Thursday, November 2, 2017

ಟಿ ಎನ್ ಬಾಲಕೃಷ್ಣ... ಕಣ್ತೆರೆದು ನೋಡಪ್ಪ ಎಂದರು (ಚಿತ್ರ - ೨)

"ಏನೋ ... ಏನಪ್ಪಾ ಕಾಂತಪ್ಪ.. ಹೇಗಿದ್ದೀಯಾ.. ನನ್ನ  ಚಿತ್ರಗಳ ಬಗ್ಗೆ ಬರೀತೀಯ ಅಂತ ಹೇಳಿದ್ದೆ.. ಬೂತಯ್ಯನ ಬುಂಡೇಕ್ಯಾತ ಆದ ಮೇಲೆ ಮತ್ತೆ ನೀ ನನಗೆ ಕಾಣಲಿಲ್ಲ.. ಶುರು ಮಾಡೋಣ ಮುಂದಿನ ಚಿತ್ರವನ್ನ... "

"ಬಾಲಣ್ಣ ಖಂಡಿತ.. ನಾನೂ ಯಾವುದೋ ಜಂಜಾಟದಲ್ಲಿ ಸಿಕ್ಕಿದ್ದೇ .. ಈಗ ಮತ್ತೆ ಚಾಲನೆ .. ಇನ್ನು ಮುಂದೆ ಇದು ಅವಿರತವಾಗಿ ನೆಡೆಯುವಂತೆ ಆಶೀರ್ವದಿಸಿ.. "

"ನಾ ಜೊತೆ ಇದ್ದೀನಪ್ಪಾ.. ಮುಂದುವರೆಸು .. ನಿನ್ನ  ಜೊತೆಯಲ್ಲಿ ಕೂತು ನನಗೂ ನನ್ನ  ಚಿತ್ರಗಳನ್ನ ಇನ್ನೊಮ್ಮೆ ನೋಡಿದ ಹಾಗೆ ಆಗುತ್ತದೆ.. ಅಂದ ಹಾಗೆ ಇವತ್ತು ಯಾವ ಚಿತ್ರದ ಬಗ್ಗೆ ಮಾತಾಡೋಣ.. "

"ಬಾಲಣ್ಣ .. ಖಳನಾಯಕರು ಅನೇಕರು ಚಿತ್ರರಂಗದಲ್ಲಿ ಬೆಳೆದಿದ್ದಾರೆ.. ಬೆಳೆಸಿದ್ದಾರೆ.. ಆದರೆ ಸದಾ ಕಾಡುವುದು ನಿಮ್ಮ ದಾಸಣ್ಣ ಪಾತ್ರ"

"ಓಹೋ ಕಣ್ತೆರದು  ನೋಡು ಅಂತೀಯಾ.. ." ತಮ್ಮ ಶೈಲಿಯಲ್ಲಿ ಗಹಗಹಸಿ ನಕ್ಕರು.. 

"ಹೇಳಿ ಬಾಲಣ್ಣ ಆ ಪಾತ್ರದ ಬಗ್ಗೆ ಮತ್ತು ಕೆಲವು ಪಂಚ್ ಸಂಭಾಷಣೆಗಳೊಂದಿಗೆ.. "

" ಮನುಷ್ಯ ಅವಕಾಶವಾದಿ ಸಮಯಕ್ಕೆ ಸಿಕ್ಕ ಅವಕಾಶವನ್ನು ತನ್ನ ಅವಶ್ಯಕತೆಗೆ ಬಳಸಿಕೊಳ್ಳುತ್ತಾ ಸಾಗುತ್ತಾನೆ.. ಅವನು ಆ ಹಾದಿಯಲ್ಲಿ ಸಾಗುವಾಗ ತಪ್ಪು ಒಪ್ಪುಗಳ ಪರಿವೆ ಇರೋಲ್ಲ.. ತಾ ಸಾಗಬೇಕು ಬಾಳಬೇಕು.. ಅದು  ಹೇಗಾದರೂ ಸರಿ.. ಅಂತಹ ತತ್ವವನ್ನು ನಂಬಿದ ಪಾತ್ರ ದಾಸಣ್ಣನದು.. 

