Sunday, January 7, 2018

ಮಲೆಗಳಲ್ಲಿ ಮಧುಮಗಳು.. ವಿಭಿನ್ನ ಅನುಭವ (2018)

"ಅಪ್ಪ ಚಿಂಕ್ರಾ ಅಂಕಲ್ ಅಲ್ಲಿ.. "

ನನ್ನ ಮಗಳು ಪೂರಾ ಖುಷಿ ಆಗಿದ್ದಳು..

ಒಂದು ಪಾತ್ರ ಸೃಷ್ಟಿಸುವ ಹವಾ ಇದು ಅಂದರೆ ತಪ್ಪಾಗಲಾರದು..

ಅವಳು ಗೆದ್ದಿದ್ದಳು.. ನನ್ನ ಸರದಿ.. ದೇವರ ಹತ್ತಿರ ಬೇಡುವ ಸ್ಥಿತಿ ನನ್ನದು ..

ಸ್ವಲ್ಪ ಹೊತ್ತು.. ಕಲಾಪಗಳು ಶುರುವಾದವು..

"ಅಪ್ಪ ನಿಮ್ಮ ಇಷ್ಟವಾದ ಪಾತ್ರ ಪಿಂಚುಲು" ದೇವರಿಗೆ ಮೊರೆ ಕೇಳಿಸಿತು ಅನ್ನಿಸುತ್ತೆ

ತಕ್ಷಣ ನನ್ನ  ಹೇಳಿದೆ.. "ಟಿಕೆಟಿಗೇ ಕೊಟ್ಟ ದುಡ್ಡು ಬಂತು"

ಹೌದು ಉತ್ಪ್ರೇಕ್ಷೆ ಅನ್ನಿಸುತ್ತದೆಯೇ.. ಹೌದು ನಿಜ..

ನಿನ್ನೆ ರಾತ್ರಿ (೦೬. ೦೧. ೨೦೧೮) ಮಲೆಗಳಲ್ಲಿ ಮಧುಮಗಳು ನಾಟಕವನ್ನು ಐದನೇ ಬಾರಿಗೆ ನೋಡಲು ಹೋದಾಗ ನೆಡೆದ ಘಟನೆ ಇದು..

ನಾಟಕ ಅಂದರೆ.. ಓಹ್ ಅನ್ನುತ್ತಿದ್ದ ಮನಸ್ಸು.. ಮೊದಲ ಬಾರಿಗೆ ಮಧುಮಗಳು ಕಲಾಗ್ರಾಮದಲ್ಲಿ ಅವತರಿಸಿದ್ದನ್ನು ನೋಡಿದ್ದೇ ಮಧುಮಗಳು ಬೆಂಗಳೂರಿಗೆ ಮೊದಲ ಬಾರಿಗೆ ಬಂದಾಗ . ಮನಸ್ಸೆಳೆದದ್ದು ಚಿಂಕ್ರಾ ಮತ್ತು ಪಿಂಚುಲು.. ಹುಲಿಯ, ಗುತ್ತಿ, ವೆಂಕಟ, ಮುಕುಂದಯ್ಯ, ಚಿನ್ನಮ್ಮ,, ಜಕ್ಕಣಿ.. ಹೀಗೆ ಅನೇಕ ಪಾತ್ರಗಳು ಮನಸೆಳೆದಿದ್ದರೂ ಮೇಲಿನ ಎರಡು ಪಾತ್ರಗಳು ಮನದಲ್ಲಿ ಮನೆ ಮಾಡಿದವು..

ಆಮೇಲೆ ಹಠಕ್ಕೆ ಬಿದ್ದು ಮಲೆಗಳಲ್ಲಿ ಮಧುಮಗಳು ಕಾದಂಬರಿಯನ್ನು ಓದಿದಾಗ ಈ ಎರಡು ಪಾತ್ರಗಳ ಮೇಲೆ ವ್ಯಾಮೋಹ ಮತ್ತಷ್ಟು ಹೆಚ್ಚಾಯಿತು.. ಕುವೆಂಪು ಚಿತ್ರಿಸಿರುವ ಕಾದಂಬರಿಯಲ್ಲಿ ಇರಬೇಕಾದ ಪಾತ್ರಗಳ ಸತ್ವವನ್ನು ಈ ಎರಡು ಪಾತ್ರಗಳು ಹೀರಿದ್ದಾವೆ ಅನ್ನಿಸಿತು...

