ಕರುನಾಡಿನ ಚಿತ್ರರಂಗ ಅರಳುತ್ತಿದ್ದ ಸಮಯ. ಆಗಲೇ ಅನೇಕ ನುರಿತ ಕಲಾವಿದರು ಬೆಳ್ಳಿತೆರೆಯನ್ನು ಆವರಿಸಿದ್ದರು. ಭಕ್ತಿಪ್ರಧಾನ ಚಿತ್ರಗಳು, ಸಾಮಾಜಿಕ ಚಿತ್ರಗಳು, ಐತಿಹಾಸಿಕ ಚಿತ್ರಗಳು ಮೆಲ್ಲ ಮೆಲ್ಲನೆ ಹೆಜ್ಜೆ ಮೂಡಿಸುತ್ತಿದ್ದ ಕಾಲಘಟ್ಟ ಅದು.
ಅಂತಹ ಸಮಯದಲ್ಲಿ ಮೊದಲ ಸಾಮಾಜಿಕ ಚಿತ್ರವನ್ನು ತೆರೆಗೆ ಇತ್ತ ಕರುನಾಡ ರಂಗಭೂಮಿಯ ಪಿತಾಮಹರಲ್ಲಿ ಒಬ್ಬರಾದ ಗುಬ್ಬಿ ವೀರಣ್ಣ ಅವರ ನಿರ್ಮಾಣ ಸಂಸ್ಥೆಯಿಂದ ಮೂಡಿಬಂದ ಚಿತ್ರ ಬೇಡರ ಕಣ್ಣಪ್ಪ.
ಬಿಡುಗಡೆಗೊಂಡ ದಿನಾಂಕ : ೭ ಮೇ ೧೯೫೪
ನಿರ್ಮಾಣ : ಗುಬ್ಬಿ ವೀರಣ್ಣ ಕರ್ನಾಟಕ ಪ್ರೊಡಕ್ಷನ್ಸ್
ನಿರ್ದೇಶನ : ಎಚ್ ಎಲ್ ಏನ್ ಸಿಂಹ
ಹಾಡುಗಳು : ಲಾವಣಿ ವಿಧ್ವಾನ್ ಎಸ್ ನಂಜಪ್ಪ
ಹಿನ್ನೆಲೆ ಗಾಯನ : ಚಿದಂಬರಂ ಎಸ್ ಜಯರಾಮನ್
ಎಂ ಎಲ್ ವಸಂತಕುಮಾರಿ
ಟಿ ಎಸ್ ಭಗವತಿ
ಮೋತಿ
ಛಾಯಾಗ್ರಹಣ : ಎಸ್ ಮಾರುತಿರಾವ್
ಸಂಗೀತ : ಆರ್ ಸುದರ್ಶನಂ
ತಾರಾಗಣ ಎಂದಾಗ.. ಒಮ್ಮೆ ಹಾಗೆ ಕಣ್ಣು ಹಾಯಿಸಿ ಪರದೆಯ ಮೇಲೆ
|
ಬೆಳ್ಳಿ ಪರದೆಯಲ್ಲಿ ಮೂಡಿದ ರಾಜಕುವರ |
ಮುತ್ತುರಾಜರಾಗಿದ್ದ ನಟನೆಯ ಮುತ್ತು ಕರುನಾಡಿನ ರಾಜಕುವರ ಆಗಿದ್ದು ಈ ಚಿತ್ರದಿಂದ. ಪರದೆಯ ಮೇಲೆ ಅವರ ಹೆಸರು ಮೂಡಿದ್ದು ಕಂಡು ಮನಸ್ಸು ಹಾಯ್ ಎಂದಿತು. ಅವರ ಜೊತೆಯಲ್ಲಿ ಪಂಡರಿಬಾಯಿ, ನರಸಿಂಹರಾಜು, ಜಿ ವಿ ಅಯ್ಯರ್, ರಾಮಚಂದ್ರಶಾಸ್ತ್ರಿ, ಮೊದಲಾದವರು ಪಾತ್ರಗಳನ್ನು ತೆರೆಯ ಮೇಲೆ ಹಂಚಿಕೊಂಡರು.
ಬೆಳ್ಳಿ ಪರದೆಯನ್ನು ಅಲಂಕರಿಸಲು ಬಂದು, ೨೦೭ ಚಿತ್ರಗಳಲ್ಲಿ ಚಿತ್ರರಸಿಕರ ಮನಸ್ಸನ್ನು ಗೆದ್ದು ಹೆಸರಿಗೆ ತಕ್ಕ ಹಾಗೆ ರಾಜಕುಮಾರ್ ಆಗಿ ತಮ್ಮ ಅಭಿಮಾನಿ ದೇವರುಗಳನ್ನು ರಂಜಿಸಲು ಬಂದ ಮೊದಲ ದೃಶ್ಯ.
"ನಲಿಯುವ ಬಾ ಇನಿಯ" ಎನ್ನುವ ಯುಗಳ ಗೀತೆ ರಾಜ್ ಮತ್ತು ಪಂಡರಿಬಾಯಿಯವರ ಮೊದಲ ಗೀತೆಯಾಗುತ್ತದೆ.
