ಪುಟ್ಟಣ್ಣ ಕಣಗಾಲ್ ಎಂಬ ಮಾಂತ್ರಿಕ ತಾ ಮುಟ್ಟಿದ್ದೆಲ್ಲ ರತ್ನವಾಗಲೇ ಎನ್ನುವ ಮನಶಕ್ತಿಉಳ್ಳವರಾಗಿದ್ದರು. ಎಲ್ಲರ ಮನೆಯಲ್ಲೂ ನಡೆಯಬಹುದಾದ ಒಂದು ಸಂಗತಿ ಹೊಂದಿದ್ದ ಕಥೆಯನ್ನು ಅಸಾಧಾರಣ ರೀತಿಯಲ್ಲಿ ತೆರೆಗೆ ಅಳವಡಿಸಿ, ಅದಕ್ಕೆ ಹೊನ್ನಿನಂಥಹ ಗೀತೆ, ಸಂಭಾಷಣೆಗಳನ್ನು ತೊಡಿಸಿ ಒಂದು ಹೊಳೆಯುವ ರತ್ನವನ್ನಾಗಿ ಮಾಡಿದ್ದು ಅವರ ಶಕ್ತಿ.
ಮ ನ ಮೂರ್ತಿಯವರ ಕಥಾ ಆಧಾರಿತ ಈ ಚಿತ್ರವನ್ನು ಎಂ ಜೆ ಎಂ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮುದ್ದುಕೃಷ್ಣ, ಜಯಸಿಂಹ, ಮಾರುತಿ ನಿರ್ಮಾಣ ಮಾಡಿದ್ದರು.
ಈ ಚಿತ್ರದ ಒಂದು ಮುಖ್ಯ ಅಂಶ ಎಂದರೆ, ಇಡಿ ಕಥೆಗೆ ತಿರುವು ಕೊಡುವುದು ನಾಯಕನ ಪಾತ್ರ ಆದರೆ ಇಡಿ ಚಿತ್ರದಲ್ಲಿ ನಾಯಕನ ಪಾತ್ರವನ್ನು ಗುಪ್ತಗಾಮಿನಿಯಂತೆ ಮಾಡಿ, ಬರಿ ಹೆಣ್ಣು ಪಾತ್ರಗಳೇ ಮೆರೆದಾಡುವಂತೆ ಚಿತ್ರವನ್ನು ತೆರೆಗೆ ತಂದಿರುವುದು ವಿಶೇಷ.
ಯಾವ ಮನೆಯಾದರೂ, ಮನವಾದರೂ ಎರಡು ಜಡೆಗಳು ಒಂದಾದಾಗ ಸುಖಃ ನೆಮ್ಮದಿ ಶಾಂತಿ ಅಲ್ಲಿ ನೆಲೆಸುತ್ತದೆ ಎನ್ನುವು ಸಂದೇಶವನ್ನು ಸಾರಿ ಸಾರಿ ಹೇಳಲು ಈ ರೀತಿಯಲ್ಲಿ ವಿಭಿನ್ನ ಬಗೆಯ ನಿರೂಪಣೆಯ ಮೊರೆ ಹೊಕ್ಕಿದ್ದಾರೆ ಅನ್ನಿಸುತ್ತದೆ. ಈ ಮಾತಿಗೆ ಪುಷ್ಟಿ ನೀಡುವಂತೆ ಮನೆಯ ಆಳಿನ ಪಾತ್ರ "ಮಲ್ಲ" ಹೇಳುವ ಮಾತು.. ಕಾರಿನಲ್ಲಿ ಕೂತು ಬರುವಾಗ ಇರುವ ಒಗ್ಗಟ್ಟು ಸಂಸಾರದಲ್ಲಿಯೂ ಇದ್ದಾರೆ ನಮ್ಮ ಪರ್ಪಂಚ ಸುಂದರ ಅತಿ ಸುಂದರ (ಸುಮಾರು ಹತ್ತು ಹೆಂಗಸರು ಅಂಬಾಸಡರ್ ಕಾರಿನಲ್ಲಿ ಬಿಳಿ ಹೆಂಡ್ತಿಯನ್ನು ನೋಡಲು ಬರುತ್ತಾರೆ.. ಆಗ ಮಲ್ಲ ಹೇಳುವ ಮಾತು)
ಇಡಿ ಚಿತ್ರದಲ್ಲಿ ನಾಯಕನಿಗೆ ಹಾಡು ಇರುವುದಿಲ್ಲ. ಹಿನ್ನೆಲೆ ಗಾಯನವನ್ನು ತಮ್ಮ ವಶಕ್ಕೆ ತೆಗೆದುಕೊಂಡಿರುವವರು ಅದ್ಭುತ ಗಾಯಕಿ ಶ್ರೀಮತಿ ವಾಣಿಜಯರಾಂ, ಮತ್ತು ಕೋಮಲ ಕಂಠದ ಕಸ್ತೂರಿ ಶಂಕರ್. ಸಂಗೀತ ಸಂಯೋಜನೆ ಮಾಂತ್ರಿಕ ವಿಜಯಭಾಸ್ಕರ್.
