Sunday, October 4, 2026

ಒಲವಿನ ಪೂಜೆಯೇ ಸಾಕ್ಷಾತ್ಕಾರಕ್ಕೆ ದಾರಿ ಎನ್ನುವ ಸಾಕ್ಷತ್ಕಾರ 1971 (ಅಣ್ಣಾವ್ರ ಚಿತ್ರ ೧೩೫/೨೦೭)




























ರಾಜಕುಮಾರ್ ಅವರು ಒಂದು ಮೂಲೆಯಲ್ಲಿ ನಿಂತು ನಗುತ್ತಿದ್ದರು.. 

ನಾನು ಯಾಕೆ ಸರ್ ನಗುತ್ತಿದ್ದೀರಿ ಅಂದೇ.. ಈ ಚಿತ್ರದ ಬಗ್ಗೆ ನೀನು ಏನು ಬರೆಯುತ್ತೀಯ ಎನ್ನುವ ಕುತೂಹಲವಿದೆ ನನಗೆ.. 

ಯಾಕೆ ಸರ್ 

ನೀನು ಪುಟ್ಟಣ್ಣ ಕಣಗಾಲ್ ಅವರ ಮತ್ತು ಅವರ ಚಿತ್ರಗಳ ಅಭಿಮಾನಿ.. ಆಗಲೇ ಅವರ ಕನ್ನಡ ಎಲ್ಲಾ ಚಿತ್ರಗಳ ಬಗ್ಗೆ ಬರೆದಿದ್ದೀಯ.. ಸ್ವಲ್ಪ ತಿಂಗಳಲ್ಲಿ ಅದರ ಬಗ್ಗೆ ಪುಸ್ತಕವನ್ನು ಪ್ರಿಂಟ್ ಮಾಡಿಸುವ ಗುರಿ ಹೊತ್ತಿದ್ದೀಯ ಮತ್ತು ಅದು ನನಸಾಗುತ್ತದೆ ಕೂಡ.. ಈ ಚಿತ್ರ ನನ್ನ ಮತ್ತು ಪುಟ್ಟಣ್ಣ ಅವರ ಜೊತೆಗಿನ ಅಂತಿಮ ಚಿತ್ರ. ವಾಣಿಜ್ಯವಾಗಿ ಸೋತಿತೋ ಗೆದ್ದಿತೋ ಅದು ನನಗೂ ಬೇಡ, ನಿನಗೂ ಬೇಡ.. ಆದರೆ ಚಿತ್ರ ನಿನ್ನನ್ನು ಆವರಿಸಿಕೊಂಡಿರುವ ಬಗ್ಗೆ ನನಗೆ ಗೊತ್ತು.. ಜೊತೆಗೆ ನಿನಗೆ ಇಲ್ಲಿ ಮೂವರ ಸೆಳೆತವಿದೆ.. ಒಂದು ಪುಟ್ಟಣ್ಣ ಕಣಗಾಲ್ ಮೇಲೆ ಅವಿರತ ಪ್ರೀತಿ.. ಎರಡು ನಿನ್ನ ನೆಚ್ಚಿನ ಬಾಲಣ್ಣ.. ಮೂರನೆಯದು ನಾನು.. ಹಾಗಾಗಿ ಮೂವರೂ ಇದ್ದೀವಿ.. ಹೇಗೆ ತಕ್ಕಡಿಯನ್ನು ತೂಗಿಸುವೆ ಎಂದು ಕುತೂಹಲವಿದೆ.. 

ಸರ್. ಈ ಸರಣಿ ನಿಮ್ಮ ಸರಣಿ ಹಾಗಾಗಿ ನೀವೇ ಕೇಂದ್ರಬಿಂದು.. ಈ ಸೌರಮಂಡಲದಲ್ಲಿ ನೀವೇ ಸೂರ್ಯ.. ಹಾಗಾಗಿ ನಿಮ್ಮಿಂದಲೇ ಶುರುವಾಗುತ್ತದೆ.. ಪುಟ್ಟಣ್ಣ ಕಣಗಾಲ್ ಅವರ ಬಗ್ಗೆ ಬರೆಯುವಾಗ ಅವರು, ಹಾಗೆಯೇ ಬಾಲಣ್ಣನವರ ಸರಣಿಯಲ್ಲಿ ಅವರು.. ಪ್ರಮುಖರಾಗುತ್ತಾರೆ.. ಅಲ್ಲವೇ..

