Friday, May 15, 2015

ಗಿರ ಗಿರ ತಿರುಗಿಸುವ ಕಾಲೇಜು ರಂಗ (1976)

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ.. ದಾಸರ ಪದ ನೆನಪಿಗೆ ಬರುತ್ತಿದೆ..

ಇಡಿ ಚಿತ್ರವನ್ನು ನೋಡಿದಾಗ ಅನ್ನಿಸುತ್ತದೆ ಇಲ್ಲಿ ಗುರು ಶಿಷ್ಯರ ಇಬ್ಬರ ಕೈಚಳಕವು ಆಳವಾಗಿದೆ ಎಂದು.

"ಕಾಲೇಜು ರಂಗ" ಈ ಚಿತ್ರ ಒಂದು ರೀತಿಯಲ್ಲಿ ಪುಟ್ಟಣ್ಣ-ಪಂತುಲು ಅವರ ಅಮೋಘ ಸಂಗಮ.. ಎಲ್ಲೋ ಓದಿದ್ದ ನೆನಪು, ಪುಟ್ಟಣ್ಣ ಅವರ ಗುರುಗಳು ಬಿ ಆರ್ ಪಂತುಲು ಈ ಚಿತ್ರವನ್ನು ಮಾಡಬೇಕೆಂದು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಕಾಲದಲ್ಲಿ, ಆ ಕಾಲನ ಸಾಮ್ರಾಜ್ಯದಿಂದ ಕರೆ ಬಂದ ಕಾರಣ ಹೊರಟು ಬಿಟ್ಟರು ಎಂದು.

ಗುರುಗಳಿಗೆ ದಕ್ಷಿಣೆ ನೀಡುವ ಒಂದು ಸುಸಂಧರ್ಭ ಪುಟ್ಟಣ್ಣ ಅವರಿಗೆ ಒದಗಿ ಬಂತು. ಹಾಗಾಗಿ ಈ ಚಿತ್ರವನ್ನು ಗುರುಗಳ ಕಣ್ಣಲ್ಲಿ ಮತ್ತು ತಮ್ಮ ಮನದಲ್ಲಿ ಮೂಡಿದಂತೆ ಚಿತ್ರಿಸಿದ್ದಾರೆ.

೧೯೭೬ ರಲ್ಲಿ ತೆರೆಗೆ ಬಂದ ಈ ಚಿತ್ರದಲ್ಲಿ ಅತ್ಯುತ್ತಮ ಕಲಾವಿದರ ದಂಡೆ ನೆರೆದಿತ್ತು. ಕಲ್ಯಾಣ್ ಕುಮಾರ್, ಲೋಕನಾಥ್, ಗೋಡೆ ಲಕ್ಷ್ಮಿನಾರಾಯಣ, ಡಿಕ್ಕಿ ಮಾಧವರಾವ್, ಜಿ ಕೆ ಗೋವಿಂದರಾವ್, ಲೀಲಾವತಿ, ಮುಸುರಿ ಕೃಷ್ಣಮೂರ್ತಿ ಇನ್ನೂ ಅನೇಕರ ಜೊತೆಯಲ್ಲಿ ಹೊಸ ಮುಖವಾದ ಜಯಸಿಂಹ, ಪದ್ಮಶ್ರೀ ಮುಂಚೂಣಿಯಲ್ಲಿ ಅಭಿನಯಿಸಿದ್ದ ಈ ಚಿತ್ರ ಶ್ರೀ ಬಿ ಜಿ ಎಲ್ ಸ್ವಾಮೀ ಅವರ ಕಾಲೇಜು ರಂಗ ಎನ್ನುವ ಕಾದಂಬರಿ ಆಧರಿಸಿತ್ತು ಹಾಗೂ ಅವರೇ ಸಂಭಾಷಣೆಯನ್ನು ಒದಗಿಸಿದ್ದರು.