"ಆ ದೇವರೇ ನುಡಿದ ಮೊದಲ ನುಡಿ" ಪ್ರೇಮವನ್ನು, ಪ್ರೇಮದ ಹುಟ್ಟನ್ನು ಹಾಡಿನಲ್ಲಿ ವಿಜಯನಾರಸಿಂಹ ಅದ್ಭುತವಾಗಿ ಜೋಡಿಸಿದ್ದಾರೆ. ಆರತಿಯವರಿಗೆ ಸರಿಯಾದ ಕಂಠ ಎನ್ನುವಷ್ಟರ ಮಟ್ಟಿಗೆ ವಾಣಿಯಮ್ಮ ದನಿಯಾಗುತ್ತಾರೆ. ಪದಗಳ ಉಳಿತ, ಅದಕ್ಕೆ ಆರತಿಯವರ ಅಭಿನಯ ಸೊಗಸು.
"ಯಾವ ತಾಯಿಯು ಹಡೆದ ಮಗಳಾದರೇನು" ಕಸ್ತೂರಿ ಕಂಠದಲ್ಲಿ ಕಸ್ತೂರಿ ಶಂಕರ್ ಮನ ಗೆಲ್ಲುತ್ತಾರೆ. ಕೋಮಲ ಕಂಠದಲ್ಲಿ ಮೂಡಿ ಬರುವ ಹಾಡು ನಮ್ಮ ಧರ್ಮ ಹೇಗೆ ಇತರರನ್ನು ತನ್ನ ಮಡಿಲಲ್ಲಿ ಸಾಂತ್ವನವನ್ನು ನೀಡಿ ತಮ್ಮ ಮನದಲ್ಲಿ ಕೂರಿಸಿಕೊಳ್ಳುತ್ತಾರೆ ಎನ್ನುವ ಸಂದೇಶ ಕೊಡುತ್ತದೆ. ಜೊತೆಯಲ್ಲಿ ಕನ್ನಡ ನಾಡಿನ ಬಗ್ಗೆ ಪುಟ್ಟಣ್ಣ ಅವರ ಅಭಿಮಾನ "ಕನ್ನಡಾಂಬೆಯ ಮಡಿಲ ಮಗುವಾದೆ ನೀನು" ಎನ್ನುವ ಸಾಲುಗಳಲ್ಲಿ ನುಗ್ಗಿ ಬರುತ್ತದೆ.
ಇಡಿ ಚಿತ್ರಕಥೆಯನ್ನು ಹಾಡಿನಲ್ಲಿ ಪೋಣಿಸಿ, ಐದೇ ನಿಮಿಷದಲ್ಲಿ ಇಡಿ ಚಿತ್ರದ ಸಾರವನ್ನು ಬಡಿಸಿರುವ "ರಂಗೇನಹಳ್ಳಿಯಾಗೆ" ಹಾಡು ನೊಂದ ಮನ ಮತ್ತು ಉಲ್ಲಾಸದ ಮನ ಎರಡರ ಅದ್ಭುತ ಸಂಗಮವಾಗಿ ಮೂಡಿ ಬರುತ್ತದೆ. ಕಸ್ತೂರಿ ಶಂಕರ್ ಎತ್ತಿ ಕೊಡುವ ಹಾಡನ್ನು ವಾಣಿ ಜಯರಾಂ ಅಂಗ್ಲ ಶೈಲಿಯಲ್ಲಿ ಸುಲಲಿತವಾಗಿ ಹಾಡಿರುವುದು ಸೂಪರ್ ಎನ್ನಿಸುತ್ತದೆ.
ಮತ್ತೊಮ್ಮೆ ಪೂರ್ಣ ಆಂಗ್ಲಶೈಲಿಯಲ್ಲಿಯೇ "ರಂಗೇನ ಹಳ್ಳಿಯಾಗೆ" ಹಾಡು ವಾಣಿ ಜಯರಾಂ ಅವರ ಸಿರಿಕಂಠ ಗಮನಸೆಳೆಯುತ್ತದೆ. ಅಂಬರೀಶ್ ಚಿಕ್ಕ ಚೊಕ್ಕ ಪಾತ್ರದಲ್ಲಿ ಬಂದು ಹೋಗುತ್ತಾರೆ.
ಇಡಿ ಚಿತ್ರದಲ್ಲಿ ಎದ್ದು ನಿಲ್ಲುವುದು ಇಂಗ್ಲಿಷ್ ಹಾಡು "ಹಾಪ್ಯೆಸ್ಟ್ ಮೊಮೆಂಟ್... ಎವ್ರಿ ಇವೆಂಟ್ ಬಿಳಿ ಹೆಂಡ್ತಿ ಸಿಂಗ್ಸ್ ಇನ್ ಎಗ್ಸೈಟ್ಮೆಂಟ್" ಇದನ್ನು ಪಕ್ಕಾ ಪಾಶ್ಚಿಮಾತ್ಯ ಶೈಲಿಯಲ್ಲಿ ಹಾಡಿರುವುದು, ನೃತ್ಯ ಸಂಯೋಜಿಸಿರುವುದು, ಸಂಗೀತವನ್ನು ಆಯೋಜಿಸಿರುವುದು ಪುಟ್ಟಣ್ಣ ಅವರ ಮಾಧ್ಯಮದ ಮೇಲಿನ ಹಿಡಿತವನ್ನು ತೋರುತ್ತದೆ. ವಾಣಿಜಯರಾಂ ಅಕ್ಷರಶಃ ಈ ಹಾಡಿನಲ್ಲಿ ನಮ್ಮ ಮನವನ್ನು ಕಲಕುತ್ತಾರೆ.
