ನೋವು ಎದೆಯೊಳಗೆ ನಲಿವು ತುಟಿಯ ಮೇಲೆ ಎನ್ನುವ ಅದ್ಭುತ ಸಂದೇಶ ಹೊತ್ತ ಚಿತ್ರ ಇದು.
ಈ ಚಿತ್ರದ ಬಗ್ಗೆ ಬರೆಯಲು ಪ್ರಯತ್ನವನ್ನೇ ಮಾಡಿರಲಿಲ್ಲ. ಇದೊಂದು ಅದ್ಭುತ ಚಿತ್ರಅನಿಸಲೇ ಇಲ್ಲ ಬದಲಿಗೆ ಇದೊಂದು ಸಾರ್ವಕಾಲಿಕ ಉತ್ಸಾಹ ಬತ್ತದ ಚಿಲುಮೆ ಎಂಬುದು ನನ್ನ ಅಭಿಪ್ರಾಯ.
ಜೀವನದಲ್ಲಿ ಯಾವಾಗ ಬೇಕಾದರೂ ಈ ಚಿತ್ರವನ್ನು ನೋಡಿ ಅರಗಿಸಿಕೊಂಡು, ಆಲಂಗಿಸಿಕೊಂಡು, ಈ ಚಿತ್ರದಲ್ಲಿ ಬರುವ ಹೂರಣದಿಂದ ಕಲಿಯಬಹುದಾದ ಅವಕಾಶ ಸದಾ ಸಿಕ್ಕೆ ಸಿಗುತ್ತದೆ.
ಜಲ ಒಂದು ಸಣ್ಣ ಬಿರುಕಿನಿಂದ ಹೊರಗೆ ಬಂದು, ಝರಿಯಾಗಿ, ತೊರೆಯಾಗಿ, ನದಿಯಾಗಿ, ಕಡಲು ಸೇರುವ ತನಕ ಒಂದೇ ರುಚಿ ಇರುವ ಹಾಗೆ, ಈ ಚಿತ್ರದಲ್ಲಿ ಯಾವ ಕಾಲಘಟ್ಟದಲ್ಲಿ ನೋಡಿದರೂ ನಿಮಗೆ ಒಂದೇ ತೆರನಾದ ಅನುಭವ ಕೊಡುತ್ತದೆ.
ಇಡಿ ಚಿತ್ರದಲ್ಲಿ ಪ್ರತಿ ಫ್ರೇಮ್ ನಲ್ಲಿ ಕಾಣುವ ರಾಜೇಶ್ ಖನ್ನ ಈ ಚಿತ್ರದಲ್ಲಿ ಬರಿ ಅಭಿನಯಿಸಿಲ್ಲ, ಬದಲಿಗೆ ತಾವೇ ಪಾತ್ರವಾಗಿಬಿಟ್ಟಿದ್ದಾರೆ. ಈ ರೀತಿಯ ಕಥೆಯನ್ನು ಎಲ್ಲೂ ಎಳೆಯದೆ, ಪ್ರತಿ ದೃಶ್ಯದಲ್ಲಿಯೂ ನಗು, ಸಂದೇಶ ಹೊತ್ತು ಬರುವ ಹಾಗೆ ಚಿತ್ರೀಕರಣ ಮಾಡಿರುವುದು ವಿಶೇಷ.
ಸಾಮಾನ್ಯ ಕಥಾನಾಯಕ ಅಂತ್ಯದಲ್ಲಿ ಸಾವು ಬರುತ್ತದೆ ಎಂದು ಒಬ್ಬರಿಗೆ ಗೊತ್ತಿರುತ್ತದೆ, ಇಲ್ಲವೇ ಬರಿ ಕಥಾನಾಯಕನಿಗೆ ಮಾತ್ರ ಗೊತ್ತಿರುತ್ತದೆ. ಆದರೆ ಇಲ್ಲಿ ಬರುವ ಎಲ್ಲಾ ಮುಖ್ಯ ಪಾತ್ರಗಳಿಗೆ ಆನಂದ್ ತನ್ನ ಅಂತ್ಯಕ್ಕೆ ಕೆಲವೇ ವಾರಗಳು, ದಿನಗಳು ಇದೆ ಎಂದು ಅರಿತಿರುತ್ತಾರೆ.
