ಲಕ್ಷಾಂತರ ಪುಟಗಳಲ್ಲಿ ಆಗಲೇ ವಿಸ್ತಾರವಾಗಿ ಅನೇಕಾನೇಕರು ಬರೆದಿರುವ ಈ ಚಿತ್ರರತ್ನದ ಬಗ್ಗೆ ನಾನೇನು ಬರೆಯಲಿ ಅಂದಾಗ.. ನನ್ನ ಕಂಪ್ಯೂಟರಿನ ಮೂಲೆಯಲ್ಲಿ ಒಂದು ಸಂದೇಶ ಹೊರಗೆ ಬಂದಿತು.. ಬರೆದಿರುವವರು ನೂರೆಂಟು ರೀತಿಯಲ್ಲಿ ಬರೆದಿರಲಿ.. ಅದು ಅವರ ಬರಹ. ನೀನು ಏನು ಬರೆಯಬೇಕು ಅಂತಿದ್ದೀಯೋ ಅದನ್ನು ಬರಿ.. ಅಷ್ಟೇ.. ಅಂದಿತು ಆ ಸಂದೇಶ.. ಯಾರಪ್ಪ ಇದು ಅಂತ ನೋಡಿದರೆ.. ಕರುನಾಡಿನ ಚಿತ್ರ ರಸಿಕರು ಅಂತ ಇತ್ತು..
ಸರಿ. ಇನ್ನೇನು ಬರೆಯೋಕೆ ಅಂತ ಹೊರಟಾಗ.. ಮುಗಿಸಿಬಿಡಬೇಕು.. ಆದರೂ ಈ ಚಿತ್ರ ಒಂದು ರತ್ನವಾಗಿ ಕರು ನಾಡಿನಲ್ಲಿ ನಿಂತಿರುವುದು.. ರಾಜಕುಮಾರ್ ಅವರ ಸರ್ವಶ್ರೇಷ್ಠ ಅಭಿನಯದ ಚಿತ್ರ.. ಅಂತೆಲ್ಲ ಹೊಗಳಿಸಿಕೊಂಡಿರುವ ಈ ಚಿತ್ರದ ಬಗ್ಗೆ ಏನು ಬರೆಯಲಿ ಎಂದಾಗ ಹೊಳೆದದ್ದು ಎಲೆ ಮರೆಯ ಕಾಯಿಯಂತೆ ಇರುವ ರಾಮಯ್ಯನ ಪಾತ್ರ.
ಆ ಪಾತ್ರದ ಸುತ್ತಾ ಈ ಚಿತ್ರದ ಬಗ್ಗೆ ಹೇಳಿದರೆ ಹೆಂಗೆ ಅಂತ ಅನಿಸಿತು..
"ಬುದ್ದಿ.. ಬುದ್ದಿ. ಆ ತಲೆತಲಾಂತರದಿಂದ ಬಂದಿರುವ ಆ ಕೈಯುಂಗರವನ್ನು ತೆಗೆಯಬೇಡಿ ಅಂತ ಹೇಳಿದ್ದೆ.. ನೀವು ಕೇಳಲಿಲ್ಲ ಬುದ್ದಿ" ಅಂತ ರಾಮಯ್ಯ ಹೇಳಿದಾಗ.. ರವಿ "ಉಂಗುರದಲ್ಲಿರೋಲ್ಲ.. ಹಣೆಬರಹದಲ್ಲಿ ಇರುತ್ತೆ" ಅಂತ ಹಣೆಯ ಮೇಲೆ ಗೆರೆ ಎಳೆದು ತೋರಿಸುತ್ತಾರೆ..
ಇದು ಚಿತ್ರದ ತಿರುಳಿನ ಒಂದು ದೃಶ್ಯ.. ಇದು ಕಸ್ತೂರಿ ನಿವಾಸದ ಅಂತ್ಯದ ಆರಂಭ...
ಭೋಜರಾಜಯ್ಯ "ಹೀಗಾಗಿದ್ದಕ್ಕೆ ಹೀಗಾಗಿರೋದು.. ಸ್ವಲ್ಪ ದಿನ ನೋಡಿ.. ಪಾಪರ್ ಚೀಟಿ ತಗೊಳ್ಳುತ್ತೆ"
ರಾಮಯ್ಯ "ದಣಿಗಳು ಸ್ವಲ್ಪ ಕುಶಿಯಾಗಿದ್ದಾರೆಂದರೆ ಹದ್ದಿನ ಹಾಗೆ ಬಂದು ಸಂತೋಷ ಹಾಳು ಮಾಡ್ತಾರೆ ಈ ವಯ್ಯಾ" ಅಂತ ಬಯ್ತಾರೆ..
