ಕೊಳವೆ ಬಾವಿ ತೋಡುವಾಗ ಆ ಯಂತ್ರ ಒಂದೇ ಸಮನೆ ನೆಲವನ್ನು ಕೊರೆಯುತ್ತಾ ಹೋಗುತ್ತದೆ ಎಡಬಿಡದೆ. ಹಾಗೆಯೇ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ಅಂತಿಮ ಚಿತ್ರ ಕೂಡ. ಈ ಚಿತ್ರವನ್ನು ಅನೇಕ ಬಾರಿ ನೋಡಿದ್ದೇನೆ. ಈ ಲೇಖನ ಬರೆಯುವ ಮೊದಲು ನೋಡಲು ಕುಳಿತೆ. ಸೂಕ್ಷ್ಮವಾಗಿ ಗಮನಿಸಿದಾಗ ಅರಿವಿಗೆ ಬಂದದ್ದು, ಈ ಚಿತ್ರದಲ್ಲಿ ಅನೇಕ ಉದ್ದುದ್ದ ದೃಶ್ಯಗಳು ಇವೆ (ಲಾಂಗ್ ಶಾಟ್ಸ್). ನನಗೆ ಅಚ್ಚರಿ ಆಯಿತು, ತಾಂತ್ರಿಕತೆ ಮತ್ತು ನಿರ್ದೇಶನದ ಮೇಲೆ ಮತ್ತು ಕತೆಯ ಮೇಲೆ ಹಿಡಿತ ಇದ್ದಾಗ ಎಂಥಹ ಜಾದೂ ಮಾಡಬಹುದು ಎಂದು.
ಈ ಚಿತ್ರ ಚೆನ್ನಾಗಿದೆ ಎಂದರೆ, ಮನುಕುಲದ ಮೇಲೆಯೇ ಒಂದು ರೀತಿಯಲ್ಲಿ ವಾಕರಿಕೆ ಬರುತ್ತದೆ, ಏಕೆಂದರೆ ಇದರ ಹುಟ್ಟಿಗೆ ಮನುಕುಲದ ವಿಷಮ ಮನಸ್ಥಿತಿಯೇ ಕಾರಣ. ಶ್ರೀ ತ ರಾ ಸುಬ್ಬರಾಯರು ರಚಿಸಿದ ಅನೇಕ ಕೃತಿಗಳು ಚಲನಚಿತ್ರಗಳಾಗಿವೆ. ಇದು ಒಂದು ರೀತಿಯ ವಿಚಿತ್ರ ಪರಿಸ್ಥಿತಿ. ಪುಟ್ಟಣ್ಣ ಅವರು ಈ ಚಿತ್ರವನ್ನು ನಿರ್ದೇಶಿಸಿದ ರೀತಿ ನೋಡಿದಾಗ, ಮುಂದಿನ ಚಿತ್ರಗಳು ಹೇಗಿರಬಹುದು ಎನ್ನುವ ಒಂದು ಖುಷಿ ಮನಸ್ಸಿಗೆ ಬಂದಿದ್ದು ಸುಳ್ಳಲ್ಲ.
ಕಾರಣ, ನಾ ಮಸಣದ ಹೂವು ಕಾದಂಬರಿಯನ್ನು ಓದಿದಾಗ ಅಕ್ಷರಶಃ ಮನಸ್ಸು ಗಲಿಬಿಲಿಗೊಂಡಿದ್ದು ಮತ್ತು ಮನಸ್ಸು ತಲ್ಲಣಗೊಂಡಿದ್ದು ನಿಜ. ಮನುಜ ತನಗೆ ಬೇಕಾದ ದೇಹದ ಬಯಕೆಗೆ ಅಥವಾ ತನ್ನ ಕೆಲಸ ಸಾಧಿಸಿಕೊಳ್ಳುವ ತವಕದಲ್ಲಿ ಸಮಾಜದಲ್ಲಿ ಒಂದು ಅಸಹ್ಯ ಎನಿಸುವ ಒಂದು ಮೂಲೆಯನ್ನು ಸೃಷ್ಠಿ ಮಾಡಿದ್ದಾನೆ ಎಂದು ಅರಿವಾದಾಗ ನಿಜಕ್ಕೂ ವಕರಿಕೆಯೇ ಬರುತ್ತದೆ. ಕಾದಂಬರಿ ಕತೃ, ಆ ಲೋಕದ ದೃಶ್ಯವನ್ನು ಅಷ್ಟು ಸಹಜವಾಗಿ ಕಟ್ಟಿಕೊಟ್ಟಿದ್ದಾರೆ.