ಆದರೆ ಯಾರೊಬ್ಬರು ಸುಮ್ಮನೆ ಅಳುವುದಾಗಲಿ, ಅಥವಾ ಆಗದಲೇ ಇರುವ ಸಮಾಧಾನದ ಮಾತುಗಳನ್ನು ಹೇಳುವುದಿಲ್ಲ. ಬದಲಿಗೆ ಎಲ್ಲರೂ ಮುಂದಿನ ಜನುಮ, ಅಥವಾ ನಾನು ಅಲ್ಲಿಗೆ ಬರುತ್ತೇನೆ ಎನ್ನುವ ವಿಶ್ವಾಸದ ಮಾತುಗಳನ್ನು ಆಡುತ್ತಾರೆ. ಅದು ನಿಜವಾಗಿಯೂ ಈ ಚಿತ್ರವನ್ನು ರತ್ನವನ್ನಾಗಿ ಮಾಡಿರುವ ಅಂಶಗಳು.
ಅದ್ಭುತ ಸಂಭಾಷಣೆ, ಅದ್ಭುತ ಸಾಹಿತ್ಯ, ಸಂಗೀತ, ಗಾಯನ ಈ ಚಿತ್ರಕ್ಕೆ ಭದ್ರ ಬುನಾದಿ ಕೊಟ್ಟಿವೆ. ಆದರೆ ಇವಿಷ್ಟು ನಿಂತಿರೋದು ಸರಳ ಕಥೆಯನ್ನು ಅತ್ಯುತ್ತಮ ಚಿತ್ರಕಥೆಯನ್ನಾಗಿ ಮಾಡಿ, ನವಿರಾದ ಹಾಸ್ಯ, ತುಂಬಿ ಜೀವನದ ಹಾದಿಗೆ ಹೇಗೆ ಸಿದ್ಧರಾಗಬೇಕು ಎಂದು ಚಿತ್ರದ ಮೂಲಕ ಎಲ್ಲಿಯೂ ಉಪದೇಶದ ತರಹ ನೀಡದೆ ಗುಪ್ತಗಾಮಿನಿಯ ಹಾಗೆ ನುಸುಳಿ ನೋಡುವ ವೀಕ್ಷಕರಿಗೆ ಅರ್ಥವಾಗುವ ಹಾಗೆ ಚಿತ್ರಿಸಿರುವುದು.
ನನಗೆ ತುಂಬಾ ತುಂಬಾ ಇಷ್ಟವಾಗುವ ದೃಶ್ಯಗಳು :
೧) ಜಾನಿ ವಾಕರ್ ರಾಜೇಶ್ ಖನ್ನಾರನ್ನು ನೋಡಲು ಬರುತ್ತಾರೆ, ನಂತರ ನಗುತ್ತಲೇ ಮಾತಾಡುತ್ತಾ ಕಣ್ಣೀರು ಹಾಕಿಕೊಂಡು ಹೊರ ಬರುತ್ತಾರೆ
೨) ಚಿತ್ರದ ಆರಂಭದಲ್ಲಿ ಅಮಿತಾಬ್ ಬಚ್ಚನ್ ತನ್ನ ವೈದ್ಯಕೀಯ ವೃತ್ತಿಯ ಬಗ್ಗೆ ನಿರಾಸೆ ತುಂಬಿದ್ದರೂ, ಅಷ್ಟೇ ಪ್ರೌಡಿಮೆ ಇರುತ್ತದೆ, ಹಾಗಾಗಿ, ರಾಜೇಶ್ ಖನ್ನ ಪಾತ್ರಕ್ಕೆ ಬಂದಿರುವ ರೋಗಕ್ಕೆ ಚಿಕಿತ್ಸೆ ಇಲ್ಲವೇ ಇಲ್ಲ ಎಂದು ಮಾತಾಡುತ್ತಾರೆ, ಆದರೆ ಬರುತ್ತಾ ಬರುತ್ತಾ ಚಿತ್ರದ ಅಂತ್ಯದಲ್ಲಿ, ತನ್ನ ಜ್ಞಾನ ಬದಿಗಿಟ್ಟು, ತನ್ನ ಗೆಳೆಯನನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಾರೆ (ರಘು ಕಾಕ ದೇವರ ಪ್ರಸಾದ ತರಲು ಹೋಗುವಾಗ, ಆದಷ್ಟು ಬೇಗ ಬನ್ನಿ ಎಂದು ಹೇಳುವುದು, ಡಾ. ಶಾಸ್ತ್ರಿ ಬಳಿಯಲ್ಲಿ ಸಿಗಬಹುದಾದ ಔಷಧಿಯಿಂದ ಗುಣಮುಖ ಆಗಬಹುದು ಎಂದು ಅದನ್ನು ತರಲು ಹೋಗುವುದು)
೩) ಆರಂಭದಲ್ಲಿ ಆನಂದ್ ಪಾತ್ರವನ್ನು ಕಂಡರೆ ಕೋಪಗೊಳ್ಳುವ ಅವರು ಚಿತ್ರ ಸಾಗುತ್ತಾ ಹೋದಹಾಗೆ ಆ ಪಾತ್ರವು ತನ್ನ ಮನಸ್ಸಿಗೆ ಹತ್ತಿರ ಎಂದು ಮಾರ್ಪಾಡಾಗುವ ರೀತಿ.
೪) ನೀ ಎಲ್ಲಿಗೂ ಹೋಗಬೇಡ, ಸಾಯುವುದಾದರೆ ನೀ ಇಲ್ಲೇ, ನನ್ನ ಮಡಿಲಲ್ಲಿ ಸಾಯಬೇಕು ಎಂದು ಹೇಳುವಾಗ ಬಚ್ಚನ್ ಕಣ್ಣಲ್ಲಿ ಕಾಣುವ ಪ್ರೀತಿ ಆಹ್.
೫) ರಾಜೇಶ್ ಖನ್ನ ... ಈ ಪಾತ್ರದ ಬಗ್ಗೆ ಏನು ಬರೆಯಲಿ, ಚಿತ್ರದ ಆರಂಭದ ೨೦ ನಿಮಿಷಗಳು ನಿಧಾನಗತಿಯಲ್ಲಿ ಸಾಗುತ್ತಿರುತ್ತದೆ, ಇವರು ಬಂದ ಕ್ಷಣದಿಂದ ಚಿತ್ರ ಅಂತ್ಯ ಆಗುವವರಗೆ ಚಿತ್ರದ ಓಟ ಅದ್ಭುತ. ಪ್ರತಿ ದೃಶ್ಯದಲ್ಲಿಯೂ ಅವರೇ ಇದ್ದರೂ, ಎಲ್ಲಿಯೂ ಕೂಡ ಅರೆ ಯಾಕೆ ಅನ್ನಿಸುವುದಿಲ್ಲ. ಇಡಿ ಚಿತ್ರವನ್ನು ಅಷ್ಟರ ಮಟ್ಟಿಗೆ ಆವರಿಸಿಕೊಂಡಿದ್ದಾರೆ.
೬) ನರ್ಸ್ ಪಾತ್ರದ ಲಲಿತ ಪವಾರ್, ಡಾ. ಪ್ರಕಾಶ್ ಪಾತ್ರದ ರಮೇಶ್ ಡಿಯೋ, ಸುಮನ್ ಪಾತ್ರಧಾರಿ, ರೇಣು ಪಾತ್ರ, ಎಲ್ಲವೂ ರಾಜೇಶ್ ಖನ್ನ ಪಾತ್ರಕ್ಕೆ ಅದ್ಭುತ ಸಾತ್ ನೀಡಿದೆ.
