ದೀಪ ಉರಿಯಲು ಗಾಳಿ ಬೇಕು.. ಹೆಚ್ಚಾದರೆ ಆರಿ ಹೋಗುತ್ತದೆ..
ಅದೇ ಊದುಬತ್ತಿಗೆ ಗಾಳಿ ಹೆಚ್ಚಾದಾಗ ಅದರ ಪರಿಮಳ ದೂರ ದೂರ ಹರಡುತ್ತದೆ.. ಅಂತಹ ಒಂದು ಚಿತ್ರರತ್ನವೇ ಗೌರಿ..
ಕಲಾಭಾರತಿ ಲಾಂಛನದಲ್ಲಿ ತಯಾರಾದ ಚಿತ್ರ ಆಗಿನ ಕಾಲದಲ್ಲಿ ಸದ್ದು ಮಾಡಿದ ಚಿತ್ರ.. ಕವಿಯು ನೆಡೆದುಬಂದ ಸಿನಿಮಾವಿದು ಅಂತ ಒಂದು ಕಾರ್ಯಕ್ರಮದಲ್ಲಿ ನಿರೂಪಕರು ಹೇಳಿದ್ದು ಕೇಳಿದ್ದೆ..
ರಸಕವಿ ಕುವೆಂಪು ಮತ್ತು ಮೈಸೂರು ಮಲ್ಲಿಗೆ ಕವಿ ಕೆ ಎಸ್ ನರಸಿಂಹ ಸ್ವಾಮಿ ... ಈ ಮಹನೀಯರ ಒಂದೊಂದು ಕವಿತೆಯನ್ನು ಚಿತ್ರಕ್ಕೆ ಅಳವಡಿಸಿಕೊಂಡು ಸಂಗೀತ ಮಾಡಿದ್ದಾರೆ ಸಂಗೀತ ನಿರ್ದೇಶಕ ಜಿ ಕೆ ವೆಂಕಟೇಶ್.
ಚಿತ್ರಕತೆ ಮತ್ತು ನಿರ್ದೇಶನ ಮಾಡಿದ ಎಸ್ ಕೆ ಎ ಚಾರಿ, ಸಂಭಾಷಣೆ ಬರೆದ ಸಿ ಕೆ ನಾಗರಾಜ್ ರಾವ್, ಕು ರಾ ಸೀತಾರಾಮಶಾಸ್ತ್ರಿ, ಗಾಯನ ತಂಡದ ಎಸ್ ಜಾನಕಿ, ಪಿ ಬಿ ಶ್ರೀನಿವಾಸ್, ಮತ್ತು ಬೇಬಿ ಲತಾ, ಛಾಯಾಗ್ರಹಣ ಅಣ್ಣಯ್ಯ ಇವರನ್ನೆಲ್ಲ ಒಂದು ಗೂಡಿಸಿ ಚಿತ್ರ ನಿರ್ಮಿಸಿದ್ದು ಕೆ ನಾರಾಯಣರಾವ್.
ರಾಜ್ ಕುಮಾರ್ ಅವರ ಜೊತೆಯಲ್ಲಿ ಸಾಹುಕಾರ್ ಜಾನಕೀ, ಸಂಧ್ಯಾ, ರಾಮಚಂದ್ರ ಶಾಸ್ತ್ರೀ, ಎಂ ಎನ್ ಲಕ್ಷ್ಮೀದೇವಿ, ಅಶ್ವಥ್, ಗಣಪತಿ ಭಟ್ ಮುಖ್ಯಪಾತ್ರಗಳಲ್ಲಿದ್ದಾರೆ.
ಹಾಡುಗಳು ಮನಸೆಳೆಯುತ್ತದೆ..
ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಈ ಬಾಲಗೀತೆಯನ್ನು ತನ್ನ ಮನೆಗೆ ಬರುವ ಒಂದು ಪುಟ್ಟ ಮಗುವಿನ ಕಲ್ಪನೆಯಲ್ಲಿ ಮೂಡಿರುವ ಹಾಡಿದು
ನಾ ಬೇಡಲೆಂದೇ ನೀ ಓಡಿ ಬಂದೆ.. ಪುಟ್ಟ ಪ್ರಣಯಗೀತೆಯಾಗಿದೆ
ಇವಳು ಯಾರು ಬಲ್ಲೆಯೇನು ಈ ಗೀತೆಯ ಬಗ್ಗೆ ಹೇಳೋದೇ ಬೇಡ.. ಸುಂದರ ಹಾಡಿದು
ಯಾವ ಜನ್ಮದ ಮೈತ್ರಿ ಈ ಗೀತೆ ಅಮರ ಗೀತೆಯಾಗಿದೆ
ಸಂಭಾಷಣೆಯಲ್ಲಿ ಅಲ್ಲಲ್ಲಿ ಸರ್ವಜ್ಞನ ವಚನಗಳನ್ನು ಆಯ್ಕೆ ಮಾಡಿಕೊಂಡಿರುವುದು ಸಮಂಜಸವಾಗಿದೆ.
