Monday, November 24, 2014

ಎಡವಿದರೆ ಕಲ್ಲು ಗುಡ್ಡವೇ.. ಎಡಕಲ್ಲು ಗುಡ್ಡದ ಮೇಲೆ (1973)

ಪುಟ್ಟಣ್ಣ ಯಾಕೆ ಇಷ್ಟ ಆಗ್ತಾರೆ.. ಕಾರಣ ಹುಡುಕುತ್ತಾ ಹೋದ ಹಾಗೆ ಶರಧಿಯಲ್ಲಿ ಕಪ್ಪೆ ಚಿಪ್ಪು ಹುಡುಕಿದ ಹಾಗೆ.. ಒಂದು ಸಿಕ್ಕಾಗ ಇನ್ನೊಂದು ಕಾಣುತ್ತದೆ. ಅರೆ ಇದು ಚೆನ್ನಾಗಿದೆ ಅಂತ ಇನ್ನೊಮ್ಮೆ ಕಣ್ಣರಳಿಸಿದರೆ ಇನ್ನೊಂದು ಸೊಗಸಾಗಿ ಕಾಣುತ್ತದೆ.

ಅವರ ಬೆಳ್ಳಿಮೋಡದಿಂದ ನಾಗರಹಾವು ಚಿತ್ರದವರೆಗೆ ಬರೆದ ನಂತರ ಹಿಂದೆ ತಿರುಗಿ ನೋಡಿದರೆ ಒಂದು ರೀತಿ ಸಂತೃಪ್ತಿ, ಮುಂದೆ  ಆನಿಸಿ ನೋಡಿದರೆ ಇನ್ನೊಂದು ಬಗೆಯ ರತ್ನಗಳು ಹೊಳೆಯುತ್ತಿವೆ.

ಭಾರತಿಸುತ ಅವರ ಸುಧಾ ವಾರಪತ್ರಿಕೆಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಅದೇ ಹೆಸರಿನ ಕಾದಂಬರಿಯನ್ನು ಚಿತ್ರಕಥೆ ಬರೆದು ನಿರ್ದೆಶಿಸಿದ್ದಾರೆ ಪುಟ್ಟಣ್ಣ ಕಣಗಾಲ್.

ಶ್ರೀಕಾಂತ್ & ಶ್ರೀಕಾಂತ್ ಎಂಟರ್ಪ್ರೈಸಸ್ ಲಾಂಛನದಲ್ಲಿ ತಯಾರಾದ ಈ ಚಿತ್ರ ೧೯೭೩  ತೆರೆಯನ್ನು ಅಲಂಕರಿಸಿತು. ಒಂದು ರೀತಿಯ ವಿಚಿತ್ರ ಅನ್ನಿಸುವಷ್ಟು ಕಥೆಗೆ ಹೂರಣ ತುಂಬಿ ನಟಿಸಿದ್ದು ಅಭಿನಯ ಶಾರದೆ ಜಯಂತಿ. ಪ್ರವರ್ಧಮಾನಕ್ಕೆ ಬರುತ್ತಿದ್ದ ಆರತಿ, ಎಡಕಲ್ಲು ಗುಡ್ಡ ಚಂದ್ರಶೇಖರ್ ಎಂದೇ ಖ್ಯಾತರಾಗಿದ್ದ ಚಂದ್ರು, ಶರಪಂಜರ, ನಾಗರಹಾವು ಚಿತ್ರಗಳಲ್ಲಿ ಚಮತ್ಕಾರಿ ಅಭಿನಯ ನೀಡಿ, ಜೊತೆಯಲ್ಲಿ ಗೆಜ್ಜೆ ಪೂಜೆ ಚಿತ್ರವನ್ನು ನಿರ್ಮಿಸಿದ್ದ ಶಿವರಾಂ ಮತ್ತು ಪೋಷಕ ಪಾತ್ರದಲ್ಲಿ ರಂಗ.

ಇಡಿ ಚಿತ್ರದಲ್ಲಿ ಆವರಿಸಿಕೊಂಡಿರುವುದು ಈ ಐದೇ ಮಂದಿ. ಇವರುಗಳನ್ನೇ ಕೇಂದ್ರವಾಗಿತ್ತು ಕೊಂಡು ಎಲ್ಲೂ ಬೇಸರ ತರಿಸದೇ ಚಿತ್ರವನ್ನು ಮಾಡಿ ಗೆದ್ದವರು ಪುಟ್ಟಣ್ಣ ಎಂಬ ಮಾಂತ್ರಿಕ ನಿರ್ದೇಶಕ.

ನರೇಂದ್ರ ಬಾಬು ಅವರ ಸಂಭಾಷಣೆ, ಎಸ್ ವಿ ಶ್ರೀಕಾಂತ್ ಅವರ ಛಾಯಾಗ್ರಹಣ, ಸಂಗೀತ ನಿಧಿ ಎಂ ರಂಗರಾವ್ ಇವರಿಂದ ಕೂಡಿದ ಈ ಚಿತ್ರಕ್ಕೆ ಸೊಗಸಾದ ಹಾಡುಗಳನ್ನು ಬರೆದವರು ಕಣಗಾಲ್ ಪ್ರಭಾಕರ್ ಶಾಸ್ತ್ರೀ, ವಿಜಯನಾರಸಿಂಹ, ಆರ್ ಎನ್ ಜಯಗೋಪಾಲ್, ನರೇಂದ್ರಬಾಬು.  ಹಾಡುಗಳಿಗೆ ದನಿಯಾದವರು ಪಿ ಸುಶೀಲ, ಎಸ್ ಪಿ ಬಾಲಸುಬ್ರಮಣ್ಯಂ, ಎಸ್ ಜಾನಕಿ.

ಈ ಚಿತ್ರ ಮನಸ್ಸೆಳೆಯುವುದು ಈ ಕಾರಣಗಳಿಂದ

೧. ಕಾಮ ಎಂಬ ಅರಿಷಡ್ವರ್ಗದ ಪ್ರಮುಖ  ವೈರಿಯನ್ನು ಕೇಂದ್ರ ಕಥಾ ವಸ್ತುವಾಗಿದ್ದರೂ ಇಡಿ ಪರಿವಾರ ಒಟ್ಟು ಕೂತು ನೋಡಬಹುದಾದ ಚಿತ್ರ ಮಾಡಿದ್ದು
೨. ಜಯಂತಿ ಆಗಲೇ ಪ್ರಸಿದ್ಧ ತಾರೆ ಎಂದು ಹೆಸರು ಮಾಡಿದ್ದರು, ಈ ರೀತಿಯ ಒಂದು ಸಂಕೀರ್ಣ ಪಾತ್ರವನ್ನು ಒಪ್ಪಿ ನಟಿಸಿದ್ದು
೩. ರಂಗ ಅವರ ಚಿತ್ರ ಜೀವನದಲ್ಲಿ ಒಂದು ವಿಭಿನ್ನ ಚಿತ್ರವಾಗಿ ಮೂಡಿ ಬಂದದ್ದು.
೪. ಪುಟ್ಟಣ್ಣ ಅವರು ಮೊದಲಬಾರಿಗೆ ಕರುನಾಡಿನಿಂದ ಒಂದು ಕಾಲನ್ನು ಹೊರಗೆ ಇತ್ತು ಕೇರಳದ ವೈನಾಡಿನಲ್ಲಿರುವ ಎಡಕಲ್ಲು ಗವಿಯಲ್ಲಿ ಕೆಲವು ಸನ್ನಿವೇಶಗಳನ್ನು ಚಿತ್ರಿಸಿದ್ದು.

ಚಿತ್ರದ ಹೆಸರು, ತಾರಾಗಣ, ತಾಂತ್ರಿಕ ವರ್ಗವನ್ನು ತೋರಿಸುವ ಜೊತೆಯಲ್ಲಿ ಅರಿಷಡ್ವರ್ಗಗಳ ಬಗ್ಗೆ ಕಿರು ಮಾತನ್ನು ಹೇಳಿ, ಜೊತೆಯಲ್ಲಿ ಪುರುಷ ಗೊಂಬೆಗಳನ್ನ ಪೂರಕವಾಗಿ ತೋರಿಸಿ ಚಿತ್ರದ ಆರಂಭದಲ್ಲೇ ತಾನು ಹೇಳ ಹೊರಟಿರುವ ಸಂದೇಶವನ್ನು ಸಾರಿ ಸಾರಿ ಹೇಳಿದ್ದಾರೆ.

ಕಾಮತುರಣಾಂ ನಲಜ್ಜಂ ನಭಯಂ ಇನ್ನು ಮೂಲಕ ಚಲನ ಚಿತ್ರ ಆರಂಭವಾಗುತ್ತದೆ.

"ವಿರಹ ನೂರು ನೂರು ತರಹ" ಹಾಡು ಸಾಹಿತ್ಯ, ಸಂಗೀತ ಮತ್ತು ಛಾಯಗ್ರಹಣದಿಂದ ಮನಗೆದ್ದರೆ. ಪಿ ಸುಶೀಲ ಮತ್ತು ಜಯಂತಿ ಪ್ರೇಕ್ಷಕರಿಗೆ ಹೇಳುತ್ತಾರೆ.. ಇರಿ ಸರ್ ನಮ್ಮ ಕಡೆಯೂ ಗಮನಿಸಿ ಅಂತ.
ಅದ್ಭುತ ಗಾಯನ ಸುಶೀಲಮ್ಮ ಅವರದಾದರೆ, ಅದಕ್ಕೆ ಪೈಪೋಟಿ ನೀಡುವಂತೆ ಜಯಂತಿ (ಇರಿ ಸ್ವಲ್ಪ ಸಮಯ ತಡೆದುಕೊಳ್ಳಿ ಲೇಖನದ ಮುಂದಿನ ಭಾಗದಲ್ಲಿ ಜಯಂತಿ ಅವರ ಬಗ್ಗೆ ಬರೆದಿದ್ದೇನೆ) ಅಭಿನಯದ ಮೂಲಕ ತೆರೆದಿಡುತ್ತಾರೆ. ವಿಜಯನಾರಸಿಂಹ ಅಕ್ಷರಶಃ ಪದಗಳ ಗಾರುಡಿಗ. ಭಾವಾಂತರಂಗದಲ್ಲಿ ಅಲ್ಲೋಲ ಕಲ್ಲೋಲಾ ಎನ್ನುವಾಗ ಕೊಳದ ನೀರಲ್ಲಿ ಮೋಡವನ್ನು ತೋರಿಸಿ ನೀರಿನ ಅಲಗಾಡುವಿಕೆಯನ್ನು ಕದಡಿದ ಮನಸ್ಸಿಗೆ ಹೋಲಿಸಿರುವ ಸನ್ನಿವೇಶ ಒಂದು ಅದ್ಭುತ ಸಂಯೋಜನೆ.

ತಮ್ಮ ದೇಹದ ಬಯಕೆಯನ್ನು ತೋಡಿ ಕೊಂಡಾಗ ರಂಗ ಹೇಳುವ ನಿಜಾಂಶ..  ನಂತರ ಉರಿಯುತ್ತಿದ್ದ ಬೆಂಕಿಗೆ ಜಯಂತಿ ನೀರು ತಂದು ಸುರಿಯುವ ದೃಶ್ಯ ಸೂಪರ್.

ಅಡ್ಡ ಬಡ್ದ ಬೈಕ್ ಓಡಿಸುತ್ತಾ ಬರುವ ಚಂದ್ರು ಮೊದಲ ದೃಶ್ಯದಲ್ಲಿಯೇ ಆತನ ಗುಣವನ್ನು ತೋರಿಬಿಡುತ್ತಾರೆ. ರಸ್ತೆಯಲ್ಲಿ ಓಡಿಸದೇ ಸಿಕ್ಕ ಮೈದಾನದಲ್ಲಿ ಇಷ್ಟ ಬಂದಾ ಹಾಗೆ ಓಡಿಸುವ ಮೂಲಕ ತಾನು ಯಾರ ಹಂಗಿಗೂ ಸಿಗದ ಮನುಷ್ಯ ಎಂಬ ತರ್ಕವನ್ನು ತೋರಿಬಿಡುತ್ತಾರೆ. ವಿಚಿತ್ರ ವೇಷಭೂಷಣ, ಮಾತು ಮಾತಿಗೂ "ಇದೆ ಫಸ್ಟ್ ಟೈಮ್" ಎನ್ನುವ ಪದವನ್ನು ಸೇರಿಸೋದು, ಈ ಪಾತ್ರ ಒಂದು ವಿಭಿನ್ನವಾಗಿ ರೂಪುಗೊಳ್ಳಲು ಸಹಾಯ ಮಾಡಿದೆ.

"ಗುಂಡಿನ ಮತ್ತೆ ಗಮ್ಮತ್ತು ಅಳತೆ ಮೀರಿದರೆ ಆಪತ್ತು" ಎಸ್ ಪಿ  ಈ ಹಾಡನ್ನು ಪಕ್ಕ ಕುಡುಕರ ಶೈಲಿಯಲ್ಲಿಯೇ ಹಾಡಿದ್ದಾರೆ. ನರೇಂದ್ರ ಬಾಬು ಅವರ ಸಾಹಿತ್ಯಕ್ಕೆ ಅಚ್ಚುಕಟ್ಟಾದ ನಟನೆ ಶಿವರಾಂ ಅವರದು. ಇವರು ಪ್ರತಿ ಸಂಭಾಷಣೆಯಲ್ಲಿ "ಗಮ್ಮತ್ತು, ಲಿಮಿಟ್ ಎನ್ನುವ ಪದಗಳನ್ನು ಉಪಯೋಗಿಸುತ್ತಲೇ ಹೇಳುವ ಮಾತು "ನಾ ಹೇಳಿದ ಹಾಗೆ ಕೇಳು.. ಆದರೆ ನಾ ಮಾಡಿದಂತೆ ಮಾಡಬೇಡ"..  ಉಪದೇಶ ಯಾರು ಹೇಳುತ್ತಾರೆ ಅನ್ನೊಂದು ಮುಖ್ಯ ಅಲ್ಲಾ ಏನು ಹೇಳುತ್ತಾರೆ ಅನ್ನೊಂದು ಮುಖ್ಯ ಎಂದು ತೋರಿಸುತ್ತಾರೆ.

ಇವರಿಬ್ಬರು ರಂಗ ಅವರ ಮನೆಗೆ ಪರಿಚಯ ಆದ ಮೇಲೆ ಚಿತ್ರ ಶುರುವಾಗುತ್ತೆ.  ದೊಡ್ಡ ದೊಡ್ಡ ಬಂಗಲೆಯಲ್ಲಿ ಒಂಟಿ ತನ.. ,ಸಾಹುಕಾರನನ್ನು ಸಾಹುಕಾರರ ಹಾಗೆ ಮಾಡದೆ ಬಯಕೆಯಲ್ಲಿ ದಟ್ಟ ದರಿದ್ರ ಸ್ಥಿತಿಗೆ ತಳ್ಳುತ್ತದೆ ಅನ್ನುವ ಮಾರ್ಮಿಕ ಸಂದೇಶ . ಎಲ್ಲಾ ಇದೆ ಏನೂ ಇಲ್ಲ ಅನ್ನಿಸುವ ವಿಚಿತ್ರ ಸನ್ನಿವೇಶ.

ಮನೆಯ ಯಜಮಾನನಿಗೆ ಹೇಳದೆ ಮಾಡುವ ಕೆಲಸ ಜೀವನದ ದಾರಿಯನ್ನು  ಹೇಗೆ ತಪ್ಪಿಸುತ್ತದೆ ಎನ್ನುವುದಕ್ಕೆ ಚಂದ್ರು ಜೊತೆಯಲ್ಲಿ ಜಯಂತಿ ಎಡಕ್ಕಲ್ಲು ಗುಡ್ಡಕ್ಕೆ ಹೋಗುತ್ತಾ "ಸಂತೋಷ ಆಹಾ ಸಂಗೀತ" ಹಾಡಿನಲ್ಲಿ ಎಸ್ಪಿ ಮತ್ತು ಪಿ ಸುಶೀಲ ಅವರ ಹಾಡುಗಾರಿಕೆ ಮತ್ತು ವಿಜಯನಾರಸಿಂಹ ಅವರ ಸಾಹಿತ್ಯ ಗಮನ ಸೆಳೆಯುತ್ತದೆ.

ಚುಟುಕಾಗಿ ಎಡಕಲ್ಲು ಗುಡ್ಡವನ್ನು ತೋರಿಸುವ ಈ ಹಾಡಿನಲ್ಲಿ ಮತ್ತು ನಂತರದ ದೃಶ್ಯದಲ್ಲಿ ಸಾವಿರಾರು ವರ್ಷಗಳ ಹಿಂದೆ ಬಂಡೆಗಳಲ್ಲಿನ ಕೆತ್ತನೆ ಗಮನ ಸೆಳೆಯುತ್ತದೆ. ಮಾನವನ ಆದಿ ಕಾಲದಿಂದಲೂ ಈ ಕಾಮ ಎನ್ನುವ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ ಎನ್ನುವ ಮಾತು ನಿಜ ಅನ್ನಿಸುತ್ತದೆ.

ತಪ್ಪು ಹೆಜ್ಜೆ ಇಡಲು ಮುನ್ನುಗುವ ಆ ಕ್ಷಣವನ್ನು ಬಣ್ಣ ಬಣ್ಣಗಳ ಬೆಳಕಿನ ಸಹಾಯದಿಂದ ಬಿಂಬಿತವಾಗುವ ದೃಶ್ಯ ಅಮೋಘ ಕಲ್ಪನೆ. ಇಲ್ಲಿಯೂ ಕೂಡ ಅಶ್ಲೀಲ ಎನ್ನಿಸುವ ದೃಶ್ಯವನ್ನು ನಾಗರೀಕ ಪ್ರಜ್ಞೆಯಿಂದ ಬರಿ ಸಾಂಕೇತಿಕವಾಗಿ ಕಡಲಿನ ಅಲೆಗಳ ಅಬ್ಬರ, ಎಲೆಯಿಂದ ಜಿನುಗುವ ನೀರಿನ ಬಿಂದು ಹೀಗೆ ಸಾಂಕೇತಿಕವಾಗಿ ಚಿತ್ರೀಕರಿಸಿದ್ದಾರೆ.

ಜೀವನದ ಹಾದಿಯಲ್ಲಿ ತಪ್ಪು ಹೆಜ್ಜೆಯನ್ನಿಟ್ಟು ಬಂದ ಮೇಲೆ ತನ್ನ ಗಂಡನಿಗೆ ಆ ವಿಷಯ ಹೇಳಲಾಗದೆ ತೊಳಲಾಡುವ ದೃಶ್ಯವನ್ನು ಕ್ಯಾಮೆರ ನಿಧಾನವಾಗಿ ಓಲಾಡುತ್ತಾ ಜಯಂತಿಯ ಹಿಂದೆ ಹೋಗುವ ರೀತಿ ತೋರಿರುವುದು ಮತ್ತೊಮ್ಮೆ ಪುಟ್ಟಣ್ಣ ಅವರ ಹಿಡಿತ ನಿರ್ದೇಶಕರ ಸ್ಥಾನದ ಮೇಲೆ ಎಷ್ಟು ಉನ್ನತ ಮಟ್ಟದಲ್ಲಿದೆ ಎಂದು ತೋರಿಸುತ್ತದೆ.

ಊರಿನ ಮನೆಯಲ್ಲಿ ಸಂಸಾರದ ವಿಷಯವನ್ನು ರಂಗ ಅವರ ಬಳಿ ನ್ಯಾಯ ತೀರ್ಮಾನ ಮಾಡಲು ಬಂದಾಗ.. ಬಯಕೆಯನ್ನು ತೃಪ್ತಿ ಪಡಿಸದ ಗಂಡಿನ ಬಳಿ ಜೀವನ ಮಾಡುವುದು ವ್ಯರ್ಥ ಎಂದು ಊರಿನ ಜನರೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅಂಥಹ ಸಂದರ್ಭದಲ್ಲಿ ರಂಗ ತನ್ನ ಜೀವನವನ್ನು ತುಲನೆ ಮಾಡಿ.. ಜಯಂತಿ ತನ್ನ ಬಾಳಿನ ದೇವತೆ ಎಂದು ಅವಳ ತಲೆಯ ಮೇಲೆ ಹೂವನ್ನು ಹಾಕುತ್ತಾರೆ.  ತಾನು ನಿಜ ಎಂದು ನಂಬಿದ್ದ ನಂಬಿಕೆಗೆ ಬದ್ಧನಾಗಿ ಇರುವುದು ಮತ್ತು ತನ್ನ ಹೆಂಡತಿ ಹಾದಿ ತಪ್ಪಿರುವುದರ ಬಗ್ಗೆ ಸ್ವಲ್ಪವೂ ಅರಿವಿರದೆ ನಡೆದುಕೊಳ್ಳುವ ಈ ದೃಶ್ಯ ನಂಬಿದ ಸತ್ಯವೆ ಒಳ್ಳೆಯದು ಅನ್ನಿಸುತ್ತದೆ.

