Showing posts with label Kannada. Show all posts
Showing posts with label Kannada. Show all posts

Thursday, December 1, 2016

ಭಾರತ ಭೂಶಿರದಲ್ಲಿ ಪುಟ್ಟಣ್ಣ ಅವರ ಜನುಮದಿನ

"ಪುಟ್ಟಣ್ಣ ಸರ್ ನಿಮ್ಮ ಹತ್ತಿರ ಮಾತಾಡಬೇಕಿತ್ತು.. ೪೪೦ ಕ್ಷಣಗಳು ಸಿಗಬಹುದೇ.. "

"ಯಾರಪ್ಪ ನೀನು.. "

"ನಿಮ್ಮ ಕೋಟಿ ಕೋಟಿ ಅಭಿಮಾನಿಗಳಲ್ಲಿ ನಾನು ಒಬ್ಬ.. ಇಂದು ನಿಮ್ಮ ಜೊತೆ ಮಾತಾಡಬೇಕು ಅನ್ನಿಸ್ತಿದೆ.. "

"ಸರಿ.. ಬಾ ಇಲ್ಲೇ ಸ್ವಲ್ಪ ದೂರದಲ್ಲಿ ನಮ್ಮ ಊರಿನವರ ಬೊಂಡ ಅಂಗಡಿ ಇದೆ.. ಅಂಬಡೆ ಮತ್ತು ಮೆಣಸಿನ ಕಾಯಿ ಬಜ್ಜಿ ಚೆನ್ನಾಗಿ ಮಾಡ್ತಾರೆ.. "

ನನಗೆ ಬಾಯಲ್ಲಿ ನೀರು..

"ಸರಿ ಸರ್"

ಇಬ್ಬರೂ ನೆಡೆಯುತ್ತಾ ಹೋದೆವು... ಅಂಗಡಿ ಸಿಕ್ಕಿತು.. "ಏನಪ್ಪಾ.. ಬಿಸಿ ಬಿಸಿ ಅಂಬಡೆ, ಮೆಣಸಿನಕಾಯಿ ಬಜ್ಜಿ ಎರಡು ಕಾಫಿ.. ಒಂದು ೫೫೫ ಕಳಿಸು.. ನಿನಗೆ ೫೫೫?"

"ಇಲ್ಲ ಸರ್.. ಅಭ್ಯಾಸವಿಲ್ಲ.. ಬಜ್ಜಿ, ಕಾಫಿ ಸಾಕು"

"ಸರಿ ಬಾ.. ನಾ ಓದಿದ್ದ ಶಾಲೆ ಇದು.. ಶಾಲೆಯ ಹೊರಗೆ ಒಂದು ಕಲ್ಲು ಬೆಂಚು ಇದೆ.. ಇವತ್ತು ಭಾನುವಾರ.. ಅಲ್ಲಿಯೇ ಕುಳಿತು ಮಾತಾಡೋಣ.. ಆಗಬಹುದೇ?"

ದೊಡ್ಡವರಿಗೆ ಇಲ್ಲ ಎನ್ನಲು ಆಗುತ್ತದೆಯೇ.. ಸುಮ್ಮನೆ ಗೋಣು ಆಡಿಸಿದೆ..

ಬಜ್ಜಿ, ಅಂಬಡೆ, ಕಾಫೀ ಮತ್ತು ೫೫೫ ಬಂತು..

"ಸರಿ ಹೇಳಪ್ಪ ಏನು ನಿನ್ನ ಮಾತು"

"ಸರ್.. ಉಪಾಸನೆ ಚಿತ್ರದ ಭಾರತ ಭೂಶಿರ ಹಾಡನ್ನು ಗುರುಗಳ ಆಶ್ರಮದಲ್ಲಿ ಚಿತ್ರೀಕರಿಸಿದ ರೀತಿ ನನಗೆ ಬಲು ಇಷ್ಟ ಅದರ ಬಗ್ಗೆ ಹೇಳಿ.. ೪೪೦ ಕ್ಷಣಗಳು ನಿಮ್ಮ ಮಾತಿಗಾಗಿ ಮಾತ್ರ"

"ನೋಡಪ್ಪ.. ಸಂಗೀತ ಒಂದು ಅದ್ಭುತ ಔಷದಿ ಇದ್ದ ಹಾಗೆ.. ಹಾಡನ್ನುಹಾಡುವವರು , ಅದರ ಸಂಗೀತ, ಹಾಡುವ ಸ್ಥಳ, ಹಾಡಿನ ಸಾಹಿತ್ಯ ಎಲ್ಲವೂ ಒಂದು ದೇವಸ್ಥಾನ ಹಾಗೂ ಅಲ್ಲಿನ ಪರಿಸರದಲ್ಲಿರುವ ದೇವರ ಮೂರ್ತಿ, ಪೂಜೆ ಸಾಮಗ್ರಿಗಳು ಇದ್ದ ಹಾಗೆ .. ದೇವರಿಗೆ ನಾವು ಧೂಪ, ದೀಪ, ಮಂತ್ರ, ಅಭಿಷೇಕ, ಅಲಂಕಾರ ಹೇಗೆ ಮಾಡುತ್ತೇವೆಯೋ ಹಾಗೆ.. ಒಂದು ಹಾಡಿಗೂ ಅದೇ ರೀತಿಯ ಸಿದ್ಧತೆ ಬೇಕು.

ಈ ಹಾಡು ಚಿತ್ರೀಕರಿಸುವ ಸ್ಥಳ ಗುರುಗಳ ಆಶ್ರಮ..
ಆಶ್ರಮ ಒಂದು ದೇವಾಲಯವೇ ಅಲ್ಲವೇ
ಆ ಆಶ್ರಮದ ಗುರುಗಳು ದೇವರಿಗೆ ಅರ್ಚಿಸುವ ಅರ್ಚಕರು ತಾನೇ
ಆ ಅರ್ಚನೆಗೆ ಬೇಕಾಗುವ ಸಾಹಿತ್ಯ,  
ಸಂಗೀತ,ಗಾಯನ..
ಭಕ್ತರು ಎಲ್ಲರೂ ಸೇರಿ
ಈ ಹಾಡನ್ನು ಮೇಲಕ್ಕೆ ಏರಿಸಿದ್ದಾರೆ.

ಶಾರದೆ ಪಾತ್ರಧಾರಿ ಸಂಗೀತ ಎಂದರೆ ತಪಸ್ಸು ಎಂದುಕೊಂಡವಳು.. ತಾನುಬಾಲ್ಯದಲ್ಲಿ ಕಣ್ಣಾರೆ ಕಂಡ ಒಂದು  ದೃಶ್ಯವನ್ನು ಹಾಡಿನಲ್ಲಿ ಕಟ್ಟಿ ಕೊಡುತ್ತೇನೆ ಎಂದು ಹೇಳುವಾಗ ಅದಕ್ಕೆ ಬೇಕಾದ ವೇದಿಕೆಯನ್ನು ಸೃಷ್ಟಿ ಮಾಡಲು ಮನಸ್ಸಾಯಿತು.

ವಿಜಯನಾರಸಿಂಹನಿಗೆ ಹೇಳಿದೆ "ನನಗೆ ಈ ರೀತಿಯ ಹಾಡು ಬೇಕು.. ಕನ್ಯಾಕುಮಾರಿಯ ಬಗ್ಗೆ ಹಾಡು" ಅಂತ..
"ಪುಟ್ಟಣ್ಣ ನೀನು ಕೇಳಿದೆ ನಾನು ಕೊಟ್ಟೆ" ಅಂತ ಅದ್ಭುತ ಹಾಡನ್ನು ಬರೆದುಕೊಟ್ಟ.

ಇನ್ನೊಬ್ಬ ಜೀವದ ಗೆಳೆಯ ವಿಜಯಭಾಸ್ಕರ್ ಸಾಹಿತ್ಯಕ್ಕೆ ಸಂಗೀತ ಕೊಟ್ಟನೋ.. ಅಥವಾ ಸಂಗೀತಕ್ಕೆ ಸಾಹಿತ್ಯ ಬಂದಿತೋ ಅರಿವಿಲ್ಲ.. ಅದ್ಭುತವಾದ ಎದೆ ಝಲ್ ಎನ್ನುವಂಥ ಸಂಗೀತ ಒದಗಿಸಿದ..

ಇಬ್ಬರು "ವಿಜಯ"ರು ಈ ಗಾನ ಸಂಭ್ರಮ ಮಹಾಸಮರದಲ್ಲಿ ವಿಜಯಿಯಾದರು..

ಜಾನಕಿಯಮ್ಮನಿಗೆ ಈ ಹಾಡಿನ ಬಗ್ಗೆ ಹೇಳಿದಾಗ.. ಪುಟ್ಟಣ್ಣಾಜಿ ಖಂಡಿತ ಇದು ಒಂದು ಅದ್ಭುತ ಕೃತಿಯಾಗುತ್ತದೆ ಎಂದರು.. ಅದು ನಿಜವೇ ಆಯಿತು..

ಇಂಥಹಃ ಅಮೋಘ ಹಾಡನ್ನು ಸುಮ್ಮನೆ ಹೇಗೋ ಹೇಗೋ ಚಿತ್ರೀಕರಿಸಲು ಮನಸ್ಸಾಗಲಿಲ್ಲ..

ಛಾಯಾಗ್ರಾಹಕ ಶ್ರೀಕಾಂತ್ ಗೆ ಹೇಳಿದೆ.. "ಶಾರದೆ ಮೊಗದ ಮೇಲೆ ಕಾಂತಿ ಬರುವಂತೆ ಲೈಟಿಂಗ್ ಮಾಡಿ.. ಆಕೆಯ ಮುಖದ ಪ್ರತಿ ಭಾವವೂ ಎದ್ದು ಕಾಣುವಂತೆ ನೀವು ಸೆರೆ ಹಿಡಿಯಬೇಕು.. ವೀಣೆಯನ್ನು ನುಡಿಸುವ ಅಭ್ಯಾಸ ಆಕೆಗೆ ಆಗಿದೆ.. ನೋಡುವವರಿಗೆ ಶಾರದೆಯೇ ವೀಣೆ ನುಡಿಸುತ್ತಿದ್ದಾಳೆ ಎನ್ನುವ ಮನವರಿಕೆಯಾಗುತ್ತದೆ.. ಜೊತೆಗೆ ಈ ಹಾಡಿನಲ್ಲಿ ಹಿತಮಿತವಾಗಿ ವೀಣೆಯನ್ನು ಉಪಯೋಗಿಸಿರುವುದರಿಂದ, ಜೊತೆಗೆ ಹಾಡಿನಲ್ಲಿ ಕೆಲವು ಭಾಗಗಳಲ್ಲಿ ಮಾತ್ರ ವೀಣೆಯ ನಾದವಿರುವುದರಿಂದ.. ಆಕೆಯ ಮುಖದ ಭಾವ, ತನ್ಮಯತೆ ಈ ಹಾಡಿಗೆ ಬೇಕು.. " ಮರುಮಾತಿಲ್ಲದೆ ಶ್ರೀಕಾಂತ್ ನಾನು ಹೇಗೆ ಹೇಳಿದ್ದೇನೋ ಅದಕ್ಕಿಂತ ಇನ್ನೂ ಅತ್ಯುತ್ತಮವಾಗಿ ಚಿತ್ರೀಕರಿಸಿದ್ದಾರೆ.

ಇನ್ನೂ ಜಾನಕಿಯಮ್ಮ.. ಅಬ್ಬಾ ಆಕೆ ನಿಜಕ್ಕೂ ಗಾನಸರಸ್ವತಿಯೆ ಹೌದು.. ಪ್ರತಿ ಪದವನ್ನು ಅರ್ಥಮಾಡಿಕೊಂಡು ಅದಕ್ಕೆ ಬೇಕಾದ ಭಾವ ತುಂಬಿ ಈ ಹಾಡನ್ನು ಅಕ್ಷರಶಃ ದೇವಗಾನವನ್ನಾಗಿ ಮಾಡಿದ್ದಾರೆ ಆಕೆ. "ಶಿವ ತಾಂಡವದ  ಢಮರು ನಿನಾದ ನಾದ ಬ್ರಹ್ಮನ ಓಂಕಾರ ನಾದ.. " ಈ ಪದವನ್ನು ಅದೆಷ್ಟು ಭಕ್ತಿಭಾವದಿಂದ ಹಾಡಿದ್ದಾರೆ.. ನನಗೆ ರೋಮಾಂಚನವಾಗುತ್ತದೆ..

ಇನ್ನೂ ಹಾಡು ಶುರುವಾದಾಗ ಬರುವ ರುದ್ರಪಟ್ಟಣದ ಸಂಗೀತ ವಿಧ್ವಾನ್ ಅವರ ಅಭಿನಯ, ಜಾನಕಿಯಮ್ಮನವರ ಆಲಾಪ ಕೇಳಿ ಕಣ್ಣು ಮತ್ತು ಮೊಗದಲ್ಲಿ ಅವರು ತೋರುವ ಭಾವ.. ನಿಜಕ್ಕೂ ನನಗೆ ಈಗ ಹಾಡನ್ನು ಕೇಳಿದರೂ ಕಣ್ಣಲ್ಲಿ ನೀರು ಬರುತ್ತದೆ.."

ಆ ಹಾಡು ಮುಗಿದಾಗ.. "ನಿಮ್ಮ ವಿಧ್ವತ್ತಿನ ಪ್ರತಿಬಿಂಬ ನಿಮ್ಮ ಶಿಷ್ಯೆ.. ಕರುಳು ಹಿಂಡುವ ವೀಣೆಯ ನಾದ, ಜೀವ ತುಂಬುವ ಗಾನದ ಸುಧೆ ನಮ್ಮ ಊರಿನವರೆಲ್ಲರಿಗೂ ತಲುಪುವಂತೆ ಮಾಡಿ" ಎಂದು ಹೇಳಿದಾಗ ನಿಜಕ್ಕೂ ನಾ ಮೂಕನಾದೆ.

ಇಡೀ ದೃಶ್ಯವನ್ನು ನಾ ಕಲ್ಪಿಸಿಕೊಂಡ ರೀತಿಯಲ್ಲಿಯೇ ಚಿತ್ರಿಸಿದ ಹೆಮ್ಮೆ ನನಗೆ.. ಅದನ್ನು ಮೆಚ್ಚಿ ಈ ಚಿತ್ರವನ್ನು ಹಾಡನ್ನು ಯಶಸ್ಸುಗೊಳಿಸಿದ ಕೀರ್ತಿ ಕರುನಾಡ ಚಿತ್ರರಸಿಕರಿಗೆ ಸಲ್ಲಬೇಕು.. :-)

ಇಷ್ಟು ಹೇಳಿ ಪುಟ್ಟಣ್ಣ ಸರ್ ೫೫೫ ನ ಕೊನೆ ದಂ ಎಳೆದರು.. ತಮ್ಮ ಕೈಗಡಿಯಾರ ನೋಡಿಕೊಂಡು ಕಣ್ಣು ಹೊಡೆದರು.. ೪೩೯ ಕ್ಷಣಗಳಾಗಿತ್ತು..

ಅಷ್ಟು ಹೊತ್ತಿಗೆ ಅಂಬಡೆ, ಮೆಣಸಿನಕಾಯಿ ಬಜ್ಜಿ ಎರಡು ಖಾಲಿಯಾಗಿದ್ದವು..

ಪುಟ್ಟಣ್ಣ ಸರ್ ಅವರಿಗೆ ಪ್ರವರ ಹೇಳಿ ಒಂದು ನಮಸ್ಕಾರ ಮಾಡಿ.. ಸಂತೃಪ್ತಿಯಿಂದ ಹೊರ ನೆಡೆದೆ..

ಒಮ್ಮೆ ತಿರುಗಿ ನೋಡಿದೆ.. ಪುಟ್ಟಣ್ಣ ಸರ್.. ಇನ್ನೊಂದು ೫೫೫ ಹಚ್ಚಿ ವಿಜಯದ ಸಂಕೇತವಾದ ಹೆಬ್ಬೆರಳನ್ನು ತೋರಿಸಿದರು..

ತಾಯಿ ಭುವನೇಶ್ವರಿ ವೀಣೆಯನ್ನು ಹಿಡಿದು ನುಡಿಸಿದಂತೆ.. ಹಾಡು ಕೇಳಿಸುತ್ತಿತ್ತು



ಭಾರತ ಭೂಶಿರ ಮಂದಿರ ಸುಂದರಿ
ಭುವನ ಮನೋಹರಿ ಕನ್ಯಾಕುಮಾರಿ

ಸಾಮಗಾನಪ್ರಿಯ ಸಾಂಬರೂಪಿಣಿ
ಪಾಲಗಡಲ ಸ್ವರ ಪಂಚಮಧಾರಿಣಿ
ಸಾಕಾರ ಷಡ್ಜದ ಶರಧಿ ತರಂಗಿಣಿ
ಸಾಗರ ಸಂಗಮ ಸರಸ ವಿಹಾರಿಣಿ

ಶಿವತಾಂಡವದಾ ಢಮರುನಿನಾದ....
ನಾದ ಬ್ರಹ್ಮನ ಓಂಕಾರನಾದ...
ನಾದದೆ ಲೀನಾ ಆಗಮವೇದ
ನಾದ...ವೇದ ...ಶಿವೇ....
ನಾದ ವೇದ ಶಿವೆ ನಿನ್ನವಿನೋದ

ಸಂಗೀತಸುಧೆಯ ಚೈತನ್ಯಧಾರೆ
ಕಣ ಕಣ ನೀನೇ ಕರುಣಾ ಪೂರೆ
ನವ ಭಾವ ನವ ಜೀವ ನೀ ತುಂಬಿ ಬಾರೆ
ನವರಸವಾಹಿನಿ ನೀ ದಯೆ ತೋರೆ

ಭಾರತ ಭೂಶಿರ ಮಂದಿರ ಸುಂದರಿ
ಭುವನ ಮನೋಹರಿ ಕನ್ಯಾಕುಮಾರಿ

(ಪುಟ್ಟಣ್ಣ ಅವರ  ಜನುಮದಿನದಂದು ಅವರ ನೆನಪಲ್ಲಿ ಕೆಲವು ಸಾಲುಗಳನ್ನು ಬರೆಯೋಣ ಎಂದುಕೊಂಡಾಗ ಮೂಡಿ ಬಂತು ಮೇಲಿನ ಕೆಲವು ಅಕ್ಷರಗಳು.. ಇದು ಕೇವಲ ನನ್ನ ಹೃದಯದಲ್ಲಿ ಮೂಡಿಬಂದ ಭಾವಕ್ಕೆ ಒಂದು ಕಾಲ್ಪನಿಕ ಕಥಾ ರೂಪ ಕೊಟ್ಟು ಬರೆದಿದ್ದೇನೆ.. )

ಪುಟ್ಟಣ್ಣ ಸರ್.. ನಿಮ್ಮ ಪ್ರತಿಭೆಗೆ ಏನೂ ಬರೆದರೂ ಅದು ಕಮ್ಮಿಯೇ.. ಆದರೂ ಒಂದು ನುಡಿ ನಮನ ಸಲ್ಲಿಸೋಣ ಎಂದು ಸ್ವಲ್ಪ ಸಲುಗೆ ತೆಗೆದುಕೊಂಡು ಜನುಮದಿನಕ್ಕೆ ಈ ರೀತಿಯ ಶುಭಾಷಯ ಕೋರಿದ್ದೇನೆ.. (ಕ್ಷಮೆ ಇರಲಿ)

Sunday, November 6, 2016

ಜೀವನ ಪಥವನ್ನು ಬದಲಿಸುವ - ಭಕ್ತ ವಿಜಯ (1956) (ಅಣ್ಣಾವ್ರ ಚಿತ್ರ ೦೩ / ೨೦೭)

ಒಂದು ಚಿಕ್ಕ ಸನ್ನಿವೇಶ.. ಒಂದು ಬೇಸರದ ಧ್ವನಿ, ಮನಕಲಕುವ ಘಟನೆ ಮಾನವನ ಜೀವನವನ್ನು ಹೇಗೆ ತಿರುಗಿಸಿ ನಿಲ್ಲಿಸುತ್ತದೆ. ಆ ಕ್ಷಣಕ್ಕೆ ಎಲ್ಲವೂ ಸರಿ ಎನ್ನಿಸಿದರೂ, ಹಸು ಹುಲ್ಲನ್ನು ಗಬ ಗಬ ತಿಂದು, ನಂತರ ಅದಕ್ಕೆ ಬಿಡುವಾಗಿದ್ದಾಗ ಮತ್ತೆ ಅಗಿದು, ಜಗಿದು ರಸ ಹೀರಿ, ಸ್ವಾಧಿಷ್ಟ ಹಾಲು ಕೊಡುವ ಹಾಗೆ, ಈ ಚಿತ್ರವೂ ಕೂಡ ಸರಳವಾಗಿ ಹೇಳಬೇಕಾದ ಸಂದೇಶವನ್ನುಮುಟ್ಟಿಸುತ್ತದೆ .

ಸತತ ಮೂರನೇ ಬಾರಿಗೆ ರಾಜ್ ಮತ್ತು ಪಂಡರಿ ಬಾಯಿ ತೆರೆಯಮೇಲೆ ಮಿಂಚಿದ ಚಿತ್ರವಿದು.

ನಾಯಕ ನಾಯಕಿಯಾಗಿ ಸತತ ಮೂರನೇ ಚಿತ್ರ 
 ಜಗನ್ನಾಥ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪಿ ಕೆ ಜನಾರ್ಧನ್ ನಿರ್ಮಾಪಕರಾಗಿ ಎ  ಕೆ ಪಟ್ಟಾಭಿ ಅವರ ನಿರ್ದೇಶನದಲ್ಲಿ ಮೂಡಿಬಂದ ಚಿತ್ರರತ್ನವಿದು. 

ಸಂತ ತುಕಾರಾಂ ತಮ್ಮ ಶಿಷ್ಯವೃಂದದ ಜೊತೆಯಲ್ಲಿ ಭಕ್ತಿ ಸಂದೇಶವನ್ನು ಹಂಚುತ್ತಾ ಊರೂರು ಸುತ್ತುತ್ತಾ ಸಂತೋಬಾ ಅವರ ಊರಿಗೆ ಬರುತ್ತಿರುತ್ತಾರೆ. ಆಗ ಕುದುರೆಮೇಲೆ ಬರುತ್ತಿದ್ದ ಸಂತೋಬಾ ಗುರುಗಳನ್ನು ನೋಡಿಯೂ, ಕೆಳಗೆ ಇಳಿಯದೆ, ತಮಗೆ ದಾರಿ ಬಿಡಲಿಲ್ಲ ಎನ್ನುವ ದರ್ಪ ತೋರುತ್ತಾರೆ. ಸಂತ ತುಕಾರಾಂ ಬಗ್ಗೆ ಕೇಳಿಯೂ ಕೂಡ ಗೌರವ ಸಲ್ಲಿಸದೆ ಅಧಿಕಾರ, ಹಣದ ದರ್ಪವನ್ನು ಮೆರೆದು ಹೋಗುತ್ತಾರೆ. 
ರಾಜ್ ಅವರ ಆರಂಭಿಕ ದೃಶ್ಯ
ಇಲ್ಲಿ ರಾಜ್ ಅವರ ಆರಂಭಿಕ ದೃಶ್ಯ ಚುಟುಕಾಗಿದೆ, ಮಾತಿಲ್ಲ ಆದರೆ, ಕಣ್ಣುಗಳು, ಆಂಗೀಕ ಅಭಿನಯ ಸೊಗಸು. 
ಅಭಿನಯದ ಒಂದು ಝಲಕ್ 
ಈ ಚಿತ್ರದಲ್ಲಿ ಬರೋಬ್ಬರಿ ಹನ್ನೆರಡು ಹಾಡುಗಳಿವೆ (ಚುಟುಕು ಹಾಡುಗಳು ಸೇರಿ). ಪಿ ಲೀಲಾ, ಮೈನಾವತಿ, ಎ ಎಂ ರಾಜಾ, ಎಂ ಪ್ರಭಾಕರ್, ಸಿ ಏನ್ ಸರೋಜಿನಿ, ಬಾಗೇಪಲ್ಲಿ ಸುಬ್ರಮಣ್ಯ ಅವರು ಪಿ ಶ್ಯಾಮ್ ಮತ್ತು ಆತ್ಮನಾಥ್ ಅವರ ಸಂಗೀತ ನಿರ್ದೇಶನದಲ್ಲಿ ಹಾಡಿದ್ದಾರೆ. 

ಆನಂದ್ ಅವರು ಕಥೆ ಸಂಭಾಷಣೆ ಮತ್ತು ಹಾಡುಗಳನ್ನು ರಚಿಸಿದ್ದಾರೆ.  ಕೆಲವು ಸನ್ನಿವೇಶಗಳನ್ನು ಸೆರೆಹಿಡಿದ ರೀತಿ ಅಭೂತವಾಗಿದೆ. ಆರ್ ಸಂಪತ್ ಅವರ ಛಾಯಾಗ್ರಹಣ ನಿರ್ದೇಶನದಲ್ಲಿ ಕೆ ಜಾನಕಿರಾಮ್ ಅವರ ನೆರಳು ಬೆಳಕಿನ ಕೈಚಳಕ ಸುಂದರವಾಗಿದೆ. 

ಈ ಚಿತ್ರದಲ್ಲಿ ಮುಖ್ಯ ಕಥೆಯ ಜೊತೆ ಜೊತೆಯಲ್ಲಿ ಹಾಸ್ಯಕ್ಕೂ ಅವಕಾಶ ಕೊಟ್ಟು, ಆ ಪಾತ್ರಗಳು ಕೂಡ ಮುಖ್ಯ ಕಥೆಗೆ ಸಾಥ್ ಕೊಡುತ್ತಾ ಸಾಗುವುದು ವಿಶೇಷ.  
ಆಸೆಬುರುಕ ಅವಕಾಶವಾದಿ ದಂಪತಿಗಳು ಎತ್ತುಗಳು ಇಲ್ಲದ ಗಾಡಿಯನ್ನು ತರುವುದು 
 ಕೆಲವೇ ಕೆಲವೇ ಮುಖ್ಯ ಪಾತ್ರಗಳು ರಾಜ್ ಅವರು ಸಂತೋಬಾನ ಪಾತ್ರದಲ್ಲಿ ಮಿಂಚಿದ್ದಾರೆ, ಸ್ಪುಟವಾದ ಕನ್ನಡ, ಸನ್ನಿವೇಶಕ್ಕೆ ತಕ್ಕ ಹಾಗೆ ಕಣ್ಣುಗಳಲ್ಲಿ ಅಭಿನಯ, ಮೊದಲು ದರ್ಪ ತುಂಬಿದ ಪಾತ್ರ, ನಂತರ ಮನಸ್ಸು ಮಾಜಿ ಭಕ್ತ ಪಥಕ್ಕೆ ತಿರುಗಿದಾಗ, ಸಂತರ ಮುಖಭಾವ ಅಚ್ಚುಕಟ್ಟಾಗಿದೆ.

ಪಂಡರಿ ಬಾಯಿ ಹೇಮಾಳ ಪಾತ್ರದಲ್ಲಿ ಅವರ ಟ್ರೇಡ್ ಮಾರ್ಕ್ ಅಭಿನಯ, ಪತಿಗೆ ನೆರಳಾಗಿ ನಿಲ್ಲುವ ಪಾತ್ರದಲ್ಲಿ ಸಲೀಸಾಗಿ ಅಭಿನಯ ನೀಡಿದ್ದಾರೆ. 

ಕನ್ನಡ ಚಿತ್ರರಂಗದ ಘಟವಾಣಿ ಅತ್ತೆ ರಮಾದೇವಿ ಈ ಚಿತ್ರದಲ್ಲಿ ಸಂತೋಬಾನ ಅಮ್ಮನಾಗಿ, ಹೇಮಾಳ ಅತ್ತೆಯಾಗಿ, ಮನೋಜ್ಞ ಅಭಿನಯ ನೀಡಿದ್ದಾರೆ. ತನ್ನ ಮಗ ಇರುವ ಧನ ಕನಕಗಳನ್ನು ಆಸ್ತಿಯನ್ನು ದಾನ ಮಾಡಿ ಬರಿಗೈಯಲ್ಲಿ ನಿಂತಿರುವುದನ್ನು ಕಂಡು, ತಮ್ಮ ಜೀವನಕ್ಕೆ ತೊಂದರೆ ಇರುವುದನ್ನು ಒಪ್ಪಿಕೊಂಡು ಹಲುಬುವ ಪಾತ್ರ, ಜೊತೆಯಲ್ಲಿಯೇ ಮಗನನ್ನು ಖಂಡಿಸುತ್ತಲೇ, ತಾನು ಪಾಪಿ ಇಂತಹ ಸನ್ನಿವೇಶವನ್ನು ಎದುರಿಸುವ ಕರ್ಮಾ ತನಗೆ ಎಂದು ಹೇಳುವ ದೃಶ್ಯಗಳಲ್ಲಿ ಮನಕ್ಕೆ ನುಗ್ಗುತ್ತಾರೆ. 
ಕರುನಾಡಿನ ಶ್ರೇಷ್ಠ ನಟಿಮಣಿಗಳು - ಆದವಾನಿ ಲಕ್ಷ್ಮೀದೇವಿ, ರಮಾದೇವಿ, ಪಂಡರಿಬಾಯಿ 

ಕನ್ನಡ ಚಿತ್ರರಂಗ ಕಂಡ ಇನ್ನೊಬ್ಬ ಶ್ರೇಷ್ಠ ತಾಯಿ ಪಾತ್ರದ ನಟಿ ಆದವಾನಿ ಲಕ್ಷ್ಮೀದೇವಿ ಸಂತೋಬಾನ ತಂಗಿಯಾಗಿ ಚಿಕ್ಕ ಪಾತ್ರದಲ್ಲಿ ಅಭಿನಯ ನೀಡಿದ್ದಾರೆ. ಅವರ ಪತಿರಾಯನಾಗಿ ಗಣಪತಿ ಭಟ್ ಅವರ ಅಭಿನಯ ಕಥೆಗೆ ಅವಶ್ಯಕವಾದಷ್ಟು ಇದೆ. 

ಹೇಮಾಳ ತಂದೆಯ ಪಾತ್ರದಲ್ಲಿ ಡಿಕ್ಕಿ ಮಾಧವರಾವ್ ಒಂದೆರಡು ಸನ್ನಿವೇಶಗಳಲ್ಲಿ ಬಂದರೂ, ನೆನಪಲ್ಲಿ ಉಳಿಯುತ್ತಾರೆ. 

ಡಿಕ್ಕಿ ಮಾಧವರಾವ್ ಮತ್ತು ಪಂಡರಿಬಾಯಿ - ಅಪ್ಪ ಮಗಳಾಗಿ 
ಈ ಚಿತ್ರ ರಾಜ್ ಮತ್ತು ಪಂಡರಿಬಾಯಿ ಅವರಿಗೆ ಎಷ್ಟು ಸಲ್ಲುತ್ತದೆಯೋ ಅಷ್ಟೇ ಭಾರ ಹೊತ್ತು ನಿಂತಿರುವುದು ಮೈನಾವತಿ ಮತ್ತು ಹನುಮಂತಾಚಾರ್ ಹಾಸ್ಯ ಪಾತ್ರಗಳು.  ಕಥೆಯ ಜೊತೆಯಲ್ಲಿಯೇ ಸಾಗುವ ಆಸೆ ಬುರುಕ, ಅವಕಾಶವಾದಿ ಕಿಲಾಡಿ ಪತಿ ಪತ್ನಿಯರ ಪಾತ್ರ ನಗಿಸುತ್ತದೆ.

ಮೈನಾವತಿ ಮತ್ತು ಹನುಮಂತಾಚಾರ್ - ಹಾಸ್ಯ ರಸದಲ್ಲಿ 
ಇಡೀ ಚಿತ್ರದ ಹೂರಣ ಕೆಲವು ಸಾಲಿನಲ್ಲಿ ನಿಂತಿದೆ. ಹಣ, ಅಧಿಕಾರ ಮತ್ತು ಅಂತಸ್ತಿನ ದರ್ಪದಲ್ಲಿ ಊರಿನ ಸಾಹುಕಾರ ಸಂತೋಬಾ, ದೇಣಿಗೆ ವಸೂಲಿ ಮಾಡಲು ಹಳ್ಳಿಯ ಹೊನ್ನನ ಮನೆಗೆ ಬರುತ್ತಾನೆ, ಮಳೆ ಬೆಳೆ ಇಲ್ಲದೆ, ದೇಣಿಗೆ ಕೊಡಲು ಸಾಧ್ಯವಿಲ್ಲ, ಬೆಳೆ ಬಂದ ತಕ್ಷಣ ಕೊಡುವುದಾಗಿ ಪರಿಪರಿಯಾಗಿ ಬೇಡಿಕೊಂಡರೂ,  ಅವರ ಮಾತನ್ನು ಕೇಳದೆ, ಮನೆಯಲ್ಲಿನ ದವಸ ಧಾನ್ಯವನ್ನು ಹೊತ್ತೊಯ್ಯಲು ತನ್ನ ಆಳುಗಳಿಗೆ ಅಪ್ಪಣೆ ಮಾಡುತ್ತಾನೆ ಸಂತೋಬಾ. ಈ ದೃಶ್ಯದಲ್ಲಿ ಮಕ್ಕಳು ತಿನ್ನುತ್ತಿದ್ದ ಅನ್ನದ ಮಡಿಕೆ ಅಚಾನಕ್ ಬಿದ್ದು, ತಿನ್ನುತ್ತಿದ್ದ ಅನ್ನವೆಲ್ಲ ಮಣ್ಣುಪಾಲಾಗುತ್ತದೆ. ಇದರಿಂದ ಕುಪಿತಗೊಂಡ ಹೊನ್ನನ ಪತ್ನಿ ಹೊನ್ನಿ, ಕಟುವಾಗಿ ಟೀಕಿಸುತ್ತಾ, "ನಿಮ್ಮ ಆಸ್ತಿಯೆಲ್ಲ ಮಣ್ಣಾಗಲಿ" ಎಂದು ಶಪಿಸುತ್ತಾಳೆ. 

ರಾಜ್ ಅವರ ಅಮೋಘ ಅಭಿನಯ - ಅಹಂ ಪಾತ್ರದಲ್ಲಿ 
ನಂತರದ ದೃಶ್ಯದಲ್ಲಿ, ಸಂತೋಬಾ ಅನ್ನ ಕಲೆಸುತ್ತಾ ಕೂತಾಗ, ಹೊನ್ನಿ ಹೇಳಿದ ಮಾತೆ ಮಾರ್ದನಿಯಾಗುತ್ತದೆ, ನೊಂದುಕೊಂಡ ಸಂತೋಬಾ ಊಟ ಮಾಡದೆ ತನ್ನ ಪತ್ನಿ ಹೇಮಾಳ ಬಳಿ ತನ್ನ ದುಗುಡವನ್ನು ಹೇಳಿಕೊಳ್ಳುತ್ತಾನೆ, ಹೆಂಡತಿ ಸಮಾಧಾನ ಮಾಡಿದರೂ ಸಂತೋಬಾನ ತಲೆ ಮೊಸರು ಗಡಿಗೆಯಾಗಿರುತ್ತದೆ. 

