"ಇದ್ರೆ ಸುಟ್ಟೇನು.. ಸತ್ರೆ ಅತ್ತೇನು... ... ಇರೋತನಕ ಗೋಳು ಹುಯ್ಕೊಂಡು ಹೋದ ಮೇಲೆ ಅಳ್ತೀಯಲ್ಲ ಮಮ್ಮಿssssss "
"ಓ ಮೈ ಗಾಡ್ ಮಮ್ಮಿ ನಾಡಿ ಆಡ್ತಾನೆ ಇಲ್ಲಾ.. ಸಿಂಫೊನಿ ಹಾಡ್ತಾ ಇದೆ"
""ಓ ಮೈ ಗಾಡ್ ದೊಡ್ಡ ಆಪರೇಷನ್.. ಬಹಳ ಹೆಣಗಬೇಕಾಯ್ತು.. ಜೀವ ಉಳಿದಿದ್ದೆ ಪವಾಡ.. ಎರಡು ಮೊಳ ಕಟ್ ಮಾಡಿ ಬದುಕಿಸೋಕೆ ಬಹಳ ಕಷ್ಟ ಆಯಿತು.. "
"ಯಾರ ಜೀವನೋ.. ಹೇಗಿದ್ದಾರೆ ಪೇಷಂಟ್" ಎಂದಾಗ ಕುಯ್ಯೋ ಮರೋ ಅಂತ ಕೂಗುತ್ತಾ ನಾಯಿ ಹೋಗುತ್ತೆ .. ಅಂದರೆ ನಾಯಿಯ ಮೊಂಡ ಬಾಲವನ್ನು ಕತ್ತರಿಸಿರುತ್ತಾನೆ..
"ಏ ಬೇಕೂಫ ಕತ್ತೆಗ್ಯಾರೋ ಹೆಸರಿಡ್ತಾರೆ.. ನಾನು ತಿರುಗಣೆಗೆ ಔಷಧ ಬೇಕು ಅಂದಿದ್ದಕ್ಕೆ.. ಫಾಲಿಡಾಲ್ ಕೊಟ್ಟೆ.. "
"ಅವ್ವಾ ,, ಚಿಕ್ಕ ಬುದ್ದಿಯವರಿಗೆ ಈ ಡಾಕ್ಟರಿ ಬಿಡೋಕೆ ಹೇಳಿ.. ಅಕ್ಕ ಪಕ್ಕದವರು ಬದುಕಿಕೊಳ್ಳಿ"
"ಮಮ್ಮಿ.. ನಾ ಹೋದ ವರ್ಷ ಹೇಳಿದ್ದೆ.. ಈ ವರ್ಷ ಡಾಕ್ಟರ್ ಅಂತ ಬೋರ್ಡ್ ಬರುತ್ತೆ ಅಂತ.. ನೋಡಿಲ್ಲಿ ಬೋರ್ಡ್ ಬಂದಿದೆ.. ನೋಡು ಪೇಶಂಟುಗಳು.. ಇವನ ಕೈ ತೆಗೆದು ಅವನಿಗೆ ಹಾಕ್ತೀನಿ, ಅವನ ಕಣ್ಣು ತೆಗೆದು ಇವನಿಗೆ ಹಾಕ್ತೀನಿ.. ಅವನ ಕಿಡ್ನಿ ಇವನಿಗೆ.. ಒಟ್ಟಿನಲ್ಲಿ ಬದುಕಿದರೆ ಬಿಕ್ಷ.. ಸತ್ತರೆ ಮೋಕ್ಷ... "
ಇವೆಲ್ಲಾ ಬಾಲಣ್ಣ ಆರ್ಥಾತ್ ಬಾಲಕೃಷ್ಣ ಅವರ ಪಂಚಿಂಗ್ ಸಂಭಾಷಣೆಗಳು.. ಪಾತ್ರ ಚಿತ್ರಕ್ಕೆ ಅವಶ್ಯಕತೆ ಇದೆಯೋ ಇಲ್ಲವೋ ಅನ್ನಿಸುವುದಕ್ಕಿಂತ ಚಿತ್ರದ ಉತ್ತರಾರ್ಧದಲ್ಲಿ ತಾವೇ ಹೆಣೆದುಕೊಂಡು ಅಭಿನಯಿಸಿರುವ ಈ ಮೇಲಿನ ಸನ್ನಿವೇಶಗಳು ಅದ್ಭುತ!
