Sunday, October 4, 2026

ಆರಂಭದ ದೃಶ್ಯ ಚಿತ್ರದ ರೂಪುರೇಷೆಯನ್ನೇ ಬದಲಿಸುವ ಜನ್ಮರಹಸ್ಯ 1972 (ಅಣ್ಣಾವ್ರ ಚಿತ್ರ ೧೩೯/೨೦೭)

ಮೂಲಕಥೆ ಅಬ್ದುಲ್ ಮುತ್ತಲಿಬ್ 
ಸಂಭಾಷಣೆ ಎಂ ನರೇಂದ್ರಬಾಬು 
ಹಾಡುಗಳು ಆರ್ ಎನ್ ಜಯಗೋಪಾಲ್ ಮತ್ತು ಎಂ ನರೇಂದ್ರಬಾಬು 
ಗಾಯಕರು ಪಿ ಬಿ ಶ್ರೀನಿವಾಸ್, ಎಸ್ ಜಾನಕೀ ಮತ್ತು ಎಲ್ ಆರ್ ಈಶ್ವರಿ 
ಛಾಯಾಗ್ರಹಣ ಆರ್ ಎನ್ ಕೆ ಪ್ರಸಾದ್ 
ಸಂಗೀತ ಎಂ ರಂಗರಾವ್ 
ನಿರ್ಮಾಪಕರು ಶ್ರೀಕಾಂತ್ ನಹತ & ಶ್ರೀಕಾಂತ್ ಪಟೇಲ್ 
ಬ್ಯಾನರ್ ಶ್ರೀಕಾಂತ್ & ಶ್ರೀಕಾಂತ್ ಎಂಟರ್ಪ್ರೈಸಸ್ 
ಚಿತ್ರಕತೆ , ಸಂಕಲನ ಮತ್ತು ನಿರ್ದೇಶನ ಎಸ್ ಪಿ ಎನ್ ಕೃಷ್ಣ 
ತಾರಾಗಣದಲ್ಲಿ ರಾಜಕುಮಾರ್, ಭಾರತಿ, ಕೆ ಎಸ್ ಅಶ್ವಥ್, ದಿನೇಶ್, ದ್ವಾರಕೀಶ್, ನಿರಂಜನ್, ಬಿ ರಾಘವೇಂದ್ರ ರಾವ್, ಪಂಡರಿ ಬಾಯಿ, ಆದವಾನಿ ಲಕ್ಷ್ಮೀದೇವಿ, ಜ್ಯೋತಿ ಲಕ್ಸ್ಮಿ ಮತ್ತು ವಿಜಯಶ್ರೀ ಮತ್ತಿರರು 

ಕಾವೇರಿ ತೀರದಲ್ಲಿ ಒಂದು ಕಾಡು - ಮಕ್ಕಳ ನೃತ್ಯ ಗೀತೆ 
ಬೀಸೋ ಗಾಳಿಯಲಿ ಅಲೆವ ನೀರಾಲೆ - ಪ್ರಣಯ ಗೀತೆ 
ಕಣ್ಣಂಚಲಿ  - ಕ್ಲಬ್ ಗೀತೆ
 ದುಮ್ಮಾನ ಏಕೆ - ಕ್ಲಬ್ ಗೀತೆ 
ಸಾಹಸಗಾರ ಶಾಮಣ್ಣ - ಛೇಡಿಸುವ ಗೀತೆ 