ಇವುಗಳ ಗಡಿಬಿಡಿಯ ಮಧ್ಯೆ ಬರುವ ಆರತಿ ಪಾತ್ರ ತುಂಬಾ ವಿಭಿನ್ನವಾಗಿ ಮೂಡಿ ಬಂದಿದೆ. ಜಯಂತಿ ಎಡವಿ ಬೀಳುವ ಪಾತ್ರದಲ್ಲಿ ಅಭಿನಯಿಸಿದ್ದರೆ.. ಆರತಿ ಎಡವಿ ಬಿದ್ದವರನ್ನು ತಡವಿ ಎತ್ತುವ ಪಾತ್ರದಲ್ಲಿ ಬಂದಿದ್ದಾರೆ. ಚಂದ್ರು ಆರತಿಯ ಮೇಲೆ ಕಣ್ಣು ಹಾಕಿದಾಗ ಬಗ್ಗದೆ ಚೇಡಿಸುತ್ತಾ ಸಾಗುವ "ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ" ಹಾಡು ಋತುವಿನ ಬದಲಾವಣೆಯಲ್ಲಿಯೂ ಬಯಕೆಗಳ ಪಾತ್ರ ಹಿರಿದು ಎಂದು ಹಾಡುತ್ತಾ ಹೋಗುತ್ತಾರೆ. ಎಸ್ ಜಾನಕಿಯಮ್ಮನವರ ಕೋಮಲ ಸ್ವರ ಆರ್ ಎನ್ ಜಯಗೋಪಾಲ್ ಅವರ ಸುಲಲಿತ ಸಾಹಿತ್ಯ, ಆರತಿಯ ಅವರ ಅಭಿನಯ ಈ ಹಾಡಿನ ಬೆಡಗು ಹೆಚ್ಚಿಸಿದೆ.

ಕೊಡವ ಸಂಸ್ಕೃತಿಯ ಮದುವೆಯ ಒಂದು ಚಿಕ್ಕ ಝಲಕ್ ಇಲ್ಲಿ ಮೂಡಿ ಬಂದಿದೆ. "ಯಾವೂರವ್ವ ಇವ ಯಾವೂರವ್ವ" ಹಾಡಿನಲ್ಲಿ ಕಣಗಾಲ್ ಪ್ರಭಾಕರ್ ಶಾಸ್ತಿ ಅವರ ಸಾಹಿತ್ಯದಲ್ಲಿ ಮಡಿಕೇರಿ ಸುತ್ತ ಮುತ್ತಲ ಅನೇಕ ಪೇಟೆ ಹಳ್ಳಿಗಳ ಹೆಸರುಗಳನ್ನ ತಂದು ಹಾಡಿನಲ್ಲಿ ಕೂರಿಸಿರುವುದು  ವಿಶೇಷ. ಜಾನಕಿಯಮ್ಮ ಅವರ ಕಂಠದಲ್ಲಿ, ಆರತಿಯವರ ವ್ಯಯ್ಯಾರದ ನೃತ್ಯವೇ ಸೊಗಸು.

ಎಡಕಲ್ಲು ಗುಡ್ಡಕ್ಕೆ ಚಂದ್ರು ಆರತಿಯನ್ನು ಕರೆದೊಯ್ದಾಗ ಅಲ್ಲಿ ಆರತಿ ತೋರುವ ಧೈರ್ಯ, ಮನಸ್ಥಿತಿ ಇಂದಿನ ಪೀಳಿಗೆಗೆ ಒಂದು ದಾರಿ ದೀಪ ಎನ್ನಿಸುತ್ತದೆ.  ಎಡವಲು ಅವಕಾಶ ಹೇರಳವಾಗಿದ್ದರೂ ಮನೋ ಬಲ ಸಿದ್ಧಿಸಿದ್ದಾಗ ಇಂಥಹ ಚಿಕ್ಕ ಚಿಕ್ಕ ಉನ್ಮಾದಗಳಿಗೆ ಬಲಿಯಾಗಲು ಸಾಧ್ಯವೇ ಇಲ್ಲ.

ತನ್ನ ಅಕ್ಕಳನ್ನು ಮರಳಿ ದಾರಿಗೆ ತರುವ ಪ್ರಯತ್ನ "ನಿಲ್ಲು ನಿಲ್ಲೇ ಪತಂಗ ಬೇಡ ಬೇಡ ಬೆಂಕಿಯ ಸಂಗ" ವಿಜಯನಾರಸಿಂಹ ಪದಗಳ ಮಹಲನ್ನೇ ಕಟ್ಟಿದ್ದಾರೆ. ಅದ್ಭುತ ಸಾಹಿತ್ಯ, ಅಮೋಘ ಗಾಯನ.  ಆರತಿಯವರ ಅಭಿನಯ, ಜಯಂತಿ ಅವರ ತೊಳಲಾಟ ಸೂಪರ್.

ಅಂತಿಮ ದೃಶ್ಯದಲ್ಲಿ ತನ್ನ ಎಲ್ಲಾ ಎಡವಿದ ಪ್ರಸಂಗಗಳನ್ನು ಜಯಂತಿ ತನ್ನ ಗಂಡನಿಗೆ ಹೇಳುತ್ತಾ ತಪ್ಪನ್ನು ಒಪ್ಪಿಕೊಳ್ಳುವಾಗ ಕ್ಯಾಮೆರ ಓಲಾಟ ಜಯಂತಿಯ ಮನಸ್ಥಿತಿಯನ್ನು ನಿಖರವಾಗಿ ಬಿಂಬಿಸುತ್ತದೆ. ಒಂದು ಚಿಕ್ಕ ಚಿಕ್ಕ ದೃಶ್ಯಗಳಲ್ಲಿ ಕೂಡ ಪುಟ್ಟಣ್ಣ ತೋರುತ್ತಿದ್ದ ಜಾದೂ ಗಮನಸೆಳೆಯುತ್ತದೆ.  ಜೊತೆಯಲ್ಲಿಯೇ ಸಂಸಾರದ ಗುಟ್ಟನ್ನು ಹೇಳುವೆ ಎಂದು ಬೆದರಿಸುವ ಚಂದ್ರು ಮನೆಗೆ ಬಂದಾಗ ಅವರ ನೆರಳನ್ನು ಭೂತಾಕಾರವಾಗಿ ದೊಡ್ಡದಾಗಿ ತೋರಿಸುವ ಮೂಲಕ ಬಯಕೆ ಚಿಕ್ಕ ಗಾತ್ರದಲ್ಲಿ ಬಂದರೂ ಅದು ಹೊತ್ತು ತರುವ ಸಮಸ್ಯೆ ಭೂತಾಕಾರವಾಗಿ ನಿಲ್ಲುತ್ತದೆ ಮತ್ತು ಕಾಡುತ್ತದೆ ಎಂದು ತೋರಿದ್ದಾರೆ. ಉತ್ತಮ ನೆರಳು ಬೆಳಕಿನ ಸಂಯೋಜನೆ.
*****
ಜಯಂತಿ ಈ ಚಿತ್ರದ ನಾಯಕಿ, ಕಣ್ಣಲ್ಲೇ ಅವರು ಕಾರುವ ಬಯಕೆಯ ಭಾವ, ನಾಜೂಕಿನ ಸನ್ನಿವೇಶಗಳಲ್ಲಿ ತನಗಿಂತಲೂ ಕಿರಿಯ ನಟ ಚಂದ್ರುವಿನ ಜೊತೆಯಲ್ಲಿನ ಅಭಿನಯ ವಾಹ್ ಎನ್ನಿಸುತ್ತದೆ. ಈ ಚಿತ್ರದುದ್ದಕ್ಕೂ ಕಣ್ಣುಗಳಿಗೆ ಕಾಡಿಗೆ ತುಸು ಹೆಚ್ಚಾಗಿಯೇ ಬಳಸಿದ್ದಾರೆ. ಕಾಮಾಲೆ ಕಣ್ಣಿಗೆ ಕಾಣೋದೆಲ್ಲಾ ಹಳದಿ ಎನ್ನುವ ಹಾಗೆ, ಈ ತೀಕ್ಷ್ಣ ಕಾಡಿಗೆ ಕಣ್ಣುಗಳು ಅವರ ಬಯಕೆ, ಮನಸ್ಥಿತಿ ಎಲ್ಲವನ್ನು ಸೂಚ್ಯವಾಗಿ ತೋರಿಸುತ್ತದೆ.

ವಿರಹ ನೂರು ನೂರು ತರಹ ಹಾಡಿನಲ್ಲಿ ಕಣ್ಣು ಮುಖದಲ್ಲೇ ವ್ಯಕ್ತ ಪಡಿಸುವ ಆ ಕಾಮದ ಬಯಕೆ, ಕೆಲವು ದೃಶ್ಯಗಳಲ್ಲಿ ಕಣ್ಣಲ್ಲೇ ಕಾರುವ ರೋಷ, ಜಿಗುಪ್ಸೆ, ತನ್ನ ತಂಗಿ ಆರತಿಯನ್ನು ಬಲೆಗೆ ಎಳೆದುಕೊಳ್ಳುತ್ತಿದ್ದಾನೆ ಎಂದು ಅರಿವಾದಾಗ ಅದನ್ನು ತಡೆಯಲು ಪ್ರಯತ್ನ ಪಡುವ ಅಭಿನಯ (ಅಡಿಗೆ ಮನೆಯ ಹತ್ತಿರ ಚಂದ್ರುವಿಗೆ ಹೋಗು ಎಂದು ಹೇಳುವ ದೃಶ್ಯ) ಅದ್ಭುತ.

ಆ ಧ್ವನಿ, ಆ ನೋಟ, ವೇಷ ಭೂಷಣ ಎಲ್ಲವನ್ನೂ ಸೇರಿಸಿಕೊಂಡು ನಿಖರವಾಗಿ ಜಯಂತಿ ಆ ಪಾತ್ರದೊಳಗೆ ನುಗ್ಗಿಬಿಟ್ಟಿದ್ದಾರೆ

ಆರತಿ ಉತ್ತರಾರ್ಧದಲ್ಲಿ ಬಂದರು ತಮ್ಮ ಪಾಲನ್ನು ಸರಿಯಾಗಿಯೇ ಗುರುತಿಸಿಕೊಂಡಿದ್ದಾರೆ. ಮನೊಧೈರ್ಯಕ್ಕೆ ಇನ್ನೊಂದು ಹೆಸರಾಗುವ ಪಾತ್ರ ಅವರದು. ಪ್ರತಿ ಹಂತದಲ್ಲೂ ತಮ್ಮ ಇರುವಿಕೆಯನ್ನು ತೋರುವ ಅವರ ಅಭಿನಯ ಸೊಗಸಾಗಿದೆ.

ಪೋಷಕ ಪಾತ್ರದಲ್ಲಿ ಬರುವ ರಂಗ, ತೊಳಲಾಡುವ ಪಾತ್ರದಲ್ಲಿ ಅಚ್ಚುಕಟ್ಟಾಗಿ ನಟಿಸಿದ್ದಾರೆ. ತನ್ನ ಹೆಂಡತಿ ಜಾರಿದ್ದಾಳೆ ಎಂದು ಅವಳೇ ತಪ್ಪನ್ನು ಒಪ್ಪಿಕೊಂಡಾಗ... ಪ್ರೇಮದ ಮೇಲೆ ಕಾಮ ಜಯ ಸಾಧಿಸಿದ ಹೊತ್ತು ಎಂದು ಹೇಳಿ ಇಡಿ ಸನ್ನಿವೇಶವನ್ನು ತಿಳಿಗೊಳಿಸುತ್ತಾರೆ.. ಕಡೆಗೆ ಕೇಳುವ ಪ್ರಶ್ನೆ ನಿನಗೆ ಬೇಕಿರುವುದು ಕಾಮವೋ ಪ್ರೇಮವೋ... ಅನ್ನುವಾಗ ಅವರ ಮುಖಭಾವ, ಅಭಿನಯ ಇಷ್ಟವಾಗುತ್ತದೆ.

ಚಂದ್ರು.. ಆಹಾ ಏನು ಹೇಳಲಿ ಈ ಪಾತ್ರದ ಬಗ್ಗೆ. ಇವರು ನಟಿಸಬೇಕಾಗಿದ್ದು ಘಟಾನುಘಟಿಗಳ ಮಧ್ಯೆ. ಅಷ್ಟರಲ್ಲಿಯೇ ಜಯಂತಿ, ಆರತಿ, ಶಿವರಾಂ, ರಂಗ ತಮ್ಮ ಛಾಪನ್ನು ಚಿತ್ರರಂಗದಲ್ಲಿ ಮೂಡಿಸಿದ್ದರು. ಅವರುಗಳ ಮಧ್ಯೆ ತುಂಟ ದಾರಿ ತಪ್ಪಿದ ಹುಡುಗನಾಗಿ ಅಭಿನಯಿಸುವುದು ಸವಾಲೇ ಸರಿ. ಜಯಂತಿಯ ಪಾತ್ರವನ್ನು ಮೋಹಿಸುವ ಸನ್ನಿವೇಶ, ರಂಗ ಅವರ ಬಳಿ ಕೂಗುತ ಮಾತಾಡುವ ಪರಿ, ಶಿವರಾಂ ಅವರನ್ನು ಬಯ್ದು ದೂರ ಅಟ್ಟುವ ದೃಶ್ಯ, ಆರತಿ ಜೊತೆಯಲ್ಲಿನ ಅಭಿನಯ ಎಲ್ಲವಕ್ಕೂ ಪಕ್ಕ ಪ್ಲೇ ಬಾಯ್ ರೂಪ ಕೊಟ್ಟಿದ್ದಾರೆ. ವೇಷಭೂಷಣಗಳು, ಮಾತಿನ ಚಟಾಕಿ "ಇದೆ ಫಸ್ಟ್ ಟೈಮ್" ಅವರ ಪಾತ್ರವನ್ನ ಇನ್ನಷ್ಟು ಸೊಗಸು ಮಾಡಿವೆ.

ಶಿವರಾಂ ಒಂದು ಚಿಕ್ಕ ಚಿಕ್ಕ ಪಾತ್ರವೇ ಆದರೂ.. ಗಮ್ಮತ್ತು, ನಿಯತ್ತು, ಲಿಮಿಟ್ ಈ ಪದಗಳಲ್ಲೇ ಅವರ ಸಂಭಾಷಣೆ ಆರಂಭ ಇಲ್ಲಾ ಮುಕ್ತಾಯ.. ತನ್ನ ವಯಸ್ಸಿಗೂ ಮೀರಿದ ಪಾತ್ರವಾದರೂ ಅಭಿನಯದಲ್ಲಿ ಗೆದ್ದಿದ್ದಾರೆ.

ಕಾಮ ಕ್ಷಣ ಮಾತ್ರ.. ಪ್ರೇಮ ಎಲ್ಲಾ ಸಮಯಕ್ಕೂ ಎನ್ನುವ ಸುಂದರ ನೀತಿಯನ್ನು ಹೇಳುತ್ತಾ ಜಾರಿ ಬಿದ್ದರೆ ಅದಕ್ಕೆ ಸಾವೇ ಗುರಿ ಎನ್ನುವುದನ್ನು ಜಯಂತಿ ಮತ್ತು ಚಂದ್ರುವಿನ ಪಾತ್ರದ ಅವಸಾನದಲ್ಲಿ ತೋರಿದ್ದಾರೆ. ಗಂಡ ಜಾರಿ ಹೋದ ಹೆಂಡತಿಯನ್ನು ಸ್ವೀಕರಿಸುತ್ತೇನೆ ಎಂದು ಹೇಳಿದರು.. ತಪ್ಪು ಮಾಡಿದ್ದಕ್ಕೆ ಸಾವೇ ಪ್ರಾಯಶ್ಚಿತ್ತ ಎಂದು ತನ್ನನ್ನೇ ಕೊನೆಗಾಳಿಸುವ ಆ ದೃಶ್ಯದಲ್ಲಿ ತಪ್ಪು ಮಾಡಬೇಡಿ. ಮಾಡಿದರೆ ಆ ನೊಂದು ಬೆಂದು ಬಾಳುವ ಬದಲು ಮರೆಯಾಗಿ ಹೋಗಿ ಎನ್ನುತ್ತದೆ ಸಂದೇಶ. ಈ ಮಾತುಗಳು ಚರ್ಚೆ ಒಳಪಡಬಹುದಾದರೂ ಆ ಕಾಲ ಘಟ್ಟದಲ್ಲಿ ಇದು ಒಂದು ಅಪರಾಧ ಎನ್ನುತ್ತಿದ್ದ ಕಾಲದಲ್ಲಿ ಈ ರೀತಿಯ ಅಂತ್ಯ ಈ ಚಿತ್ರದಲ್ಲಿ ಬಂದದ್ದು ಸರಿ ಅನ್ನಿಸುತ್ತದೆ.

ಒಂದು ಸುಂದರ ಕಥೆಯನ್ನು ಅಷ್ಟೇ ಅಚ್ಚುಕಟ್ಟಾಗಿ ತೆರೆ ಮೇಲೆ ತರುವುದು ಮತ್ತು ಅಲ್ಲಿ ವಿಚಿತ್ರ ಸನ್ನಿವೇಶಗಳನ್ನು ಕೂಡ ಎಲ್ಲರೂ ಕೂತು ನೋಡುವ ಹಾಗೆ ಹೆಣೆಯುವುದು ನಿರ್ದೇಶಕರ ತಾಕತ್ತು. ಅಂಥಹ ಒಂದು ಸವಾಲಿನಲ್ಲಿ ಗೆಜ್ಜೆ ಪೂಜೆ, ನಾಗರಹಾವು ಚಿತ್ರಗಳಲ್ಲಿ ಗೆದ್ದಿದ್ದ ಪುಟ್ಟಣ್ಣ ಅವರು ಈ ಚಿತ್ರದಲ್ಲಿ ತಮ್ಮ ನಿರ್ದೇಶಕರ ಶಕ್ತಿಯನ್ನು ಪರಿಣಾಮಕಾರಿ ನಿರೂಪಿಸಿದ್ದಾರೆ. ಒಂದು ವಯಸ್ಕರ ಚಿತ್ರ ಆಗಬಹುದಿದ್ದ ಈ ಕಥೆಯನ್ನು ಸುಲಲಿತವಾಗಿ ಬರಿ ಸಾಂಕೇತಿಕ ದೃಶ್ಯಗಳಲ್ಲಿ ಮಾತ್ರ ಆ ಭಾವವನ್ನು ತೋರಿಸಿ ಚಿತ್ರ ರೂಪಿಸಿರುವುದು "ಎಡಕಲ್ಲು ಗುಡ್ಡದ ಮೇಲೆ" ಚಿತ್ರ ಒಂದು ರತ್ನವಾಗಿ ಮಾರ್ಪಟ್ಟಿರುವುದಕ್ಕೆ ಸಾಕ್ಷಿ. ಪುಟ್ಟಣ್ಣ ಕಣಗಾಲ್ ಗುರುಗಳೇ ನಿಮಗೆ ನಮೋ ನಮಃ. 

Thursday, November 20, 2014

ಕಸ್ತೂರಿ ಕಪ್ಪು ಆದರೆ ನಿವಾಸದ ಯಜಮಾನನ ಮನಸ್ಸು ವರ್ಣಮಯ!! (1971)

ತೇನ್ ಸಿಂಗ್ ಗೌರಿಶಂಕರ ತುತ್ತ ತುದಿಯಲ್ಲಿ ನಿಂತಾಗ ಸಂಭ್ರಮದ ವಿಷಯವಾಗಿತ್ತು.. ನೀಲ್ ಆರ್ಮ್ ಸ್ಟ್ರಾಂಗ್ ಚಂದ್ರಲೋಕಕ್ಕೆ ಪಾದ ಇಟ್ಟಾಗ ಸಂತಸವಿತ್ತು.. ಕಾರಣ ತಂತ್ರಜ್ಞಾನ, ಮನುಷ್ಯನ ಅಂಕೆ ಶಂಕೆಗಳು ಒಂದು ಹಂತದಲ್ಲಿ ತನ್ನ ಹತೋಟಿಯಲ್ಲಿದ್ದಾಗ.. ಹೌದು ಇವೆಲ್ಲ ನೆಡೆದು ಒಂದು ನಲವತ್ತು ವರ್ಷಗಳ ಮೇಲೆ ಆಯಿತು.