ಸಿರಿವಂತರ ಮನೆಯಲ್ಲಿ ಬೆಳೆಯುವ ಮಗು.. ಎಲ್ಲಾ ಅವಕಾಶಗಳಿದ್ದರೂ ಬೇಜವಾಬ್ಧಾರಿಯಾಗಿ ಬೆಳೆಯೋದನ್ನು ಪರಿಣಾಮಕಾರಿಯಾಗಿ ಚಿತ್ರೀಕರಿಸಿದ್ದಾರೆ ನಿರ್ದೇಶಕ ಕು. ರ. ಸೀತಾರಾಮಶಾಸ್ತ್ರಿ.
ಮಗುವನ್ನು ಹೆತ್ತೊಡನೆ ನಿಧಾನವಾಗುವ ತಾಯಿ.. ಹೆಂಡತಿಯನ್ನು ಅಪರಿಮಿತವಾಗಿ ಪ್ರೀತಿಸುವ ಗಂಡ.. ಜಿಗುಪ್ಸೆಯಾಗಿ ದೇಶಾಂತರ ಹೋಗಲು ತೀರ್ಮಾನಿಸಿದಾಗ ಆತನ ಮಾವ.. ದೊಡ್ಡ ಮನಸ್ಸು ಮಾಡಿ, ತನ್ನ ಅಳಿಯ ಕೆಲಸ ಮಾಡುವ ಕಚೇರಿಯ ಮಾಲೀಕರ ಮಗಳನ್ನು ಮದುವೆಯಾಗಲು ಒತ್ತಾಯಿಸಿ ಯಶಸ್ವಿಯಾಗುತ್ತಾನೆ.
ಆದರೆ ಮೊದಲ ಹೆಂಡತಿಯ ಬಗ್ಗೆ ಹೇಳಕೂಡದೆಂದು, ಮತ್ತೆ ಜನಿಸಿದ ಮಗುವಿನ ಖರ್ಚು ವೆಚ್ಚ ನೋಡಿಕೊಳ್ಳುವೆನೆಂದು ಆ ಮಾಲೀಕ ಒಪ್ಪಿಕೊಂಡ ಮೇಲೆ ಮದುವೆ ನೆಡೆಯುತ್ತದೆ..
ತಬ್ಬಲಿ ಮಗುವನ್ನು ತಾತ ಚೆನ್ನಾಗಿ ಬೆಳೆಸಿ ವಿದ್ಯಾವಂತನನ್ನಾಗಿ ಮಾಡುತ್ತಾನೆ.. ಕಾಲೇಜು ವ್ಯಾಸಂಗಕ್ಕಾಗಿ ತನ್ನ ಅಳಿಯನ ಪರಿಚಯಸ್ಥರ ಮನೆಯಲ್ಲಿ ಬಿಟ್ಟು ಓದಿಸಲು ಏರ್ಪಾಡು ಮಾಡುತ್ತಾನೆ.. ಆದರೆ ವಿಧಿಯ ಆಟ ಬೇರೆಯದೇ ಆಗಿರುತ್ತದೆ..
ಹಳ್ಳಿಯ ವೇಷಭೂಷಣಕ್ಕೆ ಮುಕ್ತಿ ಕೊಟ್ಟು ನಗರೀಕರಣ ಆಗುವ ಆತನ ವಯೋಸಹಜ ಗುಣ.. ಆತ ತಂಗಿದ್ದ ಮನೆಯ ಮಗಳ ಮನಸ್ಸಿಗೆ ಶರಣಾಗತವಾಗುತ್ತದೆ.. ನಂತರ ಮನೆಯವರತಿರಸ್ಕಾರ. ಆದರೆ ಪ್ರೀತಿಯ ಉತ್ಕಟತೆ ಮದುವೆಯಾಗುವತ್ತ ಸಾಗುತ್ತದೆ.. ಜೊತೆಗೆ ಮನೆಯವರ ತಿರಸ್ಕಾರದಿಂದ ಮನೆ ಬಿಟ್ಟು ಹೊರಗೆ ಹೋಗುವ ಸಂದರ್ಭ ಬರುತ್ತದೆ.. ಇತ್ತ ತವರು ಮನೆಯವರು ಕೈ ಬಿಟ್ಟ ಮೇಲೆ.. ಹಳ್ಳಿಗೆ ತನ್ನ ತಾತನ ಮನೆಗೆ ಬಂದಾಗ.. ಸಮಾಜದ ಕಟ್ಟು ಪಾಡುಗಳ ಬಗ್ಗೆ ಅಪಾರವಾದ ಕಾಳಜಿಯಿರುವ ತಾತ ಹುಸಿಮುನಿಸಿನಿಂದ ಗದರಿದರೂ, ಕಡೆಗೆ ಮೊಮ್ಮಗನ ಮನೆಯಲ್ಲಿ ಇರಲು ಹೇಳುತ್ತಾನೆ..