ಚಿಂಕ್ರ ಪಾತ್ರಧಾರಿ ಖಳ ವರ್ಚಸ್ಸಿನದ್ದು, ಆದರೆ ಆ ಪಾತ್ರದ ಒಳ ಹರಿವನ್ನ ಅರಿತು, ಎಲ್ಲಿಯೂ ಕ್ರೌರ್ಯ ಪ್ರದರ್ಶಿಸದೆ, ತಣ್ಣಗೆ ಅಭಿನಯಿಸಿರುವ ಈ ಕಲಾವಿದ ಶ್ರೀ ವಿನಯ್ ಚೌಹಾಣ್ ಶೀಟಿ ಗಿಟ್ಟಿಸುತ್ತಾರೆ.. ಆ ಪಾತ್ರದ ವೇಷಭೂಷಣ, ಹಾವಭಾವ,  ಆಂಗೀಕ ಅಭಿನಯ, ಸಂಭಾಷಣೆ ಹೇಳುವ ಶೈಲಿ.. ಊರಲ್ಲಿ ಏನಾದರೇನು ಅದರಲ್ಲಿ  ತಾನು ಲಾಭವನ್ನಾಗಿಸುವುದು ಹೇಗೆ ಎಂಬ ಸದಾ ಲೆಕ್ಕಾಚಾರದ ಮನೋಭಾವವನ್ನ.. ಅರೆ ಹೀಗಿದ್ದರೆ ಹೀಗೆ ಅಭಿನಯಿಸಬೇಕು ಎನ್ನುವಷ್ಟು ಲೆಕ್ಕಾಚಾರದ ಅಭಿನಯ.. ಕೆಲವು ದೃಶ್ಯಗಳಲ್ಲಿ ಅಭಿನಯ ಅನ್ನಿಸುವುದೇ ಇಲ್ಲ.. ಸೂಪರ್ ಚಿಂಕ್ರ

ಪಿಂಚುಲು ಪಾತ್ರ.. ಅನುಮಾನದ ಆದರೆ ಮುಗ್ಧ ಸ್ವಭಾವ ಮತ್ತು ತನ್ನ ಹೆಂಡತಿಯನ್ನು ಅತಿಯಾಗಿ ಪ್ರೀತಿಸುವ ಐತಾ ಪಾತ್ರ, ಗಂಡನ್ನು ಸಂಭಾಳಿಸುತ್ತಾ, ಚಿಂಕ್ರನ ಕಣ್ಣು ತಪ್ಪಿಸುತ್ತಾ, ತನ್ನ ಮೇಲೆ ಅಪಾರ ಭರವಸೆ ಇಟ್ಟಿರುವ ಮುಕುಂದಯ್ಯನ ನಂಬಿಕೆ ಉಳಿಸಿಕೊಂಡುವು, ಚಿನ್ನಮ್ಮನನ್ನು ಮುಕುಂದಯ್ಯನಿಗೆ ವಹಿಸುವ ಪಾತ್ರ.. ಜೊತೆಯಲ್ಲಿ ಗುತ್ತಿ ಮತ್ತು ತಿಮ್ಮಿಯನ್ನು ಒಂದು ಮಾಡಲು ಪಡುವ ಶ್ರಮ.. ಆ ಪಾತ್ರಕ್ಕೆ ಬೇಕಾಗಿರುವ ತಾಳ್ಮೆ, ಯೋಚನಾ ಲಹರಿ, ತೂಕಬದ್ಧವಾದ ಬುದ್ದಿವಂತಿಕೆ ಮಾತುಗಳು.. ಇವಿಷ್ಟು ವಿಷಯಗಳನ್ನು ತನ್ನ ಹೆಗಲ ಮೇಲೆ ಹೊತ್ತು ನಿಭಾಯಿಸಿರುವ ಪರಿ ಶಭಾಷ್ ಎನ್ನಿಸುತ್ತದೆ..