ಸೂಪರ್ ಸೂಪರ್.. ಹಾಗಾದರೆ ಶುರು ಮಾಡು.. ಕಾಯಿಸಬೇಡ.. !

ಸರಿ ಸರ್

                                                                                     ****

"ನೋಡಿ ನಂಬಿದವರನ್ನು ಕೈ ಬಿಡೋಲ್ಲ.. ತಂಬಿಟ್ಟಿಗೆ ಉಪ್ಪು ಬೆರೆಸೋಲ್ಲ".. ಈ ಸಂಭಾಷಣೆ ಚಿತ್ರದ ಮೊದಲಾರ್ಧದಲ್ಲಿ ಪದೇ ಪದೇ ಕೇಳಿಬರುತ್ತಲೇ ಇರುತ್ತದೆ.. ಒಂದು ರೀತಿಯಲ್ಲಿ ಇದೆ ಚಿತ್ರದ ತಿರುಳಾಗಿ ಬಿಟ್ಟಿದೆ.. 

ಇಲ್ಲಿ ಒಲವನ್ನು ನಂಬಿದ ಮಹೇಶನ ಪಾತ್ರಧಾರಿ ರಾಜಕುಮಾರ್, ಒಲವೇ ಜೀವನ ಸಾಕ್ಷತ್ಕಾರ ಎನ್ನುವ ಮಹೇಶನ ಅಪ್ಪ ಭೂಪಾಲಯ್ಯನಾಗಿ ಪೃಥ್ವಿರಾಜಕಪೂರ್.. ಇವರ ಒಲವಿನ ಭಾವನೆಯನ್ನು ಯಾರೂ ನಂಬಿಕೊಳ್ಳೋದಿಲ್ಲ.. ಆದರೆ ಇವರಿಬ್ಬರು ಒಲವೇ ಬದುಕು ಎಂದು ನಂಬಿ ತಮ್ಮ ಗುರಿಯನ್ನು ತಲುಪುತ್ತಾರೆ.. 

ಇರಬಹುದು.. ಮಹೇಶನ ಮದುವೆಯನ್ನು ಅವರ ತಂದೆ ನೋಡಲಾಗೋದಿಲ್ಲ.. ಮಹೇಶನಿಗೆ ತನ್ನ ಪ್ರೀತಿ ಸಿಗೋದಿಲ್ಲ.. ಆದರೆ ಆ ಒಲವನ್ನು ದಿಕ್ಕರಿಸಿದ ಯಾರೂ ನೆಮ್ಮದಿಯಾಗಿರೋಲ್ಲ ಅದೇ ಸತ್ಯ.. 

ರಾಜಕುಮಾರ್ ಇಲ್ಲಿ ಅತ್ಯಂತ ಸಂಯಮಿ ಪಾತ್ರದಲ್ಲಿ ನಟಿಸಿದ್ದಾರೆ.. ಅಥವ ಅವರೇ ಮಹೇಶನಾಗಿದ್ದಾರೆ.. ಹಲವಾರು ಸಂದರ್ಭದಲ್ಲಿ ನೋಡುಗರಾದ ನಮಗ್ ಕೋಪ ಬಂದರೂ.. ರಾಜಕುಮಾರ್ ಅತ್ಯಂತ ತಾಳ್ಮೆಯ ಸ್ವರೂಪವಾಗಿ ಕಾಣುತ್ತಾರೆ.. ವಿದೇಶದಿಂದ ವ್ಯಾಸಂಗ ಮುಗಿಸಿ ಬಂದಿದ್ದರೂ.. ವಿದೇಶಿ ಪ್ರಭಾವ ಬೀರದಂತೆ ಅವರ ಪಾತ್ರವನ್ನು ನಿರೂಪಿಸಿದ್ದಾರೆ ಪುಟ್ಟಣ್ಣ ಕಣಗಾಲ್. 

