Sunday, October 28, 2018

ಕಾದಂಬರಿ ಮತ್ತು ಸಿನಿಮಾ ಒಂದು ಜುಗಲ್ ಬಂಧಿ - ನಾಗರಹಾವು (1972)

ಇದು ನಾಗರಹಾವಲ್ಲ.. ಕೇರೇ ಹಾವು.!!!

ಈ ಮಾತನ್ನು ಶ್ರೀ ತ ರಾ ಸುಬ್ಬರಾಯರು ಹೇಳಿದ್ದಾರೆ ಅಂತ ನನ್ನ ಬಾಲ್ಯದ ದಿನಗಳಲ್ಲಿ ಓದಿದ್ದ ನನೆಪು.. ನಂತರ ಅವಕಾಶ ಸಿಕ್ಕಾಗ ಟಿವಿಯಲ್ಲಿ ಬಂದಾಗ ನಾಗರಹಾವು ಚಿತ್ರ ನೋಡಿದ್ದೆ.. ಯಾಕೆ ತ ರಾ ಸುಬ್ಬರಾಯರು ಹಾಗೆ ಹೇಳಿದ್ರು ಅನ್ನುವ ಪ್ರಶ್ನೆ ಕಾಡುತ್ತಿತ್ತು..

ಅದರಲ್ಲೂ ನಾಗರಹಾವು ಚಿತ್ರವನ್ನು ಹಲವಾರು ಬಾರಿ ನೋಡಿದಾಗಲೂ ಲೇಖಕರ ಪ್ರತಿಕ್ರಿಯೆ ಮನಸ್ಸಿಗೆ ನಾಟಲಿಲ್ಲ..
ಶ್ರೀ ಪುಟ್ಟಣ್ಣ ಕಣಗಾಲ್ ಒಬ್ಬ ಅದ್ಭುತ ನಿರ್ದೇಶಕ, ಕನ್ನಡದಲ್ಲಿ ಅವರು ನಿರ್ದೇಶಿಸಿದ ೨೪ ಚಿತ್ರಗಳನ್ನು ನೋಡಿದ್ದೇನೆ ಮತ್ತು ಆ ಸಿನೆಮಾಗಳು ನನ್ನ ಮನಸ್ಸಿಗೆ ಯಾಕೆ ಇಷ್ಟವಾಯಿತು, ಆ ಚಿತ್ರದ ವಿಶೇಷವೇನು ಅನ್ನುವ ಕೆಲವು ವಿಷಯಗಳನ್ನು ಬರೆದಿದ್ದೆ.. ನಾಗರಹಾವು  ಚಿತ್ರ ನಿರ್ದೇಶನ ಮಾಡಿದ ಮೇಲೆ ಅವರ ಮುಂದಿನ ಎಲ್ಲಾ ಚಿತ್ರಗಳು ವಿಶೇಷವಾಗಿದ್ದವು.. ಹಾಗಾಗಿ ನಾಗರಹಾವು ಒಂದು ರೀತಿಯಲ್ಲಿ ಅವರ ಚಿತ್ರಗಳಿಗೆ ಒಂದು ತಿರುವು ಕೊಟ್ಟ ಚಿತ್ರವಾಗಿತ್ತು...

ಇದರಿಂದ ನನ್ನ ಕುತೂಹಲದ ದೀಪ ಇನ್ನಷ್ಟು ಜೋರಾಗಿ ಉರಿಯಲು ಶುರುಮಾಡಿತು.. ಸೊ ನನ್ನ ಹುಡುಕಾಟ ತ್ರಿವಳಿ ಕಾದಂಬರಿಗಳಾದ ನಾಗರಹಾವು, ಒಂದು ಗಂಡು ಎರಡು ಹೆಣ್ಣು, ಸರ್ಪಮತ್ಸರ ಪುಸ್ತಕಗಳ ಕಡೆಗೆ ಇಳಿಯಿತು..   ಹುಡುಕಲು ಶುರುಮಾಡಿದೆ.. ಫೇಸ್ಬುಕ್ ಸಹೋದರಿಯಾದ ಡಿಟಿಪಿ ಅಲಿಯಾಸ್ ಲಕ್ಷ್ಮಿಪ್ರಿಯ ನನಗೆ ಸಹಾಯ ಮಾಡಿ.. ಆ ಪುಸ್ತಕವನ್ನು ಕಳಿಸಿಕೊಟ್ಟರು..ಮೂರು ಕಾದಂಬರಿಗಳ ಒಂದು ಸಮಗ್ರ ರೂಪವನ್ನು ಪುಸ್ತಕ ಮಾಡಿ ಪ್ರಕಟಿಸಿದ್ದರು.. ಹುಚ್ಚು ಹಿಡಿದ ಹಾಗೆ ಓದಿ ಮುಗಿಸಿದೆ. ೫೪೩ ಪುಟಗಳಿರುವ ಕಾದಂಬರಿಯನ್ನು ಒಂದು ವಾರದಲ್ಲಿ ಓದಿ ಮುಗಿಸಿದೆ.. ಆ ಓದು ಮುಗಿದ ಮೇಲೆ ನನಗೆ ಅನಿಸಿದ ಕೆಲವು ವಿಷಯವನ್ನು ನನಗೆ ತೋಚಿದ ರೀತಿಯಲ್ಲಿ ಬರೆದಿದ್ದೇನೆ..

ಓದಿ.. ನಿಮಗೆ ಅನಿಸಿದ ಮಾತನ್ನು ಹೇಳಿ..

*****************************

ಸ್ವರ್ಗದಲ್ಲಿದ್ದ ಅಶ್ವಥ್ ಕಟ್ಟೆಯಲ್ಲಿ ಸಂಧ್ಯಾವಂದನೆ ಮುಗಿಸಿ ಪುಟ್ಟಣ್ಣ ಅವರು ಧ್ಯಾನ ಮಾಡುತ್ತಾ ಕೂತಿದ್ದರು.. ಸುಬ್ಬರಾಯರು ಬೆಳಗಿನ ವಾಕಿಂಗ್ ಮುಗಿಸಿ ಸುಧಾರಿಸಿಕೊಳ್ಳಲು ಅದೇ ಅಶ್ವಥ್ ಕಟ್ಟೆಯಲ್ಲಿ ಕುಳಿತರು. ಆ ಬದಿಯಲ್ಲಿ ಪುಟ್ಟನವರು.. ಈ ಬದಿಯಲ್ಲಿ ಸುಬ್ಬರಾಯರು.. 

ಇಬ್ಬರೂ ಒಬ್ಬರ ಮುಖವನ್ನು ಇನ್ನೊಬ್ಬರು ನೋಡಿ ಮಂದಹಾಸ ಬೀರಿದರು.. ಪುಟ್ಟಣ್ಣನವರ ಧ್ಯಾನ ಮುಗಿದಿತ್ತು.. ಸುಬ್ಬರಾಯರಿಗೂ ಆಯಾಸ ಪರಿಹಾರವಾಗಿತ್ತು.. ಹಾಗೆ ಇಬ್ಬರೂ ಎದ್ದು ತಮ್ಮ ಮನೆಯ ಕಡೆ ಹೆಜ್ಜೆ ಹಾಕುತ್ತಾ ಹೋದರು.. ಇಬ್ಬರ ಮನೆಯೂ ಒಂದೇ ಬೀದಿಯಲ್ಲಿತ್ತು.. ಹಾಗಾಗಿ ಇಬ್ಬರೂ ಜೊತೆಯಾಗಿ ಹೆಜ್ಜೆ ಹಾಕುತ್ತಿದ್ದರು. 


"ಪುಟ್ಟಣ್ಣನವರೇ .. ನೀವು ಚಿತ್ರಿಸಿದ ನಾಗರಹಾವು ಚಿತ್ರವನ್ನು ನಾನು ಕೇರೇ ಹಾವು ಎಂದರೂ ನೀವು ಕೋಪಗೊಳ್ಳಲಿಲ್ಲ.. ನನ್ನ ವಿರುದ್ಧ ಹೇಳಿಕೆ ಕೊಡಲಿಲ್ಲ.. ನನ್ನನ್ನು ಗೌರವಿಸಿದಿರಿ.. ನಾ ಏನು ಹೇಳಬೇಕು ಗೊತ್ತಾಗ್ತಾ ಇಲ್ಲ. .. ಹೇಗಿದ್ದರೂ ಕರುನಾಡಿನ ಚಿತ್ರರಸಿಕರು ನನ್ನ ಕಾದಂಬರಿಯನ್ನು.. ಹಾಗೂ ನಿಮ್ಮ ಕಣ್ಣಿನಲ್ಲಿ ರೂಪುಗೊಂಡ ಚಿತ್ರವನ್ನು ನೋಡಿ ಮೆಚ್ಚಿದ್ದಾರೆ.. ನೂತನ ತಂತ್ರಜ್ಞಾನದಲ್ಲಿ ತಂದ ಅದರ ಹೊಸ ರೂಪವನ್ನು ಮೆಚ್ಚಿದ್ದಾರೆ.. ಇದರ ಬಗ್ಗೆ ಒಂದು ಚರ್ಚೆ ಮಾಡೋಣವೇ.. ನನ್ನ ಅನಿಸಿಕೆ ನಾ ಹೇಳುವೆ.. ನಿಮ್ಮ ಅನಿಸಿಕೆ ನೀವು ಹೇಳಿ

"ಸುಬ್ಬರಾಯರೇ ಧನ್ಯವಾದಗಳು ನಿಮ್ಮ ಮಾತಿಗೆ.. ಖಂಡಿತ ಮಾತಾಡೋಣ.. ಚರ್ಚಿಸೋಣ.. ಆಗಬಹುದು.. ನಿಮ್ಮಿಂದಲೇ ಶುರುಮಾಡಿ.. ಯಾಕೆಂದರೆ ಅದು ನಿಮ್ಮ ಸೃಷ್ಟಿ, ನೀವು ಜನುಮ ಕೊಟ್ಟ ಕೂಸು ಈ ಕಾದಂಬರಿ.. ನಿಮ್ಮ ಮನದಲ್ಲಿ ರೂಪುಗೊಂಡ ಆ ಕಾದಂಬರಿಗೂ.. ಅದನ್ನು ನನ್ನ ಕಣ್ಣಿನಲ್ಲಿ ತೆರೆಗೆ ತಂದ ರೂಪಕ್ಕೂ ನಿಮ್ಮ ಅನಿಸಿಕೆ ಹೇಳಿ.. ಶುರುವಾಗಲಿ..