|
ಬೆಳ್ಳಿಪರದೆಯ ಮೇಲೆ ಮೊದಲ ದೃಶ್ಯ - ರಾಜ್ ಎಂಟ್ರಿ |
ಗಂಧರ್ವರ ಲೋಕದ ಮಣಿಮಂತ ಹಾಗೂ ಶರ್ಮಿಷ್ಠಾ ಜೋಡಿಯಿಂದ ಆಗುವ ಒಂದು ಅಚಾನಕ್ ತಪ್ಪಿನ ಸಲುವಾಗಿ
ಶಪಿತಗೊಂಡ ಮಣಿಮಂತ ಮತ್ತು ಶರ್ಮಿಷ್ಠಾ ದುಃಖಿಸುತ್ತಿರುವಾಗ ಪರಮೇಶ್ವರ ಹೇಳುವ ಮಾತು "ಅದೊಂದು ಕೆಟ್ಟ ಘಳಿಗೆ ಎಂದು ವ್ಯಥೆ ಪಡದೆ, ಅದೊಂದು ಮಹಾ ಘಳಿಗೆ ಎಂದು ನೀನೇಕೆ ಸಂತೋಷ ಚಿತ್ತನಾಗಿರಬಾರದು"
ಇಂತಹ ಅಮೋಘ ಅರ್ಥಗರ್ಭಿತ ಸಂಭಾಷಣೆ.. ಕರುನಾಡಿನ ಹೆಮ್ಮೆಯ ಕಲಾವಿದ ಬೆಳ್ಳಿ ತೆರೆಯನ್ನು ಬೆಳಗಲು ಆರಂಭಿಸಿದ ಮಹಾನ್ ಘಳಿಗೆ ಅದು ಆಗಿತ್ತು.
ನಮ್ಮ ಜೀವನದಲ್ಲಿಯೂ ಬರುವ ಅನೇಕ ಕಷ್ಟ, ನಷ್ಟ, ವ್ಯಸನಗಳನ್ನು ಅನುಭವಿಸಿ, ಇದು ನಮ್ಮ ಜೀವನದ ಪಥದಲ್ಲಿ ಮುಂಬರುವ ಶುಭ ಘಳಿಗೆ ಎಂದು ಮುನ್ನುಗ್ಗಬೇಕು ಎನ್ನುವ ತಾರ್ಕಿಕ ಸಂದೇಶ ಕೊಡುವ ಮಹಾನ್ ಪದಗಳ ಜೋಡಣೆ ಎಂದು ನನ್ನ ಅನಿಸಿಕೆ
ದಿಣ್ಣಪ್ಪ ಹಾಗೂ ನೀಲರಾಗಿ ಭುವಿಯಲ್ಲಿ ಬೇಡರ ಕುಲದಲ್ಲಿ ಜನಿಸುವ ದೃಶ್ಯದಿಂದ ಆರಂಭಗೊಳ್ಳುತ್ತದೆ.
ಬೇಡರ ಕುಲದಲ್ಲಿ ಹುಟ್ಟಿ ದೊಡ್ಡವರಾದ ಮೇಲೆ ಮದುವೆಯ ಈಗಿನ ಆರತಕ್ಷತೆಯನ್ನು ಹೋಲುವಂತೆ, ವಧುವರರರಿಗೆ ಮತ್ತು ಬಂಧು ಬಾಂಧವರಿಗೆ ಮನೋರಂಜನಾ ಕಾರ್ಯಕ್ರಮವಾಗಿ ಮೂಡಿಬರುವ ದೃಶ್ಯದಲ್ಲಿ ನೃತ್ಯ, ಸಂಗೀತ ಸೊಗಸಾಗಿದೆ.
ಆರಂಭಿಕ ದೃಶ್ಯದಲ್ಲಿ ತಮ್ಮ ಹಿರಿಯಜ್ಜನನ್ನು ಊಟಕ್ಕೆ ಕರಿಯುವ ದೃಶ್ಯದಲ್ಲಿನ ಪಂಡರಿಬಾಯಿಯವರ ತುಂಟತನ ಇಷ್ಟವಾಗುತ್ತದೆ.
|
ನೂತನ ದಂಪತಿಗಳು ಮನೆ ಹಿರಿಯನನ್ನು ಊಟಕ್ಕೆ ಕರೆವ ದೃಶ್ಯ |
|
ಪಂಡರಿಬಾಯಿ.. ರಾಜ್ ಕರುನಾಡಿನ ನಂ. ೧ ನಟ ಎನ್ನುತ್ತಿದ್ದಾರೆಯೇ |
ನಾಯಕ ಪಟ್ಟ ಯಾರಿಗೆ ಬೇಡ, ಅದಕ್ಕಾಗಿ ಯಾವ ರೀತಿಯಲ್ಲಿ ರಾಜಕೀಯ ಮಾಡುತ್ತಾರೆ ಇದರ ಒಂದು ಸಣ್ಣ ಝಲಕ್ ಕಾಡಿನಲ್ಲಿ ನೆಡೆಯುವ ರಾಮ್ಯ ಮತ್ತು ದಿಣ್ಣನ ಹೊಡೆದಾಟದಲ್ಲಿ ಅಚ್ಚುಕಟ್ಟಾಗಿ ಚಿತ್ರಿಸಿದ್ದಾರೆ.
ಇಡೀ ತಂಡ ದಿಣ್ಣ ಹಾಗೂ ನೀಲರನ್ನು ಬಹಿಷ್ಕರಿಸಿದಾಗ ದಿಣ್ಣ ತನ್ನ ಮಡದಿಗೆ ಹೇಳುವ ಮಾತು "ಕೈ ಹಿಡಿದವಳು ಹೂಂ ಅಂತ ಧೈರ್ಯ ಕೊಟ್ಟರೆ ಪ್ರಪಂಚಾನೇ ಗೆಲ್ಲಬಹುದು"
ಈ ಮಾತಿನಲ್ಲಿ ಗಂಡ ಹೆಂಡತಿಯಿಂದ ಅಪೇಕ್ಷೆ ಪಡುವ ಸ್ಫೂರ್ತಿ ಮತ್ತು ಹೆಂಡತಿಗೆ ಗಂಡನ ಮೇಲೆ ಇರುವ ಭರವಸೆಯ ಸಂಕೇತ ಕಾಣುತ್ತದೆ
ರಾಜ್ ಹಾಗೂ ಪಂಡರಿಬಾಯಿಯವರ ಅಭಿನಯ ಸರಳವಾಗಿ ಮೂಡಿ ಬಂದಿದೆ. ಆಗಲೇ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದರು ಪಂಡರೀಬಾಯಿಯವರು ರಾಜ್ ಅವರಿಗೆ ಸಾತ್ ನೀಡುತ್ತಲೇ ಗುಪ್ತಗಾಮಿನಿಯಾಗಿ ಅಭಿನಯಿಸಿದ್ದಾರೆ. ರಾಜ್ ಕೂಡ ತಮ್ಮ ಮೊದಲ ಚಿತ್ರ ಎನ್ನುವ ಒಂದು ಸಣ್ಣ ಸುಳುಹನ್ನು ಕೊಡದೆ ಲೀಲಾಜಾಲವಾಗಿ ನಟಿಸಿದ್ದಾರೆ.
