲಿಸುವ ಯಶೋದೆ ರೀತಿಯಲ್ಲಿ ಬಿಂಬಿತವಾಗುತ್ತಾರೆ. ಪತಿರಾಯ ದಾರಿ ತಪ್ಪಿದ್ದರೂ ಒಂದಲ್ಲ ಒಂದು ದಿನ ನೆಟ್ಟಗಾಗುತ್ತಾರೆ ಎನ್ನುವ ಹಂಬಲ ಕೂಡಿದ ಪಾತ್ರದಲ್ಲಿ ಅವರ ಅಭಿನಯ ಸೂಪರ್... 

ಅಬ್ಬರಿಸುವ ಪಾತ್ರದಲ್ಲಿ ದಿನೇಶ್ ಮಿಂಚುತ್ತಾರೆ. ಪ್ರತಿ ಹಂತದಲ್ಲೂ ತಾನು ಮಾಡುವ ತಪ್ಪು ತಪ್ಪು ಎಂದು ಅರಿವಿದ್ದರೂ ನಾ ಹೀಗೆ ಎನ್ನುವ ಧೋರಣೆ.. ಕಡೆ ದೃಶ್ಯದಲ್ಲಿ ನೋಟಿನ ಮಳೆಯನ್ನೇ ಸುರಿಸುವಾಗ ಅವರ ಕಣ್ಣಲ್ಲಿ ತೋರುವ ದರ್ಪ.. ದುಡ್ಡಿದ್ದರೆ ಎಲ್ಲವೂ ಎನ್ನುವ ಅವರ ಧೋರಣೆ.. ನೋಡಿಯೇ ಅನುಭವಿಸಬೇಕು.. ತನ್ನ ತಪ್ಪು ಅರಿವಾದಾಗ ಕ್ಷಮೆ ಕೇಳುತ್ತ ಕಣ್ಣೀರಾಗುವ ದಿನೇಶ್ ಇಷ್ಟವಾಗುತ್ತಾರೆ.. 

ಇನ್ನೂ ಉಳಿದ ಹಿತ ಮಿತ ಪಾತ್ರಗಳಲ್ಲಿ ಎತ್ತರದ ನಿಲುವಿನ ಸುದರ್ಶನ್, ಚೆಲುವೆ ರೇಣುಕ ಗಮನ ಸೆಳೆಯುತ್ತಾರೆ. 

ಪುಟ್ಟಣ್ಣ ತಮ್ಮ ಚಿತ್ರಗಳಲ್ಲಿ ಹಾಸ್ಯವನ್ನು ಗುಪ್ತ ಗಾಮಿನಿಯಾಗಿ ತೋರಿಸುತ್ತಾರೆ ಎನ್ನುವುದಕ್ಕೆ ವಧು ಪರೀಕ್ಷೆಯಲ್ಲಿ ನಡೆಯುವ ಹಾಸ್ಯ ಸಮಾವೇಶ ನಗಿಸುತ್ತದೆ . ರತ್ನಾಕರ್, ಬೆಂಗಳೂರು ನಾಗೇಶ್, ಸುಂದರ ಕೃಷ್ಣ ಅರಸ್ ಜೊತೆಯಲ್ಲಿ ಇನ್ನಿಬ್ಬರು ಗಮನ ಸೆಳೆಯುತ್ತಾರೆ. 

ಸರಿಯಾದ ಜಾಗದಲ್ಲಿ ಉತ್ತಮ ಹಾಡುಗಳನ್ನು ಪೋಣಿಸುವುದು ಪುಟ್ಟಣ್ಣ ಅವರ ಶಕ್ತಿ ಮತ್ತು ಆ ಹಾಡುಗಳಿಗೆ ತಮ್ಮ ಸ್ಪರ್ಶ ನೀಡುವುದು ಕೂಡ. 

"ಮೈಸೂರು ದಸರಾ ಎಷ್ಟೊಂದು ಸುಂದರ" ಹಾಡಿನಲ್ಲಿ ನಮ್ಮ ಕರುನಾಡಿನ ದಸರಾ ಸಂಸ್ಕೃತಿಯ ಪರಿಚಯ ಮಾಡಿಕೊಡುತ್ತಾರೆ. ಪಿ ಬಿ ಎಸ್ ಗಾಯನ, ರಾಜ್ ಮತ್ತು ಸಂಗಡಿಗರ ನೃತ್ಯ ಎಲ್ಲವೂ ಸುಂದರವಾಗುತ್ತದೆ. 

