Tuesday, October 18, 2022

ಕಾಂತಾ ರಾ ಕಾಂತಾ ರಾ ಕಾಂತಾರ!!!!!

ಏನೆಂದು ನಾ ಹೇಳಲಿ ಮಾನವನಾಸೆಗೆ ಕೊನೆಯೆಲ್ಲಿ

ಕಾಣೋದೆಲ್ಲ ಬೇಕು ಎಂಬ ಹಠದಲ್ಲಿ

ಒಳ್ಳೇದೆಲ್ಲ ಬೇಕು ಎಂಬ ಛಲದಲ್ಲಿ

ಯಾರನ್ನೂ ಪ್ರೀತಿಸನು ಮನದಲ್ಲಿ

ಏನೊಂದೂ ಬಾಳಿಸನು ಜಗದಲ್ಲಿ


ಪ್ರಾಣಿಗಳೇನು ಗಿಡಮರವೇನು

ಬಿಡಲಾರ ಬಿಡಲಾರ ಬಿಡಲಾರ

ಬಳಸುವನೆಲ್ಲ, ಉಳಿಸುವುದಿಲ್ಲ

ತನ್ನ ಹಿತಕಾಗೆ ಹೋರಾಡುವ


ಪಡೆಯುವುದೊಂದು ಕೊಡುವುದು ಒಂದು

ಸ್ವಾರ್ಥಿ ತಾನಾಗೆ ಮೆರೆದಾಡುವ

ಏನೆಂದು ನಾ ಹೇಳಲಿ

ಮಾನವನಾಸೆಗೆ ಕೊನೆಯೆಲ್ಲಿ

ಲೇ ಶ್ರೀ ಇದೇನ್ಲಾ ಎಂತದೋ ಬ್ಯಾರಿ ಕಥಿ ವದರ್ತಾ ಇದ್ದೀಯ.. ಅಣ್ಣಾವ್ರು ಹಾಡಿಗೂ ಈ ಪಂಜುರ್ಲಿಗೂ ಏನ್ಲಾ ಸಂಬಂಧ... !

ಪ್ರಿಯ ಪಂಜುರ್ಲಿ ಅಣ್ಣಾವ್ರ ಹಾಡಿನಂತೆ ಮನುಷ್ಯನಿಗೆ ಎಲ್ಲವೂ ಬೇಕು.. ಎಲ್ಲರೂ ಬೇಕು.. ಆದರೆ ಬೆಳೆಯುತ್ತ ಬೆಳೆಯುತ್ತಾ ಎಲ್ಲರೂ ಬೇಕು ಎನ್ನುವುದು ಹೊರಟು ಹೋಗುತ್ತೆ.. ಬರೀ ಎಲ್ಲವೂ ಬೇಕು ಎನ್ನುವುದು ಮಾತ್ರ ನಿಲ್ಲುತ್ತೆ.. 

ಓಹ್ ಓಹ್ ಗೊತ್ತಾಯ್ತು.. ಯಾವಾಗಲೂ ನೀನೆ ಬೇರೆ ನಿನ್ನ ಟ್ರಾಕೆ ಬೇರೆ.. ಸರಿ ಮುಂದುವರಿಸು.. 

******** 

ಕಳೆದೊಂದೆರಡು ಸಿನಿಮಾಗಳು ನನಗೆ ಭ್ರಮನಿರಸನ ಹುಟ್ಟಿಸಿತ್ತು.. ಸಾಕಪ್ಪ ಇವರ ಸಹವಾಸ ಅಂತ...ಇವರ ಸಿನಿಮಾಗಳನ್ನು ನೋಡೋದೇ ಬಿಟ್ಟಿದ್ದೆ.. ನಿದ್ದೆ ಮಾಡಿದ ಸಿನಿಮಾ ಒಂದಾದರೆ.. ನಾಯಕಿಯನ್ನು ನೋಡೋಕೆ ಕೂತು ಬೋರ್ ಹೊಡೆಸಿಕೊಂಡು.. ಕಡೆಗೆ ಆ ಚಿತ್ರದ ನಾಯಕಿಗೆ ನಿಮ್ಮ ಪಾತ್ರ ಪೋಷಣೆ ಇನ್ನಷ್ಟು ಬೇಕಿತ್ತು ಅಂತ ಹೇಳಿ.. ಅವರ ಶಭಾಷ್ ಗಿರಿ ಗಿಟ್ಟಿಸಿದ್ದು ಒಂದು ದಂತ ಕತೆ... ಹಃ ಹ ಹ 

ರಾ ರಾ ಕಾಂತಾ ರಾ ರಾ.. 