|
ಮುದ್ದಾಗಿ ಕಾಣುವ ಕರುನಾಡಿನ ತಾಯಿ ಪಂಡರಿಬಾಯಿ |
ಇತ್ತ.. ಬೇಡರ ಗುಂಪು ತಮ್ಮನ್ನು ಬಹಿಷ್ಕರಿಸಿದ ಮೇಲೆ, ಉಟ್ಟ ಬಟ್ಟೆ, ಶಿವನ ಚಿತ್ರಪಟವನ್ನು, ಮತ್ತು ತಮ್ಮ ಚೂರು ಪಾರು ಚಿಂದಿ ಬಟ್ಟೆಯನ್ನು ಹೊತ್ತು ಬೇರೆಡೆಗೆ ಬರುತ್ತಾರೆ.
ನೀಲ ಪಾತ್ರಧಾರಿ ಪಂಡರೀಬಾಯಿಯವರು ತಮ್ಮ ಪತಿ ದಿಣ್ಣ ಕಾಡಿಗೆ ಹೊರಟಾಗ "ನಾನು ಬರಬೇಕು ಊಂ ಊಂ ಎಂದು ಹೇಳುವ ದೃಶ್ಯದಲ್ಲಿ ಮುದ್ದಾಗಿ ಕಾಣುತ್ತಾರೆ..
ಸಾರ್ವಕಾಲಿಕವಾಗಿರುವ ಹೆಣ್ಣು ಗಂಡಿನ ಆಕರ್ಷಣೆಯ ದೃಶ್ಯವಾಗಿ ಕೈಲಾಸ ಶಾಸ್ತ್ರಿ ಮತ್ತು ನೃತ್ಯಗಾತಿ ರಾಣಿ ಮೂಡಿ ಬಂದಿದೆ.
"ದಾರಿ ಕಾಣದೆ ಬಲು ನೊಂದೆ" ಈ ಹಾಡಿನಲ್ಲಿ ಆ ಕಾಲದ ನೃತ್ಯ, ಒನಪು, ವಯ್ಯಾರ ದೃಶ್ಯಕ್ಕೆ ತಕ್ಕನಾಗಿ ಮೂಡಿದೆ.
ಕೈಲಾಸ ಶಾಸ್ತ್ರೀಯ ಪಾತ್ರದಲ್ಲಿ ಜಿ ವಿ ಅಯ್ಯರ್ ಅವರದು ಪರಕಾಯ ಪ್ರವೇಶವೇ ಆಗಿದೆ "ಕೈಲಾಸ-ಪತಿ ಅನುಗ್ರಹವಾಗಲಿ" ಈ ಸಂಭಾಷಣೆಯಲ್ಲಿ ಕೈಲಾಸ ಎಂದರೆ ಕೈಲಾಸ ಶಾಸ್ತ್ರಿ ಮತ್ತು ಪತಿ ಎಂದರೆ ತಾನು ರಾಣಿಗೆ ಪತಿಯಾದೇನು ಎನ್ನುವ ಆಸೆಯನ್ನು ಸೂಕ್ಷವಾಗಿ ಕೈಲಾಸ ಎಂದು ಹೇಳಿ ತುಸು ನಿಧಾನವಾಗಿ ಪತಿ ಸೇರಿಸುತ್ತಾರೆ.
|
ರಾಜು & ಅಯ್ಯರ್ |
ಮದುವೆ ಆಗಿದ್ದರೂ ಪರಸ್ತ್ರಿ ವ್ಯಾಮೋಹ, ಅದನ್ನು ವ್ಯಕ್ತ ಪಡಿಸುವ ರೀತಿ ಜಿ ವಿ ಅಯ್ಯರ್ ಗೆಲ್ಲುತ್ತಾರೆ .. ಅದಕ್ಕೆ ಅಡ್ಡಿ ಪಡಿಸುವ ಪಾತ್ರದಲ್ಲಿ ನರಸಿಂಹರಾಜು ನಗೆ ಕಡಲನ್ನು ಎಬ್ಬಿಸುತ್ತಾರೆ.
|
ಹಾಸ್ಯ ಭರಿತ ದೃಶ್ಯ ನರಸಿಂಹರಾಜು, ಜಿವಿ ಅಯ್ಯರ್ ಮತ್ತು ಸಂಧ್ಯಾ |
|
ನರಸಿಂಹರಾಜು ಅವರ ವಿಭಿನ್ನ ಅಭಿನಯ.. ಹಾಸ್ಯದೌತಣ |
ತನ್ನ ಚಿಕ್ಕಪ್ಪ ಕೈಲಾಸ ಶಾಸ್ತ್ರಿಯವರ ಪರಸ್ತ್ರಿ ವ್ಯಾಮೋಹದ ಬಗ್ಗೆ ಅರಿವಿದ್ದ ಕಾಶಿ ಪಾತ್ರಧಾರಿ ನರಸಿಂಹರಾಜು ತಮ್ಮ ಚಿಕ್ಕಪ್ಪನನ್ನು ಗೋಳು ಹುಯ್ದುಕೊಳ್ಳುವ ದೃಶ್ಯಗಳು ಸುಂದರವಾಗಿ ಮೂಡಿ ಬಂದಿವೆ.
