Sunday, September 25, 2016

ಅಣ್ಣ ತಂಗಿಯ ಅಂತರ್ಗಾಮಿ ಅನುಬಂಧದಲ್ಲಿ ತಮ್ಮ ಛಾಪು - ಸೋದರಿ (1955) (ಅಣ್ಣಾವ್ರ ಚಿತ್ರ ೦೨ / ೨೦೭)

ಜೀವನದ ಕಡಲಿನ ಅಲೆಗಳು ಹೇಗೆ ಕೆಲವೊಮ್ಮೆ ದಡ ಸೇರಿಸುತ್ತವೆ ಹೇಗೆ ಅಲೆಗಳಲ್ಲಿ ತೇಲಿಸುತ್ತದೆ ಎನ್ನುವುದಕ್ಕೆ ಈ ಚಿತ್ರ ಉತ್ತಮ ಉದಾಹರಣೆ.

ಮೊದಲ ಚಿತ್ರದಲ್ಲಿ ಅಬ್ಬರಿಸಿದ ರಾಜ್ ಅವರು ಈ ಚಿತ್ರದಲ್ಲಿ ತಮ್ಮ ನಾಯಕಿ ಪಂಡರಿಬಾಯಿಯವರ ದೈತ್ಯ ಪ್ರತಿಭೆಯಲ್ಲಿ ಮತ್ತು ನಾಯಕಿ ಪ್ರಧಾನ ಚಿತ್ರದಲ್ಲಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.


ವಿಶ್ವಕಲಾಚಿತ್ರದ ಲಾಂಛನದ ಮೊದಲ ಕಾಣಿಕೆಯಾಗಿ ಈ ಚಿತ್ರ ನಿರ್ಮಾಣವಾಗಿದೆ.  ಜಿ ಏನ್ ವಿಶ್ವನಾಥ ಶೆಟ್ಟರು, ಮತ್ತು ಟಿ ವಿ ಸಿಂಗ್ ಠಾಕೂರ್ ಮುಂದೆ ನಿಂತು ಈ ಚಿತ್ರವನ್ನು ನಿರ್ಮಾಣಮಾಡುತ್ತಾರೆ

ಅಣ್ಣ ತಂಗಿ ಅನುಬಂಧದ ಈ ಕಥೆ ತುಂಬಾ ಸರಳ.  ಮಕ್ಕಳಿಲ್ಲದ ಅಣ್ಣ ತನ್ನ ತಂಗಿಗೆ ಯೋಗ್ಯವರನನ್ನು ನೋಡಿ ಮದುವೆ ಮಾಡುತ್ತಾನೆ. ತಂಗಿಗೆ ಹುಟ್ಟುವ ಮೊದಲನೇ ಗಂಡುಮಗುವನ್ನು ತನ್ನ ರಾಜ್ಯದ ಉತ್ತರಾಧಿಕಾರಿಯನ್ನಾಗಿ ಮಾಡುವ ನಿರ್ಧಾರ ಮಾಡಿ ಅದರಂತೆ ತಂಗಿಯಿಂದ ಭಾಷೆ ತೆಗೆದುಕೊಳ್ಳುತ್ತಾನೆ.


ಇತ್ತ .. ಮದುವೆಯಾಗಿ ತನ್ನ ಪತಿ ಕೈಲಾಸನಾಥನೊಡನೆ ಅವರ ರಾಜ್ಯಕ್ಕೆ ಬರುತ್ತಾರೆ.. ಕಾಲ ಚೆನ್ನಾಗಿಯೇ ಸಾಗುತ್ತದೆ. ಮೊದಲನೇ ಮಗು ಗಂಡು ಸಂತಾನ ಆಗುತ್ತದೆ. ಆ ವಿಷಯವನ್ನು ತನ್ನ ಅಣ್ಣನಿಗೆ ತಿಳಿಸುವ ಏರ್ಪಾಡಾಗುತ್ತದೆ.