ಪದ್ಮಿನಿ ಪಿಕ್ಚರ್ಸ್ ಲಾಂಛನದಲ್ಲಿ ತಯಾರಾದ ಈ ಚಿತ್ರದ ಆರಂಭದಲ್ಲಿ ಪುಟ್ಟಣ್ಣ ತಮ್ಮ ಗುರುಗಳ ಬಗ್ಗೆ ಒಂದು ಸಂಕ್ಷಿಪ್ತ  ವಿವರ ಮತ್ತು ತಮ್ಮ ಮನದಾಳದ ಮಾತುಗಳಿಂದ ಗುರುದಕ್ಷಿಣೆಯ ಜೊತೆಗೆ ಆ ಮಹಾನ್ ಪ್ರತಿಭೆಗೆ ಒಂದು ಸುಂದರ ಚೌಕಟ್ಟನ್ನು ಹಾಕಿದ್ದಾರೆ.

ಪುಟ್ಟಣ್ಣ ಅವರು ಸಾಹಿತಿಗಳಿಗೆ ಕಲಾವಿದರಿಗೆ ಮತ್ತು ಅವರ ಕಲೆಗೆ ಬೆಲೆ ಕೊಡುತ್ತಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಚಿತ್ರಕಥೆ ಸಲಹೆ ಎಂದು ಯೋಗಾನರಸಿಂಹ ಮೂರ್ತಿ, ನರೇಂದ್ರಬಾಬು, ನವರತ್ನರಾಂ, ಎ ಎಸ್ ಮೂರ್ತಿ ಹೆಸರನ್ನು ಉಲ್ಲೇಖಿಸುತ್ತಾರೆ. ಹಾಡುಗಳು ಚಿ ಉದಯಶಂಕರ್, ಆರ್ ಎನ್ ಜಯಗೋಪಾಲ್ ಮತ್ತು ವಿಜಯನಾರಸಿಂಹ ಅವರ ಮೂಸೆಯಲ್ಲಿ ಅರಳಿದರೆ, ಅದಕ್ಕೆ ಸಂಗೀತ ಗುರುಗಳು ಪಂತಲು ಅವರ ಆಸ್ಥಾನ ಸಂಗೀತಗಾರರಾದ ಟಿ ಜಿ ಲಿಂಗಪ್ಪ ಅವರದ್ದು. ಚಿತ್ರವನ್ನು ಬಿ ಎನ್ ಹರಿದಾಸ್ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಗುರುಗಳಿಗೆ ಈ ಚಿತ್ರವನ್ನು ಅರ್ಪಿಸುತ್ತಾ ಚಿತ್ರಕಥೆ ನಿರ್ದೇಶನದ ಕುರ್ಚಿಯಲಿ ಪುಟ್ಟಣ್ಣ ಅವರ  ಕೂರುತ್ತಾರೆ.

ಬರಿ ಗೋದಾಮಿನಲ್ಲಿ ಮಾತ್ರ ಇಲಿಗಳು ಹೆಗ್ಗಣಗಳು ಇರೋಲ್ಲ ವಿದ್ಯಾ ಸಂಸ್ಥೆಗಳಲ್ಲೂ ನೆಲೆಸಿರುತ್ತವೆ ಎನ್ನುವುದನ್ನು ಸೂಕ್ಷ್ಮವಾಗಿ ಪಾತ್ರಗಳನ್ನ್ನು ಪರಿಚಯಿಸುತ್ತಾ ಆ ಪಾತ್ರಗಳ ಹೊಟ್ಟೆಬಾಕತನವನ್ನು ಮತ್ತು ಅನಾರೋಗ್ಯಕಾರಿ ಲಂಚಗುಳಿತನವನ್ನು, ತಮಗೆ ಅನ್ನ ನೀಡುತ್ತಿರುವ ಸಂಸ್ಥೆಗೆ ಕನ್ನ ಹಾಕುವ ಪರಿಯನ್ನು ವಿವರವಾಗಿ ತೋರಿಸುತ್ತಾ ಹೋಗುತ್ತಾರೆ.

ಎರಡು ವ್ಯಕ್ತಿಗಳ ಮನಸ್ಥಿತಿಯನ್ನು ಬಿಂಬಿಸುವ ಈ ಸಂಭಾಷಣೆಯ ಜಾದೂ ನೋಡಿ.

