ಅರೆ ಇದೇನಿದು.. ಹೀಗೆ.. ನಾ ಮತ್ತೆ ಕರುಣೆಯೇ ಕುಟುಂಬದ ಕಣ್ಣು ಚಿತ್ರ ನೋಡುತ್ತಿದ್ದೇನೆಯೇ ಅನ್ನಿಸಿತು.. ರಾಜಕುಮಾರ್ ಅವರು ಚಿತ್ರದ ಪರದೆಯಿಂದ ಹೊರಗೆ ಬಂದು... ಶ್ರೀ ಇಲ್ಲಪ್ಪ ಮುಂದೆ ನೋಡು.. ಎರಡು ಮೂರು ದೃಶ್ಯಗಳನ್ನು ನೋಡಿಯೇ ತೀರ್ಮಾನಕ್ಕೆ ಬರಬೇಡ.. ಇನ್ನೂ ಸ್ವಲ್ಪ ದೃಶ್ಯಗಳನ್ನು ನೋಡು ಆಮೇಲೆ ನಿನ್ನ ನಿರ್ಧಾರ ಹೇಳುವಂತೆ..
ಮೊದಲ ಕೆಲವು ದೃಶ್ಯಗಳು ನೋಡಿದಾಗ ಅಯ್ಯೋ ರಾಜಕುಮಾರ್ ಅವರು ಈ ಚಿತ್ರವನ್ನು ಏಕೆ ಒಪ್ಪಿಕೊಂಡರು ಅನಿಸುತ್ತದೆ.. ಕಾರಣ ಕುಟುಂಬ ಜೀವನ.. ಎಲ್ಲರೂ ನಮ್ಮವರು ಎಲ್ಲರೂ ನನ್ನವರು ಅನ್ನುವ ಭಾವನೆ ಅವರ ಎಲ್ಲಾ ಚಿತ್ರಗಳಲ್ಲಿಯೂ ಇದ್ದವು.. ಕೆಲವೊಂದು ಚಿತ್ರಗಳು ಉಲ್ಟಾ ಗುಣಗಳನ್ನು ತೋರಿದರೂ ನಂತರ ಉತ್ತರಾರ್ಧದಲ್ಲಿ ಬದಲಾದ ಚಿತ್ರಕಥೆ ಅವರ ಚಿತ್ರಗಳ ಮೇಲಿನ ನಂಬಿಕೆಯನ್ನು ಮತ್ತಷ್ಟು ಬಲಗೊಳಿಸುತಿತ್ತು..
ಕೆಲವು ದುಷ್ಟ ಸಹವಾಸಗಳಿಂದ, ಅದಕ್ಕೆ ಬೇಕಾದ ಹಣದ ಮುಗ್ಗಟ್ಟು.. ತನ್ನ ಸ್ನೇಹಿತರ ದಾರಿ ತಪ್ಪಿಸುವ ಮಾತುಗಳಿಂದ ತನ್ನ ಅಣ್ಣನನ್ನು ಆಸ್ತಿಯ ಪಾಲು ಕೇಳಿದಾಗ ಅಯ್ಯೋ ಅನಿಸಿತು.. ಆದರೆ ತನ್ನ ಅತಿಗ್ಗೆಯ ಮಧುರ ಮಾತುಗಳು.. ಹಾಗೂ ಆ ಸಮಯದಲ್ಲಿ ಜನಿಸಿದ ತನ್ನ ಅಣ್ಣನ ಮಗುವಿನ ಮೇಲಿನ ಮಮತೆಯಿಂದ ಮತ್ತೆ ಮನೆಗೆ ಮರಳಿ ಮೊದಲಿಗಿಂತ ಮನೆಯನ್ನು, ಮನೆಯವರನ್ನು ಪ್ರೀತಿಸಲು ತೊಡಗುತ್ತಾರೆ.. ಆಗ ನನಗೆ ನಿರಾಳವಾಯಿತು.. ಅಬ್ಬಾ ರಾಜಕುಮಾರ್ ಅವರ ಚಿತ್ರಗಳು ಅಂದರೆ ಹೀಗೆ ಇರಬೇಕು ಎನ್ನುವ ಒಂದು ಚೌಕಟ್ಟಿಗೆ ಮತ್ತೆ ಚಿತ್ರ ಬಂದು ನಿಂತಿತು.