ಇಡಿ ಚಿತ್ರವನ್ನು ಕಣ್ಣಲ್ಲಿ ಕಣ್ಣಿಟ್ಟು ಚಿತ್ರಿಸಿರುವ ಬಿ ಏನ್ ಹರಿದಾಸ್ ಪುಟ್ಟಣ್ಣ ಅವರ ಭಾವವನ್ನು ಹಾಗೆ ಬರೆದಿದ್ದಾರೆ ನೆರಳು ಬೆಳಕಿನಲ್ಲಿ.
ಚುರುಕಾದ ಸಂಭಾಷಣೆ ಕೆಲವೊಮ್ಮೆ ನಗೆ ಉಕ್ಕಿಸಿದರೆ, ಹಾಗೆಯೇ ಕೆಲವು ಸಂಭಾಷಣೆಗಳು ಮನಕ್ಕೆ ಮುಟ್ಟುತ್ತವೆ. ಇದರ ರೂವಾರಿ ಹೆಚ್ ಎಸ್ ಸುಬ್ಬರಾವ್.
ನಗೆ ಉಕ್ಕಿಸುವ ದೃಶ್ಯಗಳು
- ಉಮಾ ಶಿವಕುಮಾರ್ ಅವರ ಏರೋಪ್ಲೇನ್ ಮೇಲಿನ ಪ್ರೀತಿ
- ಎಲ್ಲಿ ಸ್ವಾಮೀ ನಾಲಿಗೆ ತೋರಿಸಿ.. ಆವಾಗ ಅಂಗನ್ದಿರಿ, ಇವಾಗ ಇಂಗನ್ದಿರಿ ಅದು ಎಂಗೆ.. (ಹಳ್ಳಿಯ ಮನೆಯ ಉಸ್ತುವಾರಿ ಹೊತ್ತಿದ್ದವ ಬಿಳಿ ಹೆಂಡ್ತಿ ಜೊತೆಯಲ್ಲಿ ಚಿಕ್ಕ ದಣಿಗಳು ಬರುತ್ತಿದ್ದಾರೆಂದು ತಿಳಿದಾಗ.. ಹೀನ ಮಾನವಾಗಿ ಮಾತಾಡುವ.. ಅವರು ಬಂದ ಕೂಡಲೇ ಮಾತನ್ನೇ ತಿರುಗಿಸಿ ಹೋಗಲು ಭಟ್ಟನಾಗುವ ದೃಶ್ಯಕ್ಕೆ ಮನೆಯ ಆಳುಗಳು ಹೇಳುವ ಸಂಭಾಷಣೆ)
- ಮನೆಯ ಆಳು "ಮಲ್ಲ" ತಮಾಷೆ ಮಾತುಗಳನ್ನು ಆಡುತ್ತಲೇ.. ಮನ ಮುಟ್ಟುವ ಸಂದೇಶಾತ್ಮಕ ಮಾತುಗಳನ್ನು ನಗೆ ಉಕ್ಕಿಸುತ್ತವೆ ಹಾಗೆಯೇ ಮನಕ್ಕೆ ತಾಕುತ್ತವೆ.
ಅದ್ಭುತ ದೃಶ್ಯಗಳು
- ಮಗ ಬಿಳಿ ಹುಡುಗಿಯನ್ನು ಮದುವೆ ಮಾಡಿಕೊಂಡು ಬಂದಿದ್ದಾನೆ ಎಂದು ತಿಳಿದು ಆಕೆಯನ್ನು ದೆಹಲಿಯಿಂದ ಹಾಗೆಯೇ ಅಲ್ಪ ಸ್ವಲ್ಪ ದುಡ್ಡು ಕೊಟ್ಟು ಸಾಗು ಹಾಕಬೇಕೆಂಬ ನಿರ್ಧಾರದಿಂದ ಬರುವ ಸೀತಾರಂ.. ಆಕೆಯನ್ನು ನೋಡಿ, ಆಕೆ ಕನ್ನಡ ಭಾಷೆಯಲ್ಲಿ ಮಾತಾಡುವುದು, "ಮಾವ" ಎಂದು ಸಂಭೋಧಿಸುವುದನ್ನು ನೋಡಿ, ಹಣದ ಪೆಟ್ಟಿಗೆಯನ್ನು ಹಾಗೆ ಪಕ್ಕದಲ್ಲಿಟ್ಟುಕೊಂಡು ಆಶೀರ್ವಾದ ಮಾಡುತ್ತಾರೆ. ಸಂಸ್ಕಾರ ಇದ್ದಾಗ ಸಂಪತ್ತು ಮುಖ್ಯ ಅಲ್ಲಾ ಎನ್ನುವ ಅದ್ಭುತ ಸಂದೇಶ ಕಾಣ ಸಿಗುತ್ತದೆ.
- ಹಣದ ಪೆಟ್ಟಿಗೆಯನ್ನು ಸೀತಾರಾಮ್ ತೆಗೆಯಲು ಹೋದಾಗ.. ಎಲಿಸಾ ಮಾವ ಎಂದು ಬಗ್ಗಿ ನಮಸ್ಕರಿಸಿ ನಿಮ್ಮನ್ನು ನೋಡಿದಾಗ ಸ್ವಾಮೀ ವಿವೇಕಾನಂದರನ್ನು ನೋಡಿದ ಹಾಗೆ ಆಯಿತು ಎನ್ನುತ್ತಾಳೆ.