ಇದು ಕಸ್ತೂರಿನಿವಾಸದ ಇಳಿಜಾರಿನ ಪಯಣದ ಆರಂಭ..
ಭೋಜರಾಜಯ್ಯನ ಜೊತೆ ಮಾತಿನ ಚಕಮಕಿ ಆಗಿ ಫ್ಯಾಕ್ಟರಿಗೆ ಹೋದಾಗ.. ಮೊದಲು ಎಲ್ಲರೂ ಡೌವ್ ಬ್ರಾಂಡ್ ಬೆಂಕಿ ಪೊಟ್ಟಣ ಇಟ್ಟು ಕೊಂಡಿರುತ್ತಾರೆ... ಆದರೆ ಫ್ಯಾಕ್ಟರಿ ಅವನತಿಯ ಪಥದಲ್ಲಿ ಹೋಯಿತೋ ಅಥವ ಅಲ್ಲಿದ್ದವರು ಮಾಲೀಕರ ನಂಬಿಕೆಗೆ ಮೋಸ ಮಾಡಿದರೋ.. ಅಲ್ಲಿ ಈಗಲ್ ಬ್ರಾಂಡ್ ಬೆಂಕಿ ಪೊಟ್ಟಣ ಇರುತ್ತೆ..
ಇದು ಕಸ್ತೂರಿನಿವಾಸ ಮುಳುಗಿತು ಅನ್ನುವುದನ್ನು ಪರೋಕ್ಷವಾಗಿ ತೋರಿಸುವ ದೃಶ್ಯ..
ಕಡೆಯಲ್ಲಿ ಲೀಲಾ ಪಾತ್ರಧಾರಿ.. ಬಡತನದಿಂದ ಬಳಲುತ್ತಿದ್ದ ರವಿ ಮನೆಗೆ ಬಂದು ಊಟ ಮಾಡುತ್ತೇನೆ ಅಂದಾಗ.. ರವಿ ತನ್ನ ನೆಚ್ಚಿನ ಪಾರಿವಾಳವನ್ನು ಮಾರಿಸಿ ಆ ಹಣದಿಂದ ಅಡಿಗೆ ಪದಾರ್ಥ ತಂದು ರಾಮಯ್ಯ ಊಟ ಬಡಿಸುತ್ತಾರೆ.. ಆದರೆ ನಂತರ ಜ್ವರದಿಂದ ಬಳಲುತ್ತಿರುವ ಲೀಲಾಳ ಮಗುವಿಗೆ ರವಿ ಹತ್ತಿರದ ಪಾರಿವಾಳವೇ ಬೇಕು ಎಂದಾಗ ರವಿ ನಿಜಕ್ಕೂ ಹತಾಶರಾಗುತ್ತಾರೆ..ಇನ್ನೂ ನನ್ನ ಕಥೆ ಮುಗಿಯಿತು.. ಇನ್ನು ವಿಧಿಯ ವಿರುದ್ಧ ಹೋರಾಟ ಮಾಡಲಾರೆ ಅಂತ ಹೃದಯಾಘಾತವಾಗಿ ಸಾವನ್ನಪ್ಪುತ್ತಾರೆ..