ದುಡ್ಡೇ ಮುಖ್ಯ ಮಿಕ್ಕವು ಅಮುಖ್ಯ ಎಂದು ನಂಬಿರುವಾತ ದುಡ್ಡಿಗಾಗಿ ಏನು ಬೇಕಾದರೂ ಮಾಡುವೆ ಎಂದು ಮುಂದಾಗುವಾತ.. ಆತನ ಹೆಂಡತಿ ತನ್ನ ಮಾನ ರಕ್ಷಣೆಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದಾಗ, ಆಕೆಯ ಮಗುವನ್ನು ತಾನೇ ಸಾಕುವುದಾಗಿ ಮಕ್ಕಳಿಲ್ಲದ ನ್ಯಾಯಾಧೀಶ ಹೇಳುತ್ತಾನೆ ಮತ್ತು ಆಕೆಗೆ ಜೈಲಿಂದ ಹೊರಗೆ ಬಂದ ಮೇಲೆ . ಮಾನವಾಗಿ ಬದುಕಲು ಏರ್ಪಾಡು ಮಾಡಿಕೊಡುತ್ತಾನೆ.. ಮಗು ಬಂದ ಮೇಲೆ ಆ ಮನೆಯೊಡತಿಗೂ ಮಗುವಾಗುತ್ತದೆ.. ಆದರೆ ಮೊದಲನೇ ಮಗುವಿನ ಮೇಲೆ ಪ್ರೀತಿ ಕಡಿಮೆಯಾಗೋದಿಲ್ಲ.. ಆದರೆ ಆಕೆಯ ಎರಡನೇ ಮಗ ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾನೆ..ಮೊದಲನೇ ಸಾಕು ಮಗ ಪೊಲೀಸ್ ಅಧಿಕಾರಿಯಾಗುತ್ತಾನೆ.. 

ಇಲ್ಲೊಂದು ವಿಚಿತ್ರ ಕಥೆ.. 
ಸಮಾಜದ್ರೋಹಿಯ ಮಗ ಸಮಾಜವನ್ನು ಕಾಪಾಡುವ ಅಧಿಕಾರಿಯಾದರೆ.. 
ನ್ಯಾಯಾಧೀಶನ ಮಗ ಸಮಾಜದ್ರೋಹಿಯಾಗುತ್ತಾನೆ..
 
ಈ ಎರಡು ವೈರುಧ್ಯಗಳ ನಡುವಿನ ಸಂಘರ್ಷವೇ ಚಿತ್ರಕಥೆ.. ಅದರ ಜೊತೆಯಲ್ಲಿ ನಾಯಕನ ಹೆಂಡತಿಯ ಅಪ್ಪ ಕೂಡ ಸಮಾಜದ್ರೋಹಿಯೇ.. ಕರ್ತವ್ಯವೇ ಮುಖ್ಯ ಎಂದು ನಂಬಿದ ನಾಯಕ ಅದಕ್ಕೆ ತಕ್ಕ ಹಾಗೆ ಬೆಳೆಯುತ್ತಾನೆ.. ಮತ್ತು ಅಪರಾಧಿಗಳನ್ನು ಹಿಡಿದು ಆ ಗುಂಪಿನ ಮುಖಂಡ ತನಗೆ ಜನುಮ ನೀಡಿದ ಅಪ್ಪಣೆ ಆದರೂ  ದಾಕ್ಷಿಣ್ಯಕ್ಕೆ ಒಳಗಾಗದೆ ಸೆರೆಗೆ ಕಳಿಸುತ್ತಾನೆ.. 

ಅಶ್ವಥ್ ಇಲ್ಲಿ ವಿಭಿನ್ನ ಪಾತ್ರ.. ಅವರ ಮೇಲೆ ಕಾಣದ ತೊಳಲಾಟ ಕೆಲವು ಸಂಭಾಷಣೆಗಳಲ್ಲಿ ವ್ಯಕ್ತವಾಗುತ್ತದೆ.. 
ರಾಘವೇಂದ್ರ ರಾವ್ ಅವರದ್ದು ಕೂಡ ಇದೆ ರೀತಿಯ ಪಾತ್ರ.. 
ದಿನೇಶ್ ಯಥಾಪ್ರಕಾರ ಖಳನಟ 
ನಿರಂಜನ್ ನ್ಯಾಯಾಧೀಶನ ಪಾತ್ರ ಮತ್ತೆ ತಂದೆಯಾಗಿ ಇಷ್ಟವಾಗುತ್ತಾರೆ 
ಆದವಾನಿ ಲಕ್ಷ್ಮೀದೇವಿ ಕರುನಾಡಿನ ಮಾತೃ ಸ್ವರೂಪಿ
ಪಂಡರಿಬಾಯಿ ಅವರ ಬಗ್ಗೆ ಹೇಳೋದೇನಿದೆ.. ತಾಯಿ ಪಾತ್ರದಲ್ಲಿ ಅವರಷ್ಟು ಪರಿಣಾಮಕಾರಿಯಾಗಿ ಇರಲು ಸಾಧ್ಯವೇ ಇಲ್ಲ.. 
ದ್ವಾರಕೀಶ್ ಹಾಸ್ಯಕ್ಕೆ ಒದಗಿದ್ದಾರೆ 
ಭಾರತಿ.. ಇತ್ತ ನಾಯಕನ ಮಡದಿಯಾಗಿ ಪ್ರೀತಿ ತೋರಿದರೆ.. ಅತ್ತ ತನ್ನ ಮೈದುನನೇ ಖಳ. ಅವನನ್ನು ನೋಡಿದ್ದು ಹೇಳೋಕಾಗದೆ. ಹೇಳದಿರಲು ಆಗದೆ ತೊಳಲಾಡುವ ಪಾತ್ರದಲ್ಲಿ ಉತ್ತಮವಾಗಿ ನಟಿಸಿದ್ದಾರೆ.. 

