Thursday, December 1, 2016

ಭಾರತ ಭೂಶಿರದಲ್ಲಿ ಪುಟ್ಟಣ್ಣ ಅವರ ಜನುಮದಿನ

"ಪುಟ್ಟಣ್ಣ ಸರ್ ನಿಮ್ಮ ಹತ್ತಿರ ಮಾತಾಡಬೇಕಿತ್ತು.. ೪೪೦ ಕ್ಷಣಗಳು ಸಿಗಬಹುದೇ.. "

"ಯಾರಪ್ಪ ನೀನು.. "

"ನಿಮ್ಮ ಕೋಟಿ ಕೋಟಿ ಅಭಿಮಾನಿಗಳಲ್ಲಿ ನಾನು ಒಬ್ಬ.. ಇಂದು ನಿಮ್ಮ ಜೊತೆ ಮಾತಾಡಬೇಕು ಅನ್ನಿಸ್ತಿದೆ.. "

"ಸರಿ.. ಬಾ ಇಲ್ಲೇ ಸ್ವಲ್ಪ ದೂರದಲ್ಲಿ ನಮ್ಮ ಊರಿನವರ ಬೊಂಡ ಅಂಗಡಿ ಇದೆ.. ಅಂಬಡೆ ಮತ್ತು ಮೆಣಸಿನ ಕಾಯಿ ಬಜ್ಜಿ ಚೆನ್ನಾಗಿ ಮಾಡ್ತಾರೆ.. "

ನನಗೆ ಬಾಯಲ್ಲಿ ನೀರು..

"ಸರಿ ಸರ್"

ಇಬ್ಬರೂ ನೆಡೆಯುತ್ತಾ ಹೋದೆವು... ಅಂಗಡಿ ಸಿಕ್ಕಿತು.. "ಏನಪ್ಪಾ.. ಬಿಸಿ ಬಿಸಿ ಅಂಬಡೆ, ಮೆಣಸಿನಕಾಯಿ ಬಜ್ಜಿ ಎರಡು ಕಾಫಿ.. ಒಂದು ೫೫೫ ಕಳಿಸು.. ನಿನಗೆ ೫೫೫?"

"ಇಲ್ಲ ಸರ್.. ಅಭ್ಯಾಸವಿಲ್ಲ.. ಬಜ್ಜಿ, ಕಾಫಿ ಸಾಕು"

"ಸರಿ ಬಾ.. ನಾ ಓದಿದ್ದ ಶಾಲೆ ಇದು.. ಶಾಲೆಯ ಹೊರಗೆ ಒಂದು ಕಲ್ಲು ಬೆಂಚು ಇದೆ.. ಇವತ್ತು ಭಾನುವಾರ.. ಅಲ್ಲಿಯೇ ಕುಳಿತು ಮಾತಾಡೋಣ.. ಆಗಬಹುದೇ?"

ದೊಡ್ಡವರಿಗೆ ಇಲ್ಲ ಎನ್ನಲು ಆಗುತ್ತದೆಯೇ.. ಸುಮ್ಮನೆ ಗೋಣು ಆಡಿಸಿದೆ..

ಬಜ್ಜಿ, ಅಂಬಡೆ, ಕಾಫೀ ಮತ್ತು ೫೫೫ ಬಂತು..

"ಸರಿ ಹೇಳಪ್ಪ ಏನು ನಿನ್ನ ಮಾತು"

"ಸರ್.. ಉಪಾಸನೆ ಚಿತ್ರದ ಭಾರತ ಭೂಶಿರ ಹಾಡನ್ನು ಗುರುಗಳ ಆಶ್ರಮದಲ್ಲಿ ಚಿತ್ರೀಕರಿಸಿದ ರೀತಿ ನನಗೆ ಬಲು ಇಷ್ಟ ಅದರ ಬಗ್ಗೆ ಹೇಳಿ.. ೪೪೦ ಕ್ಷಣಗಳು ನಿಮ್ಮ ಮಾತಿಗಾಗಿ ಮಾತ್ರ"