******* 

ಇನ್ನು ಮುಂದೆ ನೆಡೆಯುವುದು.. ಸಾಹಿತ್ಯದ ದಿಗ್ಗಜರು ಸುಬ್ಬರಾಯರು.. ಮತ್ತು ನಿರ್ದೇಶನದ ಕುರ್ಚಿಗೆ ತಾರಾಪಟ್ಟ ತಂದುಕೊಟ್ಟ ಪುಟ್ಟಣ್ಣನವರ ಮಾತುಕತೆ....!

*******

ನಾನು ರಾಮಾಚಾರಿ ಪಾತ್ರವನ್ನು ಸಮಾಜದಲ್ಲಿ ನೆಡೆಯುವ ಅಸೂಯೆ, ಹೊಟ್ಟೆಕಿಚ್ಚು, ಸಿಟ್ಟು, ಸೇಡು, ದ್ವೇಷ, ವೈಮನಸ್ಯ, ಅನುಮಾನಗಳು, ತಪ್ಪು ಕಲ್ಪನೆಗಳು, ಪ್ರೀತಿ, ಪ್ರೇಮ, ಸಹಾಯ ಮಾಡುವ ಮನೋಭಾವ, ಕಾಲು ಎಳೆದು ನಗುವ ಮನಸ್ಥಿತಿ, ಹೀಗೆ ಅರಿಷಡ್ವರ್ಗ ಜೊತೆಗೆ ಮಾನವನ ಸಹಜವಾದ ಗುಣಗಳು ಎಲ್ಲವನ್ನು ಕಲಸಿ, ಬೆರೆಸಿ ಮಾಡಿದ್ದೆ.. ಅವನ ಶಾಲಾದಿನಗಳಲ್ಲಿ ಸಾಮಾನ್ಯ ಅನ್ನಿಸುವ ಘಟನೆಯನ್ನು ತುಸು ವಸ್ತುಸಹಜವಾಗಿ ಮೂಡಿಸಿದ್ದೆ..

>ರಾಮಚಾರಿಯ ಹಠದ ಸ್ವಭಾವದ ಬಗ್ಗೆ ವಿವರಿಸುವ ಒಂದಷ್ಟು ಘಟನೆಗಳನ್ನು, ಸೇಡಿನ, ಕಿಚ್ಚಿನ ಸಾಹಸಗಳನ್ನು ಮನ  ಮುಟ್ಟುವಂತೆ ರಚಿಸಿದ್ದೆ.
>ಗುರುಗಳು ಎಂದು ಗೌರವ ಕೊಡುವ ಚಾಮಯ್ಯ ಮೇಷ್ಟ್ರು
>ಪ್ರೀತಿಸುವ ಅಲಮೇಲು, ಮಾರ್ಗರೆಟ್
>ಮೊದಲು ದ್ವೇಷ ಮಾಡಿದರೂ ನಂತರ ಮಗಳಿಗಾಗಿ ಇಷ್ಟಪಡುವ ಮೇರಿಯಮ್ಮ
>ಮಗನನ್ನು ಕಸದಂತೆ ಕಂಡರೂ, ಅವನ ಸಾಹಸವನ್ನು, ಊರಿನ ಜನತೆಗೆ ಸಹಾಯ ಮಾಡಲು ತೋರುವ ಧೈರ್ಯದ ಬಗ್ಗೆ ಊರಿನವರೆಲ್ಲ ಹೊಗಳಿದಾಗ ಮಗನನ್ನು ಆಪ್ತಮಿತ್ರನಂತೆ ಮಾತಾಡಿಸಿ, ತಮ್ಮ ಕಡೆಘಳಿಗೆಯಲ್ಲಿ ಮನೆಗೆ ನೀನೆ ಯಜಮಾನ ಎಂದು ಬಿಂಬಿಸುವ ಅಪ್ಪನ ಪಾತ್ರ ಮಧ್ವರಾಮಚಾರ್ಯರು 
>ಮಗ ತನ್ನ ಜೀವನವನ್ನು  ಬೆಳಗುತ್ತಾನೆ ಎಂದು ಮೊದಲಿಂದಲೂ ತನ್ನ ಪತಿಯೊಡನೆ ವಾದಮಾಡುತ್ತಾ ಕಡೆಯಲ್ಲಿ ಮಾರ್ಗರೆಟ್ ಜೊತೆಯಲ್ಲಿ ತನ್ನ ಮಗನ ಜೊತೆಯಲ್ಲಿದ್ದಾಳೆ ಎಂದು ತಿಳಿದಾಗ, ಪ್ರೀತಿ ಉರಿಯಾಗಿ ರಾಮಾಚಾರಿಯನ್ನು ದಹಿಸುತ್ತಾರೆ ಸೋನಾಬಾಯಿ!
>ಹುಡುಗಾಟದ ಹುಡುಗ ವರದಯ್ಯಂಗಾರಿ ಈ ಕತೆಗೆ ತಿರುವು ಕೊಡುವ ಪಾತ್ರ,  ಜಲೀಲನ ಜೊತೆಯಲ್ಲಿ ನೆಡೆಯುವ ಪುಟ್ಟ ಜಗಳ ಕತೆಗೆ ದೊಡ್ದ ತಿರುವನ್ನೇ ಕೊಡುತ್ತೆ
>ಪೈಲ್ವಾನ್ ಸಣ್ಣಬಸಪ್ಪ  ರಾಮಚಾರಿಯನ್ನು ತಿದ್ದಿ ತೀಡಿ ಅವನ ಜೀವನಕ್ಕೆ ಒಂದು ದಾರಿ ಮಾಡಿಕೊಡುತ್ತಾರೆ.. ದೇಹವನ್ನು ಹುರಿಗೊಳಿಸಲು ಸಹಾಯ ಮಾಡುತ್ತಾರೆ..
>ಪ್ರಭಣ್ಣ, ಸಣ್ಣರಂಗಪ್ಪ, ಹೈದರ್ ಷರೀಫ್, ಚೆಲುವಚಾರಿ ಈ ನಾಲ್ಕು ಮಂದಿ ಇಡೀ ಕಥೆಯಲ್ಲಿ ರಾಮಚಾರಿಗೆ ಬೆನ್ನೆಲುಬಾಗಿ ನಿಲ್ಲುವುದು ತೋರಿಸಿದ್ದೇನೆ
>ಪ್ಲೇಗ್ ಸಮರ, ಸಿನಿಮಾ ಟೆಂಟ್, ದಲ್ಲಾಳಿ ವಹಿವಾಟು
>ಚಾಮಯ್ಯನವರ ಸಮಾಜ ಸೇವೆ, ಅವರ ಕೆಲಸ ಉಳಿಸಿಕೊಳ್ಳಲು ತೋರುವ ಚಾಲಾಕಿತನ
>ವರದರಾಜುವಿನ ದುಂಡಾವರ್ತಿ, ಜೊತೆಗೆ  ಮಾರ್ಗರೆಟ್ ರಾಮಾಚಾರಿಯ ಅಪ್ಪನ ಕೆಲಸ ಮಾಡಲು ಹಣಕ್ಕೆ ಒದ್ದಾಡುತ್ತಿದ್ದ ವಿಷಯ ಕೇಳಿ, ವರದರಾಜುವನ್ನು ಸಹಾಯ ಕೇಳಿದಾಗ ಹಿಂದೆ ಮುಂದೆ ನೋಡದೆ ಸಹಾಯ ಮಾಡುವುದು
>ಫಕೀರಪ್ಪ ಹೆಣ್ಣಿನ ಚಪಲದಿಂದಾಗಿ ಅಲಮೇಲುವಿನ ನಿಜಸ್ಥಿತಿ ತಿಳಿಸಿ ಕಾದಂಬರಿಗೆ ಮುಕ್ತಾಯದ ಹಾದಿ ತೋರಿಸೋದು..
>ಶಾಲೆಯ ಮಾಸ್ಟರನ್ನು ರಾಮಾಚಾರಿ ಗೋಳುಹುಯ್ಕೊಳೋದು
>ಅಲಮೇಲು, ಮಾರ್ಗರೆಟ್ ಮತ್ತು ರಾಮಾಚಾರಿಯ ಪ್ರೀತಿಯನ್ನು ತೋರಿಸುವ ಆ ಪುಟಗಳು
>ಚಾಮಯ್ಯ ಮೇಷ್ಟ್ರ ಅಂತ್ಯ
>ರಾಮಾಚಾರಿ ಮಾರ್ಗರೆಟ್ ಅಂತ್ಯ
>ಕಡೆಯಲ್ಲಿ ಫಕೀರಪ್ಪ ಹೇಳುವ ಮಾತು