ಸಂತಸದ ಸುದ್ಧಿಯನ್ನು ತಿಳಿದು ಅಣ್ಣ ಕುಶಿಯಾದರೂ.. ತನ್ನ ರಾಜ್ಯಕ್ಕೆ ಶತ್ರುಗಳ ಭಾದೆಯಿಂದ ಇರುವುದರಿಂದ ಯುದ್ಧಕ್ಕೆ ಹೊರಡುತ್ತಾನೆ. ತನ್ನ ಮಡದಿ ಮೊದಲು ತಂಗಿ ಮಗುವನ್ನು ನೋಡಿಕೊಂಡು ಬರೋಣ ಅಂತ ಹೇಳಿದರೂ.. ಮೊದಲು ಪ್ರಜೆಗಳ ರಕ್ಷಣೆ ನಂತರ ನನ್ನ ವೈಯುಕ್ತಿಕ ಬದುಕು ಎಂದು ನುಡಿದು.. ನಾ ಯುದ್ಧ ಭೂಮಿಯಿಂದ ಮರಳಿ ಬಾರದಿದ್ದರೆ, ತನ್ನ ತಂಗಿಯ ಮಗನನ್ನೇ ದತ್ತು ತೆಗೆದುಕೊಂಡು ರಾಜ್ಯಾಭಿಷೇಕ ಮಾಡಬೇಕೆಂದು ಮಾತು ತೆಗೆದುಕೊಂಡು.. ಯುದ್ಧರಂಗಕ್ಕೆ ಹೊರಡುತ್ತಾನೆ.

ತನ್ನ ಗಂಡ ಹಗಲಿರುಳು ಆತನ ತಂಗಿಯ ಬಗ್ಗೆ ಯೋಚಿಸುವುದು ಮತ್ತು ಆತನ ಮಗನನ್ನೇ ದತ್ತು ತೆಗೆದುಕೊಳ್ಳುವ ವಿಚಾರ ಬಂದಾಗ ಕುಪಿತಗೊಳ್ಳುತ್ತಾಳೆ. ಮೊದಲೇ ಕ್ಷುದ್ರ ಮನಸ್ಸಿನ ರಾಣಿಯ ಬೆಂಕಿಯ ಕುಂಡದ ಮನಸ್ಸಿಗೆ ಇನ್ನಷ್ಟು ತುಪ್ಪ ಸುರಿಯಲು ಆಕೆಯ ದಾಸಿಯ ಕುಟಿಲ ನುಡಿಗಳು ಆಕೆಯನ್ನು ಇನ್ನಷ್ಟು ರೊಚ್ಚಿಗೆ ಎಬ್ಬಿಸುತ್ತದೆ

ರಾಣಿ.. ತಾನು ಗಂಡನಿಗೆ ಕೊಟ್ಟ ಮಾತನ್ನು ಮರೆತು ಆ ಮಗುವನ್ನು ನೋಡಲು ಹೋಗುವುದೇ ಇಲ್ಲ.. ಜೊತೆಯಲ್ಲಿ ತನ್ನ ತಮ್ಮನನ್ನೇ ರಾಜನಾಗಿ ಮಾಡಲು ಕುತಂತ್ರ ಮಾಡುತ್ತಾಳೆ.



ಇತ್ತ ಒಂದು ಸಂತಾನವಾದ ಮೇಲೆ ಇನ್ನೊಂದು ಹೆಣ್ಣು ಮಗುವಾದರೂ.. ತನ್ನ ಅಣ್ಣ ನನ್ನನ್ನು ನೋಡಲು ಬರಲಿಲ್ಲ ಎಂದು ತಂಗಿ ಬೇಸರ ಮಾಡಿಕೊಳ್ಳುತ್ತಾಳೆ.. ಆದರೆ ಕೈಲಾಸನಾಥ ಅವರಿಗೆ ಏನೂ ರಾಜ ಕಾರ್ಯವೋ ಏನೋ, ಬಂದಿಲ್ಲ.. ಒಮ್ಮೆ ನಾವೇ ಹೋಗಿ ಬರೋಣ ಎನ್ನುತ್ತಾನೆ.

