Sunday, December 12, 2021

ದೃಶ್ಯ II.. ಒಂದು ಅಪರೂಪದ ದೃಶ್ಯ (2021)

 ನಾನೂ ನೀನೂ ನೆಂಟರಯ್ಯ

ನಮಗೆ ಭೇದ ಇಲ್ಲವಯ್ಯಾ 

ಶ್ರೀ ಶ್ರೀ.. ಏನಾಯ್ತೋ ನಿನಗೆ.. ?

ಗಟ್ಟಿ ಗಟ್ಟಿಯಾದ ದನಿ.. ಅರೆ ಇದು ಚಿರಪರಿಚಿತವಾದ ದನಿ.. ರಾಮಾಚಾರಿಯಿಂದ ಇಲ್ಲಿಯವರೆಗೂ ಕೇಳಿದ ದನಿ.. 

ತಿರುಗಿ ನೋಡಿದೆ.. ಗುಂಗುರು ಗುಂಗುರು ಕೂದಲು.. ಮೊದಲಿದ್ದಷ್ಟು ಮುದ್ದಾದ ಗುಂಗುರು ಕೂದಲಿಲ್ಲದೆ ಹೋದರೂ.. ಆದರೆ ಅದೇ ವಿಧವಾದ ಕೇಶ ವಿನ್ಯಾಸ.. ಅವರ ಕೆನ್ನೆ ತುಂಬಾ ಬೆಳೆಯುವ ಗಡ್ಡದ ಲೈನ್ ನನಗೆ ಬಲು ಇಷ್ಟ.. ಅದರಲ್ಲೂ ಕುರುಚಲು ಗಡ್ಡ ಬಿಟ್ಟು.. ಕಣ್ಣಿಗೆ ಕಪ್ಪು ಕನ್ನಡಕ.. ಅವರಿಗಿಷ್ಟವಾದ ಕಪ್ಪು ಬಣ್ಣದಲ್ಲಿ ಅವರನ್ನು ಕಂಡರೆ.. ಹೋಗಿ ಮುದ್ದಾಡಬೇಕು ಅನ್ನುವಷ್ಟು ಸುಂದರವಾಗಿ ಅಂದೂ, ಇಂದೂ ಕಾಣುತ್ತಾರೆ. ... ಹೌದು ಅದೇ ರವಿಚಂದ್ರನ್.. ಅದೇ ಕನಸುಗಾರ.. ಅದೇ ರವಿ ಮಾಮ.. ಮತ್ತೆ ನಮ್ಮನ್ನು ಸಿನಿಮಾ ಎನ್ನುವ ಅದ್ಭುತ ಲೋಕಕ್ಕೆ ಕರೆದೊಯ್ಯಲು ದೃಶ್ಯ ಎರಡನೇ ಭಾಗ ಚಿತ್ರದಲ್ಲಿ ಮತ್ತೆ ತೆರೆಯ ಮೇಲೆ ಬಂದಿದ್ದಾರೆ.. 

ಅಪ್ಪ  ದೃಶ್ಯಂ ಎರಡನೇ ಭಾಗ ಮಲಯಾಳಂ ಬಂದಿದೆ ಅಪ್ಪ.. ಕೊಡ್ಲಾ ಲಿಂಕ್ ನೋಡ್ತೀರಾ.. OTT ಯಲ್ಲಿ ಬಂದಿದೆ ನೋಡಪ್ಪ.. ಸಕತ್ ಆಗಿದೆ.. 

ಶ್ರೀ ನೋಡಿ ಸಕತ್ ಇದೆ.. ನಿಜವಾಗಿಯೂ ಇಷ್ಟ ಪಡ್ತೀರಾ.. ಸೀಮು ಹೇಳಿದಾಗಲೂ ಮನಸ್ಸು ರವಿ ಮಾಮನನ್ನೇ ಧ್ಯಾನಿಸುತ್ತಾ ಕುಳಿತಿತ್ತು ಇದೆ ಫೆಬ್ರುವರಿಯಲ್ಲಿ.. ನೋಡಿದರೆ ರವಿಮಾಮನ ದೃಶ್ಯ ೨ ನೋಡೋದು.. ಇಲ್ಲವಾದರೆ ನೋಡೋದೇ ಇಲ್ಲ.. ಇದು ನನ್ನ ವೀರ ಪ್ರತಿಜ್ಞೆಯಾಗಿತ್ತು.. 