ಆ ಚಳಿಯಲ್ಲಿಯೂ ಮಲೆನಾಡಿನ ಪೋಷಾಕನ್ನು ಧರಿಸುವ ಪಾತ್ರಧಾರಿಗಳ ಶ್ರಮ ಅಬ್ಬಬ್ಬಾ ಎನ್ನಿಸುತ್ತದೆ..

ಗುತ್ತಿ ಇಡೀ ಕಥೆಯ ಕೇಂದ್ರ ಬಿಂಧು ಆರಂಭದಿಂದ ಅಂತ್ಯದ ತನಕ ಹರಿಯುವ ಈ ಪಾತ್ರವನ್ನು ಮೈಮೇಲೆ ಆವಹಿಸಿಕೊಂಡಿರುವಂತೆ ಅಭಿನಯಿಸಿರುವ ಗುತ್ತಿ ಪಾತ್ರಧಾರಿ ಚಪ್ಪಾಳೆ ಗಿಟ್ಟಿಸುತ್ತಾರೆ.. ಗಟ್ಟಿ ಧ್ವನಿ.. ಸೊಗಸಾದ ಮೈಕಟ್ಟು.. ಸಂಭಾಷಣೆಗೆ ಬೇಕಾದ ಹಾವಭಾವ.. ಸೊಗಸು ಸೊಗಸು

ಹುಲಿಯ ಪಾತ್ರ.. ಏನೂ ಹೇಳಲಿ.. ಕಡೆ ಪಾತ್ರವಾಗಬಹುದಾಗಿದ್ದ ಈ ಪಾತ್ರ.. ಇಡೀ ನಾಟಕದಲ್ಲಿ ಗುತ್ತಿಯ ಜೊತೆಗೆ ನಿಲ್ಲುವುದು.. ಮತ್ತೆ ಕೊನೆಯಲ್ಲಿ ಅಂತ್ಯ.. ಕಣ್ಣೀರು ತರಿಸುತ್ತದೆ.. ಸಂಭಾಷಣೆ ಇಲ್ಲ.. ಜನರು ಗುರುತಿಸುತ್ತಾರೋ .ಇಲ್ಲವೋ ಗೊತ್ತಿಲ್ಲದ ಪಾತ್ರ ಅದು.. ಆದರೆ ಕಡೆಯಲ್ಲಿ ಪಾತ್ರ ಪರಿಚಯ ಮಾಡಿಕೊಳ್ಳುವಾಗ.. ಬಂದಿದ್ದವರೆಲ್ಲ ಹುಲಿಯ ಹುಲಿಯ ಅಂಥಾ ಕೂಗಿದ್ದು..

ಮತ್ತೆ ಗುತ್ತಿ ಪಾತ್ರದ ಬಗ್ಗೆ ತೋರಿದ ಚಪ್ಪಾಳೆ..

ಈ ಎರಡು ಪಾತ್ರಗಳ ಶ್ರಮವನ್ನು ಗುರುತಿಸಿದ ಪರಿಗೆ ಸಲಾಂ ಹೇಳುತ್ತದೆ..

ಮೊಡಂಕಿಲ, ಐತಾ, ಮುಕುಂದಯ್ಯ, ಭರಮಯ್ಯ ಹೆಗ್ಗಡೆ, ಚಿನ್ನಮ್ಮ, ನಾಗಕ್ಕ, ನಾಗತ್ತೆ, ಮಂಜ, ವೆಂಕಟ, ಪಾದ್ರಿ ಜೀವರತ್ನಯ್ಯ, ಹೆಗ್ಗಡೆ ಕುಟುಂಬ, ಸುಂದರ ತಿಮ್ಮು, ತಿಮ್ಮಿ ಹೀಗೆ ಪ್ರತಿಯೊಂದು ಪಾತ್ರವನ್ನು  ಹೋದಹಾಗೆ ಕಣ್ಣು ತುಂಬಿಕೊಳ್ಳುತ್ತಾ ಅದ್ಭುತ ಅನುಭವ ಕೊಡುತ್ತದೆ..