ಅಕ್ಕಿ ಒಂದು ಕೆ. ಜಿ. ಗೆ ಒಂದು ರೂಪಾಯಿಗಿಂತ ಕಮ್ಮಿ ಇದ್ದ ಕಾಲ.. ಇಂದು ಒಂದು ನೂರು ರೂಪಾಯಿಗೆ ಕೊಂಚ ಕಮ್ಮಿ ಇದೆ.. ಹಾಗೆ ಮಾನವನ ಆಸೆ, ದುರಾಸೆ, ಅಸೂಯೆ, ಸ್ವಾರ್ಥ ಮುಂಚೆಗಿಂತಲೂ ದುಪ್ಪಟ್ಟು ಆಗುತ್ತಲೇ ಇದೆ... ಕಮ್ಮಿಯಾಗುತ್ತಾ ಸಾಗಿದೆ ಜೀವನ ಮೌಲ್ಯಗಳು . 

ಇವೆಲ್ಲ ಮಾತು ಯಾಕೆ ಅಂದಿರಾ.. ಕಸ್ತೂರಿ ನಿವಾಸ ಚಿತ್ರದ ವರ್ಣಮಯ ರೂಪವನ್ನು ನೋಡಿ ಬಂದ ಮೇಲೆ ಅನ್ನಿಸಿದ ಮಾತುಗಳು. 

ಈ ಚಿತ್ರದ ಜೀವಾಳ ಉತ್ತರಾರ್ಧದಲ್ಲಿದೆ. ಅಣ್ಣಾವ್ರಿಗೆ ಗಡ್ಡ ಮೂಡಿ ಬಂದ ಮೇಲೆ ಅವರ ಅಭಿನಯ ವಾಹ್ ವಾಹ್ ಅನ್ನಿಸುತ್ತದೆ. 
ಸಂಭಾಷಣೆ ವೈಖರಿ, ಜೀವನದಲ್ಲಿ ಹಣಕಾಸಿನ ವಿಷಯದಲ್ಲಿ ಜಾರು ಹಾದಿಯಲ್ಲಿದ್ದರೂ ತಾ ನಂಬಿಕೊಂಡಿದ್ದ ಆದರ್ಶ, ಹಿರಿಯ ತಲೆಮಾರಿನವರು ಹಾಕಿಕೊಟ್ಟ ಸಂಸ್ಕಾರ ಇವುಗಳನ್ನು ಕಾಪಾಡಲು ಹೋರಾಡುವ ಪಾತ್ರದಲ್ಲಿ ಅಣ್ಣಾವ್ರು ತಲ್ಲೀನರಾಗಿ ಬಿಡುತ್ತಾರೆ. 

ಮೈಯನೆ ಹಿಂಡಿ ನೊಂದರು ಕಬ್ಬು ಸಿಹಿಯ ಕೊಡುವುದು..
ತೇಯುತಲಿದ್ದರು ಗಂಧದ ಪರಿಮಳ ತುಂಬಿ ಬರುವುದು 
ತಾನೇ ಉರಿದರು ದೀಪವು ಮನೆಗೆ ಬೆಳಕ ಕೊಡುವುದು 
ದೀಪ ಬೆಳಕ ಕೊಡುವುದು.. 

ಇಡಿ ಚಿತ್ರದ ಜೀವಾಳ ಈ ನಾಲ್ಕು ಸಾಲಿನಲ್ಲಿ ಬರೆದಿದ್ದಾರೆ ಸಾಹಿತ್ಯ ರತ್ನ ಚಿ ಉದಯಶಂಕರ್.. ಹಾಗೂ ಇಡಿ ಚಿತ್ರಕ್ಕೆ ತಳಹದಿ ಈ ಮೇಲಿನ ಸಾಲುಗಳು. 

ಈ ಸಾಲುಗಳಿಗೆ ಅಣ್ಣಾವ್ರ ಅಭಿನಯ ನೋಡಿಯೇ ಆನಂದ ಪಡಬೇಕು.. ಆ ಕುರುಚಲು ಗಡ್ಡ.. ಕಪ್ಪು ಕೋಟು ಪ್ಯಾಂಟು.. ಮೆಲ್ಲಗೆ ಹಾರುವ ಕೂದಲು.. ಮುಖದಲ್ಲಿ ಮಾಸದ ನಗೆ.. ಜೀವನದ ಕಷ್ಟಗಳು ಹಿಂಡಿ ಹಿಪ್ಪೆ ಮಾಡುತ್ತಿದ್ದರು ಕಣ್ಣಲ್ಲಿ ಹೊಳಪು .. ಮೊಗದಲ್ಲೂ ನಗು .. ಒಮ್ಮೆಲೇ ಹಾಗೆ ಜೀವನದ ಕಷ್ಟಗಳಿಗೆ ಸೆಟೆದು ನಿಂತಾಗ.. ಕಷ್ಟಗಳು ಸೆಟೆದು ನಮ್ಮಿಂದ ದೂರ ನಿಲ್ಲುತ್ತವೆ ಅನ್ನಿಸಿಬಿಟ್ಟಿತು. 



ಅಣ್ಣಾವ್ರ ಅಭಿನಯ ಕೆಲವು ಸೂಪರ್ ಸೂಪರ್ ಅನ್ನಿಸುವ ತುಣುಕುಗಳು 
  • ಮೇಲೆ ಹೇಳಿದ ಸನ್ನಿವೇಶ 
  • ಲೀಲಾ.. ತನ್ನ ಮದುವೆಯ ಬಗ್ಗೆ ವಿಷಯ ಹೇಳಿದಾಗ, ತನ್ನ ಆಸೆಗೆ ತಣ್ಣೀರು ಬಿತ್ತು ಎಂದು ಗೊತ್ತಾದ ಮೇಲೆ, ಮೆಟ್ಟಿಲು ಹತ್ತುತ್ತಾ ಮನೆ ಕೆಲಸದ ರಾಮಯ್ಯನಿಗೆ "ಪೂರ್ ಫೆಲೋ.. ಪೂರ್ ಫೆಲ್ಲೋ.. " ಅನ್ನುತ್ತಾ ಅರ್ಧ ನಗುತ್ತಾ ಕಣ್ಣಲ್ಲಿ ನೀರು ತುಂಬಿಕೊಂಡು ಹೋಗುವ ದೃಶ್ಯ 
  • ಪ್ರಭು ಲೀಲಾ ನನ್ನಲ್ಲಿ ಏನೋ ಬೇಡಲು ಬಂದಿದ್ದಾಳೆ.. ನನ್ನ ಹತ್ತಿರ ಇರುವ ವಸ್ತುವನ್ನು ಮಾತ್ರ ಕೇಳಲಿ
  • ಕಸ್ತೂರಿ ನಿವಾಸದ ವಂಶದಲ್ಲಿ ಇದುವರೆಗೂ ಇಲ್ಲ ಎಂದು ಹೇಳಿಲ್ಲ.. ನನ್ನ ಬಾಯಲ್ಲಿ ಇಲ್ಲ ಎಂದು ಹೇಳಿಸಲು ನನ್ನನ್ನು ಬದುಕಿಸಿದ್ದೀಯ ಪ್ರಭು 
  • "ಆಡಿಸಿ ನೋಡು ಬೀಳಿಸಿ ನೋಡು" ಸಂತಸ ಮತ್ತು ದುಃಖದ ಎರಡು ಹಾಡಿಗೆ ಅಭಿನಯ.. ಅದರಲ್ಲೂ ದುಃಖದ ಛಾಯೆಯ ಗೀತೆಗೆ. ಕಣ್ಣೀರನ್ನು ಒರೆಸಿಕೊಳ್ಳುತ್ತಾ ನಡೆಯುತ್ತಾ ಸಾಗುವ ದೃಶ್ಯ ಮನಕಲಕುತ್ತದೆ. 
  • ಉಂಗುರ ತೆಗೆದು ಕೊಟ್ಟ ಮೇಲೆ ಅಶ್ವಥ್ ಹತ್ತಿರ ಬಂದು.. ಅದೃಶ್ಯ ಉಂಗುರದ ಹರಳಲ್ಲಿ ಇರೋಲ್ಲ.. ಅಂತ ಹೇಳಿ ಹಣೆಯ ಮೇಲೆ ಗೆರೆ ಎಳೆದು ತೋರಿಸುತ್ತಾರೆ. ಸೂಪರ್ ಸೂಪರ್ 

ಇನ್ನು ಕೆ ಎಸ್ ಅಶ್ವಥ್ ಈ ಚಿತ್ರಕ್ಕೆ ಬಂಗಾರದ ಕಳಸ.. ಅಷ್ಟೊತ್ತಿಗೆ ಅಪಾರ ಹೆಸರು ಗಳಿಸಿದ್ದ ಈ ನಟ ರತ್ನ.. ಮನೆ ಆಳಿನ ಪಾತ್ರದಲ್ಲಿ ವೈಭವಯುತ ನಟನೆ ನೀಡಿದ್ದಾರೆ.. 
  • ಅಣ್ಣಾವ್ರು ಲೀಲಾಳ ಹತ್ತಿರ ಫೋನಿನಲ್ಲಿ ಪ್ರೀತಿಯಿಂದ ಮಾತಾಡುವಾಗ ಅಶ್ವಥ್ ಕೊಡುವ ನೋಟ
  • ಬುದ್ಧಿ.. ಉಂಗುರ ತೆಗೆಯಬಾರದಿತ್ತು.. ಎಂದು ಕಳಕಳಿಯಾಗಿ ಹೇಳುವ ಮಾತು 
  • ಊಟ ಚೆನ್ನಾಗಿತ್ತು ಅಂತ ಹೇಳಿ ತಿಂದ್ರಲ್ಲವ್ವ.. ಅದೇ ಪಾರಿವಾಳ ಮಾರಿ ಬಂದ ಹಣದಲ್ಲಿ ಸಾಮಾನು ತಂದು ಮಾಡಿದ ಅಡಿಗೆ 
  • ಮನೆ ಕಸ್ಕಂಡ್ರಿ, ಆಸ್ತಿ ಕಸ್ಕಂಡ್ರಿ, ಅಂತಸ್ತು ಕಸ್ಕಂಡ್ರಿ, ಪದವಿ ಕಸ್ಕಂಡ್ರಿ.. ಕಡೆಗೆ ಪಾರಿವಾಳ ಕಸ್ಕಳಕ್ಕೂ ಬಂದ್ಬಿಟ್ರಿ.. ಹೊಗ್ರವ್ವ ಇನ್ನೇನು ಕಸಕಳಕ್ಕೆ ಬಂದ್ರಿ.. 
  • ಜೋರಾಗಿ ಕೈ ಮುಗಿದು .. "ಇಬ್ಬರೂ ಅನಾಥರನ್ನು ತಂದು ಸಾಕಿದ್ರು.. ನೀವು ಮತ್ತು ಚಂದ್ರಪ್ಪ.. ಇಬ್ಬರೂ ಸರಿಯಾಗಿ ಮಾಡಿದ್ರಿ"
  • ಅಣ್ಣಾವ್ರು ಪಾರಿವಾಳವನ್ನು ಹದ್ದಿನ ಮೇಲೆ ಛೂ ಬಿಡಲು ಹೋದಾಗ.. ಅವರನ್ನು ತಡೆದು ಹದ್ದಿಗೆ ಕಲ್ಲು ಹೊಡೆಯುತ್ತಾ ಹೇಳುವ ಸಂಭಾಷಣೆ 
  • ಚಿತ್ರದುದ್ದಕ್ಕೂ ಬೆನ್ನು ಬಾಗಿಸಿ ನಡೆಯುತ್ತಾ ಮನೋಜ್ಞ ಅಭಿನಯ ನೀಡಿದ್ದಾರೆ. ತನ್ನ ಧಣಿಯನ್ನು ನೆರಳಂತೆ ಕಡೆಯ ತನಕ ಕಾಯುವ ಪಾತ್ರ ನಿಜಕ್ಕೂ ಅದ್ಭುತ. 
ಬಾಲಣ್ಣ ತನ್ನ ವಿಚಿತ್ರ ಸಂಭಾಷಣೆ ಮೂಲಕ ತನ್ನ ಇರುವನ್ನು ತೋರುತ್ತಾರೆ.  ಪ್ರಾಸಬದ್ಧ ಮಾತುಗಳು, ಅಂಗೀಕ ಅಭಿನಯ, ಮುಖದ ಭಾವ .  ಚಿತ್ರದ ಮೊದಲರ್ಧದಲ್ಲಿ ಮಿಂಚುತ್ತಾರೆ. ಉತ್ತಾರಾರ್ಧದಲ್ಲಿ ಮೆಲ್ಲಗೆ ಚಂದ್ರುವನ್ನು ಎತ್ತಿ ಕಟ್ಟಲು ಉಪಾಯ ಮಾಡುವ ಪಾತ್ರದಲ್ಲಿ ಮಿನುಗುತ್ತಾರೆ. 

ಕಪ್ಪು ಬಿಳುಪಿನಲ್ಲಿ ಜಯಂತಿ ಹೊಳೆಯುತ್ತಾರೆ.. ಇನ್ನು ವರ್ಣ ಜಾಲದಲ್ಲಿ ಅಬ್ಬಾ ಎಷ್ಟು ಸುಂದರ.. ಅದ್ಭುತ ಕಂಗಳು, ಭಾವ ಉಕ್ಕಿಸುವ ನಟನೆ ಇಷ್ಟವಾಗುತ್ತಾರೆ, 
ಚಿಕ್ಕ ಚೊಕ್ಕ ಪಾತ್ರದಲ್ಲಿ.. ಒಂದು ಹಾಡಿಗೆ, ಒಂದು ದೃಶ್ಯಕ್ಕೆ ಬರುವ ಆರತಿ, "ನೀ ಬಂದು ನಿಂತಾಗ" ಹಾಡಿನಲ್ಲಿ ಎಲ್ಲರ ಮನದಲ್ಲಿ ಛಾಪು ಒತ್ತಿ ಬಿಟ್ಟಿದ್ದಾರೆ. 
ರಾಜಾಶಂಕರ್ ಆ ಕಾಲದ ಉತ್ತಮ ಪೋಷಕ ನಟ, ಸ್ಪುರದ್ರೂಪಿ, ದಟ್ಟ ಹುಬ್ಬುಗಳಿಂದ ಹೆಸರಾಗಿದ್ದ ಈತ, ಅಣ್ಣಾವ್ರ ಅನೇಕ ಚಿತ್ರಗಳಲ್ಲಿ ಕಾಯಂ ನಟ. ಉತ್ತಮ ಅಭಿನಯ ನೀಡಿದ್ದಾರೆ.. ಅದರಲ್ಲೂ ತನ್ನ ತಪ್ಪಿನ ಅರಿವಾಗಿ ಅಣ್ಣಾವ್ರ ಮುಂದೆ ಕ್ಷಮೆ ಕೇಳುವ ದೃಶ್ಯದಲ್ಲಿ ಮನಗೆಲ್ಲುತ್ತಾರೆ. 

ಕಪ್ಪು ಬಿಳುಪಿನ ಆ ಕಾಲದಲ್ಲಿ ಜನರ ಮನಸ್ಸು ನಿರ್ಮಲವಾಗಿತ್ತು, ಈ ರೀತಿಯ ಚಿತ್ರ, ನಾಯಕ ಉದಾರಿ, ಧರ್ಮ ನಿಷ್ಠ, ಇಂಥಹ ಉದಾತ್ತ ಪಾತ್ರಗಳಿಂದ ಕೂಡಿದ ನಾಯಕ, ಅಥವಾ ಕಥಾವಸ್ತು ಕಡಿಮೆ ಬರುತ್ತಿದ್ದ ಕಾಲದಲ್ಲಿ ಅಚಾನಕ್ ಈ ಚಿತ್ರ ಬಂದಾಗ ಪ್ರೇಕ್ಷಕರು ಹುಚ್ಚೆದ್ದು ನೋಡಿ ಸಂತಸ ಪಟ್ಟಿದ್ದರು. ಚಿತ್ರಕಥೆಯನ್ನು ತರ್ಕದ ಕತ್ತರಿಗೆ ಸಿಳುಕಿಸಿದಾಗ ಪೇಲವ ಅನ್ನಿಸಬಹುದು. ಹಾಗೆ ನೋಡಿದರೆ ಚಲನ ಚಿತ್ರಗಳೇ ಒಂದು ಭ್ರಮೆ, ಚಿತ್ರ ವಿಚಿತ್ರ ತರ್ಕಗಳಿಗೆ ಉತ್ತರಗಳೇ ಇಲ್ಲ. 

ಈ ತರ್ಕದ ತಲೆಯನ್ನು ತೆಗೆದಿಟ್ಟು ಉತ್ತಮ ಸಂಭಾಷಣೆ, ಸಾಹಿತ್ಯ, ಹಾಡುಗಳು, ಅಭಿನಯ, ಕಣ್ಣು ಕೋರೈಸುವ ಬಣ್ಣ ಬಣ್ಣದ ಪಾತ್ರಗಳು ತೆರೆಯ ಮೇಲೆ ಬಂದು ಮನ ಬೆಳಗುವುದನ್ನು ನೋಡಲು ಖಂಡಿತ ಚಿತ್ರ ಮಂದಿರಕ್ಕೆ ಹೋಗಲೇ ಬೇಕು. 



ಕೆ ಸಿ ಎನ್ ಕುಟುಂಬ ಕನ್ನಡ ಚಿತ್ರರಂಗದಲ್ಲಿ ಸಾಧನೆಯ ಶಿಖರವನ್ನೇ ಮೂಡಿಸಿದೆ. ಅಂಥಹ ಇನ್ನೊಂದು ಪ್ರಯತ್ನ ಕಸ್ತೂರಿ ನಿವಾಸದ ಕೃತಿಯನ್ನು ಬಣ್ಣದಲ್ಲಿ ಅದ್ದಿ ತೆಗೆದದ್ದು. ಒಂದು ಅದ್ಭುತ ಶ್ರಮ ಇಡಿ ಚಿತ್ರದ ಪ್ರತಿಯೊಂದು ಅಂಚಿನಲ್ಲೂ  ನೋಡಬಹುದು. ಆ ಕಾಲದ ವರ್ಣವನ್ನು ಗಮನದಲ್ಲಿಟ್ಟುಕೊಂಡು ತಯಾರಾದ ಈ ವರ್ಣಮಯ ಶ್ರಮ ಕೊಟ್ಟ ಹಣಕ್ಕೆ ಖಂಡಿತ ಮೋಸ ಮಾಡುವುದಿಲ್ಲ. 

ಹೋಗಿ ಬನ್ನಿ ಕನ್ನಡ ಚಿತ್ರಗಳ ಅಭಿಮಾನಿಗಳೇ.. ಕಸ್ತೂರಿ ಕಪ್ಪು ನಿಜ.. ಆದರೆ ಈ ಕಸ್ತೂರಿ ವರ್ಣಮಯ... !!!

Sunday, November 16, 2014

ಸ್ಪೆಷಾಲಿಟಿ... ಪುಟ್ಟಣ್ಣ ಸ್ಪೆಷಾಲಿಟಿ - ನಾಗರಹಾವು (1972)

ಬಹುಶಃ ಭವಿಷ್ಯ ಹೇಳುವವರು ಕೂಡ ಊಹಿಸಿರಲಿಕ್ಕಿಲ್ಲ..

ಸಾವಿರದ ಒಂಬೈನೂರ ಎಪ್ಪತ್ತೆರಡನೆ ಇಸವಿಯಲ್ಲಿ ಒಂದು  ಉಲ್ಕೆ ಕನ್ನಡದ ಬೆಳ್ಳಿತೆರೆಗೆ ಅಪ್ಪಳಿಸಿತು..

ಅದುವೇ ಪುಟ್ಟಣ್ಣ ಕಣಗಾಲ್ ಒಂದು ವಿಭಿನ್ನ ಪಥ ತುಳಿದ ಪರ್ವ ಕಾಲ.. ಹಿಂದೆ ಮಾಡಿದ ಚಿತ್ರಗಳು ರತ್ನಗಳಾಗಿದ್ದರೆ... ಈ ಚಿತ್ರದ ನಂತರ ಮಾಡಿದ ರತ್ನಗಳು ಚಿತ್ರರತ್ನಗಳಾದವು. 

ಎನ್ ವೀರಾಸ್ವಾಮಿ ಆ ಕಾಲದ ಈ ಕಾಲದ ಎಲ್ಲಾ ಕಾಲದ ಹೆಮ್ಮೆಯ ನಿರ್ಮಾಪಕರು. ಅವರು ಪುಟ್ಟಣ್ಣ ಅವರ ಜೊತೆಯಲ್ಲಿ ಕೈಗೂಡಿಸಿದ ಮೇಲೆ ಸಣ್ಣ ಸಣ್ಣ ಕಲ್ಲುಗಳು ಹೊಳೆಯುತ್ತವೆ. ಈಶ್ವರಿ ಲಾಂಛನದಲ್ಲಿ ತಯಾರಾದ ಈ ಚಿತ್ರ  ಬೆಳ್ಳಿ ತೆರೆಯನ್ನು ಬೆಳಗಿದ್ದೆ ಅಲ್ಲದೆ ಅನೇಕ ತಾರೆಗಳನ್ನು ಚಮಕಾಯಿಸಿತು. 

