Sunday, January 9, 2022

ವೀರ ಸಾಹಸಿ ವೀರ ಕೇಸರಿ (1963) (ಅಣ್ಣಾವ್ರ ಚಿತ್ರ ೪ ೩/ ೨೦೭)


ಭಕ್ತಿ ಪ್ರಧಾನ .. ಇಲ್ಲವೇ ಸಾಂಸಾರಿಕ ಚಿತ್ರಗಳೇ ಹೆಚ್ಚಾಗಿದ್ದ ಆ ಕಾಲಘಟ್ಟದಲ್ಲಿ ಜಾನಪದ ಕಥಾಲೋಕ ಚಿತ್ರವಾಗಿ ಬಂದದ್ದು ಕಡಿಮೆ.. 

ಈ ಚಿತ್ರ ಸಾಹಸ ಪ್ರಧಾನವಾದ ಉದ್ದೇಶವವಿದ್ದ ಜಾನಪದ ಕಥೆ.. ಈ ಚಿತ್ರ ಕರುನಾಡ ರಸಿಕರ ಜನಮಾನಸದಲ್ಲಿ ಸದಾ ಹಸಿರಾಗಿರುವ ಚಿತ್ರ.. 

ಸ್ವಾಭಿಮಾನದ ನಲ್ಲೆ 
ಮೆಲ್ಲುಸಿರೇ ಸವಿಗಾನ 
ಎಲ್ಲಾ ನಿನಗಾಗಿ 
ದುಂಡು ಮಲ್ಲೆ ದುಂಡು ಮಲ್ಲೆ 
ಹರೆಯುಕ್ಕಿದೆ 
 
ಈ ಮೇಲಿನ ಹಾಡುಗಳು ಇಂದಿಗೂ ಜೀವಂತ.. 

ಇದರ ಜೊತೆಯಲ್ಲಿ ಇನ್ನೂ ಮೂರು ಹಾಡುಗಳು ಈ ಚಿತ್ರವನ್ನು ತುಂಬಿದೆ .. 

ಘಂಟಸಾಲ ಅವರು ಹಾಡಿದ್ದು ಅಲ್ಲದೇ ಸಂಗೀತ ನಿರ್ದೇಶಕರು ಕೂಡ .. ಸೋರಟ್ ಅಶ್ವಥ್, ಕು ರಾ ಸೀತಾರಾಮ ಶಾಸ್ತ್ರಿ ಹಾಡುಗಳನ್ನು ಬರೆದಿದ್ದಾರೆ.  ಘಂಟಸಾಲ, ಸುಶೀಲ ಮತ್ತು ಲೀಲಾ ಅವರ ಗಾಯನವಿದ್ದ ಚಿತ್ರಕ್ಕೆ ಸೋರಟ್ ಅಶ್ವಥ್ ಅವರ ಸಂಭಾಷಣೆ ಇದೆ. 

ಶ್ರೀ ರಾಜಲಕ್ಷ್ಮಿ ಪ್ರೊಡಕ್ಷನ್ಸ್ ಅವರ ಲಾಂಛನ .. ಸುಂದರ್ ಲಾಲ್ ನಹತ ದೊಂಡಿ ಅವರ ನಿರ್ಮಾಣ , ನಿರ್ದೇಶನದ ಆಸನದಲ್ಲಿ ಬಿ ವಿಠಲಾಚಾರ್ಯ ಕೂತಿದ್ದಾರೆ. 