ಶಾಸ್ತ್ರಿ ಮನೆಯ ಮುಂದೆ ನೃತ್ಯಗಾತಿ ರಾಣಿ ಮತ್ತು ಅವಳ ಅಮ್ಮ ಹೋಗುತ್ತಿದ್ದಾಗ, ಕಾಶಿ ಅವರನ್ನು ಮಾತಾಡಿಸುತ್ತಾರೆ.
ಬಿಸಾಡಿದಂತೆ ಮಾತಾಡುವ ಕಾಶಿಯನ್ನು ಕಂಡು ಅವರ ಚಿಕ್ಕಮ್ಮ .
"ಯಾರೋ ಅದು ಕಾಶಿ"
"ಇವರು ನಿತ್ಯ ಸುಮಂಗಲಿಯರು ಚಿಕ್ಕಮ್ಮ"
"ಅಂದರೆ"
"ಅಂದರೆ ಮುತ್ತೈದೆಯರು" ಅಂತ ಹೇಳಿ ಕಿಸಕ್ ಅಂತ ನಗ್ತಾರೆ
"ಮುತ್ತೈದೆಯರನ್ನು ಬೀದೀಲಿ ನಿಲ್ಲಿಸಿ ಮಾತಾಡಿಸಿ ಹಾಗೆ ಕಳಿಸೋದೇ, ಕರೆದಿದ್ದರೇ ಅರಿಶಿನ ಕುಂಕುಮ ಕೊಡ್ತಿದ್ದೆ.. ಈಗಲಾದರೂ ಕರೆದುಕೊಂಡು ಬಾರೋ ಕಾಶಿ"
"ಬಿಡು ಚಿಕ್ಕಮ್ಮ..ಮುಂದಿನ ಸಾರಿ ಕರೆದರೆ ಆಯ್ತು, ಯಾವಾಗಲೂ ಬೀದೀಲೇ ಸಿಗ್ತಾರೆ"
ಎಷ್ಟು ಸರಳವಾದ ಆದರೆ ಅರ್ಥಗರ್ಭಿತವಾದ ಸಂಭಾಷಣೆ.. ಎಲ್ಲೂ ಎಲ್ಲೇ ಮೀರಿಲ್ಲ.. ಉದಾಸೀನತೆ, ಆಕ್ರೋಶ, ತಮ್ಮ ಮನೆಗೆ ಮಾರಿಯಾಗಬಹುದಾದ ಆ ನೃತ್ಯಗಾತಿ ಮತ್ತು ಆಕೆಯ ಅಮ್ಮನ ಮೇಲಿನ ದ್ವೇಷ, ಜೊತೆಯಲ್ಲಿ ತನ್ನ ಚಿಕ್ಕಮ್ಮನ ಮುಗ್ಧತನ ಎಲ್ಲವನ್ನು ಕಾಶಿ ಈ ಸರಳ ಸಂಭಾಷಣೆಯಲ್ಲಿ ಒಪ್ಪಿಸಿದ್ದಾರೆ.
ಸಂಭಾಷಣಕಾರನಿಗೆ ನಮೋನಮಃ.
ಶಾಸ್ತ್ರಿ ಬೇಡರ ದಿಣ್ಣನಿಗೆ ಡಿಕ್ಕಿ ಹೊಡೆದಾಗ.. ದಿಣ್ಣ ಹೆದರದೆ ಶಾಸ್ತ್ರಿಗೆ ಬಯ್ಗುಳ ನೀಡಿ, ಒಂದು ಪೆಟ್ಟು ಕೊಡುವ ದೃಶ್ಯದಲ್ಲಿ ಕರುನಾಡಿನ ಮಹಾನ್ ಪ್ರತಿಭೆಗಳು ರಾಜ್ ಮತ್ತು ಜಿ ವಿ ಅಯ್ಯರ್ ಸಮಾಗಮಗೊಂಡಿದೆ.
|
ರಾಜ್ ಮತ್ತು ಜಿವಿ ಅಯ್ಯರ್ ತೆರೆಯ ಮೇಲಿನ ಸಂಗಮ |
ಶಾಸ್ತ್ರೀ ನೃತ್ಯಗಾತಿ ರಾಣಿಯ ಮನೆಯೊಳಗೆ ಬರುವಾಗ "ಕೃಷ್ಣಾ ನೀ ಬೇಗನೆ ಬಾರೋ" ಹಿನ್ನೆಲೆ ವಾದ್ಯ ಸಂಗೀತದಲ್ಲಿ ಮೂಡಿ ಬರುತ್ತದೆ.. ಸೂಪರ್ ಸಂಯೋಜನೆ.
|
ಶಾಸ್ತ್ರಿ, ರಾಣಿ ಮತ್ತು ಸುಂದರಿ.. |
ಶಾಸ್ತ್ರೀಯ ಪರಸ್ತ್ರೀ ವ್ಯಾಮೋಹ, ರಾಣಿಯ ಪರಿಸ್ಥಿತಿಯನ್ನು ಉಪಯೋಗಿಸಿಕೊಳ್ಳುವ ಹವಣಿಕೆ, ಅವಳ ಅಮ್ಮ ಶಾಸ್ತ್ರೀಯ ಈ ಮೋಹವನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುವ ಯೋಜನೆ ಚುಟುಕಾಗಿ ಸೊಗಸಾಗಿ ಸಂಯೋಜಿಸಿದ್ದಾರೆ.