ರಾಜಕುಮಾರ್ ಕರ್ತವ್ಯವೇ ದೇವರು ಎನ್ನುವ ಮಾತನ್ನು ಮೈಮೇಲೆ ಹಾಕಿಕೊಂಡು ಖಳರನ್ನು ಹಿಡಿಯಲು ನಾನಾವೇಷಗಳನ್ನು ತೊಟ್ಟು ಲವಲವಿಕೆಯಿಂದ ನಟಿಸಿದ್ದಾರೆ.. ಹಲವಾರು ದೃಶ್ಯಗಳಲ್ಲಿ ಅವರ ವೇಷಭೂಷಣಗಳಲ್ಲಿ ಮುದ್ದಾಗಿ ಕಾಣುವ ಅವರನ್ನು ನೋಡುವುದೇ ಒಂದು ಚಂದ.. ಇಬ್ಬರು ತಾಯಂದಿರ ಮಧ್ಯೆ ಅವರ ಒದ್ದಾಡುವ ದೃಶ್ಯದ ಅಭಿನಯ ಅದ್ಭುತ.. ಸಾಹಸ ದೃಶ್ಯಗಳಲ್ಲಿ ಮಿಂಚುತ್ತಾರೆ.. ಒಂದು ಕತೆಗೆ ಬೇಕಾದ ವೇಗವನ್ನು.. ತೂಕವನ್ನು ಅವರ ಅಭಿನಯ ನೀಡಿದೆ.. 

ನಾಯಕಿ ಹೇಳುತ್ತಿರುವುದರಲ್ಲಿ ಸತ್ಯವಿದೆ ಎಂದು ಗೊತ್ತಿದ್ದರೂ.. ಅದನ್ನು ಪರಾಮರ್ಷೆ ಮಾಡುವ ಸಲುವಾಗಿ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅವರು ತೋರುವ ಅಭಿನಯ ನೆನಪಲ್ಲಿ ಉಳಿಯುತ್ತದೆ... ಚಿತ್ರಕತೆ ಈ ಚಿತ್ರದ ಪ್ಲಸ್ ಪಾಯಿಂಟ್ ಆಗಿರುವುದರಿಂದ ಚಿತ್ರದ ಆರಂಭದಿಂದ ಅಂತ್ಯದವರೆಗೂ ನೋಡಿಸಿಕೊಂಡು ಹೋಗುತ್ತದೆ. ಕುತೂಹಲ ಹುಟ್ಟಿಸುತ್ತಾ ಹೋಗುತ್ತದೆ.. ಇದಕ್ಕೆ ಕಾರಣ ರಾಜಕುಮಾರ್ ಅವರ ಸ್ಕ್ರೀನ್ ಪ್ರೆಸೆನ್ಸ್... 















