ಲೋ ಶ್ರೀ .. ಅದ್ಯಾಕೆ ಹಳೆ ಚಿತ್ರಗಳು ಅಂದರೆ ಬಾಯಿ ಬಿಡ್ತೀಯ?
ನನ್ನ ಆಪ್ತ ಗೆಳೆಯ ಈ ಪ್ರಶ್ನೆ ಕೇಳಿದಾಗ ಉತ್ತರಿಸಿರಲಿಲ್ಲ.. ಕಾರಣ ನನಗೂ ಗೊತ್ತಿರಲಿಲ್ಲ.. ಆದರೆ ಪುಟ್ಟಣ್ಣ ಕಣಗಾಲ್ ಅವರ ಇಪ್ಪತ್ತನಾಲ್ಕು ಚಿತ್ರಗಳ ಬಗೆ ಬರೆಯುತ್ತಾ ಸಾಗಿದಾಗ.. ಹಾಗೆ ರಾಜ್ ಕುಮಾರ್ ಅವರ ನಲವತ್ತು ಚಿತ್ರಗಳ ಬಗೆ ಬರೆಯುತ್ತಾ ಹೋದಂತೆ ಹಿಂದಿನ ಚಿತ್ರಗಳಲ್ಲಿನ ವಿರಾಟ್ ರೂಪದ ದರ್ಶನವಾಯಿತು.
ಸಾಮಾಜಿಕ ಪಿಡುಗಿನ ಕಥಾವಸ್ತು ಹೊಂದಿದ್ದ ಶ್ರೀ ಕೃಷ್ಣಮೂರ್ತಿ ಪುರಾಣಿಕ್ ಅವರ ಕುಲವಧು ಕಾದಂಬರಿಯನ್ನು ಚಿತ್ರವನ್ನ ಹೊಂದಿದ್ದ ಈ ಚಿತ್ರವನ್ನು ಶೈಲಶ್ರೀ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸಿದ್ದು ಎ ನರಸಿಂಹಮೂರ್ತಿ ಮತ್ತು ಮಿತ್ರರು.
ಶೈಲಶ್ರೀ ಸಾಹಿತ್ಯ ವೃಂದ ಚಿತ್ರಕತೆಯನ್ನು ಹೆಣೆದರೆ.. ಕಾದಂಬರಿಯಲ್ಲಿದ್ದ ಸಂಭಾಷಣೆಯನ್ನು ಉಪಯೋಗಿಸಿಕೊಂಡು ಕೃಷ್ಣಮೂರ್ತಿ ಪುರಾಣಿಕ್ ಅವರಿಗೆ ಶ್ರೇಯಸ್ಸು ಕೊಟ್ಟು.. ಚಿತ್ರಕ್ಕೆ ಬೇಕಾದಂತೆ ಸಂಭಾಷಣೆಯನ್ನು ಜೊತೆಗೆ ಬರೆದದ್ದು ಸಹ ನಿರ್ದೇಶಕ ಎಸ್ ಕೆ ಭಗವಾನ್.
ಸಂಗೀತ ಜೆ ಕೆ ವೆಂಕಟೇಶ್ ಅವರದ್ದು.. ಈ ಚಿತ್ರದ ಇನ್ನೊಂದು ವಿಶೇಷತೆ ಎಂದರೆ ಸಾಹಿತಿಗಳ ಕವಿತೆಗಳನ್ನು ಚಲನಚಿತ್ರಕ್ಕೆ ಗೀತೆಯಾಗಿ ಅಳವಡಿಸಿಕೊಂಡಿದ್ದು.
ಮದುಮಗಳನ್ನು ಗಂಡನ ಮನೆಗೆ ಒಪ್ಪಿಸುವಾಗ ಖಾಯಂ ಗೀತೆಯಾಗಿರುವ "ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು" ವೀ ಸೀತಾರಾಮಯ್ಯ ಅವರ ಕವಿತೆಯನ್ನು ಅಳವಡಿಸಿಕೊಂಡಿದ್ದಾರೆ
ಯುಗ ಯುಗ ಕಳೆದರೂ ಮಾಸದ ಯುಗಾದಿ ಹಬ್ಬದ ಹಾಡು "ಯುಗ ಯುಗಾದಿ ಕಳೆದರೂ" ವರಕವಿ ದ ರಾ ಬೇಂದ್ರೆಯವರ ಸುಂದರ ಕೃತಿ ಹಾಡಾಗಿದೆ
ಕರುನಾಡಿನ ಹೆಮ್ಮೆಯನ್ನು ಹೆಚ್ಚಿಸುವ "ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ" ರಾಷ್ಟ್ರ ಕವಿ ಗೋವಿಂದ ಪೈ ಅವರ ಅದ್ಭುತ ಗೀತೆಯನ್ನು ಅಳವಡಿಸಿಕೊಂಡಿದ್ದಾರೆ.
