Monday, June 17, 2019

ಹಾರುತ ದೂರ ದೂರ ಎನ್ನುವ ರಾಣಿ ಹೊನ್ನಮ್ಮ (1960) (ಅಣ್ಣಾವ್ರ ಚಿತ್ರ ೧೬ / ೨೦೭)

ಈ ಪೂರ್ವಗ್ರಹ ಪೀಡಿತ ಎನ್ನುವ ಪದ ಕೊಡುವ ಗೊಂದಲ  ಅಪಾರ.. ಕಳೆದ ಹದಿನೈದು  ಚಿತ್ರಗಳನ್ನು ನೋಡಿದ್ದ ನನಗೆ ಈ ಚಿತ್ರದ ಬಗ್ಗೆ ನನ್ನದೇ ಆದ ಒಂದು ಕಥಾ ಹಂದರವಿತ್ತು.. ಆದರೆ ಸಿನಿಮಾ ನೋಡುತ್ತಾ ಹೋದ ಹಾಗೆ ಆ ಹಂದರದ ಮಹಲು ಕುಸಿಯತೊಡಗಿತ್ತು..

ಅರ್ಥಪೂರ್ಣವಾದ ಅನೇಕ ಗೀತೆಗಳನ್ನು, ಸಂಭಾಷಣೆ, ಚಿತ್ರಕಥೆಗಳನ್ನು, ಚಿತ್ರಗಳನ್ನು ನೀಡಿರುವ  ಕು ರಾ ಸೀತಾರಾಮಶಾಸ್ತ್ರಿ ವಿರಚಿತ್ರ ಚಿತ್ರ ರಾಣಿ ಹೊನ್ನಮ್ಮ.. ಹೆಸರು ಕೇಳಿದ ತಕ್ಷಣ ನಾಯಕಿ ಪ್ರಧಾನ ಚಿತ್ರವಿದು ಎಂದು ಕೊಂಡರೆ ಹೌದು ನಿಮ್ಮ ಊಹೆ ಸರಿ..  ತಪ್ಪು ಕೂಡ ಹೌದು.. ಹೆಸರು ನಾಯಕಿ ಪ್ರಧಾನವೆನಿಸಿದರೂ ಎಲ್ಲಾ ಪಾತ್ರಗಳಿಗೂ ಸಮಾನ ಪಾತ್ರ ಪೋಷಣೆ ನೀಡಲಾಗಿದೆ..


ನರಸಿಂಹರಾಜು ಚಿತ್ರದುದ್ದಕ್ಕೂ ಕಾಣಸಿಗುತ್ತಾರೆ ನಾಯಕನ ಗೆಳೆಯನಾಗಿ.. ಆತನ ಹೆಂಡತಿಯಾಗಿ ಎಂ ಏನ್ ಲಕ್ಷ್ಮೀದೇವಿ, ದಳವಾಯಿ ಪಾತ್ರದಲ್ಲಿ ಕೆಲವು ದೃಶ್ಯಗಳಲ್ಲಿ ಅಬ್ಬರಿಸುವ ಪಾತ್ರಧಾರಿ, ಅವನ ಸಹಾಯಕನಾಗಿ ಬಾಲಕೃಷ್ಣ.. ಚಿತ್ರದಲ್ಲಿ ಉತ್ತಮ ಸಂಭಾಷಣೆಗಳಿಗೆ ಜೀವ ತುಂಬಿದ್ದಾರೆ.. ಇನ್ನು ನಾಯಕನ ತಂದೆಯಾಗಿ ಬರುವ ಪಾತ್ರಧಾರಿ ಹಾಗೆಯೇ ತಾಯಿಯಾಗಿ ಜಯಶ್ರೀ ಖುಷಿ ನೀಡುತ್ತಾರೆ.  ಹೊನ್ನಮ್ಮನಾಗಿ ಲೀಲಾವತಿ ಪಾತ್ರಕ್ಕೆ ಜೀವ ತುಂಬಿದ್ದಾರೆ.. ಲೀಲಾವತಿ ತಂದೆಯ ಪಾತ್ರದಲ್ಲಿ ಕೆಲವೇ ದೃಶ್ಯಗಳಲ್ಲಿ ಬರುವ ರಾಮಚಂದ್ರಶಾಸ್ತ್ರಿ.. ಅರಮನೆಯ ಕಾವಲು ಭಂಟನಾಗಿ ಬರುವ ಚಿ. ಉದಯಶಂಕರ್.. ಕೆಲವು ದೃಶ್ಯಗಳಲ್ಲಿ ಕಾಣುವ ಶಾಂತಮ್ಮ, ಪಾಪಮ್ಮ.. ಎಲ್ಲರಿಗೂ ಪಾತ್ರಕ್ಕೆ ತಕ್ಕ
ಪೋಷಣೆ ಇದೆ ಈ ಚಿತ್ರದಲ್ಲಿ..ಅಚ್ಚರಿಯ ಅಂಶ ಎಂದರೆ  ದೇವಕನ್ಯೆಯಾಗಿ  ಪಾತ್ರ ಮಾಡಿರುವ ನಟಿಯ ಅಂದ ಚಂದ..  ಆಗಿನ ಕಾಲಕ್ಕೆ  ಮುದ್ದಾಗಿ ಕಾಣುವ ಈ ನಟಿಯನ್ನು ನೋಡೋದೇ ಒಂದು ಖುಷಿ.