ನನ್ನ ಸುತ್ತ ಮುತ್ತಲು ನನ್ನ ಇಷ್ಟ ಪಡುವ ಎಲ್ಲರೂ ಕೇಳುತ್ತಿದ್ದದ್ದು ಒಂದೇ ಮಾತು.. ಕಾಂತಾರಾ ನೋಡಿದ್ರ ಅಂತ.. ಅದಕ್ಕೆ ಹೇ ಅವರು ನೋಡೋಲ್ಲ.. ಅವರ ಚಿತ್ರ ನೋಡೋಲ್ಲ.. ಹಂಗೆ ಹಿಂಗೇ ಅಂತ ಜಾತಿ ಗೀತಿ ಎಲ್ಲಾ ಅಡ್ಡ ಎಳೆದು ತಂದಿದ್ದರು .. 

ಚಿತ್ರಕೃಪೆ : ಗೂಗಲೇಶ್ವರ 

ಆದರೂ ನೋಡುವ ಮನಸ್ಸು ಬಂದಿರಲಿಲ್ಲ.. 

ಯಾಕೋ ಎಲ್ಲರೂ ಬಲವಂತ ಮಾಡೋದು ನೋಡಿ.. ಜೊತೆಗೆ ನನ್ನ ಅತಿ ಇಷ್ಟ ಪಡುವವರು ಕಾಂತಾ ಅಂತ ಕರೆಯೋದು ಒಂದು ಕಾರಣವಾಗಿ.. ಅರೆ ನನ್ನ ಹೆಸರು ಒಂದಷ್ಟು ಇದೆಯಲ್ಲ (ಸ್ವ ಬೆನ್ನು ತಟ್ಟುವಿಕೆ..... ಹೌದು ಜೀವನದಲ್ಲಿ ಮತ್ತೆ ಹುಮ್ಮಸ್ಸು ತುಂಬಿಸಿ ಕೊಳ್ಳಲು ಕೆಲವೊಮ್ಮೆ ಸ್ವ ಬೆನ್ನು ತಟ್ಟುವಿಕೆ ಅಗತ್ಯ.. ) ಇರಲಿ.. ನೋಡಿಯೇ ಬಿಡೋಣ ಅಂತ.. ಟಿಕೆಟ್ ಬುಕ್ ಮಾಡಿದಾಗ ನನ್ನ ಮಗಳು ಮಡದಿ ಒಮ್ಮೆ ಅಚ್ಚರಿ ಪಟ್ಟದ್ದು ಉಂಟು.. ಇದೇನಾಯ್ತು ಅಪ್ಪ ಅಂತ ಮಗಳು ಕಣ್ಣಲ್ಲಿಯೇ ಎಸ್ ಎಂ ಎಸ್ ಬಿಟ್ಟರೆ.. ಹನ್ನಾ ಆರಾಮಿದ್ದಿರಾ ಅಂತ ಮಡದಿ ಕೇಳಿದಳು.. 

ಸರಿ.. ನೋಡಿಯೇ ಬಿಡೋಣ ಅಂತ.. ಹೊರಟರೆ.. ಅರೆ ಒಂದು ಕಾಲದಲ್ಲಿ ನಾಲ್ಕಕ್ಷರ ಕಲಿಸಿದ್ದನ್ನೇ ಕೃತಜ್ಞತಾ ಪೂರ್ವಕವಾಗಿ ನೆನೆಯುತ್ತ ನನಗೆ ಅಪಾರ ಗೌರವ ತೋರುವ ನಳಿನಿ, ಮಾಲಿನಿ ಮತ್ತೆ ಒಂದರ್ಥದಲ್ಲಿ ನನ್ನ ಗುರು ಎನ್ನಬಹುದಾದ ಪ್ರದೀಪ್ ಮತ್ತೆ ಅವರ ಕುಟುಂಬದವರು ಸಿಕ್ಕಾಗ ಇನ್ನಷ್ಟು ಖುಷಿ.. 