ಪುಟ್ಟಣ್ಣನವರೇ ನಾ ಕಾದಂಬರಿಯಲ್ಲಿ ಚಿತ್ರಿಸಲು ಪ್ರಯತ್ನ ಪಟ್ಟ ಈ ಮೇಲಿನ ವಿವರಣೆಗಳು, ನನಗೆ ಚಿತ್ರದಲ್ಲಿ ಅಲ್ಲಲ್ಲಿ ಕಂಡವೇ ಹೊರತು, ಪೂರ್ಣ ಪ್ರಮಾಣದಲ್ಲಿ ಕಾಣಲಿಲ್ಲ.. ನಾ ನಿಮ್ಮ ಹಿಂದಿನ ಚಿತ್ರದ ಬಗ್ಗೆ ಕೇಳಿದ್ದೆ.. ನೋಡಿದ್ದೇ.. ನಿಮ್ಮ ತಂತ್ರಜ್ಞಾನದ ಪ್ರತಿಭೆ ಎಲ್ಲದರ ಬಗ್ಗೆ ತಿಳಿದಿದ್ದೆ. ನನ್ನ ಕಾದಂಬರಿಯನ್ನು ಸಿನಿಮಾ ಮಾಡಲು ಹಕ್ಕುಗಳನ್ನು ಕೇಳಿದಾಗ, ನೀವೇ ಚಿತ್ರ ನಿರ್ದೇಶಿಸುವುದು ಎಂದು ತಿಳಿದಾಗ ಕುತೂಹಲ, ಆಸಕ್ತಿ ಗರಿಗೆದರಿತ್ತು.. ಚಿತ್ರವನ್ನು ನೋಡಿದಾಗ ನೀವು ತೋರಿದ ಚಿತ್ರದುರ್ಗದ ತಾಣಗಳು, ಕೋಟೆಗಳು, ಬೆಟ್ಟ ಗುಡ್ಡಗಳು, ವಾಣಿವಿಲಾಸ ಸಾಗರ ಎಲ್ಲವೂ ಖುಷಿ ಕೊಟ್ಟಿತು.. ಚಿತ್ರದುರ್ಗವನ್ನು ಅದ್ಭುತವಾಗಿ ತೋರಿಸಿದ ನಿಮಗೆ ಅಭಿನಂದನೆಗಳು.. ಆದರೆ ಕತೆಯಲ್ಲಿ ನಾ ಕಂಡ ದೃಶ್ಯಗಳು.. ಸಿನಿಮಾದಲ್ಲಿ ನಾ ಕಂಡ ಕತೆಗೂ ಹೊಂದಿಸಿಕೊಳ್ಳೋಕೆ ಕಷ್ಟವಾಯಿತು.. ಪ್ರತಿ ಕ್ಷಣದಲ್ಲಿಯೂ ನಾ ಕಾದಂಬರಿಯಲ್ಲಿ ಚಿತ್ರಿಸಿದ್ದ ದೃಶ್ಯಗಳು ಸಿನಿಮಾದಲ್ಲಿ ಆಗ ಬರುತ್ತೆ ಈಗ ಬರುತ್ತೆ ಅಂತ ಕಾದಿದ್ದೆ ಆಯಿತು... ಆದರೆ ನಿಮ್ಮ ಬುದ್ಧಿಮತ್ತೆಗೆ ಮತ್ತು ಸಂಭಾಷಣೆ ಬರೆದವರಿಗೆ ಸಲಾಂ ಹೇಳಬೇಕು. ಕಾರಣ ಎಲ್ಲಾ ಪಂಚ್ ಸಂಭಾಷಣೆಯನ್ನು ಹಾಗೆ ಉಳಿಸಿಕೊಂಡಿದ್ದೀರಾ.. ಅದಕ್ಕೆ ಧನ್ಯವಾದಗಳು ಪುಟ್ಟಣ್ಣನವರೇ.. ಹಾಡುಗಳನ್ನು ಚಿತ್ರಿಸಿದ ರೀತಿ, ನನ್ನ ಕಾದಂಬರಿಯಲ್ಲಿಲ್ಲದ ಒನಕೆ ಓಬವ್ವನ ಕತೆಯನ್ನು ಹಾಡಿನಲ್ಲಿ ಅದ್ಭುತವಾಗಿ ಚಿತ್ರಿಸಿದ ರೀತಿ, ಹೆಸರು ತೋರಿಸುವಾಗ ರಾಮಾಚಾರಿಯ ಗುಣ ವಿಶೇಷಣಗಳನ್ನು ಹೇಳುತ್ತಾ, ಚಾಮಯ್ಯ ಮೇಷ್ಟ್ರು ಮತ್ತು ರಾಮಾಚಾರಿಯ ಅನುಬಂಧವನ್ನು ತೋರಿಸಿದ ರೀತಿಗೆ ಖುಷಿಯಾಯಿತು..

"ಪುಟ್ಟಣ್ಣನವರೇ ಮೇಲೆ ಹೇಳಿದ ಮಾತುಗಳು ನನ್ನ ಮನದಾಳದ ಮಾತುಗಳು.. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಕೇಳಲು ಇಷ್ಟಪಡುತ್ತೇನೆ.. !!!"

"ಸುಬ್ಬರಾಯರೇ ಧನ್ಯವಾದಗಳು. ನಿಮ್ಮ ಮನದಾಳದ ಮಾತುಗಳನ್ನು ಎಷ್ಟು ವಿವರವಾಗಿ ಹೇಳಿದ್ದೀರ.. ನೀವು ಸರಸ್ವತಿ ಪುತ್ರರು.. ನಿಮಗೆ ಅರಿಯದ ವಿಷಯವೇನಿದೆ.. ತಾನು ಹೆತ್ತ ಸುಂದರ ಮಗುವಿನ ಮುಂದಿನ ಹಾದಿ ನಿರೀಕ್ಷೆಗೆ ತಕ್ಕ ಹಾಗೆ ಇಲ್ಲದೆ ಇದ್ದಾಗ ಆಗುವ ಬೇಸರವೇ ನಿಮಗೂ ಆಗಿದ್ದು.. ಅದರಲ್ಲಿ ನಿಮ್ಮ ತಪ್ಪೇನು ಇಲ್ಲ.. ದಯವಿಟ್ಟು ನೊಂದುಕೊಳ್ಳಬೇಡಿ. ನಾಗರಹಾವು ಚಿತ್ರೀಕರಣ ಮುಗಿದು ಸಿನಿಮಾ ಅದ್ಭುತ ಯಶಸ್ಸು ಕಂಡಾಗ.. ನನ್ನನ್ನು ಯಾರೋ ಕೇಳಿದ್ದರು.. ಸುಬ್ಬರಾಯರು ಇದನ್ನು ಕೇರೇ ಹಾವು ಎಂದಿದ್ದಾರೆ ಇದಕ್ಕೆ ನಿಮ್ಮ ಪ್ರತಿಕ್ರಿಯೆ  ಏನೂ.. ನಾ ಅವಾಗ ಹೇಳಿದ್ದು ಒಂದೇ ಮಾತು..

"ಮೂರು ಕಾದಂಬರಿಗಳನ್ನು ಓದಿದೆ.. ಪಕ್ಕಕ್ಕಿಟ್ಟೆ.. ಚಿತ್ರಕಥೆ ಬರೆದೆ.. ಅದೇ ನಾಗರಹಾವು"

"ಸುಬ್ಬರಾಯರೇ.. ಒಂದು ಮಾತು.. ಬ್ರಾಹ್ಮಣರ ಮನೆಯ ಊಟ ನೋಡಿದ್ದೀರಾ.. ಊಟ ಮಾಡಿದೀರಾ.. ನಿಮಗೆ ಅರಿವಾಗದ ವಿಷಯವೇನಿದೆ ಹೇಳಿ... ಬಾಳೆ ಎಲೆ ಹಾಕಿ ಅಭ್ಗಾರ ಮಾಡಿದ ಮೇಲೆ.. ಒಂದೊಂದೇ ತಿನಿಸುಗಳನ್ನು ಬಡಿಸುತ್ತಾ ಹೋಗುತ್ತಾರೆ, ಪಾಯಸ, ಕೋಸಂಬರಿ, ಪಲ್ಯ ಉಪ್ಪು, ಉಪ್ಪಿನಕಾಯಿ, ಕಲಸಿದ ಅನ್ನ, ಹಪ್ಪಳ, ಸಂಡಿಗೆ, ಬರಿ ಅನ್ನ, ಅದರ ಮೇಲೆ ತೊವ್ವೆ, ಆಮೇಲೆ ತುಪ್ಪ.. ನಂತರ ಪರಿಶಿಂಚನ ಮಾಡಿ, ಚಿತ್ರಾಹುತಿ ಇಟ್ಟು, ಆಪೋಶನ ತೆಗೆದುಕೊಂಡು ನಂತರ ಊಟ ಶುರುಮಾಡುತ್ತೇವೆ.. ಇಡೀ ಬಾಳೆ ಎಳೆಯಲ್ಲಿ ಅಡಿಗೆ ಪದಾರ್ಥಗಳು ಇದ್ದರೂ, ನಮಗೆ ಇಷ್ಟವಾದದ್ದನ್ನು ತಿನ್ನುತ್ತಾ ಹೋಗುತ್ತೇವೆ.. ನಂತರ ಬರುವ ಸಾರು, ಹುಳಿ, ಮಜ್ಜಿಗೆ ಹುಳಿ, ತೊವ್ವೆ, ಮಜ್ಜಿಗೆ.. ಇದರ ಜೊತೆಯಲ್ಲಿ ಬರುವ ಸಿಹಿ ಖಾದ್ಯಗಳು, ಖಾರದ ಪದಾರ್ಥಗಳು ನಮಗೆ ಏನು ಬೇಕು ಅದು ತಿನ್ನುತ್ತೇವೆ.. ಯಾವುದು ಬೇಡವೋ ಅದನ್ನು ಬಿಡುತ್ತೇವೆ.. ಬೇಕಾದ್ದ ಪದಾರ್ಥಗಳನ್ನು ಕೇಳಿ ಹಾಕಿಸಿಕೊಳ್ಳುತ್ತೇವೆ.. ಬೇಡವಾದದ್ದು ಬಂದಾಗ ಕೈ ಅಡ್ಡ ಇತ್ತು ಬೇಡ ಅನ್ನುತ್ತೇವೆ.."