ತುಕಾರಾಂ ಅವರನ್ನು ಮನೆಗೆ ಕರೆತರುವೆ ಎಂದು ಹಠ ಹೊತ್ತ ಸಂತೋಬಾ 
ಸಂತ ತುಕಾರಾಂ ಅವರ ಕಥೆ ಕೇಳಲು ತನ್ನ ತಾಯಿ ಮತ್ತು ಪತ್ನಿ ಹೊರಟಾಗ, ಅವರನ್ನು ತಡೆದು, ಅವರನ್ನೇ ಇಲ್ಲಿ ಕರೆಸುತ್ತೇನೆ ಎನ್ನುತ್ತಾನೆ, ಆದರೆ ಅಸ್ತಿ ಅಂತಸ್ತು ಸಂಪತ್ತು ಇವುಗಳನ್ನು ತೃಣ ಸಮಾನ ಎನ್ನುವ ಸಂತರು ಇವನ ಆಜ್ಞೆಗೆ ಒಪ್ಪುವುದಿಲ್ಲ. ಸ್ವತಃ ಸಂತೋಬಾನೇ ಬಂದು ಕರೆದರೂ ಒಲ್ಲೆ ಎನ್ನುತ್ತಾರೆ, ಚಿನ್ನದ ಸರದ ಆಮೀಷ ತೋರಿದರೂ ಸಂತ ತುಕಾರಾಂ ಅವರು, "ನೀನು ಹೊರಗಿನಿಂದ ಧನಿಕ, ಆದರೆ ಒಳಗೆ ಕಡು ಬಡವ, ನಮಗೆ ಹೊನ್ನು ಮಣ್ಣು ಎರಡು ಒಂದೇ" ಎಂದು ಬುದ್ದಿವಾದ ಹೇಳುತ್ತಾರೆ. 

ಸಂತ ತುಕಾರಾಮರು ಮನೆಗೆ ಬರುವುದಿಲ್ಲ ಎಂದು ತಿಳಿದಾಗ ನೊಂದುಕೊಳ್ಳುವ ಹೇಮಾ, ಇದಕ್ಕಿಂತ ಮೊದಲು, ನಿತ್ಯದ ಪೂಜೆಯ ಸಮಯದಲ್ಲಿ ನಾಗರಹಾವು ಕಾಣಿಸಿಕೊಳ್ಳುವುದು, ಹೊನ್ನಿಯ ಶಾಪ ಎಲ್ಲವೂ ಆಕೆಯ ಮಾನಸಿಕ ಆರೋಗ್ಯವನ್ನು ಹಾಳುಮಾಡುತ್ತದೆ. ವೈದ್ಯರ ಔಷದಿ ಕೆಲಸ ಮಾಡೋಲ್ಲ, ಆಗ ತನ್ನ ತಪ್ಪನ್ನು ಅರಿತ ಸಂತೋಬಾ ಸಂತ ತುಕಾರಾಂ ಅವರಿಗೆ ಶರಣಾಗುತ್ತಾನೆ ಮತ್ತು ಮನೆಗೆ ಕರೆ ತರುತ್ತಾನೆ. 

ಸಂತರ ದರ್ಶನದಿಂದ ಗುಣಮುಖಳಾದ ಹೇಮಾಳನ್ನು ಕಂಡು ಬದಲಾವಣೆಯ ಹಾದಿಗೆ ಸಂತೋಬಾ ಬರುತ್ತಾನೆ. ತನ್ನ ತಾಯಿ ಮತ್ತು ಮಡದಿ ತನ್ನ ಮಾವನ ಮನೆಗೆ ಹೋದಮೇಲೆ, ಇದ್ದ ಬದ್ದ ಆಸ್ತಿಯನ್ನು ಊರಿನ ಜನತೆಗೆ ಹಂಚಿ, ತಾನು ಭಗವತ್ ಸತ್ಯ ದರ್ಶನಕ್ಕೆ ದುರ್ಗಮ ಸ್ಥಳಕ್ಕೆ ತೆರಳುತ್ತಾನೆ.  ಅನೇಕ ಕಷ್ಟ ಕಾರ್ಪಣ್ಯಗಳ ಮಧ್ಯೆ, ತನ್ನ ಆರಾಧ್ಯ ದೈವ ಪಾಂಡುರಂಗನ ಸಾಕ್ಷಾತ್ಕಾರ ಪಡೆದುಕೊಂಡು ತನ್ನ ಬದುಕನ್ನು ಸಾರ್ಥಕ ಮಾಡಿಕೊಳ್ಳುತ್ತಾನೆ. 

ಸಂತ ತುಕಾರಾಂ ಅವರಿಂದ ಆಶೀರ್ವಾದ ಪಡೆವ ಸಂತೋಬಾ
ಕಥೆ, ಭಾವುಕತೆ, ಹಾಸ್ಯ, ಸಂಗೀತ, ಚುಟುಕು ಸಂಭಾಷಣೆ, ಸಂದೇಶ ಎಲ್ಲವನ್ನು ಹೊತ್ತು ತಂದಿರುವ ಈ ಚಿತ್ರ ಮನಸ್ಸಿಗೆ ತಂಪನ್ನೆರೆಯುತ್ತದೆ. 

ಇದು ಚಿತ್ರದ ತಿರುಳು. ಬದುಕಲ್ಲಿ ಹಣವೇ ಎಲ್ಲವೂ ಅಲ್ಲ, ಹಣವಿಲ್ಲದೆ ಏನೂ ಇಲ್ಲ ಎಂಬುದು ನಿಜವಾದರೂ, ಹಣವಿಲ್ಲದೆ, ಮನಸ್ಸಿಗೆ ಶಾಂತಿ ನೆಮ್ಮದಿ ತಂದುಕೊಂಡು, ಹಿಡಿದ ನೀತಿಯುಕ್ತ ಮಾರ್ಗವನ್ನು ಅನುಸರಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ.  ಹಣವಿದ್ದಾಗ ಅಹಂಕಾರವನ್ನು ತೊಡೆದುಹಾಕಿ, ನಂತರ ಗುರಿಯ ಕಡೆಗೆ ಅಹಂ ಅನ್ನು ದೂರ ಸರಿಸಿ ನಡೆಯಬೇಕು, ತಪ್ಪುಗಳನ್ನು ಒಪ್ಪಿಕೊಂಡು ಅದನ್ನು ಸರಿದಾರಿಗೆ ತಂದು ನಿಲ್ಲಿಸಬೇಕು, ಎಂಥಹುದೇ ಆಮೀಷಗಳು, ಅಡತಡೆಗಳು ಬಂದರೂ ಕೂಡ ಮೆಟ್ಟಿ ನಿಂತು ಗುರಿ ಸಾಧನೆಯ ಕಡೆಗೆ ಮನಸ್ಸು ಒಗ್ಗಿಸಿಕೊಂಡರೆ, ದೈವದ ಸಾಕ್ಷಾತ್ಕಾರ ಖಂಡಿತ. 


ರಾಜ್ ಅವರ ಮೂರನೇ ಚಿತ್ರವು ರತ್ನವಾಗಿ ಕರುನಾಡ ತಾಯಿಯ ಕೊರಳಲ್ಲಿ ಇರುವ ಹಾರಕ್ಕೆ ಇನ್ನೊಂದು ಅನರ್ಘ್ಯ ಮಣಿಯಾಗಿ ಸೇರಿಕೊಂಡ ಸಮಯವಿದು. 

ಮತ್ತೊಂದು ಚಿತ್ರದ ಜೊತೆಯಲ್ಲಿ ಬರುವೆ.. ರಾಜ್ ಜೊತೆಯಲ್ಲಿ!!!

Sunday, November 1, 2015

ಬೋರ್ಡ್ ನಲ್ಲಿ ಕಾಣದೆ ಇರುವ - ಫಲಿತಾಂಶ (1976)

ಪಾಠ ಪ್ರವಚನಗಳು ಹಲವಾರು ಬಾರಿ ಹಳೆಯದಾಗಿಬಿಡುತ್ತದೆ, ಆದರೆ ಅವು ನಮಗೆ ದಾರಿ ತೋರಿಸಿದ ಬಗೆ ಯಾವತ್ತಿಗೂ ನೆನಪಿರುತ್ತದೆ. ಪುಟ್ಟಣ್ಣ ಕಣಗಾಲ್ ಚಿತ್ರಜಗತ್ತಿನಲ್ಲಿ ಸೃಷ್ಠಿ ಮಾಡಿದ ರತ್ನಗಳು ಹಲವಾರು.

ಒಂದೊಂದು ರತ್ನವೂ ಭಿನ್ನ ವಿಭಿನ್ನ. ಪ್ರತಿ ರತ್ನ ಮಣಿಯನ್ನು ಅರಸುತ್ತಾ ಅದನ್ನು ನೋಡಿ ಸಂಭ್ರಮಿಸುತ್ತಾ ಹೋಗುತ್ತಿದ್ದ ನನಗೆ, ಆ ಸಾಲಿನಲ್ಲಿ ಒಂದು ಅನರ್ಘ್ಯ ರತ್ನದ ಹೆಸರಿತ್ತು, ಆದರೆ ಆ ಜಾಗದಲ್ಲಿ ಖಾಲಿ ಖಾಲಿ. ಅದರ ಫಲಕ ನೋಡಿದೆ, ಅದರಲ್ಲಿ "ಫಲಿತಾಂಶ" ಎಂದಿತ್ತು.

ಯಾಕೋ ಕುತೂಹಲ ಕಾಡಿತು, ಆ ಜಾಗವನ್ನು ಮತ್ತೆ ಮತ್ತೆ ನೋಡಿದೆ ಕೆಳಕಂಡ ವಿವರಗಳು ಸಿಕ್ಕವು.

ಆ ಮಾಣಿಕ್ಯ ೧೯೭೬ ನೆ ಇಸವಿಯಲ್ಲಿ ಅನಾವರಣಗೊಂಡಿತ್ತು.

ಅರೆಗಲ್ ಬ್ರದರ್ಸ್ ತಮ್ಮ ಕಿಸೆಯಿಂದ ಹಾಕಿದ ಕಾಂಚಣ ಈ ರತ್ನವನ್ನು ಬೆಳ್ಳಿ ತೆರೆಯಲ್ಲಿ ಬೆಳಗಿಸಿತ್ತು.

ಜೈ ಜಗದೀಶ್, ಆರತಿ, ಶುಭ ಜೊತೆಯಲ್ಲಿ ಹಿಂದಿ ಚಿತ್ರ ಜಗತ್ತಿನ ಕಂಚಿನ ಕಂಠ ಅಮರೀಶ್ ಪುರಿ ಕನ್ನಡಕ್ಕೆ ಕಾಲಿಟ್ಟ ಹೆಮ್ಮೆಯ ಕ್ಷಣ ಅದು.

ಆರ್ ಏನ್ ಜಯಗೋಪಾಲ್ ರಚಿಸಿದ ಸುಂದರ ಹಾಡುಗಳನ್ನು ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ವಾಣಿ ಜಯರಾಂ ಅಷ್ಟೇ ಸುಂದರವಾಗಿ ಜೀವ ತುಂಬಿ ಹಾಡಿದ್ದರು. ಇಂದಿಗೂ ನೆನಪಲ್ಲಿ ಉಳಿದಿರುವ ಅನೇಕ ಗೀತೆಗಳಲ್ಲಿ ಇವು ಕೂಡ ಒಂದು.

ಪುಟ್ಟಣ್ಣ ಚಿತ್ರಗಳು ಎಂದ ಮೇಲೆ ಸಂಗೀತದ ಮಾತು ಬಂದಾಗ ಮೊದಲ ಹೆಸರು ಬರುವುದು ಅವರ ನೆಚ್ಚಿನ ಗೆಳೆಯ ವಿಜಯಭಾಸ್ಕರ್. ಹೌದು ಈ ಚಿತ್ರವನ್ನು ವಿಜಯಭಾಸ್ಕರ್ ಸಂಗೀತ ಶರಧಿಯಲ್ಲಿ ಅದ್ದಿ ತೆಗೆದಿದ್ದಾರೆ.

"ಈ ಚೆಂಡಿನ ಆಟ" ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ಪಿ ಸುಶೀಲ ಹಾಡಿದ್ದಾರೆ.



"ಲವ್ ಎಂದರೆ ಯಾರೂ ಬಿಡಿಸಿದ ಬಂಧನ" ಈ ಹಾಡು ಇಷ್ಟವಾಗುವುದು ವಾಣಿಜಯರಾಂ ಅವರ ಧ್ವನಿ ಮತ್ತು ಪಾಶ್ಚಾತ್ಯ ಸಂಗೀತದ ಅಚ್ಚಿನಲ್ಲಿ ಮೂಡಿರುವ ಹಿನ್ನೆಲೆ ಸಹ ಗಾಯಕರ ಧ್ವನಿ.


ಫಲಿತಾಂಶವನ್ನು ಕಪ್ಪು ಬಿಳುಪಿನಲ್ಲಿ ಸೆರೆ ಹಿಡಿದದ್ದು ಬಿ ಎನ್ ಹರಿದಾಸ್ ಅವರ ಕ್ಯಾಮೆರ. 

ಶ್ರೀನಿವಾಸ್ ಕುಲಕರ್ಣಿಯವರ ಕತೆಯನ್ನು ತೆರೆಗೆ ಅಳವಡಿಸಿ ಈ ರತ್ನವನ್ನು ಬೆಳ್ಳಿ ತೆರೆಯಲ್ಲಿ ನೋಡಲು ಅನುಕೂಲ ಮಾಡಿಕೊಟ್ಟವರು ಪುಟ್ಟಣ್ಣ ಕಣಗಾಲ್.

ಹುಡುಕಿ ಹುಡುಕಿ ಸುಸ್ತಾಗಿ ಅಲ್ಲೇ ಒಂದು ಮೂಲೆಯಲ್ಲಿ ಕುಳಿತಾಗ ಈ ಚಿತ್ರದ ಪುಟ್ಟ ಮಾಹಿತಿ ಫಲಕ ಅಲ್ಲಿ ನೇತು ಹಾಕಿದ್ದು ಬಿದ್ದು ಹೋಗಿತ್ತು .. :-)


ಫಲಿತಾಂಶ
ನಿರ್ದೇಶನಪುಟ್ಟಣ್ಣ ಕಣಗಾಲ್
ನಿರ್ಮಾಪಕಅರಗಲ್ ಸಹೋದರರು
ಕಥೆಶ್ರೀನಿವಾಸ ಕುಲಕರ್ಣಿ
ಪಾತ್ರವರ್ಗಜೈಜಗದೀಶ್ ಆರತಿ ವೈಶಾಲಿ,ಪದ್ಮಾಕುಮುಟಅರುಣ ಇರಾನಿ,ಶುಭಲೋಕನಾಥ್ಲೀಲಾವತಿ,ಅಮರೀಶ್ ಪುರಿ
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಬಿ.ಎನ್.ಹರಿದಾಸ್
ಬಿಡುಗಡೆಯಾಗಿದ್ದು೧೯೭೬
ಚಿತ್ರ ನಿರ್ಮಾಣ ಸಂಸ್ಥೆಎ.1 ಮೂವೀಟೋನ್
ಹಿನ್ನೆಲೆ ಗಾಯನವಾಣಿ ಜಯರಾಂ,ಎಸ್.ಪಿ.ಬಾಲಸುಬ್ರಹ್ಮಣ್ಯಂ


ಈ ಚಿತ್ರ ಎಲ್ಲೇ ಹುಡುಕಿದರೂ ಸಿಗದ ಕಾರಣ, ಪುಟ್ಟಣ್ಣ ಕಣಗಾಲ್ ಚಿತ್ರಸರಣಿಯಲ್ಲಿ ಕೊನೆಯಲ್ಲಿ ಬರೆಯೋಣ ಎಂದು ಇಟ್ಟುಕೊಂಡಿದ್ದೆ. ಚಿತ್ರವನ್ನು ಕೈ ಬಿಡಲು ಮನಸ್ಸು ಒಪ್ಪಲ್ಲಿಲ್ಲ. ಆದ್ದರಿಂದ ಈ ಚಿತ್ರದ ಬಗ್ಗೆ ಅಂತರ್ಜಾಲದಲ್ಲಿ ಕೈ ಎಟುಕಿದ ಮಾಹಿತಿಯನ್ನು ಓದಿ ನನಗೆ ಅನ್ನಿಸಿದ ಒಂದಷ್ಟು ಪದಗಳಲ್ಲಿ ಒಂದು ಲೇಖನ ಮಾಡಿದ್ದೇನೆ. ಈ ಚಿತ್ರವನ್ನು ಯಾವಾಗಲಾದರೂ ನೋಡಿಯೇ ನೋಡುತ್ತೇನೆ ಎನ್ನುವ ಆತ್ಮವಿಶ್ವಾಸ ನನ್ನಲ್ಲಿದೆ. ನೋಡಿದ ದಿನ ಆ ಚಿತ್ರವನ್ನು ನನ್ನ ಮೂಸೆಯಲ್ಲಿ ಅರಳಿಸಿ, ನನಗೆ ತಾಕಿದ ಅನುಭವದ ಬಗ್ಗೆ ಒಂದಷ್ಟು ಪದಗಳನ್ನು ಹರಿಯ ಬಿಡುತ್ತೇನೆ...

****

ಪುಟ್ಟಣ್ಣ ಕಣಗಾಲ್ ಗುರುಗಳೇ, ಕರುನಾಡಿನ ಭಾಷೆಯಲ್ಲಿ ನಿಮ್ಮ ದಿಗ್ದರ್ಶನದಲ್ಲಿ ಅರಳಿದ ೨೪ ಚಿತ್ರಗಳಲ್ಲಿ ೨೩ ಚಿತ್ರಗಳನ್ನು ನೋಡಿ ನನ್ನ ಅನುಭವಕ್ಕೆ ನಿಲುಕಿದ ಒಂದೆರಡು ಮಾತುಗಳನ್ನು ಹಂಚಿಕೊಂಡಿದ್ದೇನೆ. ಒಂದು ಚಿತ್ರದ ಬಗ್ಗೆ ಕೇವಲ ಲಭ್ಯವಾದ ಮಾಹಿತಿಯನ್ನು ಮಾತ್ರ ಕೊಟ್ಟಿದ್ದೇನೆ. ನಿಮ್ಮ ಚಿತ್ರಗಳನ್ನು ಬಾಲ್ಯದಿಂದಲೂ ಆನಂದಿಸಿಕೊಂಡು ಬಂದಿದ್ದ ನನಗೆ, ಆ ಚಿತ್ರಗಳ ಬಗ್ಗೆ ಬರೆಯಬೇಕೆಂಬ ಹಂಬಲ ಹುಟ್ಟಿತ್ತು. ನಾ ಏನೇ ಬರೆದಿದ್ದರೂ ಅದು ನಿಮ್ಮ ಆಶೀರ್ವಾದದ ಬಲ ನನ್ನೊಳಗೆ ಕೂತು ಬರೆಸಿದೆ. ಈ ಲೇಖನಮಾಲಿಕೆಗಳನ್ನೂ ಬರೆಯುವ ಸಾಹಸಕ್ಕೆ ಸ್ಫೂರ್ತಿ ನೀಡಿದವರು ನನ್ನ ಅಪ್ಪ (ಮಂಜುನಾಥ್), ಮತ್ತು ನನ್ನ ಸೋದರ ಮಾವ (ಶ್ರೀಕಾಂತ್ ಅಲಿಯಾಸ್ ರಾಜ),  ಇವರಿಬ್ಬರೂ ಹಲವಾರು ರೀತಿಯಲ್ಲಿ ನನಗೆ ಮಾರ್ಗದರ್ಶಿಗಳು ಮತ್ತು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಶ್ರೀ  ನೀವು ಬರೆಯಿರಿ ಖಂಡಿತ ನೀವು ಈ ಸುಂದರ ಮಾಲೆಯನ್ನು ಪೂರ್ಣ ಮಾಡುತ್ತೀರಿ ಎಂದು ಧೈರ್ಯ ತುಂಬಿದವರು ಶ್ರೀ ಬಾಲಸುಬ್ರಮಣ್ಯ ಅರ್ಥಾತ್ ಬಾಲೂ ಸರ್, ಶ್ರೀ ಪ್ರಕಾಶ್ ಹೆಗ್ಡೆ, ಶ್ರೀಮತಿ ರೂಪ ಸತೀಶ್, ಶ್ರೀಮತಿ ನಿವೇದಿತ ಚಿರಂತನ್, ಶ್ರೀಮತಿ ಸ್ವರ್ಣ ಪಿ, ಶ್ರೀಮತಿ ಹರಿಣಿ GNT, ಶ್ರೀಮತಿ ಸುಗುಣ ಮಹೇಶ್, ಬದರಿನಾಥ್ ಪಲವಳ್ಲಿ  ಮತ್ತು ನಿಮ್ಮ ದಿಗ್ದರ್ಶನದ ಬಗ್ಗೆ ಅಭೂತಪೂರ್ವ ಮಾಹಿತಿ ಕೊಟ್ಟ ನಿಮ್ಮಯ ಆತ್ಮೀಯ ಸ್ನೇಹಿತರಾದ ಶ್ರೀ ಮೋಹನ್ ಕಂಪ್ಲಾಪುರ್ ಅಥವಾ ಕಂಪ್ಲಾಪುರದ ಮೋಹನ್  ಮತ್ತು ಅನೇಕ ಪುಟ್ಟಣ್ಣ ಕಣಗಾಲ್ ಅಭಿಮಾನಿಗಳು.

ಇಂದಿಗೂ ನನಗೆ ನೆನಪಿದೆ ನಿಮ್ಮ ಸಹೋದರ ಶ್ರೀ ನರಸಿಂಹ ಶಾಸ್ತ್ರಿಗಳು ನಿರರ್ಗಳವಾಗಿ ಒಂದೂವರೆ ತಾಸು ನಿಮ್ಮ ಬೆಳ್ಳಿಮೋಡದ ಚಿತ್ರದ ತಯಾರಿಯಿಂದ ಹಿಡಿದು ಸಿನಿಮಾ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿದ್ದನ್ನು ಅದ್ಭುತವಾಗಿ ಕಣ್ಣಿಗೆ ಕಟ್ಟಿದಂತೆ ವಿವರಿಸಿದ ರೀತಿ. ನಿಮ್ಮ ಮತ್ತು ನಿಮ್ಮ ಸಹೋದರರ ಚರಣ ಕಮಲಗಳಿಗೆ ಈ ಲೇಖನ ಅರ್ಪಿತ.

ಇದು ಖಂಡಿತ ನಾ ಬರೆದಿದ್ದಲ್ಲ, ನನ್ನೊಳಗೆ ಕೂತು, ನನಗೆ ಪ್ರೇರಣೆ ನೀಡಿ ನನ್ನ ಕೈಯಿಂದ ಬರೆಸಿದವರು.  ನೀವೇ ಹೇಳುವಂತೆ ಈ ಲೇಖನ ಮಾಲಿಕೆಯ ದಿಗ್ದರ್ಶನ ಜಗನ್ಮಾತೆ.

ಧನ್ಯವಾದಗಳು ಗುರುಗಳೇ ಮತ್ತು ಆರಂಭದಿಂದಲೂ ಪ್ರೋತ್ಸಾಹಿಸಿದ ಎಲ್ಲಾ ಓದುಗರಿಗೆ ನನ್ನ ಶಿರಸಾ ಪ್ರಣಾಮಿ.. !

Saturday, October 31, 2015

ಕಾಡುವ ಭಾವದೊಳಗೆ ಮಾಸದ ಮಸಣದ ಹೂವು (1984)

ಕೊಳವೆ ಬಾವಿ ತೋಡುವಾಗ ಆ ಯಂತ್ರ ಒಂದೇ ಸಮನೆ ನೆಲವನ್ನು ಕೊರೆಯುತ್ತಾ ಹೋಗುತ್ತದೆ ಎಡಬಿಡದೆ. ಹಾಗೆಯೇ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ಅಂತಿಮ ಚಿತ್ರ ಕೂಡ. ಈ ಚಿತ್ರವನ್ನು ಅನೇಕ ಬಾರಿ ನೋಡಿದ್ದೇನೆ. ಈ ಲೇಖನ ಬರೆಯುವ ಮೊದಲು ನೋಡಲು ಕುಳಿತೆ. ಸೂಕ್ಷ್ಮವಾಗಿ ಗಮನಿಸಿದಾಗ ಅರಿವಿಗೆ ಬಂದದ್ದು, ಈ ಚಿತ್ರದಲ್ಲಿ ಅನೇಕ ಉದ್ದುದ್ದ ದೃಶ್ಯಗಳು ಇವೆ (ಲಾಂಗ್ ಶಾಟ್ಸ್). ನನಗೆ ಅಚ್ಚರಿ ಆಯಿತು, ತಾಂತ್ರಿಕತೆ ಮತ್ತು ನಿರ್ದೇಶನದ ಮೇಲೆ ಮತ್ತು ಕತೆಯ ಮೇಲೆ ಹಿಡಿತ ಇದ್ದಾಗ ಎಂಥಹ ಜಾದೂ ಮಾಡಬಹುದು ಎಂದು.

ಈ ಚಿತ್ರ ಚೆನ್ನಾಗಿದೆ ಎಂದರೆ, ಮನುಕುಲದ ಮೇಲೆಯೇ ಒಂದು ರೀತಿಯಲ್ಲಿ ವಾಕರಿಕೆ ಬರುತ್ತದೆ, ಏಕೆಂದರೆ ಇದರ ಹುಟ್ಟಿಗೆ ಮನುಕುಲದ ವಿಷಮ ಮನಸ್ಥಿತಿಯೇ ಕಾರಣ. ಶ್ರೀ ತ ರಾ ಸುಬ್ಬರಾಯರು ರಚಿಸಿದ ಅನೇಕ ಕೃತಿಗಳು ಚಲನಚಿತ್ರಗಳಾಗಿವೆ. ಇದು ಒಂದು ರೀತಿಯ ವಿಚಿತ್ರ ಪರಿಸ್ಥಿತಿ. ಪುಟ್ಟಣ್ಣ ಅವರು ಈ ಚಿತ್ರವನ್ನು ನಿರ್ದೇಶಿಸಿದ ರೀತಿ ನೋಡಿದಾಗ, ಮುಂದಿನ ಚಿತ್ರಗಳು ಹೇಗಿರಬಹುದು ಎನ್ನುವ ಒಂದು ಖುಷಿ ಮನಸ್ಸಿಗೆ ಬಂದಿದ್ದು ಸುಳ್ಳಲ್ಲ. 

ಕಾರಣ, ನಾ ಮಸಣದ ಹೂವು ಕಾದಂಬರಿಯನ್ನು ಓದಿದಾಗ ಅಕ್ಷರಶಃ ಮನಸ್ಸು ಗಲಿಬಿಲಿಗೊಂಡಿದ್ದು ಮತ್ತು ಮನಸ್ಸು ತಲ್ಲಣಗೊಂಡಿದ್ದು ನಿಜ. ಮನುಜ ತನಗೆ ಬೇಕಾದ ದೇಹದ ಬಯಕೆಗೆ ಅಥವಾ ತನ್ನ ಕೆಲಸ ಸಾಧಿಸಿಕೊಳ್ಳುವ ತವಕದಲ್ಲಿ ಸಮಾಜದಲ್ಲಿ ಒಂದು ಅಸಹ್ಯ ಎನಿಸುವ ಒಂದು ಮೂಲೆಯನ್ನು ಸೃಷ್ಠಿ ಮಾಡಿದ್ದಾನೆ ಎಂದು ಅರಿವಾದಾಗ ನಿಜಕ್ಕೂ ವಕರಿಕೆಯೇ ಬರುತ್ತದೆ. ಕಾದಂಬರಿ ಕತೃ, ಆ ಲೋಕದ ದೃಶ್ಯವನ್ನು ಅಷ್ಟು ಸಹಜವಾಗಿ ಕಟ್ಟಿಕೊಟ್ಟಿದ್ದಾರೆ. 

ಪುಟ್ಟಣ್ಣ ಕಣಗಾಲ್ ಅವರು ಅಕ್ಷರಶಃ ಪುಸ್ತಕದಲ್ಲಿ ಇರುವಂಥಹ ಕ್ರೌರ್ಯ, ಸಾಕಪ್ಪ ಎನ್ನಿಸುವಷ್ಟು ಮನಸ್ಸಿಗೆ ಹಿಂಸೆ ಅನ್ನಿಸುವ ದೃಶ್ಯಗಳನ್ನು ನವಿರಾಗಿ, ಮನಕ್ಕೆ ತಾಕುವಂತೆ ಚಿತ್ರೀಕರಿಸಿದ್ದಾರೆ. ಈ ರೀತಿಯ ಕಥೆಗಳನ್ನು ದೃಶ್ಯಕಾವ್ಯವಾಗಿ ಮಾಡಲು ಅದ್ಭುತ ಸೃಜನಶೀಲತೆ ಬೇಕು.  ಎಲ್ಲೇ ಮೀರಲು ಎಲ್ಲಾ ಅವಕಾಶಗಳು ಇದ್ದಾಗ್ಯೂ, ಸಹ್ಯವಾಗಿ ಚಿತ್ರವನ್ನು ಕೊಟ್ಟಿರುವುದು ಅವರ ಅಸಾಧಾರಣ ಪ್ರತಿಭೆಯ ವಿರಾಟ್ ರೂಪ ಎಂಬ ಮಾತು ನನ್ನದು. 

ಉತ್ತುಂಗದಲ್ಲಿದ್ದ ಅಂಬರೀಶ್ ಅಕ್ಷರಶಃ ತಮ್ಮ ಗುರುಗಳ ದಿಗ್ದರ್ಶನದಲ್ಲಿ ತಮ್ಮ ಇಮೇಜ್ ಬಿಟ್ಟು ಅಭಿನಯಿಸಿದ್ದಾರೆ. ಮೇಡಂ ನನಗೆ ಎರಡು ಸಾವಿರ ಕೊಡಿ, ನೀವು ಹೇಳಿದ ಕೆಲಸ ಮಾಡಿಕೊಂಡು ಇರುತ್ತೇನೆ ಎನ್ನುವಾಗ ಅವರ ಕಣ್ಣುಗಳಲ್ಲಿ ಕಾಣುವ ನೋವು, ಜೀವನದ ಬಗ್ಗೆ ತಿರಸ್ಕಾರ ಜೊತೆಯಲ್ಲಿಯೇ, ಹೇಗಾದರೂ ಸರಿ ಬದುಕಬೇಕು ಎನ್ನುವ ಭಾವ ಎದ್ದು ಕಾಣುತ್ತದೆ. ತಮ್ಮ ತಾಯಿಗೆ ರಾತ್ರಿಯೊಳಗೆ ನಾ ಬರದಿದ್ದರೆ, ಇಲಿ ಪಾಷಾಣ ಮತ್ತು ನೀರು ಇದೆ ಎನ್ನುವ ಧ್ವನಿಯಲ್ಲಿ ನಿರಾಶೆ, ಹತಾಶೆ ಮತ್ತು ತನ್ನ ತಾಯಿಗೆ, ಬಡತನದಿಂದ ಮುಕ್ತಿ ನೀಡಲು ವಿಷ ತಿನ್ನು ಎಂದು ಹೇಳುವಂಥಹ ದೃಶ್ಯ. ಇದರಲ್ಲಿ ಅವರ ಅಭಿನಯ ಕಣ್ಣಲ್ಲಿ ನೀರು ಮೂಡಿಸುತ್ತದೆ. 

ಎರಡು ಸಾವಿರ ಕೊಡಿ ಎಂದಾಗ, ಅದಕ್ಕೆ ಕೆಲವು ನಿಯಮಗಳಿವೆ ಎಂದಾಗ, ಏನೇ ಆಗಲಿ, ನಾ ನೀವು ಹೇಳುವ ಕೆಲಸ ಮಾಡುತ್ತೇನೆ ಎಂದು ಎರಡು ಬೊಗಸೆಗಳನ್ನು ಒಡ್ಡಿ ನಿಂತಾಗ, ಯಾರ ಕಣ್ಣಲ್ಲೇ ಆದರೂ ಜೋಗದ ಹನಿ ಕಂಡೆ ಕಾಣುತ್ತದೆ. ತಲೆಹಿಡುಕನ ಪಾತ್ರದಲ್ಲಿ ಅದ್ಭುತ ಪರಕಾಯ ಪ್ರವೇಶ. ನಡೆ, ನುಡಿ, ಹಾವ ಭಾವ, ಅಬ್ಬಬ್ಬ ಎನ್ನಿಸುತ್ತದೆ. 

ಜಯಂತಿ, ಮಾತೆ ಬೇಡ, ಹಲವಾರು ದೃಶ್ಯಗಳಲ್ಲಿ ಬರಿ ಕಣ್ಣುಗಳಲ್ಲೇ ಅಭಿನಯ ತೋರಿಸಿದ್ದಾರೆ. ಆ ಪಾತ್ರಕ್ಕೆ ಬೇಕಾದ ಅಂಗೀಕ ಅಭಿನಯ, ತಿರಸ್ಕಾರ, ಹಣಕ್ಕೆ ಮಾತ್ರ ಪ್ರಾಮುಖ್ಯತೆ ಮಿಕ್ಕವು ಗೌಣ ಎಂದು ಕೆಲವು ದೃಶ್ಯಗಳಲ್ಲಿ ಕಂಡು ಬಂದರೆ, ಇನ್ನೂ ಕೆಲವು ದೃಶ್ಯಗಳಲ್ಲಿ ನಂಬಿದವರನ್ನು ಸಲಹುವುದು, ಜೊತೆಯಲ್ಲಿಯೇ ಅವರನ್ನು ರಕ್ಷಿಸಲು ಮುಂದಾಗುವ ರೀತಿಯ  ಅಭಿನಯ ಅವರು ಮಾತ್ರ ಮಾಡಲು ಸಾಧ್ಯ. ತಾನು ಕಳಿಸಿದ ಹುಡುಗಿಯ ವರ್ತನೆ ಬಗ್ಗೆ ಕೇಳಿಬಂದಾಗ ಕೋಪಗೊಂಡು ಆ ಹುಡುಗಿಗೆ ದಂಡಿಸುತ್ತಾರೆ, ನಂತರ ನಿಜದ ಅರಿವಾದ ಮೇಲೆ, ಆಕೆಯನ್ನು ತಬ್ಬಿಕೊಂಡು ಕ್ಷಮೆ ಕೇಳುತ್ತಾರೆ. ಇಂಥಹ ವೃತ್ತಿಯಲ್ಲಿ ಈ ರೀತಿಯ ಮಾನವೀಯತೆಯೂ ಇದೆ ಎಂದು ಕೂಗಿ ತೋರಿಸುವ ಅಭಿನಯ. ಇಡಿ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ.  

ಇನ್ನು ಉಳಿದ ಪಾತ್ರಗಳು ಚಿತ್ರಕ್ಕೆ ಬೇಕಾದ ಅಗತ್ಯ ಅಭಿನಯವನ್ನು ನೀಡಿದ್ದಾರೆ. ಇಡಿ ಚಿತ್ರದ ತುಂಬಾ ತುಂಬಿಕೊಂಡಿರುವುದು ಅಂಬರೀಶ್ ಮತ್ತು ಜಯಂತಿ. ಇವರಿಬ್ಬರಿಂದ ಹಿತಮಿತವಾಗಿ, ಪರಿಣಾಮಕಾರಿಯಾಗಿ ಅಭಿನಯ ತೆಗೆದಿರುವುದು ಪುಟ್ಟಣ್ಣ ಅವರ ಅದ್ಭುತ ಹಿಡಿತ ಹೊಂದಿರುವ ನಿರ್ದೇಶನದ ಕುರ್ಚಿ. 

ಪಂಚಾಮೃತದಲ್ಲಿ ಹಾಲು, ಮೊಸರು, ಸಕ್ಕರೆ, ಜೇನುತುಪ್ಪ, ಮತ್ತು ಫಲಗಳು ಸೇರಿದಂತೆ, ಪ್ರತಿ ದೃಶ್ಯವನ್ನು ಕಲೆಯ ಹಾಲಿನ ಕಡಲಲ್ಲಿ ಅದಕ್ಕೆ ಬೇಕಾಗುವ ವಿವಿಧ ಭಾವಗಳನ್ನು ಬೆರೆಸಿ ಅದ್ದಿ ತೆಗೆದಂತೆ ಚಿತ್ರೀಕರಿಸಿದ್ದಾರೆ. ಚಿತ್ರವನ್ನು ನೋಡುತ್ತಾ ಹೋದಂತೆ, ಅಲ್ಲಿ ಚಿತ್ರಕಥಾವಸ್ತುಗಿಂತಲೂ ಪುಟ್ಟಣ್ಣ ಅವರ ನಿರ್ದೇಶಕನ ಜವಾಬ್ಧಾರಿ ಕೊಂಚವೂ ಅಲುಗಾಡದಂತೆ ಆದರೆ ಅವರ ಮೇಲೆ ಹೆಮ್ಮೆ ಬರುವಂತೆ ದೃಶ್ಯಗಳನ್ನು ಪೋಣಿಸಿದ್ದಾರೆ. 

