Sunday, February 26, 2012

ಶಂಖನಾದ - ತಮಾಷೆ ಮಾಡುತ್ತಾ ಗಬ್ಬು ರಾಜಕೀಯ ಹೂರಣವನ್ನ ಹೊರಗಿಡುವ ಚಿತ್ರ (1986)

ಅತ್ಯಂತ ಕಡಿಮೆ ಖರ್ಚಿನಲ್ಲಿ ಸರಿಯಾದ ತಲೆ ಉಪಯೋಗಿಸಿ ಒಳ್ಳೆಯ ಕತೆಯನ್ನ ಅಷ್ಟೇ ಚೊಕ್ಕವಾಗಿ ಮಾಡಿದರೆ ಒಂದು ಉತ್ತಮ ಕಲಾಕೃತಿ ಬರುತ್ತೆ..ಈ ಮಾತಿಗೆ ಸಾಕ್ಷಿ "ಶಂಖನಾದ"  ಕನ್ನಡ ಚಲನ ಚಿತ್ರ..


ಉಮೇಶ್ ಕುಲಕರ್ಣಿಯವರ ಸರಳ ನಿರೂಪಣೆ, ಎ.ಎಸ. ಮೂರ್ತಿಯವರ ಸುಲಲಿತ ಸಂಭಾಷಣೆ (ಕೆಲವು ಕಡೆ ಅತಿ ಎನ್ನಿಸಿದರೂ) ಸಂದರ್ಭಕ್ಕೆ ಸರಿ ಹೊಂದುತ್ತೆ..


ಹಳ್ಳಿ ರಾಜಕೀಯ ಬೆಳವಣಿಗೆಯನ್ನ ಯಾವ ರೀತಿ ತುಳಿಯುತ್ತದೆ, ಒಳ್ಳೆ ಮನಸಿರುವ ಕೈಗಳನ್ನ ಹೇಗೆ ಕಾಡುತ್ತದೆ ಎನ್ನುವುದನ್ನ ಹಾಸ್ಯ ಮಿಶ್ರಿತ ದೃಶ್ಯಗಳಲ್ಲಿ ತೂಗಿಸಿಕೊಂಡು ಹೋಗುತ್ತದೆ..


೧೯೮೬ರಲ್ಲಿ ತೆರೆಕಂಡ ಈ ಚಿತ್ರದ ನಿಜವಾದ ನಾಯಕ ಕಥೆ ಹಾಗು ಸಂಭಾಷಣೆ.  ನಂತರದ ನಾಯಕ ಅರವಿಂದ್. ಇವರು ಅನುಭವ ಅರವಿಂದ್ ಅಂತಾನೆ ಪ್ರಸಿದ್ದಿ. ಅವರ ವೃತ್ತಿ ಬದುಕಿನಲ್ಲಿ  ಒಂದು ಅಪರೂಪದ ಚಿತ್ರ. ಅವರ ಪ್ರತಿಯೊಂದು ಮುಖಾಭಿನಯ, ಸಂಭಾಷಣೆ ಹೇಳುವ ಶ್ಯಲಿ ನಿಜಕ್ಕೂ ನಗೆ ಬುಗ್ಗೆ ಸುರಿಯುತ್ತೆ..


ಹಳ್ಳಿ ಪ್ರಮುಖ ಇಬ್ಬರು ಗೌಡರ ಪಾತ್ರದಲ್ಲಿ ವಜ್ರಪ್ಪ, ಹಾಗು ಆಂಜನಪ್ಪ ಕ್ರೌರ್ಯದ ಮುಖ ತೋರಿಸುತ್ತಲೇ, ಅವರ ಸಂಭಾಷಣೆಗಳು ನಗೆ ಹುಟ್ಟಿಸುತ್ತದೆ.


ಅಭಿನಯ ಅವರ ಅಭಿನಯ ಹಳ್ಳಿತನವನ್ನು, ಮುಗ್ದತೆಯನ್ನ ತೋರಿಸುತ್ತದೆ..


ಇನ್ನು ಬಸಕ್ಕನ ಪಾತ್ರಧಾರಿ ಮಹಿಮಾ ಪಟೇಲ್ ಮಹಾ ಮಹಿಮೆಯನ್ನೇ ತೋರಿಸುತ್ತಾರೆ..ಅವರ ಪಾತ್ರ ಸಿನಿಮಾದ ಕೊನೆ ಅಂಚಿನಲ್ಲಿ ಬರುತ್ತದೆ..ಆದ್ರೆ ನೆನಪಿನಲ್ಲಿ ಉಳಿಯುತ್ತೆ..