ತನ್ನ ಮೊಮ್ಮಗನ ಜೀವನ ಒಂದು ಘಟ್ಟ ತಲುಪಿದೆ.. ಮತ್ತೆ ಆತನ ತಂದೆ ಮುಂದಿನ ಭವಿಷ್ಯವನ್ನು ಗಮನಿಸುತ್ತೇನೆ ಎಂದು ಮಾತು ಕೊಟ್ಟ ಮೇಲೆ.. ತನ್ನ ಕಾಯಕವಾಯಿತು ಎಂದು ದೇಹತ್ಯಾಗ ಮಾಡುತ್ತಾನೆ ತಾತ..
ಮುಂದೆ ಕಷ್ಟ ಕೋಟಲೆಗಳು .. ತವರು ಮನೆಯವರ ತಿರಸ್ಕಾರ, ಅಂತಸ್ತಿನ ಭೂತವಿಡಿದ ತವರು ಮನೆಯವರು, ಆ ಹಂತದಲ್ಲಿ ತಾನು ಸ್ಥಿತಿವಂತನಾಗದ ಹೊರತು ಈ ಮನೆಗೆ ಕಾಲು ಇಡುವುದಿಲ್ಲ ಎಂದು ಶಪಥ.. ಮಗಳು ಕೂಡ ತನ್ನ ಗಂಡನಿಗೆ ಗೌರವ ಸಿಕ್ಕದ ಹೊರತು ತಾನು ತವರು ಮನೆಗೆ ಕಾಲಿಡುವುದಿಲ್ಲ ಪ್ರತಿಜ್ಞೆ..
ಚಿತ್ರದ ಅಂತಿಮ ಹಂತದಲ್ಲಿ ಎಲ್ಲವೂ ಸುಸೂತ್ರ, ಇತ್ತ ಮಗನಿಗೆ ಅಪ್ಪ ಸಿಗುತ್ತಾರೆ.. ಮಗ ಲಕ್ಷಾಧಿಕಾರಿಯಾಗುತ್ತಾನೆ, ಎಲ್ಲವೂ ಸುಗಮವಾಗುತ್ತದೆ.. ಸುಖಾಂತ್ಯವಾಗುತ್ತದೆ..
ಬಹುಶಃ ಎಲ್ಲರ ಬದುಕಲ್ಲೂ ನೆಡಯುವ ಸಾಂಸಾರಿಕ ಕಥಾವಸ್ತುವನ್ನು ಅಷ್ಟೇ ಅಚ್ಚುಕಟ್ಟಾಗಿ ಬೋರ್ ಹೊಡೆಸದೆ, ಚುರುಕಾಗಿ ಚಿತ್ರವನ್ನು ಕೊಂಡೊಯ್ಯುವಂತೆ ಕಥೆ, ಚಿತ್ರಕತೆ, ಸಂಭಾಷಣೆ ಜೊತೆಗೆ ನಿರ್ದೇಶನ ಮಾಡಿರುವ ಕು ರ ಸೀತಾರಾಮಶಾಸ್ತ್ರಿ ಮೆಚ್ಚುಗೆಗಳಿಸುತ್ತಾರೆ.. ಮೇಲೋ ಡ್ರಾಮಾ ಇದ್ದರೂ ನೋಡುವಂತೆ ಹೆಣೆದಿರುವ ಅವರ ಕುಸುರಿ ಕೆಲಸ ಇಷ್ಟವಾಗುತ್ತದೆ.