ಪೌರಾಣಿಕ ಕಥೆಯನ್ನು ಅಚ್ಚುಕಟ್ಟಾಗಿ ಬಿತ್ತರಿಸಿದ ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ 1971 (ಅಣ್ಣಾವ್ರ ಚಿತ್ರ ೧೩೮/೨೦೭)


ಕಲಿಯುಗದಲ್ಲಿ ಕೃಷನನ್ನು ನೋಡಬೇಕೆ.. ಈ ಚಿತ್ರವನ್ನು ನೋಡಿ..  ಆ ತುಂಟ ಕೃಷ್ಣ ನಗು, ಎಲ್ಲಾ ಗೊತ್ತಿದ್ದರೂ ಏನೂ ಅರಿವಿಲ್ಲದಂತಹ ಮುಗ್ಧತನ.. ಆತನಿಗೂ ಸಂಕಷ್ಟಗಳು ಬಂದರೂ ನಗುತ್ತ, ನಗುತಾ ಇರುವ ವ್ಯಕ್ತಿತ್ವ.. ತನ್ನ ಕುಟುಂಬಕ್ಕೆ, ತನ್ನ ರಾಜ್ಯಕ್ಕೆ ಕುತ್ತು ಬಂದಿದೆ ಎಂದಾಗ ಅದನ್ನು ಸಹನೆಯಿಂದ ಪರಿಹರಿಸುವ ಆ ನೋಟ.. ಎಲ್ಲವೂ ರಾಜಕುಮಾರ್ ಅವರಲ್ಲಿ ಮೇಳೈಸಿದೆ.. ಅಂದರೆ ಅಚ್ಚರಿ ಪಡಬೇಕಿಲ್ಲ.. 

ಈ ಚಿತ್ರದಲ್ಲಿ ಸಾಕ್ಷಾತ್ ಶ್ರೀ ಕೃಷ್ಣನೇ ರಾಜಕುಮಾರ್ ಆಗಿ ಅಥವ ರಾಜಕುಮಾರ್ ಅವರೇ ಶ್ರೀ ಕೃಷ್ಣನಾಗಿ ಧರೆಗಿಳಿದಿದ್ದಾರೆ ಎನಿಸುತ್ತದೆ.. ಪೌರಾಣಿಕ ಪಾತ್ರಗಳು ಎಂದರೆ ಇವರಿಗೆ ಸುಗ್ಗಿ.. ಕಾರಣ ರಂಗಭೂಮಿಯ ಹಿನ್ನೆಲೆಯಿಂದ ಬಂದವರು.. ಅಲ್ಲಿ ಈ ರೀತಿಯ ಬೇಕಾದಷ್ಟು ಪಾತ್ರಗಳನ್ನು ಲೀಲಾಜಾಲವಾಗಿ ಪ್ರತಿನಿತ್ಯವೂ ಅಭಿನಯಿಸಬೇಕಾದಂತಹ ಅನಿರ್ವಾರ್ಯತೆ.. ಮತ್ತು ಪ್ರತಿದಿನವೂ ಪ್ರತಿ ಪ್ರದರ್ಶನದಲ್ಲಿಯೂ ಏನಾದರೂ ಹೊಸತನ ತೋರಬೇಕೆನ್ನುವ ತುಡಿತ.. ಪ್ರ್ರೇಕ್ಷಕರನ್ನು ಹಿಡಿದಿಡಬೇಕು ಎನ್ನುವ ಆಶಯ.. ರಾಜಕುಮಾರಂತಹ ಅದ್ಭುತ ನಟರನ್ನು ರೂಪಿಸಿದೆ.. 

ಕೃಷ್ಣ ರುಕ್ಮಿಣಿ ವಿವಾಹ.. ದ್ವಾರಕೆಯ ಸ್ಥಾಪನೆ.. ಕಾಲಯವನನ ಸಂಹಾರ.. ಚೌತಿಯ ಚಂದ್ರ ದರ್ಶನದಿಂದ ಮಿತ್ಯಾಪವಾದ, ಜಾಂಬವಂತನ ಜೊತೆ ಕಾಳಗ.. ಜಾಂಬುವಂತಿಯೊಡನೆ ವಿವಾಹ, ಸತ್ರಾಜಿತನ ಗರ್ವಭಂಗ..ಸತ್ಯಭಾಮೆಯೊಡನೆ ಪರಿಣಯ.. ಪ್ರೇಮ ಪ್ರೀತಿಗಿಂತ ಭಕ್ತಿಯೇ ಹೆಚ್ಚು ಎಂಬ ಮಾತನ್ನು ನಿರೂಪಿಸಲು ಶ್ರೀಕೃಷ್ಣ ತುಲಾಭಾರ.. ಕಡೆಯಲ್ಲಿ ಸತ್ಯಭಾಮೆಯ ಗರ್ವಭಂಗ.. ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ ಜಾಂಬವತಿಯೊಡನೆ ಸುಂದರ ಸಂಸಾರ.. 