ಕೆಲವು ಅದ್ಭುತ ದೃಶ್ಯಗಳು 
೧) ಮೇಡಂ, ಎರಡು ಸಾವಿರ ಕೊಡಿ ಎಂದಾಗ, ನನಗೆ ಒಂದು ಮುತ್ತು ಕೊಡು ಎಂದು ಕೇಳುತ್ತಾರೆ. ಹಿಂದೆ ಮುಂದೆ ನೋಡುತ್ತಾ ನಿಂತ ನಾಯಕನಿಗೆ ಬಯ್ದು, ಒಂದು ಮುತ್ತು ಕೊಡಲು ಹಿಂದೆ ಮುಂದೆ ನೀಡುವ ನೀನು ಈ ಮನೆಯಲ್ಲಿ ಏನು ತಾನೇ ಕೆಲಸ ಮಾಡ್ತೀಯ, ಹೋಗು ಹೋಗು ಎಂದು ಅಟ್ಟುತ್ತಾರೆ. ಆಗ ಕೊಂಚವೂ ಗಲಿಬಿಲಿ ಗೊಳ್ಳದೆ ಮುತ್ತು ನೀಡುತ್ತಾರೆ, ಆದರೆ ಆ ದೃಶ್ಯವನ್ನು ತೋರಿಸುವ ರೀತಿ ಅದ್ಭುತ. ಅಶ್ಲೀಲತೆ ಇಲ್ಲವೇ ಇಲ್ಲ ಅಲ್ಲಿ.  ಬದುಕಲೇ ಬೇಕು  ಎಂಬ ಹಠ ಬಂದಾಗ, ಜೀವನ ತನಗೆ ತಾನೇ ದಾರಿ ತೋರಿಸುತ್ತದೆ, ಹಾಗೂ ಧೈರ್ಯ ತುಂಬುತ್ತದೆ. 

೨) ಮೇಡಂ, ಸುಮ್ಮನೆ ಎರಡು ಸಾವಿರ ಗೊತ್ತಿರದ ಅವನಿಗೆ ಕೊಟ್ಟು ಬಿಟ್ಟಿರಿ, ಅವನು ಬರದೆ ಹೋದರೆ "ನೋಡು ಅವನು ನಿಯತ್ತಿನ ಮನುಷ್ಯ ಅನ್ನಿಸುತ್ತದೆ, ಒಂದು ವೇಳೆ ಬರದೆ ಹೋದರೆ, ನನ್ನ ಕಾಲುಮುಟ್ಟಿ ನಮಸ್ಕರಿಸಿದ ಅವನ ಶ್ರದ್ಧೆ ವಜಾ ಮಾಡಿಕೊಳ್ಳುತ್ತೇನೆ". ಬಂಡೆಯಲ್ಲಿ ಕೂಡ ನಂಬಿಕೆ ಇದು, ಒಲಿದರೆ ದೇವರಾಗುತ್ತದೆ, ಇಲ್ಲವೇ ಮನೆ ಕಟ್ಟಲು ಕಲ್ಲಾಗುತ್ತದೆ ಎನ್ನುತ್ತದೆ ಸುಭಾಷಿತ. ಎಷ್ಟು ನಿಜ ಅಲ್ಲವೇ. 

೩) ಇದುವರೆಗೂ ಯಾರು ಯಾರಿಗೋ ಕೈ ಮುಗಿದೇ, ಆದರೆ ಇಂದು ಒಂದು ದೇವರ ಮೂರ್ತಿ ತರಹ ಇರುವ ನಿಮಗೆ ಕೈಮುಗಿಯುತ್ತೇನೆ ಎಂದು ಲೋಕನಾಥ್ ಪಾತ್ರಧಾರಿಗೆ ಕೈಮುಗಿಯುವ ಜಯಂತಿ ಅಭಿನಯ. ಆ ಮನೆಗೆ ಬರುವವರೆಲ್ಲ ಬರಿ ಸುಖಃ ಅರಸಿಕೊಂಡು ಬರುವವರಲ್ಲ, ಬದಲಿಗೆ ಮಾನವೀಯತೆಯನ್ನು ಅರಸಿಕೊಂಡು ಬರುವವರು ಇದ್ದಾರೆ ಎನ್ನುವ ನಿರೂಪಣೆ ಇಲ್ಲಿದೆ. 

ಈ ಚಿತ್ರದ ದೊಡ್ಡ ಆಸ್ತಿ ಚಿತ್ರದಲ್ಲಿ ಅದ್ಭುತವಾಗಿ ಚಿತ್ರೀಕರಣಗೊಂಡ ಹಾಡುಗಳು. ಇಂಥಹ ಚಿತ್ರದಲ್ಲೂ ಕರುನಾಡನ್ನು, ಅದರ ಸೊಬಗನ್ನು ತೋರಿಸುವ ಪುಟ್ಟಣ್ಣ ಅವರ ವಿಶಿಷ್ಟ ಭಾವ ಇಲ್ಲೂ ಇದೆ. ಬಹುತೇಕ ಕರಾವಳಿ ಪ್ರದೇಶಗಳಲ್ಲಿ ಚಿತ್ರಿತವಾಗಿರುವ "ಕನ್ನಡ ನಾಡಿನ ಕರಾವಳಿ" ಜಯಚಂದ್ರನ್ ಮತ್ತು ವಾಣಿ ಜಯರಾಂ ಅವರ ಜೇನಿನ ಕಂಠದಲ್ಲಿ ಮೂಡಿ ಬಂದಿದೆ. ಎಸ್ ಆರ್ ಎಕ್ಕುಂಡಿ ಅವರ ಅಮೋಘ ಸಾಹಿತ್ಯಕ್ಕೆ ಕರಾವಳಿಯ ಎಲ್ಲಾ ಪ್ರಕಾರದ ಸಂಗೀತ ಒದಗಿಸಿರುವ ವಿಜಯಭಾಸ್ಕರ್, ಮತ್ತು ನೃತ್ಯ ಸಂಯೋಜನೆ, ಕರುನಾಡಿನ ವಿಶಿಷ್ಠತೆಯನ್ನು ಎತ್ತಿ ತೋರಿಸುವ ಹಾಡಾಗಿ ಉಳಿದುಕೊಂಡು ಬಂದಿದೆ. 

ಪ್ರೀತಿ ಎಲ್ಲಿಂದ ಹುಟ್ಟುತ್ತೆ ಹೇಗೆ ಜೀವನವನ್ನು ಬೆಳಗಬಲ್ಲದು ಎನ್ನುವ ಅನೇಕ ಪ್ರಶ್ನೆಗಳಿಗೆ ಹಾಡಿನ ರೂಪದಲ್ಲಿ ಚಿತ್ರೀಕರಿಸಿದ್ದಾರೆ "ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ" ಮತ್ತೊಮ್ಮೆ ಜಯಚಂದ್ರನ್ ಮತ್ತು ವಾಣಿ ಜಯರಾಂ ಮನಸ್ಸಿನ ಮೂಲೆ ಮೂಲೆಯನ್ನು ತಟ್ಟುತ್ತಾರೆ. ವಿಜಯನಾರಸಿಂಹ ಅವರ ಸರಳ ಆದರೆ ಪರಿಣಾಮಕಾರಿ ಸಾಹಿತ್ಯ ಇಷ್ಟವಾಗಲೇ ಬೇಕು. ಪ್ರೇಮಿಗಳ ಹಾಡಾಗಿ ಬರುತ್ತದೆ. 

ಒಂದು ಕ್ಷಣದ ಆದರೆ ಜೀವನದ ಗತಿಯನ್ನು ಬದಲಾಯಿಸಬಲ್ಲ ತಿರುವನ್ನು ಒಂದು ಹಾದಿ ಬಿಟ್ಟ ಹುಡುಗಿಗೆ ಕೊಡುವ ನಾಯಕನನ್ನು ಕನಸಿನಲ್ಲಿ ಮತ್ತು ಮನಸ್ಸಿನಲ್ಲಿಯೇ ಅಭಿನಂದಿಸುವ ಹಾಡಾಗಿ ಬಂದಿದೆ "ಓ ಗುಣವಂತ". ಈ ಹಾಡಿನ ಸಾಹಿತ್ಯ ಎಷ್ಟು ಬಾರಿ ಕೇಳಿದರೂ, ಹೊಸ ಹೊಸ ರೀತಿಯಲ್ಲಿ ಮನಸ್ಸಿಗೆ ತಾಕುತ್ತದೆ. ಕನಸ್ಸುಗಳ ಮೂಟೆಯನ್ನು ಹೊತ್ತು ಸಾಗುವಾಗ ಬರುವ ಒಂದು ವಿಚಿತ್ರ ತಿರುವು ಮತ್ತು ಆ ತಿರುವಿಗೆ ಒಂದು ಕೊಂಕು ಹಾಕಿ, ಮತ್ತೆ ಹಳಿಗೆ ಬರುವ ಜೀವನ ಪಥವನ್ನು ತೋರುವ ಆ ನಾಯಕನಿಗೆ ಧನ್ಯವಾದಗಳನ್ನು ಅರ್ಪಿಸುವ ಹಾಡನ್ನು ಎಸ್ ಜಾನಕಿಯಮ್ಮ ಆಪೋಶನ ಮಾಡಿ ಹಾಡಿದ್ದಾರೆ. ಸಂಗೀತ, ಅದಕ್ಕೆ ತಕ್ಕಂತೆ ಸಾಹಿತ್ಯ, ಅದಕ್ಕೆ ಬೇಕಾದ ಅದ್ಭುತ ಗಾಯನ... ನಾ ಹೇಳೋಲ್ಲ ನೀವೇ ಕೇಳಿ ಈ ಹಾಡನ್ನು ತಲೆದೂಗದೆ ಇರಲು ಸಾಧ್ಯವೇ ಇಲ್ಲ. 

ಚಂದ್ರ ತೋರಿಸಲೇ, ನಕ್ಷತ್ರಗಳನ್ನು ನಿನ್ನ ಮುಡಿಗೆ ಪೋಣಿಸಲೇ ಎಂದು ಇಲ್ಲದ ಆಸೆ ಹುಟ್ಟಿಸುವ ಪ್ರೇಮಿಗಳ ಆಶಾಪಾಶದ ಮಧ್ಯದಲ್ಲಿ, ನನ್ನ ಮಟ್ಟ ಹೀಗಿದೆ, ನನಗೆ ಅದು ತರಲು ಆಗೋಲ್ಲ, ಇದು ತರಲು ಅಸಾಧ್ಯ ಎಂದು ಹೇಳುತ್ತಲೇ, ನಿನಗಾಗಿ ಏನು ತರಲಿ ಹೇಳು ಎಂದು ಪ್ರೀತಿಯ ನಿವೇದನೆ ಮಾಡುವ ಹಾಡಿನಲ್ಲಿ ಎಸ್ ಅರ್ ಎಕ್ಕುಂಡಿ ವಿರಚಿತ "ಯಾವ ಕಾಣಿಕೆ ನೀಡಲಿ" ಎಂದು ಎಸ್ ಪಿ ಬಾಲಸುಬ್ರಮಣ್ಯಂ ಮನವನ್ನು ತಟ್ಟುತ್ತಾರೆ. 

ಕಸದ ಬಿದ್ದ ಹೂವಿಗೂ ಬೆಲೆಯಿದೆ, ಮುದುಡಿ ಹೋದ ಮಾಲೆಗೆ ಬೆಲೆ ಕಟ್ಟುವ ಮನಸಿದ್ದರೆ ಸಾಕು, ಅದು ಹೃದಯ ಕಮಲದ ಗುಡಿಯಲ್ಲಿ ಪೂಜೆಗೆ ಅರ್ಹವಾಗುವ ಮನಸ್ಸಿಗೆ ಅರ್ಪಿತವಾಗುತ್ತದೆ ಎನ್ನುವ ಒಂದು ಹೃದಯ ಹಿಂಡುವ ಸಾಹಿತ್ಯ "ಮಸಣದ ಹೂವೆಂದು ನೀನೇಕೆ ಕೊರಗುವೆ" ಹಾಡು, ಇಲ್ಲಿ ಎಸ್ ಪಿ ಬಾಲಸುಬ್ರಮಣ್ಯಂ ಅವರ "ಪಾರ್ವತಿ" ಎಂದು ಕೂಗುವ ಶಬ್ದ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರುತ್ತದೆ. 

ಹಾಡುಗಳು ಚಿತ್ರದ ಅವಿಭಾಜ್ಯ ಅಂಗ ಮತ್ತು ಅದು ಕತೆಯನ್ನು ಮುಂದುವರೆಸಲು ಸಹಾಯವಾಗುತ್ತದೆ ಎಂದು ಬಲವಾಗಿ ನಂಬಿದ್ದ ಪುಟ್ಟಣ್ಣ ಕಣಗಾಲ್ ತಮ್ಮ ಅಂತಿಮ ಚಿತ್ರದಲ್ಲಿಯೂ ಕೂಡ ಹಾಡುಗಳನ್ನು ಸರಿಯಾದ ಜಾಗದಲ್ಲಿ ಅಳವಡಿಸಿಡಿಸಿ ಕಥೆಯ ಓಟಕ್ಕೆ ಒಂದು ನಿರ್ಧಿಷ್ಟ ವೇಗವನ್ನು ಕೊಟ್ಟಿದ್ದಾರೆ. 

ಇಡಿ ಚಿತ್ರ ಎಲ್ಲೂ ಒಂದಿನಿತು ಬೇಸರ ತರಿಸುವುದಿಲ್ಲ. ಒಬ್ಬ ಜಾದೂಗಾರ ಯಕ್ಷಿಣಿ ಮಾಡಿ ಮಾಡಿ ಜನರ ಮನಸ್ಸನ್ನು ಗೆಲ್ಲುವಂತೆ, ಪ್ರತಿ ದೃಶ್ಯಗಳನ್ನು ಜಾದೂಗಾರಿಕೆಯ ದಂಡದಿಂದ ಸ್ಪರ್ಶ ಮಾಡಿ, ಮರೆಯದ ಮಾಣಿಕ್ಯವನ್ನು ಬೆಳ್ಳಿ ತೆರೆಯಲ್ಲಿ ಬೆಳಗಿಸಿದ್ದಾರೆ. 

ಅನುಗ್ರಹ ಮೂವಿ ಮೇಕರ್ಸ್ ಲಾಂಛನದಲ್ಲಿ ಬಿ ಎಸ್ ಗಾಯತ್ರಿ ಮತ್ತು ಎಸ್ ಆರ್ ಸರ್ವೋತ್ತಮ ಕಣಗಾಲ್ ಅವರ ನಿರ್ಮಾಣದಲ್ಲಿ ಮೂಡಿ ಬಂದ ಈ ಚಿತ್ರ ರತ್ನಕ್ಕೆ ಛಾಯಾಗ್ರಾಹಣ ಮಾಡಿದವರು ಎಸ್ ಮಾರುತಿರಾವ್.  ಸರಳ ಆದರೆ ಪರಿಣಾಮಕಾರಿ ಸಂಭಾಷಣೆ ನೀಡಿದವರು ಟಿ ಜಿ ಅಶ್ವತ್ ನಾರಾಯಣ. 

ತಮ್ಮ ಎಲ್ಲಾ ಕಾಯಕಕ್ಕೂ ಪ್ರೇರೇಪಣೆ ನೀಡಿದ ಜಗನ್ಮಾತೆಯನ್ನು ಸ್ಮರಿಸುತ್ತಾ  ಆ ಮಾತೆಯ ದಿಗ್ದರ್ಶನದಲ್ಲಿ ಈ ದೃಶ್ಯ ಕಾವ್ಯವನ್ನು ಕಟ್ಟಿಕೊಟ್ಟವರು ಪುಟ್ಟಣ್ಣ ಕಣಗಾಲ್ ಅವರು. 

ತಾವು ಕಂಡ ರೀತಿಯಲ್ಲಿ ಚಿತ್ರವನ್ನು ಮುಗಿಸುವ ಮೊದಲೇ ಆ ಜವರಾಯನ ಕರೆಗೆ ಓಗೊಟ್ಟು ಇಹಲೋಕದಿಂದ ಹೊರನೆಡೆದ ಮೇಲೆ, ಅವರಿಗೆ ಗೌರವ ಸಲ್ಲಿಸುತ್ತಲೇ, ಉಳಿದ ಭಾಗವನ್ನು ಆದಷ್ಟು ಪುಟ್ಟಣ್ಣ ಅವರ ಕಲ್ಪನೆಯಲ್ಲಿ ಇರಬಹುದು ಎನ್ನುವ ರೀತಿಯಲ್ಲಿ ಚಿತ್ರವನ್ನು ಪೂರ್ಣಗೊಳಿಸಿ, ತಾವು ಚಿತ್ರೀಕರಿಸಿದ ಭಾಗದಲ್ಲಿ ತಪ್ಪಿದ್ದರೆ ಅದು ತಮ್ಮದೇ ಎಂದು ಹೇಳಿ ತಮ್ಮ ಗೆಳೆಯ ಪುಟ್ಟಣ್ಣ ಕಣಗಾಲ್ ಅವರಿಗೆ ವಂದನೆ ಅರ್ಪಿಸುವ ಇತ್ತೀಚಿಗಷ್ಟೇ ಪುಟ್ಟಣ್ಣ ಕಣಗಾಲ್ ಅವರನ್ನು ಸ್ವರ್ಗದಲ್ಲಿ ಭೇಟಿ ಮಾಡಲು ತೆರಳಿದವರು ರವಿ ಅಥವಾ ಕೆ ಎಸ್ ಎಲ್ ಸ್ವಾಮೀ. 



ಈ ಚಿತ್ರದ ಹೆಸರು ಮಸಣದ ಹೂವು ಎಂದಿದ್ದರೂ ಕನ್ನಡಿಗರ ಮತ್ತು ಚಲನ ಚಿತ್ರ ರಸಿಕರ ಹೃದಯ ಕಮಲದಲ್ಲಿ ಈ ಚಿತ್ರ ಎಂದೂ ಬಾಡದ ಪಾರಿಜಾತ ಹೂವಾಗಿ ಸದಾ ನಗುನಗುತ್ತಲೇ ಇರುತ್ತದೆ. 

ಪುಟ್ಟಣ್ಣ ಕಣಗಾಲ್ ಮತ್ತು ರವಿ ಅವರಿಗೆ ಈ ಲೇಖನ ಅರ್ಪಿತ. 

Thursday, October 29, 2015

ಸ್ನೇಹದ ಅಮೃತ ಸಿಂಚನ ಮಾಡುವ ಅಮೃತ ಘಳಿಗೆ (1984)

ಸಮುದ್ರದಲ್ಲಿ ತೇಲುವ ಅನುಭವ ಎಷ್ಟು ಸೊಗಸೋ ಅಷ್ಟೇ ಭಯನಕವಾಗಿರುತ್ತೆ ದೈತ್ಯ ಅಲೆಗಳು ಸುತ್ತ ಮುತ್ತಲ ಸೃಷ್ಠಿಯನ್ನು ಆಪೋಶನ ಮಾಡುವಾಗ. ಆದರೆ ಆ ದೈತ್ಯ ಅಲೆಗಳಿಗೆ ಶಕ್ತಿ ಕೊಡುವುದು ಯಾವುದು ಗೊತ್ತೇ, ಕಡಲಲ್ಲಿ ಇರುವ ನೀರು ಮತ್ತು ಅದರ ಮೇಲೆ ಬೀಸುವ ಗಾಳಿ.

ನಿಜ ಅದರ ಒಡಲೊಳಗೆ ಇರುವ ನೀರು ದೈತ್ಯಾಕಾರ ತಾಳುತ್ತದೆ ಎಂದರೆ, ಅದರೊಳಗಿನ ಶಕ್ತಿ ನಮ್ಮ ಊಹೆಗೆ ನಿಲುಕದ್ದು. 

ಪುಟ್ಟಣ್ಣ ಕಣಗಾಲ್ ಅವರು ಮಾಮೂಲಿ ಎನ್ನುವ ಕಥೆಯನ್ನು ಕೂಡ ಅಸಾಧಾರಣ ರೀತಿಯಲ್ಲಿ ತೆರೆಯ ಮೇಲೆ ಬಡಿಸುತ್ತಿದ್ದುದು ಅವರ ಅಗಾಧ ಪ್ರತಿಭೆಯ ಶಕ್ತಿಯಿಂದ. ನಮ್ಮ ಕಣ್ಣಿಗೆ ಸಾಧಾರಣ ಎನ್ನಿಸುವುದನ್ನು ಅಷ್ಟೇ ವಿವರವಾಗಿ, ವಿಶಿಷ್ಟ ರೀತಿಯಿಂದ ಹೀಗೂ ನೋಡಬಹುದು ಎನ್ನುವುದನ್ನು ಕಳಿಸಿಕೊಟ್ಟ ಗುರುಗಳು ಅವರು. 

ಅಮೃತ ಘಳಿಗೆ ಈ ಚಿತ್ರದ ಕಥೆಯನ್ನು ಅವರ ಜೀವದ ಗೆಳೆಯ ಮೋಹನ್ ಕಂಪ್ಲಾಪುರ್ ಕೊಟ್ಟಾಗ ಅ ಪುಸ್ತಕದ ಮೇಲೆ ಇದ್ದ ಶಿರೋನಾಮೆ "ದೊಡ್ಡೇರಿ ವೆಂಕಟಗಿರಿ ರಾವ್ - "ಅವಧಾನ" ". ಅದನ್ನೇ ಸುಂದರ ಚಿತ್ರಕಥೆ ಮಾಡಿ, ಅದಕ್ಕೊಂದು ಸುಂದರ ತಾಣವನ್ನು ಹುಡುಕಿ, ಅಮೃತ ಘಳಿಗೆ ಎನ್ನುವ ಒಂದು ನಿತ್ಯ ನೂತನ ಚಿತ್ರವನ್ನು ನೀಡಿದರು. ಈ ಕಥೆ ಆ ಕಾಲದಲ್ಲಿ ಸುಧಾ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಮೂಡಿ ಬಂದಿತ್ತು. ಪುಟ್ಟಣ್ಣ ಅವರ ಹುಡುಕಾಟದಲ್ಲಿ ಸಿಕ್ಕ ಇಂಥಹ ಕಥಾ ಮುತ್ತುಗಳು ಹೇರಳ. 

ಎಸ್ ಆರ್ ರಾಜನ್, ಭೀಮ ರಾವ್, ಕೆ ನಾಗರತ್ನ, ಪುಟ್ಟಣ್ಣ ಕಣಗಾಲ್ ತಂಡ ನಿರ್ಮಾಪಕರಾಗಿ ಈ ಚಿತ್ರವನ್ನು ಜಯಭೇರಿ ಫಿಲಂಸ್ ಲಾಂಛನದಲ್ಲಿ ತೆರೆಗೆ ತಂದರು. 

ಆರಂಭದಲ್ಲಿ ಪುಟ್ಟಣ್ಣ ಅವರ ಮಾತೃಶ್ರಿ ಅವರಿಗೆ ನಮನ ಸಲ್ಲಿಸುತ್ತಾ, ಶುರುವಾಗುವ ಈ ಚಿತ್ರದ ವಿಶೇಷ ಛಾಯಾಗ್ರಹಣ ಬಿ ಎಸ್ ಬಸವರಾಜ್ ಅವರದ್ದು. ಅದ್ಭುತ ಹಾಡುಗಳನ್ನು ಬರೆದದ್ದು ಜೀವದ ಗೆಳೆಯ ವಿಜಯನಾರಸಿಂಹ ಅದಕ್ಕೆ ಸಂಗೀತ ಕಿರೀಟ ತೊಡಿಸಿದವರು ಇನ್ನೊಬ್ಬ ಜೀವದ ಗೆಳೆಯ ವಿಜಯಭಾಸ್ಕರ್. 

ಪುಟ್ಟಣ್ಣ ಅವರಿಗೆ ಕರುನಾಡಿನ ಪ್ರತಿಭೆಗಳನ್ನು, ಕರುನಾಡಿನ ಸುಂದರ ತಾಣಗಳನ್ನು ಪರಿಚಯಿಸುವ ಉತ್ಸಾಹ ಯಾವಾಗಲೂ ಇತ್ತು. ಅವರ ಚಿತ್ರಗಳ ಮೂಲಕ ಬೆಳಕಿಗೆ ಬಂದ ನಕ್ಷತ್ರಗಳು ಅನೇಕ ಅನೇಕ. ಈ ಚಿತ್ರದ ಮೂಲಕ ಕರುನಾಡಿಗೆ ಕೊಟ್ಟ ಉಡುಗೊರೆ ಬಿ ಆರ್ ಛಾಯ ಎನ್ನುವ ಕರುನಾಡಿನ ಮನೆಮಗಳಾದ ಗಾಯಕಿ. 

ಚುರುಕು ಸಂಭಾಷಣೆ, ಹಿತಮಿತವಾದ ಪದಗಳು ಪುಟ್ಟಣ್ಣ ಚಿತ್ರಗಳ ಆಸ್ತಿ, ಈ ಚಿತ್ರಕ್ಕೆ ಪದಗಳನ್ನು ಜೋಡಿಸಿದವರು ಬಿ ಎಲ್ ವೇಣು. ಜಗನ್ಮಾತೆಯ ದಿಗ್ದರ್ಶನದಲ್ಲಿ ಚಿತ್ರಕಥೆ, ನಿರೂಪಣೆ ಮತ್ತು ನಿರ್ವಹಣೆ ಪೂಜ್ಯ ಗುರುಗಳಾದ ಪುಟ್ಟಣ್ಣ ಕಣಗಾಲ್ ಅವರದ್ದು. 

ಪುಟಿಯುವ ಯೌವನದ ಉತ್ಸಾಹ ಕೆಲವೊಮ್ಮೆ ಎಂಥಹ ಹಾದಿಯನ್ನು ಹಿಡಿಯುತ್ತದೆ ಎನ್ನುವುದರ ಆರಂಭ ಈ ಚಿತ್ರದ ಆರಂಭಿಕ ದೃಶ್ಯದಲ್ಲಿ ಕಾಣುತ್ತದೆ. ಬುಗ್ಗೆ ಬುಗ್ಗೆಯಾಗಿ ದೋಣಿಯ ಮೋಟಾರಿನ ಕೆಳಗೆ ಉಕ್ಕುವ ನೀರು ಈ ಮಾತಿಗೆ ಸಾಕ್ಷಿ. 
ಆಧುನಿಕ ಪ್ರಪಂಚ ದಾಪುಗಾಲು ಇಡುತ್ತಾ ಸಾಗಿದಾಗ ಪ್ರಕೃತಿಯನ್ನು ಮನುಷ್ಯ ಹೇಗೆ ಕಬಳಿಸುತ್ತಾ ಹೋಗುತ್ತಾನೆ ಎನ್ನುವುದಕ್ಕೆ ಶರಾವತಿ ಹಿನ್ನೀರಿನ ಬಗ್ಗೆ ನಾಯಕಿ ಮಾತಲ್ಲಿ ಬರುವ ಆರಂಭಿಕ ಸಂಭಾಷಣೆ ಸಾಕ್ಷಿಯಾಗಿ ನಿಲ್ಲುತ್ತದೆ. 

ಶಾಲೆಯ ಕಡಿವಾಣದ ದಿನಗಳಿಂದ ಕಾಲೇಜು ಎನ್ನುವ ಸ್ವತಂತ್ರ ಎನ್ನುವ ಇನ್ನೊಂದು ಪರಿಧಿಯೊಳಗೆ ಹೋಗುವ ಹರೆಯದ ತುಡಿತವನ್ನು ಕೆಲವೇ ದೃಶ್ಯಗಳಲ್ಲಿ ಅಚ್ಚುಕಟ್ಟಾಗಿ ತಂದಿದ್ದಾರೆ. ನೋಡಿದ ತಕ್ಷಣ ರೂಪು, ವಯ್ಯಾರ ಅಥವಾ ಲಕ್ಷಣಗಳನ್ನು ಗಮನಿಸದೆ ಪ್ರೀತಿ ಎನ್ನುವ ಒಂದು ವಿಚಿತ್ರ ಭಾವಕ್ಕೆ ಬೀಳುವ ನಾಯಕ ಪಾತ್ರಧಾರಿ ರಾಮಕೃಷ್ಣ ಉತ್ತಮವಾಗಿ ಅಭಿನಯಿಸಿದ್ದಾರೆ. ನಾಯಕಿ ಪದ್ಮಾವಾಸಂತಿ ಮತ್ತೆ ಅಭಿನಯವನ್ನು ಸಾಣೆ ಹಿಡಿದಂತೆ ನಟಿಸಿದ್ದಾರೆ. ಇನ್ನೂ ಮೊದಲ ಪರಿಚಯ ಶ್ರೀಧರ್ ಗಂಭೀರ ಪಾತ್ರದಲ್ಲಿ ಮಿಂಚಿದ್ದಾರೆ. ಎಲ್ಲೂ ಅತಿರೇಕದ ಅಭಿನಯ ಅಥವಾ ದೃಶ್ಯಗಳನ್ನು ಕಟ್ಟಿ ಕೊಡದಿರುವುದು ಪುಟ್ಟಣ್ಣ ಅವರ ಎಲ್ಲಾ ಚಿತ್ರಗಳ ಪ್ರಮುಖ ಆಕರ್ಷಣೆ. ಹದವಾಗಿ, ನವಿರಾದ ಸಂಭಾಷಣೆಗಳು ಮತ್ತು ಅದಕ್ಕೆ ಬದ್ಧವಾಗಿ ನಿಲ್ಲುವ ದೃಶ್ಯ ಜೋಡಣೆ, ಪರಿಸರ ಇದು ಈ ಚಿತ್ರದ ಮತ್ತೊಂದು ಆಕರ್ಷಣೆ. ರಾಮಕೃಷ್ಣ ಒಬ್ಬರನ್ನು ಬಿಟ್ಟರೆ ಮಿಕ್ಕೆಲ್ಲಾ ಕಲಾವಿದರು ಅಷ್ಟೇನೂ ಬೆಳಕಿಗೆ ಬಂದು ಮಿಂಚಿದ ಪ್ರತಿಭೆಗಳಲ್ಲ. ಆದರೆ ಪ್ರತಿಯೊಬ್ಬರಲ್ಲೂ ಕಥೆಗೆ ಬೇಕಷ್ಟು ಅಭಿನಯ ಹೊಮ್ಮಿಸಿರುವ ರೀತಿ ಇಷ್ಟವಾಗುತ್ತದೆ.

ಸೂರ್ಯಾಸ್ತದ ಅನೇಕ ದೃಶ್ಯಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿರುವ ಪುಟ್ಟಣ್ಣ, ಅದನ್ನು ಸರಿಯಾದ ದೃಶ್ಯಕ್ಕೆ ಒಪ್ಪವಾಗಿ ಜೋಡಿಸಿದ್ದಾರೆ.

ಮೊದಲ ಪ್ರೇಮವನ್ನು ನಿವೇದಿಸುತ್ತಾ ಮನಸ್ಸಲ್ಲೇ ರಮ್ಯ ಕಲ್ಪನೆ ಮಾಡಿಕೊಳ್ಳುವ ಹಾಡಾಗಿ "ಮಯೂರಿ ನಾಟ್ಯ ಮಯೂರಿ" ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ಛಾಯ ಅವರ ಕಂಠ ಸಿರಿಯಲ್ಲಿ ಬರುತ್ತದೆ. ರಾಮಕೃಷ್ಣ ಅವರ ನೃತ್ಯ, ಪದ್ಮಾವಾಸಂತಿ ಅಭಿನಯ ಈ ಹಾಡಿನ ಮೆಚ್ಚತಕ್ಕ ಅಂಶ. ಶರಾವತಿ ಹಿನ್ನೀರಿನ ರಮ್ಯ ತಾಣವನ್ನು ಪರಿಚಯಿಸಿಕೊಡುತ್ತಾರೆ

ಪ್ರಣಯದ ಉತ್ತುಂಗ, ಮತ್ತು ಮನಸ್ಸಿನ ಮೇಲೆ ಹಿಡಿತ ಜಾರುವ ದೃಶ್ಯವನ್ನು ಹಾಡಾಗಿ "ಪಾರವತಿ ಪರಶಿವನ ಪ್ರಣಯ ಪ್ರಸಂಗ" ಹಾಡಿನಲ್ಲಿ ಮನಸ್ಸಿನ ಮೇಲೆ ಬೀರುವ ವಿಧ ವಿಧ ಭಾವಕ್ಕೆ ಒಪ್ಪುವಂತೆ ಬಣ್ಣ ಬಣ್ಣಗಳ ಬೆಳಕಲ್ಲಿ ಈ ಹಾಡನ್ನು ಚಿತ್ರೀಕರಿಸಿದ್ದಾರೆ ಇಕ್ಕೇರಿಯ ದೇಗುಲದಲ್ಲಿ. ಪುಟ್ಟಣ್ಣ ಅವರ ತಾಂತ್ರಿಕ ಜ್ಞಾನದ ಭವ್ಯ ಅನಾವರಣ.

ಮುಂದಿನ ವಿದ್ಯಾಭ್ಯಾಸಕ್ಕೆ ಹೊರಡುವ ನಾಯಕ, ಮೊದಲ ಕಾಗದವನ್ನು ತಲುಪಿಸಿದಾಗ ಅದನ್ನು ಓದುವ ನಾಯಕಿ, ಮತ್ತು ಆ ದೃಶ್ಯವನ್ನು ಉಯ್ಯಾಲೆಯಲ್ಲಿ ತೂಗಿದಂತೆ ಚಿತ್ರೀಕರಿಸಿದ್ದಾರೆ. ಅದನ್ನು ನಾಯಕಿಯ ದೇಹದಲ್ಲಿ ಆಗುವ ಬದಲಾವಣೆ ಮತ್ತು ನಾಯಕ ಹೊರಳಿದ ಪಥದಲ್ಲಿ ನಿಲ್ಲುವನು ಎನ್ನುವ ಉಪಮೆ ನೀಡಿದ್ದಾರೆ. ಬಿಸಿಗೆ ಕರಗಿದ ಮಂಜಿನಂತೆ ನಾಯಕನ ಪ್ರೇಮವೂ ಪ್ರೀತಿಯೂ ಅನುಮಾನಕ್ಕೆ ತಿರುಗುತ್ತೆ ಇದರ ಮುನ್ಸೂಚನೆ ಈ ದೃಶ್ಯದಲ್ಲಿ ಕಾಣುತ್ತದೆ.

ನಾಯಕಿ ತನ್ನ ಬವಣೆಯನ್ನು ತನ್ನ ಆತ್ಮೀಯ ಸ್ನೇಹಿತ ಶ್ರೀಧರ್ ಗೆ ಹೇಳಲು ಹೊರ ಕರೆಯುತ್ತಾಳೆ, ಆದರೆ ಸ್ನೇಹಿತನ ಮುಂದೆ ತಾನು ಕಾಲು ಜಾರಿದ್ದೇನೆ ಎಂದು ಹೇಳಲು ತೊಳಲಾಡುವ ದೃಶ್ಯವನ್ನು ಅಷ್ಟೇ ಅದ್ಭುತವಾಗಿ ಕ್ಯಾಮೆರ ಓಡಾಡುತ್ತಲೇ ಇರುವಂತೆ ತೋರಿಸಿದ್ದಾರೆ. ಶ್ರೀಧರ್ ಹತ್ತಿರ ಬಂದು ಏನು ಸಮಾಚಾರ ಎಂದಾಗ, ಕ್ಯಾಮೆರ ನಿಲ್ಲುತ್ತದೆ, ಅಂದರೆ, ಜೀವದ ಗೆಳೆಯ ಆತ್ಮ ವಿಶ್ವಾಸ ತುಂಬುತ್ತಾನೆ ಮತ್ತು ತನ್ನ ಎಲ್ಲಾ ಕಷ್ಟಗಳಿಗೆ ಸ್ಪಂಧಿಸುತ್ತಾನೆ ಎನ್ನುವ ಭರವಸೆ ಮೂಡಿದಾಗ ತೂಗಾಡುವ ಮನಸ್ಸು ಒಂದು ತಹಬದಿಗೆ ನಿಲ್ಲುತ್ತದೆ ಎನ್ನುವ ಮಾತನ್ನು ಈ ದೃಶ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ.