ಅವರ ಪ್ರತಿಯೊಂದು ಸಮಭಾಷಣೆಯೂ ಕೂಡ ಸಂಗ್ರಹಯೋಗ್ಯ.. ರಾಜಕುಮಾರ್ ಅವರ ಇದೂವರೆಗಿನ ಚಿತ್ರಗಳಲ್ಲಿ ವಿಭಿನ್ನವಾಗಿ ಮೂಡಿಬಂದ ಚಿತ್ರವಿದು.. ಅವರ ಇಮೇಜಿಗೆ ಹೊಂದಿಕೊಂಡಿದೆ.. ಹೊಡೆದಾಟ, ಬಡಿತಾಟವಿಲ್ಲದ.. ಅಬ್ಬರವಿಲ್ಲದ ಅತ್ಯಂತ ಸಹೃದಯಿ ಪಾತ್ರ.. ಅವರ ಚಿತ್ರಜೀವನದಾಚೆಗಿನ ಗುಣಕ್ಕೆ ಬಹಳ ಹತ್ತಿರವಾಗಿದೆ.. ಒಲವು ಒಲವು ಒಲವು ಇಷ್ಟೇ ಅವರ ಪಾತ್ರದಲ್ಲಿ ಮೊಳಗುವುದು.. ಅದನ್ನು ಅಷ್ಟೇ ಅಚ್ಚುಕಟ್ಟಾಗಿ ತೆರೆಯ ಮೇಲೆ ತಂದಿದ್ದಾರೆ ರಾಜಕುಮಾರ್ ಅವರು.. 

ತಮ್ಮ ಒಲವು ತಮ್ಮ ಕೈಜಾರುತ್ತಿದೆ ಎಂದು ಅರಿವಾದಾಗಲೂ, ತಮ್ಮ ತಂದೆ ಅದಕ್ಕೆ ಬೆಂಗಾಲವಾಗಿದ್ದಾರೆ ಎಂದಾಗಲೂ.. ತನ್ನ ತಾಯಿಯ ವಿರೋಧವನ್ನು, ಮನೆಯ ನೆಂಟರಿಷ್ಟರ ವಿರೋಧವನ್ನು ಎದುರಿಸಬೇಕಾಗಿ  ಬಂದರೂ.. ಕಡೆಯಲ್ಲಿ ತಾನೇ ತನ್ನ ತಾಯಿಯನ್ನು ಕೊಂಡೆ ಎಂದು ತಾಯಿ "ಒಲವು ಒಲವು ಎಂದು ಒಲವಿನ ತಾಯಿಯನ್ನೇ ಕೊಂಡು ಬಿಟ್ಟೆಯಾ?" ಎನ್ನುವ ಅವರ ಮಾತಿನ ದೃಶ್ಯದಲ್ಲಿ ರಾಜಕುಮಾರ್ ಅವರ ಅಭಿನಯ ಅದ್ಭುತ.. 

ನನ್ನ ಒಲವಿನ ದೇವತೆ ಈ ಭೂಮಿಯಲ್ಲಿ ಹೆಚ್ಚು ಹೊತ್ತು ಇರಬಾರದು.. ಸುಮಂಗಲಿಯಾಗಿ ಅವಳನ್ನು ಕಳಿಸಿಕೊಡಬೇಕು ಎನ್ನುತ್ತಾ.. ಹಿನ್ನೆಲೆಯಾಗಿ ಬರುವ ಹಾಡಿಗೆ ಅದ್ಭುತ ಅಭಿನಯ ನೀಡಿರುವ ರಾಜಕುಮಾರ್ ಈ ಚಿತ್ರದ ಜೀವಾಳ.. 

"ಮಹೇಶ್".. "ತಾಯೆ"... 

ಈ ಪ್ರತಿಧ್ವನಿಸುವ ಸಂಭಾಷಣೆಯ ಒಡೆಯ ಪೃಥ್ವಿರಾಜಕಪೂರ್.. ಮೊದಲಾರ್ಧದಲ್ಲಿ ಕಾಣಿಸುವ ಇವರ ಪಾತ್ರ ಚಿತ್ರಕ್ಕೊಂದು ಆಧಾರದ ಕಂಬ.. 

ಪ್ರತಿಯೊಂದು ಸಂಭಾಷಣೆಯನ್ನು ತೂಗಿ ತೂಗಿ ಆಡುವ ಅವರ ಶೈಲಿ.. 