ಚಿತ್ರದ ಹೆಸರನ್ನು ತೋರಿಸುವ ಟೈಟಲ್ ಕಾರ್ಡ್ ಮೊದಲಾಗಿ ಗಮನಸೆಳೆಯುತ್ತದೆ.. ನಿಗಿ ನಿಗಿ ಉರಿಯುವ ಕಾಯುವ ಚಿತ್ರದುರ್ಗದ ಬಂಡೆಗಳು, ಉರಿಯುತ್ತಿರುವ ಸೂರ್ಯ, ಮೋಡದೊಳಗೆ ಮರೆಯಾಗಲು ಹೊಂಚು ಹಾಕುತ್ತಿರುವ ದೃಶ್ಯದ ಮಧ್ಯದಿಂದ ಮೂಡಿ ಬರುತ್ತದೆ "ನಾಗರಹಾವು" ಚಿತ್ರದ ಹೆಸರು. 



ಉರಿಯುವ ಸೂರ್ಯನು ಮೋಡಗಳ ಸಹವಾಸದಿಂದ ತಂಪಾಗಿ ಕಂಗೊಳಿಸುತ್ತಾನೆ.. ಕಾಯುವ ಬಂಡೆಗಳು ಕೂಡ ಆ ಹೊತ್ತು ವಿರಮಿಸಿಕೊಳ್ಳುತ್ತವೆ.. ಆದರೆ ಮತ್ತೆ ಸೂರ್ಯ ಬಿರುಬಿಸಿಲು ಕೊಡಲು ಶುರುಮಾಡಿದ ಎಂದರೆ.. ಬಂಡೆಗಳು ಕೆಂಪಾಗುತ್ತವೆ.. 

ಎಂಥಹ ತರ್ಕ ಬದ್ಧ ದೃಶ್ಯ.. ಮಾನವನ ರೋಷವೇಷ.. ಸಿಟ್ಟು ಸೆಡವು, ಕೋಪ ತಾಪ ಎಲ್ಲವೂ ಪ್ರೀತಿ ವಿಶ್ವಾಸ ಎಂಬ ಮೋಡದ ಸಂಘಕ್ಕೆ ಬಂದರೆ ತಂಪಾಗುತ್ತದೆ. ಸಮಾಜಮುಖಿಯಾಗುತ್ತಾನೆ.. ಆದರೆ ಆ ಮೋಡಗಳ ಆಲಿಂಗನ ಸಿಗದೇ.. ಆ ಮೋಡಗಳನ್ನು ಚದುರಿಸುವ ಬಿರುಗಾಳಿ ಎನ್ನುವ ಸ್ವಾರ್ಥ, ಹಳದಿ ಕಣ್ಣಿನಲ್ಲಿ ನೋಡುವ ಮಂದಿ ಇದ್ದಾಗ ಆ ಬಿರುಗಾಳಿಗೆ ಒಳಗಿರುವ ರೋಷಾಗ್ನಿ ಹತ್ತಿ ಉರಿದು ಬಾಳನ್ನೇ ಸುಡುತ್ತದೆ. 

ರಾಮಾಚಾರಿ ಪಾತ್ರವನ್ನು ಚೆನ್ನಾಗಿ ಅರಿತ ಚಾಮಯ್ಯ ಮೇಷ್ಟ್ರು ಉರಿಯುವ ರಾಮಚಾರಿಗೆ ಮೋಡವಾಗಿ ನಿಲ್ಲುತ್ತಾರೆ, ಅದರ ಜೊತೆಯಲ್ಲಿ ನಿಲ್ಲುವ ಮಾರ್ಗರೆಟ್.. ಆದರೆ ಇವರ ಶ್ರಮವನ್ನು ತರಗೆಲೆಯಂತೆ ತೋರಿಸಿ ಬಿಡುವ ಪಾತ್ರಗಳಲ್ಲಿ ಮಿಕ್ಕವರು ಮಿಂಚುತ್ತಾರೆ. 

ಇಡಿ ಚಿತ್ರವನ್ನು ಹೆಗಲ ಮೇಲೆ ಹೊತ್ತು ನಡೆಸಿರುವವರು ಪುಟ್ಟಣ್ಣ. ಪ್ರತಿ ವಿಭಾಗದಿಂದ ಮೈ ಮುರಿಯುವಂತೆ ಕೆಲಸ ತೆಗೆಸಿ, ತಮ್ಮ ಮನದಲ್ಲಿ ಮೂಡಿದ ಶ್ರೀ ತ ರಾ ಸುಬ್ಬರಾಯರ ತ್ರಿವಳಿ ಕಾದಂಬರಿಗಳಾದ ನಾಗರಹಾವು, ಒಂದು ಗಂಡು ಎರಡು ಹೆಣ್ಣು, ಸರ್ಪಮತ್ಸರ ಇವನ್ನು ಜತನವಾಗಿ ಕೂಡಿಸಿ ಚಿತ್ರಕಥೆ ನಿರ್ದೇಶನ ಮಾಡಿದ್ದಾರೆ.

ಚಿತ್ರದುರ್ಗದ ಬಿರು ಬಿಸಿಲನ್ನು, ಕಾಯುವ ಬಂಡೆಗಳನ್ನು, ಒರಟು ಒರಟು ಪ್ರದೇಶವನ್ನು ಅಚ್ಚುಕಟ್ಟಾಗಿ ತೋರಿಸಿದ್ದಾರೆ ಛಾಯಾಗ್ರಾಹಕ ಚಿಟ್ಟಿಬಾಬು. ಚಿತ್ರದ ಅರ್ಧ ಭಾಗ ಚಿತ್ರದುರ್ಗದ ದುರ್ಗಮ ಕೋಟೆಯ ಪರಿಸರದಲ್ಲಿ ನಡೆದರೂ ಒಂದು ಬಾರಿತೋರಿಸಿದ ಪರಿಸರವನ್ನು ಇನ್ನೊಮ್ಮೆ ಅದೇ ಕೋನದಲ್ಲಿ ತೋರಿಸದೆ ಬೇರೆಯದೇ ಅನ್ನಿಸುವಂತೆ ಛಾಯಾಗ್ರಾಹಕ ತಮ್ಮ ಕೈಚಳಕ ತೋರಿದ್ದಾರೆ. 

ಪುಂಗಿಯ ನಾದವನ್ನು ಚಿತ್ರದುದ್ದಕ್ಕೂ ಉಪಯೋಗಿಸಿರುವ ಸಂಗೀತ ಮಾಂತ್ರಿಕ ವಿಜಯಭಾಸ್ಕರ್ ಕೊಟ್ಟಿರುವ ಸಂಗೀತ ಕಾಡುತ್ತಲೇ ಇರುತ್ತವೆ. ನಟ ಶಿವರಾಂ ಒಂದು ಸಂದರ್ಶನದಲ್ಲಿ ಹೇಳಿದಂತೆ ರಾಮಾಮಚಾರಿ ಜೀವನದಲ್ಲಿ ಮಾರ್ಗರೆಟ್ ಹೋಗಿ ಅಲಮೇಲು ಬರುವ ದೃಶ್ಯದಲ್ಲಿ ಉಪಯೋಗಿಸಿರುವ ಪಾಶ್ಚಾತ್ಯ ಸಂಗೀತ ಮತ್ತು ಭಾರತೀಯ ಸಂಗೀತ ಅವರ ಪ್ರತಿಭೆಗೆ ಸಾಕ್ಷಿ.  ಹಿನ್ನೆಲೆ ಸಂಗೀತ ಮತ್ತು  ಹಾಡುಗಳಿಗೆ ಸಂಗೀತ ಸಂಯೋಜನೆ ಬಹಳ ಬಹಳ ಕಾಡುತ್ತದೆ. 

ಉರಿಯುವ ರಾಮಾಚಾರಿಯ ಸ್ವಭಾವಕ್ಕೆ ಶಾಂತ ಸ್ವಭಾವದ ಬಳುಕುವ ಬಳ್ಳಿ ಅಲಮೇಲು ಕರಗಿ ನೀರಾಗುವ ಹಾಡು "ಕರ್ಪೂರದ ಗೊಂಬೆ ನಾನು" ಗಾಯಕಿ ಪಿ ಸುಶೀಲ ಅವರ ಕಂಚಿನ ಕಂಠ ಈ ಹಾಡನ್ನು ಇನ್ನಷ್ಟು ಎತ್ತರಕ್ಕೆ ಒಯ್ಯುತ್ತದೆ.  ಸಾಹಿತಿ ಆರ್ ಏನ್ ಜಯಗೋಪಾಲ್ ಪದಗಳ ಬಂಡೆಗಳನ್ನೇ ಪೋಣಿಸಿದ್ದಾರೆ. ಹಾಡಿಗೆ ಸಂಗೀತ ಅದ್ಭುತ. ವಾಣಿವಿಲಾಸ ಸಾಗರ, ಒರಟು ಒರಟು ಚಿತ್ರದುರ್ಗದ ಬಂಡೆಗಳು, ದೇವಸ್ಥಾನಗಳು ಇವುಗಳ ಜೊತೆಯಲ್ಲಿ ಮೂಡಿ ಬಂದ ಹಾಡು ಸೂಪರ್. ಆರತಿ ಕಡೆಯಲ್ಲಿ ಕರ್ಪೂರ ಆರಿ ಹೋಗುವಾಗ ನೃತ್ಯ ಮಾಡುವ ಕರ್ಪೂರದ ದೀಪದಂತೆ.. ಅವರ ಭಾವನೆಗಳನ್ನು ಮುಖದಲ್ಲಿಯೇ ತೋರುವುದು ... ಬಹಳ ನಾಜೂಕಾಗಿ ಹೆಣೆದಿದ್ದಾರೆ ಈ ದೃಶ್ಯವನ್ನು. 

ರಾಮಾಚಾರಿಯ ಸ್ವಭಾವವನ್ನು ತೆರೆಗೆ ಅಪ್ಪಳಿಸುವ ರೀತಿಯಲ್ಲಿ ಬಿಂಬಿಸುವ "ಹಾವಿನ ದ್ವೇಷ ಹನ್ನೆರಡು ವರುಷ" ಎಸ್ ಪಿ ಬಾಲಸುಬ್ರಮಣ್ಯಂ ಅವರ ಅಮೋಘ ಕಂಠ ಸಿರಿಯಲ್ಲಿ ಅನಾವಾರಣಗೊಂಡಿದೆ.ಕಾಲೇಜಿನಲ್ಲಿ ಮಾರ್ಗರೆಟ್ ಅವಮಾನ ಮಾಡಿದಳು ಎನ್ನುವ ಕೋಪಕ್ಕೆ ಶುರುವಾಗುವ ಹಾಡು ದುರ್ಗದ ಪ್ರದೇಶಗಳಲ್ಲಿ ಓಡಾಡಿಸಿ ಚಿತ್ರೀಕರಿಸಿದ್ದಾರೆ. ಆ ಹಾಡಿಗೆ ಬೇಕಾದ ರೋಷ ದ್ವೇಷ ಆವೇಗ ಎಲ್ಲವನ್ನು ಮೇಳೈಸಿ ಕೊಂಡು ಹಾಡಿದ ಗಾಯಕ,  ವಿಷ್ಣು ಅವರ ಸರಿಸುಮಾರು ಎಲ್ಲ ಚಿತ್ರಗಳಲ್ಲಿಯೂ ಕಾಯಂ ಗಾಯಕ ಆಗಿಬಿಟ್ಟರು.  ಹಾವಿನ ಬುಸುಗುಟ್ಟಿವಿಕೆಯನ್ನು ಹಾಡಿನ ಸಂಗೀತದಲ್ಲಿ ಉಪಯೋಗಿಸಿರುವ ರೀತಿ ಸೂಪರ್.  ಸಾಹಿತಿ ಆರ್ ಏನ್ ಜಯಗೋಪಾಲ್ ಅಕ್ಷರಶಃ ಬೆಂಕಿ ಚೆಂಡಿನಿಂದಲೇ ಈ ಹಾಡನ್ನು ಬರೆದಿದ್ದಾರೆ ಅನ್ನಿಸುತ್ತದೆ

ಜೀವನದಲ್ಲಿ ಮಾರ್ಗರೆಟ್ ಅಥವಾ ಅಲಮೇಲು ಎನ್ನುವ ಗೊಂದಲ ದೂರಮಾಡಿಕೊಂಡ ರಾಮಾಚಾರಿಯ ಕಣ್ಣಿನಲ್ಲಿ ಮೂಡಿ ಬರುವ ಹಾಡು "ಬಾರೆ ಬಾರೆ ಚಂದದ ಚಲುವಿನ ತಾರೆ". ಪಿ ಬಿ ಶ್ರೀನಿವಾಸ್ ಈ ಹಾಡನ್ನು ಜೀವದ ಹಾಡು ಎನ್ನುವಂತೆ ಹಾಡಿದ್ದಾರೆ. ಪುಸ್ತಕದಲ್ಲಿ ಓದಿದ ನೆನಪು.. ಸ್ಲೋ ಮೋಶನ್ ಎನ್ನುವ ಛಾಯಾಗ್ರಾಹಕ ಕಲೆಯನ್ನು ಮೊದಲ ಬಾರಿಗೆ ಈ ಚಿತ್ರಕ್ಕೆ ಅಳವಡಿಸಿದರು ಎಂದು. ಇಡಿ ಹಾಡಿನಲ್ಲಿ ವಿಷ್ಣುವಿನ ಚಲನೆ ಮಾಮೂಲಿ ವೇಗದಲ್ಲಿದ್ದಾರೆ.. ಆರತಿಯ ಅಭಿನಯದ ಭಾಗ ಪೂರ ಸ್ಲೋ ಮೋಶನ್. ಎರಡು ವಿಭಿನ್ನ ಧಾಟಿಯಲ್ಲಿ ಚಿತ್ರೀಕರಣ. ವಿಷ್ಣು ಪಾತ್ರ ವೇಗಕ್ಕೆ ಹೆಸರಾಗಿದ್ದರೆ.. ಆರತಿಯ ಪಾತ್ರ ನಿಧಾನ, ಸಂಯಮವನ್ನು ತೋರಿಸುತ್ತದೆ. ವಿಜಯನಾರಸಿಂಹ ಅವರ ಸರಳ ಪದಗಳ ಜೋಡಣೆ ಈ ಹಾಡನ್ನು ಇನ್ನಷ್ಟು ವಿಶೇಷ ಎನ್ನಿಸುವಂತೆ ಮಾಡಿದೆ. 

ಪುಟ್ಟಣ್ಣ ಅವರಿಗೆ ನಾಡು ನುಡಿ ಪರಿಚಯ, ಇತಿಹಾಸ, ಅಭಿಮಾನ ಎಲ್ಲವೂ ಬೆಟ್ಟದಷ್ಟಿತ್ತು.. ಅವರ ಪ್ರತಿ ಚಿತ್ರದಲ್ಲೂ ಸಂದರ್ಭ ಸಿಕ್ಕಾಗೆಲ್ಲ ಅವರ ಅಭಿಮಾನವನ್ನು ಹಾಡುಗಳಿಂದ, ಸಂಭಾಷಣೆಗಳಿಂದ ಹರವಿಬಿಡುತ್ತಿದ್ದರು . ಅಂಥಹ ಒಂದು ಅಭೂತಪೂರ್ವ ಅವಕಾಶ ದುರ್ಗದ ಓಬವ್ವನ ಹಾಡು. ಮನೆಮಾತಾಗಿರುವ ಈ ಹಾಡನ್ನು ಸಾಹಿತಿ ಚಿ ಉದಯಶಂಕರ್ ಒಂದು ಸಾಂಧರ್ಭಿಕ ಘಟನೆಯನ್ನು "ಕನ್ನಡ ನಾಡಿನ ವೀರ ರಮಣಿಯ"  ಕನ್ನಡ ನಾಡೆ ಎದೆ ಉಬ್ಬಿಸುವಂತೆ ಬರೆದಿದ್ದಾರೆ. ಸಂಗೀತ, ಸಾಹಿತ್ಯ, ಚಿತ್ರಿಸಿರುವ ರೀತಿ ಸೊಗಸಾಗಿದೆ.  

ಕೆಲವೊಮ್ಮೆ ಚಿಕ್ಕ ಚಿಕ್ಕ ಉಲ್ಕೆಗಳು ಪರಿಣಾಮಕಾರಿಯಾಗಿ ತಮ್ಮ ಪ್ರಭಾವ ಬೀರುತ್ತವೆ. ಕೆಲವೇ ನಿಮಿಷಗಳಲ್ಲಿ ಮೂಡಿಬರುವ ಈ ಹಾಡಿನಲ್ಲಿ ಜಯಂತಿ ಕರುನಾಡಿನ ಓಬವ್ವನ ರೂಪದಲ್ಲಿಯೇ ನಿಂತು ಬಿಟ್ಟಿದ್ದಾರೆ. ಅದ್ಭುತ ಅಭಿನಯ. ಆ ಗತ್ತು, ರೋಷ, ಶಕ್ತಿ, ಧೈರ್ಯ.. ಒಬವ್ವಳನ್ನೇ ಆವಹಿಸಿಕೊಂಡು ಈ ಪಾತ್ರ ಮಾಡಿದ್ದಾರೆ. 

 ಎರಡು ಧರ್ಮ ಒಂದಾಗುವುದರ ಬಗ್ಗೆ ದೊಡ್ಡ ಚರ್ಚೆ ಮಾಡುವುದರ ಬದಲು ಅದನ್ನೇ ಒಂದು ಸುಂದರ ಗೀತೆಯನ್ನಾಗಿ ಮಾಡಿಬಿಟ್ಟರೆ ಅಂಥಹ ಸಂದರ್ಭ "ಸಂಗಮ ಸಂಗಮ ಅನುರಾಗ ತಂದ ಸಂಗಮ" ಹಾಡು. ಇಡಿ ಹಾಡಿನ ಚಿತ್ರೀಕರಣ ನೆರಳು ಬೆಳಕಿನ ಮಧ್ಯೆ ನಡೆದಿದೆ. ಕ್ಯಾಮೆರ ಓಡಾಡುತ್ತಲೇ ಇರುತ್ತದೆ. ಎರಡು ಹೃದಯಗಳ ಮಿಲನಕ್ಕೆ ಧರ್ಮದ ನೆರಳು ಬೇಕೇ.. ಅಥವಾ ಬರಿ ಪ್ರೀತಿ ಅನುರಾಗದ ಬೆಳಕು ಸಾಕೆ ಎನ್ನುವ ತರ್ಕವನ್ನು ಹುಟ್ಟು ಹಾಕುತ್ತದೆ. ಸಂಗಮ ಎನ್ನುವ ಪದವನ್ನೇ ಒಟ್ಟಾಗಿ ಇಟ್ಟುಕೊಂಡು ಸುಂದರ ಸಾಹಿತ್ಯ ಬರೆದದ್ದು ವಿಜಯನಾರಸಿಂಹ. 

ಕೆಲವೊಮ್ಮೆ ಮನೆಯವರು ಯಾವುದೋ ಆವೇಗದಲ್ಲಿ ಮಾಡುವ ನಿರ್ಧಾರ ಮಗಳ ಭವಿಷ್ಯವನ್ನೇ ಬಲಿ ಹಾಕಿಬಿಡುತ್ತದೆ. ಅಂಥಹ ಸಮಯದಲ್ಲಿ ಮತ್ತೆ ತನ್ನವರು ಸಿಕ್ಕಾಗ ತನ್ನ ವೇದನೆಯನ್ನು ಕೇಳಿದಾಗ.. ಮನಸ್ಸು ಕರಗಿ ನೀರಾಗುತ್ತದೆ. ಒಂದು ಹಿನ್ನೋಟವನ್ನು "ಕಥೆ ಹೇಳುವೆ ನನ್ನ ಕಥೆ ಹೇಳುವೆ" ಗೀತೆಯಲ್ಲಿ ತುಂಬಿ.. ಅಶ್ಲೀಲ ಎನ್ನಿಸಬಹುದಾದ ಈ ಘಟನೆಯನ್ನು ಅಷ್ಟೇ ನಾಜೂಕಾಗಿ ಚಿತ್ರಿಕರಿಸುತ್ತಲೇ ಮನಸ್ಸನ್ನು ಕಲಕಿಬಿಡುವ ಹಾಡಾಗಿ ಮೂಡಿಸಿದ್ದಾರೆ ಪುಟ್ಟಣ್ಣ .  ಅಲಮೇಲು ಜೀವನವನ್ನು ಒಂದು ಬಾರಿ ಹಾಗೆ ಝಲಕ್ ಎನ್ನಿಸುವಂತೆ ತೋರಿಸುವ ಈ ಹಾಡು ಚಿತ್ರದ ಹೈಲೈಟ್ ಎನ್ನಬಹುದು. ಜೊತೆಯಲ್ಲಿಯೇ ಅವಳ ಜೀವನದ ಮುಂದಿನ ಭಾಗವನ್ನು ಹೇಳಹೊರಟವಳಿಗೆ ತಡೆದು ಕಣ್ಣೀರಾಗುವ ನಾಯಕ ತನ್ನ ಒರಟು ಹೃದಯದಲ್ಲಿ ಪ್ರೀತಿ ಮಮತೆ ಎಲ್ಲವಕ್ಕೂ ಅವುಗಳದ್ದೇ ಸ್ಥಾನ ಇದೆ ಎಂದು ತೋರುತ್ತಾನೆ. ಚಿ ಉದಯಶಂಕರ್ ಪದಗಳಲ್ಲಿ ಆಟವಾಡಿದ್ದಾರೆ.. 

