Friday, May 27, 2016

Hey Ram - Kamaal Ki Movies (2000)

This is one kind of adventure only...!

Because, I never wrote about a movie of one of the finest actor in Indian Cinema...

I read in one of the blog am following..  Conversations Over Chai.. even though i read many many articles in this blog..what it amazed was how many movies the author of this blog watches and how effectively conveys the message / heart of the movie giving even minute details of the same..just a absolute hats off to this wonderful author and owner of the blog Conversations Over Chai!!!

Recent post was the review of the movie Hey Ram!.  16 years old movie under the  complete eclipse of Kamal Hassan.

I always  believed and loved Kamal Movies in three types.

1) Kamal Movies - earlier movies in his carrier beginning, where he was directors actor.  He followed bit by bit what his director wanted..and exactly portrayed the character on the screen.  In this era..Story, Acting, and his screen presence pulled the people to the theaters.

2) Kamaal Ki Movies - Here he literally started ruling the silver screen. He got wonderful scripts, amazing songs, extraordinary performances (Swathi Muthyam, Sagara Sangamam, Nayagan, Moonram Pirai / Sadma, Pushapaka Vimana and many more).  It created a kind of spectrum like Kamal movies will be kamaal ki movies.

3) Kamal ki Movies - Post Apoorva Sahodargal.. he started playing with the characters, costumes, appearance, the characterization. And he was almost dominating the screen completely for the entire length of the movie...a herculean efforts of which he carried the expectations and the performance on his broad shoulders to the 100% perfection.

Given a chance, i always like his Kamaal Ki Movies rather than the first and three era.

However, "Hey Ram" review in the blog pulled my  curiosity horse to the core..and it was suggested to watch Tamil Version with a subtitle.


I would say...I was not at all disappointed. Initially, when i saw the duration of the movie..i was worried, How do i last long the duration....but.....

The movie starts with a tribute, and the title card - Hey Ram with a complex image.  This gave me a message that..this movie is not a straight pot boiler of come and go movie. something is inside, let me watch it.  The marathon length 3.21 hours just hooked me to the movie.

His portrayal of Saket Ram in almost 4 different make over was really impressive.  This movie literally takes us to the 1940's era bit by bit. The tone of the photography, the costumes, the lighting, music everything perfectly in place.


The characters played by others, like Rani in a short spell creates jadoo...so the Vasundhara Das intelligent gal portrayal.

Along with Kamal, Rani, Vasundhara...the other character impresses was Atul Kulkarni.  Awesome.

Here, almost every scene Kamal presence is there, but he scores full marks when he realises Aparna - Rani is no more, and his silence and expressions in the last few scenes, when Amjad Ali Khan played by Shar Rukh Khan, was killed.

He shouldered enought responsibility as producer, Director, Script, Dialogue, his acting never suffered.  He just nose dives in to the character Saket Ram.

He makes us to believe that, yeah there was character in pre-independence era called Saket Ram, and he changed his stance as a hater of Gandhi and his principles to believer of him and his principles.

I didnt let my eye lid go down through out the length of the movie.

Three days i was in like a trance.. if i close my eyes, my body would be roaming in the streets of Calcutta with a gun in my hand.  Such was the creation and depiction of this period dram.

Hats off to Kamal and hats off to the author of the blog who made me to watch  this movie, which i refused to watch it since the movie hit the silver screen in the year 2000.

Do watch this movie in Tamil Version with a subtitle. For a change, this movie is not completely in Tamil, atleast 40% is english and Hindi.  The remaining 60% is in Tamil but it can followed easily by understanding the sequences.

A watchable movie and I can guarantee you that, it will make you to head towards the silent zone at least for 24 Hours.

Hey Ram!!!!...A movie to take us to the tower of silence.!!!

Sunday, April 24, 2016

ಈ (ಕೀಲಿ ಮಣೆ) ಕಂಗಳು ಮಾಡಿದ ಪುಣ್ಯವೋ!!!

ವಿಶ್ವಾಮಿತ್ರರು ಮತ್ತೆ ಸುದ್ದಿಯಾದರು.  ಮೇನಕೆಯಿಂದ ತಪೋಭಂಗವಾದ ಮೇಲೆ ಮತ್ತೊಮ್ಮೆ ತಪಸ್ಸಿಗೆ ಕೂರುವ ಮುನ್ನ, ಯಾಕೋ ಸ್ವರ್ಗಲೋಕಕ್ಕೆ ಹೋಗಿಬರೋಣ ಎಂದುಕೊಂಡು ಅಲ್ಲಿಗೆ ಬಂದರು.

ಯಥಾ ಪ್ರಕಾರ ಇಂದ್ರನ ಆಸ್ಥಾನದಲ್ಲಿ ಸಭೆ ನಡೆಯುತ್ತಿತ್ತು, ನೃತ್ಯ ಗಾಯನದ ನಂತರ, ವಸಿಷ್ಠರು ಇಂದು  ಒಂದು ವಿಚಾರ ಚರ್ಚೆ ಮಾಡೋಣ. ಇಂದಿನ ವಿಷಯ ಕಲಾವಿದರು ಮತ್ತು ಅವರ ಅಭಿಮಾನಿಗಳು.

ವಿಶ್ವಾಮಿತ್ರ ಇಂಥಹ ಸುದ್ದಿಗಳಿಗಾಗಿಯೇ ಕಾಯುತ್ತಿರುವವರು.. ಕಮಂಡಲದ ತೀರ್ಥವನ್ನು ಪರೀಕ್ಷಿಸಿದರು. ಸಾಕಷ್ಟು ಇತ್ತು.

ಚರ್ಚೆ ಶುರುವಾಯಿತು.. ತಾರಕಕ್ಕೆ ಹೋಯಿತು.. ಹೊಡೆದಾಟ ಬಡಿದಾಟ ಕೈ ಮೀರಿತ್ತು.. ಯಾರೊಬ್ಬರು ಯಾರ ಮಾತನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.. ಅವರಿಗೆ ಬೇಕಿದ್ದು ತಮ್ಮ ಮಾತನ್ನು ಪುಷ್ಠಿಕರಿಸುವುದಷ್ಟೇ ಆಗಿತ್ತು. ಯಾರಿಗೂ ನಿಜಾಂಶ ಬೇಕಿರಲಿಲ್ಲವಾಗಿತ್ತು.

ವಸಿಷ್ಠರಿಗೆ ಈ ತರಹ ವಾದ ವಾಗ್ವಾದಗಳು ಹೊಸತೆನಲ್ಲ.. ಸುಮ್ಮನೆ ಎಲ್ಲರ ಮಾತನ್ನು ಕೇಳುತ್ತಾ ಕೂತಿದ್ದರು. ಇಂದ್ರನಿಗೆ ಸಾಕಾಗಿ ಹೋಗಿತ್ತು... ಒಂದು ದಿನ ಸಂಭ್ರಮದಲ್ಲಿ ಕಳೆಯೋಣ ಅಂದರೆ ಇವರು ಒಂದು ವಿಷಯವನ್ನು ಕಡೆದು ಕಡೆದು ಆನಂದವನ್ನು ಹಾಳು ಮಾಡುತ್ತಿದ್ದಾರೆ .. ಮನದಲ್ಲಿಯೇ ಜಪ ಮಾಡಿದ.

ಮಂಜಿನ ಗಾಳಿ ಎಲ್ಲರ ಮೊಗಕ್ಕೆ ತಾಗಿ, ಬಿಸಿಯಾಗಿದ್ದ ಮನಸ್ಸು ದೇಹ ಹಾಯ್ ಎನ್ನುವಂತೆ ಮಾಡಿತು.

"ಅಭಿಮಾನಿ ದೇವರುಗಳಿಗೆ ನಮಸ್ಕಾರ.. ಯಾಕೆ ಇಷ್ಟೊಂದು ಬಿಸಿ ಬಿಸಿ ಚರ್ಚೆ... " ಶ್ವೇತ ವಸ್ತ್ರದಾರಿಯ ಮಾತು ಕೇಳಿ ಎಲ್ಲರೂ ಮಂತ್ರಕ್ಕೆ ಒಳಗಾದವರಂತೆ ತಣ್ಣಗಾದರು.

ಅಭಿಮಾನಿ ದೇವರುಗಳೇ.. ನಿಮ್ಮ ಮನೆಯ ಮಗುವನ್ನು ನೀವೇ ಮುದ್ದು ಮಾಡಿ, ಅದಕ್ಕೆ ಬೇಕಾದ ಪೋಷಾಕುಗಳನ್ನು ಹಾಕಿದಿರಿ. ಒಮ್ಮೆ ಕೃಷ್ಣದೇವರಾಯ ಎಂದಿರಿ, ಇನ್ನೊಮ್ಮೆ ಮಯೂರ ಎಂದಿರಿ, ಕುಂಬಾರ ಎಂದಿರಿ, ಜೇಮ್ಸ್ ಬಾಂಡ್, ದಾಸರು ಎಂದರಿ... ನಿಮ್ಮ ಅಭಿಮಾನಕ್ಕೆ ನಾ ಚಿರಋಣಿ. ನಿಮ್ಮ ಮಗು ಬಗ್ಗೆ ನೀವು ಹೆಮ್ಮೆ ಪಡುವುದು ನಿಮ್ಮ ಪ್ರೀತಿಯ ಸಂಕೇತ. ನೀವು ಪ್ರೀತಿ ತೋರಿಸಿದಿರಿ, ಅದು ನಾ ಈ ಮಟ್ಟಿಗೆ ಬೆಳೆಯಲು ಅನುಕೂಲ ಮಾಡಿಕೊಟ್ಟಿತು. ಚಂದ್ರ ಯಾವಾಗಲೂ ಪೂರ್ಣ ನಾಗಿಯೆ ಇರುವುದಿಲ್ಲ ಅಲ್ಲವೇ, ಹಾಗೆಯೇ ಶುಕ್ಲ ಪಕ್ಷದ ಚಂದ್ರ ಗೆರೆಯಿಂದ ಪೂರ್ಣ ಸ್ವರೂಪ ತೆಗೆದುಕೊಂಡ ಹಾಗೆ, ನಿಮ್ಮ ಅಭಿಮಾನದ ಬೆಳಕಲ್ಲಿ, ಈ ಸಣ್ಣ ಬಿಂಧು ಅಥವಾ ಈ ಸಣ್ಣ ಕಣ ಪೂರ್ಣ ಚಂದ್ರವಾಯಿತು. ಅದರ ಬೆಳಕು ಕರುನಾಡಿನ ಭುವನೇಶ್ವರಿಯ ಮಡಿಲು ಸೇರಿ ಇನ್ನಷ್ಟು ಹೊಳಪು ಖಂಡಿತು.

ನನ್ನನ್ನು ಅಣ್ಣ, ಅಣ್ಣಾವ್ರು, ಅಪ್ಪಾವ್ರು, ಅಪ್ಪಾಜಿ, ಸರ್ ಹೀಗೆ ನೂರಾರು ಹೆಸರಿಂದ, ಅಭಿಮಾನದ ಭಾವದಿಂದ ಗುರುತಿಸಿದಿರಿ. ಒಂದೇ ಅಕ್ಕಿಯಿಂದ ತಯಾರಾದ ಖಾದ್ಯ, ಬೇರೆ ಬೇರೆ ಹೆಸರು ಪಡೆದುಕೊಳ್ಳುತ್ತದೆ, ಬರಿ ಅನ್ನವಾಗುತ್ತದೆ, ಚಿತ್ರಾನ್ನ ಆಗುತ್ತದೆ, ಬಿಸಿಬೇಳೆ ಬಾತ್ ಆಗುತ್ತದೆ, ಪುಳಿಯೋಗರೆ, ಬಿರ್ಯಾನಿ ಹೀಗೆ ಅನೇಕ ಹೆಸರು ಬಂದು ಬಿಡುತ್ತದೆ, ಅದರಂತೆ ನೀವು ಏನೇ ಕರೆದರೂ ಅಥವಾ ನನ್ನನ್ನು ಹೇಗೆ ಗೌರವಿಸಿದರೂ ಅದು ಮೂಲ ಸ್ವರೂಪದಲ್ಲಿಯೇ ಇರುವ ಅಕ್ಕಿಯಂತೆ ಬೆಂದು ಬಗೆ ಬಗೆಯ ಭಕ್ಷ್ಯವಾಗುವಂತೆ, ನಿಮ್ಮ ಅಭಿಮಾನದ ಹೊಳೆಯಲ್ಲಿ ಮಿಂದು ನಾ ನಿಮ್ಮ ರಾಜಕುಮಾರನಾಗಿದ್ದೇನೆ.

ಒಂದು ಮಗುವಿಗೆ ಅಣ್ಣ ಎಂದು ಹೆಸರಿಟ್ಟರೆ, ಆ ಮಗು ಚಿಕ್ಕದಾಗಿದ್ದಾಗಲೂ ಅಣ್ಣನೆ, ವಯಸ್ಸಿಗೆ ಬಂದಾಗಲೂ ಅಣ್ಣನೆ, ಮುಪ್ಪಿಗೆ ಬಂದಾಗಲೂ ಅಣ್ಣನೆ, ಇದಕ್ಕೆ ಅಪವಾದವೆ ಇಲ್ಲ ಅಲ್ಲವೇ. ಅದು ಹೆಸರಿನ ತಪ್ಪಲ್ಲ, ಅದು ಆ ಮಗುವನ್ನು ಆದರಿಸುವ ಪರಿ.

ನಾನು ಕರುನಾಡಿನ, ಕನ್ನಡ ಭಾಷ ಚಿತ್ರರಂಗಕ್ಕೆ ಅಣ್ಣ ಎನಿಸಿದರೂ, ನನಗಿಂತ ಅಪಾರ ಕೀರ್ತಿ ಪಡೆದ, ನನಗಿಂತಲೂ ಪ್ರತಿಭಾವಂತರನ್ನು ಕೂಡ ಅಣ್ಣ ಎಂದರೆ ಕರೆಯುತ್ತಿದ್ದೀರಿ. ಶಂಕ್ರಣ್ಣ, ಪುಟ್ಟಣ್ಣ, ದೊಡ್ಡಣ್ಣ, ಅಂಬಿಯಣ್ಣ, ವಿಷ್ಣುದಾದ ಹೀಗೆ ಕಲಾವಿದರು ನಮಗೆ ಹೇಗೆ ಹತ್ತಿರವಾಗುತ್ತಾರೆಯೋ ಹಾಗೆ ಅವರು ಅಣ್ಣ, ಅಣ್ಣಾವ್ರು, ಅಪ್ಪಾವ್ರು, ಅಪ್ಪಾಜಿ ಹೀಗೆ ರೂಪ ಪಡೆದುಕೊಳ್ಳುತ್ತಾರೆ. ಪಕ್ಕದ ಚಿತ್ರರಂಗದಲ್ಲಿ ಎಮ್. ಜಿ ಆರ್, ಶಿವಾಜಿ ಗಣೇಶನ್, ರಜನಿಕಾಂತ್, ಕಮಲ್, ಹಿಂದಿಯ ಬಚ್ಚನ್ ಅವರನ್ನು ತಮ್ಮ ಕುಟುಂಬದ ಸದಸ್ಯರಿಗಿಂತ ತುಸು ಹೆಚ್ಚಾಗಿಯೇ ಪ್ರೀತಿಸುತ್ತಾರೆ, ಅಂದ ಮಾತ್ರಕ್ಕೆ ತಮ್ಮ ಮಕ್ಕಳನ್ನು ಬೀದಿಗೆ ಬಿಡೋಲ್ಲ.

ಕಲಾಭಿಮಾನಿಗಳು ನನ್ನ ಹಾಗೆ ಕರೆದರೆ ಅದು ಅವರ ಮಗುವನ್ನು "ಚಿನ್ನಾ, ಮುದ್ದು, ಪುಟ್ಟಿ" ಎಂದು ಕರೆಯುವ ಹಾಗಿರುತ್ತೆಯೇ ಹೊರತು ಅದಕ್ಕೆ ಪದ ಅರ್ಥ ಹುಡುಕಿ ಗೊಂದಲ ಮಾಡಿಕೊಳ್ಳಬಾರದು.

ಇಂದ್ರನ ಸಭೆಯಲ್ಲಿ.. ಸೂಜಿ ಬಿದ್ದರೂ ಕೇಳಿಸುವಂಥಹ ನಿಶ್ಯಬ್ಧ.. ವಸಿಷ್ಠರಿಗೆ ಜೋರಾಗಿ ಚಪ್ಪಾಳೆ ಹಾಕಿ "ಅಣ್ಣಾವ್ರಿಗೆ, ಮತ್ತು ಮುತ್ತಿನಂಥಹ ಮಾತುಗಳಿಗೆ ಜೈ" ಅನ್ನಬೇಕು ಅನ್ನಿಸಿತು, ಆದರೆ ಸ್ವಲ್ಪ ಹೊತ್ತು ಸುಮ್ಮನಿದ್ದರು.

ಅಣ್ಣಾವ್ರು ಹೇಳಿದ್ದು ಒಬ್ಬೊಬ್ಬರ ಮನಸ್ಸಿಗೆ ಇಳಿಯುತ್ತಾ ಹೋಯಿತು.. ಇಂದ್ರ ಸಭೆಯೇ ಕಿತ್ತು ಹೋಗುವಷ್ಟು ಜೋರಾದ ಚಪ್ಪಾಳೆ, ಜೊತೆಯಲ್ಲಿ "ಅಣ್ಣಾವ್ರಿಗೆ ಜೈ" ಎಂಬ ಜೈಕಾರ..

ಪಕ್ಕದಲ್ಲಿಯೇ ದೈವ ಧೂತ.. ಅಣ್ಣಾವ್ರೆ ಯಾಕೆ ಕಣ್ಣೀರು ಎಂದು ಕೇಳಿದ

ಅಣ್ಣಾವ್ರು "ಇದು ಕಣ್ಣೀರಲ್ಲ ಪನ್ನೀರು ಪನ್ನೀರು"... ಚಿನ್ನದಂಥ ಅಭಿಮಾನಿಗಳು ಇರುವಾಗ ಕಣ್ಣೀರೆತೆಕೆ, ಮನಸನು ಅರಿತು ನೆಡೆಯುತಲಿರಲು ಚಿಂತೆಯ ಮಾತೇಕೆ.. ಅಭಿಮಾನಿಗಳು  ನಗುತಿರಲು ನಮ್ಮೀ ಕರುನಾಡಿಗೆ ಆ ಸ್ವರ್ಗವೇ ಜಾರಿದಂತೆ.. "

ಇಷ್ಟು ಕೇಳಿ, ಆ ಧೂತ ಅಣ್ಣಾವ್ರ ಕಾಲಿಗೆ ಎರಗುತ್ತಾ "ಅಣ್ಣಾವ್ರಿಗೆ ಜೈ ಅಣ್ಣಾವ್ರಿಗೆ ಜೈ.. ಅಣ್ಣಾವ್ರಿಗೆ ಹುಟ್ಟು ಹಬ್ಬದ ಶುಭಾಶಯಗಳು.. ." ಎಂದು ಜೈ ಕಾರ ಹಾಕಿದ..

ಸಭೆಯಲ್ಲಿದ್ದ ಎಲ್ಲರೂ ಎದ್ದು ಕರತಾಡನ ಮಾಡಿ.. ಒಬ್ಬರ ಮುಖ ಒಬ್ಬರು ನೋಡಿಕೊಂಡರು.. ಎಲ್ಲರ ಮನಸ್ಸು, ಮೊಗ ತೊಳೆದ ಪಾತ್ರೆಯಂತೆ ಲಕ ಲಕ ಹೊಳೆಯುತ್ತಿತ್ತು..

ಆ ಕ್ಷಣದಲ್ಲಿ ಗಾಳಿಯಲ್ಲಿ ತೇಲಿಬಂದ ಒಂದು ಕರ ಪತ್ರದಲ್ಲಿ ಮೂಡಿ ಬಂದ ದೃಶ್ಯ ನೋಡಿ ಎಲ್ಲರೂ ಹೋ ಹೋ ಅಣ್ಣಾವ್ರಿಗೆ ಜೈ ಎಂದು ಕೂಗಿ

ಅಣ್ಣಾವ್ರೆ ನಿಮ್ಮ ಜೊತೆಯಲ್ಲಿಯೇ ಈ ಚಿತ್ರವನ್ನು ನೋಡೋಣ ನಡೆಯಿರಿ ಎಂದು ರಥವನ್ನು ಹತ್ತಿಸಿದರು...
ಇಂದ್ರಸಭೆಯ ಪಕ್ಕದಲ್ಲಿಯೇ ಇದ್ದ ಮಲ್ಟಿಪ್ಲೆಕ್ಸ್ ನಲ್ಲಿ ಆಗಲೇ ಶುರುವಾಗಿತ್ತು .. ಎಲ್ಲರೂ ದಡ ದಡ ಒಳಗೆ ನುಗ್ಗಿದರು.. ಆಗ ಹಾಡು ಬರುತ್ತಿತ್ತು..




"ನಾವಾಡುವ ನುಡಿಯೇ ಕನ್ನಡ ನುಡಿ..
ನಾವಿರುವ ತಾಣವೇ ಗಂಧದ ಗುಡಿ ಅಂದದ ಗುಡಿ ಚಂದದ ಗುಡಿ ಶ್ರೀ ಗಂಧದ ಗುಡಿ"

ಅಣ್ಣಾವ್ರೆ ನನ್ನ ಕೆಲವು ಗೊಂದಲಗಳಿಗೆ ನಿಮ್ಮ ಮಾತುಗಳು ಬೇಕಿತ್ತು.. ನೀವು ಹೀಗೆಯೇ ಉತ್ತರಿಸಬಹುದು ಎಂದು ಅಂದುಕೊಂಡು ಈ ಲೇಖನವನ್ನು ನಿಮ್ಮ ಹುಟ್ಟು ಹಬ್ಬಕ್ಕೆ ಸಮರ್ಪಿಸುತ್ತಿದ್ದೇನೆ.

ಕರುನಾಡು ಕಂಡ ಅದ್ಭುತ ಕಲಾವಿದ ನೀವು.. ನಿಮಗೆ ಹುಟ್ಟು ಹಬ್ಬದ ಶುಭ ಕೋರುವುದು ನಾ ಮಾಡಿದ ಪುಣ್ಯದ ಫಲ ಎನ್ನಬಹುದು..

ನನ್ನ ಮನಸ್ಸು ಹೇಳುತ್ತಿದೆ "ಇದು ಯಾರ ತಪಸಿನ ಫಲವೋ.. ಈ (ಕೀಲಿ ಮಣೆ) ಕಂಗಳು ಮಾಡಿದ ಪುಣ್ಯವೋ"

ಅಣ್ಣಾವ್ರೆ ಹುಟ್ಟು ಹಬ್ಬದ ಶುಭಾಶಯಗಳು!!!

Tuesday, April 12, 2016

ಹಾಡುಗಳಲ್ಲಿ ನುಗ್ಗಿ ಬರುವ ಭಾವ ಲೋಕದಲ್ಲಿ ಅಣ್ಣಾವ್ರು

ಅಣ್ಣಾವ್ರ  ಚಿತ್ರಗಳಲ್ಲಿ ಹಾಡುಗಳು ಎಂದಿಗೂ ಜೀವ ತುಂಬಿ ಹರಿಯುವ ನದಿಯ ತರಹ, ಬೆಳದಿಂಗಳಲ್ಲಿ ಬರುವ ಮಳೆಯ  ಹಾಗೆ, ಚೈತ್ರ ಮಾಸದಲ್ಲಿ ಅರಳುವ ಹೂಗಳ ಹಾಗೆ ಇರುತ್ತಿದ್ದವು.. ಅದರಲ್ಲೂ ಅಣ್ಣಾವ್ರೆ ಹಾಡಲು ಶುರು ಮಾಡಿದ ಮೇಲೆ, ಅವರ ಎಲ್ಲಾ ಚಿತ್ರಗಳಲ್ಲಿ ಹಾಡುಗಳು ವಿಜೃಂಬಿಸಿದ್ದು ಒಂದು ದಂತ ಕಥೆ ಎನ್ನಬಹುದು.

ಅಣ್ಣಾವ್ರ ಗಾಯನದಲ್ಲಿ ನಾ ಮೆಚ್ಚುವ ಅನೇಕ ಅಂಶಗಳಲ್ಲಿ ಒಂದು, ಅವರು ಹಾಡಿನ ಮಧ್ಯೆ ಆಡುವ ಮಾತುಗಳು, ಇಲ್ಲವೇ ಪುಟ್ಟ ಪುಟ್ಟ ಧ್ವನಿಗಳು, ಸಂಗತಿಗಳು..

ಅವರ ನೂರಾರು ಹಾಡುಗಳ ಮಧ್ಯೆ ನನಗೆ ಇಷ್ಟವಾಗುವುದು, ಅವರು ಯುಗಳ ಗೀತೆಗಳಲ್ಲಿ, ಮಧ್ಯೆ ನುಗ್ಗುವ ಪರಿ. ಸಿನೆಮಾ ಟಾಕೀಸುಗಳಲ್ಲಿ ಅಣ್ಣಾವ್ರು ಯುಗಳ ಗೀತೆಯ ಮಧ್ಯೆ ಅಥವಾ ನಾಯಕಿ ಒಬ್ಬಳೇ ಹಾಡುತ್ತಿದ್ದಾಗ ನುಗ್ಗಿ ಬರುವ ಪರಿ, ಅದಕ್ಕೆ ಅವರ ಅಭಿಮಾನಿ ದೇವರುಗಳ ಸಂಭ್ರಮ ಅದರ ಬಗ್ಗೆ ಬರೆಯೋಣ ಅನ್ನಿಸಿತು. ಅದಕ್ಕಾಗಿ ಈ ಲೇಖನ.

ಈ ಹಾಡುಗಳಲ್ಲಿ ಸಾಂತ್ವನ ಹೇಳುವ ಹಾಡುಗಳು ಇವೆ, ಪ್ರಣಯವೂ ಇದೆ, ಗುಪ್ತಗಾಮಿನಿಯ ಹಾಗೆ ಹರಿಯುವ ಭಾವ ಪ್ರಶಾಂತತೆ ಇದೆ, ಹೀಗೆ ಹಲವಾರು ರಸಗಳ ಸಂಗಮ.. ಅಣ್ಣಾವ್ರು ಹಾಡುಗಳಲ್ಲಿ ಮಧ್ಯೆ ಎಂಟ್ರಿ ಆಗುವ ದೃಶ್ಯಗಳು.

*****

ನಾನೊಬ್ಬ ಕಳ್ಳ ಚಿತ್ರದಲ್ಲಿ, ಒಂದು ಬಗೆಯ ವಿಷಾದ ತುಂಬಿರುತ್ತದೆ, ಆಗ ಶುರುವಾಗುತ್ತದೆ "ಆಸೆಯು ಕೈಗೂಡಿತು". 
ನಾಯಕಿ ಲಕ್ಷ್ಮಿ ರಾಜ್ ರನ್ನು ಸಂತೈಸುತ್ತಲೇ ಶುರುವಾಗುವ ಹಾಡು, ಅಣ್ಣಾವ್ರು ಶುರು ಮಾಡುವ "ಕಂದ ನೊಂದು ಅತ್ತಾಗ, ಯಾರೂ ಕಾಣದಾದಾಗ ಸಂತೈಸಲೆಂದು ಓಡೋಡಿ ಬರುವ ತಾಯಂತೆ ನೀನು ಬಂದೆ.. ಗಾಳಿ ಬೀಸಿ ಬಂದಾಗ, ಜ್ಯೋತಿ ಹೆದರಿ ಹೋದಾಗ, ಆ ದೀಪದಲ್ಲಿ ನೀ ಜೀವವಾಗಿ ಹೊರಾಡಲೆಂದು ಬಂದೆ.. ಉಸಿರಾಡುವಾಸೆ ತಂದೆ"
ಈ ಪದಗಳಲ್ಲಿ  ಪ್ರೇಯಸಿಯ ಸಾಮಿಪ್ಯವನ್ನು, ನೊಂದ ಮಗುವನ್ನು ತಾಯಿ ರಮಿಸುವ ಹಾಗೆ ಹೋಲಿಸಿದ್ದಾರೆ. ಅದ್ಭುತ ಹಾಡು, ಲಕ್ಷ್ಮಿ ಹಾಗೂ ಅಣ್ಣಾವ್ರು ಅದ್ಭುತ ಅಭಿನಯ. ಚಿ ಉದಯಶಂಕರ್ ಜೀವ ತುಂಬಿ ಸಾಹಿತ್ಯ ಕೊಟ್ಟರೆ, ಅದಕ್ಕೆ ಬಂಗಾರದ ಚೌಕಟ್ಟು ಸಿಕ್ಕಿದ್ದು ರಾಜನ್ ನಾಗೇಂದ್ರ ಅವರ ಸುಲಲಿತ ಸಂಗೀತ. 



ಕೆರಳಿದ ಸಿಂಹ, ರಾಜ್ ಸಾಹಸಮಯ ಚಿತ್ರಗಳಲ್ಲಿ ಒಂದು. ಸಂದೇಹ, ಮತ್ತು ಪರಿಸ್ಥಿತಿಯ ಒತ್ತಡ, ನಾಯಕಿ ಮತ್ತು ನಾಯಕನನ್ನು ದೂರ ಮಾಡಿರುತ್ತದೆ. ಹೇಗಿದ್ದೆವು ಹೇಗಾದೆವು ಎಂದು ಯೋಚಿಸುತ್ತಾ ಕೂತಾಗ ಬರುವ " ಏನೋ ಮೋಹ ಏಕೋ ದಾಹ". ಅಣ್ಣಾವ್ರ ಚಿತ್ರಗಳಲ್ಲಿ ಈ ಹಾಡು ತುಂಬಾ ವಿಭಿನ್ನ ಅನ್ನಿಸುವ ಕಾರಣ ಅದರ ಸಾಹಿತ್ಯ ಮತ್ತು ಸಂಗೀತ. ಆಂಗ್ಲ ಶೈಲಿಯಲ್ಲಿ ಸತ್ಯಂ ಅವರು ಸಂಗೀತ ಸಂಯೋಜನೆ ಮಾಡಿದ್ದರೆ, ಪ್ರೇಮಿಗಳ ವಿರಹವನ್ನು ಪದಗಳಲ್ಲಿ ಕಟ್ಟಿ ಕೊಟ್ಟದ್ದು ಚಿ ಉದಯಶಂಕರ್. ಈ ಹಾಡಿನಲ್ಲಿ ಸರಿತಾ ಮನಮೋಹಕವಾಗಿ ಕಾಣುತ್ತಾರೆ, ಉದ್ದ ಕೂದಲು, ಕಣ್ಣುಗಳು ಭಾವನೆಗಳಿಂದ ಸರಿತಾ ಮುದ್ದಾಗಿಕಂಡರೆ , ಅಣ್ಣಾವ್ರು ಅಚ್ಚುಕಟ್ಟಾದಮೈಕಟ್ಟು , ವಸ್ತ್ರ ವಿನ್ಯಾಸ, ಬಲಗೈಗೆ ಚೈನ್ ವಾಚ್, ತುಂಬಾ ವಿಭಿನಾವಾಗಿ ಕಾಣುತ್ತಾರೆ. ವಾಣಿ ಜಯರಾಂ ಅವರ ಧ್ವನಿಯಲ್ಲಿ ಶುರುಮಾಡುವ ಹಾಡಿಗೆ, "ಏನೋ ಮೋಹ" ಎಂದು ಕೆಳಗಿಂದ ಮೇಲೆ ಎದ್ದು ನಿಲ್ಲುವ ಅಣ್ಣಾವ್ರ ಧ್ವನಿ ಮತ್ತು ಮೈಕಟ್ಟಿಗೆ ಟಾಕೀಸಿನಲ್ಲಿ ಶಿಳ್ಳೆಗಳ ಮೇಲೆ ಶಿಳ್ಳೆ.  ಒಂದು ಮಾದಕತೆ ತುಂಬಿರುವ ಪ್ರಣಯ ಗೀತೆಯನ್ನು ಅಶ್ಲೀಲವಾಗದಂತೆ ಚಿತ್ರಿಕರಿಸಿರುವುದು ಈ ಹಾಡಿನ ವಿಶೇಷ. 


ಹೊಸ ಬೆಳಕು ಚಿತ್ರದಲ್ಲಿ ತನಗೆ ಅರಿವಿಲ್ಲದ ಪ್ರೇಮಿಸುವ ನಾಯಕ ಒಂದು ಕಡೆ, ಪ್ರೀತಿ ತುಂಬಿದ್ದರೂ ತೋರಿಸಿಕೊಳ್ಳದೇ ಮೂಕ ರೋದನೆ ಪಡುವ ನಾಯಕಿ ಸರಿತಾ ಇನ್ನೊಂದು ಕಡೆ. ತನಗೆ ಇಚ್ಚೆ ಇರದ ಹುಡುಗನ ಜೊತೆ ಮೈಸೂರಿನ ಬೃಂದಾವನಕ್ಕೆ ಬರುವ ನಾಯಕಿ ಸರಿತಾ, ಆ ಹುಡುಗ ಹಾಡು ಬೇಕು ಹೇಳಿ.. ಎಂದು ಬಲವಂತ ಮಾಡಿದಾಗ "ರವಿ ನೀನು ಆಗಸದಿಂದ ಮರೆಯಾಗಿ ಹೋಗದೆ ನಿಲ್ಲು" ಹಾಡಿನಲ್ಲಿ ತನ್ನ ಎಲ್ಲಾ ಭಾವನೆಗಳನ್ನು ದಿನಕರನಿಗೆ ಹೋಲಿಸಿ ತನ್ನ ನಾಯಕ "ರವಿ" ಪಾತ್ರಕ್ಕೆ ಒಪ್ಪುವ ಹಾಗೆ ಹಾಡುತ್ತಾ ಹೋಗುತ್ತಾಳೆ. ಎಸ್ ಜಾನಕಿ ಕಂಠ ಸಿರಿಯಲ್ಲಿ ಚಿ ಉದಯಶಂಕರ್ ಅವರ ಸಾಹಿತ್ಯ, ಎಂ ರಂಗರಾವ್ ಅವರಿಂದ ಬಂದ ಸಂಗೀತಕ್ಕೆ ರಾಜ್ ಮಧ್ಯೆ ನುಗ್ಗುತ್ತಾರೆ ಒಂದು ದೋಣಿಯಲ್ಲಿ "ಆಅ ಅಹ ಹಾ ಆಹಾ ಲ ಲಾ".. ಕಿವಿ ಕಿತ್ತುಹೋಗುವ ಹಾಗೆ ಶಿಳ್ಳೆ.  ನಾಯಕಿ ಯ ಭಾವಕ್ಕೆ ಭಾವ ಜೋಡಿಸಿ ಹೆಜ್ಜೆಗೆ ಹೆಜ್ಜೆ ಹಾಕಿ ನಲಿಯುವ ಈ ಹಾಡು, ನಾಯಕಿಗೆ ನಾ ಇದ್ದೇನೆ ನಿನ್ನ ಜೊತೆ ಎನ್ನುವ ಬಂಧವನ್ನು ದಯಪಾಲಿಸುತ್ತದೆ. 