ನಾಯಕಿಯ ಪರಿಸ್ಥಿತಿಗೆ ಪರಿಹಾರ ಎನ್ನುವಂತೆ ತಾನೇ ಮದುವೆ ,ಮಾಡಿಕೊಳ್ಳುವ ಶ್ರೀಧರ್, ತನ್ನ ತಾಯಿಗೆ ಹೇಳುವ ಮಾತು "ಯಾವತ್ತೂ ಯಾವ ಕಾರಣಕ್ಕೂ ಇವಳ ಮನಸ್ಸನ್ನು ನೋಯುವ ಮಾತನ್ನು ಆಡಬೇಡ" ಎಂದಾಗ ತಾಯಿ ಹೇಳುವ ಅದ್ಭುತ ಮಾತು "ಮಗ ಇಷ್ಟ ಪಟ್ಟು ಮದುವೆ ಮಾಡಿಕೊಂಡ ಹೆಣ್ಣನ್ನು ನಿಕೃಷ್ಟವಾಗಿ ಕಾಣುವಷ್ಟು ಕೆಟ್ಟ ತಾಯಿಯಲ್ಲ" ಎನ್ನುತ್ತಾಳೆ.

ಇದಕ್ಕೆ ವಿವರಣೆಯೇ ಬೇಡವೇ ಬೇಡ.

ಕರುನಾಡಿನ ರಮ್ಯತಾಣ ಶ್ರೀಧರ ತೀರ್ಥ ಇರುವ ವರದಹಳ್ಳಿ. ಇಲ್ಲಿ ಚಿತ್ರೀಕರಣ ಮಾಡಿದ್ದಾರೆ ಒಂದು ಅದ್ಭುತ ಹಾಡನ್ನು "ಹಿಂದೂಸ್ಥಾನವು ಎಂದೂ ಮರೆಯದ" ಜಯಚಂದ್ರನ್ ಹಾಡಿರುವ ರೀತಿ, ಆ ಸಾಹಿತ್ಯ ಅದ್ಭುತ. ಶ್ರೀಧರ್ ಈ ಹಾಡಿಗೆ ಉತ್ತಮ ಅಭಿನಯ ನೀಡಿದ್ದಾರೆ. ಮುಂದೆ ಇದೆ ಹಾಡನ್ನು ಬಿ ಆರ್ ಛಾಯ ಹಾಡಿರುವ ರೀತಿಯೂ ಸೊಗಸಾಗಿದೆ.

ಶ್ರೀಧರ್ ಪಾತ್ರ ಮರಣಹೊಂದಿದಾಗ, ಮುಗ್ಧ ಮಗು ಸ್ಮಶಾನದಲ್ಲಿ ಏನೂ ಮಾತಾಡದೆ ಅಥವಾ ಅಳಲು  ಗೊತ್ತಾಗದೆ ನಿಂತಿರುತ್ತದೆ. ಇಲ್ಲಿ ಯಾವುದೇ ಭಾವನಾತ್ಮಕ ಸಂಭಾಷಣೆ ಇರುವುದಿಲ್ಲ, ನಿಶ್ಯಬ್ಧ... ಅತ್ಯುತ್ತಮ ದೃಶ್ಯ ಇಡಿ ಚಿತ್ರದಲ್ಲಿ.

ಕಡೆಯ ಕೆಲ ದೃಶ್ಯದಲ್ಲಿ ರಾಮಕೃಷ್ಣ ತನ್ನ ತಪ್ಪಿನ ಅರಿವಾಗಿ ನಾಯಕಿಯನ್ನು ನೋಡಲು ಬಂದಾಗ, ನಾಯಕಿಯ ಮೊಗದಲ್ಲಿ ತನ್ನ ಬಾಳನ್ನು ನಾಶ ಮಾಡಿದ ಅವನನ್ನು ನೋಡಿದ ತಕ್ಷಣ ಕೋಪ ಆದರೆ ಕೆಲವು ಕ್ಷಣಗಳಲ್ಲಿ ಶಾಂತ ಸ್ವಭಾವದ ಅಭಿನಯ ಸೂಪರ್ ಸೂಪರ್ ಎನ್ನಿಸುತ್ತದೆ.

ಶ್ರೀಧರ್ ಬರೆದಿಟ್ಟ ಪತ್ರ ಮತ್ತು ಉಯಿಲನ್ನು ಓದುವ ರಾಮಕೃಷ್ಣ ಕೂತಿರುವ ಶರಾವತಿ ಹಿನ್ನೀರಿನ ದಡದಲ್ಲಿ ದೃಶ್ಯವನ್ನು ಪದೇ ಪದೇ ಹಿಂದಕ್ಕೆ ಮುಂದಕ್ಕೆ ಜೂಮ್ ಮಾಡುತ್ತಲೇ ಇರುತ್ತದೆ ದೃಶ್ಯ ಸಂಯೋಜನೆ, ನಾಯಕ ತನ್ನ ಗತ ಜೀವನದಲ್ಲಿ ಮಾಡಿದ ತಪ್ಪನ್ನು ತಿದ್ದಿಕೊಳ್ಳಬೇಕು ಮತ್ತು ಅದಕ್ಕೆ ಒಂದು ಅವಕಾಶವಿದೆ, ಮತ್ತೆ ತನ್ನ ತಪ್ಪನ್ನು ಸರಿ ಪಡಿಸಿಕೊಳ್ಳಲಿಕ್ಕೆ ಸಾಧ್ಯವಿದೆ ಎನ್ನುವ ಅಭಿಪ್ರಾಯ ಮೂಡಿಬರಲು ಸಹಾಯ ಮಾಡುತ್ತದೆ.


ಪುಟ್ಟಣ್ಣ ಕಣಗಾಲ್ ಮತ್ತೆ ತಮ್ಮ ಜಾದೂವನ್ನು ತೋರಿಸಿದ ಚಿತ್ರ ಇದು. ಸುಂದರ ಕಥೆಯನ್ನು ಅಷ್ಟೇ ಅಚ್ಚುಕಟ್ಟಾಗಿ ನಿರೂಪಣೆ ಮಾಡಿರುವ ರೀತಿಗೆ ಮನಸ್ಸಲ್ಲೇ ನಮನ ಸಲ್ಲಿಸುತ್ತೇನೆ. 

Sunday, October 18, 2015

ಸಾವಿರ ಸಾವಿರ ಮನಸ್ಸಿನ ಭಾವದ ಉಗಮಸ್ಥಾನ "ಸಾವಿರ ಮೆಟ್ಟಿಲು" - ಪೂರ ಹತ್ತದ ಮೆಟ್ಟಿಲುಗಳು (2006)

ಕಲಾವಿದರ ಕಾಲು ಅಳತೆ ಒಬ್ಬರಿಂದ ಒಬ್ಬರದು ವಿಭಿನ್ನ ಎಂದು ಹೇಳುತ್ತಾರೆ. ಒಬ್ಬರ ಪರಿಶ್ರಮದ ಪಾದರಕ್ಷೆ ಇನ್ನೊಬ್ಬರ ಕಾಲಿಗೆ ಆಗೋಲ್ಲ ಎಂದು.

ಪುಟ್ಟಣ್ಣ ಕಣಗಾಲ್ ಒಂದು ಪ್ರತಿಭಾ ಪೆಟ್ಟಿಗೆ, ಅವರ ಮೆದುಳು ಒಂದು ಈಗಿನ ಕಾಲದ ಮಾಹಿತಿ ಕೇಂದ್ರ ಅಥವಾ ಕಂಪ್ಯೂಟರ್ ಇದ್ದ ಹಾಗೆ. ಅವರ ಬಗ್ಗೆ ಜನಜನಿತ ಮಾತು ಅಂದರೆ, ಅವರು ಒಂದು ಸಿನಿಮಾ ಕೈಗೆತ್ತಿಕೊಂಡರೆ ಅದರಲ್ಲಿಯೇ ಮುಳುಗಿಬಿಡುತ್ತಿದ್ದರು ಎಂದು, ಹಾಗಾಗಿ ಕಥೆ ಚಿತ್ರಕಥೆ ಎಲ್ಲವೂ ಅವರ ತಲೆಯೊಳಗೆ ಇದ್ದುಬಿಡುತ್ತಿದ್ದವು, ಒಂದು ಮಾದರಿ ಅಥವ ಆಧುನಿಕ ಭಾಷೆಯಲ್ಲಿ ಹೇಳುವುದಾದರೆ ಬ್ಲೂ ಪ್ರಿಂಟ್ ಅಥವಾ ನಕಾಶೆ ಇರುತ್ತಿದ್ದವು ಅನ್ನಿಸುತ್ತದೆ, ಅದನ್ನು ಚಿತ್ರಿಕರಿಸುವಾಗ ಅದಕ್ಕೆ ಮತ್ತಷ್ಟು ಹೊಳಪು ಕೊಟ್ಟು ಬೆಳಗಿಸುತ್ತಿದ್ದರು ಎನ್ನುವ ಅನುಭವ ಅವರ ಎಲ್ಲಾ ಚಿತ್ರಗಳನ್ನು ನೋಡಿದ ಅವರ ಅಪ್ಪಟ ಅಭಿಮಾನಿಗಳಲ್ಲಿ ಒಬ್ಬನಾದ ನನ್ನದು. 

ಇದು ಒಂದು ಮಟ್ಟಿಗೆ ನಿಜ, ಕಲಾವಿದ ಎಂದಿಗೂ ತನ್ನ ಕಲೆಯನ್ನು ಅಥವಾ ತನ್ನ ಕೃತಿಯನ್ನು ಹೊಳಪಿನ ಮೂಸೆಗೆ ತಳ್ಳುತ್ತಲೇ ಇರುತ್ತಾನೆ. ಅದು ಪೂರ್ಣ ಕೃತಿಗೆ ಬರುವಷ್ಟರಲ್ಲಿ ಅವರ ತಲೆಯೊಳಗೆ ಮತ್ತು ಹೃದಯದ ಪರಿಷ್ಕರಣ ಪೆಟ್ಟಿಗೆಯೊಳಗೆ ಮಿಂದೆದ್ದು ಬರುತ್ತದೆ. 

ಅದನ್ನು ಮುಟ್ಟುವುದು ಅಥವಾ ಅದನ್ನು ಮುಂದುವರೆಸುವುದು ಸವಾಲಿನ ಸಂಗತಿಯೇ ಸರಿ. ಶ್ರೀ ಬಸವೇಗೌಡರು ಮತ್ತು ಕೆ ಎಸ್ ಎಲ್ ಸ್ವಾಮೀ ಇಬ್ಬರ ಪರಿಶ್ರಮ ನಿಜಕ್ಕೂ ಶ್ಲಾಘನೀಯ. ಪೂರ್ಣ ಚಿತ್ರಕಥೆಯಿಲ್ಲ, ಕಥೆಯನ್ನು ಎಲ್ಲಿಂದ ಆರಂಭಿಸಬೇಕು, ಹೇಗೆ ಮುಂದಕ್ಕೆ ಕೊಂಡೊಯ್ಯಬೇಕು ಹೀಗೆ ಯಾವುದೇ ಒಂದು ನಿರ್ದಿಷ್ಟ ಚೌಕಟ್ಟಿನ ಜೊತೆಯಲ್ಲಿದೆ ಒಬ್ಬ ಕಲಾವಿದನ ಕುಂಚವನ್ನು ಮುಂದಕ್ಕೆ ಒಯ್ಯುವುದು ಸವಾಲಿನ ವಿಷಯ. ಇಂಥಹ ಪರಿಶ್ರಮ ಕೈಗೊಂಡ ಇಬ್ಬರೂ ಸಾಧಕರಿಗೂ ಮತ್ತು ಅದಕ್ಕೆ ಸಹಕರಿಸಿದ ಎಲ್ಲಾ ಕಲಾವಿದರಿಗೂ ಮತ್ತು ತಾಂತ್ರಿಕ ವರ್ಗಕ್ಕೆ ಅಭಿನಂದನೆಗಳು. 

ಈ ಚಿತ್ರದ ಬಗ್ಗೆಗಿನ ನನ್ನ ಬರಹವನ್ನು ಪುಟ್ಟಣ್ಣ ಅವರು ಚಿತ್ರೀಕರಿಸಿದ ಭಾಗಗಷ್ಟೇ ಸೀಮಿತಗೊಳಿಸುತ್ತೇನೆ, ಕಾರಣ ನಿಮಗೆ ಗೊತ್ತು. 

ಪುಟ್ಟಣ್ಣ ಕಣಗಾಲ್ ಅವರ ಮೊದಲ ಕೆಲ ಪ್ರಯತ್ನಗಳಲ್ಲಿ ಇದು ಒಂದು ಚಿತ್ರ ಎನ್ನಿಸುವ ಎಲ್ಲಾ ಸುಳಿವು ಇದರಲ್ಲಿ ಸಿಗುತ್ತದೆ. ವಜ್ರ ತನ್ನನ್ನೇ ತಾನು ಹೊಳಪಿನ ಪ್ರಖರತೆ ಒಡ್ಡಿಕೊಳ್ಳುತ್ತಿರುವ ಎಲ್ಲಾ ಲಕ್ಷಣಗಳು ಇವೆ ಈ ಚಿತ್ರದಲ್ಲಿ. 

ಈ ಚಿತ್ರದಲ್ಲಿ ನಟಿಸಿರುವ ಸುಮಾರು ೮೦% ಕಲಾವಿದರು ಈ ಚಿತ್ರ ಬಿಡುಗಡೆಯಾದಾಗ ಇಲ್ಲ. ತಾರಾಗಣ ಪಟ್ಟಿಯಲ್ಲಿ ಅವರ ಹೆಸರಿನ ಹಿಂದೆ "ದಿ।।" ಎಂದು ನೋಡುವುದು ಮನಸ್ಸಿಗೆ ಬಹಳ ಹಿಂಸೆಯಾಗುತ್ತದೆ.ನಮ್ಮ ಕರುನಾಡಿನ ಚಿತ್ರರಂಗವನ್ನು ಬೆಳಗಲು ಶ್ರಮಿಸಿದ  ಅನೇಕ ಕಲಾರತ್ನಗಳ ಹೆಸರುಗಳ ಹಿಂದೆ ಆ ಅಕ್ಷರ ನೋಡುವುದು ನಿಜಕ್ಕೂ ಬೇಸರದ ಸಂಗತಿ. 

ಕಪ್ಪು ಬಿಳುಪಿನಲ್ಲಿ ತಯಾರಾದ ಈ ಚಿತ್ರ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿಯೇ ಚಿತ್ರಿಕರಣವಾಗಿದೆ. ಒಂದು ಪ್ರದೇಶವನ್ನು ಅದೇ ಅದೇ ಚೌಕಟ್ಟಿನಲ್ಲಿ ತರದೇ, ಪ್ರತಿದೃಶ್ಯವನ್ನು ಅರೆ ಇದು ಬೇರೆಯದೇ ತಾಣ ಇರಬಹುದೇನೋ ಅನ್ನುವಂತೆ ತೋರಿಸಿದ್ದಾರೆ ಛಾಯಾಗ್ರಾಹಕರು. 

"ಗಂಡು ಬೀರಿ ನಾನಲ್ಲ" ಹಾಡು ಎಲ್ ಆರ್ ಈಶ್ವರಿ ಅಬ್ಬರಿಸಿದ್ದಾರೆ, ಜೊತೆಯಲ್ಲಿಯೇ ನಿಜಕ್ಕೂ ಗಂಡು ಬೀರಿಯಂತೆಯೇ ಅಭಿನಯಿಸಿರುವ ಜಯಂತಿ.  
ಎಳನೀರು ಮಾರುವ ಪಾತ್ರದಲ್ಲಿ ನನ್ನ ಪ್ರೀತಿಯ ಅಶ್ವತ್ ಗಮನಸೆಳೆಯುತ್ತಾರೆ. 
ಆ ಕಾಲದ ಸುರಸುಂದರಾಂಗ ಕಲ್ಯಾಣ್ ಕುಮಾರ್ "ಕೈ ನೀಡಿದೇ ನೀನು ಅಂದು" ಪಿ ಬಿ ಶ್ರೀನಿವಾಸ್ ಮತ್ತು ಎಸ್ ಜಾನಕಿ  ಹಾಡಿಗೆ ಸುಂದರ ನೃತ್ಯ ಮತ್ತು ಅಭಿನಯಯವರ ಜೊತೆಯಲ್ಲಿ ಜಯಂತಿ ಅವರದು 
"ನಮ್ಮೂರ ಬೆಟ್ಟದ" ಎನ್ನುವ ಹಾಡಿನಲ್ಲಿ ಮೈಸೂರನ್ನು ರಮ್ಯವಾಗಿ ತೋರಿಸುವ ದೃಶ್ಯಗಳು ಕಣ್ಣಿಗೆ ಕಟ್ಟುತ್ತವೆ. ಪಿ ಬಿ ಶ್ರೀನಿವಾಸ್ ಮತ್ತು ಪಿ ಸುಶೀಲ ಸಾಹಿತ್ಯಕ್ಕೆ ದನಿಯಾಗುತ್ತಾರೆ. 

ಅದ್ಭುತ ದೃಶ್ಯ ಸಂಯೋಜನೆ ಅಂದರೆ 
ವಜ್ರಮುನಿ, ಜಯಂತಿ ಮತ್ತು ಕಲ್ಯಾಣ್ ಕುಮಾರ್ ಒಂದು ದೃಶ್ಯದಲ್ಲಿ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಿರುತ್ತಾರೆ. ಆ ದೃಶ್ಯದಲ್ಲಿ ಮೂವರು ಜೋರಾಗಿ ಮಾತಾಡಬೇಕು ಅಥವಾ ಬೇಡಿಕೊಳ್ಳುವ ದನಿ ಇರಬೇಕು ಇಲ್ಲವೇ ಅಥವಾ ಒಬ್ಬರಿಗೂಬ್ಬರು ತಮ್ಮ ತಮ್ಮ ಬಗ್ಗೆ ಸಮಜಾಯಿಷಿ ಕೊಡಬೇಕು. ಇವಿಷ್ಟನ್ನು ಕೇವಲ ಒಂದು ನಿಮಿಷದ ದೃಶ್ಯದಲ್ಲಿ ತೋರಿಸುತ್ತಾರೆ ಪುಟ್ಟಣ್ಣ ಅವರು. ಇಡಿ ದೃಶ್ಯವನ್ನು ಮೂರು ಜೊತೆ ಕಣ್ಣುಗಳಲ್ಲಿ ತೋರುತ್ತಾರೆ.. ಪ್ರತಿ ಐದು ಅಥವಾ ಹತ್ತು ಕ್ಷಣಗಳಿಗೆ ಒಂದೊಂದು ಜೊತೆ ಕಣ್ಣುಗಳಲ್ಲಿ ಭಾವ ಬದಲಾಗುತ್ತಾ ಹೋಗುತ್ತದೆ. ಅದ್ಭುತ ಅದ್ಭುತ ಎನ್ನಿಸುವ ದೃಶ್ಯ ಸಂಯೋಜನೆ. 

ಜಯಂತಿ ಪಾತ್ರವನ್ನು ಅತಿ ಅಲ್ಲಿಯ ತನಕ ಅತಿ ಎತ್ತರದಲ್ಲಿ ಕೂರಿಸಿದ್ದ ವಜ್ರಮುನಿ ಮನೆಯವರು (ಪಂಡರಿ ಬಾಯಿ ಮತ್ತು ಆಕೆಯ ಮಗಳು ಮತ್ತು ಮಗ), ಯಾವುದೇ ಕಾರಣಕ್ಕೆ, ಜಯಂತಿ ಅಪರಾಧಿನಿ ಎಂದುಅರಿವಾಗುತ್ತದೆ , ಮಹಡಿಯ ಕೆಳಗೆ ಇದ್ದ ವಜ್ರಮುನಿ ಮತ್ತು ಆತನ ತಾಯಿ ಪಂಡರಿಬಾಯಿ ಜಯಂತಿಯನ್ನು ಕರೆಯುತ್ತಾರೆ. ಜಯಂತಿ ಇಳಿದುಬರುತ್ತಿರುವಾಗ ಆಕೆಯ ಕಣ್ಣಲ್ಲಿ ಅಪರಾಧಿ ಭಾವ ಎದ್ದು ಕಾಣುತ್ತದೆ, ಜೊತೆಯಲ್ಲಿಯೇ ಕ್ಯಾಮೆರ ಚಾಲನೆ ನಿಧಾನವಾಗಿ ಕೆಳಗೆ ಇಳಿಯುತ್ತಾ ಹೋಗುತ್ತದೆ. ವಜ್ರಮುನಿ ಮತ್ತು ಪಂದರಿಬಾಯಿಯವರ ಮುಖಭಾವವನ್ನೇ ತೋರಿಸುತ್ತಾ ಕ್ಯಾಮೆರಾ ನಿಧಾನವಾಗಿ ಕೆಳಗೆ ಇಳಿಯುತ್ತಾ ಹೋಗುತ್ತದೆ. 

ಅಂದರೆ ಜಯಂತಿ ಪಾತ್ರ, ಆ ಮನೆಯವರ ಮುಂದೆ ಅಪರಾಧಿ ಭಾವದಿಂದ ಎತ್ತರದಲ್ಲಿದ್ದ ವ್ಯಕ್ತಿತ್ವ ಭೂಮಿಗೆ ಇಳಿಯುತ್ತಾ ಹೋದಂತೆ ತೋರಿಸುವ ದೃಶ್ಯ. 

ಗುರುಗಳೇ ಇವೆರಡು ದೃಶ್ಯಗಳು ಸಾಕು, ನಿಮ್ಮ ಪ್ರತಿಭೆ ಅನಾವರಣಗೊಳ್ಳಲು ಕರುನಾಡಿನ ರಂಗ ಪರದೆ ಕಾಯುತ್ತಿತು ಎಂದು ತಿಳಿದುಕೊಳ್ಳಲು. 

ಪುಟ್ಟಣ್ಣ ಅವರ ತಲೆಯಲ್ಲಿದ್ದ ಇಡಿ ಚಿತ್ರಕಥೆ ಸಿಕ್ಕಿದ್ದರೂ, ಅಥವಾ ಕಥೆಯ ಒಳ ಸುಳಿವು ಗೊತ್ತಿದ್ದರೂ ಪುಟ್ಟಣ್ಣ ಕಣಗಾಲ್ ಅವರ ಮನಪಟಲದಲ್ಲಿದ್ದ ಚಿತ್ರಕೃತಿಯನ್ನು ಇತರರಿಗೆ ಅಸಾಧ್ಯ ಎನ್ನಿಸುತ್ತಿತ್ತೋ ಏನೋ. ನನ್ನ ಉತ್ತರ ಅಸಾಧ್ಯ ಎಂದು. ಕಾರಣ ಗುರುಗಳು ಗುರುಗಳೇ. 

ಪುಟ್ಟಣ್ಣ ಕಣಗಾಲ್ ಅವರಿಗೆ ಒಂದು ಶ್ರದ್ಧಾ ಪೂರ್ವಕ ನಮನಸಲ್ಲಿಸುವ ಕಾರ್ಯದಲ್ಲಿ ಬಸವೇಗೌಡರು ಮತ್ತು ಕೆ ಎಸ್ ಎಲ್ ಸ್ವಾಮೀ ಮತ್ತು ಚಿತ್ರತಂಡದವರು ಶ್ರಮಿಸಿದ್ದು ನಿಜಕ್ಕೂ ಶ್ಲಾಘನೀಯ. ಪುಟ್ಟಣ್ಣ ಕಣಗಾಲ್ ಮೇಲಿನ ಪ್ರೀತಿ ಮತ್ತು ಗೌರವ ಅವರ ಈ ಬೃಹತ್ ಕಾರ್ಯದಲ್ಲಿ ಜೊತೆ ನೀಡಿದೆ. 

ಪುಟ್ಟಣ್ಣ ಕಣಗಾಲ್ ಅವರಿಗೆ ನನ್ನ ಹೃದಯ ಪೂರ್ವಕ ನಮನಗಳು. 

Friday, October 16, 2015

ಋಣ ಮುಕ್ತಳು - ಒಂದು ವಿಭಿನ್ನ ಅನುಭವ (1984)

ಒಂದು ಮಹಾನ್ ಚೇತನ ಅಮೋಘ ಚಿತ್ರಗಳನ್ನು ನೀಡುತ್ತಾ ನೀಡುತ್ತಾ ಬಸವಳಿದಾಗ ಮತ್ತೆ ಅದಕ್ಕೆ ಚೈತನ್ಯ ನೀಡುವುದೇ ಮತ್ತೊಂದು ಪರಿಶ್ರಮ ಬೇಡುವ ಚಿತ್ರ.

ಹೌದು ಈ ಚಿತ್ರವನ್ನು ನಾ ಇದುವರೆಗೂ ನೋಡೇ ಇರಲಿಲ್ಲ. ಯಾವಾಗಲೂ ಈ ಚಿತ್ರ ದೂರದರ್ಶನದಲ್ಲಿ ಮೂಡಿ ಬಂದರೂ ಬರಿ ಅಂತಿಮ ಕ್ಷಣವನ್ನು ಮಾತ್ರ ನೋಡಿದ್ದೇ.  ಭಾರತಿ ತನ್ನ ಮೊಗದಲ್ಲಿ ಯಾವುದೇ ಭಾವನೆ ತೋರದೆ ನಿಧಾನವಾಗಿ ಆಶ್ರಮವಾಸಿಗಳ ಜೊತೆಯಲ್ಲಿ ನಿರ್ಮಲ ಎನ್ನಿಸುವ ಶ್ವೇತ ವಸ್ತ್ರಧಾರಿಯಾಗಿ ಹೆಜ್ಜೆ ಹಾಕುತ್ತಾ ಹೋಗುವುದು, ಮತ್ತು ರಾಮಕೃಷ್ಣ ತನ್ನ ಹೆತ್ತ ತಾಯಿಯನ್ನು ನೋಡುತ್ತಾ ನಿಲ್ಲುವುದು ಅವರ ಮೊಗದ ಮೇಲೆ ಒಂದು ರೀತಿಯ ಆತಂಕ ಮತ್ತು ತನ್ನ ಮಾತೆ ತನಗೆ ನೆಮ್ಮದಿ ಸಿಗುವ ತಾಣವನ್ನು ಅರಸಿಕೊಂಡ ಒಂದು ಸಂತೋಷ. 

ಕಣಗಾಲ್ ಕ್ರಿಯೇಷನ್ಸ್ ಲಾಂಛನದಲ್ಲಿ ಪುಟ್ಟಣ್ಣ ಕಣಗಾಲ್ ಪರಿವಾರದವರೊಡನೆ ಸೇರಿ ತಯಾರಿಸಿದ ಚಿತ್ರ ಇದು. ಶ್ರೀಮತಿ ಅನುಪಮ ನಿರಂಜನ್ ರವರ "ಋಣ" ಎನ್ನುವ ಕಾದಂಬರಿ ಆಧಾರಿತ ಈ ಚಿತ್ರ ಮೊದಲಿಂದ ಕಡೆಯತನಕ ಏರು ಪೆರಿಲ್ಲದೆ ನೋಡಿಸಿಕೊಂಡು ಹೋಗುತ್ತದೆ. 

ಚಿತ್ರದ ಹೆಸರನ್ನು ತೋರಿಸುವಾಗ ಒಂದು ಪುಸ್ತಕದಲ್ಲಿ  ಪ್ರತಿ ಹಾಳೆಯನ್ನು ತಿರುವು ಹಾಕುತ್ತ ಹೋದಂತೆ ತಾರಾಗಣವನ್ನು ಪರಿಚಯ ಮಾಡಿಕೊಡುತ್ತಾರೆ. ನಮಗೆ ಕಾಣದ ನರಕಲೋಕದಲ್ಲಿ ಚಿತ್ರಗುಪ್ತ ಪ್ರತಿ ಜೀವಿಯ ತಪ್ಪು ಒಪ್ಪುಗಳನ್ನು ಅವಲೋಕಿಸುತ್ತಾ ಪಡೆದದ್ದು, ಕಳೆದದ್ದು ಇವುಗಳ ತುಲನೆ ಮಾಡಿ ಯಮಧರ್ಮ ಶಿಕ್ಷೆ ಕೊಡಲು ಅಹವಾಲು ನೀಡುವಂತೆ ತೋರುವ ದೊಡ್ಡ ಪುಸ್ತಕದ ಹಾಳೆಗಳಂತೆ ಈ ದೃಶ್ಯ ಗೋಚರಿಸುತ್ತದೆ. ಪುಟ್ಟಣ್ಣ ಪ್ರತಿ ಚಿತ್ರವನ್ನು  ಆರಂಭಿಸುವ ರೀತಿ ಯಾವಾಗಲೂ ವಿಭಿನ್ನ. 

ಸಂಭಾಷಣೆಯ ಜವಾಬ್ಧಾರಿಯನ್ನು ಕುಣಿಗಲ್ ನಾಗಭೂಷಣ್ ಜೊತೆ ಹಂಚಿಕೊಂಡು, ಚಿತ್ರಕಥೆ ಬರೆದು ನಿರೂಪಣೆ ಮಾಡಿ ಜಗನ್ಮಾತೆಯ ದಿಗ್ಧರ್ಶನದಲ್ಲಿ ಚಿತ್ರ ಮೂಡಿಸಿದ್ದಾರೆ. ಅವರ ಕನಸಿಗೆ ಕಣ್ಣಾಗಿ ಬರುವುದು ಎಸ್ ಮಾರುತಿರಾವ್ ಅವರ ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ ಮತ್ತು ಹಾಡುಗಳಿಗೆ ಜೀವ ತುಂಬುವ ಸಂಗೀತ ಹೊಣೆ ವಿಜಯಭಾಸ್ಕರ್ ಅವರದ್ದು. 

ಮನುಜ ತಾನು ಮಾಡಿದ ಪಾಪ ಪುಣ್ಯ ಇವುಗಳನ್ನು ಇಲ್ಲೇ ಒಪ್ಪ ಮಾಡಿ ಹೋಗುತ್ತಾನೆ ಎನ್ನುವ ನೀತಿಯ ತಳಹದಿ ಈ ಚಿತ್ರದಲ್ಲಿದೆ. ಹಳ್ಳಿಯಲ್ಲಿ ಹಾಯಾಗಿ ಇರಬಹುದಾದ ಮನೆಯ ಯಜಮಾನ ಹಣದ ಆಮಿಷಕ್ಕೆ ಒಳಗಾಗಿ ಪಟ್ಟಣಕ್ಕೆ ಬಂದು, ಆ ಪಟ್ಟಣದ ರೂಪು ರೇಶೆಗಳಿಗೆ ತಕ್ಕಂತೆ ಅನೈತಿಕತೆಯಿಂದ ಹಣ ಸಂಪಾದಿಸುವುದು, ಇದರ ಜೊತೆಯಲ್ಲಿ ಇವನ ಈ ಸಾಹಸ ಮಕ್ಕಳ ಮೇಲೆ ಪರಿಣಾಮ ಬೀರುವುದು ಸುಂದರವಾಗಿ ಚಿತ್ರಿಕೃತವಾಗಿದೆ. 

ಬುದ್ಧಿವಂತ ಮೊದಲನೇ ಮಗುವನ್ನು  ಎರಡನೇ ಮಗುವಿನ ಮುಂದೆ ಹೋಗಲಿ, ಈ ಚಿಕ್ಕ ಮಗುವಿನ ಮನದಲ್ಲಿ ರೋಷ ದ್ವೇಷ ತುಂಬಿ ಸಮಾಜಕ್ಕೆ ಒಂದು ರೀತಿಯ ಪಿಡುಗು ಎನ್ನಿಸುವಂತಹ ಪ್ರಜೆ ನೀಡುವುದರಲ್ಲಿ ಅಪ್ಪನ ಪಾತ್ರಧಾರಿ ಸಫಲ ಆಗುತ್ತಾರೆ. 
ಇದರ ಜೊತೆಯಲ್ಲಿ ಕ್ಷಣಿಕ ಆಸೆಗೆ ಬಲಿಯಾಗಿ ಮನೆಕೆಲಸದ ಹುಡುಗಿಯ ಜೊತೆಯಲ್ಲಿ ಅಕ್ರಮ ಸಂಬಂಧ ಇಟ್ಟುಕೊಂಡು ಒಂದು ಮಗುವಿನ ಜನನಕ್ಕೆ ಕಾರಣವಾಗುವಂಥಹ ವಿಚಿತ್ರ ಪರಿಸ್ಥಿತಿಯನ್ನು ನಿರ್ಮಾಣ ಮಾಡಿಕೊಳ್ಳುತ್ತಾನೆ. ಆ ಮನೆಗೆಲಸದ ಹುಡುಗಿ ಬೇರೆ ಮದುವೆ ಮಾಡಿಕೊಂಡರೂ, ಅಲ್ಲಿ ಸುಖ ಕಾಣದೆ ಗಂಡನನ್ನು ಕಳೆದುಕೊಂಡು, ಆ ದುಃಖದಲ್ಲಿಯೇ ತನ್ನ ಅನೈತಿಕ ಮಗುವನ್ನು ಜತನಮಾಡುವ ಪಾತ್ರ. 

ಮಗು ಒರಟು ಎಂದು ಗೊತ್ತಿದ್ದರೂ, ತಾಯಿ ಹೃದಯ ಮಿಡಿಯುತ್ತದೆ, ಬೇರೆಯವರ ಹತ್ತಿರ ಒರಟು ಒರಟಾಗಿ ಮಾತಾಡಿದರೂ ತನ್ನ ತಾಯಿಗೋಸ್ಕರ ಮಿಡಿಯುವ ಮಗು. ಇವರೆಡರ ಭಾವನಾತ್ಮಕ ತಾಕಲಾಟ ಸುಂದರವಾಗಿ ಕೆಲವು ದೃಶ್ಯಗಳಲ್ಲಿ ಭಿತ್ತರಗೊಂಡಿದೆ. 

ಅದರಲ್ಲೂ, ಜಗಳ ಮಾಡಿಕೊಂಡು ಮನೆಬಿಟ್ಟು ಹೋದ ಮಗನನ್ನು ನೆನೆದು, ಅಯ್ಯೋ ನಾ ತಪ್ಪು ಮಾಡಿದೆ, ಅವನನ್ನು ಅರ್ಥ ಮಾಡಿಕೊಳ್ಳಬೇಕಿತ್ತು ಎಂದು ಹಲಬುವ ಅಪ್ಪ, ಮತ್ತು ಅಕಾಲ ಮರಣಕ್ಕೆ ತುತ್ತಾಗಿ, ಕಡೆಯಲ್ಲಿ ತನ್ನ ಮಗನನ್ನು ನೋಡಬೇಕು ಎಂದು ಬಯಸಿ, ಮಗ ಬರುವ ಮುನ್ನ ಇಹಲೋಕ ತ್ಯಜಿಸಿದ ಮೇಲೆ, ಸುಮಾರು ಒಂದು ಮೂವತ್ತು ಸೆಕೆಂಡ್ ಏಕದಂ ಮೌನ. ತಾಯಿ ನೋಡಿದೆಯ ಮಗನೆ ನಿನ್ನ ಅಪ್ಪನನ್ನು ಎಂದಾಗ, ಮಗ ದೊಡ್ಡದಾಗಿ ಬಾಯಿ ತೆಗೆದು ಅಳುವ ಮೂಕ ದೃಶ್ಯ, ಇಡಿ ಚಿತ್ರದಲ್ಲಿ ಪುಟ್ಟಣ್ಣ ಅವರ ಕೈಚಳಕ ಕಾಣಿಸುವ ದೃಶ್ಯ ಇದು. 