ಬಾಲಕೃಷ್ಣ ಅವರ ಪುಟ್ಟ ಪಾತ್ರ ಆದರೆ ಅವರಿಗೆ ಕೊಟ್ಟಿರುವ ಸ್ವತಂತ್ರ ಎಂಥಹ ಕಲಾವಿದ ಇವರು ಎಂಬುದನ್ನು ತೋರಿಸುತ್ತದೆ.. ಅವರ ಸಂಭಾಷಣೆ ವೈಖರಿ, ಭಾವ ಭಂಗಿ, ಪೇಟೆಯವರ ನೆಡೆನುಡಿ, ಹಾಗೆಯೇ ಆರಂಭದಲ್ಲಿ ಹೇಳಿರುವ ಅವರ ಹಾಸ್ಯ ಸಂಭಾಷಣೆಗಳು.. ಪ್ರಾಯಶಃ ಅವರ ಚಿತ್ರ ಬದುಕಿನಲ್ಲಿ ಸಂಪೂರ್ಣ ಹಾಡು ಅವರ ಮೇಲೆ ಚಿತ್ರೀಕರಣವಾಗಿರೋದು, ಮತ್ತೆ ಅದಕ್ಕೆ ಅವರ ಲಯಬದ್ಧವಾದ ನೃತ್ಯ ಇಷ್ಟವಾಗುತ್ತದೆ.. ವೈದ್ಯನ ಪಾತ್ರದಲ್ಲಿನ ಪಜೀತಿಗಳನ್ನು ಬಾಲಕೃಷ್ಣ ಅವರೇ ರಚಿಸಿದ್ದಾರೆ ಅನ್ನೋದು ವಿಶೇಷ ಮತ್ತು ಅದಕ್ಕೆ ಅವರಿಗೆ ಈ ಶ್ರೇಯಸ್ಸು ಕೊಟ್ಟಿರುವುದು ಟೈಟಲ್ ಕಾರ್ಡಿನಲ್ಲಿ ಬಾಲಣ್ಣ ಅವರ ಹೆಸರು ತೋರಿಸಿರೋದು ವಿಶೇಷ.
ಅಶ್ವಥ್ ಸಂಯಮ ಪಾತ್ರ.. ಪ್ರತಿ ದೃಶ್ಯದಲ್ಲೂ ಅವರು ತೋರುವ ಪ್ರಬುದ್ಧ ಅಭಿನಯ, ಕೆಲವು ದೃಶ್ಯಗಳಲ್ಲಿ ತೋರುವ ಮುಖಾಭಿನಯ ಆಹಾ ...ಅದ್ಭುತ ಕಲಾವಿದ..
ತಾತನ ಪಾತ್ರದಲ್ಲಿ ಈಶ್ವರಪ್ಪ.. ಆ ಮಾತಿನ ಸೊಗಡು, ಹಳ್ಳಿಯ ಪ್ರಮುಖನ ಗತ್ತು, ಹಾಗೆಯೇ ಹಠ ಮಾಡಿದರೂ ಪ್ರೀತಿ ತೋರಿಸುವ ಅವರ ಮಾತುಗಳು.. ಇಷ್ಟವಾಗುತ್ತದೆ..
ಜಯಶ್ರೀ ಇವರ ಬಗ್ಗೆ ಹೇಳುವುದೇ ಬೇಡ.. ತಾಯಿ ಪಾತ್ರಕ್ಕೆ ಸರಿಯಾದ ಕಲಾವಿದೆ.. ಮಗಳು ದೂರವಾದಾಗ ತೋರುವ ತಳಮಳ.. ಮತ್ತೆ ತನ್ನ ಆರೋಗ್ಯ ಕೆಟ್ಟಾಗೂ ಕೂಡಾ.. ವೈದ್ಯರು ಉದ್ವೇಗಗೊಳ್ಳಬಾರದು ಎಂದು ಹೇಳಿದರೂ ಮಗಳ ಮೇಲಿನ ಮಮಕಾರದ ಆ ಅಭಿನಯ.. ಅಭಿನಯ ಅನ್ನಿಸೋದೇ ಇಲ್ಲ.. ಅಷ್ಟು ನೈಜವಾಗಿದೆ .