ಆಗ ರಾಮಯ್ಯ "ಇಬ್ಬರು ಅನಾಥರನ್ನು ತಂದು ಸಾಕಿದ್ದರು.. ನೀನು ಮತ್ತು ಚಂದ್ರಪ್ಪ.. ಇಬ್ಬರೂ ಸರಿಯಾಗಿ ಪಾಠ ಕಲಿಸಿದಿರಿ.. ಹಣ ಕಸ್ಕಂಡ್ರಿ.. ಅಂತಸ್ತು ಕಸ್ಕಂಡ್ರಿ.. ಮನೆ ಕಸ್ಕಂಡ್ರಿ, ಮೇಯರ್ ಪದವಿ ಕಸ್ಕಂಡ್ರಿ , ಕಡೆಗೆ ಪಾರಿವಾಳ ಕಸ್ಕಳಕು ಬಂದ್ಬಿಟ್ರಿ.. ಹೋಗವ್ವ ಇನ್ನು ಏನೇನು ಕಸ್ಕಬೇಕು ಹೋಗ್ರವ್ವ.. "
ರಾಮಯ್ಯ ಈ ಎಲ್ಲ ದೃಶ್ಯಗಳಲ್ಲಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಇರುತ್ತಾರೆ.. ಚಿತ್ರದ ಕಥೆಗೆ ಮುಖ್ಯವಾದ ಆಧಾರವಾದ ಪಾತ್ರವಾಗಿ ನಿಲ್ಲುತ್ತಾರೆ.. ಪ್ರತಿಯೊಂದು ಹಂತದಲ್ಲೂ ಅವರ ಉಪಸ್ಥಿತಿ, ಯಾವುದೇ ಫಲಾಪೇಕ್ಷೆಯಿಲ್ಲದೆ ಮಾಲೀಕರ ಏಳಿಗೆಗೆ, ಅವರ ಸೌಖ್ಯಕ್ಕಾಗಿ ಹಗಲಿರುಳು ಶ್ರಮಿಸುವ ಪಾತ್ರವಾಗಿ ರೂಪಿತವಾಗಿದೆ..
ರಾಮಯ್ಯನ ಪಾತ್ರಧಾರಿ ಕೆ ಎಸ್ ಅಶ್ವಥ್ ಅದ್ಭುತವಾಗಿ ನಟಿಸಿದ್ದಾರೆ ಅನ್ನೋದಾ ಪಾತ್ರವಾಗಿದ್ದಾರೆ ಅನ್ನೋದ.. ಅವರ ಹತ್ತಿರ ಕೇಳಿದೆ.. ರವಿ ಪಾತ್ರದಲ್ಲಿ ರಾಜಕುಮಾರ್ ಅವರ ಅಭಿನಯ ಹೇಗಿದೆ ಅಂತ..
ಏನಪ್ಪಾ. ಹೀಗೆ ಕೇಳ್ತೀಯಾ.. ರಾಜಕುಮಾರ್ ಅಂದರೆ ಸುಮ್ನೆ ನಾ.. ಅದ್ಭುತ ನಟರು ಅವರು.. ಇಲ್ಲಿ ನೀನು ಗಮನಿಸಬೇಕು.. ಈ ಪಾತ್ರ ಆರಂಭದಲ್ಲಿ ಸ್ವಲ್ಪ ದೃಶ್ಯ ಬಿಟ್ಟರೆ.. ಮಿಕ್ಕ ದೃಶ್ಯಗಳು.. ಕಥೆಯ ಭಾಗವನ್ನು ಒಪ್ಪಿಕೊಳ್ಳೋದು ಕಷ್ಟ.. ಅದನ್ನು ಹಠಮಾರಿ ಸ್ವಭಾವ ಅಂತೀಯೋ, ಕೊಂಚ ಮುಂಗೋಪ ಅಂತೀರೋ. ಅಥವ ಯೋಚಿಸದೆ ತೆಗೆದುಕೊಂಡ ನಿರ್ಧಾರವೋ.. ಹೀಗಾದರೂ ಇರಲಿ.. ರವಿ ಪಾತ್ರಕ್ಕೆ ಅವರು ಆಸ್ತಿಪಾಸ್ತಿ ಕಳೆದುಕೊಳ್ಳೋತನಕ ಮೋಡ ಕವಿದಿರುತ್ತೆ.. ಅವರು ಎಲ್ಲಾ ಕಳೆದುಕೊಂಡು ರಾಮಯ್ಯನ ಪುಟ್ಟ ಗುಡಿಸಲಿಗೆ ಬಂದು ರಾಣಿ ತರುವ ತಂಜಾವೂರಿನ ಗೊಂಬೆಯ ಸುತ್ತಾ ಹಾಡು ಹಾಡ್ತಾರಲ್ಲ.. ಅಲ್ಲಿಂದ ರಾಜಕುಮಾರ್ ಅವರ ರೀತಿ ಅಭಿನಯ ಮಾಡೋಕೆ ಯಾರಿಗೂ ಸಾಧ್ಯವಿಲ್ಲ. ಇದು ನನ್ನ ಅಭಿಪ್ರಾಯ ಮಾತ್ರವಲ್ಲ.. ಎಲ್ಲಾ ಚಿತ್ರರಸಿಕರ ಅಭಿಪ್ರಾಯವೂ ಹೌದು..