ಒಂದು ಪ್ರಾಂತ್ಯದಲ್ಲಿ ರಾಜ ಅಂಗವಿಕಲನೋ, ವಿಕಲಾಂಗನೋ, ಅಥವ ಬುದ್ದಿಮಾಂದ್ಯನೋ ಆಗಿದ್ದರೆ ಆ ಪ್ರಾಂತ್ಯದ ಅಧಿಕಾರ ಹೇಗೆ ದುರಾಡಳಿತಕ್ಕೆ ಸಾಕ್ಷಿಯಾಗುತ್ತದೆ. ಎನ್ನುವುದಕ್ಕೆ ಈ ಚಿತ್ರ ತೋರಿಸುತ್ತದೆ.  ರಾಜ ಕಾಲು ಕುಂಟು.. ಹಾಗಾಗಿ ತನ್ನ ನೆಂಟನಿಗೆ ಅಧಿಕಾರ ಕೊಟ್ಟಿರುತ್ತಾನೆ. ಆತನ  ದುರಾಡಳಿತಕ್ಕೆ ಬೇಸತ್ತು, ಸಿಡಿದೆದ್ದ ಆ ರಾಜ್ಗದ ಒಬ್ಬ ಪ್ರಜೆ ಎದುರು ಬೀಳುತ್ತಾರೆ.. ಅವರೇ ಅಶ್ವಥ್.. ಬಡವರನ್ನು ಸುಲಿಯುತ್ತಿದ್ದ ರಾಜ್ಯದ ದುರಾಡಳಿತಕಾರಿ ಉದಯಕುಮಾರ್..... 

ಅನವರತ ಅಶ್ವಥ್ ಅವರನ್ನು ಕಾಡುತ್ತಲೇ ಇರುತ್ತಾರೆ.  ಅಶ್ವಥ್ ಅವರ ಅಣ್ಣ ರಾಮಚಂದ್ರಶಾಸ್ತ್ರೀ ಅವರು ತಮ್ಮನ್ನು ಈ ಅಜ್ಞಾತವಾಸದಿಂದ ಹೊರಗೆ ತರಲು.. ಅರಸನ ಮುಂದೆ ಬಂದು ನಿಂತು.. ರಾಜ್ಯದ ದುರಾಡಳಿತದಿಂದ ಬೇಸತ್ತು.. ಮತ್ತೆ ಆತನ ಹೆಂಡತಿ ಮಕ್ಕಳನ್ನು ಜೀವಸಹಿತ ಸುಟ್ಟು ಹಾಕಿದ್ದು.. ಈ ಆಕ್ರೋಶದ ಕಾರಣ ಎಂದು ತಿಳಿಸುತ್ತಾರೆ.. ಆಗ ಅರಸ.. ತಮ್ಮನನ್ನು ಕರೆದು ತಾ.. ನ್ಯಾಯ ಅನ್ಯಾಯಗಳ ವಿಶ್ಲೇಷಣೆ ಮಾಡಿ ನ್ಯಾಯ ಕೊಡುತ್ತೇವೆ ಎಂಬ ಭರವಸೆಯನ್ನು ಹೊತ್ತು ತಮ್ಮನನ್ನು ಕರೆದುಕೊಂಡು ಬರಲು ಹೋಗುತ್ತಾರೆ.. ಆದರೆ ಅರಸನ ಅಧಿಕಾರ ವಹಿಸಿಕೊಂಡಿದ್ದಾತ ಅಣ್ಣ ತಮ್ಮ ಇಬ್ಬರನ್ನು ಭೇಟೆಯಾಡಿ.. ಕೊಲ್ಲಿಸುತ್ತಾನೆ... 

ಇದರಿಂದ ಸಿಡಿದ್ದೆದ್ದ ನಾಯಕನ ಪಾತ್ರದಲ್ಲಿ ರಾಜ್ ಕುಮಾರ್ ಬರುತ್ತಾರೆ... ರಾಜಕುಮಾರಿಯ ದುರಹಂಕಾರ ಅಡಗಿಸಿ, ಅವಳ ಮನಸ್ಸನ್ನು ಪರಿವರ್ತಿಸುತ್ತಾರೆ.. ಇದರ ಜೊತೆಯಲ್ಲಿ ಒಂದು ಪುಟ್ಟ ಸೈನ್ಯವನ್ನು ಸಿದ್ಧಪಡಿಸುತ್ತಾರೆ.. ಅರಾಜಕತೆಯನ್ನು ಸಮರ್ಪಕವಾಗಿ ಮೆಟ್ಟಿ ನಿಂತು ಜನಜಾಗೃತಿಯನ್ನು ಮೂಡಿಸಲು ಹೆಣಗುತ್ತಾರೆ ಮತ್ತು ಅದರಲ್ಲಿ ಯಶಸ್ವಿಕೂಡ ಆಗುತ್ತಾರೆ. 