೮೦೦ ಪುಟಗಲ ಬೃಹತ್ ಕಾದಂಬರಿಯನ್ನು ಒಂಭತ್ತು ತಾಸುಗಳಲ್ಲಿ ತೋರಿಸುವುದು.. ಮತ್ತೆ ಓದುಗರಿಗೆ ವಿಭಿನ್ನ ಅನುಭವ ಕೊಡುವ ಕಾದಂಬರಿಗೆ ಯಾವುದೇ ರೀತಿ  ದೃಷ್ಟಿಕೋನ ಬದಲಾಗದೆ ಇರುವ ರೀತಿ ದೃಶ್ಯ  ಮಾಧ್ಯಮಕ್ಕೆ ಇಳಿಸುವ ಸಾಹಸ ಅದ್ಭುತ..

ಅಭಿನಯಿಸಿರುವ ಪ್ರತಿಯೊಂದು ಪಾತ್ರ.. ಆ ಪಾತ್ರ ಮಾಡಲೆಂದೇ ಹುಟ್ಟಿದ್ದಾರೇನೋ ಅನುವಷ್ಟು ಕರಾರುವಕ್ಕಾಗಿದೆ.. ನಾ ಐದನೇ ಬಾರಿ ನೋಡುತ್ತಿದ್ದರೂ, ಕಾದಂಬರಿ ಓದಿದ್ದರೂ.. ಪ್ರತಿಯೊಂದ ದೃಶ್ಯ ಬರುವಾಗಲೂ. ಇದು ಹೊಸದು ಅನ್ನುವ ಅನುಭವ ಕೊಟ್ಟಿತು..

ಶ್ರೀ ನಾರಾಯಣ ಸ್ವಾಮೀ ಸರ್ , ಶ್ರೀ ಬಸು ಸರ್ ಇವರುಗಳ ಸಾಹಸ  ಶ್ಲಾಘನೀಯ.. ಹಿನ್ನೆಲೆ ಸಂಗೀತ ಶ್ರೀ ಹಂಸಲೇಖ, ರಂಗ ಸಜ್ಜಿಕೆ ಶ್ರೀ ಶಶಿಧರ್ ಅಡಪ.. ಇವರ ಜೊತೆಯಲ್ಲಿ ದುಡಿದ ತಂತ್ರಜ್ಞಾನದ ತಂಡಕ್ಕೆ ಒಂದು ವಿಶೇಷ ಸುತ್ತಿನ ಚಪ್ಪಾಳೆ..

ಕರುನಾಡಿನ ಸರ್ಕಾರ ತೋರಿದ ಸಹಾಯ ಹಸ್ತ.. ಈ ಅಮೋಘ ಪ್ರಯೋಗವನ್ನು ನೂರು ಪ್ರದರ್ಶನದತ್ತ ಕೊಂಡೊಯ್ಯಲು ಸಹಾಯ ಮಾಡುತ್ತಿರುವ ಸರಕಾರದ ತಂಡಕ್ಕೆ ಒಂದು ನಮನಗಳು..

ಅರೆ  ಕಥೆ ಏನೂ ಅಂದೀರಾ.. ಇದಕ್ಕೆ ಕಥೆಯಿಲ್ಲ.. ಆರಂಭವಿಲ್ಲ.. ಕೊನೆಯಿಲ್ಲ.. ಹೀಗೆ ಇಲ್ಲ ಇಲ್ಲ ಅನ್ನುತ್ತಾ ಸಾಗುವ ಕಥೆ.. ಎಲ್ಲಿಂದ ಬೇಕಾದರೂ ಎಲ್ಲಿಗೆ ಬೇಕಾದರೂ ನಾಲ್ಕು ರಂಗಗಳಲ್ಲಿ ನೆಡೆಯುತ್ತದೆ. ಸುಮಾರು ಎರಡು ತಾಸುಗಳು ಒಂದು ಅಂಗಣದಲ್ಲಿ ನೆಡೆಯುತ್ತದೆ..ನೋಡಲು  ಬಂದವರಿಗೆ ಬೋರಾಗದಂತೆ ಈ  ರೀತಿಯ ಕಥೆಯನ್ನು ಹಿಡಿದಿಡುವುದು ಸುಲಭದ ಮಾತಲ್ಲ.. ಅದರಲ್ಲಿ ಮಲೆಗಳಲ್ಲಿ ಮಧುಮಗಳು ತಂಡವು ಗೆದ್ದಿದೆ.. ಗೆದ್ದಿದೆ ಏನೂ ನೂರನೇ ಪ್ರದರ್ಶನಕ್ಕೆ  ಇಟ್ಟಿರುವುದೇ ಅದಕ್ಕೆ ಸಾಕ್ಷಿ..

