ಮನುಷ್ಯ ಯಾವ ಹಂತದಲ್ಲಿ ಹೇಗೆ ಬೆಳೆಯುತ್ತಾನೆ, ಯಾಕೆ ಬೆಳೆಯುತ್ತಾನೆ ಇದು ಚಿದಂಬರ ರಹಸ್ಯ. ಅದನ್ನು ಅರಿತವ ದೇವತ್ವ ಹೊಂದುತ್ತಾನೆ.. ಅದು ಸಾಧ್ಯವೇ ಎಂದು ನಮ್ಮನ್ನೇ ಪ್ರಶ್ನಿಸಿಕೊಳ್ಳುತ್ತಲೇ ಸಾಗುವ ನಮ್ಮ ಜೀವನ ಎಲ್ಲೋ ಹುಟ್ಟಿ ಎಲ್ಲೋ ಕಡಲನ್ನು ಸೇರುವ ನದಿಯ ಹಾಗೆ ಸಾಗುತ್ತಲೇ ಇರುತ್ತದೆ.
ಸತತವಾಗಿ ನಾಲ್ಕನೇ ಚಿತ್ರದಲ್ಲಿ ರಾಜ್ ಮತ್ತು ಪಂಡರಿಬಾಯಿ ನಾಯಕ ನಾಯಕಿಯಾಗಿ ತೆರೆಗೆ ಬಂದರು. ಟಿ ವಿ ಸಿಂಗ್ ಠಾಕೂರ್ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರ. ಕರ್ನಾಟಕ ಫಿಲಂಸ್ ಲಾಂಛನದಲ್ಲಿ ಜಿ ಎನ್ ವಿಶ್ವನಾಥ್ ಶೆಟ್ಟಿ ಮತ್ತು ಟಿ ವಿ ಸಿಂಗ್ ಠಾಕೂರ್ ರವರ ನಿರ್ಮಾಣದಲ್ಲಿ ಉದಯಿಸಿತು.
ಮಕ್ಕಳಿಲ್ಲದ ದಂಪತಿಗಳು ಸುಸಂತಾನಕ್ಕೆ ವ್ರತವನ್ನು ಹೇಳಿಕೊಡುವ ದೃಶ್ಯದಿಂದ ತೆರೆದುಕೊಳ್ಳುವ ಈ ಚಿತ್ರ.. ಗುರುಗಳು ಹೇಳುತ್ತಾರೆ.. ವ್ರತ ಭಂಗವಾಗಬಾರದು.. ವ್ರತ ಭಂಗವಾದರೆ ಸುಪುತ್ರ ಕಂಠಕವಾಗುತ್ತಾನೆ ಎನ್ನುವ ಮಾತನ್ನು ಹೇಳುತ್ತಾರೆ., "ದೇವರಿಲ್ಲದ ಗುಡಿ ಮಕ್ಕಳಿಲ್ಲದ ಮನೆ" ಎಂದು ಹೇಳುವ ಮಾತು ಇಷ್ಟವಾಗುತ್ತದೆ.
ಈ ಚಿತ್ರಗಳಲ್ಲಿ ಹದಿಮೂರು ಹಾಡುಗಳು ಇವೆ (ಚಿಕ್ಕದು, ದೊಡ್ಡದು ಎಲ್ಲವೂ ಸೇರಿ), ವಿಲಾಸಿ ಜೀವನದಿಂದ ಪಾರಮಾರ್ಥಿಕ ಜೀವನದ ಕಡೆ ಹೆಜ್ಜೆ ಹಾಕಿಸುವ ಈ ಚಿತ್ರದಲ್ಲಿ ರಾಜ್ ಮತ್ತೊಮ್ಮೆ ತಮ್ಮ ಅಭಿನಯದಿಂದ ತೂಗಿಸಿಕೊಂಡು ಹೋಗುತ್ತಾರೆ. ಮಾತಾ ಪಿತೃಗಳನ್ನು ತುಚ್ಛವಾಗಿ ಕಾಣುವುದು, ಕಟ್ಟಿಕೊಂಡ ಹೆಂಡತಿಯನ್ನು ದೂಷಿಸುವುದು, ಪರಸ್ತ್ರೀ ಸಂಗ, ದಾರಿ ತಪ್ಪಿಸುವ ಕೆಟ್ಟ ಸ್ನೇಹಿತನನ್ನೇ ದೇವರು ಎಂದು ಭಾವಿಸುವುದು , ಬುದ್ದಿ ಹೇಳಲು ಬಂದ ಬಾಲ್ಯ ಸ್ನೇಹಿತನನ್ನು ದೂರ ಅಟ್ಟುವುದು.. ಎಲ್ಲದರಲ್ಲಿಯೂ ಅಭಿನಯ ಅಮೋಘವಾಗಿದೆ.. ಚಿತ್ರದಿಂದ ಚಿತ್ರಕ್ಕೆ ಅವರ ಅಭಿನಯ ಏರುಮುಖ ಏರುತ್ತಿರುವುದರ ಸಾಕ್ಷಿ ಈ ಚಿತ್ರದಲ್ಲಿ ಸಿಗುತ್ತದೆ.