"ನೋಡಪ್ಪ.. ಸಂಗೀತ ಒಂದು ಅದ್ಭುತ ಔಷದಿ ಇದ್ದ ಹಾಗೆ.. ಹಾಡನ್ನುಹಾಡುವವರು , ಅದರ ಸಂಗೀತ, ಹಾಡುವ ಸ್ಥಳ, ಹಾಡಿನ ಸಾಹಿತ್ಯ ಎಲ್ಲವೂ ಒಂದು ದೇವಸ್ಥಾನ ಹಾಗೂ ಅಲ್ಲಿನ ಪರಿಸರದಲ್ಲಿರುವ ದೇವರ ಮೂರ್ತಿ, ಪೂಜೆ ಸಾಮಗ್ರಿಗಳು ಇದ್ದ ಹಾಗೆ .. ದೇವರಿಗೆ ನಾವು ಧೂಪ, ದೀಪ, ಮಂತ್ರ, ಅಭಿಷೇಕ, ಅಲಂಕಾರ ಹೇಗೆ ಮಾಡುತ್ತೇವೆಯೋ ಹಾಗೆ.. ಒಂದು ಹಾಡಿಗೂ ಅದೇ ರೀತಿಯ ಸಿದ್ಧತೆ ಬೇಕು.

ಈ ಹಾಡು ಚಿತ್ರೀಕರಿಸುವ ಸ್ಥಳ ಗುರುಗಳ ಆಶ್ರಮ..
ಆಶ್ರಮ ಒಂದು ದೇವಾಲಯವೇ ಅಲ್ಲವೇ
ಆ ಆಶ್ರಮದ ಗುರುಗಳು ದೇವರಿಗೆ ಅರ್ಚಿಸುವ ಅರ್ಚಕರು ತಾನೇ
ಆ ಅರ್ಚನೆಗೆ ಬೇಕಾಗುವ ಸಾಹಿತ್ಯ,  
ಸಂಗೀತ,ಗಾಯನ..
ಭಕ್ತರು ಎಲ್ಲರೂ ಸೇರಿ
ಈ ಹಾಡನ್ನು ಮೇಲಕ್ಕೆ ಏರಿಸಿದ್ದಾರೆ.

ಶಾರದೆ ಪಾತ್ರಧಾರಿ ಸಂಗೀತ ಎಂದರೆ ತಪಸ್ಸು ಎಂದುಕೊಂಡವಳು.. ತಾನುಬಾಲ್ಯದಲ್ಲಿ ಕಣ್ಣಾರೆ ಕಂಡ ಒಂದು  ದೃಶ್ಯವನ್ನು ಹಾಡಿನಲ್ಲಿ ಕಟ್ಟಿ ಕೊಡುತ್ತೇನೆ ಎಂದು ಹೇಳುವಾಗ ಅದಕ್ಕೆ ಬೇಕಾದ ವೇದಿಕೆಯನ್ನು ಸೃಷ್ಟಿ ಮಾಡಲು ಮನಸ್ಸಾಯಿತು.

ವಿಜಯನಾರಸಿಂಹನಿಗೆ ಹೇಳಿದೆ "ನನಗೆ ಈ ರೀತಿಯ ಹಾಡು ಬೇಕು.. ಕನ್ಯಾಕುಮಾರಿಯ ಬಗ್ಗೆ ಹಾಡು" ಅಂತ..
"ಪುಟ್ಟಣ್ಣ ನೀನು ಕೇಳಿದೆ ನಾನು ಕೊಟ್ಟೆ" ಅಂತ ಅದ್ಭುತ ಹಾಡನ್ನು ಬರೆದುಕೊಟ್ಟ.

ಇನ್ನೊಬ್ಬ ಜೀವದ ಗೆಳೆಯ ವಿಜಯಭಾಸ್ಕರ್ ಸಾಹಿತ್ಯಕ್ಕೆ ಸಂಗೀತ ಕೊಟ್ಟನೋ.. ಅಥವಾ ಸಂಗೀತಕ್ಕೆ ಸಾಹಿತ್ಯ ಬಂದಿತೋ ಅರಿವಿಲ್ಲ.. ಅದ್ಭುತವಾದ ಎದೆ ಝಲ್ ಎನ್ನುವಂಥ ಸಂಗೀತ ಒದಗಿಸಿದ..