ಅಣ್ಣ ತಂಗಿಯರ ಅಪ್ಪ ಅಮ್ಮನ ಬಾಂಧ್ಯವದ ಚಿತ್ರ "ಸಮಯದ ಗೊಂಬೆ", ವಿಧಿಯ ಆಟದಲ್ಲಿ ಹೇಗೆ ಮೂಕ ಪ್ರೇಕ್ಷಕರಾಗಿ ನಿಲ್ಲಬೇಕಾಗುತ್ತದೆ ಎನ್ನುವ ಸಂದೇಶ ಹೊತ್ತ ಚಿತ್ರದಲ್ಲಿ, ಹೇಗೂ ಪರಿಸ್ಥಿತಿಯ ಹಿಡಿತದಲ್ಲಿ ತನ್ನ ತಂಗಿ ಸಿಗುತ್ತಾಳೆ. ತಂಗಿ ಮಗುವಿನ ಹುಟ್ಟು ಹಬ್ಬದ ಸಂಭ್ರಮದಲ್ಲಿ ಆ ಮನೆಯಲ್ಲಿ ಚಾಲಕನ ಕೆಲಸ ನಿಭಾಯಿಸುವ ನಾಯಕ, ತಾನೇ ನಿನ್ನ ಅಣ್ಣ ಎಂದು ಹೇಳಿಕೊಳ್ಳಲಾಗದೆ ತೊಳಲಾಡುತ್ತಾ ನಿಂತಿರುವಾಗ.. ತಂಗಿ "ಕೋಗಿಲೆ ಹಾಡಿದೆ ಕೇಳಿದೆಯ" ಎಸ್ ಜಾನಕಿಯ ಮಂಜಿನ ಧ್ವನಿಯಲ್ಲಿ ಮೂಡಿಬರುತ್ತದೆ. ನಾಯಕನಿಗೆ ತನ್ನ ಬಾಲ್ಯದ ನೆನಪಾಗುತ್ತದೆ, ಮರಗುತ್ತಾ ಆ ಹಾಡನ್ನು ಹಾಗೆ ಕೇಳುತ್ತಾ ಕನಸಿನ ಲೋಕಕ್ಕೆ ಜಾರುತ್ತಾನೆ. ಕಾರಿನಿಂದ ಇಳಿಯುವ ದೃಶ್ಯದಲ್ಲಿ ಟಾಕೀಸಿನಲ್ಲಿ ಕೂಗು, ಶಿಳ್ಳೆ, ಚಪ್ಪಾಳೆಯ ಸುರಿಮಳೆ. ಹಾಡುತ್ತಾ ಬರುವ ಅಣ್ಣಾವ್ರು, ಅದ್ಭುತವಾಗಿ ಹಾಡಿ, ಚಿ ಉದಯಶಂಕರ್ ಅವರ ಸಾಹಿತ್ಯಕ್ಕೆ ಮೆರುಗು ನೀಡುತ್ತಲೇ, ರಾಜನ್ ನಾಗೇಂದ್ರ ಅವರ ಸಂಗೀತ ಜೊತೆಯಲ್ಲಿ ತಾವು ಮಂಜಿನ ಹೂವಾಗುತ್ತಾರೆ. 


ಹೀಗೆ ನಾ ಮೇಲೆ ಉಲ್ಲೇಖ ಮಾಡಿದ್ದು ಕೆಲವು ಹಾಡುಗಳನ್ನು ಮಾತ್ರ.. ಈ ತರಹ ಹಾಡುಗಳು ರಾಜ್ ಮತ್ತು ಪಿ ಬಿ ಎಸ್ ಜೋಡಿಯಲ್ಲಿ ಇನ್ನಷ್ಟು ಬೇಕಾದಷ್ಟು ಇವೆ. 

ಇಂದು ಅಣ್ಣಾವ್ರು  ಚಿತ್ರಗಳಲ್ಲಿ ಮಾತ್ರ ಅವರನ್ನು ಬಿಟ್ಟು ಆನಂದ ಲೋಕವನ್ನು ಸೇರಿದ ದಿನ. ಅವರ ನೆನಪು ಅಮರ ಮಧುರ. ಎಂದಿಗೂ ಅಳಿಸಲಾರದ ಬಂಧ ಅಣ್ಣಾವ್ರು, ಕರುನಾಡು ಮತ್ತು ಅವರ ಅದ್ಭುತ ಚಿತ್ರಗಳು.. 

ಅಣ್ಣಾವ್ರಿಗೆ ಒಂದು ಜೈ ಹೇಳುತ್ತಾ, ಅವರ ಸುಂದರ ಆತ್ಮಕ್ಕೆ ಒಂದು ನಮನ!!!

Monday, February 8, 2016

ಟಿ ಎನ್ ಬಾಲಕೃಷ್ಣ ... ಬುಂಡೆಕ್ಯಾತ.. ಬೂತಯ್ಯನ ನೆರಳಲ್ಲಿ

ಒಂದು ಅಮೋಘ ಚಿತ್ರದಲ್ಲಿ ಘಟಾನುಘಟಿಗಳ ಮಧ್ಯೆ ತಾನು ಪ್ರಚಂಡನಾಗಿದ್ದರೂ, ಸದ್ದಿಲ್ಲದೇ ಈ ಚಿತ್ರದಲ್ಲಿ ಎದ್ದು  ನಿಂತಿದ್ದು ಬಾಲಕೃಷ್ಣ ಅವರ ತಾಕತ್ತು. ಅವರು ನಂಬಿದ್ದು ಒಂದು ತತ್ವ.. "ಮನಸ್ಸಿಟ್ಟು ತನ್ನ ಕೆಲಸ ಮಾಡಿದರೆ, ತನ್ನ ಹೆಜ್ಜೆ ಗುರುತು ನೀರಿನಲ್ಲೂ ಮೂಡಿಸಬಹುದು". ಈ ತತ್ವವೇ ಅವರನ್ನು ಬೆಳ್ಳಿ ಪರದೆಯ ಮಹಾನ್ ನಕ್ಷತ್ರವನ್ನಾಗಿ ಮಾಡಿದ್ದು.

ಸಿದ್ಧಲಿಂಗಯ್ಯ ಅವರ ಅದ್ಭುತ ಚಿತ್ರ ಬೂತಯ್ಯನ ಮಗ ಅಯ್ಯು ಚಿತ್ರದಲ್ಲಿ ತನ್ನ ಛಾಪನ್ನು ಮೂಡಿಸಿದ್ದು ಹಲವಾರು ರೀತಿ. ಒಂದು ರೀತಿಯಲ್ಲಿ ಶಕುನಿ ಮಾದರಿಯಲ್ಲಿ ಮೂಡಿದ ಪಾತ್ರ ಬಾಲಕೃಷ್ಣ ಅವರದು. ಶಕುನಿ ತನಗೆ ಮತ್ತು ತನ್ನ ಕುಟುಂಬಕ್ಕೆ ಮಾಡಿದ ಮೋಸ, ಕ್ರೌರ್ಯಕ್ಕೆ ತಕ್ಕ ಉತ್ತರ ನೀಡಲು ಕೌರವರ ಜೊತೆಯಲ್ಲಿಯೇ  ಸೇರಿಕೊಂಡು ಅವರ ವಂಶವನ್ನೇ ನಿರ್ಮೂಲ ಮಾಡುವ ವ್ಯಕ್ತಿತ್ವ ಅವರದು. ಆದರೆ ತಣ್ಣಗಿನ ಕ್ರೌರ್ಯ, ಕುಹಕ ನಗೆ, ಸೇಡು ಬಿಡದ ಪಾತ್ರ.

ಈ ಚಿತ್ರದಲ್ಲಿ ಬಾಲಕೃಷ್ಣ ಅವರದು ಅಂತಹುದೇ ಪಾತ್ರ. ಎಲ್ಲೂ ಎಲ್ಲೇ ಮೀರದೆ, ಪಾತ್ರದ ಮಿತಿಯಲ್ಲಿಯೇ ಈಜುತ್ತಾ ಇಡಿ ಚಿತ್ರದಲ್ಲಿ ಮೇಲಕ್ಕೆ ಏರದೆ ಕೆಳಕ್ಕೆ ಇಳಿಯದೆ ಸಮಾನಾಂತರವಾಗಿ ಸಿಗುವುದು ಅವರ ಪಾತ್ರ.

ಹಾಸ್ಯದಿಂದ ಶುರುವಾಗುವ ಅವರ ಪಾತ್ರ ಜೊತೆ ಜೊತೆಯಲ್ಲಿಯೇ ಆ ಊರಿನ ಜನತೆಗೆ ಹಚ್ಚಿಕೊಡುತ್ತಾ, ಬೂತಯ್ಯ ಮತ್ತು ಸಾಂಬಯ್ಯನ ಕುಟುಂಬದ ಮೇಲೆ ಕೋಪದ ಅಗ್ನಿಗೆ ತುಪ್ಪ ಹುಯ್ಯುತ್ತಲೇ, ಈ ಕಡೆಯೂ ಕೂಡ ಸಮಯಕ್ಕೆ ಬೇಕಾದ ಸಲಹೆಗಳನ್ನು ಕೊಡುತ್ತಾ ಬೂತಯ್ಯನ ಮನೆಯವರು ಕೋಪದಲ್ಲಿ ದಾರಿ ತಪ್ಪುವಂತೆ ವಿವೇಚನೆ ಕಳೆದುಕೊಳ್ಳುವಂತೆ ಮಾಡುವ ಪಾತ್ರದಲ್ಲಿ ಬೆಳಗಿದ್ದಾರೆ.

ಅವರ ಪಾತ್ರದ ಕೆಲವು ತುಣುಕುಗಳು.. ಚಿತ್ರದುದ್ದಕ್ಕೂ ನನಗೆ ಅನ್ನಿಸಿದ ರೀತಿ..
*****
"ಕವಿ ಕಟ್ಟಿದರೂ ಕಪಿ ಮೆಚ್ಚುವ ಹಂಗೆ ಇರಬೇಕು ಕಣ್ರೋ..
ಬೂತಯ್ಯನೆಂಬ ಬಂಗಿಯ ಸೊಪ್ಪಾ
ಭಸ್ಮವ ಮಾಡೋಕೆ ಬೆಂಕಿಯ ಹಚ್ಚಪ್ಪ
ಒಗ್ಗಟ್ಟಿನಿಂದ ಎಲ್ಲರೂ ಕೂಡಿ
ಮಗ್ಗುಲು ಮುರಿಯಬೇಕು ಸಮಯವ ನೋಡಿ
ಅರ್ಥವಾಯಿತೆನ್ರೋ..
ನಿಮಗೆಲ್ಲಿ ಅರ್ಥವಾಗಬೇಕು.. ಹೆಬ್ಬೆಟ್ಟು ಒತ್ತೋ ಮಡ್ಡಿ ಸಾಂಬ್ರಾಣಿಗಳು..
ಒಗ್ಗಟ್ಟು ಅಂದ್ರೆ ಒಬ್ಬಟ್ಟು ಅಂತೀರಾ.."

ಎಷ್ಟು ಸಲೀಸಾಗಿ ಒಂದು ಗ್ರಾಮದ ವ್ಯವಸ್ಥೆಯನ್ನು ತುಂಬಿಕೊಡುವ ಸಂಭಾಷಣೆಯನ್ನು ಹಾಗೆ ತಮ್ಮ ಶೈಲಿಯಲ್ಲಿ ಹೇಳುವ ರೀತಿ ಸೊಗಸಾಗಿದೆ.

ಈ ಮಾತಿಗೆ.. ಅವರ ಸಹಪಾಟಿಗಳು ಕುಹಕಮಾಡಿದಾಗ "ಜತೇಲಿ ಹುಟ್ಟಿದವರ್ನೆಲ್ಲಾ ಕೌರವ ಕೊಂದರೂ, ಅವರ ಕಡೆನೇ ಸೇರಿಕೊಂಡಿದ್ದ  ಯಾಕೆ? ಅವರ ವಂಶನ ನಿರ್ವಂಶ ಮಾಡೋಕೆ.. ಹಾಗೆ ಈ ಸಿಂಗ್ಳಯ್ಯ ಉರುಫ್ ಬುಂಡೆಕ್ಯಾತ ಬೂತಯ್ಯನ ಮನೆಯಲ್ಲಿ ಸೇರಿಕೊಂಡಿರೋದು.. ಅವರ ವಂಶನಾ ಬುಡ ಸಮೇತ ಕಿತ್ತಾಕೋಕೆ.. "

ಅವರ ಅಭಿನಯ.. ಒಂದು ಕಡೆ ತನ್ನ ಸ್ನೇಹಿತರು ತಮ್ಮ ಮೇಲೆ ಕುಹಕ ಮಾಡುತ್ತಿದ್ದಾರೆ ಎನ್ನುವ ಕೋಪ, ಇನ್ನೊಂದು ಕಡೆ ಬೂತಯ್ಯನ ಮನೆಯ ಮೇಲಿನ ಸೇಡು,  ಜೊತೆಯಲ್ಲಿ ತನ್ನ ಸ್ನೇಹಿತರ ಮುಂದೆ ತಾನು ಏನು ಎಂದು ತೋರಿಸುವ ಛಲ.. ಆ ಸಿಟ್ಟಿನಲ್ಲಿ ಬಂಗಿ  ಸೇದುವ ಭಂಗಿ ಸೂಪರ್ ಸೂಪರ್..
*****

ಬಂಗಿ ಚಟಕ್ಕೆ.. ದುಡ್ಡು ಬೇಕಾದಾಗ ತನ್ನ ಸ್ನೇಹಿತನ ಮನೆಗೆ ಬರುತ್ತಾರೆ.. ಅಲ್ಲಿ ಇನ್ನೇನು ದುಡ್ಡು ತೆಗೆದುಕೊಂಡು ಹೋಗಬೇಕು.. ಅಷ್ಟೊತ್ತಿಗೆ ಸ್ನೇಹಿತನ  ಹೆಂಡತಿ ಬರುತ್ತಾರೆ.. ಮಾತಿನ ಚಕಮಕಿ ನೆಡೆದು.. ಸ್ನೇಹಿತನ ಹೆಂಡತಿ.. ಬಾಲಕೃಷ್ಣ ಅವರಿಗೆ ಚೆನ್ನಾಗಿ ಬಯ್ತಾರೆ... ಜೊತೆಯಲ್ಲಿ ಬಂಗಿ ಸೇದುವ ಕೆಟ್ಟ ಚಟ ಕಲಿಸಿದ್ದಕ್ಕೆ ಛೀಮಾರಿ ಹಾಕುತ್ತಾರೆ..  ಹಾಲು ಬೇಕಾದರೆ ಕುಡಿ.. ಬಂಗಿ ಗಿಂಗಿ ಅಂತ ನನ್ನ ಗಂಡನನ್ನು ಕರೆದುಕೊಂಡು ಹೋಗಬೇಡ.. ಎಂದಾಗ..

"ಬೇಡಾ.. ಇಲ್ಲೇ ತನ್ಕೊಡ್ತೀವಿ.. ಕೇಸರಿ, ಬಾದಾಮಿ, ಸಕ್ಕರೆ ಅರೆದು ಹಾಲಿಗೆ ಹಾಕಿ ರಾಮರಸ ಮಾಡಿಕೊಡು.. ಸುಟ್ಟೋನು ಕೆಟ್ಟ ಅರೆದೋನು ಮೆರೆದ ಅಂತ ನಿನ್ನ ಹೆಸರನ್ನು ಹೇಳಿಕೊಂಡು ಹಾಯಾಗಿ ಇಲ್ಲೇ ಕುಡ್ಕೊಂಡು ಕೂತಿರ್ತೀವಿ.. "

ಈ ದೃಶ್ಯದಲ್ಲಿ ಕುಶಿ ಕೊಡುವುದು.. ತನ್ನನ್ನು ಬಯ್ದು ಹೀಯಾಳಿಸಿದರು, ಸಿಕ್ಕ ಅವಕಾಶವನ್ನು ಅಚಾನಕ್ ಆಗಿ ಎತ್ತಿಕೊಂಡು ಹೊಸ ರೂಪ ಕೊಡುವುದು, ಮತ್ತು ಆ ಸಂಭಾಷಣೆ ಹೇಳುವಾಗ ಅಂಗೀಕ ಅಭಿನಯ.

*****

ಊರಿನಲ್ಲಿ ಎತ್ತಿನ ಗಾಡಿ ಸ್ಪರ್ಧೆ ನಡೆದಾಗ, ಗುಳ್ಳನ ಎತ್ತುಗಳು ಗೆಲ್ಲುತ್ತವೆ, ಆಗ ಬೂತಯ್ಯ ಹೇಳುವ ಸಂಭಾಷಣೆ
"ಗುಳ್ಳನ ಎತ್ತುಗಳು ಗೆದ್ದರೂ, ಭೈರನ ಹೋರಿಗಳು ಮೈ ತುಂಬಿಕೊಂಡು ಲಕ್ಷಣವಾಗಿವೆ"

ಪಕ್ಕದಲ್ಲಿಯೇ ನಿಂತಿದ್ದ ಬಾಲಕೃಷ್ಣ ಹೇಳುವ ಮಾತು "ಬಿತ್ತಾ ಕಣ್ಣು.. ಸರಿ" (ಕೆನ್ನೆ ಸವರಿಕೊಂಡು ಹೇಳುವ ಮಾತು.. ಬೂತಯ್ಯನ ಕ್ರೂರತೆಯನ್ನು ಹಾಗೆ ಕಣ್ಣ ಮುಂದೆ ತಂದು ನಿಲ್ಲಿಸುತ್ತೆ)..

ಈ ದೃಶ್ಯ ಕೇವಲ ಒಂದು ಮೂವತ್ತು ಸೆಕೆಂಡ್ ಅಷ್ಟೇ.. ಜೊತೆಯಲ್ಲಿ ಬಾಲಕೃಷ್ಣ ಹೇಳುವ ಮಾತು ಮೂರೇ ಪದ.. ಆದ್ರೆ ಅದರಲ್ಲಿ ತುಂಬಿರುವ ಅರ್ಥ.. ಅಗಾಧ.. ಇದು ಬಾಲಕೃಷ್ಣ ಅವರ ಪರಿಣಾಮಕಾರಿ ಅಭಿನಯದ ಗುಟ್ಟು.

*****

ಭೈರನ ಹೋರಿಯನ್ನು ಬೂತಯ್ಯ ಕದ್ದು ಮಾರಿಬಿಟ್ಟಿರುತ್ತಾನೆ.. ಆ ಹೋರಿಗಳನ್ನು ಹುಡುಕಿಕೊಂಡು ಬರುವ ಭೈರನಿಗೆ ಬಾಲಕೃಷ್ಣ ಹೇಳುವ ಮಾತು

" ನಮ್ಮ ಮಾವ ಬೂತಯ್ಯನ ಕಣ್ಣಿಗೆ ಬಿದ್ದು, ಸಂತೇಲಿ ಮಾರಿದ್ದು ಆಯ್ತು, ಅದರ ಮೈಮೂಳೆ ಗೋರಿನೂ ಆಗೋಯ್ತು.. ಈಗ ನಿನ್ನ ಹೊಟ್ಟೆ ಉರಿ ತೀರಿಸ್ಕೋ, ನಿನ್ನ ಕಡೆ ಹತ್ತು ಜನಕ್ಕೆ ಹೇಳಿ ಗುಂಪು ಕಟ್ಟು, ಬೂತಯ್ಯನಿಗೆ ಸರಿಯಾದ ಗತಿ ಕಾಣಿಸು.. ನಾ ಹೇಳಿದೆ ಅಂತ ಹೇಳಬೇಡ"

ಈ ಕಡೆ ಭೈರನಿಗೆ ಸಮಾಧಾನ ಮಾಡಿದ ಹಾಗೆ, ಆ ಕಡೆ ಅವನನ್ನು ಬೂತಯ್ಯನ ಎದಿರು ಎತ್ತಿಕಟ್ಟುವುದು, ಈ ದೃಶ್ಯದಲ್ಲಿ ಮಿಂಚುವುದು ಸಂಭಾಷಣೆಯಲ್ಲಿ ಏರಿಳಿತ, ಮತ್ತು ಅಂಗೀಕ ಅಭಿನಯ, ನೊಂದವರ ಕೋಪದ ಉರಿಗೆ ಸರಿಯಾಗಿ ಹದವಾಗಿ ತುಪ್ಪ ಸುರಿಯುವುದು.
****
ಬೂತಯ್ಯನಿಗೆ ಊರಿನ ಸಭ್ಯಸ್ಥ ದೇವಯ್ಯನ ಮೇಲೆ ಕಣ್ಣಿರುತ್ತದೆ.. ದೇವಯ್ಯ ಮಾತ್ರ ಬೂತಯ್ಯನ ಕಪಿಮುಷ್ಟಿಗೆ ಸಿಕ್ಕಿರೋಲ್ಲ.. ಯಾವುದೇ ಕಾರಣಕ್ಕೆ ಊರಿನವನ್ನು ಕಾಪಾಡಲು ದೇವಯ್ಯ ಸಾಲಕ್ಕೆ ಜಾಮೀನಾಗಿ ನಿಲ್ಲುತ್ತಾನೆ.

"ದೇವಯ್ಯ ಒಬ್ಬ ತಪ್ಪಿಸಿಕೊಂಡಿದ್ದ.. ಈಗ ಅವನು ಭೂತಕ್ಕೆ ಬಲಿಯಾಗಿ ಹೋದ" ಒಂದು ರೀತಿಯಲ್ಲಿ ವಿಷಾದ ತುಂಬಿದ ಮಾತು, ಜೊತೆಯಲ್ಲಿಯೇ ತಣ್ಣಗಿನ ಆಕ್ರೋಶ.. ಎರಡು ಹದವಾಗಿ ಬೆರೆಸಿದ ಸಂಭಾಷಣಾ ಶೈಲಿ... ಬಾಲಕೃಷ್ಣ ಅವರಿಗೆ ಮಾತ್ರ ಸಾಧ್ಯ.
*****

ಬೂತಯ್ಯ ಲಕ್ವ ಹೊಡೆದು ಪ್ರಾಣ ಬಿಡುತ್ತಾನೆ.. ಅವನನ್ನು ದೆವ್ವ ಕಂಡ ಹಾಗೆ ದ್ವೇಷಿಸುವ ಊರಿನ ಜನ ಸಹಾಯಕ್ಕೆ ಬರೋಲ್ಲ.. ಆಗ "ರಾತ್ರಿಯೆಲ್ಲಾ ಹಳ್ಳಿ ಹಳ್ಳಿ ತಿರುಗಿಬಂದೆ, ಮಾವನ ಹೆಣ ಹೊರೋಕೆ ಒಬ್ಬನು ಸಿಗಲಿಲ್ಲ, ಅರೆ ದುಡ್ಡು ಕೊಡ್ತೀನಿ ಬನ್ರೋ ಅಂದರೂ ಅದಕ್ಕೂ ಉಹೂಂ... ಎಷ್ಟು ಹಣ ಸಂಪಾದನೆ ಮಾಡಿದರೆ ಏನು.. ಕೊನೆಗಾಲದಲ್ಲಿ ಗತಿ ಕಾಣಿಸೋಕೆ ನಾಲ್ಕು ಜನ ಸಿಗಲಿಲ್ವಲ್ಲ.. "

ಜೀವನದಲ್ಲಿ ಪ್ರೀತಿ,  ಮಮತೆ, ವಿಶ್ವಾಸ ಇವುಗಳು ಮುಖ್ಯ ಹಣವಲ್ಲ ಎನ್ನುವ ಮಾತನ್ನು ವಿಷಾದ ಭರಿತ ಮಾತುಗಳಲ್ಲಿ ಮನಕ್ಕೆ ದಾಟಿಸುವ ಕೆಲಸ ಈ ಸಂಭಾಶಣೆಯಲ್ಲಿದೆ..

*****

"ಬಿಡು ಮಾವ ಅವನ ಬುರುಡೆ ಚೂರು ಚೂರು ಮಾಡಿ ಬುದ್ಧಿ ಕಲಿಸುತ್ತೀನಿ" ಎಂದು ಸಾಂಬಯ್ಯ ಎದ್ದು ನಿಂತಾಗ "ಆಮೇಲೆ ಪೋಲಿಸ್ನೋರು ಸುಮ್ಮನೆ ಬಿಟ್ಟು ಬಿಡ್ತಾರೆಯೇ.. ನಿಮ್ಮಪ್ಪ ಗುಟ್ಟಾಗಿ ಗುಂಡು ಹಾರಿಸಿ ಎಷ್ಟೊಂದು ಜನರನ್ನು ಕೊಂದಿಲ್ಲ.. ಹಾಗೆ ಮಾಡಬೇಕೆ ಹೊರತು .. ಬೀದಿಯಲ್ಲಿ ಈಗೆಲ್ಲ ಮಾಡಬಾರದು.. .. ಕಾಲಬರುತ್ತೆ "

ಕೋಪದಲ್ಲಿ ವ್ಯಾಘ್ರನಾಗಿ ನಿಂತ ಸಾಂಬಯ್ಯನನ್ನು ಮಾತಿನಲ್ಲಿ ಹಿಡಿದು ಹಾಕಿ, ತಲೆ ಸವರಿ  ಸಮಾಧಾನ ಮಾಡುತ್ತಾ, ವಕೀಲನ ಬಳಿಗೆ ಬರುತ್ತಾರೆ.

ಆ ವಕೀಲ... ಆ ಸೆಕ್ಷನ್ ಈ ಸೆಕ್ಷನ್ ಅಂತ ಹೇಳಿ "ಈ ರೀತಿ ಮಾಡಿದರೆ" ಎಂದು ನಿಲ್ಲಿಸುತ್ತಾರೆ.. ಆಗ ಬಾಲಕೃಷ್ಣ "ಅವರ ಕಥೆ ಮುಗೀತು ಅಂತೀರಾ.. ಮುಗಿಸಿ" ಕೋರ್ಟು, ಕಟ್ಟಲೆ  ಇದರ ಬಗ್ಗೆ ವಿರಕ್ತಿ ತುಂಬಿದ ಮಾತುಗಳನ್ನು ಬರಿ ಐದು ಪದಗಳಲ್ಲಿ ಹೇಳುವ ರೀತಿಗೆ ಯಾರು ಸಾಟಿ ಹೇಳಿ.

ಬೆಂದ ಮನೆಯಲ್ಲಿ ಹಿರಿದಿದ್ದೆ ಲಾಭ ಎನ್ನುವಂತೆ.. ವಕೀಲನ ಹತ್ತಿರ "ಸ್ವಾಮೀ ರಸ ಇರುವ ಕಬ್ಬು.. ಎಷ್ಟು ಬೇಕೋ ಅಷ್ಟು ಹೀರಿಕೊಳ್ಳಿ.. ಇಲ್ಲಿ ಒಂದೆರಡು ತೊಟ್ಟು ಕೊಡವಿಬಿಡಿ.. " ಆ ರಾಗಭರಿತ ಮಾತುಗಳು, ಸಿಕ್ಕ ಅವಕಾಶವನ್ನು ಹೇಗೆ ಉಪಯೋಗಿಸಬೇಕು ಎನ್ನುವುದನ್ನು ತೋರಿಸುತ್ತದೆ.

ಕಡೆಯ ದೃಶ್ಯದಲ್ಲಿ.. ಊರಿನ ಜನರೆಲ್ಲಾ ಸಾಂಬಯ್ಯನ ಮನೆಯನ್ನು ಲೂಟಿ ಮಾಡಲು ಬಂದಾಗ, ಅವರ ಜತೆಯಲ್ಲಿ ತನ್ನ ಮಾವನು ನಿಂತಿದ್ದನ್ನು ನೋಡಿದಾಗ, ಆಶ್ಚರ್ಯ, ದಿಗ್ಭ್ರಮೆ ವ್ಯಕ್ತಪಡಿಸುತ್ತಾನೆ ಸಾಂಬಯ್ಯ.. ಆಗ ಉದ್ರಿಕ್ತ ಮೊಗದಲ್ಲಿಯೇ ತಲೆ ಅಲ್ಲಾಡಿಸುವುದು ಬಾಲಕೃಷ್ಣ, ಈ ದೃಶ್ಯದಲ್ಲಿ ಸಂಭಾಷಣೆ ಇಲ್ಲ, ಆದರೆ ಮುಖಭಾವ.. ಆಹಾ.

*****

ಈ ಚಿತ್ರದಲ್ಲಿ ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನ ಬೆಳಗಿದೆ, ಜೊತೆಯಲ್ಲಿ ಆ ಪಾತ್ರವನ್ನು ತನ್ನ ಹೆಗಲ ಮೇಲೆ ನಿಲ್ಲಿಸಿಕೊಂಡು ಅಭಿನಯ ನೀಡಿರುವುದು ಬಾಲಕೃಷ್ಣ ಅವರ ಶಕ್ತಿ. ಪಾತ್ರಕ್ಕೆ ಎಲ್ಲಿಯೂ ಲೋಪ ಬರದಂತೆ ಅಭಿನಯಿಸಿರುವ ಎಲ್ಲಾ ನಟ ನಟಿಯರ ಮಧ್ಯೆ ತನ್ನದೇ ರೀತಿಯಲ್ಲಿ ಗುಪ್ತಗಾಮಿನಿಯಂತೆ ಅಭಿನಯಿಸಿ, ಪ್ರತಿ ಹಂತದಲ್ಲೂ ತನ್ನ ಇರುವಿಕೆಯನ್ನು ತೋರುವ ಅಭಿನಯ ಬಾಲಕೃಷ್ಣ ಅವರಿಂದ ಮೂಡಿ ಬಂದಿದೆ. ಇದಕ್ಕೆ ನಿರ್ದೇಶಕ ಸಿದ್ಧಲಿಂಗಯ್ಯ, ಸಂಭಾಷಣಕಾರ ಹುಣಸೂರು ಕೃಷ್ಣಮೂರ್ತಿಯ ಜೊತೆ ಜೊತೆಯಲ್ಲಿಯೇ ಬಾಲಕೃಷ್ಣ ಕೂಡ ಅಂಕಗಳಿಸುತ್ತಾರೆ.

*********************

ಬಾಲಕೃಷ್ಣ ಅವರ ಅಭಿಮಾನಿಯಾದ ನನಗೆ ಬಾಲಕೃಷ್ಣ ಸಾಕ್ಷಾತ್ ದೇವರೇ ಹೌದು. ನನಗೆ ಅವರ ಮೇಲಿನ ಅಭಿಮಾನ ಕೆಲವು ಕಡೆ ಅತಿರೇಕ ಎಂದು ಓದುಗರಿಗೆ ಅನಿಸಿದರೆ, ಅದು ನನ್ನ ಅಭಿಮಾನದ ಮತ್ತು ಬರಹದ ದೌರ್ಬಲ್ಯ ಎನ್ನಬಹುದೇ ಹೊರತು, ತುಸುವೂ ಕೂಡ ಕೊಂಕಿಲ್ಲದ ಬಾಲಕೃಷ್ಣ ಅವರ ನಟನೆ ಅಮೋಘ ಎಂಬುದು ನನ್ನ ಅಭಿಪ್ರಾಯ...

ಮತ್ತೆ ಬಾಲಕೃಷ್ಣ ಅವರ ಇನ್ನೊಂದು ಅದ್ಭುತ ಕಲಾಚಿತ್ರರತ್ನದ ಜೊತೆ ಮತ್ತೊಮ್ಮೆ ಬರುತ್ತೇನೆ.. ಓದಿ ನಿಮ್ಮ ಅಭಿಪ್ರಾಯ.... ಇರಲಿ ಇರಲಿ... 

Friday, January 1, 2016

ಜೀವನದಲ್ಲಿ ಆನಂದ ಉಕ್ಕಿಸುವ ಆನಂದ್ - 1970 - (ಹಿಂದಿ)

ನೋವು ಎದೆಯೊಳಗೆ ನಲಿವು ತುಟಿಯ ಮೇಲೆ ಎನ್ನುವ ಅದ್ಭುತ ಸಂದೇಶ ಹೊತ್ತ ಚಿತ್ರ ಇದು.

ಈ ಚಿತ್ರದ ಬಗ್ಗೆ ಬರೆಯಲು ಪ್ರಯತ್ನವನ್ನೇ ಮಾಡಿರಲಿಲ್ಲ. ಇದೊಂದು ಅದ್ಭುತ ಚಿತ್ರಅನಿಸಲೇ ಇಲ್ಲ ಬದಲಿಗೆ ಇದೊಂದು ಸಾರ್ವಕಾಲಿಕ ಉತ್ಸಾಹ ಬತ್ತದ ಚಿಲುಮೆ ಎಂಬುದು ನನ್ನ ಅಭಿಪ್ರಾಯ. 

ಜೀವನದಲ್ಲಿ ಯಾವಾಗ ಬೇಕಾದರೂ ಈ ಚಿತ್ರವನ್ನು ನೋಡಿ ಅರಗಿಸಿಕೊಂಡು, ಆಲಂಗಿಸಿಕೊಂಡು, ಈ ಚಿತ್ರದಲ್ಲಿ ಬರುವ ಹೂರಣದಿಂದ ಕಲಿಯಬಹುದಾದ ಅವಕಾಶ ಸದಾ ಸಿಕ್ಕೆ ಸಿಗುತ್ತದೆ. 

ಜಲ ಒಂದು ಸಣ್ಣ ಬಿರುಕಿನಿಂದ ಹೊರಗೆ ಬಂದು, ಝರಿಯಾಗಿ,  ತೊರೆಯಾಗಿ, ನದಿಯಾಗಿ, ಕಡಲು ಸೇರುವ ತನಕ ಒಂದೇ ರುಚಿ ಇರುವ ಹಾಗೆ, ಈ ಚಿತ್ರದಲ್ಲಿ ಯಾವ ಕಾಲಘಟ್ಟದಲ್ಲಿ ನೋಡಿದರೂ ನಿಮಗೆ ಒಂದೇ ತೆರನಾದ ಅನುಭವ ಕೊಡುತ್ತದೆ. 

ಇಡಿ ಚಿತ್ರದಲ್ಲಿ ಪ್ರತಿ ಫ್ರೇಮ್ ನಲ್ಲಿ  ಕಾಣುವ ರಾಜೇಶ್ ಖನ್ನ ಈ ಚಿತ್ರದಲ್ಲಿ ಬರಿ ಅಭಿನಯಿಸಿಲ್ಲ, ಬದಲಿಗೆ ತಾವೇ ಪಾತ್ರವಾಗಿಬಿಟ್ಟಿದ್ದಾರೆ. ಈ ರೀತಿಯ ಕಥೆಯನ್ನು ಎಲ್ಲೂ ಎಳೆಯದೆ, ಪ್ರತಿ ದೃಶ್ಯದಲ್ಲಿಯೂ ನಗು, ಸಂದೇಶ ಹೊತ್ತು ಬರುವ ಹಾಗೆ ಚಿತ್ರೀಕರಣ ಮಾಡಿರುವುದು ವಿಶೇಷ. 

ಸಾಮಾನ್ಯ ಕಥಾನಾಯಕ ಅಂತ್ಯದಲ್ಲಿ ಸಾವು ಬರುತ್ತದೆ ಎಂದು ಒಬ್ಬರಿಗೆ ಗೊತ್ತಿರುತ್ತದೆ, ಇಲ್ಲವೇ ಬರಿ ಕಥಾನಾಯಕನಿಗೆ ಮಾತ್ರ ಗೊತ್ತಿರುತ್ತದೆ. ಆದರೆ  ಇಲ್ಲಿ ಬರುವ ಎಲ್ಲಾ ಮುಖ್ಯ ಪಾತ್ರಗಳಿಗೆ ಆನಂದ್ ತನ್ನ ಅಂತ್ಯಕ್ಕೆ ಕೆಲವೇ ವಾರಗಳು, ದಿನಗಳು ಇದೆ ಎಂದು ಅರಿತಿರುತ್ತಾರೆ. 

ಆದರೆ ಯಾರೊಬ್ಬರು ಸುಮ್ಮನೆ ಅಳುವುದಾಗಲಿ, ಅಥವಾ ಆಗದಲೇ ಇರುವ ಸಮಾಧಾನದ ಮಾತುಗಳನ್ನು ಹೇಳುವುದಿಲ್ಲ. ಬದಲಿಗೆ ಎಲ್ಲರೂ ಮುಂದಿನ ಜನುಮ, ಅಥವಾ ನಾನು  ಅಲ್ಲಿಗೆ ಬರುತ್ತೇನೆ ಎನ್ನುವ ವಿಶ್ವಾಸದ ಮಾತುಗಳನ್ನು ಆಡುತ್ತಾರೆ. ಅದು ನಿಜವಾಗಿಯೂ ಈ ಚಿತ್ರವನ್ನು ರತ್ನವನ್ನಾಗಿ ಮಾಡಿರುವ ಅಂಶಗಳು. 