"ಒಲವೇ ಜೀವನ ಸಾಕ್ಷತ್ಕಾರ". 
"ಮಹೇಶ್ ತಾಯಿಯನ್ನು ದೈವದಂತೆ ಪ್ರೀತಿಸು"
"ಬರುವರಿಗೆ ಸ್ವಾಗತ.. ಹೋಗುವವರಿಗೆ" ಎಂದು ದೊಡ್ಡದಾಗಿ ಕೈ ಮುಗಿಯುವ ದೃಶ್ಯ
"ಜಗತ್ತಿನಲ್ಲಿ ಯಾವ ತಂದೆಗೂ ತನ್ನ ಹೆಂಡತಿಯನ್ನು ಕರೆದುಕೊಂಡು ಬಾರೋ ಅನ್ನುವಂತಹ ಸಂಧರ್ಭ ಬಾರದಿರಲಿ" 

ಈ ಸಂಭಾಷಣೆಗಳು ಅವರ ಅಭಿನಯವನ್ನು ಎತ್ತರಕ್ಕೆ ಏರಿಸುತ್ತದೆ.. 

ಲಟಾಪಟಿ ಲಕ್ಶ್ಮಣಯ್ಯ ಪಾತ್ರವನ್ನು ಅಕ್ಷರಶಃ ಜೀವಿಸಿದ್ದಾರೇ.. ಈ ಪಾತ್ರವನ್ನು ಬೇರೆಯಾರಿಂದಲೂ ಮಾಡಲು ಸಾಧ್ಯವೇ ಇಲ್ಲ.. ಖಳನಲ್ಲ.. ಆದರೆ ಖಳನೇ.. ಎನ್ನುವ ಅದ್ಭುತ ಪಾತ್ರವಿದು.. ಕೆಲವು ಸಂಭಾಷಣೆಗಳು 

"ಲೋ ಮಾಂಬಳ್ಳಿ"
"ತಂಬಿಟ್ಟಿಗೆ ಉಪ್ಪು ಬೆರೆಸೋನಲ್ಲ"
"ಅಷ್ಟೇ ಕಣೋ.. ಮಿಕ್ಕಿದ್ದೆಲ್ಲ ಬರಿ ಒಗ್ಗರಣೆ"
"ಮಹೇಶನ ಮದುವೆಯಾಗಿ ರಾಣಿಯಾಗಿ ಬಾಳು ಅಂದರೆ..ಹಾವ್ರಾಣಿಯಾಗಿ ಹಳ್ಳಿ ನುಂಗ್ತೀನಿ ಅಂತೀಯಾ"
"ನಿನ್ನ ಅಮ್ಮನ ಹಾಗೆ ಮೈ ಬಂತೆ ಹೊರತು. ನನ್ನ ಹಾಗೆ ಬುದ್ದಿ ಬರಲಿಲ್ಲ"
"ಭೂಪಾಲಯ್ಯನಂತವರ ಹಳ್ಳಿಗೊಡ್ಡುಗಳಿಗೆ ಚಳಿಬಿಡಿಸೋ ಪತ್ರವಿದು ಅಷ್ಟೇ"

ಬಿ ಜಯಮ್ಮ ಪುಟ್ಟ ಪಾತ್ರವಾದರೂ ಚಿತ್ರಕ್ಕೆ ಅವಶ್ಯಕತೆಯ ಪಾತ್ರ 

"ಅವರೇ ಬಂದು ಕರೆದರೆ ನಾ ಬರ್ತೀನಿ"
"ಬಹುಶಃ ಅವರಿದ್ದಿದ್ದರೆ ನಾನು ಬರುತ್ತಿದ್ದೆನೋ ಏನೋ.. ಮತ್ತೆ ಈ ಮುಖ ಇಟ್ಟುಕೊಂಡು ಅಲ್ಲಿಗೆ ಬರೋಲ್ಲ
"ಒಲವು ಒಲವು ಎಂದು ಒಲವಿನ ತಾಯಿಯನ್ನೇ ಬಲಿ ತೆಗೆದುಕೊಂಡು ಬಿಟ್ಟೆಯ"


ಈ ಸಂಭಾಷಣೆಗಳು ಅವರಿಂದ ಅದ್ಭುತವಾಗಿ ಮೂಡಿಬಂದಿದೆ.. 

ಆರ್ ನಾಗೇಂದ್ರರಾವ್.. ಅಜ್ಜಯ್ಯನಾಗಿ ಭೂಪಾಲಯ್ಯನ ಗೆಳೆಯನಾಗಿ ಅಭಿನಯ ಸುಂದರ.. 