ಯಾವುದೋ ಒಂದು ಸಂದರ್ಶನ ನೋಡುತ್ತಾ ರವಿಚಂದ್ರನ್ ಅವರ ಸಂದರ್ಶನ ನೋಡಿದೆ.. ಅಲ್ಲಿ ಅತಿ ಉತ್ತಮ ಪ್ರಶ್ನೆಗಳಿಗೆ ಅಷ್ಟೇ ನಿಖರವಾದ ಉತ್ತರ ಕೊಡುತ್ತಿದ್ದರು.. ನನ್ನ ಕಿವಿಗಳು ನೆಟ್ಟಗಾದವು.. ದೃಶ್ಯ ಎರಡನೇ ಭಾಗ ಬರುತ್ತಿದೆ.. ನವೆಂಬರ್ ಒಳಗೆ ಎಂದಾಗ ಮನಸ್ಸಲ್ಲಿ ಕುಣಿದಾಡಿದ್ದೆ.. ಖುಷಿಯಾಗಿತ್ತು.. ನೋಡಲೇ ಬೇಕು ಎನ್ನುವ ಕಾತುರ.. ತವಕ ಇಂದು ಸಾಕ್ಷಾತ್ಕಾರವಾದ ಹಾಗೆ ಕಂಡಿತು.. ಮತ್ತೆ ಅದನ್ನು ಸಾಕ್ಷಾತ್ಕರಿಸಿಕೊಂಡುಬಿಟ್ಟೆ.. 

ಶ್ರೀ ಊಟಕ್ಕಿಂತ ಉಪ್ಪಿನಕಾಯಿ ಜಾಸ್ತಿ ಆಯಿತು ಅದೇನು ಹೇಳಬೇಕು ಅಂದಿದೆಯೋ ಅದನ್ನು ಹೇಳಿ ಮುಗಿಸು ಮಾರಾಯ.. ಪಿಟೀಲು ಕುಯ್ಯಬೇಡ.. ಟಿಪಿಕಲ್ ರವಿಮಾಮನ ಸಂಭಾಷಣೆ ಬಂದಾಗ ಎಚ್ಚರಗೊಂಡೆ.. 

ರವಿ ಮಾಮಾ ಇಂದು ದೃಶ್ಯ ಎರಡನೇ ಭಾಗ ನೋಡಿಬಂದೆ.. ಬಹಳ ಖುಷಿಯಾಯಿತು... ನಿಮ್ಮನ್ನು ಪರದೆಯ ಮೇಲೆ ನೋಡೋದೇ ಒಂದು ಖುಷಿ.. ಎಷ್ಟು ಅದ್ಭುತವಾದ ಪಾತ್ರಾಭಿನಯ.. ನನಗೆ ಅಲ್ಲಿ ರವಿಮಾಮ ಕಾಣದೆ ಒಂದು ಜವಾಬ್ಧಾರಿಯುತ ಅಪ್ಪ, ಮನೆಯ ಯಜಮಾನ. ರಾಜೇಂದ್ರ ಪೊನ್ನಪ್ಪ ಕಂಡಿದ್ದೆ ಹೆಚ್ಚು ..ಇಡೀ ಚಿತ್ರವನ್ನು ಹೆಗಲ ಮೇಲೆ ಹೊತ್ತು ನೆಡೆದಿದ್ದೀರಾ.. ಬಹಳ ಕುಶಿಯಾಯ್ತು.. 