ಅದ್ಭುತ ಸಂಭಾಷಣೆ, ಅದ್ಭುತ ಸಾಹಿತ್ಯ, ಸಂಗೀತ, ಗಾಯನ ಈ ಚಿತ್ರಕ್ಕೆ ಭದ್ರ ಬುನಾದಿ ಕೊಟ್ಟಿವೆ. ಆದರೆ ಇವಿಷ್ಟು ನಿಂತಿರೋದು  ಸರಳ ಕಥೆಯನ್ನು ಅತ್ಯುತ್ತಮ ಚಿತ್ರಕಥೆಯನ್ನಾಗಿ ಮಾಡಿ, ನವಿರಾದ ಹಾಸ್ಯ, ತುಂಬಿ ಜೀವನದ ಹಾದಿಗೆ ಹೇಗೆ ಸಿದ್ಧರಾಗಬೇಕು ಎಂದು ಚಿತ್ರದ ಮೂಲಕ ಎಲ್ಲಿಯೂ ಉಪದೇಶದ ತರಹ ನೀಡದೆ ಗುಪ್ತಗಾಮಿನಿಯ ಹಾಗೆ ನುಸುಳಿ ನೋಡುವ ವೀಕ್ಷಕರಿಗೆ ಅರ್ಥವಾಗುವ ಹಾಗೆ ಚಿತ್ರಿಸಿರುವುದು. 

ನನಗೆ ತುಂಬಾ ತುಂಬಾ ಇಷ್ಟವಾಗುವ ದೃಶ್ಯಗಳು : 

೧) ಜಾನಿ ವಾಕರ್ ರಾಜೇಶ್ ಖನ್ನಾರನ್ನು ನೋಡಲು ಬರುತ್ತಾರೆ, ನಂತರ ನಗುತ್ತಲೇ ಮಾತಾಡುತ್ತಾ ಕಣ್ಣೀರು ಹಾಕಿಕೊಂಡು ಹೊರ ಬರುತ್ತಾರೆ 
೨) ಚಿತ್ರದ ಆರಂಭದಲ್ಲಿ ಅಮಿತಾಬ್ ಬಚ್ಚನ್ ತನ್ನ ವೈದ್ಯಕೀಯ ವೃತ್ತಿಯ ಬಗ್ಗೆ ನಿರಾಸೆ ತುಂಬಿದ್ದರೂ, ಅಷ್ಟೇ ಪ್ರೌಡಿಮೆ ಇರುತ್ತದೆ, ಹಾಗಾಗಿ, ರಾಜೇಶ್ ಖನ್ನ ಪಾತ್ರಕ್ಕೆ ಬಂದಿರುವ ರೋಗಕ್ಕೆ ಚಿಕಿತ್ಸೆ ಇಲ್ಲವೇ ಇಲ್ಲ ಎಂದು ಮಾತಾಡುತ್ತಾರೆ, ಆದರೆ ಬರುತ್ತಾ ಬರುತ್ತಾ ಚಿತ್ರದ ಅಂತ್ಯದಲ್ಲಿ, ತನ್ನ ಜ್ಞಾನ ಬದಿಗಿಟ್ಟು, ತನ್ನ ಗೆಳೆಯನನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಾರೆ (ರಘು ಕಾಕ ದೇವರ ಪ್ರಸಾದ ತರಲು ಹೋಗುವಾಗ, ಆದಷ್ಟು ಬೇಗ ಬನ್ನಿ ಎಂದು ಹೇಳುವುದು, ಡಾ. ಶಾಸ್ತ್ರಿ ಬಳಿಯಲ್ಲಿ ಸಿಗಬಹುದಾದ ಔಷಧಿಯಿಂದ ಗುಣಮುಖ ಆಗಬಹುದು ಎಂದು ಅದನ್ನು ತರಲು ಹೋಗುವುದು)

೩) ಆರಂಭದಲ್ಲಿ ಆನಂದ್ ಪಾತ್ರವನ್ನು ಕಂಡರೆ ಕೋಪಗೊಳ್ಳುವ ಅವರು ಚಿತ್ರ ಸಾಗುತ್ತಾ ಹೋದಹಾಗೆ ಆ ಪಾತ್ರವು ತನ್ನ ಮನಸ್ಸಿಗೆ ಹತ್ತಿರ ಎಂದು ಮಾರ್ಪಾಡಾಗುವ ರೀತಿ. 

೪) ನೀ ಎಲ್ಲಿಗೂ ಹೋಗಬೇಡ, ಸಾಯುವುದಾದರೆ ನೀ ಇಲ್ಲೇ, ನನ್ನ ಮಡಿಲಲ್ಲಿ ಸಾಯಬೇಕು ಎಂದು ಹೇಳುವಾಗ ಬಚ್ಚನ್ ಕಣ್ಣಲ್ಲಿ ಕಾಣುವ ಪ್ರೀತಿ ಆಹ್. 

೫) ರಾಜೇಶ್ ಖನ್ನ ... ಈ ಪಾತ್ರದ ಬಗ್ಗೆ ಏನು ಬರೆಯಲಿ, ಚಿತ್ರದ ಆರಂಭದ ೨೦ ನಿಮಿಷಗಳು ನಿಧಾನಗತಿಯಲ್ಲಿ ಸಾಗುತ್ತಿರುತ್ತದೆ, ಇವರು ಬಂದ ಕ್ಷಣದಿಂದ ಚಿತ್ರ ಅಂತ್ಯ ಆಗುವವರಗೆ ಚಿತ್ರದ ಓಟ ಅದ್ಭುತ.  ಪ್ರತಿ ದೃಶ್ಯದಲ್ಲಿಯೂ ಅವರೇ ಇದ್ದರೂ, ಎಲ್ಲಿಯೂ ಕೂಡ ಅರೆ ಯಾಕೆ ಅನ್ನಿಸುವುದಿಲ್ಲ. ಇಡಿ ಚಿತ್ರವನ್ನು ಅಷ್ಟರ ಮಟ್ಟಿಗೆ ಆವರಿಸಿಕೊಂಡಿದ್ದಾರೆ. 

೬) ನರ್ಸ್ ಪಾತ್ರದ ಲಲಿತ ಪವಾರ್, ಡಾ. ಪ್ರಕಾಶ್ ಪಾತ್ರದ ರಮೇಶ್ ಡಿಯೋ, ಸುಮನ್ ಪಾತ್ರಧಾರಿ, ರೇಣು ಪಾತ್ರ, ಎಲ್ಲವೂ ರಾಜೇಶ್ ಖನ್ನ ಪಾತ್ರಕ್ಕೆ ಅದ್ಭುತ ಸಾತ್ ನೀಡಿದೆ. 

  •  ಜೀವನ ಉದ್ದ ಇರಬಾರದು ದೊಡ್ಡದಾಗಿರಬೇಕು 
  • ಎಲ್ಲಿಯ ತನಕ ಬದುಕಿದ್ದೇನೋ ನಾ ಸತ್ತಿರೊಲ್ಲ, ಸತ್ತ ಮೇಲೆ ನಾನೇ ಇಲ್ಲಾ
  • ನಾ ನಿನಗೆ ಏನು ಆಶೀರ್ವಾದ ನೀಡಲಿ, ನನ್ನ ಆಯಸ್ಸು ನಿನಗೆ ಕೊಡುತ್ತೀನಿ ಅಂತ ಹೇಳೋಕು ಆಗೋಲ್ಲ 
  • ಪ್ರತಿ ನಗುವಿನ ಹಿಂದೆ ಬರಿ ಖುಷಿ ಮಾತ್ರ ಇರೋಲ್ಲ 
  • ನಮ್ಮ ತಪ್ಪು ಏನು ಅಂದರೆ, ನಾಳೆ ಬರುವ ಕಷ್ಟಗಳನ್ನು ಇಂದಿಗೆ ತಂದುಕೊಂಡು, ಇವತ್ತಿನ ಖುಷಿ ಹಾಳುಮಾಡಿಕೊಳ್ಳುತ್ತೇವೆ. 
  • ನಾ ಆಮೇಲೆ ಇರೋಲ್ಲ ಅಂತ ಅಳದೆ, ನಾ ಇರುವ ತನಕ ನಿನ್ನ ಇರಬಹುದಾದ ಸಾವಿರಾರು ಕ್ಷಣಗಳನ್ನು ಯಾಕೆ ಕಳೆದುಕೊಳ್ಳುತ್ತೀಯ 
  • ಅವರಿಗೆ ರೋಗವಿಲ್ಲ, ಆದರೆ ರೋಗವಿದೆ ಎನ್ನುವ ಅವರ ಸಂಶಯಕ್ಕೆ ಚಿಕಿತ್ಸೆ ಕೊಡುತ್ತೇನೆ 
  • ಹಾಲು ಮಾರಿದರೆ ನೀರು ಸೇರಿಸುತ್ತಿದ್ದೆ, ವಕೀಲ ಆಗಿದ್ದರೆ ಕೊಲೆಗಾರನ ಹತ್ತಿರ ದುಡ್ಡು ತೆಗೆದುಕೊಂಡು ಅವನನ್ನು ಉಳಿಸುತ್ತಿದ್ದೆ, ಆದರೆ ಡಾಕ್ಟರ್ ಆಗಿರೋದರಿಂದ ಜನ ನೋವನ್ನು ಕಡಿಮೆ ಮಾಡುತ್ತಿದ್ದೇನೆ, ಅದು ಕುಶಿ ಕೊಡುತ್ತದೆ
  • ಒಬ್ಬ ಸತ್ತಿಲ್ಲ, ಇನ್ನೊಬ್ಬ ಸಾಯೋಕೆ ಹುಟ್ಟಿದ 
ಇಡಿ ಚಿತ್ರದಲ್ಲಿ ಬರುವ ಪ್ರತಿ ಸಂಭಾಷಣೆಯ ತುಣುಕು ಕೂಡ ಒಂದು ಸಂದೇಶ ಭರಿತ ಮಾತುಗಳೇ. ಅಂತ್ಯದಲ್ಲಿ ಬರುವ ಒಂದು ಚಿಕ್ಕ ಕವಿತೆ ಮತ್ತು ಸಂಭಾಷಣೆ ಕಣ್ಣಲ್ಲಿ ನೀರು ತರಿಸುತ್ತದೆ.

ರಾಜೇಶ್ ಖನ್ನ ಚಿತ್ರದಲ್ಲಿ ಅಮಿತಾಭ್ ಪಾತ್ರವನ್ನು ಬಾಬು ಮೊಶಾಯ್ ಎಂದು ಗೋಳು ಹುಯ್ದುಕೊಳ್ಳುವ ರೀತಿ ಇಷ್ಟವಾಗುತ್ತದೆ. ಸ್ನೇಹ ಎಂದರೆ ಹೀಗಿರಬೇಕು, ಒಬ್ಬರ ನೋವು ಒಬ್ಬರಿಗೆ ಅರ್ಥವಾಗುತ್ತದೆ, ಇಬ್ಬರಿಗೂ ಗೊತ್ತು ಒಬ್ಬರನ್ನು ಒಬ್ಬರು ಹೇಗೆ ಕಾಪಾಡಿಕೊಳ್ಳಬೇಕು ಎಂದು.  ಸ್ನೇಹದ ಪರಿಧಿ ಸುಂದರವಾಗಿ ಅನಾವರಣಗೊಂಡಿದೆ. 

ಚಿತ್ರ ತಂಡ 
ಸಂಭಾಷಣೆ - ಗುಲ್ಜಾರ್ 
ಸಾಹಿತ್ಯ - ಗುಲ್ಜಾರ್ ಮತ್ತು ಯೋಗೇಶ್ 
ಗಾಯನ - ಮನ್ನಾಡೆ, ಮುಕೇಶ್ ಮತ್ತು ಲತಾ 
ಸಂಗೀತ - ಸಲೀಲ್ ಚೌಧರಿ 
ಛಾಯಾಗ್ರಹಣ - ಜಯವಂತ್ ಪಥಾರೆ 
ಚಿತ್ರಕಥೆ - ಹೃಷಿಕೇಶ್ ಮುಖರ್ಜೀ, ಗುಲ್ಜಾರ್, ಡಿ. ಎನ್. ಮುಖರ್ಜೀ, ಬಿಮಲ್ ದತ್ತಾ 
ನಿರ್ಮಾಣ - ಎನ್ ಸಿ ಸಿಪ್ಪಿ ಮತ್ತು ಹೃಷಿಕೇಶ್ ಮುಖರ್ಜೀ
ಕಥೆ, ಸಂಕಲನ ಮತ್ತು ನಿರ್ದೇಶನ - ಹೃಷಿಕೇಶ್ ಮುಖರ್ಜೀ

ರಾಜೇಶ್ ಖನ್ನ ಮತ್ತು ಅಮಿತಾಭ್ ಒಟ್ಟಿಗೆ ಮೊದಲ ಬಾರಿಗೆ ನಟಿಸಿದ ಈ ಚಿತ್ರದಲ್ಲಿ ಜಾದೂ ಎನ್ನಿಸುವಂಥಹ ಅಭಿನಯ ನೀಡಿದ್ದಾರೆ.  ಪ್ರತಿ ಪಾತ್ರವೂ ಕೂಡ ಇಲ್ಲಿ ಮುಖ್ಯ ಪಾತ್ರವಾಗುತ್ತದೆ. ಯಾವುದೇ ಪಾತ್ರ ಅಥವಾ ಸನ್ನಿವೇಶ ಬೇಡ ಅನ್ನುವ ಹಾಗೆ ಇಲ್ಲ. 

ಅಯಸ್ಕಾಂತ ಕಬ್ಬಿಣದ ತುಂಡುಗಳನ್ನು ಆಕರ್ಷಿಸುವ ಹಾಗೆ, ಈ ಚಿತ್ರದಲ್ಲಿ ಬರುವ ಪಾತ್ರಗಳು ತಮಗೆ ಅರಿವಿಲ್ಲದೆ ರಾಜೇಶ್ ಖನ್ನ ಪಾತ್ರದ ಕಾಂತತ್ವಕ್ಕೆ ಆಕರ್ಷಿತಗೊಂಡು ಕಾಂತೀಯ ಗುಣ ಹೊಂದುತ್ತಾರೆ.

ಪ್ರತಿ ಕ್ಷಣವನ್ನು ಆನಂದಿಸಬೇಕು, ಆದರಿಸಬೇಕು, ಧನಾತ್ಮಕವಾಗಿ ಜೀವನವನ್ನು ನೋಡಬೇಕು, ನಮ್ಮಲ್ಲಿ ಏನೇ ನ್ಯೂನ್ಯತೆ ಇದ್ದರೂ ಕೂಡ ಖುಷಿಯಾಗಿ ಆ ಕ್ಷಣವನ್ನು ಅನುಭವಿಸಿದರೆ, ಅದು ನಾವು ಜೀವನವನ್ನು ನೋಡುವ ರೀತಿಯನ್ನು
ಬದಲಾಯಿಸುತ್ತದೆ ಎನ್ನುವ ಸುಂದರ ಸಂದೇಶ ಈ ಚಿತ್ರ ಕೊಡುತ್ತದೆ.

ಮನಸ್ಸಿಗೆ ಮುದ ನೀಡುವ ಈ ಚಿತ್ರ ಸಾರ್ವಕಾಲಿಕ ಬತ್ತದ  ಉತ್ಸಾಹದ ಚಿಲುಮೆ. 

Monday, November 2, 2015

ಅಭಿಮಾನದ ಕೂಸು - ಟಿ ಎನ್ ಬಾಲಕೃಷ್ಣ - ಆರಂಭ


ಕನ್ನಡ ಚಿತ್ರಗಳನ್ನು ಮೊದಲಿಂದ ಆಸಕ್ತಿಯಿಂದ ನೋಡುತ್ತಾ ಬಂದ ನನಗೆ, ಅದನ್ನು ಇನ್ನಷ್ಟು ಆಸಕ್ತಿಯಿಂದ ನೋಡಲು ಪ್ರೇರೇಪಣೆ ನೀಡಿದವರಲ್ಲಿ ಮೊದಲಿಗರು ಅಂದರೆ ಟಿ ಎನ್ ಬಾಲಕೃಷ್ಣ. 

ಒಬ್ಬ ಕಲಾವಿದನ ಅದರಲ್ಲೂ ಪೋಷಕ ಪಾತ್ರದಲ್ಲಿ ಬರುವ ಕಲಾವಿದರು ನೆನಪಲ್ಲಿ ಉಳಿಯುವುದು ಬಲು ಅಪರೂಪದ ಸಂಗತಿ. ಆದರೆ ಅಂದಿನ ಆ ಕನ್ನಡ ಚಿತ್ರರಂಗದಲ್ಲಿ ಇದ್ದವರೆಲ್ಲಾ ದಿಗ್ಗಜರೆ. ಕುಮಾರ ತ್ರಯರು, ನರಸಿಂಹರಾಜು, ಜಿ ವಿ ಅಯ್ಯರ್, ಲೀಲಾವತಿ, ರಾಮಚಂದ್ರ ಶಾಸ್ತ್ರಿ, ಡಿಕ್ಕಿ ಮಾಧವರಾವ್, ಜಯಶ್ರೀ, ಪಂತುಲು, ಎಂ ವಿ ರಾಜಮ್ಮ, ಪಂಡರಿಬಾಯಿ, ಅಶ್ವತ್, ದ್ವಾರಕೀಶ್ ಹೇಳುತ್ತಾ ಹೋದ ಹಾಗೆ ಹನುಮನ ಬಾಲ ಬೆಳದಂತೆ ಬೆಳೆಯುತ್ತಲೇ ಇರುತ್ತದೆ. 

ಅಂದಿನ ಕಾಲದಲ್ಲಿ ಎಲ್ಲಾ ಕಲಾವಿದರ ಗುರಿ ಒಂದೇ.. ಈ ಚಿತ್ರದಲಿ ಚೆನ್ನಾಗಿ ಅಭಿನಯಿಸಿದರೆ, ಇನ್ನೊಂದು ಚಿತ್ರ ಸಿಗುತ್ತದೆ, ಕೆಲಸ ಸಿಗುತ್ತದೆ, ಹೊಟ್ಟೆಗೆ ಆಧಾರವಾಗುತ್ತದೆ. ಅಷ್ಟೇ ಅವರ ತಲೆಯಲ್ಲಿ ಇದ್ದುದ್ದು, ಅವರಿಗೆಲ್ಲಾ ಚೆನ್ನಾಗಿ ಗೊತ್ತಿತ್ತು ಕಲಾದೇವಿ ನಮ್ಮನ್ನು ಆರಿಸಿದ್ದಾಳೆ ಎಂದರೇ, ನಮ್ಮ ಬದುಕನ್ನು ಜೋಪಾನ ಮಾಡುತ್ತಾಳೆ ಎಂದು, 

ಅವರ ನಂಬಿಕೆ ಎಂದೂ ಸುಳ್ಳಾಗಿರಲಿಲ್ಲ. ಅದಕ್ಕೆ ಅತ್ಯುತ್ತಮ ಉದಾಹರಣೆ, ನಮ್ಮ ಕರುನಾಡಿನ ಅಭಿಮಾನದ ಕೂಸು ಬಾಲಕೃಷ್ಣ. ಆ ದಿಗ್ಗಜರಲ್ಲಿ ಎಲ್ಲರೂ ಒಂದೊಂದು ಮ್ಯಾನರಿಸಂ ಅಥವಾ ಅವರದೇ ಆದ ಒಂದು ವಿಶಿಷ್ಟ ಛಾಪು ಇದ್ದಿತ್ತು. ನಮ್ಮ ಬಾಲಕೃಷ್ಣ ತಮ್ಮ ಅಭಿನಯ ಚಾತುರ್ಯವನ್ನು ಕೊಂಡೊಯ್ದ ರೀತಿ ಶಭಾಶ್ ಎನ್ನಲೇ ಬೇಕು ಅನ್ನಿಸುವಷ್ಟು ತಾಜಾ ಆಗಿತ್ತು ಮತ್ತು ನಿಜವಾಗಿತ್ತು. 

ಅವರು ಮಾಡದ ಪಾತ್ರವೇ ಇರಲಿಲ್ಲ. ಆದರೆ ನೀರಿನ ತರಹ ಯಾವುದೇ ಆಕಾರಕ್ಕೆ ಹೋದರೂ ನೀರು ಅದೇ ಪಾತ್ರಕ್ಕೆ ಒಗ್ಗಿಕೊಳ್ಳುವ ಹಾಗೆ, ಬಾಲಕೃಷ್ಣ ಕೂಡ ಅವರು ಮಾಡಿದ ಪಾತ್ರದೊಳಗೆ ಹೊಕ್ಕುಬಿಡುತ್ತಿದ್ದರು. ನೋಡಿದವರಿಗೆ, ಈ ಪಾತ್ರವನ್ನು ಬೇರೆ ಯಾರೇ ಮಾಡಿದರೂ ಅದು ಬಾಲಕೃಷ್ಣ ಮಾಡಿದ ಹಾಗಿಲ್ಲ ಅನ್ನಿಸುವುವಷ್ಟು ಶಕ್ತಿಶಾಲಿಯಾಗಿರುತ್ತಿತ್ತು. 

ನನ್ನ ಜೀವನದಲ್ಲಿ ಮೂರು "ಅಣ್ಣ" ಬಂದೆ ಬರುತ್ತಾರೆ, ಮತ್ತು ನಾನು ಜೀವನವನ್ನು ನೋಡುವ ರೀತಿ ಮತ್ತು ಬದುಕುವ ರೀತಿಗೆ ಸ್ಫೂರ್ತಿ ತುಂಬಿದವರು ಇವರು 

ಮೊದಲು ನನ್ನ ಅಣ್ಣ, ಅಂದರೆ ನನ್ನ ಅಪ್ಪ - ಮಂಜುನಾಥ್. 

ಎರಡನೆಯವರು ಬಾಲಣ್ಣ ಅರ್ಥಾತ್ ಬಾಲಕೃಷ್ಣ 

ಮೂರನೆಯವರು ಅಣ್ಣ - ಕರುನಾಡಿನ ಅಣ್ಣಾವ್ರು. 

ಬಾಲಕೃಷ್ಣ ನನಗೆ ಬಲು ಇಷ್ಟ ಪಡಲು ಕಾರಣ ಅವರ ಸಂಭಾಷಣೆ ಹೇಳುವ ಶೈಲಿ. ಒಂದು ಸಾಮಾನ್ಯ ಪದಗಳು ಇವರ ಬಾಯಲ್ಲಿ ನುಸುಳಿ ಬಂದರೆ ಮಹಾನ್ ಶಕ್ತಿ ಪಡೆಯುತ್ತಿತ್ತು ಮತ್ತು ಅದಕ್ಕೆ ಒಂದು ತೂಕ ಬರುತ್ತಿತ್ತು. ಖಳನಾಯಕನ ಪಾತ್ರ ಕೂಡ ನಗೆ ಉಕ್ಕಿಸಬಲ್ಲುದು ಮತ್ತು ಅಷ್ಟೇ ರೋಷ ಉಕ್ಕಿಸಬಲ್ಲುದು ಎಂದು ತೋರಿಸಿಕೊಟ್ಟವರು. (ಉದಾಹರಣೆ ಕಣ್ತೆರೆದು ನೋಡು, ಸಂಪತ್ತಿಗೆ ಸವಾಲ್, ಗಂಧದ ಗುಡಿ, ಗಾಂಧಿನಗರ, ದೂರದ ಬೆಟ್ಟ ಹೀಗೆ ಹತ್ತಾರು ಚಿತ್ರಗಳ ಪಾತ್ರಗಳು)

ಇಂಥಹ ಒಂದು ಅದ್ಭುತ ಶಕ್ತಿಯ ಬಾಲಕೃಷ್ಣ ಅವರ ಹಲವಾರು ಚಿತ್ರಗಳಲ್ಲಿ ನನಗೆ ಇಷ್ಟವಾದ, ಮತ್ತು ಪರಿಣಾಮಕಾರಿ ಸಂಭಾಷಣೆ, ಅಭಿನಯ ಕೂಡಿರುವ ಒಂದಷ್ಟು ಚಿತ್ರಗಳ ಬಗ್ಗೆ ಬರೆಯುತ್ತ ಹೋಗುವೆ. ಎಲ್ಲಿ ಆರಂಭಿಸಲಿ, ಎಲ್ಲಿ ನಿಲ್ಲಿಸಲಿ ಗೊತ್ತಿಲ್ಲ ಕಾರಣ, ಬಾಲಕೃಷ್ಣ ಒಂದು ಕಡಲು. 

ಕಡಲಿನ ನೀರು ಆವಿಯಾಗುತ್ತದೆ, ಮೊಡವಾಗುತ್ತದೆ, ಮೋಡದಲ್ಲಿ ಸಾಂಧ್ರತೆ ಹೆಚ್ಚಾದಾಗ ಮಳೆ ಸುರಿಸುತ್ತದೆ. ಝರಿಗಳು ಹುಟ್ಟುತ್ತವೆ, ತೊರೆಯಾಗುತ್ತದೆ, ನದಿಯಾಗುತ್ತದೆ, ಕಡಲು ಸೇರುತ್ತದೆ.... ಮತ್ತೆ ಆವಿಯಾಗುತ್ತದೆ. 

ಹೀಗೆ ಬಾಲಕೃಷ್ಣ ಅವರ ಯಾವುದೇ ಚಿತ್ರವನ್ನು ನೋಡಿದರೂ ಮತ್ತೆ ಆರಂಭಕ್ಕೆ ಹೋಗಿ ನಿಲ್ಲಬಹುದು. ಎಲ್ಲಿಂದ ಬೇಕಾದರೂ ಆರಂಭಿಸಬಹುದು ಮತ್ತು ಎಲ್ಲಿ ಬೇಕಾದರೂ ಅಲ್ಪವಿರಾಮ ತೆಗೆದುಕೊಳ್ಳಬಹುದು. 

ಅಂಥಹ ಮಹಾನ್ ಶಕ್ತಿಯ ಚೇತನ ಭುವಿಗೆ ಬಂದು ೧೦೪ ವಸಂತಗಳು ಕಳೆದು ಹೋದವು. ಹೇಳಿದಷ್ಟು, ಬರೆದಷ್ಟು, ಗೀಚಿದಷ್ಟು ಹೊಸ ಹೊಸ ಅರ್ಥಗಳು ಹುಟ್ಟಿಕೊಳ್ಳುವ ಕನ್ನಡಾಂಬೆಯ ಅಭಿಮಾನದ ಕೂಸಿಗೆ ಇಂದು ಜನುಮ ದಿನದ ಸಂಭ್ರಮ. 

ಇದೆ ಸಂತಸದಲ್ಲಿ ಬಾಲಕೃಷ್ಣ ಅವರ ಚಿತ್ರಗಳ ಯಾತ್ರೆಯನ್ನು ನೋಡಲು, ಮತ್ತು ಅದರಿಂದ ಕೆಲವು ಪ್ರಭಾವಿ ಸನ್ನಿವೇಶಗಳನ್ನು, ನನಗೆ ಬಲು ಇಷ್ಟವಾದ ಕೆಲವು ಸ್ಪೂರ್ತಿದಾಯಕ ಅಥವಾ ಜೀವನಕ್ಕೆ ದಾರಿದೀಪವಾಗಬಲ್ಲಂಥಹ ಕೆಲವು  ಸಂಭಾಷಣೆಗಳನ್ನು ಬರೆಯಲು ಇಷ್ಟಪಡುತ್ತೇನೆ. 

ನನ್ನ ನಲ್ಮೆಯ ಓದುಗರ ಕಣ್ಣು ಮತ್ತು ಹೃದಯದ ಸಹಕಾರವಿರಲಿ... !

ಬಾಲಕೃಷ್ಣ ಅವರಿಗೆ ಜನುಮದಿನದ ಶುಭಾಶಯಗಳು. 

Sunday, November 1, 2015

ಬೋರ್ಡ್ ನಲ್ಲಿ ಕಾಣದೆ ಇರುವ - ಫಲಿತಾಂಶ (1976)

ಪಾಠ ಪ್ರವಚನಗಳು ಹಲವಾರು ಬಾರಿ ಹಳೆಯದಾಗಿಬಿಡುತ್ತದೆ, ಆದರೆ ಅವು ನಮಗೆ ದಾರಿ ತೋರಿಸಿದ ಬಗೆ ಯಾವತ್ತಿಗೂ ನೆನಪಿರುತ್ತದೆ. ಪುಟ್ಟಣ್ಣ ಕಣಗಾಲ್ ಚಿತ್ರಜಗತ್ತಿನಲ್ಲಿ ಸೃಷ್ಠಿ ಮಾಡಿದ ರತ್ನಗಳು ಹಲವಾರು.

ಒಂದೊಂದು ರತ್ನವೂ ಭಿನ್ನ ವಿಭಿನ್ನ. ಪ್ರತಿ ರತ್ನ ಮಣಿಯನ್ನು ಅರಸುತ್ತಾ ಅದನ್ನು ನೋಡಿ ಸಂಭ್ರಮಿಸುತ್ತಾ ಹೋಗುತ್ತಿದ್ದ ನನಗೆ, ಆ ಸಾಲಿನಲ್ಲಿ ಒಂದು ಅನರ್ಘ್ಯ ರತ್ನದ ಹೆಸರಿತ್ತು, ಆದರೆ ಆ ಜಾಗದಲ್ಲಿ ಖಾಲಿ ಖಾಲಿ. ಅದರ ಫಲಕ ನೋಡಿದೆ, ಅದರಲ್ಲಿ "ಫಲಿತಾಂಶ" ಎಂದಿತ್ತು.

ಯಾಕೋ ಕುತೂಹಲ ಕಾಡಿತು, ಆ ಜಾಗವನ್ನು ಮತ್ತೆ ಮತ್ತೆ ನೋಡಿದೆ ಕೆಳಕಂಡ ವಿವರಗಳು ಸಿಕ್ಕವು.

ಆ ಮಾಣಿಕ್ಯ ೧೯೭೬ ನೆ ಇಸವಿಯಲ್ಲಿ ಅನಾವರಣಗೊಂಡಿತ್ತು.

ಅರೆಗಲ್ ಬ್ರದರ್ಸ್ ತಮ್ಮ ಕಿಸೆಯಿಂದ ಹಾಕಿದ ಕಾಂಚಣ ಈ ರತ್ನವನ್ನು ಬೆಳ್ಳಿ ತೆರೆಯಲ್ಲಿ ಬೆಳಗಿಸಿತ್ತು.

ಜೈ ಜಗದೀಶ್, ಆರತಿ, ಶುಭ ಜೊತೆಯಲ್ಲಿ ಹಿಂದಿ ಚಿತ್ರ ಜಗತ್ತಿನ ಕಂಚಿನ ಕಂಠ ಅಮರೀಶ್ ಪುರಿ ಕನ್ನಡಕ್ಕೆ ಕಾಲಿಟ್ಟ ಹೆಮ್ಮೆಯ ಕ್ಷಣ ಅದು.

ಆರ್ ಏನ್ ಜಯಗೋಪಾಲ್ ರಚಿಸಿದ ಸುಂದರ ಹಾಡುಗಳನ್ನು ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ವಾಣಿ ಜಯರಾಂ ಅಷ್ಟೇ ಸುಂದರವಾಗಿ ಜೀವ ತುಂಬಿ ಹಾಡಿದ್ದರು. ಇಂದಿಗೂ ನೆನಪಲ್ಲಿ ಉಳಿದಿರುವ ಅನೇಕ ಗೀತೆಗಳಲ್ಲಿ ಇವು ಕೂಡ ಒಂದು.

ಪುಟ್ಟಣ್ಣ ಚಿತ್ರಗಳು ಎಂದ ಮೇಲೆ ಸಂಗೀತದ ಮಾತು ಬಂದಾಗ ಮೊದಲ ಹೆಸರು ಬರುವುದು ಅವರ ನೆಚ್ಚಿನ ಗೆಳೆಯ ವಿಜಯಭಾಸ್ಕರ್. ಹೌದು ಈ ಚಿತ್ರವನ್ನು ವಿಜಯಭಾಸ್ಕರ್ ಸಂಗೀತ ಶರಧಿಯಲ್ಲಿ ಅದ್ದಿ ತೆಗೆದಿದ್ದಾರೆ.

"ಈ ಚೆಂಡಿನ ಆಟ" ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ಪಿ ಸುಶೀಲ ಹಾಡಿದ್ದಾರೆ.



"ಲವ್ ಎಂದರೆ ಯಾರೂ ಬಿಡಿಸಿದ ಬಂಧನ" ಈ ಹಾಡು ಇಷ್ಟವಾಗುವುದು ವಾಣಿಜಯರಾಂ ಅವರ ಧ್ವನಿ ಮತ್ತು ಪಾಶ್ಚಾತ್ಯ ಸಂಗೀತದ ಅಚ್ಚಿನಲ್ಲಿ ಮೂಡಿರುವ ಹಿನ್ನೆಲೆ ಸಹ ಗಾಯಕರ ಧ್ವನಿ.


ಫಲಿತಾಂಶವನ್ನು ಕಪ್ಪು ಬಿಳುಪಿನಲ್ಲಿ ಸೆರೆ ಹಿಡಿದದ್ದು ಬಿ ಎನ್ ಹರಿದಾಸ್ ಅವರ ಕ್ಯಾಮೆರ. 

ಶ್ರೀನಿವಾಸ್ ಕುಲಕರ್ಣಿಯವರ ಕತೆಯನ್ನು ತೆರೆಗೆ ಅಳವಡಿಸಿ ಈ ರತ್ನವನ್ನು ಬೆಳ್ಳಿ ತೆರೆಯಲ್ಲಿ ನೋಡಲು ಅನುಕೂಲ ಮಾಡಿಕೊಟ್ಟವರು ಪುಟ್ಟಣ್ಣ ಕಣಗಾಲ್.

ಹುಡುಕಿ ಹುಡುಕಿ ಸುಸ್ತಾಗಿ ಅಲ್ಲೇ ಒಂದು ಮೂಲೆಯಲ್ಲಿ ಕುಳಿತಾಗ ಈ ಚಿತ್ರದ ಪುಟ್ಟ ಮಾಹಿತಿ ಫಲಕ ಅಲ್ಲಿ ನೇತು ಹಾಕಿದ್ದು ಬಿದ್ದು ಹೋಗಿತ್ತು .. :-)


ಫಲಿತಾಂಶ
ನಿರ್ದೇಶನಪುಟ್ಟಣ್ಣ ಕಣಗಾಲ್
ನಿರ್ಮಾಪಕಅರಗಲ್ ಸಹೋದರರು
ಕಥೆಶ್ರೀನಿವಾಸ ಕುಲಕರ್ಣಿ
ಪಾತ್ರವರ್ಗಜೈಜಗದೀಶ್ ಆರತಿ ವೈಶಾಲಿ,ಪದ್ಮಾಕುಮುಟಅರುಣ ಇರಾನಿ,ಶುಭಲೋಕನಾಥ್ಲೀಲಾವತಿ,ಅಮರೀಶ್ ಪುರಿ
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಬಿ.ಎನ್.ಹರಿದಾಸ್
ಬಿಡುಗಡೆಯಾಗಿದ್ದು೧೯೭೬
ಚಿತ್ರ ನಿರ್ಮಾಣ ಸಂಸ್ಥೆಎ.1 ಮೂವೀಟೋನ್
ಹಿನ್ನೆಲೆ ಗಾಯನವಾಣಿ ಜಯರಾಂ,ಎಸ್.ಪಿ.ಬಾಲಸುಬ್ರಹ್ಮಣ್ಯಂ


ಈ ಚಿತ್ರ ಎಲ್ಲೇ ಹುಡುಕಿದರೂ ಸಿಗದ ಕಾರಣ, ಪುಟ್ಟಣ್ಣ ಕಣಗಾಲ್ ಚಿತ್ರಸರಣಿಯಲ್ಲಿ ಕೊನೆಯಲ್ಲಿ ಬರೆಯೋಣ ಎಂದು ಇಟ್ಟುಕೊಂಡಿದ್ದೆ. ಚಿತ್ರವನ್ನು ಕೈ ಬಿಡಲು ಮನಸ್ಸು ಒಪ್ಪಲ್ಲಿಲ್ಲ. ಆದ್ದರಿಂದ ಈ ಚಿತ್ರದ ಬಗ್ಗೆ ಅಂತರ್ಜಾಲದಲ್ಲಿ ಕೈ ಎಟುಕಿದ ಮಾಹಿತಿಯನ್ನು ಓದಿ ನನಗೆ ಅನ್ನಿಸಿದ ಒಂದಷ್ಟು ಪದಗಳಲ್ಲಿ ಒಂದು ಲೇಖನ ಮಾಡಿದ್ದೇನೆ. ಈ ಚಿತ್ರವನ್ನು ಯಾವಾಗಲಾದರೂ ನೋಡಿಯೇ ನೋಡುತ್ತೇನೆ ಎನ್ನುವ ಆತ್ಮವಿಶ್ವಾಸ ನನ್ನಲ್ಲಿದೆ. ನೋಡಿದ ದಿನ ಆ ಚಿತ್ರವನ್ನು ನನ್ನ ಮೂಸೆಯಲ್ಲಿ ಅರಳಿಸಿ, ನನಗೆ ತಾಕಿದ ಅನುಭವದ ಬಗ್ಗೆ ಒಂದಷ್ಟು ಪದಗಳನ್ನು ಹರಿಯ ಬಿಡುತ್ತೇನೆ...