"ಮಹೇಶ್ ಉಮಾ ಇವತ್ತಿನಿಂದ ನೀವು ಒಲವಿನ ಅಣ್ಣ ತಂಗಿಯಾಗಿ ಬಾಳಿ"
"ಬೇಡ ಕಣೋ ಭೂಪಾಲ.. ನಿನ್ನ ಮನೆ ಬೇರೆ ಅಲ್ಲ ನನ್ನ ಮನೆ ಬೇರೆ ಅಲ್ಲ ಅಂಗಾರಕ ಅನಿಷ್ಟ ಕಣೋ ಅನಿಷ್ಟ"
"ಈ ಪತ್ರ ಬಂದದ್ದು ಹೇಳದೆ.. ಎದೆಯೊಳಗೆ  ಇಟ್ಟುಕೊಂಡು ಕೂತಿದ್ದೆಯಲ್ಲ ಭೂಪಾಲ"
"ಮದ್ದುಗುಂಡು ಮಾಡಿಕೊಂಡು ಬರುವವರಿಗೆ ಒಲವಿನ ಭಾವನೆ ಅರ್ಥವಾಗೋಲ್ಲ ಮಹೇಶ"
"ಮಹೇಶ ನಿನಗೆ ಪುಸ್ತಕದ ಜ್ಞಾನ ಹೆಚ್ಚು ಮಸ್ತಕದ ಜ್ಞಾನ ಕಡಿಮೆ"

ರಾಜಕುಮಾರ್ ಅವರು ತಮ್ಮ ತಂದೆಯ ಅಸ್ತಿ ವಿಸರ್ಜನೆ ಮಾಡಿ ನದಿ ದಾಟಿ ಮೆಟ್ಟಿಲನ್ನು ಹತ್ತುವಾಗ ಅವರು ಓಡಿ ಬಂದು ರಾಜಕುಮಾರ್ ಅವರನ್ನು ತಬ್ಬಿಕೊಂಡು ಸಂತೈಸುವ ಅಭಿನಯ ಅದ್ಭುತ

ಉಳಿದಂತೆ ನಾಯಕಿಯಾಗಿ ಜಮುನಾ ಸೊಗಸಾದ ಅಭಿನಯ 
"ಏ ಗುಳ್ಟೋರಿಯಾ"
"ಎಲ್ಲಿ ತನಕ ನಿನ್ನ ಮಾತು ಈ ಬಂದೂಕಿಗೆ ಸಿಟ್ಟು ತರಿಸೊಲ್ವೊ ಅದು ಏನೂ ಮಾಡೋಲ್ಲ"
"ನಾ ಅಂಗಾರಕದ ಹೆಣ್ಣಲ್ಲ ಮಹೇಶ ನಾ ಅಂಗಾರಕದ ಹೆಣ್ಣಲ್ಲ
"

ಈ ದೃಶ್ಯಗಳಲ್ಲಿ ಅವರ ಅಭಿನಯ ನೋಡಿಯೇ ನಲಿಯಬೇಕು  

ನರಸಿಂಹರಾಜು "ಮಹೇಶ.. ನಿನ್ನ ಕಣ್ಣಿನಲ್ಲಿ ಒಲವಿನ ಜ್ಯೋತಿ ಬೆಳಗುತ್ತಿದೆ.. ಯಾವಾಗ ನಾವೆಲ್ಲ ಈ ಜ್ಯೋತಿಯ ಕೆಳಗೆ ಇರೋದಕ್ಕೆ ಯೋಗ್ಯತೆ ಬರುತ್ತೋ ಅವಾಗ ಇವರೆನ್ನೆಲ್ಲ ಕರೆದುಕೊಂಡು ನಾನೇ ಎಸ್ಟೇಟಿಗೆ ಬರುತ್ತೇನೆ"

 ವಜ್ರಮುನಿ, ನಾಗರತ್ನಮ್ಮ, ಸುರೇಖಾ, ಜಯಶ್ರೀ, ಅನಂತರಾಮ್ ಮಚ್ಚೇರಿ, ಮಾಂಬಳ್ಳಿ ಪಾತ್ರಧಾರಿ , ಎಚ್ ರಾಮಚಂದ್ರ ಶಾಸ್ತ್ರೀ ಮುಂತಾದ ಅನೇಕರ ಸಮಾಗಮದ ಈ ಚಿತ್ರದಲ್ಲಿ ಒಂದಕ್ಕೊಂದು ಹಾಡುಗಳು ಅದ್ಭುತವಾಗಿದೆ.. 