ಕಲ್ಯಾಣಕುಮಾರ್ ಒಳ್ಳೆಯತನಕ್ಕೆ, ತನಗೆ ಹುದ್ದೆ ಕೊಟ್ಟಿರುವ ಸಂಸ್ಥೆಗೆ ಅಳಿಲು ಸೇವೆ ಮಾಡಬೇಕೆನ್ನುವ ಹಂಬಲ ಇಟ್ಟುಕೊಂಡವರು. ಕಾಲೇಜಿನ ಆಡಳಿತ ಮಂಡಳಿಯ ಪ್ರೆಸಿಡೆಂಟ್ ಜಿ ಕೆ ಗೋವಿಂದರಾವ್ ಅವರ ಮನೆಗೆ ಬರುತ್ತಾರೆ. ಅಲ್ಲಿನ ಸಂಭಾಷಣೆ

ಪ್ರೆಸಿಡೆಂಟ್ ಅವರ ಧರ್ಮಪತ್ನಿ ಲೀಲಾವತಿ  ಹೇಳುತ್ತಾರೆ "ನೋಡಿ ನೀವು ನಿಜ ಹೇಳಿದರೂ ನಂಬ್ತೀರಿ.. ಸುಳ್ಳು ಹೇಳಿದರೂ ನಂಬ್ತೀರಿ.. " ಎಂದಾಗ ಕಲ್ಯಾಣ್ ಕುಮಾರ್ ಹೇಳುತ್ತಾರೆ " ಅಮ್ಮ ನಾನು ನಿಜ ಹೇಳಿದರೆ ಮಾತ್ರ ನಂಬ್ತೀನಿ"

ಅದೇ ಮಾತನ್ನು ಎರಡು ಮುಖದ, ಅಧಿಕಾರದ ದುರಾಸೆ ಇಟ್ಟುಕೊಂಡು ಹೇಗಾದರೂ ಸರಿ ಪ್ರಿನ್ಸಿಪಾಲ್ ಹುದ್ದೆಯಲ್ಲಿ ಕೂರಬೇಕು ಎನ್ನುವ ಹಠ ತೊಟ್ಟ ಲೋಕನಾಥ್ ಅವರಿಗೆ ಲೀಲಾವತಿ ಇದೆ ಮಾತನ್ನು ಹೇಳಿದಾಗ "ನೋಡಿಮ್ಮ ನಿಜ ಯಾವುದು ಸುಳ್ಳು ಯಾವುದು ನನಗೆ ಗೊತ್ತಿಲ್ಲ.. ನೀವು ಏನು ಹೇಳಿದರೂ ನಂಬ್ತೀನಿ"

ಒಂದು ಚಿತ್ರವನ್ನು, ಪಾತ್ರಗಳನ್ನೂ, ಚಿತ್ರದ ಹೂರಣವನ್ನು ಒಂದು ಸಂಭಾಷಣೆಯ ಮೇಲೆ ನಿಲ್ಲಿಸುವುದು ಅಥವಾ ಬಿಂಬಿಸುವುದು ಸಂಭಾಷಣಕಾರ ಮತ್ತು ನಿರ್ದೇಶಕನ ತಾಕತ್ತು. ಅದರಲ್ಲಿ ಬಿ ಜಿ ಎಲ್ ಸ್ವಾಮೀ ಮತ್ತು ಪುಟ್ಟಣ್ಣ ಅವರು ಜಯಶಾಲಿಗಳಾಗಿದ್ದಾರೆ.

ಹಲವಾರು ಚುಟುಕು ಚಿನಕುರುಳಿ ಸಂಭಾಷಣೆಗಳು ಇವೆ.