- ಜೀವನ ಉದ್ದ ಇರಬಾರದು ದೊಡ್ಡದಾಗಿರಬೇಕು
- ಎಲ್ಲಿಯ ತನಕ ಬದುಕಿದ್ದೇನೋ ನಾ ಸತ್ತಿರೊಲ್ಲ, ಸತ್ತ ಮೇಲೆ ನಾನೇ ಇಲ್ಲಾ
- ನಾ ನಿನಗೆ ಏನು ಆಶೀರ್ವಾದ ನೀಡಲಿ, ನನ್ನ ಆಯಸ್ಸು ನಿನಗೆ ಕೊಡುತ್ತೀನಿ ಅಂತ ಹೇಳೋಕು ಆಗೋಲ್ಲ
- ಪ್ರತಿ ನಗುವಿನ ಹಿಂದೆ ಬರಿ ಖುಷಿ ಮಾತ್ರ ಇರೋಲ್ಲ
- ನಮ್ಮ ತಪ್ಪು ಏನು ಅಂದರೆ, ನಾಳೆ ಬರುವ ಕಷ್ಟಗಳನ್ನು ಇಂದಿಗೆ ತಂದುಕೊಂಡು, ಇವತ್ತಿನ ಖುಷಿ ಹಾಳುಮಾಡಿಕೊಳ್ಳುತ್ತೇವೆ.
- ನಾ ಆಮೇಲೆ ಇರೋಲ್ಲ ಅಂತ ಅಳದೆ, ನಾ ಇರುವ ತನಕ ನಿನ್ನ ಇರಬಹುದಾದ ಸಾವಿರಾರು ಕ್ಷಣಗಳನ್ನು ಯಾಕೆ ಕಳೆದುಕೊಳ್ಳುತ್ತೀಯ
- ಅವರಿಗೆ ರೋಗವಿಲ್ಲ, ಆದರೆ ರೋಗವಿದೆ ಎನ್ನುವ ಅವರ ಸಂಶಯಕ್ಕೆ ಚಿಕಿತ್ಸೆ ಕೊಡುತ್ತೇನೆ
- ಹಾಲು ಮಾರಿದರೆ ನೀರು ಸೇರಿಸುತ್ತಿದ್ದೆ, ವಕೀಲ ಆಗಿದ್ದರೆ ಕೊಲೆಗಾರನ ಹತ್ತಿರ ದುಡ್ಡು ತೆಗೆದುಕೊಂಡು ಅವನನ್ನು ಉಳಿಸುತ್ತಿದ್ದೆ, ಆದರೆ ಡಾಕ್ಟರ್ ಆಗಿರೋದರಿಂದ ಜನ ನೋವನ್ನು ಕಡಿಮೆ ಮಾಡುತ್ತಿದ್ದೇನೆ, ಅದು ಕುಶಿ ಕೊಡುತ್ತದೆ
- ಒಬ್ಬ ಸತ್ತಿಲ್ಲ, ಇನ್ನೊಬ್ಬ ಸಾಯೋಕೆ ಹುಟ್ಟಿದ
ಇಡಿ ಚಿತ್ರದಲ್ಲಿ ಬರುವ ಪ್ರತಿ ಸಂಭಾಷಣೆಯ ತುಣುಕು ಕೂಡ ಒಂದು ಸಂದೇಶ ಭರಿತ ಮಾತುಗಳೇ. ಅಂತ್ಯದಲ್ಲಿ ಬರುವ ಒಂದು ಚಿಕ್ಕ ಕವಿತೆ ಮತ್ತು ಸಂಭಾಷಣೆ ಕಣ್ಣಲ್ಲಿ ನೀರು ತರಿಸುತ್ತದೆ.
ರಾಜೇಶ್ ಖನ್ನ ಚಿತ್ರದಲ್ಲಿ ಅಮಿತಾಭ್ ಪಾತ್ರವನ್ನು ಬಾಬು ಮೊಶಾಯ್ ಎಂದು ಗೋಳು ಹುಯ್ದುಕೊಳ್ಳುವ ರೀತಿ ಇಷ್ಟವಾಗುತ್ತದೆ. ಸ್ನೇಹ ಎಂದರೆ ಹೀಗಿರಬೇಕು, ಒಬ್ಬರ ನೋವು ಒಬ್ಬರಿಗೆ ಅರ್ಥವಾಗುತ್ತದೆ, ಇಬ್ಬರಿಗೂ ಗೊತ್ತು ಒಬ್ಬರನ್ನು ಒಬ್ಬರು ಹೇಗೆ ಕಾಪಾಡಿಕೊಳ್ಳಬೇಕು ಎಂದು. ಸ್ನೇಹದ ಪರಿಧಿ ಸುಂದರವಾಗಿ ಅನಾವರಣಗೊಂಡಿದೆ.