ಇಬ್ಬರು "ವಿಜಯ"ರು ಈ ಗಾನ ಸಂಭ್ರಮ ಮಹಾಸಮರದಲ್ಲಿ ವಿಜಯಿಯಾದರು..

ಜಾನಕಿಯಮ್ಮನಿಗೆ ಈ ಹಾಡಿನ ಬಗ್ಗೆ ಹೇಳಿದಾಗ.. ಪುಟ್ಟಣ್ಣಾಜಿ ಖಂಡಿತ ಇದು ಒಂದು ಅದ್ಭುತ ಕೃತಿಯಾಗುತ್ತದೆ ಎಂದರು.. ಅದು ನಿಜವೇ ಆಯಿತು..

ಇಂಥಹಃ ಅಮೋಘ ಹಾಡನ್ನು ಸುಮ್ಮನೆ ಹೇಗೋ ಹೇಗೋ ಚಿತ್ರೀಕರಿಸಲು ಮನಸ್ಸಾಗಲಿಲ್ಲ..

ಛಾಯಾಗ್ರಾಹಕ ಶ್ರೀಕಾಂತ್ ಗೆ ಹೇಳಿದೆ.. "ಶಾರದೆ ಮೊಗದ ಮೇಲೆ ಕಾಂತಿ ಬರುವಂತೆ ಲೈಟಿಂಗ್ ಮಾಡಿ.. ಆಕೆಯ ಮುಖದ ಪ್ರತಿ ಭಾವವೂ ಎದ್ದು ಕಾಣುವಂತೆ ನೀವು ಸೆರೆ ಹಿಡಿಯಬೇಕು.. ವೀಣೆಯನ್ನು ನುಡಿಸುವ ಅಭ್ಯಾಸ ಆಕೆಗೆ ಆಗಿದೆ.. ನೋಡುವವರಿಗೆ ಶಾರದೆಯೇ ವೀಣೆ ನುಡಿಸುತ್ತಿದ್ದಾಳೆ ಎನ್ನುವ ಮನವರಿಕೆಯಾಗುತ್ತದೆ.. ಜೊತೆಗೆ ಈ ಹಾಡಿನಲ್ಲಿ ಹಿತಮಿತವಾಗಿ ವೀಣೆಯನ್ನು ಉಪಯೋಗಿಸಿರುವುದರಿಂದ, ಜೊತೆಗೆ ಹಾಡಿನಲ್ಲಿ ಕೆಲವು ಭಾಗಗಳಲ್ಲಿ ಮಾತ್ರ ವೀಣೆಯ ನಾದವಿರುವುದರಿಂದ.. ಆಕೆಯ ಮುಖದ ಭಾವ, ತನ್ಮಯತೆ ಈ ಹಾಡಿಗೆ ಬೇಕು.. " ಮರುಮಾತಿಲ್ಲದೆ ಶ್ರೀಕಾಂತ್ ನಾನು ಹೇಗೆ ಹೇಳಿದ್ದೇನೋ ಅದಕ್ಕಿಂತ ಇನ್ನೂ ಅತ್ಯುತ್ತಮವಾಗಿ ಚಿತ್ರೀಕರಿಸಿದ್ದಾರೆ.

ಇನ್ನೂ ಜಾನಕಿಯಮ್ಮ.. ಅಬ್ಬಾ ಆಕೆ ನಿಜಕ್ಕೂ ಗಾನಸರಸ್ವತಿಯೆ ಹೌದು.. ಪ್ರತಿ ಪದವನ್ನು ಅರ್ಥಮಾಡಿಕೊಂಡು ಅದಕ್ಕೆ ಬೇಕಾದ ಭಾವ ತುಂಬಿ ಈ ಹಾಡನ್ನು ಅಕ್ಷರಶಃ ದೇವಗಾನವನ್ನಾಗಿ ಮಾಡಿದ್ದಾರೆ ಆಕೆ. "ಶಿವ ತಾಂಡವದ  ಢಮರು ನಿನಾದ ನಾದ ಬ್ರಹ್ಮನ ಓಂಕಾರ ನಾದ.. " ಈ ಪದವನ್ನು ಅದೆಷ್ಟು ಭಕ್ತಿಭಾವದಿಂದ ಹಾಡಿದ್ದಾರೆ.. ನನಗೆ ರೋಮಾಂಚನವಾಗುತ್ತದೆ..