ಅಣ್ಣ ನಮ್ಮವನು ಆದರೆ ಅತ್ತಿಗೆ ನಮ್ಮವಳಲ್ಲ.. ಇದು ಸಾಮಾನ್ಯವಾದ ಮಾತು.. ಮತ್ತೆ ಅನೇಕ ಕಡೆ ನೆಡೆಯುವುದು ಹೀಗೆ.. ಅದನ್ನೇ ಸಾರಾಂಶ ಮಾಡಿಕೊಂಡು ಈ ಚಿತ್ರದ ಕಥೆಯನ್ನು ಹೆಣೆದಿದ್ದಾರೆ.. ಅರ್ಥಾತ್ ಮಲಯಾಳಂ ಚಿತ್ರದ ತಿರುಳನ್ನು ಕನ್ನಡಕ್ಕೆ ಒಗ್ಗಿಸಿ ಕಥೆ ಮಾಡಿದ್ದಾರೆ..
ರಾಜಕುಮಾರ್ ಮತ್ತು ಅಶ್ವಥ್ ಅವರು ಅಣ್ಣ ತಮ್ಮಂದಿರು.. ರಾಮ ಲಕ್ಶ್ಮಣ ಇದ್ದಂತೆ ಇರುತ್ತಾರೆ.. ಅಣ್ಣನ ಮಡದಿ ಲೀಲಾವತಿ ಸಂಸಾರವನ್ನು ಎತ್ತಿ ಹಿಡಿದು ನಿಂತಿರುತ್ತಾರೆ.. ಆದರೆ ಯಥಾಪ್ರಕಾರ ಕಥೆ ಚೆನ್ನಾಗಿಓಡುತ್ತಿದ್ದಾಗ ಏನಾದರೂ ಕಿರಿಕಿರಿ ಆಗಲೇ ಬೇಕು ಅಲ್ಲವೇ.. ಆತನ ತಂಗಿ ಜಯ ಇವರ ಅನ್ನ್ಯೋನ್ಯತೆಯನ್ನು ಕಂಡು ಉಲ್ಟಾ ಪುಲ್ಟಾ ಮಾತಾಡುತ್ತಿರುತ್ತಾರೆ . ಅದೇ ರೀತಿ ಆತನ ತಾಯಿ ಬಿ ಜಯಮ್ಮ ಕೂಡ ಅತ್ತೆ ತಾನು ಎನ್ನುವ ದರ್ಪವನ್ನು ಎತ್ತಿ ತೋರಿಸುತ್ತಾರೆ
ಆದರೆ ಲೀಲಾವತಿ ತಮ್ಮ ಪ್ರೇಮಮಯಿ ಮಾತುಗಳಿಂದ ತನ್ನ ಅತ್ತೆಯನ್ನು ಅಮ್ಮ ಎಂದು ಕರೆದು. ತಾ ಮಾಡುತ್ತಿರುವ ಕೆಲಸ, ಮಾತುಗಳು ಬದುಕಿಗೆ ಮುಖ್ಯ ಎಂದು ಮನವರಿಕೆ ಮಾಡಿಕೊಟ್ಟಾಗ ತನ್ನತಪ್ಪನ್ನು ಅರ್ಥ ಮಾಡಿಕೊಳ್ಳುತ್ತಾರೆ.
ಕಾಲಾನಂತರ ತಾಯಿ ಮರಣಿಸುತ್ತಾರೆ.. ಅದಕ್ಕೆ ಮುಂಚೆ ರಾಜಕುಮಾರ್ ಅವರಿಗೆ ಮಡದಿಯಾಗಿ ಜಯಂತಿ ಬರುತ್ತಾರೆ.. ತನ್ನದೇ ನೆಡೆಯಬೇಕು.. ಅಂತ ಜಯಂತಿ ಹಠ ಮಾಡಿದಾಗ.. ಲೀಲಾವತಿ ಅಶ್ವಥ್ ಎಲ್ಲ ಆಸ್ತಿಯನ್ನು ರಾಜಕುಮಾರ್ ಕುಟುಂಬಕ್ಕೆ ಬಿಟ್ಟು.. ತಾವು ಹೊರ ನೆಡೆಯುತ್ತಾರೆ..
ಆದರೆ ತುಂಬು ಗರ್ಭಿಣಿಯಾದ ಜಯಂತಿಗೆ ರಕ್ತದ ಅವಶ್ಯಕತೆ ಇದೆ ಎಂದು ತಿಳಿದಾಗ ಲೀಲಾವತಿ ತಮ್ಮ ರಕ್ತ ಕೊಟ್ಟು ಜಯಂತಿಯನ್ನು ಕಾಪಾಡುತ್ತಾರೆ.. ಆದರೆ ಚಿಕಿತ್ಸೆ ಸಮಯದಲ್ಲಿ ಮಳೆ ಬಂದು ವಿದ್ಯುತ್ ವ್ಯತ್ಯಯವಾಗಿ ಲೀಲಾವತಿ ದೇಹದಿಂದ ಬರುತ್ತಿದ್ದ ರಕ್ತದ ಪೈಪು ತುಂಡಾಗಿ.. ಆಕೆಯ ರಕ್ತವೆಲ್ಲಾ ಹರಿದು ಹೋಗಿ ಮರಣಿಸುತ್ತಾರೆ.