ಒಲವೇ ಜೀವನ ಸಾಕ್ಷತ್ಕಾರ .. ಪಿ ಸುಶೀಲ ಹಾಡುವ ಮೊದಲ ಗೀತೆಯಲ್ಲಿ ನಾಯಕ ನಾಯಕಿಯ ಮಧುರವಾದ ಪ್ರೀತಿಯನ್ನು ವ್ಯಕ್ತ ಪಡಿಸುತ್ತದೆ 

ಕಾದಿರುವಳು ಕೃಷ್ಣ.. ಪಿ ಸುಶೀಲ  - ವಧು ಪರೀಕ್ಷೆಯ ಸಾಂಪ್ರದಾಯಿಕ ಗೀತೆ 

ಫಲಿಸಿತು ಒಲವಿನ ಪೂಜಾಫಲ - ಪಿ ಸುಶೀಲ -ವಿವಾಹ ಸಂಪ್ರದಾಯದ ಎಲ್ಲಾ ಹಂತಗಳನ್ನು ಕಟ್ಟಿಕೊಡುವ ಹಾಡು 

ಜನ್ಮ ಜನ್ಮದ ಅನುಬಂಧ - ಪಿ ಬಿ ಶ್ರೀನಿವಾಸ್ - ಕರುನಾಡಿನ ಹೆಮ್ಮೆಯನ್ನು.. ಪ್ರೀತಿಯನ್ನು ಬೆರೆಸಿರುವ ಹಾಡಿದು 

ಒಲವೇ ಜೀವನ ಸಾಕ್ಷತ್ಕಾರ - ಪಿ ಬಿ ಶ್ರೀನಿವಾಸ್ ಮತ್ತು ಪಿ ಸುಶೀಲ - ಚಿತ್ರದ ಅಂತಿಮ ಗೀತೆಯಾಗಿದೆ.. ಈ ಹಾಡಿನಲ್ಲಿ ಕ್ಯಾಮೆರಾ ಓಡಾಟ.. ಅದ್ಭುತ.. 

ಈ ಚಿತ್ರ ಕಣಗಾಲ್ ಪ್ರಭಾಕರ್ ಶಾಸ್ತ್ರಿಯವರ ಅದ್ಭುತ ರಚನೆ.. ಕಥೆ, ಚಿತ್ರಕಥೆ, ಹಾಡುಗಳು, ಸಂಭಾಷಣೆ ಎಲ್ಲವೂ ಅವರದ್ದೇ.. 

ತಮ್ಮ ಅಣ್ಣನ ಅದ್ಭುತ ಪರಿಶ್ರಮವನ್ನು ಕೊಂಚವೂ ಲೋಪವಿಲ್ಲದಂತೆ ತೆರೆಯ ತಂದದ್ದು ಪುಟ್ಟಣ್ಣ ಕಣಗಾಲ್ ಅವರ ಅದ್ಭುತ ನಿರ್ದೇಶನ.. 

ಎಂ ರಂಗರಾವ್ ಅವರ ಸುಮಧುರ ಸಂಗೀತ.. ಶ್ರೀಕಾಂತ್ ಅವರ ಛಾಯಾಗ್ರಹಣವಿರುವ ಚಿತ್ರದ ಇನ್ನೊಂದು ವಿಶೇಷ.. ಚಿತ್ರದ ಆರಂಭದಲ್ಲಿ ಕನ್ನಡ ಕಾದಂಬರಿಗಳ ಸಾರ್ವಭೌಮ ಶ್ರೀ ಅ ನ ಕೃಷ್ಣರಾಯರು.. ಹಿಂದಿ ಚಿತ್ರರಂಗದ ಹೆಸರಾಂತ ನಟ ನಿರ್ದೇಶಕ ರಾಜಕಪೂರ್ ಅವರ ದೃಶ್ಯಾವಳಿಗಳು.. 

ಮಲ್ಲಿಕ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಬಿ ಮಲ್ಲಿಕ್ ಅವರು ನಿರ್ಮಿಸಿದ ಈ ಚಿತ್ರ ಕರುನಾಡಿನ ಚಿತ್ರರತ್ನವೇ ಹೌದು.. 


No comments:

Post a Comment