ಕತೆಗೆ ಮುಖ್ಯ ತಿರುವು ಕೊಡುವ ಪಾತ್ರದಲ್ಲಿ ರಮೇಶ್ ಭಟ್ ಗಮನ ಸೆಳೆಯುತ್ತಾರೆ.


ಕತೆಯ ತಿರುಳು ಇಷ್ಟೇ..ಹಳ್ಳಿ ಪಂಚಾಯತಿ ಕಛೇರಿಗೆ ಅಧ್ಯಕ್ಷ ಸ್ಥಾನಕ್ಕೆ ೧೧ ಸ್ಥಾನಗಳಿಗೆ ಚುನಾವಣೆ ನಡೆಯುತ್ತೆ..ಇಬ್ಬರು ಗೌಡರ ಎರಡು ಪಕ್ಷಗಳು ತಲಾ ಐದು ಸ್ಥಾನಗಳು ಸಿಗುತ್ತದೆ, ಉಳಿದ ಒಂದು ಸ್ಥಾನವನ್ನ ಹಿಂದುಳಿದ ಜಾತಿಗೆ ಸೇರಿದ ದಾಸಯ್ಯ (ಅರವಿಂದ್) ಗಳಿಸುತ್ತಾರೆ.  ಚುನಾವಣಾಧಿಕಾರಿ ಯಾರಿಗೂ ಸ್ಪಷ್ಟ ಬಹುಮತ ಇಲ್ಲದ ಕಾರಣ ದಾಸಯ್ಯ ಯಾರ ಪಕ್ಷಕ್ಕೆ ಸೇರುತ್ತಾನೋ ಅವರ ಪಕ್ಷವೇ ಅಧಿಕಾರಕ್ಕೆ ಬರುತ್ತೆ ಅಂತ ಹೇಳುತ್ತಾರೆ.  ಅವಾಗ ಶುರುವಾಗುತ್ತೆ ದಾಸಯ್ಯನ ಗೋಳು.