ಇದೆ ರೀತಿ ನಾನು ನಿಮ್ಮ ಕಾದಂಬರಿಗಳನ್ನು ಓದಿದ ಮೇಲೆ ಮಾಡಿದ್ದು.. ನಿಮ್ಮ ಕಾದಂಬರಿಗಳಲ್ಲಿ ನಾ ಆಯ್ದುಕೊಂಡ ಪಾತ್ರಗಳು.. ರಾಮಾಚಾರಿ, ಅವರ ಅಪ್ಪ, ಅಮ್ಮ.. ಚಾಮಯ್ಯ ಮೇಷ್ಟ್ರು ಅವರ ಹೆಂಡತಿ.. ಅಲಮೇಲು, ಅವರ ಅಪ್ಪ ಅಮ್ಮ, ವರದ, ತುಕಾರಾಂ, ಮೇರಿಯಮ್ಮ, ಮಾರ್ಗರೆಟ್, ವರದರಾಜು, ಪೈಲ್ವಾನ್ ಮತ್ತು ಜಲೀಲ   ಇವಿಷ್ಟು ನನ್ನ ಮನಸ್ಸಿನಲ್ಲಿ ಮೂಡಿದ ಪಾತ್ರಗಳು.. ಅದಕ್ಕೆ ಕೆಲವು ಪಾತ್ರಗಳನ್ನು ಸೇರಿಸಿಕೊಂಡೆ ಮತ್ತು ಕೆಲವು ಪಾತ್ರಗಳನ್ನು ಬದಲಿಸಿಕೊಂಡೆ. ಸಿದ್ಧಬಸಪ್ಪನ ಪಾತ್ರದ ಜೊತೆಗೆ ಇನ್ನು ಎರಡು ಪಾತ್ರಗಳಾಗಿ ಅವನ ಗೆಳೆಯರನ್ನು ಆರಿಸಿಕೊಂಡಿದ್ದೇನೆ, ಫಕೀರಪ್ಪನ ಪಾತ್ರಕ್ಕೆ ಬದಲಾಗಿ ನಾಜೂಕಯ್ಯನ ಪಾತ್ರ ಸೇರಿಸಿದೆ, ಶಾಲೆಯ ಮಾಸ್ತರಿಗೆ ಬದಲು ಪ್ರಿನ್ಸಿಪಾಲ ಶಾಮರಾಯರನ್ನು ಕರೆತಂದೆ.. ಶಾಲೆಯ ಬದಲಿಗೆ ಕಾಲೇಜು ತಂದೆ..  ಪ್ರೀತಿ ಪ್ರೇಮ ಎಂದು ಮಾರ್ಗರೆಟ್ ಮತ್ತು ಅಲಮೇಲು ಜೊತೆಯಲ್ಲಿ ನೆಡೆವ ಪ್ರಸಂಗಗಳನ್ನು ಒಳಗೆ ತರಲಿಲ್ಲ.. ವರದರಾಜುವಿನ ಇತಿಹಾಸ, ಮೇರಿಯಮ್ಮನ ಇತಿಹಾಸ, ಚಾಮಯ್ಯ ಮೇಷ್ಟ್ರ ಇತಿಹಾಸ, ಪ್ಲೇಗ್, ಸಿನಿಮಾ ಟೆಂಟ್ ಇವುಗಳನ್ನು ಬೇಡವೆಂದು ಬಿಟ್ಟೆ. ಶಾಲೆಯ ದಿನಗಳಲ್ಲಿ ರಾಮಚಾರಿ ಮತ್ತು ಸಂಗಡಿಗರ ತುಂಟತನ ವನ್ನು ಟೈಟಲ್ ಕಾರ್ಡ್ ತೋರಿಸುವಾಗ ಬರಿ ರಾಮಚಾರಿಯನ್ನಷ್ಟೇ ಮುಖ್ಯವಾಗಿಟ್ಟುಕೊಂಡು.. ಅವನ ಒಂದೆರಡು ಚೇಷ್ಟೆಗಳನ್ನು ಮಾತ್ರ ತೋರಿಸಿದೆ..ಮಿಕ್ಕಂತೆ ಹಾಡುಗಳು ನಮ್ಮ ಭಾರತದ ಸಿನಿಜಗತ್ತಿನ ಮುಖ್ಯ ಭಾಗಗಳು .. ಹಾಗಾಗಿ ರಾಮಾಚಾರಿಯ ಗುಣ ವಿಶೇಷತೆ ತಿಳಿಸಲು "ಹಾವಿನ ದ್ವೇಷ ಹನ್ನೆರಡು ವರುಷ" ಹಾಡು ಬಂತು.. ರಾಮಾಚಾರಿ ಮತ್ತು ಅಲಮೇಲುವಿನ ಪ್ರೀತಿ ಗುರುತಿಸಲು "ಕರ್ಪೂರದ ಗೊಂಬೆ ನಾನು" ಹಾಡು ಬರಬೇಕಾಯಿತು.. ಒಂದು ಗಂಡು ಎರಡು ಹೆಣ್ಣು .. ಇದರಲ್ಲಿ ಆಯ್ಕೆ ಎನ್ನುವ ಪ್ರಶ್ನೆ ಬಂದಾಗ.. ರಾಮಾಚಾರಿಗೆ ಸ್ಪಷ್ಟತೆ ಸಿಕ್ಕಿ ಅಲಮೇಲುವನ್ನು ಆಯ್ಕೆ ಮಾಡಿಕೊಳ್ಳುತ್ತಾನೆ ಆ ಸಂದರ್ಭಕ್ಕೆ "ಬಾರೆ ಬಾರೆ ಚಂದದ ಚೆಲುವಿನ  ತಾರೆ" ಹಾಡು ತೋರಿಸಿದೆ..

ಮಧ್ಯದಲ್ಲಿಯೇ ಸುಬ್ಬರಾಯರು "ಪುಟ್ಟಣ್ಣನವರೇ ಒಂದು ಮಾತು.. ನಿಮ್ಮನ್ನು ಮೆಚ್ಚಿದ್ದು ಬಾರೆ ಬಾರೆ ಹಾಡಿನ ಚಿತ್ರೀಕರಣ.. ಸ್ಲೋ ಮೋಷನ್ ನಲ್ಲಿ ಹಾಡನ್ನು ಚಿತ್ರೀಕರಿಸಿರುವುದು ಭಾರತದ ಚಿತ್ರರಂಗದ ಇತಿಹಾಸದಲ್ಲಿಯೇ ಮೊದಲು.. ನಿಮ್ಮ ಮಾತಿಗೆ ಕೊಂಚ ತಡೆ ಮಾಡುತ್ತಿದ್ದೇನೆ .. ಈ ಹಾಡಿನ ಬಗ್ಗೆ ಹೇಳಿ.. ಅಲಮೇಲುವನ್ನು ಸ್ಲೋ ಮೋಷನ್ ನಲ್ಲಿ.. ರಾಮಾಚಾರಿಯನ್ನು ಸಹಜ ವೇಗದಲ್ಲಿ ಚಿತ್ರೀಕರಿಸಿದ್ದರ ಬಗ್ಗೆ ಹೇಳಿ.. ಆಮೇಲೆ ನಿಮ್ಮ ಪ್ರತಿಕ್ರಿಯೆ ಮುಂದುವರೆಸಿ .. ಆಗಬಹುದೇ"

"ಆಗಬಹುದು ಸುಬ್ಬರಾಯರೇ.. ಕಾದಂಬರಿ ಬರೆದು ಇಂತಹ ಅದ್ಭುತ ಚಿತ್ರ ಮಾಡುವ ಅನುಕೂಲ ಮಾಡಿಕೊಟ್ಟಿದ್ದೀರಾ. .ಖಂಡಿತ ಹೇಳುವೆ.. ರಾಮಚಾರಿ ಆವೇಗಕ್ಕೆ ಸದಾ ಒಳಗಾಗುವ ವ್ಯಕ್ತಿತ್ವ . ಅವನು ಯಾರ ಮಾತಿಗೂ ಬಗ್ಗುವವನಲ್ಲ.. ಹರಿವ ನೀರಿದ್ದ ಹಾಗೆ.. ನೀರಿಗೆ ತಡೆ ಮಾಡೋಕೆ ಆಗುತ್ತಾ.. ಖಂಡಿತ ಇಲ್ಲ.. ಆ ದೃಷ್ಠಿ ಇಟ್ಟುಕೊಂಡು ರಾಮಾಚಾರಿಯ ದೃಶ್ಯವು ಸಹಜವಾದ ವೇಗದಲ್ಲಿದೆ.. ಅದೇ ಅಲುಮೇಲು ಸಮಾಜದ ಕಟ್ಟುಪಾಡಿಗೆ ಬಾಗಬೇಕಾದವಳು, ಅಪ್ಪ, ಅಮ್ಮ, ವರದ ಹದ್ದು ಕಾಯ್ದಂತೆ ಅವಳನ್ನು ಕಾಯುತ್ತಿದ್ದವರು.. ಹಾಗಾಗಿ ಅವಳು ತಗ್ಗಿ ಬಗ್ಗಿ ನಿಧಾನಕ್ಕೆ ನೆಡೆಯಬೇಕು ಎನ್ನುವುದನ್ನು ಸ್ಲೋ ಮೋಷನಿನಲ್ಲಿ ಚಿತ್ರಿಸಿದ್ದೇವೆ.. "

"ಭಲೇ ಭಲೇ.. ಅದ್ಭುತ ವಿವರಣೆ. ಹಾ ಸರಿ ಮುಂದುವರೆಸಿ"