ಪುಟ್ಟ ಕುರುಚಲು ಗಡ್ಡ.. ಅಲ್ಲಲ್ಲಿ ಹರಿದ ಕೋಟು.. ಗಾಳಿಗೆ ಹಾರುತ್ತಿರುವ ತಲೆಕೂದಲು.. ಏನೇ ಆಗಲಿ ನಾ ತಲೆಬಾಗುವುದುಲ್ಲ ಎನ್ನುವ ಆ ನಿಲುವು. ಮುಖಭಾವ.. ರಾಣಿಯ ಸಮಾಧಿಯ ಹತ್ತಿರ ಅವರು ಕೊಡುವ ಅದ್ಭುತ ಅಭಿನಯ.. ಏನೂ ಹೇಳದೆ ಕಣ್ಣಲ್ಲಿಯೇ ನೀಡುವ ಅದ್ಭುತ ಅಭಿನಯ.. ಬಹುಕಾಲ ಉಳಿಯುತ್ತದೆ..
ನನಗನ್ನಿಸೋದು... ಆಗಲೇ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ.. ಕರುನಾಡಿನ ಚಿತ್ರರಸಿಕರ ಮನೆಯಲ್ಲಿ ಮನೆ ಮಾಡಿಕೊಂಡಿದ್ದ ರಾಜಕುಮಾರ್ ಅವರು ಈ ಚಿತ್ರವನ್ನು, ಚಿತ್ರಕತೆಯನ್ನು ಒಪ್ಪಿಕೊಂಡಿದ್ದು ಸ್ವಲ್ಪ ಅಚ್ಚರಿ ಮೂಡಿಸಿತ್ತು .. ಯಾಕೆ ಅಂದರೆ.. ಮುಕ್ಕಾಲು ಪಾಲು ಚಿತ್ರದಲ್ಲಿ ಅವರು ತೆಗೆದುಕೊಳ್ಳುವ ನಿರ್ಧಾರಗಳು.. ನನಗೆ ಅಂದರೆ ರಾಮಯ್ಯನಿಗೆ ಅಷ್ಟು ಸರಿ ಅನಿಸಲಿಲ್ಲ..ಆದರೆ ತನ್ನನ್ನು ಸಲಹುತ್ತಿರುವ ದಣಿಗಳು.. ಅವರ ನಿರ್ಧಾರದ ಬಗ್ಗೆ ನಾ ಹೇಳೋಕೆ ಆಗುತ್ತೆ ಮತ್ತು ಏನು ಹೇಳುವುದು .. ..
ಆದರೆ ರಾಜಕುಮಾರ್ ಅವರು ಪಾತ್ರದೊಳಗೆ ನುಗ್ಗಿದ್ದು. ನಾ ಮೇಲೆ ಹೇಳಿದ ದೃಶ್ಯದಿಂದ ನನಗೆ ಅವರ ಅಭಿನಯ ಇನ್ನಷ್ಟು ಇಷ್ಟವಾದರು.. ಪಾತ್ರದ ಅಂತಃಸತ್ವ.. ಇನ್ನಷ್ಟು ಪ್ರಖರವಾಗಿದ್ದು ಆ ದೃಶ್ಯದಿಂದ.. ಕಥೆಯ ನಿರ್ಧಾರಗಳು ಚರ್ಚೆಯ ವಿಷಯವಾದರೂ.. ಅವರಲ್ಲಿನ ಅಭಿನಯ ಆ ದೃಶ್ಯಗಳನ್ನು ಒಪ್ಪಿಕೊಳ್ಳುವಂತೆ ಮಾಡಿತ್ತು..