ಎಲ್ಲರಿಗೂ ಗೊತ್ತಿರುವ ಈ ಕಥೆಗೆ ಅಚ್ಚುಕಟ್ಟಾದ ಚಿತ್ರಕಥೆ ಮಾಡಿ.. ಉತ್ತಮ ಸಂಭಾಷಣೆ, ದೃಶ್ಯಗಳನ್ನು ಕಟ್ಟಿಕೊಟ್ಟು.. ಹಾಡುಗಳನ್ನು ಅಳವಡಿಸಿ.. ಒಂದು ನೋಡಬೇಕಾದ ಚಿತ್ರವನ್ನಾಗಿ ಮಾಡಿದ್ದುನಿರ್ದೇಶಕ ಕೆ ಎಸ್ ಎಲ್ ಸ್ವಾಮಿ.. ತಮ್ಮದೇ ಬ್ಯಾನರ್ ರಘುನಂದನ್ ಮೂವೀಸ್ ಲಾಂಛನದಲ್ಲಿ 

ಚಿಟ್ಟಿಬಾಬು ಛಾಯಾಗ್ರಹಣ ಮಾಡಿದ್ದಾರೆ 
ಸಂಭಾಷಣೆ ಚಿಉದಯಶಂಕರ್ 
ಹಾಡುಗಳು ಚಿ ಸದಾಶಿವಯ್ಯ ಮತ್ತು ಚಿ ಉದಯಶಂಕರ್ 
ಸಂಗೀತ ಆರ್ ಸುದರ್ಶನಂ 
ಗಾಯನ : ಪಿಬಿ ಶ್ರೀನಿವಾಸ್, ಎಸ್ ಜಾನಕೀ, ಸೂಲಮಂಗಲಂ ರಾಜಲಕ್ಷ್ಮಿ, ಎ ಪಿ ಕೋಮಲ, ಅಂಜಲಿ

ಶ್ರೀಕೃಷ್ಣನಾಗಿ ನಮಗೆಲ್ಲರ ಇಷ್ಟವಾದ ನಟ ರಾಜಕುಮಾರ್ 
ರುಕ್ಮಿಣಿಯಾಗಿ ಬಿ ಸರೋಜಾದೇವಿ 
ಜಾಂಬವತಿಯಾಗಿ ಆರತಿ 
ಸತ್ಯಭಾಮೆಯಾಗಿ ಭಾರತಿ 
ನಾರದನಾಗಿ ಶ್ರೀನಾಥ್ 
ಸತ್ರಾಜಿತನಾಗಿ ಅಶ್ವಥ್ 
ಪ್ರಸೇನಜಿತನಾಗಿ ರಂಗ 
ಉಗ್ರಸೇನನಾಗಿ ಲೋಕನಾಥ್ 
ಮಕರಂದನಾಗಿ ದ್ವಾರಕೀಶ್ 
ರುಕ್ಮಿಯಾಗಿ ತೂಗುದೀಪ ಶ್ರೀನಿವಾಸ್ 
ಶಿಶುಪಾಲನಾಗಿ ದಿನೇಶ್ 
ಬಲರಾಮನಾಗಿ ಅರುಣ್ ಕುಮಾರ್ 
ಸತ್ಯಭಾಮೆಯ ಸಖಿಯಾಗಿ ಬಿ ಜಯ 
ಭೀಷ್ಮಕನಾಗಿ ಸಂಪತ್ ಮತ್ತು ಮಡದಿಯಾಗಿ ಬಿ ಜಯಶ್ರೀ
ಮುಚುಕಂದನಾಗಿ ಕುಪ್ಪುರಾಜ್ 
ರುಕ್ಮಿಣಿಯ ಸಖಿಯಾಗಿ ರಮಾ 