ಜಯಂತಿಗೆ ತನ್ನ ತಪ್ಪಿನ ಅರಿವಾಗಿ.. ಲೀಲಾವತಿಯ ಮಗುವನ್ನು ತನ್ನ ಇನ್ನೊಂದು ಮಗು ಎಂದು ಒಪ್ಪಿಕೊಳ್ಳುವಲ್ಲಿಗೆ ಚಿತ್ರ ಮುಗಿಯುತ್ತದೆ.. ಲೀಲಾವತಿ ಕುಟುಂಬಕ್ಕಾಗಿ ಪ್ರೇಮಮಯಿಯಾಗಿ ನಿಂತು ತಮ್ಮ ಪ್ರಾಣವನ್ನು ಅರ್ಪಿಸಿರುತ್ತಾರೆ.
ಸುಂದರ ಕಥೆಯನ್ನುಏರು ಪೇರಿಲ್ಲದೆ ಸರಳವಾಗಿ ಚಿತ್ರಿಸಿದ್ದಾರೆ.
ರಾಜಕುಮಾರ್ ಮನೋಜ್ಞ ಅಭಿನಯ ನೀಡಿದ್ದಾರೆ.. ಅದರಲ್ಲೂ ತನ್ನ ಅಣ್ಣ ಅಶ್ವಥ್ ಅವರ ಜೊತೆ ಪಾಲು ಕೇಳುವಾಗ ಅವರ ಕ್ರೋಧ.. ತನ್ನ ಅತ್ತಿಗೆಯನ್ನು ಬಯ್ದು ಹೀಯಾಳಿಯಿಸುವಾಗ.. ಜಯಂತಿ ಜೊತೆಯಲ್ಲಿ ಪ್ರೇಮದ ಮಾತನಾಡುವಾಗ.. ತನ್ನ ಅಣ್ಣನ ಮಗು ಚಿಕ್ಕಪ್ಪ ಎಂದು ಹತ್ತಿರ ಬಂದಾಗ.. ಆ ಮಗುವನ್ನು ಮುದ್ದು ಮಾಡುವುದು.. ಪ್ರತಿ ದೃಶ್ಯದಲ್ಲೂ ಅವರ ನಟನಾ ಸಾಮರ್ಥ್ಯವನ್ನು ತೋರಿದ್ದಾರೆ. ಆರಂಭದ ಆರ್ಭಟದ ಅಭಿನಯ.. ಚಿತ್ರ ಮುಂದುವರೆದಂತೆ ಪ್ರಬುದ್ಧತೆ ಎದ್ದು ಕಾಣುತ್ತದೆ.
ಅಶ್ವಥ್ ಆರಂಭದಲ್ಲಿ ಹಠಮಾರಿಯಾಗಿ ತನ್ನ ಅಸ್ತಿ ಕರಗಿದರೂ ಸರಿ ತನ್ನ ಪ್ರತಿಷ್ಠೆಯೇ ಮುಖ್ಯ ಎಂದು ತಮ್ಮ ಆಸ್ತಿಯನ್ನು ಒತ್ತೆ ಇತ್ತು ಹಣಪಡೆಯುವ ಮಾತುಗಳು.. ನಂತರ ತನ್ನ ಮಡದಿಯ ಮಾತುಗಳ ಒಳಾರ್ಥ, ದೂರದೃಷ್ಟಿಯ ಮಾತುಗಳು ಅವರ ಮನಸ್ಸನ್ನು ಬದಲಿಸಿ ಮನೆಯ ಬಗ್ಗೆ ಯೋಚಿಸುವ ಅಭಿನಯ ಇಷ್ಟವಾಗುತ್ತದೆ. ಹಾಗೆಯೆ ತನ್ನ ತಮ್ಮನಿಗಾಗಿ ಮಿಡಿಯುವ ಮನಸ್ಸಿನ ಅಣ್ಣನಾಗಿ ಗಮನ ಸೆಳೆಯುತ್ತಾರೆ.