೧) ತಾನು ಮೆಚ್ಚಿಕೊಂಡು ಹೆಚ್ಚಿನ ತಂತ್ರಜ್ಞಾನದ ಕಲಿಕೆಗಾಗಿ ವಿದೇಶಕ್ಕೆ ಕಲಿಸುವ ನಿರ್ಧಾರವನ್ನು ದಿಕ್ಕರಿಸಿದ ಚಂದ್ರುವನ್ನು ತಕ್ಷಣ ಕೆಲ್ಸದಿಂದ ತೆಗೆದು ಹಾಕುವುದು.. ನಂತರ ಆ ನಿರ್ಧಾರದ ಹಿಂದಿನ ಚಂದ್ರುವಿನ ಅಸಹಾಯಕತೆಯನ್ನು ಅರಿತ ಮೇಲೆ.. ತಕ್ಷಣ ತನ್ನ ತಪ್ಪಿನ ನಿರ್ಧಾರವನ್ನು ಸರಿಪಡಿಸಿಕೊ ಳ್ಳುವುದು - ಮುಂಗೋಪದ ನಿರ್ಧಾರ.. ನಂತರ ಪಶ್ಚಾತಾಪ
೨) ಹೊಸ ತಂತ್ರಜ್ಞಾನವನ್ನು ತಮ್ಮ ಫ್ಯಾಕ್ಟರಿಯಲ್ಲಿ ಅಳವಡಿಸಿಕೊಳ್ಳೋಣ ಅಂದಾಗ ಅದನ್ನು ಬೇಡ ಎನ್ನುವುದು..ಹೊಸತನಕ್ಕೆ ಹೊಂದಿಕೊಳ್ಳದ ಮನಸ್ಸು
೩) ತಾನು ನಂಬಿದವರ ಮೇಲೆ ಪೂರ್ಣ ನಂಬಿಕೆ ಇಟ್ಟು ಅವರ ಏಳಿಗೆಯಲ್ಲಿಯೇ ಖುಷಿ ಕಾಣಬೇಕು ಎನ್ನವ ಗುಣ ಒಳ್ಳೆಯದಾದರೂ, ಇನ್ನೊಬ್ಬರ ಮನೆಯನ್ನು ಬೆಳಗಿಸುವುದಕ್ಕಾಗಿ ತನ್ನ ಮನೆಯನ್ನು ಹೊತ್ತಿ ಉರಿಸೋದು - ತನ್ನ ಬಗ್ಗೆ ಯೋಚಿಸದೆ ಸದಾ ಪರರ ಬಗ್ಗೆ ಯೋಚಿಸೋದು
೪) ವ್ಯಾಪಾರ ದಿವಾಳಿ ಎದ್ದಿರುತ್ತೆ.. ಆದರೆ ಅದರ ಬಗ್ಗೆ ಮಾಹಿತಿ ಇರೋಲ್ಲ.. ಆದರೂ ದಾನ ಧರ್ಮ ನಿಂತಿರೋಲ್ಲ.. ಬದಲಿಗೆ ಹೆಚ್ಚಿನ ಬಡ್ಡಿಗೆ ಹಣ ಸಾಲ ತಂದು ತನ್ನ ದಾನ ಧರ್ಮ ಮುಂದುವರೆಸೋದು.. ಫ್ಯಾಕ್ಟರಿ ಕೆಲಸಗಾರರಿಗೆ ಸಂಬಳ ಬೋನಸ್ ನೀಡುವುದು - ಮುಂದಾಲೋಚನೆಯ ಸ್ಥಿತಿಯಿಲ್ಲ
ಆದರೆ ಮೆಚ್ಚುವ ಅಂಶ ಎಂದರೆ.. ಇದೆಲ್ಲಾ ಸಾಮಾನ್ಯ ಮನುಷ್ಯರಿಗೆ ಅರ್ಥವಾಗುವ ವಿಷಯ.. ಅದು ಅವರಿಗೂ ಅರ್ಥವಾಗಿದ್ದ ವಿಷಯ.. ಆದರೆ ಕಥೆ ಚಿತ್ರಕತೆಯನ್ನು ಒಪ್ಪಿಕೊಂಡು..ಅದಕ್ಕೆ ಬೇಕಿರುವ ಅಭಿನಯ ನೀಡಿರುವ ರಾಜಕುಮಾರ್ ನಿಜಕ್ಕೂ ಶ್ಲಾಘನೀಯ.. ಮತ್ತು ಅವರ ಅಭಿನಯ ಮೊದಲ ಅರ್ಧದಲ್ಲಿ ನಮ್ಮನ್ನು ಆ ಪಾತ್ರವನ್ನು ಒಪ್ಪಿಕೊಳ್ಳುವಂತೆ ಮಾಡುವುದು ಅವರ ವಿಶಿಷ್ಟ ಅಭಿನಯ ಕಲಾಗಾರಿಕೆ.. ಅಂದರೆ ಬದುಕು ಏನೇ ಸವಾಲು ನೀಡಲಿ... ನನ್ನತನವನ್ನು ನಾ ಬಿಡೋಲ್ಲ.. ಏನೇ ಆಗಲಿ ಅದು ನನ್ನನ್ನು ಸೋಲಿಸಲು ಸಾಧ್ಯವಿಲ್ಲ ಎನ್ನುವ ಮನೋಚೇತನವನ್ನು ಆ ಪಾತ್ರದ ಅಭಿನಯದಲ್ಲಿ ತೋರಿಸಿದ್ದಾರೆ..