ಪುಟ್ಟಣ್ಣ ಕಣಗಾಲ್ ಅವರು ಅಕ್ಷರಶಃ ಪುಸ್ತಕದಲ್ಲಿ ಇರುವಂಥಹ ಕ್ರೌರ್ಯ, ಸಾಕಪ್ಪ ಎನ್ನಿಸುವಷ್ಟು ಮನಸ್ಸಿಗೆ ಹಿಂಸೆ ಅನ್ನಿಸುವ ದೃಶ್ಯಗಳನ್ನು ನವಿರಾಗಿ, ಮನಕ್ಕೆ ತಾಕುವಂತೆ ಚಿತ್ರೀಕರಿಸಿದ್ದಾರೆ. ಈ ರೀತಿಯ ಕಥೆಗಳನ್ನು ದೃಶ್ಯಕಾವ್ಯವಾಗಿ ಮಾಡಲು ಅದ್ಭುತ ಸೃಜನಶೀಲತೆ ಬೇಕು. ಎಲ್ಲೇ ಮೀರಲು ಎಲ್ಲಾ ಅವಕಾಶಗಳು ಇದ್ದಾಗ್ಯೂ, ಸಹ್ಯವಾಗಿ ಚಿತ್ರವನ್ನು ಕೊಟ್ಟಿರುವುದು ಅವರ ಅಸಾಧಾರಣ ಪ್ರತಿಭೆಯ ವಿರಾಟ್ ರೂಪ ಎಂಬ ಮಾತು ನನ್ನದು.
ಉತ್ತುಂಗದಲ್ಲಿದ್ದ ಅಂಬರೀಶ್ ಅಕ್ಷರಶಃ ತಮ್ಮ ಗುರುಗಳ ದಿಗ್ದರ್ಶನದಲ್ಲಿ ತಮ್ಮ ಇಮೇಜ್ ಬಿಟ್ಟು ಅಭಿನಯಿಸಿದ್ದಾರೆ. ಮೇಡಂ ನನಗೆ ಎರಡು ಸಾವಿರ ಕೊಡಿ, ನೀವು ಹೇಳಿದ ಕೆಲಸ ಮಾಡಿಕೊಂಡು ಇರುತ್ತೇನೆ ಎನ್ನುವಾಗ ಅವರ ಕಣ್ಣುಗಳಲ್ಲಿ ಕಾಣುವ ನೋವು, ಜೀವನದ ಬಗ್ಗೆ ತಿರಸ್ಕಾರ ಜೊತೆಯಲ್ಲಿಯೇ, ಹೇಗಾದರೂ ಸರಿ ಬದುಕಬೇಕು ಎನ್ನುವ ಭಾವ ಎದ್ದು ಕಾಣುತ್ತದೆ. ತಮ್ಮ ತಾಯಿಗೆ ರಾತ್ರಿಯೊಳಗೆ ನಾ ಬರದಿದ್ದರೆ, ಇಲಿ ಪಾಷಾಣ ಮತ್ತು ನೀರು ಇದೆ ಎನ್ನುವ ಧ್ವನಿಯಲ್ಲಿ ನಿರಾಶೆ, ಹತಾಶೆ ಮತ್ತು ತನ್ನ ತಾಯಿಗೆ, ಬಡತನದಿಂದ ಮುಕ್ತಿ ನೀಡಲು ವಿಷ ತಿನ್ನು ಎಂದು ಹೇಳುವಂಥಹ ದೃಶ್ಯ. ಇದರಲ್ಲಿ ಅವರ ಅಭಿನಯ ಕಣ್ಣಲ್ಲಿ ನೀರು ಮೂಡಿಸುತ್ತದೆ.
ಎರಡು ಸಾವಿರ ಕೊಡಿ ಎಂದಾಗ, ಅದಕ್ಕೆ ಕೆಲವು ನಿಯಮಗಳಿವೆ ಎಂದಾಗ, ಏನೇ ಆಗಲಿ, ನಾ ನೀವು ಹೇಳುವ ಕೆಲಸ ಮಾಡುತ್ತೇನೆ ಎಂದು ಎರಡು ಬೊಗಸೆಗಳನ್ನು ಒಡ್ಡಿ ನಿಂತಾಗ, ಯಾರ ಕಣ್ಣಲ್ಲೇ ಆದರೂ ಜೋಗದ ಹನಿ ಕಂಡೆ ಕಾಣುತ್ತದೆ. ತಲೆಹಿಡುಕನ ಪಾತ್ರದಲ್ಲಿ ಅದ್ಭುತ ಪರಕಾಯ ಪ್ರವೇಶ. ನಡೆ, ನುಡಿ, ಹಾವ ಭಾವ, ಅಬ್ಬಬ್ಬ ಎನ್ನಿಸುತ್ತದೆ.