ಇದರ ಜೊತೆಯಲ್ಲಿ ಪಿ ಬಿ ಶ್ರೀನಿವಾಸ್ ಒಂದು ಸಂದರ್ಶನದಲ್ಲಿ ಹೇಳಿದ್ದು ನೆನೆಪು.. ಅವರ ಅತ್ಯಂತ ಪ್ರೀತಿಯ ಗೀತೆ "ಒಲವಿನ ಪ್ರಿಯಲತೆ ಅವಳದೇ ಚಿಂತೆ" ಹಾಡೂ ಇದೆ. ಇದನ್ನು ರಚಿಸಿದ್ದು ಕಣಗಾಲ್ ಪ್ರಭಾಕರ್ ಶಾಸ್ತ್ರೀ.
ಈ ಚಿತ್ರ ಬಹುಷಃ ಎಲ್ಲಾ ಗೀತೆಗಳೂ ಯಶಸ್ವಿಯಾದ ಕೆಲವು ಮೊದಲ ಚಿತ್ರಗಳಲ್ಲಿ ಇದು ಒಂದು.
ಗೀತೆಗಳು ಚಿತ್ರಕತೆಯನ್ನು ಮುಂದಕ್ಕೆ ಒಯ್ಯುದಕ್ಕೆ ಸಹಾಯ ಮಾಡಿದೆ.
ಛಾಯಾಗ್ರಹಣ ಬಿ ದೊರೈರಾಜ್ ಅವರದ್ದು.
ನಿರ್ದೇಶನ ಟಿ ವಿ ಸಿಂಗ್ ಠಾಕೂರ್ ಅವರದ್ದು.
ಈ ಚಿತ್ರ ವರದಕ್ಷಿಣೆ ಪಿಡುಗಿನ ಹಿನ್ನೆಲೆ ಹೊಂದಿರುವ ಚಿತ್ರ. ಬಾಲಕೃಷ್ಣ ಜಿಪುಣಾಗ್ರೇಸರ. ತನ್ನ ಎರಡನೇ ಸಂಸಾರದ ಮಗ ರಾಜಕುಮಾರ್ ಅವರಿಗೆ ಅಶ್ವಥ್ ಅವರ ಮಗಳು ಲೀಲಾವತಿಯನ್ನು ತರುತ್ತಾರೆ . ಇದರ ಹಿನ್ನೆಲೆ.. ಅಶ್ವಥ್ ತನ್ನ ಅಣ್ಣ ಮಾಡಿದ ಸಾಲವನ್ನು ತೀರಿಸುವ ವಾಗ್ಧಾನ ಬಾಲಣ್ಣ ಅವರಿಗೆ ನೀಡಿರುತ್ತಾರೆ. ಇತ್ತ ಬಾಲಣ್ಣನ ಮನೆಯಲ್ಲಿ ಅವರ ಮೊದಲ ಸಂಸಾರದ ಮಗಳು ಪಾಪಮ್ಮ ತನ್ನ ಗಂಡನನ್ನು ಕಳೆದುಕೊಂಡು ತವರು ಮನೆಯಲ್ಲಿಯೇ ಉಳಿದು ಕಾರುಬಾರು ಮಾಡುತ್ತಿರುತ್ತಾರೆ.
ಎಲ್ಲಾ ಕೆಲಸ ತನ್ನ ಮೇಲೆ ಇದೆ ಅಂತ ಗೊಣಗಿಕೊಳ್ಳುತ್ತಾ ಇರುವಾಗ.. ಆಕೆಯ ಸಂಬಂಧಿ ನರಸಿಂಹರಾಜು ಅವರ ಸಲಹೆಯ ಮೇರೆಗೆ ಲೀಲಾವತಿಯನ್ನು ಮನೆಗೆ ತಂದುಕೊಳ್ಳುವ ಸಲಹೆ ನೀಡುತ್ತಾರೆ..