"ಇಮೇಜ್ ಇಲ್ಲದಿದ್ದರೆ ಏನಂತೆ ಕರೇಜ್ ಇದೆ"

"ದಬ್ಬಳದಲ್ಲಿ ಬಾವಿ ತೋಡುತ್ತಿರೆನ್ರಿ"

"ಬೆಳಿಗ್ಗೆ ಕ್ಲಾಸ್ ಮೇಟ್ಸ್ ಸಂಜೆಗೆ ಗ್ಲಾಸ್ ಮೇಟ್ಸ್"

ಈ ಚಿತ್ರದಲ್ಲಿ ಗಮನ ಸೆಳೆಯುವುದು ಲೋಕನಾಥ್ ಅವರ ವೇಷ ಭೂಷಣ, ದಪ್ಪ ಹುಬ್ಬು, ಜೊಂಡು ಮೀಸೆ, ಕುಂಟು ನಡಿಗೆ, ವಿಶಿಷ್ಟ ಮಾತಿನ ಶೈಲಿ ಇವೆಲ್ಲ ಒಂದು ಕಡೆಯಾದರೆ, ಗುಳ್ಳೆ ನರಿ ವ್ಯಕ್ತಿತ್ವದ ಗೋಡೆ ಲಕ್ಷ್ಮಿನಾರಾಯಣ, ಅವರ ಸಹಚರ ಇವರಿಬ್ಬರ ನಾಟಕೀಯ ಶೈಲಿಯಲ್ಲಿ ಸಂಭಾಷಣೆ, ಜಿ ಕೆ ಗೋವಿಂದರಾವ್ ಡಿಪ್ಲೊಮಸಿ ಎನ್ನುತ್ತಾ ಉಡಾಫೆ ಸಂಭಾಷಣೆ, ಲೀಲಾವತಿ ಅವರ ದರ್ಪ, ಅಜ್ಞಾನ, ಮತ್ತು ಸೋಗು ಹಾಕುವ ರೀತಿಯಲ್ಲಿನ ಸಂಭಾಷಣೆ ಮನಸ್ಸೆಳೆಯುತ್ತದೆ.

ಇಡಿ ಚಿತ್ರದಲ್ಲಿ ಕಾಡುವುದು ಕಲ್ಯಾಣ್ ಕುಮಾರ್.. ತಮ್ಮ ಅದ್ಭುತ ಅಭಿನಯ, ಸಂಭಾಷಣೆ ಹೇಳುವ ತಾಳ್ಮೆಯ ರೀತಿ, ಆ ಧ್ವನಿ, ಮತ್ತು ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ಮೋಸ ಆಗಬಾರದು, ಚೆನ್ನಾಗಿ ಕಲಿಯುವಂಥಹ ವಾತಾವರಣ ಮತ್ತು ಅನುಕೂಲತೆಗಳನ್ನು ಮಾಡಿಕೊಡಬೇಕು ಎನ್ನುವ ಕಾಳಜಿ ಎಲ್ಲವನ್ನೂ ಅರೆದು ಕುಡಿದಂತೆ ಅಭಿನಯಿಸಿದ್ದಾರೆ.

ಹಾಡುಗಳು ಮೂರೇ ಇದ್ದರೂ ಮನಸ್ಸಿಗೆ ನಾಟುವಂಥಹ ಹಾಡುಗಳು..

"ಉಪ್ಪ ತಿಂದ ಮೇಲೆ ನೀರಾ ಕುಡಿಯಲೇಬೇಕು" ಎಸ್ಪಿ ಮತ್ತು ರವಿ ಅವರ ಹಾಡುಗಾರಿಕೆ ಇಷ್ಟವಾಗುತ್ತದೆ.

"ಕಾಲೇಜು ರಂಗದಲ್ಲಿ ಕಾಳಿಂಗ ಸರ್ಪ" ಈ ಹಾಡಿನಲ್ಲಿ ಗಬ್ಬೆದ್ದು ನಾರುತ್ತಿರುವ ಶಿಕ್ಷಣ ಸಂಸ್ಥೆಗಳ ಬಗ್ಗೆ ಚಾವಟಿ ಬೀಸುವ ಶಾಲಿಯಲ್ಲಿ ಎಸ್ಪಿ ಹಾಡಿದ್ದಾರೆ.

"ಭವ್ಯ ಭಾರತ ಪರಂಪರೆಯಲ್ಲಿ ಗುರುಕುಲ ಎಂಬುದು ಒಂದಿತ್ತು" ಹೇಗಿರಬೇಕು ಮತ್ತು ಹೇಗಿದೆ ಎನ್ನುವ ಹೋಲಿಕೆ ತುಂಬಿದ ಭಾವ ಇರುವ ಈ ಹಾಡನ್ನು ಎಸ್ಪಿ ಮತ್ತು ವಾಣಿಜಯರಾಂ ಹಾಡಿದ್ದಾರೆ.