ಈ ಚಿತ್ರದಲ್ಲಿ ಪುಟ್ಟಣ್ಣ ಅವರ ಹಿಂದಿನ ಚಿತ್ರಗಳಿಗಿಂತ ನಟ ನಟಿಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಥೆಗೆ ಅದು ಪೂರಕವಾಗಿದೆ ಕೂಡ. ಜೊತೆಯಲ್ಲಿ ಈ ದೃಶ್ಯ.. ಅಥವಾ ಈ ಪಾತ್ರ ಬೇಕಿಲ್ಲ ಅನ್ನುವ  ಹಾಗೆ ಇಲ್ಲ. ಎಲ್ಲವೂ ಎಲ್ಲಾ ಪಾತ್ರವೂ ರಾಮಾಚಾರಿಯ ಜೀವನದ ಏಳು ಬೀಳುಗಳನ್ನು ಬಿಂಬಿಸುತ್ತವೆ, ಜೊತೆಯಲ್ಲಿ ಅವನ ಪಾತ್ರಕ್ಕೆ ಒಂದು ನಿರ್ಧಿಷ್ಟ ತಿರುವು ಕೊಡಲು ಸಹಕರಿಸುತ್ತವೆ. 

ರಾಘವೇಂದ್ರ ರಾವ್ ( ರಾಮಾಚಾರಿಯ ತಂದೆಯ ಪಾತ್ರ)
ನಾ ನಿನ್ನ ಮಗ ಎಂದು ಒಂದು ಒಳ್ಳೆಯ ಮಾತು ಆಡಿದ್ದೀರ ಎನ್ನುವ ಪ್ರಶ್ನೆಗೆ.. ಅವರು ಹೇಳುವ ಮಾತು "ನೀ ನನ್ನ ಮಗ ಅಂತ ನನಗೆ ಹೆಸರು ತರುವ ಒಂದು ಒಳ್ಳೆ ಕೆಲಸ ಮಾಡಿದ್ದೀಯ". 
ಇಡಿ ಚಿತ್ರದುದ್ದಕ್ಕೂ ತಂದೆಯ ಪಾತ್ರದಲ್ಲಿ ರಾಮಾಚಾರಿಯ ರೋಷಕ್ಕೆ ಸುರಿವ ತುಪ್ಪವಾಗೆ ಬರುತ್ತಾರೆ. ರಾಮಾಚಾರಿ ಕೆಲಸಕ್ಕೆ ಸೇರಿಕೊಂಡು ಮನೆಗೆ ಅಷ್ಟೋ ಇಷ್ಟೋ ಸಹಾಯ ಮಾಡಲು ಶುರುವಾದಾಗ ಮೆಚ್ಚುಗೆ ಸೂಸುವ ಇವರು.. ತಕ್ಷಣದಲ್ಲೇ ಅವನು ಮಾರ್ಗರೆಟ್ ಜೊತೆಯಲ್ಲಿದ್ದಾನೆ ಎಂದು ಗೊತ್ತಾದಾಗ.. "ನನಗೆ ಮಗನಿಗಿಂತ ಮಠದ ತೀರ್ಥ ಮುಖ್ಯ" "ಕಿರಿಸ್ತಾನದ ಹುಡುಗಿಯನ್ನು ನಾ ಸೊಸೆ ಮಾಡಿಕೊಳ್ಳಲಾರೆ" ಎಂದು ಹೇಳುವ ಮೂಲಕ ರಾಮಾಚಾರಿಯ ಬದುಕಿಗೆ ಮಂಗಳ ಹಾಡಲು ನಿಲ್ಲುತ್ತಾರೆ. ತಂದೆಯ ತೊಳಲಾಟ, ಹಠ ಎರಡನ್ನು ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ.  

ಜಯಶ್ರೀ - (ರಾಮಾಚಾರಿಯ ಅಮ್ಮ)
ಮಗನ ಮೇಲಿನ ವಾತ್ಸಲ್ಯ, ತನ್ನ ಮಗನ ಮೇಲೆ ತನ್ನ ಪತಿರಾಯ ತೋರುವ ತಿರಸ್ಕಾರ ಇವುಗಳ ನಡುವೆ ತೊಳಲಾಡುವ ಪಾತ್ರದ ಅಭಿನಯ ಸುಂದರ. "ಓದಿ ಪರೀಕ್ಷೆಯಲ್ಲಿ ಪಾಸಾಗಿ ಕೆಲಸಕ್ಕೆ ಸೇರಿ ನನಗೆ ಒಂದು ಜರತಾರಿ ಸೀರೆಯನ್ನು ತಂದು ಕೊಡುತ್ತಾನೆ" ಎಂದು ಅಂದುಕೊಂಡಿದ್ದೆ ಎನ್ನುವಾಗ ಮಾತೃ ಪ್ರೇಮ ಹರಡಿಕೊಂಡಿದೆ. ಇವರು ಕೂಡ ಕಿರಿಸ್ತಾನದ ಹುಡುಗಿಯನ್ನುಸೊಸೆಯಾಗಿ ಒಪ್ಪಿಕೊಳ್ಳಲಾರೆ ಎಂದು ಹೇಳುವ ಮೂಲಕ ತಮ್ಮ ಮಗನ ಬದುಕಿಗೆ ಮುಳ್ಳಾಗುತ್ತಾರೆ. 

ಲೋಕನಾಥ - (ಕಾಲೇಜಿನ ಪ್ರಾಂಶುಪಾಲರು)
ವಿದ್ಯೆ ತಲೆಗೆ ಹತ್ತದೆ ಮನೆಯವರ ಒತ್ತಾಯಕ್ಕೆ ಪಾಸಾಗಲೇ ಬೇಕು ಎಂದು ಚೀಟಿಯನ್ನು ಇಟ್ಟುಕೊಂಡು ಬರೆಯುತ್ತಿದ್ದ ರಾಮಾಚಾರಿಯನ್ನು ಹಿಡಿದು ಡಿಬಾರ್ ಮಾಡುವ ಈ ಪಾತ್ರ.. ಉರಿಯುವ ಬೆಂಕಿಗೆ ತುಪ್ಪ ಹಾಕುತ್ತಾರೆ. ಆ ಸೇಡಿಗೆ ರಾಮಾಚಾರಿ ಇವರನ್ನು ಕಂಬಕ್ಕೆ ಕಟ್ಟಿ ತಮ್ಮ ಕೋಪವನ್ನು ತೀರಿಸಿಕೊಳ್ಳುತ್ತಾರೆ. ಚಿಕ್ಕ ಪಾತ್ರವಾದರೂ ರಾಮಾಚಾರಿಯ ಜೀವನಕ್ಕೆ ಒಂದು ತಿರುವು ಕೊಡುವಲ್ಲಿ ಮಹತ್ವ ಪಾತ್ರವಹಿಸುತ್ತಾರೆ. ಮಾರ್ಗರೆಟ್ ಇವರ ಬಳಿ ದೂರು ಕೊಟ್ಟಾಗ ಮೊದಲಿಗೆ ಸಿಡಿದು ಬೀಳುವ ನಂತರ ತಂಪಾಗುತ್ತಾರೆ. ಆದರೆ ಅಷ್ಟೊತ್ತಿಗೆ ರಾಮಾಚಾರಿಯ ದ್ವೇಷ ರೋಷದ ಊರಿಗೆ ಉರುವಲು ಹಾಕಿ ಬಿಟ್ಟಿರುತಾರೆ. 

ಲೀಲಾವತಿ - (ರಾಮಾಚಾರಿಗೆ ಮಾತೃ ವಾತ್ಸಲ್ಯ ತೋರುವ ಸಾಕುತಾಯಿ)
ಮಕ್ಕಳಿಲ್ಲದ ಈ ಪಾತ್ರ ರಾಮಾಚಾರಿಯನ್ನು ಮಗನಿಗಿಂತ ಹೆಚ್ಚು ಪ್ರೀತಿ ತೋರಿಸುತ್ತಾರೆ. ಅವನ ಪ್ರತಿ ಏಳು ಬೀಳುಗಳನ್ನು ತಾಯಿ ಹೃದಯದಿಂದ ಸಂತೈಸುವ ಈ ಪಾತ್ರ.. "ಈ ದಡ್ಡ ಓದಿರುವ ವಿದ್ಯೆಗೆ ಕಲೆಕ್ಟರ್ ಕೆಲಸ ಎಲ್ಲಿ ಸಿಕ್ಕುತ್ತೆ. ಬಸ್ ಸ್ಟಾಂಡ್, ಹೋಟೆಲ್ ನಲ್ಲಿ ಕೂಲಿ ಕೆಲಸ" ಕೊಡಿಸಿ ಎನ್ನುವಾಗ ಹೃದಯವೇ ಹೊರ ಬಂದಂತೆ ಆಗುತ್ತದೆ. ಪ್ರತಿ ಸಂಭಾಷಣೆಗೂ "ದೇವ್ರೇ ದೇವ್ರೇ" ಎನ್ನುತ್ತಾ ಆ ಸಾಕು ತಾಯಿಯ ತಳಮಳ, ಪ್ರೀತಿ, ಮಮತೆ ಹೊರ ಹೊಮ್ಮುವ ಪಾತ್ರ ಒಂದು ರೀತಿಯಲ್ಲಿ ಉರಿಯುವ ರಾಮಾಚಾರಿಯ ಹೃದಯಕ್ಕೆ ತಂಪನ್ನು ಎರೆಯುತ್ತದೆ.  ಅಂತಿಮ ದೃಶ್ಯಗಳಲ್ಲಿ ರಾಮಾಚಾರಿ ಮಾರ್ಗರೆಟ್ ಜೊತೆಯಲ್ಲಿರುವುದನ್ನು ಇವರೇ ನೋಡಿ.. ಮಾರ್ಗರೆಟ್ ಅಮ್ಮನ ಮನೆಯ ಮುಂದೆ ಹಾದಿ ರಂಪ ಬೀದಿ ರಂಪ ಮಾಡಿ ಈ ಸಮಸ್ಯೆ ಬಗೆಹರಿಯುತ್ತೇನೋ ಅನ್ನುವಂಥ ಸಮಸ್ಯೆಯನ್ನು ಕಗ್ಗಂಟಾಗಿ ಮಾಡಿಬಿಡುತ್ತಾರೆ.  ಕೆಲವೊಮ್ಮೆ ಅತಿ ಪ್ರೀತಿ ವಿಶ್ವಾಸ ಮುಳ್ಲಾಗುತ್ತೇನೋ ಎನ್ನುವ ಆತಂಕ ಹೊಮ್ಮಿಸುತ್ತದೆ. 

ಎಂ ಪಿ ಶಂಕರ್ - ಗರಡಿ ಉಸ್ತಾದ್ 
ಪ್ರಾಯಶಃ ಈ ಪಾತ್ರ ಚಿತ್ರದ ದಿಕ್ಕನ್ನು ಬದಲಿಸುತ್ತದೆ ಎನ್ನಿಸುತ್ತದೆ. ಪರೀಕ್ಷೆಯಲ್ಲಿ ನಪಾಸಾದ ರಾಮಾಚಾರಿಗೆ ಊರಿನ ಸಾಹುಕಾರರ ಬಳಿ ಕೆಲಸ ಕೊಡಿಸುತ್ತಾರೆ. ಅವರ ಜೊತೆಯಲ್ಲಿ ಹೋದಾಗ ಅವನಿಗೆ ಅಲಮೇಲುವಿನ ಜೀವನದ ದುರ್ಗತಿ ಗೊತ್ತಾಗುತ್ತದೆ. ಪೈಲ್ವಾನರ ಗತ್ತು, ನಡೆ, ಮೀಸೆ, ವೇಷಭೂಷಣ, ಎಲ್ಲವೂ ಸೊಗಸಾಗಿದೆ. ಇವ ನಮ್ಮ ಗರಡಿ ಹುಡುಗ ಎಂದು ಎದೆ ತಟ್ಟಿ ಹೇಳಿಕೊಳ್ಳುವ ಇವರು ಜಲೀಲ ರಾಮಾಚಾರಿಯ ಹೊಡೆದಾಟದ ನಂತರ "ನಾವು ನೀವು ಅಣ್ಣ ತಮ್ಮಂದಿರು ಎಂದು ಬಾಳುವಾಗ ಇಂಥಹ ಮಕ್ಕಳು ಹಾಳುಮಾಡುತ್ತವೆ" ಎನ್ನುವಾಗ ಹೌದು ಧರ್ಮ ಜಾತಿ ಎಂದಿಗೂ ಬಡಿದಾಡಿ ಎಂದು ಹೇಳುವುದಿಲ್ಲ ಬದಲಿಗೆ ಅದನ್ನು ಪಾಲಿಸದ ಕೆಲವು ಕಿಡಿಗೇಡಿಗಳಿಂದ ಊರು ಹಾಳಾಗುತ್ತದೆ. ಆಹಾ ಎಂಥಹ ಮಾತು. ರಾಮಾಚಾರಿ ಚಿತ್ರದಲ್ಲಿ ಅತಿ ಗೌರವಿಸುವ ಎರಡು ಪಾತ್ರಗಳಲ್ಲಿ ಇವರು ಒಬ್ಬರು. 


ರಾಮಚಂದ್ರ ಶಾಸ್ತ್ರಿ - ಪ್ರತಿಮಾ ದೇವಿ - (ಅಲಮೇಲು ಅಪ್ಪ ಅಮ್ಮ)
ರಾಮಾಚಾರಿಯನ್ನು ಪೋಲಿ ಪುಂಡ ಎಂದೇ ಮಾತಾಡಿಸುವ ಇವರು.. ತಮ್ಮ ಮಗಳು ಅವನಿಗೆ ಹೃದಯ ಕೊಟ್ಟಿದ್ದಾಳೆ ಎನ್ನುವಾಗ ಇವರಿಬ್ಬರ ಅಭಿನಯ ಸೂಪರ್. ಆ ಪೋಲಿಗೆ ಮಗಳನ್ನು ಕೊಡುವ ಬದಲು ಹಾಳು ಬಾವಿಗೆ ದೂಡುತ್ತೇನೆ ಎನ್ನುವ ಮನಸ್ಥಿತಿಯನ್ನು ಇಟ್ಟುಕೊಂಡ ಇವರಿಬ್ಬರೂ ಯಾವುದೇ ಕಾರಣದಲ್ಲೂ ಬಗ್ಗುವುದಿಲ್ಲ. ಸಮಾಜಕ್ಕೆ ಹೆದರಿಕೊಂಡೇ ಬಾಳಬೇಕು ಎನ್ನುವ ಮಾತು ಎಷ್ಟು ನಿಜ. ಗಡಿಬಿಡಿಯಲ್ಲಿ ತೆಗೆದುಕೊಳ್ಳುವ ನಿರ್ಧಾರ ರಾಮಾಚಾರಿಯ ಜೀವನನ್ನಷ್ಟೇ ಅಲ್ಲಾ ಅಲಮೇಲು ಜೀವನವನ್ನು ತಲೆಬುಡ ಮಾಡಿಬಿಡುತ್ತದೆ. ಈ ನಿರ್ಧಾರವೇ ಚಿತ್ರಕ್ಕೆ ಅನೇಕ  ತಿರುವು ಕೊಡುತ್ತದೆ. "ಹೋಗಿ ಹೋಗಿ  ಮೇಷ್ಟ್ರೇ  ನಿಮಗೇನು ಗೊತ್ತು ಹೆತ್ತವರ ಸಂಕಟ" ಮನಕಲಕುವ ಮಾತುಗಳು. 

ಶುಭ - ಮಾರ್ಗರೆಟ್ ಪಾತ್ರ 
ಸಿರಿತನದ ಗತ್ತು, ಸುಂದರಿ ಎನ್ನುವ ಹಮ್ಮು ಹೊಂದಿರುವ ಈ ಪಾತ್ರ ಕಾಲೇಜಿನಲ್ಲಿ ತನ್ನ ರೂಪಕ್ಕೆ ಮರುಳಾಗುತ್ತಾರೆ ಎನ್ನುವ ಧೋರಣೆ ಹೊಂದಿರುತ್ತಾಳೆ. ಅದಕ್ಕೆ  ತಕ್ಕಂತೆ ಕೆಲ ಹುಡುಗರು ಇವಳ ಮುಂದೆ ಹಲ್ಲುಕಿರಿಯುತ್ತಾ ನಿಂತಾಗ ಅವರನ್ನು ಮಟ್ಟ ಹಾಕಲು ರಾಮಾಚಾರಿಯನ್ನು ಬಳಸಿಕೊಳ್ಳುತ್ತಾರೆ. ಇದರಿಂದ ಮಾರ್ಗರೆಟ್ ಮತ್ತು ರಾಮಾಚಾರಿಯ ಮಧ್ಯೆ ಜಗಳ ಕದನವಾಗಿ ಹಠವಾದಿಯಾದ ರಾಮಾಚಾರಿಯ ಅವಳ ಮನೆಯಲ್ಲಿ ಗದ್ದಲವೆಬ್ಬಿಸುತ್ತಾನೆ. ನಂತರ ಕಾಲೇಜಿನಲ್ಲಿ ದೂರು.. ಕ್ಷಮಾಪಣೆ ಎಲ್ಲಾ ನಡೆಯುತ್ತದೆ. ಆದರೆ ಅಷ್ಟರಲ್ಲಿಯೇ ಮೊದಲೇ ಪುಂಡ ಎಂಬ ಬಿರುದಾಂಕಿತ ರಾಮಾಚಾರಿಯ ಎದೆಯಲ್ಲಿ ಬಂಧಿಸಲಾಗದ ಉರಿ ಶುರುವಾಗಿರುತ್ತದೆ. ಈ ಪಾತ್ರ ಚಿತ್ರಕ್ಕೆ ಒಂದು ನಿರ್ಧಿಷ್ಟ ತಿರುವು ಕೊಡುತ್ತದೆ. ಜೊತೆಯಲ್ಲಿ ರಾಮಾಚಾರಿಯ ಜೀವನದಲ್ಲಿ ಬಿರುಗಾಳಿ ಎಬ್ಬಿಸಿರುತ್ತಾಳೆ. 

ಧೀರೇಂದ್ರ ಗೋಪಾಲ್ -  ತುಕಾರಾಂ 
ತನ್ನ ಗಡುಸು ರಾಗವಾದ ಸಂಭಾಷಣೆಗಳಿಂದಲೇ ಪ್ರಸಿದ್ಧಿಗೆ ಬಂದ ಈ ನಟ.. ಈ ಚಿತ್ರದಲ್ಲಿ ಚಿಕ್ಕ ಚೊಕ್ಕ ಪರಿಣಾಮಕಾರಿಯಾದ ಪಾತ್ರ ಮಾಡಿದ್ದಾರೆ. ರಾಮಾಚಾರಿ-ಮಾರ್ಗರೆಟ್ ಪಾತ್ರಗಳ ಮಧ್ಯೆ ಉರಿ ಎಬ್ಬಿಸುವ, ಮತ್ತೆ ಇದಕ್ಕೆ ಇನ್ನಷ್ಟು ಮಸಾಲೆ ಬೆರೆಸಿ ರಾಮಾಚಾರಿಯ ಜೀವನಕ್ಕೆ ಹೊಗೆ ಎಬ್ಬಿಸುವ ಕೆಲಸ ಮಾಡುತ್ತಾರೆ. 