ವಿಲಾಸಿ ಜೀವನ, ಅಂತಸ್ತಿನ ಅಹಂ, ಕೆಟ್ಟ ಸ್ನೇಹಿತ, ದಾರಿ ತಪ್ಪಿಸುವ ಸ್ತ್ರೀ ವ್ಯಾಮೋಹ ಇವೆಲ್ಲವೂ ಕಣ್ಣನ್ನು ಕುರುಡಾಗಿಸಿ, ಹೆಜ್ಜೆ ಹಾಕ ಬೇಕಾದ ಹಾದಿ ತಡವರಿಸುವ ಹಾಗೆ ಮಾಡುತ್ತದೆ.. ಆದರೆ ಕೈ ಖಾಲಿಯಾದಾಗ ನಿಧಾನವಾಗಿ ಅವಕಾಶವಾದಿ ವಸ್ತುಗಳು ತಮ್ಮ ಬೇಳೆ ಬೇಯಿಸಿಕೊಂಡು ಜಾಗ ಖಾಲಿಮಾಡುತ್ತಾರೆ.. ಆಗ ಜೇವನದ ಅರಿವು ಸಿಗುತ್ತದೆ. ಈ ಪುಟ್ಟ ಆದರೆ ದೊಡ್ಡ ಸಂದೇಶವನ್ನು ಚಿತ್ರದುದ್ದಕ್ಕೂ ಕಾಣಿಸುತ್ತಲೇ ಹೋಗುತ್ತಾರೆ.
ಸುಸಂತಾನಕ್ಕೆ ವ್ರತಕ್ಕೆ ಕೂತ ದಂಪತಿಗಳು.. ಲೋಕದ ಕುಹಕ ಮಾತಿಗೆ ನೊಂದು ವ್ರತ ಭಂಗಮಾಡಿಕೊಳ್ಳುತ್ತಾರೆ. ನಂತರ ಜನರಿಲ್ಲದ ತಾಣಕ್ಕೆ ಹೋಗಿ ಶ್ರದ್ಧೆಯಿಂದ ವ್ರತ ಮಾಡಿದರೂ ಕೂಡ, ಮೊದಲೇ ಭಂಗವಾಗಿದ್ದ ವ್ರತದಿಂದ ಹುಟ್ಟುವ ಸಂತಾನವೇ ಹರಿ. ಬಾಲ್ಯದಿಂದಲೂ ದುಷ್ಟಬುದ್ದಿಯಿಂದ ವರ್ತಿಸುವ ಈ ಬಾಲಕ ಬೆಳೆಯುತ್ತಾ ಹೋದ ಹಾಗೆ ಹಠ, ಸಿಟ್ಟು, ದ್ವೇಷ, ಮದಿರೆ, ಮಾನಿನಿ ಇವುಗಳ ದಾಸನಾಗುತ್ತಾನೆ. ಜೊತೆಯಲ್ಲಿ ದಾರಿ ತಪ್ಪಿಸಲು ಸಿಗುವ ಸ್ನೇಹಿತ, ತನ್ನ ಲಾಭಕ್ಕೆ ಏನು ಬೇಕೋ ಅದನ್ನು ನೆರವೇರಿಕೊಳ್ಳಲು ಹರಿಯನ್ನು ಉಪಯೋಗಿಸಿಕೊಳ್ಳುತ್ತಾನೆ.