ಈ ನಡುವೆ.. ರಾಜ್ಯದಲ್ಲಿ ಕ್ಷಾಮ ತಲೆದೋರಿ.. ತನ್ನ ಪ್ರಜೆಗಳಿಗೆ ಕಂದಾಯ ಮನ್ನಾ ಮಾಡುತ್ತಾನೆ, ಅರಮನೆಯಲ್ಲಿದ್ದ ದವಸ, ಧಾನ್ಯ, ಒಡವೆ, ಆಭರಣ ಕಡೆಗೆ ದೇವರ ಮನೆಯ ಆಭರಣಗಳನ್ನು ಮಾರಿ ಪ್ರಜೆಗಳ ಯೋಗ ಕ್ಷೇಮಕ್ಕೆ ತ್ಯಾಗ ಮಾಡುತ್ತಾನೆ.

ಒಂದುಹೊತ್ತಿನ ಊಟಕ್ಕೂ ತತ್ವಾರವಾದಾಗ, ವಿಧಿಯಿಲ್ಲದೇ, ತನ್ನ ಮಡದಿ ಮಕ್ಕಳಿಗೆ ತವರು ಮನೆ ಸೇರಿಕೊಳ್ಳಲು ಹೇಳಿದರೂ, ಹಠ ಮಾಡುವ ಮಡದಿ ಮಕ್ಕಳನ್ನು ಬಿಟ್ಟು ರಾತ್ರೋ ರಾತ್ರಿ ಊರು ಬಿಟ್ಟು ಹೋಗುತ್ತಾನೆ, ಬೇರೆ ದಾರಿ ಕಾಣದೆ, ತನ್ನೆರಡು ಮಕ್ಕಳನ್ನು ಕಟ್ಟಿಕೊಂಡು, ತವರು ಮನೆಯ ಹಾದಿಯಲ್ಲಿ ಮಗಳು ಹಾವಿಗೆ ಬಲಿಯಾಗುತ್ತಾಳೆ. ಹಾಗೂ ಹೀಗೂ ತವರು ಸೇರಿಕೊಂಡಾಗ.. ಬಿಕ್ಷುಕಿ ತರಹ ಇದ್ದ ಇವಳನ್ನು ಸೇವಕರು ಬಿಡುವುದಿಲ್ಲ.

ಆದರೆ ಗುರುತು ಹಿಡಿದರು, ಅತ್ತಿಗೆ ಎಂದೂ ಕರೆದರೂ, ರಾಣಿ ದಯೆತೋರದೆ, ಮತ್ತೆ ತನ್ನ ದಾಸಿ ಮಾತಿನಂತೆ ಕೊಟ್ಟಿಗೆಯೊಳಗೆ ಇರಲು ಅವಕಾಶ ಮಾಡಿಕೊಡುತ್ತಾಳೆ, ಮತ್ತೆ ಅಲ್ಲಿಯೇ ಅವಳನ್ನು ಮುಗಿಸಲು ಸಂಚು ಹೂಡುತ್ತಾಳೆ.

ರಾಜ ಬಂದಾಗ, ತನ್ನ ತಂಗಿ ಬಗ್ಗೆ ಕೇಳಿದಾಗ ಇಲ್ಲ ಸಲ್ಲದ ಆಪಾದನೆ ಮಾಡಿ, ರಾಜನಿಗೆ ತನ್ನ ತಂಗಿ ಬಗ್ಗೆ ಬೇಸರ ಬಾರಿಸಿದರೂ, ವಿವೇಚನೆಯುಳ್ಳ ರಾಜ ಅದರ ಹಿಂದಿನ ಮರ್ಮ, ಸಂಚು ತಿಳಿದು ದಾಸಿಯನ್ನು ಸೆರೆಯಲ್ಲಿ ಇಡುತ್ತಾನೆ. ನಿಜಾಂಶ ತಿಳಿದು ರಾಣಿ ತನ್ನ ದಾಸಿಯನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.

ತನ್ನ ತಂಗಿಗಾಗಿ ಹುಡುಕುತ್ತಾ ರಾಜ, ತನ್ನ ಮಡದಿ ಮಕ್ಕಳನ್ನು ಹುಡುಕುತ್ತ ಬರುವ ಪತಿಗೆ.. ಆಕೆ ಬದುಕಿಲ್ಲ ಎಂದು ಗೊತ್ತಾಗುತ್ತದೆ, ಸಂಸ್ಕಾರ ಮಾಡುವಾಗ.. ಶಿವ ಪಾರ್ವತಿ ಸಮೇತ ಪ್ರತ್ಯಕ್ಷನಾಗಿ ಸತ್ತ ಮಡದಿ ಮಕ್ಕಳನ್ನು ಬದುಕಿಸಿ ಚಿತ್ರಕ್ಕೆ ಮಂಗಳ ಹಾಡುತ್ತಾನೆ.