ಎಂ ಎನ್ ಲಕ್ಷ್ಮೀದೇವಿ - ಮಾರ್ಗರೆಟ್ ಅಮ್ಮ 
ಜೀವನದಲ್ಲಿ ಹಣ ಹಣ ಹಣ ಹಣವೇ ಮುಖ್ಯ ಎನ್ನುವ ಈ ಪಾತ್ರ.. ಮಗಳನ್ನು ಮುಂದೆ ಇಟ್ಟುಕೊಂಡು ಜೀವನವನ್ನು ಅನುಭವಿಸಬೇಕು ಎನ್ನುವ ಸಿದ್ಧಾಂತ ಇರುವ ಈಕೆ.. ರಾಮಾಚಾರಿಯನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲಾರೆ ಎನ್ನುತ್ತಾಳೆ. ಏನಾದರೂ ಮದುವೆ ಆದ್ರೆ.. ಮಾರ್ಗರೆಟ್ ಗೆ ವಿಷ ಕೊಡಿಸಿ ರಾಮಾಚಾರಿಯೇ ಕೊಂದು ಹಾಕಿದ ಎಂದು ಹೇಳಿ ಅವನನ್ನು ಕೂನಿ ಮಾಡಿಸುತ್ತೇನೆ ಎನ್ನುತ್ತಾಳೆ. ಈ ಹಠ ಮಾರ್ಗರೆಟ್ ಅಲ್ಲೂ ಇರುವುದರಿಂದ ಅವನ ಬದುಕಿಗೆ ಮತ್ತಷ್ಟು ಮಾರಕವಾಗಿಬಿಡುತ್ತಾರೆ. 

ವಜ್ರಮುನಿ, ರಂಗ, ಮತ್ತು ಇನ್ನೋರ್ವ ಸಾಹುಕಾರ 
ಊರಿನ ಸಾಹುಕಾರರಾದ ಇವರು ಮಾಡುವ ಕೆಟ್ಟ ಕೆಲಸಗಳಿಗೆ ಹೆಸರಾಗಿರುತ್ತಾರೆ. ರಾಮಾಚಾರಿಯನ್ನು ಬೆಂಗಳೂರಿಗೆ ಕರೆದೊಯ್ಯುವ ಇವರು ಚಿತ್ರಕ್ಕೆ ಒಂದು ಬಿರುಕು ಒದಗಿಸುತ್ತಾರೆ. ಅಲ್ಲಿಯೇ ಅಲಮೇಲು ಕಾಣಸಿಗುತ್ತಾಳೆ ವ್ಯೆಶ್ಯಯ ರೂಪದಲ್ಲಿ. ರಾಮಾಚಾರಿ ಇಡಿ ಚಿತ್ರದಲ್ಲಿ ಕಣ್ಣೀರಲ್ಲಿ ಕರಗುವ ದೃಶ್ಯಕ್ಕೆ ಇವರೇ ಕಾರಣಗುತ್ತಾರೆ 

ಶಕ್ತಿ ಪ್ರಸಾದ್ - ನಾಯ್ಡು ಅಂಕಲ್ 
ಮಾರ್ಗರೆಟ್ ಅಮ್ಮನಿಗೆ ಒಂದು ವಿಚಿತ್ರ ರೀತಿಯ ಸಂಬಂಧ ಹೊಂದಿದ ವ್ಯಕ್ತಿಯ ಪಾತ್ರ ಇದು. ಮಾರ್ಗರೆಟ್ ಹಾದಿ ತಪ್ಪಿದ್ದಾಳೆ ಎನ್ನುವ ಅವಳ ಅಮ್ಮನ ಆರೋಪಕ್ಕೆ ಮಣಿದು ರಾಮಾಚಾರಿಗೆ ಬುದ್ದಿ ಕಲಿಸೋಕೇ ಬಂದು ಕಡೆಗೆ ಅವರಿಬ್ಬರನ್ನು ಒಂದು ಮಾಡುತ್ತೇನೆ ಎಂದು ಹೇಳಿ ಹೋಗುತ್ತಾನೆ. ಇದು ಒಂದು ಚಿಕ್ಕ ಪಾತ್ರ. ಮಾರ್ಗರೆಟ್ ಗೆ ಧೈರ್ಯ ತುಂಬಲು ಬಂದಂಥಹ ಪಾತ್ರ ಎನ್ನಿಸುತ್ತದೆ. 

ಇನ್ನೂ ಇಡಿ ಚಿತ್ರಕ್ಕೆ ನಾಲ್ಕು ದಿಕ್ಕುಗಳು ಈ ಕೆಳಕಂಡ ನಾಲ್ಕು ಪಾತ್ರಗಳು 

ಅಂಬರೀಶ್ - ಜಲೀಲ 
ಅಲಮೇಲುವನ್ನು ರೇಗಿಸುತ್ತಾ ಅವಳನ್ನು ಒಲಿಸಿಕೊಳ್ಳಲು ಬರುವ ಈ ಪಾತ್ರ ಎರಡೇ ದೃಶ್ಯದಲ್ಲಿ ಬಂದು ಹೋಗುತ್ತಾರೆ. ಆದರೆ ಈ ಎರಡು ದೃಶ್ಯ ಚಿತ್ರದ ಓಟವನ್ನೇ ಬದಲಿಸಿಬಿಡುತ್ತದೆ. ಇವನನ್ನು ಮಟ್ಟ ಹಾಕಲು ರಾಮಾಚಾರಿ ಬರುತ್ತಾನೆ ಇದರ ಹಿನ್ನೆಲೆ ಜಲೀಲನಿಗೆ ಬುದ್ದಿ ಕಲಿಸಿದರೆ ಅಲಮೇಲು ನಿನಗೆ ಎನ್ನುವ ಪಂಥ ಇರುತ್ತದೆ. ಇದೆ ಈ ಚಿತ್ರಕ್ಕೆ ತಿರುವು. 

ಶಿವರಾಂ - ಸ್ಪೆಷಾಲಿಟಿ ಶಿವರಾಂ - ವರದ 
ಇದೊಂದು ವಿಶೇಷ ಪಾತ್ರ. ಜೀವನದಲ್ಲಿ ತಮಾಷೆಯೇ ಮುಖ್ಯ.. ಆ ಸಮಯಕ್ಕೆ ಏನು ಬೇಕೋ ಅಷ್ಟೇ.. ಮುಂದಾಲೋಚನೆ ಇಲ್ಲದೆ ಮಾತಾಡುವ ಪಾತ್ರ. ಪ್ರತಿಮಾತಿಗೂ ಸ್ಪೆಷಾಲಿಟಿ ಸೇರಿಸುವ ಸಂಭಾಷಣೆಯಲ್ಲಿ ಮುಂಚುತ್ತಾರೆ. ಸುಮ್ಮನಿದ್ದ ರಾಮಾಚಾರಿಗೆ ಅಲಮೇಲುವಿನ ಬಗ್ಗೆ ಆಸೆ ಹುಟ್ಟಿಸಿ ಕಡೆಗೆ ಅವನೇ ಆ ಮದುವೆಗೆ ಕಲ್ಲು ಹಾಕಿ ತನ್ನ ತಂಗಿಯ ಜೀವನದ ಅವನತಿಗೆ ಕಾರಣವಾಗುತ್ತಾನೆ. 

ವಿಷ್ಣು - ರಾಮಾಚಾರಿ
ಹಿಂದಿನ ಚಿತ್ರಗಳ ತನಕ ಹೆಣ್ಣು ಮಕ್ಕಳ  ಮನಸ್ಸಿನ ಸೂಕ್ಷಮತೆ ಬಗ್ಗೆ ಚಿತ್ರಗಳನ್ನು ಮಾಡಿದ್ದ ಪುಟ್ಟಣ್ಣ ಕಣಗಾಲ್.. ಅಚಾನಕ್ ಪಥವನ್ನು ಹೊರಳಿಸಿ ಒಂದು ಬೆಂಕಿ ಚಂಡನ್ನೇ ಹೊರ ತರುತ್ತಾರೆ. ಅದಕ್ಕೆ ಬೇಕಿದ್ದ ಎಲ್ಲಾ ಲಕ್ಷಣಗಳನ್ನು ವಿಷ್ಣು ಮೈಮೇಲೆ ಆವಾಹಿಸಿಕೊಂಡು ಅಭಿನಯಿಸಿದ್ದಾರೆ. ಆ ರೋಷದ ಉಕ್ಕುವ ಕಣ್ಣುಗಳು, ಮಾತಿನ ಗಡುಸು ಹೊಂದಿಕೊಂಡಿವೆ. ಇಡಿ ಚಿತ್ರವನ್ನು ತನ್ನ ಅಭಿನಯದ ಮೇಲೆ ಹೊತ್ತು ನಿಲ್ಲುವ ಈ ಪಾತ್ರ ಕೆಲವೊಮ್ಮೆ ಮರುಕ ಹುಟ್ಟಿಸುತ್ತದೆ, ನಗೆ ಉಕ್ಕಿಸುತ್ತದೆ, ಪ್ರೀತಿ ಹುಟ್ಟಿಸುತ್ತದೆ, ದ್ವೇಷ ರೋಷ ಅಂದ್ರೆ ರಾಮಾಚಾರಿ ಎನ್ನುವ ಮಟ್ಟಕ್ಕೆ ತಲುಪಿಸುತ್ತದೆ. 

ಮೇಲೆ ಹೇಳಿದ ಎಲ್ಲಾ ಪಾತ್ರಗಳು ತಮಗೆ ಬೇಕಾದ ರೀತಿಯಲ್ಲಿ ರಾಮಾಚಾರಿಯ ಜೀವನದಲ್ಲಿ ಹೆಜ್ಜೆ ಇಟ್ಟು ಅವನ ಜೀವನದ ಸರೋವರದಲ್ಲಿ ಅಲೆಗಳನ್ನು ಎಬ್ಬಿಸಿ ತಿಳಿ ನೀರನ್ನು ಕದಡಿಬಿಡುತ್ತಾರೆ. 

ವಿಧಿಯ ಆಟದ ಶಿಶು ಅನ್ನುವಂತೆ ಎಲ್ಲರಿಗೂ ಬೇಡ ವ್ಯಕ್ತಿಯಾಗಿ ಪ್ರೀತಿಸುವ ಮನಸ್ಸಿನ ರಾಜನಾಗಿ ಮೆರೆಯುವ ಈ ಪಾತ್ರ ವಿಷ್ಣು ಅವರ ಅಭಿನಯ ಪ್ರಪಂಚದಲ್ಲಿ ಅತ್ಯುತ್ತಮ ಪಟ್ಟ ಪಡೆಯುತ್ತದೆ. 

ಅಲ್ಲಿಯ ತನಕ ಈ ಮಟ್ಟದಲ್ಲಿ ಗುರುಗುಟ್ಟುವ, ಸಿಡಿಯುವ, ಉರಿಯುವ ನಾಯಕ ಬಂದಿರಲಿಲ್ಲ ಬೆಳ್ಳಿ ಪರದೆಯಲ್ಲಿ. ಆ ಪಾತ್ರವನ್ನು ಸಾಕ್ಷಾತ್ಕರಿಸಿದವರು ವಿಷ್ಣು. 
ಚಿತ್ರ ಕೃಪೆ - ಅಂತರ್ಜಾಲ 

ಅಶ್ವತ್ - ಚಾಮಯ್ಯ ಮೇಷ್ಟ್ರು
ಗುರು - ತಂದೆ - ಸ್ನೇಹಿತ ಈ ಮೂರು ಸ್ಥಾನಗಳನ್ನು ಕಲಸಿ, ಬೆರೆಸಿ ಪಾಕ ಹಾಕಿದ ಪಾತ್ರ ಇದು. ಈ ಪಾತ್ರಕ್ಕೆ ಅಶ್ವತ್ ಅಭಿನಯಿಸಿಲ್ಲ ಬದಲಿಗೆ ಅವರೇ ಚಾಮಯ್ಯ ಮೇಷ್ಟ್ರು. 

"ಆ ನಾಗರಹಾವಿಗೆ ನಾನೇ ಗರುಡ ಮಚ್ಚೆ"

"ನನ್ನ ಶಿಷ್ಯ ದೊಡ್ಡ ವ್ಯಕ್ತಿ ದೊಡ್ಡ ವ್ಯಕ್ತಿ"

"ರಾಮಾಚಾರಿಯಂಥಹ ಉರಿಯುವ ಬೆಂಕಿಗೆ ಕೋಪದ ಕಾದೆಣ್ಣೆ ಹಾಕಬೇಡಿ"

"ನಿನಗೆ ಧರ್ಮರಾಯ ಲಾಂಚನವಾಗಬೇಕೆ ಹೊರತು ದುರ್ಯೋಧನ ಅಲ್ಲ"

"ನಿಮಗೆ ಗೊತ್ತಿಲ್ಲ ನಾ ಹಾಕಿದ ಗೆರೆಯನ್ನು ರಾಮಾಚಾರಿ ಎಂದು ದಾಟುವುದಿಲ್ಲ"

ಇವೆಲ್ಲಾ ಕೆಲವು ತುಣುಕುಗಳು..

ಮನದಾಳಕ್ಕೆ ಮೆಟ್ಟಿಲು ಇಳಿದು ಹೋಗೊಲ್ಲಾ ಇವರ ಪಾತ್ರ.. ಒಂದೇ ಸಾರಿ ಮನದ ಸರೋವರಕ್ಕೆ ಧುಮುಕಿಯೇ ಬಿಡುತ್ತಾರೆ. 
(ಈ ಪಾತ್ರದ ಬಗ್ಗೆ ಬಹಳ ಬರೆಯಲು ಹೋಗಿಲ್ಲ.. ಕಾರಣ ಚಿತ್ರ ಜಗತ್ತಿನ ಪಾತ್ರಗಳ ಬಗ್ಗೆ ಬರೆಯುವೆ.. ಅಲ್ಲಿ ಮಿನುಗುತ್ತಾರೆ ನಮ್ಮ ಹೆಮ್ಮೆಯ ಚಾಮಯ್ಯ ಮೇಷ್ಟ್ರು!.  ನಾ ತುಂಬಾ ಇಷ್ಟ ಪಡುವ ಕೆ ಎಸ್ ಅಶ್ವತ್ ಅವರ ಚಿತ್ರ ಪ್ರಪಂಚದ ಪಾತ್ರಗಳ ಬಗ್ಗೆ ಮುಂದೆ ಬರೆಯುವೆ.. ಜೊತೆಯಲ್ಲಿ ಚಾಮಯ್ಯ ಮೇಷ್ಟ್ರು ಪಾತ್ರವೇ ಮೊದಲು)

ಚಿತ್ರ ಕೃಪೆ - ಅಂತರ್ಜಾಲ 
ಅಶ್ವತ್ ಅವರ ಅಭಿನಯಕ್ಕೆ ಈ ಚಿತ್ರ ಲೇಖನ ಅರ್ಪಿತ 

*************************************
ನಾಗರಹಾವು ಚಿತ್ರ ತುಂಬಾ ಕಾಡುವುದು ಚಾಮಯ್ಯ ಮೇಷ್ಟ್ರ ಅಭಿನಯ, ರಾಮಾಚಾರಿಯ ಆಕ್ರೋಶ, ವರದಾ ಪಾತ್ರದ ಸ್ಪೆಷಾಲಿಟಿ, ದುರ್ಗವನ್ನು ಅಚ್ಚುಕಟ್ಟಾಗಿ ತೋರಿಸುವ ರೀತಿ. ಚಿತ್ರದುರ್ಗ ನೋಡಬೇಕೆಂದರೆ ನಾಗರಹಾವು ಚಿತ್ರ ನೋಡಿ ಸಾಕು ಎನ್ನುವಷ್ಟರ ಮಾತಿಗೆ ಪ್ರಸಿದ್ಧಿಯಾಗಿದೆ. 

ಒಂದು ವಸ್ತುವನ್ನು ಜಗತ್ತು ಹೇಗೆಲ್ಲ ನೋಡಬಹುದು, ಮತ್ತು ಹೇಗೆಲ್ಲ ಅದರ ಬೆಳವಣಿಗೆಗೆ ಅಡ್ಡಿ ಅಥವಾ ಸಹಕಾರಿ ಆಗಬಹುದು ಎನ್ನುವ ಒಂದು ಸತ್ವ ಈ ಚಿತ್ರದಲ್ಲಿ ಮೂಡಿ ಬಂದಿದೆ. ವಿವೇಕದ ಲೇಖನಿಗೆ ನಮ್ಮ ಹಣೆಬರಹವನ್ನು ತಿದ್ದುವ ಶಕ್ತಿ ಇಲ್ಲದೆ ಹೋದರು.. ಹಣೆಬರಹದ ದಿಕ್ಕನ್ನು ಇನ್ನಷ್ಟು ತೀಕ್ಷ್ಣಗೊಳಿಸುವ ಶಕ್ತಿ ಇದೆ ಎನ್ನುವ ಮಾತು ನಿಜಕ್ಕೂ ಹೌದು. ಇಲ್ಲಿ ಎಲ್ಲಾ ಪಾತ್ರಗಳು ವಿವೇಕಸಹಿತವಾಗಿ ಯೋಚಿಸಿ.. ಸ್ವಲ್ಪ ತಾಳ್ಮೆಯಿಂದ ವರ್ತಿಸಿದ್ದರೆ ರಾಮಾಚಾರಿಯ ಜೀವನ ಸುಂದರ ಹೂ ಬನವಾಗುತ್ತಿತ್ತು ಅನ್ನಿಸುತ್ತದೆ. 

ಒಂದು ಕಾದಂಬರಿಯನ್ನು ಚಿತ್ರ ಮಾಡುವುದೇ ಸಾಹಸ.. ಮೊದಲೇ ಬಂಧಿತವಾಗಿದ್ದ ಮೂರು ಮೂರು ಕಾದಂಬರಿಗಳನ್ನು ಜೋಡಿಸಿ ಹೊಂದಿಸಿ ಬೆಳ್ಳಿ ತೆರೆಗೆ ಬೇಕಾದ ರೀತಿಯಲ್ಲಿ ಅಳವಡಿಸಿಕೊಂಡು, ಮನೋಜ್ಞ ಸಂಭಾಷಣೆ, ಹಾಡುಗಳು, ಸಂಗೀತ ಸರಿಯಾದ ಹದದಲ್ಲಿ ಬೆರೆಸಿ ಒಂದು ಅನರ್ಘ್ಯ ರತ್ನ ನೀಡಿದ್ದಾರೆ. 

ಚಿತ್ರ ಕೃಪೆ - ಅಂತರ್ಜಾಲ

ಈ ಲೇಖನ ಮಾಲಿಕೆ ಅವರ ಚಿತ್ರಗಳ ಬಗ್ಗೆ ಆದರೂ.. ನಟರ, ತಂತ್ರಜ್ಞರ ಬಗ್ಗೆ ಹೆಚ್ಚು ಹೆಚ್ಚು ಬರೆದಿದ್ದೇನೆ. ಆದರೆ ನಿರ್ದೇಶಕ ಚಿತ್ರದ ಹಡಗಿನ ಕಪ್ತಾನ ಎನ್ನುವ ಮಾತನ್ನು ಕಲ್ಲಿನಲ್ಲಿ ಕೆತ್ತಿ ನಿರೂಪಿಸಿದವರು ಪುಟ್ಟಣ್ಣ ಕಣಗಾಲ್. ಇಡಿ ಪಾತ್ರಗಳನ್ನೂ ತಾವು ಮನದಲ್ಲಿ ಕಟ್ಟಿಕೊಂಡು ಅದಕ್ಕೆ ರೂಪ ಕೊಟ್ಟು ಅಭಿನಯ ಹೇಳಿಕೊಟ್ಟು, ಎಲ್ಲರ ಬಳಿಯೂ ೧೦೦ ಕ್ಕೆ ನೂರು ಶ್ರಮ ತೆಗೆಸಿದ ಈ ಕಪ್ತಾನರಿಗೆ ಲೇಖನಗಳ ಮಾಲಿಕೆಯೇ ನಮ್ಮ ಕೃತಜ್ಞತೆಗಳು, ಧನ್ಯವಾದಗಳು ಮತ್ತು ಅಭಿನಂದನೆಗಳು!!!

Saturday, November 1, 2014

ಕನ್ನಡ ಜನರ ಔದಾರ್ಯದಂತೆ ... ಸಾಕ್ಷಾತ್ಕಾರ (1971)

ಸುಮಾರು ಇಪ್ಪತ್ತು ವರ್ಷಗಳ ಹಿಂದೆ, ನನ್ನ ಅಣ್ಣ ಆಗಿನ VCP ನಲ್ಲಿ ಸಾಕ್ಷಾತ್ಕಾರ ಚಿತ್ರವನ್ನು ಒಬ್ಬನೇ ನೋಡಿ ಸುಮಾರು ದಿನಗಳು ಮಾತೆ ಆಡದಂತೆ ಮೌನವಾಗಿದ್ದ. ಯಾಕೋ ಅಂತ ಕೇಳಿದರೆ ಆ ಚಿತ್ರ ತುಂಬಾ ಕಾಡುತ್ತದೆ.. ನೀ ಆ ಚಿತ್ರವನ್ನು ಒಮ್ಮೆ ನೋಡು ಆಮೇಲೆ ನಿನಗೆ ಗೊತ್ತಾಗುತ್ತೆ ಅಂದ.