ರಾಜೇಶ್ ಖನ್ನ ಚಿತ್ರದಲ್ಲಿ ಅಮಿತಾಭ್ ಪಾತ್ರವನ್ನು ಬಾಬು ಮೊಶಾಯ್ ಎಂದು ಗೋಳು ಹುಯ್ದುಕೊಳ್ಳುವ ರೀತಿ ಇಷ್ಟವಾಗುತ್ತದೆ. ಸ್ನೇಹ ಎಂದರೆ ಹೀಗಿರಬೇಕು, ಒಬ್ಬರ ನೋವು ಒಬ್ಬರಿಗೆ ಅರ್ಥವಾಗುತ್ತದೆ, ಇಬ್ಬರಿಗೂ ಗೊತ್ತು ಒಬ್ಬರನ್ನು ಒಬ್ಬರು ಹೇಗೆ ಕಾಪಾಡಿಕೊಳ್ಳಬೇಕು ಎಂದು. ಸ್ನೇಹದ ಪರಿಧಿ ಸುಂದರವಾಗಿ ಅನಾವರಣಗೊಂಡಿದೆ.
ಚಿತ್ರ ತಂಡ
ಸಂಭಾಷಣೆ - ಗುಲ್ಜಾರ್
ಸಾಹಿತ್ಯ - ಗುಲ್ಜಾರ್ ಮತ್ತು ಯೋಗೇಶ್
ಗಾಯನ - ಮನ್ನಾಡೆ, ಮುಕೇಶ್ ಮತ್ತು ಲತಾ
ಸಂಗೀತ - ಸಲೀಲ್ ಚೌಧರಿ
ಛಾಯಾಗ್ರಹಣ - ಜಯವಂತ್ ಪಥಾರೆ
ಚಿತ್ರಕಥೆ - ಹೃಷಿಕೇಶ್ ಮುಖರ್ಜೀ, ಗುಲ್ಜಾರ್, ಡಿ. ಎನ್. ಮುಖರ್ಜೀ, ಬಿಮಲ್ ದತ್ತಾ
ನಿರ್ಮಾಣ - ಎನ್ ಸಿ ಸಿಪ್ಪಿ ಮತ್ತು ಹೃಷಿಕೇಶ್ ಮುಖರ್ಜೀ
ಕಥೆ, ಸಂಕಲನ ಮತ್ತು ನಿರ್ದೇಶನ - ಹೃಷಿಕೇಶ್ ಮುಖರ್ಜೀ
ರಾಜೇಶ್ ಖನ್ನ ಮತ್ತು ಅಮಿತಾಭ್ ಒಟ್ಟಿಗೆ ಮೊದಲ ಬಾರಿಗೆ ನಟಿಸಿದ ಈ ಚಿತ್ರದಲ್ಲಿ ಜಾದೂ ಎನ್ನಿಸುವಂಥಹ ಅಭಿನಯ ನೀಡಿದ್ದಾರೆ. ಪ್ರತಿ ಪಾತ್ರವೂ ಕೂಡ ಇಲ್ಲಿ ಮುಖ್ಯ ಪಾತ್ರವಾಗುತ್ತದೆ. ಯಾವುದೇ ಪಾತ್ರ ಅಥವಾ ಸನ್ನಿವೇಶ ಬೇಡ ಅನ್ನುವ ಹಾಗೆ ಇಲ್ಲ.