> ರಾಮಯ್ಯನಿಗೆ ಎಲ್ಲಾ ಹಣೆಬರಹ ಎಂದುಕೊಂಡು ಹಣೆಯ ಮೇಲೆ ಗೆರೆ ಎಳೆದು ತೋರಿಸೋದು
> ಲೀಲಾಳಿಗೆ ಬರೆದ ಪತ್ರವನ್ನು ಆಕೆ ತನ್ನನ್ನಲ್ಲ, ಬದಲಿಗೆ ಚಂದ್ರುವನ್ನು ಪ್ರೀತಿಸುತ್ತಿದ್ದಾರೆ ಎಂದು ತಿಳಿದಾಗ ಆ ಪತ್ರವನ್ನು ಹರಿದು ಹಾಕಿ.. ನಗುತ್ತ ಮೆಟ್ಟಿಲು ಹತ್ತಿ ಹೋಗೋದು
> ರಾಣಿಯ ಸಮಾಧಿಯ ಬಳಿ ಕೂತು ಆಗಸದತ್ತ ನೋಡುವ ಅಭಿನಯ.. ಕಣ್ಣಲ್ಲಿಯೇ ಮಡು ಗಟ್ಟಿದ ಶೋಕವನ್ನು ತೋರಿಸೋದು..
> ಅಲ್ಲಿಂದ ನೆಡೆದುಕೊಂಡು ಹೋಗುವಾಗ.. ಕಣ್ಣೀರು ಒರೆಸಿಕೊಳ್ಳೋದು..
> ತನ್ನನ್ನು ಅಣಕಿಸುತ್ತಿದೆ ಎಂದು ಅಂದುಕೊಂಡು.. ತನ್ನಲ್ಲಿದ್ದ ಪಾರಿವಾಳವನ್ನು ಹದ್ದಿನತ್ತ ಛೂ ಬಿಡಲು ಪ್ರಯತ್ನಿಸುವ ದೃಶ್ಯ
> ಪ್ರಭು ನೀ ನನಗೆ ಒಡ್ಡಿದ ಕಷ್ಟಗಳಿಗೆ ನಾ ಜಗ್ಗಲಿಲ್ಲ. ಕುಗ್ಗಲಿಲ್ಲ.. ಈಗ ಲೀಲಾ ಮತ್ತೊಮ್ಮೆ ನನ್ನ ಬಳಿ ಏನೋ ಕೇಳಿಕೊಳ್ಳಲು ಬಂದಿದ್ದಾಳೆ.. ನನ್ನ ಹತ್ತಿರ ಇರೋದನ್ನು ಮಾತ್ರ ಕೇಳುವಂತೆ ಮಾಡು..
> ನನ್ನ ಬಾಯಲ್ಲಿ ಇಲ್ಲ ಅಂತ ಹೇಳಿಸೋಕೆ ನನ್ನನ್ನು ಇಲ್ಲೀ ತನಕ ಉಳಿಸಿದ್ದೀಯಾ.
ಈ ದೃಶ್ಯಗಳ ಅಭಿನಯ ರಾಜಕುಮಾರ್ ಒಬ್ಬರಿಗೆ ಮಾತ್ರ ಸಾಧ್ಯ..
ಆಹಾ ಎಷ್ಟು ಸರಳವಾಗಿ ಚಿತ್ರದ ತಿರುಳನ್ನು ಹೇಳಿದ್ದೀರಿ.. ಸೊಗಸಾಗಿದೆ.. ಅಶ್ವಥ್ ಅವರೇ..