ಹೌದು ಶ್ರೀ ನನಗೂ ಇಷ್ಟವಾದ ಚಿತ್ರವಿದು.. ನಾನು ಮನೆಯಲ್ಲಿ ಹೇಗೆ ಇದ್ದೀನೊ ಚಿತ್ರದಲ್ಲೂ ಹಾಗೆ ಇದ್ದೀನಿ ಹಾಗಾಗಿ ನಾನು ಆ ಪಾತ್ರದೊಳಗೆ ಹೋಗೋದಕ್ಕೆ ಅನುಕೂಲವಾಯಿತು.. ಸಿಂಧು, ಶ್ರೇಯ ಇವರೆಲ್ಲ ಬರಿ ತೆರೆಯ ಮೇಲೆ ಮಕ್ಕಳಲ್ಲ.. ನನ್ನ ಬದುಕಿನಲ್ಲಿ ಬಂದ ನನ್ನ ಮಕ್ಕಳ ಹಾಗೆ ಇದ್ದಾರೆ.. ನನ್ನ ಮಕ್ಕಳ ಬಾಲ್ಯವನ್ನು ನಾನು ನನ್ನ ಚಿತ್ರರಂಗದ ಬಿಡುವಿಲ್ಲದ ಚಟುವಟಿಕೆಯಲ್ಲಿ ನೋಡಲಾಗಲಿಲ್ಲ... ಅದನ್ನು ಈ ಸಿಂಧು, ಶ್ರೇಯ ಮೂಲಕ ಅನುಭವಿಸಿದ್ದೀನಿ.. ಬಹಳ ತೃಪ್ತಿ ಕೊಟ್ಟ ಪಾತ್ರ.. 

ರವಿಮಾಮಾ ನನಗೆ ಬಲು ಇಷ್ಟವಾದ ದೃಶ್ಯ ಎಂದರೆ.. ನೀವು ನಿಮ್ಮ ಮಕ್ಕಳು ಉಪವಾಸ ಇರೋದು ನೋಡಲಾಗದೆ..ಇಬ್ಬರು ಮಕ್ಕಳಿಗೂ ತುತ್ತು ತಿನ್ನಿಸುತ್ತೀರಾ.. ಆಗ ಪಕ್ಕದಿಂದ ಇನ್ನೊಂದು ಕೈ ಬರುತ್ತದೆ.. ಅದು ನಿಮ್ಮ ಮಡದಿಯ ಪಾತ್ರದ ಸೀತಾ.. ಅವರದ್ದು.. ಅವರು ನಿಮಗೆ ತುತ್ತು ತಿನ್ನಿಸುವ ದೃಶ್ಯ.. ನಿಜಕ್ಕೊ ಅದ್ಭುತ.. ನಾನು ನನ್ನ ಮನದನ್ನೆ ಸೀಮುಗೆ ಹೇಳಿದೆ.. ಸೂಪರ್ ದೃಶ್ಯ ಇದು ಅಂತ.. ಅವಳು ಹೌದು ಎಂದಳು.. 

ಒಬ್ಬರಿಗೊಬ್ಬರು ಹೆಗಲು ಕೊಟ್ಟು ನಿಂತಾಗ ಎಂಥಹ ಕಠಿಣ ಸವಾಲುಗಳು ದಾರಿ ಬಿಡುತ್ತವೆ.. 

ರವಿಮಾಮ ದೃಶ್ಯ ೧ ಮತ್ತು ೨ ನಿಜಕ್ಕೂ ನಿಮ್ಮ ಜೀವನದ ಅತಿ ಉತ್ತಮ ಚಿತ್ರಗಳಲ್ಲಿ ನಿಲ್ಲುತ್ತವೆ... 

ಏಕಾಂಗಿ 

ಅಭಿಮನ್ಯು 

ದಶಮುಖ 

ದೃಶ್ಯ ೧ 

ದೃಶ್ಯ ೨

ಸಂಗ್ರಾಮ 

ಪ್ರಳಯಾಂತಕ 

ನನ್ನ ಮೆಚ್ಚಿನ ಚಿತ್ರಗಳು.. ತಾಂತ್ರಿಕವಾಗಿ ನಿಮ್ಮ ಅನೇಕ ಚಿತ್ರಗಳನ್ನು ಮೆಚ್ಚಿದ್ದೇನೆ.. ಶಾಂತಿ ಕ್ರಾಂತಿ ಹತ್ತು ಬಾರಿ ಟಾಕೀಸಿನಲ್ಲಿ ನೋಡಿದ್ದೀನಿ ತಾಂತ್ರಿಕ ಅಂಶಗಳಿಗಾಗಿ.. ನಿಮ್ಮ ಚಿತ್ರಗಳ್ಲಲಿ ಹೆಸರು ತೋರಿಸುವ ವಿಧಾನ ಬಲು ಇಷ್ಟವಾಗಿತ್ತು

ಹೌದು ಶ್ರೀ ಅದೊಂದು ಜಮಾನ.. ತಲೆಯೊಳಗಿನ ವಿಚಿತ್ರ ಆಲೋಚನೆಗಳೆಲ್ಲ ತೆರೆಯ ಮೇಲೆ ತರಲು ಪ್ರಯತ್ನ ಪಡುತಿದ್ದ ಕಾಲವದು.. 