ಈ ಚಿತ್ರದ ಪಾತ್ರದ ಬಗ್ಗೆ ಹೇಳಿದಾಗ ನನಗೆ ಕೊಂಚ ಅಳುಕಿತ್ತು... ಕುಂಟು ನೆಡೆಯ, ವಕ್ರ ಬುದ್ದಿಯ.. ಸದಾ ತಾನಾಡುತ್ತಿರುವ ಮಾತಿಗಿಂತ, ಇರುವ ಸನ್ನಿವೇಶವನ್ನು ದಾಟಿ ಯೋಚಿಸುವ ಪಾತ್ರ.. ನನಗೆ ಆಗುತ್ತದೆಯಾ ಈ ಪಾತ್ರ  ಎನ್ನುವ ಅಳುಕಿತ್ತು.. ಆದರೆ ಉಳಿಯಬೇಕು ಎಂದರೆ ಪಾತ್ರಗಳು ಬೇಕು ಎನ್ನುವಂತಿದ್ದ ಕಾಲಘಟ್ಟ ಅದು.. ಸರಿ ಆಗಿದ್ದಾಗಲಿ ಎಂದು ಒಪ್ಪಿಕೊಂಡೆ.. ಇನ್ನೊಂದು  ವಿಷಯ ಗೊತ್ತಾ ಕಾಂತಪ್ಪ... ಅಲ್ಲಿಯ ತನಕ ನಾ ಮಾಡುತ್ತಿದ್ದುದು ಸ್ವಲ್ಪ ವಿಚಿತ್ರವಾದ ಈ ರೀತಿಯ ಪಾತ್ರಗಳೇ.. ಆದರೆ ಈ ದಾಸಣ್ಣ ಪಾತ್ರ.. ಸೀಸದ ಕಡ್ಡಿ ಅದೇ ಗೊತ್ತಲ್ಲ ನಿಮ್ಮ ಭಾಷೆಯ ಪೆನ್ಸಿಲ್.. ಅದನ್ನು ಚೂಪು ಮಾಡಿದಂತೆ ಈ ಪಾತ್ರ ನನ್ನ ಅನೇಕ ಪಾತ್ರಗಳ ಸಾರವನ್ನು ಭಟ್ಟಿ ಇಳಿಸಿದಂತೆ ಸೃಷ್ಟಿಯಾಗಿತ್ತು.. ಸರಿ ಮಾಡಿಯೇ ಬಿಡೋಣ ಅಂತ ನಿರ್ಧಾರವಾಯಿತು.. ತಗೋ ಆ ಚಿತ್ರದ ಪಾತ್ರದ ಬಗ್ಗೆ ಮಾತಾಡೋಣ.. !



*****

ಗೋಪು ಪಾತ್ರ ರಾಜಣ್ಣ ಮಾಡಿದ್ದು.. ಬಾಲ್ಯದಲ್ಲಿ ಕುರುಡಾಗಿದ್ದ ಕಣ್ಣುಗಳನ್ನು ಸರಿ ಪಡಿಸಿಕೊಳ್ಳಲು ದೋಣಿಯಲ್ಲಿ ಬರುವಾಗ.. ಅಲೆಗಳಿಗೆ ಸಿಕ್ಕಿ ದೋಣಿ ಮಗುಚಿ.. ತಂದೆ ಕಾಲವಾಗುತ್ತಾರೆ.. ತಂಗಿ ಮತ್ತು ಗೋಪು ಬೇರೆಯಾಗುತ್ತಾರೆ.. ನದಿಯ ದಡದಲ್ಲಿದ್ದ ಗೋಪುವಿನ ಹತ್ತಿರ ಬರುವ ದಾಸಣ್ಣ.. ಮೊದಲು ಗೋಪು ಬದುಕಿದ್ದಾನೋ ಇಲ್ಲವೋ ಪರೀಕ್ಷಿಸಿ ನಂತರ.. 

