ರೈಲುಪಟ್ಟಿಯ ಹಾಗೆ ಸಮಾನಾಂತರವಾಗಿ ಸಾಗುವ ಕತೆಯುಳ್ಳ ಚಿತ್ರವಿದು.. ಅಪಾಯದ ಕೋಟೆಯಲ್ಲಿದ್ದುಕೊಂಡೇ ತಾನು ಸುರಕ್ಷಿತವಾಗಿದ್ದೀನಿ ಎಂಬ ಭ್ರಮೆ ಕಳಚಿದ ಮೇಲೆ ತಿರುವು ಸಿಗುವ ಚಿತ್ರವೇ ಇದು.
ಸಮಾಜದಲ್ಲಿ ಒಂದು ಒಳ್ಳೆಯ ಹೆಸರಾದ ಮೇಲೆ ಅದನ್ನು ಕಾಪಿಡಿಕೊಳ್ಳುವುದು ಸಾಹಸ.. ಜೊತೆಯಲ್ಲಿ ಪರದೆಯ ಹಿಂದೆ ಮಾಡುವ ಕುಕೃತ್ಯಗಳು ಬೆಳಕಿಗೆ ಬರದಂತೆ ತಡೆಯುವುದು ಸಾಹಸ.. ಅದಕ್ಕಾಗಿ ಹಣ ಚೆಲ್ಲುವುದು, ಭದ್ರ ಕೋಟೆಯನ್ನು ಸೃಷ್ಟಿಸಿಕೊಳ್ಳುವುದು, ಅದನ್ನು ಜೋಪಾನ ಮಾಡಿಕೊಳ್ಳೋದಕ್ಕೆ ಒಬ್ಬನನ್ನು ನೇಮಿಸಿಕೊಳ್ಳುವುದು.. ಆತ ಅನ್ಯಾಯ ಕಂಡರೂ.. ಅದನ್ನು ಮಾಡುವುದರಲ್ಲಿ ಯಜಮಾನರಿಗೆ ಸಹಕರಿಸುತ್ತಿದ್ದರೂ ಕೂಡ ಪಾಪ ಪ್ರಜ್ಞೆಯಿಲ್ಲದೆ ಭಾಗಿಯಾಗುವುದು.. ಯಾವುದೋ ಸಂದರ್ಭದಲ್ಲಿ ಉದ್ಭವವಾಗುವ ನಾಯಕಿಂಗೆ ಜೊತೆಯಾಗಿ ಆ ದುಷ್ಟತನದ ಖಳನನ್ನು ಸದೆಬಡಿಯುವುದು.. ಇದು ತಿರುಳು..
ಈ ಕಥೆಯನ್ನು ಮೂಡಿಸಿರುವುದು ನಿರ್ಮಾಪಕ ತಂಡ ಭಾಸ್ಕರ್ ಮೂವೀಸ್. ಅದಕ್ಕೆ ಚಿತ್ರಕತೆ ರೂಪಿಸಿರುವುದು ವಲಂಪುರಿ ಸೋಮನಾಥನ್..
ಸಮರ್ಥ ನಿರೂಪಣೆ ಮಾಡಿರುವುದು ನಿರ್ದೇಶಕ ಗೀತಪ್ರಿಯ.
ನಿರ್ಮಾಣ ಎನ್ ಬಿ ವತ್ಸಲನ್
ನಾಗರೀಕ ಮಾನವ
ಹಕ್ಕಿಯು ಹಾರುತಿದೆ
ಒಹೋ ಮುದ್ದಿನ ಮಲ್ಲಿಗೆ
ರಸಿಕ ರಸಿಕ
ಗೂಡಲ್ಲಿ ತಾಯಿ ಹಕ್ಕಿ
ಹಸುವಿನ ವೇಷದ ಹೆಬ್ಬುಲಿ ನೀನು
ಮೆಲುಕು ಹಾಕುವ ಹಾಡುಗಳನ್ನು ಮತ್ತು ಅರ್ಥಗರ್ಭಿತ ಸಂಭಾಷಣೆಗಳನ್ನು ರಚಿಸಿರುವುದು ಗೀತಪ್ರಿಯ. .