"ಕಂಡೆ ನ ಕಂಡೆ ನಾ ಕಾಣದ ತಾಯಿಯ" ಈ ಹಾಡಿನಲ್ಲಿ ಸಾಹಿತ್ಯ ಸಂಗೀತ ಇದಕ್ಕಿಂತ ಮೇಲೆ ಪಿ ಬಿ ಎಸ್ ಅವರ ಮೇಲು ಧ್ವನಿ ಮನಸೆಳೆಯುತ್ತದೆ.. 

"ಹೊಡೆಯುವ ಕೈ ಯೊಂದು..ಕಣ್ ಒರೆಸುವ ಕೈ ಒಂದು" ಹಾಡು  ಮಾತೃ ಪ್ರೇಮವನ್ನು ಸಂತೈಸುವ ಹೃದಯವನ್ನು ತೋರಿಸುವ ಪಿ ಬಿ ಎಸ್ ಗಾಯನ ಸೂಪರ್ 

"ಅ ಆ ಇ ಈ ಕನ್ನಡ ಅಕ್ಷರ ಮಾಲೆ" ಸಾಹಿತಿಯ ಕನ್ನಡ ಪ್ರೇಮ ಪದಗಳನ್ನು ಜೋಡಿಸುವ ಮಾಂತ್ರಿಕತೆ ಸೊಗಸಾಗಿದೆ. ಬಿ ಕೆ ಸುಮಿತ್ರ ಮತ್ತು ಎಸ್ ಜಾನಕಿ ಗಾಯನ ಹೃದಯಕ್ಕೆ ತಾಕುತ್ತದೆ. ಕನ್ನಡದ ಭಾಷೆಯ ಮೇಲಿನ ಪ್ರೇಮ ಪುಟ್ಟಣ್ಣ ಅವರ ಶಕ್ತಿ ಯಾವಾಗಲೂ. 

"ನನ್ನವರಿಗೆ ಯಾರೋ ಸಾಟಿಯೇ" ಎಲ್ ಆರ್ ಈಶ್ವರಿ ಮತ್ತು ಎಸ್ ಜಾನಕಿ ಪೈಪೋಟಿಗೆ ಬಿದ್ದಂತೆ ಹಾಡಿದರೆ ಕಲ್ಪನಾ ಮತ್ತು ರೇಣುಕ ಹಟಕ್ಕೆ ಬಿದ್ದಂತೆ ನೃತ್ಯ ಮಾಡುತ್ತಾ ಅಭಿನಯಿಸಿದ್ದಾರೆ.. 

ಚಿತ್ರದ ಉತ್ತಮ ಅಂಶ ಎಂದರೆ.. ಮೊದಲ ದೃಶ್ಯದಲ್ಲಿ ಒಂದು ಬೂಟು ಕಾಲು ಮತ್ತೊಂದು ಬರಿಗಾಲು ಬಡವ ಶ್ರೀಮಂತರ ಅಂತರ ತೋರಿದರೆ.. ಅಂತಿಮ ದೃಶ್ಯಕ್ಕೆ ಮೊದಲು ಬರಿಗಾಲಲ್ಲಿ ನಿಂತ ಅರ್ ನಾಗೇಂದ್ರ ರಾಯರ ಹಿಂದೆ ಹಣದ ರಾಶಿಯೇ ಇರುವುದು.. ಮತ್ತು ಅವರು ನಿರ್ಲಿಪ್ತರಾಗಿ ಅದಕ್ಕೆ ಮುಖ ಮಾಡಿ ನಿಲ್ಲುವುದು. ಹಣವಲ್ಲ ಮುಖ್ಯ ಗುಣ ಎನ್ನುವ ಅಂಶ ತೋರುತ್ತದೆ.. ಪುಟ್ಟಣ್ಣ ಅವರ ಚಿತ್ರಗಳಲ್ಲಿ ಈ ತರಹದ ಉದಾಹರಣೆ ಹೋಲಿಕೆಗಳು ಹೇರಳವಾಗಿ ಸಿಗುತ್ತದೆ.. 

ಮಾನಸಿಕ ಗುರುಗಳಾದ ಪುಟ್ಟಣ್ಣ ಅವರ ಚಿತ್ರಗಳಿಂದ ಕಲಿತದ್ದು ಅನೇಕ ಪಾಠಗಳು.. ಇಂದು ಶಿಕ್ಷಕರ ದಿನಾಚರಣೆ ಇದಕ್ಕಿಂತ ಸೌಭಾಗ್ಯ ನನಗೇನಿದೆ.. ನನ್ನ ಜೀವನವನ್ನು ತಿದ್ದಿ ತೀಡಿದ ಎಲ್ಲ ಶಿಕ್ಷಕರಿಗೂ, ದಾರಿ ದೀಪವಾದ ಗುರುಗಳಿಗೂ ಈ ಬರಹದ ಮೂಲಕ ಧನ್ಯವಾದಗಳನ್ನು ಹೃದಯದಿಂದ ಅರ್ಪಿಸುತ್ತಿದ್ದೇನೆ.. !!!