- ಸೊಸೆಯನ್ನು ಮನೆಗೆ ಕರೆ ತಂದಾಗ, ಆರತಿ, ಲೀಲಾವತಿ, ಸೀತಾರಾಮ್ ಇವರುಗಳ ನಡುವೆ ನಡೆಯುವ ಭಾವೋದ್ವೇಗದ ತೊಳಲಾಟ
- ಗುರುಗಳೇ ನನಗೆ ವೇದ, ಉಪನಿಷತ್ತು ಇವುಗಳ ಬಗ್ಗೆ ಹೇಳಿರಿ ಎಂದು ಎಲಿಸಾ ಕೇಳಿಕೊಂಡಾಗ ಉದಯಕುಮಾರ್ ಮುಖದಲ್ಲಿ ತೋರುವ ಅಭಿನಯ, ಆನಂದಭಾಷ್ಪದಿಂದ ತೋಯ್ದು ಹೋಗುತ್ತಾ... ಸಮಯ ಆದಗೆಲ್ಲಾ ಹೇಳಿ ಕೊಡುತ್ತೇನೆ ಎಂದಾಗ ಎಲಿಸಾಳ ಮೊಗದಲ್ಲಿ ತೋರುವ ಭಾವನೆಗಳು
- ಎರಡು ಆಯಾಮದಲ್ಲಿ ಬರುವ ಒಂದು ದೃಶ್ಯ, ಆರತಿಯನ್ನು ಬಹುವಾಗಿ ಮೆಚ್ಚಿಕೊಳ್ಳುವ ಎಲಿಸಾ ಅವಳನ್ನು ತನ್ನ ಗಂಡನ ಬಳಿ ಹೊಗಳುತ್ತಿದ್ದಾರೆ, ಅದೇ ದೃಶ್ಯದಲ್ಲಿ ಲೀಲಾವತಿ ಆರತಿಯನ್ನು ಎಲಿಸಾಳ ಜೊತೆಯಲ್ಲಿ ಓಡಾಡುವುದನ್ನು ಕಂಡು ತರಾಟೆಗೆ ತೆಗೆದುಕೊಳ್ಳುತ್ತಾಳೆ. ಒಂದು ಕಡೆ ಬರಿ ಸಂಭಾಷಣೆ ಕೇಳಿಸುತ್ತಾ.. ದೃಶ್ಯದಲ್ಲಿ ಆರತಿ ಲೀಲಾವತಿಯ ನಡುವೆ ಜುಗಳಬಂಧಿ.. ಒಂದು ಅತ್ಯುತ್ತಮ ದೃಶ್ಯ ಸಂಯೋಜನೆ.
- ಆರತಿ ತಮ್ಮಿಬ್ಬರ ನಡುವೆ ಅಡ್ಡ ಬರುತ್ತಿದ್ದಾರೆ ಎನ್ನುವ ತಪ್ಪು ಕಲ್ಪನೆಯಿಂದ ತನ್ನ ಹೆಂಡತಿಯ ಜೊತೆಯಲ್ಲಿ ಹಳ್ಳಿಗೆ ಬರುವ ನಾಯಕ, ತನ್ನ ಹೆಂಡತಿಯ ಮೇಲೆ ಮಮತೆ, ಪ್ರೀತಿ ತೋರಿಸುವ ದೃಶ್ಯವನ್ನು ಕ್ಯಾಮೆರಾದ ಚಲನೆಯ ಮೂಲಕ ತೋರಿರುವುದು ಇಷ್ಟವಾಗುತ್ತದೆ.. ದೂರ ದೂರ ಸಾಗುವ ಕ್ಯಾಮೆರ... ನಿಧಾನವಾಗಿ ಅವರಿಬ್ಬರ ಹತ್ತಿರಕ್ಕೆ ಬರುತ್ತದೆ. ಕೆಲ ಕಾರಣಗಳಿಂದ ಪ್ರೀತಿಯನ್ನು ವ್ಯಕ್ತ ಪಡಿಸಲಾಗದ ಸನ್ನಿವೇಶಗಳಿಂದ ನಿಧಾನವಾಗಿ ಹೊರಬಂದು ಗಂಡ ಹೆಂಡತಿಯ ಪ್ರೀತಿ ಬೆಸುಗೆಯಾಗುತ್ತಿದೆ ಎನ್ನುವ ಸಾಂಕೇತಿಕ ದೃಶ್ಯ ಸಂಯೋಜನೆ ಇಷ್ಟವಾಗುತ್ತದೆ.