ಪುಟ್ಟ ಪಾತ್ರದಲ್ಲಿ ನರಸಿಂಹರಾಜು ಮಿಂಚಿದ್ದಾರೆ.. ಅಷ್ಟೊಂದು ಅವರ ಪಾತ್ರಕ್ಕೆ ಒತ್ತಿಲ್ಲವಾದರೂ ಚಿತ್ರದ ಅಂತಿಮ ದೃಶ್ಯಗಳಲ್ಲಿ ಅವರ ಲೀಲಾಜಾಲವಾದ ಅಭಿನಯಸೊಗಸು .
ಸಮವಯಸ್ಕರಾದರೂ ಹಿರಿಯನ ಪಾತ್ರದಲ್ಲಿ ಉದಯಕುಮಾರ್ ಅಬ್ಬರಿಸುತ್ತಾರೆ.. ಮಾವನಾಗಿ, ಮಗಳ ತಂದೆಯಾಗಿ, ಸಮಾಜದ ಸಿರಿವಂತರ ಗತ್ತಿಗೆ ಮಾದರಿಯಾಗಿ ನಿಲ್ಲುತ್ತಾರೆ.. ಸಂಭಾಷಣೆಯಲ್ಲಿ, ಮೊಗದಲ್ಲಿ ತೋರುವ ಆ ಪ್ರಾಮಾಣಿಕ ಅಹಂ ಇಷ್ಟವಾಗುತ್ತದೆ..
ಆರ್ ಟಿ ರಮಾ.. ಪುಟ್ಟ ಹುಡುಗಿಯಾಗಿ ಕಂಡರೂ, ಅಶ್ವತ್ ಅವರ ಮಡದಿ ಪಾತ್ರದಲ್ಲಿ, ಸಿರಿತನದ ಸೊಕ್ಕಿನಲ್ಲಿ ಮಿಂಚುತ್ತಾರೆ..
ಸಿರಿವಂತರ ಮಗಳಾಗಿ ಆರಂಭದಲ್ಲಿ ತುಸು ಧೋರಣೆ ತೋರಿಸಿದ ಪಾತ್ರವಾದರೂ ಬರುತ್ತಾ ಬಡತನದ ಬೇಗೆಗೆ ತತ್ತರಿಸಿದರೂ ಜಗ್ಗದ ಕುಗ್ಗದ ಪಾತ್ರಾಭಿನಯದಲ್ಲಿ ಲೀಲಾವತಿ ಗೆಲ್ಲುತ್ತಾರೆ. ಕಪ್ಪು ಬಿಳುಪಿನ ವರ್ಣದಲ್ಲಿ ಅವರ ಮೊಗ ನೋಡಿದಷ್ಟು ಅಂದ
ಏನ್ ಶ್ರೀ ನನ್ನ ಚಿತ್ರದ ಬಗ್ಗೆ ಬರೆಯುತ್ತಾ.. ನನ್ನನ್ನೇ ಮರೆತಿದ್ದೀರಾ ಅಂತ ರಾಜ್ ಕುಮಾರ್ ಕೇಳಿದಂತೆ ಭಾಸವಾಯಿತು..
ಹಳ್ಳಿ ಹುಡುಗನ ವೇಷ, ಜುಟ್ಟು, ದಟ್ಟಿ ಪಂಚೆ ಅದಕ್ಕೆ ಬೇಕಾದ ಸಮಯಮವಾದ, ಸಂಕೋಚವುಳ್ಳ ಸಂಭಾಷಣೆ,.. ಆ ಮೊಗದಲ್ಲಿ ತಂದುಕೊಳ್ಳುವ ಆ ಮುಗ್ಧತೆ.. ನೋಡಿ ನಲಿಯಬೇಕು.. ಆಗಲೇ ಸುಮಾರು ಹತ್ತು ವರ್ಷಗಳಲ್ಲಿ ನಲವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದೀನಿ ಎನ್ನುವ ಎಳ್ಳಷ್ಟೂ ದರ್ಪವಿಲ್ಲದೆ, ಸಾಮಾನ್ಯನಲ್ಲಿ ಸಾಮಾನ್ಯನಾಗಿ ಅಭಿನಯಿಸುವ ಪಾತ್ರವಾದರೂ ಸರಿ ಅಭಿನಯಿಸಿದಷ್ಟೇ ನನ್ನ ಕರ್ತವ್ಯ ಎನ್ನುವ ಮನೋಭಾವದಲ್ಲಿರುವ ಅವರ ಅಭಿನಯ ನೋಡೋದೇ ಖುಷಿ..