ಪ್ರತಿ ಪಾತ್ರವೂ ಇಲ್ಲಿ ಮುಖ್ಯವಾಗುತ್ತದೆ.. ಮತ್ತೆ ಅದಕ್ಕೆ ಬೇಕಾದ ಮುಖ್ಯ ಭೂಮಿಕೆ ಒದಗಿಸಿದ್ದಾರೆ.. ಹಾಗಾಗಿ ಬಂದು ಹೋಯ್ತು ಅನ್ನುವ ಪಾತ್ರಗಳಾವುದು ಇಲ್ಲ.. ಕತೆಯ ಮುಂದುವರಿಕೆಗೆ ಸಹಾಯ ಮಾಡುತ್ತದೆ 

ಆ ಚಿತ್ರದ ಕೆಲವು ದೃಶ್ಯಗಳು ನಿಮಗಾಗಿ 

























ದೇವರಲ್ಲಿ ನ್ಯಾಯವೋ .. ನ್ಯಾಯದಲ್ಲಿ ದೇವರೋ ಪ್ರಶ್ನೆಗೆ ಉತ್ತರ ಕೊಡುವ ನ್ಯಾಯವೇ ದೇವರು 1971 (ಅಣ್ಣಾವ್ರ ಚಿತ್ರ ೧೩೭/೨೦೭)

ಕಾಯುವ ದೇವನೇ ಕೊಲ್ಲಲು ಬಂದರೆ ಏನು ಮಾಡೋದು.. ನ್ಯಾಯವೇ ದೇವರು ಚಿತ್ರ ಅದನ್ನೇ ಹೇಳುತ್ತೆ.. ಪ್ರತಿಷ್ಠೆ.. ವಂಶ ಗೌರವ ಹೀಗೆ ಹತ್ತಾರು ಕಾರಣಗಳನ್ನು ಇಟ್ಟುಕೊಂಡು ಮಗನ ಪ್ರೀತಿಯ ಹುಡುಗಿಗೆ ಸಮಾಧಾನ ಹೇಳುತ್ತಾ.. ನೀನು ಅವನಿಂದ ದೂರ ಹೋಗು.. ಆದರೆ ನಿನ್ನ ಪ್ರೀತಿಗೆ ನಾ ಖಳನಲ್ಲ ಎಂದರೂ.. ಸೊಸೆಯಾಗಿ ಆಕೆಯನ್ನು ಒಪ್ಪಿಕೊಳ್ಳಲು ಅವರಿಗೆ ಅಡ್ಡಿಬರುವುದು ಆಕೆಯ ಬಡತನವಲ್ಲ.. ಬದಲಿಗೆ ತನ್ನ ಮಗನಿಗೆ ನ್ಯಾಯಾಧೀಶರ ಕುಟುಂಬದಿಂದ ಹೆಣ್ಣು ಬಂದು ತಮ್ಮ ವಂಶದ ಘನತೆ ಮತ್ತಷ್ಟು ಹೆಚ್ಚುತ್ತದೆ.. ಮತ್ತೆ ವಕೀಲನಾದ ತನ್ನ ಮಗ ನ್ಯಾಯಾಧೀಶನಾಗಿ ಹೆಸರು, ಕೀರ್ತಿ ಸಂಪಾದನೆ ಮಾಡಬೇಕು ಎನ್ನುವ ತಂದೆಯ ಮಹತ್ವಾಕಾಂಕ್ಷೆ.. 


ಇದಕ್ಕೆ ನಾಯಕ ನಾಯಕಿ ಬದುಕಲ್ಲಿ ನೆಡೆಯುವ ಸನ್ನಿವೇಶಗಳು.. ಅವರು ಅದನ್ನು ಎದುರಿಸಲಾಗದೆ ತೊಳಲಾಡುವ ದೃಶ್ಯಗಳು.. ಇವುಗಳ ಮೇಲೆ ಚಿತ್ರವೂ ಮುಂದುವರೆಯುತ್ತದೆ