ಒಮ್ಮೆ ನೋಡಿದೆ, ನಾ ಮೂಕ ಹಕ್ಕಿಯ ಹಾಗೆ ಆಗಿಬಿಟ್ಟೆ.

ಬಿ ಮಲ್ಲಿಕ್ ಅವರ ಮಲ್ಲಿಕ್ ಪ್ರೊಡಕ್ಷನ್ಸ್ ಅವರ ನಿರ್ಮಾಣದಲ್ಲಿ ೧೯೭೧ರಲ್ಲಿ ಬೆಳ್ಳಿತೆರೆಯಲ್ಲಿ ಸಾಕ್ಷಾತ್ಕಾರಗೊಂಡ ಈ ಚಿತ್ರ ಹಲವಾರು ಕಾರಣಗಳಿಗೆ ನಮ್ಮ ಮನದಲ್ಲಿ ಹಸಿರಾಗಿ ನಿಲ್ಲುತ್ತದೆ.


ಚಿತ್ರವನ್ನು ಚಿಕಮಗಳೂರು, ಕಳಸ, ಮುಡುಕುತೊರೆ ಮುಂತಾದ ಸುಂದರ ತಾಣಗಳಲ್ಲಿ ಮೂಡಿ ಬಂದ ಈ ಚಿತ್ರಕ್ಕೆ ಆರಂಭಿಕ ದೃಶ್ಯದಲ್ಲಿ ಕನ್ನಡದ ಚೇತನ ಅ ನ ಕೃಷ್ಣರಾಯರು ಬಂದು ಶುಭ ಹಾರೈಸುವುದು, ಜೊತೆಯಲ್ಲಿಯೇ ಚಿತ್ರರಂಗದ ಶೋ ಮ್ಯಾನ್ ಎಂದೇ ಹೆಸರಾದ ರಾಜ್ ಕಪೂರ್, ಮತ್ತು ಭಾರತ ಚಿತ್ರರಂಗದ ಸಿಂಹ ಪೃಥ್ವಿರಾಜ್ ಕಪೂರ್ ಇವರನ್ನೆಲ್ಲ ಸಾಕ್ಷಾತ್ಕರಿಸಿಕೊಂಡ ದೃಶ್ಯ ನೆನಪಾಗಿ ನಿಲ್ಲುತ್ತದೆ.

ಕನ್ನಡ ಚಿತ್ರರಂಗದ ಭೀಷ್ಮ ಆರ್ ನಾಗೇಂದ್ರರಾಯರು, ನನ್ನ ನೆಚ್ಚಿನ ಬಾಲಕೃಷ್ಣ, ಕಪ್ಪು ಬಿಳುಪಿನ ವರ್ಣದಲ್ಲೂ ಮುಗ್ಧವಾಗಿ ಕಾಣುವ ಜಮುನ, ಕಂಚಿನ ಕಂಠದ ವಜ್ರಮುನಿ, ಇಡಿ ಚಿತ್ರದಲ್ಲಿ ಮೃದುವಾಗಿ ಮಾತಾಡಿ ವಿಶಿಷ್ಟ ಅಭಿನಯ ನೀಡಿರುವ ರಾಜ್, ಚಿಕ್ಕ ಚಿಕ್ಕ ಪಾತ್ರದಲ್ಲಿ ನರಸಿಂಹರಾಜು ಮತ್ತು  ಉಳಿದ ಸಹಕಲಾವಿದರು  ಚಿತ್ರಕ್ಕೆ ಬೇಕಾದ ವರ್ಣವನ್ನು ತಂದು ಕೊಟ್ಟಿದ್ದಾರೆ.

ಈ ಚಿತ್ರದಲ್ಲಿ ಎದ್ದು ಕಾಣುವುದು ಈ ಮಹಾನ್ ಕಲಾವಿದರು

ಪೃಥ್ವಿರಾಜ್ ಕಪೂರ್:


ದೊಡ್ಡ ದೇಹ, ದೊಡ್ಡ ಶಾರೀರ, ಮಾತು, ಅಂಗೀಕ ಅಭಿನಯ ವಾಹ್ ವಾಹ್.

ಇಡಿ  ಪಾತ್ರವನ್ನು ಅವರ ಧ್ವನಿಯಲ್ಲಿಯೇ ಅಭಿನಯಿಸಿರುವುದು ಪುಟ್ಟಣ್ಣ ಅವರು ಕನ್ನಡ ನುಡಿ, ನೆಲಕ್ಕೆ ತೋರಿಸುತ್ತಿದ್ದ ಅಭಿಮಾನ.

"ಒಲವೆ ಜೀವನ ಸಾಕ್ಷಾತ್ಕಾರ" ಈ ಮಾತುಗಳನ್ನು ಹೇಳುವಾಗ ಅವರ ಧ್ವನಿ

"ಆದಷ್ಟು ಬೇಗ ಮನುಷ್ಯನಾಗಬೇಕು ಉಮಾ ಮಹೇಶ್ವರನಾಗಬೇಕು"

"ಒಲವಿನ ಬಲವೇ ದೈವ ಬಲ"

ಎಲ್ಲರೂ ಈ ಮನೆಯಿಂದ ಹೊರತು ಹೋದರೆ ಏನು ಉಳಿಯುತ್ತದೆ ಎನ್ನುವ ಅವರ ಶ್ರೀಮತಿ ಪ್ರಶ್ನೆಗೆ ಅವರು ಕೊಡುವ ಉತ್ತರ
"ಸತ್ಯ ಧರ್ಮ ಮನುಷ್ಯತ್ವ" 

ಹೆಂಡತಿ ಅವರ ಮಾತು ಕೇಳದೆ ಮನೆ ಬಿಟ್ಟು ಹೋಗುವಾಗ ಅವರು ಕೂಗುವ "ತಾಯೇ" ನಿಜಕ್ಕೂ ಒಮ್ಮೆ ನಾನೇ ಬೆಚ್ಚಿ ಬಿದ್ದೆ. ರೋಮಾಂಚನ ಮತ್ತು ಭೀತಿ ಎರಡರ ಮಧ್ಯದ ಸ್ಥಿತಿ ನನ್ನದು ಆಗ.

"ನನ್ನ ಮನೆ ಬಾಗಿಲು ದೊಡ್ಡದಾಗಿ ತೆರೆದಿದೆ
ಬರುವವರಿಗೆ ಸ್ವಾಗತ ಸುಸ್ವಾಗತ
ಹೋಗೋರಿಗೆ" ಎಂದು ಹೇಳಿ ಎರಡು ಕೈಯನ್ನು ಎತ್ತಿ ಮುಗಿಯುತ್ತಾರೆ. ಇಡಿ ದೃಶ್ಯದಲ್ಲಿ ಅವರು ಓಡಾಡುವ ಪರಿ, ಅದಕ್ಕೆ ಕೊಡುವ ಗಂಭೀರತೆ ಮನಸ್ಸೆಳೆಯುತ್ತದೆ. ಒಂದು ದೃಶ್ಯವನ್ನು ಇನ್ನಷ್ಟು ಶ್ರೀಮಂತಗೊಳಿಸುವ ಕಲೆ ಪುಟ್ಟಣ್ಣ ಅವರಿಗೆ ಸಿದ್ಧಿಸಿತ್ತು.

"ಮಡದಿಯೇ ಮನೆ ದೇವತೆ"

"ಈ ಪ್ರಪಂಚದಲ್ಲಿ ತನ್ನ ಹೆಂಡತಿಯನ್ನು ಕರೆದುಕೊಂಡು ಬಾರೋ ಅಂತ ಹೇಳುವ ದೌರ್ಭಾಗ್ಯ ಯಾವ ಅಪ್ಪನಿಗೂ ಬಾರದಿರಲಿ" ಕಣ್ಣಿನಲ್ಲಿ ಮಡುಗಟ್ಟಿದ ದುಃಖ ಧ್ವನಿಯಲ್ಲಿ ನಡುಕ, ವಾಹ್ ಸೂಪರ್ ಸೂಪರ್

ಹತಾಶರಾಗಿ ಅರಳಿ ಕಟ್ಟೆಯ ಬಳಿ ಕೂತಿದ್ದಾಗ ತನ್ನ ಸ್ನೇಹಿತ ಬಾರೋ ಮನೆಗೆ ಹೋಗೋಣ ಅಂತ ಹೇಳುವ ಮಾತು
"ಮನೆ  ಮಡದಿ, ಮಕ್ಕಳು ಎಲ್ಲಾ ನಶ್ವರ
ಈಶ್ವರನೊಬ್ಬನೆ ಶಾಶ್ವತ"

ಸ್ನೇಹಿತ "ಸ್ಥಳ ಬದಲಾದರೆ ನಿನ್ನ ಮನಸ್ಸು ತಿಳಿಯಾಗುತ್ತದೆ ನಡಿ ಶೃಂಗೇರಿಗೆ ಹೋಗೋಣ" ಅಂದಾಗ ಮಗುವಿನ ತರಹ ಅಭಿನಯ ಕೊಡುತ್ತಾ "ಶೃಂಗೇರಿಗೆ!.. ಹಾ ಹೋಗೋಣ" ಎಂದು ಎದ್ದು ನಿಲ್ಲುವಾಗ ಆ ಬೃಹತ್ ದೇಹದಲ್ಲಿ ಒಂದು ಪುಟಾಣಿ ಮಗು ಕಾಣುತ್ತದೆ.

ಅವರ ಅಂತಿಮ ದೃಶ್ಯದಲ್ಲಿ ತಮ್ಮ ಮಗನಿಗೆ ಬರೆದ ಪತ್ರದ ಸಾರಾಂಶವನ್ನು ಓದುವ ಅವರ  ಧ್ವನಿ
"ಈ ನೆಲದ ಬಾಳು ನಶ್ವರ
ಇಲ್ಲಿ ಒಲವು ಮಾತ್ರ ಅಮರ
ಕಳೆದ ನಿನ್ನೆಗಳಿಗಾಗಿ ಚಿಂತಿಸಬೇಡ 
ಬರುವ ನಾಳೆಗಳಿಗಾಗಿ ಭೀತನಾಗಬೇಡ
ನಿನ್ನ ತಾಯಿಯನ್ನು ದೈವದಂತೆ ಗೌರವಿಸು (ಈ ಮಾತನ್ನು ಹೇಳುವಾಗ "ದೈವ" ಎನ್ನುವ ಪದಕ್ಕೆ ಅವರು ಕೊಡುವ ಒತ್ತು ಸೂಪರ್)
ಜೀವನವನ್ನು ಜೇನಾಗಿ ನೆನೆದು ಸವಿಯುವ ಸಾಧನೆ ಮಾಡು 
ಸತತ ಪ್ರಯತ್ನವೇ ಸಾಧನೆಯ ರಹಸ್ಯ"

ಅವರು ಮಾತುಗಳನ್ನು ತುಸು ನಿಧಾನಗತಿಯಲ್ಲಿ ಜೊತೆಯಲ್ಲಿ ಅದಕ್ಕೆ ಕೊಟ್ಟಿರುವ  ಪ್ರತಿಧ್ವನಿಯೂ ಪರಿಣಾಮಕಾರಿಯಾಗಿ ಅವರ ಅಭಿನಯವನ್ನು ಇನ್ನಷ್ಟು ಹೆಚ್ಚಿಸಲು ಅನು ಮಾಡಿಕೊಟ್ಟಿದೆ. ಅನ್ಯ ಭಾಷೆಯ ನಟನನ್ನು ಕರೆತಂದು ಅವರೇ ಪಾತ್ರಕ್ಕೆ ಧ್ವನಿ ನೀಡುವಂತೆ ಮಾಡಿ, ಅವರಿಂದ ಕಥೆಗೆ ಬೇಕಾದ ರೀತಿಯಲ್ಲಿ ಅಭಿನಯ ಹೊರಗೆ ತೆಗೆದದ್ದು ಪುಟ್ಟಣ್ಣ ಅವರು ನಿರ್ದೇಶನದ ಮಾಧ್ಯಮದ ಮೇಲೆ ಹಿಡಿತವಿದ್ದದ್ದಕ್ಕೆ ಸಾಕ್ಷಿ.

ಹಣೆಯ ಮೇಲಿನ ವಿಭೂತಿ, ನಡುಗುವ ಕಣ್ಣುಗಳು, ಕಂಚಿನ ಕಂಠ, ವಸ್ತ್ರಗಳು ಎಲ್ಲವೂ ಆ ಪಾತ್ರಕ್ಕೆ ಸೊಗಸಾಗಿ ಜೊತೆಯಾಗಿವೆ.


ಆರ್ ನಾಗೇಂದ್ರರಾಯರು

ಕನ್ನಡ ಚಿತ್ರರಂಗದ ಭೀಷ್ಮ ಎಂದೇ ಹೆಸರಾದ ನಾಗೇಂದ್ರರಾಯರು ಪೃಥ್ವಿರಾಜ್ ಅವರಿಗೆ ಸರಿಸಾಟಿಯಾಗಿ ಅಭಿನಯಿಸಿದ್ದಾರೆ.

"ಮಹೇಶ ನಿನಗೆ ಪುಸ್ತಕದ ಜ್ಞಾನ ಹೆಚ್ಚು 
ಮಸ್ತಕದ ಜ್ಞಾನ ಕಮ್ಮಿ"

"ಬೇಡೋ ಕಣೋ.. ನಾನು ನೀನು ಬಾಲ್ಯ ಸ್ನೇಹಿತರು
ನಿನ್ನ ಮನೆ ಬೇರೆ ಅಲ್ಲ ನನ್ನ ಮನೆ ಬೇರೆ ಅಲ್ಲಾ 
ನಿನ್ನ ಹೆಂಡತಿ ಹೇಳಿದಾಗೆ ಅನಿಷ್ಟ ಅಂಗಾರಕ ದೋಷ ಮನೆ, ವಂಶವನ್ನೇ ನಿರ್ನಾಮ ಮಾಡುತ್ತದೆ"

"ಇಂದಿನಿಂದ ನೀವಿಬ್ಬರೂ ಒಲವಿನ ಜೋಡಿಗಳಲ್ಲ 
ಒಲವಿನ ಅಣ್ಣ ತಂಗಿಯರ ಹಾಗೆ ಬಾಳಿ"

ತನ್ನ ಸ್ನೇಹಿತನ ನೆಮ್ಮದಿಗೋಸ್ಕರ ಶೃಂಗೇರಿ ಬಂದು ನದಿಯಲ್ಲಿ ಅರ್ಘ್ಯ ಕೊಡುತ್ತಾ ಮಂತ್ರಗಳನ್ನು ಹೇಳುತ್ತಾ ಮುಖದಲ್ಲಿ ತೋರುವ  ಭಾವ..

"ಮಹೇಶ ಸುಮ್ಮನೆ ಒಲವು ಒಲವು ಅಂತ ಒದ್ದಾಡ್ತಾನೆ.. ಮಾಟ ಮದ್ದು ಮಾಡುವರಿಗೆ ಒಲವಿನ ಮಾತು ಎಲ್ಲಿ ಹೋಗುತ್ತೆ.. "

ಸಲೀಸಾದ ಅಭಿನಯ, ಪೃಥ್ವಿರಾಜ್ ಜೊತೆಯಲ್ಲಿಯೇ ಸರಿಸಾಟಿಯಾದ ಅಭಿನಯ ನೋಡೋದೇ ಕಣ್ಣಿಗೆ ಒಂದು ಹಬ್ಬ.

ಬಾಲಕೃಷ್ಣ ಅರ್ಥಾತ್ ಬಾಲಣ್ಣ 

ಅಕ್ಷರಶಃ ಈ ಚಿತ್ರದಲ್ಲಿ ಛಾಪು ಮೂಡಿಸಿದವರು ಇವರೇ. ಇಡಿ ಚಿತ್ರಕ್ಕೆ ಒಂದು ಮಹತ್ ತಿರುವು ಕೊಟ್ಟು, ತಮ್ಮ ಅಭಿನಯ, ಸಂಭಾಷಣೆ, ಮುಖಭಾವ ಎಲ್ಲದರಲ್ಲಿಯೂ ಖಳ ಅಂದರೆ ಕೂಗಾಡಲೇ ಬೇಕು, ದಪ್ಪ ದಪ್ಪ ಕಣ್ಣುಗಳು, ಮೀಸೆಗಳು, ವಿಚಿತ್ರ ವೇಷಭೂಷಣಗಳು ಇರಬೇಕು ಎನ್ನುವ ಸಿದ್ಧ ಸೂತ್ರವನ್ನು ಬದಿಗಿಟ್ಟ ಚಿತ್ರ ಇದು.  ಎಲ್ಲರ ರೀತಿಯಲ್ಲಿ ಸಹಜವಾಗಿ ಕಾಣುವ ಬಾಲಣ್ಣ ಈ ಚಿತ್ರದಲ್ಲಿ ಮಾಡಿರುವ ಜಾದೂ ಬಗ್ಗೆ ಹೇಳೋಕೆ ಪದಗಳೇ ಸಾಲದು.

"ಆವದಾನಿಗಳೇ ನನ್ನ ಮಗಳು ಸುಮಾ ಮಹೇಶನ ಮದುವೆ ಆಗಬೇಕು.. ನನ್ನ ಭಾವನ ಆಸ್ತಿ ನನಗೆ ಬರಬೇಕು.. ನನ್ನ ಭವನ ಸೊಕ್ಕು ಇಳಿಯಬೇಕು.. "

"ತಗೊಳ್ಳಿ ಕೊಲೆ ಮೊಕ್ಕದಮ್ಮೆಯಲ್ಲಿ ಬಂದ ದುಡ್ಡು... ಕೊಲೆ ಮಾಡಿದವನನ್ನೇ ಗೆಲ್ಲಿಸಿಬಿಟ್ಟೆ ಅದರ ಧರ್ಮ ಕರ್ಮಗಳು ನಿಮಗೆ ಇರಲಿ"

"ನಿನಗೆ ನಿನ್ನಮ್ಮನಹಾಗೆ ಮೈ ಬಂತೆ ಹೊರತು
ನನ್ನ ಹಾಗೆ ಬುದ್ದಿ ಬರಲಿಲ್ಲ"

"ಮಹಾರಾಣಿ ಆಗಿ ಬಾಳೇ ಮಗಳೇ ಅಂದ್ರೆ
ಹಾವ್ರಾಣಿ ಆಗಿ ಹಲ್ಲಿ ನುಂಗ್ತೀನಿ ಅಂತ್ಯಲ್ಲೇ"

"ನಾ ನಂಬಿದೋರಿಗೆ ದ್ರೋಹ ಮಾಡೋನಲ್ಲ
ತಂಬಿಟ್ಟಿಗೆ ಉಪ್ಪು ಬೆರೆಸೋನಲ್ಲಾ"

ಹೀಗೆ ಚಿತ್ರದ ಉದ್ದಕ್ಕೂ ಹೇಳುತ್ತಾ ಬರುವ ಬಾಲಣ್ಣನ ಪಾತ್ರ ಮಾಡೋದೆಲ್ಲ ಅನಾಚಾರವೇ.. ಅದ್ಭುತ ನಟನೆ.

ರಾಜ್ 

ಮೊದಲಿಗೆ ಗಮನಸೆಳೆಯುವುದು ಮುದ್ದಾಗಿ ಕಾಣುವ ಅವರು ಮತ್ತು ವಿದೇಶದಿಂದ ಬರುವ ಮೊದಲ ದೃಶ್ಯದಲ್ಲಿ ತನ್ನ ಓರಗೆಯವರನ್ನು ಯಾವ ಹಮ್ಮು ಬಿಮ್ಮು ಇಲ್ಲದೆ ಮಾತಾಡಿಸುವ ರೀತಿ.

ಅವರ ವೇಷಭೂಷಣಗಳು ಗಮನಸೆಳೆಯುತ್ತದೆ

ಇಡಿ ಚಿತ್ರದಲ್ಲಿ ಒಮ್ಮೆಯೂ ತಾಳ್ಮೆ ಕಳೆದುಕೊಳ್ಳದೆ ಸಂಯಮದಿಂದ ಮಾತಾಡುವ ಅಭಿನಯ.

