ಚಿತ್ರದ ಕೊನೆಯಲ್ಲಿ ಮುದ್ದಾದ ತಂಗಿ ಪಾತ್ರಧಾರಿ ಹೇಳುತ್ತದೆ "ಇದು ಒಂದು ಜೋಡಿ.. ಅದು ಒಂದು ಜೋಡಿ .. ಭಲೇ ಜೋಡಿ"
ನಿಜ.. ಈ ಚಿತ್ರ ಸುಂದರ ಕಥಾನಕ ಹೊಂದಿದ ಚಿತ್ರ..
ಇದರಲ್ಲಿ ರಾಜಕುಮಾರ್ ಪಳಗಿದ ನಟ ಅಂತ ನಾ ಹೇಳುತ್ತೇನೆ.. ಏಕೆಂದರೆ ಸತಿ ಶಕ್ತಿಯಲ್ಲಿ ಅವರ ಅಭಿನಯ ಅದ್ಭುತ.. ಇನ್ನೂ ಕೆಲವು ಚಿತ್ರಗಳಲ್ಲಿ ದ್ವಿಪಾತ್ರಾಭಿನಯ ಮಾಡಿದ್ದರೂ ಸತಿ ಶಕ್ತಿ ಒಂದು ಉನ್ನತ ಉದಾಹರಣೆ..
ರಮೇಶ್ ಪಾತ್ರ ಮೃದು.. ಸ್ವಲ್ಪ ಭಯಸ್ಥ.. ಸ್ವಲ್ಪ ಮುಗ್ಧತೆ...
ಸುರೇಶನ ಪಾತ್ರ ಚಾಲಾಕಿತನ, ಧೈರ್ಯಸ್ಥ.. ಏನಾಗುತ್ತೋ ನೋಡಿಬಿಡೋಣ ಅನ್ನುವ ಧೈರ್ಯ .. ಪರರಿಗೆ ಉಪಕಾರ ಮಾಡುವ ಧಾರಾಳತನ..
ಈ ರೀತಿಯ ಎರಡೂ ಪಾತ್ರಗಳನ್ನೂ ಒಂದರ ಪಾತ್ರ ಇನ್ನೊಂದರ ಮೇಲೆ ನೆರಳು ಬೀಳದಂತೆ ಅಭಿನಯಿಸಿದ್ದಾರೆ..
ದಿನೇಶ್ ಮತ್ತೆ ಖಳನಾಗಿ ಇಲ್ಲಿ ವಿಜೃಂಭಿಸಿದ್ದಾರೆ.. ಏ ರಮೇಶ, ಬಾರೋ ಸೈನ್ ಹಾಕೋ, ಎದ್ದೇಳೋ ಇನ್ನೂ ಮಲಗಿದ್ದೀಯ..ಅಂತ ಜಬರ್ದಸ್ತ್ ಆಗಿ ಕೂಗುವ ದೃಶ್ಯಗಳು ಸಾಕಷ್ಟಿವೆ.. ಅದರಲ್ಲಿ ದಿನೇಶ್ ಗೆದ್ದಿದ್ದಾರೆ..
ಅವರ ತಂದೆಯಾಗಿ ಬಾಲಕೃಷ್ಣ ಅರ್ಥಾತ್ ಬಾಲಣ್ಣ ಅವರಿಗೆ ತುಸು ಕಡಿಮೆ ಅವಕಾಶ.. ಆದರೂ ತಮ್ಮತನವನ್ನು ಬಿಡದೆ ತಮ್ಮ ಛಾಪು ಮೂಡಿಸಿದ್ದಾರೆ
ಬಿ ವಿ ರಾಧಾ ಎಂದಿನಂತೆ ಸಂತ್ರಸ್ತೆಯ ಪಾತ್ರ.. ಮೋಹಿನಿಯಾಗಿ ಕಾಡುವ ಕೆಲವು ದೃಶ್ಯಗಳು.. ಭಯ ಹುಟ್ಟಿಸುತ್ತದೆ. ಅವರು ಎರಡನೇ ಪಾತ್ರಧಾರಿಗೆ ನಾಯಕಿ
ಮುಖ್ಯ ನಾಯಕಿಯಾಗಿ ಭಾರತಿ.. ಆದರೆ ಅವರು ಸಿನೆಮಾ ಶುರುವಾಗಿ ಒಂದು ಘಂಟೆಯ ನಂತರ ಬರುತ್ತಾರೆ.. ಸೀಮಿತ ಅವಕಾಶದ ಪಾತ್ರ.. ಆದರೆ ಮುಗ್ಧ ಸೌಂದರ್ಯದಿಂದ ಗಮನಸೆಳೆಯುತ್ತಾರೆ
ಪಂಡರಿಬಾಯಿ ಸುರೇಶನ ತಾಯಿಯಾಗಿ ಮಮತೆಯನ್ನು ಧಾರೆಯೆರೆದಿದ್ದಾರೆ
ಮುಗ್ಧೆ ತಂಗಿಯಾಗಿ ಚುರುಕು ಮೆಣಸಿನಕಾಯಿ ಅಭಿನಯ ನೀಡಿದ್ದಾರೆ ಬೇಬಿ ಸುನೀತಾ
ನಾಗಪ್ಪ ಅವರ ಮೊದಲ ದೃಶ್ಯ ನೋಡಿ.. ಅರೆ ವಾಹ್.. ಎಷ್ಟು ಚೆನ್ನಾದ ಪಾತ್ರ.. ಹೀಗೂ ಸಾಧ್ಯವೇ ಅಂತ ಅನ್ನಿಸಿ.. ಮುಂದಿನ ದೃಶ್ಯ ನೋಡಿದಾಗ ಅವರ ವಿರಾಟ್ ನಿಜ ರೂಪ ಕಂಡೆ.. ಆಹಾ ಇದು ಸರಿ.. ಇದು ನಿಜವಾದ ನಾಗಪ್ಪ ಅನಿಸಿತು..