****

ಪುಟ್ಟಣ್ಣ ಕಣಗಾಲ್ ಗುರುಗಳೇ, ಕರುನಾಡಿನ ಭಾಷೆಯಲ್ಲಿ ನಿಮ್ಮ ದಿಗ್ದರ್ಶನದಲ್ಲಿ ಅರಳಿದ ೨೪ ಚಿತ್ರಗಳಲ್ಲಿ ೨೩ ಚಿತ್ರಗಳನ್ನು ನೋಡಿ ನನ್ನ ಅನುಭವಕ್ಕೆ ನಿಲುಕಿದ ಒಂದೆರಡು ಮಾತುಗಳನ್ನು ಹಂಚಿಕೊಂಡಿದ್ದೇನೆ. ಒಂದು ಚಿತ್ರದ ಬಗ್ಗೆ ಕೇವಲ ಲಭ್ಯವಾದ ಮಾಹಿತಿಯನ್ನು ಮಾತ್ರ ಕೊಟ್ಟಿದ್ದೇನೆ. ನಿಮ್ಮ ಚಿತ್ರಗಳನ್ನು ಬಾಲ್ಯದಿಂದಲೂ ಆನಂದಿಸಿಕೊಂಡು ಬಂದಿದ್ದ ನನಗೆ, ಆ ಚಿತ್ರಗಳ ಬಗ್ಗೆ ಬರೆಯಬೇಕೆಂಬ ಹಂಬಲ ಹುಟ್ಟಿತ್ತು. ನಾ ಏನೇ ಬರೆದಿದ್ದರೂ ಅದು ನಿಮ್ಮ ಆಶೀರ್ವಾದದ ಬಲ ನನ್ನೊಳಗೆ ಕೂತು ಬರೆಸಿದೆ. ಈ ಲೇಖನಮಾಲಿಕೆಗಳನ್ನೂ ಬರೆಯುವ ಸಾಹಸಕ್ಕೆ ಸ್ಫೂರ್ತಿ ನೀಡಿದವರು ನನ್ನ ಅಪ್ಪ (ಮಂಜುನಾಥ್), ಮತ್ತು ನನ್ನ ಸೋದರ ಮಾವ (ಶ್ರೀಕಾಂತ್ ಅಲಿಯಾಸ್ ರಾಜ),  ಇವರಿಬ್ಬರೂ ಹಲವಾರು ರೀತಿಯಲ್ಲಿ ನನಗೆ ಮಾರ್ಗದರ್ಶಿಗಳು ಮತ್ತು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಶ್ರೀ  ನೀವು ಬರೆಯಿರಿ ಖಂಡಿತ ನೀವು ಈ ಸುಂದರ ಮಾಲೆಯನ್ನು ಪೂರ್ಣ ಮಾಡುತ್ತೀರಿ ಎಂದು ಧೈರ್ಯ ತುಂಬಿದವರು ಶ್ರೀ ಬಾಲಸುಬ್ರಮಣ್ಯ ಅರ್ಥಾತ್ ಬಾಲೂ ಸರ್, ಶ್ರೀ ಪ್ರಕಾಶ್ ಹೆಗ್ಡೆ, ಶ್ರೀಮತಿ ರೂಪ ಸತೀಶ್, ಶ್ರೀಮತಿ ನಿವೇದಿತ ಚಿರಂತನ್, ಶ್ರೀಮತಿ ಸ್ವರ್ಣ ಪಿ, ಶ್ರೀಮತಿ ಹರಿಣಿ GNT, ಶ್ರೀಮತಿ ಸುಗುಣ ಮಹೇಶ್, ಬದರಿನಾಥ್ ಪಲವಳ್ಲಿ  ಮತ್ತು ನಿಮ್ಮ ದಿಗ್ದರ್ಶನದ ಬಗ್ಗೆ ಅಭೂತಪೂರ್ವ ಮಾಹಿತಿ ಕೊಟ್ಟ ನಿಮ್ಮಯ ಆತ್ಮೀಯ ಸ್ನೇಹಿತರಾದ ಶ್ರೀ ಮೋಹನ್ ಕಂಪ್ಲಾಪುರ್ ಅಥವಾ ಕಂಪ್ಲಾಪುರದ ಮೋಹನ್  ಮತ್ತು ಅನೇಕ ಪುಟ್ಟಣ್ಣ ಕಣಗಾಲ್ ಅಭಿಮಾನಿಗಳು.

ಇಂದಿಗೂ ನನಗೆ ನೆನಪಿದೆ ನಿಮ್ಮ ಸಹೋದರ ಶ್ರೀ ನರಸಿಂಹ ಶಾಸ್ತ್ರಿಗಳು ನಿರರ್ಗಳವಾಗಿ ಒಂದೂವರೆ ತಾಸು ನಿಮ್ಮ ಬೆಳ್ಳಿಮೋಡದ ಚಿತ್ರದ ತಯಾರಿಯಿಂದ ಹಿಡಿದು ಸಿನಿಮಾ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿದ್ದನ್ನು ಅದ್ಭುತವಾಗಿ ಕಣ್ಣಿಗೆ ಕಟ್ಟಿದಂತೆ ವಿವರಿಸಿದ ರೀತಿ. ನಿಮ್ಮ ಮತ್ತು ನಿಮ್ಮ ಸಹೋದರರ ಚರಣ ಕಮಲಗಳಿಗೆ ಈ ಲೇಖನ ಅರ್ಪಿತ.

ಇದು ಖಂಡಿತ ನಾ ಬರೆದಿದ್ದಲ್ಲ, ನನ್ನೊಳಗೆ ಕೂತು, ನನಗೆ ಪ್ರೇರಣೆ ನೀಡಿ ನನ್ನ ಕೈಯಿಂದ ಬರೆಸಿದವರು.  ನೀವೇ ಹೇಳುವಂತೆ ಈ ಲೇಖನ ಮಾಲಿಕೆಯ ದಿಗ್ದರ್ಶನ ಜಗನ್ಮಾತೆ.

ಧನ್ಯವಾದಗಳು ಗುರುಗಳೇ ಮತ್ತು ಆರಂಭದಿಂದಲೂ ಪ್ರೋತ್ಸಾಹಿಸಿದ ಎಲ್ಲಾ ಓದುಗರಿಗೆ ನನ್ನ ಶಿರಸಾ ಪ್ರಣಾಮಿ.. !

Saturday, October 31, 2015

ಕಾಡುವ ಭಾವದೊಳಗೆ ಮಾಸದ ಮಸಣದ ಹೂವು (1984)

ಕೊಳವೆ ಬಾವಿ ತೋಡುವಾಗ ಆ ಯಂತ್ರ ಒಂದೇ ಸಮನೆ ನೆಲವನ್ನು ಕೊರೆಯುತ್ತಾ ಹೋಗುತ್ತದೆ ಎಡಬಿಡದೆ. ಹಾಗೆಯೇ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ಅಂತಿಮ ಚಿತ್ರ ಕೂಡ. ಈ ಚಿತ್ರವನ್ನು ಅನೇಕ ಬಾರಿ ನೋಡಿದ್ದೇನೆ. ಈ ಲೇಖನ ಬರೆಯುವ ಮೊದಲು ನೋಡಲು ಕುಳಿತೆ. ಸೂಕ್ಷ್ಮವಾಗಿ ಗಮನಿಸಿದಾಗ ಅರಿವಿಗೆ ಬಂದದ್ದು, ಈ ಚಿತ್ರದಲ್ಲಿ ಅನೇಕ ಉದ್ದುದ್ದ ದೃಶ್ಯಗಳು ಇವೆ (ಲಾಂಗ್ ಶಾಟ್ಸ್). ನನಗೆ ಅಚ್ಚರಿ ಆಯಿತು, ತಾಂತ್ರಿಕತೆ ಮತ್ತು ನಿರ್ದೇಶನದ ಮೇಲೆ ಮತ್ತು ಕತೆಯ ಮೇಲೆ ಹಿಡಿತ ಇದ್ದಾಗ ಎಂಥಹ ಜಾದೂ ಮಾಡಬಹುದು ಎಂದು.

ಈ ಚಿತ್ರ ಚೆನ್ನಾಗಿದೆ ಎಂದರೆ, ಮನುಕುಲದ ಮೇಲೆಯೇ ಒಂದು ರೀತಿಯಲ್ಲಿ ವಾಕರಿಕೆ ಬರುತ್ತದೆ, ಏಕೆಂದರೆ ಇದರ ಹುಟ್ಟಿಗೆ ಮನುಕುಲದ ವಿಷಮ ಮನಸ್ಥಿತಿಯೇ ಕಾರಣ. ಶ್ರೀ ತ ರಾ ಸುಬ್ಬರಾಯರು ರಚಿಸಿದ ಅನೇಕ ಕೃತಿಗಳು ಚಲನಚಿತ್ರಗಳಾಗಿವೆ. ಇದು ಒಂದು ರೀತಿಯ ವಿಚಿತ್ರ ಪರಿಸ್ಥಿತಿ. ಪುಟ್ಟಣ್ಣ ಅವರು ಈ ಚಿತ್ರವನ್ನು ನಿರ್ದೇಶಿಸಿದ ರೀತಿ ನೋಡಿದಾಗ, ಮುಂದಿನ ಚಿತ್ರಗಳು ಹೇಗಿರಬಹುದು ಎನ್ನುವ ಒಂದು ಖುಷಿ ಮನಸ್ಸಿಗೆ ಬಂದಿದ್ದು ಸುಳ್ಳಲ್ಲ. 

ಕಾರಣ, ನಾ ಮಸಣದ ಹೂವು ಕಾದಂಬರಿಯನ್ನು ಓದಿದಾಗ ಅಕ್ಷರಶಃ ಮನಸ್ಸು ಗಲಿಬಿಲಿಗೊಂಡಿದ್ದು ಮತ್ತು ಮನಸ್ಸು ತಲ್ಲಣಗೊಂಡಿದ್ದು ನಿಜ. ಮನುಜ ತನಗೆ ಬೇಕಾದ ದೇಹದ ಬಯಕೆಗೆ ಅಥವಾ ತನ್ನ ಕೆಲಸ ಸಾಧಿಸಿಕೊಳ್ಳುವ ತವಕದಲ್ಲಿ ಸಮಾಜದಲ್ಲಿ ಒಂದು ಅಸಹ್ಯ ಎನಿಸುವ ಒಂದು ಮೂಲೆಯನ್ನು ಸೃಷ್ಠಿ ಮಾಡಿದ್ದಾನೆ ಎಂದು ಅರಿವಾದಾಗ ನಿಜಕ್ಕೂ ವಕರಿಕೆಯೇ ಬರುತ್ತದೆ. ಕಾದಂಬರಿ ಕತೃ, ಆ ಲೋಕದ ದೃಶ್ಯವನ್ನು ಅಷ್ಟು ಸಹಜವಾಗಿ ಕಟ್ಟಿಕೊಟ್ಟಿದ್ದಾರೆ. 

ಪುಟ್ಟಣ್ಣ ಕಣಗಾಲ್ ಅವರು ಅಕ್ಷರಶಃ ಪುಸ್ತಕದಲ್ಲಿ ಇರುವಂಥಹ ಕ್ರೌರ್ಯ, ಸಾಕಪ್ಪ ಎನ್ನಿಸುವಷ್ಟು ಮನಸ್ಸಿಗೆ ಹಿಂಸೆ ಅನ್ನಿಸುವ ದೃಶ್ಯಗಳನ್ನು ನವಿರಾಗಿ, ಮನಕ್ಕೆ ತಾಕುವಂತೆ ಚಿತ್ರೀಕರಿಸಿದ್ದಾರೆ. ಈ ರೀತಿಯ ಕಥೆಗಳನ್ನು ದೃಶ್ಯಕಾವ್ಯವಾಗಿ ಮಾಡಲು ಅದ್ಭುತ ಸೃಜನಶೀಲತೆ ಬೇಕು.  ಎಲ್ಲೇ ಮೀರಲು ಎಲ್ಲಾ ಅವಕಾಶಗಳು ಇದ್ದಾಗ್ಯೂ, ಸಹ್ಯವಾಗಿ ಚಿತ್ರವನ್ನು ಕೊಟ್ಟಿರುವುದು ಅವರ ಅಸಾಧಾರಣ ಪ್ರತಿಭೆಯ ವಿರಾಟ್ ರೂಪ ಎಂಬ ಮಾತು ನನ್ನದು. 

ಉತ್ತುಂಗದಲ್ಲಿದ್ದ ಅಂಬರೀಶ್ ಅಕ್ಷರಶಃ ತಮ್ಮ ಗುರುಗಳ ದಿಗ್ದರ್ಶನದಲ್ಲಿ ತಮ್ಮ ಇಮೇಜ್ ಬಿಟ್ಟು ಅಭಿನಯಿಸಿದ್ದಾರೆ. ಮೇಡಂ ನನಗೆ ಎರಡು ಸಾವಿರ ಕೊಡಿ, ನೀವು ಹೇಳಿದ ಕೆಲಸ ಮಾಡಿಕೊಂಡು ಇರುತ್ತೇನೆ ಎನ್ನುವಾಗ ಅವರ ಕಣ್ಣುಗಳಲ್ಲಿ ಕಾಣುವ ನೋವು, ಜೀವನದ ಬಗ್ಗೆ ತಿರಸ್ಕಾರ ಜೊತೆಯಲ್ಲಿಯೇ, ಹೇಗಾದರೂ ಸರಿ ಬದುಕಬೇಕು ಎನ್ನುವ ಭಾವ ಎದ್ದು ಕಾಣುತ್ತದೆ. ತಮ್ಮ ತಾಯಿಗೆ ರಾತ್ರಿಯೊಳಗೆ ನಾ ಬರದಿದ್ದರೆ, ಇಲಿ ಪಾಷಾಣ ಮತ್ತು ನೀರು ಇದೆ ಎನ್ನುವ ಧ್ವನಿಯಲ್ಲಿ ನಿರಾಶೆ, ಹತಾಶೆ ಮತ್ತು ತನ್ನ ತಾಯಿಗೆ, ಬಡತನದಿಂದ ಮುಕ್ತಿ ನೀಡಲು ವಿಷ ತಿನ್ನು ಎಂದು ಹೇಳುವಂಥಹ ದೃಶ್ಯ. ಇದರಲ್ಲಿ ಅವರ ಅಭಿನಯ ಕಣ್ಣಲ್ಲಿ ನೀರು ಮೂಡಿಸುತ್ತದೆ. 

ಎರಡು ಸಾವಿರ ಕೊಡಿ ಎಂದಾಗ, ಅದಕ್ಕೆ ಕೆಲವು ನಿಯಮಗಳಿವೆ ಎಂದಾಗ, ಏನೇ ಆಗಲಿ, ನಾ ನೀವು ಹೇಳುವ ಕೆಲಸ ಮಾಡುತ್ತೇನೆ ಎಂದು ಎರಡು ಬೊಗಸೆಗಳನ್ನು ಒಡ್ಡಿ ನಿಂತಾಗ, ಯಾರ ಕಣ್ಣಲ್ಲೇ ಆದರೂ ಜೋಗದ ಹನಿ ಕಂಡೆ ಕಾಣುತ್ತದೆ. ತಲೆಹಿಡುಕನ ಪಾತ್ರದಲ್ಲಿ ಅದ್ಭುತ ಪರಕಾಯ ಪ್ರವೇಶ. ನಡೆ, ನುಡಿ, ಹಾವ ಭಾವ, ಅಬ್ಬಬ್ಬ ಎನ್ನಿಸುತ್ತದೆ. 

ಜಯಂತಿ, ಮಾತೆ ಬೇಡ, ಹಲವಾರು ದೃಶ್ಯಗಳಲ್ಲಿ ಬರಿ ಕಣ್ಣುಗಳಲ್ಲೇ ಅಭಿನಯ ತೋರಿಸಿದ್ದಾರೆ. ಆ ಪಾತ್ರಕ್ಕೆ ಬೇಕಾದ ಅಂಗೀಕ ಅಭಿನಯ, ತಿರಸ್ಕಾರ, ಹಣಕ್ಕೆ ಮಾತ್ರ ಪ್ರಾಮುಖ್ಯತೆ ಮಿಕ್ಕವು ಗೌಣ ಎಂದು ಕೆಲವು ದೃಶ್ಯಗಳಲ್ಲಿ ಕಂಡು ಬಂದರೆ, ಇನ್ನೂ ಕೆಲವು ದೃಶ್ಯಗಳಲ್ಲಿ ನಂಬಿದವರನ್ನು ಸಲಹುವುದು, ಜೊತೆಯಲ್ಲಿಯೇ ಅವರನ್ನು ರಕ್ಷಿಸಲು ಮುಂದಾಗುವ ರೀತಿಯ  ಅಭಿನಯ ಅವರು ಮಾತ್ರ ಮಾಡಲು ಸಾಧ್ಯ. ತಾನು ಕಳಿಸಿದ ಹುಡುಗಿಯ ವರ್ತನೆ ಬಗ್ಗೆ ಕೇಳಿಬಂದಾಗ ಕೋಪಗೊಂಡು ಆ ಹುಡುಗಿಗೆ ದಂಡಿಸುತ್ತಾರೆ, ನಂತರ ನಿಜದ ಅರಿವಾದ ಮೇಲೆ, ಆಕೆಯನ್ನು ತಬ್ಬಿಕೊಂಡು ಕ್ಷಮೆ ಕೇಳುತ್ತಾರೆ. ಇಂಥಹ ವೃತ್ತಿಯಲ್ಲಿ ಈ ರೀತಿಯ ಮಾನವೀಯತೆಯೂ ಇದೆ ಎಂದು ಕೂಗಿ ತೋರಿಸುವ ಅಭಿನಯ. ಇಡಿ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ.  

ಇನ್ನು ಉಳಿದ ಪಾತ್ರಗಳು ಚಿತ್ರಕ್ಕೆ ಬೇಕಾದ ಅಗತ್ಯ ಅಭಿನಯವನ್ನು ನೀಡಿದ್ದಾರೆ. ಇಡಿ ಚಿತ್ರದ ತುಂಬಾ ತುಂಬಿಕೊಂಡಿರುವುದು ಅಂಬರೀಶ್ ಮತ್ತು ಜಯಂತಿ. ಇವರಿಬ್ಬರಿಂದ ಹಿತಮಿತವಾಗಿ, ಪರಿಣಾಮಕಾರಿಯಾಗಿ ಅಭಿನಯ ತೆಗೆದಿರುವುದು ಪುಟ್ಟಣ್ಣ ಅವರ ಅದ್ಭುತ ಹಿಡಿತ ಹೊಂದಿರುವ ನಿರ್ದೇಶನದ ಕುರ್ಚಿ. 

ಪಂಚಾಮೃತದಲ್ಲಿ ಹಾಲು, ಮೊಸರು, ಸಕ್ಕರೆ, ಜೇನುತುಪ್ಪ, ಮತ್ತು ಫಲಗಳು ಸೇರಿದಂತೆ, ಪ್ರತಿ ದೃಶ್ಯವನ್ನು ಕಲೆಯ ಹಾಲಿನ ಕಡಲಲ್ಲಿ ಅದಕ್ಕೆ ಬೇಕಾಗುವ ವಿವಿಧ ಭಾವಗಳನ್ನು ಬೆರೆಸಿ ಅದ್ದಿ ತೆಗೆದಂತೆ ಚಿತ್ರೀಕರಿಸಿದ್ದಾರೆ. ಚಿತ್ರವನ್ನು ನೋಡುತ್ತಾ ಹೋದಂತೆ, ಅಲ್ಲಿ ಚಿತ್ರಕಥಾವಸ್ತುಗಿಂತಲೂ ಪುಟ್ಟಣ್ಣ ಅವರ ನಿರ್ದೇಶಕನ ಜವಾಬ್ಧಾರಿ ಕೊಂಚವೂ ಅಲುಗಾಡದಂತೆ ಆದರೆ ಅವರ ಮೇಲೆ ಹೆಮ್ಮೆ ಬರುವಂತೆ ದೃಶ್ಯಗಳನ್ನು ಪೋಣಿಸಿದ್ದಾರೆ. 

ಕೆಲವು ಅದ್ಭುತ ದೃಶ್ಯಗಳು 
೧) ಮೇಡಂ, ಎರಡು ಸಾವಿರ ಕೊಡಿ ಎಂದಾಗ, ನನಗೆ ಒಂದು ಮುತ್ತು ಕೊಡು ಎಂದು ಕೇಳುತ್ತಾರೆ. ಹಿಂದೆ ಮುಂದೆ ನೋಡುತ್ತಾ ನಿಂತ ನಾಯಕನಿಗೆ ಬಯ್ದು, ಒಂದು ಮುತ್ತು ಕೊಡಲು ಹಿಂದೆ ಮುಂದೆ ನೀಡುವ ನೀನು ಈ ಮನೆಯಲ್ಲಿ ಏನು ತಾನೇ ಕೆಲಸ ಮಾಡ್ತೀಯ, ಹೋಗು ಹೋಗು ಎಂದು ಅಟ್ಟುತ್ತಾರೆ. ಆಗ ಕೊಂಚವೂ ಗಲಿಬಿಲಿ ಗೊಳ್ಳದೆ ಮುತ್ತು ನೀಡುತ್ತಾರೆ, ಆದರೆ ಆ ದೃಶ್ಯವನ್ನು ತೋರಿಸುವ ರೀತಿ ಅದ್ಭುತ. ಅಶ್ಲೀಲತೆ ಇಲ್ಲವೇ ಇಲ್ಲ ಅಲ್ಲಿ.  ಬದುಕಲೇ ಬೇಕು  ಎಂಬ ಹಠ ಬಂದಾಗ, ಜೀವನ ತನಗೆ ತಾನೇ ದಾರಿ ತೋರಿಸುತ್ತದೆ, ಹಾಗೂ ಧೈರ್ಯ ತುಂಬುತ್ತದೆ. 

೨) ಮೇಡಂ, ಸುಮ್ಮನೆ ಎರಡು ಸಾವಿರ ಗೊತ್ತಿರದ ಅವನಿಗೆ ಕೊಟ್ಟು ಬಿಟ್ಟಿರಿ, ಅವನು ಬರದೆ ಹೋದರೆ "ನೋಡು ಅವನು ನಿಯತ್ತಿನ ಮನುಷ್ಯ ಅನ್ನಿಸುತ್ತದೆ, ಒಂದು ವೇಳೆ ಬರದೆ ಹೋದರೆ, ನನ್ನ ಕಾಲುಮುಟ್ಟಿ ನಮಸ್ಕರಿಸಿದ ಅವನ ಶ್ರದ್ಧೆ ವಜಾ ಮಾಡಿಕೊಳ್ಳುತ್ತೇನೆ". ಬಂಡೆಯಲ್ಲಿ ಕೂಡ ನಂಬಿಕೆ ಇದು, ಒಲಿದರೆ ದೇವರಾಗುತ್ತದೆ, ಇಲ್ಲವೇ ಮನೆ ಕಟ್ಟಲು ಕಲ್ಲಾಗುತ್ತದೆ ಎನ್ನುತ್ತದೆ ಸುಭಾಷಿತ. ಎಷ್ಟು ನಿಜ ಅಲ್ಲವೇ. 

೩) ಇದುವರೆಗೂ ಯಾರು ಯಾರಿಗೋ ಕೈ ಮುಗಿದೇ, ಆದರೆ ಇಂದು ಒಂದು ದೇವರ ಮೂರ್ತಿ ತರಹ ಇರುವ ನಿಮಗೆ ಕೈಮುಗಿಯುತ್ತೇನೆ ಎಂದು ಲೋಕನಾಥ್ ಪಾತ್ರಧಾರಿಗೆ ಕೈಮುಗಿಯುವ ಜಯಂತಿ ಅಭಿನಯ. ಆ ಮನೆಗೆ ಬರುವವರೆಲ್ಲ ಬರಿ ಸುಖಃ ಅರಸಿಕೊಂಡು ಬರುವವರಲ್ಲ, ಬದಲಿಗೆ ಮಾನವೀಯತೆಯನ್ನು ಅರಸಿಕೊಂಡು ಬರುವವರು ಇದ್ದಾರೆ ಎನ್ನುವ ನಿರೂಪಣೆ ಇಲ್ಲಿದೆ. 

ಈ ಚಿತ್ರದ ದೊಡ್ಡ ಆಸ್ತಿ ಚಿತ್ರದಲ್ಲಿ ಅದ್ಭುತವಾಗಿ ಚಿತ್ರೀಕರಣಗೊಂಡ ಹಾಡುಗಳು. ಇಂಥಹ ಚಿತ್ರದಲ್ಲೂ ಕರುನಾಡನ್ನು, ಅದರ ಸೊಬಗನ್ನು ತೋರಿಸುವ ಪುಟ್ಟಣ್ಣ ಅವರ ವಿಶಿಷ್ಟ ಭಾವ ಇಲ್ಲೂ ಇದೆ. ಬಹುತೇಕ ಕರಾವಳಿ ಪ್ರದೇಶಗಳಲ್ಲಿ ಚಿತ್ರಿತವಾಗಿರುವ "ಕನ್ನಡ ನಾಡಿನ ಕರಾವಳಿ" ಜಯಚಂದ್ರನ್ ಮತ್ತು ವಾಣಿ ಜಯರಾಂ ಅವರ ಜೇನಿನ ಕಂಠದಲ್ಲಿ ಮೂಡಿ ಬಂದಿದೆ. ಎಸ್ ಆರ್ ಎಕ್ಕುಂಡಿ ಅವರ ಅಮೋಘ ಸಾಹಿತ್ಯಕ್ಕೆ ಕರಾವಳಿಯ ಎಲ್ಲಾ ಪ್ರಕಾರದ ಸಂಗೀತ ಒದಗಿಸಿರುವ ವಿಜಯಭಾಸ್ಕರ್, ಮತ್ತು ನೃತ್ಯ ಸಂಯೋಜನೆ, ಕರುನಾಡಿನ ವಿಶಿಷ್ಠತೆಯನ್ನು ಎತ್ತಿ ತೋರಿಸುವ ಹಾಡಾಗಿ ಉಳಿದುಕೊಂಡು ಬಂದಿದೆ. 

ಪ್ರೀತಿ ಎಲ್ಲಿಂದ ಹುಟ್ಟುತ್ತೆ ಹೇಗೆ ಜೀವನವನ್ನು ಬೆಳಗಬಲ್ಲದು ಎನ್ನುವ ಅನೇಕ ಪ್ರಶ್ನೆಗಳಿಗೆ ಹಾಡಿನ ರೂಪದಲ್ಲಿ ಚಿತ್ರೀಕರಿಸಿದ್ದಾರೆ "ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ" ಮತ್ತೊಮ್ಮೆ ಜಯಚಂದ್ರನ್ ಮತ್ತು ವಾಣಿ ಜಯರಾಂ ಮನಸ್ಸಿನ ಮೂಲೆ ಮೂಲೆಯನ್ನು ತಟ್ಟುತ್ತಾರೆ. ವಿಜಯನಾರಸಿಂಹ ಅವರ ಸರಳ ಆದರೆ ಪರಿಣಾಮಕಾರಿ ಸಾಹಿತ್ಯ ಇಷ್ಟವಾಗಲೇ ಬೇಕು. ಪ್ರೇಮಿಗಳ ಹಾಡಾಗಿ ಬರುತ್ತದೆ. 

ಒಂದು ಕ್ಷಣದ ಆದರೆ ಜೀವನದ ಗತಿಯನ್ನು ಬದಲಾಯಿಸಬಲ್ಲ ತಿರುವನ್ನು ಒಂದು ಹಾದಿ ಬಿಟ್ಟ ಹುಡುಗಿಗೆ ಕೊಡುವ ನಾಯಕನನ್ನು ಕನಸಿನಲ್ಲಿ ಮತ್ತು ಮನಸ್ಸಿನಲ್ಲಿಯೇ ಅಭಿನಂದಿಸುವ ಹಾಡಾಗಿ ಬಂದಿದೆ "ಓ ಗುಣವಂತ". ಈ ಹಾಡಿನ ಸಾಹಿತ್ಯ ಎಷ್ಟು ಬಾರಿ ಕೇಳಿದರೂ, ಹೊಸ ಹೊಸ ರೀತಿಯಲ್ಲಿ ಮನಸ್ಸಿಗೆ ತಾಕುತ್ತದೆ. ಕನಸ್ಸುಗಳ ಮೂಟೆಯನ್ನು ಹೊತ್ತು ಸಾಗುವಾಗ ಬರುವ ಒಂದು ವಿಚಿತ್ರ ತಿರುವು ಮತ್ತು ಆ ತಿರುವಿಗೆ ಒಂದು ಕೊಂಕು ಹಾಕಿ, ಮತ್ತೆ ಹಳಿಗೆ ಬರುವ ಜೀವನ ಪಥವನ್ನು ತೋರುವ ಆ ನಾಯಕನಿಗೆ ಧನ್ಯವಾದಗಳನ್ನು ಅರ್ಪಿಸುವ ಹಾಡನ್ನು ಎಸ್ ಜಾನಕಿಯಮ್ಮ ಆಪೋಶನ ಮಾಡಿ ಹಾಡಿದ್ದಾರೆ. ಸಂಗೀತ, ಅದಕ್ಕೆ ತಕ್ಕಂತೆ ಸಾಹಿತ್ಯ, ಅದಕ್ಕೆ ಬೇಕಾದ ಅದ್ಭುತ ಗಾಯನ... ನಾ ಹೇಳೋಲ್ಲ ನೀವೇ ಕೇಳಿ ಈ ಹಾಡನ್ನು ತಲೆದೂಗದೆ ಇರಲು ಸಾಧ್ಯವೇ ಇಲ್ಲ. 

ಚಂದ್ರ ತೋರಿಸಲೇ, ನಕ್ಷತ್ರಗಳನ್ನು ನಿನ್ನ ಮುಡಿಗೆ ಪೋಣಿಸಲೇ ಎಂದು ಇಲ್ಲದ ಆಸೆ ಹುಟ್ಟಿಸುವ ಪ್ರೇಮಿಗಳ ಆಶಾಪಾಶದ ಮಧ್ಯದಲ್ಲಿ, ನನ್ನ ಮಟ್ಟ ಹೀಗಿದೆ, ನನಗೆ ಅದು ತರಲು ಆಗೋಲ್ಲ, ಇದು ತರಲು ಅಸಾಧ್ಯ ಎಂದು ಹೇಳುತ್ತಲೇ, ನಿನಗಾಗಿ ಏನು ತರಲಿ ಹೇಳು ಎಂದು ಪ್ರೀತಿಯ ನಿವೇದನೆ ಮಾಡುವ ಹಾಡಿನಲ್ಲಿ ಎಸ್ ಅರ್ ಎಕ್ಕುಂಡಿ ವಿರಚಿತ "ಯಾವ ಕಾಣಿಕೆ ನೀಡಲಿ" ಎಂದು ಎಸ್ ಪಿ ಬಾಲಸುಬ್ರಮಣ್ಯಂ ಮನವನ್ನು ತಟ್ಟುತ್ತಾರೆ. 

ಕಸದ ಬಿದ್ದ ಹೂವಿಗೂ ಬೆಲೆಯಿದೆ, ಮುದುಡಿ ಹೋದ ಮಾಲೆಗೆ ಬೆಲೆ ಕಟ್ಟುವ ಮನಸಿದ್ದರೆ ಸಾಕು, ಅದು ಹೃದಯ ಕಮಲದ ಗುಡಿಯಲ್ಲಿ ಪೂಜೆಗೆ ಅರ್ಹವಾಗುವ ಮನಸ್ಸಿಗೆ ಅರ್ಪಿತವಾಗುತ್ತದೆ ಎನ್ನುವ ಒಂದು ಹೃದಯ ಹಿಂಡುವ ಸಾಹಿತ್ಯ "ಮಸಣದ ಹೂವೆಂದು ನೀನೇಕೆ ಕೊರಗುವೆ" ಹಾಡು, ಇಲ್ಲಿ ಎಸ್ ಪಿ ಬಾಲಸುಬ್ರಮಣ್ಯಂ ಅವರ "ಪಾರ್ವತಿ" ಎಂದು ಕೂಗುವ ಶಬ್ದ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರುತ್ತದೆ. 

ಹಾಡುಗಳು ಚಿತ್ರದ ಅವಿಭಾಜ್ಯ ಅಂಗ ಮತ್ತು ಅದು ಕತೆಯನ್ನು ಮುಂದುವರೆಸಲು ಸಹಾಯವಾಗುತ್ತದೆ ಎಂದು ಬಲವಾಗಿ ನಂಬಿದ್ದ ಪುಟ್ಟಣ್ಣ ಕಣಗಾಲ್ ತಮ್ಮ ಅಂತಿಮ ಚಿತ್ರದಲ್ಲಿಯೂ ಕೂಡ ಹಾಡುಗಳನ್ನು ಸರಿಯಾದ ಜಾಗದಲ್ಲಿ ಅಳವಡಿಸಿಡಿಸಿ ಕಥೆಯ ಓಟಕ್ಕೆ ಒಂದು ನಿರ್ಧಿಷ್ಟ ವೇಗವನ್ನು ಕೊಟ್ಟಿದ್ದಾರೆ. 

ಇಡಿ ಚಿತ್ರ ಎಲ್ಲೂ ಒಂದಿನಿತು ಬೇಸರ ತರಿಸುವುದಿಲ್ಲ. ಒಬ್ಬ ಜಾದೂಗಾರ ಯಕ್ಷಿಣಿ ಮಾಡಿ ಮಾಡಿ ಜನರ ಮನಸ್ಸನ್ನು ಗೆಲ್ಲುವಂತೆ, ಪ್ರತಿ ದೃಶ್ಯಗಳನ್ನು ಜಾದೂಗಾರಿಕೆಯ ದಂಡದಿಂದ ಸ್ಪರ್ಶ ಮಾಡಿ, ಮರೆಯದ ಮಾಣಿಕ್ಯವನ್ನು ಬೆಳ್ಳಿ ತೆರೆಯಲ್ಲಿ ಬೆಳಗಿಸಿದ್ದಾರೆ. 

ಅನುಗ್ರಹ ಮೂವಿ ಮೇಕರ್ಸ್ ಲಾಂಛನದಲ್ಲಿ ಬಿ ಎಸ್ ಗಾಯತ್ರಿ ಮತ್ತು ಎಸ್ ಆರ್ ಸರ್ವೋತ್ತಮ ಕಣಗಾಲ್ ಅವರ ನಿರ್ಮಾಣದಲ್ಲಿ ಮೂಡಿ ಬಂದ ಈ ಚಿತ್ರ ರತ್ನಕ್ಕೆ ಛಾಯಾಗ್ರಾಹಣ ಮಾಡಿದವರು ಎಸ್ ಮಾರುತಿರಾವ್.  ಸರಳ ಆದರೆ ಪರಿಣಾಮಕಾರಿ ಸಂಭಾಷಣೆ ನೀಡಿದವರು ಟಿ ಜಿ ಅಶ್ವತ್ ನಾರಾಯಣ. 