ಇಡೀ ಚಿತ್ರದಲ್ಲಿ ಕಪ್ಪು ಬಿಳುಪಿನಲ್ಲಿ ಮೂಡಿಬಂದ ಛಾಯಾಗ್ರಹಣ ಸೊಗಸಾಗಿದೆ.
|
ಸುಂದರ ಛಾಯಾಗ್ರಹಣ |
ಬೇಟೆ ಸಿಗದೇ, ನಿರಾಶರಾಗಿ ಕಳವಳ ಪಡುವಾಗ ಬರುವ ಹಾಡು "ಆಶಾ ಗಗನದಿ ನಿರಾಶೆ ಮೋಡವು" ಅರ್ಥಗರ್ಭಿತವಾಗಿದೆ. ಈ ಹಾಡಿನಲ್ಲಿ "ಆಡುವಾಗ ನೀಡುವಾಗ ಕಾಡೆಲ್ಲಾ ನೆಂಟರು" ಎಂಥಹ ಮಾತು.. ವಾಹ್ ಸೂಪರ್
ಕಾಡಿನಲ್ಲಿ ಬೇಡರ ದಿಣ್ಣ ಬೇಟೆ ಸಿಗದೇ ಒದ್ದಾಡುತ್ತಿದ್ದಾಗ ಶಿವ ಮಾರುವೇಷದಲ್ಲಿ ಶಿವಪ್ಪನಾಗಿ ದಿಣ್ಣನ ಬಳಿ ಬಂದು.. ಸಮಾಧಾನ ಪಡಿಸುತ್ತಾ "ಕತ್ತಲು ಬೆಳಕು ಇದ್ದೇ ಇರುತ್ತದೆ ಜೀವನ ಅಂದರೆ"
|
ಮಾರುವೇಷದಲ್ಲಿ ಶಿವಪ್ಪ ಬೇಡರ ದಿಣ್ಣನ ಜೊತೆಯಲ್ಲಿ |
ಎಷ್ಟು ನಿಜ ಆಲ್ವಾ.. ಕಷ್ಟಗಳು ಬರುತ್ತವೆ ಅದರ ಹಿಂದೆ ಅಷ್ಟೇ ತೂಕದ ಸುಖವೂ ಬರುತ್ತದೆ ಎನ್ನುವ ನೀತಿ ಮಾತುಗಳು. ಜೀವನದಲ್ಲಿ ಕಷ್ಟಗಳು ಬಂದಾಗ ಕುಗ್ಗದೆ ಸಾಗಬೇಕು ಎನ್ನುವ ತಾತ್ವಿಕವಾದ ಮಾತು.
ಹಾಗೆಯೇ ಹಾಡುತ್ತಾ ಸಾಗುವ ಶಿವಪ್ಪ
"ಮಾಯೆಗೆ ಸಿಲುಕಿ ಮರುಳಾದೆ ಮನುಜ..
ಭರವಸೆ ಬಿಡದೆ ಗುರಿ ಸಾಧಸೋ
ದೇವನಿರುವನು ನಿನ್ನಲಿ ಮನುಜ"
ಸುಂದರ ಸಂದೇಶ ಪೂರಿತ ಹಾಡು.
ಬಹುಶಃ ಆರಂಭ ಈ ರೀತಿಯಿದ್ದರಿಂದಲೇ ಇರಬೇಕು ರಾಜ್ ಅವರ ಸರಿ ಸುಮಾರು ಎಲ್ಲಾ ಚಿತ್ರಗಳಲ್ಲಿಯೂ ಒಂದಲ್ಲ ಒಂದು ಸಂದೇಶ ಹೊತ್ತು ತರುತ್ತಲೇ ಇತ್ತು.
ದಿಣ್ಣನಿಗೆ ಬೇಟೆ ಸಿಗದೇ.. ಒದ್ದಾಡುತ್ತಾ ಇರುವಾಗ.. ಗಾಳಿ ಮಳೆಗೆ ಸಿಲುಕಿ ಶಿವನ ಆಲಯಕ್ಕೆ ಬರುತ್ತಾರೆ.. ಕತ್ತಲು.. ಎಡವುತ್ತಾ ತಡವುತ್ತಾ ಸೀದಾ ಶಿವನ ಲಿಂಗದ ಮೇಲೆ ಅರಿವಿಲ್ಲದೆ ಕೂತು ಬಿಡುತ್ತಾರೆ . ಅಲ್ಲಿಯೇ ಇದ್ದ ಬಿಲ್ವ ಪಾತ್ರೆಯನ್ನು ಲಿಂಗದ ಮೇಲೆ ಹಾಕುತ್ತಾ ಇರುತ್ತಾನೆ
ಬೆಳಿಗ್ಗೆ ಗುಡಿಯನ್ನು ಶುದ್ಧ ಮಾಡಲು ಕಾಶಿ ಬರುತ್ತಾರೆ.. ಆಗ ಕಾಶಿ ಮತ್ತು ಬೇಡರ ದಿಣ್ಣನ ಸಂಭಾಷಣೆ ಚುಟುಕು ಹಾಗೂ ಸೊಗಸು.
|
ರಾಜ್ ಮತ್ತು ನರಸಿಂಹರಾಜು ಬೆಳ್ಳಿತೆರೆಯ ಮೇಲೆ ಮೊದಲಬಾರಿಗೆ ಬಂದದ್ದು |
ದೇವರ ಬಗ್ಗೆ ಒಲವಿರದ ನಂಬಿಕೆಯಿಲ್ಲದ ಬೇಡರ ದಿಣ್ಣ, ಕಾಶಿಯ ಮಾತಿನಂತೆ ಶಿವನ ಧ್ಯಾನ ಮಾಡುತ್ತಾ ಕೂರುತ್ತಾರೆ.
ಕರುನಾಡಿನಲ್ಲಿ ಸದಾ ಮೊಳಗುವ ಅಮರ ಗೀತೆ
"ಶಿವಪ್ಪ ಕಾಯೋ ತಂದೆ".