- ನಾಯಕ, ಆರತಿ ತನ್ನ ಮೇಲೆ ಸೇಡು ತೀರಿಸಿಕೊಳ್ಳಲು ತನ್ನ ಹೆಂಡತಿಯ ಜೊತೆಯಲ್ಲಿ ಸ್ನೇಹ ಬೆಳೆಸುತ್ತಿದ್ದಾಳೆ ಎನ್ನುವ ತಪ್ಪು ಕಲ್ಪನೆಯಿಂದ.. ಅವಳ ಮೇಲೆ ಹೆರುವ ಆರೋಪಗಳಿಗೆಲ್ಲಾ ಆರತಿ ಕೊಡುವುದು ಒಂದೇ ಉತ್ತರ "ನಂದು ತಪ್ಪೇ ಗೋಪಿ". ಕೆಲವೊಮ್ಮೆಎಲ್ಲಾ ಸಮಸ್ಯೆಗಳಿಗೂ ಒಂದೇ ಪರಿಹಾರ ಇರುತ್ತದೆ.. ಅಥವಾ ಎಲ್ಲಾ ಪರಿಹಾರಗಳಿಗೂ ಅನೇಕ ಸಮಸ್ಯೆಗಳ ಸಂಗಮ ಇರುತ್ತದೆ ಎನ್ನುವಂಥಹ ಉತ್ತಮ ಸಂಭಾಷಣೆ ಈ ದೃಶ್ಯದಲ್ಲಿದೆ.
- ನಿಜ ಸ್ಥಿತಿ ಅರಿವಾದಾಗ ಎಲಿಸಾ ಆರತಿಯ ಹತ್ತಿರ ಬಂದು "ತಂದ ಬೇರೊಂದು ಹೆಣ್ಣಾ, ಮದುವೆನಾ ನೋಡಿ ರಂಗಿ ಮನದಾಗೆ ದುಖಃ ನುಂಗಿ" ಎನ್ನುತ್ತಾ ಕಣ್ಣೀರಾಗಿ.. "ಆಮ್ ಸರಿ" ಎಂದು ಓಡಿ ಹೋಗುತ್ತಾಳೆ.. ಸೂಪರ್ ದೃಶ್ಯ ಕಲ್ಪನೆ.,.. ಆದ್ರೆ ರೀತಿಯಲ್ಲಿ ಎಲಿಸಾ ಹೊರತು ನಿಂತಾಗ ಆರತಿ "ಹಸ್ಬೆಂಡ್, ಮಾವ, ಅತ್ತೆ ಶಾರದ ಎವ್ರಿ ಒನ್ ಮೇಕ್ ಮಿ ಸ್ಮೈಲ್" ಎಂದು ಹೇಳುತ್ತಾ ಕಣ್ಣೀರಾಗುತ್ತಾರೆ.. ದೊಡ್ಡ ದೊಡ್ಡ ಭಾಷಣದ ಮಾತುಗಳು ಬರಬಹುದಾದ ದೃಶ್ಯವನ್ನು ಚುಟುಕು ಮಾತುಗಳಿಂದ ಅಲಂಕರಿಸಿ ಭಾವನಾತ್ಮಕ ದೃಶ್ಯವನ್ನಾಗಿಮಾಡಿದ್ದಾರೆ . ಹಾಟ್ಸ್ ಆಫ್ ಟು ಪುಟ್ಟಣ್ಣ ಮತ್ತು ಸಂಭಾಷಣಕಾರ ಎಚ್ ವಿ ಸುಬ್ಬರಾವ್.
ಪ್ರಾಯಶಃ ಮೊತ್ತ ಮೊದಲ ಬಾರಿಗೆ ಆರತಿಯವರ ಚಿತ್ರದಲ್ಲಿ ಇನ್ನೊಂದು ಹೆಣ್ಣು ಪಾತ್ರ ಅವರನ್ನು ಹಿಂದಕ್ಕೆ ಹಾಕಿರುವುದು. ಮಾರ್ಗರೆಟ್ ಥಾಮ್ಸನ್ ಎನ್ನುವ ಅಮೇರಿಕಾದ ಕಲಾವಿದೆ ಇಡಿ ಚಿತ್ರವನ್ನು ಆವರಿಸಿಬಿಟ್ಟಿದ್ದಾರೆ. ಕನ್ನಡದಲ್ಲಿಯೇ ನಿಧಾನವಾಗಿ ಮಾತಾಡುತ್ತಾ, ಭಾವಾಭಿನಯ, ಕಣ್ಣಿನಲ್ಲಿಯೇ ಭಾವವನ್ನು ಹೊರಗೆಡುಹುವುದು ಇಷ್ಟವಾಗುತ್ತದೆ. ರಂಗೇನ ಹಳ್ಳಿಯಾಗೆ ಹಾಡಿನಲ್ಲಿ ಪಕ್ಕ ಹಳ್ಳಿ ಕುಣಿತ ಕುಣಿವ ಇವರು, ಹ್ಯಾಪಿಯೇಸ್ಟ್ ಮೊಮೆಂಟ್ ಹಾಡಿನಲ್ಲಿ ಪಾಶ್ಚಾತ್ಯ ಮತ್ತು ನಮ್ಮ ದೇಶದ ಎರಡು ತರಹದ ನೃತ್ಯ ಮಾಡುತ್ತಾ ಹಾಡಿರುವುದು ಸೂಪರ್ ಎನ್ನಿಸುತ್ತದೆ. ಜೊತೆಯಲ್ಲಿಯೇ ಮುಖ ಭಾವ ಬೇಕಾದ ದೃಶ್ಯಗಳಲ್ಲಿ ಮಾತ್ರ ಅವರ ಮುಖವನ್ನು ಹತ್ತಿರದಿಂದ ತೋರಿಸಿ, ತುಟಿ ಚಾಲನೆಗೆ ಸರಿಯಾದ ಸಂಭಾಷಣೆಗಳನ್ನು ಕೊಟ್ಟು.. ಉದ್ದುದ್ದ ಮಾತುಗಳಿಗೆ ದೂರದಿಂದ ದೃಶ್ಯವನ್ನು ಚಿತ್ರಿಕರಿಸಿರುವುದು ಜಾಣ್ಮೆಯ ನಡೆಯಾಗಿದೆ. ಮಾತುಗಳಿಗೆ.. ಹಾಡುಗಳಿಗೆ ಸರಿಯಾದ ತುಟಿ ಚಾಲನೆ ನೀಡಿರುವ ಈ ಕಲಾವಿದೆಗೆ ಸಹಸ್ರ ಅಭಿನಂದನೆಗಳು. "ಅತ್ತೆ ನಿಮಗೆ ಬಾಯ್ ಬೇಬಿ ಬೇಕೋ ಗರ್ಲ್ ಬೇಬಿ ಬೇಕೋ... ನಾ ಬೇಬಿ ಕೊಟ್ಟರೆ ನನ್ನ ಮೇಲಿನ ಕೋಪ ಒಂಟೋಯ್ತದೆ ಅಲ್ಲವಾ ಅತ್ತೆ" ಅತ್ತ್ಯುತ್ತಮ ದೃಶ್ಯ ಮತ್ತು ಸಂಭಾಷಣೆ.