ಕೆಲವೇ ಕೆಲವು ಪಾತ್ರಗಳು, ಆದರೆ ಎಲ್ಲರೂ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಭಾರತಿ, ಸುಂದರಕೃಷ್ಣ ಅರಸ್, ರಾಮಕೃಷ್ಣ, ಭರತ್ ಭಾಗವತರ್, ಆಶಾಲತ, ಮಾ, ಹಿರಣ್ಣಯ್ಯ, ರಾಜಾನಂದ್, ಪದ್ಮಾವಾಸಂತಿ ಎಲ್ಲರೂ ಎಷ್ಟು ಬೇಕೋ ಅಷ್ಟು ಅಭಿನಯ ನೀಡಿದ್ದಾರೆ. 

"ಆಕಾಶದುದ್ದಾದ ಮಾಮರವು ಚಂದ" ಮನುಜನ ಇಬ್ಬಗೆ ನೀತಿಯನ್ನು ಸುಂದರ ಹೋಲಿಕೆಗಳ ಮೂಲಕ ವಿಜಯನಾರಸಿಂಹ ಬರೆದ ಹಾಡನ್ನು ಎಸ್ ಜಾನಕಿ ಹಾಡಿದ್ದಾರೆ. 

"ದೇವರ ಒಲಿಸಲು" ತಾಯಿಯ ಮಹತ್ವವನ್ನು ಬಿಂಬಿಸುವ ಹಾಡು ಎಸ್ ಪಿ ಬಾಲಸುಬ್ರಮಣ್ಯಂ ಜೀವ ತುಂಬಿದ್ದಾರೆ 

"ಕಣ್ಣಾರೆ ಕಂಡೆ ನಾ" ವಾಣಿ ಜಯರಾಂ ಅವರ ಕಂಚಿನ ಕಂಠ ಇಷ್ಟವಾಗುತ್ತದೆ. 



ಕಥಾವಸ್ತು ಆ ಕಾಲಕ್ಕೆ ಒಂದು ಚೂರು ಮುಂದಾಗಿತ್ತು ಅನ್ನಿಸುತ್ತದೆ. ಕೆಲವೊಮ್ಮೆ ಸಾಗರ ಪ್ರಶಾಂತವಾಗಿದ್ದ ಸಾಗರ ಚಂಡಮಾರುತದ ಮುನ್ಸೂಚನೆ ನೀಡುವಂತೆ, ಪುಟ್ಟಣ್ಣ ಕಣಗಾಲ್ ತಮ್ಮ ಮುಂದಿನ ಚಿತ್ರ ರತ್ನಕ್ಕೆ ಈ ಚಿತ್ರದಿಂದಲೇ ಅನಿಯಾಗುತ್ತಿದ್ದರೋ ಏನೋ ಎನ್ನಿಸಿತು ನನಗೆ. 

Sunday, October 11, 2015

ಮನುಜನ ಭಾವಗಳನ್ನು ಮಧ್ಯೆ ಕೂರಿಸಿ ತೋರಿಸುವ ಧರಣಿ ಮಂಡಲ ಮಧ್ಯದೊಳಗೆ (1983)

ಕೆಲವೊಮ್ಮೆ ನಮ್ಮ ಮನಸ್ಸು ಗಲಿಬಿಲಿಯಾಗಿದ್ದಾಗ ಅಥವಾ ಕೆಲವೊಮ್ಮೆ ನಿರ್ಮಲವಾಗಿದ್ದಾಗ ಒಳಗಿನ ಬಿಳಿಯ ಮನ ಪಟಲದಲ್ಲಿ ವರ್ಣಮಯ ದೃಶ್ಯಗಳು ಕಾಣಸಿಗುತ್ತದೆ. ಆದರೆ ಅದು ಕ್ಷಣಿಕ ಮಾತ್ರ, ಆ ಪಟಲದಲ್ಲಿ ಮೂಡುತ್ತಿದ್ದ ದೃಶ್ಯಗಳನ್ನು ಮತ್ತೆ ಮತ್ತೆ ರೂಪಿಸಿಕೊಳ್ಳಲು ಬಲು ಕಷ್ಟ.

ಅಳತೆಗೂ ಮೀರಿದ ಕೆಲವು ಭಾವನಾತ್ಮಕ ದೃಶ್ಯಗಳು ಹಾಗೆ ಬಂದು ಹೋಗುವುದು ಉಂಟು. ಅಂಥಹ ಸಹಜವಾದ, ಆದರೆ ಈ ವ್ಯಾವಹಾರಿಕ ಪ್ರಪಂಚದಲ್ಲಿ ನಾನು, ನನ್ನದು, ನನ್ನದೇ ಎನ್ನುವ ಸ್ವಾರ್ಥ ಭಾವಗಳೇ ನಮ್ಮನ್ನು ಕಪಿ ಮುಷ್ಠಿಯಲ್ಲಿ ಇರಿಸಿಕೊಂಡು, ತನ್ನದೇ ರಕ್ತ ಹಂಚಿಕೊಂಡು ಹುಟ್ಟಿದ ಮಾಂಸದ ಮುದ್ದೆಯನ್ನು ಮೂಲೆ ಗುಂಪು ಮಾಡುವ ಶಕ್ತಿ ಹೊಂದಿಬಿಡುತ್ತದೆ.

ಈ ರೀತಿಯ ಒಂದು ಕಥೆಯನ್ನು ಸಿನಿಮಾ ತೆರೆಗೆ ಒಪ್ಪುವ ರೀತಿಯಲ್ಲಿ ಅಳವಡಿಸಿಕೊಳ್ಳುವುದು ಕಷ್ಟ ಸಾಧ್ಯದ ಕೆಲಸ. ಕಥೆ, ಚಿತ್ರಕಥೆ ಬರೆದು, ನಿರೂಪನೆಯನ್ನು ತಾಯಿ ಜಗನ್ಮಾತೆಯ ಅಭಯ ಹಸ್ತದ ವಾರದಲ್ಲಿ ಮೂಡಿಸಿರುವ ಚಿತ್ರವೇ "ಧರಣಿ ಮಂಡಲ ಮಧ್ಯದೊಳಗೆ" 

ಇದೊಂದು ಪುಟ್ಟಣ್ಣ ಅವರ ಎಲ್ಲಾ ಚಿತ್ರಗಳಿಗಿಂತ ಭಿನ್ನ. ಇದುವರೆಗೂ ಅವರು ತುಳಿದಿದ್ದ ದಾರಿಯಲ್ಲಿ ತುಸು ಹೊರಳಿ ಈ ಚಿತ್ರವನ್ನು ಮೂಡಿಸಿದ್ದಾರೆ. 

ಮೊದಲ ಮೊದಲಿಗೆ ಅರೆ ಏನಿದು ಹೀಗಿದೆ ಚಿತ್ರ ಎಂದು ನನಗನ್ನಿಸಿದ್ದು ಪ್ರಾಮಾಣಿಕವಾಗಿ ನಿಜ. ಆದರೆ ನೋಡುವಾಗ ಮತ್ತು ನೋಡಿದ ಕೆಲಹೊತ್ತಿನ ಮೇಲೆ, ಕೆಸರಲ್ಲಿ ಮುಳುಗುವ ಮನುಜನಂತೆ ನಿಧಾನವಾಗಿ ಈ ಚಿತ್ರದ ಒಳ ಹೂರಣ ಅರ್ಥವಾಗುತ್ತಾ ಹೋಗುತ್ತದೆ. 
ನಾಲ್ಕು ಮುಖ್ಯ ಪಾತ್ರಗಳು, ನಾಯಕ್, ದಳವಾಯಿ, ಪಾಳೆಗಾರ, ಮತ್ತು ಪುರುಷೋತ್ತಮ.   ಸಮಾಜಕ್ಕೆ ಬೇಕಾದ ನಾಲ್ಕು ಮುಖ್ಯ ಆಧಾರ ಸ್ಥಂಭಗಳು. 

ಪುರುಷೋತ್ತಮ ಎನ್ನುವ ಪಾತ್ರ ಎಂದಿಗೂ ಸೇಡು, ದ್ವೇಷಗಳ ಬತ್ತಳಿಕೆಯೊಳಗೆ ಇಳಿಯಬಾರದು, ಆದರೆ ಈ ಸಮಾಜದಲ್ಲಿ ಸೇಡಿನ ಮನೋಭಾವ ಹೊತ್ತು, ಅಲ್ಪ ಸ್ವಲ್ಪ ಹದ್ದುಬಸ್ತಿಗೆ ಬರುತ್ತಿದ್ದ ಇತರ ಮೂರು ಆಧಾರಗಳನ್ನು ತನ್ನ ಕೈಯಾರೆ ತಾನೇ ಹಾಳು ಮಾಡಿ, ತನ್ನನ್ನು ತಾನೇ ಹಳಿದುಕೊಳ್ಳುವಂಥಹ ಸ್ಥಿತಿಗೆ ಇಳಿಯಬೇಕಾಗುತ್ತದೆ. 

ಇಡಿ ಸಮಾಜವನ್ನು ಮುನ್ನಡೆಸಬೇಕಾದ ನಾಯಕ್ ಪಾತ್ರ, ಪರಿಸ್ಥಿಯ ಆಳ ತಿಳಿಯದೆ ತೆಗೆದುಕೊಳ್ಳುವ ಆತುರದ ನಿರ್ಧಾರ, ಮತ್ತು ವ್ಯಾವಹಾರಿಕ ಜ್ಞಾನವಿಲ್ಲದೇ, ವಿವೇಚನೆ ಇಲ್ಲದೆ ತೆಗೆದುಕೊಳ್ಳುವ ಕೆಲವು ತೀರ್ಮಾನಗಳು ತನ್ನನ್ನೇ ನಂಬಿಕೊಂಡು ನಿಲ್ಲುವ ತನ್ನ ಜನರಿಗೆ ಬರಿ ಬೇಡದ, ನಡೆಯದ ಆಶ್ವಾಸನೆ ಕೊಡುವಂತಹ ಪಾತ್ರವಾಗಿ ಬಿಡುತ್ತದೆ. 

ನಾಯಕ್ ತೆಗೆದುಕೊಳ್ಳುವ ನಿರ್ಧಾರವನ್ನು, ತೀರ್ಮಾನಗಳನ್ನು, ಸಲಹೆಗಳನ್ನು ಆಚರಣೆಗೆ ತರಬೇಕಾದ ಪಾಳೇಗಾರ್, ತನ್ನ ಆಸೆ ಆಮಿಷಗಳಿಗೆ, ತನ್ನ ಸ್ವಂತ ವಿಚಾರಗಳಿಗೆ, ಸೋತು, ಸಮಾಜಕ್ಕೆ ಆಘಾತ ಮಾಡುವ ಈ ಪಾತ್ರ ಕಡೆಗೆ ಕಾನೂನನ್ನು ಕೈಗೆ ತೆಗೆದುಕೊಂಡು ತಾನೂ ಬಾಳದೆ, ತನ್ನ ನಂಬಿದವರನ್ನು ಬಾಳಿಸದೆ, ಸಮಾಜಕ್ಕೆ ದೊಡ್ಡ ಆಘಾತ ನೀಡುವ ಪಾತ್ರವಾಗಿಬಿಡುತ್ತದೆ. 

ನಾಯಕ್ ಮತ್ತು ಪಾಳೇಗಾರ್ ಇಬ್ಬರಿಗೂ ಹೆಗಲು ಕೊಟ್ಟು ಸಮಾಜಕ್ಕೆ ರಕ್ಷಣೆ ನೀಡಬೇಕಾದ ದಳವಾಯಿ, ತಪ್ಪು ನಿರ್ಧಾರಗಳಿಂದ, ತನ್ನ ತೃಷೆಯನ್ನು ತಣಿಸಿಕೊಳ್ಳಲು ಅಮಾಯಕ ಪ್ರಜೆಯ ಮೇಲೆ ದಾಳಿ ಮಾಡಿ, ಕಡೆಗೆ ರಕ್ಷಣೆ ನೀಡುತ್ತೇನೆ ಎನ್ನುವ ಭರವಸೆ ನೀಡುತ್ತಾ, ತನ್ನ  ತಪ್ಪಿನ ಬಗ್ಗೆ ಪಶ್ಚಾತಾಪ ಪಟ್ಟು, ಅದನ್ನು ಸರಿಪಡಿಸಿಕೊಂಡು,  ಕೈ ಕೈ ಹಿಡಿದು ಸಾಗುವಾಗಲೇ, ನಾಯಕ್ ಮತ್ತು ಪಾಳೇಗಾರ್ ಅವರ ತಪ್ಪು ನಡೆಗಳಿಂದ ತನ್ನ ಪ್ರಾಣವನ್ನು ನೀಗಿ, ಕಡೆಗೆ ತಾನು ನೋಡಲಾಗದ ಉತ್ತಮ ಸಮಾಜವನ್ನು ತನ್ನ ಪ್ರಜೆ ನೋಡಲಿ ಎನ್ನುವ ಆಶಾವಾದದೊಡನೆ ಪ್ರಾಣ ನೀಗುತ್ತದೆ ಆ ಪಾತ್ರ. 

ಹೀಗೆ ಸಮಾಜದ ಹುಳುಕುಗಳನ್ನು ಎತ್ತಿ ತೋರಿಸಿ, ಅದನ್ನು ಸರಿಪಡಿಸಬೇಕಾದ ಕಂಬಗಳೇ ತಮ್ಮದೇ ಆದ ತಪ್ಪು ನಡೆಗಳಿಂದ ಎಡವಿ, ಮತ್ತೆ ಅದನ್ನು ಸರಿಪಡಿಸಿಕೊಳ್ಳುವ ಹಾದಿಯಲ್ಲಿದ್ದಾಗ ಮತ್ತೆ ಅದೇ ವಿಚಿತ್ರ ನಿರ್ಧಾರಗಳನ್ನು ತೆಗೆದುಕೊಂಡು ಸಮಾಜದ ಆರೋಗ್ಯವನ್ನು ಸುಧಾರಿಸದೆ ಹಪಹಪಿಗೊಳ್ಳುವ ಹಂತಕ್ಕೆ ಚಿತ್ರ ನಿಲ್ಲುತ್ತದೆ ಮತ್ತು ಇಂದಿನ ಸಮಾಜದ ಗುಣಮಟ್ಟವನ್ನು ತೋರಿಸುತ್ತದೆ. 

ಅಚಾರವೇ ಬೇರೆ ವಿಚಾರವೇ ಬೇರೆ... ಆಚಾರ ವಿಚಾರವಾಗಿ ಬದಲಾಗಬೇಕಾದರೆ ಅಥವಾ ವಿಚಾರ ಆಚಾರವಾಗಿ ಬದಲಾಗಬೇಕಾದರೆ ಬರಿ ಅಕ್ಷರಗಳ (ಅ ಮತ್ತು ವಿ) ಬದಲಾವಣೆ ಆದರೆ ಮಾತ್ರ ಸಾಲದು ಬದಲಿಗೆ ಎಲ್ಲರೂ ಯೋಚಿಸುವ ರೀತಿಯು ಬದಲಾಗಬೇಕು. ಅದೇ ಈ ಚಿತ್ರದ ಉದ್ದೇಶ ಮತ್ತು ಅಡಗಿರುವ ಸಂದೇಶ. 

ಶ್ರೀನಾಥ್, ಜೈಜಗದೀಶ್, ಚಂದ್ರಶೇಖರ್  ತಮಗೆ ವಹಿಸಿದ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಪುಂಡು ಹುಡುಗರಾಗಿ, ನಂತರ ಬದಲಾಗುವ ಹುಡುಗರಾಗಿ, ನಂತರ ಗೊಂದಲಕ್ಕೆ ಒಳಗಾಗುವ ಯುವ ಪೀಳಿಗೆಯನ್ನು ಪ್ರತಿನಿಧಿಸುವ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅದಕ್ಕೆ ಬೇಕಾದ ಅಭಿನಯ, ಸಂಭಾಷಣೆ ಹೇಳುವ ಧಾಟಿ ಎಲ್ಲವೂ ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ಸೊಗಸಾಗಿ ಅರಳಿದೆ.

ಟಿ ಎನ್ ಸೀತಾರಾಂ ಕೋಪತಾಪದ, ಮೈ ಪರಚಿಕೊಳ್ಳುವಂಥಹ ಸಂಧಿಗ್ಧ ಪಾತ್ರದಲ್ಲಿ ಮೊದಲು ನಂತರ ಸೇಡು ತೀರಿಸಿಕೊಳ್ಳುವ ಪಾತ್ರದಲ್ಲಿ ನೈಜತೆಯಿಂದ ಅಭಿನಯಿಸಿದ್ದಾರೆ. ಇವರ ಪಾತ್ರ ಚಿತ್ರಕ್ಕೆ ಇನ್ನೊಂದು ತಿರುವನ್ನು ಕೊಡುತ್ತದೆ. 

ಪೋಷಕ ಪಾತ್ರದಲ್ಲಿ ಬರುವ ಪದ್ಮಾವಾಸಂತಿ, ರೇಖಾ ರಾವ್ ಗಮನ ಸೆಳೆಯುತ್ತಾರೆ. ಚಿತ್ರಕ್ಕೆ ಒಂದು ದಿಕ್ಕು ಕೊಡುವ ಪಾತ್ರದಲ್ಲಿ ವಿಜಯಲಕ್ಷ್ಮಿ ಸಿಂಗ್ ತಮ್ಮ ಚೆಲುವಿಂದ, ಚಿನಕುರುಳಿ ಅಭಿನಯದಿಂದ ಚುಟುಕಾದ ಪಾತ್ರದಲ್ಲಿ ಮಿಂಚುತ್ತಾರೆ.  

ಈ ಚಿತ್ರದಲ್ಲಿ ಹಾಡುಗಳು ಮತ್ತೊಮ್ಮೆ ಮಿಂಚುತ್ತದೆ. 

ಸಿದ್ದಲಿಂಗಯ್ಯ ಅವರ ಸಾಹಿತ್ಯದ ಮೂರು ಹಾಡುಗಳು 
ಅ) "ಕಾಸನು ಬೀಸಿ ಒಲವಿನ ಬೆಲೆಯನು" ವಾಣಿಜಯರಾಂ ಅವರ ಸುಮಧುರ ಕಂಠದಲ್ಲಿ ಉತ್ತಮವಾಗಿ ಚಿತ್ರೀಕರಿಸಿದ್ದಾರೆ. 
ಆ) "ಗೆಳತಿ ಓ ಗೆಳತಿ" ಪ್ರಣಯಗೀತೆಯಾಗಿ ಎಸ್ ಪಿ ಬಾಲಸುಬ್ರಮಣ್ಯಂ ಗಾಯನದಲ್ಲಿ ಸೊಗಸಾಗಿದೆ 
ಇ) "ಕಲಿಗಾಲವಯ್ಯ ಕಲಿಗಾಲ" ಎಂದಿನ ಇಂದಿನ ಮುಂದಿನ ಪರಿಸ್ಥಿತಿಯನ್ನು ಹೇಳುವ ಗೀತೆಯಾಗಿ ಎಸ್ ಪಿ ಬಾಲಸುಬ್ರಮಣ್ಯಂ ಚಿತ್ರಿಕೃತವಾಗಿದೆ. 

ತನ್ನ ನೆಚ್ಚಿನ ಗೆಳೆಯ ವಿಜಯನಾರಸಿಂಹ ಅವರಿಂದ ಮೂಡಿಬಂದ "ಉಯ್ಯಾಲೆ ಆಡೋಣ ಬನ್ನಿರೋ" ಜಯಚಂದ್ರನ್ ಮತ್ತು ವಾಣಿ ಜಯರಾಂ ಅವರ ಉತ್ತಮ ಯುಗಳ ಗೀತೆಯಾಗಿದೆ. ಇಡಿ ಹಾಡನ್ನು ಉಯ್ಯಾಲೆಗಳ ಮಧ್ಯೆದಲ್ಲಿ ಚಿತ್ರಿಕರಿಸಿರುವುದು ವಿಶೇಷ. 

ಇಡಿ ಚಿತ್ರಕ್ಕೆ ಸಂಗೀತ ಮೆರುಗು ನೀಡಿರುವ ವಿಜಯಭಾಸ್ಕರ್, ಹಿನ್ನೆಲೆ ಸಂಗೀತದಲ್ಲಿ ಗಮನ ಸೆಳೆಯುತ್ತಾರೆ. ಆಣೆಕಟ್ಟು ಕಟ್ಟುವ ಪ್ರದೇಶವನ್ನು ತೋರಿಸುವಾಗೆಲ್ಲ ಬರುವ ಸಂಗೀತ ಅತ್ಯುತ್ತಮ. ಒಂದು ರೀತಿಯ ಆಶಾಭಾವವನ್ನು ಹೊತ್ತು ತರುತ್ತದೆ. 

ಬಿ ಎಸ್ ಬಸವರಾಜ್ ಭಾವುಕ ಸನ್ನಿವೇಶಗಳ ಛಾಯಾಗ್ರಹಣ ಮಾಡುತ್ತಲೇ ನಿಧಾನವಾಗಿ ನಮ್ಮ ಮನದೊಳಗೆ ಹೊಕ್ಕು ಸಾಗುವ ಸೂರ್ಯಾಸ್ತ ಮತ್ತು ಸೂರ್ಯೋದಯದ ದೃಶ್ಯಗಳು, ಅಣೆಕಟ್ಟಿನ ಆಯಾತ ಪ್ರದೇಶವನ್ನು ತೋರಿಸುವ ರೀತಿ ಸೂಪರ್ ಸೂಪರ್. 

ಚಿತ್ರದ ಆರಂಭ ಪುಟ್ಟಣ್ಣ ಅವರ ಎಲ್ಲಾ ಚಿತ್ರಗಳ ವಿಶೇಷ. ಭೂಮಿ ತಿರುಗುತ್ತದೆ ಅದರ ಜೊತೆಯಲ್ಲಿಯೇ ಮನುಜ ಯೋಚಿಸುವ ಲಹರಿಯೂ ಸಹ ಎನ್ನುವ ಭಾವ ಹೊತ್ತು ತರುವ ರೀತಿಯಲ್ಲಿ ಚಿತ್ರದ ಹೆಸರು, ತಾರಾಗಣ, ತಾಂತ್ರಿಕವರ್ಗ ಎಲ್ಲವೂ ಒಂದೇ ಚೌಕಟ್ಟಿನೊಳಗೆ ಸಾಗುತ್ತಾ ಹೋಗುತ್ತದೆ. 

ಇಡಿ ಚಿತ್ರ ಒಂದು ಗುಟುಕಿಗೆ ಒಳಗೆ ಹೋದರೂ, ಅದರ ಪರಿಣಾಮ ನಿಧಾನವಾಗಿ ಮನದೊಳಗೆ ಇಳಿಯುತ್ತಾ ಹೋಗುತ್ತದೆ. 

ಒಂದು ಪೂರ್ತಿ ವಿಭಿನ್ನ ಎನ್ನಿಸುವ ಚಿತ್ರ ನೀಡಿರುವ ಪುಟ್ಟಣ್ಣ ಕಣಗಾಲ್ ಅವರು ಒಂದು ದೃಶ್ಯದಲ್ಲಿ ಬಂದು ಹೋಗುವುದು ವಿಶೇಷ. 

ಒಂದು ಮನದಾಳಕ್ಕೆ ಇಳಿಯುವ ಚಿತ್ರವನ್ನು ನೋಡಿದ,  ಅನುಭವಿಸಿದ, ಮತ್ತು ಯೋಚನಾಲಹರಿಗೆ ಕೆಲಸ ತಂದು ಕೊಟ್ಟ ತೃಪ್ತಿ ಈ ಚಿತ್ರ ನೋಡಿದ ಮೇಲೆ ನನಗೆ ದಕ್ಕಿತು. 


Saturday, October 3, 2015

ಮನದ ಸರೋವರವನ್ನು ಕೆದಕುವ ಮಾನಸ ಸರೋವರ (1982)

ಈ ಸಿನಿಮಾ ತುಂಬಾ ಕಾಡಿತ್ತು ಆ ಕಾಲದಲ್ಲಿಯೇ. ಮೊದಲ ಬಾರಿಗೆ ಈ ಚಿತ್ರವನ್ನು ದೂರದರ್ಶನದಲ್ಲಿ ನೋಡಿದಾಗ ನನಗೆ ಸುಮಾರು ಹದಿನೈದು ವರ್ಷಗಳು ಇರಬಹುದು. 

ಆ ವಯಸ್ಸು ಒಂದು ರೀತಿಯ ಬದಲಾವಣೆಯ ಪರ್ವವಾಗಿರುತ್ತದೆ. ಮೊದಲಿಂದಲೂ ಸಿನಿಮಾ ನೋಡುವ ಮತ್ತು ಅದರ ಒಳಗೆ ಕೂತು ನೋಡುವ ಒಂದು ವಿಚಿತ್ರ ರೋಗವಿದ್ದದರಿಂದ ಬಹುಶಃ ಈ ಚಿತ್ರ ಇನ್ನಷ್ಟು ಕಾಡಿತ್ತು ಎನ್ನಿಸುತ್ತದೆ.  

ಅದಾದ ಮೇಲೆ ಹಲವಾರು ಬಾರಿ ಈ ಚಿತ್ರವನ್ನು ನೋಡಿದ್ದೇನೆ. ಪ್ರತಿಬಾರಿಯೂ ನನಗೆ ಮೊಟ್ಟಮೊದಲು ನೋಡಿದ ಅನುಭವ ಹೇಗೆ ಇರುತ್ತದೆಯೋ ಅದೇ ಅನುಭವ. ಒಂದೂ ಚೂರು ಬದಲಾವಣೆ ಇಲ್ಲ. 
ಹಲವಾರು ಚಿತ್ರಗಳು ಪ್ರತಿ ಬಾರಿ ನೋಡಿದಾಗಲೂ ಹಲವಾರು ರೀತಿಯಲ್ಲಿ ಕೈಗೆ ಎಟುಕುತ್ತದೆ, ಆದರೆ ಈ ಚಿತ್ರ ಪ್ರತಿ ಸಾರಿ ನೋಡಿದ ಮೇಲೆ ಇನ್ನಷ್ಟು ಆಳಕ್ಕೆ ಇಳಿಯುತ್ತದೆ ಮತ್ತು ಅದೇ ಮೊದಲ ಅನುಭವವನ್ನು ಕಣ್ಣ ಮುಂದೆ ತಂದಿಡುತ್ತದೆ. 

ಚಿತ್ರದ ಆರಂಭ ನನಗೆ ಇನ್ನೂ ಕಾಡುತ್ತದೆ.  ಮನಸ್ಸಿನ ಬಗ್ಗೆ ಒಂದೆರಡು ವಾಕ್ಯಗಳು ಮನಸ್ಸಿಗೆ ತಾಕಿದರೆ, ಹೂವಿನ ಜೊತೆಯಲ್ಲಿ ಹೆಸರನ್ನು ತೋರಿಸುತ್ತಾ, ಪ್ರತಿ ಬಾರಿಯೂ ಅಲೆಗಳು ಬಂದು ಆ ಅಕ್ಷರಗಳನ್ನು ಅಳಿಸಿಹಾಕುವಂತಹದು, ನಮ್ಮ ಜೀವನದಲ್ಲಿ ಎಷ್ಟೋ ಮಂದಿ ಬರುತ್ತಾರೆ, ನೆನಪು ಉಳಿಸುತ್ತಾರೆ, ಅಳಿಸುತ್ತಾರೆ, ಆದರೆ ಕಾಲ ಮುಂದೆ ಸಾಗುತ್ತಲೇ ಇರುತ್ತವೆ, ಅಲೆಗಳು ಬರುತ್ತಲೇ ಇರುತ್ತವೆ ಎಂಬ ಸೂಕ್ಷ್ಮ ಸಂದೇಶ ಹೊತ್ತು ತರುತ್ತದೆ. 

ಹುಣ್ಣಿಮೆಯ ಚಂದ್ರ, ಆವ ಚೆಲ್ಲುವ ಬೆಳದಿಂಗಳು, ಪ್ರೀತಿ ಪ್ರೇಮ ಪ್ರಣಯ ಇವುಗಳ ಉಗಮಸ್ಥಾನ, ಚಂದ್ರನ ಕಿರಣಗಳು ಮನಸ್ಸಿನ ಮೇಲೆ ಬಲು ಪ್ರಭಾವ ಬೀರುತ್ತದೆ. ಕಾವ್ಯಮಯವಾದ ಮನಸ್ಸಿನ  ನಾಯಕ ಆ ಬೆಳದಿಂಗಳ ಚಂದ್ರನ ಬೆಳಕಲ್ಲಿ ಕೂತು, ತೂಗಾಡುವ ಮನಸ್ಸನ್ನು ಪ್ರತಿಬಿಂಬಿಸುವ, ಉಯ್ಯಾಲೆಯಲ್ಲಿ ಜೀಕುತ್ತಾ ಕೂತಿದ್ದಾಗ ಏನೋ ಒಂದು ಅದ್ಭುತ ವಿಷಯ ಹೊಳೆಯುತ್ತದೆ. 

ಅದನ್ನು ಅಷ್ಟೇ ಪ್ರೀತಿಯಿಂದ ತನ್ನ ಮಡದಿಗೆ ಹೇಳಬಂದಾಗ ಆಕೆ ಭಾವನಾತ್ಮಕವಾಗಿ ಸ್ಪಂದಿಸದೇ, ವ್ಯಾವಹಾರಿಕ ಜಗತ್ತಿನ ಸೂತ್ರದಲ್ಲಿ ಬಂಧಿಯಾಗಿ, ತನಗೆ ಲಾಭ ತರದ ಈ ಕಾವ್ಯಮಯ ಭಾಷೆ ಅನಗತ್ಯ ಎನ್ನುವ ಮಾತುಗಳನ್ನು ಹೇಳುತ್ತಾಳೆ. 

ಅಲ್ಲಿಂದ ಶುರು ನಾಯಕನ ಮನಸ್ಸು ಅವನ ಜೊತೆ ಮಾತಾಡಲು ಅನುವಾಗುತ್ತದೆ. ಅದ್ಭುತ ದೃಶ್ಯ ಕಲ್ಪನೆ. ನಮ್ಮ ಮನಸ್ಸು ನಮಗೆ ಮಾರ್ಗದರ್ಶಿ ಎನ್ನುವ ಮಾತು ಎಷ್ಟು ನಿಜ. 

ಮನಸ್ಸು ಒಂದು ಕಡೆಯಲ್ಲಿ ಸಹಾನುಭೂತಿ ತೋರಿದರೆ, ತನ್ನ ಮನದಲ್ಲಿ ಕೂತ ಮಡದಿಯಿಂದ ತಿರಸ್ಕಾರ ಸಾಕು ಎನ್ನಿಸಿ ಮನೆ ಬಿಟ್ಟು ಹೊರಡುತ್ತಾನೆ. ಆಗ ಇನ್ನೊಂದು ಅದ್ಭುತ ಜಗತ್ತು ನಾಯಕನ ಮನಸ್ಸಿಗೆ ಸಿಗುತ್ತದೆ. 

ಜಿ ಎಸ್ ಶಿವರುದ್ರಪ್ಪ ಅವರ ಅದ್ಭುತ ಕವಿತೆ "ವೇದಾಂತಿ ಹೇಳಿದನು" ಪಿ ಬಿ ಶ್ರೀನಿವಾಸ್ ಅವರ ಸಿರಿಕಂಠದಲ್ಲಿ ಅಷ್ಟೇ ಅದ್ಭುತವಾಗಿ ಮೂಡಿ ಬಂದಿದೆ. ಕಾಡಿನಲ್ಲಿ ಕಾರಿನಲ್ಲಿ ಹೋಗುತ್ತಾ ಜೋರಾಗಿ ಈ ಹಾಡನ್ನು ಕೇಳಿದರೆ ಸಿಗುವ ಆನಂದ ಹೇಳಲಿಕ್ಕೆ ಆಗೋಲ್ಲ (ನಾ ಹಲವಾರು ಬಾರಿ ಒಬ್ಬನೇ ಪಯಣ ಮಾಡುವಾಗ.. ಈ ರೀತಿಯ ಹುಚ್ಚು ಸಾಹಸಕ್ಕೆ ಕೈ ಹಾಕುವುದು ಉಂಟು) 
ಈ ಹಾಡಿನಲ್ಲಿರುವ ಸತ್ವವನ್ನು ವಿಜಯಭಾಸ್ಕರ್ ಸಂಗೀತದಲ್ಲಿ ಅದ್ದಿ ಅದ್ದಿ ತೆಗೆದಿದ್ದಾರೆ. ಎಷ್ಟು ಬಾರಿ ಕೇಳಿದರೂ ಬೋರ್ ಅನ್ನಿಸಿದ ಅನೇಕ ಹಾಡುಗಳಲ್ಲಿ ಇದು ಒಂದು. ಈ ಹಾಡನ್ನು ಚಿತ್ರೀಕರಿಸಿದ ರೀತಿಯೂ ಸುಂದರ. 

ಒಂದು ರಕ್ಷಾ ಬೇಲಿ ಇರುವ ಮನೆಯಿಂದ ಹೊರಡುವ ನಾಯಕನ ಮನೆಯ ಎದುರು ದಾರಿಗಳು ಕವಲಾಗಿ ಎರಡಾಗುತ್ತವೆ. ನಾಯಕನ ಬಾಳಿನ ಪಥದಲ್ಲೂ ಇಬ್ಬಗೆಯ ಹಾದಿ ಎದುರಿಗೆ ಇದೆ ಎನ್ನುವ ಸೂಚ್ಯ ಅದು. 
ಅಲ್ಲಿಂದ ಹೊರಡುವ ಅವನ ಕಾರು, ತಂಪಾದ ಹಸಿರು ಕಾಡಿನ ಮಧ್ಯೆ ಸಾಗುವುದು, ಹಿನ್ನೆಲೆಯಲ್ಲಿ ಹಾಡು ಬರುವುದು ವಾಹ್ ಎನ್ನಿಸುತ್ತದೆ. ಎಂಥಹ ಸಮಸ್ಯೆಗೂ ಪ್ರಕೃತಿಯೇ ಅದ್ಭುತ ವೈದ್ಯ ಎನ್ನುವುದರ ಸುಂದರ ನಿರೂಪಣೆಯ ಭಾವ ಈ ಹಾಡಿನಲ್ಲಿ ಇದೆ. ಬೇಲಿಯಿರುವ ಮನೆಯಿಂದ, ವಿಹಂಗಮ ಪ್ರಕೃತಿಯ ಮಧ್ಯೆ ಯಾವುದೇ ಬಂಧನವಿರದ ಮುಕ್ತವಾಗಿರುವ ಮನೆಗೆ ಬರುತ್ತಾನೆ. ಈ ಹಾಡು ನೋಡಬೇಕು ಕೇಳಬೇಕು ಆಗಲೇ ಅದರ ಸತ್ವ ಅರಿವಾಗುವುದು. 

ಮಿತ್ರವೃಂದ ಲಾಂಛನದಲ್ಲಿ ತಯಾರಾದ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ನಿರ್ವಹಣೆ ಮತ್ತು ನಿರೂಪಣೆ ಪುಟ್ಟಣ್ಣ ಕಣಗಾಲ್ ಅವರದ್ದು. ತನ್ನ ಸಾಧನೆ ಏನೂ ಅಲ್ಲ, ಅದಕ್ಕೆಲ್ಲ ಕಾರಣ ಜಗನ್ಮಾತೆ ಎನ್ನುವ ತತ್ವವನ್ನು ದಿಗ್ದರ್ಶನ - ಜಗನ್ಮಾತೆ ಎಂದು ತೋರುವ ಮೂಲಕ, ತಾನು ಯಶಸ್ಸಿನ ಶಿಖರದಲ್ಲಿದ್ದರೂ ಅದಕ್ಕೆ ಕಾರಣ ಕಾಣದ ಆ ಮಹಾನ್ ಶಕ್ತಿ ಎಂಬ ಅರಿವು ಮೂಡಿಸುತ್ತಾರೆ. 