ಶಿವನ ಕೃಪೆಯಿಂದ ಧ್ಯಾನ ಮಾಡಿ ಸ್ತುತಿಸಿದ ಮೇಲೆ.. ಆತನಿಗೆ ಬೇಟೆಯಾಗಿ ಮೊಲಗಳು ಕಾಣುತ್ತವೆ. ಆಗಿನಿಂದ ಶಿವಭಕ್ತನಾಗುತ್ತಾನೆ ಬೇಡರ ದಿಣ್ಣ.
"ನಿನ್ನ ಧ್ಯಾನದಲ್ಲಿ ಅದೇನು ಶಕ್ತಿ ಅಡಗಿದೆಯೋ ಶಿವಪ್ಪ. ರೋಮಾಂಚನವಾಗುತ್ತದೆ.. ಅಯ್ಯೋ ನಿನ್ನ ಬಿಟ್ಟು ಹೋಗೋಕೆ ಮನಸೇ ಇಲ್ಲವಲ್ಲ ಪ್ರಭು.."
"ಹಾ.. ಎಷ್ಟು ಗಾಳಿ.. ಚಳಿಯಾಗುತ್ತಲೋ ಶಿವಪ್ಪ ನಿನಗೆ.. ಇರು ಇರು ಎಂದು ತನ್ನ ವಸ್ತ್ರವನ್ನು ಶಿವಲಿಂಗಕ್ಕೆ ಹೊದ್ದಿಸಿ ಹಾ ಈಗ ಬೆಚ್ಚಗಿರುತ್ತದೆ... " ಎಂದು ಹೇಳುವಾಗ ರಾಜ್ ಅವರ ಅಭಿನಯ ಸೊಗಸು ಅಂದರೆ ಸೊಗಸು.
ಮಾರುವೇಷದಲ್ಲಿದ್ದ ಶಿವಪ್ಪ.. ಬೇಡರ ದಿಣ್ಣನ ಗುಡಿಸಲಿಗೆ ಬಂದು "ಅವ್ವ.. ನಮ್ಮ ಒಡೆಯ ದಿಣ್ಣಪ್ಪ ಕಳಿಸಿದರು.. ಒಡವೆ ಬಟ್ಟೆ ಧಾನ್ಯ ಇದೆ.. ಸರಿಯಾಗಿದೆಯಾ ನೋಡಿಕೊಳ್ಳವ್ವ" ಎಂದಾಗ ..
|
ದಿಣ್ಣಪ್ಪ ನಿಮಗೆ ಕೊಡಪ್ಪ ಅಂತ ಹೇಳಿದ್ರು
ನೋಡ್ರವ್ವ ನಿಮ್ಮ ಗಂಟು ಸರಿಯಾಗಿದೆಯೇ |
ನೀಲ "ನಾವೇ ಬೇಡಿ ತಿನ್ನುವವರು.. ಆಳನ್ನು ಇಟ್ಟುಕೊಳ್ಳೋದೇ.. ತಮಾಷೆ ಬೇಡ ಈ ಗಂಟು ಯಾರದೋ ಏನೋ ತಪ್ಪಿ ಬಂದಿದ್ದೀಯಾ..
"ಅವರವರ ಗಂಟು ಅವರಿಗೆ" ಹೇಳುವ ಸಂಭಾಷಣೆ ಸೂಪರ್
ಬಡತನದಲ್ಲಿ ಬೇಯುತ್ತಿದ್ದರು.. ತಮ್ಮದಲ್ಲದ ವಸ್ತುವಿಗೆ ಆಸೆ ಪಡದ ಆ ಗುಣವನ್ನು ಪ್ರತಿನಿಧಿಸುವ ಈ ದೃಶ್ಯ ಕಾಡುತ್ತದೆ
ದಿಣ್ಣನ ವಸ್ತ್ರವನ್ನು ತೋರಿಸಿ ಇದು ನಿಮ್ಮ ಯಜಮಾನರದೇ ಅಲ್ಲವೇ ತಾಯಿ.. ಎಂದಾಗ.. ವಿಧಿಯಿಲ್ಲದೇ ಒಪ್ಪಿಕೊಳ್ಳುತ್ತಾಳೆ ನೀಲ.. ಆಗ ಹೊಸ ವಸ್ತ್ರವನ್ನು ಧರಿಸಿ.. ದೇವರಿಗೆ ನಮಸ್ಕರಿಸಿ "ದಯಾಮಯ ಈಶ" ಎಂದು ಹಾಡುತ್ತಾರೆ.
ಇತ್ತ ಬೇಟೆ ಸಿಕ್ಕ ಮೇಲೆ.. ಶಿವನಿಗೆ ತಾನು ಕೊಟ್ಟ ಮಾತಿನಂತೆ.. ಒಂದು ಮೊಲವನ್ನು ಹದವಾಗಿ ಬೇಯಿಸಿ ನೈವೇದ್ಯವಾಗಿ ಅಲ್ಲಿ ಇಡುತ್ತಾನೆ.
ಆಗ ಅಲ್ಲಿಗೆ ಬರುವ ಕಾಶಿಗೆ.. ಅಪ್ಪ ನಿಮ್ಮ ಮಾತಿನಂತೆ ನಾ ಧ್ಯಾನ ಮಾಡಿದೆ ನೀನೆ ನನ್ನ ಗುರು.. ಇಂದಿನಿಂದ ನೀನೆ ನಾನು ನಾನೇ ನೀನು ಎಂದು ಆಲಂಗಿಸಿಕೊಳ್ಳುತ್ತಾನೆ.
|
ಪ್ರಚಂಡ ಪ್ರತಿಭೆಗಳ ಆಲಿಂಗನ |
|
ಅಮೋಘ ಪ್ರತಿಭೆಗಳು |
ಹೀಗೆ ದೇವರನ್ನು ನಂಬದ ಬೇಡರ ದಿಣ್ಣ ಶಿವಭಕ್ತನಾಗುತ್ತಾನೆ. ಅತ್ತ ಶಿವಾಲಯದಲ್ಲಿ ನಿತ್ಯವೂ ಪೂಜಿಸುವ ಕೈಲಾಸ ಶಾಸ್ತ್ರಿ ಸ್ತ್ರೀ ವ್ಯಾಮೋಹಕ್ಕೆ ಬಿದ್ದು ದೇವರ ಆಭರಣ ಕಂಠಿಹಾರವನ್ನು ಕದ್ದು. ಬೇಡರ ದಿಣ್ಣನ ಕೊರಳಿಗೆ ಅಪವಾದವನ್ನು ಸುತ್ತುತ್ತಾರೆ .