ಆರತಿ ಈ ಕಲಾವಿದೆಯ ಬಗ್ಗೆ ಏನು ಹೇಳಲಿ.. ಇವರು ನೀರಿನ ತರಹ ಯಾವ ಪಾತ್ರ ಕೊಟ್ಟರೂ ಅದಕ್ಕೆ ಪ್ರವೇಶ ಮಾಡಿಯೇ ಬಿಡುತ್ತಾರೆ.. ಇಡಿ ಚಿತ್ರದಲ್ಲಿ ತಮ್ಮ ಹತಾಶೆ, ಪ್ರೀತಿ, ಪ್ರೇಮ, ನೋವು, ನಲಿವು, ಸಂತಸ ಎಲ್ಲವನ್ನು ಅದುಮಿಟ್ಟುಕೊಂಡು ಹದವಾಗಿ ಕೊಡುವ ಅಭಿನಯ ಇಷ್ಟವಾಗುತ್ತದೆ. ಅತ್ತೆ ಮಾವನ ಮನೆಯಲ್ಲದ್ದಿದ್ದರೂ ಅವರನ್ನು ಅತ್ತೆ ಮಾವ ಎಂದು ಕರೆಯುತ್ತಾ ಅಕ್ಷರಶಃ ಆ ಮನೆಯಲ್ಲಿಯೇ ಕಳೆಯುವ, ಹಾಗೆಯೇ ತನ್ನ ಅಪ್ಪ ಅಮ್ಮನ ಗೊಂದಲಗಳು, ನೋವುಗಳು ಇವಕ್ಕೆ ತಕ್ಕ ಉತ್ತರ ಕೊಡುತ್ತಾ ಎರಡನ್ನು ಸಂಭಾಳಿಸುವಂಥಹ ಅಭಿನಯ ನೀಡಿ ಗೆದ್ದಿದ್ದಾರೆ. ಎಲಿಸಾಳನ್ನು ತನ್ನ ಅತ್ತೆ ಮಾವನ ಮನದಲ್ಲಿ ಭದ್ರವಾಗಿ ಕೂರಿಸುವ ಅವರ ಪ್ರಯತ್ನ ಮತ್ತು ಅದರಲ್ಲಿ ಯಶಸ್ವೀ ಆಗುವ ಅಭಿನಯ ಗಮನ ಸೆಳೆಯುತ್ತದೆ. ಪ್ರೀತಿ ತ್ಯಾಗ ಮಮತೆ ಎಲ್ಲವನ್ನು ಹದವಾದ ಪಾಕದಲ್ಲಿ ಬೆರೆಸಿ ಅಭಿನಯದ ಮೂಲಕ ನಮಗೆ ಹಂಚಿದ್ದಾರೆ. ಆರತಿ ನಿಮಗೆ ಒಂದು ಸಲಾಂ.
ಬೇಡದ ಸೊಸೆಯನ್ನು ನೋಡಿಕೊಳ್ಳುವ ಬೇಡ ಕೆಲಸವನ್ನು ಸಿಟ್ಟು ಸೆಡವುಗಳಲ್ಲಿ ತೋರಿಸುವ ಲೀಲಾವತಿ, ತನ್ನ ಆಂಗ್ಲ ಸೊಸೆ ತುಳಸಿ ಕಟ್ಟೆಯನ್ನು ಸುತ್ತುವುದನ್ನು ಕಂಡು ಅಭಿಮಾನ ಉಕ್ಕಿದರೂ, ಅತ್ತೆ ಎನ್ನುವ ಅಹಂ ಅಡ್ಡಿ ಬರುವ ಅಭಿನಯ, ತನ್ನ ಸೊಸೆ ಗರ್ಭಿಣಿ ಎಂದು ಗೊತ್ತಾದಾಗ ತಡೆದು ತಡೆದು ಬಂದು ಪ್ರೀತಿ ವ್ಯಕ್ತ ಪಡಿಸುವ ರೀತಿ.. ಸೂಪರ್.. ಲೀಲಾವತಿ ಇಲ್ಲಿ ಎಂದಿನಂತೆ ಕಲಾವತಿಯಾಗಿ ಬಿಟ್ಟಿದ್ದಾರೆ.