ಕೆಲವು ಸಂಭಾಷಣೆಗಳು :
೧. ಒಬ್ಬ ಕೆಲಸ ಮಾಡಿದರೆ ಬಾಯಿ ಬಡ್ಕೊತಾನೆ, ಇನ್ನೊಬ್ಬ ಮಾಡದಿದ್ದರೆ ಅಂಡು    ಬಡ್ಕೊತಾನೆ
2. ದಾಸಯ್ಯ, ಬಸಕ್ಕ ಚುನಾವಣೆಗೆ ನಿಲ್ಲುತ್ತಾರೆ ಅನ್ನುವ ಸುದ್ದಿ ಬಿದ್ದಾಗ ಒಬ್ಬ ಗೌಡ ಹೇಳುವ ಮಾತು "ತುಪ್ಪದ ಕೊಡದ ಮೇಲೆ ಕೂತಿರೋ ಇಲಿ, ಬಿಡೊಂಗೂ ಇಲ್ಲ, ಬಡಿಯೊಂಗೂ ಇಲ್ಲ.."
೩. ದಾಸಯ್ಯ ಮತ್ತು ಬಸಕ್ಕನ ಬಗ್ಗೆ ಗೌಡರು ಹೇಳುವ ಮಾತು "ಇವನು ಉಪ್ಪಿಲ್ಲದೇ ಹುರಿತಾನೆ, ಅವಳು ಎಣ್ಣೆ ಇಲ್ಲದೆ ಮೆರಿತಾಳೆ 
೪. ಇವಳು ದುಡ್ಡು ಕೊಟ್ಟರೆ ಧೂಪ ಹಾಕ್ತಾಳೆ, ಕಾಸು ಕೊಟ್ಟರೆ ಕೈಲಾಸ ತೋರಿಸ್ತಾಳೆ
೫. ದಾಸಯ್ಯ ಬಸಕ್ಕನಿಗೆ ನೀನು ಜನ ಸೇವೆ ಮಾಡು ಅಂತ ಹೇಳಿದಾಗ "ದಾಸಯ್ಯ, ಹತ್ತು ವರ್ಷದಿಂದ ಈ ಇಬ್ಬರ ಗೌಡರ ಸೇವೆ ಮಾಡಿ ಸಾಕಾಗಿ ಹೋಗಿದೆ,  ಇನ್ನು ಜನಗಳ ಸೇವೆ ನನಗೊಬ್ಬಳಿಗೆ ಆಗೋಲ್ಲ :-)
೬. ದೀಪ ನುಂಗೋ ದಾಸಯ್ಯ, ದೀವಟಿಗೆ ನುಂಗೋ ಬಸಕ್ಕ
೭. ಚುನಾವಣಾಧಿಕಾರಿ  ಹಳ್ಳಿಯಲ್ಲಿ ಹೆಣ್ಣು ಮಗಳನ್ನು ಚುನಾವಣೆಗೆ ನಿಲ್ಲಸಬೇಕು ಯಾಕೆ ಅಂದ್ರೆ ಅವಳು ವೀಕರ್  ಸೆಕ್ಸ್ ಅಂದ್ರೆ ದುರ್ಬಲ ಲಿಂಗ ಅಂತ ಹೇಳ್ತಾನೆ ಅದಕ್ಕೆ ಗೌಡ ಹೇಳುವ ಮಾತು..."ಅವಳು ಎಂಥ ಸ್ವಾಮಿ ದುರ್ಬಲ ಲಿಂಗ!!, ನಮ್ಮೂರಲ್ಲಿ ಇರುವ ಶಕ್ತಿಶಾಲಿ ಲಿಂಗ ಅವಳು"
೮. ಒಬ್ಬ ಗೌಡ ಬಂದು ಬಸಕ್ಕನಿಗೆ ನೀನು ನಿಂತ್ಕೋಬೇಕು  (ಚುನಾವಣೆಗೆ) ಅಂತ ಹೇಳಿದಾಗ ಅವಳು "ಏನಾತು ಗೌಡ್ರೆ..ದಿನಾಲು ಮಲಕ್ಕೋ,. ಮಗ್ಗಾಲಾಗು ಅಂತ ಹೇಳ್ತಾ ಇದ್ದೋರು .ಇವತ್ತೇನೋ ನಿಂತ್ಕೋ ಅಂತ ಹೇಳ್ತಾ ಇದ್ದೀರಾ?!"
೯. ಇನ್ನೊಬ್ಬ ಗೌಡ ನಿನಗೆ ಚೇರ್-ಮ್ಯಾನ್ ಖುರ್ಚಿ ಬೇಡ ಅಂತ ಬಸಕ್ಕನಿಗೆ  ಹೇಳಿದಾಗ ಅವಳು "ಏನಿದು ಗೌಡ್ರೆ, ಕಳೆದ ಹತ್ತು ವರ್ಷದಿಂದ ನೀವು ಕೇಳಿದಾಗೆಲ್ಲ ಕಾಲು ಕೊಡ್ತಾ ಇದ್ದೆ...ನೀವು ಆ ನಾಲ್ಕು ಕಾಲಿನ ಖುರ್ಚಿ ಕೊಡೋಲ್ಲ ಅಂತ ಹೇಳ್ತ್ಹಿರಲ್ಲ"


ಇವೆಲ್ಲ ಕೆಲವು ತುಣುಕುಗಳು...ಇಡಿ ಸಿನಿಮಾದಲ್ಲಿ ಇಂತಹ ಅನೇಕ ಸಂಭಾಷಣೆಗಳು ಇದ್ದಾವೆ...ನೋಡಿ ಖುಷಿ ಪಡಿ.

Sunday, February 12, 2012

ಲೋಕನಾಥ್ ಸಿನಿ ನಟ - ಅರವತ್ತೆರಡು ವಿವಾಹ ಮಹೋತ್ಸವ (2012)

http://www.prajavani.net/web/include/story.php?news=6528&section=54&menuid=13

ಲೋಕನಾಥ್ ಸಿನಿ ನಟ ಒಬ್ಬ ಕಲಾವಿದರು ...ಅವರಲ್ಲಿ ತುಂಬಿರುವ ಪ್ರತಿಭೆ ಅವರ ಎತ್ತರಕಿಂತಲೂ ಎತ್ತರ...
ಅರವತ್ತೆರಡು ವಿವಾಹ ಮಹೋತ್ಸವ ಆಚರಿಸುತ್ತಿರುವ ಈ ದಂಪತಿಗಳಿಗೆ ಕನ್ನಡ ಚಲನಚಿತ್ರ ವೀಕ್ಷಕರ ಪರವಾಗಿ ಒಂದು ಲೇಖನ..