ತಮ್ಮ ಎಲ್ಲಾ ಕಾಯಕಕ್ಕೂ ಪ್ರೇರೇಪಣೆ ನೀಡಿದ ಜಗನ್ಮಾತೆಯನ್ನು ಸ್ಮರಿಸುತ್ತಾ  ಆ ಮಾತೆಯ ದಿಗ್ದರ್ಶನದಲ್ಲಿ ಈ ದೃಶ್ಯ ಕಾವ್ಯವನ್ನು ಕಟ್ಟಿಕೊಟ್ಟವರು ಪುಟ್ಟಣ್ಣ ಕಣಗಾಲ್ ಅವರು. 

ತಾವು ಕಂಡ ರೀತಿಯಲ್ಲಿ ಚಿತ್ರವನ್ನು ಮುಗಿಸುವ ಮೊದಲೇ ಆ ಜವರಾಯನ ಕರೆಗೆ ಓಗೊಟ್ಟು ಇಹಲೋಕದಿಂದ ಹೊರನೆಡೆದ ಮೇಲೆ, ಅವರಿಗೆ ಗೌರವ ಸಲ್ಲಿಸುತ್ತಲೇ, ಉಳಿದ ಭಾಗವನ್ನು ಆದಷ್ಟು ಪುಟ್ಟಣ್ಣ ಅವರ ಕಲ್ಪನೆಯಲ್ಲಿ ಇರಬಹುದು ಎನ್ನುವ ರೀತಿಯಲ್ಲಿ ಚಿತ್ರವನ್ನು ಪೂರ್ಣಗೊಳಿಸಿ, ತಾವು ಚಿತ್ರೀಕರಿಸಿದ ಭಾಗದಲ್ಲಿ ತಪ್ಪಿದ್ದರೆ ಅದು ತಮ್ಮದೇ ಎಂದು ಹೇಳಿ ತಮ್ಮ ಗೆಳೆಯ ಪುಟ್ಟಣ್ಣ ಕಣಗಾಲ್ ಅವರಿಗೆ ವಂದನೆ ಅರ್ಪಿಸುವ ಇತ್ತೀಚಿಗಷ್ಟೇ ಪುಟ್ಟಣ್ಣ ಕಣಗಾಲ್ ಅವರನ್ನು ಸ್ವರ್ಗದಲ್ಲಿ ಭೇಟಿ ಮಾಡಲು ತೆರಳಿದವರು ರವಿ ಅಥವಾ ಕೆ ಎಸ್ ಎಲ್ ಸ್ವಾಮೀ. 



ಈ ಚಿತ್ರದ ಹೆಸರು ಮಸಣದ ಹೂವು ಎಂದಿದ್ದರೂ ಕನ್ನಡಿಗರ ಮತ್ತು ಚಲನ ಚಿತ್ರ ರಸಿಕರ ಹೃದಯ ಕಮಲದಲ್ಲಿ ಈ ಚಿತ್ರ ಎಂದೂ ಬಾಡದ ಪಾರಿಜಾತ ಹೂವಾಗಿ ಸದಾ ನಗುನಗುತ್ತಲೇ ಇರುತ್ತದೆ. 

ಪುಟ್ಟಣ್ಣ ಕಣಗಾಲ್ ಮತ್ತು ರವಿ ಅವರಿಗೆ ಈ ಲೇಖನ ಅರ್ಪಿತ. 

Thursday, October 29, 2015

ಸ್ನೇಹದ ಅಮೃತ ಸಿಂಚನ ಮಾಡುವ ಅಮೃತ ಘಳಿಗೆ (1984)

ಸಮುದ್ರದಲ್ಲಿ ತೇಲುವ ಅನುಭವ ಎಷ್ಟು ಸೊಗಸೋ ಅಷ್ಟೇ ಭಯನಕವಾಗಿರುತ್ತೆ ದೈತ್ಯ ಅಲೆಗಳು ಸುತ್ತ ಮುತ್ತಲ ಸೃಷ್ಠಿಯನ್ನು ಆಪೋಶನ ಮಾಡುವಾಗ. ಆದರೆ ಆ ದೈತ್ಯ ಅಲೆಗಳಿಗೆ ಶಕ್ತಿ ಕೊಡುವುದು ಯಾವುದು ಗೊತ್ತೇ, ಕಡಲಲ್ಲಿ ಇರುವ ನೀರು ಮತ್ತು ಅದರ ಮೇಲೆ ಬೀಸುವ ಗಾಳಿ.

ನಿಜ ಅದರ ಒಡಲೊಳಗೆ ಇರುವ ನೀರು ದೈತ್ಯಾಕಾರ ತಾಳುತ್ತದೆ ಎಂದರೆ, ಅದರೊಳಗಿನ ಶಕ್ತಿ ನಮ್ಮ ಊಹೆಗೆ ನಿಲುಕದ್ದು. 

ಪುಟ್ಟಣ್ಣ ಕಣಗಾಲ್ ಅವರು ಮಾಮೂಲಿ ಎನ್ನುವ ಕಥೆಯನ್ನು ಕೂಡ ಅಸಾಧಾರಣ ರೀತಿಯಲ್ಲಿ ತೆರೆಯ ಮೇಲೆ ಬಡಿಸುತ್ತಿದ್ದುದು ಅವರ ಅಗಾಧ ಪ್ರತಿಭೆಯ ಶಕ್ತಿಯಿಂದ. ನಮ್ಮ ಕಣ್ಣಿಗೆ ಸಾಧಾರಣ ಎನ್ನಿಸುವುದನ್ನು ಅಷ್ಟೇ ವಿವರವಾಗಿ, ವಿಶಿಷ್ಟ ರೀತಿಯಿಂದ ಹೀಗೂ ನೋಡಬಹುದು ಎನ್ನುವುದನ್ನು ಕಳಿಸಿಕೊಟ್ಟ ಗುರುಗಳು ಅವರು. 

ಅಮೃತ ಘಳಿಗೆ ಈ ಚಿತ್ರದ ಕಥೆಯನ್ನು ಅವರ ಜೀವದ ಗೆಳೆಯ ಮೋಹನ್ ಕಂಪ್ಲಾಪುರ್ ಕೊಟ್ಟಾಗ ಅ ಪುಸ್ತಕದ ಮೇಲೆ ಇದ್ದ ಶಿರೋನಾಮೆ "ದೊಡ್ಡೇರಿ ವೆಂಕಟಗಿರಿ ರಾವ್ - "ಅವಧಾನ" ". ಅದನ್ನೇ ಸುಂದರ ಚಿತ್ರಕಥೆ ಮಾಡಿ, ಅದಕ್ಕೊಂದು ಸುಂದರ ತಾಣವನ್ನು ಹುಡುಕಿ, ಅಮೃತ ಘಳಿಗೆ ಎನ್ನುವ ಒಂದು ನಿತ್ಯ ನೂತನ ಚಿತ್ರವನ್ನು ನೀಡಿದರು. ಈ ಕಥೆ ಆ ಕಾಲದಲ್ಲಿ ಸುಧಾ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಮೂಡಿ ಬಂದಿತ್ತು. ಪುಟ್ಟಣ್ಣ ಅವರ ಹುಡುಕಾಟದಲ್ಲಿ ಸಿಕ್ಕ ಇಂಥಹ ಕಥಾ ಮುತ್ತುಗಳು ಹೇರಳ. 

ಎಸ್ ಆರ್ ರಾಜನ್, ಭೀಮ ರಾವ್, ಕೆ ನಾಗರತ್ನ, ಪುಟ್ಟಣ್ಣ ಕಣಗಾಲ್ ತಂಡ ನಿರ್ಮಾಪಕರಾಗಿ ಈ ಚಿತ್ರವನ್ನು ಜಯಭೇರಿ ಫಿಲಂಸ್ ಲಾಂಛನದಲ್ಲಿ ತೆರೆಗೆ ತಂದರು. 

ಆರಂಭದಲ್ಲಿ ಪುಟ್ಟಣ್ಣ ಅವರ ಮಾತೃಶ್ರಿ ಅವರಿಗೆ ನಮನ ಸಲ್ಲಿಸುತ್ತಾ, ಶುರುವಾಗುವ ಈ ಚಿತ್ರದ ವಿಶೇಷ ಛಾಯಾಗ್ರಹಣ ಬಿ ಎಸ್ ಬಸವರಾಜ್ ಅವರದ್ದು. ಅದ್ಭುತ ಹಾಡುಗಳನ್ನು ಬರೆದದ್ದು ಜೀವದ ಗೆಳೆಯ ವಿಜಯನಾರಸಿಂಹ ಅದಕ್ಕೆ ಸಂಗೀತ ಕಿರೀಟ ತೊಡಿಸಿದವರು ಇನ್ನೊಬ್ಬ ಜೀವದ ಗೆಳೆಯ ವಿಜಯಭಾಸ್ಕರ್. 

ಪುಟ್ಟಣ್ಣ ಅವರಿಗೆ ಕರುನಾಡಿನ ಪ್ರತಿಭೆಗಳನ್ನು, ಕರುನಾಡಿನ ಸುಂದರ ತಾಣಗಳನ್ನು ಪರಿಚಯಿಸುವ ಉತ್ಸಾಹ ಯಾವಾಗಲೂ ಇತ್ತು. ಅವರ ಚಿತ್ರಗಳ ಮೂಲಕ ಬೆಳಕಿಗೆ ಬಂದ ನಕ್ಷತ್ರಗಳು ಅನೇಕ ಅನೇಕ. ಈ ಚಿತ್ರದ ಮೂಲಕ ಕರುನಾಡಿಗೆ ಕೊಟ್ಟ ಉಡುಗೊರೆ ಬಿ ಆರ್ ಛಾಯ ಎನ್ನುವ ಕರುನಾಡಿನ ಮನೆಮಗಳಾದ ಗಾಯಕಿ. 

ಚುರುಕು ಸಂಭಾಷಣೆ, ಹಿತಮಿತವಾದ ಪದಗಳು ಪುಟ್ಟಣ್ಣ ಚಿತ್ರಗಳ ಆಸ್ತಿ, ಈ ಚಿತ್ರಕ್ಕೆ ಪದಗಳನ್ನು ಜೋಡಿಸಿದವರು ಬಿ ಎಲ್ ವೇಣು. ಜಗನ್ಮಾತೆಯ ದಿಗ್ದರ್ಶನದಲ್ಲಿ ಚಿತ್ರಕಥೆ, ನಿರೂಪಣೆ ಮತ್ತು ನಿರ್ವಹಣೆ ಪೂಜ್ಯ ಗುರುಗಳಾದ ಪುಟ್ಟಣ್ಣ ಕಣಗಾಲ್ ಅವರದ್ದು. 

ಪುಟಿಯುವ ಯೌವನದ ಉತ್ಸಾಹ ಕೆಲವೊಮ್ಮೆ ಎಂಥಹ ಹಾದಿಯನ್ನು ಹಿಡಿಯುತ್ತದೆ ಎನ್ನುವುದರ ಆರಂಭ ಈ ಚಿತ್ರದ ಆರಂಭಿಕ ದೃಶ್ಯದಲ್ಲಿ ಕಾಣುತ್ತದೆ. ಬುಗ್ಗೆ ಬುಗ್ಗೆಯಾಗಿ ದೋಣಿಯ ಮೋಟಾರಿನ ಕೆಳಗೆ ಉಕ್ಕುವ ನೀರು ಈ ಮಾತಿಗೆ ಸಾಕ್ಷಿ. 
ಆಧುನಿಕ ಪ್ರಪಂಚ ದಾಪುಗಾಲು ಇಡುತ್ತಾ ಸಾಗಿದಾಗ ಪ್ರಕೃತಿಯನ್ನು ಮನುಷ್ಯ ಹೇಗೆ ಕಬಳಿಸುತ್ತಾ ಹೋಗುತ್ತಾನೆ ಎನ್ನುವುದಕ್ಕೆ ಶರಾವತಿ ಹಿನ್ನೀರಿನ ಬಗ್ಗೆ ನಾಯಕಿ ಮಾತಲ್ಲಿ ಬರುವ ಆರಂಭಿಕ ಸಂಭಾಷಣೆ ಸಾಕ್ಷಿಯಾಗಿ ನಿಲ್ಲುತ್ತದೆ. 

ಶಾಲೆಯ ಕಡಿವಾಣದ ದಿನಗಳಿಂದ ಕಾಲೇಜು ಎನ್ನುವ ಸ್ವತಂತ್ರ ಎನ್ನುವ ಇನ್ನೊಂದು ಪರಿಧಿಯೊಳಗೆ ಹೋಗುವ ಹರೆಯದ ತುಡಿತವನ್ನು ಕೆಲವೇ ದೃಶ್ಯಗಳಲ್ಲಿ ಅಚ್ಚುಕಟ್ಟಾಗಿ ತಂದಿದ್ದಾರೆ. ನೋಡಿದ ತಕ್ಷಣ ರೂಪು, ವಯ್ಯಾರ ಅಥವಾ ಲಕ್ಷಣಗಳನ್ನು ಗಮನಿಸದೆ ಪ್ರೀತಿ ಎನ್ನುವ ಒಂದು ವಿಚಿತ್ರ ಭಾವಕ್ಕೆ ಬೀಳುವ ನಾಯಕ ಪಾತ್ರಧಾರಿ ರಾಮಕೃಷ್ಣ ಉತ್ತಮವಾಗಿ ಅಭಿನಯಿಸಿದ್ದಾರೆ. ನಾಯಕಿ ಪದ್ಮಾವಾಸಂತಿ ಮತ್ತೆ ಅಭಿನಯವನ್ನು ಸಾಣೆ ಹಿಡಿದಂತೆ ನಟಿಸಿದ್ದಾರೆ. ಇನ್ನೂ ಮೊದಲ ಪರಿಚಯ ಶ್ರೀಧರ್ ಗಂಭೀರ ಪಾತ್ರದಲ್ಲಿ ಮಿಂಚಿದ್ದಾರೆ. ಎಲ್ಲೂ ಅತಿರೇಕದ ಅಭಿನಯ ಅಥವಾ ದೃಶ್ಯಗಳನ್ನು ಕಟ್ಟಿ ಕೊಡದಿರುವುದು ಪುಟ್ಟಣ್ಣ ಅವರ ಎಲ್ಲಾ ಚಿತ್ರಗಳ ಪ್ರಮುಖ ಆಕರ್ಷಣೆ. ಹದವಾಗಿ, ನವಿರಾದ ಸಂಭಾಷಣೆಗಳು ಮತ್ತು ಅದಕ್ಕೆ ಬದ್ಧವಾಗಿ ನಿಲ್ಲುವ ದೃಶ್ಯ ಜೋಡಣೆ, ಪರಿಸರ ಇದು ಈ ಚಿತ್ರದ ಮತ್ತೊಂದು ಆಕರ್ಷಣೆ. ರಾಮಕೃಷ್ಣ ಒಬ್ಬರನ್ನು ಬಿಟ್ಟರೆ ಮಿಕ್ಕೆಲ್ಲಾ ಕಲಾವಿದರು ಅಷ್ಟೇನೂ ಬೆಳಕಿಗೆ ಬಂದು ಮಿಂಚಿದ ಪ್ರತಿಭೆಗಳಲ್ಲ. ಆದರೆ ಪ್ರತಿಯೊಬ್ಬರಲ್ಲೂ ಕಥೆಗೆ ಬೇಕಷ್ಟು ಅಭಿನಯ ಹೊಮ್ಮಿಸಿರುವ ರೀತಿ ಇಷ್ಟವಾಗುತ್ತದೆ.

ಸೂರ್ಯಾಸ್ತದ ಅನೇಕ ದೃಶ್ಯಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿರುವ ಪುಟ್ಟಣ್ಣ, ಅದನ್ನು ಸರಿಯಾದ ದೃಶ್ಯಕ್ಕೆ ಒಪ್ಪವಾಗಿ ಜೋಡಿಸಿದ್ದಾರೆ.

ಮೊದಲ ಪ್ರೇಮವನ್ನು ನಿವೇದಿಸುತ್ತಾ ಮನಸ್ಸಲ್ಲೇ ರಮ್ಯ ಕಲ್ಪನೆ ಮಾಡಿಕೊಳ್ಳುವ ಹಾಡಾಗಿ "ಮಯೂರಿ ನಾಟ್ಯ ಮಯೂರಿ" ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ಛಾಯ ಅವರ ಕಂಠ ಸಿರಿಯಲ್ಲಿ ಬರುತ್ತದೆ. ರಾಮಕೃಷ್ಣ ಅವರ ನೃತ್ಯ, ಪದ್ಮಾವಾಸಂತಿ ಅಭಿನಯ ಈ ಹಾಡಿನ ಮೆಚ್ಚತಕ್ಕ ಅಂಶ. ಶರಾವತಿ ಹಿನ್ನೀರಿನ ರಮ್ಯ ತಾಣವನ್ನು ಪರಿಚಯಿಸಿಕೊಡುತ್ತಾರೆ

ಪ್ರಣಯದ ಉತ್ತುಂಗ, ಮತ್ತು ಮನಸ್ಸಿನ ಮೇಲೆ ಹಿಡಿತ ಜಾರುವ ದೃಶ್ಯವನ್ನು ಹಾಡಾಗಿ "ಪಾರವತಿ ಪರಶಿವನ ಪ್ರಣಯ ಪ್ರಸಂಗ" ಹಾಡಿನಲ್ಲಿ ಮನಸ್ಸಿನ ಮೇಲೆ ಬೀರುವ ವಿಧ ವಿಧ ಭಾವಕ್ಕೆ ಒಪ್ಪುವಂತೆ ಬಣ್ಣ ಬಣ್ಣಗಳ ಬೆಳಕಲ್ಲಿ ಈ ಹಾಡನ್ನು ಚಿತ್ರೀಕರಿಸಿದ್ದಾರೆ ಇಕ್ಕೇರಿಯ ದೇಗುಲದಲ್ಲಿ. ಪುಟ್ಟಣ್ಣ ಅವರ ತಾಂತ್ರಿಕ ಜ್ಞಾನದ ಭವ್ಯ ಅನಾವರಣ.

ಮುಂದಿನ ವಿದ್ಯಾಭ್ಯಾಸಕ್ಕೆ ಹೊರಡುವ ನಾಯಕ, ಮೊದಲ ಕಾಗದವನ್ನು ತಲುಪಿಸಿದಾಗ ಅದನ್ನು ಓದುವ ನಾಯಕಿ, ಮತ್ತು ಆ ದೃಶ್ಯವನ್ನು ಉಯ್ಯಾಲೆಯಲ್ಲಿ ತೂಗಿದಂತೆ ಚಿತ್ರೀಕರಿಸಿದ್ದಾರೆ. ಅದನ್ನು ನಾಯಕಿಯ ದೇಹದಲ್ಲಿ ಆಗುವ ಬದಲಾವಣೆ ಮತ್ತು ನಾಯಕ ಹೊರಳಿದ ಪಥದಲ್ಲಿ ನಿಲ್ಲುವನು ಎನ್ನುವ ಉಪಮೆ ನೀಡಿದ್ದಾರೆ. ಬಿಸಿಗೆ ಕರಗಿದ ಮಂಜಿನಂತೆ ನಾಯಕನ ಪ್ರೇಮವೂ ಪ್ರೀತಿಯೂ ಅನುಮಾನಕ್ಕೆ ತಿರುಗುತ್ತೆ ಇದರ ಮುನ್ಸೂಚನೆ ಈ ದೃಶ್ಯದಲ್ಲಿ ಕಾಣುತ್ತದೆ.

ನಾಯಕಿ ತನ್ನ ಬವಣೆಯನ್ನು ತನ್ನ ಆತ್ಮೀಯ ಸ್ನೇಹಿತ ಶ್ರೀಧರ್ ಗೆ ಹೇಳಲು ಹೊರ ಕರೆಯುತ್ತಾಳೆ, ಆದರೆ ಸ್ನೇಹಿತನ ಮುಂದೆ ತಾನು ಕಾಲು ಜಾರಿದ್ದೇನೆ ಎಂದು ಹೇಳಲು ತೊಳಲಾಡುವ ದೃಶ್ಯವನ್ನು ಅಷ್ಟೇ ಅದ್ಭುತವಾಗಿ ಕ್ಯಾಮೆರ ಓಡಾಡುತ್ತಲೇ ಇರುವಂತೆ ತೋರಿಸಿದ್ದಾರೆ. ಶ್ರೀಧರ್ ಹತ್ತಿರ ಬಂದು ಏನು ಸಮಾಚಾರ ಎಂದಾಗ, ಕ್ಯಾಮೆರ ನಿಲ್ಲುತ್ತದೆ, ಅಂದರೆ, ಜೀವದ ಗೆಳೆಯ ಆತ್ಮ ವಿಶ್ವಾಸ ತುಂಬುತ್ತಾನೆ ಮತ್ತು ತನ್ನ ಎಲ್ಲಾ ಕಷ್ಟಗಳಿಗೆ ಸ್ಪಂಧಿಸುತ್ತಾನೆ ಎನ್ನುವ ಭರವಸೆ ಮೂಡಿದಾಗ ತೂಗಾಡುವ ಮನಸ್ಸು ಒಂದು ತಹಬದಿಗೆ ನಿಲ್ಲುತ್ತದೆ ಎನ್ನುವ ಮಾತನ್ನು ಈ ದೃಶ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ.

ನಾಯಕಿಯ ಪರಿಸ್ಥಿತಿಗೆ ಪರಿಹಾರ ಎನ್ನುವಂತೆ ತಾನೇ ಮದುವೆ ,ಮಾಡಿಕೊಳ್ಳುವ ಶ್ರೀಧರ್, ತನ್ನ ತಾಯಿಗೆ ಹೇಳುವ ಮಾತು "ಯಾವತ್ತೂ ಯಾವ ಕಾರಣಕ್ಕೂ ಇವಳ ಮನಸ್ಸನ್ನು ನೋಯುವ ಮಾತನ್ನು ಆಡಬೇಡ" ಎಂದಾಗ ತಾಯಿ ಹೇಳುವ ಅದ್ಭುತ ಮಾತು "ಮಗ ಇಷ್ಟ ಪಟ್ಟು ಮದುವೆ ಮಾಡಿಕೊಂಡ ಹೆಣ್ಣನ್ನು ನಿಕೃಷ್ಟವಾಗಿ ಕಾಣುವಷ್ಟು ಕೆಟ್ಟ ತಾಯಿಯಲ್ಲ" ಎನ್ನುತ್ತಾಳೆ.

ಇದಕ್ಕೆ ವಿವರಣೆಯೇ ಬೇಡವೇ ಬೇಡ.

ಕರುನಾಡಿನ ರಮ್ಯತಾಣ ಶ್ರೀಧರ ತೀರ್ಥ ಇರುವ ವರದಹಳ್ಳಿ. ಇಲ್ಲಿ ಚಿತ್ರೀಕರಣ ಮಾಡಿದ್ದಾರೆ ಒಂದು ಅದ್ಭುತ ಹಾಡನ್ನು "ಹಿಂದೂಸ್ಥಾನವು ಎಂದೂ ಮರೆಯದ" ಜಯಚಂದ್ರನ್ ಹಾಡಿರುವ ರೀತಿ, ಆ ಸಾಹಿತ್ಯ ಅದ್ಭುತ. ಶ್ರೀಧರ್ ಈ ಹಾಡಿಗೆ ಉತ್ತಮ ಅಭಿನಯ ನೀಡಿದ್ದಾರೆ. ಮುಂದೆ ಇದೆ ಹಾಡನ್ನು ಬಿ ಆರ್ ಛಾಯ ಹಾಡಿರುವ ರೀತಿಯೂ ಸೊಗಸಾಗಿದೆ.

ಶ್ರೀಧರ್ ಪಾತ್ರ ಮರಣಹೊಂದಿದಾಗ, ಮುಗ್ಧ ಮಗು ಸ್ಮಶಾನದಲ್ಲಿ ಏನೂ ಮಾತಾಡದೆ ಅಥವಾ ಅಳಲು  ಗೊತ್ತಾಗದೆ ನಿಂತಿರುತ್ತದೆ. ಇಲ್ಲಿ ಯಾವುದೇ ಭಾವನಾತ್ಮಕ ಸಂಭಾಷಣೆ ಇರುವುದಿಲ್ಲ, ನಿಶ್ಯಬ್ಧ... ಅತ್ಯುತ್ತಮ ದೃಶ್ಯ ಇಡಿ ಚಿತ್ರದಲ್ಲಿ.

ಕಡೆಯ ಕೆಲ ದೃಶ್ಯದಲ್ಲಿ ರಾಮಕೃಷ್ಣ ತನ್ನ ತಪ್ಪಿನ ಅರಿವಾಗಿ ನಾಯಕಿಯನ್ನು ನೋಡಲು ಬಂದಾಗ, ನಾಯಕಿಯ ಮೊಗದಲ್ಲಿ ತನ್ನ ಬಾಳನ್ನು ನಾಶ ಮಾಡಿದ ಅವನನ್ನು ನೋಡಿದ ತಕ್ಷಣ ಕೋಪ ಆದರೆ ಕೆಲವು ಕ್ಷಣಗಳಲ್ಲಿ ಶಾಂತ ಸ್ವಭಾವದ ಅಭಿನಯ ಸೂಪರ್ ಸೂಪರ್ ಎನ್ನಿಸುತ್ತದೆ.

ಶ್ರೀಧರ್ ಬರೆದಿಟ್ಟ ಪತ್ರ ಮತ್ತು ಉಯಿಲನ್ನು ಓದುವ ರಾಮಕೃಷ್ಣ ಕೂತಿರುವ ಶರಾವತಿ ಹಿನ್ನೀರಿನ ದಡದಲ್ಲಿ ದೃಶ್ಯವನ್ನು ಪದೇ ಪದೇ ಹಿಂದಕ್ಕೆ ಮುಂದಕ್ಕೆ ಜೂಮ್ ಮಾಡುತ್ತಲೇ ಇರುತ್ತದೆ ದೃಶ್ಯ ಸಂಯೋಜನೆ, ನಾಯಕ ತನ್ನ ಗತ ಜೀವನದಲ್ಲಿ ಮಾಡಿದ ತಪ್ಪನ್ನು ತಿದ್ದಿಕೊಳ್ಳಬೇಕು ಮತ್ತು ಅದಕ್ಕೆ ಒಂದು ಅವಕಾಶವಿದೆ, ಮತ್ತೆ ತನ್ನ ತಪ್ಪನ್ನು ಸರಿ ಪಡಿಸಿಕೊಳ್ಳಲಿಕ್ಕೆ ಸಾಧ್ಯವಿದೆ ಎನ್ನುವ ಅಭಿಪ್ರಾಯ ಮೂಡಿಬರಲು ಸಹಾಯ ಮಾಡುತ್ತದೆ.


ಪುಟ್ಟಣ್ಣ ಕಣಗಾಲ್ ಮತ್ತೆ ತಮ್ಮ ಜಾದೂವನ್ನು ತೋರಿಸಿದ ಚಿತ್ರ ಇದು. ಸುಂದರ ಕಥೆಯನ್ನು ಅಷ್ಟೇ ಅಚ್ಚುಕಟ್ಟಾಗಿ ನಿರೂಪಣೆ ಮಾಡಿರುವ ರೀತಿಗೆ ಮನಸ್ಸಲ್ಲೇ ನಮನ ಸಲ್ಲಿಸುತ್ತೇನೆ. 

Sunday, October 18, 2015

ಸಾವಿರ ಸಾವಿರ ಮನಸ್ಸಿನ ಭಾವದ ಉಗಮಸ್ಥಾನ "ಸಾವಿರ ಮೆಟ್ಟಿಲು" - ಪೂರ ಹತ್ತದ ಮೆಟ್ಟಿಲುಗಳು (2006)

ಕಲಾವಿದರ ಕಾಲು ಅಳತೆ ಒಬ್ಬರಿಂದ ಒಬ್ಬರದು ವಿಭಿನ್ನ ಎಂದು ಹೇಳುತ್ತಾರೆ. ಒಬ್ಬರ ಪರಿಶ್ರಮದ ಪಾದರಕ್ಷೆ ಇನ್ನೊಬ್ಬರ ಕಾಲಿಗೆ ಆಗೋಲ್ಲ ಎಂದು.

ಪುಟ್ಟಣ್ಣ ಕಣಗಾಲ್ ಒಂದು ಪ್ರತಿಭಾ ಪೆಟ್ಟಿಗೆ, ಅವರ ಮೆದುಳು ಒಂದು ಈಗಿನ ಕಾಲದ ಮಾಹಿತಿ ಕೇಂದ್ರ ಅಥವಾ ಕಂಪ್ಯೂಟರ್ ಇದ್ದ ಹಾಗೆ. ಅವರ ಬಗ್ಗೆ ಜನಜನಿತ ಮಾತು ಅಂದರೆ, ಅವರು ಒಂದು ಸಿನಿಮಾ ಕೈಗೆತ್ತಿಕೊಂಡರೆ ಅದರಲ್ಲಿಯೇ ಮುಳುಗಿಬಿಡುತ್ತಿದ್ದರು ಎಂದು, ಹಾಗಾಗಿ ಕಥೆ ಚಿತ್ರಕಥೆ ಎಲ್ಲವೂ ಅವರ ತಲೆಯೊಳಗೆ ಇದ್ದುಬಿಡುತ್ತಿದ್ದವು, ಒಂದು ಮಾದರಿ ಅಥವ ಆಧುನಿಕ ಭಾಷೆಯಲ್ಲಿ ಹೇಳುವುದಾದರೆ ಬ್ಲೂ ಪ್ರಿಂಟ್ ಅಥವಾ ನಕಾಶೆ ಇರುತ್ತಿದ್ದವು ಅನ್ನಿಸುತ್ತದೆ, ಅದನ್ನು ಚಿತ್ರಿಕರಿಸುವಾಗ ಅದಕ್ಕೆ ಮತ್ತಷ್ಟು ಹೊಳಪು ಕೊಟ್ಟು ಬೆಳಗಿಸುತ್ತಿದ್ದರು ಎನ್ನುವ ಅನುಭವ ಅವರ ಎಲ್ಲಾ ಚಿತ್ರಗಳನ್ನು ನೋಡಿದ ಅವರ ಅಪ್ಪಟ ಅಭಿಮಾನಿಗಳಲ್ಲಿ ಒಬ್ಬನಾದ ನನ್ನದು. 

ಇದು ಒಂದು ಮಟ್ಟಿಗೆ ನಿಜ, ಕಲಾವಿದ ಎಂದಿಗೂ ತನ್ನ ಕಲೆಯನ್ನು ಅಥವಾ ತನ್ನ ಕೃತಿಯನ್ನು ಹೊಳಪಿನ ಮೂಸೆಗೆ ತಳ್ಳುತ್ತಲೇ ಇರುತ್ತಾನೆ. ಅದು ಪೂರ್ಣ ಕೃತಿಗೆ ಬರುವಷ್ಟರಲ್ಲಿ ಅವರ ತಲೆಯೊಳಗೆ ಮತ್ತು ಹೃದಯದ ಪರಿಷ್ಕರಣ ಪೆಟ್ಟಿಗೆಯೊಳಗೆ ಮಿಂದೆದ್ದು ಬರುತ್ತದೆ. 

ಅದನ್ನು ಮುಟ್ಟುವುದು ಅಥವಾ ಅದನ್ನು ಮುಂದುವರೆಸುವುದು ಸವಾಲಿನ ಸಂಗತಿಯೇ ಸರಿ. ಶ್ರೀ ಬಸವೇಗೌಡರು ಮತ್ತು ಕೆ ಎಸ್ ಎಲ್ ಸ್ವಾಮೀ ಇಬ್ಬರ ಪರಿಶ್ರಮ ನಿಜಕ್ಕೂ ಶ್ಲಾಘನೀಯ. ಪೂರ್ಣ ಚಿತ್ರಕಥೆಯಿಲ್ಲ, ಕಥೆಯನ್ನು ಎಲ್ಲಿಂದ ಆರಂಭಿಸಬೇಕು, ಹೇಗೆ ಮುಂದಕ್ಕೆ ಕೊಂಡೊಯ್ಯಬೇಕು ಹೀಗೆ ಯಾವುದೇ ಒಂದು ನಿರ್ದಿಷ್ಟ ಚೌಕಟ್ಟಿನ ಜೊತೆಯಲ್ಲಿದೆ ಒಬ್ಬ ಕಲಾವಿದನ ಕುಂಚವನ್ನು ಮುಂದಕ್ಕೆ ಒಯ್ಯುವುದು ಸವಾಲಿನ ವಿಷಯ. ಇಂಥಹ ಪರಿಶ್ರಮ ಕೈಗೊಂಡ ಇಬ್ಬರೂ ಸಾಧಕರಿಗೂ ಮತ್ತು ಅದಕ್ಕೆ ಸಹಕರಿಸಿದ ಎಲ್ಲಾ ಕಲಾವಿದರಿಗೂ ಮತ್ತು ತಾಂತ್ರಿಕ ವರ್ಗಕ್ಕೆ ಅಭಿನಂದನೆಗಳು. 

ಈ ಚಿತ್ರದ ಬಗ್ಗೆಗಿನ ನನ್ನ ಬರಹವನ್ನು ಪುಟ್ಟಣ್ಣ ಅವರು ಚಿತ್ರೀಕರಿಸಿದ ಭಾಗಗಷ್ಟೇ ಸೀಮಿತಗೊಳಿಸುತ್ತೇನೆ, ಕಾರಣ ನಿಮಗೆ ಗೊತ್ತು. 

ಪುಟ್ಟಣ್ಣ ಕಣಗಾಲ್ ಅವರ ಮೊದಲ ಕೆಲ ಪ್ರಯತ್ನಗಳಲ್ಲಿ ಇದು ಒಂದು ಚಿತ್ರ ಎನ್ನಿಸುವ ಎಲ್ಲಾ ಸುಳಿವು ಇದರಲ್ಲಿ ಸಿಗುತ್ತದೆ. ವಜ್ರ ತನ್ನನ್ನೇ ತಾನು ಹೊಳಪಿನ ಪ್ರಖರತೆ ಒಡ್ಡಿಕೊಳ್ಳುತ್ತಿರುವ ಎಲ್ಲಾ ಲಕ್ಷಣಗಳು ಇವೆ ಈ ಚಿತ್ರದಲ್ಲಿ. 

ಈ ಚಿತ್ರದಲ್ಲಿ ನಟಿಸಿರುವ ಸುಮಾರು ೮೦% ಕಲಾವಿದರು ಈ ಚಿತ್ರ ಬಿಡುಗಡೆಯಾದಾಗ ಇಲ್ಲ. ತಾರಾಗಣ ಪಟ್ಟಿಯಲ್ಲಿ ಅವರ ಹೆಸರಿನ ಹಿಂದೆ "ದಿ।।" ಎಂದು ನೋಡುವುದು ಮನಸ್ಸಿಗೆ ಬಹಳ ಹಿಂಸೆಯಾಗುತ್ತದೆ.ನಮ್ಮ ಕರುನಾಡಿನ ಚಿತ್ರರಂಗವನ್ನು ಬೆಳಗಲು ಶ್ರಮಿಸಿದ  ಅನೇಕ ಕಲಾರತ್ನಗಳ ಹೆಸರುಗಳ ಹಿಂದೆ ಆ ಅಕ್ಷರ ನೋಡುವುದು ನಿಜಕ್ಕೂ ಬೇಸರದ ಸಂಗತಿ. 

ಕಪ್ಪು ಬಿಳುಪಿನಲ್ಲಿ ತಯಾರಾದ ಈ ಚಿತ್ರ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿಯೇ ಚಿತ್ರಿಕರಣವಾಗಿದೆ. ಒಂದು ಪ್ರದೇಶವನ್ನು ಅದೇ ಅದೇ ಚೌಕಟ್ಟಿನಲ್ಲಿ ತರದೇ, ಪ್ರತಿದೃಶ್ಯವನ್ನು ಅರೆ ಇದು ಬೇರೆಯದೇ ತಾಣ ಇರಬಹುದೇನೋ ಅನ್ನುವಂತೆ ತೋರಿಸಿದ್ದಾರೆ ಛಾಯಾಗ್ರಾಹಕರು. 