ರವಿಮಾಮ ದೃಶ್ಯ ೨ ರಲ್ಲಿ ನಿಮ್ಮ ಅಭಿನಯ ಸೊಗಸು.. ಬ್ಯಾಗನ್ನು ತೆಗೆದುಕೊಳ್ಳುವಾಗ ನಿಮ್ಮ ನಡುಗುವ ಕೈಗಳು, ಕಡೆಯಲ್ಲಿ ತಲೆ ತಗ್ಗಿಸಿಕೊಂಡು ಹೋಗುವ ದೃಶ್ಯ.. ಸುತ್ತಲೂ ಒಮ್ಮೆ ಕಣ್ಣು ಹಾಯಿಸಿ ತಣ್ಣಗಿನ   ಲುಕ್ ಕೊಡುವ ಆ ಕಣ್ಣುಗಳು ಅಬ್ಬಬ್ಬಾ ಸೂಪರ್.. 

ನನ್ನ ಇಷ್ಟವಾದ ನಟಿ ನವ್ಯ ನಾಯರ್ ಮೊದಲ ಭಾಗದಲ್ಲಿ ಮುದ್ದಾಗಿ ಕಾಣುತ್ತಿದ್ದರು.. ಈ ಭಾಗದಲ್ಲಿ ಸ್ವಲ್ಪ ಬಳಲಿದಂತೆ ಕಾಣುತ್ತಿದ್ದರು.. ಯಾಕೆ ಯಾಕೆ ಅಂತ ಯೋಚಿಸುತ್ತಿದ್ದೆ.. ಆಮೇಲೆ ಹೊಳೆಯಿತು.. ಅರೆ ಹೌದು ಆ ಘಟನೆಯನ್ನು ನೆನೆದು ನೆನೆದು.. ಬಸವಳಿದ ಆ ಮೊಗವನ್ನು ಹಾಗೆ ತೋರಿಸುವುದೇ ಸರಿ ಅನಿಸಿತು.. ಆದರೂ ಮುದ್ದಾಗಿ ಕಾಣುತ್ತಾರೆ.. ಪುಟ್ಟ ಬೊಟ್ಟಿನ ಕೆಳಗೆ ಒಂದು ಕುಂಕುಮದ ಬೊಟ್ಟು ಇದ್ದಿದ್ದರೆ ಅನಿಸುತ್ತಿತ್ತು.. ಅದು ಕೊನೆಯ ಕೆಲವು ದೃಶ್ಯಗಳಲ್ಲಿ ಹಾಗೆ ಬಂದು ಬಿಡುತ್ತಾರೆ.. ವಾಹ್ ಪೈಸೆ ವಸೂಲ್ ಎನಿಸಿತು.. ಆ ಹೊಳೆಯುವ ಕಣ್ಣುಗಳು.. ಆ ಮುದ್ದಾದ ಮೊಗ ನವ್ಯ ನಾಯರ್ ಸೊಗಸು.. 

ಉಳಿದ ಪಾತ್ರಗಳಲ್ಲಿ ತಂದೆ ತಾಯಿಯ ಪಾತ್ರದ ಆಶಾ ಶರತ್, ಪ್ರಭು, ಪೊಲೀಸ್ ಪಾತ್ರದ ಪ್ರಮೋದ್ ಶೆಟ್ಟಿ.... ತಿರುವಿನ ಪಾತ್ರದಲ್ಲಿ ಅನಂತ್ ನಾಗ್.. ಎರಡು ಮೂರು ದೃಶ್ಯಗಳೇ ಆದರೂ ಮುದ್ದಾಗಿ ಕಾಣುವ ಲಾಯರ್ ಪಾತ್ರದಲ್ಲಿ ಸೋನು... ಮಕ್ಕಳ ಪಾತ್ರದಲ್ಲಿ ಆರೋಹಿ, ಉನ್ನತಿ ಸೊಗಸಾದ ಅಭಿನಯ.. 