ಜಯಂತಿ, ಮಾತೆ ಬೇಡ, ಹಲವಾರು ದೃಶ್ಯಗಳಲ್ಲಿ ಬರಿ ಕಣ್ಣುಗಳಲ್ಲೇ ಅಭಿನಯ ತೋರಿಸಿದ್ದಾರೆ. ಆ ಪಾತ್ರಕ್ಕೆ ಬೇಕಾದ ಅಂಗೀಕ ಅಭಿನಯ, ತಿರಸ್ಕಾರ, ಹಣಕ್ಕೆ ಮಾತ್ರ ಪ್ರಾಮುಖ್ಯತೆ ಮಿಕ್ಕವು ಗೌಣ ಎಂದು ಕೆಲವು ದೃಶ್ಯಗಳಲ್ಲಿ ಕಂಡು ಬಂದರೆ, ಇನ್ನೂ ಕೆಲವು ದೃಶ್ಯಗಳಲ್ಲಿ ನಂಬಿದವರನ್ನು ಸಲಹುವುದು, ಜೊತೆಯಲ್ಲಿಯೇ ಅವರನ್ನು ರಕ್ಷಿಸಲು ಮುಂದಾಗುವ ರೀತಿಯ ಅಭಿನಯ ಅವರು ಮಾತ್ರ ಮಾಡಲು ಸಾಧ್ಯ. ತಾನು ಕಳಿಸಿದ ಹುಡುಗಿಯ ವರ್ತನೆ ಬಗ್ಗೆ ಕೇಳಿಬಂದಾಗ ಕೋಪಗೊಂಡು ಆ ಹುಡುಗಿಗೆ ದಂಡಿಸುತ್ತಾರೆ, ನಂತರ ನಿಜದ ಅರಿವಾದ ಮೇಲೆ, ಆಕೆಯನ್ನು ತಬ್ಬಿಕೊಂಡು ಕ್ಷಮೆ ಕೇಳುತ್ತಾರೆ. ಇಂಥಹ ವೃತ್ತಿಯಲ್ಲಿ ಈ ರೀತಿಯ ಮಾನವೀಯತೆಯೂ ಇದೆ ಎಂದು ಕೂಗಿ ತೋರಿಸುವ ಅಭಿನಯ. ಇಡಿ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ.
ಇನ್ನು ಉಳಿದ ಪಾತ್ರಗಳು ಚಿತ್ರಕ್ಕೆ ಬೇಕಾದ ಅಗತ್ಯ ಅಭಿನಯವನ್ನು ನೀಡಿದ್ದಾರೆ. ಇಡಿ ಚಿತ್ರದ ತುಂಬಾ ತುಂಬಿಕೊಂಡಿರುವುದು ಅಂಬರೀಶ್ ಮತ್ತು ಜಯಂತಿ. ಇವರಿಬ್ಬರಿಂದ ಹಿತಮಿತವಾಗಿ, ಪರಿಣಾಮಕಾರಿಯಾಗಿ ಅಭಿನಯ ತೆಗೆದಿರುವುದು ಪುಟ್ಟಣ್ಣ ಅವರ ಅದ್ಭುತ ಹಿಡಿತ ಹೊಂದಿರುವ ನಿರ್ದೇಶನದ ಕುರ್ಚಿ.
ಪಂಚಾಮೃತದಲ್ಲಿ ಹಾಲು, ಮೊಸರು, ಸಕ್ಕರೆ, ಜೇನುತುಪ್ಪ, ಮತ್ತು ಫಲಗಳು ಸೇರಿದಂತೆ, ಪ್ರತಿ ದೃಶ್ಯವನ್ನು ಕಲೆಯ ಹಾಲಿನ ಕಡಲಲ್ಲಿ ಅದಕ್ಕೆ ಬೇಕಾಗುವ ವಿವಿಧ ಭಾವಗಳನ್ನು ಬೆರೆಸಿ ಅದ್ದಿ ತೆಗೆದಂತೆ ಚಿತ್ರೀಕರಿಸಿದ್ದಾರೆ. ಚಿತ್ರವನ್ನು ನೋಡುತ್ತಾ ಹೋದಂತೆ, ಅಲ್ಲಿ ಚಿತ್ರಕಥಾವಸ್ತುಗಿಂತಲೂ ಪುಟ್ಟಣ್ಣ ಅವರ ನಿರ್ದೇಶಕನ ಜವಾಬ್ಧಾರಿ ಕೊಂಚವೂ ಅಲುಗಾಡದಂತೆ ಆದರೆ ಅವರ ಮೇಲೆ ಹೆಮ್ಮೆ ಬರುವಂತೆ ದೃಶ್ಯಗಳನ್ನು ಪೋಣಿಸಿದ್ದಾರೆ.