"ಗಂಡು ಬೀರಿ ನಾನಲ್ಲ" ಹಾಡು ಎಲ್ ಆರ್ ಈಶ್ವರಿ ಅಬ್ಬರಿಸಿದ್ದಾರೆ, ಜೊತೆಯಲ್ಲಿಯೇ ನಿಜಕ್ಕೂ ಗಂಡು ಬೀರಿಯಂತೆಯೇ ಅಭಿನಯಿಸಿರುವ ಜಯಂತಿ.  
ಎಳನೀರು ಮಾರುವ ಪಾತ್ರದಲ್ಲಿ ನನ್ನ ಪ್ರೀತಿಯ ಅಶ್ವತ್ ಗಮನಸೆಳೆಯುತ್ತಾರೆ. 
ಆ ಕಾಲದ ಸುರಸುಂದರಾಂಗ ಕಲ್ಯಾಣ್ ಕುಮಾರ್ "ಕೈ ನೀಡಿದೇ ನೀನು ಅಂದು" ಪಿ ಬಿ ಶ್ರೀನಿವಾಸ್ ಮತ್ತು ಎಸ್ ಜಾನಕಿ  ಹಾಡಿಗೆ ಸುಂದರ ನೃತ್ಯ ಮತ್ತು ಅಭಿನಯಯವರ ಜೊತೆಯಲ್ಲಿ ಜಯಂತಿ ಅವರದು 
"ನಮ್ಮೂರ ಬೆಟ್ಟದ" ಎನ್ನುವ ಹಾಡಿನಲ್ಲಿ ಮೈಸೂರನ್ನು ರಮ್ಯವಾಗಿ ತೋರಿಸುವ ದೃಶ್ಯಗಳು ಕಣ್ಣಿಗೆ ಕಟ್ಟುತ್ತವೆ. ಪಿ ಬಿ ಶ್ರೀನಿವಾಸ್ ಮತ್ತು ಪಿ ಸುಶೀಲ ಸಾಹಿತ್ಯಕ್ಕೆ ದನಿಯಾಗುತ್ತಾರೆ. 

ಅದ್ಭುತ ದೃಶ್ಯ ಸಂಯೋಜನೆ ಅಂದರೆ 
ವಜ್ರಮುನಿ, ಜಯಂತಿ ಮತ್ತು ಕಲ್ಯಾಣ್ ಕುಮಾರ್ ಒಂದು ದೃಶ್ಯದಲ್ಲಿ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಿರುತ್ತಾರೆ. ಆ ದೃಶ್ಯದಲ್ಲಿ ಮೂವರು ಜೋರಾಗಿ ಮಾತಾಡಬೇಕು ಅಥವಾ ಬೇಡಿಕೊಳ್ಳುವ ದನಿ ಇರಬೇಕು ಇಲ್ಲವೇ ಅಥವಾ ಒಬ್ಬರಿಗೂಬ್ಬರು ತಮ್ಮ ತಮ್ಮ ಬಗ್ಗೆ ಸಮಜಾಯಿಷಿ ಕೊಡಬೇಕು. ಇವಿಷ್ಟನ್ನು ಕೇವಲ ಒಂದು ನಿಮಿಷದ ದೃಶ್ಯದಲ್ಲಿ ತೋರಿಸುತ್ತಾರೆ ಪುಟ್ಟಣ್ಣ ಅವರು. ಇಡಿ ದೃಶ್ಯವನ್ನು ಮೂರು ಜೊತೆ ಕಣ್ಣುಗಳಲ್ಲಿ ತೋರುತ್ತಾರೆ.. ಪ್ರತಿ ಐದು ಅಥವಾ ಹತ್ತು ಕ್ಷಣಗಳಿಗೆ ಒಂದೊಂದು ಜೊತೆ ಕಣ್ಣುಗಳಲ್ಲಿ ಭಾವ ಬದಲಾಗುತ್ತಾ ಹೋಗುತ್ತದೆ. ಅದ್ಭುತ ಅದ್ಭುತ ಎನ್ನಿಸುವ ದೃಶ್ಯ ಸಂಯೋಜನೆ. 

ಜಯಂತಿ ಪಾತ್ರವನ್ನು ಅತಿ ಅಲ್ಲಿಯ ತನಕ ಅತಿ ಎತ್ತರದಲ್ಲಿ ಕೂರಿಸಿದ್ದ ವಜ್ರಮುನಿ ಮನೆಯವರು (ಪಂಡರಿ ಬಾಯಿ ಮತ್ತು ಆಕೆಯ ಮಗಳು ಮತ್ತು ಮಗ), ಯಾವುದೇ ಕಾರಣಕ್ಕೆ, ಜಯಂತಿ ಅಪರಾಧಿನಿ ಎಂದುಅರಿವಾಗುತ್ತದೆ , ಮಹಡಿಯ ಕೆಳಗೆ ಇದ್ದ ವಜ್ರಮುನಿ ಮತ್ತು ಆತನ ತಾಯಿ ಪಂಡರಿಬಾಯಿ ಜಯಂತಿಯನ್ನು ಕರೆಯುತ್ತಾರೆ. ಜಯಂತಿ ಇಳಿದುಬರುತ್ತಿರುವಾಗ ಆಕೆಯ ಕಣ್ಣಲ್ಲಿ ಅಪರಾಧಿ ಭಾವ ಎದ್ದು ಕಾಣುತ್ತದೆ, ಜೊತೆಯಲ್ಲಿಯೇ ಕ್ಯಾಮೆರ ಚಾಲನೆ ನಿಧಾನವಾಗಿ ಕೆಳಗೆ ಇಳಿಯುತ್ತಾ ಹೋಗುತ್ತದೆ. ವಜ್ರಮುನಿ ಮತ್ತು ಪಂದರಿಬಾಯಿಯವರ ಮುಖಭಾವವನ್ನೇ ತೋರಿಸುತ್ತಾ ಕ್ಯಾಮೆರಾ ನಿಧಾನವಾಗಿ ಕೆಳಗೆ ಇಳಿಯುತ್ತಾ ಹೋಗುತ್ತದೆ. 

ಅಂದರೆ ಜಯಂತಿ ಪಾತ್ರ, ಆ ಮನೆಯವರ ಮುಂದೆ ಅಪರಾಧಿ ಭಾವದಿಂದ ಎತ್ತರದಲ್ಲಿದ್ದ ವ್ಯಕ್ತಿತ್ವ ಭೂಮಿಗೆ ಇಳಿಯುತ್ತಾ ಹೋದಂತೆ ತೋರಿಸುವ ದೃಶ್ಯ. 

ಗುರುಗಳೇ ಇವೆರಡು ದೃಶ್ಯಗಳು ಸಾಕು, ನಿಮ್ಮ ಪ್ರತಿಭೆ ಅನಾವರಣಗೊಳ್ಳಲು ಕರುನಾಡಿನ ರಂಗ ಪರದೆ ಕಾಯುತ್ತಿತು ಎಂದು ತಿಳಿದುಕೊಳ್ಳಲು. 

ಪುಟ್ಟಣ್ಣ ಅವರ ತಲೆಯಲ್ಲಿದ್ದ ಇಡಿ ಚಿತ್ರಕಥೆ ಸಿಕ್ಕಿದ್ದರೂ, ಅಥವಾ ಕಥೆಯ ಒಳ ಸುಳಿವು ಗೊತ್ತಿದ್ದರೂ ಪುಟ್ಟಣ್ಣ ಕಣಗಾಲ್ ಅವರ ಮನಪಟಲದಲ್ಲಿದ್ದ ಚಿತ್ರಕೃತಿಯನ್ನು ಇತರರಿಗೆ ಅಸಾಧ್ಯ ಎನ್ನಿಸುತ್ತಿತ್ತೋ ಏನೋ. ನನ್ನ ಉತ್ತರ ಅಸಾಧ್ಯ ಎಂದು. ಕಾರಣ ಗುರುಗಳು ಗುರುಗಳೇ. 

ಪುಟ್ಟಣ್ಣ ಕಣಗಾಲ್ ಅವರಿಗೆ ಒಂದು ಶ್ರದ್ಧಾ ಪೂರ್ವಕ ನಮನಸಲ್ಲಿಸುವ ಕಾರ್ಯದಲ್ಲಿ ಬಸವೇಗೌಡರು ಮತ್ತು ಕೆ ಎಸ್ ಎಲ್ ಸ್ವಾಮೀ ಮತ್ತು ಚಿತ್ರತಂಡದವರು ಶ್ರಮಿಸಿದ್ದು ನಿಜಕ್ಕೂ ಶ್ಲಾಘನೀಯ. ಪುಟ್ಟಣ್ಣ ಕಣಗಾಲ್ ಮೇಲಿನ ಪ್ರೀತಿ ಮತ್ತು ಗೌರವ ಅವರ ಈ ಬೃಹತ್ ಕಾರ್ಯದಲ್ಲಿ ಜೊತೆ ನೀಡಿದೆ. 

ಪುಟ್ಟಣ್ಣ ಕಣಗಾಲ್ ಅವರಿಗೆ ನನ್ನ ಹೃದಯ ಪೂರ್ವಕ ನಮನಗಳು. 

Friday, October 16, 2015

ಋಣ ಮುಕ್ತಳು - ಒಂದು ವಿಭಿನ್ನ ಅನುಭವ (1984)

ಒಂದು ಮಹಾನ್ ಚೇತನ ಅಮೋಘ ಚಿತ್ರಗಳನ್ನು ನೀಡುತ್ತಾ ನೀಡುತ್ತಾ ಬಸವಳಿದಾಗ ಮತ್ತೆ ಅದಕ್ಕೆ ಚೈತನ್ಯ ನೀಡುವುದೇ ಮತ್ತೊಂದು ಪರಿಶ್ರಮ ಬೇಡುವ ಚಿತ್ರ.

ಹೌದು ಈ ಚಿತ್ರವನ್ನು ನಾ ಇದುವರೆಗೂ ನೋಡೇ ಇರಲಿಲ್ಲ. ಯಾವಾಗಲೂ ಈ ಚಿತ್ರ ದೂರದರ್ಶನದಲ್ಲಿ ಮೂಡಿ ಬಂದರೂ ಬರಿ ಅಂತಿಮ ಕ್ಷಣವನ್ನು ಮಾತ್ರ ನೋಡಿದ್ದೇ.  ಭಾರತಿ ತನ್ನ ಮೊಗದಲ್ಲಿ ಯಾವುದೇ ಭಾವನೆ ತೋರದೆ ನಿಧಾನವಾಗಿ ಆಶ್ರಮವಾಸಿಗಳ ಜೊತೆಯಲ್ಲಿ ನಿರ್ಮಲ ಎನ್ನಿಸುವ ಶ್ವೇತ ವಸ್ತ್ರಧಾರಿಯಾಗಿ ಹೆಜ್ಜೆ ಹಾಕುತ್ತಾ ಹೋಗುವುದು, ಮತ್ತು ರಾಮಕೃಷ್ಣ ತನ್ನ ಹೆತ್ತ ತಾಯಿಯನ್ನು ನೋಡುತ್ತಾ ನಿಲ್ಲುವುದು ಅವರ ಮೊಗದ ಮೇಲೆ ಒಂದು ರೀತಿಯ ಆತಂಕ ಮತ್ತು ತನ್ನ ಮಾತೆ ತನಗೆ ನೆಮ್ಮದಿ ಸಿಗುವ ತಾಣವನ್ನು ಅರಸಿಕೊಂಡ ಒಂದು ಸಂತೋಷ. 

ಕಣಗಾಲ್ ಕ್ರಿಯೇಷನ್ಸ್ ಲಾಂಛನದಲ್ಲಿ ಪುಟ್ಟಣ್ಣ ಕಣಗಾಲ್ ಪರಿವಾರದವರೊಡನೆ ಸೇರಿ ತಯಾರಿಸಿದ ಚಿತ್ರ ಇದು. ಶ್ರೀಮತಿ ಅನುಪಮ ನಿರಂಜನ್ ರವರ "ಋಣ" ಎನ್ನುವ ಕಾದಂಬರಿ ಆಧಾರಿತ ಈ ಚಿತ್ರ ಮೊದಲಿಂದ ಕಡೆಯತನಕ ಏರು ಪೆರಿಲ್ಲದೆ ನೋಡಿಸಿಕೊಂಡು ಹೋಗುತ್ತದೆ. 

ಚಿತ್ರದ ಹೆಸರನ್ನು ತೋರಿಸುವಾಗ ಒಂದು ಪುಸ್ತಕದಲ್ಲಿ  ಪ್ರತಿ ಹಾಳೆಯನ್ನು ತಿರುವು ಹಾಕುತ್ತ ಹೋದಂತೆ ತಾರಾಗಣವನ್ನು ಪರಿಚಯ ಮಾಡಿಕೊಡುತ್ತಾರೆ. ನಮಗೆ ಕಾಣದ ನರಕಲೋಕದಲ್ಲಿ ಚಿತ್ರಗುಪ್ತ ಪ್ರತಿ ಜೀವಿಯ ತಪ್ಪು ಒಪ್ಪುಗಳನ್ನು ಅವಲೋಕಿಸುತ್ತಾ ಪಡೆದದ್ದು, ಕಳೆದದ್ದು ಇವುಗಳ ತುಲನೆ ಮಾಡಿ ಯಮಧರ್ಮ ಶಿಕ್ಷೆ ಕೊಡಲು ಅಹವಾಲು ನೀಡುವಂತೆ ತೋರುವ ದೊಡ್ಡ ಪುಸ್ತಕದ ಹಾಳೆಗಳಂತೆ ಈ ದೃಶ್ಯ ಗೋಚರಿಸುತ್ತದೆ. ಪುಟ್ಟಣ್ಣ ಪ್ರತಿ ಚಿತ್ರವನ್ನು  ಆರಂಭಿಸುವ ರೀತಿ ಯಾವಾಗಲೂ ವಿಭಿನ್ನ. 

ಸಂಭಾಷಣೆಯ ಜವಾಬ್ಧಾರಿಯನ್ನು ಕುಣಿಗಲ್ ನಾಗಭೂಷಣ್ ಜೊತೆ ಹಂಚಿಕೊಂಡು, ಚಿತ್ರಕಥೆ ಬರೆದು ನಿರೂಪಣೆ ಮಾಡಿ ಜಗನ್ಮಾತೆಯ ದಿಗ್ಧರ್ಶನದಲ್ಲಿ ಚಿತ್ರ ಮೂಡಿಸಿದ್ದಾರೆ. ಅವರ ಕನಸಿಗೆ ಕಣ್ಣಾಗಿ ಬರುವುದು ಎಸ್ ಮಾರುತಿರಾವ್ ಅವರ ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ ಮತ್ತು ಹಾಡುಗಳಿಗೆ ಜೀವ ತುಂಬುವ ಸಂಗೀತ ಹೊಣೆ ವಿಜಯಭಾಸ್ಕರ್ ಅವರದ್ದು. 

ಮನುಜ ತಾನು ಮಾಡಿದ ಪಾಪ ಪುಣ್ಯ ಇವುಗಳನ್ನು ಇಲ್ಲೇ ಒಪ್ಪ ಮಾಡಿ ಹೋಗುತ್ತಾನೆ ಎನ್ನುವ ನೀತಿಯ ತಳಹದಿ ಈ ಚಿತ್ರದಲ್ಲಿದೆ. ಹಳ್ಳಿಯಲ್ಲಿ ಹಾಯಾಗಿ ಇರಬಹುದಾದ ಮನೆಯ ಯಜಮಾನ ಹಣದ ಆಮಿಷಕ್ಕೆ ಒಳಗಾಗಿ ಪಟ್ಟಣಕ್ಕೆ ಬಂದು, ಆ ಪಟ್ಟಣದ ರೂಪು ರೇಶೆಗಳಿಗೆ ತಕ್ಕಂತೆ ಅನೈತಿಕತೆಯಿಂದ ಹಣ ಸಂಪಾದಿಸುವುದು, ಇದರ ಜೊತೆಯಲ್ಲಿ ಇವನ ಈ ಸಾಹಸ ಮಕ್ಕಳ ಮೇಲೆ ಪರಿಣಾಮ ಬೀರುವುದು ಸುಂದರವಾಗಿ ಚಿತ್ರಿಕೃತವಾಗಿದೆ. 

ಬುದ್ಧಿವಂತ ಮೊದಲನೇ ಮಗುವನ್ನು  ಎರಡನೇ ಮಗುವಿನ ಮುಂದೆ ಹೋಗಲಿ, ಈ ಚಿಕ್ಕ ಮಗುವಿನ ಮನದಲ್ಲಿ ರೋಷ ದ್ವೇಷ ತುಂಬಿ ಸಮಾಜಕ್ಕೆ ಒಂದು ರೀತಿಯ ಪಿಡುಗು ಎನ್ನಿಸುವಂತಹ ಪ್ರಜೆ ನೀಡುವುದರಲ್ಲಿ ಅಪ್ಪನ ಪಾತ್ರಧಾರಿ ಸಫಲ ಆಗುತ್ತಾರೆ. 
ಇದರ ಜೊತೆಯಲ್ಲಿ ಕ್ಷಣಿಕ ಆಸೆಗೆ ಬಲಿಯಾಗಿ ಮನೆಕೆಲಸದ ಹುಡುಗಿಯ ಜೊತೆಯಲ್ಲಿ ಅಕ್ರಮ ಸಂಬಂಧ ಇಟ್ಟುಕೊಂಡು ಒಂದು ಮಗುವಿನ ಜನನಕ್ಕೆ ಕಾರಣವಾಗುವಂಥಹ ವಿಚಿತ್ರ ಪರಿಸ್ಥಿತಿಯನ್ನು ನಿರ್ಮಾಣ ಮಾಡಿಕೊಳ್ಳುತ್ತಾನೆ. ಆ ಮನೆಗೆಲಸದ ಹುಡುಗಿ ಬೇರೆ ಮದುವೆ ಮಾಡಿಕೊಂಡರೂ, ಅಲ್ಲಿ ಸುಖ ಕಾಣದೆ ಗಂಡನನ್ನು ಕಳೆದುಕೊಂಡು, ಆ ದುಃಖದಲ್ಲಿಯೇ ತನ್ನ ಅನೈತಿಕ ಮಗುವನ್ನು ಜತನಮಾಡುವ ಪಾತ್ರ. 

ಮಗು ಒರಟು ಎಂದು ಗೊತ್ತಿದ್ದರೂ, ತಾಯಿ ಹೃದಯ ಮಿಡಿಯುತ್ತದೆ, ಬೇರೆಯವರ ಹತ್ತಿರ ಒರಟು ಒರಟಾಗಿ ಮಾತಾಡಿದರೂ ತನ್ನ ತಾಯಿಗೋಸ್ಕರ ಮಿಡಿಯುವ ಮಗು. ಇವರೆಡರ ಭಾವನಾತ್ಮಕ ತಾಕಲಾಟ ಸುಂದರವಾಗಿ ಕೆಲವು ದೃಶ್ಯಗಳಲ್ಲಿ ಭಿತ್ತರಗೊಂಡಿದೆ. 

ಅದರಲ್ಲೂ, ಜಗಳ ಮಾಡಿಕೊಂಡು ಮನೆಬಿಟ್ಟು ಹೋದ ಮಗನನ್ನು ನೆನೆದು, ಅಯ್ಯೋ ನಾ ತಪ್ಪು ಮಾಡಿದೆ, ಅವನನ್ನು ಅರ್ಥ ಮಾಡಿಕೊಳ್ಳಬೇಕಿತ್ತು ಎಂದು ಹಲಬುವ ಅಪ್ಪ, ಮತ್ತು ಅಕಾಲ ಮರಣಕ್ಕೆ ತುತ್ತಾಗಿ, ಕಡೆಯಲ್ಲಿ ತನ್ನ ಮಗನನ್ನು ನೋಡಬೇಕು ಎಂದು ಬಯಸಿ, ಮಗ ಬರುವ ಮುನ್ನ ಇಹಲೋಕ ತ್ಯಜಿಸಿದ ಮೇಲೆ, ಸುಮಾರು ಒಂದು ಮೂವತ್ತು ಸೆಕೆಂಡ್ ಏಕದಂ ಮೌನ. ತಾಯಿ ನೋಡಿದೆಯ ಮಗನೆ ನಿನ್ನ ಅಪ್ಪನನ್ನು ಎಂದಾಗ, ಮಗ ದೊಡ್ಡದಾಗಿ ಬಾಯಿ ತೆಗೆದು ಅಳುವ ಮೂಕ ದೃಶ್ಯ, ಇಡಿ ಚಿತ್ರದಲ್ಲಿ ಪುಟ್ಟಣ್ಣ ಅವರ ಕೈಚಳಕ ಕಾಣಿಸುವ ದೃಶ್ಯ ಇದು. 

ಕೆಲವೇ ಕೆಲವು ಪಾತ್ರಗಳು, ಆದರೆ ಎಲ್ಲರೂ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಭಾರತಿ, ಸುಂದರಕೃಷ್ಣ ಅರಸ್, ರಾಮಕೃಷ್ಣ, ಭರತ್ ಭಾಗವತರ್, ಆಶಾಲತ, ಮಾ, ಹಿರಣ್ಣಯ್ಯ, ರಾಜಾನಂದ್, ಪದ್ಮಾವಾಸಂತಿ ಎಲ್ಲರೂ ಎಷ್ಟು ಬೇಕೋ ಅಷ್ಟು ಅಭಿನಯ ನೀಡಿದ್ದಾರೆ. 

"ಆಕಾಶದುದ್ದಾದ ಮಾಮರವು ಚಂದ" ಮನುಜನ ಇಬ್ಬಗೆ ನೀತಿಯನ್ನು ಸುಂದರ ಹೋಲಿಕೆಗಳ ಮೂಲಕ ವಿಜಯನಾರಸಿಂಹ ಬರೆದ ಹಾಡನ್ನು ಎಸ್ ಜಾನಕಿ ಹಾಡಿದ್ದಾರೆ. 

"ದೇವರ ಒಲಿಸಲು" ತಾಯಿಯ ಮಹತ್ವವನ್ನು ಬಿಂಬಿಸುವ ಹಾಡು ಎಸ್ ಪಿ ಬಾಲಸುಬ್ರಮಣ್ಯಂ ಜೀವ ತುಂಬಿದ್ದಾರೆ 

"ಕಣ್ಣಾರೆ ಕಂಡೆ ನಾ" ವಾಣಿ ಜಯರಾಂ ಅವರ ಕಂಚಿನ ಕಂಠ ಇಷ್ಟವಾಗುತ್ತದೆ. 



ಕಥಾವಸ್ತು ಆ ಕಾಲಕ್ಕೆ ಒಂದು ಚೂರು ಮುಂದಾಗಿತ್ತು ಅನ್ನಿಸುತ್ತದೆ. ಕೆಲವೊಮ್ಮೆ ಸಾಗರ ಪ್ರಶಾಂತವಾಗಿದ್ದ ಸಾಗರ ಚಂಡಮಾರುತದ ಮುನ್ಸೂಚನೆ ನೀಡುವಂತೆ, ಪುಟ್ಟಣ್ಣ ಕಣಗಾಲ್ ತಮ್ಮ ಮುಂದಿನ ಚಿತ್ರ ರತ್ನಕ್ಕೆ ಈ ಚಿತ್ರದಿಂದಲೇ ಅನಿಯಾಗುತ್ತಿದ್ದರೋ ಏನೋ ಎನ್ನಿಸಿತು ನನಗೆ. 

Sunday, October 11, 2015

ಮನುಜನ ಭಾವಗಳನ್ನು ಮಧ್ಯೆ ಕೂರಿಸಿ ತೋರಿಸುವ ಧರಣಿ ಮಂಡಲ ಮಧ್ಯದೊಳಗೆ (1983)

ಕೆಲವೊಮ್ಮೆ ನಮ್ಮ ಮನಸ್ಸು ಗಲಿಬಿಲಿಯಾಗಿದ್ದಾಗ ಅಥವಾ ಕೆಲವೊಮ್ಮೆ ನಿರ್ಮಲವಾಗಿದ್ದಾಗ ಒಳಗಿನ ಬಿಳಿಯ ಮನ ಪಟಲದಲ್ಲಿ ವರ್ಣಮಯ ದೃಶ್ಯಗಳು ಕಾಣಸಿಗುತ್ತದೆ. ಆದರೆ ಅದು ಕ್ಷಣಿಕ ಮಾತ್ರ, ಆ ಪಟಲದಲ್ಲಿ ಮೂಡುತ್ತಿದ್ದ ದೃಶ್ಯಗಳನ್ನು ಮತ್ತೆ ಮತ್ತೆ ರೂಪಿಸಿಕೊಳ್ಳಲು ಬಲು ಕಷ್ಟ.

ಅಳತೆಗೂ ಮೀರಿದ ಕೆಲವು ಭಾವನಾತ್ಮಕ ದೃಶ್ಯಗಳು ಹಾಗೆ ಬಂದು ಹೋಗುವುದು ಉಂಟು. ಅಂಥಹ ಸಹಜವಾದ, ಆದರೆ ಈ ವ್ಯಾವಹಾರಿಕ ಪ್ರಪಂಚದಲ್ಲಿ ನಾನು, ನನ್ನದು, ನನ್ನದೇ ಎನ್ನುವ ಸ್ವಾರ್ಥ ಭಾವಗಳೇ ನಮ್ಮನ್ನು ಕಪಿ ಮುಷ್ಠಿಯಲ್ಲಿ ಇರಿಸಿಕೊಂಡು, ತನ್ನದೇ ರಕ್ತ ಹಂಚಿಕೊಂಡು ಹುಟ್ಟಿದ ಮಾಂಸದ ಮುದ್ದೆಯನ್ನು ಮೂಲೆ ಗುಂಪು ಮಾಡುವ ಶಕ್ತಿ ಹೊಂದಿಬಿಡುತ್ತದೆ.

ಈ ರೀತಿಯ ಒಂದು ಕಥೆಯನ್ನು ಸಿನಿಮಾ ತೆರೆಗೆ ಒಪ್ಪುವ ರೀತಿಯಲ್ಲಿ ಅಳವಡಿಸಿಕೊಳ್ಳುವುದು ಕಷ್ಟ ಸಾಧ್ಯದ ಕೆಲಸ. ಕಥೆ, ಚಿತ್ರಕಥೆ ಬರೆದು, ನಿರೂಪನೆಯನ್ನು ತಾಯಿ ಜಗನ್ಮಾತೆಯ ಅಭಯ ಹಸ್ತದ ವಾರದಲ್ಲಿ ಮೂಡಿಸಿರುವ ಚಿತ್ರವೇ "ಧರಣಿ ಮಂಡಲ ಮಧ್ಯದೊಳಗೆ" 

ಇದೊಂದು ಪುಟ್ಟಣ್ಣ ಅವರ ಎಲ್ಲಾ ಚಿತ್ರಗಳಿಗಿಂತ ಭಿನ್ನ. ಇದುವರೆಗೂ ಅವರು ತುಳಿದಿದ್ದ ದಾರಿಯಲ್ಲಿ ತುಸು ಹೊರಳಿ ಈ ಚಿತ್ರವನ್ನು ಮೂಡಿಸಿದ್ದಾರೆ. 

ಮೊದಲ ಮೊದಲಿಗೆ ಅರೆ ಏನಿದು ಹೀಗಿದೆ ಚಿತ್ರ ಎಂದು ನನಗನ್ನಿಸಿದ್ದು ಪ್ರಾಮಾಣಿಕವಾಗಿ ನಿಜ. ಆದರೆ ನೋಡುವಾಗ ಮತ್ತು ನೋಡಿದ ಕೆಲಹೊತ್ತಿನ ಮೇಲೆ, ಕೆಸರಲ್ಲಿ ಮುಳುಗುವ ಮನುಜನಂತೆ ನಿಧಾನವಾಗಿ ಈ ಚಿತ್ರದ ಒಳ ಹೂರಣ ಅರ್ಥವಾಗುತ್ತಾ ಹೋಗುತ್ತದೆ. 
ನಾಲ್ಕು ಮುಖ್ಯ ಪಾತ್ರಗಳು, ನಾಯಕ್, ದಳವಾಯಿ, ಪಾಳೆಗಾರ, ಮತ್ತು ಪುರುಷೋತ್ತಮ.   ಸಮಾಜಕ್ಕೆ ಬೇಕಾದ ನಾಲ್ಕು ಮುಖ್ಯ ಆಧಾರ ಸ್ಥಂಭಗಳು. 

ಪುರುಷೋತ್ತಮ ಎನ್ನುವ ಪಾತ್ರ ಎಂದಿಗೂ ಸೇಡು, ದ್ವೇಷಗಳ ಬತ್ತಳಿಕೆಯೊಳಗೆ ಇಳಿಯಬಾರದು, ಆದರೆ ಈ ಸಮಾಜದಲ್ಲಿ ಸೇಡಿನ ಮನೋಭಾವ ಹೊತ್ತು, ಅಲ್ಪ ಸ್ವಲ್ಪ ಹದ್ದುಬಸ್ತಿಗೆ ಬರುತ್ತಿದ್ದ ಇತರ ಮೂರು ಆಧಾರಗಳನ್ನು ತನ್ನ ಕೈಯಾರೆ ತಾನೇ ಹಾಳು ಮಾಡಿ, ತನ್ನನ್ನು ತಾನೇ ಹಳಿದುಕೊಳ್ಳುವಂಥಹ ಸ್ಥಿತಿಗೆ ಇಳಿಯಬೇಕಾಗುತ್ತದೆ. 

ಇಡಿ ಸಮಾಜವನ್ನು ಮುನ್ನಡೆಸಬೇಕಾದ ನಾಯಕ್ ಪಾತ್ರ, ಪರಿಸ್ಥಿಯ ಆಳ ತಿಳಿಯದೆ ತೆಗೆದುಕೊಳ್ಳುವ ಆತುರದ ನಿರ್ಧಾರ, ಮತ್ತು ವ್ಯಾವಹಾರಿಕ ಜ್ಞಾನವಿಲ್ಲದೇ, ವಿವೇಚನೆ ಇಲ್ಲದೆ ತೆಗೆದುಕೊಳ್ಳುವ ಕೆಲವು ತೀರ್ಮಾನಗಳು ತನ್ನನ್ನೇ ನಂಬಿಕೊಂಡು ನಿಲ್ಲುವ ತನ್ನ ಜನರಿಗೆ ಬರಿ ಬೇಡದ, ನಡೆಯದ ಆಶ್ವಾಸನೆ ಕೊಡುವಂತಹ ಪಾತ್ರವಾಗಿ ಬಿಡುತ್ತದೆ. 

ನಾಯಕ್ ತೆಗೆದುಕೊಳ್ಳುವ ನಿರ್ಧಾರವನ್ನು, ತೀರ್ಮಾನಗಳನ್ನು, ಸಲಹೆಗಳನ್ನು ಆಚರಣೆಗೆ ತರಬೇಕಾದ ಪಾಳೇಗಾರ್, ತನ್ನ ಆಸೆ ಆಮಿಷಗಳಿಗೆ, ತನ್ನ ಸ್ವಂತ ವಿಚಾರಗಳಿಗೆ, ಸೋತು, ಸಮಾಜಕ್ಕೆ ಆಘಾತ ಮಾಡುವ ಈ ಪಾತ್ರ ಕಡೆಗೆ ಕಾನೂನನ್ನು ಕೈಗೆ ತೆಗೆದುಕೊಂಡು ತಾನೂ ಬಾಳದೆ, ತನ್ನ ನಂಬಿದವರನ್ನು ಬಾಳಿಸದೆ, ಸಮಾಜಕ್ಕೆ ದೊಡ್ಡ ಆಘಾತ ನೀಡುವ ಪಾತ್ರವಾಗಿಬಿಡುತ್ತದೆ. 

ನಾಯಕ್ ಮತ್ತು ಪಾಳೇಗಾರ್ ಇಬ್ಬರಿಗೂ ಹೆಗಲು ಕೊಟ್ಟು ಸಮಾಜಕ್ಕೆ ರಕ್ಷಣೆ ನೀಡಬೇಕಾದ ದಳವಾಯಿ, ತಪ್ಪು ನಿರ್ಧಾರಗಳಿಂದ, ತನ್ನ ತೃಷೆಯನ್ನು ತಣಿಸಿಕೊಳ್ಳಲು ಅಮಾಯಕ ಪ್ರಜೆಯ ಮೇಲೆ ದಾಳಿ ಮಾಡಿ, ಕಡೆಗೆ ರಕ್ಷಣೆ ನೀಡುತ್ತೇನೆ ಎನ್ನುವ ಭರವಸೆ ನೀಡುತ್ತಾ, ತನ್ನ  ತಪ್ಪಿನ ಬಗ್ಗೆ ಪಶ್ಚಾತಾಪ ಪಟ್ಟು, ಅದನ್ನು ಸರಿಪಡಿಸಿಕೊಂಡು,  ಕೈ ಕೈ ಹಿಡಿದು ಸಾಗುವಾಗಲೇ, ನಾಯಕ್ ಮತ್ತು ಪಾಳೇಗಾರ್ ಅವರ ತಪ್ಪು ನಡೆಗಳಿಂದ ತನ್ನ ಪ್ರಾಣವನ್ನು ನೀಗಿ, ಕಡೆಗೆ ತಾನು ನೋಡಲಾಗದ ಉತ್ತಮ ಸಮಾಜವನ್ನು ತನ್ನ ಪ್ರಜೆ ನೋಡಲಿ ಎನ್ನುವ ಆಶಾವಾದದೊಡನೆ ಪ್ರಾಣ ನೀಗುತ್ತದೆ ಆ ಪಾತ್ರ. 

ಹೀಗೆ ಸಮಾಜದ ಹುಳುಕುಗಳನ್ನು ಎತ್ತಿ ತೋರಿಸಿ, ಅದನ್ನು ಸರಿಪಡಿಸಬೇಕಾದ ಕಂಬಗಳೇ ತಮ್ಮದೇ ಆದ ತಪ್ಪು ನಡೆಗಳಿಂದ ಎಡವಿ, ಮತ್ತೆ ಅದನ್ನು ಸರಿಪಡಿಸಿಕೊಳ್ಳುವ ಹಾದಿಯಲ್ಲಿದ್ದಾಗ ಮತ್ತೆ ಅದೇ ವಿಚಿತ್ರ ನಿರ್ಧಾರಗಳನ್ನು ತೆಗೆದುಕೊಂಡು ಸಮಾಜದ ಆರೋಗ್ಯವನ್ನು ಸುಧಾರಿಸದೆ ಹಪಹಪಿಗೊಳ್ಳುವ ಹಂತಕ್ಕೆ ಚಿತ್ರ ನಿಲ್ಲುತ್ತದೆ ಮತ್ತು ಇಂದಿನ ಸಮಾಜದ ಗುಣಮಟ್ಟವನ್ನು ತೋರಿಸುತ್ತದೆ. 

ಅಚಾರವೇ ಬೇರೆ ವಿಚಾರವೇ ಬೇರೆ... ಆಚಾರ ವಿಚಾರವಾಗಿ ಬದಲಾಗಬೇಕಾದರೆ ಅಥವಾ ವಿಚಾರ ಆಚಾರವಾಗಿ ಬದಲಾಗಬೇಕಾದರೆ ಬರಿ ಅಕ್ಷರಗಳ (ಅ ಮತ್ತು ವಿ) ಬದಲಾವಣೆ ಆದರೆ ಮಾತ್ರ ಸಾಲದು ಬದಲಿಗೆ ಎಲ್ಲರೂ ಯೋಚಿಸುವ ರೀತಿಯು ಬದಲಾಗಬೇಕು. ಅದೇ ಈ ಚಿತ್ರದ ಉದ್ದೇಶ ಮತ್ತು ಅಡಗಿರುವ ಸಂದೇಶ. 