ಅಯಸ್ಕಾಂತ ಕಬ್ಬಿಣದ ತುಂಡುಗಳನ್ನು ಆಕರ್ಷಿಸುವ ಹಾಗೆ, ಈ ಚಿತ್ರದಲ್ಲಿ ಬರುವ ಪಾತ್ರಗಳು ತಮಗೆ ಅರಿವಿಲ್ಲದೆ ರಾಜೇಶ್ ಖನ್ನ ಪಾತ್ರದ ಕಾಂತತ್ವಕ್ಕೆ ಆಕರ್ಷಿತಗೊಂಡು ಕಾಂತೀಯ ಗುಣ ಹೊಂದುತ್ತಾರೆ.
ಪ್ರತಿ ಕ್ಷಣವನ್ನು ಆನಂದಿಸಬೇಕು, ಆದರಿಸಬೇಕು, ಧನಾತ್ಮಕವಾಗಿ ಜೀವನವನ್ನು ನೋಡಬೇಕು, ನಮ್ಮಲ್ಲಿ ಏನೇ ನ್ಯೂನ್ಯತೆ ಇದ್ದರೂ ಕೂಡ ಖುಷಿಯಾಗಿ ಆ ಕ್ಷಣವನ್ನು ಅನುಭವಿಸಿದರೆ, ಅದು ನಾವು ಜೀವನವನ್ನು ನೋಡುವ ರೀತಿಯನ್ನು
ಬದಲಾಯಿಸುತ್ತದೆ ಎನ್ನುವ ಸುಂದರ ಸಂದೇಶ ಈ ಚಿತ್ರ ಕೊಡುತ್ತದೆ.
ಬದಲಾಯಿಸುತ್ತದೆ ಎನ್ನುವ ಸುಂದರ ಸಂದೇಶ ಈ ಚಿತ್ರ ಕೊಡುತ್ತದೆ.
ಮನಸ್ಸಿಗೆ ಮುದ ನೀಡುವ ಈ ಚಿತ್ರ ಸಾರ್ವಕಾಲಿಕ ಬತ್ತದ ಉತ್ಸಾಹದ ಚಿಲುಮೆ.
ನನ್ನ ಬಹು ಅಚ್ಚುಮೆಚ್ಚಿನ ಚಿತ್ರಗಳಲ್ಲಿ ಆನಂದ್ ಕೂಡ ಒಂದು. ಇದರಲ್ಲಿ ರಾಜೇಶ್ ಖನ್ನ ಮಾಡಿದ ಪಾತ್ರ ಇರುವ ಬೆರಳೆಣಿಕೆಯಷ್ಟು ದಿನ ಸಂತೋಷವಾಗಿ ನಗುತ್ತಾ ನಗಿಸುತ್ತಾ ಕಳೆಯುವ ರೀತಿ ನಮಗೆ ಸ್ಫೂರ್ತಿ ಕೊಡುತ್ತೆ. ಆದರೆ ಒಬ್ಬ ವ್ಯಕ್ತಿಗೆ ಸಾವು ಕಂಡಾಗ ಮಾತ್ರವೇ ಜೀವನ ಕಾಣುವುದೇ ಎನ್ನುವ ಪ್ರಶ್ನೆ :) ... ಕೊನೆಯ ಸೀನಿನಲ್ಲಿ ಮುಖ್ಯ ಪಾತ್ರ ಜೀವ ಬಿಟ್ಟಾಗ ಡಾಕ್ಟರ್ ಮಾತಾಡು ಮಾತಾಡು ಎಂದು ಪೀಡಿಸುವಾಗ ಟೇಪ್ ರೆಕಾರ್ಡರಿನಿಂದ "ಬಾಬೂ ಮೊಷಾಯ್" ಎಂದ ತಕ್ಷಣ ಇಂದಿಗೂ ಅಳದೆ ಇರಲಾರೆ.
ReplyDeleteಬಹಳ ಸುಂದರವಾಗಿ ಚಿತ್ರದ ಮುಖ್ಯ ಭಾವವನ್ನು ವರ್ಣಿಸಿದ್ದೀರಿ. ಜೊತೆಗೆ ಇದನ್ನು ಸಾಕಾರಗೊಳಿಸಿದ ಎಲ್ಲರನ್ನು ಹೆಸರಿಸಿ ಗೌರವಿಸಿದ್ದಿರಿ.. ಸೂಪರ್ .. :)