ಧನ್ಯವಾದಗಳು ಕಣಪ್ಪ.. ನೀನು ನನ್ನ ಬಗ್ಗೆಯೂ ಬರೆಯುತ್ತೀಯಂತೆ .. ಶುಭವಾಗಲಿ ನಿನಗೆ..
ಧನ್ಯವಾದಗಳು ಸರ್.. ಈ ಚಿತ್ರದಲ್ಲಿ ರಾಜಕುಮಾರ್ ಅವರ ಅಭಿನಯದ ಬಗ್ಗೆ ನೀವು ಸುಲಲಿತವಾಗಿ ಹೇಳಿದ್ದೀರಿ..ನಿಮ್ಮ ಪಾತ್ರಾಭಿನಯ ಅದ್ಭುತ.. ಚಿತ್ರದ ಅಂತಿಮ ದೃಶ್ಯದಲ್ಲಿ ಬಿಟ್ಟು.. ಸಾಮಾನ್ಯ ಎಲ್ಲಾ ದೃಶ್ಯಗಳಲ್ಲಿಯೂ ಅದರಲ್ಲೂ ತಮ್ಮ ದಣಿಗಳು ಇರುವ ದೃಶ್ಯದಲ್ಲಿ ಮುಖ್ಯವಾಗಿ ಸದಾ ಬಾಗಿ ನಿಂತು ಅಭಿನಯಿಸಿರುವ ಭಂಗಿ. ದೇವರೇ ಇದೇನಾ ನಿನ್ನ ನ್ಯಾಯ.. ನೀನು ಕಲ್ಲು ಕಲ್ಲು ..ಎಂದು ಹೇಳುವಾಗ ತೋರುವ ಆಕ್ರೋಶ. .. ಹದ್ದನ್ನು ಪಾರಿವಾಳ ಕೊಂದಾತ ಬುದ್ದಿ.. ಎಂದು ನಂತರ.. ಎಲ್ಲಾ ಹದ್ದೆ ಅಂತ ಕಲ್ಲು ಎಸೆಯುವ ದೃಶ್ಯ.. ಕಡೆಯಲ್ಲಿ ಲೀಲಾ ಪಾತ್ರಧಾರಿಗೆ ಕೈಮುಗಿದು ಹೇಳುವ ಸಂಭಾಷಣೆ.. ನಿಜವಾಗಿಯೂ ಆ ಪಾತ್ರವನ್ನು ಅಭಿನಯಿಸಿಲ್ಲ.. ಬದಲಿಗೆ ಸಮೃದ್ಧವಾಗಿ ಮೆರೆದು ವಿನಾಶದ ಅಂಚಿಗೆ ಬಂದಿದ್ದ ಕಸ್ತೂರಿನಿವಾಸದ ಎಲ್ಲಾ ಹಂತವನ್ನು ನೋಡಿ.. ಅದರ ಅಂತ್ಯವನ್ನು ನೋಡುತ್ತಿರುವ ಹತಾಶೆ, ಸಿಟ್ಟು ಎಲ್ಲವನ್ನೂ ತುಂಬಿಕೊಂಡು ಅಭಿನಯಿಸಿರುವ ಪರಿ ಅದ್ಭುತ..
ಬಾಲಣ್ಣ ಏನು ಹೇಳೋದು.. ಇರೋದು ಪುಟ್ಟ ಪಾತ್ರವೇ ಆದರೂ.. ಅಲ್ಲಿ ಇರಬೇಕಾದ ಕುಚೋದ್ಯ, ಹೊಟ್ಟೆ ಕಿಚ್ಚು.. ತನ್ನ ಮಗಳನ್ನು ಬೇಡ ಎಂದ ರವಿಗೆ ಬುದ್ದಿ ಕಲಿಸಬೇಕು ಎನ್ನುವ ಸೇಡು.. ಅವರ ಪುಟ್ಟ ಪುಟ್ಟ ದೃಶ್ಯಗಳಲ್ಲಿ..
ನರಸಿಂಹರಾಜು ಅವರ ಹಾಸ್ಯ ಕೆಲವು ದೃಶ್ಯಗಳಿಗೆ ಸೀಮಿತವಾಗಿದೆ..ಈ ಚಿತ್ರ ಮನವನ್ನು ಕಲಕುವ ಚಿತ್ರವಾಗಿದೆ.. ಹಾಗಾಗಿ ಹಾಸ್ಯ ಗುಪ್ತಗಾಮಿನಿಯಾಗಿದೆ..