"ರಾಮಚಾರಿಯ ಸಂಸಾರದಲ್ಲಿ ಹೆಚ್ಚು ಮಂದಿಯನ್ನು ಸೇರಿಸದೆ, ಅಪ್ಪ ಅಮ್ಮ ಇವನು ಮೂವರನ್ನೇ ಉಳಿಸಿಕೊಂಡೇ.. ಮನೆಗೆ ಸಹಾಯ ಮಾಡದವನು ಮಗನಲ್ಲ ಎಂದು ದೂರುವ ಅಪ್ಪ ಅಮ್ಮನಿಗೆ ಸ್ವಲ್ಪ ಆಧಾರವಾಗಿರಲು ಗೈಡ್ ಕೆಲಸ ಮಾಡುತ್ತಾ ಚಿತ್ರದುರ್ಗದ ಒನಕೆ ಓಬವ್ವನ ಕತೆಯನ್ನು ಸೇರಿಸಿ ದುರ್ಗ ಎಂದರೇನು ಹೇಗಿರುತ್ತೆ ಎಂದು ಕರುನಾಡಿಗೆ ತಿಳಿಸಬೇಕಿತ್ತು ಅದಕ್ಕೆ "ಕನ್ನಡ ನಾಡಿನ ವೀರರಮಣೀಯ" ಹಾಡು ಬಂತು.. ಅಲಮೇಲು ಮದುವೆಯಾಯಿತು.. ಬೇರೆ ದಾರಿ ಕಾಣದೆ ರಾಮಾಚಾರಿ ನಿಧಾನವಾಗಿ ಮಾರ್ಗರೇಟ್ ಪ್ರೇಮಕ್ಕೆ ಮಣಿಯುತ್ತಾನೆ.. ಎರಡು ಬೇರೆ ಬೇರೆ ಧರ್ಮ ಅದರ ಸಂಗಮವಾಗುತ್ತಿದೆ ಎಂದು "ಸಂಗಮ ಸಂಗಮ" ಹಾಡು ಚಿತ್ರೀಕರಿಸಿದೆ.. ಅಲಮೇಲುವಿನ ಮದುವೆ ಬಲವಂತದ ಮದುವೆ ಜೊತೆಯಲ್ಲಿ ಒಲ್ಲದ ಗಂಡ ತನ್ನ ಆಸೆ ಪೂರೈಸಿಕೊಂಡ ಮೇಲೆ ಅವಳನ್ನು ವ್ಯಾಪಾರದ ಸರಕಾಗಿ ಬಳಸಿಕೊಳ್ಳುವುದು ಮತ್ತು ಅವಳ ದುರಂತ ಕತೆಯನ್ನು "ಕತೆ ಹೇಳುವೆ ನನ್ನ ಕತೆ ಹೇಳುವೆ" ಎಂದು ತೋರಿಸಿದ್ದೇನೆ.. ಅಲಮೇಲು ರಾಮಚಾರಿಯನ್ನು ಪ್ರೀತಿಸುತ್ತಿದ್ದಾಳೆ ಎಂದು ಹೇಳಲು "ರಾಮಚಾರಿ ನೀ ಅಣ್ಣ ಅಂತ ಹೇಳಿದೆ.. ಆದರೆ ನಿನಗೆ ಆ ಸ್ಥಾನ ಕೊಟ್ಟಿಲ್ಲ.. ಈಗಲೂ ನನ್ನ ಜೊತೆ ಬಾಳುವೆ ಎಂದು ಹೇಳು.. ಇದನ್ನೆಲ್ಲಾ ಬಿಟ್ಟು ನಿನ್ನ ಜೊತೆ ಬಂದು ಬಿಡುತ್ತೇನೆ.. " ಎನ್ನುವ ಮಾತಿನಲ್ಲಿ ತೋರಿಸಿದ್ದೇನೆ.. ರಾಮಚಾರಿ ಈಗ ಮಾರ್ಗರೇಟ್ ಜೊತೆಯಲ್ಲಿ ಪ್ರೀತಿಸುತ್ತಿದ್ದಾನೆ ಎಂದು ತಿಳಿದ ಅವಳು "ಎಂಥಹ ;ಪರಿಸ್ಥಿತಿಯಲ್ಲಿಯೂ ಅವಳನ್ನು ಕೈಬಿಡಬೇಡ ಎಂಬ ಮಾತೆ ಚಾಮಯ್ಯ ಮೇಷ್ಟರ ಅವಸಾನಕ್ಕೆ ಕಾರಣವಾಗುತ್ತೆ.. ನಿಮ್ಮ ತ್ರಿವಳಿ ಕಾದಂಬರಿ ಓದಿ ನನಗೆ ಮೂಡಿಬಂದ ಕತೆಯ ಎಳೆ ಇದು.. ಅದನ್ನೇ ಜೋಪಾನವಾಗಿ ಹರಡಿ... ಶಾಲೆಯ ಬದಲಿಗೆ ಕಾಲೇಜು ತಂದೆ.. ರಾಮಾಚಾರಿಯ ತುಂಟತನ, ಹಠ ತೋರಿಸಲು ಶಾಮರಾಯರನ್ನು ಕಂಬಕ್ಕೆ ಕಟ್ಟುವ ದೃಶ್ಯ. ಜಲೀಲನ ಜೊತೆ ಗುದ್ದಾಟ.. ಇವುಗಳನ್ನು ಸೇರಿಸಿದೆ.. ಮಂಡಿ ಸಾಹುಕಾರನ ಬಳಿ ಕೆಲಸ ಕೊಡಿಸಲು ಪೈಲ್ವಾನ್ ಅವರ ಶಿಫಾರಸ್ಸಿನ ದೃಶ್ಯ ಹಾಗೆ ಇದೆ.. ಜೊತೆಯಲ್ಲಿ ಮಂಡಿ ಸಾಹುಕಾರನ ಗೆಳೆಯರನ್ನು ಸೇರಿಸಿದೆ.. ಇನ್ನೂ ತುಕಾರಾಂ ಮಾಡುವ ಗದ್ದಲಗಳು.. ಅವನು ಚಾಮಯ್ಯ ಮೇಷ್ಟ್ರಿಗೆ ರಾಮಾಚಾರಿಯ ಬಗ್ಗೆ ಹೇಳುವ ಚಾಡಿಮಾತು.. ಇವೆಲ್ಲಾ ಎಷ್ಟು ಬೇಕೋ ಅಷ್ಟು ತೆಗೆದುಕೊಂಡಿದ್ದೀನಿ.. ರಾಮಾಚಾರಿಯ ಪಾತ್ರವನ್ನು ಆರಂಭದಿಂದ ಕಡೆಯ ತನಕ ಯಾರಿಗೂ ಬಾಗದ ಅಸಾಮಿಯಾಗಿ ಚಿತ್ರಿಸಬೇಕೆಂದುಕೊಂಡಿದ್ದೆ.. ಸಾಮಾನ್ಯ ಚಿತ್ರದ್ ಅವಧಿ ಎರಡೂವರೆ ಅಥವಾ ಎರಡೂ ಮುಕ್ಕಾಲು ಘಂಟೆಯಲ್ಲಿ ಸಿನಿಮಾ ಮಾಡಬೇಕು... ತುಸು ಹೆಚ್ಚಾದರೂ ಜನರಿಗೆ ಬೋರ್ ಆಗಬಾರದು ನಿಮ್ಮ ಕತೆಯಲ್ಲಿ ಬರುತ ಹಲವಾರು ದೃಶ್ಯಗಳನ್ನು ಬಿಟ್ಟಿದ್ದೇನೆ.. ಶಾಲೆಯಿಂದ ಕಾಲೇಜಿಗೆ ವರ್ಗ ಮಾಡಿದ್ದು ಕೂಡ ಇದೆ ಕಾರಣಕ್ಕೆ.. ಶಾಲೆಯಲ್ಲಿ ಪ್ರೀತಿ ಪ್ರೇಮ ಈ ವಿಷಯಗಳು ಆಗಿನ ಕಾಲಕ್ಕೆ ಸರಿ ಹೊಂದುತ್ತಿರಲಿಲ್ಲ ಎನ್ನುವ ಭಾವ ಹೊತ್ತು ಕಾಲೇಜಿನಿಂದ ಕತೆ ಆರಂಭಿಸಿದೆ.. ಎಂದು ಇದು ನನ್ನ ವಿವರಣೆ ಸುಬ್ಬರಾಯರೇ.. "

"ಬೇಕಾದಷ್ಟು ಆಯ್ತು ಬಿಡಿ.. ಸುಂದರವಾಗಿದೆ ನಿಮ್ಮ ವಿವರಣೆ.. ಇರಲಿ ಬಿಡಿ. ನಾನು ಬರೆದದ್ದು ಲಕ್ಷ ಜನರಿಗೆ ತಲುಪಿತ್ತು.. ನೀವು ಚಿತ್ರೀಕರಿಸಿದ ಚಿತ್ರ ಕೋಟ್ಯಾಂತರ ಜನರಿಗೆ ತಲುಪಿದೆ.. ಹೋಗಲಿ ಬಿಡಿ ಆದದ್ದು ಆಯ್ತು.. ಅಂದ ಹಾಗೆ ನಾಗರಹಾವು ಹೊಸ ರೂಪದಲ್ಲಿ, ಹೊಸ ತಂತ್ರಜ್ಞಾನದಲ್ಲಿ ಮೂಡಿ ಬಂದಿದೆಯಂತೆ.. ಬನ್ನಿ ಇಬ್ಬರೂ ನೋಡಿ ಬರೋಣ.. "

"ಧನ್ಯವಾದಗಳು ಸುಬ್ಬರಾಯರೇ.. ಹೇಗೋ ನಿಮ್ಮ  ಮನಸ್ಸಿಗೆ ಸಂತಸ ಉಂಟು ಮಾಡಿತು ಅಂದರೆ ಅದಕ್ಕಿಂತ ಭಾಗ್ಯವೇನಿದೆ ಹೇಳಿ.. ನೆಡೆಯಿರಿ.. ನಾಗರಹಾವು ಕತೃವಿನ ಜೊತೆಯಲ್ಲಿ ಸಿನಿಮಾ ನೋಡುವ ಸದವಕಾಶ ನನಗೆ ಒದಗಿಸಿಕೊಟ್ಟ ನಿಮಗೆ ಅನಂತ ಧನ್ಯವಾದಗಳು!!!

(ಹೇಳಬೇಕಿಲ್ಲ... ಆದರೂ ಹೇಳುತ್ತೇನೆ.. ಇದೊಂದು ಕಾಲ್ಪನಿಕ ಬರಹ.. ಸುಬ್ಬರಾಯರ ಮಸಣದ ಹೂವು, ಚಂದವಳ್ಳಿಯ ತೋಟ ನಾಗರಹಾವು, ಒಂದು ಗಂಡು ಎರಡು ಹೆಣ್ಣು, ಸರ್ಪ ಮತ್ಸರ, ಚಂದನದ ಗೊಂಬೆ ಹೀಗೆ ಹತ್ತು ಹಲವಾರು ಸಿನೆಮಾಗಳಾಗಿರುವ ಅವರ ಕಾದಂಬರಿ ಆಧಾರಿತ ಚಿತ್ರಗಳನ್ನು ನೋಡಿದ್ದೇನೆ.. ಅಪಾರ ಗೌರವವಿದೆ ತ ರಾ ಸು ಅವರಲ್ಲಿ ಮತ್ತು ಅವರ ಬರವಣಿಗೆಯಲ್ಲಿ.. ಅದೇ ರೀತಿ ಹೆಮ್ಮೆಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಅದ್ಭುತ ಚಿತ್ರಗಳು ಅವರ ತಾಂತ್ರಿಕ ಅಂಶಗಳಿಗೆ ಕೊಡುವ ಪ್ರಾಮುಖ್ಯತೆ, ಹಾಡುಗಳು ಸಂಭಾಷಣೆ, ದೃಶ್ಯವನ್ನು ಕಟ್ಟಿ ಕೊಡುವ ಅವರ ಪ್ರಬುದ್ಧತೆ ಇವುಗಳನ್ನು ಕಂಡು ಅವರ ಅಭಿಮಾನಿಯಾಗಿದ್ದೇನೆ.. ಈ ಇಬ್ಬರು ಕಲಾ ದಿಗ್ಗಜರು ಮಾತಾಡಿರಬಹುದು ಎನ್ನುವ ಒಂದು ಕಾಲ್ಪನಿಕ ಯೋಚನೆ ಮೂಡಲು ಕಾರಣ ಇವರಿಬ್ಬರು.. ಇವರ ಕೊಟ್ಟ ಶಕ್ತಿ ಮತ್ತು ಪ್ರೋತ್ಸಾಹವೇ ಈ ಬರವಣಿಗೆಗೆ ಮೂಲ ಪ್ರೇರಕ ಅಂತ ನಾ ನಿಸ್ಸಂಕೋಚವಾಗಿ ಹೇಳುವೆ. .. ಮತ್ತು ಈ ಲೇಖನ ಶ್ರೀಯುತ ತ ರಾ ಸುಬ್ಬರಾಯರಿಗೆ ಮತ್ತು ಶ್ರೀಯುತ ಪುಟ್ಟಣ್ಣ ಕಣಗಾಲ್   ಅವರ ಚರಣಕಮಲಗಳಿಗೆ ಸಮರ್ಪಿತ!!!)