ಈ ಚಿತ್ರದ ಇನ್ನೊಂದು ಪ್ರಮುಖ  ಅಂಶ ಸಂಗೀತ ಮತ್ತು ನೆರಳು ಬೆಳಕಿನ ಉಪಯೋಗ.

ಪ್ರತಿಯೊಬ್ಬರಿಗೂ ಅವರ ಭಾವಕ್ಕೆ ತಕ್ಕಂತೆ ಹಿನ್ನೆಲೆ ಸಂಗೀತ ಮೂಡಿ ಬರುತ್ತದೆ. ಮತ್ತು ಸನ್ನಿವೇಶಕ್ಕೆ ತಕ್ಕಂತೆ ಹಿನ್ನೆಲೆ ಸಂಗೀತವನ್ನು  ಅಳವಡಿಸಿದ್ದಾರೆ. ಉದಾಹರಣೆಗೆ ಕಾಲೇಜಿನಲ್ಲಿ ಶಿಕ್ಷಕರನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ತಕ್ಕಂತೆ ನಾಣ್ಯಗಳು ಬೀಳುವ ಸದ್ದು ಮೂಡಿ ಬರುವುದು ಅದ್ಭುತ ಎನ್ನಿಸುತ್ತದೆ.

ಹಾಗೆಯೇ ಅಂತಿಮ ದೃಶ್ಯಗಳಲ್ಲಿ ಲೋಕನಾಥ್, ಕಲ್ಯಾಣಕುಮಾರ್ ಅವರ ಲ್ಯಾಬ್ ನಲ್ಲಿ ಇರುವ ದೊಡ್ಡ ಕಪಾಟನ್ನು ಬೆಂಕಿಗೆ ಆಹುತಿ ಮಾಡುವಾಗ ಅವರ ಮೊಗದಲ್ಲಿ ಮೂಡಿ ಬರುವ ಕ್ರೌರ್ಯ ನೆರಳು ಬೆಳಕಿನಲ್ಲಿ ಎದ್ದು ಕಾಣುವಂತೆ ತೋರಿಸಿದ್ದಾರೆ ಪುಟ್ಟಣ್ಣ ಅವರು.

ಪುಟ್ಟಣ್ಣ ಅವರ ಮಿಕ್ಕ ಚಿತ್ರಗಳಿಗಿಂತ ಭಿನ್ನ ಆದರೆ ಅವರದೇ ಛಾಪು ಮೂಡಿಸುವಂತಹ ಚಿತ್ರ ರತ್ನ "ಕಾಲೇಜು ರಂಗ"

ಇದಕ್ಕೆ ಪುಟ್ಟಣ್ಣ ಅವರಿಗೆ ಮನದಾಳದ ನಮನಗಳು!!!

5 comments:

