Friday, October 2, 2026

ಮಕ್ಕಳೇ ದೇವರು ಎಂದ ದೇವರ ಮಕ್ಕಳು 1970 (ಅಣ್ಣಾವ್ರ ಚಿತ್ರ ೧೨೫/೨೦೭)

ನೂರಿಪ್ಪತ್ತಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿದ ನಾಯಕ.. ಈ ರೀತಿಯ ಕಥೆಗಳನ್ನು ಪಾತ್ರವನ್ನು ಒಪ್ಪಿಕೊಳ್ಳುತ್ತಾರೆ ಅಂದರೆ ಆತ ಕಥೆಗಾರ, ನಿರ್ಮಾಪಕ, ನಿರ್ದೇಶಕರ ಮೇಲೆ ಇಟ್ಟಿರುವ ವಿಶ್ವಾಸ, ನಂಬಿಕೆ ಎಷ್ಟು ಎನ್ನುವುದು ಅರಿವಾಗುತ್ತದೆ. 

ಗಟ್ಟಿಯಾಗಿ ನೆಲೆ ನಿಂತಿರುವ ನಾಯಕ ಒಪ್ಪಿಕೊಂಡು ಮಾಡುವ ಪಾತ್ರವಲ್ಲ ಇದು ಎನ್ನುವುದು ಅನೇಕರ ಅಭಿಪ್ರಾಯ.. ಹಾಗೆ ನನ್ನದೂ ಕೂಡ.. ಆದರೆ ರಾಜಕುಮಾರ್ ಈ ಪಾತ್ರಕ್ಕೆ ವಿಭಿನ್ನ ಆಯಾಮ ನೀಡಿ.. ಆ ಪಾತ್ರವನ್ನು ಒಂದು ಸಾತ್ವಿಕತೆಯ ನೆಲೆಗಟ್ಟಿನಲ್ಲಿ ನಿಲ್ಲಿಸಿರುವುದು ಅವರ ಅಭಿನಯದ ಮೇಲಿನ ಶ್ರದ್ದೆ ಹಾಗೂ ನಂಬಿಕೆಯನ್ನು ತೋರಿಸುತ್ತದೆ. 


ಅನಾಥ, ಬಡತನ, ಕಳ್ಳತನ, ರಿಮ್ಯಾಂಡ್ ಹೋಂ, ಹೆಚ್ಚು ಓದಿನ ಅವಕಾಶವಿಲ್ಲ, ಕೂಲಿ ಕೆಲಸ, ದಾರಿಯಲ್ಲಿ ಸಿಕ್ಕಿದ ಯಾರದೋ ಮಗುವನ್ನು ಸಾಕಲು ಪಡುವ ಪಾಡು, ನಾಯಕಿ ಎದುರು ತಾನು ಕಳ್ಳತನ ಮಾಡಿ ಪೊಲೀಸ್ ತನ್ನ ಹಿಂದೆ ಬಂದಿದ್ದರೂ ತಾನು ಸಭ್ಯಸ್ತ ಅಂತ ಪೋಸು ಕೊಡುವ ಪಾತ್ರವಿದು.. ಜೈಲಿನಲ್ಲಿ ಕಳ್ಳ,ಕೊಲೆಗಾರರ ಮಧ್ಯೆ ಇದ್ದುಕೊಂಡು ತನ್ನ ತನವನ್ನು ಉಳಿಸಿಕೊಳ್ಳುವ ಪಾತ್ರವಿದು. ತನ್ನ ಗೆಳೆಯ ಕಳ್ಳತನ ಮಾಡುತ್ತಿದ್ದರೂ, ತಾನು ಅದರ ಕಡೆ ವಾಲದೆ ನ್ಯಾಯವಾಗಿ ಬೆವರು ಸುರಿಸಿ ದುಡಿಯಬೇಕು ಅದಕ್ಕೆ ಯಾವುದೇ ಚಿಕ್ಕ ಕೆಲಸವಾದರೂ ಸರಿ ಅಂತ ಕಟ್ಟಿಗೆ ಒಡೆಯುವುದು, ಮೂಟೆ ಹೊರೋದು, ಸಣ್ಣ ಸಣ್ಣ ಗೊಂಬೆಗಳನ್ನು ಬೀದಿ ಬೀದಿಯಲ್ಲಿ ಮಾರಿ ಹೊಟ್ಟೆ ತುಂಬಿಸಿಕೊಳ್ಳುವ ಪ್ರಯತ್ನ, ನಾಯಕಿಯ ಸಹಾನೂಭೂತಿ ಇದ್ದರೂ ಅದನ್ನು ದುರುಪಯೋಗ ಪಡಿಸಿಕೊಳ್ಳದೆ ನಾಯಕಿಯ ಕಣ್ಣಲ್ಲಿ ಸಭ್ಯಸ್ತನಾಗಿ ಇರುವ.. ಈ ರೀತಿಯ ಸಂಕೀರ್ಣತೆಯನ್ನು ತುಂಬಿಕೊಂಡಿರುವ ಪಾತ್ರವನ್ನು ಎಷ್ಟು ಅಚ್ಚುಕಟ್ಟಾಗಿ ತೆರೆಯ ಮೇಲೆ ತಂದಿದ್ದಾರೆ ರಾಜಕುಮಾರ್ ಅಂದರೆ.. ಇಂತಹ ಜನಪ್ರಿಯ ನಾಯಕ ಈ ರೀತಿಯ ಪಾತ್ರಗಳನ್ನು  ಮಾಡಿದಾಗ ನೋಡುವ ಮಂದಿ ತಮ್ಮನ್ನು ತಾವೇ ಆ ಪಾತ್ರದಲ್ಲಿ ಕಾಣುತ್ತಾರೆ ಎನ್ನುವಷ್ಟು ನೈಜವಾಗಿ ಮೂಡಿ ಬಂದಿದೆ. 