ಅಶ್ವಥ್ ನ್ಯಾಯಾಧೀಶನಾಗಿ ನಿವೃತ್ತಿಗೊಳ್ಳುವ ಸಮಯದಲ್ಲಿ ಅವರ ಸಹೋದ್ಯೋಗಿಗಳು ಬಂಗಾರದ ತಕ್ಕಡಿಯನ್ನು ಕೊಟ್ಟು ಗೌರವಿಸುತ್ತಾರೆ ... ಅದನ್ನು ಮನೆಗೆ ತಂದಾಗ.. ಆ ತಕ್ಕಡಿ ಹೇಳಿಕೊಡುವ ಸಂದೇಶವನ್ನು ವಿವರಿಸುವ ದೃಶ್ಯದಲ್ಲಿ ಅಶ್ವಥ್ ಹೃದಯಕ್ಕೆ ಇಳಿಯುತ್ತಾರೆ... ಹಾಗೆಯೇ ನಾಯಕಿಯಾದ ಸರೋಜಾದೇವಿ ಅವರಿಗೆ ತಮ್ಮ ಆಸೆಯನ್ನು ಹೇಳಿಕೊಳ್ಳುತ್ತಾ ತನ್ನ ಮಗನಿಂದ ಯಾಕೆ ದೂರ ಹೋಗಬೇಕು ಎನ್ನುವ ಕಾರಣವನ್ನು ವಿವರವಾಗಿ ತಿಳಿಸುವ ದೃಶ್ಯ.. ಸೊಗಸಾಗಿದೆ.. ಅಂತ್ಯದಲ್ಲಿ ಅವರು ಒಪ್ಪಿಕೊಳ್ಳುತ್ತಾ ಅಸು ನೀಗುವ ಅಭಿನಯ ಸೂಪರ್.. 

ಬಿ ಸರೋಜಾದೇವಿ ಇಲ್ಲಿ ಮೂರು ಹಂತದಲ್ಲಿ ಬರುತ್ತಾರೆ.. ಸಂಯಮದ ಶಾಂತ ಹುಡುಗಿಯಾಗಿ.. ನಾಯಕನ ಪ್ರೇಯಸಿಯಾಗಿ.. ಕಡೆಯಲ್ಲಿ ಬದುಕಿನ ಜಂಜಾಟದಲ್ಲಿ ಬೇಸತ್ತು ಜೀವನವನ್ನು ಮುಂದುವರೆಸುವ ಪಾತ್ರದಲ್ಲಿ.. ಅಚ್ಚುಕಟ್ಟಾದ ಅಭಿನಯ.. "ಎಂದೆಂದೂ ನೀವು ಸುಖವಾಗಿರಿ" ನಾಯಕನ ಸುಖ ಸಂತೋಷಕ್ಕಾಗಿ ತ್ಯಾಗ ಮಾಡುವ ಹಾಡಿದು  

ನಾಯಕನ ಪಾತ್ರ ರಾಜಕುಮಾರ್.. ಕುಣಿದಾಡುವ ವಯಸ್ಸಿದು.. ಆಕಾಶವೇ ಬೀಳಲಿ ಮೇಲೆ.. ಹಾಡಿನಲ್ಲಿ ವಿದ್ಯಾರ್ಥಿಯಾಗಿ.. ಹಾಗೂ ಪ್ರೇಮಿಯಾಗಿ ಅವರ ಅಭಿನಯ ಮನಸ್ಸೆಳೆಯುತ್ತದೆ.. ಚಿತ್ರದ ಪ್ರತಿಯೊಂದು ಹಂತದಲ್ಲೂ ಅವರು ತೋರುವ ಅಭಿನಯ ಮಂತ್ರಮುಗ್ಧರನ್ನಾಗಿಸುತ್ತದೆ.. ಅಂದರೆ ಅವರಿಗೆ ಸನ್ನಿವೇಶ ಹೇಳಿದರೆ ಸಾಕು ಅದಕ್ಕೆ ತಕ್ಕ ಅಭಿನಯ ಮಾಡಬಹುದು ಎನ್ನುವ ಅವರ ಆತ್ಮವಿಶ್ವಾಸ ಕಾಣಿಸುತ್ತದೆ.. 
ನ್ಯಾಯಾಧೀಶನಾಗಿ ನಾಯಕಿಯ ಕೇಸು ತಮ್ಮ ಬಳಿ ಬಂದಾಗ.. ಅದಕ್ಕೆ ರಾಜೀನಾಮೆ ನೀಡಿ ವಕೀಲರಾಗಿ ಆ ಕೇಸನ್ನು ಬಗೆಹರಿಸುವತ್ತ ಮತ್ತೆ ನಾಯಕಿ ಹಾಗೂ ತನ್ನ ಮಗುವಿನ ಜೊತೆ ಇರಬೇಕು ಎನ್ನುವ ತವಕದ ಅಭಿನಯ ಸೊಗಸು.. 