ಕೆಲವು ಅದ್ಭುತ ದೃಶ್ಯಗಳು
೧) ಮೇಡಂ, ಎರಡು ಸಾವಿರ ಕೊಡಿ ಎಂದಾಗ, ನನಗೆ ಒಂದು ಮುತ್ತು ಕೊಡು ಎಂದು ಕೇಳುತ್ತಾರೆ. ಹಿಂದೆ ಮುಂದೆ ನೋಡುತ್ತಾ ನಿಂತ ನಾಯಕನಿಗೆ ಬಯ್ದು, ಒಂದು ಮುತ್ತು ಕೊಡಲು ಹಿಂದೆ ಮುಂದೆ ನೀಡುವ ನೀನು ಈ ಮನೆಯಲ್ಲಿ ಏನು ತಾನೇ ಕೆಲಸ ಮಾಡ್ತೀಯ, ಹೋಗು ಹೋಗು ಎಂದು ಅಟ್ಟುತ್ತಾರೆ. ಆಗ ಕೊಂಚವೂ ಗಲಿಬಿಲಿ ಗೊಳ್ಳದೆ ಮುತ್ತು ನೀಡುತ್ತಾರೆ, ಆದರೆ ಆ ದೃಶ್ಯವನ್ನು ತೋರಿಸುವ ರೀತಿ ಅದ್ಭುತ. ಅಶ್ಲೀಲತೆ ಇಲ್ಲವೇ ಇಲ್ಲ ಅಲ್ಲಿ. ಬದುಕಲೇ ಬೇಕು ಎಂಬ ಹಠ ಬಂದಾಗ, ಜೀವನ ತನಗೆ ತಾನೇ ದಾರಿ ತೋರಿಸುತ್ತದೆ, ಹಾಗೂ ಧೈರ್ಯ ತುಂಬುತ್ತದೆ.
೨) ಮೇಡಂ, ಸುಮ್ಮನೆ ಎರಡು ಸಾವಿರ ಗೊತ್ತಿರದ ಅವನಿಗೆ ಕೊಟ್ಟು ಬಿಟ್ಟಿರಿ, ಅವನು ಬರದೆ ಹೋದರೆ "ನೋಡು ಅವನು ನಿಯತ್ತಿನ ಮನುಷ್ಯ ಅನ್ನಿಸುತ್ತದೆ, ಒಂದು ವೇಳೆ ಬರದೆ ಹೋದರೆ, ನನ್ನ ಕಾಲುಮುಟ್ಟಿ ನಮಸ್ಕರಿಸಿದ ಅವನ ಶ್ರದ್ಧೆ ವಜಾ ಮಾಡಿಕೊಳ್ಳುತ್ತೇನೆ". ಬಂಡೆಯಲ್ಲಿ ಕೂಡ ನಂಬಿಕೆ ಇದು, ಒಲಿದರೆ ದೇವರಾಗುತ್ತದೆ, ಇಲ್ಲವೇ ಮನೆ ಕಟ್ಟಲು ಕಲ್ಲಾಗುತ್ತದೆ ಎನ್ನುತ್ತದೆ ಸುಭಾಷಿತ. ಎಷ್ಟು ನಿಜ ಅಲ್ಲವೇ.
೩) ಇದುವರೆಗೂ ಯಾರು ಯಾರಿಗೋ ಕೈ ಮುಗಿದೇ, ಆದರೆ ಇಂದು ಒಂದು ದೇವರ ಮೂರ್ತಿ ತರಹ ಇರುವ ನಿಮಗೆ ಕೈಮುಗಿಯುತ್ತೇನೆ ಎಂದು ಲೋಕನಾಥ್ ಪಾತ್ರಧಾರಿಗೆ ಕೈಮುಗಿಯುವ ಜಯಂತಿ ಅಭಿನಯ. ಆ ಮನೆಗೆ ಬರುವವರೆಲ್ಲ ಬರಿ ಸುಖಃ ಅರಸಿಕೊಂಡು ಬರುವವರಲ್ಲ, ಬದಲಿಗೆ ಮಾನವೀಯತೆಯನ್ನು ಅರಸಿಕೊಂಡು ಬರುವವರು ಇದ್ದಾರೆ ಎನ್ನುವ ನಿರೂಪಣೆ ಇಲ್ಲಿದೆ.
ಈ ಚಿತ್ರದ ದೊಡ್ಡ ಆಸ್ತಿ ಚಿತ್ರದಲ್ಲಿ ಅದ್ಭುತವಾಗಿ ಚಿತ್ರೀಕರಣಗೊಂಡ ಹಾಡುಗಳು. ಇಂಥಹ ಚಿತ್ರದಲ್ಲೂ ಕರುನಾಡನ್ನು, ಅದರ ಸೊಬಗನ್ನು ತೋರಿಸುವ ಪುಟ್ಟಣ್ಣ ಅವರ ವಿಶಿಷ್ಟ ಭಾವ ಇಲ್ಲೂ ಇದೆ. ಬಹುತೇಕ ಕರಾವಳಿ ಪ್ರದೇಶಗಳಲ್ಲಿ ಚಿತ್ರಿತವಾಗಿರುವ "ಕನ್ನಡ ನಾಡಿನ ಕರಾವಳಿ" ಜಯಚಂದ್ರನ್ ಮತ್ತು ವಾಣಿ ಜಯರಾಂ ಅವರ ಜೇನಿನ ಕಂಠದಲ್ಲಿ ಮೂಡಿ ಬಂದಿದೆ. ಎಸ್ ಆರ್ ಎಕ್ಕುಂಡಿ ಅವರ ಅಮೋಘ ಸಾಹಿತ್ಯಕ್ಕೆ ಕರಾವಳಿಯ ಎಲ್ಲಾ ಪ್ರಕಾರದ ಸಂಗೀತ ಒದಗಿಸಿರುವ ವಿಜಯಭಾಸ್ಕರ್, ಮತ್ತು ನೃತ್ಯ ಸಂಯೋಜನೆ, ಕರುನಾಡಿನ ವಿಶಿಷ್ಠತೆಯನ್ನು ಎತ್ತಿ ತೋರಿಸುವ ಹಾಡಾಗಿ ಉಳಿದುಕೊಂಡು ಬಂದಿದೆ.