"ಏಳೋ ಅಣ್ಣ.. ಏನಪ್ಪಾ ಇಲ್ಲಿ ಬಿದ್ದಿದೀಯ.. " ಎಂದು ಕೇಳುತ್ತಾ ಗೋಪುವನ್ನು ಎಬ್ಬಿಸುತ್ತಾನೆ.. ಅವನಿಗೆ ಕಣ್ಣು ಕಾಣುವುದಿಲ್ಲ ಎನ್ನುವ ಸತ್ಯವನ್ನು ಪರೀಕ್ಷಿಸಲು... ಅವನನ್ನು ನೆಡೆಯಲು ಬಿಟ್ಟು.. ತಾನು ಒಂದು ಬದಿಯಲ್ಲಿ ಎತ್ತರದಲ್ಲಿ ಕೂರುತ್ತಾನೆ.. ಎಡವಿ ಬೀಳುವ ಗೋಪುವನ್ನು ಮತ್ತೆ ಹಿಡಿದೆತ್ತಿ.. "ನಿಜ ಕಣೋ ಅಣ್ಣ..  ನಿನಗೆ ಸತ್ಯವಾಗಿ ಕಣ್ಣು ಕಾಣೋಲ್ಲ.. " ಎಂದು ಹೇಳುತ್ತಾ  ತನ್ನ ಮನೆಗೆ ಕರೆತರುತ್ತಾನೆ.. 

ಅಲ್ಲಿಂದ ಶುರು ದಾಸಣ್ಣನ ಅವತಾರ.. 

ಬೆಳಿಗ್ಗೆ  ಎದ್ದು ಕೂತಾಗ.. ಗೋಪು "ಏನಣ್ಣ ಇದೇನಾ ನಿನ್ನ ಮನೆ"

"ಹೌದಪ್ಪ ಇದೆ ನನ್ನ ಮನೆ.. ಆಡಳಿತ ಮಾತ್ರ ಒಂದು  ಪಿಶಾಚಿಯದು".. 

ಅಷ್ಟರಲ್ಲಿ ಮನೆಯ ಒಡತಿ ಬರುತ್ತಾಳೆ.. "ಮೊದಲು ಬಾಡಿಗೆ ಬಿಸಾಕು ಆಮೇಲೆ ಮುಂದಿನ  ಮಾತು" 

"ಏಯ್.. ಯಾರ ಹತ್ತಿರಾ ಮಾತಾಡುತ್ತಿದ್ದೀಯ.. ಹೆಚ್ಚಿಗೆ ಮಾತಾಡಿದರೆ ಈ ಮನೆನೇ ನಿನ್ನದಲ್ಲ ಎನ್ನಿಸಿ ಬಿಡುತ್ತೇನೆ ಹುಷಾರ್" ಎಂದಾಗ.. 

ಮತ್ತೆ ಗದರುತ್ತಾಳೆ "ಓಹ್ ಬಂದ್ಬುಟ್ಟಾ ಇಲ್ಲೊಬ್ಬ ಪೂಟಲಾಯರಿ.. ಇದ್ಯಾರಿದು.. " 

ಹೊಳೆದಡದಲ್ಲಿ ಬಿದ್ದಿದ್ದ.. ಕರ್ಕೊಂಡು ಬಂದೆ.. ಬೇಡ ಅಂದ್ರೆ ಹೇಳು.. ಕಳಿಸಿಬಿಡುತ್ತೇನೆ.. "

ಹೀಗೆ ಸಾಗುತ್ತದೆ ಸಂಭಾಷಣೆ ವೈಖರಿ.. 

