ಶ್ರೀಕಾಂತ್ ಅಂಡ್ ಶ್ರೀಕಾಂತ್ ಎಂಟರ್ಪ್ರೈಸಸ್ ನವರು ಕನ್ನಡಲ್ಲಿ ಉತ್ತಮ ಚಿತ್ರಗಳನ್ನು ನಿರ್ಮಿಸಿದ್ದಾರೆ.. ಅದರಲ್ಲಿ ಇನ್ನೊಂದು ಚಿತ್ರರತ್ನ ನಮ್ಮ ಸಂಸಾರ. ಜಿ ಬಾಲಸುಬ್ರಮಣ್ಯಂ ಅವರ ಕಥೆಯನ್ನು ಆಧರಿಸಿ ಚಿತ್ರಕಥೆ ಮತ್ತು ನಿರ್ದೇಶನ ಮಾಡಿದವರು ಸಿದ್ದಲಿಂಗಯ್ಯ.
ಶ್ರೀಕಾಂತ್ ಅವರ ಛಾಯಾಗ್ರಹಣ..
ನಿರ್ಮಾಪಕರ ಮೆಚ್ಚಿನ ಸಂಗೀತ ನಿರ್ದೇಶಕ ಎಂ ರಂಗರಾವ್ ಮತ್ತೊಮ್ಮೆ ಸುಮಧುರ ಹಾಡುಗಳನ್ನು ತಂದಿದ್ದಾರೆ
ಚಿ ಉದಯಶಂಕರ್ ಮತ್ತು ಆರ್ ಎನ್ ಜಯಗೋಪಾಲ್ ಅವರ ಸಾಹಿತ್ಯ..
ಪಿ ಬಿ ಶ್ರೀನಿವಾಸ್, ಪಿ ಸುಶೀಲ, ಎಸ್ ಪಿ ಬಾಲಸುಬ್ರಮಣ್ಯಂ ಬಿಕೆ ಸುಮಿತ್ರಾ ಮತ್ತು ಎಲ್ ಆರ್ ಈಶ್ವರಿ ಅವರ ಗಾಯನ..
ನಮ್ಮ ಸಂಸಾರ ಆನಂದ ಸಾಗರ ಇದೊಂದು ಕರುನಾಡಿನ ಕೌಟುಂಬಿಕ ಗೀತೆಯಾಗಿ ಪ್ರಸಿದ್ದಿಯಾಗಿದೆ
ಹೆಣ್ಣು ಎಂದರೆ ಹೀಗರಬೇಕು ಹೆಣ್ಣಿನ ನೆಡೆನುಡಿಯನ್ನು ಹೀಗಿರಬೇಕು ಎಂದು ಹೇಳುವ ಗೀತೆ
ಶರಣರ ಕಾಯೋ ಜಗನ್ನಾಥ ಪ್ರಾರ್ಥನೆ ಗೀತೆಯಾಗಿದ
ಓ ಮೈ ಡಾರ್ಲಿಂಗ್ ಒಂದು ಕ್ಯಾಬರೆ ಗೀತೆಯಾಗಿದೆ
ಸಿದ್ಧಸೂತ್ರಗಳಿದ್ದ ಸಿನೆಮಾವಾದರೂ.. ಭಾವುಕತೆಯನ್ನು, ಕುಟುಂಬಿಕ ವ್ಯವಸ್ಥೆಯನ್ನು ಎತ್ತಿ ಹಿಡಿಯುವಂಥಹ ಚಿತ್ರವಿದು..