ಈ ಚಿತ್ರ ಸರಳ .. ಯಾವುದೇ ಏರು-ಪೇರು ಇಲ್ಲದೆ ಸಲೀಸಾಗಿ ಸಾಗುವ ಚಿತ್ರ. ಇದರಲ್ಲಿ ಪಂಡರಿಬಾಯಿಯವರ ಅಭಿನಯ  ಗಮನ ಸೆಳೆಯುತ್ತದೆ. ತಂಗಿಯಾಗಿ, ಮಡದಿಯಾಗಿ, ಮಕ್ಕಳ ತಾಯಿಯಾಗಿ ಇಡೀ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ. ಸಿರಿತನ, ಬಡತನ, ಬವಣೆ, ಸಂಕಟ, ಪತಿಭಕ್ತಿ, ಎಲ್ಲವನ್ನು ಗಮನಾರ್ಹವಾಗಿ ತೆರೆಯ ಮೇಲೆ ತಂದಿದ್ದಾರೆ.

ರಾಜ್ ಕುಮಾರ್..ಹಿಂದಿನ ಚಿತ್ರವನ್ನು ತಾನು ಮಾಡೇ ಇಲ್ಲವೇನೋ ಎನ್ನುವಷ್ಟು ಸಲೀಸಾಗಿ ಈ ಚಿತ್ರದೊಳಗೆ ನುಗ್ಗಿದ್ದಾರೆ. ರಾಜನಾಗಿ, ಪತ್ನಿಗೆ ತಕ್ಕ ಪತಿಯಾಗಿ.. ನಂತರ ಮರುಕ ಪಡುವ ಹಾಳುಬಿದ್ದ ಊರಿನ ಪ್ರಮುಖನಾಗಿ, ಕಾಡುಪಾಲಾಗುವ ಪಾತ್ರದಲ್ಲಿ ಪಾತ್ರಕ್ಕೆ ತಕ್ಕ ಅಭಿನಯ ನೀಡಿದ್ದಾರೆ. ಈ ಚಿತ್ರ ರಾಜ್ ಅವರ ಎರಡನೇ ಚಿತ್ರವಾಗಿ ಗಮನ ಸೆಳೆಯುತ್ತದೆ.

ಈ ಚಿತ್ರದಲ್ಲಿ ಮೇಲೆ ಹೇಳಿದ ನಾಯಕ ನಾಯಕಿ ಅಲ್ಲದೆ ಗಮನ ಸೆಳೆಯುವ ಇನ್ನೂ ಐವರು ಕಲಾವಿದರು ಅಂದರೆ
ನರಸಿಂಹರಾಜು : ಪೆದ್ದ ಭಾವಿ ರಾಜಕುವರನಾಗಿ ಅಭಿನಯ, ಸಂಭಾಷಣೆ ಶೈಲಿ ಗಮನ ಸೆಳೆಯುತ್ತದೆ.
ಅವರ ಗುಗ್ಗುರವಾಗಿ ಜಿ ವಿ ಅಯ್ಯರ್.. ಇವರಿಬ್ಬರ ಜುಗಲಬಂಧಿ ಬೇಡರ ಕಣ್ಣಪ್ಪ ಚಿತ್ರದ ಮುಂದುವರೆದ ಭಾಗವಾಗಿ ಅನುಭವಕೊಡುತ್ತದೆ ಮತ್ತು ಕಚಗುಳಿ ಸಂಭಾಷಣೆ ನಗು ತರಿಸುತ್ತದೆ.