ಚಿತ್ರಕೃಪೆ : ಗೂಗಲೇಶ್ವರ 

ಬೆಂಕಿಯ ಉಂಡೆ ಗುಂಡು ಗುಂಡಗೆ ಸುತ್ತುತ್ತಾ ಕಾಂತಾರ ಎನ್ನುವ ಹೆಸರು ಮೂಡಿದಾಗ ವಾಹ್ ಎನಿಸಿತು ಮನಸ್ಸು.. ಈ ಚಿತ್ರದ ವಿಮರ್ಶೆ ನೋಡಿಲ್ಲ, ಟ್ರೈಲರ್ ನೋಡಿಲ್ಲ.. ಹಾಗಾಗಿ ಮುಂದೆ ಬರುವ ಸನ್ನಿವೇಶಗಳ ಕಲ್ಪನೆ ಕೂಡ ಮಾಡಿಕೊಳ್ಳದೆ ಇದ್ದದರಿಂದ ಸಿನೆಮಾವನ್ನು ಖುಷಿ ಪಟ್ಟು ನೋಡುವಂತಾಯಿತು.. 

ಸ್ಲೋ ಪಾಯಿಸನ್ ಅಥವ ನಿಧಾನಗತಿಯಲ್ಲಿ ವಿಷವನ್ನು ಏರಿಸುವಿಕೆ.. ಹೌದು ಈ ಚಿತ್ರದ ಶುರುವಾದ ನಂತರ ಮೆಲ್ಲಗೆ ರೋಮಾಂಚನ ಅನುಭವಿಸುವ ದೃಶ್ಯಗಳು ಹಲವಾರು ಬರುತ್ತಲೇ ಇದ್ದವು.. ನಾ ಇಷ್ಟ ಪಡುವ ಛಾಯಾಗ್ರಹಣ ಅದ್ಭುತವಾಗಿತ್ತು.. ಛಾಯಾಗ್ರಾಹಕ ಎಲ್ಲೆಲ್ಲಿ ಯಾವ ಯಾವ ಕೋನದಲ್ಲಿ ಕ್ಯಾಮೆರಾ ಇಟ್ಟಿದ್ದಾನೆ ಎಂದು ಹುಡುಕುತ್ತಾ ಸಿನೆಮಾವನ್ನು ನೋಡಲು ಶುರು ಮಾಡಿದೆ.. ಅದ್ಭುತ ಅದ್ಭುತ ಎನ್ನುವಂತಹ ಹಿನ್ನೆಲೆ ಸಂಗೀತ ಮನಸೆಳೆಯಿತು.. ನಾ ಇಷ್ಟ ಪಡದ ಡ್ರೋನ್ ದೃಶ್ಯಗಳು ಚೆನ್ನಾಗಿತ್ತು.. ಆದರೆ ನಸು ಗತ್ತಲೆಯಲ್ಲಿ ನೆರಳು ಬೆಳಕಿನ ಜಾದೂ ಮಾಡಿರುವ ಛಾಯಾಗ್ರಹಣಕ್ಕೆ ಮೊದಲ ಅಂಕ.. ನಂತರ ಹಿನ್ನೆಲೆ ಸಂಗೀತ.. 

ಮಂಗಳೂರು, ತುಳು.. ಭಾಷೆಯ ಹಿಡಿತ ಗೊತ್ತಿದ್ದವರಿಗೆ ಇನ್ನಷ್ಟು ಖುಷಿ ಪಡುವ ಸಿನಿಮಾವಿದು.. ಅಲ್ಲಿಯ ಸ್ಲ್ಯಾಂಗ್ ಅಥವ ತುಂಟ ಮಾತುಗಳು ಕಚಗುಳಿ ಕೊಡುವ ರೀತಿ.. ಚೆನ್ನ.. 

ಒಳ್ಳೆಯ ನೃತ್ಯದಂತೆ ಚಿತ್ರೀಕರಿಸುವ ಹೊಡೆದಾಟದ ದೃಶ್ಯಗಳು ಖುಷಿ ಕೊಡುತ್ತವೆ.. ಕ್ಯಾಮೆರಾ ಕೋನ ಸೂಪರ್ ಸೂಪರ್.. ಕಂಬಳದ ದೃಶ್ಯಗಳು ಇನ್ನಷ್ಟು ಬೇಕಿತ್ತು ಅನಿಸಿತ್ತು.. ಕಾರಣ ಒಂದು ಹತ್ತು ವರ್ಷಗಳ ಹಿಂದೆ ಮೊದಲ ಬಾರಿಗೆ ಕಂಬಳವನ್ನು ಹತ್ತಿರದಿಂದ ನೋಡಿದ್ದೇ.. ನನ್ನ ಕ್ಯಾಮೆರಾದಲ್ಲಿ ನನಗಿಷ್ಟ ಬಂದಂತೆ ಹಲವಾರು ದೃಶ್ಯಗಳು ಸೆರೆಯಾಗಿದ್ದವು.. ಕೋಣಗಳ ಓಟ. .. ಅದರ ಜೊತೆಯಲ್ಲಿ ಅದರ ಸಮಕ್ಕೆ ಓಡುವ ಮಾನವರು.. ಅದರ ಹಿಂದೆ ಕಟ್ಟಿದ ದುಡ್ಡಿನ ರಾಶಿ ಎಲ್ಲವೂ ಆ ಕಂಬಳ ದೃಶ್ಯಗಳನ್ನು ಮತ್ತೆ ಮರುಕಳಿಸುವಂತೆ ಮಾಡಿತು.. 

ಭೂತಾರಾಧನೆ.. ಕೋಲಾ.. ತುಳುನಾಡಿನ ಸಂಸ್ಕೃತಿ, ಕರಾವಳಿಯ ತಿಂಡಿ ತಿನಿಸುಗಳು, ಭಾಷೆ, ವೇಷ ಭೂಷಣ, ಗಡುಸುತನ.. ಎಲ್ಲವೂ ಚಿತ್ರದ ಮೌಲ್ಯವನ್ನು ಮೇಲೆತ್ತಿದೆ.. 

ಚಿತ್ರಕೃಪೆ : ಗೂಗಲೇಶ್ವರ 

ಚಿತ್ರಕೃಪೆ : ಗೂಗಲೇಶ್ವರ 

ಪ್ರತಿಯೊಬ್ಬ ಕಲಾವಿದರು ಇಲ್ಲಿ ಅಭಿನಯಿಸಿಲ್ಲ ಬದಲಿಗೆ ಪಾತ್ರವಾಗಿದ್ದಾರೆ.. ನಾಯಕ ರಿಷಬ್ ಚಿತ್ರದುದ್ದಕ್ಕೂ ಆವರಿಸಿಕೊಂಡರೆ... ತಮ್ಮ ಎಂದು ಪ್ರೀತಿಸುತ್ತಿದ್ದ ಗುರುವ  ಸತ್ತಿದ್ದಾನೆ ಎಂದು ತಿಳಿದ ಮೇಲೆ ರಿಷಬ್ ಅವರ ಅಭಿನಯ ಸಿಳ್ಳೆ ಗಿಟ್ಟಿಸುತ್ತದೆ.. 

ಪರಕಾಯ ಪ್ರವೇಶ ಎಂದರೆ ಇದು ಎನ್ನುವಂತೆ ನಟಿಸಿರುವ ಅಚ್ಯುತ್ ಕುಮಾರ್ ಅಬ್ಬಬ್ಬಾ ಎನಿಸುತ್ತಾರೆ.... "ದಣಿ.... ಮಗು" ಅಂದಾಗ ... "ಇರಲಿ ಬಿಡೋ.. ಬೆಳೆದ ಮೇಲೆ ಪಾಲು ಕೇಳುತ್ತದೆ" ಅಂತ ಹೇಳಿ ತಣ್ಣಗಿನ ಕ್ರೌರ್ಯ ಕಣ್ಣಲ್ಲೇ ತೋರುತ್ತಾ ಗುಂಡು ಹಾರಿಸೋದು.. ಯಪ್ಪಾ ಜುಮ್ ಎನಿಸುವ ಅಭಿನಯ.. 

ರಿಷಬ್ ಚಿತ್ರಗಳು ಅಂದರೆ ಅಲ್ಲಿ ಪ್ರಮೋದ್ ಇರಲೇ ಬೇಕು.. ಆ ಅನ್ಯೋನ್ಯತೆ ಈ ಚಿತ್ರದ ಪಾತ್ರ ಪೋಷಣೆಯಲ್ಲಿ ಕಾಣುತ್ತದೆ.. ಸೂಪರ್ ಧ್ವನಿ.. ಖಡಕ್ ಮಾತುಗಳು.. ಸನ್ನಿವೇಶಕ್ಕೆ ತಕ್ಕಂತೆ ಮಾತಾಡುವ ಶೈಲಿ.. ಸೂಪರ್ ಎನಿಸುತ್ತದೆ.. 

