ಹತ್ತು ಎನ್ನುವುದು ಒಂದು ಮೈಲಿಗಲ್ಲು.. ಅದನ್ನು ದಾಟಿ ಮುನ್ನೆಡೆಯುವಾಗ ಸಿಗುವ ಖುಷಿಗೆ ಅಂಕೆಯಿಲ್ಲ.. ಹತ್ತು ಚಿತ್ರಗಳನ್ನು ದಾಟಿ ಹನ್ನೊಂದಕ್ಕೆ ಕಾಲಿಟ್ಟಾಗ ಸಿಕ್ಕಿದ್ದು.. ಜಗವನ್ನೇ ಬೆಳಗಿದ ಬಸವೇಶ್ವರರ ಜೀವನಗಾಥೆಯನ್ನು ಬಿಂಬಿಸುವ ಚಿತ್ರ.. ಬಸವೇಶ್ವರ ತತ್ವಗಳು, ಅವರು ಮಾಡಿದ ಕ್ರಾಂತಿ, ಅನುಭವ ಮಂಟಪದ ಅನುಭವಗಳು, ತಾವು ಅಂದುಕೊಂಡಿದ್ದನ್ನು ಮಾಡುವ ಛಲ.. ಇವೆಲ್ಲವನ್ನೂ ಒಂದು ತಟ್ಟೆಯಲ್ಲಿ ಹಾಕಿ ಉಣಬಡಿಸಿದ್ದು ಜಗಜ್ಯೋತಿ ಬಸವೇಶ್ವರ ಚಿತ್ರದಲ್ಲಿ.
ವಿಕ್ರಂ ಪ್ಯಾರಮೌಂಟ್ ಸ್ಟುಡಿಯೋಸ್ ಸಹಯೋಗದಲ್ಲಿ ನಿರ್ಮಿತವಾದ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು ಟಿ ವಿ ಸಿಂಗ್ ಠಾಕೂರ್, ನಿರ್ಮಾತೃ ಜಿ ಎಸ್ ಎಸ್ ಮೂರ್ತಿ, ಸಂಗೀತದ ನೆಲೆ ಒದಗಿಸಿದ್ದು ಜಿಕೆ ವೆಂಕಟೇಶ್, ರಾಜಕುಮಾರ್ ಅವರ ಅನೇಕ ಚಿತ್ರಗಳನ್ನು ನಿರ್ದೇಶಿಸಿದ ದೊರೈ ಭಗವಾನ್ ಜೋಡಿಯ ದೊರೈ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಇತ್ತು.
ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆಗಳ ಸಂಗಮ ಈ ಚಿತ್ರ.. ಹೊನ್ನಪ್ಪ ಭಾಗವತರ್, ಲೀಲಾವತಿ, ಸರೋಜಾದೇವಿ, ಕೆ ಎಸ್ ಅಶ್ವಥ್, ಬಾಲಕೃಷ್ಣ, ಜಿ ವಿ ಅಯ್ಯರ್, ನರಸಿಂಹರಾಜು, ಆದವಾನಿ ಲಕ್ಷ್ಮೀದೇವಿ, ರಮಾದೇವಿ, ರಾಮಚಂದ್ರ ಶಾಸ್ತ್ರಿ ಇವೆರೆಲ್ಲರ ಜೊತೆಯಲ್ಲಿ ರಾಜಕುಮಾರ್. ರಾಜಕುಮಾರ್ ಅವರ ಹಲವಾರು ಚಿತ್ರಗಳನ್ನು ಸಾಹಿತ್ಯ ರಸದಲ್ಲಿ ಅದ್ದಿ ತೆಗೆದ ಚಿ ಉದಯಶಂಕರ್ ಒಂದು ಪುಟ್ಟ ಪಾತ್ರದಲ್ಲಿ ಬಂದು ಹೋಗುತ್ತಾರೆ.
ಹೊನ್ನಪ್ಪ ಭಾಗವತರ್ ಬಸವಣ್ಣನ ಪಾತ್ರದಲ್ಲಿ ಬೆಳಗಿದ್ದಾರೆ. ಆ ಪಾತ್ರಕ್ಕೆ ಬೇಕಾದ ಶಿಷ್ಟ ನುಡಿ, ಮಾತುಗಾರಿಕೆ, ಸೌಮ್ಯತೆ, ಮೃದುತ್ವ ಎಲ್ಲವನ್ನು ಹೊದ್ದು ಓಡಾಡಿದಂತೆ ಅಭಿನಯಿಸಿದ್ದಾರೆ.. ಬಸವೇಶ್ವರ ಹೀಗಿದ್ದರೂ ಎನ್ನುವಷ್ಟು ನಿಖರತೆ ಅವರ ಅಭಿನಯದಲ್ಲಿ.