ಕೂಡು ಕುಟುಂಬ.. ಒಬ್ಬ ಶ್ರಮಜೀವಿ.. ಮಿಕ್ಕವರು ಕೈಲಾದ ಮಟ್ಟಿಗೆ ಮನೆಯ ಇತರೆ ಕೆಲಸಗಳನ್ನು ಮಾಡುವುದು.. ಎಲ್ಲರ ಪರಿಶ್ರಮ ಒಬ್ಬ ಓದಲಿ ಎಂದು ಪ್ರೋತ್ಸಾಹ ನೀಡುವುದು.. ಓದಿ ಒಳ್ಳೆಯ ನಮ್ಮನ್ನೆಲ್ಲಾ ಕಾಪಾಡುತ್ತಾನೆ ಎನ್ನುವ ಭರವಸೆ.. ಆ ಭರವಸೆ ನಿಜವಾಗುವ ಸಮಯದಲ್ಲಿ.. ಸಂಘ ದೋಷದ ಸಹವಾಸ, ಪಟ್ಟಣದ ಬೆಡಗು ಬಿನ್ನಾಣಗಳಿಗೆ ಮನಸೋತು.. ಹಾದಿ ತಪ್ಪುವ ಪ್ರಸಂಗ.. ನಂತರ ಇದು ಬಲು ತಳುಕು ಬಳುಕಿನ ಪ್ರಪಂಚ ಎಂದು ಅರಿವಾಗಿ ಮತ್ತೆ ಮರಳಿ ಬರುವುದು.. ಸಿರಿವಂತರ ಸೋಗಲಾಡಿತನ ಕನ್ನಡಿಯೊಳಗಿನ ಗಂಟು ಎನ್ನುವುದು.. ಈ ಚಿತ್ರದ ತಿರುಳು..
ರಾಜಕುಮಾರ್ ಇಲ್ಲಿ ಮುದ್ದಾಗಿ ಕಾಣುವುದಷ್ಟೇ ಅಲ್ಲದೆ.. ಅದ್ಭುತ ಅಭಿನಯ ನೀಡಿದ್ದಾರೆ. ಮನೆಯ ಅಘೋಷಿತ ಯಜಮಾನನಾಗಿ ಮನೆಯ ಪ್ರತಿಯೊಬ್ಬರ ಹಿತಾಸಕ್ತಿಯನ್ನು ಗಮನಿಸುತ್ತಾ.. ತಾಯಿಯ ಪ್ರೀತಿಯನ್ನು.. ಮಾವನ ರಕ್ಷಣೆಯನ್ನು.. ತಮ್ಮ ಓದಿಗೆ ಸಹಾಯ ಮಾಡುವುದನ್ನು.. ಮಾವನ ಮಗಳನ್ನು ತನ್ನ ತಮ್ಮನಿಗೆ ತಂದು ಕೊಳ್ಳಬೇಕು ಎಂಬ ಕುಟುಂಬದ ನಿರ್ಧಾರವನ್ನು ಕಾರ್ಯಗತಗೊಳಿಸಲು ಪ್ರಯತ್ನ ಮಾಡುವುದು.. ಜೊತೆಯಲ್ಲಿ ಸಿರಿವಂತರ ಮನೆಯ ಹುಡುಗಿ ತನ್ನ ಮಡದಿಯಾದರೂ, ಆಕೆ ತನ್ನ ಸಣ್ಣ ಮನೆಯಲ್ಲಿಯೇ ಎಲ್ಲರೊಡನೆ ಇರಬೇಕು ಎಂದು ಒಪ್ಪಿಸುವುದು.. ತನ್ನ ಆರೋಗ್ಯ ಕೈಕೊಟ್ಟಾಗ, ತನ್ನ ಮನೆಯವರೆಲ್ಲರೂ ತನಗಾಗಿ ಅಲ್ಪಸ್ವಲ್ಪ ಹೊರಗೆ ಕೆಲಸ ಮಾಡಿ ದುಡ್ಡು ತಂದು ಮನೆಗೆ ಸಹಾಯ ಮಾಡುವುದನ್ನು ತಿಳಿದಾಗ ಪಡುವ ಪಾಡು.. ಅಕ್ಷರಶಃ ರಾಜಕುಮಾರ್ ಆ ಪಾತ್ರದಲ್ಲಿ ಜೀವಿಸಿದ್ದಾರೆ.