ಈ ಚಿತ್ರದ ನಿಜವಾದ ಹೈಲೈಟ್ ಎಂದರೆ.. ರಾಜಕುಮಾರ್ ಅವರ ಮೊದಲ ದೃಶ್ಯ..
ಎಚ್ಚಮನಾಯಕನ ಪಾತ್ರ ಅದ್ಭುತ.. ಉದ್ದುದ್ದದ ಸಂಭಾಷಣೆಯನ್ನು ನಿರರ್ಗಳವಾಗಿ ಹೇಳುತ್ತಾ, ಅದಕ್ಕೆ ಬೇಕಾದ ಪರಿಣಾಮಕಾರಿ ಧ್ವನಿ ಮತ್ತು ಭಾವಾಭಿನಯ ಕೊಡುವ ಸುಮಾರು ಹತ್ತು ನಿಮಿಷದ ನಾಟಕದಲ್ಲಿ ಅದ್ಭುತವಾಗಿದ್ದಾರೆ.. ಅದೊಂದು ಮತ್ತೆ ಮತ್ತೆ ನೋಡಬೇಕಾದ ದೃಶ್ಯ.. ಅವರ ಜೊತೆಯಲ್ಲಿ ಭಟ್ಟಿ ಮಹದೇವಪ್ಪ ತಿರುವೆಂಕಟನಾಗಿ ಸರಿಸಾಟಿ ಅಭಿನಯ ನೀಡಿದ್ದಾರೆ
ಉಳಿದಂತೆ ಪುಟ್ಟ ಪುಟ್ಟ ಪಾತ್ರದಲ್ಲಿ ಜೋಕರ್ ಶ್ಯಾಮ್, ಅಡಿಗೆ ಭತ್ತನಾಗಿ ರಾಘವನ್, ವಕೀಲನಾಗಿ ಶನಿ ಮಹದೇವಪ್ಪ, ವೈದ್ಯನಾಗಿ ಬಿ ಮಲ್ಲೇಶ್, ಒಂದು ಪುಟ್ಟ ಪಾತ್ರದಲ್ಲಿ ಕುಪ್ಪುರಾಜ್ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ .
ಜಾವರ್ ಸೀತಾರಾಮನ್ ಅವರ ಕತೆಯನ್ನು ಚಿತ್ರಕತೆ ಮತ್ತು ನಿದೇಶನದ ಹೊಣೆಯನ್ನು ಹೊತ್ತವರು ವೈ ಆರ್ ಸ್ವಾಮಿ.
ಸಂಭಾಷಣೆ ಚಿ ಉದಯಶಂಕರ್
ಹಾಡುಗಳು ಚಿ ಉದಯಶಂಕರ್ ಮತ್ತು ಆರ್ ಎನ್ ಜಯಗೋಪಾಲ್
ಗಾಯಕರಾಗಿ ಪಿ ಬಿ ಶ್ರೀನಿವಾಸ್, ಎಸ್ ಜಾನಕೀ, ಎಲ್ ಆರ್ ಈಶ್ವರಿ ಕಂಠ ದಾನ ಮಾಡಿದ್ದಾರೆ
ಆರ್ ರತ್ನ ಅವರ ಸುಮಧುರ ಸಂಗೀತವಿದೆ
ಛಾಯಾಗ್ರಹಣದಲ್ಲಿ ಯಾವಾಗಲೂ ಜಾದೂ ಮಾಡುವ ಆರ್ ಮಧುಸೂದನ್ ಇಲ್ಲಿ ಅವರ ಕೈಚಳಕ ಅದ್ಭುತವಾಗಿದೆ. ದ್ವಿಪಾತ್ರಗಳನ್ನು ಒಂದೇ ದೃಶ್ಯದಲ್ಲಿ ಮೂಡಿಸುವ ಅವರ ಜಾಣ್ಮೆ, ಪ್ರತಿಭೆಗೆ ಎಷ್ಟು ಚಪ್ಪಾಳೆ ಕೊಟ್ಟರೂ ಕಡಿಮೆಯೇ.. ಅಸಾಧ್ಯವನ್ನು ಸಾಧ್ಯ ಎಂದು ನಂಬಿಸುವ ಅವರ ಛಾಯಾಗ್ರಹಣದ ಪ್ರತಿಭೆ ಅದ್ಭುತ.
ರಾಜಕಮಲ್ ಆರ್ಟ್ಸ್ ಲಾಂಛನದಲ್ಲಿ ತಯಾರಾದ ಚಿತ್ರ ಮನಸ್ಸಿಗೆ ಮುದ ನೀಡುತ್ತದೆ.
No comments:
Post a Comment