ಮನೆಯ ಒಡತಿ ತಿನ್ನಲು ತಿಂಡಿ ತಂದುಕೊಡುತ್ತಾಳೆ 

ಗೋಪು "ಅಣ್ಣ ದೇವರ ಮನೆ ಎಲ್ಲಿದೆ  ಅಣ್ಣ  ಕೈ ಮುಗಿಯಬೇಕು.. ".. ನಾನಿರಕ್ಕೆ ಜಾಗವಿಲ್ಲ.. ಅದಕ್ಕೆ ದೇವರನ್ನು ಬಯಲಿಗೆ ಬಿಟ್ಟಿದ್ದೇನೆ.. " ಎಂಥಹ ಸಂಭಾಷಣೆ.. 

ಕಟ್ಟೆಯ ಗುಡಿಗೆ ಬಂದಾಗ .. ಗೋಪು ಹಾಡಲು ಶುರು ಮಾಡುತ್ತಾರೆ.. "ಕಲ್ಲು ಸಕ್ಕರೆ ಕೊಳ್ಳಿರೋ"  ಹಾಡುತ್ತಾ ಗೋಪು ತನ್ಮಯರಾಗಿದ್ದಾಗ ಅಲ್ಲಿ ಸೇರಿದ್ದ ಜನಸಾಗರವನ್ನು ಕಂಡು ದಾಸಣ್ಣನಿಗೆ ಯೋಚನೆ ಬರುತ್ತೆ ತಕ್ಷಣ ತಲೆಗೆ ಸುತ್ತಿದ್ದ ರುಮಾಲನ್ನು ತೆಗೆದು.. ಹಾಸಿ ತನ್ನ ಜೇಬಿನಲ್ಲಿದ್ದ ಪುಡಿಗಾಸನ್ನು ಹಾಕಿ ಮಿಕ್ಕವರ ಹತ್ತಿರ ಯಾಚಿಸುತ್ತಾನೆ.. ಎಲ್ಲರೂ ಪಾಪ ಎಂದುಕೊಂಡು ಕಾಸನ್ನು ಹಾಕುತ್ತಾರೆ.. 



"ಗೋಪಣ್ಣ ದಿನ ಇಂತಹ ಪದಗಳನ್ನು ಬಿಡ್ತಾ ಇರು.. ಚಿನ್ನದ ಮಳೆಯನ್ನೇ ಸುರಿಯುತ್ತದೆ.. " ಎಂದಾಗ ಗೋಪು "ಏನಣ್ಣ .. ಈ ರೀತಿ ಸಂಪಾದಿಸಬೇಕೇ .." ಎಂದು ಕುಪಿತ ಗೊಳ್ಳುತ್ತಾನೆ.. 

"ಏಯ್ ಏನು ಮಾತಾಡ್ತಾ ಇದ್ದೀಯ. ನಾನೇನು ಬುಡುಬುಡುಕೆ ಆಡತಾ ಇದ್ದೀನ.. ಕಾಸು ಕೊಡಬೇಕು ಅಂತ ಇದ್ದೀನೇನೇಯ್ಯ.. ನಿನಗೆ ಸಹಾಯ ಮಾಡೋಣ  ಅಂದರೆ ಹೀಗಾ ಮಾತಾಡೋದು.. " ಅಂತ ದಬಾಯಿಸುತ್ತಾನೆ.. ಶಾಂತವಾದ ಗೋಪುವಿನ ಜೊತೆ ಹೋಟೆಲಿಗೆ ಬಂದು .. "ಇರೋದು ಮೂರು ಮತ್ತೊಂದು ಕಾಸು.. ಅದೇನು ಹೊಟ್ಟೆ ತುಂಬಿಕೊಳ್ಳೋದೋ" ಅಂತ ನಾಟಕ ಮಾಡುತ್ತಾ..  ಮಾಣಿಗೆ ಒಂದು ಪ್ಲೇಟ್ ಇಡ್ಲಿ ಗೋಪುವಿಗೆ ಹೇಳಿ..ಬೆಣ್ಣೆ ಮಸಾಲೆ.. . ಬಾದಾಮಿ ಹಾಲು ನನಗೆ ಕೊಡು ಅಂತ ಮೆಲ್ಲಗೆ ಹೇಳುತ್ತಾನೆ"