ಮೂರು ಮಂದಿ ಮಿತ್ರರ ಜೊತೆಗೂಡಿ (ವರ್ಗಿಸ್, ಕಮಲಾಕರ್, ಗೀತ ಶ್ರೀನಾಥ್) ನಿರ್ಮಿಸಿದ ಚಿತ್ರವಿದು. ಚುರುಕಾದ ಸಂಭಾಷಣೆ ಪುಟ್ಟಣ್ಣ ಅವರ ಎಲ್ಲಾ ಚಿತ್ರಗಳ ಆಸ್ತಿ, ಈ ಚಿತ್ರದಲ್ಲಿ ಆ ಹೊಣೆ ಹೊತ್ತವರು ಟಿ ಎನ್ ಸೀತಾರಾಮ್. ಪುಟ್ಟಣ್ಣ ಅವರ ಅನೇಕ ಚಿತ್ರಗಳಿಗೆ ಛಾಯಾಗ್ರಾಹಕರಾಗಿದ್ದ ಬಿ ಎಸ್ ಬಸವರಾಜ್ ಮತ್ತೊಮ್ಮೆ ಪುಟ್ಟಣ್ಣ ಅವರ ಭಾವಗಳಿಗೆ ತಕ್ಕಂತೆ ದೃಶ್ಯಗಳನ್ನು ಚಿತ್ರೀಕರಿಸಲು ಜೊತೆಯಾಗಿದ್ದರು.  

ಒಂದು ಅಡಿಗೆ ಸಿದ್ಧಮಾಡುವಾಗ, ಅಥವಾ ಯಾವುದೇ ಕೆಲಸ ಮಾಡುವಾಗ, ಅದರ ಬಗ್ಗೆ ಪುಟ್ಟ ಪುಟ್ಟ ವಿವರಗಳು, ವಿಧಾನಗಳು ಇವೆಲ್ಲಾ ಸರಿಯಾಗಿ ಸಿಕ್ಕಿ, ಅದನ್ನು ಹೇಳಿಕೊಡುವ ಒಬ್ಬರು ಜೊತೆಗಿದ್ದರೆ ಪವಾಡ ಸೃಷ್ಟಿಸಬಹುದು ಎನ್ನುತ್ತದೆ ಮಾತು. ಅದನ್ನು ಈ ಚಿತ್ರದಲ್ಲಿ ನೋಡಬಹುದು. ಪ್ರತಿಯೊಬ್ಬ ಕಲಾವಿದರು ಪಾತ್ರಗಳಿಗೆ ಎಷ್ಟು ಬೇಕು ಅಷ್ಟೇ ಅಭಿನಯ ನೀಡಿದ್ದಾರೆ ಅಥವಾ ಪಾತ್ರ ಬೇಡುವಷ್ಟು ಅಭಿನಯ ನೀಡಿದ್ದಾರೆ. 

ಅಡಿಗೆ ಕೆಲಸಮಾಡಿಕೊಂಡು ಮನೆ ನೋಡಿಕೊಳ್ಳುವ ಪಾಂಡು ಅಂಕಲ್ ಪಾತ್ರ, ನಾಯಕನ ತೋಟವನ್ನು ತಮ್ಮ ತಂಗಿಯನ್ನು ಮುಂದೆ ಇಟ್ಟುಕೊಂಡು ಕಬಳಿಸಲು ಹೊಂಚು ಹೂಡುವ ಲಂಬಾಣಿ ಹುಡುಗರ ಪಾತ್ರ, ಲಂಬಾಣಿ ಹುಡುಗಿಯಾಗಿ ಅಭಿನಯಿಸಿರುವ ವೈಶಾಲಿ ಕಾಸರವಳ್ಳಿ, ನಾಯಕಿಯ ತಂದೆಯಾಗಿ ಬರುವ ಜಿ ವಿ ಶಿವಾನಂದ್.. ಹೀಗೆ ಎಲ್ಲರಲ್ಲಿಯೂ ತಮಗೆ ಬೇಕಾದಷ್ಟೇ ಅಭಿನಯ ಪಡೆಯುವಲ್ಲಿ ಯಶಸ್ವೀ ಆಗಿದ್ದಾರೆ ಪುಟ್ಟಣ್ಣ ಕಣಗಾಲ್. 

"ಹಾಡು ಹಳೆಯದಾದರೇನು" ಮತ್ತೊಮ್ಮೆ ಜಿ ಎಸ್ ಶಿವರುದ್ರಪ್ಪ ಅವರ ಕವಿತೆಯನ್ನು ಸಂಗೀತದಲ್ಲಿ ಅಳವಡಿಸಿರುವುದು ಇಷ್ಟವಾಗುತ್ತದೆ. ವಾಣಿ ಜಯರಾಂ ಭಾವ ತುಂಬಿ ಹಾಡಿದ್ದಾರೆ, ಈ ಹಾಡನ್ನು ಚಿತ್ರಿಸಿರುವ ರೀತಿ ಇಷ್ಟವಾಗುತ್ತದೆ. ಹಸಿರಿನ ಮಧ್ಯೆ ಕಂಗೊಳಿಸುವ ಹಿತ ಮಿತ ಬೆಳಕಿನಲ್ಲಿ ಸೂಪರ್ ಎನ್ನಿಸುತ್ತದೆ. 

ನಾಯಕಿಗೆ ಚಿಕಿತ್ಸೆ ನೀಡುವಲ್ಲಿ ಬೇಕಾದ ತಾಳ್ಮೆ, ಸಂಯಮ, ಹಿತ ಮಿತ ನುಡಿಗಳು, ಮಗುವನ್ನು ಪಾಲಿಸುವ ಅಮ್ಮನಂತಹ ಪಾತ್ರದಲ್ಲಿ, ಕೆಲವೊಮ್ಮೆ ಮುಗ್ಧ ಮಗುವೆ ಆಗುವ ಪಾತ್ರದಲ್ಲಿ ಶ್ರೀನಾಥ್ ಸ್ಮರಣೀಯ ಅಭಿನಯ ನೀಡಿದ್ದಾರೆ. ಮಾನಸಿಕ ರೋಗತಜ್ಞನ ಪಾತ್ರದಲ್ಲಿ ಅವರ ಅಭಿನಯ ಅದ್ಭುತ. ಆ ಪಾತ್ರಕ್ಕೆ ಬೇಕಾದ ಆಂಗೀಕ ಅಭಿನಯ, ವೇಷ ಭೂಷಣ, ತಾನು ಸರಿ ಎನ್ನುತ್ತಾ ಮಾತಾಡುವ ಶೈಲಿ ಬಹುಕಾಲ ನೆನಪಲ್ಲಿ ಉಳಿಯುತ್ತದೆ. ನಿರ್ದೇಶಕರ ಅಣತಿಯಂತೆ ನಟಿಸಿರುವ ಈ ಪಾತ್ರ ಅದ್ಭುತವಾಗಿ ಮೂಡಿ ಬಂದಿದೆ. 

ಕುಂಬಾರ ಒಂದು ಮಣ್ಣಿನ ಮುದ್ದೆಯನ್ನು ತಿರುಗುವ ಚಕ್ರದಮೇಲೆ ಹಾಕಿ, ಆ ಮಣ್ಣಿಗೆ ಸುಂದರ ರೂಪವನ್ನು ಕೊಡುವ ಹಾಗೆ ಪದ್ಮಾವಾಸಂತಿ ಅವರಿಂದ ಅಭಿನಯ ಕಲೆಯನ್ನು ಅನಾವರಣಗೊಳಿಸಿರುವುದು ಪುಟ್ಟಣ್ಣ ಅವರ ತಾಕತ್. ಬಹುಶಃ ಪದ್ಮಾವಾಸಂತಿ ಈ ಚಿತ್ರದಲ್ಲಿ ಅಭಿನಯಿಸಿರುವಂತೆ ಇನ್ಯಾವ ಚಿತ್ರಗಳಲ್ಲೂ ಅಭಿನಯಿಸಲಿಕ್ಕೆ ಅವಕಾಶ ಸಿಗಲಿಲ್ಲ ಅಂದರೆ ತಪ್ಪಿಲ್ಲ ಎನುವ ಅಭಿಪ್ರಾಯ ನನ್ನದು. 

"ಮಾನಸ ಸರೋವರ" ಹಾಡು ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ವಾಣಿ ಜಯರಾಂ ಅವರ ಧ್ವನಿಯಲ್ಲಿ ಅತ್ಯುತ್ತಮವಾಗಿ ಮೂಡಿ ಬಂದಿದೆ. ಸುಂದರ ಪರಿಸರ, ಈ ಹಾಡು ಶುರುವಾಗುವ ಮುಂಚೆ ಬರುವ ವೇದ ಮಂತ್ರಗಳು ಈ ಹಾಡನ್ನು ನೋಡುವಾಗ ಒಂದು ಭಕ್ತಿ ಭಾವದ ಜೊತೆಯಲ್ಲಿ ಒಂದು ಮಧುರ ಭಾವ ನೀಡುತ್ತದೆ. 

"ಚಂದ ಚಂದ"  ಹಾಡು, ಅದರ ಆರಂಭಿಕ ಸಂಗೀತ ಹುಚ್ಚು ಹಿಡಿಸುತ್ತದೆ. ಜಯಚಂದ್ರನ್ "ಚಂದ ಚಂದಾ" ಎಂದು ಶುರು ಮಾಡುವ ರೀತಿ ವಾಹ್. ಸಾಹಿತ್ಯ ಎಂ ಎನ್ ವ್ಯಾಸರಾವ್ ಅವರದ್ದು, ಈ ಹಾಡು ಇಷ್ಟವಾಗಲು ಕಾರಣ, ಸರಳ ಸಂಗೀತ, ರಾಮಕೃಷ್ಣ ಅವರ ಹುಡುಗು ಹುಡುಗು ನೃತ್ಯ, ಸುಂದರ ಹೊರಾಂಗಣ. 

ಈ ಚಿತ್ರದ ಆರಂಭದಿಂದ ಈ ಹಾಡಿನ ತನಕ ಬಿರು ಬಿಸಿಲ ನಾಡು ಎಂದೇ ಖ್ಯಾತವಾದ ಬಳ್ಳಾರಿಯಲ್ಲಿ ಚಿತ್ರಿಕರಿಸಿದ್ದರೂ, ಆ ಬಿಸಿಲಿನ ತಾಪ ಎಲ್ಲೂ ಕಾಣದ ರೀತಿಯಲ್ಲಿ ಸುಂದರ ಹಸಿರಿನಲ್ಲಿ ಆಹ್ಲಾದಕರ ರೀತಿಯಲ್ಲಿ ಈ ದೃಶ್ಯದ ತನಕ ಚಿತ್ರೀಕರಿಸಿದ್ದಾರೆ. ಈ ಹಾಡು ಬರುವ ಹೊತ್ತಿಗೆ ನಾಯಕನ ಹೃದಯಕ್ಕೆ ಘಾಸಿಯಾಗಿರುತ್ತದೆ. ಮನಸ್ಸಿನ ಹಸಿರಿನ ಕಾಡು ಬೆಂಗಾಡಾಗಳು ಸಿದ್ಧವಾಗಿರುತ್ತದೆ. ಹೃದಯ ಒಡೆದು ಚೂರಾಗಿರುತ್ತದೆ. ಅಂಥಹ ಸಂದರ್ಭದಲ್ಲಿ ಬರುವ ಹಾಡು "ನೀನೆ ಸಾಕಿದ ಗಿಣಿ". 

ವಿಜಯನಾರಸಿಂಹ ಅವರ ಹೃದಯ ಹಿಂಡುವ ಸಾಹಿತ್ಯಕ್ಕೆ ಜೊತೆಯಾಗಿ ನಿಲ್ಲುತ್ತದೆ ಸಂಗೀತ ಮತ್ತು ಛಾಯಾಗ್ರಹಣ. ಕ್ಯಾಮೆರ ಚಾಲನೆ, ಕ್ಯಾಮೆರಾದ ಓಡಾಟ ಈ ಹಾಡಿನಲ್ಲಿ ನನಗೆ ಬಲು ಇಷ್ಟವಾಗುತ್ತದೆ. ಒಂದು ಹೃದಯ ಇನ್ನೊಂದು ಹೃದಯಕ್ಕೆ ಹತ್ತಿರವಾಗಬೇಕು ಎನ್ನುವಷ್ಟರಲ್ಲಿ ಮತ್ತೆ ದೂರ ಹೋಗುತ್ತದೆ. ಅದ್ಭುತವಾದ ರೀತಿಯಲ್ಲಿ ಚಿತ್ರಿಕರಣವಾಗಿದೆ. 

ನಾಯಕನ ಮನಸ್ಸು ಹೇಳುವ ಮಾತು "ಇವಳಿಗೆ ಬೇಕಾಗಿರುವುದು ಆನಂದ ಕಣೋ ಸಂತೋಷ ಅಲ್ಲ" ಅದ್ಭುತ ಮಾತುಗಳು. ಆನಂದ ನಿರಂತರದ ಭಾವ, ಸಂತೋಷ ಕೇವಲ ಕ್ಷಣ ಮಾತ್ರ ಸಿಗುವ ಸುಂದರ ಅನುಭವ. ಇಡಿ ಚಿತ್ರ ಈ ಮೇಲಿನ ಸಾಲಿನ ಮೇಲೆ ನಿಂತಿದೆ. 

ಈ ಚಿತ್ರದಲ್ಲಿ ಅಭಿನಯಿಸಿರುವ ಮೂವರು ಮೂರು ಆಧಾರ ಸ್ಥಂಭಗಳು. 

ಶ್ರೀನಾಥ್ : ಚಿತ್ರಜೀವನದಲ್ಲಿಯೇ ಒಂದು ಮೈಲಿಗಲ್ಲು, ಆನಂದನ ಪಾತ್ರದಲ್ಲಿ ಕೈಕಟ್ಟಿಕೊಂಡು ಓಡಾಡುವ, ಕನ್ನಡಕವನ್ನು ಆಗಾಗ ಸರಿಪಡಿಕೊಳ್ಳುವ ರೀತಿ, ಸಿಲ್ಲಿ ಫೆಲೋ ಸಿಲ್ಲಿ ಫೆಲ್ಲೋ ಎನ್ನುವ ಮಾತುಗಳು, ಅಪಾರ ಚಿಂತನೆ ನಡೆಸಿ ಮನಸ್ಸು ಹಣ್ಣಾಗಿದೆ ಎನ್ನುವಂಥಹ ಮನೋಜ್ಞ ಅಭಿನಯ ಈ ಪಾತ್ರದಲ್ಲಿ ಕಾಣಸಿಗುತ್ತದೆ 

ಪದ್ಮಾವಾಸಂತಿ: ವಾಸಂತಿ ಎನ್ನುವ ಮಾನಸಿಕ ಸ್ಥಿಮಿತ ಕಳೆದುಕೊಂಡ ಪಾತ್ರದಲ್ಲಿ ಅತಿರೇಕಕ್ಕೆ ಹೋಗದೆ, ನಿಭಾಯಿಸಿರುವ ರೀತಿ, ತನ್ನ ಕಾಯಿಲೆ ಗುಣವಾದಮೇಲೆ ಹಿಂದಿನ ಪಾತ್ರದ ಪರಿಣಾಮ ಕೊಂಚವೂ ಇರದ ಹಾಗೆ ಅಭಿನಯ ಇಷ್ಟವಾಗುತ್ತದೆ. 

ರಾಮಕೃಷ್ಣ : ಚಿತ್ರ ಒಂದು ನಿಟ್ಟಿನಲ್ಲಿ ಓಡುತ್ತಿದೆ ಎಂದು ಅಂದುಕೊಂಡಾಗ ಪ್ರತ್ಯಕ್ಷವಾಗುವ ಪಾತ್ರ ಚಿತ್ರದ ದಿಕ್ಕನ್ನೇ ಬದಲಿಸಿಬಿಡುತ್ತದೆ. ತನಗೆ ಅರಿವಿಲ್ಲದೆ ವಾಸಂತಿ ಪಾತ್ರವನ್ನು ಪ್ರೀತಿಸುತ್ತಾ, ಅರಿವಿಲ್ಲದೆ ನಾಯಕನ ಭಾವಗಳಿಗೆ ಬರೆ ಎಳೆಯುವ ಪಾತ್ರದಲ್ಲಿ ಲೀಲಾಜಾಲವಾಗಿ ನಟಿಸಿದ್ದಾರೆ. 

ಈ ಮೂವರು ಈ ಮೇಲಿನ ಪಾತ್ರ ಮಾಡಲಿಕ್ಕೆ ನಟಿಸಿದ್ದಾರೆಯೋ ಅನ್ನುವಷ್ಟು ಸಹಜವಾಗಿ ಮೂಡಿ ಬಂದಿದೆ. 

ಈ ಪಾತ್ರಗಳ ಮತ್ತು ಮನೋಜ್ಞ ಕಥೆಯ ಕತೃ ಪುಟ್ಟಣ್ಣ ಕಣಗಾಲ್ ಅವರಿಗೆ ಒಂದು ದೊಡ್ಡ ಸಲಾಂ ಈ ಲೇಖನದ ಮೂಲಕ!!!

Friday, May 15, 2015

ಗಿರ ಗಿರ ತಿರುಗಿಸುವ ಕಾಲೇಜು ರಂಗ (1976)

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ.. ದಾಸರ ಪದ ನೆನಪಿಗೆ ಬರುತ್ತಿದೆ..

ಇಡಿ ಚಿತ್ರವನ್ನು ನೋಡಿದಾಗ ಅನ್ನಿಸುತ್ತದೆ ಇಲ್ಲಿ ಗುರು ಶಿಷ್ಯರ ಇಬ್ಬರ ಕೈಚಳಕವು ಆಳವಾಗಿದೆ ಎಂದು.

"ಕಾಲೇಜು ರಂಗ" ಈ ಚಿತ್ರ ಒಂದು ರೀತಿಯಲ್ಲಿ ಪುಟ್ಟಣ್ಣ-ಪಂತುಲು ಅವರ ಅಮೋಘ ಸಂಗಮ.. ಎಲ್ಲೋ ಓದಿದ್ದ ನೆನಪು, ಪುಟ್ಟಣ್ಣ ಅವರ ಗುರುಗಳು ಬಿ ಆರ್ ಪಂತುಲು ಈ ಚಿತ್ರವನ್ನು ಮಾಡಬೇಕೆಂದು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಕಾಲದಲ್ಲಿ, ಆ ಕಾಲನ ಸಾಮ್ರಾಜ್ಯದಿಂದ ಕರೆ ಬಂದ ಕಾರಣ ಹೊರಟು ಬಿಟ್ಟರು ಎಂದು.

ಗುರುಗಳಿಗೆ ದಕ್ಷಿಣೆ ನೀಡುವ ಒಂದು ಸುಸಂಧರ್ಭ ಪುಟ್ಟಣ್ಣ ಅವರಿಗೆ ಒದಗಿ ಬಂತು. ಹಾಗಾಗಿ ಈ ಚಿತ್ರವನ್ನು ಗುರುಗಳ ಕಣ್ಣಲ್ಲಿ ಮತ್ತು ತಮ್ಮ ಮನದಲ್ಲಿ ಮೂಡಿದಂತೆ ಚಿತ್ರಿಸಿದ್ದಾರೆ.

೧೯೭೬ ರಲ್ಲಿ ತೆರೆಗೆ ಬಂದ ಈ ಚಿತ್ರದಲ್ಲಿ ಅತ್ಯುತ್ತಮ ಕಲಾವಿದರ ದಂಡೆ ನೆರೆದಿತ್ತು. ಕಲ್ಯಾಣ್ ಕುಮಾರ್, ಲೋಕನಾಥ್, ಗೋಡೆ ಲಕ್ಷ್ಮಿನಾರಾಯಣ, ಡಿಕ್ಕಿ ಮಾಧವರಾವ್, ಜಿ ಕೆ ಗೋವಿಂದರಾವ್, ಲೀಲಾವತಿ, ಮುಸುರಿ ಕೃಷ್ಣಮೂರ್ತಿ ಇನ್ನೂ ಅನೇಕರ ಜೊತೆಯಲ್ಲಿ ಹೊಸ ಮುಖವಾದ ಜಯಸಿಂಹ, ಪದ್ಮಶ್ರೀ ಮುಂಚೂಣಿಯಲ್ಲಿ ಅಭಿನಯಿಸಿದ್ದ ಈ ಚಿತ್ರ ಶ್ರೀ ಬಿ ಜಿ ಎಲ್ ಸ್ವಾಮೀ ಅವರ ಕಾಲೇಜು ರಂಗ ಎನ್ನುವ ಕಾದಂಬರಿ ಆಧರಿಸಿತ್ತು ಹಾಗೂ ಅವರೇ ಸಂಭಾಷಣೆಯನ್ನು ಒದಗಿಸಿದ್ದರು.


ಪದ್ಮಿನಿ ಪಿಕ್ಚರ್ಸ್ ಲಾಂಛನದಲ್ಲಿ ತಯಾರಾದ ಈ ಚಿತ್ರದ ಆರಂಭದಲ್ಲಿ ಪುಟ್ಟಣ್ಣ ತಮ್ಮ ಗುರುಗಳ ಬಗ್ಗೆ ಒಂದು ಸಂಕ್ಷಿಪ್ತ  ವಿವರ ಮತ್ತು ತಮ್ಮ ಮನದಾಳದ ಮಾತುಗಳಿಂದ ಗುರುದಕ್ಷಿಣೆಯ ಜೊತೆಗೆ ಆ ಮಹಾನ್ ಪ್ರತಿಭೆಗೆ ಒಂದು ಸುಂದರ ಚೌಕಟ್ಟನ್ನು ಹಾಕಿದ್ದಾರೆ.

ಪುಟ್ಟಣ್ಣ ಅವರು ಸಾಹಿತಿಗಳಿಗೆ ಕಲಾವಿದರಿಗೆ ಮತ್ತು ಅವರ ಕಲೆಗೆ ಬೆಲೆ ಕೊಡುತ್ತಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಚಿತ್ರಕಥೆ ಸಲಹೆ ಎಂದು ಯೋಗಾನರಸಿಂಹ ಮೂರ್ತಿ, ನರೇಂದ್ರಬಾಬು, ನವರತ್ನರಾಂ, ಎ ಎಸ್ ಮೂರ್ತಿ ಹೆಸರನ್ನು ಉಲ್ಲೇಖಿಸುತ್ತಾರೆ. ಹಾಡುಗಳು ಚಿ ಉದಯಶಂಕರ್, ಆರ್ ಎನ್ ಜಯಗೋಪಾಲ್ ಮತ್ತು ವಿಜಯನಾರಸಿಂಹ ಅವರ ಮೂಸೆಯಲ್ಲಿ ಅರಳಿದರೆ, ಅದಕ್ಕೆ ಸಂಗೀತ ಗುರುಗಳು ಪಂತಲು ಅವರ ಆಸ್ಥಾನ ಸಂಗೀತಗಾರರಾದ ಟಿ ಜಿ ಲಿಂಗಪ್ಪ ಅವರದ್ದು. ಚಿತ್ರವನ್ನು ಬಿ ಎನ್ ಹರಿದಾಸ್ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಗುರುಗಳಿಗೆ ಈ ಚಿತ್ರವನ್ನು ಅರ್ಪಿಸುತ್ತಾ ಚಿತ್ರಕಥೆ ನಿರ್ದೇಶನದ ಕುರ್ಚಿಯಲಿ ಪುಟ್ಟಣ್ಣ ಅವರ  ಕೂರುತ್ತಾರೆ.

ಬರಿ ಗೋದಾಮಿನಲ್ಲಿ ಮಾತ್ರ ಇಲಿಗಳು ಹೆಗ್ಗಣಗಳು ಇರೋಲ್ಲ ವಿದ್ಯಾ ಸಂಸ್ಥೆಗಳಲ್ಲೂ ನೆಲೆಸಿರುತ್ತವೆ ಎನ್ನುವುದನ್ನು ಸೂಕ್ಷ್ಮವಾಗಿ ಪಾತ್ರಗಳನ್ನ್ನು ಪರಿಚಯಿಸುತ್ತಾ ಆ ಪಾತ್ರಗಳ ಹೊಟ್ಟೆಬಾಕತನವನ್ನು ಮತ್ತು ಅನಾರೋಗ್ಯಕಾರಿ ಲಂಚಗುಳಿತನವನ್ನು, ತಮಗೆ ಅನ್ನ ನೀಡುತ್ತಿರುವ ಸಂಸ್ಥೆಗೆ ಕನ್ನ ಹಾಕುವ ಪರಿಯನ್ನು ವಿವರವಾಗಿ ತೋರಿಸುತ್ತಾ ಹೋಗುತ್ತಾರೆ.

ಎರಡು ವ್ಯಕ್ತಿಗಳ ಮನಸ್ಥಿತಿಯನ್ನು ಬಿಂಬಿಸುವ ಈ ಸಂಭಾಷಣೆಯ ಜಾದೂ ನೋಡಿ.

ಕಲ್ಯಾಣಕುಮಾರ್ ಒಳ್ಳೆಯತನಕ್ಕೆ, ತನಗೆ ಹುದ್ದೆ ಕೊಟ್ಟಿರುವ ಸಂಸ್ಥೆಗೆ ಅಳಿಲು ಸೇವೆ ಮಾಡಬೇಕೆನ್ನುವ ಹಂಬಲ ಇಟ್ಟುಕೊಂಡವರು. ಕಾಲೇಜಿನ ಆಡಳಿತ ಮಂಡಳಿಯ ಪ್ರೆಸಿಡೆಂಟ್ ಜಿ ಕೆ ಗೋವಿಂದರಾವ್ ಅವರ ಮನೆಗೆ ಬರುತ್ತಾರೆ. ಅಲ್ಲಿನ ಸಂಭಾಷಣೆ

ಪ್ರೆಸಿಡೆಂಟ್ ಅವರ ಧರ್ಮಪತ್ನಿ ಲೀಲಾವತಿ  ಹೇಳುತ್ತಾರೆ "ನೋಡಿ ನೀವು ನಿಜ ಹೇಳಿದರೂ ನಂಬ್ತೀರಿ.. ಸುಳ್ಳು ಹೇಳಿದರೂ ನಂಬ್ತೀರಿ.. " ಎಂದಾಗ ಕಲ್ಯಾಣ್ ಕುಮಾರ್ ಹೇಳುತ್ತಾರೆ " ಅಮ್ಮ ನಾನು ನಿಜ ಹೇಳಿದರೆ ಮಾತ್ರ ನಂಬ್ತೀನಿ"

ಅದೇ ಮಾತನ್ನು ಎರಡು ಮುಖದ, ಅಧಿಕಾರದ ದುರಾಸೆ ಇಟ್ಟುಕೊಂಡು ಹೇಗಾದರೂ ಸರಿ ಪ್ರಿನ್ಸಿಪಾಲ್ ಹುದ್ದೆಯಲ್ಲಿ ಕೂರಬೇಕು ಎನ್ನುವ ಹಠ ತೊಟ್ಟ ಲೋಕನಾಥ್ ಅವರಿಗೆ ಲೀಲಾವತಿ ಇದೆ ಮಾತನ್ನು ಹೇಳಿದಾಗ "ನೋಡಿಮ್ಮ ನಿಜ ಯಾವುದು ಸುಳ್ಳು ಯಾವುದು ನನಗೆ ಗೊತ್ತಿಲ್ಲ.. ನೀವು ಏನು ಹೇಳಿದರೂ ನಂಬ್ತೀನಿ"

ಒಂದು ಚಿತ್ರವನ್ನು, ಪಾತ್ರಗಳನ್ನೂ, ಚಿತ್ರದ ಹೂರಣವನ್ನು ಒಂದು ಸಂಭಾಷಣೆಯ ಮೇಲೆ ನಿಲ್ಲಿಸುವುದು ಅಥವಾ ಬಿಂಬಿಸುವುದು ಸಂಭಾಷಣಕಾರ ಮತ್ತು ನಿರ್ದೇಶಕನ ತಾಕತ್ತು. ಅದರಲ್ಲಿ ಬಿ ಜಿ ಎಲ್ ಸ್ವಾಮೀ ಮತ್ತು ಪುಟ್ಟಣ್ಣ ಅವರು ಜಯಶಾಲಿಗಳಾಗಿದ್ದಾರೆ.

ಹಲವಾರು ಚುಟುಕು ಚಿನಕುರುಳಿ ಸಂಭಾಷಣೆಗಳು ಇವೆ.

"ಇಮೇಜ್ ಇಲ್ಲದಿದ್ದರೆ ಏನಂತೆ ಕರೇಜ್ ಇದೆ"

"ದಬ್ಬಳದಲ್ಲಿ ಬಾವಿ ತೋಡುತ್ತಿರೆನ್ರಿ"

"ಬೆಳಿಗ್ಗೆ ಕ್ಲಾಸ್ ಮೇಟ್ಸ್ ಸಂಜೆಗೆ ಗ್ಲಾಸ್ ಮೇಟ್ಸ್"

ಈ ಚಿತ್ರದಲ್ಲಿ ಗಮನ ಸೆಳೆಯುವುದು ಲೋಕನಾಥ್ ಅವರ ವೇಷ ಭೂಷಣ, ದಪ್ಪ ಹುಬ್ಬು, ಜೊಂಡು ಮೀಸೆ, ಕುಂಟು ನಡಿಗೆ, ವಿಶಿಷ್ಟ ಮಾತಿನ ಶೈಲಿ ಇವೆಲ್ಲ ಒಂದು ಕಡೆಯಾದರೆ, ಗುಳ್ಳೆ ನರಿ ವ್ಯಕ್ತಿತ್ವದ ಗೋಡೆ ಲಕ್ಷ್ಮಿನಾರಾಯಣ, ಅವರ ಸಹಚರ ಇವರಿಬ್ಬರ ನಾಟಕೀಯ ಶೈಲಿಯಲ್ಲಿ ಸಂಭಾಷಣೆ, ಜಿ ಕೆ ಗೋವಿಂದರಾವ್ ಡಿಪ್ಲೊಮಸಿ ಎನ್ನುತ್ತಾ ಉಡಾಫೆ ಸಂಭಾಷಣೆ, ಲೀಲಾವತಿ ಅವರ ದರ್ಪ, ಅಜ್ಞಾನ, ಮತ್ತು ಸೋಗು ಹಾಕುವ ರೀತಿಯಲ್ಲಿನ ಸಂಭಾಷಣೆ ಮನಸ್ಸೆಳೆಯುತ್ತದೆ.

ಇಡಿ ಚಿತ್ರದಲ್ಲಿ ಕಾಡುವುದು ಕಲ್ಯಾಣ್ ಕುಮಾರ್.. ತಮ್ಮ ಅದ್ಭುತ ಅಭಿನಯ, ಸಂಭಾಷಣೆ ಹೇಳುವ ತಾಳ್ಮೆಯ ರೀತಿ, ಆ ಧ್ವನಿ, ಮತ್ತು ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ಮೋಸ ಆಗಬಾರದು, ಚೆನ್ನಾಗಿ ಕಲಿಯುವಂಥಹ ವಾತಾವರಣ ಮತ್ತು ಅನುಕೂಲತೆಗಳನ್ನು ಮಾಡಿಕೊಡಬೇಕು ಎನ್ನುವ ಕಾಳಜಿ ಎಲ್ಲವನ್ನೂ ಅರೆದು ಕುಡಿದಂತೆ ಅಭಿನಯಿಸಿದ್ದಾರೆ.

ಹಾಡುಗಳು ಮೂರೇ ಇದ್ದರೂ ಮನಸ್ಸಿಗೆ ನಾಟುವಂಥಹ ಹಾಡುಗಳು..

"ಉಪ್ಪ ತಿಂದ ಮೇಲೆ ನೀರಾ ಕುಡಿಯಲೇಬೇಕು" ಎಸ್ಪಿ ಮತ್ತು ರವಿ ಅವರ ಹಾಡುಗಾರಿಕೆ ಇಷ್ಟವಾಗುತ್ತದೆ.

"ಕಾಲೇಜು ರಂಗದಲ್ಲಿ ಕಾಳಿಂಗ ಸರ್ಪ" ಈ ಹಾಡಿನಲ್ಲಿ ಗಬ್ಬೆದ್ದು ನಾರುತ್ತಿರುವ ಶಿಕ್ಷಣ ಸಂಸ್ಥೆಗಳ ಬಗ್ಗೆ ಚಾವಟಿ ಬೀಸುವ ಶಾಲಿಯಲ್ಲಿ ಎಸ್ಪಿ ಹಾಡಿದ್ದಾರೆ.

"ಭವ್ಯ ಭಾರತ ಪರಂಪರೆಯಲ್ಲಿ ಗುರುಕುಲ ಎಂಬುದು ಒಂದಿತ್ತು" ಹೇಗಿರಬೇಕು ಮತ್ತು ಹೇಗಿದೆ ಎನ್ನುವ ಹೋಲಿಕೆ ತುಂಬಿದ ಭಾವ ಇರುವ ಈ ಹಾಡನ್ನು ಎಸ್ಪಿ ಮತ್ತು ವಾಣಿಜಯರಾಂ ಹಾಡಿದ್ದಾರೆ.

ಈ ಚಿತ್ರದ ಇನ್ನೊಂದು ಪ್ರಮುಖ  ಅಂಶ ಸಂಗೀತ ಮತ್ತು ನೆರಳು ಬೆಳಕಿನ ಉಪಯೋಗ.

ಪ್ರತಿಯೊಬ್ಬರಿಗೂ ಅವರ ಭಾವಕ್ಕೆ ತಕ್ಕಂತೆ ಹಿನ್ನೆಲೆ ಸಂಗೀತ ಮೂಡಿ ಬರುತ್ತದೆ. ಮತ್ತು ಸನ್ನಿವೇಶಕ್ಕೆ ತಕ್ಕಂತೆ ಹಿನ್ನೆಲೆ ಸಂಗೀತವನ್ನು  ಅಳವಡಿಸಿದ್ದಾರೆ. ಉದಾಹರಣೆಗೆ ಕಾಲೇಜಿನಲ್ಲಿ ಶಿಕ್ಷಕರನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ತಕ್ಕಂತೆ ನಾಣ್ಯಗಳು ಬೀಳುವ ಸದ್ದು ಮೂಡಿ ಬರುವುದು ಅದ್ಭುತ ಎನ್ನಿಸುತ್ತದೆ.

ಹಾಗೆಯೇ ಅಂತಿಮ ದೃಶ್ಯಗಳಲ್ಲಿ ಲೋಕನಾಥ್, ಕಲ್ಯಾಣಕುಮಾರ್ ಅವರ ಲ್ಯಾಬ್ ನಲ್ಲಿ ಇರುವ ದೊಡ್ಡ ಕಪಾಟನ್ನು ಬೆಂಕಿಗೆ ಆಹುತಿ ಮಾಡುವಾಗ ಅವರ ಮೊಗದಲ್ಲಿ ಮೂಡಿ ಬರುವ ಕ್ರೌರ್ಯ ನೆರಳು ಬೆಳಕಿನಲ್ಲಿ ಎದ್ದು ಕಾಣುವಂತೆ ತೋರಿಸಿದ್ದಾರೆ ಪುಟ್ಟಣ್ಣ ಅವರು.

ಪುಟ್ಟಣ್ಣ ಅವರ ಮಿಕ್ಕ ಚಿತ್ರಗಳಿಗಿಂತ ಭಿನ್ನ ಆದರೆ ಅವರದೇ ಛಾಪು ಮೂಡಿಸುವಂತಹ ಚಿತ್ರ ರತ್ನ "ಕಾಲೇಜು ರಂಗ"

ಇದಕ್ಕೆ ಪುಟ್ಟಣ್ಣ ಅವರಿಗೆ ಮನದಾಳದ ನಮನಗಳು!!!