ಊರ ಪ್ರಮುಖರ ಸಮಕ್ಷಮದಲ್ಲಿ ವಿಚಾರಣೆಯಾದಾಗ.. ಬೇಡರ ದಿಣ್ಣ ಶಿವನ ದೇವಾಲಯಕ್ಕೆ ತಾನೇ ಹೋಗಿ ನೈವೇದ್ಯವಾಗಿ ಮೊಲದ ಮಾಂಸವನ್ನು ಇಟ್ಟೆ ಎಂದು ಒಪ್ಪಿಕೊಳ್ಳುತ್ತಾನೆ, ಆದರೆ ಕಂಠಿಹಾರದ ಬಗ್ಗೆ ತನಗೇನು ತಿಳಿಯದು ಎಂದು ಹೇಳಿದಾಗ ಅವನ ಮಾತನ್ನು ನಂಬದೆ ಊರ ಪ್ರಮುಖ ದಿಣ್ಣನಿಗೆ ಶಿಕ್ಷೆ ವಿಧಿಸುತ್ತಾರೆ..
ದಿಣ್ಣನನ್ನು ಮರಕ್ಕೆ ಕಟ್ಟಿ ಹೊಡೆಯುತ್ತಿದ್ದಾಗ "ಶಿವನೇ ಎಂದೊಡನೆ ಮುಂದೆ ಮೋಹವು ಹರಿಯುತಿದೆ" ಗಾನ ಮೂಡಿ ಬರುತ್ತದೆ.
ಆಗ ಕೈಲಾಸ ಶಾಸ್ತ್ರೀಯ ಮನೆಗೆ ಓಡಿ ಬರುವ ದಿಣ್ಣನ ಮಡದಿ ನೀಲ ತನ್ನ ಪತಿ ನಿರ್ದೋಷಿ ಎಂದು ಹೇಳಿದರೂ ಕೇಳದೆ.. ನೀ ಮನೆಯೊಳಗೇ ಬಂದದ್ದು ತಪ್ಪು.. ಮನೆ ಮೈಲಿಗೆಯಾಯಿತು ಎಂದು ಶಾಸ್ತ್ರೀ ಹೇಳುತ್ತಾರೆ.
"ನಿಮಗೆ ಮಡಿ ಮೈಲಿಗೆ ಸಮಸ್ಯೆ ಆದರೆ, ನಮಗೆ ಜೀವದ ಸಮಸ್ಯೆ" ಇಂತಹ ಚುಟುಕು ಚುರುಕು ಸಂಭಾಷಣೆ ಈ ಚಿತ್ರದುದ್ದಕ್ಕೂ ಇದೆ. ಇಷ್ಟವಾಗುತ್ತದೆ.
ತಮ್ಮ ಕಷ್ಟ ತಮಗೆ.. ಬಡವರ ಕಷ್ಟ ಸಿರಿವಂತರಿಗೆ ಕಾಣದು ಎನ್ನುವ ಮಾತು ಇಣುಕುತ್ತದೆ.
ಇತ್ತ.. ಕಂಠಿಹಾರ ಪಡೆದ ಮೇಲೆ ನೃತ್ಯಗಾತಿ ಶಾಸ್ತ್ರಿಯನ್ನು ರಂಜಿಸಲು "ಸಾಕು ಸಾಕು ನವ ಮೋಹನ" ಹಾಡಿನ ಜೊತೆ ನೃತ್ಯ ಸಾಗುತ್ತದೆ.. ಶಾಸ್ತ್ರೀಯ ಆಷಾಡಭೂತಿ ತನವನ್ನು ಊರ ಪ್ರಮುಖರಿಗೆ ತೋರಿಸಲು ಕಾಶಿ ಎಲ್ಲರನ್ನು ಕರೆದು ತಂದಾಗ.. ಶಾಸ್ತ್ರೀ ದೇವರು ಬಂತು ಎಂದು ನಾಟಕ ಮಾಡಿ ತಪ್ಪಿಸಿಕೊಳ್ಳುತ್ತಾರೆ.
ಮತ್ತೆ ದಿಣ್ಣ ಶಿವನ ಮೊರೆ ಹೊಕ್ಕು "ಎನ್ನೊಡೆಯ ಭಾವ ಬಂದನಾ ಹರಿಸೋ" ಹಾಡು.. ಇದಾದ ಮೇಲೆ.. ಶಾಸ್ತ್ರೀಯ ನಿಜ ಸ್ವರೂಪ ಕಾಶಿ ಅನಾವರಣ ಮಾಡುತ್ತಾನೆ.. ಊರ ಜನತೆ ಶಾಸ್ತ್ರಿಗೆ ಹಿಗ್ಗಾಮುಗ್ಗಾ ಚಚ್ಚುತ್ತಾರೆ. ಮತ್ತು ಬೇಡರ ದಿಣ್ಣ ನಿರಪರಾಧಿ ಎಂದು ತೀರ್ಮಾನಿಸುತ್ತಾರೆ..