ಆರಂಭಿಕ ದೃಶ್ಯದಲ್ಲಿ ಈ ಇಡೀ ಚಿತ್ರವನ್ನು ದಾರಿಹೋಕನಿಗೆ ಕಥೆಯಾಗಿ ಹೇಳುವ ದೇವಸ್ಥಾನದ ಪೂಜಾರಿ ಪಾತ್ರದಲ್ಲಿ ಜಿ ವಿ ಅಯ್ಯರ್ ಆ ದೇವಸ್ಥಾನದ ಇತಿಹಾಸ, ಪ್ರಾಂತ್ಯದ ಇತಿಹಾಸ ಚಿತ್ರದ ಕಥೆಯನ್ನು ಎಳೆ ಎಳೆಯಾಗಿ ಹೇಳುತ್ತಾ ಚಿತ್ರದ ಕಡೆಯಲ್ಲಿ ಮತ್ತೆ ಬರುತ್ತಾರೆ .. ಆಗಿನ ಕಾಲಕ್ಕೆ ಇದೊಂದು ವಿಭಿನ್ನ ಪ್ರಯತ್ನ..


ವೀರಣ್ಣನ ಪಾತ್ರದಲ್ಲಿ ರಾಜ್ ಬೆಳಗುತ್ತಾರೆ.. ಕತ್ತಿವರಸೆ, ಸಂಭಾಷಣೆ ಒಪ್ಪಿಸುವ ಶೈಲಿ, ಕುದುರೆ ಸವಾರಿ, ಕೆಪ್ಪವನ್ನು ಹದವಾಗಿ ತೋರುವ ನೈಪುಣ್ಯತೆ.. ಹಾಡಿನ ದೃಶ್ಯಗಳು ಹೀಗೆ  ಎಲ್ಲದರಲ್ಲೂ ಎತ್ತಿದ ಕೈ.. ಚಿತ್ರದಿಂದ ಚಿತ್ರಕ್ಕೆ ಅವರ ಅಭಿನಯದಲ್ಲಿ ಏರು ಹಾದಿಯನ್ನು ಸಾಧಿಸಿರುವುದನ್ನು ನೋಡುವುದೇ ಖುಷಿ.. ಮುಂದಿನ ಅವರ ಅಭಿನಯದಲ್ಲಿ ಬರುವ ಹಾದಿಯನ್ನು ಕಾದು ನೋಡಿ ಎಂದು ಹೇಳುವಂತೆ ಭಾಸವಾಗುತ್ತದೆ..