ಮದಿರೆಯ ಅಮಲಿನಲ್ಲಿ ಮನೆಯ ಸಮಸ್ತ ಆಸ್ತಿ, ಧನ, ಕನಕ, ಮನೆ ಎಲ್ಲವನ್ನು ಬರೆದುಕೊಟ್ಟು ನಿರ್ಗತಿಕನಾಗುತ್ತಾನೆ. ಅದಕ್ಕಿಂತ ಮೊದಲು, ನಾರಿ ಸ್ನೇಹ ಬೇಡ ಎಂದು ಹೇಳಿದ ತಂದೆ ತಾಯಿಯರನ್ನು ಜರೆದು, ಮಡದಿಯನ್ನ, ತನ್ನ ಸ್ನೇಹಿತನನ್ನು ಮನೆಯಿಂದ ಹೊರಗೆ ಅಟ್ಟುತ್ತಾನೆ, ನಂತರ ನಾರೀಮಣಿಯನ್ನು ಓಲೈಸಿಕೊಳ್ಳಲು ಹೋದಾದ, ನಿರ್ಗತಿಕನಾದ ನಿನ್ನ ಸಂಗ ಮಾಡಿ ಏನು ಉಪಯೋಗ ಎಂದು ಅಣಕಿಸುತ್ತಾಳೆ. ಇದರಿಂದ ನೊಂದ ಹರಿ, ಗುರುವನ್ನು ಹುಡುಕುತ್ತಾ ಹೊರಡುತ್ತಾನೆ, ಹಾದಿಯಲ್ಲಿ ಮತ್ತೆ ಲೋಕದ ಜನರ ಛೀಮಾರಿ, ಕುಹಕ, ಇದೆಲ್ಲದರಿಂದ ನೊಂದ ಹರಿ ಕಾಡುಪಾಲಾಗುತ್ತಾನೆ. ಅಲ್ಲಿ ತಪಸ್ಸು ಮಾಡುತ್ತಾ, ಹೊಟ್ಟೆ ಹೊರೆದುಕೊಳ್ಳಲು ಭಿಕ್ಷಾವೃತ್ತಿ ಮಾಡುತ್ತಾನೆ.
ಆದರೂ ಅವನ ಅಹಂ ತಕ್ಕ ಮಟ್ಟಿಗೆ ಇದ್ದೆ ಇರುತ್ತದೆ.. ಕಾಲಾನಂತರ ತಂದೆ ತಾಯಿಯರು ಸಿಗುತ್ತಾರೆ, ಆ ಹೊತ್ತಿಗೆ ಅಲ್ಪ ಸ್ವಲ್ಪ ಅಹಂ ಜಾಗ ಖಾಲಿ ಮಾಡಿರುತ್ತದೆ, ತಂದೆ ತಾಯಿಯ ಸೇವೆಯ ಪರಮ ಸೇವೆ ಮಿಕ್ಕದ್ದು ತೃಣ ಸಮಾನ ಎಂದು ನಂಬಿಕೊಂಡು, ಅವರ ಸೇವೆಯಲ್ಲಿಯೇ ಕಾಲ ಕಳೆಯುತ್ತಾನೆ. ಅವನ ಪರೀಕ್ಷಿಸಲು ವಿಠಲನೇ ಬಂದರು, ಈಗ ಮಾತಾ ಪಿತೃಗಳ ಸೇವಾ ಸಮಯ ಬೇಕಿದ್ದರೆ ನನಗೆ ಕಾಯಬಹುದು ಎಂದು ಒಂದು ಇಟ್ಟಿಗೆಯನ್ನು ಎಸೆದು ಅದರ ಮೇಲೆ ವಿಶ್ರಮಿಸು ಎನ್ನುತ್ತಾನೆ.
ಹರಿಯ ನಿಷ್ಠೆಗೆ ಮೆಚ್ಚಿದ ವಿಠಲ ಅವನನ್ನು ಅನುಗ್ರಹಿಸುತ್ತಾನೆ. ಮಡದಿ ಸ್ನೇಹಿತ ಎಲ್ಲರ ಜೊತೆಯಲ್ಲಿ ಸಂಭ್ರಮಿಸುತ್ತಾನೆ.