ಪ್ರೀತಿ ಎಲ್ಲಿಂದ ಹುಟ್ಟುತ್ತೆ ಹೇಗೆ ಜೀವನವನ್ನು ಬೆಳಗಬಲ್ಲದು ಎನ್ನುವ ಅನೇಕ ಪ್ರಶ್ನೆಗಳಿಗೆ ಹಾಡಿನ ರೂಪದಲ್ಲಿ ಚಿತ್ರೀಕರಿಸಿದ್ದಾರೆ "ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ" ಮತ್ತೊಮ್ಮೆ ಜಯಚಂದ್ರನ್ ಮತ್ತು ವಾಣಿ ಜಯರಾಂ ಮನಸ್ಸಿನ ಮೂಲೆ ಮೂಲೆಯನ್ನು ತಟ್ಟುತ್ತಾರೆ. ವಿಜಯನಾರಸಿಂಹ ಅವರ ಸರಳ ಆದರೆ ಪರಿಣಾಮಕಾರಿ ಸಾಹಿತ್ಯ ಇಷ್ಟವಾಗಲೇ ಬೇಕು. ಪ್ರೇಮಿಗಳ ಹಾಡಾಗಿ ಬರುತ್ತದೆ.
ಒಂದು ಕ್ಷಣದ ಆದರೆ ಜೀವನದ ಗತಿಯನ್ನು ಬದಲಾಯಿಸಬಲ್ಲ ತಿರುವನ್ನು ಒಂದು ಹಾದಿ ಬಿಟ್ಟ ಹುಡುಗಿಗೆ ಕೊಡುವ ನಾಯಕನನ್ನು ಕನಸಿನಲ್ಲಿ ಮತ್ತು ಮನಸ್ಸಿನಲ್ಲಿಯೇ ಅಭಿನಂದಿಸುವ ಹಾಡಾಗಿ ಬಂದಿದೆ "ಓ ಗುಣವಂತ". ಈ ಹಾಡಿನ ಸಾಹಿತ್ಯ ಎಷ್ಟು ಬಾರಿ ಕೇಳಿದರೂ, ಹೊಸ ಹೊಸ ರೀತಿಯಲ್ಲಿ ಮನಸ್ಸಿಗೆ ತಾಕುತ್ತದೆ. ಕನಸ್ಸುಗಳ ಮೂಟೆಯನ್ನು ಹೊತ್ತು ಸಾಗುವಾಗ ಬರುವ ಒಂದು ವಿಚಿತ್ರ ತಿರುವು ಮತ್ತು ಆ ತಿರುವಿಗೆ ಒಂದು ಕೊಂಕು ಹಾಕಿ, ಮತ್ತೆ ಹಳಿಗೆ ಬರುವ ಜೀವನ ಪಥವನ್ನು ತೋರುವ ಆ ನಾಯಕನಿಗೆ ಧನ್ಯವಾದಗಳನ್ನು ಅರ್ಪಿಸುವ ಹಾಡನ್ನು ಎಸ್ ಜಾನಕಿಯಮ್ಮ ಆಪೋಶನ ಮಾಡಿ ಹಾಡಿದ್ದಾರೆ. ಸಂಗೀತ, ಅದಕ್ಕೆ ತಕ್ಕಂತೆ ಸಾಹಿತ್ಯ, ಅದಕ್ಕೆ ಬೇಕಾದ ಅದ್ಭುತ ಗಾಯನ... ನಾ ಹೇಳೋಲ್ಲ ನೀವೇ ಕೇಳಿ ಈ ಹಾಡನ್ನು ತಲೆದೂಗದೆ ಇರಲು ಸಾಧ್ಯವೇ ಇಲ್ಲ.
ಚಂದ್ರ ತೋರಿಸಲೇ, ನಕ್ಷತ್ರಗಳನ್ನು ನಿನ್ನ ಮುಡಿಗೆ ಪೋಣಿಸಲೇ ಎಂದು ಇಲ್ಲದ ಆಸೆ ಹುಟ್ಟಿಸುವ ಪ್ರೇಮಿಗಳ ಆಶಾಪಾಶದ ಮಧ್ಯದಲ್ಲಿ, ನನ್ನ ಮಟ್ಟ ಹೀಗಿದೆ, ನನಗೆ ಅದು ತರಲು ಆಗೋಲ್ಲ, ಇದು ತರಲು ಅಸಾಧ್ಯ ಎಂದು ಹೇಳುತ್ತಲೇ, ನಿನಗಾಗಿ ಏನು ತರಲಿ ಹೇಳು ಎಂದು ಪ್ರೀತಿಯ ನಿವೇದನೆ ಮಾಡುವ ಹಾಡಿನಲ್ಲಿ ಎಸ್ ಅರ್ ಎಕ್ಕುಂಡಿ ವಿರಚಿತ "ಯಾವ ಕಾಣಿಕೆ ನೀಡಲಿ" ಎಂದು ಎಸ್ ಪಿ ಬಾಲಸುಬ್ರಮಣ್ಯಂ ಮನವನ್ನು ತಟ್ಟುತ್ತಾರೆ.