ಅದಕ್ಕೆ ಇಂಪಾದ ಸಂಗೀತ ವಿಜಯಭಾಸ್ಕರ್ ಅವರದ್ದು.
ಪಿ ಬಿ ಶ್ರೀನಿವಾಸ್, ಎಲ್ ಆರ್ ಈಶ್ವರಿ ಮತ್ತು ಪಿ ಸುಶೀಲ ಗಾಯಕ ಗಾಯಕಿಯಾಗಿದ್ದಾರೆ.
ಪ್ರಕಾಶ್ ಅವರ ಛಾಯಾಗ್ರಹಣವಿದೆ
ಮುದ್ದಾಗಿ ಕಾಣುವ ಉದಯಚಂದ್ರಿಕಾ ನಾಯಕಿ.. ಅವರು ಚಿತ್ರದಲ್ಲಿ ಅತಿ ಸುಂದರವಾಗಿ ಕಾಣುತ್ತಾರೆ..ನಯನಗಳು, ಆ ಮಾತಿನ ಭಂಗಿ, ಹಾವ ಭಾವ. ಇಷ್ಟವಾಗುತ್ತಾರೆ..
ನರಸಿಂಹರಾಜು ಅವರದ್ದು ಸಂಕೀರ್ಣತೆಯ ಪಾತ್ರ.. ಹಾಸ್ಯವೂ ಅಲ್ಲದ.. ಖಳ ಛಾಯೆ ಇರುವ ಆದರೆ ಖಳನಲ್ಲದ.. ಅಂತಃಕರಣವುಳ್ಳ ಪಾತ್ರ
ಖಳನ ದೌರ್ಜನ್ಯಕ್ಕೆ ಬಲಿಯಾಗುವ ಪಾತ್ರದಲ್ಲಿ ರೇಣುಕಾ ಚಿತ್ರದುದ್ದಕ್ಕೂ ಅಳುತ್ತಲೇ ಇರುತ್ತಾರೆ
ಮರ್ಯಾದೆಗೆ ಅಂಜುವ ಪಾತ್ರದಲ್ಲಿ ಜಯಶ್ರೀ.. ಪ್ರಾಣಕ್ಕಿಂತ ಮಾನವೇ ಹೆಚ್ಚು ಎಂದು ತಂಗಿಗಾಗಿ ಮಾವಿನಹಣ್ಣನ್ನು ಕದ್ದ ಸ್ವಂತ ಮಗನನ್ನೇ ಮನೆಯಿಂದ ಹೊರಗೆ ಹಾಕುವ ಪಾತ್ರ.. ತನ್ನ ಮಗಳು ದುಷ್ಟನಿಗೆ ಬಲಿಯಾಗಿದ್ದಾಳೆ ಎಂದು ತಿಳಿದಾಗ ಸತ್ತು ಹೋಗು ಎಂದು ಶಪಿಸಿ.. ತಾನೇ ಹೃದಯಾಘಾತದಿಂದ ಸಾಯುವ ಪಾತ್ರದಲ್ಲಿ ಜಯಶ್ರೀ ಅದ್ಭುತ.
ಹಳ್ಳಿಯವನಾಗಿ ಅಶ್ವಥ್ ನಾರಾಯಣ್.. ಇವರೇ ಕಥೆಗೆ ತಿರುವುದು ಕೊಡುವ ಮಾವಿನ ತೋಪಿನ ಮಾಲೀಕ.. ಅಣ್ಣ ತನ್ನ ಪ್ರೀತಿಯ ತಂಗಿಗೆ ಮಾವಿನ ಹಣ್ಣನ್ನು ಕಿತ್ತುಕೊಟ್ಟಿದ್ದನ್ನ ದೊಡ್ಡದು ಮಾಡಿ ಕಥೆಗೆ ತಿರುವುದು ನೀಡುತ್ತಾರೆ.. ಮತ್ತೆ ನಾಯಕ ಮರಳಿ ತನ್ನ ಮನೆಗೆ ಬಂದಾಗ ನೆಡೆದ ಘಟನೆ ಹೇಳಿ.. ತನ್ನಿಂದ ಈ ಪ್ರಮಾದವಾಯಿತು ಎಂದು ಹೇಳುತ್ತಾರೆ..