ಚಿತ್ರಕತೆ ಸಂಕೀರ್ಣತೆಯಿಂದ ಕೂಡಿದೆ..
ಮಕ್ಕಳಾಗದ ತನ್ನ ತಂಗಿಯ ಸಂಸಾರವನ್ನು ಉಳಿಸಲು ಅಶ್ವಥ್ ಮಾಡುವ ಒಂದು ಸಣ್ಣ ತಪ್ಪು ಅನ್ನೋಕೆ ಆಗದಿದ್ದರೂ ಎರಡು ಸಂಸಾರದ ಹಣತೆಗೆ ಗಾಳಿ ಬೀಸಿದ್ದಂತೂ ನಿಜ..
ತನ್ನ ತಂಗಿಯ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಾಹುಕಾರ್ ಜಾನಕಿ ಗರ್ಭಿಣಿಯಾಗಿದ್ದಾಗ, ಗರ್ಭಿಣಿ ಅಂತ ನಟಿಸುವಂತೆ ತಂಗಿಗೆ ಅಶ್ವಥ್ ಬಲವಂತ ಮಾಡುತ್ತಾರೆ ಕಾರಣ ಆಕೆಯ ಪತಿ ಮಕ್ಕಳನ್ನು ಪಡೆಯುವುದಕ್ಕಾಗಿ ಇನ್ನೊಂದು ಮದುವೆಗೆ ಸಿದ್ಧವಾಗಿರುತ್ತಾರೆ.
ಮಗುವನ್ನು ತನ್ನ ಯಜಮಾನಿಗೆ ಕೊಡಲು ಒಪ್ಪುವ ಸಾಹುಕಾರ್ ಜಾನಕಿ, ತನ್ನ ಪತಿ ಹಾಗೂ ಮಗನಿಗೆ ಹೇಳುವುದಿಲ್ಲ.. ಈ ಘಟನೆ ಜನಗಳ ಬಾಯಿಯಲ್ಲಿ ಬೇರೆ ವಿಧವಾದ ಅರ್ಥ ಪಡೆದುಕೊಂಡು, ಗಂಡ ಹೆಂಡತಿ ಮಧ್ಯೆ ವಿರಸ ಮತ್ತು ಅನುಮಾನ ಮೂಡುತ್ತದೆ. ಗಂಡ ಹೆಂಡತಿ ಬೇರೆಯಾಗುತ್ತಾರೆ..
ಮುಂದೆ ಬಡವರ ಮನೆಯಲ್ಲಿ ಬೆಳೆದ ತನ್ನ ಮಗ, ಸಂಸ್ಕಾರ ಕಲಿತುಕೊಂಡರೆ, ಸಿರಿವಂತರ ಮನೆಯಲ್ಲಿ ತನ್ನ ಅಸ್ತಿತ್ವ ಕಂಡುಕೊಂಡ ತನ್ನ ಕರುಳಿನ ಕುಡಿ ಹಣದ ಮತ್ತಿನಿಂದ ದುರಹಂಕಾರಿಯಾಗುತ್ತಾಳೆ.
ತನ್ನ ತಂಗಿಗಾಗಿ ಚಿಕ್ಕ ವಯಸ್ಸಿನಿಂದ ಬಳೆಗಳು, ಗೊಂಬೆಗಳನ್ನು ಎತ್ತಿಡುತ್ತಿದ್ದ ಅಣ್ಣನಿಗೆ, ಸಿರಿವಂತರ ಮನೆಯಲ್ಲಿದ್ದ ಹುಡುಗಿಯೇ ತನ್ನ ತಂಗಿ ಎಂದು ಅರಿವಾಗದೇ, ಸಿಕ್ಕಾಗಲೆಲ್ಲ ಸದಾ ಕಿತ್ತಾಡುತ್ತಿರುತ್ತಾರೆ.. ಅವಳ ಅಹಂಕಾರ ಇಷ್ಟವಾಗುವುದಿಲ್ಲ..
ಹೀಗೆ ಸಾಗುವ ಕತೆ, ಬರು ಬರುತ್ತಾ ಜಟಿಲ ಕಗ್ಗಂಟಾಗುವ ಹೊತ್ತಿನಲ್ಲಿ, ಅಶ್ವಥ್ ನೆಡೆದ ರಾಜ್ ಕುಮಾರ್ ಅವರಿಗೆ ಹೇಳಿ, ಮತ್ತೆ ಸಂಸಾರ ಒಂದು ಮಾಡುವಲ್ಲಿ ಸಫಲರಾಗಿ ಕಳೆದು ಹೋಗಿದ್ದ ನಂಟು ಮತ್ತೆ ಬೆಸೆಯುತ್ತಾರೆ..