*****

ನಾಟಕ ನೋಡಲು ಒಳ್ಳೆಯ ತಂಡವಿದ್ದರೆ ಸೊಗಸು ಎನ್ನುವಾಗ ಹೂಂ ಎಂದವರು ಜಗನ್,, ಮತ್ತೆ ಎಂದಿನಂತೆ ಮಲ್ಲೇಶ್ ಜೊತೆಯಾದರು.. ಅವರಿಬ್ಬರ ಅಜೊತೆ ಸೂರಿ ಮತ್ತು ಮನೆಯಾಕೆ.. ಇನ್ನಷ್ಟು ಮೀಡಿಯಾದವರು ಜೊತೆಯಲ್ಲಿ ಇದ್ದರು.. ಸುಮಾರು ೨೩ ಮಂದಿ ಒಂದೇ ತಾಣದಲ್ಲಿ ಕೂತು ನೋಡಲಾಗಲಿಲ್ಲವಾದರೂ ಪ್ರತಿಯೊಂದು ಅಂಕ ಮುಗಿದಮೇಲೆ ಸಿಕ್ಕು ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದದು ವಿಶೇಷವಾಗಿತ್ತು..

ಒಟ್ಟಿನಲ್ಲಿ ಒಂದು ಸುಂದರ ಶನಿವಾರ ರಾತ್ರಿಯನ್ನು ನಿದ್ದೆ ಮಾಡಿ ಕಳೆಯದೆ.. ಒಂದು  ಕಲೆಗೆ ತಮ್ಮ ಅಲ್ಪ ಅಳಿಲು ಸೇವೆ ಮತ್ತು ಕಲಾವಿದರಿಗೆ ಹುಮ್ಮಸ್ಸು.. ಎರಡೂ ಕಾರ್ಯ ನೆರವೇರಿತ್ತು..

ನಾಟಕ ನೋಡಲು ಹೊರಟವರಿಗೆ ಕಲಾಗ್ರಾಮದ ತನಕ ಬಂದು ಶುಭಕೋರಿದ DFR ಅವರಿಗೆ ಧನ್ಯವಾದಗಳು..

*****

ನಾಟಕ ನೋಡಿ ಕಾದಂಬರಿ ಓದಿದ್ದ ನನಗೆ.. ಕಾದಂಬರಿ ಓದಿ ನಾಟಕ ನೋಡಿದ್ದ ನನಗೆ ಸಿಕ್ಕ ಅನುಭವ ಹಾಲು ಜೇನಿನ ಮಿಲನವಾಯಿತು.. ಈ ಕಾದಂಬರಿಯ ಸುವರ್ಣ ಸಂಭ್ರಮದಲ್ಲಿ ಜೀವನದ ಒಂಭತ್ತು ಘಂಟೆಗಳನ್ನು ಕಳೆಯಿರಿ.. ನಲಿಯಿರಿ.. ಮಲೆನಾಡಿನ ಒಂಭತ್ತು ಘಂಟೆಗಳ ಪ್ರವಾಸ ಖಂಡಿತ ಸುಖಕರವಾಗಿರುತ್ತೆ ಮತ್ತು ಆಸಕ್ತಿದಾಯಕವಾಗಿರುತ್ತದೆ..