Saturday, January 3, 2015

ಅಚ್ಹ ಬಿಳುಪಿನ ಮನದ ಬಿಳಿ ಹೆಂಡ್ತಿ (1975)

ಪುಟ್ಟಣ್ಣ ಕಣಗಾಲ್ ಎಂಬ ಮಾಂತ್ರಿಕ ತಾ ಮುಟ್ಟಿದ್ದೆಲ್ಲ ರತ್ನವಾಗಲೇ  ಎನ್ನುವ ಮನಶಕ್ತಿಉಳ್ಳವರಾಗಿದ್ದರು.  ಎಲ್ಲರ ಮನೆಯಲ್ಲೂ ನಡೆಯಬಹುದಾದ ಒಂದು ಸಂಗತಿ ಹೊಂದಿದ್ದ ಕಥೆಯನ್ನು ಅಸಾಧಾರಣ ರೀತಿಯಲ್ಲಿ ತೆರೆಗೆ ಅಳವಡಿಸಿ, ಅದಕ್ಕೆ ಹೊನ್ನಿನಂಥಹ ಗೀತೆ, ಸಂಭಾಷಣೆಗಳನ್ನು ತೊಡಿಸಿ ಒಂದು ಹೊಳೆಯುವ ರತ್ನವನ್ನಾಗಿ ಮಾಡಿದ್ದು ಅವರ ಶಕ್ತಿ. 

ಮ ನ ಮೂರ್ತಿಯವರ ಕಥಾ ಆಧಾರಿತ ಈ ಚಿತ್ರವನ್ನು ಎಂ ಜೆ ಎಂ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮುದ್ದುಕೃಷ್ಣ, ಜಯಸಿಂಹ, ಮಾರುತಿ ನಿರ್ಮಾಣ ಮಾಡಿದ್ದರು. 

ಈ ಚಿತ್ರದ ಒಂದು ಮುಖ್ಯ ಅಂಶ ಎಂದರೆ, ಇಡಿ ಕಥೆಗೆ ತಿರುವು ಕೊಡುವುದು ನಾಯಕನ ಪಾತ್ರ ಆದರೆ ಇಡಿ ಚಿತ್ರದಲ್ಲಿ ನಾಯಕನ ಪಾತ್ರವನ್ನು ಗುಪ್ತಗಾಮಿನಿಯಂತೆ ಮಾಡಿ, ಬರಿ ಹೆಣ್ಣು ಪಾತ್ರಗಳೇ ಮೆರೆದಾಡುವಂತೆ ಚಿತ್ರವನ್ನು ತೆರೆಗೆ ತಂದಿರುವುದು ವಿಶೇಷ. 

ಯಾವ ಮನೆಯಾದರೂ, ಮನವಾದರೂ ಎರಡು ಜಡೆಗಳು ಒಂದಾದಾಗ ಸುಖಃ ನೆಮ್ಮದಿ ಶಾಂತಿ ಅಲ್ಲಿ ನೆಲೆಸುತ್ತದೆ ಎನ್ನುವು ಸಂದೇಶವನ್ನು ಸಾರಿ ಸಾರಿ ಹೇಳಲು ಈ ರೀತಿಯಲ್ಲಿ ವಿಭಿನ್ನ ಬಗೆಯ ನಿರೂಪಣೆಯ ಮೊರೆ ಹೊಕ್ಕಿದ್ದಾರೆ ಅನ್ನಿಸುತ್ತದೆ. ಈ ಮಾತಿಗೆ ಪುಷ್ಟಿ ನೀಡುವಂತೆ ಮನೆಯ ಆಳಿನ ಪಾತ್ರ "ಮಲ್ಲ" ಹೇಳುವ ಮಾತು.. ಕಾರಿನಲ್ಲಿ ಕೂತು ಬರುವಾಗ ಇರುವ ಒಗ್ಗಟ್ಟು ಸಂಸಾರದಲ್ಲಿಯೂ ಇದ್ದಾರೆ ನಮ್ಮ ಪರ್ಪಂಚ ಸುಂದರ ಅತಿ ಸುಂದರ (ಸುಮಾರು ಹತ್ತು ಹೆಂಗಸರು ಅಂಬಾಸಡರ್ ಕಾರಿನಲ್ಲಿ ಬಿಳಿ ಹೆಂಡ್ತಿಯನ್ನು ನೋಡಲು ಬರುತ್ತಾರೆ.. ಆಗ ಮಲ್ಲ ಹೇಳುವ ಮಾತು)

ಇಡಿ ಚಿತ್ರದಲ್ಲಿ ನಾಯಕನಿಗೆ ಹಾಡು ಇರುವುದಿಲ್ಲ. ಹಿನ್ನೆಲೆ ಗಾಯನವನ್ನು ತಮ್ಮ ವಶಕ್ಕೆ ತೆಗೆದುಕೊಂಡಿರುವವರು ಅದ್ಭುತ ಗಾಯಕಿ ಶ್ರೀಮತಿ ವಾಣಿಜಯರಾಂ, ಮತ್ತು ಕೋಮಲ ಕಂಠದ ಕಸ್ತೂರಿ ಶಂಕರ್.  ಸಂಗೀತ ಸಂಯೋಜನೆ ಮಾಂತ್ರಿಕ ವಿಜಯಭಾಸ್ಕರ್. 

"ಆ ದೇವರೇ ನುಡಿದ ಮೊದಲ ನುಡಿ" ಪ್ರೇಮವನ್ನು, ಪ್ರೇಮದ ಹುಟ್ಟನ್ನು ಹಾಡಿನಲ್ಲಿ ವಿಜಯನಾರಸಿಂಹ ಅದ್ಭುತವಾಗಿ ಜೋಡಿಸಿದ್ದಾರೆ. ಆರತಿಯವರಿಗೆ ಸರಿಯಾದ ಕಂಠ ಎನ್ನುವಷ್ಟರ ಮಟ್ಟಿಗೆ ವಾಣಿಯಮ್ಮ ದನಿಯಾಗುತ್ತಾರೆ. ಪದಗಳ ಉಳಿತ, ಅದಕ್ಕೆ ಆರತಿಯವರ ಅಭಿನಯ ಸೊಗಸು. 

"ಯಾವ ತಾಯಿಯು ಹಡೆದ ಮಗಳಾದರೇನು" ಕಸ್ತೂರಿ ಕಂಠದಲ್ಲಿ ಕಸ್ತೂರಿ ಶಂಕರ್ ಮನ ಗೆಲ್ಲುತ್ತಾರೆ. ಕೋಮಲ ಕಂಠದಲ್ಲಿ ಮೂಡಿ ಬರುವ ಹಾಡು ನಮ್ಮ ಧರ್ಮ ಹೇಗೆ ಇತರರನ್ನು ತನ್ನ ಮಡಿಲಲ್ಲಿ ಸಾಂತ್ವನವನ್ನು ನೀಡಿ ತಮ್ಮ ಮನದಲ್ಲಿ ಕೂರಿಸಿಕೊಳ್ಳುತ್ತಾರೆ ಎನ್ನುವ ಸಂದೇಶ ಕೊಡುತ್ತದೆ. ಜೊತೆಯಲ್ಲಿ ಕನ್ನಡ ನಾಡಿನ ಬಗ್ಗೆ ಪುಟ್ಟಣ್ಣ ಅವರ ಅಭಿಮಾನ "ಕನ್ನಡಾಂಬೆಯ ಮಡಿಲ ಮಗುವಾದೆ ನೀನು" ಎನ್ನುವ ಸಾಲುಗಳಲ್ಲಿ ನುಗ್ಗಿ ಬರುತ್ತದೆ. 

ಇಡಿ ಚಿತ್ರಕಥೆಯನ್ನು ಹಾಡಿನಲ್ಲಿ ಪೋಣಿಸಿ, ಐದೇ ನಿಮಿಷದಲ್ಲಿ ಇಡಿ ಚಿತ್ರದ ಸಾರವನ್ನು ಬಡಿಸಿರುವ "ರಂಗೇನಹಳ್ಳಿಯಾಗೆ"  ಹಾಡು ನೊಂದ ಮನ ಮತ್ತು ಉಲ್ಲಾಸದ ಮನ ಎರಡರ ಅದ್ಭುತ ಸಂಗಮವಾಗಿ ಮೂಡಿ ಬರುತ್ತದೆ. ಕಸ್ತೂರಿ ಶಂಕರ್ ಎತ್ತಿ ಕೊಡುವ ಹಾಡನ್ನು ವಾಣಿ ಜಯರಾಂ ಅಂಗ್ಲ ಶೈಲಿಯಲ್ಲಿ ಸುಲಲಿತವಾಗಿ ಹಾಡಿರುವುದು ಸೂಪರ್ ಎನ್ನಿಸುತ್ತದೆ. 

ಮತ್ತೊಮ್ಮೆ ಪೂರ್ಣ ಆಂಗ್ಲಶೈಲಿಯಲ್ಲಿಯೇ "ರಂಗೇನ ಹಳ್ಳಿಯಾಗೆ" ಹಾಡು ವಾಣಿ ಜಯರಾಂ ಅವರ ಸಿರಿಕಂಠ ಗಮನಸೆಳೆಯುತ್ತದೆ. ಅಂಬರೀಶ್ ಚಿಕ್ಕ ಚೊಕ್ಕ ಪಾತ್ರದಲ್ಲಿ ಬಂದು ಹೋಗುತ್ತಾರೆ. 

ಇಡಿ ಚಿತ್ರದಲ್ಲಿ ಎದ್ದು ನಿಲ್ಲುವುದು ಇಂಗ್ಲಿಷ್ ಹಾಡು "ಹಾಪ್ಯೆಸ್ಟ್ ಮೊಮೆಂಟ್... ಎವ್ರಿ ಇವೆಂಟ್ ಬಿಳಿ ಹೆಂಡ್ತಿ ಸಿಂಗ್ಸ್ ಇನ್ ಎಗ್ಸೈಟ್ಮೆಂಟ್" ಇದನ್ನು ಪಕ್ಕಾ ಪಾಶ್ಚಿಮಾತ್ಯ ಶೈಲಿಯಲ್ಲಿ ಹಾಡಿರುವುದು, ನೃತ್ಯ ಸಂಯೋಜಿಸಿರುವುದು, ಸಂಗೀತವನ್ನು ಆಯೋಜಿಸಿರುವುದು  ಪುಟ್ಟಣ್ಣ ಅವರ ಮಾಧ್ಯಮದ ಮೇಲಿನ ಹಿಡಿತವನ್ನು ತೋರುತ್ತದೆ. ವಾಣಿಜಯರಾಂ ಅಕ್ಷರಶಃ ಈ ಹಾಡಿನಲ್ಲಿ ನಮ್ಮ ಮನವನ್ನು ಕಲಕುತ್ತಾರೆ.  

ಇಡಿ ಚಿತ್ರವನ್ನು ಕಣ್ಣಲ್ಲಿ ಕಣ್ಣಿಟ್ಟು ಚಿತ್ರಿಸಿರುವ ಬಿ ಏನ್ ಹರಿದಾಸ್ ಪುಟ್ಟಣ್ಣ ಅವರ ಭಾವವನ್ನು ಹಾಗೆ ಬರೆದಿದ್ದಾರೆ ನೆರಳು ಬೆಳಕಿನಲ್ಲಿ. 

ಚುರುಕಾದ ಸಂಭಾಷಣೆ ಕೆಲವೊಮ್ಮೆ ನಗೆ ಉಕ್ಕಿಸಿದರೆ, ಹಾಗೆಯೇ ಕೆಲವು ಸಂಭಾಷಣೆಗಳು ಮನಕ್ಕೆ ಮುಟ್ಟುತ್ತವೆ. ಇದರ ರೂವಾರಿ ಹೆಚ್ ಎಸ್ ಸುಬ್ಬರಾವ್. 

ನಗೆ ಉಕ್ಕಿಸುವ ದೃಶ್ಯಗಳು 
  • ಉಮಾ ಶಿವಕುಮಾರ್ ಅವರ ಏರೋಪ್ಲೇನ್ ಮೇಲಿನ ಪ್ರೀತಿ 
  • ಎಲ್ಲಿ ಸ್ವಾಮೀ ನಾಲಿಗೆ ತೋರಿಸಿ.. ಆವಾಗ ಅಂಗನ್ದಿರಿ, ಇವಾಗ ಇಂಗನ್ದಿರಿ  ಅದು ಎಂಗೆ.. (ಹಳ್ಳಿಯ ಮನೆಯ ಉಸ್ತುವಾರಿ ಹೊತ್ತಿದ್ದವ ಬಿಳಿ ಹೆಂಡ್ತಿ ಜೊತೆಯಲ್ಲಿ ಚಿಕ್ಕ ದಣಿಗಳು ಬರುತ್ತಿದ್ದಾರೆಂದು ತಿಳಿದಾಗ.. ಹೀನ ಮಾನವಾಗಿ ಮಾತಾಡುವ.. ಅವರು ಬಂದ ಕೂಡಲೇ ಮಾತನ್ನೇ ತಿರುಗಿಸಿ ಹೋಗಲು ಭಟ್ಟನಾಗುವ ದೃಶ್ಯಕ್ಕೆ ಮನೆಯ ಆಳುಗಳು ಹೇಳುವ ಸಂಭಾಷಣೆ)
  • ಮನೆಯ ಆಳು "ಮಲ್ಲ" ತಮಾಷೆ ಮಾತುಗಳನ್ನು ಆಡುತ್ತಲೇ.. ಮನ ಮುಟ್ಟುವ ಸಂದೇಶಾತ್ಮಕ ಮಾತುಗಳನ್ನು ನಗೆ ಉಕ್ಕಿಸುತ್ತವೆ ಹಾಗೆಯೇ ಮನಕ್ಕೆ ತಾಕುತ್ತವೆ. 
ಅದ್ಭುತ ದೃಶ್ಯಗಳು 
  • ಮಗ ಬಿಳಿ ಹುಡುಗಿಯನ್ನು ಮದುವೆ ಮಾಡಿಕೊಂಡು ಬಂದಿದ್ದಾನೆ ಎಂದು ತಿಳಿದು ಆಕೆಯನ್ನು ದೆಹಲಿಯಿಂದ ಹಾಗೆಯೇ ಅಲ್ಪ ಸ್ವಲ್ಪ ದುಡ್ಡು ಕೊಟ್ಟು ಸಾಗು ಹಾಕಬೇಕೆಂಬ ನಿರ್ಧಾರದಿಂದ ಬರುವ ಸೀತಾರಂ.. ಆಕೆಯನ್ನು ನೋಡಿ, ಆಕೆ ಕನ್ನಡ ಭಾಷೆಯಲ್ಲಿ ಮಾತಾಡುವುದು, "ಮಾವ" ಎಂದು ಸಂಭೋಧಿಸುವುದನ್ನು ನೋಡಿ, ಹಣದ ಪೆಟ್ಟಿಗೆಯನ್ನು ಹಾಗೆ ಪಕ್ಕದಲ್ಲಿಟ್ಟುಕೊಂಡು ಆಶೀರ್ವಾದ ಮಾಡುತ್ತಾರೆ. ಸಂಸ್ಕಾರ ಇದ್ದಾಗ ಸಂಪತ್ತು ಮುಖ್ಯ ಅಲ್ಲಾ ಎನ್ನುವ ಅದ್ಭುತ ಸಂದೇಶ ಕಾಣ ಸಿಗುತ್ತದೆ. 
  • ಹಣದ ಪೆಟ್ಟಿಗೆಯನ್ನು ಸೀತಾರಾಮ್ ತೆಗೆಯಲು ಹೋದಾಗ.. ಎಲಿಸಾ ಮಾವ ಎಂದು ಬಗ್ಗಿ ನಮಸ್ಕರಿಸಿ ನಿಮ್ಮನ್ನು ನೋಡಿದಾಗ ಸ್ವಾಮೀ ವಿವೇಕಾನಂದರನ್ನು ನೋಡಿದ ಹಾಗೆ ಆಯಿತು ಎನ್ನುತ್ತಾಳೆ.
  • ಸೊಸೆಯನ್ನು ಮನೆಗೆ ಕರೆ ತಂದಾಗ, ಆರತಿ, ಲೀಲಾವತಿ, ಸೀತಾರಾಮ್ ಇವರುಗಳ ನಡುವೆ ನಡೆಯುವ ಭಾವೋದ್ವೇಗದ ತೊಳಲಾಟ  
  • ಗುರುಗಳೇ ನನಗೆ ವೇದ, ಉಪನಿಷತ್ತು ಇವುಗಳ ಬಗ್ಗೆ ಹೇಳಿರಿ ಎಂದು ಎಲಿಸಾ ಕೇಳಿಕೊಂಡಾಗ ಉದಯಕುಮಾರ್ ಮುಖದಲ್ಲಿ ತೋರುವ ಅಭಿನಯ, ಆನಂದಭಾಷ್ಪದಿಂದ ತೋಯ್ದು ಹೋಗುತ್ತಾ... ಸಮಯ ಆದಗೆಲ್ಲಾ ಹೇಳಿ ಕೊಡುತ್ತೇನೆ ಎಂದಾಗ ಎಲಿಸಾಳ ಮೊಗದಲ್ಲಿ ತೋರುವ ಭಾವನೆಗಳು 
  • ಎರಡು ಆಯಾಮದಲ್ಲಿ ಬರುವ ಒಂದು ದೃಶ್ಯ, ಆರತಿಯನ್ನು ಬಹುವಾಗಿ ಮೆಚ್ಚಿಕೊಳ್ಳುವ ಎಲಿಸಾ ಅವಳನ್ನು ತನ್ನ ಗಂಡನ ಬಳಿ ಹೊಗಳುತ್ತಿದ್ದಾರೆ, ಅದೇ ದೃಶ್ಯದಲ್ಲಿ ಲೀಲಾವತಿ ಆರತಿಯನ್ನು ಎಲಿಸಾಳ ಜೊತೆಯಲ್ಲಿ ಓಡಾಡುವುದನ್ನು ಕಂಡು ತರಾಟೆಗೆ ತೆಗೆದುಕೊಳ್ಳುತ್ತಾಳೆ. ಒಂದು ಕಡೆ ಬರಿ ಸಂಭಾಷಣೆ ಕೇಳಿಸುತ್ತಾ.. ದೃಶ್ಯದಲ್ಲಿ ಆರತಿ ಲೀಲಾವತಿಯ ನಡುವೆ ಜುಗಳಬಂಧಿ.. ಒಂದು ಅತ್ಯುತ್ತಮ ದೃಶ್ಯ ಸಂಯೋಜನೆ. 
  • ಆರತಿ ತಮ್ಮಿಬ್ಬರ ನಡುವೆ ಅಡ್ಡ ಬರುತ್ತಿದ್ದಾರೆ ಎನ್ನುವ ತಪ್ಪು ಕಲ್ಪನೆಯಿಂದ ತನ್ನ ಹೆಂಡತಿಯ ಜೊತೆಯಲ್ಲಿ ಹಳ್ಳಿಗೆ ಬರುವ ನಾಯಕ, ತನ್ನ ಹೆಂಡತಿಯ ಮೇಲೆ ಮಮತೆ, ಪ್ರೀತಿ ತೋರಿಸುವ ದೃಶ್ಯವನ್ನು ಕ್ಯಾಮೆರಾದ ಚಲನೆಯ ಮೂಲಕ ತೋರಿರುವುದು ಇಷ್ಟವಾಗುತ್ತದೆ.. ದೂರ ದೂರ ಸಾಗುವ ಕ್ಯಾಮೆರ... ನಿಧಾನವಾಗಿ ಅವರಿಬ್ಬರ ಹತ್ತಿರಕ್ಕೆ ಬರುತ್ತದೆ. ಕೆಲ ಕಾರಣಗಳಿಂದ ಪ್ರೀತಿಯನ್ನು ವ್ಯಕ್ತ ಪಡಿಸಲಾಗದ ಸನ್ನಿವೇಶಗಳಿಂದ ನಿಧಾನವಾಗಿ ಹೊರಬಂದು ಗಂಡ ಹೆಂಡತಿಯ ಪ್ರೀತಿ ಬೆಸುಗೆಯಾಗುತ್ತಿದೆ ಎನ್ನುವ ಸಾಂಕೇತಿಕ ದೃಶ್ಯ ಸಂಯೋಜನೆ ಇಷ್ಟವಾಗುತ್ತದೆ.
  • ನಾಯಕ, ಆರತಿ ತನ್ನ ಮೇಲೆ ಸೇಡು ತೀರಿಸಿಕೊಳ್ಳಲು ತನ್ನ ಹೆಂಡತಿಯ ಜೊತೆಯಲ್ಲಿ ಸ್ನೇಹ ಬೆಳೆಸುತ್ತಿದ್ದಾಳೆ ಎನ್ನುವ ತಪ್ಪು ಕಲ್ಪನೆಯಿಂದ.. ಅವಳ ಮೇಲೆ ಹೆರುವ ಆರೋಪಗಳಿಗೆಲ್ಲಾ ಆರತಿ ಕೊಡುವುದು ಒಂದೇ ಉತ್ತರ "ನಂದು ತಪ್ಪೇ ಗೋಪಿ". ಕೆಲವೊಮ್ಮೆಎಲ್ಲಾ ಸಮಸ್ಯೆಗಳಿಗೂ ಒಂದೇ ಪರಿಹಾರ ಇರುತ್ತದೆ.. ಅಥವಾ ಎಲ್ಲಾ ಪರಿಹಾರಗಳಿಗೂ ಅನೇಕ ಸಮಸ್ಯೆಗಳ ಸಂಗಮ ಇರುತ್ತದೆ ಎನ್ನುವಂಥಹ ಉತ್ತಮ ಸಂಭಾಷಣೆ ಈ ದೃಶ್ಯದಲ್ಲಿದೆ. 
  • ನಿಜ ಸ್ಥಿತಿ ಅರಿವಾದಾಗ ಎಲಿಸಾ ಆರತಿಯ ಹತ್ತಿರ ಬಂದು "ತಂದ ಬೇರೊಂದು ಹೆಣ್ಣಾ, ಮದುವೆನಾ ನೋಡಿ ರಂಗಿ ಮನದಾಗೆ ದುಖಃ ನುಂಗಿ" ಎನ್ನುತ್ತಾ ಕಣ್ಣೀರಾಗಿ.. "ಆಮ್ ಸರಿ" ಎಂದು ಓಡಿ ಹೋಗುತ್ತಾಳೆ.. ಸೂಪರ್ ದೃಶ್ಯ ಕಲ್ಪನೆ.,.. ಆದ್ರೆ ರೀತಿಯಲ್ಲಿ ಎಲಿಸಾ ಹೊರತು ನಿಂತಾಗ ಆರತಿ "ಹಸ್ಬೆಂಡ್, ಮಾವ, ಅತ್ತೆ ಶಾರದ ಎವ್ರಿ ಒನ್ ಮೇಕ್ ಮಿ ಸ್ಮೈಲ್" ಎಂದು ಹೇಳುತ್ತಾ ಕಣ್ಣೀರಾಗುತ್ತಾರೆ.. ದೊಡ್ಡ ದೊಡ್ಡ ಭಾಷಣದ ಮಾತುಗಳು ಬರಬಹುದಾದ ದೃಶ್ಯವನ್ನು ಚುಟುಕು ಮಾತುಗಳಿಂದ ಅಲಂಕರಿಸಿ ಭಾವನಾತ್ಮಕ ದೃಶ್ಯವನ್ನಾಗಿಮಾಡಿದ್ದಾರೆ . ಹಾಟ್ಸ್ ಆಫ್ ಟು ಪುಟ್ಟಣ್ಣ ಮತ್ತು ಸಂಭಾಷಣಕಾರ ಎಚ್ ವಿ ಸುಬ್ಬರಾವ್. 

ಪ್ರಾಯಶಃ ಮೊತ್ತ ಮೊದಲ ಬಾರಿಗೆ ಆರತಿಯವರ ಚಿತ್ರದಲ್ಲಿ ಇನ್ನೊಂದು ಹೆಣ್ಣು ಪಾತ್ರ ಅವರನ್ನು ಹಿಂದಕ್ಕೆ ಹಾಕಿರುವುದು. ಮಾರ್ಗರೆಟ್ ಥಾಮ್ಸನ್ ಎನ್ನುವ ಅಮೇರಿಕಾದ ಕಲಾವಿದೆ ಇಡಿ ಚಿತ್ರವನ್ನು ಆವರಿಸಿಬಿಟ್ಟಿದ್ದಾರೆ.  ಕನ್ನಡದಲ್ಲಿಯೇ ನಿಧಾನವಾಗಿ ಮಾತಾಡುತ್ತಾ, ಭಾವಾಭಿನಯ, ಕಣ್ಣಿನಲ್ಲಿಯೇ ಭಾವವನ್ನು ಹೊರಗೆಡುಹುವುದು ಇಷ್ಟವಾಗುತ್ತದೆ. ರಂಗೇನ ಹಳ್ಳಿಯಾಗೆ ಹಾಡಿನಲ್ಲಿ ಪಕ್ಕ ಹಳ್ಳಿ ಕುಣಿತ ಕುಣಿವ ಇವರು, ಹ್ಯಾಪಿಯೇಸ್ಟ್ ಮೊಮೆಂಟ್ ಹಾಡಿನಲ್ಲಿ ಪಾಶ್ಚಾತ್ಯ ಮತ್ತು ನಮ್ಮ ದೇಶದ ಎರಡು ತರಹದ ನೃತ್ಯ ಮಾಡುತ್ತಾ ಹಾಡಿರುವುದು ಸೂಪರ್ ಎನ್ನಿಸುತ್ತದೆ. ಜೊತೆಯಲ್ಲಿಯೇ ಮುಖ ಭಾವ ಬೇಕಾದ ದೃಶ್ಯಗಳಲ್ಲಿ ಮಾತ್ರ ಅವರ ಮುಖವನ್ನು ಹತ್ತಿರದಿಂದ ತೋರಿಸಿ, ತುಟಿ ಚಾಲನೆಗೆ ಸರಿಯಾದ ಸಂಭಾಷಣೆಗಳನ್ನು ಕೊಟ್ಟು.. ಉದ್ದುದ್ದ ಮಾತುಗಳಿಗೆ ದೂರದಿಂದ ದೃಶ್ಯವನ್ನು ಚಿತ್ರಿಕರಿಸಿರುವುದು ಜಾಣ್ಮೆಯ ನಡೆಯಾಗಿದೆ. ಮಾತುಗಳಿಗೆ.. ಹಾಡುಗಳಿಗೆ  ಸರಿಯಾದ ತುಟಿ ಚಾಲನೆ ನೀಡಿರುವ ಈ ಕಲಾವಿದೆಗೆ ಸಹಸ್ರ ಅಭಿನಂದನೆಗಳು. "ಅತ್ತೆ ನಿಮಗೆ ಬಾಯ್ ಬೇಬಿ ಬೇಕೋ ಗರ್ಲ್ ಬೇಬಿ ಬೇಕೋ... ನಾ ಬೇಬಿ ಕೊಟ್ಟರೆ ನನ್ನ ಮೇಲಿನ ಕೋಪ ಒಂಟೋಯ್ತದೆ ಅಲ್ಲವಾ ಅತ್ತೆ" ಅತ್ತ್ಯುತ್ತಮ ದೃಶ್ಯ ಮತ್ತು ಸಂಭಾಷಣೆ. 

ಆರತಿ ಈ ಕಲಾವಿದೆಯ ಬಗ್ಗೆ ಏನು ಹೇಳಲಿ.. ಇವರು ನೀರಿನ ತರಹ ಯಾವ ಪಾತ್ರ ಕೊಟ್ಟರೂ ಅದಕ್ಕೆ ಪ್ರವೇಶ ಮಾಡಿಯೇ ಬಿಡುತ್ತಾರೆ.. ಇಡಿ ಚಿತ್ರದಲ್ಲಿ ತಮ್ಮ ಹತಾಶೆ, ಪ್ರೀತಿ, ಪ್ರೇಮ, ನೋವು, ನಲಿವು, ಸಂತಸ ಎಲ್ಲವನ್ನು ಅದುಮಿಟ್ಟುಕೊಂಡು ಹದವಾಗಿ ಕೊಡುವ ಅಭಿನಯ ಇಷ್ಟವಾಗುತ್ತದೆ. ಅತ್ತೆ ಮಾವನ ಮನೆಯಲ್ಲದ್ದಿದ್ದರೂ ಅವರನ್ನು ಅತ್ತೆ ಮಾವ ಎಂದು ಕರೆಯುತ್ತಾ ಅಕ್ಷರಶಃ ಆ ಮನೆಯಲ್ಲಿಯೇ ಕಳೆಯುವ, ಹಾಗೆಯೇ ತನ್ನ ಅಪ್ಪ ಅಮ್ಮನ ಗೊಂದಲಗಳು, ನೋವುಗಳು ಇವಕ್ಕೆ ತಕ್ಕ ಉತ್ತರ ಕೊಡುತ್ತಾ ಎರಡನ್ನು ಸಂಭಾಳಿಸುವಂಥಹ ಅಭಿನಯ ನೀಡಿ ಗೆದ್ದಿದ್ದಾರೆ. ಎಲಿಸಾಳನ್ನು ತನ್ನ ಅತ್ತೆ ಮಾವನ ಮನದಲ್ಲಿ ಭದ್ರವಾಗಿ ಕೂರಿಸುವ ಅವರ ಪ್ರಯತ್ನ ಮತ್ತು ಅದರಲ್ಲಿ ಯಶಸ್ವೀ ಆಗುವ ಅಭಿನಯ ಗಮನ ಸೆಳೆಯುತ್ತದೆ. ಪ್ರೀತಿ ತ್ಯಾಗ ಮಮತೆ ಎಲ್ಲವನ್ನು ಹದವಾದ ಪಾಕದಲ್ಲಿ ಬೆರೆಸಿ ಅಭಿನಯದ ಮೂಲಕ ನಮಗೆ ಹಂಚಿದ್ದಾರೆ. ಆರತಿ ನಿಮಗೆ ಒಂದು ಸಲಾಂ. 

ಬೇಡದ ಸೊಸೆಯನ್ನು ನೋಡಿಕೊಳ್ಳುವ ಬೇಡ ಕೆಲಸವನ್ನು ಸಿಟ್ಟು ಸೆಡವುಗಳಲ್ಲಿ ತೋರಿಸುವ ಲೀಲಾವತಿ, ತನ್ನ ಆಂಗ್ಲ ಸೊಸೆ ತುಳಸಿ ಕಟ್ಟೆಯನ್ನು ಸುತ್ತುವುದನ್ನು ಕಂಡು ಅಭಿಮಾನ ಉಕ್ಕಿದರೂ, ಅತ್ತೆ ಎನ್ನುವ ಅಹಂ ಅಡ್ಡಿ ಬರುವ ಅಭಿನಯ, ತನ್ನ ಸೊಸೆ ಗರ್ಭಿಣಿ ಎಂದು ಗೊತ್ತಾದಾಗ ತಡೆದು ತಡೆದು ಬಂದು ಪ್ರೀತಿ ವ್ಯಕ್ತ ಪಡಿಸುವ ರೀತಿ.. ಸೂಪರ್.. ಲೀಲಾವತಿ ಇಲ್ಲಿ ಎಂದಿನಂತೆ ಕಲಾವತಿಯಾಗಿ ಬಿಟ್ಟಿದ್ದಾರೆ. 

ಮೃದು ಮಾತು, ಮೃದು ಅಭಿನಯ, ಸರಳ ವ್ಯಕ್ತಿತ್ವ ಇದರ ಸಮಾಗಮ ಸೀತಾರಾಮ್. ಸೊಸೆಯನ್ನು ಕರೆದು ತರುವ ಇವರು ಅವಳ ಗುಣಕ್ಕೆ ಮಾರು ಹೋಗಿ ತನ್ನ ಸ್ನೇಹಿತನಿಗೆ ಕೊಟ್ಟ ಮಾತನ್ನು ಮುರಿಯುತ್ತಾರೆ. ಆದರೆ ಅದಕ್ಕೆ ಅವರು ಕೊಡುವ ಕಾರಣ "ದುಡ್ಡು ಕೊಟ್ಟು ಅವಳ ಕಾಲಿಗೆ ಬಿದ್ದು ನನ್ನ ಮಗನ ಜೀವನದಿಂದ ಹೊರಗೆ ಕಲಿಸಬೇಕು ಎಂದು ಹೋದೆ.. ಅವಳ ಗುಣ ನಡತೆಯನ್ನು ನೋಡಿ.. ನಮ್ಮ ದೇಶದ ಸಂಸ್ಕೃತಿ ಗುಣವನ್ನು ಆದರಿಸುತ್ತದೆಯೇ ಹೊರತು ಹಣವನ್ನಲ್ಲ ಎನ್ನುವಂಥಹ ತರ್ಕ ಬದ್ಧ ಮಾತುಗಳನ್ನು ಆಡುವಾಗ ಅವರ ತೊಳಲಾಟ ಇಷ್ಟವಾಗುತ್ತದೆ. 

ವ್ಯಂಗ್ಯ, ಕುಹಕ, ಚುಚ್ಚುವ ಮಾತುಗಳು, ಜೊತೆಯಲ್ಲಿಯೇ ಸ್ನೇಹಿತನ ಮೇಲಿನ ಅಭಿಮಾನ ಇವುಗಳ ಮಿಲನ ಲೋಕನಾಥ್ ಅವರ ಅಭಿನಯ. ಮಗಳ ಮೇಲಿನ ವ್ಯಾಮೋಹ, ಅವಳ ಬಾಳಿಗೆ ಫ್ರೇಮ್ ಹಾಕಿಕೊಡಬೇಕು ಎನ್ನುವ ತವಕ ಎಲ್ಲ ದೃಶ್ಯಗಳಲ್ಲಿ ಇಷ್ಟವಾಗುತ್ತಾರೆ. ಅವರಿಗೆ ಸರಿಸಾಟಿಯಾಗಿ ಉಮ ಶಿವಕುಮಾರ್ ಅಭಿನಯ. 

ಇವರ ಜೊತೆಯಲ್ಲಿ ಬರುವ ದಿನೇಶ್ ಪುಟ್ಟ ಪಾತ್ರದಲ್ಲಿ ಮಿನುಗಿ ಹೋಗುತ್ತಾರೆ, ಅಂಬರೀಶ್ ಹಾಡಿನಲ್ಲಿ ಬರುತ್ತಾರೆ. ಆದರೆ ಉದಯಕುಮಾರ್ ಶಾಸ್ತ್ರಿಗಳ ಪಾತ್ರದಲ್ಲಿ ಕಾಡುತ್ತಾರೆ..

ಪುಟ್ಟಣ್ಣ ಕಣಗಾಲ್ ಅವರಿಗೆ ಒಂದು ಅದ್ಭುತ ಶಕ್ತಿ ಇತ್ತು, ಪಾತ್ರಕ್ಕೆ ತಕ್ಕ ಕಲಾವಿದರು. ಆ ಪಾತ್ರದ ಅಭಿನಯ ನೋಡಿದ ಮೇಲೆ ಅರೆ ಇವರು ಈ ಪಾತ್ರ ಮಾಡಲೆಂದೇ ಜನಿಸಿದ್ದಾರೆನೋ ಅನ್ನಿಸುವಷ್ಟು ಸಹಜವಾಗಿರುತ್ತೆ. ಜೊತೆಯಲ್ಲಿಯೇ ಒಂದು ಗೆರೆಯನ್ನು ಉದ್ದ ಮಾಡಬೇಕೆಂದು ಅಂದುಕೊಂಡಾಗ ಆ ಗೆರೆಯನ್ನು ಅಳಿಸದೆ ಪಕ್ಕದಲ್ಲಿಯೇ ಇನ್ನೊಂದು ಚಿಕ್ಕ ಗೆರೆಯನ್ನು ಎಳೆಯುವ ಅತ್ಯುತ್ತಮ ಜಾಣ್ಮೆ ಅವರಲ್ಲಿ ಇತ್ತು.  ಇಲ್ಲಿ ನಾಯಕನ ಪಾತ್ರ ಮುಖ್ಯ ಆದರೆ ಅದು ಕಥೆಗೆ ತಿರುವು ಕೊಡುವಲ್ಲಿ ಮಾತ್ರ.. ಅದಕ್ಕೆಂದೇ ಹೊಸ ಪರಿಚಯವಾದ ಅನಿಲ್ ಕುಮಾರ್ ಎನ್ನುವ ನಟನನ್ನು ಹುಡುಕಿ ತಂದರು. ಕಥೆಗೆ ಬೇಕಾದಂಥಹ ಅಭಿನಯ ಕೊಟ್ಟಿದ್ದಾರೆ.. ಆದರೆ ಅವರ ಮುಂದೆ ಉದ್ದವಾಗಿ ನಿಲ್ಲುವುದು ಬಿಳಿ ಹೆಂಡ್ತಿ ಪಾತ್ರಧಾರಿ.  ಇದು ನಿರ್ದೇಶಕನ ಚಾತುರ್ಯ. 