ಕಸದ ಬಿದ್ದ ಹೂವಿಗೂ ಬೆಲೆಯಿದೆ, ಮುದುಡಿ ಹೋದ ಮಾಲೆಗೆ ಬೆಲೆ ಕಟ್ಟುವ ಮನಸಿದ್ದರೆ ಸಾಕು, ಅದು ಹೃದಯ ಕಮಲದ ಗುಡಿಯಲ್ಲಿ ಪೂಜೆಗೆ ಅರ್ಹವಾಗುವ ಮನಸ್ಸಿಗೆ ಅರ್ಪಿತವಾಗುತ್ತದೆ ಎನ್ನುವ ಒಂದು ಹೃದಯ ಹಿಂಡುವ ಸಾಹಿತ್ಯ "ಮಸಣದ ಹೂವೆಂದು ನೀನೇಕೆ ಕೊರಗುವೆ" ಹಾಡು, ಇಲ್ಲಿ ಎಸ್ ಪಿ ಬಾಲಸುಬ್ರಮಣ್ಯಂ ಅವರ "ಪಾರ್ವತಿ" ಎಂದು ಕೂಗುವ ಶಬ್ದ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರುತ್ತದೆ.
ಹಾಡುಗಳು ಚಿತ್ರದ ಅವಿಭಾಜ್ಯ ಅಂಗ ಮತ್ತು ಅದು ಕತೆಯನ್ನು ಮುಂದುವರೆಸಲು ಸಹಾಯವಾಗುತ್ತದೆ ಎಂದು ಬಲವಾಗಿ ನಂಬಿದ್ದ ಪುಟ್ಟಣ್ಣ ಕಣಗಾಲ್ ತಮ್ಮ ಅಂತಿಮ ಚಿತ್ರದಲ್ಲಿಯೂ ಕೂಡ ಹಾಡುಗಳನ್ನು ಸರಿಯಾದ ಜಾಗದಲ್ಲಿ ಅಳವಡಿಸಿಡಿಸಿ ಕಥೆಯ ಓಟಕ್ಕೆ ಒಂದು ನಿರ್ಧಿಷ್ಟ ವೇಗವನ್ನು ಕೊಟ್ಟಿದ್ದಾರೆ.
ಇಡಿ ಚಿತ್ರ ಎಲ್ಲೂ ಒಂದಿನಿತು ಬೇಸರ ತರಿಸುವುದಿಲ್ಲ. ಒಬ್ಬ ಜಾದೂಗಾರ ಯಕ್ಷಿಣಿ ಮಾಡಿ ಮಾಡಿ ಜನರ ಮನಸ್ಸನ್ನು ಗೆಲ್ಲುವಂತೆ, ಪ್ರತಿ ದೃಶ್ಯಗಳನ್ನು ಜಾದೂಗಾರಿಕೆಯ ದಂಡದಿಂದ ಸ್ಪರ್ಶ ಮಾಡಿ, ಮರೆಯದ ಮಾಣಿಕ್ಯವನ್ನು ಬೆಳ್ಳಿ ತೆರೆಯಲ್ಲಿ ಬೆಳಗಿಸಿದ್ದಾರೆ.
ಅನುಗ್ರಹ ಮೂವಿ ಮೇಕರ್ಸ್ ಲಾಂಛನದಲ್ಲಿ ಬಿ ಎಸ್ ಗಾಯತ್ರಿ ಮತ್ತು ಎಸ್ ಆರ್ ಸರ್ವೋತ್ತಮ ಕಣಗಾಲ್ ಅವರ ನಿರ್ಮಾಣದಲ್ಲಿ ಮೂಡಿ ಬಂದ ಈ ಚಿತ್ರ ರತ್ನಕ್ಕೆ ಛಾಯಾಗ್ರಾಹಣ ಮಾಡಿದವರು ಎಸ್ ಮಾರುತಿರಾವ್. ಸರಳ ಆದರೆ ಪರಿಣಾಮಕಾರಿ ಸಂಭಾಷಣೆ ನೀಡಿದವರು ಟಿ ಜಿ ಅಶ್ವತ್ ನಾರಾಯಣ.