ಅಲ್ಲಿಂದ ಚಿತ್ರಕತೆ ಮುಂದುವರೆಯುತ್ತದೆ.. ಸಾಲದ ಬಾಕಿ ಮೂರು ಸಾವಿರ ಉಳಿದಿರುತ್ತದೆ.. ಅದನ್ನು ಕೊಡದೆ ಮಗ ಮತ್ತು ಸೊಸೆಯನ್ನು ಸೇರಿಸದೆ ಕಿರುಕುಳ ಕೊಡುತ್ತಿರುತ್ತಾರೆ.. ಬೇಸತ್ತ ಲೀಲಾವತಿ ತನ್ನ ತಂದೆ ಕೊಡಬೇಕಾದ ಮೂರು ಸಾವಿರ ರೂಪಾಯಿಗಳನ್ನು ಜೊತೆ ಮಾಡಿಕೊಂಡ ಮೇಲೆ ಗಂಡನ ಮನೆಗೆ ಬರುತ್ತೇನೆ ಎಂದು ಮಾಂಗಲ್ಯದ ಮೇಲೆ ಪ್ರಮಾಣ ಮಾಡಿ ಗಂಡನ ಮನೆಯಿಂದ ಹೊರಬೀಳುತ್ತಾಳೆ.
ಅಪ್ಪನ ಮನೆಗೆ ಬಂದರೂ... ಯೋಚನೆ ಕಾಡುತ್ತಿರುವಾಗ.. ಶಾಲೆಯಲ್ಲಿ ಅಧ್ಯಾಪಕಿ ಕೆಲಸ ಸಿಕ್ಕಿ ಮೈಸೂರಿಗೆ ಹೋಗಿ ನೆಲೆಸುತ್ತಾಳೆ. .
ಅವಳನ್ನು ಹುಡುಕಿ ಬರುವ ರಾಜಕುಮಾರ್ ಕಾರಿನ ಅಪಘಾತಕ್ಕೆ ತುತ್ತಾಗಿ ಮತಿ ಭ್ರಮಣೆಯಾಗುತ್ತದೆ. ಅದನ್ನು ಕಂಡು ಆತನ ಅಮ್ಮನ ಆರೋಗ್ಯ ಹದಗೆಡುತ್ತದೆ. ಬುದ್ದಿ ಕಲಿತ ಬಾಲಣ್ಣ ತನ್ನ ಸೊಸೆ ಲೀಲಾವತಿ ಬಳಿ ಬಂದು ಕ್ಷಮೆ ಕೇಳಿ ಮನೆಗೆ ಬರಲು ಹೇಳುತ್ತಾನೆ.. ಆದರೆ ತನ್ನ ಆಣೆ ಪ್ರಮಾಣವನ್ನು ನೆನಪಿಸಿ ಹಣ ಹೊಂದುತ್ತಲೇ ಬರುತ್ತೇನೆ ಎಂದು ಕ್ಷಮೆ ಕೇಳಿ ಕಳಿಸುತ್ತಾರೆ.
ಇತ್ತ ತನ್ನ ಸೊಸೆ ಬರದೇ ಇದ್ದದ್ದನ್ನು ಕಂಡು.. ಕೊರಗುತ್ತಾ ಬಾಲಣ್ಣ ಅವರ ಮಡದಿ ಅಸು ನೀಗುತ್ತಾಳೆ. ದುಡ್ಡಿನ ದುರಾಸೆಯಿಂದ ತನ್ನ ಮಗಳನ್ನು ವೃದ್ಧನಿಗೆ ಮದುವೆ ಮಾಡಿಕೊಡುವ ಪ್ರಯತ್ನ ಮಾಡಿದ್ದನ್ನು ಕಂಡು ರಾಜಕುಮಾರ್ ಮತ್ತು ನರಸಿಂಹರಾಜು ಇಬ್ಬರೂ ಉಪಾಯ ಮಾಡಿ ತಪ್ಪಿಸುತ್ತಾರೆ..
ಲೀಲಾವತಿ ತನ್ನ ಪತಿ ದೇವನಿಗೆ ಮತಿ ಭ್ರಮಣೆಯಾಗಿರುವುದನ್ನು ತಿಳಿದು.. ಅಧ್ಯಾಪಕಿ ವೃತ್ತಿಗೆ ರಾಜೀನಾಮೆ ಕೊಟ್ಟು.. ಪಿಂಚಣಿ ಹಣ ಮತ್ತು ಉಳಿಸಿದ ಹಣದ ಮೊತ್ತ ಮೂರು ಸಾವಿರ ಜೊತೆ ಮಾಡಿಕೊಂಡು ಮನೆಗೆ ಗಂಡನ ಮನೆಗೆ ಬರುತ್ತಾಳೆ..
ಎಲ್ಲಾ ಸುಖಾಂತ್ಯವಾಗುತ್ತದೆ.