ಚಿತ್ರದ ಬಹುತೇಕ ಭಾಗ ಸ್ಟುಡಿಯೋ ಒಳಗೆ ನಡೆದರೂ ಪುಟ್ಟಣ್ಣ ಅವರ ಸುಂದರ ತಾಣಗಳ ಹುಡುಕಾಟ ಮೇಲುಕೋಟೆ, ತೊಣ್ಣುರ್ ಕೆರೆ, ದೊಡ್ಡ ಆಳದ ಮರ ಇವುಗಳ ಸುತ್ತಮುತ್ತಲಿನ ವಿಹಂಗಮ ದೃಶ್ಯಗಳನ್ನು ಕಣ್ಣ ಮುಂದೆ ಬಿಡಿಸಿದ್ದಾರೆ.  

ಮನದ ಕಡಲಲ್ಲಿ ಬರುವ ಅಸಮಾಧಾನದ ತರಂಗಗಳನ್ನು ಜೋಪಾನವಾಗಿ ತಡೆದು ಅದನ್ನು ಸರಿಯಾಗಿ ಬಳಕೆ ಮಾಡಿ ಅದನ್ನು ಏರಿ ಸಾಗಿ ನಮ್ಮ ಸಮಾಧಾನ ಎನ್ನುವ ಗುರಿಯನ್ನು, ಸಂಬಂಧ ಎನ್ನುವ ಗುಡಿಯನ್ನು ಮುಟ್ಟಲೇಬೇಕು ಎನ್ನುವ ಸುಂದರ ಸಂದೇಶವನ್ನು ಹೊತ್ತು ತಂದ  ಬಿಳಿ ಹೆಂಡ್ತಿ ಚಿತ್ರ ಪುಟ್ಟಣ್ಣ ಕಣಗಾಲ್ ಅವರ ಬತ್ತಳಿಕೆಯಿಂದ ಹೊರ ಬಂದ ಇನ್ನೊಂದು ಚಿತ್ರ ರತ್ನ. 

ಗುರುಗಳೇ ಸಲಾಂ ನಿಮಗೆ!!!

Friday, December 19, 2014

ಕಥೆಗಳ ಸಂಗಮ ಹಾಗೆಯೇ ಭಾವ ಸಂಗಮ ಕೂಡ - ಕಥಾಸಂಗಮ (1976)

ಉತ್ಸಾಹದ ಚಿಲುಮೆಯಾಗಿದ್ದಾಗ ಕಣ್ಣಿಗೆ ಕಾಣುವ ಚಿಕ್ಕ ಚಿಕ್ಕ ರತ್ನಗಳು ಮುತ್ತುಗಳಾಗುತ್ತವೆ. ಈ ವಾಕ್ಯದ ಸತ್ಯದರ್ಶನ ನಮಗೆ ಮಾಡಿಸಿದ್ದು ಪುಟ್ಟಣ್ಣ ಅವರ ಕಥಾಸಂಗಮ ಚಿತ್ರ.  ಲೇಖಕರೆ ಹೇಳುವಂತೆ ನನ್ನ ಸಣ್ಣ ಕಥೆಯನ್ನು ಆರಿಸಿ ಚಿತ್ರ ಮಾಡಿದ್ದಾರೆ. ಅದನ್ನು ಬೆಳ್ಳಿತೆರೆಯ ಮೇಲೆ ಹೇಗೆ ತರುತ್ತಾರೆ ಎನ್ನುವ ಕುತೂಹಲ ನನಗೂ ಇದೆ ಎಂದು,

ಪುಟ್ಟಣ್ಣ ಅವರ ತಾಖತ್ ಇದ್ದದ್ದು ಮನಸ್ಸಿಗೆ ಹಿಡಿಸುವ ಕಥೆಗಳನ್ನು ಲೇಖನಗಳನ್ನು ಹುಡುಕುವುದು ಮತ್ತು ಅದು ಕಾಡಿದರೆ ಅದನ್ನು ಚಿತ್ರಕ್ಕೆ ಅಳವಡಿಸುವುದು.

ಇಂಥಹ ಒಂದು ಅಭೂತಪೂರ್ವ ಘಟನೆ ನಡೆದದ್ದು ೧೯೭೬ ಇಸವಿಯಲ್ಲಿ.  ಹೊರಜಗತ್ತಿಗೆ ಸಾಮಾನ್ಯ ಅನ್ನಿಸುವ ಚಿಕ್ಕ ಚಿಕ್ಕ ಕತೆಗಳನ್ನು ಹುಡುಕಿ ಆರಿಸಿ ಅದನ್ನು ಬೆಳ್ಳಿತೆರೆಯ ಮೇಲೆ ಉತ್ತು ಬಿತ್ತು ಬೆಳಗಿಸಿದ್ದು ಕಥಾಸಂಗಮ ಎನ್ನುವ ಒಂದು ಪುಷ್ಪಮಾಲಿಕೆಯಲ್ಲಿ.


ಸಾಮಾನ್ಯ ಪುಟ್ಟಣ್ಣ ಅವರ ಚಿತ್ರಗಳಲ್ಲಿ ಪಾತ್ರಗಳು, ಕಲಾವಿದರು ಕಾಡುತ್ತಾರೆ. ಆದರೆ ಇಲ್ಲಿ ಕಾಡುವುದು ಕಲಾವಿದರಾದರೂ.. ಅದರ ಗಾಢತೆಯಿಂದ ಕಾಡುವುದು ಆ ಕಲಾವಿದರು ನಿರ್ವಹಿಸಿದ ಪಾತ್ರಗಳು ಮತ್ತು ಅದರ ಪೋಷಣೆ.

ವರ್ಧಿನಿ ಆರ್ಟ್ಸ್ ಪಿಕ್ಕ್ಚರ್ಸ್ ಲಾಂಛನದಲ್ಲಿ ಸಿ ಎಸ್ ರಾಜ ಅವರ ನಿರ್ಮಾಣದಲ್ಲಿ ತಯಾರಾದ ಈ ಚಿತ್ರಕ್ಕೆ ಹಾಡುಗಳನ್ನು ಬರೆದದ್ದು ಪುಟ್ಟಣ್ಣ ಅವರ ಜೀವದ ಗೆಳೆಯ ವಿಜಯನಾರಸಿಂಹ.. ಸಂಗೀತ ಪ್ರಾಣ ಸ್ನೇಹಿತ ವಿಜಯಭಾಸ್ಕರ್. ಮೂರು ಹಾಡುಗಳಲ್ಲಿ  ಒಂದನ್ನು ಪಿ ಬಿ ಶ್ರೀನಿವಾಸ್ ಮತ್ತು ಉಳಿದ ಎರಡನ್ನು ಕಸ್ತೂರಿ ಶಂಕರ್ ತಮ್ಮ ಕೋಮಲ ಕಂಠದಲ್ಲಿ ಸೊಗಸಾಗಿ ಹಾಡಿದ್ದಾರೆ. ಕಪ್ಪು ಬಿಳುಪು ವರ್ಣದಲ್ಲಿ ಇಡಿ ಚಿತ್ರವನ್ನು ಸೆರೆಹಿಡಿದದ್ದು ಹರಿದಾಸ್.

ಮಾನವನ ವಿಭಿನ್ನ ಮುಖಗಳ, ಭಾವಗಳ, ಅಂತಃಕರಣ ಎಲ್ಲವನ್ನು ನವಿರಾದ ಬಟ್ಟೆಯ ಹಾಗೆ ತಮ್ಮ ಕಥೆಗಳಲ್ಲಿ ತುಂಬಿದ್ದನ್ನು ಅಷ್ಟೇ ಜೋಪಾನ ವಾಗಿ ಕಥೆಯ ಮತ್ತು ಲೇಖಕರ ಆಶಯಕ್ಕೆ ಭಂಗ ಬರದಂತೆ ಅಷ್ಟೇ ಸುಂದರಾದ ರಂಗವಲ್ಲಿ ಹಾಕಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿದವರು ಪುಟ್ಟಣ್ಣ ಕಣಗಾಲ್.

ಆರಂಭದಲ್ಲಿ ಲೇಖಕರನ್ನು ತೆರೆಯ ಮೇಲೆ ಬರುವಂತೆ ಮಾಡಿ, ಅವರ ಕಿರುಪರಿಚಯ ಮಾಡಿಕೊಟ್ಟು, ಅವರನ್ನು ಮಾತಾಡಲು ತೆರೆಯನ್ನು ಬಿಟ್ಟುಕೊಟ್ಟು ತಾವು ಲೇಖಕರನ್ನು ಎಷ್ಟು ಆದರಿಸುತ್ತಿದ್ದರು ಎನ್ನುವುದನ್ನು ಸೂಕ್ಷವಾಗಿ ತೋರಿದ್ದಾರೆ. ಅದಕ್ಕಿಂತ ಕೊಂಚ ಮೊದಲು ಕನ್ನಡ ಸಾಹಿತ್ಯ ಭಂಡಾರವನ್ನು ಪರಿಚಯಿಸುತ್ತಾ ಅನೇಕಾನೇಕ ಲೇಖಕ/ಕಿಯರನ್ನು ಅವರ ಭಾವಚಿತ್ರಗಳ ಮೂಲಕ ತೋರುವುದು ಒಂದು ವಿಭಿನ್ನ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

ಶ್ರೀ ಗಿರೆಡ್ಡಿ ಗೋವಿಂದರಾಜು ಅವರ "ಹಂಗು" ಎನ್ನುವ ಪುಟ್ಟ ಕಥೆಯನ್ನು ಪರಿಣಾಮಕಾರಿಯಾಗಿ ಮೂಡಿಸಲು ಪುಟ್ಟಣ್ಣ ಅವರಿಗೆ ಕೈ ಜೋಡಿಸಿರುವುದು ಜಿ ಕೆ ಗೋವಿಂದರಾವ್, ಲೋಕನಾಥ್.

ತನ್ನ ಸ್ವಾರ್ಥಕ್ಕೆ, ತನಗೆ ಬೇಕಾದ ಕೆಲಸ ಮಾಡಿಸಿಕೊಳ್ಳಲು ಪ್ರೊಫೆಸರ್ ಅವರನ್ನು ಬಳಸಿಕೊಳ್ಳಲು ಹೋರಾಡುವ/ಕಾಡಿಸುವ ಪಾತ್ರದಲ್ಲಿ ಲೋಕನಾಥ್ ಗಮನ ಸೆಳೆಯುತ್ತಾರೆ. ರಾಗವಾಗಿ ಮಾತಾಡುತ್ತ, ಧ್ವನಿಯನ್ನು ಕೇಳಿದರೆ ಸಿಟ್ಟು ಬರುವಂತೆ ಮೈ ಕೈ ಪರಚಿಕೊಳ್ಳುವಂತೆ ಮಾಡಬಲ್ಲ ಪಾತ್ರವನ್ನು ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಇಲ್ಲಿ ಗೆಲ್ಲುವುದು ಅವರ ಪಾತ್ರವೇ ಆದರೂ ಆ ಪಾತ್ರದ ಸುತ್ತಲೂ ನಿಲ್ಲುವ ಇತರ ಪಾತ್ರಗಳು ಗಮನಾರ್ಹ ಕೊಡುಗೆ ನೀಡಿದ್ದಾವೆ.

ಒಣಗಿ ಹೋದ ಮರದ ಹಿನ್ನೆಲೆಯಲ್ಲಿ ನಿಂತ ಅಪ್ಪ, ಲೋಹದ ಬಲೆಯ ಹಿಂದೆ ನಿಂತ ತನ್ನ ತಂಗಿ, ಖಾಯಿಲೆ ಇಂದ ನರಳುತ್ತಿರುವ ಮಗು, ಔಷದಿ ತರಲು ಬೇಕಾಗುವ ಹಣಕ್ಕೆ ಪಕ್ಕದ ಮನೆಯಿಂದ ಸಾಲ ತರುವೆ ಎನ್ನುವ ಮಡದಿ, ಇಡಿ ಸನ್ನಿವೇಶಕ್ಕೆ ಯಜಮಾನರಾಗುವ ಗೋವಿಂದರಾವ್ ಗಮನ ಸೆಳೆಯುತ್ತಾರೆ. ತನ್ನ ಧ್ಯೇಯ ಒಂದು ಕಡೆ, ಸಂಸಾರದ ಚಿಕ್ಕ ಪುಟ್ಟ ಸಮಸ್ಯೆಗಳನ್ನು ಬಗೆಹರಿಸಬೇಕಾದರೆ ತಾನು ನಂಬಿರುವ ಸಿದ್ಧಾಂತಗಳನ್ನು ಗಾಳಿಗೆ ತೂರಿಬಿಡಬೇಕಾದ ಧ್ವಂಧ್ವ ಇವುಗಳನ್ನು ಗುರುತರವಾಗಿ ಪ್ರದರ್ಶನ ಮಾಡಿದ್ದಾರೆ ತಮ್ಮ ಅಭಿನಯದ ಮೂಲಕ.

ಇಷ್ಟವಾಗುವ ದೃಶ್ಯ.. ಸಾಹುಕಾರ ತನ್ನ ಕೆಲಸ ಮಾಡಿಸಿಕೊಳ್ಳಲು ಪ್ರೊಫೆಸರ್ ಮನೆಗೆ ನುಗ್ಗಿ ಅವರಿಗೆ ಬೇಕಾದ ಅನುಕೂಲತೆ ಮಾಡಿಕೊಟ್ಟು ಹೋದ ಮೇಲೆ.. ಸುಮ್ಮನೆ ಯೋಚನೆ ಮಾಡುತ್ತಾ ಕೂರುವ ಪ್ರೊಫೆಸರ್ ತಲೆಯ ಮೇಲೆ ನೆರಳಿನಲ್ಲಿ ಎರಡು ಕೈಗಳು ಇವರನ್ನು ಆವರಿಸಿಕೊಳ್ಳುತ್ತಾ ಬರುವಂತೆ ತೋರುವ ದೃಶ್ಯ.

ಕಡೆಯ ದೃಶ್ಯದಲ್ಲಿ ಉತ್ತರ ಪತ್ರಿಕೆ ಅವರನ್ನು ಓಡಿಸಿಕೊಂಡು ಬರುವುದು, ಮತ್ತು ಸಾಹುಕಾರ ಹಿಂದೆ ಓಡಿ ಬರುತ್ತಾ, ಗಹಗಹಿಸಿ ನಗುತ್ತಾ ನನ್ನ ಹಂಗೇಕೆ ನಿಮಗೆ ಒಂದು ನಾಲ್ಕು ಮಾರ್ಕ್ಸ್ ಹಾಕಿಬಿಡಿ ಎನ್ನುವುದು.. ಭ್ರಷ್ಟಾಚಾರದ ವಿರೋಧಿಯಾದರೂ ಪರಿಸ್ಥಿತಿ ಆ ನಂಬಿಕೆಯನ್ನು ಹೇಗೆ ಬದಲಾಯಿಸಲು ಕಾಡುತ್ತಾ ಬರುತ್ತದೆ ಎನ್ನುವುದೇ ಇದರ ಕಥಾವಸ್ತು.
*******************
ಹಂಗು ಮಾನವನನ್ನು ಮುಲಾಜಿಗೆ ಸಿಕ್ಕಿಸಿ.. ಪರಿಸ್ಥಿತಿಯನ್ನು ಬಲೆಯಂತೆ ಹೆಣೆದು ಸಿಕ್ಕಿಸುವ ಪ್ರಯತ್ನವಾದರೆ.. ಶ್ರೀಮತಿ ವೀಣಾ ಅವರ "ಅತಿಥಿ" ಪರಿಸ್ಥಿತಿ ಅನುಕೂಲವಾಗಿದ್ದರೂ ತಾ ಅಂದುಕೊಂಡ ವಿಚಿತ್ರ ಆದರ್ಶಗಳು ಹೇಗೆ ಬದುಕಿನ ಸುಖವನ್ನು ಹಿಂಡಿ ಹಿಪ್ಪೆ ಮಾಡಿ ಮನಸ್ಸನ್ನು ಮುದುಡಿ ಹಾಕುತ್ತದೆ ಎಂಬುದನ್ನು ಸಾಂಕೇತಿಕವಾಗಿ ಕಥೆಯ ಮೂಲಕ ಹೇಳುತ್ತದೆ.

ರೂಪ, ಯೌವನ ಮನಷ್ಯನ್ನು ಗರ್ವಿ ಅಥವಾ ತಾ ಅಂದುಕೊಂಡಿದ್ದು ಸರಿ ಎನ್ನುವ ಒಂದು ಪೊಳ್ಳು ಪೊರೆಯನ್ನು ಸೃಷ್ಟಿಸಿರುತ್ತದೆ. ಅದರಲ್ಲಿಯೂ ಆ ಪೊರೆ ಹೆಣ್ಣಲ್ಲಿ ಇದ್ದರೆ, ಅದು ಇನ್ನು ಕಾಡುತ್ತದೆ. ಯೌವನ ಕಾಲದಲ್ಲಿ ಗಂಡಸರು ಎಂದರೆ ಹಾಗೆ ಹೀಗೆ ಎನ್ನುವ ಒಂದು  ಮಿಥ್ಯ ವಲಯವನ್ನು ಸೃಷ್ಟಿಸಿಕೊಂಡು ಜೇಡ ತಾ ಕಟ್ಟಿದ ಬಲೆಯೊಳಗೆ ಕೆಲವೊಮ್ಮೆ ತಾನೇ ಸಿಕ್ಕಿಕೊಂಡು ಹೊರಬರಲಾರದೆ ತವಕಿಸುವ ಹುಳುವಂತೆ ಆಗಿ ಬಿಡುತ್ತದೆ.

ನೋಡುವ ನೋಟ ಸರಿಯಾಗಿ ಇರಬೇಕು ಎನ್ನುವುದು ನಿಜವಾದರೂ, ಎಲ್ಲಿ ನೋಡುತ್ತಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ, ಈ ಮಾತನ್ನು ಪುಷ್ಠಿಕರಿಸುವ ಸಂಭಾಷಣೆ ಇಲ್ಲಿ ಕಾಣುತ್ತದೆ.
"ಪಶ್ಚಿಮ ದಿಕ್ಕಿನತ್ತ ಬಾಗಿಲು ತೆರೆದಿಟ್ಟುಕೊಂಡು ನೋಡಿದರೆ ಬರಿ ಸೂರ್ಯ ಮುಳುಗೋದು ಮಾತ್ರ ಕಾಣುತ್ತದೆ. ಪೂರ್ವ ದಿಕ್ಕಿನತ್ತ ನೋಡ್ರಿ ಗಂಡಸು ಏನು ಎಂದು ಅರ್ಥವಾಗುತ್ತದೆ"

ನಿರ್ಧಾರ ತೆಗೆದುಕೊಳ್ಳುವಾಗ.. ಕೂತಲ್ಲಿಯೇ ಕೂರೋಲ್ಲ, ನಿಂತಲ್ಲಿಯೇ ನಿಲ್ಲೋಲ್ಲ.. ಆದರೆ ಜಾಗಬದಲಾಯಿಸಿದಾಕ್ಷಣ ನಿರ್ಧಾರವೂ ಬದಲಾಗಲೇ ಬೇಕಿಲ್ಲ ಎನ್ನುವುದು ಈ ಸಂಭಾಷಣೆಯಲ್ಲಿ ಇಣುಕುತ್ತದೆ.

"ಜಾಗ ಬದಲಾಯಿಸಿದಾಗ ನಿರ್ಧಾರವೂ ಬದಲಾಯಿಸುತ್ತೀರಿ ಎಂದುಕೊಂಡೆ.. ಆದರೆ ಮತ್ತೆ ಅದೇ ಜಾಗದಲ್ಲಿ ಹೋಗಿ ಕೂತ್ರಿ"
ಒಂದು ಮಾತಲ್ಲಿಯೇ ಮುಗಿಸಬಹುದಾದ ದೃಶ್ಯವನ್ನು ಕಥಾನಾಯಕಿ ನಾಲ್ಕು ಕಲ್ಲಿನ ಬೆಂಚುಗಳಲ್ಲಿ ಕೆಲ ಕ್ಷಣ ಕೂತು ಎದ್ದು ಬರುವುದು ಮತ್ತು ಕಡೆಯಲ್ಲಿ ತನ್ನ ಹಳೆ ನಿರ್ಧಾರವೇ ಸರಿ ಎಂಬ ತೀರ್ಮಾನಕ್ಕೆ ಬರುವುದು ಈ ದೃಶ್ಯದ ಸಾರಾಂಶ. ದೃಶ್ಯ ಸಂಯೋಜನೆ ಇಷ್ಟವಾಗುತ್ತದೆ.

ಪ್ರೀತಿ ಪ್ರೇಮ ಅನುರಾಗ ಇವೆಲ್ಲ ಬದುಕಿಗೆ ಉತ್ಸಾಹ ತುಂಬುವ ಚೇತನಗಳು ಎನ್ನುವುದನ್ನು "ಕಾಳಿದಾಸನ ಕಾವ್ಯಲಹರಿಗೆ" ಹಾಡಿನಲ್ಲಿ ಪಿ ಬಿ ಶ್ರೀನಿವಾಸ್ ಪರಿಣಾಮಕಾರಿಯಾಗಿ ಹೇಳಿದ್ದಾರೆ.
ಗಂಡಿನ ಹಂಗಿಲ್ಲದೆ ನಾ ಬದುಕಿ ತೋರಿಸುತ್ತೇನೆ ಎನ್ನುವ ನಾಯಕಿಯ ಮಾತಿಗೆ ನಾಯಕ ಹೇಳುವ ಮಾತುಗಳು ಇಷ್ಟವಾಗುತ್ತವೆ.

"ನೀವು.. ಇದನ್ನು ಸಾಧಿಸಬಹುದು.. ಗೆಲ್ಲಲೂ ಬಹುದು, ಆದರೆ ಗಂಡು ಹೆಣ್ಣಿನ ಮಧುರ ಪ್ರೇಮದಲ್ಲಿ ಸುಪ್ತವಾದ ಒಂದು ಅವ್ಯಕ್ತ ಆನಂದವನ್ನು ಕಳೆದುಕೊಳ್ಳುತ್ತೀರಿ" ಸೂಪರ್ ಸಂಭಾಷಣೆ.

ಕಡೆಯಲ್ಲಿ.. "ಈ ಜೀವನಕ್ಕೆ ನಾ ಅತಿಥಿಯಾಗಿ ಬಂದವಳೇ" ಎನ್ನುವ ಮಾತು ನಿರ್ಧಾರಗಳನ್ನು ಕಾಲಕಾಲಕ್ಕೆ ಸರಿಯಾಗಿ ತೆಗೆದುಕೊಳ್ಳಬೇಕು ಇಲ್ಲವೇ ತುಕ್ಕು ಹಿಡಿದ ಕಬ್ಬಿಣದಂತಾಗುತ್ತದೆ ಎನ್ನುವ ಸಂದೇಶ ಹೇಳುತ್ತದೆ.

ಈ ಭಾಗದ ಚಿತ್ರದಲ್ಲಿ ಸರೋಜಾದೇವಿ ಮತ್ತು ಕಲ್ಯಾಣ್ ಕುಮಾರ್ ಅವರ ಜುಗಳಬಂಧಿ ಇಷ್ಟವಾಗುತ್ತದೆ, ಸೇರಿಗೆ ಸವ್ವಾ ಸೇರು ಎನ್ನುವಂತೆ ಇರುವ ಸಂಭಾಷಣೆಗಳು ಮನಕ್ಕೆ ತಾಕುತ್ತದೆ.

                                                         *******************

ಕಣ್ಣಿದ್ದು ಪರಿಸ್ಥಿತಿಗೆ ಬಲಿಪಶುವಾಗಿ ಹಂಗಿಗೆ ಬೀಳುವ ಕತೆಯಾದರೆ.. ಹೃದಯವಿದ್ದೂ ಪರಿಸ್ಥಿಯನ್ನು ಸರಿಯಾಗಿ ನೋಡದೆ ಅತಿಥಿಯಾದೇ ಎನ್ನುವ ನೋವಲ್ಲಿ ನಿಲ್ಲುವ ನಾಯಕಿ ಇನ್ನೊಂದು ಕತೆಯಾಗುತ್ತಾರೆ. 

ಶ್ರೀ ಈಶ್ವರ ಚಂದ್ರ ಅವರ "ಮುನಿತಾಯಿ" ಕತೆಯಲ್ಲಿ ಜೀವನದ ಆನಂದವನ್ನು ಅನುಭವಿಸಲು ಕೆಲವರಿಗೆ ಕಣ್ಣು ಬೇಕು ಕೆಲವರಿಗೆ ಕಣ್ಣು ಬೇಡ.. ಆದರೆ  ಹೃದಯ ವೈಶಾಲ್ಯತೆ ಬೇಕು ಎಂಬ ಮಾತನ್ನು ಹೇಳುತ್ತದೆ..

ಹುಟ್ಟು ಕುರುಡಿಯಾಗಿದ್ದರೂ ಮನದ ಕಣ್ಣುಗಳಿಂದ ಲೋಕವನ್ನು ನೋಡುವ ಕಥಾನಾಯಕಿ.. ತನ್ನೆಲ್ಲ ಕೆಲಸವನ್ನು ತಾನೇ ಮಾಡಿಕೊಳ್ಳುವಷ್ಟು ಶಕ್ತಳಾಗಿರುತ್ತಾಳೆ. ಹೃದಯವೈಶಾಲ್ಯವುಳ್ಳ ನಾಯಕ ಅವಳಿಗೆ ಬಾಳು ಕೊಡುತ್ತಾನೆ.

ಕಣ್ಣಿದ್ದು ಕುರುಡರು ಅನ್ನುವ ಮಾತಿನಂತೆ.. ಲೋಕವನ್ನು ಕಣ್ಣಿಗೆ ಕಾಣುವಂತೆ ನೋಡುವ ಕಾಮಾಲೆ ಕಣ್ಣಿನ ಕೆಲ ಮಂದಿ ಹೇಗೆ ಮನದ ಕೊಳವನ್ನು ರಾಡಿ ಮಾಡುತ್ತಾರೆ ಎನ್ನುವುದೇ ಕಥಾ ವಸ್ತು.

"ಓ ದ್ಯಾವ್ರೆ ನಿನ್ನ ಅಂದ ಚಂದವೇನೋ" ಈ ಹಾಡು ಎರಡು ಕಾರಣಕ್ಕೆ ಗಮನ ಸೆಳೆಯುತ್ತದೆ.
೧. ಕಣ್ಣು ಕಾಣದ ಹೆಣ್ಣು ತಾ ಕಂಡಿದ್ದೇನೆ ಎನ್ನುವಂತೆ ವರ್ಣಿಸುವ ಹಾಡು ಒಮ್ಮೆ ಬಂದರೆ.. ಇನ್ನೊಮ್ಮೆ ಕಾಣದ ದೇವರನ್ನು ಕಂಡಿದ್ದೇನೆ ಎನ್ನುವಂತೆ ಅವನಿಗೆ ಕೃತಜ್ಞತೆ ಸಲ್ಲಿಸುವ ರೀತಿಯಲ್ಲಿ ಇನ್ನೊಮ್ಮೆ ಬರುತ್ತದೆ
೨. ಕಸ್ತೂರಿ ಶಂಕರ್ ಅವರ ಮಧುರ ಧ್ವನಿ ಈ ಹಾಡನ್ನು ಇನ್ನಷ್ಟು ಮೇಲಕ್ಕೆ ಏರಿಸಿದೆ.

ನೋಡಬಾರದ ದೃಶ್ಯವನ್ನು ನೋಡುವಂತೆ ಮನಸ್ಸು ಪ್ರಚೋಧಿಸಿದಾಗ.. ಬೇಡ ಬೇಡ ಅನ್ನುತ್ತಲೇ ಕಣ್ಣಲ್ಲೇ ಭಾವನೆ ವ್ಯಕ್ತ ಪಡಿಸುವ ಉಮೇಶ್ ಈ ಚಿತ್ರದ ಮುಖ್ಯ ಪಾತ್ರ. ಬಹುಶಃ ನನಗೆ ಅನ್ನಿಸಿದಂತೆ ಒಂದು ಮಸಾಲೆ ದೃಶ್ಯವನ್ನು ಅಶ್ಲೀಲವಾಗಿ ಚಿತ್ರಿಸದೆ ಅದ್ಭುತವಾಗಿ ಕಣ್ಣಿನ ಭಾವದಲ್ಲಿಯೇ ಚಿತ್ರಿಸಿರುವುದು ಇದೆ ಮೊದಲು.. ಈ ದೃಶ್ಯ ಸಂಯೋಜನೆಗೆ ಪುಟ್ಟಣ್ಣ ಅವರಿಗೆ ಸಲಾಂ ಹೇಳಲೇ ಬೇಕು.
ಇದೆ ರೀತಿಯಲ್ಲಿ ರಜನಿಕಾಂತ್ ಕೂಡ ಹಾಗೆಯೇ ಅಭಿನಯಿಸಿದ್ದಾರೆ. ಮನಸ್ಸು ಒಮ್ಮೆ ಹಾಗೆ ಝಲ್ ಎನ್ನಿಸುತ್ತದೆ. ಅರೆ ಚಲನಚಿತ್ರಗಲ್ಲಿ ಅಶ್ಲೀಲ ಎನ್ನಿಸಬಹುದಾದ ದೃಶ್ಯಗಳನ್ನು ತನ್ನ ಕಸುಬುದಾರಿಕೆಯಿಂದ ಈ ಮಟ್ಟಕ್ಕೆ ಅದ್ಭುತವಾಗಿ ಚಿತ್ರಿಕರಿಸಬಹುದಾದರೆ ಅಶ್ಲೀಲತೆ ಎನ್ನುವುದೇ ಈ ಪ್ರಪಂಚದಲ್ಲಿ ದೃಶ್ಯ ಮಾಧ್ಯಮದಲ್ಲಿ ಇರಲಾರದು ಎನ್ನಿಸುತ್ತದೆ.

ಕಡೆಯಲ್ಲಿ ಕಥಾನಾಯಕ ಹೇಳುವ ಮಾತು "ಅಹಲ್ಯೆಯನ್ನು ತಪ್ಪು ದಾರಿಗೆ ಎಳೆದದ್ದು ದೇವೇಂದ್ರ ಅವನಿಗೆ ಶಾಪ ಕೊಟ್ಟರು ಗೌತಮರು ಅದು ಸರಿ... ಜೊತೆಯಲ್ಲಿ ತಪ್ಪೇ ಮಾಡಿರದ ಅಹಲ್ಯೆಗೂ ಶಾಪ ಕೊಟ್ಟರು.. ಆದರೆ ನಾ ಆ ತಪ್ಪು ಮಾಡೋಲ್ಲ. ನಿನಗೆ ಶಾಪ ಕೊಡೋಲ್ಲ.. ಬದಲಿಗೆ ತಪ್ಪು ಮಾಡಿದವನಿಗೆ ಶಿಕ್ಷೆ ಕೊಡುತ್ತೇನೆ" ಅದ್ಭುತ ಮಾತುಗಳು.

ಈ ಭಾಗದ ಚಿತ್ರ ಇಷ್ಟವಾಗೋದು..

  • ಕುರುಡಿ ಅಂದರೆ ಹೀಗೆ ಇರುತ್ತಾರೆ.. ಮತ್ತೆ ನಟಿ ಆರತಿ ಕುರುಡಿಯೇ ಎನ್ನುವಷ್ಟು ನೈಜತೆಯಿಂದ ಮುನಿತಾಯಿ ಪಾತ್ರದಲ್ಲಿ ಅಭಿನಯಿಸಿರುವ ಆರತಿ. 
  • ಕುರುಡಿಯನ್ನು ಗೋಳು ಹುಯ್ದು ಕೊಂಡು ಅವಳ ಪರಿಸ್ಥಿತಿಯನ್ನು ಬಂಡವಾಳ ಮಾಡಿಕೊಳ್ಳುವ ತಿಮ್ಮರಾಯಿ ಪಾತ್ರದಲ್ಲಿ ಎಂ ಎಸ್ ಉಮೇಶ್. ಬಹುಶಃ ತಿಮ್ಮರಾಯಿ ಪಾತ್ರ ಅವರ ಚಿತ್ರ ಜೀವನದ ಅತ್ಯುತ್ತಮ ಪಾತ್ರದಲ್ಲಿ ಮೊದಲಿಗೆ ನಿಲ್ಲುತ್ತದೆ 
  • ರಜನಿಕಾಂತ್ ಮೊದಲಬಾರಿಗೆ ತೆರೆಗೆ ಬಂದ ಈ ಚಿತ್ರದಲ್ಲಿ ಅವರ ಚಿಕ್ಕ ಸ್ಟೈಲ್ ಇಷ್ಟವಾಗುತ್ತದೆ.  
  • ಗಂಗಾಧರ್, ಸಂಪತ್ ಅವರ ಪಾತ್ರಗಳಿಗೆ ಅಚ್ಚುಕಟ್ಟಾಗಿ ಜೀವ ತುಂಬಿದ್ದಾರೆ. 
ಕಣ್ಣಿದ್ದು ಹಂಗಿಗೆ ಸಿಕ್ಕಿ ಹಾಕಿಕೊಳ್ಳುವರು ಹಂಗು ಕಥಾವಸ್ತುವಲ್ಲಿ ಸಿಕ್ಕರೆ,  ಕಣ್ಣಿದ್ದು ಹೃದಯವಿಲ್ಲದೆ ಜೀವನದಲ್ಲಿ ನೋವು ಅನುಭವಿಸುವರು "ಅತಿಥಿ" ಭಾಗದಲ್ಲಿ ಕಾಡುತ್ತಾರೆ, ಕಣ್ಣಿಲ್ಲದೆ ಇದ್ದರೂ ಮಾಡದ ತಪ್ಪಿಗೆ ಹೃದಯ ಕಣ್ಣಿರುವವವರ ಕ್ಷಮೆ ಸಿಗುವ ಸುಂದರ ನೋಟವನ್ನು "ಮುನಿತಾಯಿ" ಪ್ರಸಂಗದಲ್ಲಿ ಕಾಣುತ್ತೇವೆ. 


ಇಡಿ ಚಿತ್ರ ನಿಂತಿರುವುದು ಸಂಭಾಷಣೆಯ ಮೇಲೆ.. ಅದರ ಕೀರ್ತಿ ಸಂಭಾಷಣಕಾರ ಯೋಗಾನರಸಿಂಹ ಮೂರ್ತಿ ಅವರಿಗೆ ಸಲ್ಲುತ್ತದೆ.

ಒಂದು ಕಥೆಯನ್ನು ಹಲವು ಬಗೆಯಲ್ಲಿ ಹೇಳುವುದು ನೋಡಿದ್ದೇವೆ.. ಆದರೆ ಇಲ್ಲಿ ವಿವಿಧ ಕಥೆಯನ್ನು ಸರಿಯಾಗಿ ಹೊಂದಿಸಿ, ಮತ್ತು ಅದನ್ನು ಅನುಕ್ರಮವಾಗಿ ಜೋಡಿಸಿ ಮುತ್ತಿನ ಸರ ಪೋಣಿಸಿರುವ ರೂವಾರಿ "ಪುಟ್ಟಣ್ಣ" ಅವರಿಗೆ ಮನದಲ್ಲಿ ವಂದಿಸುತ್ತದೆ ತ್ರಿವೇಣಿ ಕತೆಯ ಸಮಾಗಮ ಅದುವೇ ಕಥಾಸಂಗಮ!