Sunday, October 21, 2018

ನಾದ ನಮನ ಸುಂದರ ಸಂಜೆ !!!

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ತಾಲೂಕಿನ ಬಳಿಯ ಕಣಗಾಲ್  ಎಂಬ ಪುಟ್ಟ ಗ್ರಾಮದ ಒಂದು ಹಳ್ಳಿಯ ಮನೆಯ  ಜಗಲಿಯ ಮೇಲೆ ಮೂರು ಬಾಲಕರು ಚೌಕಾಭಾರ ಆಟವಾಡುತ್ತಿದ್ದರು.. 

ಕಣಗಾಲ್ ಸಹೋದರರು ಆಡಿ ಬೆಳೆದ ಮನೆ!
"ಹೋಗ್ರೋ ಆಟವಾಡಿದ್ದು ಸಾಕು.. ಸ್ವಲ್ಪ ಗುಡಿಯ ಕಸಗುಡಿಸಿ ಬನ್ರೋ" ಎಂದು ಅವರ ಅಪ್ಪ ಹೇಳಿದ್ದು ಕೇಳಿ.. ಮೂವರು ಪರಕೆಯನ್ನು ಹಿಡಿದು.. ಆ ಊರಿನ ಮುಖ್ಯ  ದೇಗುಲದ ಅಂಗಳವನ್ನು ಶ್ರದ್ದೆಯಿಂದ ಸ್ವಚ್ಛಗೊಳಿಸಿ ಮತ್ತೆ ಆಡಲು ಜಗಲಿಗೆ ಬಂದರು.. 
ಆ ಊರಿನ ಜನತೆ ಹೇಳುವ ಪ್ರಕಾರ ಕಣಗಾಲ್ ಸಹೋದರರು ಸದಾ ಈ ಗುಡಿಗೆ ಬರುತ್ತಿದ್ದರು 

ಆಟ ಕುತೂಹಲಕಾರಿಯಾಗಿತ್ತು.. ಅಷ್ಟರಲ್ಲಿ ಟುರ್ ಟುರ್ ಟ್ರಾ ಎನ್ನುತ್ತಾ ಜೋಗಿ ಸಿದ್ದರು ಮನೆಯ ಮುಂದೆ ಬಂದು.. "ಏನ್ರಪ್ಪ ಹೇಗೆ ನೆಡಿತಿದೆ ಆಟ" ಎಂದಾಗ.. ಅವರಲ್ಲಿ ದೊಡ್ಡ ಬಾಲಕ.. 
ನೆಡೆದಾಡಿ ಹೆಜ್ಜೆ ಗುರುತು ಮೂಡಿಸಿದ ಹಾದಿ 
"ಚೆನ್ನಾಗಿ ನೆಡಿತಿದೆ ಸ್ವಾಮ್ಗಳೇ .. ನೀವು ಭವಿಷ್ಯ ಹೇಳ್ತಿರಂತೆ.. ಯಾರೂ ಗೆಲ್ತಾರೆ ಅಂತ ಹೇಳಿ ಸ್ವಾಮ್ಗಳೇ"

ಆ ಜೋಗಿ ಸಿದ್ಧರು ನಗುತ್ತಾ.. 

"ಮಕ್ಕಳೆ . ನಿಮಗೆ ಈ ಆಟದ ಭವಿಷ್ಯ ಬೇಡ .ನಿಮ್ಮ ಭವಿಷ್ಯ ಹೇಳುತ್ತೇನೆ ಕೇಳಿ.. ದೊಡ್ಡವ ನೀನು...  ನಿನ್ನ ಹೆಸರು ಪ್ರಭಾಕರ ಶಾಸ್ತ್ರಿ ಅಲ್ಲವೇ.. ?..

ಚಕಿತನಾದ ಹುಡುಗ "ಹೌದು.. ನಿಮಗೆ ಹೇ.. " ಮಾತಿನ್ನೂ ಮುಗಿದಿರಲಿಲ್ಲ.. 

"ಇವನು ಪುಟ್ಟಣ್ಣ.. ಇವನು ನರಸಿಂಹ" ಎಂದು ಎರಡನೇ ಮತ್ತು ಮೂರನೇ ಬಾಲಕರ ಹೆಸರು ಹೇಳಿದಾಗ ..ಆಡುತ್ತಿದ್ದ ಕವಡೆಯನ್ನು ಹಾಗೆ ಇಟ್ಟು ಮೂವರು ಜಗಲಿಯಿಂದ ರಸ್ತೆಗೆ ನೆಗೆದರು .. ಮಳೆ ಬಂದು ತೊಪ್ಪೆಯಾಗಿದ್ದ ಮಣ್ಣಿನ ರಸ್ತೆ.. ಮಕ್ಕಳಿಗೆ ಬಟ್ಟೆ ಕೊಚ್ಚೆಯಾಗುತ್ತೆ ಎಂಬ ಅರಿವಿರಲಿಲ್ಲ.. ಅವರಿಗಿದ್ದದ್ದು ಕುತೂಹಲ... 

ದೊಡ್ಡವ "ಹೇಳಿ ಸ್ವಾಮಿಗಳೇ.. ನಮ್ಮ ಪರಿಚಯ ನಿಮಗೆ ಹೇಗೆ.. ನೀವು ಯಾರು.. ಎಲ್ಲಿಂದ ಬಂದಿರಿ.. ಹೇಗೆ ಬಂದಿರಿ.. ? ಹೀಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದಾಗ.. 

ನಗುತ್ತ "ಬಾಲಕ.. ಆ ಪ್ರಶ್ನೆಗಳಿಗೆಲ್ಲ ಉತ್ತರ ಬೇಡ. .. ನಿಮಗೊಂದು ಭವಿಷ್ಯದಲ್ಲಿ ನೆಡೆಯುವ ಘಟನೆಯನ್ನು ಪೋಣಿಸಿ.. ಒಂದು ಘಟನೆಯನ್ನು ಹೇಳುತ್ತೇನೆ ಕೇಳಿ.. "

ಮೂವರು ಮೈಯೆಲ್ಲಾ ಕಿವಿಯಾಗಿ ಕೇಳುತ್ತಾ ಕುಳಿತರು.. ಪ್ರಪಂಚವೇ ಅವರಿಗೆ ಈ ಜೋಗಿ ಸಿದ್ಧರಾಗಿದ್ದರು.. ಅದು ಬಿಟ್ಟು ಮಿಕ್ಕಿದ್ದೆನು ಅವರ ಕಿವಿಗೆ ಕಣ್ಣಿಗೆ ಬೀಳುತ್ತಿರಲಿಲ್ಲ.. 

"ಬೆಂಗಳೂರಿನ ಸಾಂಸ್ಕತಿಕ ತಾಣ ರವೀಂದ್ರ ಕಲಾಕ್ಷೇತ್ರ.. ಅಲ್ಲಿ ಶ್ರೀ ವಿಳಂಬಿ ನಾಮ ಸಂವತ್ಸರ ದಕ್ಷಿಣಾಯಣ ಶರಧೃತು ಆಶ್ವಯುಜ ಮಾಸ ಶುಕ್ಲ ಪಕ್ಷದ ದಶಮಿಯಂದು ಒಂದು ಸುಂದರ ಸಮಾರಂಭ.. ಪ್ರಭಾಕರ ನಿನ್ನ "ಸಾವಿ"ರದ ಗೀತೆಗಳನ್ನು ಸಕಿ ಸಮೂಹ ಸಂಸ್ಥೆಗಳು "ನಾದ ನಮನ" ಎಂಬ ಸುಂದರ ಕಾರ್ಯಕ್ರಮದಲ್ಲಿ ಆಯೋಜಿಸುತ್ತಾರೆ.. ಅಲ್ಲಿ ನಿನ್ನ ಬಗ್ಗೆ ಮಾತಾಡುವುದಷ್ಟೇ ಅಲ್ಲದೆ.. ನಿನ್ನ ಗೀತೆಗಳ ಗಾಯನ ಇರುತ್ತದೆ ಮತ್ತು ನಿನ್ನ ಜೀವನದ ಸ್ಮರಣೀಯ ಕ್ಷಣಗಳ ಶ್ಲಾಘನೆ ನೆಡೆಯುತ್ತದೆ.. ನೆರೆದಿರುವ ನಿನ್ನ ಅಭಿಮಾನಿಗಳು ನಿನ್ನ ನೆನಪನ್ನು ಹೃದಯದಲ್ಲಿ ಹೊತ್ತು ಮನೆಗೆ ಹೋಗುತ್ತಾರೆ..ಆ ಒಲವಿನ ನೆನಪೇ ಹೃದಯಕೆ ಮಧುರ ಒಲವೇ ದೈವದ ಸಾಕ್ಷಾತ್ಕಾರ ಎನ್ನುತ್ತಾ ನಿನ್ನ ಗುಣಗಾನ ಮಾಡುತ್ತಾರೆ" ಎನ್ನುತ್ತಾ ಮುಂದಿನ ಮನೆಯ ಕಡೆ ಹೆಜ್ಜೆ ಇಟ್ಟರು.. 