ಅಲ್ಲಿಂದ ಬಟ್ಟೆ ಅಂಗಡಿಗೆ ಹೋಗಿ "ಗೋಪಣ್ಣ ನಿನ್ನ ಅಂಗಿ ಹರಿದು ಹೋಗಿದೆ.. ನನ್ನ ಅಂಗಿಯನ್ನೇ ಹಾಕಿಕೋ.. ಊರೆಲ್ಲ ಬಟ್ಟೆ ಅಂಗಡಿ .. ಬೆತ್ತಲೆ ಇರುವವರನ್ನು ಕೇಳೋರಿಲ್ಲ.. " ಅಂತ ನಾಟಕೀಯವಾಗಿ ಹೇಳುತ್ತಾನೆ 

ಹೀಗೆ ಸಾಗುತ್ತದೆ ದಾಸಣ್ಣನ ಅವತಾರ.. ಬೆಣ್ಣೆ ಮೇಲೆ ಕೂದಲು ತೆಗೆದ ಹಾಗೆ ಮಾತಾಡುತ್ತಾ ತನ್ನ ಭವಿಷ್ಯವನ್ನು ಅರಸುತ್ತಾ ಸಾಗುವ ದಾಸಣ್ಣ.. ಗೋಪುವಿನ ಹಾಡಿಗೆ ಜನ ಹಾಕುವ ಕಾಸನ್ನು ಲಪಟಾಯಿಸುತ್ತಾನೆ .. ಅದನ್ನು ನೋಡಿದ ಮನೆಯ ಒಡತಿ ದಾಸಣ್ಣನನ್ನು ಮನೆಯಿಂದ ಹೊರಗೆ ಹಾಕುತ್ತಲೇ.. ಅಲ್ಲಿಂದ ಒಂದು ಪೇಪರ್ ಮಾರುವ ಅಂಗಡಿಗೆ ಬಂದು.. ಮಾರ್ವಾಡಿಗೆ ಮೋಸ ಮಾಡಿ ಆ ಪೇಪರ್ ಮಾರುವ ಅಂಗಡಿಯನ್ನು ತನ್ನದು ಮಾಡಿಕೊಳ್ಳುತ್ತಾನೆ ..ಅಲ್ಲಿ ಬಂಡಲು ಗಟ್ಟಲೆ ಬಿದ್ದಿದ್ದ  ಗೋಪುವಿನ ಸಾಹಿತ್ಯದ ಹಾಳೆಗಳನ್ನು ತನ್ನದು ಎಂದು ಹೇಳಿಕೊಂಡು.. ಆ ಅಂಗಡಿಯನ್ನು ಬಿಟ್ಟು ಪುಸ್ತಕ ಪ್ರಿಂಟ್ ಮಾಡುವ ಸಾಹಸಕ್ಕೆ ಕೈಹಾಕುತ್ತಾನೆ.. 

ಹೀಗೆ ತನ್ನ ದಾರಿಯಲ್ಲಿ ಬಂದವರಿಗೆಲ್ಲಾ ನಾಮ ಹಾಕುತ್ತಾ.. ತನ್ನ ನಾಟಕೀಯ ಮಾತುಗಳಿಂದ ಮರುಳು ಮಾಡುತ್ತಾ ಸಾಗುವ ದಾಸಣ್ಣನ ಪಾತ್ರವನ್ನು ಅಚ್ಚುಕಟ್ಟಾಗಿ ಪೋಷಿಸಿದ್ದಾರೆ.. ಅವರ ಸಂಭಾಷಣೆಯ ವೈಖರಿಗೆ ತಲೆಬಾಗಲೇ ಬೇಕು.. 