ಸಂಕಷ್ಟಗಳು ಒಂದಾದ ಮೇಲೆ ಒಂದು ಬಂದರೂ ಕುಗ್ಗದೆ, ಜೀವನ ಸಾಗಿಸಲು ಹೆಂಡತಿಯ ಆಭರಣಗಳನ್ನು ಮಾರಿ ಬದುಕುವ ಸ್ಥಿತಿ ಬಂದಾಗ ಅವರು ತೋರುವ ಅಭಿನಯ ವಾಹ್ .. ತನ್ನ ಮಾವನಿಗೆ ಸವಾಲು ಹಾಕಿ ಬಂದ ಮೇಲೆ.. ತನ್ನ ಅಪ್ಪನನ್ನು ಉಳಿಸಬೇಕಾದ ವೈದ್ಯರು ತನ್ನ ಅತ್ತೆಯ ಯೋಗಕ್ಷೇಮ ನೋಡುತ್ತಿದ್ದಾರೆ .. ಅತ್ತೆಗೆ ತಮ್ಮ ಮಗಳನ್ನು ಕಾಣುವ ಹಂಬಲ.. ಆದರೆ ಲಕ್ಷಾಧಿಕಾರಿಯಾಗದೆ ತಾನು ಮಾವನ ಮನೆಗೆ ಹೋಗಲಾರೆ.. ಆದರೆ ಮಾವನ ಮನೆಗೆ ಹೋಗಬೇಕಾದರೆ ತನ್ನ ಅಪ್ಪ ಗುಣವಾಗಬೇಕು.. ಗುಣಪಡಿಸುವ ವೈದ್ಯರು ತನ್ನ ಅತ್ತೆಯನ್ನು ಗಮನಿಸುತ್ತಿದ್ದಾರೆ ಈ ರೀತಿಯ ವಿಚಿತ್ರ ಸನ್ನಿವೇಶವನ್ನು ಹೆಣೆದಿರುವ ನಿರ್ದೇಶಕರ ಮನಸ್ಸಿಗೆ ಅನಿಸಿದಂತೆ ರಾಜ್ ಕುಮಾರ್ ಅವರ ಅಭಿನಯ ಕಳೆಗಟ್ಟುತ್ತದೆ.
ಸರಳ ಚಿತ್ರವೆನಿಸಿದರೂ ಹದಭರಿತ ಅಭಿನಯ.. ನವಿರಾದ ಹಾಡುಗಳು.. ಹೌದು ಹಾಡುಗಳ ಬಗ್ಗೆ ಹೇಳಲೇ ಬೇಕು..
ಚಿತ್ರದ ಟೈಟಲ್ ಕಾರ್ಡ್ ತೋರಿಸುವ ಭಿನ್ನತೆ.. ಪರದೆಯ ಹಾಗೆ ಸಾಗುತ್ತಾ ಮೇಲಕ್ಕೆ ಹೋಗುವ ಶೈಲಿ ನಾನು ಆಗಿನ ಕಾಲದ ಚಿತ್ರಗಳ ನೋಡಿದರಲ್ಲಿ ವಿಶೇಷ ಅನಿಸಿತು.
ಕರುನಾಡ ನಾಡ ಗೀತೆಯಾಗಿರುವ ಶ್ರೀ ಕುವೆಂಪುರವರ "ಜಯ ಭಾರತ ಜನನಿಯ ತನು ಜಾತೆ" ವಿಭಿನ್ನ ರಾಗ ಹಾಗೂ ಸಂಗೀತದ ಹಿನ್ನೆಲೆಯಲ್ಲಿ ಸುಂದರವಾಗಿ ಮೂಡಿಬಂದಿದೆ. ಪಿ ಬಿ ಎಸ್ ಜೀವ ತುಂಬಿ ಹಾಡಿದ್ದಾರೆ
ತುಟಿಯ ಮೇಲೆ ತುಂಟ ಕಿರು ನಗೆ ಪ್ರೇಮಿಗಳ ಮಧುರ ಪ್ರಣಯದ ಗೀತೆಯಾಗಿದೆ.