ನಗರದಲ್ಲಿ ಅಂತಃಕರಣವುಳ್ಳ ಪಾತ್ರದಲ್ಲಿ ಸಹಕಲಾವಿದರು..
ದಿನೇಶ್ ಗೋಮುಖ ವ್ಯಾಘ್ರನಾಗಿ ದೌರ್ಜನ್ಯ ಎಸುಗುವುದು... ದಾನ ಧಾರ್ಮ ಮಾಡುವುದು.. ಒಂದು ಕಡೆ ಮೃದು ಮಾತು.. ಇನ್ನೊಂದು ಕಡೆ ಕಟು ಮಾತು.. ಮಿಂಚುತ್ತಾರೆ.
ರಾಜಕುಮಾರ್.. ಆಹಾ ಏನೂ ಹೇಳುವ ಹಾಗೆ ಇಲ್ಲ.. ಅದ್ಭುತ ಪಾತ್ರ ಪೋಷಣೆ ಮತ್ತು ಅಭಿನಯ.. ಕೆಲಸ ಬೇಕಾದ ತೀವ್ರತೆ.. ಅದಕ್ಕೆ ಒಪ್ಪುವಂಥಾ ಕೆಲಸವಲ್ಲದಿದ್ದರೂ ಬದುಕು ಸಾಗಿಸಲು ಕೆಲಸಕ್ಕೆ ಬರುವುದು.. ತನ್ನ ಯಜಮಾನರ ಒಳಗುಣದ ಬಗ್ಗೆ ಅರಿವಿಲ್ಲದೆ.. ತನ್ನ ತಂಗಿಯ ಬದುಕನ್ನು ಈತನೇ ಹಾಳುಮಾಡಿದ್ದು ಎಂದು ಅರಿವಾಗದೇ.. ಯಜಮಾನರೇ ದೇವರು ಎಂದು ಅವರನ್ನು ಕಾಪಾಡುವುದು.. ನಂತರ ನಿಜ ಅರಿವಾದಾಗ ಯಜಮಾನರಿಗೆ ಸರಿಯಾಗಿ ಬುದ್ದಿ ಕಲಿಸುವುದು.. ಇದರ ಜೊತೆಯಲ್ಲಿ ನಾಯಕಿಯ ಮನೆಯಲ್ಲಿ ಇದ್ದುಕೊಂಡು.. ನಾಯಕಿಯ ಪ್ರೀತಿಯನ್ನು ಸಂಪಾದಿಸಿದರು.. ತನ್ನ ಇತಿಮಿತಿಯಲ್ಲಿ ಇರುವಂತಹ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ತನ್ನ ತಂಗಿಯೆಂದು ತಿಳಿಯದೆ ಹೀನಾಮಾನವಾಗಿ ಬಯ್ದು ನಂತರ ತಂಗಿ ಎಂದು ತಿಳಿದ ಮೇಲೆ ಪೇಚಾಡುವ ದೃಶ್ಯದಲ್ಲಿ ಅದ್ಭುತ ಅವರು..
ಒಂದು ಸಾಮಾಜಿಕ ಚಿತ್ರದಲ್ಲಿ ಸಹಜವಾಗಿ ಅಭಿನಯಿಸುವ ಕಲೆ ಸಿದ್ಧಿಸಿರುವ ಅವರ ಮುಂದಿನ ಚಿತ್ರಗಳೆಲ್ಲ ಸಾಮಾನ್ಯವಾಗಿ ಅದೇ ಹಾದಿಯಲ್ಲಿ ಸಾಗುತ್ತದೆ. ಸಿಗೋಣವೇ ಮುಂದಿನ ಚಿತ್ರಗಳಲ್ಲಿ.
No comments:
Post a Comment