ಒಂದು ಚಿತ್ರ ನೋಡುಗರನ್ನು ಹಿಡಿದಿಡಲು ಬೇಕಾದ ಚಿತ್ರಕತೆಯನ್ನು ಸೊಗಸಾಗಿ ಮಾಡಿದ್ದಾರೆ ನಿರ್ದೇಶಕ ಪಿ ವಾಸು.. ಕತೆ ಜೀತು ಜೋಸೆಫ್ ಅವರದ್ದು.. ಅದನ್ನು ಯಥಾವತ್ತಾಗಿ ತೆರೆಯ ಮೇಲೆ ಮೂಡಿಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡಿದ್ದಾರೆ ಪಿ ವಾಸು... ಅವರಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿರುವ ಆಧಾರ ಕಂಬ ರವಿಚಂದ್ರನ್... 

ಸುಂದರ ಚಿತ್ರ ನೋಡಿದ ಅನುಭವ ನನ್ನದು ರವಿ ಮಾಮ.. 

ಓಯ್ ಶ್ರೀ ಅದೇನೋ ಆರಂಭದಲ್ಲಿ ಅಣ್ಣಾವ್ರ ಭಕ್ತ ಕುಂಬಾರ ಚಿತ್ರದ ಹಾಡು ಹೇಳಿದೆಯಲ್ಲ ಏನದು. 

ರವಿ ಮಾಮ.. ನಿಮಗೆ ಚಿತ್ರರಂಗ ಉಸಿರು, ನಿದ್ದೆಯಲ್ಲೂ ಚಿತ್ರದ ಬಗ್ಗೆ ಯೋಚಿಸುವ ಮನಸ್ಸು ನಿಮ್ಮದು.. ಸದಾ ಹೊಸತನ ನೋಡುವ ನಿಮ್ಮ ಕನಸಿನ ಕಣ್ಣುಗಳು.. ನೀವು ಚಿತ್ರರಂಗಕ್ಕಾಗಿಯೇ ಹುಟ್ಟಿದ್ದೀರಾ ಅನ್ನುವಷ್ಟು ಒಳಗೆ ಧುಮುಕಿದ್ದೀರಾ.. 

ನನಗೆ ಚಲನ ಚಿತ್ರಗಳು ಎಂದರೆ  ಬದುಕನ್ನು ತಿದ್ದುವ, ಬದುಕಿಗೆ ದಾರಿ ಹೇಳಿಕೊಡುವ ಗುರುವಿನ ಸ್ಥಾನ.. ಹಾಗಾಗಿ ನಿಮಗೆ ಚಿತ್ರರಂಗ ಎಂದರೆ ಪ್ರಾಣ. ನನಗೆ ಚಿತ್ರಗಳು ಎಂದರೆ ಪ್ರಾಣ.. 

ಅದಕ್ಕೆ ಹೇಳಿದ್ದು ನಾನೂ ನೀನು ನೆಂಟರಯ್ಯ ನಮಗೆ ಭೇದ ಇಲ್ಲವಯ್ಯಾ.. !!!

ಸೂಪರ್ ಶ್ರೀ ಇಷ್ಟವಾಯಿತು.. ರವಿ ಮಾಮನ ಮೇಲೆ ಇರುವ ಪ್ರೀತಿ ಸದಾ ಹೀಗೆ ಇರಲಿ.. !

ಧನ್ಯವಾದಗಳು ರವಿ ಮಾಮ.. ಇವತ್ತು ದೃಶ್ಯ ಎರಡನೇ ಭಾಗ ನೋಡುತ್ತಿದ್ದಾಗ ನಿಮಗೆ ಹೇಗೆ ಮುಂದಿನ ನೆಡೆ ನಿಮ್ಮ ಮನದಲ್ಲಿ ಮೂಡುತ್ತದೆಯೋ.. ಹಾಗೆ ಈ ಲೇಖನ ಹಾಗೆ ಮನದಲ್ಲಿ ಮೂಡಿಸುತ್ತಿತ್ತು..ಈಗ ಅದಕ್ಕೆ ಅಕ್ಷರ ರೂಪ ಕೊಟ್ಟೆ ಅಷ್ಟೇ.. 

ಸುಂದರ ಚಿತ್ರ ಕೊಟ್ಟದ್ದಕ್ಕೆ ದೃಶ್ಯ ತಂಡಕ್ಕೆ ಧನ್ಯವಾದಗಳು.. !