"ಲವ್ ಲವ್ ಎಂದರೇನು" ಲವ್, ಒಲವು, ಕಾದಲ್ ಹೀಗೆ ಎಲ್ಲಾ ಪದಗಳನ್ನು ಸೇರಿಸಿಕೊಂಡು ರಚಿಸಿದ ಹಾಡಾಗಿದೆ.. ಬಾಲಣ್ಣ ಅವರ ನೃತ್ಯ ಈ ಹಾಡಿನ ವಿಶೇಷತೆ..
"ಸಿರಿತನ ಬೇಕೇ ಬಡತನ ಸಾಕೆ" ಬವಣೆಯ ಬದುಕನ್ನು ಪ್ರೇಮಮಯವಾಗಿ ನೋಡುವ ಶೈಲಿಯ ಗೀತೆಯಾಗಿದೆ
"ಏಸು ನದಿಗಳ ದಾಟಿ" ಈ ಹಾಡು ಗಂಡನ ಹೆಸರನ್ನು ಹೆಂಡತಿಯೂ, ಹೆಂಡತಿಯ ಹೆಸರನ್ನು ಗಂಡನ ಬಾಯಲ್ಲಿ ಕವಿತ್ವದಲ್ಲಿ ಹೇಳಿಸುವ ಹಳ್ಳಿ ಸೊಗಡಿನ ಹಾಡಾಗಿದೆ..
"ಮರೆಯದ ಮಾತು" ಇನ್ನೊಂದು ಸೊಗಸಾದ ಹಾಡಾಗಿದೆ
ಪಿ ಬಿ ಶ್ರೀನಿವಾಸ್, ಪಿ ಸುಶೀಲ, ಎಸ್ ಜಾನಕೀ, ಜಮುನಾರಾಣಿ, ಬಿ ಆರ್ ಲತಾ, ಸರೋಜಿನಿ, ಪಾಣಿಗ್ರಾಹಿ ಹಾಗೂ ಎಲ್ ಆರ್ ಈಶ್ವರಿ ಅವರ ಗಾನ ಪ್ರತಿಭೆಯುಳ್ಳ ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿರುವುದು ಸಂಗೀತ ಲೋಕದ ತಾರೆ ವಿಜಯಭಾಸ್ಕರ್.
ರಾಜ್ ಕುಮಾರ್, ಉದಯಕುಮಾರ್, ಅಶ್ವಥ್, ಬಾಲಕೃಷ್ಣ, ನರಸಿಂಹರಾಜು, ಜಯಶ್ರೀ, ಈಶ್ವರಪ್ಪ, ಆರ್ ಟಿ ರಮಾ, ಲೀಲಾವತಿ ಮತ್ತು ಇತರ ಕಲಾವಿದರನ್ನು ಸೇರಿಸಿಕೊಂಡು ಸರ್ವಮಂಗಳ ಚಿತ್ರ ಲಾಂಛನದಲ್ಲಿ ಬಾಬುನಾಥ್ ಅವರ ಛಾಯಾಗ್ರಹಣದಲ್ಲಿ, ಎನ್ ಬಿ ವತ್ಸಲನ್, ಎನ್ ಜಿ ರಾಮಚಂದ್ರ ಅವರ ನಿರ್ಮಾಣದ ಈ ಚಿತ್ರಕ್ಕೆ ಕಥೆ, ಚಿತ್ರಕತೆ, ಸಂಭಾಷಣೆ ಹಾಡುಗಳನ್ನು ರಚಿಸಿ ನಿರ್ದೇಶನ ಮಾಡಿರುವುದು ಕು ರ ಸೀತಾರಾಮಶಾಸ್ತ್ರಿ.
ಸುಂದರ ಚಿತ್ರರತ್ನವನ್ನು ನೀಡಿರುವ ತಂಡಕ್ಕೆ ನಮಿಸುತ್ತಾ ಇನ್ನೊಂದು ಚಿತ್ರದೊಂದಿಗೆ ಬರೋಣವೇ!!!