ಬಾಲಕನಿಗೆ ಅರ್ಥವಾಗಲಿಲ್ಲ.. ಮೂರು ಘಂಟೆಯ ಸಿನೆಮಾವನ್ನು ಒಂದು ಹತ್ತು ಕ್ಷಣದಲ್ಲಿ ಹೇಳಿದಂತೆ ಭಾಸವಾಯಿತು.. ಆರಂಭ ಮಧ್ಯಭಾಗ ಅಂತ್ಯ ಎಲ್ಲವೂ ಗೊಂದಲಮಯ.. ಅವರನ್ನೇ ಹಿಂಬಾಲಿಸಿ  "ಸ್ವಾಮಿಗಳೇ ಅದೇನು ಸರಿಯಾಗಿ ಹೇಳಿ.. ಭವಿಷ್ಯ ಹೇಳುತ್ತೀನಿ ಅಂದ್ರಿ .. ಭವಿಷ್ಯ ಹೇಳಲಿಲ್ಲ ..ಘಟನೆ ಹೇಳುತ್ತೀನಿ ಅಂದ್ರಿ.. ಘಟನೆಯನ್ನು ಪೂರ್ತಿ ಹೇಳಲಿಲ್ಲ.. ಏನು ವಿಷಯ ಹೇಳಿ.. "

ಟುರ್ ಟುರ್ ಟ್ರಾ ಎಂದು ಸದ್ದು ಮಾಡುತ್ತಾ "ಮಗೂ ನೀನು ಪ್ರಭಾಕರ.. ಕಣಗಾಲ್ ಪ್ರಭಾಕರ ಶಾಸ್ತ್ರೀ ಎಂದು ಕನ್ನಡದ ಚಿತ್ರ ಜಗತ್ತಿನಲ್ಲಿ ಬರಹಗಾರ, ನಟ, ನಿರ್ದೇಶಕ, ನಿರ್ಮಾಪಕ, ಅದ್ಭುತ ಸಾಹಿತಿ ಎಂದು ಹೆಸರು ಮಾಡುತ್ತೀಯ.. ನಿನ್ನ ಬರವಣಿಗೆ ನಿನಗೆ ಉತ್ಸಾಹ ತುಂಬುತ್ತದೆ, ಶಕ್ತಿ ಕೊಡುತ್ತದೆ.. ಕನ್ನಡ ಚಿತ್ರ ಜಗತ್ತಿನಲ್ಲಿ ಅಪರೂಪದ ವ್ಯಕ್ತಿಯಾಗುತ್ತೀಯ.. ಅಂದಿನ ಕಾರ್ಯಕ್ರಮದ ಬಗ್ಗೆ ತುಸು ಮಾತು..ಪುಟ್ಟದಾಗಿ ಹೇಳುವೆ.. ಕೇಳು.. "

                                                                    ****
ಪರದೆ ಸರಿಯುತ್ತದೆ.. ನಿನ್ನ ಭಾವಚಿತ್ರಕ್ಕೆ ಪುಷ್ಪ ಮಾಲಾರ್ಪಣೆಯಾಗುತ್ತದೆ.. ನಿನ್ನ ಬಂಧುಗಳು ಅದನ್ನು ನೋಡಿ ಭಾವುಕರಾಗುತ್ತಾರೆ.. ನಿನ್ನ ಪುಟ್ಟ ಪರಿಚಯವಾಗುತ್ತದೆ.. ನಂತರ ಕಾರ್ಯಕ್ರಮ ಶುರು.. 

"ಶ್ರೀ ಚಾಮುಂಡೇಶ್ವರಿ ಅಮ್ಮ ಶ್ರೀ ಚಾಮುಂಡೇಶ್ವರಿ"  ಹಾಡಿಗೆ ಅದ್ಭುತ ನೃತ್ಯ ಮಾಡುವ ಮಕ್ಕಳು.. 
"ಆಡೋಣ ಒಲವಿನ ರಾಗಮಾಲೆ" ಎನ್ನುತ್ತಾ ಜೀವನದ ಉತ್ಸಾಹಕ್ಕೆ ತುಂಬುವ "ಶುಭ ಮಂಗಳ ಸುಮುಹೂರ್ತವೇ"  ಎಂದು ಜೀವನದಲ್ಲಿ ಸಂತಸ ತುಂಬಿಕೊಳ್ಳುತ್ತಾ ಪ್ರೇಮವಿಲ್ಲದೇ ಇರಲು ಸಾಧ್ಯವೇ.. ಅಸಾಧ್ಯ ಎಂದು "ಪ್ರೇಮ ಮಧುರಾಕ್ಷರ ಪ್ರೇಮ ಅಜರಾಮರ" ಎನ್ನುತ್ತಾ ಪ್ರೇಮದ ಅದ್ಭುತ ಶಕ್ತಿಯನ್ನು ಹೊಗಳಬೇಕಾದರೆ ತಿರುಪತಿ ಗಿರಿವಾಸನ ಕೃಪೆ ಸದಾ ಇರಬೇಕು ಕಣಯ್ಯಾ ಎಂದು "ತಿರುಪತಿ ಗಿರಿವಾಸ ಶ್ರೀ ವೆಂಕಟೇಶ.. ನೀ ಒಲಿದ ಮನೆ ಮನೆಯೂ ಲಕ್ಷ್ಮಿ ನಿವಾಸ" ಎಂದ ಮೇಲೆ.. ಇನ್ನೇನೂ "ಅತಿ  ಮಧುರ ಅನುರಾಗ ಜೀವನ ಸಂಧ್ಯಾರಾಗ" ಆಗಲೇ ಬೇಕಲ್ಲವೇ.. ಜೀವನದಲ್ಲಿ ಆನಂದ ತುಂಬಿ ಹರಿಯುವಾಗ ಕರುನಾಡಿನ ಜೀವನದಿ ಕಾವೇರಿಯ ಬಣ್ಣನೆ ಮಾಡುತ್ತಾ "ಕೊಡಗಿನ ಕಾವೇರಿ.. ಕಾವೇರಿ ನೀ ಬೆಡಗಿನ ವೈಯ್ಯಾರಿ" ಎನ್ನುತ್ತಾ ಸಂಗಾತಿಯನ್ನು ಮತ್ತು ಜೀವನದಿಯನ್ನು ಬಣ್ಣಿಸುತ್ತಾ ಸಾಗುವ ಹಾಡು ಬರೆದ ನೀನು . ದೇಶದ ಸ್ಥಿತಿಯನ್ನು ಕಂಡು ಯುವ ಪೀಳಿಗೆಗೆ ಸಂದೇಶ ನೀಡುವ "ಇಂದಿನ ಹಿಂದೂ ದೇಶದ ನವ ಯುವಕರೇ ನವ ಯುವತಿಯರೇ" ಎಂದು ಬರೆದ ಹಾಡು ಅಮರವಾಗುತ್ತೆ.. ಈ ಪೀಳಿಗೆಗೆ ಸರಿದಾರಿಯಲ್ಲಿ ನೆಡೆಸುವ ಮೊದಲ ಗುರುಗಳು ತಂದೆ ತಾಯಿಯರು.. ಅವರ ಮಹತ್ವವನ್ನು "ತಾಯಿಯ ತಂದೆಯ ಮಮತೆ ವಾತ್ಸಲ್ಯ"  ಎಂದು ಹೃದಯದಲ್ಲಿ ಮಮತೆಯ ಝೇಂಕಾರ ಹುಟ್ಟಿಸುತ್ತಾ "ನಾನು ನೀನು ಜೋಡಿ.. ಒಲವೇ ನಮ್ಮಯ ಒಡನಾಡಿ" ಎಂದು ಆ ಮಧುರ ಪ್ರೇಮಕ್ಕೆ ನಮನ ಹೇಳುತ್ತಾ .. ಆ ನಾದ ಸರಸ್ವತಿಗೆ ತಲೆಬಾಗುತ್ತಾ ನಟರಾಜನನ್ನು ಹೊಗಳುತ್ತಾ "ನಟನ ವಿಶಾರದ ನಟಶೇಖರ" ಎನ್ನುವ ನಿನ್ನ ಮನಸ್ಸು ಸದಾ ಹೇಳುವುದು ಕನ್ನಡ ಭಾಷೆಯ ಬಗ್ಗೆ "ಒಲವಿನ ಪ್ರಿಯಲತೆ ಅವಳದೇ ಚಿಂತೆ.. ಅವಳ ಮಾತೆ ಮಧುರ ಗೀತೆ.. ಅವಳೇ ಎನ್ನ ದೇವತೆ" ಎನ್ನುವ ನಿನ್ನ ಕರುನಾಡ ಅಭಿಮಾನ ಸದಾ ಅಮರ ಮಧುರ.. ಅಮರ ಪ್ರೇಮಿಗಳನ್ನು ಸದಾ ಉಲ್ಲಸಿತವಾಗಿಡುವ "ಸುವ್ವಿ ಸುವ್ವಿ ಸುವ್ವಾಲೆ" .. ಪ್ರೇಮ ಒಂದು ದೇವರು ಅದಕ್ಕೆ ಕೈ ಮುಗಿಯುವ "ಶರಣೆಂಬೆನಾ ಶಶಿ ಭೂಷಣ".. ಈ ನಾಡಿನ ಮಣ್ಣಲ್ಲಿ ಹುಟ್ಟಿದ್ದೇ ನನ್ನ "ಬಹುಜನ್ಮದ ಪೂಜಾಫಲ" ಎನ್ನುವ ನಿನ್ನ ಮಾತು ಸದಾ ಗುನುಗುನಿಸುತ್ತದೆ..ಹರನಿಗೆ ಸಮನಾರು ಇಲ್ಲ ಅಲ್ಲವೇ ಅಂದರೆ ಅದಕ್ಕೆ ನೀ ಹೇಳುವುದು "ಶರಣು ವಿರುಪಾಕ್ಷ ಶಶಿಶೇಖರ ಪಂಪಾವತಿ ಪ್ರಣಯ ಪರಮೇಶ್ವರಾ".. ಹೀಗೆ ನಿನ್ನ ಪ್ರತಿಭೆಗೆ ನಮಸ್ಕರಿಸಲೇ.. ಅಥವಾ ಬೆನ್ನು ತಟ್ಟಲೇ ಎಂದ ಕೂಡಲೇ "ಇದೆ ಹೊಸ ಹಾಡು ಹೃದಯ ಸಾಕ್ಷಿ ಹಾಡು" ಎನ್ನುತ್ತೀಯಾ.. ಅಕ್ಷರಗಳಲ್ಲೇ ಮಜ್ಜನ ಮಾಡಿಸುವ ನೀನು ಅಕ್ಷರಗಳಿಗೆ ಕೈಮುಗಿಯುತ್ತ ಹೇಳುವುದು "ನಾ ಕಂಡೆ ನಿನ್ನಲ್ಲೇ ಮನೆ ದೇವರ" ಅಬ್ಬಾ ಎಂಥಹ ಧೈರ್ಯ ನಿನದು .. ಅದು ಹೇಗೆ ಬಂತು ಈ ಧೈರ್ಯ ಎಂದು ನನ್ನ ಹುಬ್ಬು ಮೇಲೆ ಏರಿದಾಗ ನೀ ನನಗೆ ಸಮಾಧಾನ ಮಾಡುತ್ತಾ ಉತ್ತರ ಕೊಡುವೆ "ಮಾತೆಗೆ ಮಿಗಿಲಾದ ದೇವರಿಲ್ಲ ಭೀತಿಗೆ ಹಿರಿದಾದ ಭೂತವಿಲ್ಲ" ಎಂದು ಎಲ್ಲವೂ ಮಾತೃದೇವೋಭವ ಎನ್ನುವೆ.. ಈ ಪೀಳಿಗೆ ಜನತೆ ನಿನ್ನ ಬಗ್ಗೆ ತಿಳಿಯದೆ ಯಾರಪ್ಪಾ ಈ ಮಹಾನುಭಾವ ಎಂದೊಡನೆ ನಿನ್ನ ಲೇಖನೀ ಬರೆದೇ ಬಿಡುತ್ತೆ "ಯಾವೂರವ್ವ ಏನ್ ಚಂದ ಕಾಣಿಸ್ತೌನೇ" ಎಂದು ನಿನ್ನ ಪರಿಚಯ ಮಾಡಿಕೊಡುತ್ತೀಯ.. ನೀ ಕರುನಾಡಿನ ಜನಮಾನಸದಲ್ಲಿ ಸದಾ ಹಸಿರಾಗಿರುತ್ತೀಯ ಎಂಬ ನನ್ನ ಮಾತಿಗೆ ನೀ ಒಮ್ಮೆ ನಕ್ಕರು ನೀ ಬರೆದ ಹಾಡು "ಕನ್ನಡ ನಾಡಿನ ರಸಿಕರ ಮಾನವ ಸೂರೆಗೊಂಡ" ನಾಯಕಿ ಅಂತ ಹೇಳಲೇ ನಾಯಕ ಅಂತ ಹೇಳಲೇ ಎನ್ನುವ ಗೊಂದಲ ಮೂಡಿಸುತ್ತದೆ.. ಇದೆಲ್ಲ ನಿನಗೆ ಹೇಗೆ ಸಾಧ್ಯವಾಯಿತು ಎಂದು ನಾನು ಅಚ್ಚರಿಗೊಂಡೆ.. ಆದರೆ ಅದು ನಿನಗೆ ಒಲಿದ ಅಕ್ಷರಗಳ ಸಾಕ್ಷಾತ್ಕಾರ.. ತಮಾಷೆ ಗೊತ್ತಾ ನಿನ್ನ ಪ್ರೀತಿಯ ತಮ್ಮ ನಿರ್ದೇಶಿಸುವ ಚಿತ್ರದಲ್ಲಿ ನೀ ಬರೆದ ಹಾಡು ಅಮರವಾಗಿ ಉಳಿಯುತ್ತೆ ಮತ್ತು ಆ ಹಾಡನ್ನು ನಿನ್ನ ತಮ್ಮ ಅಷ್ಟೇ ಸ್ಮರಣೀಯವಾಗಿ ಚಿತ್ರೀಕರಿಸುತ್ತಾನೆ.. ಏಕೆ ಗೊತ್ತೇ ನಿಮ್ಮ ಪ್ರತಿಭೆ ಆ ದೇವಾ ಕೊಟ್ಟ ವರ ಅದಕ್ಕೆ ನಾ ಹೇಳೋದು "ಒಲವೇ ಜೀವನ ಸಾಕ್ಷಾತ್ಕಾರ.. ಒಲವೇ ಮರೆಯದ ಮಮಕಾರ.. " ಶುಭವಾಗಲಿ ಕಂದ.. 