ಅದರ ಒಂದು ಝಲಕ್
"ಸಂಪತ್ತು ಹೆಚ್ಚಿದಷ್ಟು ಆಪತ್ತು ಹೆಚ್ಚುತ್ತದೆ"
****
ಗುರು : "ಏನಯ್ಯ ವತ್ಸ ಇಲ್ಲಿಯವರಗೆ ಏನೇನೂ ಕಲಿತುಕೊಂಡಿದ್ದೀಯ"
ಶಿಷ್ಯ : "ಊಟ ನಿದ್ದೆ"
ಗುರು: "ಭಲಾ ಭಲಾ.. ಇನ್ನೇನು ಬರುತ್ತೆ"
ಶಿಷ್ಯ : "ನೆಗಡಿ ಆದಾಗ ಕೆಮ್ಮು ಬರುತ್ತೆ. ಕೆಮ್ಮು ನೆಗಡಿ ಜೊತೇಲಿ ಬಂದಾಗ ಜ್ವರ ಬರುತ್ತೆ "
ಗುರು: ಕೆಮ್ಮು ನೆಗಡಿ ಜ್ವರ ಹೆಚ್ಚಿದಾಗ ಯಮನಿಂದ ಚೀಟಿ ಬರುತ್ತೆ ಗೊತ್ತೂ
****
ಪಾಠಗಳನ್ನ ಅಭ್ಯಾಸ ಮಾಡುತ್ತಾ ಬೇಸತ್ತು ನರಸಿಂಹರಾಜು
"ಕೂಡು ಕಳೆ ಗುಣಿಸು ಭಾಗಿಸು
ಚರಿತ್ರೆ ಅಂತ ಸತ್ತವರ ಕಥೆ
ಭೂಗೋಳ ಅಂತ ಹೊಳೆ ಬೆಟ್ಟಗಳ ವರ್ಣನೆ
ಒಂದೂ ಇಷ್ಟವಿಲ್ಲ
****
ಗುರು : ಒಳ್ಳೆ ಗ್ರಹಚಾರ ಬಂತಲ್ಲ
ಶಿಷ್ಯ : ಅವನ್ಯಾರು
ಗುರು : ಆಕಾಶದಲ್ಲಿರುವ ಗ್ರಹಗಳು ಅಗೋಚರವಾಗಿ ಮನುಷ್ಯನ ಮೇಲೆ ಮಾಡುವ ದಾಳಿಗೆ ಗ್ರಹಚಾರ ಎಂದು ಹೆಸರು.. ಹದಿನೈದನೇ ಪಾಠ
ಶಿಷ್ಯ : ಮನೆಯಲ್ಲಿರುವ ಗ್ರಹಗಳು ಮನೆಯವರ ಮೇಲೆ ಮಾಡುವ ದಾಳಿಗೆ ಗೋಳಾಚಾರ ಅಂತ ಹೆಸರು.. ಇದು ಹದಿನಾರನೇ ಪಾಠ
****
ಗುರು : ಏನಯ್ಯ ವತ್ಸ ನಿನ್ನೆ ಹೇಳಿಕೊಟ್ಟ ಪಾಠ
ಶಿಷ್ಯ : ಗಟ್ಟಿ ಮಾಡಿದ್ದೆ.. ಎಲ್ಲಾ ಕರಗಿ ಹೋಗಿದೆ
****

ಹೀಗೆ ಅನೇಕ ಜುಗಲ್ಬಂಧಿ ಸಂಭಾಷಣೆಗಳು ನಗೆಯ ಹೊನಲನ್ನು ಹರಿಸುತ್ತದೆ.