ಚಿತ್ರದ ಹೂರಣ ಇಷ್ಟು.. ಪಾಳೇಪಟ್ಟಿನ ನಾಯಕನಾಗಿ ಇರುವ ರಾಜ.. ತನ್ನ ದಳವಾಯಿಯ ದಬ್ಬಾಳಿಕೆಗೆ ಕಡಿವಾಣ ಹಾಕಲಾಗದೆ, ಅದಕ್ಕೆ ಪ್ರತ್ಯುತ್ತರವಾಗಿ ತನ್ನ ಮಗ ವೀರಣ್ಣನನ್ನು ಬೆಳೆಸುತ್ತಾರೆ. ಶಸ್ತ್ರ ವಿದ್ಯೆ, ರಾಜಕಾರಣ, ಆಡಳಿತ ಹೀಗೆ ಎಲ್ಲದರಲ್ಲೂ ಕೈ ಮುಂದಾಗಿರಲಿ ಎಂಬ ಆಶಯವಿರುತ್ತದೆ. ಅದಕ್ಕೆ ತಕ್ಕ ಹಾಗೆ ವೀರಣ್ಣ ಕೂಡ ಅಭ್ಯಾಸ ಮಾಡಿ ನಿಪುಣರಾಗುತ್ತಾರೆ.. ಹೀಗೆ ಒಮ್ಮೆ ದಳವಾಯಿ ಒಂದು ಹೆಣ್ಣಿನ ಹಿಂದೆ ಹೋದಾಗ, ವೀರಣ್ಣ ಮಾರುವೇಷದಲ್ಲಿ ಸರಿಯಾಗಿ ದಂಡಿಸುತ್ತಾರೆ.. ಆ ಹೆಣ್ಣು ಹೊನ್ನಮ್ಮನೆಂದು, ಗೊಲ್ಲರ ಹಟ್ಟಿಯ ಹುಡುಗಿ ಎಂದು ಅರಿವಾಗಿ, ಅವಳ ಸೌಂದರ್ಯಕ್ಕೆ, ಮಾತಿನ ಧೈರ್ಯಕ್ಕೆ ಮೆಚ್ಚಿ ಆಕೆಯನ್ನು ವಿವಾಹವಾಗಬೇಕೆಂಬ ಆಸೆಯನ್ನು ವ್ಯಕ್ತಪಡಿಸುತ್ತಾರೆ.  ಇತ್ತ ಹೊನ್ನಮ್ಮನನ್ನು ದಳವಾಯಿ ಮುಟ್ಟಿದ್ದರಿಂದ, ಅಪವಿತ್ರಳಾಗಿದ್ದಾಳೆ ಎಂದು ಅವಳ ಅಪ್ಪ ಮನೆಯಿಂದ ಹೊರಹಾಕುತ್ತಾರೆ.. ದಾರಿಕಾಣದೆ ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಪಟ್ಟಾಗ, ಒಬ್ಬ ಸನ್ಯಾಸಿ ಅವಳನ್ನು ರಕ್ಷಿಸಿ, ಮಂತ್ರೋಪದೇಶ ಮಾಡಿ, ಧೈರ್ಯ ತುಂಬುತ್ತಾನೆ.. ನಂತರ ವೀರಣ್ಣ ಮಾರುವೇಷದಲ್ಲಿ ಬಂದು, ಅವಳನ್ನು ಒಂದು ಮನೆಯಲ್ಲಿ ಉಳಿಯುವ ವ್ಯವಸ್ಥೆ ಮಾಡುತ್ತಾನೆ.. ಅವಳನ್ನು ಮದುವೆಯಾಗುವ ಇಂಗಿತವನ್ನು ತನ್ನ ಅಪ್ಪ ಅಮ್ಮನಿಗೆ ಹೇಳಿದಾಗ, ಗೊಲ್ಲರ ಹುಡುಗಿ ಪಟ್ಟದರಸಿ ಆಗಲಾರಳು ಎಂದು ಹೇಳುತ್ತಾ ಆತನ ಅಪ್ಪ ಅಮ್ಮ ಒಪ್ಪುವುದಿಲ್ಲ..




ವೀರಣ್ಣ ಹೊನ್ನಮ್ಮನಿಗೆ ವಿದ್ಯೆ, ನೃತ್ಯ, ಹಾಡುಗಾರಿಕೆ ಎಲ್ಲವನ್ನು ಕಲಿಸಿ, ಆಕೆಯನ್ನು ತನ್ನ ಅಪ್ಪನ ಅಮ್ಮನ ಮುಂದೆ ಒಂದು ಪ್ರಾಂತ್ಯದ ನಾಯಕನ ಮಗಳು ಎಂದು ಬಿಂಬಿಸಿ ಮದುವೆಗೆ ಒಪ್ಪಿಸುತ್ತಾನೆ.