ಈ ಕಥೆಯ ಮುಖ್ಯ ಪಾತ್ರ ಲೀಲಾವತಿ.. ಮಾತಿನ ಧಾಟಿ.. ಮನೆಯ ದೃಢತೆ ಮುಖ್ಯ ಎಂದು ಪ್ರತಿ ದೃಶ್ಯದಲ್ಲೂ ಎತ್ತಿ ತೋರುವ ಅವರ ನಟನೆ.. ಆ ಮೃದು ಮಾತು.. ತನ್ನ ಓರಗಿತ್ತಿಯನ್ನು ನೋಡಿಕೊಳ್ಳುವ.. ಆಕೆಯ ಚುಚ್ಚು ಮಾತುಗಳನ್ನು ಸಹಿಸಿಕೊಂಡು ಆಕೆಗೆ ಪ್ರೀತಿಯನ್ನೇ ಧಾರೆಯೆರೆಯುವ ಪಾತ್ರದಲ್ಲಿ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ..
ಜಯಂತಿ ಈ ಚಿತ್ರಕ್ಕೆ ಬೇಕಾಗುವ ತಿರುವಿನ ಪಾತ್ರ ಪೋಷಣೆ ಮಾಡಿದ್ದಾರೆ.. ಗುಣ ಬಂಗಾರ.. ಕಿವಿ ಹಿತ್ತಾಳೆ ಎನ್ನುವ ಗಾದೆಯಂತೆ ಅನ್ಯರ ಮಾತುಗಳನ್ನು ಕೇಳಿ.. ತನ್ನ ತುಂಬು ಕುಟುಂಬವನ್ನು ಒಡೆದು.. ಮನೆಯ ಅವನತಿಗೆ ಕಾರಣವಾಗುವ ಪಾತ್ರ.. ಆದರೆ ಲೀಲಾವತಿಯವರ ಪಾತ್ರದ ಗಟ್ಟಿತನದಿಂದ ಮನೆ ಒಡೆಯುವುದು ತಪ್ಪಿದರೂ, ಅದಕ್ಕೆ ತೆರುವ ಬೆಲೆ ಲೀಲಾವತಿಯ ಪ್ರಾಣ ಎಂದು ಅರಿವಾದಾಗ ಜಯಂತಿಯ ಅಭಿನಯ ಇಷ್ಟವಾಗುತ್ತದೆ.
ಅತ್ತೆಯ ಪಾತ್ರದಲ್ಲಿ ರಂಗಭೂಮಿಯ ದೈತ್ಯ ಪ್ರತಿಭೆ ಬಿ ಜಯಮ್ಮ.. ಅವರ ಧ್ವನಿ ಕೇಳುವುದೇ ಚಂದ.. ಆಕೆಯ ಮಗಳಾಗಿ ಬಿ ಜಯ.. ಅಳಿಯ ಅರುಣ್ ಕುಮಾರ್.. ಡಿಕ್ಕಿ ಮಾಧವರಾವ್, ಬಿ ರಾಘವೇಂದ್ರ ರಾವ್, ಆರ್ ಟಿ ರಮಾ.. ರಂಗ, ಕುಪ್ಪುರಾಜು ಅವರೆಯೋಲ್ಲರ ಪಾತ್ರ ಪೋಷಣೆ ಉತ್ತಮವಾಗಿದೆ.
ಆರ್ ಸುದರ್ಶನಂ ಅವರ ಸಂಗೀತ ಈ ಚಿತ್ರದ ಭಾಗವಾಗಿದೆ... ಜೆ ಏಸುದಾಸ್ ಅಥವ ಕೆ ಜೇಸುದಾಸ್ ರಾಜಕುಮಾರ್ ಅವರಿಗೆ ಧ್ವನಿ ಮಾಡಿದ ಏಕೈಕ ಹಾಡು ಈ ಚಿತ್ರದಲ್ಲಿದೆ. "ಟೂ ಟೂ ಬೇಡಪ್ಪ ಓಡಿ ಬಂದು ನನ್ನ ಸಂಗ ಕಟ್ಟಪ್ಪ".
ಉಳಿದಂತೆ ಹಾಡುಗಳಿಗೆ ಸಾಹಿತ್ಯ ಒದಗಿಸಿರುವ ವಿಜಯನಾರಸಿಂಹ, ನರೇಂದ್ರ ಬಾಬು.. ಛಾಯಾಗ್ರಹಣ ಶ್ರೀಕಾಂತ್, ಕಥೆ ಕೆ ಜಿ ಸೇತುನಾಥ್, ನಿರ್ದೇಶಕರಾಗಿ ಎಂ ಆರ್ ವಿಠ್ಠಲ್, ನಿರ್ಮಾಪಕರಾಗಿ ಶ್ರೀಕಾಂತ್ ನಹತ ಮತ್ತು ಶ್ರೀಕಾಂತ್ ಪಟೇಲ್ ಈ ಚಿತ್ರ ತೆರೆಕಾಣುವಲ್ಲಿ ಸಹಕರಿಸಿದ್ದಾರೆ.
No comments:
Post a Comment