ಶ್ರೀನಾಥ್, ಜೈಜಗದೀಶ್, ಚಂದ್ರಶೇಖರ್  ತಮಗೆ ವಹಿಸಿದ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಪುಂಡು ಹುಡುಗರಾಗಿ, ನಂತರ ಬದಲಾಗುವ ಹುಡುಗರಾಗಿ, ನಂತರ ಗೊಂದಲಕ್ಕೆ ಒಳಗಾಗುವ ಯುವ ಪೀಳಿಗೆಯನ್ನು ಪ್ರತಿನಿಧಿಸುವ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅದಕ್ಕೆ ಬೇಕಾದ ಅಭಿನಯ, ಸಂಭಾಷಣೆ ಹೇಳುವ ಧಾಟಿ ಎಲ್ಲವೂ ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ಸೊಗಸಾಗಿ ಅರಳಿದೆ.

ಟಿ ಎನ್ ಸೀತಾರಾಂ ಕೋಪತಾಪದ, ಮೈ ಪರಚಿಕೊಳ್ಳುವಂಥಹ ಸಂಧಿಗ್ಧ ಪಾತ್ರದಲ್ಲಿ ಮೊದಲು ನಂತರ ಸೇಡು ತೀರಿಸಿಕೊಳ್ಳುವ ಪಾತ್ರದಲ್ಲಿ ನೈಜತೆಯಿಂದ ಅಭಿನಯಿಸಿದ್ದಾರೆ. ಇವರ ಪಾತ್ರ ಚಿತ್ರಕ್ಕೆ ಇನ್ನೊಂದು ತಿರುವನ್ನು ಕೊಡುತ್ತದೆ. 

ಪೋಷಕ ಪಾತ್ರದಲ್ಲಿ ಬರುವ ಪದ್ಮಾವಾಸಂತಿ, ರೇಖಾ ರಾವ್ ಗಮನ ಸೆಳೆಯುತ್ತಾರೆ. ಚಿತ್ರಕ್ಕೆ ಒಂದು ದಿಕ್ಕು ಕೊಡುವ ಪಾತ್ರದಲ್ಲಿ ವಿಜಯಲಕ್ಷ್ಮಿ ಸಿಂಗ್ ತಮ್ಮ ಚೆಲುವಿಂದ, ಚಿನಕುರುಳಿ ಅಭಿನಯದಿಂದ ಚುಟುಕಾದ ಪಾತ್ರದಲ್ಲಿ ಮಿಂಚುತ್ತಾರೆ.  

ಈ ಚಿತ್ರದಲ್ಲಿ ಹಾಡುಗಳು ಮತ್ತೊಮ್ಮೆ ಮಿಂಚುತ್ತದೆ. 

ಸಿದ್ದಲಿಂಗಯ್ಯ ಅವರ ಸಾಹಿತ್ಯದ ಮೂರು ಹಾಡುಗಳು 
ಅ) "ಕಾಸನು ಬೀಸಿ ಒಲವಿನ ಬೆಲೆಯನು" ವಾಣಿಜಯರಾಂ ಅವರ ಸುಮಧುರ ಕಂಠದಲ್ಲಿ ಉತ್ತಮವಾಗಿ ಚಿತ್ರೀಕರಿಸಿದ್ದಾರೆ. 
ಆ) "ಗೆಳತಿ ಓ ಗೆಳತಿ" ಪ್ರಣಯಗೀತೆಯಾಗಿ ಎಸ್ ಪಿ ಬಾಲಸುಬ್ರಮಣ್ಯಂ ಗಾಯನದಲ್ಲಿ ಸೊಗಸಾಗಿದೆ 
ಇ) "ಕಲಿಗಾಲವಯ್ಯ ಕಲಿಗಾಲ" ಎಂದಿನ ಇಂದಿನ ಮುಂದಿನ ಪರಿಸ್ಥಿತಿಯನ್ನು ಹೇಳುವ ಗೀತೆಯಾಗಿ ಎಸ್ ಪಿ ಬಾಲಸುಬ್ರಮಣ್ಯಂ ಚಿತ್ರಿಕೃತವಾಗಿದೆ. 

ತನ್ನ ನೆಚ್ಚಿನ ಗೆಳೆಯ ವಿಜಯನಾರಸಿಂಹ ಅವರಿಂದ ಮೂಡಿಬಂದ "ಉಯ್ಯಾಲೆ ಆಡೋಣ ಬನ್ನಿರೋ" ಜಯಚಂದ್ರನ್ ಮತ್ತು ವಾಣಿ ಜಯರಾಂ ಅವರ ಉತ್ತಮ ಯುಗಳ ಗೀತೆಯಾಗಿದೆ. ಇಡಿ ಹಾಡನ್ನು ಉಯ್ಯಾಲೆಗಳ ಮಧ್ಯೆದಲ್ಲಿ ಚಿತ್ರಿಕರಿಸಿರುವುದು ವಿಶೇಷ. 

ಇಡಿ ಚಿತ್ರಕ್ಕೆ ಸಂಗೀತ ಮೆರುಗು ನೀಡಿರುವ ವಿಜಯಭಾಸ್ಕರ್, ಹಿನ್ನೆಲೆ ಸಂಗೀತದಲ್ಲಿ ಗಮನ ಸೆಳೆಯುತ್ತಾರೆ. ಆಣೆಕಟ್ಟು ಕಟ್ಟುವ ಪ್ರದೇಶವನ್ನು ತೋರಿಸುವಾಗೆಲ್ಲ ಬರುವ ಸಂಗೀತ ಅತ್ಯುತ್ತಮ. ಒಂದು ರೀತಿಯ ಆಶಾಭಾವವನ್ನು ಹೊತ್ತು ತರುತ್ತದೆ. 

ಬಿ ಎಸ್ ಬಸವರಾಜ್ ಭಾವುಕ ಸನ್ನಿವೇಶಗಳ ಛಾಯಾಗ್ರಹಣ ಮಾಡುತ್ತಲೇ ನಿಧಾನವಾಗಿ ನಮ್ಮ ಮನದೊಳಗೆ ಹೊಕ್ಕು ಸಾಗುವ ಸೂರ್ಯಾಸ್ತ ಮತ್ತು ಸೂರ್ಯೋದಯದ ದೃಶ್ಯಗಳು, ಅಣೆಕಟ್ಟಿನ ಆಯಾತ ಪ್ರದೇಶವನ್ನು ತೋರಿಸುವ ರೀತಿ ಸೂಪರ್ ಸೂಪರ್. 

ಚಿತ್ರದ ಆರಂಭ ಪುಟ್ಟಣ್ಣ ಅವರ ಎಲ್ಲಾ ಚಿತ್ರಗಳ ವಿಶೇಷ. ಭೂಮಿ ತಿರುಗುತ್ತದೆ ಅದರ ಜೊತೆಯಲ್ಲಿಯೇ ಮನುಜ ಯೋಚಿಸುವ ಲಹರಿಯೂ ಸಹ ಎನ್ನುವ ಭಾವ ಹೊತ್ತು ತರುವ ರೀತಿಯಲ್ಲಿ ಚಿತ್ರದ ಹೆಸರು, ತಾರಾಗಣ, ತಾಂತ್ರಿಕವರ್ಗ ಎಲ್ಲವೂ ಒಂದೇ ಚೌಕಟ್ಟಿನೊಳಗೆ ಸಾಗುತ್ತಾ ಹೋಗುತ್ತದೆ. 

ಇಡಿ ಚಿತ್ರ ಒಂದು ಗುಟುಕಿಗೆ ಒಳಗೆ ಹೋದರೂ, ಅದರ ಪರಿಣಾಮ ನಿಧಾನವಾಗಿ ಮನದೊಳಗೆ ಇಳಿಯುತ್ತಾ ಹೋಗುತ್ತದೆ. 

ಒಂದು ಪೂರ್ತಿ ವಿಭಿನ್ನ ಎನ್ನಿಸುವ ಚಿತ್ರ ನೀಡಿರುವ ಪುಟ್ಟಣ್ಣ ಕಣಗಾಲ್ ಅವರು ಒಂದು ದೃಶ್ಯದಲ್ಲಿ ಬಂದು ಹೋಗುವುದು ವಿಶೇಷ. 

ಒಂದು ಮನದಾಳಕ್ಕೆ ಇಳಿಯುವ ಚಿತ್ರವನ್ನು ನೋಡಿದ,  ಅನುಭವಿಸಿದ, ಮತ್ತು ಯೋಚನಾಲಹರಿಗೆ ಕೆಲಸ ತಂದು ಕೊಟ್ಟ ತೃಪ್ತಿ ಈ ಚಿತ್ರ ನೋಡಿದ ಮೇಲೆ ನನಗೆ ದಕ್ಕಿತು. 


Saturday, October 3, 2015

ಮನದ ಸರೋವರವನ್ನು ಕೆದಕುವ ಮಾನಸ ಸರೋವರ (1982)

ಈ ಸಿನಿಮಾ ತುಂಬಾ ಕಾಡಿತ್ತು ಆ ಕಾಲದಲ್ಲಿಯೇ. ಮೊದಲ ಬಾರಿಗೆ ಈ ಚಿತ್ರವನ್ನು ದೂರದರ್ಶನದಲ್ಲಿ ನೋಡಿದಾಗ ನನಗೆ ಸುಮಾರು ಹದಿನೈದು ವರ್ಷಗಳು ಇರಬಹುದು. 

ಆ ವಯಸ್ಸು ಒಂದು ರೀತಿಯ ಬದಲಾವಣೆಯ ಪರ್ವವಾಗಿರುತ್ತದೆ. ಮೊದಲಿಂದಲೂ ಸಿನಿಮಾ ನೋಡುವ ಮತ್ತು ಅದರ ಒಳಗೆ ಕೂತು ನೋಡುವ ಒಂದು ವಿಚಿತ್ರ ರೋಗವಿದ್ದದರಿಂದ ಬಹುಶಃ ಈ ಚಿತ್ರ ಇನ್ನಷ್ಟು ಕಾಡಿತ್ತು ಎನ್ನಿಸುತ್ತದೆ.  

ಅದಾದ ಮೇಲೆ ಹಲವಾರು ಬಾರಿ ಈ ಚಿತ್ರವನ್ನು ನೋಡಿದ್ದೇನೆ. ಪ್ರತಿಬಾರಿಯೂ ನನಗೆ ಮೊಟ್ಟಮೊದಲು ನೋಡಿದ ಅನುಭವ ಹೇಗೆ ಇರುತ್ತದೆಯೋ ಅದೇ ಅನುಭವ. ಒಂದೂ ಚೂರು ಬದಲಾವಣೆ ಇಲ್ಲ. 
ಹಲವಾರು ಚಿತ್ರಗಳು ಪ್ರತಿ ಬಾರಿ ನೋಡಿದಾಗಲೂ ಹಲವಾರು ರೀತಿಯಲ್ಲಿ ಕೈಗೆ ಎಟುಕುತ್ತದೆ, ಆದರೆ ಈ ಚಿತ್ರ ಪ್ರತಿ ಸಾರಿ ನೋಡಿದ ಮೇಲೆ ಇನ್ನಷ್ಟು ಆಳಕ್ಕೆ ಇಳಿಯುತ್ತದೆ ಮತ್ತು ಅದೇ ಮೊದಲ ಅನುಭವವನ್ನು ಕಣ್ಣ ಮುಂದೆ ತಂದಿಡುತ್ತದೆ. 

ಚಿತ್ರದ ಆರಂಭ ನನಗೆ ಇನ್ನೂ ಕಾಡುತ್ತದೆ.  ಮನಸ್ಸಿನ ಬಗ್ಗೆ ಒಂದೆರಡು ವಾಕ್ಯಗಳು ಮನಸ್ಸಿಗೆ ತಾಕಿದರೆ, ಹೂವಿನ ಜೊತೆಯಲ್ಲಿ ಹೆಸರನ್ನು ತೋರಿಸುತ್ತಾ, ಪ್ರತಿ ಬಾರಿಯೂ ಅಲೆಗಳು ಬಂದು ಆ ಅಕ್ಷರಗಳನ್ನು ಅಳಿಸಿಹಾಕುವಂತಹದು, ನಮ್ಮ ಜೀವನದಲ್ಲಿ ಎಷ್ಟೋ ಮಂದಿ ಬರುತ್ತಾರೆ, ನೆನಪು ಉಳಿಸುತ್ತಾರೆ, ಅಳಿಸುತ್ತಾರೆ, ಆದರೆ ಕಾಲ ಮುಂದೆ ಸಾಗುತ್ತಲೇ ಇರುತ್ತವೆ, ಅಲೆಗಳು ಬರುತ್ತಲೇ ಇರುತ್ತವೆ ಎಂಬ ಸೂಕ್ಷ್ಮ ಸಂದೇಶ ಹೊತ್ತು ತರುತ್ತದೆ. 

ಹುಣ್ಣಿಮೆಯ ಚಂದ್ರ, ಆವ ಚೆಲ್ಲುವ ಬೆಳದಿಂಗಳು, ಪ್ರೀತಿ ಪ್ರೇಮ ಪ್ರಣಯ ಇವುಗಳ ಉಗಮಸ್ಥಾನ, ಚಂದ್ರನ ಕಿರಣಗಳು ಮನಸ್ಸಿನ ಮೇಲೆ ಬಲು ಪ್ರಭಾವ ಬೀರುತ್ತದೆ. ಕಾವ್ಯಮಯವಾದ ಮನಸ್ಸಿನ  ನಾಯಕ ಆ ಬೆಳದಿಂಗಳ ಚಂದ್ರನ ಬೆಳಕಲ್ಲಿ ಕೂತು, ತೂಗಾಡುವ ಮನಸ್ಸನ್ನು ಪ್ರತಿಬಿಂಬಿಸುವ, ಉಯ್ಯಾಲೆಯಲ್ಲಿ ಜೀಕುತ್ತಾ ಕೂತಿದ್ದಾಗ ಏನೋ ಒಂದು ಅದ್ಭುತ ವಿಷಯ ಹೊಳೆಯುತ್ತದೆ. 

ಅದನ್ನು ಅಷ್ಟೇ ಪ್ರೀತಿಯಿಂದ ತನ್ನ ಮಡದಿಗೆ ಹೇಳಬಂದಾಗ ಆಕೆ ಭಾವನಾತ್ಮಕವಾಗಿ ಸ್ಪಂದಿಸದೇ, ವ್ಯಾವಹಾರಿಕ ಜಗತ್ತಿನ ಸೂತ್ರದಲ್ಲಿ ಬಂಧಿಯಾಗಿ, ತನಗೆ ಲಾಭ ತರದ ಈ ಕಾವ್ಯಮಯ ಭಾಷೆ ಅನಗತ್ಯ ಎನ್ನುವ ಮಾತುಗಳನ್ನು ಹೇಳುತ್ತಾಳೆ. 

ಅಲ್ಲಿಂದ ಶುರು ನಾಯಕನ ಮನಸ್ಸು ಅವನ ಜೊತೆ ಮಾತಾಡಲು ಅನುವಾಗುತ್ತದೆ. ಅದ್ಭುತ ದೃಶ್ಯ ಕಲ್ಪನೆ. ನಮ್ಮ ಮನಸ್ಸು ನಮಗೆ ಮಾರ್ಗದರ್ಶಿ ಎನ್ನುವ ಮಾತು ಎಷ್ಟು ನಿಜ. 

ಮನಸ್ಸು ಒಂದು ಕಡೆಯಲ್ಲಿ ಸಹಾನುಭೂತಿ ತೋರಿದರೆ, ತನ್ನ ಮನದಲ್ಲಿ ಕೂತ ಮಡದಿಯಿಂದ ತಿರಸ್ಕಾರ ಸಾಕು ಎನ್ನಿಸಿ ಮನೆ ಬಿಟ್ಟು ಹೊರಡುತ್ತಾನೆ. ಆಗ ಇನ್ನೊಂದು ಅದ್ಭುತ ಜಗತ್ತು ನಾಯಕನ ಮನಸ್ಸಿಗೆ ಸಿಗುತ್ತದೆ. 

ಜಿ ಎಸ್ ಶಿವರುದ್ರಪ್ಪ ಅವರ ಅದ್ಭುತ ಕವಿತೆ "ವೇದಾಂತಿ ಹೇಳಿದನು" ಪಿ ಬಿ ಶ್ರೀನಿವಾಸ್ ಅವರ ಸಿರಿಕಂಠದಲ್ಲಿ ಅಷ್ಟೇ ಅದ್ಭುತವಾಗಿ ಮೂಡಿ ಬಂದಿದೆ. ಕಾಡಿನಲ್ಲಿ ಕಾರಿನಲ್ಲಿ ಹೋಗುತ್ತಾ ಜೋರಾಗಿ ಈ ಹಾಡನ್ನು ಕೇಳಿದರೆ ಸಿಗುವ ಆನಂದ ಹೇಳಲಿಕ್ಕೆ ಆಗೋಲ್ಲ (ನಾ ಹಲವಾರು ಬಾರಿ ಒಬ್ಬನೇ ಪಯಣ ಮಾಡುವಾಗ.. ಈ ರೀತಿಯ ಹುಚ್ಚು ಸಾಹಸಕ್ಕೆ ಕೈ ಹಾಕುವುದು ಉಂಟು) 
ಈ ಹಾಡಿನಲ್ಲಿರುವ ಸತ್ವವನ್ನು ವಿಜಯಭಾಸ್ಕರ್ ಸಂಗೀತದಲ್ಲಿ ಅದ್ದಿ ಅದ್ದಿ ತೆಗೆದಿದ್ದಾರೆ. ಎಷ್ಟು ಬಾರಿ ಕೇಳಿದರೂ ಬೋರ್ ಅನ್ನಿಸಿದ ಅನೇಕ ಹಾಡುಗಳಲ್ಲಿ ಇದು ಒಂದು. ಈ ಹಾಡನ್ನು ಚಿತ್ರೀಕರಿಸಿದ ರೀತಿಯೂ ಸುಂದರ. 

ಒಂದು ರಕ್ಷಾ ಬೇಲಿ ಇರುವ ಮನೆಯಿಂದ ಹೊರಡುವ ನಾಯಕನ ಮನೆಯ ಎದುರು ದಾರಿಗಳು ಕವಲಾಗಿ ಎರಡಾಗುತ್ತವೆ. ನಾಯಕನ ಬಾಳಿನ ಪಥದಲ್ಲೂ ಇಬ್ಬಗೆಯ ಹಾದಿ ಎದುರಿಗೆ ಇದೆ ಎನ್ನುವ ಸೂಚ್ಯ ಅದು. 
ಅಲ್ಲಿಂದ ಹೊರಡುವ ಅವನ ಕಾರು, ತಂಪಾದ ಹಸಿರು ಕಾಡಿನ ಮಧ್ಯೆ ಸಾಗುವುದು, ಹಿನ್ನೆಲೆಯಲ್ಲಿ ಹಾಡು ಬರುವುದು ವಾಹ್ ಎನ್ನಿಸುತ್ತದೆ. ಎಂಥಹ ಸಮಸ್ಯೆಗೂ ಪ್ರಕೃತಿಯೇ ಅದ್ಭುತ ವೈದ್ಯ ಎನ್ನುವುದರ ಸುಂದರ ನಿರೂಪಣೆಯ ಭಾವ ಈ ಹಾಡಿನಲ್ಲಿ ಇದೆ. ಬೇಲಿಯಿರುವ ಮನೆಯಿಂದ, ವಿಹಂಗಮ ಪ್ರಕೃತಿಯ ಮಧ್ಯೆ ಯಾವುದೇ ಬಂಧನವಿರದ ಮುಕ್ತವಾಗಿರುವ ಮನೆಗೆ ಬರುತ್ತಾನೆ. ಈ ಹಾಡು ನೋಡಬೇಕು ಕೇಳಬೇಕು ಆಗಲೇ ಅದರ ಸತ್ವ ಅರಿವಾಗುವುದು. 

ಮಿತ್ರವೃಂದ ಲಾಂಛನದಲ್ಲಿ ತಯಾರಾದ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ನಿರ್ವಹಣೆ ಮತ್ತು ನಿರೂಪಣೆ ಪುಟ್ಟಣ್ಣ ಕಣಗಾಲ್ ಅವರದ್ದು. ತನ್ನ ಸಾಧನೆ ಏನೂ ಅಲ್ಲ, ಅದಕ್ಕೆಲ್ಲ ಕಾರಣ ಜಗನ್ಮಾತೆ ಎನ್ನುವ ತತ್ವವನ್ನು ದಿಗ್ದರ್ಶನ - ಜಗನ್ಮಾತೆ ಎಂದು ತೋರುವ ಮೂಲಕ, ತಾನು ಯಶಸ್ಸಿನ ಶಿಖರದಲ್ಲಿದ್ದರೂ ಅದಕ್ಕೆ ಕಾರಣ ಕಾಣದ ಆ ಮಹಾನ್ ಶಕ್ತಿ ಎಂಬ ಅರಿವು ಮೂಡಿಸುತ್ತಾರೆ. 

ಮೂರು ಮಂದಿ ಮಿತ್ರರ ಜೊತೆಗೂಡಿ (ವರ್ಗಿಸ್, ಕಮಲಾಕರ್, ಗೀತ ಶ್ರೀನಾಥ್) ನಿರ್ಮಿಸಿದ ಚಿತ್ರವಿದು. ಚುರುಕಾದ ಸಂಭಾಷಣೆ ಪುಟ್ಟಣ್ಣ ಅವರ ಎಲ್ಲಾ ಚಿತ್ರಗಳ ಆಸ್ತಿ, ಈ ಚಿತ್ರದಲ್ಲಿ ಆ ಹೊಣೆ ಹೊತ್ತವರು ಟಿ ಎನ್ ಸೀತಾರಾಮ್. ಪುಟ್ಟಣ್ಣ ಅವರ ಅನೇಕ ಚಿತ್ರಗಳಿಗೆ ಛಾಯಾಗ್ರಾಹಕರಾಗಿದ್ದ ಬಿ ಎಸ್ ಬಸವರಾಜ್ ಮತ್ತೊಮ್ಮೆ ಪುಟ್ಟಣ್ಣ ಅವರ ಭಾವಗಳಿಗೆ ತಕ್ಕಂತೆ ದೃಶ್ಯಗಳನ್ನು ಚಿತ್ರೀಕರಿಸಲು ಜೊತೆಯಾಗಿದ್ದರು.  

ಒಂದು ಅಡಿಗೆ ಸಿದ್ಧಮಾಡುವಾಗ, ಅಥವಾ ಯಾವುದೇ ಕೆಲಸ ಮಾಡುವಾಗ, ಅದರ ಬಗ್ಗೆ ಪುಟ್ಟ ಪುಟ್ಟ ವಿವರಗಳು, ವಿಧಾನಗಳು ಇವೆಲ್ಲಾ ಸರಿಯಾಗಿ ಸಿಕ್ಕಿ, ಅದನ್ನು ಹೇಳಿಕೊಡುವ ಒಬ್ಬರು ಜೊತೆಗಿದ್ದರೆ ಪವಾಡ ಸೃಷ್ಟಿಸಬಹುದು ಎನ್ನುತ್ತದೆ ಮಾತು. ಅದನ್ನು ಈ ಚಿತ್ರದಲ್ಲಿ ನೋಡಬಹುದು. ಪ್ರತಿಯೊಬ್ಬ ಕಲಾವಿದರು ಪಾತ್ರಗಳಿಗೆ ಎಷ್ಟು ಬೇಕು ಅಷ್ಟೇ ಅಭಿನಯ ನೀಡಿದ್ದಾರೆ ಅಥವಾ ಪಾತ್ರ ಬೇಡುವಷ್ಟು ಅಭಿನಯ ನೀಡಿದ್ದಾರೆ. 

ಅಡಿಗೆ ಕೆಲಸಮಾಡಿಕೊಂಡು ಮನೆ ನೋಡಿಕೊಳ್ಳುವ ಪಾಂಡು ಅಂಕಲ್ ಪಾತ್ರ, ನಾಯಕನ ತೋಟವನ್ನು ತಮ್ಮ ತಂಗಿಯನ್ನು ಮುಂದೆ ಇಟ್ಟುಕೊಂಡು ಕಬಳಿಸಲು ಹೊಂಚು ಹೂಡುವ ಲಂಬಾಣಿ ಹುಡುಗರ ಪಾತ್ರ, ಲಂಬಾಣಿ ಹುಡುಗಿಯಾಗಿ ಅಭಿನಯಿಸಿರುವ ವೈಶಾಲಿ ಕಾಸರವಳ್ಳಿ, ನಾಯಕಿಯ ತಂದೆಯಾಗಿ ಬರುವ ಜಿ ವಿ ಶಿವಾನಂದ್.. ಹೀಗೆ ಎಲ್ಲರಲ್ಲಿಯೂ ತಮಗೆ ಬೇಕಾದಷ್ಟೇ ಅಭಿನಯ ಪಡೆಯುವಲ್ಲಿ ಯಶಸ್ವೀ ಆಗಿದ್ದಾರೆ ಪುಟ್ಟಣ್ಣ ಕಣಗಾಲ್. 

"ಹಾಡು ಹಳೆಯದಾದರೇನು" ಮತ್ತೊಮ್ಮೆ ಜಿ ಎಸ್ ಶಿವರುದ್ರಪ್ಪ ಅವರ ಕವಿತೆಯನ್ನು ಸಂಗೀತದಲ್ಲಿ ಅಳವಡಿಸಿರುವುದು ಇಷ್ಟವಾಗುತ್ತದೆ. ವಾಣಿ ಜಯರಾಂ ಭಾವ ತುಂಬಿ ಹಾಡಿದ್ದಾರೆ, ಈ ಹಾಡನ್ನು ಚಿತ್ರಿಸಿರುವ ರೀತಿ ಇಷ್ಟವಾಗುತ್ತದೆ. ಹಸಿರಿನ ಮಧ್ಯೆ ಕಂಗೊಳಿಸುವ ಹಿತ ಮಿತ ಬೆಳಕಿನಲ್ಲಿ ಸೂಪರ್ ಎನ್ನಿಸುತ್ತದೆ. 

ನಾಯಕಿಗೆ ಚಿಕಿತ್ಸೆ ನೀಡುವಲ್ಲಿ ಬೇಕಾದ ತಾಳ್ಮೆ, ಸಂಯಮ, ಹಿತ ಮಿತ ನುಡಿಗಳು, ಮಗುವನ್ನು ಪಾಲಿಸುವ ಅಮ್ಮನಂತಹ ಪಾತ್ರದಲ್ಲಿ, ಕೆಲವೊಮ್ಮೆ ಮುಗ್ಧ ಮಗುವೆ ಆಗುವ ಪಾತ್ರದಲ್ಲಿ ಶ್ರೀನಾಥ್ ಸ್ಮರಣೀಯ ಅಭಿನಯ ನೀಡಿದ್ದಾರೆ. ಮಾನಸಿಕ ರೋಗತಜ್ಞನ ಪಾತ್ರದಲ್ಲಿ ಅವರ ಅಭಿನಯ ಅದ್ಭುತ. ಆ ಪಾತ್ರಕ್ಕೆ ಬೇಕಾದ ಆಂಗೀಕ ಅಭಿನಯ, ವೇಷ ಭೂಷಣ, ತಾನು ಸರಿ ಎನ್ನುತ್ತಾ ಮಾತಾಡುವ ಶೈಲಿ ಬಹುಕಾಲ ನೆನಪಲ್ಲಿ ಉಳಿಯುತ್ತದೆ. ನಿರ್ದೇಶಕರ ಅಣತಿಯಂತೆ ನಟಿಸಿರುವ ಈ ಪಾತ್ರ ಅದ್ಭುತವಾಗಿ ಮೂಡಿ ಬಂದಿದೆ. 

ಕುಂಬಾರ ಒಂದು ಮಣ್ಣಿನ ಮುದ್ದೆಯನ್ನು ತಿರುಗುವ ಚಕ್ರದಮೇಲೆ ಹಾಕಿ, ಆ ಮಣ್ಣಿಗೆ ಸುಂದರ ರೂಪವನ್ನು ಕೊಡುವ ಹಾಗೆ ಪದ್ಮಾವಾಸಂತಿ ಅವರಿಂದ ಅಭಿನಯ ಕಲೆಯನ್ನು ಅನಾವರಣಗೊಳಿಸಿರುವುದು ಪುಟ್ಟಣ್ಣ ಅವರ ತಾಕತ್. ಬಹುಶಃ ಪದ್ಮಾವಾಸಂತಿ ಈ ಚಿತ್ರದಲ್ಲಿ ಅಭಿನಯಿಸಿರುವಂತೆ ಇನ್ಯಾವ ಚಿತ್ರಗಳಲ್ಲೂ ಅಭಿನಯಿಸಲಿಕ್ಕೆ ಅವಕಾಶ ಸಿಗಲಿಲ್ಲ ಅಂದರೆ ತಪ್ಪಿಲ್ಲ ಎನುವ ಅಭಿಪ್ರಾಯ ನನ್ನದು. 

"ಮಾನಸ ಸರೋವರ" ಹಾಡು ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ವಾಣಿ ಜಯರಾಂ ಅವರ ಧ್ವನಿಯಲ್ಲಿ ಅತ್ಯುತ್ತಮವಾಗಿ ಮೂಡಿ ಬಂದಿದೆ. ಸುಂದರ ಪರಿಸರ, ಈ ಹಾಡು ಶುರುವಾಗುವ ಮುಂಚೆ ಬರುವ ವೇದ ಮಂತ್ರಗಳು ಈ ಹಾಡನ್ನು ನೋಡುವಾಗ ಒಂದು ಭಕ್ತಿ ಭಾವದ ಜೊತೆಯಲ್ಲಿ ಒಂದು ಮಧುರ ಭಾವ ನೀಡುತ್ತದೆ. 

"ಚಂದ ಚಂದ"  ಹಾಡು, ಅದರ ಆರಂಭಿಕ ಸಂಗೀತ ಹುಚ್ಚು ಹಿಡಿಸುತ್ತದೆ. ಜಯಚಂದ್ರನ್ "ಚಂದ ಚಂದಾ" ಎಂದು ಶುರು ಮಾಡುವ ರೀತಿ ವಾಹ್. ಸಾಹಿತ್ಯ ಎಂ ಎನ್ ವ್ಯಾಸರಾವ್ ಅವರದ್ದು, ಈ ಹಾಡು ಇಷ್ಟವಾಗಲು ಕಾರಣ, ಸರಳ ಸಂಗೀತ, ರಾಮಕೃಷ್ಣ ಅವರ ಹುಡುಗು ಹುಡುಗು ನೃತ್ಯ, ಸುಂದರ ಹೊರಾಂಗಣ. 

ಈ ಚಿತ್ರದ ಆರಂಭದಿಂದ ಈ ಹಾಡಿನ ತನಕ ಬಿರು ಬಿಸಿಲ ನಾಡು ಎಂದೇ ಖ್ಯಾತವಾದ ಬಳ್ಳಾರಿಯಲ್ಲಿ ಚಿತ್ರಿಕರಿಸಿದ್ದರೂ, ಆ ಬಿಸಿಲಿನ ತಾಪ ಎಲ್ಲೂ ಕಾಣದ ರೀತಿಯಲ್ಲಿ ಸುಂದರ ಹಸಿರಿನಲ್ಲಿ ಆಹ್ಲಾದಕರ ರೀತಿಯಲ್ಲಿ ಈ ದೃಶ್ಯದ ತನಕ ಚಿತ್ರೀಕರಿಸಿದ್ದಾರೆ. ಈ ಹಾಡು ಬರುವ ಹೊತ್ತಿಗೆ ನಾಯಕನ ಹೃದಯಕ್ಕೆ ಘಾಸಿಯಾಗಿರುತ್ತದೆ. ಮನಸ್ಸಿನ ಹಸಿರಿನ ಕಾಡು ಬೆಂಗಾಡಾಗಳು ಸಿದ್ಧವಾಗಿರುತ್ತದೆ. ಹೃದಯ ಒಡೆದು ಚೂರಾಗಿರುತ್ತದೆ. ಅಂಥಹ ಸಂದರ್ಭದಲ್ಲಿ ಬರುವ ಹಾಡು "ನೀನೆ ಸಾಕಿದ ಗಿಣಿ". 

ವಿಜಯನಾರಸಿಂಹ ಅವರ ಹೃದಯ ಹಿಂಡುವ ಸಾಹಿತ್ಯಕ್ಕೆ ಜೊತೆಯಾಗಿ ನಿಲ್ಲುತ್ತದೆ ಸಂಗೀತ ಮತ್ತು ಛಾಯಾಗ್ರಹಣ. ಕ್ಯಾಮೆರ ಚಾಲನೆ, ಕ್ಯಾಮೆರಾದ ಓಡಾಟ ಈ ಹಾಡಿನಲ್ಲಿ ನನಗೆ ಬಲು ಇಷ್ಟವಾಗುತ್ತದೆ. ಒಂದು ಹೃದಯ ಇನ್ನೊಂದು ಹೃದಯಕ್ಕೆ ಹತ್ತಿರವಾಗಬೇಕು ಎನ್ನುವಷ್ಟರಲ್ಲಿ ಮತ್ತೆ ದೂರ ಹೋಗುತ್ತದೆ. ಅದ್ಭುತವಾದ ರೀತಿಯಲ್ಲಿ ಚಿತ್ರಿಕರಣವಾಗಿದೆ. 

ನಾಯಕನ ಮನಸ್ಸು ಹೇಳುವ ಮಾತು "ಇವಳಿಗೆ ಬೇಕಾಗಿರುವುದು ಆನಂದ ಕಣೋ ಸಂತೋಷ ಅಲ್ಲ" ಅದ್ಭುತ ಮಾತುಗಳು. ಆನಂದ ನಿರಂತರದ ಭಾವ, ಸಂತೋಷ ಕೇವಲ ಕ್ಷಣ ಮಾತ್ರ ಸಿಗುವ ಸುಂದರ ಅನುಭವ. ಇಡಿ ಚಿತ್ರ ಈ ಮೇಲಿನ ಸಾಲಿನ ಮೇಲೆ ನಿಂತಿದೆ. 

ಈ ಚಿತ್ರದಲ್ಲಿ ಅಭಿನಯಿಸಿರುವ ಮೂವರು ಮೂರು ಆಧಾರ ಸ್ಥಂಭಗಳು. 

ಶ್ರೀನಾಥ್ : ಚಿತ್ರಜೀವನದಲ್ಲಿಯೇ ಒಂದು ಮೈಲಿಗಲ್ಲು, ಆನಂದನ ಪಾತ್ರದಲ್ಲಿ ಕೈಕಟ್ಟಿಕೊಂಡು ಓಡಾಡುವ, ಕನ್ನಡಕವನ್ನು ಆಗಾಗ ಸರಿಪಡಿಕೊಳ್ಳುವ ರೀತಿ, ಸಿಲ್ಲಿ ಫೆಲೋ ಸಿಲ್ಲಿ ಫೆಲ್ಲೋ ಎನ್ನುವ ಮಾತುಗಳು, ಅಪಾರ ಚಿಂತನೆ ನಡೆಸಿ ಮನಸ್ಸು ಹಣ್ಣಾಗಿದೆ ಎನ್ನುವಂಥಹ ಮನೋಜ್ಞ ಅಭಿನಯ ಈ ಪಾತ್ರದಲ್ಲಿ ಕಾಣಸಿಗುತ್ತದೆ 

ಪದ್ಮಾವಾಸಂತಿ: ವಾಸಂತಿ ಎನ್ನುವ ಮಾನಸಿಕ ಸ್ಥಿಮಿತ ಕಳೆದುಕೊಂಡ ಪಾತ್ರದಲ್ಲಿ ಅತಿರೇಕಕ್ಕೆ ಹೋಗದೆ, ನಿಭಾಯಿಸಿರುವ ರೀತಿ, ತನ್ನ ಕಾಯಿಲೆ ಗುಣವಾದಮೇಲೆ ಹಿಂದಿನ ಪಾತ್ರದ ಪರಿಣಾಮ ಕೊಂಚವೂ ಇರದ ಹಾಗೆ ಅಭಿನಯ ಇಷ್ಟವಾಗುತ್ತದೆ. 