ರಾಗವಾಗಿ ಮಾತಾಡುವ ಶೈಲಿ, ಕಣ್ಣಲ್ಲೇ ಮೋಸ ಮಾಡುವ ನೋಟ.. ವಕ್ರ ದೃಷ್ಟಿ.. ಕುಂಟು ನೆಡೆ... ಹೀಗೆ ವಿಚಿತ್ರ  ಅಭಿನಯ ಬಾಲಣ್ಣನದು.. 

"ನಮ್ದುಕೆ ಹೆಣ ನಿಮ್ದುಕೆ ದಾನ" ಅಂತ ಮಾರ್ವಾಡಿ ಹೇಳಿದಾಗ "ನಿನ್ನ ಹೆಣ ಸುಡುಗಾಡಿಗೆ ದಾನ"  ಎನ್ನುತ್ತಾರೆ ದಾಸಣ್ಣ 

"ಏಯ್  ನಿನಗ್ಯಾರು ಅಕ್ಕ ತಂಗಿ ಇಲ್ವಾ" ಅಂತ ಮನೆಯೊಡತಿ ಹೇಳಿದಾಗ "ನನ್ನಪ್ಪ ಮಾಡಿದ ತಪ್ಪಿಗೆ ನನ್ಯಾಕೆ ಬಯ್ತೀಯಾ"

"ಗೋಪು.... ಅಮೃತರಾಯರು ಊರಲ್ಲಿ ಇಲ್ವಂತೆ.. ಅವರಿದ್ದಿದ್ದರೆ ಬರಿ ಕೈಯಲ್ಲಿ ಕಣ್ಣು ಕಿತ್ತು ಕಣ್ಣನ್ನು ಇಟ್ಟುಬಿಡುತ್ತಿದ್ದರು.. ಮಿಕ್ಕ ಕೆಲವರು ಇದ್ದಾರೆ.. ಅಲ್ಪ ಸ್ವಲ್ಪ ಕಾಣುವ ಕಣ್ಣನ್ನು ಇಂಗಿಸಿ ಬಿಡುತ್ತಾರೆ.. ಬೇಕಾದರೆ ಹೋಗೋಣ ಬಾ"

"ನಿನಗೆ ಕಣ್ಣು ಬಂದು ನಾ ಮಾಡುವ ಸಹಾಯ ನೋಡಿದರೆ ನನ್ನನ್ನು  ಜನುಮ ಜನುಮಕ್ಕೂ ಮರೆಯೋದಿಲ್ಲ ಕಣಣ್ಣ"

"ಹೇಗೂ ಕೈಯಲ್ಲಿ ಪರಕೆ ಹಿಡಿದಿದ್ದೀಯ ಅಂಗೇ ಕಸ ಗುಡಿಸಿಬಿಡು"  ತನಗೆ ಹೊಡೆಯಲು ಪರಕೆ ಹಿಡಿದು ಬಂದ ಮನೆಯೊಡತಿಗೆ ಹೇಳುವ ಮಾತು.. 

ಹೀಗೆ ಇಡೀ ಚಿತ್ರದಲ್ಲಿ ಈ ರೀತಿಯ ಪಂಚಿಂಗ್ ಸಂಭಾಷಣೆ ಇದ್ದೆ ಇದೆ.. ರಾಜ್, ನರಸಿಂಹರಾಜು, ಲೀಲಾವತಿ ಮತ್ತು ರಾಜ್ ತಂಗಿಯನ್ನು ಇಡೀ ಚಿತ್ರದಲ್ಲಿ ಕಾಡುತ್ತಾರೆ.. ಕುಟಿಲ ಪಾತ್ರಧಾರಿ ಹೀಗೆ ಇರಬೇಕು ಎನ್ನುವಂತೆ ಅಭಿನಯಿಸಿದ್ದಾರೆ.. ಮಾಮೂಲಿ ಖಳನಾಯಕರಂತೆ ಕೂಗುತ್ತಾ, ಕಿರುಚುತ್ತಾ, ಕೈ ಸಿಕ್ಕಿದ್ದನ್ನು ಒಡೆಯುತ್ತಾ ಇರದೇ.. ತನ್ನದೇ ವಿಶಿಷ್ಟ ಶೈಲಿಯಲ್ಲಿ ಅಭಿನಯನೀಡಿದ್ದಾರೆ .. 