ಮೃದು ಮಾತು, ಮೃದು ಅಭಿನಯ, ಸರಳ ವ್ಯಕ್ತಿತ್ವ ಇದರ ಸಮಾಗಮ ಸೀತಾರಾಮ್. ಸೊಸೆಯನ್ನು ಕರೆದು ತರುವ ಇವರು ಅವಳ ಗುಣಕ್ಕೆ ಮಾರು ಹೋಗಿ ತನ್ನ ಸ್ನೇಹಿತನಿಗೆ ಕೊಟ್ಟ ಮಾತನ್ನು ಮುರಿಯುತ್ತಾರೆ. ಆದರೆ ಅದಕ್ಕೆ ಅವರು ಕೊಡುವ ಕಾರಣ "ದುಡ್ಡು ಕೊಟ್ಟು ಅವಳ ಕಾಲಿಗೆ ಬಿದ್ದು ನನ್ನ ಮಗನ ಜೀವನದಿಂದ ಹೊರಗೆ ಕಲಿಸಬೇಕು ಎಂದು ಹೋದೆ.. ಅವಳ ಗುಣ ನಡತೆಯನ್ನು ನೋಡಿ.. ನಮ್ಮ ದೇಶದ ಸಂಸ್ಕೃತಿ ಗುಣವನ್ನು ಆದರಿಸುತ್ತದೆಯೇ ಹೊರತು ಹಣವನ್ನಲ್ಲ ಎನ್ನುವಂಥಹ ತರ್ಕ ಬದ್ಧ ಮಾತುಗಳನ್ನು ಆಡುವಾಗ ಅವರ ತೊಳಲಾಟ ಇಷ್ಟವಾಗುತ್ತದೆ.
ವ್ಯಂಗ್ಯ, ಕುಹಕ, ಚುಚ್ಚುವ ಮಾತುಗಳು, ಜೊತೆಯಲ್ಲಿಯೇ ಸ್ನೇಹಿತನ ಮೇಲಿನ ಅಭಿಮಾನ ಇವುಗಳ ಮಿಲನ ಲೋಕನಾಥ್ ಅವರ ಅಭಿನಯ. ಮಗಳ ಮೇಲಿನ ವ್ಯಾಮೋಹ, ಅವಳ ಬಾಳಿಗೆ ಫ್ರೇಮ್ ಹಾಕಿಕೊಡಬೇಕು ಎನ್ನುವ ತವಕ ಎಲ್ಲ ದೃಶ್ಯಗಳಲ್ಲಿ ಇಷ್ಟವಾಗುತ್ತಾರೆ. ಅವರಿಗೆ ಸರಿಸಾಟಿಯಾಗಿ ಉಮ ಶಿವಕುಮಾರ್ ಅಭಿನಯ.
ಇವರ ಜೊತೆಯಲ್ಲಿ ಬರುವ ದಿನೇಶ್ ಪುಟ್ಟ ಪಾತ್ರದಲ್ಲಿ ಮಿನುಗಿ ಹೋಗುತ್ತಾರೆ, ಅಂಬರೀಶ್ ಹಾಡಿನಲ್ಲಿ ಬರುತ್ತಾರೆ. ಆದರೆ ಉದಯಕುಮಾರ್ ಶಾಸ್ತ್ರಿಗಳ ಪಾತ್ರದಲ್ಲಿ ಕಾಡುತ್ತಾರೆ..
ಪುಟ್ಟಣ್ಣ ಕಣಗಾಲ್ ಅವರಿಗೆ ಒಂದು ಅದ್ಭುತ ಶಕ್ತಿ ಇತ್ತು, ಪಾತ್ರಕ್ಕೆ ತಕ್ಕ ಕಲಾವಿದರು. ಆ ಪಾತ್ರದ ಅಭಿನಯ ನೋಡಿದ ಮೇಲೆ ಅರೆ ಇವರು ಈ ಪಾತ್ರ ಮಾಡಲೆಂದೇ ಜನಿಸಿದ್ದಾರೆನೋ ಅನ್ನಿಸುವಷ್ಟು ಸಹಜವಾಗಿರುತ್ತೆ. ಜೊತೆಯಲ್ಲಿಯೇ ಒಂದು ಗೆರೆಯನ್ನು ಉದ್ದ ಮಾಡಬೇಕೆಂದು ಅಂದುಕೊಂಡಾಗ ಆ ಗೆರೆಯನ್ನು ಅಳಿಸದೆ ಪಕ್ಕದಲ್ಲಿಯೇ ಇನ್ನೊಂದು ಚಿಕ್ಕ ಗೆರೆಯನ್ನು ಎಳೆಯುವ ಅತ್ಯುತ್ತಮ ಜಾಣ್ಮೆ ಅವರಲ್ಲಿ ಇತ್ತು. ಇಲ್ಲಿ ನಾಯಕನ ಪಾತ್ರ ಮುಖ್ಯ ಆದರೆ ಅದು ಕಥೆಗೆ ತಿರುವು ಕೊಡುವಲ್ಲಿ ಮಾತ್ರ.. ಅದಕ್ಕೆಂದೇ ಹೊಸ ಪರಿಚಯವಾದ ಅನಿಲ್ ಕುಮಾರ್ ಎನ್ನುವ ನಟನನ್ನು ಹುಡುಕಿ ತಂದರು. ಕಥೆಗೆ ಬೇಕಾದಂಥಹ ಅಭಿನಯ ಕೊಟ್ಟಿದ್ದಾರೆ.. ಆದರೆ ಅವರ ಮುಂದೆ ಉದ್ದವಾಗಿ ನಿಲ್ಲುವುದು ಬಿಳಿ ಹೆಂಡ್ತಿ ಪಾತ್ರಧಾರಿ. ಇದು ನಿರ್ದೇಶಕನ ಚಾತುರ್ಯ.