ಮದುವೆಯಾದ ದಿನದ ರಾತ್ರಿ ಉದ್ಯಾನವನದಲ್ಲಿ ಓಡಾಡುತ್ತಿದ್ದಾಗ ಈ ಜೋಡಿಯನ್ನು ಕಂಡ ಗಂಧರ್ವ ಕನ್ಯೆ ವೀರಣ್ಣನನ್ನು ಹೊಂದಲು ಬಯಸುತ್ತಾಳೆ.. ಆತುರದಿಂದ ವೀರಣ್ಣನಿಗೆ ಹಾವಾಗಿ ಬಂದು ಕಡಿದು, ತನ್ನ ಲೋಕಕ್ಕೆ ಕರೆದೊಯ್ಯುತ್ತಾಳೆ.. ಆತನನ್ನು ಒಲಿಸಿಕೊಳ್ಳುವ ಭರದಲ್ಲಿ ಆತನಿಗೆ ಅಮೃತಪಾನ ಮಾಡಿಸಿ ಅಮರತ್ವ ಹೊಂದುತ್ತಾನೆ.. ವೀರಣ್ಣ ಒಮ್ಮೆ ತನ್ನ ಮಡದಿ ಹೊನ್ನಮ್ಮನನ್ನು ನೋಡುತ್ತೇನೆ ನಂತರ ನಿನ್ನ ದಾಸನಾಗಿ ಇರುತ್ತೇನೆ ಎಂದು ಹೇಳಿದಾಗ, ಆಕೆ ಹೊನ್ನಮ್ಮನನ್ನು ಸಶರೀರವಾಗಿ ತನ್ನ ಲೋಕಕ್ಕೆ ಕರೆಸುತ್ತಾಳೆ.

ವೀರಣ್ಣ ಮತ್ತು ಹೊನ್ನಮ್ಮ ಆ ಲೋಕದಲ್ಲಿ ಸ್ವಲ್ಪ ಹೊತ್ತು ಕಾಲ ಕಳೆದು, ಆಕೆಯೂ ಅಮೃತ ಪಾನ ಮಾಡಿ ಅಮರತ್ವ ಹೊಂದುತ್ತಾಳೆ.. ಮತ್ತೆ ಹೊನ್ನಮ್ಮ ಭುವಿಗೆ ಬರುವ ಹೊನ್ನಮ್ಮ ಕೆಲವು ಮಾಸಗಳಲ್ಲಿ ಗರ್ಭ ಧರಿಸುತ್ತಾಳೆ.. ಪತಿ ಇಲ್ಲದೆ ಗರ್ಭ ಧರಿಸಿದ್ದಾಳೆ ಎಂಬ ಕುಹಕ ನುಡಿಯ ಜೊತೆಯಲ್ಲಿ, ಆಕೆಯ ಮಾತುಗಳನ್ನು ಹುಚ್ಚು ಎಂದು ಪರಿಗಣಿಸುವ ರಾಜ ಮತ್ತು ರಾಣಿ ಆಕೆಯನ್ನು ದಳವಾಯಿಗೆ ಒಪ್ಪಿಸಿ, ತಕ್ಕ ಶಿಕ್ಷೆ ಕೊಡಬೇಕು ಎಂದು ಹೇಳುತ್ತಾನೆ.. ಕಾವಲು ಭಟರು ಅಮರತ್ವ ಹೊಂದಿದ್ದ ಹೊನ್ನಮ್ಮನ್ನ ಸಾಯಿಸಲಾಗದೆ, ಅವಳಿಗೆ ನಮಸ್ಕರಿಸುತ್ತಾರೆ.. ಕಾಲ ನಂತರದಲ್ಲಿ ಮಗುವಾಗುತ್ತದೆ, ಆದರೆ ಮಗುವನ್ನು ಯಾರೋ ಹೊತ್ತೊಯ್ದು, ಪಕ್ಕದ ರಾಜ್ಯದ ಕಾಡಿನಲ್ಲಿ ಬಿಟ್ಟು ಹೋಗುತ್ತಾರೆ.. ಆ ಪ್ರಾಂತ್ಯದ ನಾಯಕನಿಗೆ ಮಗು ಸಿಕ್ಕಿ ಸಾಕಿ ಬೆಳೆಸುತ್ತಾರೆ.