ತನ್ನ ಬಾಲ್ಯದ ಗೆಳೆಯನ ಆರೋಗ್ಯದ ಸಲುವಾಗಿ ಕಳ್ಳತನ ಮಾಡಿ ಜೈಲಿಗೆ ಹೋದರೂ, ನಂತರ ತನ್ನ ಸ್ನೇಹಿತ ದೊಡ್ಡ ಮನುಷ್ಯರ ಸಹಾಯದಿಂದ ಚೆನ್ನಾಗಿ ಓದಿ ವಿದೇಶ ವ್ಯಾಸಂಗ ಮಾಡಿ ಬಂದರೂ, ಆತನ ಬಳಿ ಸಹಾಯಕ್ಕೆ ಕೈ ಚಾಚದೆ ಆತನಿಗೆ ನೆರವಾಗುವ, ಆತನ ಮಗುವನ್ನು ಉಳಿಸುವ ಪಾತ್ರದಲ್ಲಿ ರಾಜಕುಮಾರ್  ಯಶಸ್ವಿಯಾಗಿದ್ದಾರೆ. 

ನಾಯಕಿಯಾಗಿ ಜಯಂತಿ ಇಷ್ಟವಾಗಲು ಕಾರಣ ಮುದ್ದಾದ ಮುಖ, ಹಳ್ಳಿಯ ಸೊಗಡಿನ  ಧೈರ್ಯವಾದ ಮಾತುಗಳು, ಮುಗ್ಧತೆ. 

ರಾಜೇಶ್ ಸುಂದರವಾಗಿ ಕಾಣುತ್ತಾರೆ.. ದೃಶ್ಯಗಳು ಕಡಿಮೆಯಿದ್ದರೂ ಅವರ ಪಾತ್ರಕ್ಕೆ ತಕ್ಕ ಪ್ರಾಮುಖ್ಯತೆ ಇದೆ. 

ನಾಯಕನ ಜೊತೆಯಲ್ಲಿ ಚಿತ್ರದ ಪೂರ್ತಿ ಕಾಣುವ ನರಸಿಂಹರಾಜು ಅವರು ಭಾವನಾತ್ಮಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಹಾಸ್ಯ ಪಾತ್ರದ ಹಾದಿ ಒಂದು ರೀತಿಯಲ್ಲಿ ಭಾವನಾತ್ಮಕವಾಗಿ ತಿರುಗುತ್ತಿದೆ ಎಂಬ ಸುಳಿವು ಇಲ್ಲಿದೆ. 

ಉಳಿದಂತೆ ಸಂಪತ್, ಜಯಶ್ರೀ, ಇಂದಿರಾ ಜಾರ್ಜ್, ಕಲ್ಪನಾ ಮತ್ತು ಚಿತ್ರದ ಅಂತ್ಯದ ಕೆಲವು ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಎಂ ಪಿ ಶಂಕರ್ ಇದ್ದಾರೆ. 

ಜಿ ಕೆ ವೆಂಕಟೇಶ್ ಅವರ ಸಂಗೀತದಲ್ಲಿ ಹಾಡುಗಳೆಲ್ಲೆವೂ ಚೆನ್ನಾಗಿದೆ. 

ಚಿ ಉದಯಶಂಕರ್ ಅವರ ಸಾಹಿತ್ಯ ಸಂಭಾಷಣೆ ಸೊಗಸಾಗಿದೆ 

ಎಸ್ ಜಾನಕೀ ಮತ್ತು ಪಿ ಬಿ ಶ್ರೀನಿವಾಸ್ ಹಾಡುಗಳಿಗೆ  ಧ್ವನಿಯಾಗಿದ್ದಾರೆ. 

ಮ ನಾ ಮೂರ್ತಿ ಅವರ ಮನಮಿಡಿಯುವ "ಮೀನಾ"ಕಾದಂಬರಿ ಆಧಾರಿತ ಚಿತ್ರವಿದು. 

ಉತ್ತಮ ಚಿತ್ರಕತೆ ಮಾಡಿ ನಿರ್ದೇಶನ ಮಾಡಿರುವುದು ವೈ ಆರ್ ಸ್ವಾಮಿ 

ಛಾಯಾಗ್ರಹಣ ಎನ್ ಜಿ ರಾವ್ 

ಭಾರತ್ ಎಂಟರ್ಪ್ರೈಸಸ್ ಲಾಂಛನದಲ್ಲಿ ಜಿ ಎನ್ ಲಕ್ಷ್ಮೀಪತಿ ನಿರ್ಮಿಸಿದ್ದಾರೆ.










































No comments:

Post a Comment