ಅನೇಕ ಚಿತ್ರಗಳಲ್ಲಿ ಖಳನಾಯಕನಾಗಿ ಅಭಿನಯಿಸಿರುವ ಕಿಶೋರ್ ಮತ್ತೊಮ್ಮೆ ಸೂಪರ್ ಅಭಿನಯ.. ತಣ್ಣಗಿನ ಕೋಪ.. ಕಡೆಯಲ್ಲಿ ನಾಯಕನ ಮಾತುಗಳನ್ನು ಕೇಳೋದು.. ಸಣ್ಣಗೆ ನಗೋದು.. ಕಿಶೋರ್ ಮನ ಸೆಳೆಯುತ್ತಾರೆ.. 

ನಾಯಕಿ ಕೆಲವು ದೃಶ್ಯಗಳಲ್ಲಿ ಮುದ್ದಾಗಿ ಕಾಣುತ್ತಾರೆ.. ಪ್ರತಿಯೊಬ್ಬ ಕಲಾವಿದರು ಅಚ್ಚುಕಟ್ಟಾದ ಅಭಿನಯ ನೀಡಿದ್ದಾರೆ.. 

ಇಡೀ ಚಿತ್ರದ ರಚನೆ, ಅಭಿನಯ, ನಿರ್ದೇಶನ ಎಲ್ಲವನ್ನೂ ಹೊತ್ತು ಚಕ್ರವ್ಯೂಹದ ಅಭಿಮನುವಿನಂತೆ ಹೋರಾಡಿ.. ಕಡೆಗೆ ಚಕ್ರವ್ಯೂಹವನ್ನು ಭೇದಿಸಿ ಗೆಲ್ಲುವ ರಿಷಬ್ ಇಲ್ಲಿ ಪೂರ್ಣ ಪ್ರಮಾಣದಲ್ಲಿ ಮನಗೆಲ್ಲುತ್ತಾರೆ.. 

ಕಾಂತಾ ರಾ 

ಕಾಂತಾ ರಾ 

ಕಾಂತಾರ.. ಒಂದು ವಿಭಿನ್ನ ಪ್ರಯತ್ನ.. cult ಚಿತ್ರಗಳು ಅಂದರೆ ಇದೆ ಅಲ್ಲವೇ.. 

ಟಾಕೀಸಿನಿಂದ ಹೊರ ಬರುವಾಗ ಕಾಡಿದ್ದು 

"ಪ್ರಾಣಿಗಳೇನು ಗಿಡಮರವೇನು

ಬಿಡಲಾರ ಬಿಡಲಾರ ಬಿಡಲಾರ

ಬಳಸುವನೆಲ್ಲ, ಉಳಿಸುವುದಿಲ್ಲ

ತನ್ನ ಹಿತಕಾಗೆ ಹೋರಾಡುವ"


******

ಪಂಜುರ್ಲಿ : ಸೂಪರ್ ಶ್ರೀ.. ಸಿನೆಮಾದ ಆಶಯ ಹೇಳದೆ ಸಿನಿಮಾದ ವಿಷಯ ಹೇಳದೆ.. ಸಿನೆಮಾವನ್ನು ನೋಡುವ ಹುಮ್ಮಸ್ಸು ತುಂಬುವ ರೀತಿ ಬರೆದಿದ್ದೀಯ.. ಶಭಾಷ್ ಶ್ರೀ 

ಶ್ರೀ : ಅಣ್ಣಾವ್ರು ಹೇಳಿರೋದನ್ನ ಪಾಲಿಸುತ್ತಿದ್ದೇನೆ ಪಂಜುರ್ಲಿ ... ಕನ್ನಡ ಚಿತ್ರಗಳನ್ನು ನೋಡಿ ಪ್ರೋತ್ಸಾಹಿಸಿ... ಪ್ರಕೃತಿ ಮಾನವನ ಮಧ್ಯೆ ನೆಡೆಯುವ ಹೋರಾಟಕ್ಕೆ ದೈವ ಬಲವೂ ಇರುತ್ತದೆ..              ಜೊತೆಗೆ  .... .." 

ಪಂಜುರ್ಲಿ : ಶ್ರೀ ನಾವೂ ಇರುತ್ತೇವೆ.. ದೈವಾರಾಧನೆ, ಭೂತಾರಾಧನೆ ನಮ್ಮ ನಾಡಿನ ವೈಶಿಷ್ಟ್ಯ ಕಣೋ.. Any way super experience ನಿಂದು.. ಹೀಗೆ ಸಾಗುತ್ತಿರಲಿ...  .. ಕಾಂತಾ ನಿನ್ನ ಬರಹಕ್ಕೆ ಆಯಸ್ಕಾಂತ ಶಕ್ತಿ ಸದಾ ಇರಲಿ !!!