ಮುದ್ದು ಮಗುವಾಗಿ ಬೇಬಿ ರಾಣಿ ಅಭಿನಯ ಆ ಹಾಡಿನಲ್ಲಿ ಅಮರವಾಗಿದೆ.
ರಾಜಾಶಂಕರ್ ಈ ಚಿತ್ರದ ಒಂದು ಜೀವಾಳ.. ತನ್ನ ಹಟ್ಟಶೆಯನ್ನು ಮನದೊಳಗೆ ಇಟ್ಟುಕೊಂಡು ಅಭಿನಯ ನೀಡಿದ್ದಾರೆ
ಜಯಂತಿ ಮುದ್ದಾಗಿ ಕಾಣೋದಷ್ಟೇ ಅಲ್ಲ.. ಸೊಗಸಾದ ಅಭಿನಯ.. ಅದರಲ್ಲೂ ತಮ್ಮ ಬಾಸಿನ ಹತ್ತಿರ ಬೇಡುವುದಕ್ಕೆ ಬಂದಾಗ ಅವರ ಅಭಿನಯ ಸೊಗಸು..
ಅತಿಥಿ ಪಾತ್ರದಲ್ಲಿ ಆರತಿ, ಸುರೇಖ, ವಿಜಯಶ್ರೀ,
ಕಥೆ : ಜಿ ಬಾಲಸುಬ್ರಮಣ್ಯಂ
ಚಿತ್ರಕಥೆ, ನಿರ್ಮಾಪಕ, ನಿರ್ದೇಶನ : ದೊರೈ ಭಗವಾನ್
(ಪರೋಕ್ಷ ನಿರ್ಮಾಣ - ಕೆ ಸಿ ಎನ್ ಗೌಡ)
ಛಾಯಾಗ್ರಹಣ: ದೊರೈರಾಜ್, ಚಿಟ್ಟಿಬಾಬು ಮತ್ತು ಎನ್ ಜಿ ರಾವ್
ಸಂಗೀತ : ಜಿ ಕೆ ವೆಂಕಟೇಶ್
ಹಾಡುಗಳು : ವಿಜಯನಾರಸಿಂಹ, ಚಿ ಉದಯಶಂಕರ್ ಮತ್ತು ಆರ್ ಎನ್ ಜಯಗೋಪಾಲ್
ಗಾಯಕರು : ಪಿ ಬಿ ಶ್ರೀನಿವಾಸ್, ಪಿ ಸುಶೀಲ ಎಲ್ ಆರ್ ಈಶ್ವರಿ ಮತ್ತು ಜಿ ಕೆ ವೆಂಕಟೇಶ್
ನಿರ್ಮಾಪಕರು : ಕೆ ಸಿ ಎನ್ ಗೌಡ
ಲಾಂಛನ : ಅನುಪಮಾ ಮೂವೀಸ್
ಹಾಡುಗಳು : ನೀ ಬಂದು ನಿಂತಾಗ - ಪಿ ಬಿ ಶ್ರೀನಿವಾಸ್ ಮತ್ತು ಪಿ ಸುಶೀಲ
ಪಿ ಬಿ ಶ್ರೀನಿವಾಸ್ ಅವರು ಜೇನಂತ ಮಾತಲ್ಲಿ ಅಂತ ಶುರು ಮಾಡೋದು ಕೇಳೋದೇ ಚೆನ್ನ
ಓ ಗೆಳಯ - ಎಲ್ ಆರ್ ಈಶ್ವರಿ
ಎಲ್ಲೇ ಇರು ಹೇಗೆ ಇರು - ಪಿ ಸುಶೀಲ
ಆಡೋಣ ನಾನು ನೀನು - ಪಿ ಬಿ ಶ್ರೀನಿವಾಸ್
ಆಡಿಸಿ ನೋಡು ಬೀಳಿಸಿ ನೋಡು - ಪಿ ಬಿ ಶ್ರೀನಿವಾಸ್
ಆಡಿಸಿದಾತ ಬೇಸರ ಮೂಡಿ - ಜಿ ಕೆ ವೆಂಕಟೇಶ್
No comments:
Post a Comment