ಮುಂದಿನ ಭೇಟಿ ಪುಟ್ಟಣ್ಣ ಅವರ ಇನ್ನೊಂದು ಮುತ್ತಿನಂತ ಚಿತ್ರದ ಜೊತೆಯಲ್ಲಿ!!!

5 comments:

 1. ಕರುಳಿನ ಕರೆ ಅತ್ಯಮೋಘ ಚಿತ್ರ.
  ರಾಜ್ ಮತ್ತು ಕಲ್ಪನಾರ ಕೈಯಲಿ ಪುಟ್ಟಣ್ಣ ಅಮೋಘವಾಗಿ ಕೆಲಸ ತೆಗೆದಿದ್ದಾರೆ.
  ಬಹುಶಃ ಈ ಚಿತ್ರಕ್ಕೆ ದೊರೈ ಅವರ ಛಾಯಾಗ್ರಹಣವಿತ್ತು ಅನಿಸುತ್ತದೆ.

  ReplyDelete
  Replies
  1. ಚಿಕ್ಕ ಸರಳ ಕಥೆಯನ್ನು ಹಿಗ್ಗಿಸಿ ಒಳ್ಳೆಯ ಚಿತ್ರ ಮಾಡಿರುವ ಈ ಚಿತ್ರದಲ್ಲಿ ಪ್ರತಿಯೊಬ್ಬರ ಅಭಿನಯ ಮನ ತಟ್ಟುತ್ತದೆ.. ಈ ಚಿತ್ರಕ್ಕೆ ಶ್ರೀಕಾಂತ್ ಅವರ ಛಾಯಾಗ್ರಹಣ ಇತ್ತು ಸುಂದರ ಪ್ರತಿಕ್ರಿಯೆ ಬದರಿ ಸರ್ ಧನ್ಯವಾದಗಳು

   Delete
 2. ಅಂತು ಕಾಡಿ ಬೇಡಿ ನಿಮ್ಮ ಕೈಯಲ್ಲಿ ಬರಿಸಿಯೆ ಬಿಟ್ಟಿತು ಈ ಕಥೆ ..... ವಿವರಣೆಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ,,, ಶಿಕ್ಷಕರ ದಿನಕ್ಕೆ ಒಳ್ಳೆ ಬರಹ.... ಸೂಪರ್

  ReplyDelete
  Replies
  1. ಧನ್ಯವಾದಗಳು ನಿವಿ ಆ ಪ್ರಯತ್ನದ ಹಿಂದೆ ನೀವು ಉತ್ತೇಜನ ಕೊಟ್ಟಿದ್ದು ಬಹಳ ಇದೆ..ಈ ಚಿತ್ರ ಸರಣಿಯ ಮುಂದೆ ಇದ್ದರೂ ಯಾಕೋ ಗೊತ್ತಿಲ್ಲ ಈ ಚಿತ್ರ ಬರೆದ ಮೇಲೆ ಮಿಕ್ಕ ಚಿತ್ರಗಳ ಬಗ್ಗೆ ಬರೆಯಬೇಕು ಎನ್ನುವ ಒಂದು ಹಠ ಒಂದು ವರ್ಷ ಮುಂದಕ್ಕೆ ಹಾಕಿಬಿಟ್ಟಿತು..

   ನಿಮ್ಮ ಬೆಂಬಲಕ್ಕೆ ನನ್ನ ಕೃತಜ್ಞತೆಗಳು ಹಾಗೂ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

   Delete
 3. ಉದಯಚಂದ್ರಿಕಾ ಈ ಚಿತ್ರದಲ್ಲಿ ನಟಿಸಿಯೆ ಇಲ್ಲ. ಈ ಚಿತ್ರದಲ್ಲಿ ಕಲ್ಪನಾ ಜೊತೆಗೆ ಇನ್ನೊಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ರೇಣುಕಾ. ಈ ಚಿತ್ರದಲ್ಲಿ ಸುದರ್ಶನ್ ಜೋಡಿಯಾಗಿ ಅಭಿನಯಿಸಿದ ರೇಣುಕಾ 'ಭೂಪತಿ ರಂಗ', 'ವಾಗ್ದಾನ' ಚಿತ್ರದ ಮುಖ್ಯ ಪಾತ್ರಗಳು ಸೇರಿದಂತೆ ಸುಮಾರು 20 ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.

  ReplyDelete