ಇತ್ತ ಗಂಧರ್ವ ಲೋಕದಲ್ಲಿ ವೀರಣ್ಣನ ಹಿಂದಿನ ನೆನಪೆನ್ನು ಅಳಿಸಿ ಹಾಕಿರುತ್ತಾಳೆ.  ಅಲ್ಲಿನ ಜೀವನಕ್ಕೆ ಬೇಸತ್ತು, ಭೂಲೋಕದಲ್ಲಿ ಸಂಚಾರ ಬಂದಾಗ ಹೊನ್ನಮ್ಮನ ಚೆಲುವಿಗೆ ಮತ್ತೆ ಮನಸೋಲುತ್ತಾನೆ... ಇತ್ತ ಹೊನ್ನಮ್ಮ ತನಗೆ ಪುನರ್ಜನ್ಮ ನೀಡಿದ ಸನ್ಯಾಸಿ ಸಿಕ್ಕಾಗ, ನೆಡೆದ ಘಟನೆಗಳನ್ನು ಹೇಳುತ್ತಾಳೆ.. ಆತ ನಿನ್ನ ಪುಣ್ಯಫಲದಿಂದ ಕಾರ್ಯ ಸಾಧಿಸು ಗಂಧರ್ವ ಕನ್ಯೆ ನಿನ್ನ ಪತಿಯನ್ನು ಹೊತ್ತೊಯ್ದಿದ್ದಾಳೆ ಎಂದು ಹೇಳುತ್ತಾನೆ.. ಹೊನ್ನಮ್ಮನ ಪತಿವ್ರತೆಯ ಶಕ್ತಿ, ಆ ಗಂಧರ್ವ ಕನ್ಯೆ ಮಣಿಯುತ್ತಾಳೆ.. ವೀರಣ್ಣ ಮತ್ತೆ ಹೊನ್ನಮ್ಮನ ಜೊತೆಗೂಡುತ್ತಾನೆ.  ದಳವಾಯಿಯ ದಬ್ಬಾಳಿಕೆ ಮಿತಿ ಮೀರಿ ರಾಜ ರಾಣಿಯರನ್ನು ಸೆರೆಮನೆಗೆ ಹಾಕಿಸಿರುತ್ತಾನೆ.. ವೀರಣ್ಣ ತನ್ನ ಭುಜಬಲದಿಂದ ದಳವಾಯಿಯನ್ನು ನಿವಾರಿಸಿ, ತನ್ನ ಮಗನಿಂದಲೇ ದಳವಾಯಿಗೆ ವೀರಗತಿ ಕೊಡಿಸುತ್ತಾನೆ ಮತ್ತು ತನ್ನ ಪರಿವಾರದೊಡನೆ ಸುಖದಿಂದ ಇರುತ್ತಾನೆ..

ಒಂದು ಪುಟ್ಟ ಕತೆ. ಅದನ್ನು ಬೆಳೆಸಿದ ಪರಿ, ಹಾಡುಗಳು ೯ ಇದ್ದರೂ, ಹಾರುತ ದೂರ ದೂರ ಹಾಡು ಇಂದಿಗೂ ಕೇಳುವ ಹಾಡಾಗಿದೆ..

ವಿಜಯಭಾಸ್ಕರ್ ಅವರ ಸಂಗೀತ, ಕೆ ಪ್ರಭಾಕರ್ ಬಾಬುಲ್ನಾಥ್ ಅವರ ಛಾಯಾಗ್ರಹಣ, ಕತೆ ಚಿತ್ರಕತೆ, ಸಾಹಿತ್ಯ, ಸಂಭಾಷಣೆ ಮತ್ತು ನಿರ್ದೇಶನ ಕು ರಾ ಸೀತಾರಾಮಶಾಸ್ತ್ರಿ ಅವರ ಪರಿಶ್ರಮಕ್ಕೆ ಟಿ ಎಸ್ ಕರಿಬಸಯ್ಯ ನಿರ್ಮಾಪಕರಾಗಿ ನಿಲ್ಲುತ್ತಾರೆ..

ಒಂದು ಸುಂದರ ಚಿತ್ರ ಕೊಟ್ಟ ತಂಡಕ್ಕೆ ನಮಿಸುತ್ತಾ ಮುಂದಿನ ಚಿತ್ರದಲ್ಲಿ ಸಿಗೋಣ ಅಲ್ವೇ!