ಇನ್ನೂ ಹಾಡು ಶುರುವಾದಾಗ ಬರುವ ರುದ್ರಪಟ್ಟಣದ ಸಂಗೀತ ವಿಧ್ವಾನ್ ಅವರ ಅಭಿನಯ, ಜಾನಕಿಯಮ್ಮನವರ ಆಲಾಪ ಕೇಳಿ ಕಣ್ಣು ಮತ್ತು ಮೊಗದಲ್ಲಿ ಅವರು ತೋರುವ ಭಾವ.. ನಿಜಕ್ಕೂ ನನಗೆ ಈಗ ಹಾಡನ್ನು ಕೇಳಿದರೂ ಕಣ್ಣಲ್ಲಿ ನೀರು ಬರುತ್ತದೆ.."

ಆ ಹಾಡು ಮುಗಿದಾಗ.. "ನಿಮ್ಮ ವಿಧ್ವತ್ತಿನ ಪ್ರತಿಬಿಂಬ ನಿಮ್ಮ ಶಿಷ್ಯೆ.. ಕರುಳು ಹಿಂಡುವ ವೀಣೆಯ ನಾದ, ಜೀವ ತುಂಬುವ ಗಾನದ ಸುಧೆ ನಮ್ಮ ಊರಿನವರೆಲ್ಲರಿಗೂ ತಲುಪುವಂತೆ ಮಾಡಿ" ಎಂದು ಹೇಳಿದಾಗ ನಿಜಕ್ಕೂ ನಾ ಮೂಕನಾದೆ.

ಇಡೀ ದೃಶ್ಯವನ್ನು ನಾ ಕಲ್ಪಿಸಿಕೊಂಡ ರೀತಿಯಲ್ಲಿಯೇ ಚಿತ್ರಿಸಿದ ಹೆಮ್ಮೆ ನನಗೆ.. ಅದನ್ನು ಮೆಚ್ಚಿ ಈ ಚಿತ್ರವನ್ನು ಹಾಡನ್ನು ಯಶಸ್ಸುಗೊಳಿಸಿದ ಕೀರ್ತಿ ಕರುನಾಡ ಚಿತ್ರರಸಿಕರಿಗೆ ಸಲ್ಲಬೇಕು.. :-)

ಇಷ್ಟು ಹೇಳಿ ಪುಟ್ಟಣ್ಣ ಸರ್ ೫೫೫ ನ ಕೊನೆ ದಂ ಎಳೆದರು.. ತಮ್ಮ ಕೈಗಡಿಯಾರ ನೋಡಿಕೊಂಡು ಕಣ್ಣು ಹೊಡೆದರು.. ೪೩೯ ಕ್ಷಣಗಳಾಗಿತ್ತು..

ಅಷ್ಟು ಹೊತ್ತಿಗೆ ಅಂಬಡೆ, ಮೆಣಸಿನಕಾಯಿ ಬಜ್ಜಿ ಎರಡು ಖಾಲಿಯಾಗಿದ್ದವು..

ಪುಟ್ಟಣ್ಣ ಸರ್ ಅವರಿಗೆ ಪ್ರವರ ಹೇಳಿ ಒಂದು ನಮಸ್ಕಾರ ಮಾಡಿ.. ಸಂತೃಪ್ತಿಯಿಂದ ಹೊರ ನೆಡೆದೆ..

ಒಮ್ಮೆ ತಿರುಗಿ ನೋಡಿದೆ.. ಪುಟ್ಟಣ್ಣ ಸರ್.. ಇನ್ನೊಂದು ೫೫೫ ಹಚ್ಚಿ ವಿಜಯದ ಸಂಕೇತವಾದ ಹೆಬ್ಬೆರಳನ್ನು ತೋರಿಸಿದರು..