ಎಂ ಎನ್ ಲಕ್ಷ್ಮೀದೇವಿಯವರ ಸಿರಿವಂತಿಕೆಯ ಸೋಗು, ಸಂಧ್ಯಾ ಅವರ ಮಮತೆಯಿದ್ದರೂ ಕಂದನನ್ನು ಬಿಡಲಾರದ, ತೊಳಲಾಟ ಅಶ್ವಥ್ ಅವರ ಚಾಣಾಕ್ಷ ನಟನೆ, ಸಾಹುಕಾರ್ ಜಾನಕೀ ಮಮತೆ ತುಂಬಿದ ಪಾತ್ರ, ಸೊಕ್ಕಿನ ಹುಡುಗಿಯಾಗಿರುವ ನಟಿ, ಗಾಳಿ ಬೀಸಿದಾಗ ಒಂದಷ್ಟು ದುಡ್ಡು ಮಾಡಿಕೊಳ್ಳಬೇಕು ಎನ್ನುವ ರಾಮಚಂದ್ರ ಶಾಸ್ತ್ರೀ ಎಲ್ಲರ ಅಭಿನಯ ಸೊಗಸಾಗಿದೆ. ಜೊತೆಯಲ್ಲಿ ಪುಟ್ಟ ಪುಟ್ಟ ಪಾತ್ರಗಳಲ್ಲಿ ಬರುವ ನಟ ನಟಿಯರು ಮನಸೆಳೆಯುತ್ತಾರೆ..
ಕ್ಲಿಷ್ಟವಾದ, ವಿಚಿತ್ರ ಅನಿಸಬಹುದಾದ ಪಾತ್ರವನ್ನು ಆವಾಹಿಸಿಕೊಂಡು ರಾಜ್ ಕುಮಾರ್ ಅಭಿನಯದಲ್ಲಿ ಗೆದ್ದಿದ್ದಾರೆ. ಅನುಮಾನಕ್ಕೊಳಗಾದರೂ ಸಂಯಮದಿಂದ ವರ್ತಿಸಲು ಹೋಗಿ ಕುಪಿತಗೊಂಡು ಹೆಂಡತಿಯಿಂದ ದೂರವಾಗಿ, ನಂತರ ಮಗನಿಂದಲೂ ದೂರಾಗಿ, ಒಬ್ಬರೇ ಹಪಹಪಿಸುತ್ತಾ, ಮತ್ತೆ ಎಲ್ಲವೂ ಸರಿ ಹೋಗುವಾಗ ಅವರ ಅಭಿನಯ ಮನಮುಟ್ಟುತ್ತದೆ.
ಮೆಲ್ಲನೆ ತಾರಾಪಟ್ಟಕ್ಕೆ ಏರುತ್ತಿರುವ ಹೊತ್ತಿನಲ್ಲಿ ಈ ರೀತಿಯ ಪಾತ್ರವನ್ನು ಲೀಲಾಜಾಲವಾಗಿ ಅಭಿನಯಿಸಿ, ತಾವು ನಟರಾಗಿರುತ್ತೇನೆ ಹೊರತು ಸ್ಟಾರ್ ಅಲ್ಲಾ ಎನ್ನುವ ಹೃದಯ ತಟ್ಟುವ ಅಭಿನಯ ನೀಡಿದ್ದಾರೆ.
ಇನ್ನೊಂದು ವಿಶೇಷ ಎಂದರೆ.. ತೊಂಭತ್ತರ ದಶಕದಲ್ಲಿ ಮಾಧುರಿ ದೀಕ್ಷಿತ್ ಅವರ ರಾಜಾ ಚಿತ್ರದಲ್ಲಿ ಇರುವ "ನಜರೇ ಮಿಲಿ ದಿಲ್ ಧಡ್ಕ" ಹಾಡಿನ ಟ್ಯೂನ್ ಇಲ್ಲಿ ಸಿಗುತ್ತದೆ .. ಅಂದರೆ ಹಲವಾರು ಕಡೆಯಲ್ಲಿ ಉಪಯೋಗವಾದ ಈ ಟ್ಯೂನ್ ಮುಂದೆ ಅಬ್ಬರದ ಗೀತೆಯಾಗಿ ಜನಪ್ರಿಯಗೊಂಡಿದೆ... !
ಮುಂದೊಂದು ಚಿತ್ರದ ಜೊತೆ ಬರ್ಲಾ!