ಬರೋಬ್ಬರಿ ಹನ್ನೊಂದು ಹಾಡುಗಳಿರುವ ಈ ಚಿತ್ರದಲ್ಲಿ ಹಾಡುಗಳು ಮಧ್ಯೆ ಮಧ್ಯೆ ಬರುತ್ತಲೇ ಇರುತ್ತವೆ. ಹುಣುಸೂರು ಕೃಷ್ಣಮೂರ್ತಿ ರಚಿಸಿರುವ ಹಾಡುಗಳನ್ನು ಪಿ ಲೀಲಾ, ಟಿ ಎಸ್ ಭಗವತಿ, ಸುಶೀಲ, ಸುಮಿತ್ರಾ, ಎ ಎಂ ರಾಜ, ಪಿ, ನಾಗೇಶ್ವರ ರಾವ್ ಹಾಡಿದ್ದಾರೆ.
ಕಥೆ, ಸಂಭಾಷಣೆ ಹುಣುಸೂರು ಕೃಷ್ಣಮೂರ್ತಿ ಮತ್ತು ಜಿ ವಿ ಅಯ್ಯರ್ ಅವರದು.. ಜಿ ವಿ ಅಯ್ಯರ್ ಅವರು ಎರಡು ಪಾತ್ರದಲ್ಲಿ ಅಭಿನಯಿಸಿರುವುದು  ಅಷ್ಟೇ  ಅಲ್ಲದೆ, ಕಥೆ, ಸಂಭಾಷಣೆ, ಸಹ ನಿರ್ದೇಶನದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಸಂಗೀತ ಸಂಯೋಜನೆ ಪದ್ಮನಾಭಶಾಸ್ತ್ರಿ ಮತ್ತು ಮೊದಲ ಬಾರಿಗೆ ಅವಕಾಶ ಸಿಕ್ಕಿದ ಜಿ ಕೆ ವೆಂಕಟೇಶ್.
ಛಾಯಾಗ್ರಹಣ ಬಿ ದೊರೈರಾಜ್ ಅವರದು.

ಈ ಅದ್ಭುತ ತಂಡದ ಚುಕ್ಕಾಣಿ ಹಿಡಿದು ನೆಡೆಸಿದವರು ನಿರ್ದೇಶಕ ಟಿ ವಿ ಸಿಂಗ್ ಠಾಕೂರ್.  ಈ ಚಿತ್ರದಲ್ಲಿ ಬರುವ ಪಾತ್ರಗಳ ಪರಿಚಯವೆಂದರೆ
ಅಣ್ಣನಾಗಿ:  ರಾಘವೇಂದ್ರರಾವ್
ಮಡದಿ ಚಂಚಲದೇವಿಯಾಗಿ : ಜಯಶ್ರೀ
ಆಕೆಯ ತಮ್ಮನಾಗಿ : ನರಸಿಂಹರಾಜು
ನರಸಿಂಹರಾಜು ಪ್ರೇಯಸಿಯಾಗಿ : ಎಂ ಏನ್ ಲಕ್ಷ್ಮೀದೇವಿ
ಗುರುವಾಗಿ : ಜಿ ವಿ ಅಯ್ಯರ್
ತಂಗಿ ಹೇಮಾವತಿಯಾಗಿ : ಪಂಡರಿಬಾಯಿ
ಹೇಮಾವತಿಯ ಪತಿ ಕೈಲಾಸನಾಥನಾಗಿ : ರಾಜಕುಮಾರ್
ಒಬ್ಬರಿಗೊಬ್ಬರು ಸಹಜವಾಗಿ ನಟಿಸಿದ್ದಾರೆ.

ಈ ಚಿತ್ರದಲ್ಲಿ ಇರುವ ನಟ ನಟಿಯರು ತಂತ್ರಜ್ಞರು ರಾಜ್ ಅವರನ್ನು ಧ್ರುವತಾರೆಯಾಗಿ ಮಾಡಲು ಶ್ರಮಿಸಿದವರು ಅಧಿಕರು. ರಾಘವೇಂದ್ರ ರಾವ್, ಬಿ ದೊರೈ ರಾಜ್, ಜಿಕೆ ವೆಂಕಟೇಶ್, ಜಯಶ್ರೀ, ನರಸಿಂಹರಾಜು, ಎಂ ಏನ್ ಲಕ್ಷ್ಮೀದೇವಿ, ಹುಣುಸೂರು ಕೃಷ್ಣಮೂರ್ತಿ, ಟಿವಿ ಸಿಂಗ್ ಠಾಕೂರ್, ಜಿ ವಿ ಅಯ್ಯರ್, ಪಂಡರಿ ಬಾಯಿ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಒಂದು ಸರಳ ಕಥೆಯನ್ನು ಅಷ್ಟೇ ಸರಳವಾಗಿ ಚಿತ್ರಿಸಿ ಕನ್ನಡಿಗರ ಮನ ಮುಟ್ಟಿಸುವಲ್ಲಿ ಸಫಲವಾದ ಚಿತ್ರ ರಾಜ್ ಅವರ ಎರಡನೇ ಚಿತ್ರಮಣಿಯಾಗಿ ಕರುನಾಡಿನ ದೇವತೆಯ ಕೊರಳ ಮಾಲೆಗೆ ಸೇರಿಕೊಂಡಿತು..