ತಾನು ಮದುವೆಯಾಗುವ ಹೆಣ್ಣಿನಿಂದ ಹಲವು ಕಾರಣಗಳಿಗಾಗಿ ತನ್ನ ಮನೆಯೇ ಒಡೆದು ತನ್ನ ಬಂಧುಗಳೆಲ್ಲ ದೂರವಾದಮೇಲೆ ಈ ಮನೆ ಏನಾಗಿದೆ ಏನಾಗಬೇಕಿತ್ತು ಎನ್ನುವ ಸರಣಿ ಸಂಭಾಷಣೆಯಲ್ಲಿ ಅವರು ತೋರುವ ಮುಖಭಾವ ಮತ್ತು ಸಂಭಾಷಣೆಯನ್ನು ಹೇಳುವ ರೀತಿ.

ಅಪ್ಪನ ಅಣತಿಯಂತೆ ಅಮ್ಮನನ್ನು ಕರೆದೊಯ್ಯಲು ಬಂದಾಗ ಸಿದ್ಧವಾಗುವ ಅಮ್ಮನನ್ನು ನೋಡಿ ಸಂತಸಗೊಂಡು ಕೂತಿರುತ್ತಾರೆ. ಆದರೆ ಬಾಲಣ್ಣನ ಮಾತನ್ನು ಕೇಳಿ ತನ್ನ ತಾಯಿ "ಅಪ್ಪಾಜಿನೇ ಬಂದು ಕರೆದುಕೊಂಡು ಹೋದರೆ ಬರ್ತೀನಿ" ಎಂದು ಹೇಳಿದ ಮೇಲೆ.. ಒಂದು ಮಾತಾಡದೆ ತಮ್ಮ ಚಡಪಡಿಕೆ ತೋರುವ ಅಭಿನಯ ವಾಹ್ ಎನ್ನಿಸುತ್ತದೆ.

ಬೇರೆ ಯಾರೂ ತನ್ನ ತಾಯಿಯನ್ನು ಗುಂಡಿಟ್ಟು ಕೊಂದ ಮೇಲೆ.. ತಾಯಿಯ ಹತ್ತಿರ ಬಂದಾಗ "ಒಲವು ಒಲವು ಅಂತ ಹೇಳಿ.. ಒಲವಿನ ತಾಯಿಯನ್ನೇ ಬಲಿ ತೆಗೆದುಕೊಂಡೆಯ" ಎಂದು ತನ್ನ ತಾಯಿ ಹೇಳುತ್ತಾ ಕೊನೆ ಉಸಿರು ಎಳೆದಾಗ ರಾಜ್ ಅಭಿನಯ ಸೂಪರ್.

ಜೀವನವೆಲ್ಲ ಒಲವು ಒಲವು ಎಂದು ಹೋರಾಡಿಕೊಂಡು ಬಂದರೂ ತನ್ನ ತಾಯಿಯೇ ತನನ್ನು ತಪ್ಪು ತಿಳಿದುಕೊಂಡಾಗ.. ವಾಹ್ ಅಭಿನಯದಲ್ಲಿನ ತನ್ಮಯತೆ ನಮ್ಮನ್ನು ಸದಾ ಕಾಡುತ್ತದೆ

ಅಂತ್ಯದಲ್ಲಿ ತಮ್ಮ ಅಪ್ಪಾಜಿ ಹೇಳುತ್ತಿದ್ದ ಮಾತುಗಳನ್ನು ಮತ್ತೆ ನೆನಪಿಸಿಕೊಳ್ಳುವ
"ಜೀವನವೇ ಒಂದು ಪಾಠಶಾಲೆ
ಅದರಲ್ಲಿ ಬರುವ ಒಂದೊಂದು ಸನ್ನಿವೇಶವೂ ಪರೀಕ್ಷೆ
ಅದರಲ್ಲಿ ತೇರ್ಗಡೆಯಾದವನಿಗೆ ಮಾತ್ರ ಜೀವನ ಸಾಕ್ಷಾತ್ಕಾರ"

ಅತ್ಯುತ್ತಮ ಸಂಭಾಷಣೆ ಮತ್ತು ಅತ್ಯುತ್ತಮ ಅಭಿನಯ.

******

ನಾಯಕಿ ಜಮುನ ಅವರ ಅಭಿನಯ, ಮುಗ್ಧ ಸೌಂದರ್ಯ, ಸಂಭಾಷಣೆ, ಹಾಡುಗಳಲ್ಲಿ ನೃತ್ಯ ಇಷ್ಟವಾಗುತ್ತದೆ.
"ನಾನು ಅಂಗಾರಕ ದೋಷದ ಹೆಣ್ಣಲ್ಲ" ಎನ್ನುವಾಗ ತನ್ನ ಹಣೆಯ ಮೇಲಿನ ಕಳಂಕ ದೂರವಾದ ಆ ಕ್ಷಣಗಳಿಗೆ ಸಂತಸ ಪಡುವ ಅವರ ಅಭಿನಯ ಮನ ಮುಟ್ಟುತ್ತದೆ.

ಇಡಿ ಚಿತ್ರ ಪುಟ್ಟಣ್ಣ ಅವರ ಅಗ್ರಜ ಕಣಗಾಲ್ ಪ್ರಭಾಕರ ಶಾಸ್ತ್ರಿ ಅವರ ಕೂಸು. ಆರಂಭದಲ್ಲಿಯೇ "ಕಣಗಾಲ್ ಪ್ರಭಾಕರ್ ಶಾಸ್ತ್ರೀ ವಿರಚಿತ" ಎಂದು ತೋರಿಸುವ ಮೂಲಕ ಪುಟ್ಟಣ್ಣ ಪ್ರತಿಯೊಬ್ಬರ ಕಲೆಯನ್ನು, ಮತ್ತು ಅವರ ಶ್ರಮಕ್ಕೆ ತಕ್ಕ ಗುರುತಿಸುವಿಕೆಯನ್ನು ಪಾಲಿಸುತ್ತಿದ್ದದು ಇಷ್ಟವಾಗುತ್ತದೆ.

ಕಥೆ, ಚಿತ್ರಕಥೆ, ಸಂಭಾಷಣೆ, ಹಾಡುಗಳು ಎಲ್ಲವನ್ನೂ ಬರೆದಿರುವ ಕಣಗಾಲ್ ಪ್ರಭಾಕರ್ ಶಾಸ್ತ್ರಿ ಇಡಿ ಚಿತ್ರದುದ್ದಕ್ಕೂ ತಮ್ಮ ಪ್ರತಿಭೆಯನ್ನು ಧಾರೆ ಎರೆದಿದ್ದಾರೆ. ಈ ಚಿತ್ರ ಸಂಭಾಷಣೆ, ಹಾಡುಗಳಿಗೆ ಹೆಸರು ಮಾಡಿತ್ತು.

ಇಂಥಹ ಸುಮಧುರ ಚಿತ್ರಕ್ಕೆ ಛಾಯಾಗ್ರಹಣ ನೀಡಿದ ಶ್ರೀಕಾಂತ್ ಮತ್ತು ಸಂಗೀತ ಮತ್ತು ಮಹೋನ್ನತ ಗೀತೆಗಳನ್ನು ಕೊಟ್ಟ ಎಂ ರಂಗರಾವ್ ಸ್ಮರಣೀಯರು.

ಹಾಡುಗಳ ಬಗ್ಗೆ ಹೇಳಲೇ ಬೇಕು

"ಒಲವೆ ಜೀವನ ಸಾಕ್ಷಾತ್ಕಾರ" ಮೊದಲ ಹಾಡಿಗೆ ದನಿಯಾದವರು ಪಿ ಸುಶೀಲ, ಅಮೋಘ ಗಾಯನ ಜೊತೆಯಲ್ಲಿ
ಹಾಡಿನ ಕಡೆಯಲ್ಲಿ ಬರುವ ಸಾಲುಗಳನ್ನು ಹಾಡುವಾಗ ಅವರ ಧ್ವನಿ ಇಷ್ಟವಾಗುತ್ತದೆ.

"ಒಲವಿನ ಪೂಜೆಗೆ ಒಲವೆ ಮಂದಾರ
ಒಲವೆ ಬದುಕಿನ ಬಂಗಾರ
ಒಲವಿನ ನೆನಪೇ ಹೃದಯಕೆ ಮಧುರ
ಒಲವೇ ದೈವದ ಸಾಕ್ಷಾತ್ಕಾರ"

ಈ ಸಾಲುಗಳು ಮನಸ್ಸನ್ನು ಬಹಳ ಕಾಡುತ್ತವೆ.

ತನ್ನ ಒಲವಿನ ಗೆಳೆಯನ ಮುಂದೆ ಈ ಹಾಡನ್ನು ಹಾಡುತ್ತಾ ಅವನಿಗೆ ಒಲವಿನ ಪುಷ್ಪ ಮಾಲಿಕೆ ಅರ್ಪಿಸಿದ ಮೇಲೆ ರಾಜ್.. ಈ ದೃಶ್ಯವನ್ನು ತನ್ನ ಅಪ್ಪ ಮತ್ತು ಭಾವಿ ಮಾವ ನೋಡಿದರು ಎಂದು ಅರಿವಾದಾಗ ಅಭಿನಯ ಸುಂದರ.

"ಕಾದಿರುವಳು ಕೃಷ್ಣಾ ರಾಧೇ" ತನ್ನ ಬಾಳಿನ ಸಂಗಾತಿಯಾಗಿ ಬರುವುದಕ್ಕೆ ಸಿದ್ಧತೆಯಾಗಿ ಲಗ್ನ ಪತ್ರಿಕೆ ಶಾಸ್ತ್ರದಲ್ಲಿ ಹಾಡುವ ಹಾಡು. ಪಿ ಸುಶೀಲ ಅವರ ಗಾಯನ ಮರುಳು ಮಾಡುತ್ತದೆ. ಜಮುನ ಮೊಗದಲ್ಲಿ ನಾಚಿಕೆ, ಮುಂದಿನ ಜೀವನದ ಆಸೆ ಆಕಾಂಕ್ಷೆಗಳು ಎಲ್ಲವೂ ಮೆಲೈಸಿರುತ್ತದೆ.

"ಜನುಮ ಜನುಮದ ಅನುಬಂಧ" ಈ ಹಾಡಿನಲ್ಲಿ ಪಿ ಬಿ ಶ್ರೀನಿವಾಸ್ ನಮ್ಮ ಮನಸ್ಸನ್ನೇ ಅಪಹರಿಸಿಬಿಡುತ್ತಾರೆ. ಲಯಬದ್ಧವಾದ ಸಂಗೀತ, ಉತ್ತಮ ನೃತ್ಯ ಸಂಯೋಜನೆ ಈ ಹಾಡಿನ ಗರಿಮೆ. ಹಾಡಿನಲ್ಲಿ ಬರುವ "ಕನ್ನಡ.. ಜನರ ಔದಾರ್ಯದಂತೆ ಜನುಮ ಜನುಮದ ಅನುಬಂಧ" ದೃಶ್ಯದಲ್ಲಿ ಗಾಯಕ ಮತ್ತು ನಾಯಕರ ಜುಗಲ್ ಬಂದಿಇಷ್ಟವಾಗುತ್ತದೆ .

"ಫಲಿಸಿತು ಒಲವಿನ ಪೂಜಾ ಫಲ" ಸಂಪ್ರದಾಯ, ಸಂಸ್ಕಾರ, ನಮ್ಮ ಆಚರಣೆಗಳು, ಮದುವೆಯ ಸಂಭ್ರಮ ಎಲ್ಲವನ್ನೂ ಒಟ್ಟಿಗೆ ಒಂದು ಹಾಡಿನಲ್ಲಿ ತಂದಿರುವುದು ವಿಶೇಷ. ಪಿ ಸುಶೀಲ ಗಾಯನದಲ್ಲಿ ಮತ್ತೆ ಮುಂಚೂಣಿಯಲ್ಲಿ ನಿಂತರೆ, ನೃತ್ಯ, ಅಭಿನಯದಲ್ಲಿ ಜಮುನ ಗಮನ ಸೆಳೆಯುತ್ತಾರೆ.

ಅಂತಿಮ ದೃಶ್ಯದ "ಒಲವೆ ಜೀವನ ಸಾಕ್ಷಾತ್ಕಾರ" ಯುಗಳ ಗೀತೆ ಈ ಹಾಡನ್ನು ಮತ್ತೆ ಹಾಡಿನ ಬಗ್ಗೆ ಎಷ್ಟು ಹೇಳಿದರೂ ನನಗೆ ತೃಪ್ತಿ ಸಿಗುವುದಿಲ್ಲ. ಕಾರಣ ಈ ಕೆಳಗಿನಂತೆ

೧. ನಾಯಕಿ ಹಾಡಿದ್ದನ್ನೇ ನಾಯಕ ಮತ್ತೆ ಹಾಡುತ್ತಾನೆ. ಪಿ ಸುಶೀಲ ಅವರ ಧ್ವನಿಯಲ್ಲಿ ಹಾಡು ಸುಂದರವಾಗಿ ಮೂಡಿ ಬಂದಿದೆ. ಪಿ ಬಿ ಶ್ರೀನಿವಾಸ್ ಅವರ ಧ್ವನಿಗೆ ಪ್ರತಿಧ್ವನಿಯನ್ನು ಪರಿಣಾಮಕಾರಿಯಾಗಿ ಕೊಟ್ಟಿದ್ದಾರೆ.
೨. ಸಾಹಿತ್ಯ, ಅಭಿನಯ ಅತ್ಯುತ್ತಮ ಮಟ್ಟದ್ದಾಗಿದೆ
೩. ಇನ್ನೂ ಕ್ಯಾಮೇರ ಕೈಚಳಕ.

  • ಒಂದು ಕ್ಷಣವೂ ಕ್ಯಾಮೆರ ನಿಲ್ಲುವುದಿಲ್ಲ 
  • ಹತ್ತಿರ ಬರುತ್ತದೆ.. ದೂರ ಹೋಗುತ್ತದೆ 
  • ಕ್ಯಾಮೆರಾ ಚಾಲನೆಯ ವೇಗ 
  • ಆ ಬಯಲು ಪ್ರದೇಶವನ್ನೂ ಅಧ್ಬುತವಾಗಿ ಉಪಯೋಗಿಸಿಕೊಂಡಿರುವ ರೀತಿ 
ಇವೆಲ್ಲಾ ಒಂದು ಮಾತನ್ನು ಹೇಳುತ್ತದೆ. ಒಲವು ಬರಿ ಒಂದು ಕಡೆಯಲ್ಲಿ ನಿಲ್ಲುವುದಲ್ಲ, ಅಥವಾ ನಿಂತಿರುವುದಲ್ಲ.. ಓಡಾಡುತ್ತಲೇ, ಒಬ್ಬರಿಂದ ಒಬ್ಬರಿಗೆ ಹರಿಯುತ್ತಲೇ ಇರಬೇಕು. ಆಗಲೇ ಅದರ ಸಾಕ್ಷಾತ್ಕಾರ.  ಕ್ಯಾಮೆರ ಹತ್ತಿರ ಬರುತ್ತದೆ ದೂರ ಹೋಗುತ್ತದೆ.. ಇದರಿಂದ ಒಲವು ಬೇಡಿದಾಗ ಬಂದರೂ.. ನಾವು ಅದನ್ನು ಹಿಡಿದಿಡಲಾಗುವುದಿಲ್ಲ.. ಹಾಗೆಯೇ ದೂರ ಹೋದರು ಮತ್ತೆ ಮತ್ತೆ ಮರಳಿ ಬರುತ್ತಲೇ ಇರುತ್ತದೆ. 


ತನ್ನ ದುರಾಸೆಯ ವೃಕ್ಷಕ್ಕೆ ನೀರೆಯಲು ತನ್ನ ಅಕ್ಕನ ಮನೆಯ ಆಸ್ತಿಯನ್ನು ದೋಚಲು ಹೊಂಚು ಹಾಕುತ್ತಾ, ತನ್ನ ಅಕ್ಕನ ಮಗ ಇಷ್ಟ ಪಡುತ್ತಿದ್ದ ಹೆಣ್ಣಿನ ಜಾತಕದಲ್ಲಿ ದೋಷವಿದೆ ಎಂದು ಸುಳ್ಳು ಹೇಳಿಸಿ.. ಒಲವು ಒಲವು ಎಂದು ಹೇಳುತ್ತಿದ್ದ ಅಪ್ಪನ ಮಗನ ಪ್ರೀತಿ ಅನುಬಂಧವನ್ನು ಲೆಕ್ಕಿಸದೆ, ತನ್ನ ಅಕ್ಕನ ತಲೆಯಲ್ಲಿ ದ್ವೇಷದ ಬೀಜ ಬಿತ್ತಿ ಇಡಿ ಮನೆಯನ್ನು ರಣರಂಗ ಮಾಡುತ್ತಾನೆ. 
ಅಲ್ಲಿಂದ ಶುರುವಾಗುತ್ತದೆ ಧರ್ಮ ಕರ್ಮಗಳ ಹೊಡೆದಾಟ. ಕಡೆಯಲ್ಲಿ ತಾನು ಮಾಡಿದ ಪಾಪ ಶೇಷಗಳು ಸಶೇಷವಾಗದೆ ಈ ಜನ್ಮದಲ್ಲಿಯೇ ಅದಕ್ಕೆ ಪ್ರತಿಫಲ ಸಿಗುತ್ತದೆ ಎನ್ನುವದನ್ನು ಮಾರ್ಮಿಕವಾಗಿ ತೋರಿದ್ದಾರೆ ಈ ಚಿತ್ರದಲ್ಲಿ.

ಇಡಿ ಚಿತ್ರದ ಅದ್ಭುತ ರೂವಾರಿ ಪುಟ್ಟಣ್ಣ ಅದ್ಭುತ ಮಾಂತ್ರಿಕರೆ ಹೌದು. ತಮಗೆ ಅನ್ನಿಸಿದ್ದನ್ನ, ತಮ್ಮ ಮನದಾಳದಲ್ಲಿದ್ದುದ್ದನ್ನು  

ಹಾಗೆಯೇ ತೆರೆಯ ಮೇಲೆ ತಂದಿಡುವ ಅವರ ಶಕ್ತಿಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಕಡಿಮೆಯೇ. ಅವರ ಚಿತ್ರಗಳು ಅತ್ಯುತ್ತಮ ಗುಣಮಟ್ಟ ಹೊಂದಿರುತ್ತಿದ್ದವು. ಕಾರಣ ಚಲನ ಚಿತ್ರ ವಿಭಾಗದ ಪ್ರತಿ ಹಂತಗಳನ್ನು ಬಲ್ಲವರಾಗಿದ್ದರಿಂದ ಅದರ ಒಳಗೆ ಅಡಗಿರುತ್ತಿದ್ದ ಹೂರಣವನ್ನು ತೆರೆದಿಡಲು ಅನುಕೂಲವಾಗುತ್ತಿತ್ತು.

ಪುಟ್ಟಣ್ಣ ಕಣಗಾಲ್ ಗುರುಗಳೇ ಇಲ್ಲಿಯ ತನಕ ನಿಮ್ಮ ಚಿತ್ರಗಳ ಹರಿವು ಒಂದು ವಿಧದಲ್ಲಿತ್ತು. ಈ ಚಿತ್ರದ ನಂತರ ನಿಮ್ಮ ಆತ್ಮ ವಿಶ್ವಾಸ, ನಿಮ್ಮ ಪ್ರತಿಭೆಯ ಬಗ್ಗೆ ನಿಮಗೆ ಇದ್ದ ನಂಬಿಕೆ ಎಲ್ಲವೂ ಒಟ್ಟುಗೂಡಿಕೊಂಡು ಮುಂದೆ ನೀವು ಬೆಳ್ಳಿತೆರೆಗೆ ಅರ್ಪಿಸಿದ ಚಿತ್ರಗಳೆಲ್ಲವೂ ಒಂದೊಂದು ಮಾಣಿಕ್ಯ ರತ್ನಗಳೇ..

ಅಕ್ಷರಶಃ ಈ ಚಿತ್ರದ ನಂತರ ನೀವೂ ನಿಜವಾಗಿಯೂ ಕನ್ನಡ ಚಿತ್ರರಂಗವನ್ನು ಬೆಳಗಿದ ಚಿತ್ರ ಜ್ಯೋತಿಗಳನ್ನು ಹಚ್ಚಿಡುತ್ತಾ ಬಂದಿರಿ. ನಿಮ್ಮ ಕನ್ನಡಾಭಿಮಾನಕ್ಕೆ, ನೆಲದ ಸಂಪ್ರದಾಯವನ್ನು ಅಚ್ಚುಕಟ್ಟಾಗಿ ಬಿಂಬಿಸಿದ ನಿಮ್ಮ ಪ್ರತಿಭೆ ಶರಣು!!!