ತಾಯಿ ಭುವನೇಶ್ವರಿ ವೀಣೆಯನ್ನು ಹಿಡಿದು ನುಡಿಸಿದಂತೆ.. ಹಾಡು ಕೇಳಿಸುತ್ತಿತ್ತು



ಭಾರತ ಭೂಶಿರ ಮಂದಿರ ಸುಂದರಿ
ಭುವನ ಮನೋಹರಿ ಕನ್ಯಾಕುಮಾರಿ

ಸಾಮಗಾನಪ್ರಿಯ ಸಾಂಬರೂಪಿಣಿ
ಪಾಲಗಡಲ ಸ್ವರ ಪಂಚಮಧಾರಿಣಿ
ಸಾಕಾರ ಷಡ್ಜದ ಶರಧಿ ತರಂಗಿಣಿ
ಸಾಗರ ಸಂಗಮ ಸರಸ ವಿಹಾರಿಣಿ

ಶಿವತಾಂಡವದಾ ಢಮರುನಿನಾದ....
ನಾದ ಬ್ರಹ್ಮನ ಓಂಕಾರನಾದ...
ನಾದದೆ ಲೀನಾ ಆಗಮವೇದ
ನಾದ...ವೇದ ...ಶಿವೇ....
ನಾದ ವೇದ ಶಿವೆ ನಿನ್ನವಿನೋದ

ಸಂಗೀತಸುಧೆಯ ಚೈತನ್ಯಧಾರೆ
ಕಣ ಕಣ ನೀನೇ ಕರುಣಾ ಪೂರೆ
ನವ ಭಾವ ನವ ಜೀವ ನೀ ತುಂಬಿ ಬಾರೆ
ನವರಸವಾಹಿನಿ ನೀ ದಯೆ ತೋರೆ

ಭಾರತ ಭೂಶಿರ ಮಂದಿರ ಸುಂದರಿ
ಭುವನ ಮನೋಹರಿ ಕನ್ಯಾಕುಮಾರಿ

(ಪುಟ್ಟಣ್ಣ ಅವರ  ಜನುಮದಿನದಂದು ಅವರ ನೆನಪಲ್ಲಿ ಕೆಲವು ಸಾಲುಗಳನ್ನು ಬರೆಯೋಣ ಎಂದುಕೊಂಡಾಗ ಮೂಡಿ ಬಂತು ಮೇಲಿನ ಕೆಲವು ಅಕ್ಷರಗಳು.. ಇದು ಕೇವಲ ನನ್ನ ಹೃದಯದಲ್ಲಿ ಮೂಡಿಬಂದ ಭಾವಕ್ಕೆ ಒಂದು ಕಾಲ್ಪನಿಕ ಕಥಾ ರೂಪ ಕೊಟ್ಟು ಬರೆದಿದ್ದೇನೆ.. )

ಪುಟ್ಟಣ್ಣ ಸರ್.. ನಿಮ್ಮ ಪ್ರತಿಭೆಗೆ ಏನೂ ಬರೆದರೂ ಅದು ಕಮ್ಮಿಯೇ.. ಆದರೂ ಒಂದು ನುಡಿ ನಮನ ಸಲ್ಲಿಸೋಣ ಎಂದು ಸ್ವಲ್ಪ ಸಲುಗೆ ತೆಗೆದುಕೊಂಡು ಜನುಮದಿನಕ್ಕೆ ಈ ರೀತಿಯ ಶುಭಾಷಯ ಕೋರಿದ್ದೇನೆ.. (ಕ್ಷಮೆ ಇರಲಿ)

6 comments:

  1. <3 ಚಿತ್ರ ಬ್ರಹ್ಮರಿಗೆ ಸಹಸ್ರ ನಮನ

    ReplyDelete
    Replies
    1. ಧನ್ಯವಾದಗಳು ಸತೀಶ್
      ನಿಜ ಚಿತ್ರ ಬ್ರಹ್ಮ ರೇ ಅವರು

      Delete
  2. Very neatly written about an awesome song... !!!! Neevu bardirodu chitreekarana aguva jagadalle iddu anubhavisdantittu... Aa bhakti bhaava eegina chitrada hadalli yalli... Thanks for taking us for sometime back to d golden era...