ತಮ್ಮ ಎಲ್ಲಾ ಕಾಯಕಕ್ಕೂ ಪ್ರೇರೇಪಣೆ ನೀಡಿದ ಜಗನ್ಮಾತೆಯನ್ನು ಸ್ಮರಿಸುತ್ತಾ ಆ ಮಾತೆಯ ದಿಗ್ದರ್ಶನದಲ್ಲಿ ಈ ದೃಶ್ಯ ಕಾವ್ಯವನ್ನು ಕಟ್ಟಿಕೊಟ್ಟವರು ಪುಟ್ಟಣ್ಣ ಕಣಗಾಲ್ ಅವರು.
ತಾವು ಕಂಡ ರೀತಿಯಲ್ಲಿ ಚಿತ್ರವನ್ನು ಮುಗಿಸುವ ಮೊದಲೇ ಆ ಜವರಾಯನ ಕರೆಗೆ ಓಗೊಟ್ಟು ಇಹಲೋಕದಿಂದ ಹೊರನೆಡೆದ ಮೇಲೆ, ಅವರಿಗೆ ಗೌರವ ಸಲ್ಲಿಸುತ್ತಲೇ, ಉಳಿದ ಭಾಗವನ್ನು ಆದಷ್ಟು ಪುಟ್ಟಣ್ಣ ಅವರ ಕಲ್ಪನೆಯಲ್ಲಿ ಇರಬಹುದು ಎನ್ನುವ ರೀತಿಯಲ್ಲಿ ಚಿತ್ರವನ್ನು ಪೂರ್ಣಗೊಳಿಸಿ, ತಾವು ಚಿತ್ರೀಕರಿಸಿದ ಭಾಗದಲ್ಲಿ ತಪ್ಪಿದ್ದರೆ ಅದು ತಮ್ಮದೇ ಎಂದು ಹೇಳಿ ತಮ್ಮ ಗೆಳೆಯ ಪುಟ್ಟಣ್ಣ ಕಣಗಾಲ್ ಅವರಿಗೆ ವಂದನೆ ಅರ್ಪಿಸುವ ಇತ್ತೀಚಿಗಷ್ಟೇ ಪುಟ್ಟಣ್ಣ ಕಣಗಾಲ್ ಅವರನ್ನು ಸ್ವರ್ಗದಲ್ಲಿ ಭೇಟಿ ಮಾಡಲು ತೆರಳಿದವರು ರವಿ ಅಥವಾ ಕೆ ಎಸ್ ಎಲ್ ಸ್ವಾಮೀ.
ಈ ಚಿತ್ರದ ಹೆಸರು ಮಸಣದ ಹೂವು ಎಂದಿದ್ದರೂ ಕನ್ನಡಿಗರ ಮತ್ತು ಚಲನ ಚಿತ್ರ ರಸಿಕರ ಹೃದಯ ಕಮಲದಲ್ಲಿ ಈ ಚಿತ್ರ ಎಂದೂ ಬಾಡದ ಪಾರಿಜಾತ ಹೂವಾಗಿ ಸದಾ ನಗುನಗುತ್ತಲೇ ಇರುತ್ತದೆ.
ಪುಟ್ಟಣ್ಣ ಕಣಗಾಲ್ ಮತ್ತು ರವಿ ಅವರಿಗೆ ಈ ಲೇಖನ ಅರ್ಪಿತ.
ಪುಟ್ಟಣ್ಣ ಕಣಗಾಲ್ ಅವರ ಪ್ರತೀ ಚಿತ್ರಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ಒಬ್ಬ ಪ್ರೇಕ್ಷಕ ವಿಮರ್ಶೆ ಬರೆಯೋದು ಅಚ್ಚರಿಯೇ ಸರಿ . ಆ ಕೆಲಸ ಮಾಡಿದ ನಿಮಗೆ ಮೊದಲು ಅಭಿನಂದನೆ . ಮಸಣದ ಹೂ ಚಿತ್ರ ಕಥೆಯೇ ಬಹಳ ಸೂಕ್ಷ್ಮವಾದ ವಿಚಾರ ಹೊಂದಿತ್ತು, ಆದರೆ ಇಂತಹ ವಿಚಾರಗಳನ್ನು ಸಮಾಜದ ಸ್ವಾಸ್ತ್ಯ ಕೆಡಿಸದೆ ಪ್ರೇಕ್ಷಕರಿಗೆ ಹೇಗೆ ಅರ್ಥಪೂರ್ಣವಾಗಿ ತಲುಪಿಸಬೇಕು ಅನ್ನೋದು ಪುಟ್ಟಣ್ಣ ಅವರಿಗೆ ಗೊತ್ತಿತ್ತು. ಮಸಣದ ಹೂ ನಲ್ಲಿ ಒಂದು ವಿಶೇಷ ಪ್ರತಿಭೆಯನ್ನು ಪುಟ್ಟಣ್ಣ ಪರಿಚಯಿಸಿದ್ದು ಸ್ವಚ್ಚಕನ್ನಡದ ಒಡತಿ ಅಪರ್ಣ ಅವರನ್ನು . ಇನ್ನು ಈ ಚಿತ್ರದಲ್ಲಿ ಜಯಂತಿ, ಅಂಬರೀಶ್ ಪಾತ್ರಗಳು ಅವರ ನಟನಾ ಜೀವನದ ಅದ್ಭುತ ಪಾತ್ರಗಳೇ ಸರಿ . ೧೯೮೫-೮೬ ನೆ ಸಾಲಿನಲ್ಲಿ ಈ ಇಬ್ಬರಿಗೂ ಉತ್ತಮ ನಟನೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಬಂತು, ಇದರ ಜೊತೆಗೆ ಉತ್ತಮ ಸಂಭಾಷಣೆಗೆ ಟಿ. ಎಸ. ಅಶ್ವಥ ನಾರಾಯಣ, ಉತ್ತಮ ಛಾಯಾಗ್ರಹಣಕ್ಕಾಗಿ , ಎಸ. ಮಾರುತಿ ರಾವ್ , ಉತ್ತಮ ಶಬ್ದ ಗ್ರಹಣಕ್ಕಾಗಿ ಸಿ. ಡಿ.ವಿಶ್ವನಾಥ್ ಹಾಗು ಉತ್ತಮ ಕಲಾನಿರ್ದೆಶನಕ್ಕಾಗಿ ವಿಶೇಷವಾಗಿ ಅರುಣ್ ಡಿ. ಗಾವ್ಕರ್ ರವರಿಗೆ ಸಹ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಬಂತು. ಈ ಚಿತ್ರದ "ಮಸಣದ ಹೂವೆಂದು ನೀನೇಕೆ ಜರಿಯುವೆ , ಮಸಣದ ವಾಸಿಯು ಮಹಾದೇವನಲ್ಲವೇ " ಎಂಬ ಹಾಡು ನಮ್ಮ ಸಮಾಜದ ದುರಂತ ಸನ್ನಿವೇಶಗಳನ್ನು ಕಣ್ಣಮುಂದೆ ತರುತ್ತದೆ. ೧೯೮೪ ರಲ್ಲಿ ಹೊಸ ಚಿಂತನೆ ಮೂಡಿಸಿದ ಚಿತ್ರವಿದು, ಎಲ್ಲರ ಮನ ಮುಟ್ಟುವಂತೆ ಚಿತ್ರಕ್ಕೆ ಹೆಸರನ್ನು ಇಡುವುದರಲ್ಲಿ ಪುಟ್ಟಣ್ಣ ಕಣಗಾಲ್ ಸಿದ್ದ ಹಸ್ತರು ಈ ಚಿತ್ರದಲ್ಲಿಯೂ ಸಹ "ಮಸಣದ ಹೂವು" ಎಂಬ ಹೆಸರನ್ನು ಇಟ್ಟು ಮಹಿಳೆಯರ ಘನತೆಗೆ ಎಲ್ಲಿಯೂ ಚ್ಯುತಿ ಬರದಂತೆ ವೈಶ್ಯೆ ಯರ ಬದುಕಿನ ಒಂದು ಭಾಗವನ್ನು ಅನಾವರಣ ಮಾಡಿದ್ದಾರೆ . ಮಸಣದಲ್ಲಿ ಅರಳುವ ಹೂವನ್ನು ದೇವರಿಗೆ ಅಥವಾ ಮಹಿಳೆಯರ ಅಲಂಕಾರಕ್ಕೆ ಬಳಸದ ಹಾಗೆ ಸಮಾಜದಲ್ಲಿ ಕೆಲವು ಹೆಣ್ಣುಮಕ್ಕಳ ಜೀವನ ಸಾಗಿದೆ ಎಂಬ ಅರ್ಥ ಬರುವಂತಹ ಶೀರ್ಷಿಕೆ ಈ ಚಿತ್ರದ ವಿಶೇಷ . ಬಹಳ ಒಳ್ಳೆಯ ವಿಮರ್ಶೆ ನಿಮ್ಮದು ಮತ್ತೊಂಮ್ ಶ್ರೀಕಾಂತ್ ಅಕ್ಷರ ಮೋಡಿಗೆ ಜೈ ಹೋ
ReplyDeleteಮತ್ತೊಂದು ವಿಚಾರ ಅಂದ್ರೆ ಮಸಣದ ಹೂವು ಚಿತ್ರವು ತಯಾರಿಕೆ ಹಂತದಲ್ಲಿದ್ದಾಗ ಜೂನ್ ೫, ೧೯೮೫ ರಂದು ಚೆನ್ನೈ ನಲ್ಲಿ ನಿಧನರಾದರು. ಅರ್ಧ ಚಿತ್ರೀಕರಣಗೊಂಡಿದ್ದ ಮಸಣದ ಹೂವು ಚಿತ್ರದ ಉಳಿದ ಭಾಗವನ್ನು ಪುಟ್ಟಣ್ಣನವರ ಶಿಷ್ಯರಾದ ಕೆ.ಎಸ್.ಎಲ್.ಸ್ವಾಮಿಯವರು ಪೂರ್ತಿಗೊಳಿಸಿದರು.
ReplyDelete