ಮುಂದೆ ಇನ್ನೊಂದು ಚಿತ್ರದೊಂದಿಗೆ ಬರುವೆ.. !

4 comments:

  1. ನಿಮ್ಮ ವಿಮರ್ಷೆ ತುಂಬಾ ಚೆನ್ನಾಗಿ ಬರುತ್ತಿದೆ. ಮುಂದುವರೆಸಿ.
    ತಾನು ಮಾಡಬೇಕೆಂದಿರುವ ಕಾರ್ಯಗಳನ್ನು ಜನ-ಮನ ಗೆಲ್ಲುವ ರೀತಿಯಲ್ಲಿ ತಾವೇ ರೂಪಿಸಿದಂತೆ ಮಾಡಿ ತೋರಿಸುವ ಒಬ್ಬ ವ್ಯಕ್ತಿ ಮಾಡಿದರೆ ಆಗ ಆ ಕಾರ್ಯಕ್ಕೆ ಸೂಕ್ತ ಪ್ರೋತ್ಸಾಹ ಸಿಗುತ್ತದೆ. ಆತನ ಯಶಸ್ಸಿನಲ್ಲಿ ತಮ್ಮ ಯಶಸ್ಸನ್ನು ಕಾಣಬಹುದು. ನಮ್ಮನ್ನು ಯಾರು ನೋಡುತ್ತಾರೆ?...ಆದರೆ ಇವನಿಂದ ಮಾಡಿಸಿ, ಇವನೊಂದಿಗೆ ಅಲ್ಲಿ ಇಲ್ಲಿ ನಾವು ಕಾಣಿಸಿಕೊಂಡರೆ ಆಗ ನಮ್ಮ ಕಾರ್ಯವೂ ಆಯಿತು...ಅವನಿಗೂ ಒಳ್ಳೆ ಪ್ಲಾಟ್ಫಾರ್ಮ್ ಲಭಿಸುತ್ತದೆ. ಹೀಗೆ ಮಾಡುತ್ತಾ ಹೆಸರೂ ಆಯಿತು ಹಣವೂ ಬಂತು. ತಾನು ಯಾರು, ತಾನು ಹೇಗೆ ಇಲ್ಲಿಗೆ ಬಂದೆ. ತನ್ನ ಹಿಂದ ಯಾರು ಯಾರು ಇದ್ದಾರೆ. ಅವರಿಲ್ಲದೆ ನಾನಿಲ್ಲ.... ಇತ್ಯಾದಿ ಪ್ರಶ್ನೆಗಳಿಗೆ ಬಹುಷಃ ರಾಜ್ ಅವರಿಗೆ ಚೆನ್ನಾಗಿ ಉತ್ತರಗಳು ತಿಳಿದಿತ್ತು. ಅದಕ್ಕೆ ಆ ವ್ಯಕ್ತಿಯಲ್ಲಿ ನಯ-ವಿನಯ, ಸರಳತನ, ಹಾಗೂ ತಾನು ಏನೂ ಮಾಡಲಿಲ್ಲ -- ಮಾಡುವವರು ಮಾಡಿಸಿದರು ಅಷ್ಟೇ ಎಂಬ ಭಾವ ಎದ್ದು ಕಾಣುತ್ತಿತ್ತು.
    ಈ ಹಿನ್ನೆಲೆ ಇಟ್ಟುಕೊಂಡು ಬಹಳಷ್ಟು ಜನ ಮುತ್ತುರಾಜನನ್ನು ರಾಜ್ ಕುಮಾರ್ ಮಾಡಿದರು. ಅಲ್ಲಿಂದ ಜನ ರಾಜ್ ಅವರನ್ನು ಅಣ್ಣಾವ್ರು ಮಾಡಿದರು. ಅಲ್ಲಿಂದ ಅಭಿಮಾನಿಗಳು ಅಣ್ಣಾವ್ರನ್ನು ದೇವರ ಸ್ಥಾನಕ್ಕೆ ಕೊಂಡೊಯ್ದರೇನೋ!!