ಬಿಜ್ಜಳ ಮಹಾರಾಜನಾಗಿ ರಾಜಕುಮಾರ್ ಅವರ ಅಭಿನಯ ಹತ್ತು ಚಿತ್ರಗಳ ಅಭಿನಯದ ಅನುಭವದ ಝಲಕ್ ತೋರಿಸುತ್ತದೆ. ಮಹಾರಾಜನ ಪಾತ್ರಕ್ಕೆ ಬೇಕಾದ ಗಾಂಭೀರ್ಯತೆ, ಭಾಷ ಶುದ್ಧತೆ, ಆಂಗೀಕ ಅಭಿನಯ ಎಲ್ಲದರಲ್ಲೂ ಹೊಳೆಯುತ್ತಾರೆ.
ತಮ್ಮ ತಪ್ಪು ನಿರ್ಧಾರಗಳಿಂದ ಬಸವಣ್ಣ ಅವರ ಅನುಭವ ಮಂಟಪದ ಅಧೋಪತನಕ್ಕೆ ಕಾರಣವಾದದ್ದು, ಮತ್ತು ಬಸವೇಶ್ವರರು ತಾವು ಕೊಟ್ಟ ಅಧಿಕಾರದಿಂದ ಹೊರನೆಡೆದದ್ದು ಇದನ್ನು ಯೋಚಿಸಿ ನೊಂದುಕೊಳ್ಳುವಾಗ ಅವರ ಅಭಿನಯ ಪುಟವಿಟ್ಟ ಚಿನ್ನದಂತಾಗುತ್ತದೆ.
ಇನ್ನೂ ಬಾಲಕೃಷ್ಣ, ಜಿವಿ ಅಯ್ಯರ್ ಇದರೋಂತು ಮುಗಿಯಿತು.. ಕಿಡಿಕಿಡಿ ಬಾಣಗಳು, ಅಸೂಯೆಗಳು, ದ್ವೇಷ ಇವೆಲ್ಲವನ್ನು ನಿರೀಕ್ಷಿತ ಮಟ್ಟಕ್ಕೆ ಕೊಂಡೊಯ್ಯೋದರಲ್ಲಿ ಅನುಮಾನವೇ ಇಲ್ಲ.. ನಾಟಕೀಯ ಮಾತುಗಳು ಗಮನಸೆಳೆಯುತ್ತದೆ. ನರಸಿಂಹರಾಜು ಅವರಿಗೆ ಹೆಚ್ಚಿನ ದೃಶ್ಯಗಳಿಲ್ಲದಿದ್ದರೂ.. ಸಿಕ್ಕ ಅವಕಾಶ ಸರಿಯಾಗಲಿ ಉಪಯೋಗಿಸಿಕೊಂಡಿದ್ದಾರೆ..
ಉಳಿದ ಪಾತ್ರಧಾರಿಗಳು ಕಥೆಗೆ ತಕ್ಕ ಹಾಗೆ ಅಭಿನಯಿಸಿದ್ದಾರೆ. ಬಸವೇಶ್ವರರ ಅನೇಕ ವಚನಗಳನ್ನು ಸಂಗೀತದಲ್ಲಿ ತೇಲಿಸಿದ್ದಾರೆ.
ಒಂದು ಚಿಕ್ಕ ಚೊಕ್ಕ ಚಿತ್ರವಾಗಿ ಮೂಡಿಬಂದಿದೆ ಈ ಚಿತ್ರ..
ಸಮಯಕ್ಕೆ ಸರಿಯಾದ ನಿರ್ಧಾರಗಳು, ಸಮಯಕ್ಕೆ ಸರಿಯಾದ ಆಲೋಚನೆಗಳು ಮನುಜನ ಜೀವನದ ದಿಕ್ಕನ್ನು ಬದಲಿಸುತ್ತದೆ ಎನ್ನುವುದನ್ನು ಹೊನ್ನಪ ಭಾಗವತರ್ ಮತ್ತು ರಾಜಕುಮಾರ್ ಅವರ ಪಾತ್ರಗಳಿಂದ ನೋಡಿ ತಿಳಿಯಬಹುದು..
ತಮಗೆ ದೊರೆತಿರುವ ಪಾತ್ರ ಚಿಕ್ಕದು ಅಥವಾ ಹೆಚ್ಚು ದೃಶ್ಯಗಳಿಲ್ಲ ಎನ್ನುವುದನ್ನು ತಲೆಗೆ ಹಾಕಿಕೊಳ್ಳದೆ, ಕಥೆಗೆ ತಕ್ಕ ಹಾಗೆ ಚಿತ್ರದಲ್ಲಿ ಬಂದು ಹೋಗುವ ರಾಜಕುಮಾರ್ ಇಷ್ಟವಾಗುತ್ತಾರೆ.. ನನ್ನ ಕರ್ತವ್ಯ ನನ್ನದು .. ಫಲಾಫಲ ದೇವನದ್ದು ಎನ್ನುವ ಭಾವ ತೋರಿಸುತ್ತಾರೆ..
ಇನ್ನೊಂದು ಚಿತ್ರದ ಜೊತೆಗೆ ಮುಂದಿನ ಕಂತಿನಲ್ಲಿ ಸಿಗೋಣವೇ.. !