ಕಾರ್ಯಕ್ರಮದ ಕೆಲವು ದೃಶ್ಯಗಳನ್ನು ನಿನ್ನ ಕಣ್ಣ ಮುಂದೆ ತಂದಿಡುತ್ತೇನೆ.. ನೋಡು ಆನಂದಿಸು.. ಸೊಗಸಾದ ವಿವರಣೆ.. ಸೊಗಸಾದ ಸಂಗೀತ ... ಅಚ್ಚುಕಟ್ಟಾದ ಗಾಯನ.. ವಾದ್ಯವೃಂದ.. ನೃತ್ಯ.. ಎಲ್ಲವೂ ಸೊಗಸು.. !

















ಟುರ್ ಟುರ್ ಟ್ರ್ರಾ ಎಂದು ಸದ್ದು ಮಾಡುತ್ತಾ ಮತ್ತೆ ಹಿಂದೆ ತಿರುಗಿ ನೋಡದೆ ಜೋಗಿ ಸಿದ್ಧರು ಆ ಊರಿನ ಬೀದಿ ಹಾದು ಹೋದರು.. 

****
"ಮಗು ಪ್ರಭಾಕರ.. ಪ್ರಭಾಕರ ಏಳಪ್ಪ.. ಬೇಗ ಎದ್ದು ಸ್ನಾನ ಮಾಡಿ.. ಸಂಧ್ಯಾವಂದನೆ ಮಾಡಿ.. ಆ ಗುಡಿಯಲ್ಲಿ ಲಲಿತಾ ಸಹಸ್ರ ನಾಮ ಹೇಳಿ ಬಾರಪ್ಪ"

ಕಣ್ಣುಜ್ಜುತ್ತಾ ಎದ್ದ ಮುದ್ದು ಪ್ರಭಾಕರ ... ಸುತ್ತ ನೋಡಿದ.. ತಮ್ಮ ಪುಟ್ಟಣ್ಣ, ನರಸಿಂಹ ಶಾಸ್ತ್ರಿ ತನ್ನ ಹೊದ್ದಿಕೆಯನ್ನೇ ಹಂಚಿಕೊಂಡು ಇನ್ನೂ ಮಲಗಿದ್ದಾರೆ.. ಅವರ ಮುದ್ದು ಮುಖ ನೋಡುತ್ತಾ.. ಇಬ್ಬರ ಕೆನ್ನೆಯನ್ನೊಮ್ಮೆ ಸವರಿ.. ಪ್ರಾತಃಕರ್ಮ ಮುಗಿಸಲು ಹೊರಟ. ಮನಸ್ಸು ಹಗುರಾಗಿತ್ತು.. ತಾನು ಕಂಡದ್ದು ಕನಸೋ ನನಸೋ ಅರಿವಾಗಲಿಲ್ಲ.... 

ಆದರೆ ಕನ್ನಡ ಕುಲಕೋಟಿಗೆ ಅದ್ಭುತ ಸಾಹಿತಿ ಸಿಗುತ್ತಾರೆ.. ತಾಯಿ ಭುವನೇಶ್ವರಿಗೆ ಅಕ್ಷರಗಳ ಪೂಜೆ ಸಲ್ಲಿಸಲು ಅದ್ಭುತ ಬರಹಗಾರ ಬೆಳ್ಳಿ ಪರದೆಯನ್ನು ಬೆಳಗುತ್ತಾರೆ ಎನ್ನುವ ಸೂಚನೆ ಸಿಕ್ಕ ಕನಸು ಮುಂದೆ ನನಸಾಗಿದ್ದು ಇತಿಹಾಸ.. 

*****

ಕಣಗಾಲ್ ಊರಿನ ಸುಂದರ ದೃಶ್ಯ 

ಆಡಿ ಬೆಳೆದ ಮನೆ ಹಲವಾರು ಕನಸಿನ ತಾಣವಿದು 

ಕನಸು ಹೊತ್ತು ಓಡಾಡಿದ ಬೀದಿ 

ಆ ಶಕ್ತಿಗಳು ಬೆಳೆದ ಮನೆಯಂಗಳದಲ್ಲಿ ಈ ಜೀವಿಯೂ ಕೂತಿತ್ತು ಎನ್ನುವ ಹೆಮ್ಮೆ 

ಹೌದು ಸರ್ ನಾನೇ ನರಸಿಂಹ ಶಾಸ್ತ್ರಿ ಕಣಗಾಲ್ ಸಹೋದರರಲ್ಲಿ ನಾನು ಒಬ್ಬ 

ಶ್ರೀ ನರಸಿಂಹ ಶಾಸ್ತ್ರಿಗಳ ಜೊತೆಯಲ್ಲಿ ನಮ್ಮ ಸ್ನೇಹಿತರು 

ಆ ದಿವ್ಯಶಕ್ತಿಯ ಜೊತೆಯಲ್ಲಿ 
(ವಿಜಯದಶಮಿಯಂದು ಅಕ್ಟೋಬರ್ ೧೯ ೨೦೧೮ ರವೀಂದ್ರ ಕಲಾಕ್ಷೇತ್ರದಲ್ಲಿ ನಾದ ನಮನ ಎಂದು ಶ್ರೀ ಕಣಗಾಲ್ ಪ್ರಭಾಕರ್ ಶಾಸ್ತ್ರೀ ಅವರ ಅಮರ ಗೀತೆಗಳನ್ನು ಹಾಡಿ ರಂಜಿಸಿದ ಸಕಿ ಸಮೂಹ ಸಂಸ್ಥೆಗಳ ಅದ್ಭುತ ಕಾರ್ಯಕ್ರಮವನ್ನು ನೋಡುತ್ತಾ ಹೋದ ಹಾಗೆ ಸುಮಾರು ನಾಲ್ಕು ವರ್ಷಗಳ ಹಿಂದೆ.. ಶ್ರೀ ಪುಟ್ಟಣ್ಣ ಕಣಗಾಲ್ ಅವರ ಮನೆಯನ್ನು ಹುಡುಕುತ್ತಾ ಹೋಗಿ ಅವರು ಓಡಾಡಿದ ಮನೆ.. ದೇವಸ್ಥಾನ.. ಅವರು ಹೆಜ್ಜೆ ಇಟ್ಟು .. ಚಿತ್ರ ಜಗತ್ತಿನಲ್ಲಿ ಹೆಜ್ಜೆ ಗುರುತು ಮೂಡಿಸಿದ ಆ ರಸ್ತೆ.. ಅವರ ತಮ್ಮ ಶ್ರೀ ನರಸಿಂಹ ಶಾಸ್ತ್ರೀ ಅವರನ್ನು ರಾಮನಾಥಪುರದ ಅವರ ಮನೆಯಲ್ಲಿ ಭೇಟಿ ಮಾಡಿ ಬೆಳ್ಳಿಮೋಡ ಚಿತ್ರ ರೂಪುಗೊಂಡ ಅದ್ಭುತ ಕತೆಯನ್ನು ಅವರ  ಬಾಯಲ್ಲಿ ಸುಮಾರು ಒಂದೂವರೆ ಘಂಟೆ ಕೇಳಿದ್ದು .. ಅವರಿಗೆ ಪ್ರವರ ಹೇಳುತ್ತಾ ನಮಸ್ಕರಿಸಿದ್ದು ಹಾಗೆ ಕಣ್ಣ ಮುಂದೆ ಬಂತು.. ಅದೇ ಗುಂಗಿನಲ್ಲಿ ಮೂಡಿದ ಲೇಖನವಿದು ..ಓದಿರಿ ನಲಿಯಿರಿ..ಆಶೀರ್ವದಿಸಿ!!!)