ಮನೆಯ ಯಜಮಾನನೆಂದರೆ ಹೀಗೆ ಬೆಟ್ಟದಷ್ಟು ಸವಾಲುಗಳಿದ್ದರೂ, ಎದೆಗುಂದದೆ ಹೆಜ್ಜೆ ಹಾಕಬೇಕು ಗುರಿ ತಲುಪಬೇಕು ಎಂದು ತೋರುವ ಅವರ ಅಭಿನಯ ಸೊಗಸು..
ಇತ್ತ ಕಡೆ ಸಿರಿವಂತರ ಮನೆಯ ಪತ್ನಿ.. ಅತ್ತ ಕಡೆ ಆ ಮಡದಿಯನ್ನು ದಾರಿ ತಪ್ಪಿಸುವ ಅತ್ತೆ, ಮತ್ತು ಅಣ್ಣ.. ತಮ್ಮನ ಜೀವನ ಸಿರಿವಂತರ ಕೈಯಲ್ಲಿ ಗೊಂಬೆಯಾಗಿದೆ ಎಂದು ತಿಳಿದಾಗ ಅದನ್ನು ಸರಿಪಡಿಸಲು ಹೋಗಿ.. ಇನ್ನಷ್ಟು ಆರೋಗ್ಯ ಹದಗೆಡುವುದು.. ಈ ಎಲ್ಲಾ ದೃಶ್ಯಗಳ ಅಭಿನಯ ಕಣ್ಣಿಗೆ ಕಟ್ಟುವಂತದ್ದು..
ಭಾರತಿ ಸಿರಿವಂತರ ಹುಡುಗಿಯ ಆಟಾಟೋಪ.. ನಂತರ ಮಧ್ಯಮವರ್ಗದ ಮನೆಗೆ ಹೊಂದಿಕೊಳ್ಳಲು ಒದ್ದಾಟ.. ಜೊತೆಯ ಸದಸ್ಯರ ಜೊತೆಯಲ್ಲಿ ಹೊಂದಾಣಿಕೆಯ ಜಂಜಾಟ.. ಅಣ್ಣನ ಸಮಾಜಘಾತುಕ ಕೆಲಸವನ್ನು ಕಂಡು ಹಿಡಿಯುವುದು.. ಹೀಗೆ ಎಲ್ಲಾ ರೀತಿಯ ಛಾಯೆ ಇರುವ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ..
ಬಾಲಣ್ಣ ಈ ಸಿನಿಮಾಕ್ಕೆ ಒಂದು ಹಾಸ್ಯದ ಕೊಂಡಿ.. ಭಾವುಕತೆ ತೀವ್ರವಾಗುತ್ತಿದೆ ಎನಿಸಿದಾಗ ಒಂದು ಪಂಚ್ ಬಿಡುತ್ತಾರೆ...
ಆದವಾನಿ ಲಕ್ಷ್ಮೀದೇವಿ.. ರಾಜಾಶಂಕರ್, ಬಿವಿರಾಧ, ದಿನೇಶ್, ನಿರಂಜನ್, ಪಾಪಮ್ಮ.. ಕಥೆಗೆ ಒಂದಷ್ಟು ನಿರ್ಧಿಷ್ಟ ಆಧಾರ ಕೊಡುವ ಪಾತ್ರಗಳು..
ರಾಜಕುಮಾರ್ ಅವರು ವೀಕ್ಷಕ ಪ್ರಭುಗಳಿಗೆ ಹತ್ತಿರವಾದದ್ದು ಈ ರೀತಿಯ ಮನ ಮಿಡಿಯುವ, ಕುಟುಂಬವನ್ನು ಸೇರಿಸುವ, ನಿಭಾಯಿಸುವ ಪಾತ್ರಗಳಿಂದ.. ಮತ್ತೆ ಅದನ್ನು ರುಜುವಾತು ಮಾಡಿದ್ದಾರೆ ಈ ಚಿತ್ರದಲ್ಲಿ.

No comments:
Post a Comment