ಅವರ  ಪಾತ್ರಾಭಿನಯ ಅನ್ನೋಣವೋ.. ಅಥವ ಪರಕಾಯ ಪ್ರವೇಶ ಎನ್ನೋಣವೋ ಗೊಂದಲ ಮೂಡುತ್ತದೆ.. ಅಂದರೆ ಅಷ್ಟು ವಿಭಿನ್ನವಾಗಿ ಅಭಿನಯ ನೀಡಿದ್ದಾರೆ.. ಆ ದೇಹರ್ದಾಡ್ಯ.. ಹೊಡೆದಾಟದ ದೃಶ್ಯದಲ್ಲಿ ತೋರಿಸುವ ಚಾಕಚಕ್ಯತೆ.. ಹಾಡುಗಳಲ್ಲಿ ತೋರುವ ತನ್ಮಯತೆ, ಆ ತುಂಟತನ.. ನಾಯಕಿಯ ದರ್ಪ ಇಳಿಸುವಾಗ ಅವರ ಚಾಣಕ್ಯತನ, ಹಾಸ್ಯ ದೃಶ್ಯಗಳಲ್ಲಿ ಅವರು ತೋರುವ ಸಮಯ ಪ್ರಜ್ಞೆ.. ಅದ್ಭುತವೆನಿಸುತ್ತದೆ. 


ನರಸಿಂಹರಾಜು ಮತ್ತು ಬಾಲಕೃಷ್ಣ ಅವರ ಹಾಸ್ಯ ದೃಶ್ಯಗಳು ನಗೆಹೊನಲನ್ನು ಹರಿಸುತ್ತದೆ.. ಅವರಿಬ್ಬರ ಜುಗಲ್ ಬಂದಿ ಸೂಪರ್ ಎನಿಸುತ್ತದೆ.. ಸಂಭಾಷಣೆ, ಆ ಮಾತುಗಳಿಗೆ ಬೇಕಾದ ಆಂಗೀಕ ಅಭಿನಯ.. ಸೂಪರ್.. 


ಲೀಲಾವತಿ ಮುದ್ದಾಗಿ ಕಾಣುವುದಷ್ಟೇ ಅಲ್ಲದೆ.. ದರ್ಪದ ರಾಜಕುಮಾರಿಯಾಗಿ ಅವರ ಅಭಿನಯ ವಾಹ್ ಎನಿಸುತ್ತದೆ.. ಹಾಡುಗಳಲ್ಲಿ ಅವರ ಅಭಿನಯ ಸೊಗಸು.. 


ಅಂಗವಿಕಲ ರಾಜನಾಗಿ ನಾಗೇಂದ್ರ ರಾಯರು, ಅವರ ಭಂಟನಾಗಿ ಹನುಮಂತಾಚಾರ್, ರಾಜಕುಮಾರ್ ಅವರ ಅಪ್ಪನ ಪಾತ್ರದಲ್ಲಿ ರಾಮಚಂದ್ರಶಾಸ್ತ್ರಿ, ಅವರ ಮಡದಿ ಜಯಶ್ರೀ, ಹಾಗೆಯೇ ಕ್ರಾಂತಿಕಾರಿಯ ಪಾತ್ರದಲ್ಲಿ ಅಶ್ವಥ್.. ನರಸಿಂಹರಾಜುವನ್ನು ಕಾಡುವ ಪಾತ್ರದಲ್ಲಿ ಎಂ ಎನ್ ಲಕ್ಷ್ಮೀದೇವಿ, ಸಣ್ಣ ಪುಟ್ಟ ಪಾತ್ರದಲ್ಲಿ ಕಮೆಡಿಯನ್ ಗುಗ್ಗು, ರತ್ನಾಕರ್ ಚಿಕ್ಕದಾದರೂ ಚೊಕ್ಕದಾಗಿ ಅಭಿನಯಿಸಿದ್ದಾರೆ. 