ಹೀಗೆ ನಿಲ್ಲುವ ಈ ಚಿತ್ರದಲ್ಲಿ ದಾರಿ ತಪ್ಪಿಸುವ ಸ್ನೇಹಿತನಾಗಿ ಜಿ ವಿ ಅಯ್ಯರ್ ಮತ್ತೊಮ್ಮೆ ಬೆಳಗುತ್ತಾರೆ.
ಕಟುಕತನ, ಘಾತುಕತನ, ವಿಶ್ವಾಸ ದ್ರೋಹ, ಕುಹಕ ಮಾತುಗಳು ಎಲ್ಲವನ್ನು ಆವಾಹಿಸಿಕೊಂಡು ಅಭಿನಯಿಸಿರುವ ಶೈಲಿ ಭಲೇ ಭಲೇ ಎನ್ನುವಂತೆ ಮಾಡುತ್ತದೆ.
ದಾರಿ ತೋರುವ ಸ್ನೇಹಿತನಾಗಿ ನರಸಿಂಹರಾಜು ಲವಲವಿಕೆಯಿಂದ ಅಭಿನಯಿಸಿದ್ದಾರೆ.
"ಕೆಲಸ ಆದ ಮೇಲೆ ತಾನೇ ಕೈ ಕೊಡುವುದು"
"ಚಂದ್ರ ಮನೆಗೆ ರಾಹಿ ಹೊಕ್ಕ ಹಾಗೆ"
ಜಿ ವಿ ಅಯ್ಯರ್ ಅವರಿಗೆ ಹೇಳುವ ಮಾತು "ಅಯ್ಯ ವಿಷಕಂಠ ನಿನ್ನನ್ನು ಎಲ್ಲಯ್ಯ ಇಟ್ಟು ಪೂಜೆ ಮಾಡುವುದು" ಅಂದರೆ
ಜಿ ವಿ ಅಯ್ಯರ್ "ನವಗ್ರಹ ಮಧ್ಯೆ ಇತ್ತು ಬಿಲ್ವ ಪತ್ರೇಲಿ ಪೂಜೆ ಮಾಡು"
ಎಷ್ಟು ಸೊಗಸಾಗಿದೆ ಈ ಸಂಭಾಷಣೆ..
ಪಂಡರಿಬಾಯಿ ಮಡದಿಯಾಗಿ ತಮ್ಮ ಅಭಿನಯ ಛಾಪನ್ನು ಮತ್ತೆ ಒತ್ತಿದ್ದಾರೆ, ಇನ್ನು ಉಳಿದ ಪಾತ್ರಧಾರಿಗಳು ಕಥೆಗೆ ಮತ್ತು ಪಾತ್ರಕ್ಕೆ ತಕ್ಕಷ್ಟು ಮುಳುಗಿದ್ದಾರೆ.
ಒಂದು ಉತ್ತಮ ಚಿತ್ರ, ಅಷ್ಟೇ ಉತ್ತಮ ಸಂದೇಶ.. ರಾಜ್ ಚಿತ್ರಗಳಲ್ಲಿ ಭಕ್ತಿ ಭಾವ ಹೊಮ್ಮಿಸುವ ಚಿತ್ರಗಳ ಸಾಲಿನಲ್ಲಿ ಈ ಚಿತ್ರವೂ ನಿಲ್ಲುತ್ತದೆ.
ಭರಪೂರ ಹಾಡುಗಳ ಸುಗ್ಗಿಯೇ ಈ ಚಿತ್ರದಲ್ಲಿ ಇದೆ ಆದರೆ ಕಡೆಯಲ್ಲಿ ಬರುವ "ದೇವಾ ದರುಶನವ ನೀಡೆಯಾ" ಮನ ಸೆಳೆಯುತ್ತದೆ.
ಹರಿ ಹರಿ ಎನ್ನುತ್ತಲೇ ಮನದ ಅರಿಯನ್ನು ದೂರ ಮಾಡುವ ಚಿತ್ರ ಕರುನಾಡ ತಾಯಿಯ ಚರಣ ಕಮಲಗಳಲ್ಲಿ ಕುಸುಮವಾಯಿತು.
ಮತ್ತೊಮ್ಮೆ ಬರುವೆ . ರಾಜ್ ಚಿತ್ರದ ಜೊತೆಯಲ್ಲಿ!!!