    ವಿಕ್ರಮಾದಿತ್ಯ

    ReplyDelete
    Replies
    1. ಧನ್ಯವಾದಗಳು ವಿಕ್ರಮ್
      ಒಂದು ಬಾರಿ ಜೀವನದಲ್ಲಿ ಸ್ಥರದಲ್ಲಿದ್ದ ವ್ಯಕ್ತಿಯೊಬ್ಬರ ಹತ್ತಿರ ಮಾತಾಡುತ್ತಿದ್ದೆ. ಅವರು ಸ್ಥಾನ ಮಾನ ಧನ ಎಲ್ಲವನ್ನು ಗಳಿಸಿದ್ದರು, ಸಾಧಿಸಬೇಕಿದ್ದು ಏನೂ ಇರಲಿಲ್ಲ ಎಂದರೂ ಅತಿಶಯೋಕ್ತಿ ಆಗಿರಲಿಲ್ಲ. ಅವರನ್ನು ಕೇಳಿದೆ, ನಿಮಗೆ ಪಾಟಿ ಯಶಸ್ಸು ಸಿಕ್ಕಿದೆಯಲ್ಲ ಹೇಗೆ ಅರಗಿಸಿಕೊಳ್ತೀರಾ ಅಂತ.

      ಆಗ ಅವರು ಹೇಳಿದ್ದು "ಶ್ರೀಕಾಂತ.. ಭುಜದ ಮೇಲೆ ತಲೆಯನ್ನ ಇರಿಸಿಕೊಂಡರೆ ಏನೂ ಆಗೋಲ್ಲ.."

      ಅವಾಕ್ಕಾದೆ.. ಆಮೇಲೆ ತಿಳಿಯಿತು .. ತಲೆ ನಿಂತಿರುವುದು ಭುಜದ ಮೇಲೆಯೇ ಹೊರತು ಭುಜ ನಿಂತಿರುವುದು ತಲೆಯ ಮೇಲಲ್ಲ..

      ಹಾಗೆ ರಾಜ್, ಮುತ್ತು ರಾಜ್, ರಾಜ್ ಕುಮಾರ್, ಅಣ್ಣಾವ್ರು ಇದೆಲ್ಲಾ ಒಬ್ಬರೇ ಆದರೂ ಈ ಪಯಣದಲ್ಲಿ ತಾವೊಬ್ಬರೇ ಅಲ್ಲಾ ಹಲವಾರು ಮಹನೀಯರು ಕಾರಣ ಕರ್ತರು ಎನ್ನುವ ಬ್ರಹ್ಮಜ್ಞಾನದ ಅನುಭವ ಇತ್ತು ಎಂದು ತಿಳಿದ ಕಾರಣ ಅವರು ಅವರಾಗಿದ್ದರು.
      ಮತ್ತೊಮ್ಮೆ ಧನ್ಯವಾದಗಳು ನಿಮ್ಮ ಸುಂದರ ಮಾತುಗಳಿಗೆ ಮತ್ತು ಪ್ರೋತ್ಸಾಹದ ನುಡಿಗಳಿಗೆ

      Delete
  2. Sri,
    "Sodhari" cinema ide anthaloo saha gottiralilla. Nimma lekhanadalle Poortha chitra veekshisuvahaagaaytu. Munduvareyali payana. Awaiting next.

    ReplyDelete
    Replies
    1. ಧನ್ಯವಾದಗಳು DFR..

      ನನಗೂ ಎಷ್ಟೋ ಚಿತ್ರಗಳು ಹೊಸದಾಗಿಯೇ ತೋರುತ್ತಿವೆ, ಅಣ್ಣಾವ್ರ ಅಭಿನಯದ ಕಡಲಿಗೆ ಧುಮುಕಿದ್ದೇನೆ, ಅಲ್ಲಿ ಸಿಕ್ಕುವ ಮುತ್ತು ಹವಳಗಳಂತಹ ಸಂದೇಶಗಳು ನನಗೆ ಅವರ ಆಶೀರ್ವಾದ ಲಭಿಸಿದಂತೆ.

      ಉತ್ತಮ ಪ್ರತಿಕ್ರಿಯೆಗೆ ಧನ್ಯವಾದಗಳು

      Delete