ರಾಮಕೃಷ್ಣ : ಚಿತ್ರ ಒಂದು ನಿಟ್ಟಿನಲ್ಲಿ ಓಡುತ್ತಿದೆ ಎಂದು ಅಂದುಕೊಂಡಾಗ ಪ್ರತ್ಯಕ್ಷವಾಗುವ ಪಾತ್ರ ಚಿತ್ರದ ದಿಕ್ಕನ್ನೇ ಬದಲಿಸಿಬಿಡುತ್ತದೆ. ತನಗೆ ಅರಿವಿಲ್ಲದೆ ವಾಸಂತಿ ಪಾತ್ರವನ್ನು ಪ್ರೀತಿಸುತ್ತಾ, ಅರಿವಿಲ್ಲದೆ ನಾಯಕನ ಭಾವಗಳಿಗೆ ಬರೆ ಎಳೆಯುವ ಪಾತ್ರದಲ್ಲಿ ಲೀಲಾಜಾಲವಾಗಿ ನಟಿಸಿದ್ದಾರೆ. 

ಈ ಮೂವರು ಈ ಮೇಲಿನ ಪಾತ್ರ ಮಾಡಲಿಕ್ಕೆ ನಟಿಸಿದ್ದಾರೆಯೋ ಅನ್ನುವಷ್ಟು ಸಹಜವಾಗಿ ಮೂಡಿ ಬಂದಿದೆ. 

ಈ ಪಾತ್ರಗಳ ಮತ್ತು ಮನೋಜ್ಞ ಕಥೆಯ ಕತೃ ಪುಟ್ಟಣ್ಣ ಕಣಗಾಲ್ ಅವರಿಗೆ ಒಂದು ದೊಡ್ಡ ಸಲಾಂ ಈ ಲೇಖನದ ಮೂಲಕ!!!

Sunday, September 13, 2015

ಅಂತರಂಗವನ್ನು ಗುಪ್ತಗಾಮಿನಿಯಾಗಿ ಹರಿಸುವ - ರಂಗನಾಯಕಿ (1981)

ಪುಟ್ಟಣ್ಣ ಕಣಗಾಲ್ ಹತ್ತಿರ ಕ್ಷಮೆ ಕೇಳಿ ಕೇಳಿ ಸಾಕಾಯ್ತು.. ಇರಲಿ ಅವರು ಕ್ಷಮಿಸುವಂಥಹ ಧಾರಾಳ ಮನಸ್ಸಿನವರು.. ಅವರ ಕ್ಷಮೆಯಾಚನೆಯೊಂದಿಗೆ ಮತ್ತೆ ಅವರ ಚಿತ್ರರತ್ನಗಳ ಕಡೆಗೆ ನನ್ನ ಪಯಣ.

ದೂರದರ್ಶನ ಎಂಭತ್ತರ ದಶಕದ ಆರಂಭದಲ್ಲಿ ಮಾಯಾಜಾಲವನ್ನೇ ಸೃಷ್ಠಿಸಿತ್ತು.. ಪ್ರತಿ ಶನಿವಾರ ಚಲನಚಿತ್ರಗಳಿಗೋಸ್ಕರ ಕಾದು ಕುಳಿತಿರುತ್ತಿದ್ದೆವು. ರಂಗನಾಯಕಿ ಆ ರೀತಿಯಲ್ಲಿ ಯಾರದೋ ಮನೆಯ ದೂರದರ್ಶನದಲ್ಲಿ, ಕಿಟಕಿಯ ಮೂಲಕ ಅಥವಾ ಅವರ ಧಾರಾಳ ಮನಸ್ಸಿದ್ದರೆ ಅವರ ಮನೆಯೊಳಗೇ ಕೂತು ನೋಡುವ ಅವಕಾಶ.     

ಬಾಲ್ಯದಲ್ಲಿಯೆ ಈ ಚಿತ್ರ ನಾನಾ ಕಾರಣಗಳಿಂದ ಇಷ್ಟವಾಗಿತ್ತು. 

೧) ಎಂ ಏನ್ ವ್ಯಾಸರಾವ್ ಅವರ ಪಾನಿ ಪುರಿ ಗೀತೆ ಎನ್ನುವಂತೆ ರಚಿಸಿದ "ಪ್ರೇಮದಲ್ಲಿ ಸ್ನೇಹದಲ್ಲಿ" ಹಾಡು, ಎಂ ರಂಗರಾವ್ ಅವರ ಅದ್ಭುತ ಟಪೋರಿ ವಾದ್ಯ ಮೇಳ, ಅದಕ್ಕೆ ಸಂಗೀತ ಅದರಲ್ಲಿಯೂ " ಮೈ ಡಿಯರ್" ಎಂದು ಹಾಡಿದ ಕೂಡಲೇ ಬರುವ ಡ್ರಮ್ ಸಂಗೀತ ನನ್ನನ್ನು ಹುಚ್ಚನನ್ನಾಗಿ ಮಾಡಿಸಿತ್ತು. ಎಸ್ ಪಿ ಬಾಲಸುಬ್ರಮಣ್ಯಂ ಅವರ ಅದ್ಭುತ ಗಾಯನ, ಪ್ಲೇ ಬಾಯ್ ಎನ್ನುವ ಒಂದು ಇಮೇಜ್ ಸೃಷ್ಠಿಗೆ ಕಾರಣವಾದ ರಾಮಕೃಷ್ಣ ಅವರ ಪಾತ್ರ, 

೨) " ಮಂದಾರ ಪುಷ್ಪವು ನೀನು" ವಿಜಯನಾರಸಿಂಹ ರಚಿಸಿರುವ ಈ ಹಾಡಿನ್ನು ಜಯಚಂದ್ರನ್ ಶುರುಮಾಡುವ ರೀತಿ, ಧರ್ಮಸ್ಥಳದ ಉದ್ಯಾನವನದಲ್ಲಿ ರಾಧ ಕೃಷ್ಣರ ಮೂರ್ತಿಯ ಮುಂದೆ ಶುರುವಾಗುವ ಈ ಹಾಡು, ಮದ್ಯೆ ಮದ್ಯೆ ಎಸ್ ಪಿ ಶೈಲಜಾ ಸುರಿಸುವ ಜೇನು ಹನಿ ಒಂದು ಕಡೆಯಾದರೆ, ಸರಳ ಇಂಪಾದ ಸಂಗೀತ, ಸುಂದರ ಪ್ರಕೃತಿಯ ಮಡಿಲಲ್ಲಿ ಚಿತ್ರೀಕರಿಸಿದ ರೀತಿ ಇಷ್ಟವಾಗಿತ್ತು. ನಾಯಕ ಅಶೋಕ್ ಅವರ ವೇಷಭೂಷಣ, ಅಂದಗಾರ್ತಿ ಆರತಿಯ ಸುಂದರ ಅಲಂಕಾರ ಒಂದು ರೀತಿಯಲ್ಲಿ ಈ ಹಾಡನ್ನು ಮತ್ತೆ ಮತ್ತೆ ಕೇಳಬೇಕು ಎನ್ನಿಸಿತ್ತು. 

೩) ಶಕ್ತಿ ಸ್ಥಳ ಕೊಲ್ಲೂರಿನಲ್ಲಿ ಆರತಿ ಹಾಡಿ ಕುಣಿಯುವ "ಜೈ ಜಗದಂಬೆ" , ಎಸ್ ಜಾನಕಿ ಭಕ್ತಿ ಪೂರ್ವಕವಾಗಿ ಪರವಶರಾಗಿ ಹಾಡಿದ್ದಾರೆ, ಅದ್ಭುತ ಎನ್ನಿಸುವ ಸಾಹಿತ್ಯದ ರೂವಾರಿ ವಿಜಯನಾರಸಿಂಹ. ಸಂಗೀತದಲ್ಲಿ ಉಪಯೋಗಿಸಿರುವ ವಾದ್ಯ, ಚಿತ್ರೀಕರಣದಲ್ಲಿ ಅದಕ್ಕೆ ಹತ್ತಿರವಾಗುವಂತೆ ಉಪಯೋಗಿಸಿರುವ ವಾದ್ಯ ಇಷ್ಟವಾಗುತ್ತದೆ. ಆರತಿ ಈ ಹಾಡಿನಲ್ಲಿ ಇಷ್ಟವಾಗುವ ಕಾರಣ ಅವರು ಉಟ್ಟಿರುವ ಸೀರೆಯ ಬಣ್ಣ, ಹಣೆಯಲ್ಲಿ ದೊಡ್ಡದಾದ ಕುಂಕುಮದ ಕೆಳಗೆ ಒಂದು ಚಿಕ್ಕ ಬೊಟ್ಟು. 

೪) ಅಣ್ಣ ಎಂದರೆ ಹೀಗೆಯೇ ಇರಬೇಕು ಎನ್ನಿಸುವಷ್ಟು ಇಷ್ಟವಾಗುವ ಅಂಬರೀಶ್, ಕಣಗಾಲ್ ಪ್ರಭಾಕರ್ ಶಾಸ್ತ್ರೀ ರಚಿಸಿರುವ "ಕನ್ನಡ ನಾಡಿನ ರಸಿಕರ ಮನವ" ಹಾಡು ಮತ್ತೊಮ್ಮೆ ಎಸ್ ಪಿ ಬಾಲಸುಬ್ರಮಣ್ಯಂ ನಮಗೆ ಹತ್ತಿರವಾಗುತ್ತಾರೆ. ತುಮಕೂರು ಬಳಿಯ ಶಿವಗಂಗೆಯಲ್ಲಿ ಚಿತ್ರಿಕರಿಸಿರುವ ಹಾಡು ಮತ್ತೆ ಮತ್ತೆ ಕೇಳಬೇಕು ಮತ್ತು ನೋಡಬೇಕು ಎನ್ನಿಸುತ್ತದೆ. ಅದರಲ್ಲೂ ಈ ಹಾಡಿನ ಮದ್ಯೆ ಮದ್ಯೆ ರಂಗಭೂಮಿಯ ಚಿಕ್ಕ ಚಿಕ್ಕ ತುಣುಕುಗಳನ್ನು ಹೆಣೆದಿರುವುದು ಪುಟ್ಟಣ್ಣ ಹಾಡುಗಳನ್ನು ಚಿತ್ರೀಕರಿಸುವ ಅದ್ಭುತ ಶೈಲಿಯನ್ನು ತೋರಿಸುತ್ತದೆ. ಕಡೆಯಲ್ಲಿ ಹಾಡಿನ ಸಾಲನ್ನು ನಿಧಾನಗತಿಯಲ್ಲಿ ಹಾಡಿ ರಂಗಭೂಮಿಯ ಬ್ಯಾನರ್ ಇಂದ ಆರತಿ ಹೆಸರಿಗೆ ಬಣ್ಣವನ್ನು ಬಳೆದು ಅಳಿಸುವುದು ಬಣ್ಣದ ಬದುಕು ಎಷ್ಟು ಕ್ಷಣಿಕ ಎನ್ನುವಂತೆ ಭಾವ ತೋರುತ್ತದೆ. ಆದರೆ ಈ ಹಾಡು ಶುರುವಾಗುವಾಗ ರಂಗು ರಂಗಿನ ಪರದೆ, ಬೆಳಕು ಇವುಗಳ ಮದ್ಯೆ ನಾಯಕಿಯನ್ನು ತೋರಿಸಿ ರಂಗಭೂಮಿಯ ಹೆಚ್ಚುಗಾರಿಕೆಯನ್ನು ಪ್ರದರ್ಶಿಸುತ್ತಾರೆ. 

ಶ್ರೀ ಅಶೋಕ್ ಆರ್ಟ್ಸ್ ಲಾಂಛನದಲ್ಲಿ, ಬಿ ತಿಮ್ಮಣ್ಣ ಅವರ ನಿರ್ಮಾಣದಲ್ಲಿ , ಅಶ್ವತ್ಥ ಅವರ "ರಂಗನಾಯಕಿ" ಎನ್ನುವ ಕಥೆಯನ್ನ ಚಲನಚಿತ್ರವಾಗಿಸಿದರು ಪುಟ್ಟಣ್ಣ. ಚಿತ್ರದ ತಾರಾಗಣ, ತಾಂತ್ರಿಕವರ್ಗದ ಹೆಸರನ್ನು ತೆರೆಯ ಮೇಲೆ ತೋರಿಸುವಾಗ, ರಂಗಭೂಮಿಯ ಅಂದಿನ ಕಾಲದ ಪ್ರಸಿದ್ಧ ವ್ಯಕ್ತಿಗಳ ಚಿತ್ರಗಳ ಜೊತೆಯಲ್ಲಿ ತೋರಿಸುವುದು ಪುಟ್ಟಣ್ಣ ಒಂದು ವಸ್ತು ವಿಷಯಕ್ಕೆ ಎಷ್ಟು ಒತ್ತು ನೀಡುತ್ತಿದ್ದರು ಎನ್ನುವುದಕ್ಕೆ ಸಾಕ್ಷ್ಟಿಯಾಗಿದೆ. 
ಯೋಗಣ್ಣ ಅವರ ಜೊತೆಗೂಡಿ ಈ ಕಥೆಗೆ ಚಿತ್ರಕಥೆ ಬರೆದು ಪುಟ್ಟಣ್ಣ ಕಣಗಾಲ್ ಈ ಚಿತ್ರವನ್ನು ಯಶಸ್ಸಿನ ಮಹಲಿಗೆ ಕೊಂಡೊಯ್ದರು. ಚಿತ್ರಕ್ಕೆ ತಕ್ಕ ತಾಂತ್ರಿಕ ವರ್ಗ ಎನ್ನುವ ಹಾಗೆ ಈ ಚಿತ್ರಕ್ಕೆ ಸಂಗೀತಕ್ಕೆ ಬಂದವರು ಎಂ ರಂಗರಾವ್. ಎಸ್ ಮಾರುತಿರಾವ್ ಪುಟ್ಟಣ್ಣ ಅವರ ಕಲ್ಪನೆಯನ್ನು ಹಾಗೆ ಕ್ಯಾಮೆರ ಕಣ್ಣಲ್ಲಿ ಸೆರೆ ಹಿಡಿಯಲು ನಿಂತರು. 

ಆ ಕಾಲಘಟ್ಟದ ಮುಖ್ಯ ಪ್ರತಿಭೆಗಳನ್ನು ಆಯ್ದು ಈ ಚಿತ್ರ ಮಾಡಿದ್ದರು. ಆರತಿ, ರಾಜಾನಂದ್, ಅಂಬರೀಶ್, ಅಶೋಕ್, ರಾಮಕೃಷ್ಣ, ಹಲವಾರು ರಂಗಭೂಮಿಯ ಪ್ರತಿಭೆಗಳನ್ನು ಆಯ್ಕೆ ಮಾಡಿದ್ದರು. ಇಲ್ಲಿ ಬರುವ ಪ್ರತಿ ಪಾತ್ರಗಳು ಚಿಕ್ಕದೋ ದೊಡ್ಡದೋ ಚಿತ್ರದ ಕಥೆಯ ಮೇಲೆ ಮುಖ್ಯ ಪರಿಣಾಮ ಬೀರುತ್ತಲೇ ಇರುವಂಥವು. 

ಈ ಚಿತ್ರದ ಪ್ರಮುಖ ಪಾತ್ರ ರಂಗನಾಯಕಿ ಎನ್ನುವ ರಂಗಭೂಮಿ ಕಲಾವಿದೆಯದು. ಅವಳ ಬಾಲ್ಯವನ್ನು ಒಂದೆರಡು ದೃಶ್ಯಗಳಲ್ಲಿ ತೋರಿಸಿ, ಆ ಮಗುವಿಗೆ ಬಾಲ್ಯದಿಂದಲೂ ಸಂಗೀತ, ಅಭಿನಯ, ಬಣ್ಣ ಇವುಗಳ ಮೇಲೆ ಇರುವ ಆಸಕ್ತಿಯನ್ನು ರಂಗಭೂಮಿಯ ತಾಲೀಮನ್ನು ನೋಡುವಾಗ ಆ ಮಗುವಿನ ಕಣ್ಣು, ಕಿವಿ, ಕೈ, ಕಾಲುಗಳನ್ನು ಮಾತ್ರ ತೋರಿಸಿ ದೃಶ್ಯದ ಗಾಢತೆಯನ್ನು ಹೆಚ್ಹು ಮಾಡುತ್ತಾರೆ. 

ಅನಾಥ ಮಗುವಾದ ಅಂಬರೀಶ್ ಅವರನ್ನು ಸಾಕಿ ಸಲುಹಿದ ತನ್ನ ಸಾಕು ತಂದೆಯ ಬಗ್ಗೆ ಅಭಿಮಾನದಿಂದ ಹೇಳುವಾಗ ಅಂಬರೀಶ್ ಇಷ್ಟವಾಗುತ್ತಾರೆ, ಆ ಅಭಿಮಾನ, ಹೆಮ್ಮೆ ಅವರ ಧ್ವನಿ ಆಹಾ. 

ರಾಜಾನಂದ್ ಅವರ ಸ್ನೇಹಿತ ಕಷ್ಟ ಕಾಲದಲ್ಲಿ ಇವರ ಬಳಿ ಬರುತ್ತಾರೆ, ಮೊದಲೇ ಕಷ್ಟದಲ್ಲಿದ್ದರೂ, ತನ್ನ ಸ್ನೇಹಿತನಿಗೆ ಸಹಾಯ ಮಾಡಬೇಕು ಎಂದು ತಮ್ಮ ನಾಟಕದ ಮೂರು ದಿನದಲ್ಲಿ ಬರುವ ಪೂರ್ತಿ ಹಣವನ್ನು ಅವನಿಗೆ ಕೊಡುವ ಭರವಸೆ ಕೊಡುತ್ತಾರೆ. ಆಗ ಹೇಳುವ ಮಾತು "ಒಬ್ಬ ಕಲಾವಿದ ಇನ್ನೊಬ್ಬ ಕಲಾವಿದನ ಕಷ್ಟಕ್ಕೆ ಆಗದಿದ್ದರೆ ಕಲಾವಿದನ ಜನ್ಮ ಯಾಕೋ" ಎನ್ನುತ್ತಾರೆ. ಅದ್ಭುತ ನಟನೆ.  

ಕೆಲ ಹಣವುಳ್ಳ ಕಾಮುಕ ವ್ಯಕ್ತಿ ಹಣದ ದರ್ಪದಿಂದ ರಂಗಭೂಮಿ ಕಲಾವಿದರನ್ನು ಅವಮಾನಗೊಳಿಸುವ ಯತ್ನದಲ್ಲಿದ್ದಾಗ, ಅಂಬರೀಶ್ ಚೆನ್ನಾಗಿ ಹೊಡೆದು ಕಳಿಸುತ್ತಾರೆ, ಆಗ ಸಾಕು ತಂದೆ ರಾಜಾನಂದ್ ಅಂಬರೀಶ್ ಅವರಿಗೆ ಚೆನ್ನಾಗಿ ಹೊಡೆಯುತ್ತಾರೆ, 

"ನಾ ಮಾಡಿದ್ದು ತಪ್ಪಾ ಹೇಳಿ ಅಪ್ಪಾಜಿ, ನೀವು ತಪ್ಪು ಎಂದರೆ, ಆ ಸಾಹುಕಾರನ ಕಾಲಿಗೆ ಬಿದ್ದು ತಪ್ಪಾಯ್ತು ಎಂದು ಹೇಳಿ ಕರೆದುಕೊಂಡು ಬರುವೆ" 

"ಕಲಾವಿದರಿಗೂ ಸ್ವಾಭಿಮಾನ, ಮಾರ್ಯಾದೆ ಇದೆ ಎಂದು ತೋರಿಸಲು ನಿನ್ನಂಥವರು ಲಕ್ಷ ಲಕ್ಷ ಹುಟ್ಟಬೇಕು ಕಣೋ" ಎಂದು ರಾಜಾನಂದ್ ಅಂಬರೀಶ್ ಅವರನ್ನು ಅಪ್ಪಿಕೊಳ್ಳುತ್ತಾರೆ. ಅಲ್ಲಿ ರಾಜಾನಂದ್ ಅವರ ಮುಖಾಭಿನಯ, ಧ್ವನಿ ಮತ್ತು ಆ ಗತ್ತು ಅದ್ಭುತ. 

ಈ ಚಿತ್ರದಲ್ಲಿ ಅಭಿನಯ ನೀಡಿರುವ ಕಲಾವಿದರೂ ಈ ಚಿತ್ರಕ್ಕೊಸ್ಕರವೇ ಹುಟ್ಟಿದ್ದಾರೆನೋ ಅನ್ನುವಷ್ಟು ಅದ್ಭುತವಾಗಿ ನಟಿಸಿದ್ದಾರೆ. 

ರಾಜಾನಂದ್ 
ಮೇಲೆ ಹೇಳಿದ ಎರಡು ದೃಶ್ಯಗಳು, 
ಆರತಿಯ ಏಳಿಗೆಯನ್ನು ಕಂಡು ಖುಷಿಯಾಗುವ ದೃಶ್ಯ. 
ಆರತಿಯ ಅಂದವನ್ನು ಮೆಚ್ಚಿ ಬರುವ ಅಶೋಕ್ ಅವರಿಗೆ ರಂಗಭೂಮಿಯ ರಾತ್ರಿ ಹೊತ್ತಿನ ಜಗಮಗ ಬೆಳಕಿನ ಪ್ರಪಂಚ ಮತ್ತು ಬೆಳಗಿನ ಆರ್ಥಿಕ ಪರಿಸ್ಥಿತಿ ಬಿಂಬಿಸುವ ದೃಶ್ಯವನ್ನು ವಿವರಿಸುವ ರೀತಿ. 
ಮದುವೆ ಮಾಡಿಕೊಂಡು ಗಂಡನ ಜೊತೆಯಲ್ಲಿ ಹೋಗುವಾಗ, ಆಗಾಗ ಪತ್ರ ಬರಿ ಎಂದು ಆರತಿಗೆ ಹೇಳುವ ತುಣುಕು
ಆರತಿಯನ್ನು ಚಲನಚಿತ್ರದವರು ಅಭಿನಯಿಸಿ ಎಂದು ಕೇಳಿಕೊಂಡಾಗ, ಆರತಿಯನ್ನು ಒಪ್ಪಿಸುವ ದೃಶ್ಯ 
ದಶರಥನ ಪಾತ್ರದಲ್ಲಿ ಅಂತಿಮ ದೃಶ್ಯದಲ್ಲಿ ನೀಡಿರುವ ಅಭಿನಯ

ಅಂಬರೀಶ್
ಇಡಿ ಚಿತ್ರದಲ್ಲಿ ಆರತಿ ಪಾತ್ರಕ್ಕೆ ನೆರಳಂತೆ ರಕ್ಷಣೆ ನೀಡುವ ಪಾತ್ರ. ತಾನು ಚಿಕ್ಕ ವಯಸ್ಸಿನಲ್ಲಿ ಆಕೆಯನ್ನು ಇಷ್ಟಪಟ್ಟಿದ್ದರೂ, ರಂಗನಾಯಕಿ ಹೇಳುವ ನೀ ನನ್ನ ಅಣ್ಣ ಕಣೋ ಎಂದಾಗ ಒಂದು ಕಡೆ ನಿರಾಸೆ ಇನ್ನೊಂದು ಕಡೆ ಅಣ್ಣನಾದೆ ಎನ್ನುವ ಹೆಮ್ಮೆಯ ಅಭಿನಯ ಅದ್ಭುತ ಎನ್ನಿಸುತ್ತದೆ. ಈ ಕಲಾವಿದ ಎಲ್ಲೋ ಸಿದ್ಧ ಸೂತ್ರಗಳ ಚಿತ್ರಗಳಲ್ಲಿ ಕಳೆದು ಹೋದರೆನೋ ಅನ್ನಿಸುತ್ತದೆ. 

ಅಶೋಕ್
ಪ್ರೀತಿ, ಪ್ರೇಮಗಳು ನಿಜ ಜೀವನದ ಕಷ್ಟ ನಷ್ಟಗಳಲ್ಲಿ ಹೇಗೆ ಕರಗಿ ಹೋಗುತ್ತದೆ ಎನ್ನುವುದನ್ನು ಮುಖಭಾವ ಹಾಗೂ ಮಾತುಗಳ ಭರದಲ್ಲಿ ತೋರಿದ್ದಾರೆ
ನಟಿಮಣಿಯನ್ನು ಸತಿಮಣಿಯನ್ನಾಗಿ ಮಾಡಿ ಮೆರೆಸಲು ಹೊರಟ ನನ್ನ ಬುದ್ಧಿಗೆ ಚಪ್ಪಲಿಲಿ ಹೊಡೆದುಕೊಳ್ಳಬೇಕು ಎನ್ನುವ ದೃಶ್ಯ ಸೂಪರ್ 
ಕಡೆಯಲ್ಲಿ ಆರತಿಗೆ "ಈ ಮಗನಿಗೆ ಜನ್ಮ ಕೊಟ್ಟವಳು ಒಬ್ಬ ದೇವತೆ ಅನ್ನೋ ವಿಷಯವನ್ನು ಮುಚ್ಚಿಟ್ಟುಬಿಟ್ಟಿದ್ದೇನೆ" ಎನ್ನುವಾಗ ಅವರ ತಳಮಳದ ಅಭಿನಯ ಇಷ್ಟವಾಗುತ್ತದೆ. 
ಒರಟು, ಒಂದು ರೀತಿಯ ಪ್ರೀತಿ ಪ್ರೇಮ ಅನುಕಂಪ ಇವುಗಳನ್ನೆಲ್ಲ ಒಂದು ಲಾಭಕ್ಕಾಗಿ ಬಳಸುವ ಮನೋಭಾವದ ಪಾತ್ರವನ್ನು ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. 

ರಾಮಕೃಷ್ಣ
ಕನ್ನಡ ಚಿತ್ರಜಗತ್ತಿಗೆ ಟಪೋರಿ, ಪ್ಲೇ ಬಾಯ್, ಚಲ್ಲುಚಲ್ಲಾಗಿ ಆಡುವ ಪಾತ್ರದ ರೂಪನ್ನು ತಂದು ಕೊಟ್ಟವರು ಇವರು. ಪುಟ್ಟಣ್ಣ ಅವರ ಅದ್ಭುತ ಮಾರ್ಗದರ್ಶನದಲ್ಲಿ ಆ ರೀತಿಯ ಪಾತ್ರಗಳನ್ನೂ ತೆರೆಯ ಮೇಲೆ ಜೀವಂತ ಮಾಡಿದವರು ಇವರು. ಬೆಲ್ ಬಾಟಮ್ ಪ್ಯಾಂಟ್, ಕಪ್ಪು ಕನ್ನಡಕ, ಕುರುಚಲು ಗಡ್ಡ, ದೊಡ್ಡದಾದ ಬೆಲ್ಟ್, ಯಾವಾಗಲೂ ಒಂದು ರೀತಿಯಲ್ಲಿ ತೂಗಾಡುತ್ತಾ, ಪ್ರಪಂಚವನ್ನು ಉಡಾಫೆಯಿಂದ ನೋಡುವ ಪಾತ್ರದಲ್ಲಿ ಅಪ್ಪಟ ಪರಕಾಯ ಪ್ರವೇಶ ಮಾಡಿದ್ದಾರೆ. 
ಮೊದಲು ನೀವು ಅಭಿನಯ ಮಾಡೋದು ಕಲೀರಿ, ನಿಮ್ಮ ಕಣ್ಣಲ್ಲಿ ಕಾಮ ಎಲ್ಲ್ರಿ ಇದೆ, ತನ್ನ ಮಗುವನ್ನು ನೋಡುವ ತಾಯಿ ಪ್ರೇಮ ಇದೆ.. ನಿಮಗೆ ಕಾಮದ ಕಣ್ಣಲ್ಲಿ ನೋಡೋಕೆ ಬರೋಲ್ಲ.. ನನಗೆ ನಿಮ್ಮನ್ನು ತಾಯಿಯ ರೂಪದಲ್ಲಿ ನೋಡೋಕೆ ಬರೋಲ್ಲ ಎಂದು ಅಳುತ್ತಾ ಹೋಗುವಾಗ ಶಭಾಶ್ ಎನ್ನಿಸುತ್ತದೆ. 
ಆರತಿ 
ಈ ಪಾತ್ರ ಮಾಡೋಕೆ ಹುಟ್ಟಿದ್ದಾರೆನೋ ಅನ್ನುವಷ್ಟು  ಅದ್ಭುತ ಅಭಿನಯ ನೀಡಿದ್ದಾರೆ. ಹಲವಾರು ದೃಶ್ಯಗಳಲ್ಲಿ ಬರಿ ಕಣ್ಣು, ಮುಖಭಾವಗಳಲ್ಲೇ ದೃಶ್ಯವನ್ನು ಉತ್ತುಂಗಕ್ಕೆ ಕರೆದೊಯ್ದಿದ್ದಾರೆ. 
ಮದುವೆ ಆದನಂತರ ಪ್ರೀತಿ ಪ್ರೇಮಗಳು ಬದುಕಿನ ನಿಜ ರೂಪದ ಮುಂದೆ ನಿಲ್ಲೋಲ್ಲ ಎನ್ನುವಂತಹ ದೃಶ್ಯಗಳಲ್ಲಿ ಆರತಿ ಪ್ರಪಂಚದಲ್ಲಿ ಪ್ರೀತಿ, ಪ್ರೇಮ ಇದೆ ಎನ್ನುವ ವಾದ ಒಪ್ಪಿಕೊಂಡರೆ, ಅಶೋಕ್ ವಸ್ತುಗಳು, ಅಂತಸ್ತು, ಹಣ,ಇವುಗಳು ಮಾತ್ರ ಖುಷಿ ನೀಡುತ್ತವೆ ಎನ್ನುವ ವಾದವನ್ನು ಒಪ್ಪಿಕೊಂಡವರು, ಇವುಗಳ ನಡುವೆ ಸಮರವಾದಗೆಲ್ಲ ಆರತಿ ಸಂಭಾಷಣೆ, ಕಣ್ಣಲ್ಲಿ ಕೊಡುವ  ಅಭಿನಯ ಇಷ್ಟವಾಗುತ್ತದೆ. 
ಅಭಿನಯ, ರಂಗ ಭೂಮಿ, ಕಲೆ ಸಾಧನೆ ಇದನ್ನೆಲ್ಲಾ ಅಶೋಕ್ ಅವರಿಗೆ ವಿವರಿಸುವಾಗ ಅವರ ಕಣ್ಣಲ್ಲೇ ಮಾತಾಡುತ್ತಾರೆ. 
ಸಾರಂಗಧರ ನಾಟಕದ ತಾಲೀಮಿನಲ್ಲಿ ಸಾರಂಗಧರ ಪಾತ್ರವನ್ನು ರಾಮಕೃಷ್ಣ ಅವರಿಗೆ ಹೇಳಿಕೊಡುವಾಗ ಮಸ್ತ್ ಮಸ್ತ್ ಅಭಿನಯ. 
ತಾನು ನಂಬಿಕೊಂಡಿರುವ ಕಲೆ ತನ್ನನ್ನು ಬೆಳೆಸಿದೆ ಎನ್ನುವ ಅರಿವು ಇಡಿ ಚಿತ್ರದ ತುಂಬಾ ಹರಿದಾಡಿದೆ. 
ಭಾವುಕ ಸನ್ನಿವೇಶಗಳಲ್ಲಿ, ಮಮತೆಯ ನಟಿಯಾಗಿ, ಮಗನಿಗೆ ಪರಿತಪಿಸುವ ತಾಯಿಯಾಗಿ, ಹತಾಶೆಗೊಳ್ಳುವ ಹೆಂಡತಿಯಾಗಿ ಪ್ರತಿ ಸನ್ನಿವೇಶಗಳಲ್ಲೂ ಆರತಿ ಅದ್ಭುತ ಅಭಿನಯ ನೀಡಿದ್ದಾರೆ. 


ತಾ ನಂಬಿದ ಸಿದ್ಧ ಸೂತ್ರಗಳ ಮೇಲೆ ನಂಬಿಕೆ ಸದಾ ಇರಬೇಕು ಎನ್ನುವ ಮಾತು ಆರತಿಯವರ ಪಾತ್ರದ ಮೂಲಕ ತಿಳಿದು ಬಂದರೆ, ಮಾಡುವ ಕೆಲಸದಲ್ಲಿ ಶ್ರಧ್ಹೆ, ಅಭಿಮಾನ ಇರಬೇಕು ಎನ್ನುವ ಮಾತು ರಾಜಾನಂದ್, ಅಂಬರೀಶ್ ಅವರ ಪಾತ್ರಗಳ ಮೂಲಕ ಅರಿವಾಗುತ್ತದೆ. 
ವಸ್ತು ಸುಖದ ಹಿಂದೆ ಹೋಗುವವರು ಪ್ರಪಂಚದಲ್ಲಿ ಬದುಕಿರುತ್ತಾರೆ ಹೊರತು ಜೀವಿಸಲು ಆಗೋಲ್ಲ ಎನ್ನುವ ನೀತಿ ಅಶೋಕ್ ಪಾತ್ರಧಾರಿ ಹೇಳುತ್ತಾರೆ. 
ಚೆಲ್ಲು ಚೆಲ್ಲು ಅಥವಾ ಉಡಾಫೆ ಇದೆ ಜೀವನವಲ್ಲ, ಸತ್ಯದ ಅರಿವಾಗಬೇಕು, ತಾಳ್ಮೆ ಇರಬೇಕು, ಯೋಚಿಸಬೇಕು ಎನ್ನುವ ಮಾತನ್ನು ರಾಮಕೃಷ್ಣ ಪಾತ್ರ ತೋರುತ್ತದೆ.. 

ಈ ಚಿತ್ರ ಹಲವಾರು ಮುತ್ತು ರತ್ನಗಳನ್ನು ಸುಂದರವಾಗಿ ಪೋಣಿಸಿ ಕನ್ನಡಾಂಬೆಗೆ ತೊಡಿಸಿದ ಅಮೂಲ್ಯ ರತ್ನ ಹಾರ. ಪ್ರತಿಯೊಂದು ದೃಶ್ಯವೂ ಕಲಾತ್ಮಕತೆಯಿಂದ ಕೂಡಿದೆ, ಯಾವುದು ಅತಿ ಎನ್ನಿಸುವುದಿಲ್ಲ. ಕೆಲವು ನಾಟಕದ ತುಣುಕುಗಳನ್ನು ಚಿತ್ರದ ಪರಿಣಾಮ ಹೆಚ್ಚು ಮಾಡುವುದಕ್ಕೆ ಉಪಯೋಗಿಸಿರುವ ಪರಿ ಇಷ್ಟವಾಗುತ್ತದೆ. ಪುಟ್ಟಣ್ಣ ಒಬ್ಬ ಮಾಂತ್ರಿಕ ಕಥೆಯನ್ನು ಹೇಗೆ ಬೆಳ್ಳಿ ಪರದೆಯ ಮೇಲೆ ಎಲ್ಲರಿಗೂ ಇಷ್ಟವಾಗುವ ರೀತಿಯಲ್ಲಿ ತರಬೇಕು ಎನ್ನುವ ಅದ್ಭುತ ಕಲ್ಪನೆ ಯಾವಾಗೂ ಅವರ ಬಳಿ ಚಿತ್ರದ ತಯಾರಿಕ ಹಂತಗಳಲ್ಲೇ ಇರುತ್ತಿತ್ತು ಮತ್ತು ಅದನ್ನು ಹಾಗೆ ಸಾಕ್ಷಾತ್ಕರಿಸಲು ತಮ್ಮ ಪ್ರತಿಭೆಯನ್ನು ಧಾರೆ ಎರೆಯುತ್ತಿದ್ದರು ಎನ್ನುವುದಕ್ಕೆ ರಂಗನಾಯಕಿ ಚಿತ್ರ ಅತ್ಯುತ್ತಮ ಉದಾಹರಣೆ. 

ಪುಟ್ಟಣ್ಣ ಗುರುಗಳೇ... ನಿಮ್ಮ ಮುಂದಿನ ಚಿತ್ರವನ್ನು ನೋಡಿ ಬಂದು ಮತ್ತೊಮ್ಮೆ ನಿಮ್ಮ ಚರಣಕಮಲಗಳಿಗೆ ಅರ್ಪಿಸುವೆ.