  1. ಆಹಾ ಒಳ್ಳೆಯ ರಸದೌತಣ ಈ ಚಿತ್ರದ ವಿಮರ್ಶೆ, ಪುಟ್ಟಣ್ಣ ಅವರು ಹೆಣ್ಣುಮಕ್ಕಳಿಗೆ ಸಂಬಂಧಪಟ್ಟ ಚಿತ್ರಗಳನ್ನು ಮಾತ್ರ ತೆಗೆಯ ಬಲ್ಲರು ಇತರ ವಿಚಾರಗಳ ಬಗ್ಗೆ ಚಿತ್ರ ತೆಗಿಯಲಿ ನೋಡೋಣ .? ಎಂಬ ಮಾತಿಗೆ ಉತ್ತರ ಈ ಚಿತ್ರ. ಕಾಲೇಜು ರಂಗ ಅಂದಿನ ಕಾಲಕ್ಕೆ ಒಂದು ವ್ಯವಸ್ಥೆಯ ಕೊಳಕನ್ನು ಬಗೆದು ತೋರಿದ ಚಿತ್ರ, ಈ ಚಿತ್ರವನ್ನು ಸುಮಾರು 5 ಸಾರಿ ನೋಡಿದ್ದೇನೆ, ಬೇಸರ ಆಗಲಿಲ್ಲ. ಈ ಚಿತ್ರದ ಕಥಾವಸ್ತು ಇಂದಿಗೂ ಸಹ ಅನ್ವಯ ಆಗುತ್ತದೆ . ಇನ್ನೂ ನನ್ನ ಮನಸಿನ ಎಲ್ಲಾ ಅನಿಸಿಕೆಗಳು ನಿಮ್ಮ ಲೇಖನದಲ್ಲೇ ಬಂದು ಬಿಟ್ಟಿವೆ, ಈ ಚಿತ್ರದ ಸಂಗೀತ ನಿರ್ದೇಶಕರು ಟಿ .ಜಿ. ಲಿಂಗಪ್ಪ ಚಿತ್ರಕ್ಕೆ ಪೂರಕವಾಗಿ ಸಂಗೀತ ನೀಡಿದ್ದಾರೆ . ಮನೆಯವರೆಲ್ಲಾ ಕುಳಿತು ಆರಾಮವಾಗಿ ನಗುತ್ತಾ ಈ ಚಿತ್ರ ನೋಡುತ್ತಾ ಕಾಲೇಜುಗಳ ಅವ್ಯವಸ್ಥೆಯ ಬಗ್ಗೆ ವಿಚಾರ ತಿಳಿಯ ಬಹುದು. ನಿಮ್ಮ ಬ್ಲೋಗ್ಪೋಸ್ಟ್ ಓದುವ ಎಲ್ಲರಿಗೂ ಹೇಳುತ್ತೇನೆ ಈ ಚಿತ್ರದ ಡಿ.ವಿ.ಡಿ . ಅಥವಾ ವಿ.ಸಿ.ಡಿ. ಸಿಗುತ್ತೆ ಖಂಡಿತಾ ಒಮ್ಮೆ ನೋಡಿ ಅಂತಾ. ಈ ಚಿತ್ರದ ವಿಮರ್ಶೆಗೆ ನಿಮಗೆ ಜೈ ಹೊ . ಎನ್ನಲೆ ಬೇಕು.

    ReplyDelete
  2. ವಿಭಿನ್ನ ಕಥೆಗಳನ್ನು ಆಯ್ದು ತೆರೆಗೆ ತರುತ್ತಿದ್ದ ಪುಟ್ಟಣ್ಣನವರ ವಿಶಿಷ್ಟ ಚಿತ್ರವಿದು.

    ReplyDelete
  3. ಈ ಚಿತ್ರ ನೋಡಬೇಕೆಂಬ ಅಸೆ ಇದೆ. ಪುಟ್ಟಣ್ಣ ಅವರ ಚಿತ್ರಗಳು ಬಹಳ ವಿಭಿನ್ನವಾಗಿರುತ್ತವೆ. ಕಳೆದವಾರ ಕಥಾಸಂಗಮ ನೋಡಿದೆ ಆ ಚಿತ್ರ ಎನಿಕ್ಕೆ ತಯಾರಾಯಿತು ಅಂತ ಅರ್ಥ ಆಗಲಿಲ್ಲ.. ಮೂರು ಕಥೆಗಳು ಮೂರು ತರಹದಲ್ಲಿ ಏನನ್ನೋ ಹೇಳಹೊರರಟಿದ್ದಾರೆ ಎನಿಸಿತು

    ReplyDelete
  4. EE movie nodideeni Sri, tumbaa tumbaa hinde. TVli bandaaga.... thanks for posting this beautiful review. :) neevu andina kaaladalli chitra vimarshakaraagirabekittu, esp. puttannanavara chitragalige :) Prathiyondu movigegoo 5 Stars kododanthu guarantee :)

    ReplyDelete
  5. Story is very powerful. However, some of the acting was not that natural. Anyway, Kalyan Kumar and Lokanath have acted very well, with some serious thought provoking scenes by Kalyan Kumar. Some of the comedy sequences are awesome. Songs are good. However, 3 Sanskrit Shlokas by PB Srinivas in the background are just awesome! Though the movie is made in late 20th century, the story is still applicable to current business minded (private) education system in India!

    ReplyDelete