ಈ ಸುಂದರ ಕತೆಯನ್ನು ಚಿತ್ರವನ್ನಾಗಿ ಮಾಡಿದ್ದಾರೆ. ಈ ಚಿತ್ರದಲ್ಲಿ ಆರಂಭದಲ್ಲಿ ರಾಜಕುಮಾರ್ ಪಾತ್ರಕ್ಕೆ ಅಷ್ಟೊಂದು ಪ್ರಾಮುಖ್ಯತೆ ಇಲ್ಲ ಅನಿಸಿದರೂ.. ಚಿತ್ರ ಏರುತ್ತಾ ಏರುತ್ತಾ ಹೋದ ಹಾಗೆ ಅವರ ಪಾತ್ರ ಪೋಷಣೆ ಚೆನ್ನಾಗಿದೆ.. ಮತಿ ಭ್ರಮಣೆಯಾದಾಗ ಅವರ ಅಭಿನಯ ಸೊಗಸಾಗಿದೆ. "ಒಲವಿನ ಪ್ರಿಯಲತೆ" ಗೀತೆಯಲ್ಲಿ ಅವರ ಅಭಿನಯ ಸೊಗಸಾಗಿದೆ. ಸಲೀಸಾಗಿ ಅಭಿನಯ ನೀಡುವ ಅವರ ಪ್ರತಿಭೆಗೆ ಸಲಾಂ ಹೇಳುವ ಚಿತ್ರವಿದು.
ಈ ಚಿತ್ರದ ಹೀರೊ ಬಾಲಣ್ಣ.. ಜಿಪುಣಾಗ್ರೇಸರನ ಪಾತ್ರದಲ್ಲಿ ಮಿಂಚುತ್ತಾರೆ.. ಆ ಹಾವಭಾವ, ಸಂಭಾಷಣೆ ವೈಖರಿ.. ಸೊಗಸು..
ಅಶ್ವಥ್ ಹೆಣ್ಣಿನ ತಂದೆಯಾಗಿ ತಗ್ಗಿ ಬಗ್ಗಿ ನೆಡೆಯುವ ಪಾತ್ರ ಸೊಗಸು. ಶಾಂತಮ್ಮ ಅಶ್ವಥ್ ಅವರ ಮಡದಿಯ ಪಾತ್ರದಲ್ಲಿ ಹಿತಮಿತವಾಗಿ ಅಭಿನಯಿಸಿದ್ದಾರೆ. ಬಾಲಣ್ಣ ಅವರ ಮಡದಿ ಪಾತ್ರದಲ್ಲಿ ಜಯಶ್ರೀ ಅವರ ಪಾತ್ರಕ್ಕೆ ಹೆಚ್ಚಿನ ಮಹತ್ವ ಇರದೇ ಹೋದರು ಅವರ ಅಭಿನಯ ಕುಂದಿಲ್ಲ.. ಹಾಸ್ಯ ಪಾತ್ರದಲ್ಲಿ ಹಾಗೂ ಚಿತ್ರಕ್ಕೆ ತಿರುವು ಕೊಡುವ ಪಾತ್ರದಲ್ಲಿ ನರಸಿಂಹರಾಜು ಮಿಂಚಿದ್ದಾರೆ. ಚಾಣಾಕ್ಷ ಪಾತ್ರಧಾರಿಯಾಗಿ ಅವರ ಅಭಿನಯ ನೋಡೋದು ಖುಷಿ ಕೊಡುತ್ತದೆ.
ರಾಜ್ ಕುಮಾರ್ ಅವರ ಪಾತ್ರ ದ ಸೊಬಗು ಚಂದ.. ಕಲಾವಿದ ತನ್ನ ಬಳಿ ಬಂದ ಪಾತ್ರದಲ್ಲಿ ತಲ್ಲೀನನಾಗಿ ಅಭಿನಯಿಸುತ್ತಾ ಹೋದ ಹಾಗೆ ಪಾತ್ರದ ವಿಸ್ತಾರ.. ಅಭಿನಯದ ಆಳದ ಅರಿವಾಗುತ್ತದೆ.. ಇದೆ ಹಸಿವು ಅವರ ಚಿತ್ರಗಳಲ್ಲಿ ನೋಡುತ್ತಾ ಬಂದಿದ್ದೇನೆ.. ಈ ಚಿತ್ರ ಅದಕ್ಕೆ ಉತ್ತಮ ಉದಾಹರಣೆ.
ಮತ್ತೆ ಮುಂದಿನ ಮುಂದಿನ ಚಿತ್ರದಲ್ಲಿ ಸಿಗೋಣ.. !