ಪಾತ್ರವರಿತು ಅಭಿನಯ ನೀಡುವುದು.. ಜೊತೆಯಲ್ಲಿ ಸಿದ್ದಲಿಂಗಯ್ಯನವರ ನಿರ್ದೇಶನದಲ್ಲಿ ಹತ್ತಿರ ಹತ್ತಿರದಲ್ಲಿಯೇ ಸಿನೆಮಾ ಮಾಡಿದ್ದರಿಂದ ಅವರಿಬ್ಬರ ನಡುವಿನ ಹೊಂದಾಣಿಕೆ ಅರಿವಾಗುತ್ತದೆ.. 

ನಿರ್ದೇಶಕರ ನಟ.. ಜೊತೆಗೆ ಅದಕ್ಕೆ ಬೇಕಾದ ರೀತಿಯಲ್ಲಿ ತಮ್ಮ ಅಭಿನಯವನ್ನು ಒಗ್ಗಿಸಿಕೊಳ್ಳುವುದು ಅವರ ಪ್ರತಿಭೆಗೆ ಸಾಕ್ಷಿಯಾಗಿದೆ.. 

ಖಳನಾಗಿ ಎಂಪಿ ಶಂಕರ್.. ಆತನ ಸಹಚರನಾದರೂ ಉತ್ತರಾರ್ಧದಲ್ಲಿ ಬದಲಾಗುವ ದ್ವಾರಕೀಶ್ಪಾತ್ರ ಮತ್ತೆ ಅವರ ಹಾಡು "ಪರಮಾತ್ಮ ಆಡಿಸದಂತೆ"  ಹಾಡಿನ ಅಭಿನಯ ಇಷ್ಟವಾಗುತ್ತದೆ 
 
ದಿನೇಶ್ , ಬಿ ಜಯ, ಸಂಪತ್, ಪಾಪಮ್ಮ, ಎಚ್ ರಾಮಚಂದ್ರಶಾಸ್ತ್ರಿ, ಅಶ್ವಥ್ ನಾರಾಯಣ, ಹೊನ್ನವಳ್ಳಿ ಕೃಷ್ಣ, ಆರತಿ ಪುಟ್ಟ ಪಾತ್ರಗಳಲ್ಲಿ ಬರುತ್ತಾರೆ. 

ಕಥೆ ಜಿ ಬಾಲಸುಬ್ರಮಣ್ಯಂ ಅವರದ್ದು,, 
ಸಂಗೀತ ರಾಜನ್ ನಾಗೇಂದ್ರ 
ಸಾಹಿತ್ಯ ಸಂಭಾಷಣೆ ಚಿ ಉದಯಶಂಕರ್ 
ಪಿ ಬಿ ಶ್ರೀನಿವಾಸ್, ಪಿ ಸುಶೀಲ ಮತ್ತು ಎಸ್ಪಿ ಬಾಲಸುಬ್ರಮಣ್ಯಂ ಗಾಯನ 
ಛಾಯಾಗ್ರಹಣ ಎಸ್ ವಿ ಶ್ರೀಕಾಂತ್ 
ಮಹಾರಾಜಾ ಮೂವೀಸ್ ಲಾಂಛನದಲ್ಲಿ ನಟ ಬಿ ಎಂ ವೆಂಕಟೇಶ್ ನಿರ್ಮಿಸಿದ್ದಾರೆ 
ನಿರ್ದೇಶಕ ಸಿದ್ದಲಿಂಗಯ್ಯ