ರಾಜ್ ಕುಮಾರ್ ಅವರ ಎದುರಾಳಿ ಪಾತ್ರದಲ್ಲಿ ಉದಯಕುಮಾರ್ ಮಸ್ತ್ ಅಭಿನಯ ನೀಡಿದ್ದಾರೆ. ಆ ಪಾತ್ರಕ್ಕೆ  ಬೇಕಾದ ಗಡುಸು ಸಂಭಾಷಣೆ.. ಆ ಕ್ರೋಧಕ್ಕೆ ತಮ್ಮ ಬುದ್ದಿಯನ್ನು ಕೊಟ್ಟಾಗ ಬೇಕಾದ ಅಭಿನಯ ಕೊಟ್ಟಿರುವುದು ಖುಷಿ ಕೊಡುತ್ತದೆ.. 





ರಾಜ್ ಮತ್ತು ಉದಯ್ ಅವರ ಹೊಡೆದಾಟದ ಒಂದು ದೃಶ್ಯದಲ್ಲಿ ಕನ್ನಡಿಯ ಪ್ರತಿಬಿಂಬದ ಅಭಿನಯ..   ಇದೊಂದು ನಿರ್ದೇಶಕರ ಅದ್ಭುತ ಕಲ್ಪನೆ ಸಾಕಾರಗೊಂಡ ದೃಶ್ಯವಿದು.. ಅದರಲ್ಲಿ ರಾಜ್ ಮತ್ತು ಉದಯ ಅವರ ಅಭಿನಯ ಅದ್ಭುತ.. 



ಜಲಪಾತದ ಹತ್ತಿರದ ಹೊಡೆದಾಟದ ದೃಶ್ಯ ಚಿತ್ರೀಕರಣ ಅದ್ಭುತವಾಗಿ ಮೂಡಿಬಂದಿದೆ.. 











ಒಂದು ಜಾನಪದ ಕಥಾನಕವನ್ನು ಅಷ್ಟೇ ಸೊಗಸಾಗಿ ಸಾಹಸಮಯ ಚಿತ್ರವನ್ನಾಗಿ ಮಾಡಿ ಜನರ ಮುಂದೆ ತಂದು ನಿಲ್ಲಿಸಿ ಗೆಲ್ಲಿಸುವುದು ಸುಲಭದ ಮಾತಲ್ಲ.. ಸಂಭಾಷಣೆ, ಹೊಡೆದಾಟ, ಹಾಡುಗಳು, ಹಿನ್ನೆಲೆ ಸಂಗೀತ, ಛಾಯಾಗ್ರಹಣ ಎಲ್ಲವೂ ಸೊಗಸು.. 

ಬಹಳಕಾಲವಾದ ಮೇಲೆ ರಾಜ್ ಕುಮಾರ್ ಅವರ ಚಿತ್ರಗಳ ಜೈತ್ರಯಾತ್ರೆಯನ್ನು ಹೊತ್ತು ಮುಂದುವರೆಸುತ್ತಿದ್ದೇನೆ.. ಆದಷ್ಟು ಬೇಗ ನೂರು ಚಿತ್ರಗಳನ್ನು ಈ ವರ್ಷ ಪೂರೈಸುವ ಹಂಬಲವಿದೆ.. ಇದಕ್ಕೆ ಅಣ್ಣಾವ್ರ ಆಶೀರ್ವಾದ ಇರಲಿ ಎಂದು ಬೇಡುವೆ.. !!!

No comments:

Post a Comment