    ReplyDelete
    Replies
    1. ದೇವಿ.. ಹೌದು ನಿಮ್ಮ ಮಾತು ನಿಜ ಈಗಿನ ಹಾಡುಗಳಲ್ಲಿ ಆ ಜೀವಂತಿಕೆ ಕಾಣುವುದೇ ಇಲ್ಲ..
      ಪುಟ್ಟಣ್ಣ ಪುಟ್ಟಣ್ಣನೇ.. ನಿನ್ನೆಯಿಂದ ಅದೆಷ್ಟು ಬಾರಿ ಈ ಹಾಡನ್ನು ಕೇಳಿದ್ದೇನೋ ನೋಡಿದ್ದೆನೋ ಲೆಕ್ಕವಿಲ್ಲ..

      ನಿಮ್ಮ ಸುಂದರ ಪ್ರತಿಕ್ರಿಯೆಗೆ ಕೋಟಿ ನಮನಗಳು

      Delete
  3. Veena Hs ChandrashekharDecember 1, 2016 at 10:52 PM

    ಸೂಪರ್ ಏನಾದರೂ ಹೊಸ ತರಹ ಬರೆದು ನಮ್ಮನ್ನು ಆಶ್ಚರ್ಯಗೊಳಿಸುತ್ತೀಯಾ ಈ ರೀತಿ ಬರೆಯೋಕೆ ಮೋಸ್ಟ್ಲಿ ಶ್ರೀಕಾಂತಾ ಮಾತ್ರ ಯೋಚಿಸಬಹುದು ಅನ್ಸುತ್ತೆ

    ಛಾಯಾಗ್ರಾಹಕ ಶ್ರೀಕಾಂತ ಕಣ್ತುಂಬುವಂತೆ ಛಾಯಾಗ್ರಹಣ ಮಾಡಿದರೆ, ಬರಹಗಾರ ಶ್ರೀಕಾಂತಾ ಮನತುಂಬಿಬರುವಂತೆ ಬರೆದಿದ್ದಾನೆ

    ReplyDelete
  4. ಬರಿ ೪೪೦ ಸೆಕೆಂಡಿನಲ್ಲಿ ಪುಟ್ಟಣ್ಣ ಅವರ ಸಂದರ್ಶನವನ್ನು ಓದಿ ತೃಪ್ತಿಯಾಗುವಂತೆ ಮಾಡೋಕೆ ಶ್ರೀ ಇಂದ ಮಾತ್ರ ಸಾಧ್ಯ. ನಿಮ್ಮ ಕ್ಲಾಸಿಕ್ ಸೆಕೆಂಡ್ ಲೆಕ್ಕದೊಂದಿಗೆ ಅವರು ಇದಿದ್ರೆ ಹೀಗೆ ವಿವರಿಸುತ್ತಿದ್ದರೆನೋ ಅನ್ನೋ ನೈಜತೆ. ಪುಟ್ಟಣ್ಣ ಅವರ ಶೈಲಿ ತುಂಬಾ ವಿಭಿನ್ನ, ಬಹಳ ಸಹಜ ಅನ್ನಿಸುವಂತೆ ನಟನೆ ಮಾಡಿಸುವುದು ಅಷ್ಟು ಸುಲಭದ ಮಾತಲ್ಲ. ಕಥೆಗಳನ್ನು ಹಾಗೆ ಆಯ್ದುಕೊಳ್ಳುತ್ತಿದ್ದರು. ನಿಮ್ಮ ಬರಹಗಳ ಬಗ್ಗೆನೂ ಖುಷಿಯಾಗುವುದು ಅದೇ. ವಿಭಿನ್ನವಾಗಿರುತ್ತದೆ, ಆದರೆ ಕಲ್ಪನೆ ಎಂದು ತಿಳಿದಿದ್ದರೂ, ನಡೆದರೆ ಹೀಗೆ ನಡೆಯುತ್ತೆ ಎಂದನಿಸುವಂತೆ ಮಾಡುತ್ತೆ. ಸೂಪರ್

    ReplyDelete