ಲೋಕನಾಥ್ ಅಂದ ಕೂಡಲೇ ಕಣ್ಣ ಮುಂದೆ ಬರುವುದು ಉಪ್ಪಿನಕಾಯಿ ದೃಶ್ಯ - ಭೂತಯ್ಯನ ಮಗ ಅಯ್ಯು ಚಿತ್ರದಲ್ಲಿ...ದೃಶ್ಯಗಳು ಎರಡು ಮೂರೇ ಇದ್ದರು ಪರಿಣಾಮಕಾರಿಯಾಗಿ ಮನದಲ್ಲಿ ಛಾಪು ಒತ್ತಿದೆ.. ಅದರಲ್ಲೂ ಕಡೆ ದೃಶ್ಯದಲ್ಲಿ ಹೇಳುವ ಸಂಭಾಷಣೆ "ಅಯ್ಯನೋರ ಎಲ್ಲರು ನಿಮ್ಮ ಮನೆಯಿಂದ ಕದ್ದು ಕೊಂಡು ಹೋಗಿದ್ದನ್ನ ತಿರುಗಿ ಕೊಟ್ಟರು..ಆದ್ರೆ ನಾನು ಕೊಡೋಕೆ ಆಗೋಲ್ಲ...ಯಾಕೆ ಅಂದ್ರೆ ನಿಮ್ಮ ಮನೆ ಉಪ್ಪಿನಕಾಯಿ ಬಹಳ ರುಚಿ..ಅದಕ್ಕೆ ಸಾರು ಕುಡಿದ ಹಾಗೆ ಕುಡಿದು ಬಿಟ್ಟೆ..ಕ್ಷಮಿಸಿ ಅಯ್ಯನೋರ".ಈ ಸಂಭಾಷಣೆ ಹೇಳುವಾಗ ಅವರ ಮುಖದಲ್ಲಿ, ಹಾಗು ಧ್ವನಿಯಲ್ಲಿ ಸಿಗುವ ಮುಗ್ದತೆ ನಿಜಕ್ಕೂ ಅವರ್ಣನೀಯ ..

ದ್ವಾರ್ಕಿ-ವಿಷ್ಣು  ಜೋಡಿಯಲ್ಲಿ ಬಂದ ಅನೇಕ ಚಿತ್ರಗಳಲ್ಲಿ ಇವರ ಅಭಿನಯ ನಗೆ ಬುಗ್ಗೆ ಉಕ್ಕಿಸುತ್ತದೆ...ಕಿಟ್ಟು-ಪುಟ್ಟು, ಸಿಂಗಪೂರನಲ್ಲಿ ರಾಜ ಕುಳ್ಳ, ಮನೆ ಮನೆ ಕಥೆ, ಗುರು ಶಿಷ್ಯರು,  ಹೀಗೆ ಹಲವಾರು ಸಿನೆಮಾದಲ್ಲೂ ಅಭಿನಯ ಗಮನ ಸೆಳೆಯುತ್ತದೆ..

ನಾಗರಹಾವು, ಒಲವಿನ ಕಾಣಿಕೆ, ಅರುಣ ರಾಗ, ಬಂಗಾರದ ಪಂಜರ, ಮುಂತಾದ ಅನೇಕ ಚಿತ್ರಗಳಲ್ಲಿ ಅವರ ಕಂಚಿನ ಕಂಠದ ಮಾತುಗಳು, ಅಭಿನಯ ಬಲು ಸೊಗಸು

ಅವರ ಇನ್ನೊಂದು ಸುಂದರ ಅಭಿನಯದ ಸಿನಿಮಾ "ಮಿಂಚಿನ ಓಟ" ಶಂಕರ ನಾಗ್ ಅದ್ಭುತ ಚಿತ್ರ.  ಅದರಲ್ಲಿ ಕಳ್ಳರ ಪಾತ್ರದಲ್ಲಿ ಶಂಕರ್, ಅನಂತ್ ಜೊತೆಗೆ ಇವರು ಸೊಗಸಾಗಿ ಅಭಿನಯಿಸಿದ್ದಾರೆ..

ಇಂತಹ ಅಪರೂಪದ ಕಲಾವಿದ ಎಂಬತ್ತೆರಡು ವಸಂತಗಳನ್ನು ಪೂರೈಸಿ ಮುನ್ನೆಡೆಯುತ್ತಿದ್ದಾರೆ ..ಅವರಿಗೆ ಆ ಭಗವಂತ ಅರೋಗ್ಯ, ನೆಮ್ಮದಿ, ಸುಖ, ಶಾಂತಿ ಹಾಗು ಬಹುಕಾಲ ದಾಂಪತ್ಯ ಜೊತೆ ನೀಡಲಿ ಅನ್ನುವ ಆಶಯದೊಂದಿಗೆ ಈ ಲೇಖನ ಮುಗಿಸುತ್ತಿದ್ದೇನೆ..