ಈ ಚಿತ್ರದ ಬಗ್ಗೆ ಬರೆದಷ್ಟು .. ಈ ಪಾತ್ರದ ಬಗ್ಗೆ ಬರೆದಷ್ಟು ಮುಗಿಯುವುದಿಲ್ಲ.. ಅದಕ್ಕೆ ಕಾರಣ ಬಾಲಣ್ಣ.. ಇಡೀ ಚಿತ್ರವನ್ನು ಅಕ್ಷರಶಃ ತಮ್ಮ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ.. ಚಿತ್ರದ ನಾಯಕ ರಾಜ್ ಆಗಿದ್ದರೂ.. ಬಾಲಣ್ಣ ಅವರ ಅಭಿನಯಕ್ಕೆ, ಸಂಭಾಷಣೆಗಾಗಿ ಹಲವಾರು  ಬಾರಿ ನೋಡಿದ್ದೇನೆ.. ಆದರೂ ಪ್ರತಿಸಾರಿ ನೋಡಿದಾಗಲೂ ಬಾಲಣ್ಣ ಅವರ ಅಭಿನಯದ ವಿಭಿನ್ನ ಆಯಾಮ ಕಾಣುತ್ತದೆ.. ! 

ದಾಸಣ್ಣನ ಪಾತ್ರದ ಬಗ್ಗೆ ಎಷ್ಟು ಪರಿಣಾಮಕಾರಿಯಾಗಿದೆ ಅಂದರೆ ಇನ್ನೊಂದು ಚಿತ್ರದಲ್ಲಿ ಬಾಲಣ್ಣ  .. "ನನ್ನ ಬಗ್ಗೆ ನಿನಗೆ ಸರಿಯಾಗಿ ತಿಳಿಯಬೇಕೆಂದರೆ ಕಣ್ತೆರದು ನೋಡಬೇಕು ಅಣ್ಣ" ಎನ್ನುತ್ತಾರೆ.. 

ಆ ಮಟ್ಟಿಗೆ ಈ ಚಿತ್ರ ಮತ್ತು ಪಾತ್ರ ಯಶಸ್ವಿಯಾಗಿದೆ.. !

ಖಳಪಾತ್ರದಲ್ಲಿಯೂ ಹಾಸ್ಯ ಉಕ್ಕಿಸಬಹುದು ಎಂದು ತೋರಿಸಿದ ಈ ಪಾತ್ರವನ್ನು ಬಾಲಣ್ಣ ಬಿಟ್ಟರೆ ಮತ್ಯಾರು ಇಷ್ಟು ಪರಿಣಾಮಕಾರಿಯಾಗಿಸಲು ಸಾಧ್ಯವಿರಲಿಲ್ಲ .. 

ಬಾಲಣ್ಣ ನಿಮ್ಮ ಜನುಮದಿನಕ್ಕಿಂದು ಒಂದು ಸುಂದರ  ಶುಭಾಷಯ ಕೋರೋಣ ಅಂದುಕೊಂಡಾಗ ಮೂಡಿದ್ದು ಈ ಲೇಖನ!!!

ನೀವು  ಕರುನಾಡ ಚಿತ್ರ ರಸಿಕರ ಹೃದಯದ ಸಾಮ್ರಾಜ್ಯದಲ್ಲಿ ಅಜರಾಮರ.. !