ಚಿತ್ರದ ಬಹುತೇಕ ಭಾಗ ಸ್ಟುಡಿಯೋ ಒಳಗೆ ನಡೆದರೂ ಪುಟ್ಟಣ್ಣ ಅವರ ಸುಂದರ ತಾಣಗಳ ಹುಡುಕಾಟ ಮೇಲುಕೋಟೆ, ತೊಣ್ಣುರ್ ಕೆರೆ, ದೊಡ್ಡ ಆಳದ ಮರ ಇವುಗಳ ಸುತ್ತಮುತ್ತಲಿನ ವಿಹಂಗಮ ದೃಶ್ಯಗಳನ್ನು ಕಣ್ಣ ಮುಂದೆ ಬಿಡಿಸಿದ್ದಾರೆ.
ಮನದ ಕಡಲಲ್ಲಿ ಬರುವ ಅಸಮಾಧಾನದ ತರಂಗಗಳನ್ನು ಜೋಪಾನವಾಗಿ ತಡೆದು ಅದನ್ನು ಸರಿಯಾಗಿ ಬಳಕೆ ಮಾಡಿ ಅದನ್ನು ಏರಿ ಸಾಗಿ ನಮ್ಮ ಸಮಾಧಾನ ಎನ್ನುವ ಗುರಿಯನ್ನು, ಸಂಬಂಧ ಎನ್ನುವ ಗುಡಿಯನ್ನು ಮುಟ್ಟಲೇಬೇಕು ಎನ್ನುವ ಸುಂದರ ಸಂದೇಶವನ್ನು ಹೊತ್ತು ತಂದ ಬಿಳಿ ಹೆಂಡ್ತಿ ಚಿತ್ರ ಪುಟ್ಟಣ್ಣ ಕಣಗಾಲ್ ಅವರ ಬತ್ತಳಿಕೆಯಿಂದ ಹೊರ ಬಂದ ಇನ್ನೊಂದು ಚಿತ್ರ ರತ್ನ.
ಗುರುಗಳೇ ಸಲಾಂ ನಿಮಗೆ!!!
ಒಂದಿಡೀ ಸಿನಿಮಾವನ್ನೇ ನೋಡಿದಂಗಾಯ್ತು ಶ್ರೀಕಾಂತಣ್ಣ!!! ಬಿಳೀ ಹೆಂಡ್ತಿ ಚಿತ್ರದ ಹಾಡುಗಳನ್ನು , ಕೆಲ ದೃಶ್ಯಗಳನ್ನು ನೋಡಿದ್ದೆ ಮುಂಚೆ. ನಿಮ್ಮ ಲೇಖನವನ್ನೋದಿ ದಂಗಾದೆ. ನಿಮ್ಮ ತಾಳ್ಮೆಗೊಂದು ಸಲಾಂ
ReplyDeleteನನಗೆ ಖುಷಿ ಸಂಗತಿ ಎಂದರೆ, ಈ ಚಿತ್ರದ ನಾಯಕರಾದ ಅನಿಲ್ ಕುಮಾರ್ ಅವರೊಂದಿಗೆ ಒಂದು ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದು.
ReplyDelete೨೦೦೦ ಇಸವಿಗೂ ಮುಂಚೆ ಗೌರ್ನಮೆಂಟ್ ಎಂಬ ಕನ್ನಡ ಸಿನಿಮಾದಲ್ಲಿ ಅವರದು ಪೊಲೀಸ್ ಅಧಿಕಾರಿಯ ಪಾತ್ರ. ನಾನು ಆ ಸಿನಿಮಾಕ್ಕೆ ಸಹ ಛಾಯಾಗ್ರಾಹಕ. ಅವರೊಂದಿಗೆ ನಾವು ತಿರುವನಂತಪುರ ಕೇಂದ್ರ ಕಾರಾಗೃಹದಲ್ಲಿ ಕೆಲವು ಸನ್ನಿವೇಶಗಳನ್ನು ಚಿತ್ತೀಕರಿಸಿಕೊಂಡೆವು.
ಅನಿಲ್ ಕುಮಾರರ ಪತ್ನಿ ಮಾಲತಿ. ಅವರು ಅದೇ ರಾಗ ಅದೇ ತಾಳ ಚಿತ್ರದಲ್ಲಿ ಅತ್ತೆ ಕಂ ದೆವ್ವ!
ನಿಮ್ಮ ಬರಹ ಓದಿ ಇಷ್ಟೂ ನೆನಪಾದವು!