ತಕ್ಷಣ ಶಿವಾಲಯಕ್ಕೆ ಓಡಿ ಬರುವ.. ದಿಣ್ಣ "ಕಾಯೋ ತಂದೆಯೇ ದೇವಾ ಕರುಣಿಸಿ ದಯ ತೋರೋ ತಂದೆಯೇ" ಎಂದು ಸ್ತುತಿಸುತ್ತಾರೆ..
ಈ ಹಾಡು ಮುಗಿದ ತಕ್ಷಣ.. ಶಿವಲಿಂಗದಲ್ಲಿ ಕಣ್ಣು ಮೂಡಿಬರುತ್ತದೆ.. ಅದನ್ನು ಕಂಡು ಆನಂದ ಪಡುತ್ತಿದ್ದಂತೆ.. ಒಂದು ಕಣ್ಣಿಂದ ರಕ್ತ ಸುರಿಯಲು ಶುರು ಆಗುತ್ತದೆ.. ಗಾಬರಿಗೊಂಡ ದಿಣ್ಣ.. ತನ್ನ ಒಂದು ಕಣ್ಣನ್ನೇ ಕಿತ್ತು ಅಂಟಿಸಿದರೆ.. ಇನ್ನೊಂದು ಕಣ್ಣಿಂದ ರಕ್ತ ಸುರಿಯುತ್ತದೆ.. ಆಗ ತನ್ನ ಇನ್ನೊಂದು ಕಣ್ಣನ್ನು ಕಿತ್ತು ಅಂಟಿಸುತ್ತಾರೆ.
|
ಮರೆಯಲಾಗದ ದೃಶ್ಯ |
ಆಗ ಪರಮೇಶ್ವರ ಪಾರ್ವತೀ ಸಮೇತನಾಗಿ ಪ್ರತ್ಯಕ್ಷನಾಗಿ ಇಂದಿನಿಂದ ನೀ ದಿಣ್ಣನಿಂದ ಕಣ್ಣಪ್ಪ ಎಂದು ಪ್ರಸಿದ್ಧನಾಗು ಎಂದು ಹರಸುತ್ತಾನೆ..
ಭಕ್ತಿ ಪ್ರಧಾನ ಚಿತ್ರದಲ್ಲಿ ಶುರುವಾದ ರಾಜ್ ಅವರ ಚಿತ್ರಯಾತ್ರೆ.. ಅಮೋಘ ಓಟಕ್ಕೆ ನಾಂದಿ ಹಾಡುತ್ತದೆ.
ಇಡೀ ಚಿತ್ರದಲ್ಲಿ ಒಮ್ಮೆ ಕೂಡ ಅನ್ನಿಸೊಲ್ಲ ಇದು ರಾಜ್ ಅವರ ಮೊದಲ ಚಿತ್ರ ಎಂದು. ವಜ್ರವೊಂದನ್ನು ಭುವಿಯಿಂದ ಬಗೆದು.. ಪ್ರದರ್ಶನಕ್ಕೆ ಇಟ್ಟಂತೆ.. ಸ್ವಾಭಾವಿಕವಾಗಿ ನಟಿಸಿದ್ದಾರೆ ರಾಜ್.. ಈ ಚಿತ್ರ ಮತ್ತು ಮುಂದೆ ಬರುವ ಚಿತ್ರ ಪಾತ್ರಗಳು ರಾಜ್ ಅವರನ್ನು ಪುಟಕ್ಕಿಟ್ಟ ಚಿನ್ನವಾಗಿ ಪರಿವರ್ತಿಸುವಲ್ಲಿ ಸಹಾಯ ಮಾಡುತ್ತದೆ..
ಜಿವಿ ಅಯ್ಯರ್ ನರಸಿಂಹರಾಜು ಅವರ ಜುಗಲ್ ಬಂಧಿ.
ಜಿವಿ ಅಯ್ಯರ್, ನರಸಿಂಹರಾಜು ಮತ್ತು ಸಂದ್ಯಾ ಅವರ ಮಾತಿನ ಚಕಮಕಿ
ಜಿವಿ ಅಯ್ಯರ್, ರಾಣಿ ಮತ್ತು ಆಕೆಯ ತಾಯಿಯ ಜೊತೆಯಲ್ಲಿನ ವಯ್ಯಾರ ಭರಿತ ದೃಶ್ಯಗಳು ಮುದ ನೀಡುತ್ತದೆ.
ರಾಜ್ ಮತ್ತು ನರಸಿಂಹರಾಜು ಅವರ ದೃಶ್ಯ ಸುಂದರವಾಗಿ ಮೂಡಿ ಬಂದಿದೆ.
ಪಂಡರಿಬಾಯಿಯವರ ತೂಕ ಬದ್ಧ ನಟನೆ
ರಾಜ್, ರಾಜು ಮತ್ತು ಅಯ್ಯರ್ ಮೂರು ಅನರ್ಘ್ಯ ರತ್ನಗಳು ಹೊಳೆದ ಈ ಚಿತ್ರಕ್ಕೆ ಅನೇಕ ಪ್ರಶಸ್ತಿಗಳು ಸಿಕ್ಕವು.
ಅರ್ಥ ಗರ್ಭಿತ ಚಿತ್ರದೊಂದಿದೆ ಕರುನಾಡ ಬೆಳ್ಳಿ ಪರದೆಗೆ ಕಾಲಿಟ್ಟ ರಾಜ್ ಅಣ್ಣಾವ್ರು ಆಗುವ ಹಾದಿಯಲ್ಲಿ ಸಾಗುವ ಮೊದಲ ಚಿತ್ರ ಇದು.
ಮತ್ತೆ ಮುಂದಿನ ಚಿತ್ರದೊಂದಿಗೆ ಭೇಟಿ ಆಗುವ.. ಬರುತ್ತೀರಾ ಅಲ್ಲವೇ.. !